ಔಷಧದಂಗಡಿಗಳಲ್ಲಿ ಮಾರಾಟವಾಗುವ ಅನೇಕ ಔಷಧಗಳು ಉಪಯೋಗವಿಲ್ಲದವುಗಳು. ಕೆಲವು ಮಾತ್ರ ಆವಶ್ಯಕ ಔಷಧಗಳು. ನಮ್ಮ ದೇಶದ ಪೇಟೆಯಲ್ಲಿ  ಅಂದಾಜು ೮೦,೦೦ ಔಷಧಗಳಿವೆ. ಆದರೆ ವಿಶ್ವ ಆರೋಗ್ಯ ಸಂಸ್ಥೆಯು ಹೇಳುವ ಪ್ರಕಾರ ಜಗತ್ತಿನ ಎಲ್ಲ ಸಾಮಾನ್ಯ ರೋಗಗಳ ಚಿಕಿತ್ಸೆಗೆ ೩೫೦ ಔಷಧಗಳು ಸಾಕು. ಎಷ್ಟೋ ಬಾರಿ ಒಳ್ಳೆಯ ಔಷಧಗಳನ್ನು ಜನರು ತಪ್ಪಾಗಿ ಉಪಯೋಗಿಸುತ್ತಿರುತ್ತಾರೆ. ಅದರಿಂದ ಆ ಔಷಧ ನಿಷ್ಪ್ರಯೋಜಕ ಆಗುವುದಷ್ಟೇ ಅಲ್ಲ,  ಹಾನಿಕಾರಕ ಕೂಡ ಆಗಬಲ್ಲದು.  ಔಷಧಗಳ ಪ್ರಯೋಜನ ಆಗಬೇಕೆಂದರೆ ಅವುಗಳ ಬಗ್ಗೆ ತಿಳಿದುಕೊಂಡು ಅವುಗಳನ್ನು ಸರಿಯಾಗಿ ಉಪಯೋಗಿಸಿ.

ಎಷ್ಟೋ ಬಾರಿ ಡಾಕ್ಟರರು ಅಥವಾ ಆರೋಗ್ಯ ಕಾರ್ಯಕರ್ತರು ನಿಜವಾಗಿ ಬೇಕಾಗುವುದಕ್ಕಿಂತ ಹೆಚ್ಚು ಔಷಧಗಳನ್ನು ರೋಗಿಗಳಿಗೆ ಬರೆದುಕೊಡುತ್ತಾರೆ.  ಇದರಿಂದಾಗಿ ರೋಗಿಗಳು ಅನಾವಶ್ಯಕವಾಗಿ ಬಳಲಬೇಕಾಗುತ್ತದೆ.

ಒಂದೊಂದು ಔಷಧದ ಉಪಯೋಗದಲ್ಲೂ ಅಪಾಯವಿದ್ದೇ ಇದೆ.

ಕೆಲವು ಔಷಧಗಳು ಬೇರೆ ಔಷಧಕ್ಕಿಂತ ಹೆಚ್ಚು ಅಪಾಯಕಾರಿ ಇರಬಹುದು. ಆದರೆ ಜನರು ಅರಿಯದೆ  ತೀರಾ ಸಾಮಾನ್ಯವಾದ ಸಣ್ಣ ಪುಟ್ಟ ರೋಗಗಳಿಗೂ ಇಂಥ ಶಕ್ತಿಯುತ ಔಷಧವನ್ನು ಉಪಯೋಗಿಸುತ್ತಿರುತ್ತಾರೆ.  (ಒಬ್ಬ ತಾಯಿಯು ತನ್ನ ಮಗುವಿನ ನೆಗಡಿಗೆ ಕ್ಲೋರೋಂಫೆನಿಕಾಲ್ ಔಷಧವನ್ನು ಕೊಟ್ಟಿದ್ದರ ಕಾರಣದಿಂದಾಗಿ ಆ ಮಗು ಸಾವಿಗೀಡಾದುದನ್ನು ಸ್ವತಃ ಈ ಲೇಖಕನೇ ನೋಡಿದ್ದಾನೆ.) ಸಣ್ಣ ಸಣ್ಣ ರೋಗಗಳಿಗೆ ಎಂದೂ ಶಕ್ತಿಯುತವಾದ ಔಷಧಗಳನ್ನು ಬಳಸಬೇಡಿ.

ನೆನಪಿಡಿ: ಔಷಧಗಳೂ ಕೊಲ್ಲಬಹುದು.

ಯಾವುದೇ ಆರೋಗ್ಯ ಸಮಸ್ಯೆಗೆ ಸರಿಯಾದ ಔಷಧವನ್ನು ಸರಿಯಾದ ಪ್ರಮಾಣದಲ್ಲಿ ಸೇವಿಸುವುದು ಅತಿ ಅವಶ್ಯ.  ಅನವಶ್ಯಕವಾದ ಔಷಧ ಮಿಶ್ರಣಗಳು, ಸಂಯುಕ್ತಗಳು, ಟಾನಿಕ್‌ಗಳನ್ನು ಸೇವಿಸಬೇಡಿ.  ಒಳ್ಳೆಯ ಆಹಾರ, ತಿಕ್ಕಿಸಿಕೊಳ್ಳುವುದು, ಅಕುಪಂಕ್ಚರ್, ಉಗಿ ಸೇವನೆ, ಗಂಟಲಲ್ಲಿ ಬಿಸಿ ನೀರು ಹಾಕಿಕೊಂಡು ಗಳ ಗಳ ಮಾಡುವುದು ಇವೆಲ್ಲ ಔಷಧ ಬಳಸದೇ ರೋಗ ಗಣಪಡಿಸಬಹುದಾದ ಅನೇಕ ಸಾಧ್ಯತೆಗಳು.

ಔಷಧ ಉಪಯೋಗಕ್ಕೆ ಕೆಲವು ಮಾರ್ಗದರ್ಶಿಕೆಗಳು;

೧. ಅತಿ ಅವಶ್ಯಕತೆ ಇದ್ದಾಗಷ್ಟೇ ಔಷಧ ಉಪಯೋಗಿಸಿ.

೨. ಉಪಯೋಗಿಸುವ ಔಷಧದ ಸರಿಯಾದ ಪ್ರಮಾಣ ಮತ್ತು ತೆಗೆದುಕೊಳ್ಳಬೇಕಾದ ಎಚ್ಚರಿಕೆಗಳು ಗೊತ್ತಿರಲಿ.

೩. ಪ್ರಮಾಣ ಸರಿಯಾಗಿರಲಿ, ಎಷ್ಟು ಬಾರಿ ಎನ್ನುವುದು ಗೊತ್ತಿರಲಿ. ಯಾವಾಗ ತೆಗೆದುಕೊಳ್ಳುವುದೆಂದು ನೆನಪಿರಲಿ.

೪. ಆ ಔಷಧದಿಂದ ಗುಣ ಕಾಣದಿದ್ದರೆ, ಅಥವಾ ತೊಂದರೆ ಶುರುವಾದರೆ ಕೂಡಲೆ ಔಷಧವನ್ನು ನಿಲ್ಲಿಸಿ.

೫. ಸಂಶಯವಿದ್ದಲ್ಲಿ ಡಾಕ್ಟರರನ್ನೋ, ಅನುಭವಿ ಆರೋಗ್ಯಕಾರ್ಯಕರ್ತರನ್ನೋ ಕೇಳಿ.

೬. ಯಾವಾಗಲೂ ಔಷಧದ ಪ್ರಭಾವದ ಕೊನೆಯ ದಿನಾಂಕವನ್ನು ಪರಿಶೀಲಿಸಿ. (ಬಾಟಲಿ ಅಥವಾ ಸ್ಟ್ರಿಪ್ ಮೇಲೆ ಬರೆದಿರುತ್ತಾರೆ.)ಅದರ ವೇಳೆ ಮೀರಿದ್ದರೆ ಆ ಔಷಧ ನಿರುಪಯೋಗಿ ಅಷ್ಟೇ ಅಲ್ಲ, ಹಾನಿಕಾರಕವಾಗಬಹುದು.

ಎಷ್ಟೋ ಬಾರಿ ರೋಗವೇನಿಲ್ಲವೆಂದು ನಿಮಗೆ ಗೊತ್ತಿದ್ದರೂ ಔಷಧವನ್ನು ಕೊಡಲೇ ಬೇಕಾದ ಪ್ರಸಂಗ ಬರುತ್ತದೆ.  ಯಾಕೆಂದರೆ ರೋಗಿ ಅದನ್ನು ನಿರೀಕ್ಷಿಸುತ್ತಿರುತ್ತಾರೆ.   ಔಷಧ ಕೊಡುವವರೆಗೆ ಅವರು ತೃಪ್ತರಾಗುವುದಿಲ್ಲ. ಅಂಥ ಸಂದರ್ಭಗಳಲ್ಲಿ ಔಷಧ ಆಗ ಅದೆಷ್ಟು ಅನಗತ್ಯವೆಂದೂ ಅದರಿಂದ ಹಾನಿಯೇ ಆಗಬಹುದೆಂದೂ  ನೀವು ಅವರಿಗೆ ಸ್ಪಷ್ಟವಾಗಿ ತಿಳಿಸಿ ಹೇಳಬೇಕು.  ನಿಜವಾದ ಅವಶ್ಯಕತೆ ಇರುವವರೆಗೆ ಎಂದೂ ಔಷಧ ಕೊಡ ಹೋಗಬಾರದು.

ನಿಜವಾದ ಅವಶ್ಯಕತೆ ಇದ್ದಾಗ ಮತ್ತು ಅದರ ಬಳಕೆಯ ವಿಧಾನ ತಿಳಿದಿದ್ದಾಗ ಮಾತ್ರ ಔಷಧವನ್ನು ಕೊಡಿ.

ಔಷಧಗಳ ಅತಿ ಅಪಾಯಕಾರಿಯಾದ ದುರುಪಯೋಗ

ಔಷಧಗಳನ್ನು ಉಪಯೋಗಿಸುವಾಗ ಸಾಮಾನ್ಯವಾಗಿ ಜನರು ಮಾಡುವ ಕೆಲವು ಅಪಾಯಕಾರಿ ತಪ್ಪುಗಳ ಪಟ್ಟಿ ಕೆಳಗಿದೆ.  ಪ್ರತಿವರ್ಷ ರೀತಿ ಔಷಧಗಳ ದುರುಪಯೋಗದಿಂದ ಆಗುವ ಸಾವಿನ ಸಂಖ್ಯೆ ಬಹಳ.  ಆದ್ದರಿಂದ ಎಚ್ಚರವಾಗಿರಿ!

. ಕ್ಲೋರೋಂಫೆನಿಕಾಲ್ (೩೯೯ ನೇ ಪುಟ)

ಭೇದಿ ಮತ್ತು ಇತರ ಸಣ್ಣ ಕಾಯಿಲೆಗಳಿಗೆ ಈ ಔಷಧವನ್ನು   ತೀರಾ ಸಹಜವಾಗಿ ಉಪಯೋಗಿಸುತ್ತಿರುವುದು ದುರದೃಷ್ಟಕರ. ಅಲ್ಲದೇ ಅದರಿಂದ ಅಪಾಯ ಕೂಡ ಬಹಳ.  ಇದನ್ನು ಟೈಫಾಯಿಡ್‌ನಂಥ (೨೪೦ ನೇ ಪುಟ) ದೊಡ್ಡ ಕಾಯಿಲೆಗಳಿಗೆ ಮಾತ್ರ ಉಪಯೋಗಿಸಬೇಕು.  ಹಸುಗೂಸಿಗೆ ಈ ಮದ್ದನ್ನು ಕೊಡಲೇಬಾರದು.

. ಆಕ್ಸಿಟೋಸಿನ್ (ಪೈಟೋಸಿನ್), ಪಿಟ್ಯೂಟ್ರಿನ್, ಮತ್ತು ಎರ್ಗೋನೋವಿನ್ (೪೪೧ನೇ ಪುಟ)

ದುರ್ದೈವವೆಂದರೆ ಕೆಲವು ದಾದಿಯರು ಮತ್ತು ಡಾಕ್ಟರುಗಳೂ ಕೂಡ ಈ ಔಷಧವನ್ನು ಬೇಗ ಹೆರಿಗೆ ಆಗುವುದಕ್ಕೆ   ಸಹಾಯಕವಾಗಿ ಇಲ್ಲವೇ ಗರ್ಭಿಣಿಗೆ ಶಕ್ತಿ ಕೊಡಲು ಪ್ರಸವದ ವೇಳೆಯಲ್ಲಿ ಉಪಯೋಗಿಸುತ್ತಾರೆ. ಇದು ಅತ್ಯಂತ ಅಪಾಯಕಾರಿಯಾದ ಕೆಲಸ. ಇದರಿಂದ ತಾಯಿ ಮಗು ಇಬ್ಬರೂ ಸಾಯಬಹುದು. ಹೆರಿಗೆಯಾದ ನಂತರ ರಕ್ತಸ್ರಾವವನ್ನು ತಡೆಗಟ್ಟಲು ಮಾತ್ರ  ಔಷಧವನ್ನು ಉಪಯೋಗಿಸಬೇಕು.

.ಔಷಧಗಳ ಇಂಜೆಕ್ಷನ್

ಬಾಯಿಯಿಂದ ತೆಗೆದುಕೊಳ್ಳುವ ಔಷಧಕ್ಕಿಂತ ಇಂಜೆಕ್ಷನ್ ಬಹಳ ಒಳ್ಳೆಯದು ಎಂದು ಬಹಳಷ್ಟು ಜನರು ತಿಳಿದಿದ್ದಾರೆ. ಇದು ದೊಡ್ಡ ತಪ್ಪು.  ಹೆಚ್ಚಿನ ಬಾರಿ ಔಷಧಿಯು ಚುಚ್ಚುಮದ್ದಿನಷ್ಟೇ ಅಥವಾ ಅದಕ್ಕಿಂತ ಚೆನ್ನಾಗಿ ಕೆಲಸ ಮಾಡುತ್ತದೆ.  ಅಲ್ಲದೆ ಅನೇಕ ಔಷಧಗಳು ನುಂಗುವುದಕ್ಕಿಂತ ಚುಚ್ಚಿಸಿಕೊಂಡಾಗ ಹೆಚ್ಚು ಅಪಾಯ ಮಾಡುತ್ತವೆ.  ಆದ್ದರಿಂದ ಇಂಜೆಕ್ಷನ್‌ನ್ನು ಆದಷ್ಟು ಕಡಿಮೆ ಉಪಯೋಗಿಸಬೇಕು.

( ನೇ ಅಧ್ಯಾಯವನ್ನು ಗಮನವಿಟ್ಟು ಓದಿ.)

. ಪೆನಿಸಿಲಿನ್

ಈ ಔಷಧ ಕೆಲವು ವಿಧವಾದ ಸಾಂಕ್ರಾಮಿಕ ರೋಗಗಳಲ್ಲಿ ಮಾತ್ರ ಕೆಲಸ ಮಾಡುತ್ತದೆ.  ಆದ್ದರಿಂದ ಸಣ್ಣಗಾಯ, ಸಂದು ಉಳುಕಿದ್ದಕ್ಕೆ, ಕೀಲು ನೋವು ಅಥವಾ ಜ್ವರಕ್ಕೆ ಈ ಔಷಧದ ಬಳಕೆ ಬಹಳ ದೊಡ್ಡ ತಪ್ಪು.   ಯಾವುದೇ ಗಾಯ ಚರ್ಮದಿಂದ ಆಳಕ್ಕೆ ಇಳಿದಿಲ್ಲವೆಂದರೆ, ಅದು ಅಗಲವಾಗಿದ್ದರೂ ಕೂಡ ನಂಜಾಗುವ ಸಂಭವ ಬಹಳ ಕಡಿಮೆ.  ಅದಕ್ಕೆ ಪೆನ್ಸಿಲಿನ್ ಅಥವಾ ಇನ್ನಾವುದೇ ಜೀವಿರೋಧಕಗಳನ್ನು ಚುಚ್ಚಿಸಿಕೊಳ್ಳುವ ಅಗತ್ಯ ಇಲ್ಲ.

ಕೆಲವರಿಗೆ ಪೆನ್ಸಿಲಿನ್ ಅತ್ಯಂತ ಅಪಾಯಕಾರಿಇದನ್ನು ಉಪಯೋಗಿಸುವ ಮೊದಲು ಇದರಿಂದಾಗಬಹುದಾದ ತೊಂದರೆಗಳು ಮತ್ತು ಮುನ್ನೆಚ್ಚರಿಕೆ ಕ್ರಮಗಳನ್ನು ತಿಳಿದಿರಲೇ ಬೇಕು.

. ಪೆನಿಸಿಲಿನ್ ಜೊತೆ ಸ್ಟ್ರೆಪ್ಟೋಮೈಸಿನ್ ಇಂಜೆಕ್ಷನ್                           

ಈ ಔಷಧಗಳ ದುರುಪಯೋಗ ಬಹಳವಾಗಿದ್ದು ಮಕ್ಕಳಲ್ಲಿ ಅತಿ ಸಾಮಾನ್ಯ ನೆಗಡಿ, ಶೀತಕ್ಕೆ ಕೂಡ ಇದನ್ನು ಬಳಸುವ ರೂಢಿ ಹೆಚ್ಚಿದೆ.  ಲಕ್ಷಾಂತರ ಮಕ್ಕಳಲ್ಲಿ ಇದು ಕಿವುಡುತನವನ್ನುಂಟುಮಾಡಿದೆ.   ನೆಗಡಿ ಶೀತಕ್ಕೆ ಇದು ಔಷಧ ಅಲ್ಲವೇ ಅಲ್ಲ. ಇದರ ಬಳಕೆ ಜಾಸ್ತಿಯಾಗುತ್ತಿರುವುದರಿಂದಾಗಿ ಈಗ ಕ್ಷಯದಂಥ ದೊಡ್ಡ ಕಾಯಿಲೆಗಳನ್ನು ವಾಸಿ ಮಾಡುವುದು ಕಷ್ಟವಾಗಿದೆ.  ಕಾರಣ ಕ್ಷಯರೋಗಕ್ಕಾಗಿ ಮಾತ್ರ ಸ್ಟ್ರೆಪ್ಟೋಮೈಸಿನ್ ನ್ನು ಉಪಯೋಗಿಸಿ.

. ಭೇದಿಗೆ ಔಷಧಗಳಾಗಿ ಕ್ಲಿಯೋಕ್ವಿನಾಲ್, ಡಿಅಯೊಡೋಹೈಡ್ರಾಕ್ಸಿಕ್ಲಿಯೋಕ್ವಿನಾಲ್ ಹಾಲ್ಕ್ವಿನಾಲ್, ಬ್ರಾಕ್ಸಿಕ್ವಿನೋಲೀನ್, ಡೊಯೋಡೋಕ್ವೀನ್, ಎಂಟೆರೋಕ್ವಿನಾಲ್, ಅಮಿಕ್ಲೀನ್, ಕ್ವೋಜೈಲ್ ಮುಂತಾದವು.                                                           

ಭೇದಿಗೆ ಕ್ಲಿಯೋಕ್ವಿನಾಲ್ ಔಷಧವನ್ನು ಬಹಳವಾಗಿ ಉಪಯೋಗಿಸುತ್ತಿದ್ದರು.  ಆದರೆ ಅದರಿಂದ  ಬಹಳ ಅಪಾಯ ಕಂಡುಬಂದಿದ್ದರಿಂದ ಅನೇಕ ದೇಶಗಳಲ್ಲಿ ಅದನ್ನು ನಿಷೇದಿಸಲಾಗಿದೆ.  ಆದರೂ ಅದರ ಬೇರೆ ಬೇರೆ ಸಂಯುಕ್ತಗಳು ಇನ್ನೂ ನಮ್ಮ ಮಾರುಕಟ್ಟೆಯಲ್ಲಿವೆ.  ಈ ಔಷಧಗಳು ಶಾಶ್ವತ ಪಾರ್ಶ್ವವಾಯು, ಕುರುಡತನ, ಜೀವಕ್ಕೆ ಗಂಡಾಂತರವನ್ನು ಕೂಡ ತರಬಹುದು.  ಭೇದಿಯ ಚಿಕಿತ್ಸೆಗೆ ೧೩ ನೇ ಅಧ್ಯಾಯ ನೋಡಿ.

. ಕಾರ್ಟಿಸೋನ್ ಮತ್ತು ಕಾರ್ಟಿಕೋಸ್ಟಿರಾಯಿಡ್ಗಳು (ಪ್ರೆಡ್ನಿಸಿಲೋನ್ ಮತ್ತು ಡೆಕ್ಸಾಮೆಥಾಸೋನ್)

ಇವು ಬಹಳ ಶಕ್ತಿಯತವಾದ  ಔಷಧಗಳು.  ಅಸ್ತಮಾ, ಸಂದುನೋವು ಮತ್ತು ಅಲರ್ಜಿ ಪ್ರತಿಕ್ರಿಯೆಗಳು ಬಹಳ ತೀವ್ರವಾಗಿ ಕಾಣಿಸಿಕೊಂಡಾಗ ಮಾತ್ರ ಉಪಯೋಗಿಸಬೇಕಾದ ಔಷಧಗಳಿವು.   ಆದರೆ ಇವು ಥಟ್ಟನೆ ನೋವು ದೂರ ಮಾಡುವುದರಿಂದ ಅನೇಕ ದೇಶಗಳಲ್ಲಿ ಇವನ್ನು ತೀರಾ ಸಾಮಾನ್ಯವಾದ ನೋವುಗಳಿಗೂ ಕೊಡಲಾಗುತ್ತಿದೆ.  ಇದು ಬಲು ದೊಡ್ಡ ತಪ್ಪು.  ಇವನ್ನು ಹೆಚ್ಚಿನ ಪ್ರಮಾಣದಲ್ಲಿ  ಹೆಚ್ಚು ಕಾಲ ಉಪಯೋಗಿಸಿದರೆ ತೀವ್ರ ಅಪಾಯ ಉಂಟುಮಾಡಬಹುದು.   ಮನುಷ್ಯನ ದೇಹದಲ್ಲಿಯ ರೋಗ ಪ್ರತಿರೋಧಕ ಶಕ್ತಿಯನ್ನೇ ಇವು ನಾಶಮಾಡಬಲ್ಲವು.  ಕ್ಷಯವಿದ್ದರೆ ಜಾಸ್ತಿ ಆಗಬಹುದು, ಹೊಟ್ಟೆಯಲ್ಲಿ ಹಣ್ಣು ಇದ್ದರೆ ರಕ್ತಸ್ರಾವವಾಗುವಂತೆ ಮಾಡಬಹುದು. ಎಲುಬುಗಳು ತೀರಾ ಅಶಕ್ತವಾಗಿ ಮುರಿದುಹೋಗುವಂತೆ ಕೂಡ ಮಾಡಬಲ್ಲವು.  ಅಷ್ಟು ಅಪಾಯಕಾರಿ ಔಷಧಗಳಿವು.

. ಎನಾಬೋಲಿಕ್ ಸ್ಟಿರಾಯಿಡ್ಗಳು ( ನಾಂಡ್ರೋಲೋನ್ ಡಿಕಾನೋಟಡಿಕಡ್ಯುರಾಬೋಲಿನ್, ಓರಾಬೋಲಿನ್ಸ್ಟಾನೋಜೋಲೋಲ್, ಸೆಟಾಬೋನ್, ಆಕ್ಸಿಮೆಥಾಲೋನ್, ಅನಾಪೊಲೋನ್, ಈಥೈಲ್ ಎಸ್ಟ್ರೆನೋಲ್, ಒರ್ಗಾನಾಬೋರಾಲ್, ಇನ್ನೂ ಅನೇಕ ಬ್ರಾಂಡುಗಳು ಇವೆ.)

ಅನಾಬೋಲಿಕ್ ಸ್ಟಿರಾಯಿಡ್‌ಗಳನ್ನು ಗಂಡಸಿನ ಹಾರ್ಮೋನುಗಳಿಂದ ತಯಾರಿಸಲಾಗಿದೆ. ಆದರೆ ಮಕ್ಕಳಿಗೆ ತೂಕ ಹೆಚ್ಚಿಸಿಕೊಳ್ಳಲು ಮತ್ತು ಬೆಳವಣಿಗೆಗಾಗಿ ಇದನ್ನು ತಪ್ಪಾಗಿ ಕೊಡಲಾಗುತ್ತದೆ.  ಮೊದಮೊದಲು ಮಗು ಚೆನ್ನಾಗಿ ಬೆಳೆದಂತೆ ಕಾಣಿಸುತ್ತದೆ. ಆದರೆ ಕೆಲಕಾಲದ ನಂತರ ಆ ಬೆಳವಣಿಗೆ ನಿಂತುಹೋಗಿ ಮಗು ಸ್ಟಿರಾಯಿಡ್ ಕೊಡದೆ ಇದ್ದರೆ ಎಷ್ಟು ಎತ್ತರ ಬೆಳೆಯುತ್ತಿತ್ತೋ ಅದಕ್ಕೂ ಕಡಿಮೆ ಎತ್ತರಕ್ಕೇ ಬೆಳವಣಿಗೆ ನಿಂತುಬಿಡುತ್ತದೆ.   ಜೊತೆಗೆ ಇದರ ಅಡ್ಡ ಪರಿಣಾಮಗಳೂ  ಬಹಳ ಇವೆ.  ಹೆಣ್ಣುಮಕ್ಕಳಿಗೆ  ಕೊಟ್ಟರೆ ಅವರಿಗೆ  ಗಂಡಸರಂತೆ  ಗಡ್ಡ ಮೀಸೆಗಳು ಬೆಳೆಯತೊಡಗುತ್ತವೆ. ಎಂದೂ ಬೆಳವಣಿಗೆಗಾಗಿ  ಮಕ್ಕಳಿಗೆ ಔಷಧ ಕೊಡಬೇಡಿ. ಅದೇ ಹಣವನ್ನು ಒಳ್ಳೆಯ ಆಹಾರ ವಸ್ತುಗಳನ್ನು ಖರೀದಿಸಲು ಉಪಯೋಗಿಸಿ.

. ಸಂದುನೋವಿನ ಔಷಧಗಳು (ಬ್ಯುಟಾಝೋನ್ಗಳು, ಆಕ್ಸಿಫೆನ್ಬ್ಯುಟಾಝೋನ್, ಅಮಿಡೋಝೋನ್, ಫಿನೈಲ್ಬ್ಯುಟಾಝೋನ್, ಬ್ಯುಟಾಝೊಲಿಡಿನ್)

ಈ ಔಷಧಗಳು ಕೆಲವೊಮ್ಮೆ ಅತ್ಯಂತ ಅಪಾಯಕಾರಿಯಾದ ರಕ್ತದ ರೋಗಗಳಿಗೆ ಕಾರಣವಾಗಬಹುದು.  ಹಾಗೆಯೇ ಹೊಟ್ಟೆ, ಪಿತ್ಥಕೋಶ, ಮೂತ್ರಕೋಶಗಳನ್ನು ನಾಶಮಾಡಬಹುದು. ಇಂಥ ಅಪಾಯಕಾರಿ ಔಷಧಗಳನ್ನು ಎಂದೂ ಉಪಯೋಗಿಸಬೇಡಿ.  ಸಂದುನೋವಿಗೆ ಆಸ್ಪಿರಿನ್, ಇಬುಪ್ರುಫೇನ್‌ನಂಥ ಔಷಧಗಳು ಸುಲಭ ಬೆಲೆಯವು ಮತ್ತು ನಿರಪಾಯಕಾರಿ ಕೂಡ.

೧೦. ಬಿ೧೨ ಜೀವಸತ್ವ ಮತ್ತು ಯಕೃತ್ ಸಾರ (೪೪೩ ನೇ ಪುಟ ನೋಡಿ)

ರಕ್ತಹೀನತೆಯಾಗಿದ್ದಾಗ ಔಷಧವೆಂದು ಈ ಔಷಧ ಸಂಯುಕ್ತವನ್ನು ಡಾಕ್ಟರರು ಕೊಡುತ್ತಾರೆ. ಆದರೆ ಈ     ಔಷಧದಿಂದ ರಕ್ತಹೀನತೆಯೂ ವಾಸಿಯಾಗುವುದಿಲ್ಲ, ನಿಶ್ಯಕ್ತಿಯೂ ಹೋಗುವುದಿಲ್ಲ. ಇಂಜೆಕ್ಷನ್ ಕೊಟ್ಟರಂತೂ ತೊಂದರೆಯೇ ಇದೆ.  ರಕ್ತ ಹೀನತೆಗೆ ಕಬ್ಬಿಣಾಂಶದ ಮಾತ್ರೆಗಳು  ಹೆಚ್ಚು ಉಪಯುಕ್ತ.

೧೧. ಬೇರೆ ಜೀವಸತ್ವಗಳು: (೪೪೩ ನೇ ಪುಟ ನೋಡಿ)

ಜೀವಸತ್ವಗಳ ಇಂಜೆಕ್ಷನ್‌ನ್ನು ಎಂದೂ ಕೊಡಲೇಬಾರದು. ಯಾವುದೇ ಇಂಜೆಕ್ಷನ್ನು ಮಾತ್ರೆಗಿಂತ ಹೆಚ್ಚು ಸಹಕಾರಿ ಅಲ್ಲವೇ ಅಲ್ಲ.  ಬದಲಿಗೆ ಅವು ಹೆಚ್ಚು ದುಬಾರಿ, ಮತ್ತು ಹೆಚ್ಚು ಅಪಾಯಕಾರಿ ಆಗಬಲ್ಲವು.

ಬಹಳ ಜನರು ವಿಟಮಿನ್ ಸಿರಪ್, ಮತ್ತು ಶಕ್ತಿವರ್ಧಕ ಟಾನಿಕ್ಕುಗಳಿಗಾಗಿ ಹಣವನ್ನು ನೀರಿನಂತೆ ಖರ್ಚು ಮಾಡುವುದು ಅತ್ಯಂತ ವಿಷಾದಕರ ಸಂಗತಿ. ಹೆಚ್ಚಿನ ಬಾರಿ ಇವುಗಳಲ್ಲಿ ಇರಬೇಕಾದ ವಿಟಮಿನ್ನುಗಳು  ಇರುವುದೇ ಇಲ್ಲ.  ಇದ್ದರೂ ಸಹ ಒಳ್ಳೆಯ ಆಹಾರ ಪದಾರ್ಥಗಳು ಈ ಔಷಧಗಳಿಗಿಂತಲೂ ಹೆಚ್ಚು ಉತ್ತಮ.  ಮೊಟ್ಟೆ, ಮಾಂಸ, ಹಣ್ಣು, ತರಕಾರಿ, ಸೊಪ್ಪು, ಕಾಳು ಮುಂತಾದವುಗಳಲ್ಲಿ ಬಹಳವಾಗಿ ವಿಟಮಿನ್ ಮತ್ತು ಪುಷ್ಟಿದಾಯಕ ಅಂಶಗಳಿರುವುದಲ್ಲದೇ ದೇಹದ ಬೆಳವಣಿಗೆ ಹಾಗೂ ಕಾಯಿಲೆಗಳ ರಕ್ಷಣೆಯಲ್ಲಿ ಇವು ಪ್ರಮುಖ ಪಾತ್ರ ವಹಿಸುತ್ತವೆ. ವಿಟಮಿನ್ ಮಾತ್ರೆಗಳಿಗಿಂತ ಪೌಷ್ಟಿಕ ಆಹಾರ ಕೊಡುವುದರಿಂದ ದೇಹದ ಬೆಳವಣಿಗೆ ಚೆನ್ನಾಗಿ ಆಗುತ್ತದೆ.  (೧೩೭-೧೬೩ ನೇ ಪುಟಗಳನ್ನು ನೋಡಿ.)

ಚೆನ್ನಾಗಿ ಉಣ್ಣುವವರಿಗೆ ವಿಟಮಿನ್ ಇಂಜೆಕ್ಷನ್ಗಳ ಅವಶ್ಯಕತೆ ಇಲ್ಲ.                       

ವಿಟಮಿನ್ ಪೂರೈಕೆಗೆ ಉತ್ತಮ ದಾರಿ

ವಿಟಮಿನ್‌ಗಳ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ೧೧ ನೇ ಅಧ್ಯಾಯದಲ್ಲಿ ೧೪೨ ರಿಂದ ೧೪೬ ನೇ ಪುಟಗಳನ್ನು ನೋಡಿ.

೧೨. ಔಷಧಗಳ ಸಂಯುಕ್ತಗಳು

ಎಷ್ಟೋ ಬಾರಿ ಒಂದೇ ಗುಳಿಗೆ ಅಥವಾ ಟಾನಿಕ್ಕಿನೊಳಗೆ ಬೇರೆ ಬೇರೆ ಔಷಧಗಳನ್ನು ಕೂಡಿಸಿರುತ್ತಾರೆ.   ಹೀಗೆ ಮಾಡಿದಾಗ ಅವುಗಳ ಪರಿಣಾಮ ಕಡಿಮೆಯಾಗುತ್ತದೆ.  ಆದರೆ ಬೆಲೆ ಜಾಸ್ತಿಯಾಗುತ್ತದೆ.  ಅವುಗಳಿಂದ ಒಳ್ಳೆಯದಕ್ಕಿಂತ ಹಾನಿಯಾಗುವುದೇ ಹೆಚ್ಚು.  ನೀವು ಡಾಕ್ಟರರ ಬಳಿಗೆ ಹೋದಾಗ ಅವರು ಇಂಥ ಸಂಯುಕ್ತ ಔಷಧಿಗಳನ್ನು ಬರೆಯಲು ಹೋದರೆ ಬೇಡವೆಂದು ಹೇಳಿ, ಕೇವಲ ಅತಿ ಅವಶ್ಯವಿರುವ ಔಷಧವನ್ನು ಮಾತ್ರ ಬರೆಯಲು ಕೇಳಿಕೊಳ್ಳಿ.

ನೀವು ತೆಗೆದುಕೊಳ್ಳಲೇ ಬಾರದ ಕೆಲವು ಸಂಯುಕ್ತ ಔಷಧಗಳು:

. ಕೆಮ್ಮಿನ ಔಷಧಿಯಲ್ಲಿ ಕೆಮ್ಮನ್ನು ನಿವಾರಿಸುವ ಮತ್ತು ಕಫವನ್ನು ಹೊರಹಾಕುವ ಎರಡೂ ಔಷಧಗಳು ಇದ್ದರೆ ತೆಗೆದುಕೊಳ್ಳಬಾರದು. (ಕೆಮ್ಮಿನ ಔಷಧಗಳು ಯಾವಾಗಲೂ ಅನವಶ್ಯಕವೇ. ಕೇವಲ ದುಡ್ಡು ದಂಡಕ್ಕೆ ಹೊರತು ಅವುಗಳಿಂದ ಏನೇನೂ ಪ್ರಯೋಜನವಿಲ್ಲ.)

. ಎರಡು ನೋವು ನಿವಾರಕಗಳು ಬೆರೆತಿದ್ದರೆ (ಉದಾಹರಣೆಗೆ ಪ್ಯಾರಾಸಿಟಮಾಲ್ ಮತ್ತು ಇಬುಪ್ರುಫೆನ್)

. ಕ್ಯಾಲ್ಸಿಯಂ; ರಕ್ತನಾಳದೊಳಗೆ ಕ್ಯಾಲ್ಸಿಯಂನ ಇಂಜೆಕ್ಷನ್ ಕೊಡುವುದು ಅತ್ಯಂತ ಅಪಾಯಕಾರಿಯಾದದ್ದು. ಅದನ್ನು ಎಂದಿಗೂ ತೆಗೆದುಕೊಳ್ಳಬೇಡಿ.  ರೋಗಿಗೆ ಅದು ತೀವ್ರ ಗಂಡಾಂತರಕಾರಿಯಾಗಬಹುದು. ಕುಂಡೆಯ ಮೇಲೆ ಕ್ಯಾಲ್ಸಿಯಂನ ಇಂಜೆಕ್ಷನ್ ಕೊಟ್ಟರೆ ಅಲ್ಲಿ ಹುಣ್ಣು ಆಗುವ ಸಾಧ್ಯತೆ ಇದೆ.

ಎಂದೂ ಕ್ಯಾಲ್ಸಿಯಂ ಇಂಜೆಕ್ಷನ್ ಕೊಡಲೇ ಬೇಡಿ.

ಕ್ಯಾಲ್ಸಿಯಂನ್ನು ಔಷಧ ರೂಪದಲ್ಲಿ ತೆಗೆದಕೊಳ್ಳುವುದಕ್ಕಿಂತ ಹಸಿರು ಪಲ್ಲೆಗಳನ್ನು, ಗೆಣಸು, ರಾಗಿ, ಹಾಲು, ಬೆಣ್ಣೆಗಳನ್ನು ಸೇವಿಸುವುದು ಎಷ್ಟೋ ಕ್ಷೇಮಕರ ಮತ್ತು ಆರೋಗ್ಯದಾಯಕ ಕೂಡ.

೪. ರಕ್ತನಾಳಗಳ ಮೂಲಕ ಆಹಾರ ಕೊಡುವುದು

ಕೆಲವೊಮ್ಮೆ ಅತಿಯಾದ ರಕ್ತ ಹೀನತೆ, ನಿಶ್ಯಕಿಯಿಂದ ಬಳಲುತ್ತಿರುವ ಜನರು ತಮ್ಮ ಬಳಿ ಇರುವ ಕಟ್ಟಕಡೆಯ ಪೈಸೆಯನ್ನೂ ಒಂದು ಬಾಟ್ಲಿ ಗ್ಲುಕೋಸ್ ನೀರನ್ನು  ದೇಹದೊಳಕ್ಕೆ ಹಾಕಿಸಿಕೊಳ್ಳಲು ಹಾತೊರೆಯುತ್ತಿರುತ್ತಾರೆ.  ಹಾಗೆ ಮಾಡುವುದರಿಂದ ತಮ್ಮ ರಕ್ತ ಹೆಚ್ಚು ಚೆನ್ನಾಗಿ ಆಗಿ ತಾವು ಹೆಚ್ಚು ಶಕ್ತಿ ಪಡೆಯುತ್ತೇವೆಂದು ಅವರು ಭಾವಿಸುತ್ತಾರೆ.  ಆದರದು ತೀರಾ ತಪ್ಪು ತಿಳುವಳಿಕೆ.

ರಕ್ತನಾಳದೊಳಗೆ ಇಳಿಬಿಡುವ ಈ ಬಾಟ್ಲಿಯ ದ್ರವ ಬರಿಯ ನೀರಲ್ಲದೆ ಇನ್ನೇನೂ ಅಲ್ಲ. ಹೆಚ್ಚೆಂದರೆ ಸ್ವಲ್ಪ ಸಕ್ಕರೆ ಮತ್ತು ಉಪ್ಪು ಅದರಲ್ಲಿರಬಹುದು.  ಒಂದು ಐಸ್‌ಕ್ಯಾಂಡಿ ತಿಂದಷ್ಟೂ ಶಕ್ತಿ ಅದರಿಂದ ಬರುವುದಿಲ್ಲ. ರಕ್ತಹೀನತೆಗಾಗಲೀ,  ಅಶಕ್ತನಿಗೆ ಶಕ್ತಿ ಕೊಡುವಂಥದ್ದಾಗಲೀ, ಏನೇನೂ ಮಾಡುವುದಿಲ್ಲ ಇದು.  ಅಷ್ಟೇ ಅಲ್ಲ, ರಕ್ತನಾಳವನ್ನು ಚುಚ್ಚಿ ಅದರೊಳಗೆ ಔಷಧವನ್ನು ಹರಿಯ ಬಿಡುವುದಕ್ಕೂ ನಿಪುಣತೆ ಬೇಕು. ಸರಿಯಾಗಿ ತರಬೇತಿ ಇಲ್ಲದವರು ತಮಗೆ ತಿಳಿದಂತೆ ಮಾಡಹೋಗಿ ದೇಹದೊಳಗೆ ಶಕ್ತಿಯ ಬದಲು ಸೋಂಕು ಸೇರಿಸಬಹುದು.  ಮೊದಲೇ ಅಶಕ್ತನಾದವನನ್ನು ಇದು ಕೊಲ್ಲಲೂಬಹುದು.

ಬಾಯಿಯಿಂದ ಏನನ್ನೂ ತೆಗೆದುಕೊಳ್ಳಲು ಸಾಧ್ಯವಿಲ್ಲದಾಗ ಅಥವಾ ಅತೀವ ನಿರ್ಜಲೀಕರಣ ಆಗಿದೆಯೆಂದಾಗ ಮಾತ್ರವೇ ರಕ್ತನಾಳಗಳ ಮೂಲಕ ಇಂಜೆಕ್ಷನ್ ಕೊಟ್ಟು ದ್ರವಾಹಾರವನ್ನು ದೇಹದೊಳಕ್ಕೆ ಹಾಕಬಹುದು.

ಚೆನ್ನಾಗಿ ತರಬೇತಿ ಆಗಿರುವ ಆರೋಗ್ಯ ಕಾರ್ಯಕರ್ತ ಮಾತ್ರ ರಕ್ತನಾಳಗಳ ಮೂಲಕ ದ್ರವಾಹಾರವನ್ನು ಕೊಡಬಹುದು. ಬಹಳ ನಿಶ್ಯಕ್ತಿಗೊಂಡ ರೋಗಿಗೆ ನುಂಗಲು ಸಾಧ್ಯವಾಗುತ್ತಿದ್ದಲ್ಲಿ ಒಂದು ಲೀಟರ್ ನೀರಿಗೆ ನಾಲ್ಕು ಬೆರಳಿನಲ್ಲಿ ಬರುವಷ್ಟು ಸಕ್ಕರೆ ಮತ್ತು ಮೂರು ಚಿಟಿಕೆ ಉಪ್ಪು ಹಾಕಿ ಕರಗಿಸಿ ಕುಡಿಯಲು ಕೊಡಿ.  ಇದು ಒಂದು ಲೀಟರ್ ಗ್ಲುಕೋಸ್ ಬಾಟ್ಲಿ ಹಚ್ಚಿದಷ್ಟೇ ಶಕ್ತಿ ಕೊಡುವುದು.

ತಿನ್ನಲು ಶಕ್ತಿ ಇರುವ ಯಾರಿಗೇ ಆಗಲಿ ಒಳ್ಳೆಯ ಊಟವು ಯಾವುದೇ ಗ್ಲುಕೋಸ್ ಬಾಟಲಿಗಿಂತ ಹೆಚ್ಚು ಒಳ್ಳೆಯದು ಮಾಡುವುದು.

ರೋಗಿಗೆ ನುಂಗಲು ಸಾಧ್ಯವಾಗುತ್ತಿದ್ದರೆ ದ್ರವಾಹಾರವನ್ನು ಕುಡಿಯಲಿ.

. ರೇಚಕಗಳು  (೫೧೬ ನೇ ಪುಟ)

ರೇಚಕಗಳನ್ನು ಕೊಟ್ಟು ಹೊಟ್ಟೆಯಲ್ಲಿರುವುದನ್ನೆಲ್ಲ ಒಮ್ಮೆ ಹೊರ ಹಾಕಿಬಿಟ್ಟರೆ ಹೊಲಸೆಲ್ಲ ಹೊರ ಹೋಗಿ ಮನುಷ್ಯನು ಆರೋಗ್ಯವಂತನಾಗುತ್ತಾನೆ ಎನ್ನುವ ನಂಬಿಕೆ ಬಹಳ ಜನರಲ್ಲಿ ಇದೆ.   ಆದರೆ ತೀವ್ರ ಹೊಟ್ಟೆ ನೋವಿದ್ದವರಿಗೆ, ಅತೀ ಅಶಕ್ತರಾಗಿರುವವರಿಗೆ, ಮಗುವಿಗೆ,  ಎಂದಿಗೂ ಮಲವನ್ನು ಹೊರಹಾಕಲು ರೇಚಕಗಳನ್ನು ಕೊಡಬೇಡಿ.  ಮೊದಲನೇ ಅಧ್ಯಾಯದಲ್ಲಿಯೇ ರೇಚಕ, ಸುಖವಿರೇಚಕಗಳ ಬಗ್ಗೆ ವಿವರವಾಗಿ ಕೊಟ್ಟಿದೆ.

ಔಷಧ ತೆಗೆದುಕೊಳ್ಳುತ್ತಿರುವಾಗ ಏನೇನು ಉಣ್ಣಬಹುದು?

ಔಷಧ ತೆಗೆದುಕೊಳ್ಳುವ ರೋಗಿಗಳು ಬದನೆಕಾಯಿ, ಟೊಮೆಟೋ, ಮೊಸರು, ಕಿತ್ತಳೆ ಹಣ್ಣು, ತತ್ತಿ, ಪೇರಲೆ ಹಣ್ಣು, ಎಣ್ಣೆ, ಮಾಂಸ ಮುಂತಾದ ಕೆಲವು ಆಹಾರ ಪದಾರ್ಥಗಳನ್ನು ತೆಗೆದುಕೊಳ್ಳಬಾರದೆಂದು ನಂಬುತ್ತಾರೆ. ಇವನ್ನು ತೆಗೆದುಕೊಂಡರೆ ಔಷಧ ಕೆಲಸ ಮಾಡುವುದಿಲ್ಲವೆಂದು ಅವರು ತಿಳಿಯುತ್ತಾರೆ. ಇದು ಸತ್ಯವಲ್ಲ.  ಈ ಆಹಾರವನ್ನು ತಿನ್ನುವುದರಿಂದ ಔಷಧ ಎನೇನೂ ಕೆಡಕು ಮಾಡುವುದಿಲ್ಲ.  ಕೆಲವು ಔಷಧದೊಂದಿಗೆ ಶೆರೆ ಕುಡಿದರೆ ಮಾತ್ರ ಅಪಾಯವಾಗಬಹುದು.

ಯಾವಾಗ ಔಷಧ ತೆಗೆದುಕೊಳ್ಳಬಾರದು?

ಕೆಲವು ಸಂದರ್ಭಗಳಲ್ಲಿ ಔಷಧವನ್ನು ತೆಗೆದುಕೊಳ್ಳದಿರುವುದು ಕ್ಷೇಮಕರ.

೧. ಬಸುರಿ ಹೆಂಗಸರು, ಮೊಲೆಯೂಡುವ ತಾಯಂದಿರು ಯಾವುದೇ ಔಷಧವನ್ನು ತೆಗೆದುಕೊಳ್ಳಬಾರದು.  ಆದರೆ ವಿಟಮಿನ್ ಮತ್ತು ಕಬ್ಬಿಣಾಂಶದ ಮಾತ್ರೆಗಳನ್ನು ಮಾತ್ರ ಯಾವುದೇ ತೊಂದರೆ ಇಲ್ಲದೆ ಸೇವಿಸಬಹುದು.

೨. ಮಗು ತುಂಬ ಎಳೆಯದಿರುವಾಗ ಔಷಧ ಕೊಡುವುದರ ಬಗ್ಗೆ ಎಚ್ಚರ ವಹಿಸಬೇಕು.  ಸಾಧ್ಯವಾದಾಗಲೆಲ್ಲ ವೈದ್ಯರ ಸಲಹೆ ಪಡೆಯಬೇಕು. ಜಾಸ್ತಿ ಪ್ರಮಾಣದ ಔಷಧವನ್ನಂತೂ ಕೊಡಲೇಬಾರದು.

೩. ಕೆಲವರಿಗೆ ಕೆಲವು ಔಷಧ ತೆಗೆದುಕೊಂಡರೆ ನಂತರ ದೇಹದಲ್ಲಿ  ಉರಿ, ಕಡಿತ ಮತ್ತು ಕೆಂಪು ಗುಳ್ಳೆ ಬರಬಹುದು. ಉದಾ: ಪೆನಿಸಿಲಿನ್, ಎಂಪಿಸಿಲಿನ್, ಸಲ್ಫ ಮುಂತಾದವುಗಳು.  ಇಂತಹ ಔಷಧಗಳನ್ನು ಅವರು ಜೀವನ ಪೂರ್ತಿ ತೆಗೆದುಕೊಳ್ಳಬಾರದು. ಏಕೆಂದರೆ ಇದರಿಂದ ತುಂಬ ತೊಂದರೆಯಾಗುವುದಲ್ಲದೆ ಸಾವು ಕೂಡ ಬರಬಹುದು.

೪. ಕೆಲವು ಕಾಯಿಲೆಗಳಲ್ಲಿ ಕೆಲವು ಔಷಧಗಳನ್ನು ಸೇವಿಸಬಾರದು. ಉದಾ: ಕಾಮಾಲೆ ರೋಗಿಗಳಿಗೆ ಜೀವಿರೋಧಕಗಳಂಥ  ಶಕ್ತಿಯುತ ಔಷಧವನ್ನು ಕೊಡಲೇಬಾರದು.  ಏಕೆಂದರೆ ಈ ರೋಗಿಗಳಲ್ಲಿ ಯಕೃತ್ತು ನಿಶ್ಯಕ್ತವಾಗಿರುತ್ತದೆ.  ಆಗ ಈ ಔಷಧಗಳು ದೇಹದಲ್ಲಿ ವಿಷವನ್ನು ಹರಡುತ್ತವೆ.

೫. ಜಠರದ ಹುಣ್ಣು, ಎದೆ ಉರಿ, ಇರುವಂಥವರು ಆಸ್ಪಿರಿನ್ ಮುಂತಾದ ಔಷಧಗಳನ್ನು ಸೇವಿಸಲೇಬಾರದು.

೫. ವಾಂತಿ ಭೇದಿಯಿಂದ ತುಂಬ ನಿತ್ರಾಣನಾಗಿರುವ ಮತ್ತು ಮೂತ್ರಜನಕಾಂಗದ ಕಾಯಿಲೆ ಇರುವ ರೋಗಿಗಳು ಔಷಧ ಸೇವಿಸುವಾಗ ತುಂಬ ಎಚ್ಚರಿಕೆ ವಹಿಸಬೇಕು.  ಈ ರೋಗಿಗಳಿಗೆ ಮೂತ್ರ ಸರಿಯಾಗಿ ಆಗುತ್ತಿದ್ದರೆ ಮಾತ್ರ ಪೂರ್ಣ ಪ್ರಮಾಣದ ಔಷಧ ಕೊಡಬೇಕು.  ಇಲ್ಲದಿದ್ದರೆ ಒಂದು ಬಾರಿ ಮಾತ್ರ ಕೊಡಬೇಕು. ಏಕೆಂದರೆ ಈ ಔಷಧಗಳಲ್ಲಿ ಕೆಲವು ವಿಷವಾಗಿ ದೇಹದಲ್ಲಿ ಹರಡಬಹುದು.  ಉದಾ: ಒಂದು ಮಗು ಅತಿಯಾದ ಜ್ವರದಿಂದ ಬಳಲುತ್ತಿದ್ದರೆ ಮತ್ತು ದೇಹದಲ್ಲಿ ವಾಂತಿ ಭೇದಿಯಿಂದಾಗಿ ನೀರಿನಂಶ ಕಡಿಮೆಯಾಗಿದ್ದರೆ ಜ್ವರದ ಮದ್ದನ್ನು ಒಂದು ಬಾರಿ ಮಾತ್ರ ಕೊಡಬೇಕು.   ಮೂತ್ರ ಆದ ನಂತರ ಮತ್ತೆ ಕೊಡಬಹುದು.

* * *