ಉಷ್ಣತಾ ಮಾಪಕ(ಥರ್ಮಾಮೀಟರ್)ವನ್ನು ಉಪಯೋಗಿಸುವ ಬಗೆ

ಪ್ರತಿಯೊಂದು ಕುಟುಂಬದಲ್ಲೂ ಒಂದು ಉಷ್ಣತಾ ಮಾಪಕವಿರಬೇಕು.  ರೋಗಿಯ ದೇಹದ ಉಷ್ಣತೆಯನ್ನು ದಿನಕ್ಕೆ ನಾಲ್ಕು ಬಾರಿ ನೋಡಿ ಬರೆದಿಡಬೇಕು.               

ಉಷ್ಣತೆ ಅಳೆಯುವ ಬಗೆ:

 • ಸೋಪು ನೀರಿನಲ್ಲಿ ಇಲ್ಲವೆ ಅಲ್ಕೋಹಾಲಿನಲ್ಲಿ ಥರ್ಮಾಮೀಟರನ್ನು ಸ್ವಚ್ಛವಾಗಿ ತೊಳೆಯಬೇಕು.
 • ಬೆಳ್ಳಿಗೆರೆ ೩೬ ಡಿಗ್ರಿಗೆ ಬರುವತನಕ ಅದನ್ನು ಚೆನ್ನಾಗಿ ಕೊಡವಬೇಕು.
 • ಬಾಯಿಯಲ್ಲಿ ನಾಲಿಗೆಯಡಿ ಇಟ್ಟು ಬಾಯಿ ಮುಚ್ಚಲು ಹೇಳಿ.

ಅಥವಾ ಬಾಯಲ್ಲಿಟ್ಟಾಗ ಕಡಿಯುವ ಭಯವಿದ್ದರೆ ಬಗಲಲ್ಲಿ ಇಡಿ. ಇಲ್ಲವೇ ಚಿಕ್ಕ ಮಗುವಾಗಿದ್ದರೆ  ಅದಕ್ಕೆ ಸ್ವಲ್ಪ ನೀರು ಅಥವಾ ಎಣ್ಣೆ ಹಚ್ಚಿ ಗುದದ್ವಾರದಲ್ಲಿ ಇಡಿ.  ರೋಗಿಯು ಎಚ್ಚರ ಇಲ್ಲವೆಂದರೆ ಕೂಡ ಥರ್ಮಾಮೀಟರನ್ನು ತೋಳಸಂದು ಇಲ್ಲವೇ ಗುದದ್ವಾರದಲ್ಲಿಯೇ ಇಡುವುದು ಒಳ್ಳೆಯದು.

 • ೨-೩ ನಿಮಿಷ ಹಾಗೆಯೇ ಇಡಿ.
 • ಹೊರತೆಗೆದು ಓದಿ.  (ಗುದದ್ವಾರದಲ್ಲಿ ಅತೀ ಹೆಚ್ಚು, ನಾಲಿಗೆಯಲ್ಲಿ ಮಧ್ಯಮ, ಬಗಲಲ್ಲಿ ಕಡಿಮೆ ಉಷ್ಣತೆ ಕಂಡುಬರುತ್ತದೆ.)
 • ಉಪಯೋಗಿಸಿಯಾದ ನಂತರ ಸೋಪು ನೀರಿನಲ್ಲಿ ಥರ್ಮಾಮೀಟರನ್ನು ತೊಳೆಯಿರಿ.

ಸೂಚನೆ

 • ಸ್ವಲ್ಪ ಮೊದಲಷ್ಟೆ ರೋಗಿಯು ಬಿಸಿಯದೇನಾದರೂ ಕುಡಿದಿದ್ದರೆ ಸ್ವಲ್ಪ ಸಮಯ ಬಿಟ್ಟು ಬಾಯಲ್ಲಿ ಥರ್ಮಾಮೀಟರ್ ಇಡಿರಿ.  ೫-೧೦ ನಿಮಿಷ ಕಾಯ್ದು ನಂತರ ಇಡುವುದೊಳ್ಳೆಯದು.
 • ರೋಗಿಗೆ ಎಚ್ಚರ ತಪ್ಪಿದ್ದರೆ, ಅಘಾತವಾಗಿದ್ದರೆ, ಫಿಟ್ಸ್ ಬರುತ್ತಿದ್ದರೆ, ಬಹಳ ಒದ್ದಾಡುತ್ತಿದ್ದರೆ, ಅಥವಾ ಬಾಯಿ ಮುಚ್ಚುವ ಸ್ಥಿತಿಯಲ್ಲಿ ಇಲ್ಲದಿದ್ದರೆ ಥರ್ಮಾಮೀಟರನ್ನು ಬಾಯಲ್ಲಿ ಇಡಬೇಡಿರಿ.
 • ಮಗುವಿಗೆ ಭೇದಿಯಾಗುತ್ತಿದ್ದರೆ ಗುದದ್ವಾರದಲ್ಲಿ ಥರ್ಮಾಮೀಟರನ್ನು ಇಡಬೇಡಿ.

ಥರ್ಮಾಮೀಟರನ್ನು ಓದುವ ಬಗೆ: (ಡಿಗ್ರಿ ಸೆಂಟಿಗ್ರೇಡಿನಲ್ಲಿದ್ದುದು):

ಬೆಳ್ಳಿಗೆರೆ ಸ್ಪಷ್ಟವಾಗಿ ಕಾಣುವವರೆಗೆ ತಿರುಗಿಸುತ್ತಿರಿ   ಸಾಮಾನ್ಯ     ಜ್ವರ        ಅತಿ ಜ್ವರ

ಬೆಳಿಗೆರೆ ಮುಗಿದ ಜಾಗ ಉಷ್ಣತೆಯನ್ನು ಸೂಚಿಸುತ್ತದೆ.

ಉಸಿರಾಟ :

ರೋಗಿ ಹೇಗೆ ಉಸಿರಾಡುತ್ತಿದ್ದಾರೆ ಎಂದು ಲಕ್ಷ್ಯಕೊಟ್ಟು ನೋಡಿ. ಉಸಿರು ಆಳವಾಗಿದೆಯೇ, ಅಥವಾ ತೀರಾ ಮೇಲುಸಿರೋ, ಎಷ್ಟು ವೇಗದಲ್ಲಿದೆ, ಸುಲಭವಾಗಿದೆಯೋ, ಕಷ್ಟಕರವೋ ಎಂಬುದನ್ನೆಲ್ಲ ಗಮನವಿಟ್ಟು ನೋಡಿ. ಎದೆಯ ಎರಡೂ ಬದಿಗಳೂ ಒಂದೇ ರೀತಿ ಚಲಿಸುತ್ತವೆಯೋ ಇಲ್ಲವೋ ನೋಡಿ.

ಕೈಯಲ್ಲಿ ವಾಚಿದ್ದರೆ ನಿಮಿಷಕ್ಕೆ ಎಷ್ಟು ಉಸಿರು ತೆಗೆದುಕೊಳ್ಳುತ್ತಾರೆ ಎಣಿಸಿ.  ದೊಡ್ಡವರಲ್ಲಿ ಮತ್ತು ಮಕ್ಕಳಲ್ಲಿ ನಿಮಿಷಕ್ಕೆ ೧೨-೨೦.  ಚಿಕ್ಕ ಮಕ್ಕಳಲ್ಲಿ ನಿಮಿಷಕ್ಕೆ ೩೦,  ಶಿಶುಗಳಲ್ಲಿ ನಿಮಿಷಕ್ಕೆ ೪೦ ಉಸಿರು ಬರುತ್ತಿದ್ದರೆ ಅದು ಸರಿಯಾದ ವೇಗ.  ಜ್ವರ ಜಾಸ್ತಿ ಇದ್ದಾಗ ಅಥವಾ ನ್ಯುಮೋನಿಯಾದಂಥ ಶ್ವಾಸಕೋಶದ ಕಾಯಿಲೆಗಳಿದ್ದಾಗ ರೋಗಿಯ ಉಸಿರಾಟ  ಹೆಚ್ಚುತ್ತದೆ.  ದೊಡ್ಡವರಲ್ಲಿ ನಿಮಿಷಕ್ಕೆ ೪೦ ಕ್ಕಿಂತ ಹೆಚ್ಚು,  ಮಕ್ಕಳಲ್ಲಿ ನಿಮಿಷಕ್ಕೆ ೬೦ ಕ್ಕಿಂತ ಹೆಚ್ಚು ಮೇಲುಸಿರು ಬರುತ್ತಿದ್ದರೆ ಅದು ನ್ಯುಮೋನಿಯಾದ ಸೂಚನೆ.

ನಿಮ್ಮ ಕೈಯಲ್ಲಿ ವಾಚಿಲ್ಲದಿದ್ದರೆ ನಿಮ್ಮ ನಾಡಿ ಬಡಿತಕ್ಕೆ ಉಸಿರಾಟವನ್ನು ಹೋಲಿಸಿ ನೋಡಿ.  ರೋಗಿಯ ಒಂದು ಉಸಿರು ನಿಮ್ಮ ನಾಲ್ಕು ನಾಡಿ ಬಡಿತಗಳಿಗೆ ಸಮ ಇದ್ದರೆ ಅದು ಸರಿಯಾದ ವೇಗ.  ಒಂದು ಉಸಿರು ಎರಡು ಅಥವಾ ಮೂರು ನಾಡಿ ಬಡಿತಕ್ಕೆ ಸಮನಾಗಿದ್ದರೆ, ಅದು ಜೋರಾಗಿದೆ ಎಂದರ್ಥ.

ಉಸಿರಾಟದ ಶಬ್ದವನ್ನು ಲಕ್ಷ್ಯಕೊಟ್ಟು ಕೇಳಿ. ಉದಾಹರಣೆಗೆ;

 • ಸೀಟಿ ಊದಿದಂಥ ಸಪ್ಪಳ ಬರುತ್ತಿದ್ದರೆ,  ಉಸಿರು ಬಿಡುವಾಗ ಕಷ್ಟ ಆಗುತ್ತಿದ್ದರೆ ಅಸ್ತಮಾ ಇರಬೇಕು. (೨೧೫ ನೇ ಪುಟ ನೋಡಿ )
 • ಮೂರ್ಛೆ ಹೋಗಿರುವ ರೋಗಿಯಲ್ಲಿ ಗೊರಕೆಯಂಥ ಶಬ್ದ ಬರುತ್ತಿದ್ದು ಉಸಿರು ತೆಗೆದುಕೊಳ್ಳಲು ತ್ರಾಸಾಗುತ್ತಿದ್ದರೆ, ನಾಲಿಗೆ, ಸಿಂಬಳ, ಕೀವು ಅಥವಾ ಇನ್ನಾವದೋ ವಸ್ತು ಗಂಟಲಲ್ಲಿ ಸಿಕ್ಕಿಕೊಂಡು ಗಾಳಿಗೆ ಸರಾಗವಾಗಿ ಹೋಗಲು ಬಿಡುತ್ತಿಲ್ಲವೆಂದರ್ಥ.
 • ರಾತ್ರಿ ಧಿಡೀರನೇ ಉಸಿರುಗಟ್ಟಿದಂತಾಗುತ್ತಿದ್ದರೆ ಅದು ಹೃದಯದ ರೋಗದ ಸೂಚನೆ.

ರೋಗಿ ಉಸಿರಾಡುವಾಗ ಎದೆಯ ಅಸ್ಥಿಗಳ ಮಧ್ಯೆ ಮತ್ತು ಕುತ್ತಿಗೆಯ ಎಲುಬುಗಳ ಹಿಂದುಗಡೆ ಚರ್ಮ ಒಳಹೋಗುತ್ತಿದ್ದರೆ ಗಾಳಿಗೆ ಒಳಹೋಗಲು ಕಷ್ಟವಾಗುತ್ತಿದೆ ಎಂದರ್ಥ.  ಗಂಟಲೊಳಗೆ ಏನಾದರೂ ಸಿಕ್ಕಿರಬಹುದು. (೧೦೪ ನೇ ಪುಟ ) ನ್ಯುಮೋನಿಯಾ (೨೨೧ ನೇ ಪುಟ) ಅಥವಾ ದಮ್ಮು ಇರಬಹುದು (೨೧೫ನೇ ಪುಟ) ಬ್ರಾಂಕೈಟಿಸ್ ಇರಬಹುದು (೨೧೮ ನೇ ಪುಟ).

ನಾಡಿ ಬಡಿತ :

ನಾಡಿಯ ಮೇಲೆ ಎರಡು ಬೆರಳನ್ನಿಡಿ     ಕೈಮೇಲೆ ಸಿಗದಿದ್ದರೆ ಕುತ್ತಿಗೆಯ                      ಎದೆಯ ಮೇಲೆ ಕಿವಿಯನ್ನಿಟ್ಟು
(ಹೆಬ್ಬೆರಳನ್ನಿಡಬಾರದು.)                  ಧ್ವನಿ ಪೆಟ್ಟಿಗೆ ಪಕ್ಕದಲ್ಲಿ ಬೆರಳನ್ನಿಡಿ.                   ಹೃದಯ ಬಡಿತವನ್ನು
ನೇರವಾಗಿ ಕೇಳಿ.

ಬಡಿತ ಎಷ್ಟು ಶಕ್ತಿಯುತವಾಗಿದೆ, ವೇಗ ಎಷ್ಟಿದೆ, ಮತ್ತು ನಿಯಮಿತವಾಗಿದೆಯೇ, ಇವೆಲ್ಲವುಗಳ ಕಡೆ ಲಕ್ಷ್ಯಕೊಡಿ.  ಒಂದು ವಾಚಿದ್ದರೆ ಒಂದು ನಿಮಿಷಕ್ಕೆ ಎಷ್ಟು ಬಡಿತ ಎಂದು ಲೆಕ್ಕ ಮಾಡಿ.

ವಿಶ್ರಾಂತಿಯಲ್ಲಿರುವಾಗ ಸಾಮಾನ್ಯರ ನಾಡಿ ಬಡಿತ

ದೊಡ್ಡವರು  ನಿಮಿಷಕ್ಕೆ       ೬೦-೮೦

ಮಕ್ಕಳು,        ,,              ೮೦-೧೦೦

ಶಿಶುಗಳು        ,,             ೧೦೦-೧೪೦

ವಾಚಿಲ್ಲದಿದ್ದರೆ  ನಿಮ್ಮ ನಾಡಿ ಬಡಿತದೊಂದಿಗೆ  ಹೋಲಿಸಿ ನೋಡಿ.  ರೋಗಿಯ  ನಾಡಿ ಬಡಿತದ  ಕಲ್ಪನೆ ಬರುತ್ತದೆ.    ಹಾಗೆ ಮಾಡುವುದಾದರೆ ಓಡಾಡಿ ಬಂದ ಕೂಡಲೆ ನೋಡಬೇಡಿ.  ಸ್ವಲ್ಪ ಹೊತ್ತು ವಿಶ್ರಾಂತಿ ತೆಗೆದುಕೊಂಡಾದ ನಂತರವೇ ನೋಡಿ.  ತಿರುಗಾಟದ ನಂತರ ನಾಡಿ ಬಡಿತ ಹೆಚ್ಚತ್ತದೆ.

ವ್ಯಾಯಾಮದ ನಂತರ, ಹೆದರಿರುವಾಗ, ತುಂಬಾ ಜ್ವರ ಇದ್ದಾಗ, ತುಂಬಾ ನೋವಿದ್ದಾಗ ನಾಡಿ ಬಡಿತ ಹೆಚ್ಚುತ್ತದೆ.   ಒಂದು ಸೆಂಟಿಗ್ರೇಡ್ ಜ್ವರ ಏರಿದರೆ ಅದಕ್ಕೆ ತಕ್ಕಂತೆ ನಾಡಿ ಬಡಿತ ೨೦ ರಷ್ಟು ಹೆಚ್ಚುತ್ತದೆ.  ರೋಗ ತೀವ್ರವಾಗಿದ್ದಾಗ ಪದೇ ಪದೇ ನಾಡಿಬಡಿತ,  ದೇಹದ ಉಷ್ಣತೆ,  ಉಸಿರಾಟದ ವೇಗ ಮೂರನ್ನೂ ನೋಡಿ ಬರೆದಿಡಿ.

ನಾಡಿ ಬಡಿತದಲ್ಲಿ ಹೆಚ್ಚು ಕಡಿಮೆ ಆಗಿದ್ದನ್ನು ಬರೆದಿಡುವುದು ಅತಿ ಮುಖ್ಯ.  ಉದಾ:

 • ಬಲವಾಗಿಲ್ಲದ ಆದರೆ ವೇಗವಾಗಿ ಹೊಡೆಯುತ್ತಿರುವ ನಾಡಿ ಅಘಾತದ ಸೂಚನೆ (೧೦೨ ನೇ ಪುಟ)
 • ತೀರಾ ವೇಗ, ತೀರಾ ನಿಧಾನ, ಹುಚ್ಚಾಪಟ್ಟೆ ಏರಿಳಿತ ಇದ್ದರೆ ಹೃದಯದ ತೊಂದರೆ ಇರಬಹುದು. (೩೭೭ ನೇ ಪುಟ)
 • ಬಹಳ ಜ್ವರ ಇದ್ದು ಅದಕ್ಕೆ ತಕ್ಕಂತೆ ನಾಡಿ ಬಡಿತ ಏರಿಲ್ಲದಿದ್ದರೆ – ಟೈಫಾಯಿಡ್ (೨೪೦ ನೇ ಪುಟ)

ಸ್ಟೆತೋಸ್ಕೋಪ್

ಡಾಕ್ಟರರು ಕೊರಳಲ್ಲಿ ಹಾಕಿಕೊಳ್ಳುವ ಸ್ಟೆತೋಸ್ಕೋಪು ಬಹಳ ಜನರಿಗೆ ಬಲು ವಿಸ್ಮಯಕರ ಸಾಧನವೆನಿಸಿದೆ. ರೋಗಿಯ ರೋಗದ ಬಗ್ಗೆ ಡಾಕ್ಟರಿಗೆ ಎಲ್ಲವನ್ನೂ ಈ ಸಾಧನವು ಹೇಳುತ್ತದೆ ಎಂದು ಕೆಲವರು ನಂಬಿದರೆ, ಜ್ವರವನ್ನು ಅಳೆಯಲು ಡಾಕ್ಟರರು ಇದನ್ನು ಬಳಸುತ್ತಾರೆ ಎಂದು ಕೆಲವರು ತಿಳಿಯುತ್ತಾರೆ. ಆದರೆ ಇವೆರಡೂ ಸತ್ಯದಿಂದ ಬಲುದೂರ. ಸ್ಟೆತೋಸ್ಕೋಪ್‌ನ ಮುಖ್ಯ ಕೆಲಸಗಳೆಂದರೆ;

೧. ರಕ್ತದೊತ್ತಡವನ್ನು ಅಳೆಯುವುದು
೨. ಹೃದಯಬಡಿತವನ್ನು, ಉಸಿರಾಟದ ಸಪ್ಪಳವನ್ನು ಕೇಳುವುದು

ಹೃದಯ ಬಡಿತದಲ್ಲಿ ಲಬ್ ಡಬ್ ಎಂದು ಎರಡು ಬಾರಿ ಸಪ್ಪಳ ಬರುತ್ತದೆ. ಸ್ಟೆತೋಸ್ಕೋಪನ್ನು ಎದೆಯ ಮುಂಭಾಗದ ಮೇಲಿಟ್ಟು ಆಲಿಸಿದಾಗ ಈ ಎರಡೂ ಸಪ್ಪಳಗಳೂ ಕೇಳುತ್ತವೆ. ಕೆಲವೊಂದು ರೋಗಗಳಲ್ಲಿ ಈ ಶಬ್ದಗಳಲ್ಲಿ ವ್ಯತ್ಯಾಸವನ್ನು ಗುರುತಿಸಬಹುದು.  ಲಬ್ ಮತ್ತು ಡಬ್  ಶಬ್ದಗಳ ಮಧ್ಯೆ ಬೇರೆಯ ಶಬ್ದಗಳೂ ಕೇಳುತ್ತಿದ್ದರೆ ಹೃದಯದ ಕವಾಟಗಳ ತೊಂದರೆಯನ್ನು ಅದು ಸೂಚಿಸುತ್ತದೆ. ಎದೆಯ ಮುಂಭಾಗದ ಮೇಲೆ ಸ್ಟೆತೋಸ್ಕೋಪನ್ನು ಇಟ್ಟಾಗ ಮಾತ್ರ ಹೃದಯ ಬಡಿತ ಕೇಳುತ್ತದೆ.

ಉಸಿರಾಟದ ಸಪ್ಪಳ ಸ್ಟೆತೋಸ್ಕೋಪನ್ನು ಎದೆಯ ಯಾವ ಭಾಗದಲ್ಲಿ ಇಟ್ಟರೂ ಕೇಳುತ್ತದೆ.  ಉಸಿರಾಟದಲ್ಲಿ ಉಸಿರನ್ನು ಒಳತೆಗೆದುಕೊಳ್ಳುವ ಉಚ್ಛ್ವಾಸ, ಹೊರಬಿಡುವ ನಿಃಶ್ವಾಸ ಎಂಬ ಎರಡು ಸಪ್ಪಳಗಳನ್ನು ಕೇಳುತ್ತೇವೆ. ನ್ಯುಮೋನಿಯಾ ಆಗಿದ್ದಾಗ ಉಚ್ಛ್ವಾಸ ಮತ್ತು ನಿಃಶ್ವಾಸಗಳ ಒತ್ತಡ ಬೇರೆ ಬೇರೆಯಾಗಿರುತ್ತದೆ. ಅಸ್ತಮಾ ಆಗಿದ್ದರೆ ಸೀಟಿ ಊದಿದಂತೆ ಉಸಿರಾಟದ ಸಪ್ಪಳ ಕೇಳುತ್ತದೆ.

ರಕ್ತದೊತ್ತಡ

ರಕ್ತದೊತ್ತಡವನ್ನು ಅಳೆಯುವ ಸಾಧನ ನಿಮ್ಮ ಬಳಿ ಇದ್ದರೆ ಅದನ್ನೂ ಅಳೆದು ನೋಡಿ. ಇದಕ್ಕೆ ಹೆಚ್ಚಿನ ಮಾಹಿತಿಯನ್ನು   ೧೫೮ ನೇ ಪುಟದಲ್ಲಿ ಕೊಟ್ಟಿದೆ.

ಚರ್ಮ

ಚರ್ಮರೋಗ  ಸಣ್ಣದಿದ್ದರೂ ಇಡೀ ದೇಹವನ್ನೂ ಪರೀಕ್ಷಿಸುವುದು ಅತ್ಯಗತ್ಯ.  ಶಿಶು ಅಥವಾ ಮಕ್ಕಳಿಗಾದರೆ ಮೊದಲು ಪೂರ್ತಿ ಬಟ್ಟೆ ಬಿಚ್ಚಬೇಕು.  ಯಾವುದೇ ವಿಶೇಷತೆ ಕಂಡುಬಂದರೆ ಗುರುತು ಹಾಕಿಕೊಳ್ಳಿ.

ಉದಾ:

 • ಹುಣ್ಣು
 • ಗಾದರಿ
 • ಗಾಯ
 • ಚುಚ್ಚುಗಾಯ
 • ಕಲೆ
 • ಗಾಯವಾಗಿದ್ದು ಹುಣ್ಣಾಗುವ ಲಕ್ಷಣ
 • ಅಸಾಧಾರಣ ಗಂಟು
 • ಕೆಂಪಾಗಿದ್ದು, ಬಿಸಿಯಾಗಿದ್ದು
 • ನೋವು ಭರಿತ ಊತ
 • ಕುತ್ತಿಗೆ, ಬಗಲು, ತೊಡೆ ಸಂದಿಗೆ ಗಂಟಾಗಿದೆಯೇ
 • ಉಬ್ಬಿದೆಯೇ
 • ಕೂದಲು ಬಹಳ ಉದುರುತ್ತಿವೆಯೇ
 • ರೆಪ್ಪೆಗಳು ಉದುರುತ್ತಿವೆಯೇ
 • ಉಗುರಿನ ಆಕಾರದಲ್ಲಿ ಬದಲಾವಣೆ ಇದೆಯೇ

ಮಕ್ಕಳಿಗೆ ಗುದದ್ವಾರ, ಲೈಂಗಿಕ ಅಂಗಗಳು, ಬೆರಳ ಸಂದು, ಕಿವಿ ಹಿಂದೆ, ಕೂದಲೊಳಗೆ, ಎಲ್ಲೆಡೆ ಪರೀಕ್ಷಿಸಿ.  (ಹೇನು, ಗಜಕರ್ಣ, ಗಾದರಿ, ಹುಣ್ಣು, ಕಜ್ಜಿಗಳಾಗಿದ್ದರೆ ನೋಡಿ)

ತುರಿಕೆ ಇದೆಯೇ ಕೇಳಿ.  ಏನೂ ಕಾಣದೆ ಸುಮ್ಮನೆ ತುರಿಕೆಯಾಗುತ್ತಿದ್ದರೆ ಅದಕ್ಕೆ ಈ ಕೆಳಗಿನ ಕಾರಣಗಳಿರಬಹುದು.

 • ಒಣಚರ್ಮ
 • ವಯಸ್ಸಾಗುತ್ತಿರುವ ಲಕ್ಷಣ
 • ಬಸಿರು
 • ಯಾವುದೋ ಔಷಧಕ್ಕೆ ಪ್ರತಿರೋಧ
 • ಹೇನು

ಚರ್ಮದ ಬೇರೆ ಬೇರೆ ರೋಗ ಲಕ್ಷಣಗಳಿಗೆ ೨೫೦-೨೫೨ ನೇ ಪುಟಗಳನ್ನು ನೋಡಿ.

 

ತಲೆ

ತಲೆಯಲ್ಲಿ ಕೂದಲು ತುಂಬಿರುವ ಕಾರಣದಿಂದಾಗಿ ಸಣ್ಣ ಪುಟ್ಟ ಗಾಯ, ಹುಣ್ಣು, ಹೇನು ಮುಂತಾದವು ಕಣ್ಣಿಗೆ ಕಾಣುವುದೇ ಇಲ್ಲ. ಹಾಗಾಗಿ  ಪರೀಕ್ಷೆಯಲ್ಲಿ ಅವು ಕಣ್ತಪ್ಪುವ ಸಾಧ್ಯತೆ ಹೆಚ್ಚು.   ನೆನಪಿಟ್ಟು ಹೇನಾಗಿವೆಯೇ, ಹುಣ್ಣಿದೆಯೇ ನೋಡಿ.  ಎಲ್ಲಾದರೂ ಗಾಯ, ಉಬ್ಬಿದ ಸಾಧ್ಯತೆಗಳಿವೆಯೇ ಪರೀಕ್ಷಿಸಿ.   ಕೂದಲು ಬಹಳ ಉದುರುವುದು ಅಥವಾ ಇನ್ನೇನಾದರೂ ಕಂಡುಬಂದಿದ್ದರೆ ಹೇಳಲು ರೋಗಿಗೆ, ಅವರ ಹತ್ತಿರದವರಿಗೆ ಕೇಳಿ.

ಮುಖದಲ್ಲಿ ಯಾವುದೇ ಬದಲಾವಣೆ ಆಗಿದೆಯೇ ಎಂದು ಗಮನವಿಟ್ಟು ನೋಡಿ.

ಕಣ್ಣು

ಕಣ್ಣನ್ನು  ಪರೀಕ್ಷಿಸುವಾಗ ಈ ಕೆಳಗಿನವುಗಳತ್ತ ಗಮನವಿಟ್ಟು ನೋಡಿ.

 • ಹುಬ್ಬು

ಕುಷ್ಠವಿದ್ದವರಿಗೆ ಕಣ್ಣ ಹುಬ್ಬುಗಳು ಕ್ರಮೇಣ ಮಾಯವಾಗುತ್ತವೆ. (೨೪೪ ನೇ ಪುಟ) ವಯಸ್ಸಾದಂತೆ ಹುಬ್ಬು ಸಪೂರವಾಗುತ್ತದೆ.

 • ಕಣ್ರೆಪ್ಪೆ

ಮೂತ್ರಕೋಶದ ತೊಂದರೆ ಆದಾಗ ಕಣ್ಣರೆಪ್ಪೆಗಳು ದಪ್ಪವಾಗುತ್ತವೆ. ಎರಡೂ ಕಣ್ಣು ಮುಚ್ಚಲು ಹೇಳಿ.  ಪಾರ್ಶ್ವವಾಯುವಾಗಿದ್ದರೆ ಒಂದು ಕಣ್ಣು ಮುಚ್ಚಲು ಕಷ್ಟವಾಗುತ್ತದೆ.  (೩೭೯ ನೇ ಪುಟ ) ರೆಪ್ಪೆಯನ್ನು ಪೂರ್ತಿ ಮುಚ್ಚಲು ಆಗುತ್ತಿಲ್ಲವೆಂದರೆ ಮುಂದೆ ಕಣ್ಣು ಒಣಗಿ ತ್ರಾಸಾಗಬಹುದು.

 • ಕಣ್ಣಿನ ಬಿಳಿಭಾಗವನ್ನು ನೋಡಿ.

ಸರಿಯಾಗಿದೆಯೇ, ಕೆಂಪಾಗಿದೆಯೇ (೧೬ ನೇ ಅಧ್ಯಾಯ) ಹಳದಿಯಾಗಿದೆಯೇ? ರೋಗಿಯ ದೃಷ್ಟಿಯಲ್ಲಿ ಇನ್ನಾವುದೇ ಬದಲಾವಣೆ ಆಗಿದ್ದರೆ ನೋಡಿ.

ರೋಗಿಯು ಮೇಲೆ ಕೆಳಗೆ, ಅತ್ತ ಇತ್ತ ನಿಧಾನವಾಗಿ ನೋಡಲಿ.  ಧಿಡೀರ್ ಚಲನೆ ಮತ್ತು ಒಂದೇ ರೀತಿಯಲ್ಲದ ಚಲನೆ ಇದ್ದರೆ ಮಿದುಳಿಗೆ ಪೆಟ್ಟಾಗಿದೆ ಎಂದರ್ಥ.

 • ಕಣ್ಣಿನ ಪಾಪೆಯ ಗಾತ್ರವನ್ನು ಗಮನಿಸಿ.

ಒಂದು ಟಾರ್ಚು ಸಿಕ್ಕರೆ ಉಪಯೋಗಿಸಿಸಾಮಾನ್ಯವಾಗಿ ಎರಡೂ ಪಾಪೆಗಳು ಒಂದೇ ಗಾತ್ರದಲ್ಲಿರುತ್ತವೆ. ಅವು ಬಹಳ ದೊಡ್ಡದಾಗಿದ್ದರೆ ಅಘಾತವಾಗಿದೆ ಎಂದರ್ಥ (೧೦೨ ನೇ ಪುಟ).  ಬಹಳ ಸಣ್ಣವಾಗಿದ್ದರೆ ವಿಷ ಅಥವಾ ಯಾವುದೋ ಔಷಧದ ಪರಿಣಾಮ ಇರಬಹುದು.  

ಕಣ್ಣಿಗೆ ಬೆಳಕು ಬಿಟ್ಟು ಅದಕ್ಕೆ ಪ್ರತಿಕ್ರಿಯೆ ಹೇಗಿರುತ್ತದೆ ನೋಡಿ.  ಬೆಳಕನ್ನು ಒಂದು ಕಡೆಯಿಂದ ಬಿಡುತ್ತ ಬನ್ನಿ. ಹಾಗೆಯೇ ಇನ್ನೊಂದು ಕಣ್ಣಿನ ಬದಿಯಿಂದ ಬೆಳಕು ಬಿಡುತ್ತ ಬನ್ನಿ. ಬೆಳಕು ಬಿದ್ದಾಗ ಸಾಮಾನ್ಯವಾಗಿ ಪಾಪೆಗಳು ಕಿರಿದಾಗುತ್ತವೆ.

ಪಾಪೆಗಳ ಗಾತ್ರದಲ್ಲಿ ಅಂತರ ಇದ್ದರೆ ಕೂಡಲೇ ವೈದ್ಯಕೀಯ ನೆರವು ಅಗತ್ಯ.

 • ಪಾಪೆ ದೊಡ್ಡ ಆಗಿರುವ ಕಣ್ಣಲ್ಲಿ ಬಹಳ ನೋವಿದ್ದು ವಾಂತಿ ಬರುತ್ತಿದ್ದರೆ ಅವರಿಗೆ ಹತ್ತಗಣ್ಣು (೨೭೭ ನೇ ಪುಟ ) ಆಗಿದೆ.
 • ಪಾಪೆ ಸಣ್ಣಗಾಗಿದ್ದು ನೋಯುತ್ತಿದ್ದರೆ ಕರಿಯಾಲಿ ಉರಿತ ಅಂದರೆ ತೀವ್ರವಾದ ಒಂದು ಸಾಂಕ್ರಾಮಿಕ ರೋಗ ತಗುಲಿದೆ. (೨೭೬ ನೇ ಪುಟ )
 • ಮೂರ್ಛೆ ಹೋದವನಲ್ಲಿ ಅಥವಾ ತಲೆಗೆ ಪೆಟ್ಟು ಬಿದ್ದ ಮನುಷ್ಯನಲ್ಲಿ ಪಾಪೆಗಳ ಗಾತ್ರ ಬೇರೆ ಬೇರೆ ಆಗಿದ್ದರೆ ಮಿದುಳಿಗೆ ಪೆಟ್ಟು ಎಂದರ್ಥ ಅಥವಾ ಅವರಿಗೆ ಅಘಾತವೂ ಆಗಿರಬಹುದು. ( ೨೭೦ ನೇ ಪುಟ).

ಮೂರ್ಛೆ ಬಿದ್ದವನ ಅಥವಾ ತಲೆಗೆ ಪೆಟ್ಟಾಗಿದ್ದವನ ಕಣ್ಣಿನ ಪಾಪೆಗಳ ಗಾತ್ರವನ್ನು ಯಾವಾಗಲೂ ಗಮನಿಸಿ.

ಕಿವಿ                                              

ಕಿವಿಯಲ್ಲಿ ನೋವು ಅಥವಾ ಸಾಂಕ್ರಾಮಿಕ ರೋಗದ ಸೂಚನೆ ಇದೆಯೇ ನೋಡಿ.  ಮಗುವಾಗಿದ್ದರಂತೂ ಜ್ವರ ಅಥವಾ ನೆಗಡಿ ಆಗಿದ್ದರೆ ಈ ಪರೀಕ್ಷೆ ಅತೀ ಅವಶ್ಯ.  ಮಗು ಬಹಳ ಅಳುತ್ತಿದ್ದು ಕಿವಿಯ ಹತ್ತಿರ ತಿಕ್ಕಿಕೊಳ್ಳುತ್ತಿದ್ದರೆ ಅಥವಾ ಪದೇ ಪದೇ ಕಿವಿಯನ್ನು ಜಗ್ಗುತ್ತಿದ್ದರೆ ಕಿವಿ ನೋವು ಬಂದಿದೆ ಎನ್ನಬಹುದು. (೩೬೨  ನೇ ಪುಟ)

ಕಿವಿಯ ಹಿಂಭಾಗ ಕೆಂಪಾಗಿದ್ದರೆ, ಅಥವಾ ಅಲ್ಲಿ ಒತ್ತಿ ಮುಟ್ಟಿದಾಗ ತುಂಬಾ ನೋವಿದ್ದರೆ ಒಳಗಿನ ಎಲುಬಿಗೆ ಸೋಂಕು ತಗುಲಿದೆ ಎಂದರ್ಥ. ಆಗ ಜ್ವರ ಬಹಳವಿದ್ದು ರೋಗಿ ತೀರಾ ನಿತ್ರಾಣರಾಗುತ್ತಾರೆ.

ಒಳಗೆ ನೋಡಬೇಕೆಂದರೆ ಕಿವಿಯನ್ನು ಸಾವಕಾಶವಾಗಿ ಎಳೆಯಿರಿ.  ಬಹಳ ನೋವಾದರೆ ಒಳಗಿನ ನಾಳದಲ್ಲಿ ಸೋಂಕು ತಗುಲಿದೆ ಎಂದರ್ಥ.  ಕಿವಿಯ ಒಳಗೆ ಕೆಂಪಾಗಿದೆಯೇ?  ಕೀವು ಇದೆಯೇ ನೋಡಿ.  ಸಣ್ಣ ಬ್ಯಾಟರಿ ಇದ್ದರೆ ಉಪಯೋಗಿಸಿ

ನೋಡಿ.  ಕಡ್ಡಿ, ತಂತಿ ಅಥವಾ ಇನ್ನಾವುದೇ ಗಟ್ಟಿಯಾದ ಪದಾರ್ಥವನ್ನು ಕಿವಿಯ ಒಳಗೆ ಹಾಕಬೇಡಿ.

ಕಿವಿ ಸರಿಯಾಗಿ ಕೇಳುತ್ತಿದೆಯೇ? ಒಂದು ಕಿವಿ ಇನ್ನೊಂದಕ್ಕಿಂತ ಮಂದವಾಗಿದೆಯೇ?  ನಿಮ್ಮ ಕೈಬೆರಳು ಮತ್ತು ಹೆಬ್ಬೆರಳುಗಳನ್ನು ಕಿವಿಯ ಬಳಿ ತಂದು ತಿಕ್ಕಿ.  ಸಪ್ಪಳ ಕೇಳುತ್ತದೆಯೇ ಕೇಳಿ.

ಮೂಗು ಮತ್ತು ಮೂಗಿನ ಹೊಳ್ಳೆಗಳು

ಮೂಗನ್ನು ಪರೀಕ್ಷಿಸಿ.  ಸೋಂಕು ತಗುಲಿದ ಲಕ್ಷಣವಿದೆಯೇ?  ಕೆಂಪಗಾಗಿದೆಯೇ?  ಒಳಗಡೆ ನೋಡಲು ಟಾರ್ಚು ಬೇಕಾಗುತ್ತದೆ.  ರೋಗಿ ತನ್ನ ತಲೆಯನ್ನು ಸ್ವಲ್ಪ ಮೇಲೆತ್ತಲಿ.  ಎಡಗೈ ಹೆಬ್ಬೆರಳನ್ನು ಮೂಗಿನ ಮೇಲಿಟ್ಟು ಹಿಂದಕ್ಕೆ ದೂಡಿ.  ಒಳಗೆ ರಕ್ತ, ಕೀವು,  ಸಿಂಬಳವಿದೆಯೇ ಅಥವಾ ಊದಿದೆಯೇ,  ಏನಾದರೂ ವಸ್ತು ಒಳಗೆ  ಸೇರಿಕೊಂಡಿದೆಯೇ, ಕೆಟ್ಟ ವಾಸನೆ ಬರುತ್ತಿದೆಯೇ  ನೋಡಿ. (೨೧೩ ನೇ ಪುಟ)

ಮೂಗಿನ ಎರಡೂ ಕಡೆ  ಮುಖದ ಕುಳಿಗಳನ್ನು (ಸೈನಸ್) ಬೆರಳಿನಿಂದ ತಟ್ಟಿ ನೋಡಿ.  ಕಣ್ಣನ್ನು ಒತ್ತಬಾರದು.  ನಿಧಾನವಾಗಿ ಕೆಳಗೆ ಸರಿಯುತ್ತ ಕೆನ್ನೆಯ ಎಲಬುಗಳನ್ನೂ ಒತ್ತಿ.

ನೋವಿದ್ದರೆ,  ಜೊತೆಗೆ ಜ್ವರವಿದ್ದರೆ, ಜೊತೆಗೆ ಮೂಗು ಸುರಿಯುತ್ತಿದ್ದರೆ ಸೈನೋಸೈಟಿಸ್ ಅಥವಾಮುಖದ ಕುಳಿಗಳ ಉರಿತವಾಗಿದೆ ಎಂದರ್ಥ.

ಬಾಯಿ, ನಾಲಿಗೆ, ಗಂಟಲು:

ರೋಗವು ತೀವ್ರವಾಗಿಲ್ಲದಿದ್ದರೂ ಬಾಯಿ, ನಾಲಿಗೆ, ಮತ್ತು ಗಂಟಲನ್ನು ಲಕ್ಷ್ಯಕೊಟ್ಟು ಪರೀಕ್ಷಿಸಿ.  ಬಾಯಿಯ ಒಂದೊಂದೇ ಭಾಗವನ್ನು ಪರೀಕ್ಷಿಸುತ್ತ ಹೋಗಿ.

ತುಟಿಗಳು:

ತುಟಿಗಳು ಊದಿವೆಯೇ, ಒಡೆದಿವೆಯೇ, ಹುಣ್ಣಾಗಿವೆಯೇ ನೋಡಿ.  ಕೆಳದುಟಿಯಲ್ಲಿ ಪದೇಪದೇ ಹುಣ್ಣಾಗುತ್ತಿದ್ದು ಗುಣವಾಗದಿದ್ದರೆ, ದೊಡ್ಡ ಕಲೆಯಾಗಿ ಬೆಳೆಯುತ್ತಿದ್ದರೆ ಬಾಯಿಯ ಕ್ಯಾನ್ಸರಿನ ಸೂಚನೆ ಎಂದುಕೊಳ್ಳಬಹುದು.( ೨೬೩ ನೇ ಪುಟ)

ಬಾಯಿ:

ತುಟಿಗಳ ಮೂಲೆಯಲ್ಲಿ ಹುಣ್ಣಾಗಿದೆಯೇ, ಒಡೆದಿದೆಯೇ ನೋಡಿ. ಒಡೆದು ಹುಣ್ಣಾಗಿದ್ದರೆ ಅದೊಂದು ಜೀವಸತ್ವದ ಕೊರತೆ ಇರಬಹುದು (೨೮೬ ನೇ ಪುಟ)

ನಾಲಿಗೆ:

ನಾಲಿಗೆಯ ಬಣ್ಣ ಮತ್ತು ಅದು ಹೇಗೆ ಕಾಣುತ್ತದೆ ನೋಡಿ.
ಚಪ್ಪಟೆಯಾಗಿ ನುಣುಪಾಗಿದ್ದರೆ ರಕ್ತ ಹೀನತೆ (೧೫೭ ನೇ ಪುಟ)
ನೀಲಿಗಟ್ಟಿದ್ದರೆ- ಹೃದಯ ಮತ್ತು ಉಸಿರಾಟದ ತೊಂದರೆಯ ಸೂಚಕ
ಒಣಗಿದ್ದರೆ- ನಿರ್ಜಲೀಕರಣವಾಗಿರಬಹುದು. ಚಿಕ್ಕ ಚಿಕ್ಕ ಬಿಳಿಯ ಕಲೆಗಳಿದ್ದರೆ ಬೂಸ್ಟಿನ ಸೋಂಕು ಹತ್ತಿರಬಹುದು. ಬಾಯಿಯೊಳಗೆ, ನಾಲಿಗೆಯ ಮೇಲೆ ಹುಣ್ಣಾಗಿದ್ದು ಮಾಯದಿದ್ದರೆ, ಬಾಯಿ ಕ್ಯಾನ್ಸರಿನ ಸೂಚನೆ ಇರಬಹುದು.
ಎಲೆ ಅಡಿಕೆ ತಂಬಾಕು ಗುಟಕಾ ತಿನ್ನುವ ಜನರಲ್ಲಿ ಇದು ಸಾಮಾನ್ಯ.