ಗಂಟಲು

ಒಂದು ಚಮಚದ ಹಿಂಭಾಗದಿಂದ ನಾಲಿಗೆಯನ್ನು ಅಮುಕಿ ಆ,ಆ. . ಎನ್ನಲು ಹೇಳಿದರೆ ಟಾರ್ಚಿನಿಂದ ಗಂಟಲಿನ ಪರೀಕ್ಷೆಯನ್ನೂ ಮಾಡಬಹುದು.

ಗಂಟಲ ಹಿಂಭಾಗಕ್ಕೆ ಎರಡೂ ಬದಿಗೆ ಇರುವ  ಎರಡು ಪುಟ್ಟ ಗಡ್ಡೆಗಳಂಥಾದ್ದು ಮೆಂಡಕಿ ಅಥವಾ ಟಾನ್ಸಿಲ್ಸ್.  ಇದಕ್ಕೆ ಸೋಂಕು ತಗುಲಿದ್ದರೆ ಟಾನ್ಸಿಲೈಟಿಸ್ (೩೬೩ನೇ ಪುಟ) ಆಗುತ್ತದೆ.  ಈ ಎರಡು ಗಡ್ಡೆಗಳು ಉಬ್ಬಿದ್ದು ಅವುಗಳ ಮೇಲೆ ಬಿಳಿಕಲೆಗಳಿವೆಯೇ, ಗಂಟಲು ಕೆಂಪಗಾಗಿವೆಯೇ ನೋಡಿ.  ಟಾನ್ಸಿಲೈಟಿಸ್ ಆಗಿದ್ದರೆ ಗಂಟಲಿನೊಳಗೆ ಕೆಂಪಗಾಗಿ ಗಡ್ಡೆಗಳು ಊದಿಕೊಂಡು, ನೋವುಭರಿತವಾಗಿರುತ್ತದೆ. ಅವರಿಗೆ ಜ್ವರವೂ ಇರುತ್ತದೆ. ಮಕ್ಕಳಲ್ಲಿ ಜ್ವರ ಬರಲು ಇದೊಂದು ಮುಖ್ಯ ಕಾರಣ. ಬಿಳಿ ಅಥವಾ ಬೂದಿ ಬಣ್ಣದ ಕಲೆಗಳು ಟಾನ್ಸಿಲ್ ಮೇಲೆ ಅಥವಾ ಗಂಟಲೊಳಗೆ ಕಂಡುಬಂದರೆ ಅದು ಡಿಫ್ತೀರಿಯಾ ಆಗಿರಬಹುದು (೩೬೮ ನೇ ಪುಟ ನೋಡಿ).

ಹಲ್ಲು ಮತ್ತು ವಸಡು

ವಸಡು ಉಬ್ಬಿದೆಯೇ, ಬಾತಿದೆಯೇ, ಕೆಂಪಗಾಗಿದೆಯೇ, ಬಣ್ಣಗೆಟ್ಟಿದೆಯೇ, ಅಥವಾ ರಕ್ತ ವಸರುತ್ತಿದೆಯೇ? (೨೮೫ ನೇ ಪುಟ ನೋಡಿ ) ಹಲ್ಲು ಸಡಿಲವಾಗಿದೆಯೇ? ಬಿದ್ದಿದೆಯೇ, ಹಲ್ಲುಗಳ ಮಧ್ಯೆ ಹುಳುಕಾಗಿದೆಯೇ? (೨೮೫ ನೇ ಪುಟ.)

ಕುತ್ತಿಗೆ

ಕುತ್ತಿಗೆಯಲ್ಲಿ ಏನಾದರೂ ಬಾವು, ಗಂಟುಗಳಾಗಿವೆಯೇ (ಥೈರಾಯಿಡ್ ೧೬೨ ನೇ ಪುಟ) ಪರೀಕ್ಷಿಸಿ.  ಕುತ್ತಿಗೆಯಲ್ಲಿನ ರಕ್ತ ನಾಳಗಳು ವೇಗವಾಗಿ ಹೊಡೆದುಕೊಳ್ಳುತ್ತಿದ್ದರೆ ಹೃದಯದ ತೊಂದರೆಯ ಸೂಚಕ.

ಕುತ್ತಿಗೆಯ ಹಿಂಭಾಗ ಮತ್ತು ಎರಡೂ ಬದಿಗೆ ಗಂಟುಗಳಿಗಾಗಿ ಒತ್ತಿನೋಡಿ.  ಸಾಮಾನ್ಯವಾಗಿ ಎರಡೂ ಕಡೆ ಒಂದೊಂದು ನೋವಿಲ್ಲದ, ಸುಲಭವಾಗಿ ಅತ್ತಿತ್ತ ಚಲಿಸುವ ಗಂಟುಗಳು ಸಿಗುತ್ತವೆ.   ಅವು ನೋಯುತ್ತಿದ್ದರೆ ಏನೋ ಸೋಂಕು ತಗುಲಿದೆ ಎಂದರ್ಥ.  ಗಟ್ಟಿಯಾಗಿದ್ದು ಅತ್ತಿತ್ತ ಚಲಿಸದಿರುವ ಗಂಟು ಕ್ಯಾನ್ಸರಿನ ಸೂಚನೆಯನ್ನು ಕೊಡುತ್ತದೆ.

ಥೈರಾಯಿಡ್ ಗ್ರಂಥಿಗಳು ಆಹಾರ ನುಂಗಿದಾಗ ಮೇಲೆ ಕೆಳಗೆ ಚಲಿಸುತ್ತವೆ.  ಇನ್ನಾವುದೇ ಗಂಟಿದ್ದರೆ ಹೀಗೆ ಚಲಿಸುವುದಿಲ್ಲ.  ಥೈರಾಯಿಡ್ ಬೆಳೆದಿದೆ, ಬೆಳೆಯುತ್ತಿದೆ ಎನಿಸಿದರೆ ಮುಟ್ಟಿ ನೋಡಿ.  ರೋಗಿಯ ಹಿಂಭಾಗದಲ್ಲಿ ನಿಂತು ನಿಧಾನವಾಗಿ ಅವರ ಕುತ್ತಿಗೆಯ ಬುಡಕ್ಕೆ ಥೈರಾಯಿಡ್ ಇರುವಲ್ಲಿಗೆ ಕೈ ಬೆರಳು ಹಚ್ಚಿ. ಉಗುಳು ನುಂಗಲು ಅವರಿಗೆ ಹೇಳಿ.  ಥೈರಾಯಿಡ್ ದೊಡ್ಡದಾಗಿದ್ದರೆ ಅದು ಮೇಲಕ್ಕೆ, ಕೆಳಗೆ ಚಲಿಸುವುದು ತಕ್ಷಣ ನಿಮಗೆ ಗೊತ್ತಾಗುತ್ತದೆ.

ಎದೆ ಮತ್ತು ಶ್ವಾಸಕೋಶ

ರೋಗಿಯ ಉಸಿರಾಟವನ್ನು ನೋಡುವಾಗ ಅವರು ಉಸಿರಾಡುವ ರೀತಿಯನ್ನು ಗಮನಿಸಿದ್ದೀರಲ್ಲವೇ?  ಈಗ ಅವರು ಉಸಿರಾಡುವಾಗ ಎದೆಯ ಎರಡೂ ಪಕ್ಕೆಗಳೂ ಒಂದೇ ರೀತಿಂiಲ್ಲಿ ಚಲಿಸುತ್ತವೆಯೇ ನೋಡಿ.  ನಿಮ್ಮ ಎರಡೂ ಹಸ್ತಗಳನ್ನು ಅವರ ಬೆನ್ನಿನ ಕೆಳಭಾಗದಲ್ಲಿ ಇಟ್ಟು ಅವರಿಗೆ ದೀರ್ಘ ಉಸಿರು ತೆಗೆದುಕೊಳ್ಳಲಿಕ್ಕೆ ಹೇಳಿ.  ಉಸಿರು ಎಳೆದುಕೊಂಡಾಗ ಎರಡೂ ಹಸ್ತಗಳೂ ಒಂದೇ ಸಾರಿ ಮೇಲಕ್ಕೂ, ಉಸಿರು ಬಿಟ್ಟಾಗ ಎರಡೂ ಹಸ್ತಗಳೂ ಒಂದೇ ಸಾರಿ ಕೆಳಕ್ಕೂ ಚಲಿಸಬೇಕು.   ನ್ಯುಮೋನಿಯಾ ಆಗಿದ್ದರೆ, ಅಥವಾ ಕ್ಷಯದ ಮುಂದುವರೆದ ಹಂತದಲ್ಲಿ ರೋಗಿ ಇದ್ದರೆ,  ರೋಗ ತಗುಲಿರುವ ಶ್ವಾಸಕೋಶ ಬಹಳ ನಿಧಾನವಾಗಿ ಚಲಿಸುತ್ತದೆ, ಇಲ್ಲವೇ ಚಲಿಸುವುದೇ ಇಲ್ಲ. ಯಾವ ಶ್ವಾಸಕೋಶಕ್ಕೆ ರೋಗ ತಗುಲಿದೆ ಎಂದು ಈ ರೀತಿಯಾಗಿ ಕಂಡುಹಿಡಿಯಬಹುದು.

ಯಾವ ಶ್ವಾಸಕೋಶಕ್ಕೆ (ಎಡ ಅಥವಾ ಬಲ) ರೋಗ ತಗುಲಿದೆ ಪರೀಕ್ಷಿಸಲು,  ಅವು ಹೇಗೆ ಕಂಪಿಸುತ್ತವೆ ನೋಡಬೇಕು. ನಿಮ್ಮ ಹಸ್ತಗಳೆರಡನ್ನೂ ಮೊದಲು ಹೇಳಿದಂತೆ ಬೆನ್ನಿನ ಮೇಲೆ, ಈ ಬಾರಿ ಸ್ವಲ್ಪ ಮೇಲಕ್ಕೆ ಇಡಿ.  ರೋಗಿಗೆ ತೊಂಬತ್ತೊಂಬತ್ತು ಎಂದು ಹೇಳುತ್ತಿರಲು ಹೇಳಿ.  ಒಳಗಿನ ಶ್ವಾಸಕೋಶಗಳು ಕಂಪಿಸುವ ಅನುಭವ ಆಗುತ್ತದೆ.  ಎರಡೂ ಕಡೆ ಒಂದೇ ರೀತಿ ಕಂಪನ ಆಗುತ್ತಿದೆಯೇ? ಅಥವಾ ಒಂದು ಕಡೆ ಜಾಸ್ತಿ, ಇನ್ನೊಂದು ಕಡೆ ಕಡಿಮೆ ಆಗುತ್ತಿದೆಯೇ?  ಅಥವಾ ಒಂದು ಕಡೆ ಇಲ್ಲವೇ?  ಹಾಗೆಯೇ ಹಸ್ತವನ್ನು ಇನ್ನೂ ಮೇಲಕ್ಕೆ, ನಡುವೆ, ಕೆಳಕ್ಕೆ ಚಲಿಸುತ್ತಿರಿ.  ಕಂಪನ ಒಂದೇ ರೀತಿಯಲ್ಲಿದ್ದರೆ ಏನೂ ಆಗಿಲ್ಲವೆಂದರ್ಥ.

ಕಂಪನ ಇಲ್ಲವೆಂದರೆ ಅಥವಾ ಕಡಿಮೆ ಇದೆಯೆಂದರೆ ಬ್ರಾಂಕೈಟಿಸ್ ಇಲ್ಲವೇ ಅಸ್ತಮಾ ಆಗಿರಬಹುದೆಂದು ತಿಳಿಯಬಹುದು. ಕಂಪನ ಜಾಸ್ತಿಯಾಗಿದ್ದರೆ ನ್ಯುಮೋನಿಯಾ ಆಗಿದೆ.

ಎದೆಯ ಮೇಲೆ ಅಥವಾ ಬೆನ್ನಿನ ಮೇಲೆ ನಿಮ್ಮ ಕಿವಿಯನ್ನಿಟ್ಟು ಶ್ವಾಸೋಚ್ಛ್ವಾಸದ ವಿಧಾನವನ್ನು ನೀವು ತಿಳಿದುಕೊಳ್ಳಬಹುದು. ಇಲ್ಲವೇ ಒಂದು ದಪ್ಪನೆಯ ಹಾಳೆಯ ಕೊಳವೆ ಮಾಡಿ ಎದೆಯ ಮೇಲೆ ಒಂದು ತುದಿ, ನಿಮ್ಮ ಕಿವಿಗೆ ಒಂದು ತುದಿ ಮಾಡಿ ಇಟ್ಟುಕೊಳ್ಳುವುದರಿಂದಲೂ ಉಸಿರಾಟದ ಸಪ್ಪಳವನ್ನು ಆಲಿಸಬಹುದು.

ಬಾಯಿಯನ್ನು ಸ್ವಲ್ಪವೇ ತೆರೆದು ಆಳವಾಗಿ ಉಸಿರೆಳೆದುಕೊಳ್ಳಲು ಹೇಳಿ.  ಉಚ್ಛ್ವಾಸ ಮಾಡುವಾಗಲೂ, ನಿಃಶ್ವಾಸ ಮಾಡುವಾಗಲೂ ಯಾವ ರೀತಿಯ ಸಪ್ಪಳ ಬರುತ್ತದೆಂದು ಗಮನವಿಟ್ಟು ಆಲಿಸಿ.

ಆರೋಗ್ಯವಂತರಲ್ಲಿ ಗಾಳಿಯು ಒಳಗೆ ಹಾದು ಹೋಗಿ ಬರುವ ಸಪ್ಪಳವನ್ನಷ್ಟೇ ನೀವು ಕೇಳುತ್ತೀರಿ. ನ್ಯುಮೋನಿಯಾ( ೨೨೧ ನೇ ಪುಟ) ಅಥವಾ ಕ್ಷಯ ಜೋರಾಗಿದ್ಡರೆ (೨೨೯ ನೇ ಪುಟ) ಸರಬರ ಸದ್ದು ಕೇಳುತ್ತಿರುತ್ತದೆ.  (ನಿಮ್ಮ ಬೆರಳಲ್ಲಿ ಸ್ವಲ್ಪ ಕೂದಲನ್ನು ತೆಗೆದುಕೊಂಡು ತಿಕ್ಕಿದಾಗ ಬರುವ ಸದ್ದು.) ಅಸ್ತಮಾ ಇದ್ದರೆ ಸೀಟಿ ಊದಿದಂತೆ ಸಪ್ಪಳ ಬರುತ್ತಿರುತ್ತದೆ. (೨೧೫ ನೇ ಪುಟ) ಶ್ವಾಸಕೋಶದಲ್ಲಿ ನೀರು ತುಂಬಿದ್ದರೆ ಸಪ್ಪಳ ಬರುವುದಿಲ್ಲ, ಬಂದರೂ ಅತಿ ಕಡಿಮೆ ಸಪ್ಪಳವಿರುತ್ತದೆ.

ಹೃದಯ

ಎದೆಯ ಬಡಿತ ಹೇಗಿದೆ ಆಲಿಸಿ.  ಬಹಳ ಸಪೂರನೆಯ ವ್ಯಕ್ತಿಆಗಿದ್ದರೆ  ಹೃದಯ ಬಡಿಯುವ ಜಾಗವನ್ನು ನೋಡಬಹುದು.  ಆದರೆ ದಪ್ಪನೆಯ ವ್ಯಕ್ತಿಗಳಲ್ಲಿ ನೋಡಲು ಸಾಧ್ಯವಿಲ್ಲ.

ಬಹಳ ದಿನಗಳಿಂದಲೂ ಹೃದಯದ ರೋಗವಿದ್ದರೆ, ಹೃದಯ  ದೊಡ್ಡದಾಗಿದ್ದರೆ  ಎದೆಬಡಿತವು  ಅದರ ಎಂದಿನ ಜಾಗದಲ್ಲಿ ಕಾಣುವುದಿಲ್ಲ. ಸರಿಯಾಗಿ ಹೃದಯದ  ಮೇಲೆ ಕಿವಿಯನ್ನಿಟ್ಟು  ಎದೆಬಡಿತವನ್ನು ಆಲಿಸಬಹುದು.  ಆರೋಗ್ಯವಂತನ

ಎದೆಯ ಬಡಿತಕ್ಕೂ ರೋಗಿಯ ಎದೆಬಡಿತಕ್ಕೂ ಅಂತರವಿದೆಯೇ ಹೋಲಿಸಿ ನೋಡಿ. ಈ ವ್ಯತ್ಯಾಸ ತಿಳಿಯಲು ಅನುಭವ ಬೇಕು. ಪದೇ ಪದೇ ಆರೋಗ್ಯವಂತರ ಹೃದಯಬಡಿತವನ್ನು ಆಲಿಸುತ್ತಿದ್ದರೆ ಬಡಿತದಲ್ಲಿನ ವ್ಯತ್ಯಾಸ ಗೊತ್ತಾಗುತ್ತದೆ.   ವ್ಯತ್ಯಾಸ ಕಂಡುಬಂದರೆ ಅವರಿಗೆ ಹೃದಯದ ತೊಂದರೆ ಇದೆಯೆಂದು ಸೂಚನೆ. ಕೂಡಲೇ ಡಾಕ್ಟರಲ್ಲಿಗೆ ಕಳುಹಿಸಿ. ಎದೆ ಬಡಿತ ಜೋರಾಗಿದೆಯೇ, ಅತಿ ನಿಧಾನವಾಗಿದೆಯೇ, ಅನಿಯಮಿತ ಇದೆಯೇ ನೋಡಿ. ಅಂಥವೇನಾದರೂ ಕಂಡುಬಂದರೂ ಡಾಕ್ಟರಿಗೆ ತೋರಿಸಬೇಕು.

ಸ್ತನ ಪರೀಕ್ಷೆ

ಹೆಣ್ಣುಮಕ್ಕಳ ದೇಹ ಪರೀಕ್ಷೆ ನಡೆದಿರುವಾಗ ಸ್ತನ ಪರೀಕ್ಷೆ ಅದರ ಒಂದು ಅಂಗವಾಗಿರಬೇಕು.  ಎರಡು ರೀತಿಯಲ್ಲಿ ಸ್ತನ ಪರೀಕ್ಷೆ ಮಾಡಬಹುದು.   ಒಂದು; ಮುಟ್ಟಿ ಪರೀಕ್ಷಿಸುವುದು,  ಎರಡನೆಯದು;  ನೋಡಿ ಪರೀಕ್ಷಿಸುವುದು.

ನೋಡಿ ಪರೀಕ್ಷಿಸುವುದು;

ಮಹಿಳೆಗೆ ಮೊದಲು ನೀವು ಏನು ಮಾಡತ್ತೀರೆಂದು ತಿಳಿಸಿ ಹೇಳಿ. ಅವಳು ತನ್ನ ಸೆರಗು,  ರವಿಕೆಗಳನ್ನು ಕಳಚಲಿ.    ನೆಟ್ಟಗೆ ಕೂತು ತನ್ನೆರಡೂ  ಕೈಗಳನ್ನು  ಬದಿಗಳಲ್ಲಿ  ಇಟ್ಟುಕೊಳ್ಳಲಿ.

೧. ಎರಡೂ ಸ್ತನಗಳೂ ಒಂದೇ ಆಕಾರ, ಗಾತ್ರದಲ್ಲಿವೆಯೇ ನೋಡಿ.  ಕೆಲವೊಮ್ಮೆ ಎರಡೂ ಸ್ವಲ್ಪವೇ ಬೇರೆ ಬೇರೆ ಗಾತ್ರದಲ್ಲಿರಬಹುದು. ಇದು ಸಾಮಾನ್ಯ.

೨. ಸ್ತನದ ಮೇಲೆ ಯಾವುದೇ ರೀತಿಯ ಗಂಟು, ಅಥವಾ ಚಪ್ಪಟೆಯಾದ ಜಾಗ, ಅಥವಾ ಗುಳಿ ಬಿದ್ದಂತಿದ್ದರೆ ಅದು ಕ್ಯಾನ್ಸರಿನ ಸೂಚನೆ.

೩. ಸ್ತನಗಳ ಬಣ್ಣವನ್ನು ನೋಡಿ.  ಎಲ್ಲಿಯಾದರೂ ಕೆಂಪಗಾಗಿದ್ದರೆ ಸೋಂಕಾಗಿದೆ ಎಂದರ್ಥ. ಕ್ಯಾನ್ಸರ್ ಹುಣ್ಣಿಗೂ ಸೋಂಕು ತಗುಲಿರಬಹುದು.  ಚರ್ಮ ದಪ್ಪಗಾಗಿ ಕಿತ್ತಳೆ ಹಣ್ಣಿನ ಸಿಪ್ಪೆಯಂತೆ ಹುರುಬಾಗಿದ್ದರೆ ಅದೂ ಕ್ಯಾನ್ಸರ್ ಇರಬಹುದು.  ಯಾವುದೇ ಒಂದು ಬದಿಗೆ ರಕ್ತನಾಳಗಳು ದೊಡ್ಡವಾಗಿದ್ದು ಕಂಡು ಬಂದರೆ ಅದು ಅಪಾಯದ ಸೂಚನೆ.

೪. ಮೊಲೆತೊಟ್ಟುಗಳ  ಆಕಾರ, ಗಾತ್ರಗಳನ್ನು  ಪರೀಕ್ಷಿಸಿ.  ಅವು ಯಾವಾಗಲೂ ಸ್ವಲ್ಪ ಮುಂಬಾಗಿ ಮುರುಟಿಕೊಂಡಂತಿರುತ್ತವೆ. ಇದು ತಾತ್ಕಾಲಿಕ ಮತ್ತು ಸಾಮಾನ್ಯ.  ಆದರೆ ಇತ್ತೀಚೆಗೆ ಅದು ಸ್ವಲ್ಪ ಎದ್ದು ಕಾಣುವಂತೆ ಮುರುಟಿಕೊಂಡಿದ್ದರೆ ಕ್ಯಾನ್ಸರಿನ ಸೂಚನೆ ಇರಬಹುದು.  ಹಾಗೆಯೇ ಅವುಗಳ ಮೇಲೆ ಬೊಕ್ಕೆಗಳು, ಹುಣ್ಣು, ಕೀವು ಇವೆಲ್ಲ ಕಂಡುಬಂದರೆ ಅವೂ ಕ್ಯಾನ್ಸರಿನ ಸೂಚನೆಯೇ.

೫. ಕೈಗಳನ್ನು ಮೇಲಕ್ಕೆತ್ತಿ ನಿಂತಾಗ, ಕೈಗಳನ್ನು ಹಿಂದಕ್ಕೆ ಕಟ್ಟಿ ನಿಂತಾಗ ಮೊಲೆತೊಟ್ಟು ಹೇಗಿರುತ್ತದೆ ಗಮನಿಸಿ. ಜೊತೆಗೆ ಹೀಗೆ ಮಾಡಿದಾಗ ಸ್ತನದ ಗಾತ್ರ, ಆಕಾರಗಳಲ್ಲಿ ವ್ಯತ್ಯಾಸ ಕಾಣುವುದೇ, ಕುಳಿ ಬೀಳುವುದೇ ನೋಡಿ. ಕೆಲವೊಮ್ಮೆ ಕೈಗಳನ್ನು ಬದಿಗೆ ಇಟ್ಟುಕೊಂಡಿದ್ದಾಗ ಕಾಣದಿದ್ದುದು, ಈಗ ಕೈಮೇಲೆತ್ತಿದಾಗ ಅಥವಾ ಹಿಂದಕ್ಕೆ ಕಟ್ಟಿದಾಗ ಕಾಣಬಹುದು.

೬. ಎದ್ದು ನಿಂತು ಮುಂದೆ ಬಾಗಲು ಹೇಳಿ.  ಹಿಂದೆ ಕಾಣದಿದ್ದ ವಿಶೇಷತೆಗಳು ಈಗ ಕಾಣಬಹುದು.

ಮುಟ್ಟಿ ನೋಡುವುದು

ಮುಟ್ಟಿ ನೋಡುವಾಗ ಕೇವಲ ಸ್ತನಗಳನ್ನಷ್ಟೇ ಅಲ್ಲ, ಕುತ್ತಿಗೆಯ ಎಲುಬಿನವರೆಗೂ, ಕೆಳಗೆ ಬಗಲಿನವರೆಗೂ ಮುಟ್ಟಿ ನೋಡಬೇಕು.

ಮಹಿಳೆ ಇನ್ನೂ ಕುಳಿತೇ ಇರುವಾಗಲೇ ಕುತ್ತಿಗೆಯ ಸುತ್ತಲಿನ ಎಲುಬು(ಕಾಲರ್ ಬೋನ್) ಮತ್ತು ಬಗಲುಗಳಲ್ಲಿ ಕೈ ಇಟ್ಟು ಮುಟ್ಟಿ ನೋಡಿ.

ಹೀಗೆ ಮಾಡುವಾಗ ಅವರ ಕೈಯನ್ನು ನೀವೇ ಹಿಡಿದುಕೊಂಡು ಎತ್ತಿ ಹಿಡಿಯಿರಿ.  ಎಲ್ಲಿಯಾದರೂ ಗಂಟಿದೆಯೇ, ಇದ್ದರೆ ಅದು ಅತ್ತಿತ್ತ ಚಲಿಸುವುದೇ, ನೋವಿದೆಯೇ ನೋಡಿ. ಕ್ಯಾನ್ಸರಾಗಿದ್ದರೆ ಮೊದಲು ಅದು ಬಗಲಲ್ಲಿರುವ ಹಾಲ್ರಸ ಗ್ರಂಥಿಗಳ ಮೇಲೆ ಕಾಣಿಸಿಕೊಳ್ಳುತ್ತದೆ.

ಈಗ ಅವರು ಮಲಗಲಿ. ಭುಜದ ಕೆಳಗೆ ಒಂದು ಚಿಕ್ಕ ದಿಂಬು ಅಥವಾ ಬಟ್ಟೆಯ ಗಂಟನ್ನಿಡಿ.  ಕೈಯನ್ನು ತಲೆಯ ಕೆಳಗಿಟ್ಟುಕೊಳ್ಳಲಿ.

ಹೀಗೆ ಮಲಗಿರುವಾಗ ಸ್ತನವು ಹೆಚ್ಚು ಎದೆಯ ತುಂಬ ಹರಡಿಕೊಳ್ಳುತ್ತದೆ, ಗಂಟು ಇದೆಯೇ ನೋಡಲು ಅನುಕೂಲವಾಗುತ್ತದೆ.

ನಿಮ್ಮ ತೋರು ಬೆರಳು, ಮಧ್ಯದ ಬೆರಳು, ಉಂಗುರದ ಬೆರಳುಗಳನ್ನು ಒಟ್ಟಿಗೆ ಇಟ್ಟು ನಿಧಾನವಾಗಿ ತಟ್ಟುತ್ತ ಹೋಗಿ. ಅಮುಕಿ ಸುತ್ತ ತಿರುಗಿಸಿ.  ಮೊಲೆತೊಟ್ಟಿನಿಂದ ಆರಂಭಿಸಿ  ಸುತ್ತುತ್ತ ಸುತ್ತುತ್ತ ತೋಳ ಸಂದಿನವರೆಗೂ ಹೋಗಿ. ಮೊಲೆತೊಟ್ಟನ್ನೊಮ್ಮೆ ಹಿಚುಕಿ ಅದರೊಳಗಿನಿಂದ ರಕ್ತ ಅಥವಾ ಕೀವೇನಾದರೂ ಬರುವುದೇ ನೋಡಿ. ಮಗುವಿಗೆ ಹಾಲೂಡುವುದನ್ನು ನಿಲ್ಲಿಸಿ ಕೆಲಕಾಲವಾಗಿದ್ದರೂ ಸ್ವಲ್ಪ ಪ್ರಮಾಣದಲ್ಲಿ ಹಾಲು ತೊಟ್ಟಿಕ್ಕಬಹುದು. ಇದಕ್ಕೆ ಗಾಬರಿ ಆಗಬೇಕಾಗಿದ್ದಿಲ್ಲ.

ಗಂಟು ಅಥವಾ ಯಾವುದೇ ರೀತಿಯ ವಿಶೇಷತೆ ಕಂಡುಬಂದಲ್ಲಿ ಕೂಡಲೇ ವೈದ್ಯಕೀಯ ನೆರವು ಕೋರಿ.

ಹೊಟ್ಟೆ

ರೋಗಿಯು ಮೊಣಕಾಲು ಮಡಚಿಕೊಂಡು, ಕೈಗಳನ್ನು ಎದೆಯ ಮೇಲೆ ಇಟ್ಟುಕೊಂಡು ಮಲಗಲಿ.  ಹೀಗೆ ಮಾಡಿದಾಗ ಹೊಟ್ಟೆಯ ಸ್ನಾಯುಗಳು ಹೆಚ್ಚು ಸಡಿಲಗೊಂಡು ನಿಮ್ಮ ಪರೀಕ್ಷೆಗೆ ಅನುಕೂಲವಾಗುತ್ತದೆ.

ಮೊದಲು ಯಾವುದೇ ರೀತಿಯ ಬಾವು, ಗಂಟು ಕಾಣುತ್ತದೆಯೇ ನೋಡಿ. ಗಾಯವಾಗಿದ್ದು, ನರಗಳು ಉಬ್ಬಿದ್ದು, ಅಥವಾ ಯಾವುದೇ ಭಾಗದಲ್ಲಿ ಗಂಟಾಗಿದೆಯೇ?

ನಿರಂತರ ಹೊಟ್ಟೆ ನೋವಿದ್ದು ವಾಂತಿ ಬಂದಂತೆ ಆಗುತ್ತಿದ್ದು ರೋಗಿಗೆ ಮಲ ವಿಸರ್ಜನೆ ಆಗಿಲ್ಲವೆಂದರೆ ಹೊಟ್ಟೆಯ ಮೇಲೆ ಕಿವಿಯಿಟ್ಟು ಕೇಳಿ.

ಕರುಳಿನ ಸಪ್ಪಳ ಆಲಿಸಿ.  ಎರಡು ನಿಮಿಷದ ನಂತರ ಏನೂ ಕೇಳದಿದ್ದರೆ ಅದು ಅಪಾಯದ ಸೂಚನೆ.  (ಹೊಟ್ಟೆಯ ತುರ್ತು ಸ್ಥಿತಿಗಾಗಿ ೧೧೯ ನೇ ಪುಟ ನೋಡಿ).

ಹೊಟ್ಟೆಯ ಪರೀಕ್ಷೆಯಾದ ನಂತರ ನಿಮ್ಮ ಕಿವಿ ಇಟ್ಟು  ಹೀಗೆ ಆಲಿಸಿ.  ಸಾಮಾನ್ಯವಾಗಿ ಹೊಟ್ಟೆಯಿಂದ ಸಪ್ಪಳಗಳು ಬರುತ್ತಿರುತ್ತವೆ. ನಿಮಿಷಕ್ಕೆ ಏನಿಲ್ಲವೆಂದರೂ ೫ ರಿಂದ ೩೪ ಸಪ್ಪಳಗಳು ಕೇಳಿ ಬರಬೇಕು.  ಭೇದಿ ಆಗುತ್ತಿದ್ದರೆ ಈ ಸಪ್ಪಳ ಹೆಚ್ಚಬೇಕು.  ಆದರೆ ಪೆರಿಟೋನೈಟಿಸ್ ಆದರೆ ಏನೂ ಸಪ್ಪಳ ಬರುವುದಿಲ್ಲ.

ಸಪ್ಪಳ ಮಾಡದ ಹೊಟ್ಟೆ ಬೊಗಳದ ನಾಯಿಯಂತೆಎಚ್ಚರವಿರಲಿ.

ಹೊಟ್ಟೆ ನೋವಿದೆ ಎಂದು ಯಾರಾದರೂ ಬಂದರೆ ಮೊದಲು ಯಾವ ಜಾಗದಲ್ಲಿ ನೋವು ಆಗುತ್ತದೆ ಎನ್ನುವುದನ್ನು ಕಂಡುಹಿಡಿಯಿರಿ.  ಯಾವ ಜಾಗದಲ್ಲಿ ನೋವಿದೆ ಎಂದು ಗೊತ್ತಾದರೆ ರೋಗದ ಮೂಲ ಗೊತ್ತಾಗುತ್ತದೆ.  ನೋವು ಒಂದೇ ಸಮ ಇದೆಯೇ, ಬಂದು ಹೋಗಿ ಆಗುವುದೇ, ಹೊಟ್ಟೆ ಹಿಂಡಿದಂಥ ನೋವೇ ಎಂದು ಕೇಳಿ.

ಮೊದಲು ರೋಗಿ ತನಗೆ ಇಲ್ಲಿ ನೋವಿದೆ ಎಂದು ಬೊಟ್ಟಿಟ್ಟು ತೋರಿಸಲಿ.  ಮತ್ತೊಂದು ಪಕ್ಕದ ಅದೇ ಜಾಗದಿಂದ ಆರಂಭಿಸಿ, ಸ್ವಲ್ಪ, ಸ್ವಲ್ಪವೇ ಒತ್ತುತ್ತಾ ಹೋಗಿ.  ಎಲ್ಲಿ ಅತಿ ಹೆಚ್ಚು ನೋವಿದೆ ಗುರುತಿಸಿ.

ಹೊಟ್ಟೆ ಗಟ್ಟಿಯಾಗಿದೆಯೇ, ಮೆತ್ತಗಿದೆಯೇ, ಹೊಟ್ಟೆಯ ಸ್ನಾಯುಗಳನ್ನು ಸಡಿಲ ಬಿಟ್ಟುರೋಗಿ ಆರಾಮವಾಗಿ ಮಲಗಬಲ್ಲರೇ ನೋಡಿ. ಹೊಟ್ಟೆ ಬಹಳ ಗಟ್ಟಿಯಾಗಿದ್ದರೆ ಅಪೆಂಡಿಸೈಟಿಸ್ ಅಥವಾ ಪೆರಿಟೋನೈಟಿಸ್ ಆಗಿರಬಹುದು. (೧೨೦ ನೇ ಪುಟ) ಪೆರಿಟೋನಿಟಿಸ್ ಅಥವಾ ಅಪೆಂಡಿಸೈಟಿಸ್ ಇರಬಹುದು ಎಂದು ನಿಮಗೆ ಸಂಶಯ ಬಂದರೆ ಹೊಟ್ಟೆಯ ಆ ಜಾಗದಲ್ಲಿ ಬೆರಳಿನಿಂದ ಸಾವಕಾಶ ಬಡಿದು ನೋಡಿ.  ನೋವಿರುವ ಜಾಗದ ಸ್ನಾಯುಗಳು ಬಿಗಿದುಕೊಳ್ಳುವುದನ್ನು ಕಾಣಬಹುದು. ೧೨೦ ನೇ ಪುಟದಲ್ಲಿ ಹೇಳಿದಂತೆ (ಪುಟಿದು ಬರುವ ನೋವಿಗಾಗಿ) ಪರೀಕ್ಷೆ ಮಾಡಿ ನೋಡಿ.

ಹೊಟ್ಟೆಯ ಮೇಲೆ ಗಟ್ಟಿಯಾದ ಜಾಗ ಅಥವಾ ಗಂಟುಗಳಿವೆಯೇ ನೋಡಿ. ಪಿತ್ಥಕೋಶವು ದೊಡ್ಡದಾಗಿದ್ದರೆ ನಿಮಗೆ ರೋಗ ಮೂಲ ಏನೆಂದು ಗೊತ್ತುಮಾಡುವಲ್ಲಿ ಸಹಾಯವಾಗುತ್ತದೆ.

ಈ ಕೆಳಗೆ ನೋವಿರುವ ಜಾಗ, ಅದಕ್ಕೆ ಕಾರಣ ಎರಡನ್ನೂ ವಿವರಿಸಲಾಗಿದೆ.

ಬೆನ್ನು ಮತ್ತು ಬೆನ್ನು ಹುರಿ

ಬೆನ್ನು ನೋವಿನ ಬೇರೆ ಬೇರೆ ಕಾರಣಗಳಿಗಾಗಿ ೨೨೩ ನೇ ಪುಟ ನೋಡಿ.

ನಮ್ಮ ದೇಹದಲ್ಲಿ ಮೂತ್ರಕೋಶಗಳು ಬೆನ್ನಿಗೆ ಹೆಚ್ಚು ಸಮೀಪದಲ್ಲಿ ಇವೆ.  ಬೆನ್ನಿನ ಕೆಳಭಾಗದಲ್ಲಿ ಕೊನೆಯ ಪಕ್ಕೆಲುಬಿನ ಕೆಳಗೆ ನಿಮ್ಮ ಮಷ್ಠಿಯಿಂದ ತಟ್ಟಿ.   ಹೀಗೆಯೇ  ಇನ್ನೊಂದು  ಬದಿಗೂ ಮಾಡಿ.  ನೋಯುತ್ತದೆಂದು ಅವರು ಹೇಳಿದರೆ  ಮೂತ್ರಪಿಂಡಕ್ಕೆ ಸೋಂಕು ತಗುಲಿದೆಯೆಂದರ್ಥ.   ಬೆನ್ನು ನೋವಿನ ಇನ್ನಿತರ ಕಾರಣಗಳಿಗಾಗಿ

೨೨೩ ನೇ ಪುಟ ನೋಡಿ.

ಬೆನ್ನನ್ನು ಸರಿಯಾಗಿ ಗಮನಿಸಿ, ಏನಾದರೂ ಕಾಣುತ್ತಿದೆಯೇ ನೋಡಿ.  ಬೆನ್ನುಹುರಿ ನೇರವಾಗಿದೆಯೇ,  ಎಲ್ಲಿಯಾದರೂ ಗಂಟು, ಬಾವುಗಳು ಕಾಣುತ್ತಿವೆಯೇ ಮುಟ್ಟಿ ನೋಡಿ.  ಬೆನ್ನು ಹುರಿಗೆ ಕ್ಷಯ  ತಗುಲಿದರೆ ಬೆನ್ನಿನ ಎಲುಬಿನಲ್ಲಿ ಗಂಟು ಗೋಚರಿಸುತ್ತದೆ.

ಬೆನ್ನಿನ ಸ್ನಾಯುಗಳನ್ನು ಮುಟ್ಟಿ ನೋಡಿ.  ಬೆನ್ನು ನೋವಿದ್ದರೆ ಸ್ನಾಯಗಳು ಬಿಗಿದುಕೊಂಡಿರುತ್ತವೆ,  ಮುಟ್ಟಿದರೆ ಗಂಟಾಗಿ, ಗಟ್ಟಿಯಾಗಿ ಕಾಣಿಸುತ್ತದೆ.

ಗುದನಾಳ ಮತ್ತು ಗುದದ್ವಾರ

ಮಲದಲ್ಲಿ ರಕ್ತ ಹೋಗುತ್ತಿದೆ, ಮಲ ಹೋಗುವಲ್ಲಿ ತುಂಬಾ ತುರಿಕೆ ಎಂದು ಯಾರಾದರೂ  ಬಂದರೆ ಅಥವಾ ಮುದುಕರಿಗೆ ಮೂತ್ರ ಮಾಡುವುದು ಕಷ್ಟ ಇದ್ದರೆ ಆಗ ಗುದದ್ವಾರದ ಪರೀಕ್ಷೆ ಅವಶ್ಯವಾಗುತ್ತದೆ. ಈ ಪರೀಕ್ಷೆ ಮಾಡುವಾಗ ಯಾವಾಗಲೂ ಕೈಗೆ ಗ್ಲೌಸ್  ಹಾಕಿಕೊಂಡೇ ಮಾಡಿ.

ರೋಗಿಯು ನಿಮಗೆ ಬೆನ್ನು ಮಾಡಿ, ಹಾಸಿಗೆಯ ತುದಿಗೆ, ನಿಮಗೆ ಹತ್ತಿರವಾಗುವಂತೆ, ತನ್ನ ಒಂದು ಮಗ್ಗುಲಾಗಿ ಮಲಗಲಿ. ಕೆಳಗಿನ ಕಾಲನ್ನು ನೀಳವಾಗಿ ಚಾಚಿ, ಮೇಲಿನ ಕಾಲನ್ನು ಮಡಚಿಕೊಂಡು ಮಲಗಲಿ.

ಕೈಗೆ ಗ್ಲೌಸ್ ಹಾಕಿಕೊಂಡು ಗುದದ್ವಾರದ ಸುತ್ತ ಕೆಂಪಗಾಗಿದೆಯೇ, ಗಾಯವಾಗಿದೆಯೇ, ಒಡೆದಿದೆಯೇ ಅಥವಾ ಮೂಲವ್ಯಾಧಿಯ ಲಕ್ಷಣಗಳಿವೆಯೇ ನೋಡಿ.  ಮೂಲವ್ಯಾಧಿಯ ಲಕ್ಷಣಗಳೆಂದರೆ ಗುದದ್ವಾರದ ಸುತ್ತ ಇರುವ ರಕ್ತನಾಳಗಳು ಉಬ್ಬಿಕೊಂಡಿದ್ದು ಗಂಟಾಗಿ ಕೂತಿರುತ್ತವೆ.  ಕುಳಿತಾಗ, ಮಲವಿಸರ್ಜನೆ ಮಾಡುವಾಗ ಅವು ತುಂಬ ನೋವು ಕೊಡುತ್ತವೆ.  ಬಾತುಕೊಂಡ, ನೀಲಿ ಬಣ್ಣದ ಗಂಟನ್ನು ಗುದದ್ವಾರದ ಬಳಿ ಕಂಡರೆ ಮೂಲವ್ಯಾಧಿ ಇದೆ ಎಂದರ್ಥ.

ಒಳಗಡೆಯೇ ರಕ್ತನಾಳಗಳು ಗಂಟಾಗಿರುವುದೂ ಉಂಟು. ಆಗ ಗುದನಾಳದಿಂದ ಕೆಂಪನೆಯ ಗಂಟು ಹೊರಚಾಚಿರುತ್ತದೆ. (೨೨೫ ನೇ ಪುಟ ನೋಡಿ)

ಒಮ್ಮೆ ಎಲ್ಲ ಪರೀಕ್ಷೆಯಾದ ನಂತರ ತೋರು ಬೆರಳಿಗೆ (ಗ್ಲೌಸ್ ಇರುವಂತೆಯೇ)  ಶುದ್ದ ತೆಂಗಿನೆಣ್ಣೆ ಹಚ್ಚಿ ಗುದದ್ವಾರದೊಳಗೆ ಬೆರಳನ್ನು ಹಾಕಿ. ಅವರು ಸ್ವಲ್ಪವೇ ಬಾಯಿ ತೆರೆದು ಜೋರಾಗಿ ಉಸಿರನ್ನು ಒಳಕ್ಕೆಳೆದುಕೊಳ್ಳಲಿ, ಅಂದರೆ ನೋವಾಗುವುದಿಲ್ಲ.  ಬೆರಳನ್ನು ಒಳಗೆ ಹಾಕಿ ಸಾವಕಾಶವಾಗಿ ಎಡಕ್ಕೂ, ಬಲಕ್ಕೂ, ಮೇಲಕ್ಕೂ ಕೆಳಕ್ಕೂ ಬೆರಳನ್ನಾಡಿಸಿ.  ಗಂಡಸರಾದರೆ ಮುಂಭಾಗದಲ್ಲಿ ಗಂಟಿನಂತೆ ಕೈಗೆ ಹತ್ತುತ್ತದೆ ಅದು ಪ್ರೋಸ್ಟೇಟ್ ಗ್ರಂಥಿ. ಮುದುಕರಲ್ಲಿ ಇದು ದೊಡ್ಡದಾಗಿ, ಇಲ್ಲವೇ ಇದರಲ್ಲಿ ಕ್ಯಾನ್ಸರಾಗಿ ಮೂತ್ರ ಮಾಡಲು ತೊಂದರೆ ಕೊಡುತ್ತಿರಬಹುದು.

ಕೈ ಕಾಲು ಮತ್ತು ಹಸ್ತ ಪಾದಗಳು

ರೋಗಿಯ ಕೈ ಮತ್ತು ಕಾಲುಗಳನ್ನು ಏನಾದರೂ ವಿಶೇಷವಿದೆಯೇ ಎಂದು ಪರೀಕ್ಷಿಸಿ.  ಕಾಲುಗಳಲ್ಲಿ ಬಾವು ಬಂದಿದ್ದರೆ ನೋಡಿದ ತಕ್ಷಣ ಗೊತ್ತಾಗಿಬಿಡುತ್ತದೆ.  ಸ್ವಲ್ಪವೇ ಬಾತಿದೆ ಎನಿಸಿದರೆ ಹಿಮ್ಮಡಿಯ ಎಲುಬಿಗೆ ಬೆರಳನ್ನು ಒತ್ತಿ. ಬಾವಿದ್ದರೆ ಅಲ್ಲಿ ಚಿಕ್ಕದೊಂದು ಗುಳಿ ಮೂಡಿ ಕೆಲಕ್ಷಣ ಇರುತ್ತದೆ.

ಮಕ್ಕಳಲ್ಲಿ  ಅಪೌಷ್ಟಿಕತೆಯಿಂದಾಗಿ  ಕೆಲವೊಮ್ಮೆ ಮುಖ ಮತ್ತು ಕಾಲುಗಳು ಬಾಯುವುದುಂಟು (೩೫೮ ನೇ ಪುಟ).  ಗರ್ಭಿಣಿಯರಲ್ಲೂ ಕಾಲು ಬಾವು ಬರುವುದು ಸಾಮಾನ್ಯ (೩೦೨ ನೇ ಪುಟ).  ಮೂತ್ರಪಿಂಡವು  ಸರಿಯಾಗಿ ಕೆಲಸ ಮಾಡದಿದ್ದರೆ ಕಾಲುಬಾವು ಬರುತ್ತದೆ (೩೭೫ ನೇ ಪುಟ).

ಹೃದಯಕ್ಕೆ ಸಂಬಂಧಪಟ್ಟ ತೊಂದರೆ ಇದ್ದಾಗಲೂ ಕಾಲು ಬಾಯುವುದುಂಟು

ಆನೆಕಾಲು ರೋಗವೂ ಕೂಡ ಕಾಲು ಬಾಯುವಂತೆ ಮಾಡುತ್ತದೆ. ಜೊತೆಗೆ  ಗಂಡಸರಲ್ಲಿ  ವೃಷಣವೂ  ಬಾತುಕೊಳ್ಳುತ್ತದೆ.  ಆನೆಕಾಲು ರೋಗ ಇರಬಹುದೆಂದು ಅನುಮಾನ ಬಂದರೆ ಹಿಮ್ಮಡಿಯ ಸ್ಪಲ್ಪ  ಮೇಲಕ್ಕೆ ನಿಮ್ಮ  ಬೆರಳನ್ನು ಒತ್ತಿ. (ಚಿತ್ರದಲ್ಲಿ ತೋರಿಸಿರುವಂತೆ) ಆನೆಕಾಲು ರೋಗವಿದ್ದರೆ ಅಲ್ಲಿ ಗುಳಿ ಮೂಡುವುದಿಲ್ಲ.

ಸ್ನಾಯು ಮತ್ತು ನರಗಳು

ರೋಗಿಯು ದೇಹದ ಯಾವುದೇ ಭಾಗದಲ್ಲಿ ಶಕ್ತಿ ಇಲ್ಲದಂತಾಗಿದೆ, ಮರಗಟ್ಟಿದಂತಾಗಿದೆ, ದೇಹದ ಯಾವುದೇ ಭಾಗದ ಮೇಲೆ ಸ್ತಿಮಿತವೇ ಇಲ್ಲವೆನಿಸುತ್ತದೆ, ಎನ್ನುತ್ತಿದ್ದರೆ, ಅಥವಾ ಈ ಬಗ್ಗೆ ನಿಮಗೆ ಸಂಶಯ ಬಂದರೆ ಮೊದಲು ಅವರು ಹೇಗೆ ನಡೆದಾಡುತ್ತಾರೆ ನೋಡಿ.  ಅವರು ನಿಲ್ಲಲಿ, ಕೂಡ್ರಲಿ, ಉದ್ದಕ್ಕೆ ಮಲಗಲಿ,  ಎರಡೂ ಬದಿಗಳನ್ನು ಹೋಲಿಸಿ ನೋಡಿ. ನಡೆಯುವಾಗ ಕಾಲೆಳೆದುಕೊಂಡು ಹೋಗುತ್ತಾರೆಯೇ?

ಮುಖ :

ನಿಮ್ಮೆದುರು ಕುಳಿತಿರುವಂತೆಯೇ, ಮಾತಾಡುವಾಗ ಸುಮ್ಮನೆ ಕುಳಿತಾಗ  ಅವರ ಮುಖಭಾವವನ್ನು ಗಮನಿಸಿ. ಅವರು ಮುಗುಳ್ನಗಲಿ, ಮುಖ ಗಂಟಿಕ್ಕಲಿ, ಹುಬ್ಬುಗಳನ್ನು ಮೇಲಕ್ಕೆತ್ತಲಿ, ಹುಬ್ಬುಗಂಟಿಕ್ಕಲಿ, ಕಣ್ಣುಗಳನ್ನು ದೊಡ್ಡದಾಗಿ ತೆರೆಯಲಿ, ಗಟ್ಟಿಯಾಗಿ ಮುಚ್ಚಲಿ, ಈ ಯಾವುದೇ ಕ್ರಿಯೆಯಲ್ಲಿ ವ್ಯತ್ಯಯ ಕಂಡಿತೇ ನೋಡಿ.  ಅವರು ಗಟ್ಟಿಯಾಗಿ ಮುಚ್ಚಿರುವಾಗ ನೀವು ಬಲವಂತದಿಂದ ಕಣ್ಣು ಬಿಡಿಸಲು ಪ್ರಯತ್ನಿಸಿ. ಬಿಡಿಸಲು ಕಷ್ಟವಾಗುತ್ತದೆ.  ಕಣ್ಣೆವೆಗಳು ಜೋತು ಬಿದ್ದಿವೆಯೇ, ಅವುಗಳಲ್ಲಿ ಅಶಕ್ತಿ ಕಂಡುಬಂತೇ? ಮೂಗಿನ ಎರಡೂ ಬದಿಗಳಲ್ಲಿ ಏನಾದರೂ ವ್ಯತ್ಯಾಸ ಕಂಡಿತೇ?

ಯಾವುದೇ ತೊಂದರೆ ಧಿಡೀರನೆ ಶುರುವಾಯಿತೆಂದರೆ ತಲೆಗೆ ಪೆಟ್ಟಾಗಿರಬಹುದು  (೧೦೩ ನೇ ಪುಟ).  ಪಾರ್ಶ್ವವಾಯು ಆಗಿರಬಹುದು (೩೭೯ ನೇ ಪುಟ).  ಬೆಲ್ಸ್ ಪಾಲ್ಸಿ ರೋಗ ಇರಬಹುದು.

ತೊಂದರೆ ನಿಧಾನವಾಗಿ ಶುರುವಾಯಿತೆಂದರೆ ಮಿದುಳಿನೊಳಗಿನ ಹುಣ್ಣಿನ ಸೂಚನೆ ಇರಬಹುದು.  ತಕ್ಷಣ ವೈದ್ಯಕೀಯ ಸಹಾಯ ಕೋರಿ. ಕಣ್ಣಿನ ಸಹಜ ಚಲನೆ, ಮತ್ತು ಪಾಪೆಯ ಗಾತ್ರ (೪೯ ನೇ ಪುಟ) ಮತ್ತು ದೃಷ್ಟಿ ಇವೆಲ್ಲವನ್ನೂ ಗಮನಿಸಿ.

ಕೈ ಕಾಲು:

ಕೈಕಾಲುಗಳ ಗಾತ್ರಗಳಲ್ಲಿ ವ್ಯತ್ಯಾಸ ಕಂಡುಬಂದರೆ ಗಮನಿಸಿ.  ಮಾಂಸಖಂಡಗಳು ಕ್ಷೀಣಿಸಿರುವುದೇ ನೋಡಿ.  ಸಾದಾ ಒಂದು ದಾರದೆಳೆ ಅಥವಾ ರಿಬ್ಬನ್ನಿನಿಂದ ಎರಡೂ ಕೈ, ಕಾಲುಗಳ ಸುತ್ತಳತೆಗಳನ್ನು ತೆಗೆದು ನೋಡಿದರೆ ಆಗಿರುವ ವ್ಯತ್ಯಾಸ ಗೊತ್ತಾಗಿಬಿಡುತ್ತದೆ.

ಕೈಗಳಲ್ಲಿನ ಶಕ್ತಿಯನ್ನು ಪರೀಕ್ಷಿಸಲು, ನಿಮ್ಮ ಬೆರಳುಗಳನ್ನು ಗಟ್ಟಿಯಾಗಿ ಅಮುಕಲು ಹೇಳಿ.  ನಂತರ ಅವನ್ನು ಬಿಡಿಸಲು ಪ್ರಯತ್ನಿಸಿ.  ಆರೋಗ್ಯವಂತ ವ್ಯಕ್ತಿ ನಿಮ್ಮ ಬೆರಳುಗಳನ್ನು ಅಮುಕಿದರೆ ಬಿಡಿಸಲು ನಿಮಗೆ ಸುಲಭವಲ್ಲ.

ರೋಗಿ ಮಲಗಲಿ. ನಂತರ ನಿಮ್ಮ ಕೈಗೆ ಕಾಲನ್ನು ಒತ್ತಿ ಒಂದೊಂದೇ ಕಾಲು ಮೇಲೆತ್ತಲು ಹೇಳಿ.  ಮತ್ತೊಂದು ಕಾಲಿಗೂ ಹೀಗೆಯೇ ಮಾಡಿ. ಮಲಗಿದ್ದುಕೊಂಡೇ ನಿಮ್ಮ ಕೈಗೆ ವಿರುದ್ದವಾಗಿ ತನ್ನ ಕಾಲುಗಳನ್ನು ಹಿಂದಕ್ಕೂ ಮುಂದಕ್ಕೂ ತಳ್ಳಲಿ.

ಸ್ನಾಯು ಬೆಳವಣಿಗೆ ಇಲ್ಲದೆ,  ಇಡೀ ದೇಹವೂ ಶಕ್ತಿ ಹೀನವಾಗಿದ್ದರೆ ಪೌಷ್ಟಿಕ ಆಹಾರದ ಕೊರತೆ ಆಗಿರಬಹುದು (೧೩೯ ನೇ ಪುಟ). ಅಥವಾ ಬಹುಕಾಲದಿಂದ ಇರುವ ಕ್ಷಯದ ಕಾರಣವಿರಬಹುದು.

ಅಲ್ಲಲ್ಲಿ ಶಕ್ತಿ ಹೀನತೆ ಇದ್ದು, ಒಂದು ಪಕ್ಕದಲ್ಲಿ ಜಾಸ್ತಿಯಾಗಿದ್ದರೆ, ಮಕ್ಕಳಲ್ಲಾಗಿದ್ದರೆ, ಪೋಲಿಯೋ ಇರಬಹುದೇನೋ ಶಂಕಿಸಿ (೩೬೯  ನೇ ಪುಟ). ದೊಡ್ಡವರಲ್ಲಾಗಿದ್ದರೆ ಬೆನ್ನಿಗೆ ಸಂಬಂಧಿಸಿದ ತೊಂದರೆ, ತಲೆಗೆ ಪೆಟ್ಟು ಅಥವಾ ಅಘಾತ  ಇರಬಹುದು.

ದೇಹದ ಬೇರೆ ಬೇರೆ ಅಂಗದ ಸ್ನಾಯು ಬಿಗಿದುಕೊಂಡಿರುವ ಬಗ್ಗೆ ಪರೀಕ್ಷೆ ಮಾಡಿ.

  • ದವಡೆ ಹಿಡಿದಿದ್ದು ಬಾಯಿ ತೆರೆಯಲಾಗದಿದ್ದರೆ ಧನುರ್ವಾಯು (೨೩೩ ನೇ ಪುಟ) ಅಥವಾ ಗಂಟಲಿಗೆ ತೀವ್ರ ಸೋಂಕು ತಗುಲಿರಬಹುದು (೩೫೩ ನೇ ಪುಟ). ಅಥವಾ ಹಲ್ಲಿನ ತೊಂದರೆ ಇರಬಹುದು (೨೮೫ ನೇ  ಪುಟ).
  • ಕುತ್ತಿಗೆ ಅಥವಾ ಬೆನ್ನು ಹಿಡಿದ್ದರೆ, ಹಿಂದುಗಡೆ ಬಾಗಿದ್ದರೆ, ಬಹಳ ಕಾಯಿಲೆಯಿರುವ ಚಿಕ್ಕ ಮಕ್ಕಳಲ್ಲಾಗಿದ್ದರೆ ಮೆನಿಂಜೈಟಿಸ್ ಇರಬಹುದು.
  • ತಲೆಯನ್ನು ಬಾಗಿಸಲಿಕ್ಕೆ ಆಗದಿದ್ದರೆ ಅಥವಾ ಮೊಣಕಾಲುಗಳ ಮಧ್ಯೆ ತಲೆಯನ್ನು ಇಡಲಾಗದಿದ್ದರೆ ಮೆನಿಂಜೈಟಿಸ್ ಎಂದು ಶಂಕಿಸಬಹುದು (೨೩೬ ನೇ ಪುಟ).

  • ಮಗುವಿಗೆ ಪದೇ ಪದೇ ಸ್ನಾಯು ಹಿಡಿಯುತ್ತಿದ್ದರೆ, ಚಲನೆ ಹಿಡಿತದಲ್ಲಿಲ್ಲದಿದ್ದರೆ ಸ್ಪ್ಯಾಸ್ಟಿಕ್ (೨೭೩ ನೇಪುಟ).
  • ಧಿಡಿರನೇ ಚಾಲನೆಯಾಗಿ ಮೂರ್ಛೆ ತಪ್ಪಿದ್ದರೆ,  ಹೀಗೆ ಪದೇ ಪದೇ ಆಗುತ್ತಿದ್ದರೆ ಮಲರೋಗ ಇರಬಹುದು (೨೨೮ ನೇ ಪುಟ).  ರೋಗ ಬಂದಾಗ ಮಾತ್ರ ಹೀಗಾಗುತ್ತಿದ್ದರೆ ಅದಕ್ಕೆ ತೀವ್ರ ಜ್ವರ ಕಾರಣ ಇರಬಹುದು. (೧೦೧ ನೇ ಪುಟ). ನಿರ್ಜಲೀಕರಣ (೧೯೧ ನೇ ಪುಟ) ಅಥವಾ ಧನುರ್ವಾಯು( ೨೩೬ ನೇ ಪುಟ) ಇರಬಹುದು.

ಧನುರ್ವಾಯು ಇರಬಹುದೆಂದು ಶಂಕೆ ಬಂದಿದ್ದು ರೋಗಿಯ ಸ್ನಾಯುಗಳ ಪ್ರತಿಕ್ರಿಯೆ ಪರೀಕ್ಷಿಸಲು ಸಲಹೆಗಾಗಿ ೨೩೮ ನೇ ಪುಟ ನೋಡಿ.  ರೋಗಿ ಕಾಲುಗಳೆರಡನ್ನೂ ಕೆಳಗೆ ಜೋತು ಬಿಟ್ಟು ಕುಳಿತುಕೊಳ್ಳಲಿ.  ಮೊಣಕಾಲಿನ ಗಂಟಿನ ಸ್ವಲ್ಪವೇ ಕೆಳಗೆ ನಿಮ್ಮ ಕೈಬೆರಳಿನಿಂದ ಚೆನ್ನಾಗಿ ತಟ್ಟಿ.  ಆರೋಗ್ಯವಂತರಿದ್ದರೆ ಕಾಲು ತಟ್ಟನೆ ಚಟಕ್ಕೆಂದು ಎದ್ದು ಹಾರುತ್ತದೆ.

ದೇಹದ ಯಾವುದೇ  ಅಂಗದಲ್ಲಿ ಸ್ಪರ್ಶಜ್ಞಾನ ಇದೆಯೇ ಇಲ್ಲವೇ ನೋಡಲು;            

ರೋಗಿ ಮುಖ ತಿರುವಿ, ಕಣ್ಣು ಮುಚ್ಚಿರಲಿ.  ಒಂದು ಪಿನ್ನಿನಿಂದ ಅಲ್ಲಲ್ಲಿ ಮುಟ್ಟುತ್ತ ಇಲ್ಲವೇ ಸಾವಕಾಶವಾಗಿ ಚುಚ್ಚುತ್ತ ಹೋಗಿ. ಗೊತ್ತಾದಾಗ ಹೌದೆನ್ನಲಿ.

  • ಕಲೆಯಿದ್ದು ಅದರಲ್ಲಿ ಅಥವಾ ಅದರ ಸುತ್ತ ಸ್ಪರ್ಶಜ್ಞಾನ ಇಲ್ಲವೆಂದರೆ ಕುಷ್ಠ ರೋಗ (೨೪೪ನೇ ಪುಟ).
  • ಎರಡೂ ಕೈಗಳಲ್ಲಿ ಸ್ಪರ್ಶಜ್ಞಾನವಿಲ್ಲವೆಂದರೆ ಅದು ಮಧುಮೇಹ (೧೫೯ ನೇ ಪುಟ) ಇಲ್ಲವೇ ಕುಷ್ಠ.
  • ಒಂದೇ ಬದಿಗೆ ಸ್ಪರ್ಶಜ್ಞಾನವಿಲ್ಲವೆಂದರೆ ಬೆನ್ನು ನೋವು ಅಥವಾ ಇನ್ನಾವುದೇ ಪೆಟ್ಟಾಗಿರಬಹುದು.

* * *