ಗೊಬ್ಬರಗಣಜಿಲೆ (ಅಮ್ಮ;

ಭಾರತದ ಹೆಚ್ಚಿನ ಭಾಗಗಳಲ್ಲಿ ದೇವತೆಗೆ ಕೋಪ ಬಂದಿದ್ದರೆ ಆ ಕಾರಣದಿಂದ ಧಡಾರದಂಥ ಕಾಯಿಲೆಗಳು ಬರುತ್ತವೆ, ದೇವತೆಯು ತನ್ನ ಸಿಟ್ಟನ್ನು ಕಾಯಿಲೆ ಹರಡುವುದರ ಮೂಲಕ ತೀರಿಸಿಕೊಳುತ್ತಾಳೆಂಬ ಕಲ್ಪನೆ ಇದೆ.

ದೇವಿಯು ಶಾಂತಳಾಗುವಂತೆ ಪೂಜೆ ಅರ್ಪಿಸಿದರೆ ರೋಗವನ್ನು ಹಿಡಿತಕ್ಕೆ ತರಬಹುದು ಎಂದು ನಂಬುವ ಜನರು ರೋಗಿಗೆ ಯಾವುದೇ ಉಪಚಾರ ಮಾಡುವುದಿಲ್ಲ.  ಮಾಡಿದರೆ ತಾಯಿಯ ಸಿಟ್ಟು  ಇನ್ನಷ್ಟು ಹೆಚ್ಚುವುದೆಂಬ ಕಲ್ಪನೆ.  ಇದರಿಂದಾಗಿ ತುಂಬ ನಿತ್ರಾಣಗೊಂಡ ರೋಗಿ ಸಾಯಬಹುದು.

ಈ ಕಾಯಿಲೆಗಳಿಗೆ ವೈರಸ್ ಎಂಬ ಕಣ್ಣಿಗೆ ಕಾಣದ ಸೂಕ್ಷ್ಮ ರೋಗಾಣುಗಳು ಕಾರಣ. (ಪುಟ ೩೪ ನೋಡಿ.) ಈ ರೋಗಾಣುಗಳ ವಿರುದ್ದ ಹೋರಾಡಲು ಮಗುವಿಗೆ ಶಕ್ತಿ ಬೇಕು.  ಶಕ್ತಿಗಾಗಿ ಒಳ್ಳೆಯ ಆಹಾರವನ್ನು ಕೊಡುತ್ತಿರಬೇಕು.  ಮಕ್ಕಳ ವಿಚಾರದಲ್ಲಂತೂ ಇದು ಅತೀ ಮುಖ್ಯ.

 

ಚಿಕಿತ್ಸೆ;

ಮಾಟ ಮಂತ್ರಗಳಿಂದ ಪ್ರಯೋಜನವಿಲ್ಲ. ಮಗುವನ್ನು ಕೂಡಲೇ ಆರೋಗ್ಯ ಕಾರ್ಯಕರ್ತರಿಗೆ ತೋರಿಸಿ.

                                 

ಮಗುವಿನ ಊಟದ ಬಗ್ಗೆ ಕಟ್ಟಳೆ ಬೇಡ.  ಪೌಷ್ಟಿಕ ಆಹಾರವನ್ನು ಜಾಸ್ತಿ ಕೊಡಿ.  ದ್ರವಾಹಾರವೂ ಚೆನ್ನಾಗಿ ಹೊಟ್ಟೆಗೆ ಹೋಗಲಿ.

ನಿಮ್ಮ ಮಗುವಿಗೆ ಸಕಾಲದಲ್ಲಿ ಚುಚ್ಚುಮದ್ದು ಹಾಕಿಸಿಇಂಥ ರೋಗಗಳನ್ನು ತಡೆಯಿರಿ.

ಉಪಯುಕ್ತವಾದ ಕೆಲವು ಮನೆ ಔಷಧಗಳು

ನಮ್ಮ ಸುತ್ತಲಿನ ಅನೇಕ ಸಸ್ಯಗಳಲ್ಲಿ ಔಷಧಯುಕ್ತ ಗುಣಗಳಿವೆ.   ಇಂದಿನ ಎಷ್ಟೋ ಹೊಸ ಔಷಧಗಳೂ ಸಹ ಸಸ್ಯಮೂಲದಿಂದಲೇ  ಬಂದವುಗಳು.

ಹಾಗೆಂದು ಎಲ್ಲ ಸಸ್ಯಗಳಲ್ಲೂ ನಮ್ಮ ರೋಗಗಳ ಚಿಕಿತ್ಸಾಗುಣವಿದೆಯೆಂದಲ್ಲ. ಕೆಲವು ಔಷಧಯುಕ್ತ ಗುಣಗಳಿರುವ ಸಸ್ಯಗಳನ್ನು ತಪ್ಪು ರೀತಿಯಲ್ಲಿ ಉಪಯೋಗಿಸುತ್ತಿರುವುದೂ ಉಂಟು. ನಿಮ್ಮ ಕ್ಷೇತ್ರದಲ್ಲಿ ಇರುವ ಔಷಧ ಸಸ್ಯಗಳಾವುವೆಂಬುದನ್ನು ತಿಳಿದುಕೊಂಡು  ಅವುಗಳಲ್ಲಿ ನಿಜಕ್ಕೂ  ಉಪಯುಕ್ತವಾದವು  ಯಾವವೆಂಬುದನ್ನು  ತಿಳಿಯಿರಿ.

ಎಚ್ಚರಿಕೆ;  ಕೆಲವೊಂದು ಔಷಧ ಸಸ್ಯಗಳನ್ನು ತಪ್ಪಾಗಿ ಬಳಸಿದರೆ ಅದು ವಿಷವೂ ಆಗಬಹುದು. ನೀವು ಆರಿಸಿದ್ದು ಸರಿಯಾದ ಸಸ್ಯವೇಅದರ ಮಿಶ್ರಣ ಮಾಡುವುದುತೆಗೆದುಕೊಳ್ಳುವ ಪ್ರಮಾಣ ನಿಮಗೆ ಸರಿಯಾಗಿ ಗೊತ್ತೇಖಾತ್ರಿ ಮಾಡಿಕೊಳ್ಳಿ.  ಸ್ವಲ್ಪವೇ ಸಂಶಯ ಬಂದರೂ ನಾಟಿ ವೈದ್ಯರನ್ನು ಕೇಳಿಆದರೂ ಗಿಡದ ಬಗ್ಗೆ ಸ್ವಲ್ಪ ಅನುಮಾನವಿದೆಯೆಂದರೂ ಅದನ್ನು ಉಪಯೋಗಿಸಲೇಬೇಡಿ.

ಔಷಧೀಯ ಸಸ್ಯಗಳನ್ನು ಮನೆಮದ್ದಾಗಿ ಬೇರೆ ಬೇರೆ ರೀತಿಯಲ್ಲಿ ಬಳಸುತ್ತಾರೆ.  ಸಾಮಾನ್ಯವಾಗಿ ದೊಡ್ಡವರಿಗೆ, ಮಕ್ಕಳಿಗೆ ಅದೇ ಔಷಧವನ್ನು ಉಪಯೋಗಿಸಬಹುದು.  ದೊಡ್ಡವರ ಪ್ರಮಾಣದ ಅರ್ಧದಷ್ಟನ್ನು ಚಿಕ್ಕವರಿಗೆ ಬಳಸಿದರಾಯ್ತು. ಆದರೆ ಕೆಲವು ನಾಟಿ ಔಷಧಗಳನ್ನು ಮಕ್ಕಳಿಗೆ ಕೊಡಬಾರದು ಎಂದಿರುತ್ತದೆ. ಅಂಥವನ್ನು ತಪ್ಪಿಯೂ ಕೊಡಬೇಡಿ.

ಔಷಧ ಸಸ್ಯಗಳನ್ನು ಬೇರೆ ಬೇರೆ ರೀತಿಗಳಲ್ಲಿ ಮನೆ ಔಷಧಗಳಾಗಿ ಬಳಸುತ್ತಾರೆ.  ಇಲ್ಲಿ ಅಂಥ ಕೆಲವು ಸಸ್ಯಗಳನ್ನು ಕೊಟ್ಟಿದೆ. ಸರಿಯಾಗಿ ಬಳಸಿದರೆ ಇವು ಬಹಳ ಉಪಯುಕ್ತ.

ಹೆಚ್ಚು ಗಂಭೀರವಲ್ಲದ ಸಾಮಾನ್ಯ ರೋಗಗಳಿಗಷ್ಟೇ ಮನೆ ಔಷಧ ಉತ್ತಮದೊಡ್ಡ ದೊಡ್ಡ ಗಂಭೀರ ಕಾಯಿಲೆಗಳಿಗೆಲ್ಲ ಡಾಕ್ಟರರನ್ನು ಕೇಳಿ ಆಧುನಿಕ ಔಷಧ ತಂದು ಬಳಸುವುದೇ ಒಳ್ಳೆಯದು.

 

ಕೆಮ್ಮು ಮತ್ತು ನೆಗಡಿ

 • ಮಗುವಿಗೆ ಕೆಮ್ಮು ನೆಗಡಿ ಆಗಿದ್ದರೆ; ತುಳಸಿ ಎಲೆಯನ್ನು ಜಜ್ಜಿ ರಸ ಹಿಂಡಿ  ದಿನಕ್ಕೆ ಮೂರು ಬಾರಿ ಕೊಡಿ.  ಒಂದೊಂದು ಬಾರಿಯೂ ಒಂದು ಅಥವಾ ಎರಡು ಚಮಚ ಕೊಡಬೇಕು.

 ಎರಡು ಚಮಚ ತೆಂಗಿನ ಎಣ್ಣೆ ಕಾಯಿಸಿ. ಒಂದು ಟೇಬಲ್ ಚಮಚ ಕರ್ಪೂರವನ್ನು ಪುಡಿಮಾಡಿ ಆ ಎಣ್ಣೆಯಲ್ಲಿ ಹಾಕಿ ಕರಗಿಸಿ.  ಇದನ್ನು ಗಟ್ಟಿ ಮುಚ್ಚಳವಿರುವ ಬಾಟ್ಲಿಯಲ್ಲಿ ಹಾಕಿ ಇಡಿ.  ಕಫ ಆಗಿದ್ದಾಗ ಇದನ್ನು ಬೆನ್ನು, ಎದೆ, ಮತ್ತು ಗಂಟಲಿಗೆ ಹಾಕಿ ಚೆನ್ನಾಗಿ  ಉಜ್ಜಬೇಕು.

 • ದೊಡ್ಡವರಿಗೆ ಕೆಮ್ಮು ನೆಗಡಿ ಆಗಿದ್ದರೆ ಎರಡು ಗ್ಲಾಸ್      ನೀರಿಗೆ ಒಂದು ಮುಷ್ಠಿ ನೀಲಗಿರಿ ಎಲೆಗಳನ್ನು ಹಾಕಿ, ನೀರು ಅರ್ಧದಷ್ಟಾಗುವವರೆಗೂ ಕುದಿಸಿ. ಸೋಸಿ.  ಅದಕ್ಕೆ ಸಕ್ಕರೆ ಹಾಕಿಟ್ಟು ದಿನಕ್ಕೆ ಎರಡು ಮೂರು ಬಾರಿ ಇದನ್ನು ಸೇವಿಸುತ್ತಿರಿ.

 ಇನ್ನೊಂದು ಒಳ್ಳೆಯ ಔಷಧ ಸಸ್ಯವೆಂದರೆ ತುಂಬೆ.  ಇದೊಂದು ಗಂಟೆಯಾಕಾರದ ಬಿಳಿಯ ಹೂ ಬಿಡುವ ಕಾಡುಗಿಡ.  ಇದರ ಎಲೆಗಳನ್ನು ಚುಟುಕು ಅರಿಶಿಣ ಹಾಕಿ ನೀರಲ್ಲಿ ಕುದಿಸಿ ಅದರ ಉಗಿಯನ್ನು ಸೇವಿಸಬೇಕು.  ಕೆಂಪಗೆ ಕಾದ ಕಲ್ಲುಗಳನ್ನು  ಇದರಲ್ಲಿ ಹಾಕಿದರೆ  ಹೆಚ್ಚು ಹೆಚ್ಚು ಉಗಿ ಏಳುತ್ತದೆ.  ಉಗಿ ಸೇವಿಸಿದರೆ ಕಫ ಬಿಗಿದಿದ್ದು ಸಡಿಲಾಗುತ್ತದೆ.

ಏಳೆಂಟು ದಿನಗಳವರೆಗೂ ನೆಗಡಿ ಗುಣವಾಗದಿದ್ದರೆ,  ಜೊತೆಗೆ ಜ್ವರವೂ ಇದ್ದರೆ ಏನು ಮಾಡಬೇಕೆಂಬುದಕ್ಕೆ ೨೦೫ ಮತ್ತು ೨೦೬ ನೇ ಪುಟಗಳನ್ನು ನೋಡಿ.

ನೆಗಡಿಯಿಂದ ಬರುವ ತಲೆನೋವು (ಸೈನೋಸೈಟಿಸ್)

 • ಒಂದು ಚೂರು ಅರಿಶಿಣವನ್ನು ಮೀನೆಣ್ಣೆಯಲ್ಲಿ ನೆನೆಸಿ ಉರಿಸಿ, ಆ ಹೊಗೆಯನ್ನು ಸೇವಿಸಿ.
 • ಕರಿಮೆಣಸಿನ ಗೊಂಚಲನ್ನು ಸುಟ್ಟು ಆ ಹೊಗೆಯನ್ನು ಸೇವಿಸಿ.
 • ಬೆಳ್ಳುಳ್ಳಿಯನ್ನು ಬಿಸಿ ಬೂದಿಯಲ್ಲಿ ಸುಟ್ಟು ದಿನಕ್ಕೆ ಮೂರು ಬಾರಿ ತೆಗೆದುಕೊಳ್ಳಿ.
 • ಹಾಗಲಕಾಯಿ ರಸವನ್ನು ಅರ್ಧಕಪ್ ತೆಗೆದುಕೊಂಡು, ಅದಕ್ಕೆ ಅರ್ಧಕಪ್ ನಿಂಬೆ ರಸ ಮತ್ತು ಒಂದು ಚಮಚ ಜೇನುತುಪ್ಪ ಬೆರೆಸಿ  ಇದನ್ನು ದಿನಕ್ಕೆ ಮೂರು ಬಾರಿ ಸೇವಿಸಿ.

ಗಂಟಲು ಕೆರೆತ

 • ಜೇನುತುಪ್ಪಕ್ಕೆ ಅಷ್ಟೇ  ಪ್ರಮಾಣದಲ್ಲಿ ನಿಂಬೆರಸ ಸೇರಿಸಿ  ಹತ್ತು ನಿಮಿಷಕ್ಕೊಮ್ಮೆ ಸೇವಿಸುತ್ತಿದ್ದರೆ ಗಂಟಲಿಗೆ ಆರಾಮವೆನಿಸುತ್ತದೆ.
 • ಒಂದೆರಡು ಲೋಟ ನೀರು ಕುದಿಸಿ  ಅದಕ್ಕೆ ಒಂದು ನಿಂಬೆ ಹಣ್ಣನ್ನು ಪೂರ್ತಿ ಹಿಂಡಿ.  ಸಕ್ಕರೆ ಅಥವಾ ಉಪ್ಪು ಹಾಕಿ ಬೆರೆಸಿರಿ. ಬಿಸಿಯಾಗಿರುವಾಗಲೇ ಕುಡಿಯಿರಿ.
 • ಒಂದು ಗ್ಲಾಸ್ ಹಾಲಿಗೆ ಕಾಳು ಮೆಣಸಿನ ಪುಡಿ ಹಾಕಿ ಕುದಿಸಿರಿ.  ಬಿಸಿಯಾಗಿರುವಾಗಲೇ ಕುಡಿಯಿರಿ.
 • ಬಿಸಿ ನೀರಲ್ಲಿ ಸ್ವಲ್ಪ ಉಪ್ಪು ಹಾಕಿ ಕರಗಿಸಿ.  ಈ ಬಿಸಿ ಉಪ್ಪು ನೀರನ್ನು ಬಾಯಲ್ಲಿ ಹಾಕಿಕೊಂಡು ಮುಖ ಮೇಲೆತ್ತಿ ನೀರನ್ನು ಗಂಟಲಲ್ಲಿ ನಿಲ್ಲಿಸಿಕೊಂಡು ಗಳಗಳ ಮಾಡಿ.  ಆಗಾಗ್ಗೆ ಹೀಗೆ ಮಾಡುತ್ತಿದ್ದರೆ ನೆಗಡಿ ಆರಂಭದ ಗಂಟಲು ಕೆರೆತ  ನಿಲ್ಲುತ್ತದೆ.

ಕರುಳಿನ ಮುರಿತ,  ಹೊಟ್ಟೆನೋವು ಮತ್ತು ಈಸುಬುಡ್ಡಿ ನೋವು

 • ಜೀರಿಗೆಯನ್ನು ಹುರಿದು ಪುಡಿಮಾಡಿಟ್ಟುಕೊಳ್ಳಿ.  ದಿನಕ್ಕೆ ಮೂರು ಬಾರಿ ಬೆಚ್ಚಗಿನ ನೀರಿನೊಂದಿಗೆ ಎರಡು ಚಮಚ ಜೀರಿಗೆ ಪುಡಿಯನ್ನು ಸೇವಿಸಿ. ಎರಡು ದಿನ ಮಾತ್ರ ಈ ಔಷಧ ಮಾಡಬೇಕು. ನೋವು ಹಾಗೆಯೇ ಇದ್ದರೆ ಡಾಕ್ಟರರನ್ನು ಕಾಣುವುದು ಲೇಸು.
 • ಜೀರಿಗೆ ಪುಡಿಯನ್ನು ಮಜ್ಜಿಗೆಯಲ್ಲಿ ಹಾಕಿ ಕುಡಿಯುವುದರಿಂದಲೂ ಹೊಟ್ಟೆನೋವು ಶಮನವಾಗುತ್ತದೆ.
 • ಮಜ್ಜಿಗೆಯಲ್ಲಿ ಒಂದು ಚೂರು ಇಂಗು ಹಾಕಿ ಕುಡಿಯುವುದರಿಂದಲೂ ನೋವು ಶಮನವಾಗುತ್ತದೆ.

ಧತುರಾ (ದತ್ತಾತ್ರಿ) ಗಿಡದ ಎಲೆಗಳಲ್ಲಿ  ಈ ರೀತಿಯ ನೋವುಗಳನ್ನು ಶಮನ ಮಾಡುವ ಗುಣವಿದೆ.

 ಒಂದೆರಡು ದತ್ತಾತ್ರಿ  ಎಲೆಗಳನ್ನು ಜಜ್ಜಿ ೧೦೦ ಮಿ.ಲಿ. ನೀರಿಗೆ ಹಾಕಿ ಒಂದು ದಿನ  ನೆನೆಸಿಡಿ. ದೊಡ್ಡವರಿಗೆ ಮಾತ್ರ ಈ ನೀರಿನ ೧೦-೧೫ ಹನಿಗಳನ್ನು ನಾಲ್ಕು ತಾಸಿಗೊಮ್ಮೆ ಕೊಡಿ.

ಮಕ್ಕಳಿಗೆ  ಔಷಧವನ್ನು ಕೊಡಕೂಡದು.

ಎಚ್ಚರಿಕೆ;   ಎಲೆಯ ರಸವನ್ನು ಜಾಸ್ತಿ ಸೇವಿಸಿದರೆ ತೀವ್ರ ಅಪಾಯವಿದೆಹೊಟ್ಟೆನೋವಿಗೆ ಬೇರೆ ಔಷಧ ಸಿಕ್ಕರೆ ಅದನ್ನೇ ಮಾಡುವುದೊಳ್ಳೆಯದು.

ಭೇದಿ

ಯಾರಿಗಾದರೂ  ಸ್ವಲ್ಪ ಪ್ರಮಾಣದಲ್ಲಿ ಭೇದಿ ಶುರುವಾಗಿದ್ದು ಬೇರೇನೂ ತೊಂದರೆ ಇಲ್ಲವೆಂದರೆ,

 • ಅಕ್ಕಿಯನ್ನು ಪೂರಾ ಕಪ್ಪಾಗುವವರೆಗೆ ಹುರಿದು, ಪುಡಿ ಮಾಡಿ. ದೊಡ್ಡವರಿಗೆ ಒಂದು ಸಾರಿ ಎರಡು ಚಮಚದಷ್ಟು, ಮಕ್ಕಳಿಗೆ ಒಂದು ಚಮಚದಷ್ಟು ಕೊಡಿ.
 • ಸಕ್ಕರೆ, ಹಾಲು ಹಾಕದ, ಹೆಚ್ಚು ಚಹಾ ಪುಡಿ ಹಾಕಿ ಕುದಿಸಿದ ನೀರಿಗೆ (ಚಾ ಕಣ್ಣಿಗೆ) ನಿಂಬೆ ಹುಳಿ ಹಿಂಡಿ ಕುಡಿಯಲು ಕೊಡಬೇಕು.
 • ಪೇರಲೆ ಎಲೆಗಳನ್ನು ತೊಳೆದು  ಚೆನ್ನಾಗಿ ರುಬ್ಬಿ ನೀರಲ್ಲಿ ಹಾಕಿ ಕುದಿಸಬೇಕು.  ಕುದಿಸಿ ಸೋಸಿದ ಈ ಕಷಾಯವನ್ನು ದಿನಕ್ಕೆ ಮೂರು ಬಾರಿ ಎರಡು ಚಮಚದಷ್ಟು ಕೊಡಬೇಕು.
 • ಎಳೆಯ ದಾಳಿಂಬೆಯನ್ನು ಸುಲಿದು ರುಬ್ಬಿ, ಮೊಸರು ಅಥವಾ ಮಜ್ಜಿಗೆಯಲ್ಲಿ  ಸೇರಿಸಿ ದಿನಕ್ಕೆ ಎರಡು ಮೂರು ಬಾರಿ ಕೊಡಬೇಕು.
 • ಇನ್ನೂ ಕಳಿತಿಲ್ಲದ ಬಾಳೆ ಹಣ್ಣು ಕೂಡ ಭೇದಿಗೆ ಒಳ್ಳೆಯ ಔಷಧ.

ಜೊತೆಗೆ ರಕ್ತ ಅಥವಾ ಸಿಂಬಳ ಹೋಗುತ್ತಿದ್ದರೆ ಅಥವಾ ನಿರ್ಜಲೀಕರಣ ಆಗಿದ್ದರೆ,    

ಆಲದ ಮರದ ಟೊಂಗೆಯ ಬಿಳಿ ಹಾಲನ್ನು ತೆಗೆದು ನೀರಿಗೆ ಸೇರಿಸಿ. ಒಮ್ಮೊಮ್ಮೆ ಭೇದಿ ಆಗುತ್ತಲೂ ದೊಡ್ಡವರಿದ್ದರೆ  ಎರಡು ಚಮಚ, ಚಿಕ್ಕವರಿದ್ದರೆ ಒಂದು ಚಮಚ ಕೊಡುತ್ತಿರಬೇಕು.

ದಾಳಿಂಬೆ ಹಣ್ಣಿನ ಚಿಪ್ಪೆಯನ್ನು ಒಣಗಿಸಿಟ್ಟು ಪುಡಿಮಾಡಿಕೊಂಡಿರಬೇಕು.  ದಿನಕ್ಕೆ ಐದು ಬಾರಿಯಂತೆ ಎರಡು ಚಮಚ ಪುಡಿಯನ್ನು ಒಂದು ಲೋಟ ನೀರಿಗೆ ಹಾಕಿ ಇಲ್ಲವೇ ಮಜ್ಜಿಗೆಗೆ ಹಾಕಿ ಮೂರು ದಿನ ಕೊಡುತ್ತಿರಬೇಕು.

 • ನೇರಳೆ ಹಣ್ಣಿನ ಬೀಜಗಳನ್ನು ಒಣಗಿಸಿ ಪುಡಿ ಮಾಟ್ಟುಕೊಳ್ಳಬೇಕು. ದಿನಕ್ಕೆ ಐದು ಬಾರಿಯಂತೆ ಎರಡು ಚಮಚ ಪುಡಿಯನ್ನು ಬೆಚ್ಚಗಿನ ನೀರು ಇಲ್ಲವೇ ಮಜ್ಜಿಗೆಗೆ ಹಾಕಿ ಮೂರು ದಿನ ಕೊಡುತ್ತಿರಬೇಕು.

 ಭೇದಿಯ ಜೊತೆಗೆ ವಾಂತಿಯೂ ಇದ್ದರೆ;

 • ಒಂದು ಮುಷ್ಠಿ ಜೀರಿಗೆಯನ್ನು ಹುರಿದು ಅದಕ್ಕೆ ಒಂದು ನಿಂಬೆ ಹಣ್ಣಿನ ರಸ, ಚಿಟಿಕೆ ಉಪ್ಪು ಹಾಕಿ.  ದಿನಕ್ಕೆ ಮೂರು ಬಾರಿಯಂತೆ ಮೂರು ದಿನಗಳ ಕಾಲ ಇದನ್ನು ಕುಡಿಯುತ್ತಿರಿ. ಮಕ್ಕಳಿಗಾದರೆ ಅರ್ಧದಷ್ಟು ಕೊಡಬೇಕು.
ಪುನರ್ಜಲೀಕರಣ ದ್ರಾವಣವನ್ನು ಭೇದಿಯಾಗತ್ತಿರುವವರಿಗೆ ಪದೇ ಪದೇ ಕೊಡುತ್ತಿರಬೇಕು.

ಗರ್ಭಿಣಿಯರಿಗೆ ವಾಂತಿ

 • ೬-೭ ಲವಂಗಗಳನ್ನು ಒಂದು ಲೋಟ ನೀರಿನಲ್ಲಿ ಹಾಕಿ ನೆನೆಸಿಡಿ.  ಅರ್ಧ ತಾಸಿನ ನಂತರ ಸೋಸಿ ಕುಡಿಯುತ್ತಿರಬೇಕು.
 • ಒಂದು ಲೋಟ ನೀರಿಗೆ ನಿಂಬೆರಸ ಮತ್ತು ಯಾಲಕ್ಕಿ ಪುಡಿ ಸಿಕ್ಕರೆ ಹಾಕಿ ಆಗಾಗ್ಗೆ ಕುಡಿಯುತ್ತಿರಬೇಕು. ಈ ಔಷಧಗಳಿಂದ ಹಾನಿಯೇನೂ ಇಲ್ಲ.

ಹೊಸ ಗಾಯ ಅಥವಾ ಕತ್ತರಿಸಿದ್ದರೆ;

 • ಸ್ವಚ್ಛ ನೀರಿನಲ್ಲಿ ಗಾಯವನ್ನು ತೊಳೆಯಿರಿ.  ಹಸಿ ಶುಂಠಿಯನ್ನು ಚೆನ್ನಾಗಿ ತೊಳೆದು ಸಕ್ಕರೆಯೊಂದಿಗೆ ಜಜ್ಜಿ. ಗಾಯದ ಮೇಲೆ ಇದನ್ನು ಹಚ್ಚಿ ಸ್ವಚ್ಛ ಬಟ್ಟೆ ಕಟ್ಟಿ.  ಗಾಯ ಪೂರ್ಣ ಮಾಯುವವರೆಗೂ ಈ ಕಟ್ಟನ್ನು ಬಿಚ್ಚಬೇಡಿ.  ಇದಕ್ಕೆ ನೀರು ತಾಗಿಸಬಾರದು. ಶುಂಠಿ ತಾನಾಗಿಯೇ ಕಳಚಿಕೊಂಡು ಬೀಳುವವರೆಗೆ ಕಟ್ಟಿರಬೇಕು.
 • ಕುದಿಸಿದ ಶುದ್ದ ನೀರು ಸಿಗುವುದು ಕಷ್ಟವಾಗಿದ್ದರೆ ಕಳ್ಳಿ ನೀರಿನಿಂದ ಗಾಯವನ್ನು ತೊಳೆಯಬಹುದು.
 • ಪಾಪಾಸುಕಳ್ಳಿ ಹಚ್ಚುವುದರಿಂದ ರಕ್ತಸ್ರಾವ ತಡೆಯಬಹುದು.  ಇದರ ರಸವು ಕತ್ತರಿಸಿದ ರಕ್ತನಾಳವನ್ನು ಬಿಗಿದು ಮುಚ್ಚಿಕೊಳ್ಳುವಂತೆ ಮಾಡುತ್ತದೆ.

ಪಾಪಾಸುಕಳ್ಳಿಯ ಗಿಡವನ್ನು ಸ್ವಚ್ಛಕತ್ತಿಯಿಂದ ಕತ್ತರಿಸಿ ಒಂದು ಚೂರು ತೆಗೆಯಿರಿ.

ಆ ಚೂರನ್ನು ಗಾಯದ ಮೇಲಿಟ್ಟು ಒತ್ತಿ ಹಿಡಿಯಿರಿ. ರಕ್ತಸ್ರಾವ ಕಡಿಮೆ ಆದ ನಂತರ ಅದೇ ಚೂರನ್ನು ಗಾಯದ ಮೇಲಿಟ್ಟು ಬಟ್ಟೆ ಕಟ್ಟಿ.

ಎರಡು ಮೂರು ತಾಸುಗಳ ನಂತರ ಪಾಪಾಸುಕಳ್ಳಿ  ಚೂರನ್ನು ಗಾಯದಿಂದ ತೆಗೆದು ಗಾಯವನ್ನು ಕುದಿಸಿ ಆರಿಸಿದ ಸ್ವಚ್ಛ ನೀರಿನಿಂದ ತೊಳೆಯಿರಿ.

(ಹೆಚ್ಚಿನ ವಿವರಕ್ಕಾಗಿ  ೯೫, ೧೦೬ ನೇ ಪುಟಗಳನ್ನು ನೋಡಿ. )

ಹೊಸಹುಣ್ಣು

ಹುಣ್ಣಾಗಿದ್ದು ಇನ್ನೂ ಕೀವು ತುಂಬಿಲ್ಲವೆಂದರೆ ಒಂದಿಷ್ಟು ಅಂಡಲೆ (ಅಳಲೆ) ಕಾಯಿಯನ್ನು ಕುದಿಸಿ ಸೋಸಿ, ಆ ನೀರಿನಿಂದ ಹುಣ್ಣನ್ನು ತೊಳೆಯಿರಿ.  ಇನ್ನೊಂದು ಅಂಡಲೆ (ಅಳಲೆ) ಕಾಯಿಯನ್ನು ಕಲ್ಲಿನ ಮೇಲೆ ಚೆನ್ನಾಗಿ ತೇಯ್ದು ಆ ರಸವನ್ನು ಹುಣ್ಣಿಗೆ ಹಚ್ಚಿ.

ಹುಣ್ಣು ಯಾವಾಗಲೂ ಸ್ವಚ್ಛವಾಗಿರಬೇಕು.

ಹಳೆಯ ಹುಣ್ಣು ಮತ್ತು ಗಾಯಗಳು

ಗಾಯಕ್ಕೆ ಆರೈಕೆ ಮಾಡದಿದ್ದರೆ ಸೂಕ್ಷ್ಮ ಕ್ರಿಮಿಗಳು ಸೇರಿಕೊಂಡು ಅದು ದೊಡ್ಡ ಹುಣ್ಣಾಗುತ್ತದೆ. ಅಂಥ ಹುಣ್ಣುಗಳಿದ್ದರೆ;

 • ಪಪ್ಪಾಯಿ ಕಾಯಿಯೊಂದನ್ನು ಕತ್ತರಿಸಿ, ಅದರ ಒಳಗಿನ ಬಿಳಿಯಭಾಗವನ್ನು ತೆಗೆದು ಗಾಯಕ್ಕೆ ಹಚ್ಚಿ. ಮರುದಿನ ಅದನ್ನೆಲ್ಲ ತೆಗೆದು ಮತ್ತೊಂದು ಪಪ್ಪಾಯಿಯ ಒಳಗಿನ ಭಾಗವನ್ನು ಹಚ್ಚಿ.  ಹುಣ್ಣು ಪೂರಾ ಸ್ವಚ್ಛ ಆದ ನಂತರ ಮೇಲೆ ಹೇಳಿದ ಅಂಡಲೆಕಾಯಿ ಔಷಧ ಮಾಡಿ. ಕುಷ್ಠ ರೋಗದ ಹುಣ್ಣಿಗಂತೂ ಈ ಔಷಧ ಉತ್ಕೃಷ್ಟ.

 

 ಪಪ್ಪಾಯಿಯನ್ನು ಹಳೆಯ ಹುಣ್ಣಿಗೆ ಚಿಕಿತ್ಸೆ ಮಾಡಲು ಬಳಸುತ್ತಾರೆ.  ಮೀನು ಕಣ್ಣಿನಂಥ  ಹಳೆಯ ಹುಣ್ಣಿದ್ದು ಚರ್ಮ ಗಟ್ಟಿಯಾಗಿದ್ದರೆ ಪಪ್ಪಾಯಿಯಲ್ಲಿರುವ ರಾಸಾಯನಿಕ ಅದನ್ನು ಮೃದು ಮಾಡಿ ಕಳಚಿ ಬೀಳಿಸಲು ಸಹಾಯ ಮಾಡುತ್ತದೆ.  ಗಟ್ಟಿಯಾಗಿರುವ ಮೀನು ಕಣ್ಣನ್ನು ಸ್ವಚ್ಛವಾಗಿ ತೊಳೆಯಿರಿ.  ಅದೇ ಕೊಯ್ದ ಹಸಿರು ಪಪ್ಪಾಯಿಯಿಂದ ಜಿನುಗುವ ಹಾಲಿನಲ್ಲಿ ಶುಭ್ರ ಬಟ್ಟೆಯನ್ನು ಅದ್ದಿ. ಅದನ್ನು ಮೀನುಕಣ್ಣಿಗೆ ಬಿಗಿದು ಕಟ್ಟಿ. ದಿನಕ್ಕೆ ಮೂರು ಬಾರಿ ಹೀಗೆಯೇ ಮಾಡುತ್ತಿರಿ.

ಪಪ್ಪಾಯಿ ಹಣ್ಣು ಜೀವಸತ್ವಗಳಿಂದ ತುಂಬಿದೆ.  ಅದು ಅತ್ಯುತ್ತಮ ಜೀರ್ಣಕಾರಿಯೂ ಹೌದುಮಕ್ಕಳಿಗೆ ಮತ್ತು ಮುದುಕರಿಗೆ ತಿನ್ನಲು ಹೆಚ್ಚೆಚ್ಚು ಪಪ್ಪಾಯಿ ಕೊಡಿ.

 • ಆಲದ ಮರದ ನೀರು ಕೂಡ ಕೀವಾದ ಹುಣ್ಣು ತೊಳೆಯಲು ಉತ್ತಮ. ಕಾಲು ಒಡೆದಿದ್ದಕ್ಕೂ ಈ ನೀರು  ಒಳ್ಳೆಯ ಔಷಧ.
 • ಒಂದು ಚಾ ಚಮಚ ಮೊಸರಿನಲ್ಲಿ ತುತ್ತವನ್ನು ತೇಯಬೇಕು. ಮೊಸರು ತಿಳಿನೀಲಿ ಬಣ್ಣ ಬಂದ ನಂತರ   ಬಾಣಲೆಯ ತಳದಲ್ಲಿರುವ ಸ್ವಚ್ಛ ಮಸಿಯನ್ನು ಸೇರಿಸಿ ಹುಣ್ಣಿಗೆ ಹಚ್ಚಿ.  ತೊಳೆಯಬೇಡಿ. ಈ ಔಷಧದಿಂದ ನೊಣಗಳು ದೂರ ಉಳಿಯುತ್ತವೆ.

ಸ್ವಚ್ಛವಾಗಿರುವ ಹುಣ್ಣಿಗೆ ಯಾವುದೇ ಚಿಕಿತ್ಸೆ ಬೇಡ.

ಸಕ್ಕರೆ ರೋಗದ ಹುಣ್ಣು

ಒಂದು ಬದನೆಕಾಯಿಯನ್ನು ಒಲೆಯ ಮೇಲಿಟ್ಟು ಸುಡಬೇಕು.  ಅದನ್ನು ಕರ್ಪೂರದ ಜೊತೆ ಸೇರಿಸಿ ಹುಣ್ಣಿಗೆ ಹಚ್ಚಬೇಕು. ಹುಣ್ಣು ಮಾಯವಾಗುತ್ತದೆ.  ಸಕ್ಕರೆ ರೋಗಕ್ಕೆ ಮಾಡಬೇಕಾದ ಪಥ್ಯವನ್ನೂ ಮಾಡಿ.

ಉಗುರು ಕಂತು

ಚೆನ್ನಾಗಿ ತೊಳೆದ ನಿಂಬೆ ಹಣ್ಣಿನಲ್ಲಿ ಒಂದು ತೂತು ಮಾಡಿ ಅದರೊಳಗೆ ಬೆರಳು ತೂರಿಸಿಹುಣ್ಣು ಒಣಗುವವರೆಗೂ ಇಟ್ಟುಕೊಂಡಿರಿ.

ಗುಳ್ಳೆ ಮತ್ತು ಹುಣ್ಣು ಹುಣ್ಣು ನೋಯುತ್ತಿದ್ದರೆ;

 • ಸೋಪು ನೀರಿನಲ್ಲಿ ಅರಿಶಿಣ ಸೇರಿಸಿ ಗುಳ್ಳೆಯ ಸುತ್ತ ಹಚ್ಚಿ.  ಅರಿಶಿಣ  ಒಳ್ಳೆಯ ಸೋಂಕು ನಿವಾರಕ. ಬೇಗನೆ ಗುಳ್ಳೆ ಒಡೆದು ಮಾಯಲು ಅದು ಸಹಾಯ ಮಾಡುತ್ತದೆ.
 • ಗುಳ್ಳೆಯ ಸುತ್ತ ಮೀನೆಣ್ಣೆ ಹಚ್ಚಿ. ಸ್ವಲ್ಪ ಅಕ್ಕಿ ಹಿಟ್ಟನ್ನು ಅರಿಶಿಣದೊಂದಿಗೆ ಬೇಯಿಸಿ ಅದನ್ನೂ ಇದರ ಮೇಲೆ ಬಳಿಯಿರಿ. ಸ್ವಚ್ಛ ಬಟ್ಟೆ ಕಟ್ಟಿಡಿ. ಹನ್ನೆರಡು ಗಂಟೆಯೊಳಗೆ ಗುಳ್ಳೆ ಒಡೆಯುತ್ತದೆ.  ಗುಳ್ಳೆ ಒಡೆದ ನಂತರ ಹುಣ್ಣಿಗೆ ಮಾಡುವ ಚಿಕಿತ್ಸೆಯನ್ನೇ ಮಾಡಿ.

 ಅಪೌಷ್ಟಿಕತೆಯಿಂದ ಬಾಯ್ಹುಣ್ಣು 

ಪೌಷ್ಟಿಕ ಊಟದ ಕೊರತೆಯಿಂದ ತುಟಿಯ ಒಳಭಾಗದಲ್ಲಿ ಹುಗುಳಾಗುತ್ತದೆ.  ಹುಗುಳಾಯಿತೆಂದರೆ  ಆ ನೋವಿನಿಂದಾಗಿ ಊಟವೇ ಬೇಡವೆನಿಸುತ್ತದೆ. ಇದರಿಂದ ಅಪೌಷ್ಟಿಕತೆ ಇನ್ನಷ್ಟು ಹೆಚ್ಚುತ್ತದೆ.

ನೋವು ಕಡಿಮೆಯಾಗುವಂತೆ ಮಾಡಿದರೆ ಊಟ ಮಾಡಬಹುದು.  ಸರಿಯಾಗಿ ಊಟ ಮಾಡುವುದೊಂದೇ ಬಾಯಿ ಹುಣ್ಣಿಗೆ ಸರಿಯಾದ ಚಿಕಿತ್ಸೆ.  ಊಟ ಸೇರುವಂತೆ ಮಾಡಲು ಬಾಯಿ ಹುಣ್ಣಿಗೆ ರಕ್ಷಾ ಕವಚವನ್ನು ಈ ರೀತಿಯಾಗಿ ಮಾಡಬಹುದು.

 • ಆಲದ ತೊಗಟೆಯನ್ನು ಜಜ್ಜಿ ಆ ರಸವನ್ನು ಬಾಯಿ ಹುಣ್ಣಿಗೆ ಹಚ್ಚಿ.
 • ಆಲದ ರಸವನ್ನು ಹಚ್ಚಿದರೂ ಒಳ್ಳೆಯದೇ.
 • ಊಟಕ್ಕೆ ಮೊದಲು ಕೆಲವು ಪೇರಲೆ ಎಲೆಗಳನ್ನು ಜಗಿಯಬೇಕು. ಪೇರಲೆ ಎಲೆಯಲ್ಲಿರುವ ಪೆಕ್ವಿನ್ ಎಂಬ ವಸ್ತು ನಾಲಿಗೆ ಹುಣ್ಣಿಗೆ ರಕ್ಷಾ ಕವಚವನ್ನು ಒದಗಿಸುತ್ತದೆ.  ನೋವನ್ನು ಕಡಿಮೆ ಮಾಡುತ್ತದೆ.
 • ಬಸಳೆ ಸೊಪ್ಪನ್ನು ಆಗಾಗ್ಗೆ ಜಗಿಯುತ್ತಿರುವುದರಿಂದ ಕೂಡ ನಾಲಿಗೆ ನೋವು ಕಡಿಮೆಯಾಗುತ್ತದೆ.
 • ಅಂಡಲೆ ಕಾಯಿಯ ಮುಲಾಮನ್ನು ನಾಲಿಗೆಗೆ ಹಚ್ಚುವುದರಿಂದ ಕೂಡ ನೋವು ನಿವಾರಣೆಯಾಗುತ್ತದೆ.

ಹೊಟ್ಟೆಯಲ್ಲಿ ಹುಣ್ಣು ಮತ್ತು ಹುಳಿತೇಗು (೩೩೬ ನೇ ಪುಟ)

ಹೊಟ್ಟೆಯಲ್ಲಿ ಹುಣ್ಣಾಗಿದ್ದರೆ, ಎದೆ ಉರಿ, ಹುಳಿ ತೇಗು ಬರುತ್ತಿದ್ದರೆ ಅಂಥವರು ಬಹಳ ಖಾರದ ಊಟ, ಕಾಫಿ, ಟೀ, ಇಂಥವನ್ನು ತೆಗೆದುಕೊಳ್ಳಬಾರದು.  ತಂಬಾಕು ಸೇವನೆ, ಕುಡಿತ ಇವುಗಳಿಂದಲೂ ದೂರವಿರಬೇಕು.  ಇವರಿಗೆ ಗುಟಕಾ ಅತ್ಯಂತ ಅಪಾಯಕಾರಿಯಾದ ವಸ್ತು.

ಹೊಟ್ಟೆಯಲ್ಲಿ ಉರಿ, ನೋವು ಕಡಿಮೆಯಾಗುವಂತೆ ಮಾಡಿದರೆ ರೋಗಿ ಚೆನ್ನಾಗಿ ಊಟ ಮಾಡಬಹುದು.   ಈ ರೋಗಕ್ಕೂ ಕೂಡ ಒಳ್ಳೆಯ ಊಟವೇ ಸರಿಯಾದ ಚಿಕಿತ್ಸೆ.

 • ಅನ್ನವನ್ನು ಸ್ವಲ್ಪ ನೀರಿನಲ್ಲಿ ರಾತ್ರಿ ನೆನೆಹಾಕಿ.  ಬೆಳಿಗ್ಗೆ ತಿಂಡಿಗೂ ಮೊದಲು ಇದನ್ನು ಸ್ವಲ್ಪ ಮೆಂತೆಯೊಂದಿಗೆ ತಿನ್ನಬೇಕು.
 • ಹಸಿ ಬೂದುಗುಂಬಳದ ರಸವನ್ನು ಬೆಳಿಗ್ಗೆ ಬರಿ ಹೊಟ್ಟೆಯಲ್ಲಿ ಕುಡಿದರೆ ಆ ರಸದಲ್ಲಿರುವ ಪ್ರತ್ಯಾಮ್ಲ ಹೊಟ್ಟೆಯ ಹುಳಿಯನ್ನು ನೀರು ಮಾಡುತ್ತದೆ.
 • ಒಂದು ಲೋಟ ನೀರಿಗೆ ಚಿಟಿಕಿ ಅಡಿಗೆ ಸೋಡಾ ಹಾಕಿ ಕುಡಿದರೂ ಅದು ಒಳ್ಳೆಯ ಔಷಧವಾಗುತ್ತದೆ.
 • ಹೊಟ್ಟೆಯ ಹುಣ್ಣಿಗೆ ಲೋಳಸರ ಕೂಡ ಒಳ್ಳೆಯ ಔಷಧ. ಅದರ ದಪ್ಪ ಎಲೆಗಳನ್ನು ಕತ್ತರಿಸಿ ನೀರಿನಲ್ಲಿ ಒಂದು ರಾತ್ರಿ ನೆನೆಸಿಡಿ.   ಮರುದಿನ ಎರಡು ತಾಸಿಗೊಮ್ಮೆ ಈ ಕಹಿಯಾದ, ಲೋಳೆಯಾದ ರಸವನ್ನು ಕುಡಿಯುತ್ತಿರಬೇಕು.
 • ಬಾಳೆ ಗಿಡದ ನೀರಿಗೆ ಮತ್ತೆ ಒಂದೂವರೆ ಪಟ್ಟು ನೀರು ಹಾಕಿ. ಇದನ್ನು ದಿನಕ್ಕೆ ಮೂರು ಬಾರಿ ಕುಡಿದರೆ ಅದರಲ್ಲಿರುವ ಪ್ರತ್ಯಾಮ್ಲ  ಹೊಟ್ಟೆಯ ಹುಳಿಯನ್ನು ನೀರು ಮಾಡುತ್ತದೆ.

 •  ಊಟದ ನಂತರ ಚೆನ್ನಾಗಿ ಕಳಿತ ಒಂದು ಬಾಳೆ ಹಣ್ಣನ್ನು ತಿನ್ನಿ.
 • ಅನ್ನದೊಂದಿಗೆ ಹಾಲು ಅಥವಾ ಹುಳಿಯಿಲ್ಲದ ಮೊಸರು, ಮಜ್ಜಿಗೆಯನ್ನು ಹಾಕಿ ಉಪ್ಪಿನಕಾಯಿಯನ್ನು ನಂಜಿಕೊಳ್ಳದೆ ತಿನ್ನಬೇಕು.  ಮತ್ತೆ ಮತ್ತೆ ಹೊಟ್ಟೆ ನೋವಾಗುತ್ತಿದ್ದರೆ ತಣ್ಣಗಿನ ಹಾಲು ಅಥವಾ ನೀರು ಕುಡಿಯುವುದರಿಂದಲೂ
 • ತಾತ್ಕಾಲಿಕ ನೋವು ಶಮನ ಸಾಧ್ಯ.

ಚರ್ಮದ ಬಿಳಿಕಲೆಗಳು (ಬೂಸ್ಟಿನ ಸೋಂಕು)

ಅಗಸೆ ಎಲೆಗಳನ್ನು  ಸ್ವಚ್ಛವಾಗಿ ತೊಳೆದು  ಜಜ್ಜಿ ರಸ ತೆಗೆಯಿರಿ.  ಈ ರಸವನ್ನು ಏಳು ದಿನಗಳವರೆಗೆ ದಿನಕ್ಕೆ ಮೂರು ಬಾರಿ ಹಚ್ಚಿ. 

ಗಣಜಿಲೆ ಬೊಕ್ಕೆಗಳು(೪೪೨ ನೇ ಪುಟ ನೋಡಿ)

ಬೇವಿನ ಎಲೆಗಳನ್ನು ರೋಗಿಯ ಹಾಸಿಗೆಯ ಮೇಲೆ ಹರಡಿ. ಇವು ತಂಪು ಮತ್ತು ನಂಜು ಹರಡದಂತೆ ಮಾಡಬಲ್ಲಂಥವು.  ಇದರಿಂದ ತುರಿಕೆ ಕಡಿಮೆ ಆಗುತ್ತದೆ.

ಚೇಳು ಕಡಿತ(೧೪೮ ನೇ ಪುಟ ನೋಡಿ)

 • ಒಂದು ಈರುಳ್ಳಿ ಕತ್ತರಿಸಿ ಚೇಳು ಕಡಿದ ಜಾಗಕ್ಕೆ ಹಾಕಿ ತಿಕ್ಕಿ. ಉರಿ ಕಡಿಮೆಯಾಗುತ್ತದೆ.
 • ಪೋಟ್ಯಾಸಿಯಂ ಪರಮಾಂಗನೇಟನ್ನು ಅಷ್ಟೇ ಪ್ರಮಾಣದ ಸಿಟ್ರಿಕ್ ಆಸಿಡ್‌ನೊಂದಿಗೆ ತೇಯಿರಿ. (ನಿಂಬೆ ರಸವೂ ಆದೀತು). ಒಂದು ಕಾಗದದಲ್ಲಿ ಅದನ್ನು ತೆಗೆದುಕೊಂಡು ಕಚ್ಚಿದ ಜಾಗಕ್ಕೆ ಸರಿಯಾಗಿ ಬರುವಂತೆ  ಹಚ್ಚಿ. ಅದರ ಮೇಲೆ ಒಂದು ಹನಿ ನೀರು ಬಿಟ್ಟರೆ ಅದು ಕುದಿಯಲಾರಂಭಿಸುತ್ತದೆ. ಈ ಔಷಧದಿಂದ ಕೂಡಲೆ ನೋವು ನಿವಾರಣೆ ಆಗುತ್ತದೆ.

ಎಚ್ಚರಿಕೆಚರ್ಮ ಎಳೆಯದಿದ್ದರೆ ಅದು ಸುಟ್ಟುಹೋಗಬಹುದು.
ಕಡಿದ ಜಾಗಕ್ಕಷ್ಟೇ ಸರಿಯಾಗಿ ಹಚ್ಚಬೇಕು.