ಬ್ಯಾನೆ (ಬೇ):

ಉತ್ತರ ಕರ್ನಾಟಕದಲ್ಲಿ  ಪ್ರತಿನಿತ್ಯ ಬಳಕೆಯಾಗುವ  ರೋಗದ ಹೆಸರು.  ಹೆರಿಗೆ ನೋವು ಬಂದರೂ ಬ್ಯಾನೆ ಎಂದೇ ಹೇಳುತ್ತಾರೆ,  ಹಾಗೆಯೇ ಇನ್ನಾವುದೇ ನೋವಾಗಿದ್ದರೂ ಬ್ಯಾನೆ ಎಂದೇ ಹೇಳುತ್ತಾರೆ. ಅಷ್ಟೇ ಏನು, ಬಯ್ಯುವಾಗ ಕೂಡ ಅತ್ಯಂತ ನಿರ್ಭಿಡೆಯಿಂದ ಬಳಕೆಯಾಗುವ ಬಯ್ಗಳು ಕೂಡ ಇದೇ! ನಿನಗೆಂತಾ ಬ್ಯಾನೆ ಬಂದಿದ್ಯೋ ಎಂದು. 

ವಾಯು:

ನಮ್ಮ ಹಳ್ಳಿಗಳಲ್ಲಿ  ಈ ಪದವನ್ನು ಬೇರೆ ಬೇರೆ ಕಾಯಿಲೆಗಳಿಗೆ ಬಳಸುತ್ತಾರೆ.  ಉದಾಹರಣೆಗೆ :

 • ಮೂರ್ಛೆ ಕಾಯಿಲೆ (ಫಿಟ್ಸ್)
 • ಶ್ವಾಸಕೋಶಕ್ಕೆ ಸೋಂಕಾಗಿ ಕಫ ತುಂಬಿಕೊಂಡು ಮಗು ಉಸಿರಾಡಲು ಕಷ್ಟಪಡುತ್ತಾ ಅದರ ಪಕ್ಕೆಗಳು ಎಳೆಯುವುದು.
 • ಕೀಲುಗಳು ಊದಿಕೊಂಡು ನೋವು ಬರುವುದು.

ಪಿತ್ಥ

ದಕ್ಷಿಣ ಬಾರತದ ಬಹಳಷ್ಟು ಹಳ್ಳಿಗಳಲ್ಲಿ ಹೆಚ್ಚಿನ ರೋಗಗಳೆಲ್ಲ ಕೊಬ್ಬಿನಂಶ ಜಾಸ್ತಿ ಇರುವ ಕೆಲವು ತಿಂಡಿಗಳನ್ನು ತಿಂದರೆ ಪಿತ್ಥ ಆಗುತ್ತದೆ ಎನ್ನುವ ನಂಬಿಕೆಯಿದೆ.  ರೋಗ ಬಂದಾಗ,  ಔಷಧ ತೆಗೆದುಕೊಳ್ಳುವಾಗ,  ಹೆರಿಗೆಯಾದ ನಂತರ,  ಕೆಲವು   ಆಹಾರ ವಸ್ತುಗಳನ್ನು ತಿನ್ನಬಾರದು.  ಅದಕ್ಕೆ ಪಥ್ಯ ಎನ್ನುತ್ತಾರೆ.  ಬದನೆಕಾಯಿ, ಶೇಂಗಾ, ಪಪ್ಪಾಯಿ ಹಣ್ಣು, ಎಣ್ಣೆ ಇವೆಲ್ಲ ಪಥ್ಯದಲ್ಲಿ ನಿಷೇಧವಾಗುವ ಪದಾರ್ಥಗಳು.  ಇವನ್ನು ತಿಂದು ಪಥ್ಯ ಕೆಡಿಸಿಕೊಂಡರೆ ಪಿತ್ಥ ಆಗುತ್ತದೆಂಬ ನಂಬಿಕೆ ಇದೆ.   ಆಹಾರಗಳೆಲ್ಲ ಯಾವುದೇ ಅಪಾಯ ಮಾಡದಿದ್ದರೂ,  ಎಷ್ಟೋ ಸಾರಿ  ದೇಹಕ್ಕೆ  ಅತ್ಯವಶ್ಯ  ಆಗಿದ್ದರೂ  ಜನರು ಪಿತ್ಥಕ್ಕೆ ಅಂಜಿ  ಅವುಗಳನ್ನು  ಮುಟ್ಟಗೊಡುವುದೂ ಇಲ್ಲ.

ಪಿತ್ಥದ ಹೆಸರಿನೊಳಗೆ ಬರುವ ರೋಗಗಳು:

 • ಧಿಡೀರನೆ ಹೊಟ್ಟೆ ಕೆಡುವುದು,  ಭೇದಿ (೧೯೮ ನೇ ಪುಟ),  ವಾಂತಿ (೨೦೨ನೇ ಪುಟ)  ಹೊಟ್ಟೆನೋವು
 • ವಾಂತಿ ಬಂದಂತಾಗುವುದು:  ಭೇದಿ ಜೊತೆಗೆ ವಾಂತಿ (೧೯೮ ನೇ ಪುಟ), ಗರ್ಭಿಣಿಯರಲ್ಲಿ ವಾಂತಿ (೩೦೧ ನೇ ಪುಟ)
 • ಕಾಮಾಲೆ (೨೨೨ ನೇ ಪುಟ )
 • ಮುಂಜಾನೆ ಹೊತ್ತಿನಲ್ಲಿ ಧಿಡೀರನೆ ತಲೆ ಸುತ್ತಿಬರುವುದು,  ರಕ್ತದೊತ್ತಡ
 • ಉದೆ ಉರಿ, ಹುಳಿತೇಗು
 • ಕೀಲು ನೋವು ಆದಂತೆ ಸಂದುಗಳಲ್ಲಿ ಬಾತು ನೋವಾಗುವುದು

ಹುಚ್ಚು (ಉನ್ಮಾದ) ;

ಭಾರತೀಯ ಹಳ್ಳಿಗಳಲ್ಲಿ ಹುಚ್ಚು ಎನ್ನುವುದು  ದೆವ್ವ, ಮಂತ್ರ, ಮಾಟಗಳಿಂದ ರೋಗಿಗೆ ಒಮ್ಮೆಲೇ ಹೆದರಿಕೆ ಆಗಿ ಆಗುತ್ತವೆಂಬ ನಂಬಿಕೆಯಿದೆ.  ಉನ್ಮಾದ ಆದವರು  ಹೆದರಿ ನಡುಗುತ್ತಿರುತ್ತಾರೆ.  ವಿಚಿತ್ರವಾಗಿ ವರ್ತಿಸುತ್ತಿರುತ್ತಾರೆ.  ಸರಿಯಾಗಿ ನಿದ್ರೆ ಮಾಡುವುದಿಲ್ಲ. ದೇಹದ ತೂಕ ಕಳೆದುಕೊಳ್ಳುತ್ತಿರುತ್ತಾನೆ. ಸಾಯಲೂ ಬಹುದು.

 

ಉನ್ಮಾದಕ್ಕೆ ವೈದ್ಯಕೀಯ ವಿವರಣೆ;

 • ಉನ್ಮಾದ ಎಂಬುದು ಬಹಳ ಜನರಿಗೆ ಹೆದರಿಕೆಯಿಂದ, ಬಲವಾಗಿ ನಂಬಿದ ಕೆಲವು ನಂಬಿಕೆಗಳಿಂದ  (೨ ನೇ ಪುಟ)  ಬರಬಹುದು.  ಉದಾಹರಣೆಗೆ ತನಗೆ ಯಾರಾದರೂ ಕೆಟ್ಟದು ಮಾಡಬಹುದು ಎಂದು ಒಬ್ಬ ಹೆಣ್ಣುಮಗಳು ನಂಬಿದಳೆಂದರೆ ಆಕೆ ಊಟ ಮಾಡುವುದಿಲ್ಲ. ರಾತ್ರಿ ಆಕೆಗೆ ನಿದ್ದೆ ಬರುವುದಿಲ್ಲ. ತೂಕ ಕಳೆದುಕೊಂಡು ಸಣ್ಣಗಾಗುತ್ತಾಳೆ.  ತಾನು ಸಣ್ಣಗಾಗಿದ್ದು ಬೇರೆಯವರು ಮಾಟ ಮಾಡಿದ್ದರಿಂದಲೇ ಎಂದು ತಿಳಿದುಕೊಳ್ಳುತ್ತಾಳೆ.  ಇನ್ನೂ ಹೆದರಿಕೆಯಿಂದ ಅವಳ ಉನ್ಮಾದ ದಿನದಿನಕ್ಕೆ ಹೆಚ್ಚುತ್ತದೆ.
 • ಮಕ್ಕಳ ಉನ್ಮಾದ ಬೇರೆ ರೀತಿಯದು.  ನಿದ್ದೆ ಮಾಡುತ್ತಿರುವ ಮಗು ಕೆಟ್ಟ ಸ್ವಪ್ನ ಕಂಡರೆ ಹೆದರಿ  ಕಿರುಚಿಕೊಳ್ಳುತ್ತದೆ.  ವಿಪರೀತ ಜ್ವರವಿದ್ದರೆ ವಿಚಿತ್ರವಾಗಿ ಹಲುಬುವುದು, ಕನವರಿಸುವುದು, ಮಾಡುತ್ತದೆ.  ಮಗು ಚಿಂತಿತವಾದಂತೆ ಕಂಡುಬಂದರೆ ಅದಕ್ಕೆ ಕಾರಣ ಪೌಷ್ಟಿಕ ಆಹಾರದ ಕೊರತೆ  (೩೬೦ ನೇ ಪುಟ),   ಧನುರ್ವಾಯು (೨೩೪ನೇ ಪುಟ) ಮತ್ತು  ಮೆದುಳಿನ ಜ್ವರ (ಮೆನಿಂಜೈಟಿಸ್ ೨೩೬ ನೇ ಪುಟ) ರೋಗಗಳ ಆರಂಭದ ಲಕ್ಷಣಗಳನ್ನು ಜನರು ಹುಚ್ಚು ಎಂದೇ ಕರೆಯುತ್ತಾರೆ.

ಚಿಕಿತ್ಸೆ :  ನಿರ್ದಿಷ್ಟ ರೋಗದಿಂದ ಉನ್ಮಾದ ಬಂದಿದ್ದಲ್ಲಿ ಮೊದಲು ಆ ರೋಗವನ್ನು ಗುಣಪಡಿಸಿ ಅದು ಯಾಕೆ ಬಂದಿದ್ದೆಂದು ರೋಗಿಗೆ ತಿಳಿಸಿಕೊಡಿ.  ಅಗತ್ಯ ಬಿದ್ದರೆ ವೈದ್ಯಕೀಯ ಸಲಹೆ ಪಡೆಯಿರಿ.

ಹೆದರಿಕೆಯಿಂದ  ರೋಗಿ ಹುಚ್ಚುಚ್ಚಾಗಿ ಆಡುತ್ತಿದ್ದರೆ  ರೋಗಿಗೆ ಸಮಾಧಾನ ಹೇಳಿ.  ಆ ಹೆದರಿಕೆಯಿಂದಲೇ ಇದು ಆಗಿದ್ದೆಂದು ಮನವರಿಕೆ ಮಾಡಿಕೊಡಿ.  ಮಂತ್ರ, ಮನೆ-ಮದ್ದುಗಳಿಂದ ಕೆಲವೊಮ್ಮೆ ಗುಣ ಕಾಣಬಹುದು.

ಹೆದರಿದಾತ ಅತಿ ಜೋರಾಗಿ ಉಸಿರುಬಿಡುತ್ತಿದ್ದರೆ  ಆತನ ದೇಹದಿಂದ ಬಹಳಷ್ಟು ಇಂಗಾಲಾಮ್ಲ ಹೊರ ಹೋಗುತ್ತಿದ್ದು ಅದರಿಂದ ತೊಂದರೆ ಹೆಚ್ಚಬಹುದು.

ಅತೀ ಹೆದರಿಕೆ ಅಥವಾ ಉನ್ಮಾದದ ಜೊತೆಗೆ ಉಸಿರಾಟ ಬಹಳ ಜೋರಾಗಿದ್ದರೆ;

ಸೂಚನೆ :

 • ತೀವ್ರ ಭಯ
 • ಅತಿ ಆಳವಾಗಿ ಜೋರಾಗಿ ಉಸಿರು ಬಿಡುವುದು
 • ಡವಗುಟ್ಟುವ ಎದೆ
 • ಮುಖ, ಕಾಲು ಕೈಗಳು ಜೋಮು ಹಿಡಿಯುವುದು
 • ಸ್ನಾಯು ಹಿಡಿತ

ಚಿಕಿತ್ಸೆ :

 • ಆತನನ್ನು/ಆಕೆಯನ್ನು ಆದಷ್ಟು ಶಾಂತವಾಗಿಸಿ.  ಗಾಬರಿಯಾಗುವ ಕಾರಣವಿಲ್ಲ, ನೀವೆಲ್ಲ ಅಲ್ಲೇ ಇದ್ದೀರೆಂದು ಭರವಸೆ, ಧೈರ್ಯ ಕೊಡಿ.
 • ಕಾಗದದ ಚೀಲದೊಳಗೆ ಮುಖವಿಟ್ಟು  ಉಸಿರಾಡಲಿ.  ಮೂರ್ನಾಲ್ಕು ನಿಮಿಷ ಅದೇ ಗಾಳಿಯಲ್ಲಿ ಉಸಿರಾಡುತ್ತಿದ್ದರೆ ಶಾಂತವಾಗುತ್ತಾರೆ.

ಇದೇನೂ ಅತಿ ದೊಡ್ಡ ರೋಗವಲ್ಲ, ಅಥವಾ ತೊಂದರೆಯಲ್ಲ. ಬೇಗ ಗುಣಪಡಿಸಬಹುದು ಎಂದು ಅವರಿಗೆ ವಿವರಿಸಿ.

ಒಂದೇ ಹೆಸರಿನ ರೋಗಗಳಿಂದಾಗಿ ಆಗುವ ಸಮಸ್ಯೆಗಳು

ಗಡ್ಡೆ ಆಗಿದೆ ಎಂದರೆ  ವೈದ್ಯಕೀಯ ವ್ಯಕ್ತಿಗಳು ಕೊಡುವ ಅರ್ಥವೇ ಬೇರೆ.  ಹಳ್ಳಿಯ ಸಾಮಾನ್ಯ ಜನರು  ಕೊಡುವ ಅರ್ಥವೇ ಬೇರೆ. ಹಾಗೆಯೇ ಕಲೆ ಆಗಿದೆ ಎಂದರೂ ಕೂಡ ಇಬ್ಬರೂ ಬೇರೆ ಬೇರೆ ಅರ್ಥಗಳನ್ನೇ ಹಚ್ಚುತ್ತಾರೆ.  ಈ ಪುಸ್ತಕವನ್ನು ಉಪಯೋಗಿಸುತ್ತಿರುವ ಸಾಮಾನ್ಯ ಸಾಮಾಜಿಕ ಕಾರ್ಯಕರ್ತ ಮತ್ತು ಆರೋಗ್ಯ ಕಾರ್ಯಕರ್ತರುಗಳ ನಡುವೆಯೂ ಇದೇ ಭಿನ್ನಾಭಿಪ್ರಾಯವುಂಟಾಗಬಹುದು.

ರೋಗಿಯ ಮತ್ತು ರೋಗದ ಹಿನ್ನೆಲೆ ತಿಳಿದುಕೊಂಡು ರೋಗ ಯಾವುದೆಂದು ನಿರ್ಧರಿಸಿಜನರು ಕೊಡುವ ಹೆಸರಿನ ಮೇಲೆ ಹೋಗಬೇಡಿರೋಗದ ಬಗ್ಗೆ ತಪ್ಪು ಕಲ್ಪನೆ ಆಗದಿರಲಿ.

ಚರ್ಮದ ಮೇಲೆ ದೊಡ್ಡ ಹುಣ್ಣಾಗಿ ಅದಕ್ಕೆ ಸೋಂಕು ತಗುಲಿ ಅದು ದಪ್ಪಗಾಗಿದ್ದರೆ ಅದಕ್ಕೆ ಹಳ್ಳಿಗರು ಗಡ್ಡೆ ಎನ್ನುತ್ತಾರೆ.

ದೇಹದ ಯಾವುದೇ ಭಾಗದಲ್ಲಿ ನಿಧಾನವಾಗಿ ಬೆಳೆಯುತ್ತಿರುವ ನೋವಿಲ್ಲದ ಗಂಟು(ಗಡ್ಡೆ) ಕ್ಯಾನ್ಸರಾಗಿರಬಹುದು. ಕ್ಯಾನ್ಸರೆಂದರೆ ಅಪಾಯಕಾರಿ.  ಎಷ್ಟೋ ಸಾರಿ ಸರ್ಜರಿಯೇ ಬೇಕಾಗಬಹುದು. ಕ್ಯಾನ್ಸರ್ ಇರಬಹುದೆನ್ನುವ ಒಂದು ಚಿಕ್ಕ ಸಂಶಯ ಬಂದರೂ ಕೂಡ ತಕ್ಷಣ ವೈದಕೀಯ ಸಲಹೆ ಪಡೆಯಿರಿ.

ಕುಷ್ಠದ ಕಲೆ                                                    

ಕೆಲವು ದೇಶಗಳಲ್ಲಿ ಜನರು ಯಾವುದೇ ಹುಣ್ಣಾಗಿ ಬಾಯಿ ಬಿಟ್ಟುಕೊಂಡಿzರೂ ಅದಕ್ಕೆ  ಕುಷ್ಠವೆಂದೇ ಕರೆಯುತ್ತಾರೆ.  ಆದರೆ ವೈದ್ಯಕೀಯದಲ್ಲಿ ಕುಷ್ಠವೆಂದರೆ ಒಂದೇ.  (೨೪೪ ನೇ ಪುಟ ನೋಡಿ)

ಹುಣ್ಣುಗಳು ಈ ಕಾರಣಗಳಿಗೂ  ಆಗಿರಬಹುದು.

 • ಇಂಪೆಡಿಗೋ ಅಥವಾ ಇನ್ನಿತರ ಚರ್ಮ ವ್ಯಾಧಿಗಳು  (೨೬೩ ನೇ ಪುಟ )
 • ಹುಳಗಳು ಕಡಿದಿದ್ದರಿಂದ ನಂಜಾಗಿ ಹುಣ್ಣಾಗಿರಬಹುದು.
 • ರಕ್ತದ ಚಲನೆ ಸರಿಯಾಗಿ ಇಲ್ಲವಾಗಿ ಅದರಿಂದಾಗಿ ಪದೇ ಪದೇ ಕಾಣಿಸಿಕೊಳ್ಳಬಹುದಾದ ಹುಣ್ಣು (೨೬೫ ನೇ ಪುಟ)
 • ಚರ್ಮದ ಕ್ಯಾನ್ಸರ್ ( ೨೬೩ ನೇ ಪುಟ )
 • ಕಡಿಮೆ ಸಾಧ್ಯತೆಯಿರಬಹುದಾದ  ಕುಷ್ಠ ಅಥವಾ ಚರ್ಮದ ಕ್ಷಯ ( ೨೬೩ ನೇ ಪುಟ )

ಜ್ವರ ಬಂದಿರುವ ಕಾರಣ ಏನಾಗಿರಬಹುದೆಂಬುದಕ್ಕೆ ಗೊಂದಲ

ದೇಹದ ಉಷ್ಣತೆ ಸಾಮಾನ್ಯ ಉಷ್ಣತೆಗಿಂತ ಹೆಚ್ಚಾದರೆ ಜ್ವರ ಬಂದಿದೆಯೆಂದರ್ಥ.  ಆದರೆ ಜ್ವರ ಬರಲು ಕಾರಣವಾದ ರೋಗಕ್ಕೂ ಅನೇಕ ಕಡೆ ಜನರು ಜ್ವರವೆಂದೇ ಕರೆಯುತ್ತಾರೆ.

ಜ್ವರವೊಂದು ಲಕ್ಷಣ ಮಾತ್ರ.  ಅದಕ್ಕೆ ಕಾರಣವಾದ ರೋಗವನ್ನು ಗುಣಪಡಿಸಬೇಕೆಂದರೆ ಅಥವಾ ತಡೆಯಬೇಕೆಂದರೆ ಒಂದು ಜ್ವರವನ್ನು ಇನ್ನೊಂದು ಜ್ವರದಿಂದ ಬೇರ್ಪಡಿಸಲು ಮೊದಲು ಸಾಧ್ಯವಾಗಬೇಕು.

ಇಲ್ಲಿ ಮುಂದೆ ಜ್ವರವು ಬಂದೇ ಬರುವಂಥ ಕೆಲವು ಮುಖ್ಯ ರೋಗಗಳನ್ನು ಕೊಟ್ಟಿದೆ. ಜೊತೆಗೆ ಕೊಟ್ಟಿರುವ ಚಿತ್ರವು ಆ ರೋಗದಲ್ಲಿ ಜ್ವರದ ಏರಿಳಿತವನ್ನು ಸೂಚಿಸುತ್ತದೆ.

ಮಲೇರಿಯಾ : (೨೨೭ ನೇ ಪುಟ ನೋಡಿ)

 • ಧಿಡೀರನೆ ಚಳಿ ನಡುಕದ ಜೊತೆಗೆ ಜ್ವರ ಏರುತ್ತದೆ.
 • ಕೆಲವು ತಾಸು ಜೋರು ಜ್ವರವಿದ್ದು ಇಳಿಯುತ್ತಿದ್ದಂತೆಯೇ ಬೆವರು ಬರಲಾರಂಭಿಸುತ್ತದೆ.
 • ಎರಡನೆಯ ಅಥವಾ ಮೂರನೆಯ ದಿನ ಮತ್ತೆ ಅದರ ಪುನರಾವರ್ತನೆ.
 • ಜ್ವರ ಇಲ್ಲದಿದ್ದಾಗ ರೋಗಿಗೆ ಮತ್ತೇನೂ ತೊಂದರೆ ಇರುವುದಿಲ್ಲ.

ಟೈಫಾಯಿಡ್ : (೨೬೭ ನೇ ಪುಟ ನೋಡಿ)

 • ನೆಗಡಿಯಂತೆ ಶುರುವಾಗುತ್ತದೆ.  ದಿನದಿಂದ ದಿನಕ್ಕೆ ಜ್ವರ ಏರುತ್ತದೆ
 • ಜ್ವರಕ್ಕೆ ತಕ್ಕಂತೆ ನಾಡಿಬಡಿತ ಹೆಚ್ಚುವುದಿಲ್ಲ.
 • ಕಾಯಿಲೆಯ ದಿನಗಳು ಕೆಲವೊಮ್ಮೆ ಭೇದಿ, ಅತಿಸಾರ, ನಡುಕ ಅಥವಾ ಕನವರಿಕೆ. 
 • ರೋಗಿ ಬಹಳ ದುರ್ಬಲನಾಗುತ್ತಾನೆ.                                                   

 

ಕಾಮಾಲೆ : (೨೨೨ ನೇ ಪುಟ ನೋಡಿ)

 • ಹಸಿವಾಗುವುದಿಲ್ಲ.  ಊಟ, ಸಿಗರೇಟು ಸೇವನೆ ಒಂದೂ ಬೇಡವಾಗುತ್ತದೆ. ವಾಂತಿ ಬರುವಂತಾಗುತ್ತಿರುತ್ತದೆ.
 • ಕಣ್ಣು ಚರ್ಮವೆಲ್ಲ ಹಳದಿ ಹೊಯ್ಯುತ್ತದೆ. ಮೂತ್ರ ಕಿತ್ತಳೆ ಅಥವಾ ಕಂದು ಬಣ್ಣ, ಮಲ ಬಿಳುಪಾಗಿರುತ್ತದೆ.
 • ಕೆಲವೊಮ್ಮೆ ಪಿತ್ಥಕೋಶವು ದೊಡ್ಡದಾಗಿ ನೋವಿನಿಂದ ಕೂಡಿರುತ್ತದೆ.
 • ಸ್ವಲ್ಪ ಜ್ವರ. ರೋಗಿ ಬಹಳ ದುರ್ಬಲನಾಗುತ್ತಾನೆ.

ನ್ಯುಮೋನಿಯಾ: (೨೨೧ ನೇ ಪುಟ )

 • ಉಸಿರು  ಜೋರಾಗುತ್ತದೆ.  ಜ್ವರ ಧಿಡೀರನೆ ಏರುತ್ತದೆ.
 • ಕೆಮ್ಮಿನ ಜೊತೆಗೆ ಹಸಿರು, ಹಳದಿ ಅಥವಾ  ರಕ್ತಭರಿತವಾದ ಕಫ.  ಎದೆಯಲ್ಲಿ ನೋವು.                                                       

ರುಮ್ಯಾಟಿಕ್ ಜ್ವರ : (೩೬೩ನೇ ಪುಟ ನೋಡಿ )

 • ಇದು ಮಕ್ಕಳಲ್ಲಿ, ಹದಿ ಹರಯದವರಲ್ಲಿ ಸಾಮಾನ್ಯ.
 •  ಸಂದುಗಳ ನೋವು, ವಿಪರೀತ ಜ್ವರ, ಗಂಟಲು ಕೆರೆತದ ಜೊತೆ ಬರುತ್ತದೆ. ಜೋರಾಗಿ ಉಸಿರು ತೆಗೆದುಕೊಳ್ಳುವುದಕ್ಕೆ  ಕಷ್ಟ.
 • ಎದೆಯಲ್ಲಿ ನೋವು ಅಥವಾ ಕೈಕಾಲುಗಳ ಚಲನೆಯ ಮೇಲೆ ಹಿಡಿತ ತಪ್ಪುತ್ತದೆ.

ಕ್ಷಯ : (೨೨೯ ನೇ ಪುಟ ನೋಡಿ )

 • ಸುಸ್ತಿನೊಂದಿಗೆ ನಿಧಾನವಾಗಿ ಶುರುವಾಗುತ್ತದೆ.
 • ದೇಹದ ತೂಕ ಕಡಿಮೆಯಾಗುತ್ತಿರುತ್ತದೆ.
 • ಸಂಜೆಯಾಗುತ್ತಿದ್ದಂತೆ ಜ್ವರ ಏರುತ್ತಿದ್ದು ಬೆಳಿಗ್ಗೆ  ಕಡಿಮೆಯಾಗುತ್ತದೆ. ರಾತ್ರಿ ಬೆವರಬಹುದು.
 • ಕೆಮ್ಮು ಶುರುವಾಗುತ್ತದೆ.  ಇದೇ ರೀತಿ ತಿಂಗಳುಗಟ್ಟಲೆ ಮುಂದುವರಿಯುತ್ತದೆ.

ಪ್ರಸೂತಿ ಜ್ವರ : (೩೩೦ ನೇ ಪುಟ )

 • ಹೆರಿಗೆಯ ನಂತರ ಅಥವಾ ಮರುದಿನ ಶುರುವಾಗಬಹುದು.
 • ಸಣ್ಣ ಜ್ವರದಿಂದ ಶುರುವಾಗಿದ್ದು ನಿಧಾನಕ್ಕೆ ಹೆಚ್ಚುತ್ತದೆ.
 • ಯೋನಿಯಿಂದ ಹೊರ ಹರಿಯುವ  ದ್ರವ ಕೆಟ್ಟ ವಾಸನೆಯಿಂದ ಕೂಡಿರುತ್ತದೆ.

ಎಲ್ಲ ರೀತಿಯ ಜ್ವರಗಳಿಂದಲೂ ಅಪಾಯವೇ ಇದೆ.

ಇಲ್ಲಿ ತೋರಿಸಿದವುಗಳಲ್ಲದೆ ಇನ್ನೂ ಅನೇಕ ರೋಗಗಳಿಂದ ಇದೇ ರೀತಿಯ ಸೂಚನೆ ಮತ್ತು ಜ್ವರ ಬರಬಹುದು.  ಜ್ವರ ಬಂತೆಂದರೆ ಇವುಗಳಲ್ಲಿ ಯಾವ ರೋಗ ಬಂದಿದೆಯೆಂದು ಹೇಳುವುದು ಎಲ್ಲ ಬಾರಿಯೂ ಸುಲಭವಾಗಲಾರದು.  ಹೆಚ್ಚಿನವು ಅಪಾಯಕಾರಿ ಆದ್ದರಿಂದ ಸಾಧ್ಯವಿದ್ದಲ್ಲೆಲ್ಲಾ ವೈದ್ಯಕೀಯ ಸಹಾಯ ಪಡೆಯಿರಿ.

* * *