ರೋಗಿಗೆ ಆಗಿರುವುದೇನೆಂದು ತಿಳಿದುಕೊಳ್ಳಲು ನೀವು ಮೊದಲು ಕೆಲವು ಮುಖ್ಯ ಪ್ರಶ್ನೆಗಳನ್ನು ಕೇಳಬೇಕು. ನಂತರ ಸರಿಯಾಗಿ ಪರೀಕ್ಷೆ ಮಾಡಬೇಕು. ರೋಗಿಯಲ್ಲಿ ಕಂಡುಬರುವ ರೋಗ ಸೂಚನೆ, ಮತ್ತು ಲಕ್ಷಣಗಳನ್ನು ಸರಿಯಾಗಿ ನೋಡಿಕೊಂಡರೆ ಅವರ ರೋಗ ತೀವ್ರತೆ ಎಷ್ಟಿದೆ ಮತ್ತು ಯಾವ ರೋಗ ಬಂದಿದೆ ಎಂಬುದನ್ನು ತಿಳಿದುಕೊಳ್ಳಲು ಸಹಾಯವಾಗುತ್ತದೆ. ಪ್ರಶ್ನೆಗಳನ್ನು ಎಷ್ಟು ಸರಿಯಾಗಿ ಕೇಳಿದೆ, ಮತ್ತು ರೋಗಿಯನ್ನು ಎಷ್ಟು ಚೆನ್ನಾಗಿ ಪರೀಕ್ಷೆ ಮಾಡಿದೆ ಎನ್ನುವುದು ರೋಗವನ್ನು ಪತ್ತೆ ಹಚ್ಚಲು ಬಹಳ ಮುಖ್ಯ. ರೋಗಿಯನ್ನು ಪರೀಕ್ಷಿಸಲು ನೀವು ಹೋದಾಗ ಏನೇನು ಕೇಳಬೇಕು ಮತ್ತು ಯಾವ ಯಾವ ಲಕ್ಷಣಗಳಿಗಾಗಿ ನೋಡಬೇಕು ಎಂಬುದಕ್ಕೆ ಮಾರ್ಗದರ್ಶಿಯಾಗಿ ಕೆಲವು ಮೂಲಭೂತ ವಿಷಯಗಳಿವೆ. ಇವುಗಳಲ್ಲಿ ರೋಗಿಯು ತಾನಾಗಿಯೇ ಹೇಳುವುದನ್ನು ಲಕ್ಷಣಗಳು ಮತ್ತು ನಾವು ಗುರುತಿಸುವಂಥದ್ದನ್ನು ಸೂಚನೆಗಳು ಎಂದು ಹೇಳುತ್ತಾರೆ. ಮಾತಾಡಲಿಕ್ಕಾಗದವರಲ್ಲಿ ಮತ್ತು ಮಕ್ಕಳಲ್ಲಿ ನಾವು ಗುರುತಿಸುವ ಸೂಚನೆಗಳೇ ಮುಖ್ಯ.
ನೀವು ರೋಗಿಯನ್ನು ಪ್ರಶ್ನೆ ಕೇಳುವ ಅಥವಾ ಪರೀಕ್ಷಿಸುವ ಮೊದಲು ಈ ಕೆಲವು ವಿಷಯಗಳನ್ನು ಖಾತ್ರಿ ಮಾಡಿಕೊಳ್ಳಿ.
೧. ರೋಗಿ ಆರಾಮವಾಗಿ ಕುಳಿತಿರಲಿ, ಇಲ್ಲವೇ ಮಲಗಿರಲಿ.
೨. ಪರೀಕ್ಷೆ ಮತ್ತು ಪ್ರಶ್ನೆಗಳನ್ನು ಆದಷ್ಟು ಖಾಸಗಿ ಮಾಡಿಕೊಂಡಿರಿ. ಪ್ರಶ್ನೆ ಕೇಳುವಾಗ ಒಂದು ಕೊಠಡಿಯಲ್ಲಾದರೆ ಒಳ್ಳೆಯದು. ಪರೀಕ್ಷಿಸುವಾಗ ಬಟ್ಟೆಯಿಂದ ಮರೆ ಮಾಡಿಕೊಂಡಿದ್ದರೆ ಒಳ್ಳೆಯದು.
೩. ರೋಗಿಯ ಸದ್ಯದ ತೊಂದರೆಯ ಮೇಲೆ ಕೇಂದ್ರೀಕೃತ
ಮಾಡಿಕೊಂಡು ನಿಧಾನವಾಗಿ ಪ್ರಶ್ನೆಗಳನ್ನು ಬೆಳೆಸುತ್ತ ಹೋಗಿ.
೪. ರೋಗಿ ಹೇಳಿದುದನ್ನೆಲ್ಲ ದಾಖಲೆ ಮಾಡಿ ಇಟ್ಟುಕೊಂಡಿದ್ದರೆ ಅವರು ಇನ್ನೊಮ್ಮೆ ನಿಮ್ಮ ಬಳಿ ಬಂದಾಗ, ಇಲ್ಲವೇ ಅವರನ್ನು ಡಾಕ್ಟರರ ಬಳಿ ಒಯ್ಯುವ ಪ್ರಸಂಗ ಬಂದಾಗ ಈ ದಾಖಲೆ ಪ್ರಯೋಜನಕ್ಕೆ ಬರುತ್ತದೆ.
೫. ರೋಗಿಯ ಪರೀಕ್ಷೆ ಒಳ್ಳೆಯ ಬೆಳಕಿನಲ್ಲಿ, ಅದರಲ್ಲೂ ಸೂರ್ಯನ ಬೆಳಕಿನಲ್ಲಿ ಆದರೆ ಅತಿ ಉತ್ತಮ.
೬. ರಕ್ತಸ್ರಾವ ಆಗುತ್ತಿರುವ ಅಥವಾ ಅಘಾತ, ಎಚ್ಚರದಪ್ಪಿರುವಂಥ ತುರ್ತು ಪರಿಸ್ಥಿತಿಯಲ್ಲಿ ಮೊದಲು ಚಿಕಿತ್ಸೆ ಪ್ರಾರಂಭಿಸಿ. ಪ್ರಶ್ನೆ ಕೇಳುತ್ತ ಸಮಯ ಕಳೆಯಬೇಡಿ. ಅತಿ ಅವಶ್ಯವೆನಿಸಿದರೆ ಮುಖ್ಯವಾದ ಪ್ರಶ್ನೆ ಕೇಳಿ ಚಿಕಿತ್ಸೆ ಪ್ರಾರಂಭಿಸಿ.
೭. ಚಿಕ್ಕ ಮಗು ಅಥವಾ ಶಿಶುವನ್ನು ಪರೀಕ್ಷಿಸುವಾಗ ಅದರ ಬಟ್ಟೆಗಳನ್ನೆಲ್ಲ ಕಳಚುವುದು ಬಹಳ ಮುಖ್ಯ.
೮. ತನ್ನ ರೋಗ, ತೊಂದರೆ ಶುರುವಾಗಿದ್ದು ಯಾವಾಗೆಂದು ಸರಿಯಾದ ತಾರೀಖು ಅಥವಾ ದಿನವನ್ನು ಹೇಳಲು ರೋಗಿ ಪೇಚಾಡುತ್ತಿದ್ದರೆ ಹಿಂದಾಗಿರುವ ಮುಖ್ಯ ಘಟನೆಗಳನ್ನು ನೆನಪು ಮಾಡಿಕೊಡಿ. ಆಗ ಅವರಿಗೆ ತಾರೀಖು ನೆನಪಾಗಬಹುದು ಇಲ್ಲವೇ ನೀವೇ ಆ ತಾರೀಖನ್ನು ಬರೆದುಕೊಳ್ಳಬಹುದು. ಉದಾಹರಣೆಗೆ; ಊರಲ್ಲಿ ಜಾತ್ರೆಯಾದ ದಿನವೇ. . . , ಎಲೆಕ್ಷನ್ನಿನ ಪ್ರಚಾರಕ್ಕೆ ಬಂದಿದ್ದ ದಿನವೇ. . . ಹೀಗೆ.
ರೋಗಿಯ ತೊಂದರೆ ಮತ್ತು ಆ ರೋಗದ ಹಿನ್ನೆಲೆಯನ್ನೆಲ್ಲ ತಿಳಿಯುವುದರ ಜೊತೆಗೆ ರೋಗಕ್ಕೆ ಕಾರಣವಾಗಿರಬಹುದಾದ ಮಾಹಿತಿಗಳನ್ನೂ ಗಮನಿಸುವುದು ಅತಿ ಮುಖ್ಯ. ಯಾವ ರೀತಿ ಪ್ರಶ್ನೆಗಳನ್ನು ಕೇಳಬೇಕು, ಏನೇನು ಪರೀಕ್ಷೆಗಳನ್ನು ಮಾಡಬೇಕು ಎಂದು ಒಂದು ಮಾರ್ಗದರ್ಶಿಕೆಯನ್ನು ಕೊಟ್ಟಿದೆ ಇಲ್ಲಿ. ಆದರೂ ನಿಮಗೆ ಅನುಕೂಲವಾದ ರೀತಿಯಲ್ಲಿ ನೀವೇ ಒಂದು ಮಾರ್ಗದರ್ಶಿಕೆ ಮಾಡಿಟ್ಟುಕೊಳ್ಳುವುದು ಮುಖ್ಯ.
೧. ಪ್ರಶ್ನೆಗಳು (ರೋಗಿಯುಹೇಳುವುದು)
ಸಾಮಾನ್ಯ ಮಾಹಿತಿ; ಇವು ನಿಮಗೆ ರೋಗಿಯ ಬಗ್ಗೆ ಸಾಮಾನ್ಯವಾದ ಮಾಹಿತಿಯ ಜೊತೆಗೆ ಆತನಿಗೆ ಆಗಿರಬಹುದಾದ ರೋಗದ ಬಗ್ಗೆ ಸ್ಥೂಲ ಚಿತ್ರವನ್ನು ಕೊಡುತ್ತದೆ.
ಪರೀಕ್ಷೆಯ ದಿನ, ತಾರೀಖು, ರೋಗಿಯ ಹೆಸರು, ವಿಳಾಸ, ವಯಸ್ಸು, ಲಿಂಗ, ಮದುವೆಯಾಗಿದೆಯೇ, ಇಲ್ಲವೇ, ಸಂಗಾತಿಯಿಂದ ಬೇರೆಯಾದವರೇ, ಉದ್ಯೋಗ, ಮತ್ತು ಮತ ಇವುಗಳ ಬಗ್ಗೆ ಮೊದಲು ಬರೆದುಕೊಳ್ಳಿ.
ಈ ಪ್ರಶ್ನೆಗಳಿಗೆ ಉತ್ತರಗಳು ಆ ರೋಗಿಯ ರೋಗದ ಬಗ್ಗೆ ನಿಮಗೆ ಸ್ವಲ್ಪ ಮಾಹಿತಿಯನ್ನು ಕೊಟ್ಟುಬಿಡುತ್ತದೆ. ಕೆಲವೊಂದು ವಯಸ್ಸಿನಲ್ಲಿಮಾತ್ರ ಬರುವ ರೋಗಗಳೂ ಇವೆ, ಹಾಗೆಯೇ ಕೆಲವು ರೋಗಗಳು ಹೆಂಗಸರಲ್ಲಿ ಅಥವಾ ಗಂಡಸರಲ್ಲಿ ಮಾತ್ರವೇ ಕಾಣುವಂಥಾದ್ದು. ಇನ್ನು ಕೆಲವು ರೋಗಗಳಿಗೆ ಅವರಲ್ಲಿರುವ ನಂಬಿಕೆ, ಧಾರ್ಮಿಕ ಆಚರಣೆಗಳು ಕಾರಣವಾಗಿರಬಹುದು. ಇನ್ನು ಕೆಲವು ಉದ್ಯೋಗಗಳು ಕೆಲವೊಂದು ತೊಂದರೆಗೆ ಕಾರಣವಾಗಿರಲೂ ಬಹುದು. ಉದಾಹರಣೆಗೆ ಹೊಲಗಳಿಗೆ ಔಷಧ, ಗೊಬ್ಬರ ಹಾಕುವ ಕಾಲದಲ್ಲಿ ರೈತರು ಅಲರ್ಜಿಗಳಿಂದ ನರಳಬಹುದು. ಕಲ್ಲು ಗಣಿಗಳಲ್ಲಿ, ಧೂಳಿನಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರಲ್ಲಿ ಶ್ವಾಸಕೋಶದ ರೋಗ ಸಾಮಾನ್ಯ. ಹೀಗೆ ರೋಗ ಯಾವುದೆಂದು ನಿರ್ಧರಿಸುವಲ್ಲಿ ಈ ಮಾಹಿತಿಗಳೂ ಅಗತ್ಯ. ನೀವು ಪ್ರಶ್ನೆಗಳನ್ನು ಮಾಡುತ್ತ ಉತ್ತರಗಳನ್ನು ಕಲೆ ಹಾಕುತ್ತ ಹೋದಂತೆ ರೋಗದ ಬಗ್ಗೆ ಹೆಚ್ಚೆಚ್ಚು ಸ್ಪಷ್ಟವಾದ ಕಲ್ಪನೆ ಬರತೊಡಗುತ್ತದೆ.
ಮುಖ್ಯವಾದ ಸಮಸ್ಯೆ : ಇದು ರೋಗಿಯು ನಿಮ್ಮ ಬಳಿಗೆ ಬರಲು ಕಾರಣವಾದ ನಿಜವಾದ ತೊಂದರೆ. ತೊಂದರೆ ಒಂದೇ ಇರಬಹುದು ಅಥವಾ ಅನೇಕ ಇರಬಹುದು. ಅವುಗಳಲ್ಲಿ ಅತಿ ಹೆಚ್ಚು ತೊಂದರೆ ಕೊಡುತ್ತಿರುವ ಸಮಸ್ಯೆಯ ಬಗ್ಗೆ ವಿಚಾರಮಾಡಿ. ಅವರು ಹೇಳಿದ ಶಬ್ದಗಳನ್ನೇ ಬರೆದುಕೊಳ್ಳಿ ಹೊರತು ಅವರು ಹೇಳಿದ್ದರ ಅರ್ಥ ಹೀಗಿರಬಹುದೆಂದು ಹಾಗೆ ಬರೆಯಲು ಹೋಗಬೇಡಿ.
ಮನುಷ್ಯನೊಬ್ಬ ತಲೆನೋವು, ಕೆಮ್ಮು, ನೆಗಡಿಗಳಿಂದ ಅನೇಕ ದಿನಗಳಿಂದ ತೊಂದರೆ ಪಡುತ್ತಿರಬಹುದು. ಆದರೆ ಒಂದು ದಿನ ಕೆಮ್ಮಿದಾಗ ಕಫದೊಂದಿಗೆ ರಕ್ತವೂ ಹೊರಬೀಳುತ್ತದೆ. ಆಗ ನಿಮ್ಮ ಬಳಿಗೆ ಅವರು ಓಡಿ ಬಂದಿರುತ್ತಾರೆ. ಈಗ ಅವರ ಮುಖ್ಯ ತೊಂದರೆ ಕಫದಲ್ಲಿ ರಕ್ತ ಬರುತ್ತಿರುವುದು ಹೊರತು ತಲೆನೋವು ಅಲ್ಲ. ರೋಗ ಯಾವಾಗ ಶುರುವಾಯಿತು, ಹೇಗೆ ಶುರುವಾಯಿತು ಕೇಳಿ. ಎಷ್ಟು ಸಾಧ್ಯವೋ ಅಷ್ಟು ಹಿಂದಕ್ಕೆ ಅವನನ್ನು ಒಯ್ಯಿರಿ. ತನಗೆ ಶುರುವಾದ ಅತಿ ಸಣ್ಣ ತೊಂದರೆಯಿಂದ ಹೇಳಿಕೊಳ್ಳಲಿ. ಅವರದು ಪೂರ್ತಿ ಹೇಳಿಯಾದ ಮೇಲೆ ನೀವು ಇನ್ನಷ್ಟು ಪ್ರಶ್ನೆಗಳನ್ನು ಕೇಳಿ ನಿಮಗೆ ಬೇಕಾದ ಇನ್ನಷ್ಟು ಮಾಹಿತಿಗಳನ್ನು ಕಲೆ ಹಾಕಿ.
ಉದಾಹರಣೆಗೆ: ರೋಗಿಗೆ ನೋವಿದ್ದರೆ ಈ ರೀತಿ ಕೇಳುತ್ತ ಹೋಗಿ,
ನೋವು ಎಲ್ಲಿದೆ, ಒಂದು ಬೆರಳಿನಿಂದ ತೋರಿಸಲು ಹೇಳಿ. ಅಲ್ಲಿಂದ ಅದು ಹರಡುತ್ತ ಹೋಗುತ್ತದೆಯೇ? ಹರಡುತ್ತಿದ್ದರೆ ಯಾವ ಕಡೆಗೆ?
ನೋವು ಹೇಗಿರುತ್ತದೆ? ಒಮ್ಮೆಗೇ ಜೋರಾಗಿ ಬರುವುದೇ, ಸಣ್ಣಗೆ ಸದಾ ನೋಯುತ್ತಿರುವುದೇ, ಉರಿಯೊಂದಿಗೆ ಕೂಡಿರುವುದೇ, ಸತತ ಇರುವುದೇ, ಒಂದೆ ಸಮ ಏರುತ್ತ ಇರುವುದೇ, ಹಿಡಿದಂತಾಗುವುದೇ?
ನೋವು ಅತಿಯಾಗಿದ್ದು ನಿದ್ದೆ ಮಾಡಗೊಡುವುದಿಲ್ಲವೇ?
ಪದೇ ಪದೇ ಬರುವುದೇ? ದಿನಕ್ಕೊಮ್ಮೆ ಬರುವುದೇ? ಯಾವಾಗ ಬರುತ್ತದೆ?
ಬಂದರೆ ಎಷ್ಟು ಹೊತ್ತು ಇರುತ್ತದೆ ? ಒಂದು ತಾಸು? ಅರ್ಧ ತಾಸು? ಒಂದು ದಿನ? ಅರ್ಧ ದಿನ?
ನೋವು ಉಂಟಾಗುವುದು ಯಾವಾಗ? ಬಗ್ಗಿದಾಗಲೇ? ನೆಲ ಒರೆಸುತ್ತಿರುವಾಗಲೇ? ನಡೆಯುವಾಗಲೇ? ಊಟವಾದ ಕೂಡಲೆಯೇ?
ನೋವಿದ್ದಾಗ ಏನು ಮಾಡಿದರೆ ನೋವು ಕಡಿಮೆಯಾಗುತ್ತದೆ? ವಿಶ್ರಾಂತಿ ತೆಗೆದುಕೊಂಡರೆ? ಒಂದು ಮಗ್ಗುಲಾಗಿ ಮಲಗಿದರೆ? ನೋವು ಕಡಿಮೆ ಮಾಡಲು ಅವರು ಏನು ಮಾಡುತ್ತಾರೆ?
ಏನು ಮಾಡಿದರೆ ನೋವು ಜಾಸ್ತಿಯಾಗುತ್ತದೆ? ಕೆಮ್ಮಿದರೆ? ಜೋರಾಗಿ ಉಸಿರು ತೆಗೆದುಕೊಂಡರೆ? ನಡೆದರೆ?
ಈವರೆಗೆ ಯಾವುದೇ ಔಷಧ ತೆಗೆದುಕೊಂಡಿದ್ದಾರೆಯೇ? ಮನೆ ಮದ್ದೇ, ಪಕ್ಕದ ಮನೆಯವರಿಂದ ಅಥವಾ ನೆಂಟರಿಂದ ಕೇಳಿ ಪಡೆದ ಗುಳಿಗೆಯೇ? ದಿನಕ್ಕೆ ಎಷ್ಟು ಬಾರಿ ತೆಗೆದುಕೊಳ್ಳುತ್ತಾರೆ ? ಅದರಿಂದ ಗುಣ ಕಂಡಿದೆಯೇ? ಅಥವಾ ಜಾಸ್ತಿಯಾಗಿದೆಯೇ?
ಇದರ ಜೊತೆಗೆ ಇನ್ನೇನಾದರೂ ತೊಂದರೆ ಕಾಣಿಸಿದೆಯೇ? ತೂಕ ಕಡಿಮೆಯಾಗುವುದು, ಹಸಿವೆಯಾಗದಿರುವುದು, ಮೂತ್ರ ಮಾಡುವಾಗ ತ್ರಾಸಾಗುವುದು, ಮಲವಿಸರ್ಜನೆಯಲ್ಲಿ ಬದಲಾವಣೆ?
ಉಸಿರಾಡಲು ತೊಂದರೆಯೆಂದು ಬಂದ ವ್ಯಕ್ತಿಗೆ ಈ ಕೆಳಗಿನಂತೆ ಪ್ರಶ್ನೆಗಳನ್ನು ಕೇಳಿ,
- ಜೊತೆಗೆ ಎದೆನೋವು ಇದೆಯೇ? ಉಸಿರೆಳೆದುಕೊಂಡಾಗ ಅಥವಾ ಕೆಮ್ಮಿದಾಗ ಎದೆ ನೋಯುತ್ತದೆ ಮತ್ತು ಒಂದು ಮಗ್ಗುಲಾಗಿ ಮಲಗಿದಾಗ ಕಡಿಮೆಯಾಗುತ್ತದೆ ಎಂದಾದರೆ ಅದು ನ್ಯುಮೋನಿಯಾದ ಆರಂಭದ ಹಂತವಿರಬಹುದು. ( ೨೨೧ ನೇ ಪುಟ)
- ನಡೆಯುವಾಗ, ಓಡುವಾಗ ಮೆಟ್ಟಿಲು ಹತ್ತುವಾಗ, ಎದೆನೋವು ಬರುತ್ತಿದ್ದು, ವಿಶ್ರಾಂತಿ ತೆಗೆದುಕೊಂಡಾಗ ಕಡಿಮೆಯಾಗಿ ಬಿಡುತ್ತದೆ ಎಂದಾದರೆ ಹೃದಯದ ತೊಂದರೆ ಆರಂಭವಾಗಿರಬಹುದು.
ಕೆಮ್ಮು ಇದೆಯೆಂದಾದರೆ ಅದು ಅವರ ನಿದ್ದೆಗೆ ತೊಂದರೆ ಕೊಡುತ್ತಿದೆಯೇ ಕೇಳಿ. ಕೆಮ್ಮಿದಾಗ ಕಫ ಬರುತ್ತದೆಯೇ, ಎಷ್ಟು? ಜೊತೆಗೆ ರಕ್ತವೂ ಹೋಗುತ್ತದೆಯೇ ಕೇಳಿ.
- ಬೆಳಿಗ್ಗೆ ಎದ್ದ ಕೂಡಲೆ ಬರುವ ಒಣ ಕೆಮ್ಮು ಬೀಡಿ ಚುಟ್ಟಾ ಸೇವನೆಯಿಂದ ಇರಬಹುದು.
- ಕೆಮ್ಮಿನೊಂದಿಗೆ ಬಹಳ ಬಿಳಿ ಬಣ್ಣದ ಕಫ ಹೋಗುತ್ತಿದ್ದರೆ ಬ್ರಾಂಕೈಟಿಸ್ ಇರಬಹುದು.
- ರಕ್ತವೂ ಕಫದೊಂದಿಗೆ ಹೋಗುತ್ತಿದ್ದರೆ ಸಂಜೆಯಾಗುತ್ತಿದ್ದತೆಯೇ ಜ್ವರವೂ ಏರುತ್ತಿದ್ದರೆ ಜೊತೆಗೆ ತೂಕ ಕಡಿಮೆಯಾಗುತ್ತಿದ್ದರೆ ಕ್ಷಯವಿರಬಹುದು. ಆ ವ್ಯಕ್ತಿ ೪೦ ವರ್ಷ ಮೇಲ್ಪಟ್ಟವನಾಗಿದ್ದು, ಅತಿಯಾಗಿ ಚುಟ್ಟಾ ಸೇದುತ್ತಿದ್ದರೆ ಅದು ಶ್ವಾಸಕೋಶದ ಕ್ಯಾನ್ಸರ್ ಕೂಡ ಆಗಿರಬಹುದು.
ಒಂದು ಗಡ್ಡೆ ಎದ್ದು ಕಾಣುತ್ತಿದ್ದರೆ ಈ ಪ್ರಶ್ನೆಗಳನ್ನು ಕೇಳಿ,
- ಗಡ್ಡೆಯು ಮೊದಲು ಕಾಣಿಸಿಕೊಂಡಿದ್ದು ಯಾವಾಗ?
- ಮೊಟ್ಟ ಮೊದಲು ಕಂಡಾಗ ಅದು ಎಷ್ಟು ದೊಡ್ಡದಿತ್ತು? ಹರಳಿನಷ್ಟೇ? ಅವರೆ ಕಾಳಿನಷ್ಟೇ? ಮೆಣಸಿನ ಕಾಳಿನಷ್ಟೆ?
- ಅದು ಹೇಗಿತ್ತು? ಮೃದುವಾಗಿಯೇ? ಗಟ್ಟಿಯಾಗಿಯೇ? ತಣ್ಣಗೆ ಅಥವಾ ಬೆಚ್ಚಗೆ?
ಗಾಯವೊಂದರಿಂದ ಅಥವಾ ಕಿವಿಯಿಂದ ರಸಿಗೆ(ಕೀವು) ಹೊರ ಬರುತ್ತಿದ್ದರೆ;
- ಎಷ್ಟು ಬರುತ್ತದೆ?
- ಅದಕ್ಕೆ ವಾಸನೆಯೇನಾದರೂ ಇದೆಯೆ?
ಮಾತಾಡಲು ಬಾರದ ಮಗುವಾಗಿದ್ದರೆ ತಾಯಿಯ ಬಳಿ ಇವೆಲ್ಲ ಪ್ರಶ್ನೆಗಳನ್ನು ಕೇಳಿ. ಜೊತೆಗೆ ನೋವಿನ ಲಕ್ಷಣಗಳ ಬಗ್ಗೆ ಹುಡುಕಿ. ಮುಟ್ಟಿದಾಗ ಹೇಗೆ ಮುದುಡಿಕೊಳ್ಳುತ್ತದೆ, ಹೇಗೆ ಕಿರುಚುತ್ತದೆ ನೋಡಿ (ಮಗುವಿಗೆ ಕಿವಿ ನೋವಿದ್ದರೆ ಪದೇ ಪದೇ ಕಿವಿಯತ್ತ ಕೈಹಚ್ಚಿ ತಿಕ್ಕುವುದು ಇಲ್ಲವೇ ಕಿವಿಯನ್ನು ಹಿಡಿದೆಳೆಯುತ್ತಿರುವುದನ್ನು ಗಮನಿಸಿ.)
ರೋಗಿಯ ಹಿಂದಿನ ಕತೆ: ರೋಗಿಯನ್ನು ಹಿಂದಕ್ಕೇನಾಗಿತ್ತು ಎಂದು ಕೇಳುವುದು ಅತಿ ಮುಖ್ಯ. ಏಕೆಂದರೆ ಈಗ ಕಾಣಿಸಿಕೊಂಡಿರುವ ರೋಗ, ಹಳೆಯ ರೋಗವೊಂದರ ಮರುಕಳಿಕೆಯಾಗಿರಬಹುದು ಅಥವಾ ಮುಂದುವರೆದ ಹಂತವಾಗಿರಲೂಬಹುದು. ಅಥವಾ ಇನ್ನಾವುದೋ ರೋಗದ ಬಗ್ಗೆ ನಿಮಗೆ ಸಂಶಯವಿದ್ದರೆ ಅದರ ನಿವಾರಣೆ ಅಥವಾ ಧೃಢಪಡಬಹುದು.
ಈ ಪ್ರಶ್ನೆಗಳನ್ನು ಕೇಳಿ;
- ಇತ್ತೀಚೆಗೆ ಏನಾದರೂ ಕಾಯಿಲೆಯಾಗಿತ್ತೆ? ಅಥವಾ ಹಿಂದೆ ಕಾಯಿಲೆಯಾಗಿದ್ದು ಯಾವಾಗ, ಏನಾಗಿತ್ತು?
- ಡಾಕ್ಟರರ ಕಡೆ ಅಥವಾ ನಾಟಿ ವೈದ್ಯರ ಕಡೆ ಹೋಗಿದ್ದರೇ? ಹೋಗಿದ್ದರೆ ಯಾವ ರೋಗಕ್ಕೆ ಔಷಧ ತೆಗೆದುಕೊಂಡಿರಿ?
- ಏನಾದರೂ ಗಂಭೀರ ಕಾಯಿಲೆಗಳಾದದ್ದಿದೆಯೇ?
ಈಗಿನ ಆರೋಗ್ಯದ ಪರಿಸ್ಥಿತಿ;
ರೋಗಿಗೆ ಯಾವುದೇ ಆಹಾರ, ತರಕಾರಿ, ಧೂಳು, ಔಷಧ, ಊದಿನಕಡ್ಡಿ, ಕೀಟ ಕಡಿದದ್ದು, ಇವುಗಳಿಗೆ ಅಲರ್ಜಿ ಇದೆಯೇ ಕೇಳಿ. ಅಸ್ತಮಾ ಇದೆಯೇ ಕೇಳಿ.
ಸದ್ಯ ಯಾವುದೇ ರೋಗಕ್ಕೆ ಏನಾದರೂ ಔಷಧ ತೆಗೆದುಕೊಳ್ಳುತ್ತಿದ್ದಾರೆಯೇ ಕೇಳಿ. ಸಿಗರೇಟು ಅಥವಾ ಬೀಡಿ ಸೇದುವ ಚಟವಿದೆಯೇ, ಕುಡಿಯುತ್ತಾರೆಯೇ ಕೇಳಿ.
ಕುಡಿಯುತ್ತಾರೆಂದರೆ ದಿನಕ್ಕೆ ಎಷ್ಟು ಎಂದು ತಿಳಿದುಕೊಳ್ಳುವುದೊಳ್ಳೆಯದು.
ಮನೆಯಲ್ಲಿ ಯಾರಿಗಾದರೂ ಏನಾದರೂ ರೋಗವಿದೆಯೇ? ಅಸ್ತಮಾ, ಅಲರ್ಜಿಯಂಥ ಕೆಲವು ರೋಗಗಳು ಕುಟುಂಬದಲ್ಲಿ ಒಬ್ಬರಿಗೆ ಇದ್ದರೆ ಮತ್ತೊಬ್ಬರಿಗೂ ಬಂದಿರುತ್ತದೆ. ಹಾಗೆಯೇ ರಕ್ತದೊತ್ತಡ ಮತ್ತು ಕ್ಯಾನ್ಸರ್ ಕೂಡ.
ಕ್ಷಯ ಮತ್ತು ಕಜ್ಜಿಯಂಥ ರೋಗಗಳು ಸಾಂಕ್ರಾಮಿಕ ರೋಗಗಳು. ಆಗ ಈ ಪ್ರಶ್ನೆಗಳನ್ನು ಕೇಳುವುದು ಮುಖ್ಯ.
- ಕುಟುಂಬದಲ್ಲಿ ಇನ್ನಾರಿಗೆ ಇನ್ನಾವ ರೋಗವಿದೆ?
- ತಂದೆ, ತಾಯಿ, ಅಜ್ಜ, ಅಜ್ಜಿ ಸತ್ತಿದ್ದು ಯಾವ ಕಾರಣಗಳಿಂದ?
- ಮನೆಯಲ್ಲಿ ಯಾರಿಗಾದರೂ ಅಲರ್ಜಿ, ಅಸ್ತಮಾ, ರಕ್ತದೊತ್ತಡ, ಡಯಾಬಿಟಿಸ್, ಕ್ಷಯ, ಕ್ಯಾನ್ಸರ್, ಕುಷ್ಠ, ಕಜ್ಜಿ, ಮಾನಸಿಕ ರೊಗವಿದೆಯೇ? ಹಿಂದೆ ಇತ್ತೇ ಅಥವಾ ಈಗಲೂ ಇದೆಯೇ?
೨. ರೋಗಿಯನ್ನುಪರೀಕ್ಷಿಸುವವಿಧಾನ :
ಆರೋಗ್ಯದ ಸಾಮಾನ್ಯ ಸ್ಥಿತಿ
ರೋಗಿಯನ್ನು ಪರೀಕ್ಷಿಸುವಾಗ ನಿಮ್ಮ ಕಣ್ಣು, ಕಿವಿ, ಕೈಗಳು ಮತ್ತು ವಾಸನಾ ಶಕ್ತಿ ಚುರುಕಾಗಿರಲಿ. ರೋಗಿಯನ್ನು ಮುಟ್ಟುವುದಕ್ಕೂ ಮೊದಲು ಅವರತ್ತ ಎಚ್ಚರಿಕೆಯಿಂದ ಗಮನಿಸಿ. ಅವರು ಎಷ್ಟು ದುರ್ಬಲವಾಗಿ ಕಾಣುತ್ತಾರೆ, ರೋಗ ಎಷ್ಟು ತೀವ್ರವಾಗಿದೆ, ಅವರ ಚಲನೆಗಳು ಹೇಗಿವೆ, ಉಸಿರಾಟ ಹೇಗಿದೆ, ಯೋಚನಾ ಶಕ್ತಿ ಎಷ್ಟು ಸ್ಪಷ್ಟವಾಗಿದೆ ಎಲ್ಲವನ್ನೂ ಸೂಕ್ಷ್ಮವಾಗಿ ನೋಡಿ. ನಿರ್ಜಲೀಕರಣ ( ೧೯೧ನೇ ಪುಟ ), ಅಥವಾ ಅಘಾತವಾದ (೧೦೨ ನೇ ಪುಟ) ಲಕ್ಷಣಗಳಿವೆಯೇ ಗಮನಿಸಿ.
ರೋಗಿ ಚೆನ್ನಾಗಿ ತಿಂದುಂಡು ಮಾಡುತ್ತಿರುವರೇ, ಅಪೌಷ್ಟಿಕತೆಯ ಲಕ್ಷಣಗಳೇನಾದರೂ ಇವೆಯೇ ನೋಡಿ. ತೂಕ ಕಡಿಮೆಯಾಗಿದೆಯೇ, (ಬಹಳ ದಿನಗಳಿಂದ ನಿಧಾನವಾಗಿ ತೂಕ ಕಳೆದುಕೊಳ್ಳುತ್ತ ಬಂದಿದ್ದಾರೆಂದರೆ ಅವರ ರೋಗ ಬಹುಕಾಲದಿಂದ ಇರಬಹುದು). ಚರ್ಮ ಮತ್ತು ಕಣ್ಣಿನ ಬಣ್ಣಗಳನ್ನು ನೋಡಿ. ರೋಗ ಬಂದಾಗ ಇವೆರಡರ ಬಣ್ಣ ಕುಂದುತ್ತದೆ. ಅಂಗೈ, ಅಂಗಾಲು, ಉಗುರು ತುಟಿಯ ಒಳಭಾಗ ಮತ್ತು ಕಣ್ಣಿನ ಒಳಭಾಗ ಮುಂತಾದ ಬಿಳುಪು ಭಾಗಗಳನ್ನು ನೋಡಿದರೆ ರೋಗಿ ಎಷ್ಟು ಬಿಳಿಚಿಕೊಂಡಿದ್ದಾರೆಂದು ತಿಳಿಯುತ್ತದೆ.
- ತುಟಿ, ಕಣ್ರೆಪ್ಪೆಯ ಒಳಭಾಗ ಕೆಂಪು ಕಳೆದುಕೊಂಡು ಬಿಳಿಚಿಕೊಂಡಿದ್ದರೆ ಅದು ರಕ್ತ ಹೀನತೆಯ ಸೂಚನೆಯಾಗಿರಬಹುದು.
- ಕ್ಷಯವಿದ್ದರೆ ಅಥವಾ ಕ್ವಾಶಿಯೋರ್ಕ್ರ್ ರೋಗವಿದ್ದರೆ ಚರ್ಮದ ಬಣ್ಣವೂ ಕುಂದಿರುತ್ತದೆ.
- ಚರ್ಮ ಕಂದುಗಟ್ಟಿದ್ದರೆ ಅದು ಅಪೌಷ್ಟಿಕತೆಯ ಸೂಚನೆಯಾಗಿರಬಹುದು. ಚರ್ಮ ನೀಲಿಗಟ್ಟಿದ್ದರೆ, ಅದರಲ್ಲೂ ತುಟಿ, ಉಗುರು ನೀಲಿ ಅಥವಾ ಕಪ್ಪಾಗಿದ್ದರೆ ಅದು ಉಸಿರಾಟದ ತೀವ್ರ ತೊಂದರೆಯ ಅಥವಾ ಹೃದಯದ ತೊಂದರೆಯ ಸೂಚನೆ ಇರಬಹುದು. (೨೧೫ ನೇ ಪುಟ ನೋಡಿ.) ಎಚ್ಚರದಪ್ಪಿರುವ ಮಗುವಿನ ಚರ್ಮ ಆಕಾಶ ನೀಲಿಯಾಗುತ್ತಿದ್ದರೆ ಅದು ಮಿದುಳು ಮಲೇರಿಯಾದ ಸೂಚನೆ ಇರಬಹುದು.
- ಚರ್ಮ ಬಿಳಿಚಿದ್ದರೆ, ತಣ್ಣಗಾಗಿ ತೇವಭರಿತವಾಗಿದ್ದರೆ ಅವರಿಗೆ ಅಘಾತವಾಗಿದೆ ಎಂದರ್ಥ.
- ಚರ್ಮ, ಕಣ್ಣು ಹಳದಿಯಾಗಿದ್ದರೆ ಅದು ಪಿತ್ಥಕೋಶದ ರೋಗದ ಸೂಚನೆಯಾಗಿರಬಹುದು. (ಕಾಮಾಲೆ ೨೨೨, ಸಿರೋಸಿಸ್ ೩೮೦ ನೇ ಪುಟ ) ಅಥವಾ ಅಮೀಬಾದಿಂದಾದ ಹುಣ್ಣು (೨೦೯ ನೇ ಪುಟ) ಈ ಲಕ್ಷಣ ಅದೇ ಜನಿಸಿದ ಮಗುವಿನಲ್ಲೂ ಕಾಣಬಹುದು.
- ಜ್ವರ ಬಂದ ಮಗುವನ್ನು ಬೆಳಕಿಗೆ ಹಿಡಿದು ನೋಡಿದಾಗ ಗೊಬ್ಬರ, ಗಣಜಿಲೆಗಳಿಂದ ಮುಖವು ಕೆಂಪಗೆ ಗುಳ್ಳೆಗಳೇಳುತ್ತಿದ್ದರೆ ಕಾಣುತ್ತದೆ.
ರೋಗಿಯನ್ನು ಪರೀಕ್ಷಿಸುವಾಗ ಕೆಲವು ಮುಖ್ಯ ಲಕ್ಷಣಗಳನ್ನು ನೋಡಲೇ ಬೇಕು. ಈ ಲಕ್ಷಣಗಳು ರೋಗ ಎಷ್ಟು ತೀವ್ರವಾಗಿದೆ, ಏರುತ್ತಿದೆಯೇ ಇಳಿಯುತ್ತಿದೆಯೇ ಎನ್ನುವುದನ್ನು ಸೂಚಿಸುತ್ತವೆ. ಈ ಮುಖ್ಯ ಲಕ್ಷಣಗಳೆಂದರೆ;
- ದೇಹದ ಉಷ್ಣತೆ
- ಉಸಿರಾಟ
- ನಾಡಿ
- ರಕ್ತದೊತ್ತಡ
ದೇಹದ ಉಷ್ಣತೆ:
ರೋಗಿಗೆ ಜ್ವರ ಇರದಂತೆ ಕಂಡರೂ ಅವರ ದೇಹದ ಉಷ್ಣತೆಯನ್ನು ಪರೀಕ್ಷಿಸಿ. ರೋಗ ತೀವ್ರವಾಗಿದ್ದರೆ ಬಾಯಲ್ಲಿ ಥರ್ಮಾಮೀಟರ್ ಇಟ್ಟು ದಿನಕ್ಕೆ ನಾಲ್ಕು ಬಾರಿ ಉಷ್ಣತೆಯನ್ನು ಅಳೆದು ಬರೆದುಕೊಳ್ಳುತ್ತ ಬನ್ನಿ.
ಉಷ್ಣತಾಮಾಪಕವಿಲ್ಲವೆಂದರೆ ಉಷ್ಣತೆ ಪರೀಕ್ಷಿಸಲು ರೋಗಿಯ ಹಣೆಯ ಮೇಲೆ ಒಂದು ಅಂಗೈನ ಹಿಂಭಾಗವನ್ನಿಟ್ಟುಕೊಂಡು ಇನ್ನೊಂದು ಅಂಗೈ ಹಿಂಭಾಗವನ್ನು ನಿಮ್ಮ ಹಣೆಯಮೇಲೆ ಇಟ್ಟುಕೊಳ್ಳಿ.
ರೋಗಿಗೆ ಜ್ವರ ಇದ್ದರೆ ನಿಮಗೆ ಇಬ್ಬರ ಹಣೆಗಳ ಉಷ್ಣತೆಗಳ ವ್ಯತ್ಯಾಸ ತಿಳಿಯುತ್ತದೆ.
ಯಾವಾಗ ಮತ್ತು ಹೇಗೆ ಜ್ವರ ಬರುತ್ತದೆ, ಎಷ್ಟು ಹೊತ್ತು ಇರುತ್ತದೆ, ಮತ್ತು ಹೇಗೆ ಇಳಿಯುತ್ತದೆ ಎಂಬುದನ್ನೆಲ್ಲ ಕಂಡುಕೊಳ್ಳುವುದು ಅತೀ ಮುಖ್ಯ. ಇದರಿಂದ ರೋಗ ಯಾವುದೆಂದು ಕಂಡುಹಿಡಿಯಬಹುದು. ಉದಾ;
- ಮಲೇರಿಯಾ ಜ್ವರ ಶುರುವಾಗುವಾಗ ಬಹಳ ಛಳಿಯೊಂದಿಗೆ ಜೋರಾಗಿ ಬಂದು ಕೆಲವು ತಾಸುಗಳವರೆಗೆ ಮಾತ್ರ ಇದ್ದು ಮತ್ತೆ ೨-೩ ದಿನಗಳಿಗೊಮ್ಮೆ ಬರುತ್ತದೆ.
- ಟೈಫಾಯಿಡ್ ಜ್ವರದ ತೀವ್ರತೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತ ಹೋಗುತ್ತದೆ.
- ಕ್ಷಯ ಇದ್ದರೆ ಕೆಲವೊಮ್ಮೆ ಮಧ್ಯಾಹ್ನದ ನಂತರ ಸಣ್ಣಗೆ ಜ್ವರ ಬರುತ್ತದೆ. ಸಂಜೆಯಾಗುತ್ತಾ ಹೆಚ್ಚಿ ರಾತ್ರಿ ಬೆವರು ಬಂದು ಜ್ವರ ಕಡಿಮೆ ಆಗುತ್ತದೆ.(೨೨೯ ನೇ ಪುಟ ನೋಡಿ)
ಗಮನಿಸಿ: ಅದೇ ಜನಿಸಿದ ಶಿಶುವಿನಲ್ಲಿ ಬಹಳ ಉಷ್ಣತೆ ಇದ್ದರೆ ಅಥವಾ ಅತಿ ಕಡಿಮೆ ಉಷ್ಣತೆ ಇದ್ದರೆ ಅದಕ್ಕೆ ಸಾಂಕ್ರಾಮಿಕ ರೋಗ ತಗುಲಿದೆ ಎಂದರ್ಥ. (೩೨೬ ನೇ ಪುಟ ನೋಡಿ)
- ಜ್ವರದ ಏರು ಇಳಿವು ತಿಳಿಯಲು ಹಿಂದಿನ ಅಧ್ಯಾಯ ನೋಡಿ.
- ಜ್ವರಕ್ಕೆ ಏನು ಮಾಡಬೇಕೆಂದು ತಿಳಿಯಲು ೧೦೦ ನೇ ಪುಟ ನೋಡಿ.
Leave A Comment