೧೮. ಮೌಲ್ಯಮಾಪನ:

ಕೆಲಸ ಹೇಗೆ ಸಾಗುತ್ತಿದೆಯೆಂಬುದರ ಪರಿಶೀಲನೆ.

ಈ ಕೆಲಸ ಮಾಡುತ್ತಿರುವಾಗ ಆಗಾಗ್ಗೆ ಎಷ್ಟು ಕೆಲಸ ಆಯಿತು, ಏನು ಕೆಲಸ ಆಯಿತು, ಸಮುದಾಯದ ಆರೋಗ್ಯ ದೃಷ್ಟಿಯಿಂದ ಹಳ್ಳಿಯಲ್ಲಿ ಯಾವುದೇ ಬದಲಾವಣೆ ಆಗಿದೆಯೇ? ಎನ್ನುವುದನ್ನೆಲ್ಲ ಪರಿಶೀಲಿಸುತ್ತಿರಬೇಕಾಗುತ್ತದೆ.

ತಿಂಗಳಿಗೊಮ್ಮೆ ಅಥವಾ ವರ್ಷಕ್ಕೊಮ್ಮೆ ಯಾವ ಯಾವ ಆರೋಗ್ಯ ಕಾರ್ಯಕ್ರಮಗಳಾದುವು ಎಂಬುದರ ವರದಿ ಇಡಬಹುದು. ಉದಾ;

 • ಹಳ್ಳಿಯಲ್ಲಿ ಎಷ್ಟು ಕುಟುಂಬಗಳವರು ಸಂಡಾಸು ಕಟ್ಟಿದ್ದಾರೆ?
 • ಎಷ್ಟು ರೈತರು ಬೆಳೆ ಹೆಚ್ಚಿಸಲು ಹೊಸಕ್ರಮಗಳನ್ನು ಕೈಗೊಂಡಿದ್ದಾರೆ?
 • ಐದು ವರ್ಷದೊಳಗಿನ ಮಕ್ಕಳ ನಿಯತಕಾಲಿಕ ಪರೀಕ್ಷೆಗಳಲ್ಲಿ ಎಷ್ಟು ತಾಯಿ-ಮಕ್ಕಳು ಭಾಗವಹಿಸಿದ್ದಾರೆ?  ಎಷ್ಟು ತಂದೆಯರು ಆಸಕ್ತಿ ತೋರಿಸುತ್ತಿದ್ದಾರೆ?

ಈ ಮೇಲಿನ ಪ್ರಶ್ನೆಗಳನ್ನಿಟ್ಟುಕೊಂಡರೆ ನಿಮ್ಮ ಕಾರ್ಯಕ್ರಮಗಳ ಚಿತ್ರ ದೊರಕುತ್ತದೆ.  ಆದರೆ ನಿಮ್ಮ ಕಾರ್ಯಕ್ರಮಗಳ ಪ್ರಭಾವ ನೋಡಲು ನಿಮಗೇ  ನೀವು ಇನ್ನೂ ಕೆಲವು ಪ್ರಶ್ನೆಗಳನ್ನು ಹಾಕಬೇಕು.  ಉದಾ:

 • ಸಂಡಾಸು ಕಟ್ಟಿಸುವುದಕ್ಕಿಂತ ಮೊದಲು ತಿಂಗಳಿಗೆ ಎಷ್ಟು ಮಂದಿಗೆ ಭೇದಿ ಆಗುತ್ತಿತ್ತು?  ಕಟ್ಟಿದ ನಂತರ, ತಿಂಗಳಿಗೆ ಎಷ್ಟು ಮಂದಿಗೆ ಭೇದಿ ಆಗಿದೆ?
 • ಕಳೆದ ಸುಗ್ಗಿಯಲ್ಲಿ ಎಷ್ಟು ಚೀಲ ಬೆಳೆ ಸಿಕ್ಕಿತ್ತು? ಈ ಸುಗ್ಗಿಯಲ್ಲಿ ಬೆಳೆ ಹೇಗಿದೆ? ಎಷ್ಟು ಚೀಲ ಬಂದಿದೆ?

ಆರೋಗ್ಯಕ್ಕೆ ದಾರಿ ಕಾರ್ಡಿನಲ್ಲಿ ಎಷ್ಟು ಮಕ್ಕಳ ತೂಕ ಸರಿಯಾದ ರೇಖೆಯ ಮೇಲಿತ್ತು?  ಕಾರ್ಯಕ್ರಮ ಶುರುಮಾಡಿದ ನಂತರ ಏನಾದರೂ ಬದಲಾವಣೆ ಕಂಡಿತೇ?

ಜನರ ಮೇಲೆ ಯಾವುದೇ ಕಾರ್ಯಕ್ರಮದ ಪ್ರಭಾವ ಆಯಿತೇ ಎಂಬುದನ್ನು ನೋಡಬೇಕೆಂದರೆ ಕಾರ್ಯಕ್ರಮದ ಮೊದಲಿನ ಅಂಕಿ ಅಂಶಗಳನ್ನೂ ಗಮನಕ್ಕೆ ತೆಗೆದುಕೊಳ್ಳಬೇಕಾಗುತ್ತದೆ. ಹಾಗೆಯೇ ನಂತರದ ಅಂಕಿ ಅಂಶಗಳೂ ಬೇಕು.  ಉದಾಹರಣೆಗೆ ಶಿಶುಗಳಿಗೆ ಮೊಲೆಯುಣ್ಣಿಸುವುದು ಎಷ್ಟು ಅವಶ್ಯ ಎಂದು ತಾಯಂದಿರಿಗೆ ಕಲಿಸುವ ಕಾರ್ಯಕ್ರಮವಿದ್ದರೆ ಮೊದಲು ಎಷ್ಟು ಜನ ತಾಯಂದಿರು ಹಾಲೂಡುತ್ತಿದ್ದಾರೆ ಎಂಬುದನ್ನು ಲೆಕ್ಕ ಮಾಡಿ ಕಾರ್ಯಕ್ರಮದ ನಂತರ ಎಷ್ಟು ಜನ ತಾಯಂದಿರು ಹಾಲೂಡುತ್ತಿದ್ದಾರೆ ಎಂಬುದನ್ನು ಪುನಃ ಲೆಕ್ಕ ಮಾಡಿದಾಗ ನಿಮ್ಮ ಕಾರ್ಯಕ್ರಮದ ಪರಿಣಾಮ ಗೊತ್ತಾಗುತ್ತದೆ.

ನಿಮ್ಮ ಕೆಲಸಕ್ಕೆ ಕೆಲವು ಗುರಿಗಳನ್ನಿಟ್ಟುಕೊಳ್ಳಬಹುದು.  ಉದಾಹರಣೆಗೆ ಹಳ್ಳಿಯಲ್ಲಿ ನೂರಕ್ಕೆ ೮೦ ಮನೆಗಳವರು ವರ್ಷದೊಳಗೆ ಸಂಡಾಸು ಕಟ್ಟಬೇಕೆಂದು ನಿಮ್ಮ ಆರೋಗ್ಯ ಸಮಿತಿಯವರು ನಿರ್ಧರಿಸಿದ್ದರೆ ಪ್ರತಿ ತಿಂಗಳೂ ಸಂಡಾಸುಗಳ ಲೆಕ್ಕ ಮಾಡುತ್ತಿರಿ.  ೬ ತಿಂಗಳಲ್ಲಿ ನಿಮ್ಮ ಗುರಿಯ ಒಂದು ಮೂರಾಂಶ ಭಾಗ ಕೂಡ ಆಗಿಲ್ಲವೆಂದರೆ ಗುರಿ ತಲುಪಲು ನೀವು ಇನ್ನೂ ಹೆಚ್ಚು ಕೆಲಸ ಮಾಡಬೇಕೆಂದರ್ಥ.

ನಿಶ್ಚಿತ ಗುರಿ ಹಾಕಿಕೊಳ್ಳುವುದರಿಂದ ಜನರು ಕಡಿಮೆ ವೇಳೆಯಲ್ಲಿ ಹೆಚ್ಚು ಸಾಧಿಸಬಹುದು.

ಕಾರಣ, ಪುನರ್ ಪರಿಶೀಲನೆಗಾಗಿ ನೀವು ಕಾರ್ಯಕ್ರಮದ ಮೊದಲು, ಕಾರ್ಯಕ್ರಮ ನಡೆಯುವ ವೇಳೆಯಲ್ಲಿ ಮತ್ತು ನಂತರ ಅಂಕಿ ಅಂಶಗಳನ್ನು ಕೂಡಿಡಬೇಕಾಗುತ್ತದೆ.

೧೯. ಕಲಿಸುತ್ತಲೇ ಕಲಿಯುವುದು ಕಲಿಸುವವನಾಗಿ ಆರೋಗ್ಯ ಕಾರ್ಯಕರ್ತ

ಆರೋಗ್ಯಕ್ಕೆ ಸಂಬಂಧಿಸಿದ ವಿಷಯಗಳನ್ನು ತಿಳಿಯುತ್ತ ಹೋದಂತೆ, ಆರೋಗ್ಯ ಕಾರ್ಯಕರ್ತನ ಕೆಲಸ ಅಸಾಧ್ಯವಾದುದು ಎಂದು ನಿಮಗನಿಸಬಹುದು. ನೀವೇ ಆರೋಗ್ಯೋಪಚಾರದ ಎಲ್ಲಾ ಜವಾಬ್ದಾರಿಗಳನ್ನೂ ಹೊತ್ತುಕೊಂಡಿರೆಂದರೆ ಅದೊಂದು ಅಸಾಧ್ಯದ ಕೆಲಸವೇ ಆಗಿಬಿಡುತ್ತದೆ.

ತಮ್ಮ ಮತ್ತು ಸಮುದಾಯದ ಜವಾಬ್ದಾರಿಯನ್ನು ಜನರು ತಾವೇ ವಹಿಸಿಕೊಂಡಾಗಲೇ ಮುಖ್ಯ ಬದಲಾವಣೆಗಳು ಸಾಧ್ಯ.

ಸಮುದಾಯವೆಲ್ಲವೂ ಆರೋಗ್ಯವಾಗಿರಬೇಕೆಂದರೆ ಒಬ್ಬಿಬ್ಬರು ಜವಾಬ್ದಾರಿ ವಹಿಸಿಕೊಂಡರೆ ಸಾಲದು. ಹೆಚ್ಚು ಕಮ್ಮಿ ಎಲ್ಲರೂ ಜವಾಬ್ದಾರಿಯನ್ನು ಹಂಚಿಕೊಳ್ಳಬೇಕಾಗುತ್ತದೆ.

ಈ ಕಾರಣಕ್ಕೆ ನೀವು ಸದಾ ಮಾಡುತ್ತಿರಬೇಕಾದ ಕೆಲಸವೆಂದರೆ ಮಕ್ಕಳಿಗೆ, ತಾಯ್ತಂದೆಗಳಿಗೆ, ರೈತರಿಗೆ, ಶಾಲಾ ಶಿಕ್ಷಕರಿಗೆ, ಆರೋಗ್ಯ ಸಹಾಯಕರಿಗೆ ಸದಾ ಕಲಿಸುತ್ತಲೇ ಇರುವುದು.

ಕಲಿಸುವ ಕಲೆಯನ್ನು ಕಲಿಯಬೇಕು. ಕಲಿಸುವುದೆಂದರೆ ಬೇರೆಯವರನ್ನು ಬೆಳೆಸುವುದು.  ಮತ್ತು ಅವರೊಂದಿಗೆ ನಾವೂ ಬೆಳೆಯುವುದು.  ನಿಜವಾದ ಗುರುವು ವಿಚಾರಗಳನ್ನು ಶಿಷ್ಯರ ತಲೆಯಲ್ಲಿ ತುಂಬುವುದಿಲ್ಲ.  ಬದಲಿಗೆ  ಆ ವಿಚಾರಗಳನ್ನು ಅವರೇ ಹುಡುಕಿಕೊಳ್ಳಲು ಅವರಿಗೆ ಸಹಾಯ ಮಾಡುತ್ತಾನೆ.  ಆರೋಗ್ಯದ ವಿಷಯದಲ್ಲಂತೂ ಕಲಿಯುವುದೆಂದರೆ ಕೇವಲ ಶಾಲೆ ಅಥವಾ ಆರೋಗ್ಯ ಕೇಂದ್ರದಲ್ಲಿ ಮುಗಿಸುವಂಥದ್ದಲ್ಲ.  ಮನೆ, ಹೊಲ, ರಸ್ತೆ ಎಲ್ಲೆಂದರಲ್ಲಿ ಹೊಸ ವಿಷಯಗಳನ್ನು ಕಲಿಯಬಹುದು.  ಆರೋಗ್ಯ ಕಾರ್ಯಕರ್ತರಿಗೆ ಒಬ್ಬ ರೋಗಿ ಸಿಕ್ಕರೆ ಕಲಿಸಲು ಒಳ್ಳೆಯ ಅವಕಾಶ ಸಿಕ್ಕಂತೆ.     ಕಲಿಸಲು ಎಲ್ಲೆಲ್ಲಿ ಎಂಥ ಅವಕಾಶಗಳು ಸಿಗುತ್ತವೆ ಎಂದು ಕಾದು ನೋಡುತ್ತಿರಬೇಕು.

೨೦. ಕಲಿಸುವ ಸಾಧನಗಳು

ಫ್ಲಾನೆಲ್ ಗ್ರಾಫ್; ಇವು ಕಲಿಸಲು ಉತ್ತಮ ಸಾಧನಗಳು. ಗುಂಪಿಗೆ ಕಲಿಸುವಾಗ ಒಂದು ಬೋರ್ಡಿಗೆ ಫ್ಲಾನೆಲ್ ಬಟ್ಟೆ ಹಾಕಿ.  ಅದರ ಮೇಲೆ ಬೇರೆ ಬೇರೆ ಚಿತ್ರಗಳನ್ನು ಇಡುತ್ತ ಹೋಗಬಹದು.  ಚಿತ್ರದ ಹಿಂಬದಿಯ ಮರಳ ಕಾಗದ ಅಥವಾ ಅಂಟು ಅದನ್ನು ಫ್ಲಾನೆಲ್ ಬೋರ್ಡಿಗೆ ಅಂಟುವಂತೆ ಮಾಡುವುದು.

ಚಿತ್ರಗಳಿರುವ ಪೋಸ್ಟರ್ಗಳು; ಒಂದು ಚಿತ್ರ ಸಾವಿರ ಶಬ್ದಗಳಿಗೆ ಸಮ. ಜನರು ನೋಡುವ ಯಾವುದೇ ಸ್ಥಳದಲ್ಲಿ ಸರಳವಾದ ಚಿತ್ರಗಳನ್ನು ತೂಗಿ ಹಾಕಬಹುದು. ಈ ಪುಸ್ತಕದಲ್ಲಿಯ ಚಿತ್ರಗಳನ್ನೇ ಬಿಡಿಸಿ ಹಾಕಬಹುದು.

ಚಿತ್ರಗಳನ್ನು ಇಲ್ಲಿರುವಂತೆಯೇ ಚಿತ್ರಿಸಲು ಬರದಿದ್ದರೆ ಚಿತ್ರದ ಮೇಲೆ ಚೌಕುಳಿ ಹಾಕಿ, ನಿಮ್ಮ ಕಾಗದದಲ್ಲೂ ಚೌಕುಳಿ ಹಾಕಿಕೊಂಡು ಒಂದೊಂದು ಚೌಕವನ್ನೂ ಅದರಲ್ಲಿ ಇರುವಂತೆಯೇ ತುಂಬುತ್ತ ಹೋಗಿ.

ಸಾಧ್ಯವಿದ್ದರೆ ಹಳ್ಳಿಯ ಕಲಾಕಾರರಿಗೇ ಚಿತ್ರ ಬಿಡಿಸಲು ಹೇಳಿ. ಮಕ್ಕಳಿಂದಲೂ ಹೇಳಿ ಮಾಡಿಸಬಹುದು.

ಮಾಡೆಲ್ಗಳಿಂದ ತಾಯಂದಿರಿಗೆ ಹೊಕ್ಕುಳ ಬಳ್ಳಿ ಕತ್ತರಿಸುವ ಕುರಿತು ಹೇಳಬೇಕೆಂದರೆ ಒಂದು ಗೊಂಬೆಯನ್ನು ತನ್ನಿ.  ಅದರ ಹೊಟ್ಟೆಯ ಮೇಲೆ ಒಂದು ಹುರಿಯನ್ನು ಪಿನ್ನಿನ ಸಹಾಯದಿಂದ ಚುಚ್ಚಿಡಬೇಕು.  ಅನುಭವಸ್ಥ ಸೂಲಗಿತ್ತಿ ಬಳ್ಳಿ ಕತ್ತರಿಸುವುದನ್ನು ಹೇಗೆ ಮಾಡಬೇಕೆಂದು ವಿವರಿಸುವಳು.

ಬಣ್ಣದ ಸ್ಲೈಡ್ ಗಳು; ಆರೋಗ್ಯದ ವಿಷಯದಲ್ಲಿ ವಿವಿಧ ರೀತಿಯ ಸ್ಲೈಡ್‌ಗಳು ಸಿಗುತ್ತವೆ.  ಕೆಲವು ಕಥೆ ಹೇಳುವ ಸೆಟ್ ರೂಪದಲ್ಲಿ ಬರುತ್ತವೆ. ಇನ್ನು ಕೆಲವನ್ನು ಸರಳವಾದ ಪ್ರಾಜೆಕ್ಟರಿನಲ್ಲಿಟ್ಟು ತೋರಿಸಬಹುದು.

೨೧. ಕಲಿಸುವ ಇನ್ನಿತರ ವಿಧಾನಗಳು:

ಕಥಾ ರೂಪ: ನಿಮ್ಮ ವಿಚಾರಗಳನ್ನು ಕಥೆಯ ರೂಪದಲ್ಲಿ ಜನರ ಮುಂದಿಡಬಹುದು.  ಕಥೆ ನಿಜ ಜೀವನದ್ದೇ ಆಗಿದ್ದರಂತೂ ಇನ್ನೂ ಉತ್ತಮ.

ಉದಾಹರಣೆಗೆ, ಹಳ್ಳಿಯ ಕಾರ್ಯಕರ್ತ ಸ್ವತಃ ಡಾಕ್ಟರಿಗಿಂತ ಚೆನ್ನಾಗಿ ರೋಗವನ್ನು ಗುರುತಿಸಬಲ್ಲನೆಂದರೆ ನೀವು ನಂಬಲಿಕ್ಕಿಲ್ಲ.  ಆದರೆ ಜಾಮ್‌ಖೇಡ್ ಬಳಿ ಕೆಲಸ ಮಾಡುತ್ತಿದ್ದ ಲಲನಾ ಬಾಯಿ ಎಂಬ ಆರೋಗ್ಯ ಕಾರ್ಯಕರ್ತೆಯೊಬ್ಬಳ ಅನುಭವವನ್ನು ಕೇಳಿದರೆ ನೀವು ನಂಬಬಹುದು.

ಒಮ್ಮೆ ಕಾಯಿಲೆ ಬಿದ್ದ ಪುಟ್ಟ ಮಗುವೊಂದು ಲಲನಾಬಾಯಿಯ ಬಳಿಗೆ ಬಂದಿತು. ಆ ಮಗುವಿಗೆ ಆಹಾರದ ಕೊರತೆ ಆಗಿದೆಯೆಂದು ಡಾಕ್ಟರರು ಹೇಳಿ ಕಳುಹಿಸಿದ್ದರು.  ಆ ಮಗುವಿನ ಮನೆಯವರು ತುಂಬ ಬಡವರು.  ಕಳೆದ ತಿಂಗಳಷ್ಟೇ ಮಗುವಿನ ಅಣ್ಣನೊಬ್ಬ ತೀರಿ ಹೋಗಿದ್ದಾನೆ ಎನ್ನುವುದು ಲಲನಾಬಾಯಿಗೆ ಗೊತ್ತಿತ್ತು.  ಆಕೆ ಆ ಮನೆಗೆ ಹೋಗಿ ಹಿಂದಿನ ಮಗು ಸಾಯುವಾಗ ಏನಾಗಿತ್ತು ಎಂದು ವಿಚಾರಿಸಿದಳು.  ಬಹಳ ಕೆಮ್ಮು ಮತ್ತು ಕಫದಲ್ಲಿ ರಕ್ತ ಬರುತ್ತಿತ್ತು ಎಂದು ತಿಳಿದುಬಂತು.  ಕೂಡಲೆ ಲಲನಾಬಾಯಿಯು ಈ ಮಗುವಿಗೆ ಕ್ಷಯ ಆಗಿರಬಹುದೆಂದು ಅದರ ರಕ್ತ ಪರೀಕ್ಷೆಗಾಗಿ ಪುನಃ ಡಾಕ್ಟರರ ಬಳಿಗೆ ಕಳಿಸಿದಳು.  ಪರೀಕ್ಷೆ ಮಾಡಿದಾಗ ಅವಳ ಸಂಶಯ ದೃಢ ಪಟ್ಟಿತು.  ಹೀಗೆ ಒಬ್ಬ ಆರೋಗ್ಯ ಕಾರ್ಯಕರ್ತೆಗೆ ಡಾಕ್ಟರ್‌ರಿಗಿಂತ ಚೆನ್ನಾಗಿ ರೋಗ ಗುರುತಿಸಲು ಸಾಧ್ಯವಾಯಿತು.  ಏಕೆಂದರೆ ಆ ರೋಗಿಯ ಹಿನ್ನೆಲೆ, ಮನೆಯ ಸ್ಥಿತಿಗತಿಗಳು ಆಕೆಗೆ ಗೊತ್ತಿದ್ದವು.

ಕತೆಗಳಿಂದ ಕಲಿಯಲು ಆಸಕ್ತಿ ಜಾಸ್ತಿಯಾಗುತ್ತದೆ.  ಆರೋಗ್ಯ ಕಾರ್ಯಕರ್ತ ಒಳ್ಳೆಯ ಕತೆಗಾರನಾಗಿದ್ದಷ್ಟೂ ಉತ್ತಮ.

ನಾಟಕರೂಪ:  ಕಥೆ ಹೇಳುವುದಕ್ಕಿಂತ ನಾಟಕ ಮಾಡಿ ತೋರಿಸುವುದು ಇನ್ನೂ ಉತ್ತಮ.  ನೀವು, ಶಾಲಾ ಶಿಕ್ಷಕರು ಮತ್ತು ಆರೋಗ್ಯ ಸಮಿತಿಯವರು ಸೇರಿಕೊಂಡು ನಾಟಕ ಮಾಡಬಹುದು. ಅಥವಾ ಶಾಲೆಯ ಹುಡುಗರಿಂದ ಮಾಡಿಸಬಹುದು.

ಉದಾಹರಣೆಗೆ ನೊಣಗಳಿಂದ ಆಹಾರ ರಕ್ಷಿಸಬೇಕೆಂದು ನಾಟಕದ ಮೂಲಕ ಹೇಳುವುದಾದರೆ ಹತ್ತಾರು ಮಕ್ಕಳು ನೊಣಗಳಂತೆ ವೇಷ ಹಾಕಿ ಅತ್ತಿತ್ತ ಹಾರಾಡಿದಂತೆ ಓಡಿಯಾಡುತ್ತಿರಬೇಕು.  ತೆರೆದಿಟ್ಟ ಆಹಾರವನ್ನು ಹೊಲಸು ಮಾಡಬೇಕು.  ಅದನ್ನು ತಿಂದ ಮಕ್ಕಳು ರೋಗಪೀಡಿತರಾದಂತೆ ನಟಿಸಬೇಕು.  ಮುಚ್ಚಿಟ್ಟ ಆಹಾರಕ್ಕೆ ನೊಣ ಮುತ್ತಲಿಕ್ಕಾಗುವುದಿಲ್ಲ.  ಆ ಆಹಾರ ತಿಂದ ಮಕ್ಕಳು ಆರೋಗ್ಯವಂತರಾಗುತ್ತಾರೆ ಎಂದು ತೋರಿಸಬೇಕು.

ನಿಮ್ಮ ವಿಚಾರಗಳನ್ನು ಹೆಚ್ಚು ಜನರಲ್ಲಿ ಹಂಚಿಕೊಂಡಷ್ಟೂ ಹೆಚ್ಚು ಜನರು ವಿಷಯ  ತಿಳಿದುಕೊಂಡು  ನೆನಪಲ್ಲಿ ಇಟ್ಟುಕೊಳ್ಳುತ್ತಾರೆ.

೨೨. ಎಲ್ಲರ ಒಳ್ಳೆಯದಕ್ಕಾಗಿ ಒಟ್ಟಾಗಿ ದುಡಿಯುತ್ತ ಒಟ್ಟಾಗಿ ಕಲಿಯುವುದು

ಒಂದು ಕೆಲಸಕ್ಕಾಗಿ ಬಹಳ ಜನರನ್ನು ಒಟ್ಟಿಗೆ ಸೇರಿಸಲು ಅನೇಕ ದಾರಿಗಳಿವೆ.

ಹಳ್ಳಿಯ ಆರೋಗ್ಯ ಸಮಿತಿ; ಸಮುದಾಯದ ಆರೋಗ್ಯದ ವಿಚಾರದಲ್ಲಿ ಭವಿಷ್ಯದ ಯೋಜನೆಗಳನ್ನು ರೂಪಿಸಲು ಕೆಲವು ಸಮರ್ಥ ಆಸಕ್ತ ಜನರನ್ನು ಒಟ್ಟುಗೂಡಿಸಬೇಕಾಗುತ್ತದೆ. ಆರೋಗ್ಯ ಕಾರ್ಯಕರ್ತರು ತಮ್ಮ ವಿಚಾರಗಳನ್ನು ಅವರೊಂದಿಗೆ ಹಂಚಿಕೊಳ್ಳಬೇಕು. ತಮ್ಮ ಜವಾಬ್ದಾರಿಗಳನ್ನೂ ಅವರೊಂದಿಗೆ ಹಂಚಿಕೊಳ್ಳಬೇಕು.

ಒಟ್ಟಾಗಿ ಕುಳಿತು ಚರ್ಚಿಸುವುದು; ತಾಯಿ ತಂದೆಯರು, ಶಾಲಾ ಹುಡುಗರು, ನಾಟಿ ವೈದ್ಯರು, ತರುಣರು ತಮ್ಮ ತಮ್ಮ ಗುಂಪಿನಲ್ಲಿ ಆಗಾಗ್ಗೆ ಆರೋಗ್ಯದ ಬಗ್ಗೆ ಚರ್ಚಿಸಬೇಕು. ಆರೋಗ್ಯ ಸಮಸ್ಯೆಗಳ ಪರಿಹಾರದಲ್ಲಿ ತಂತಮ್ಮ ಜವಾಬ್ದಾರಿ ಏನೆಂಬುದನ್ನು ಈ ಗುಂಪುಗಳು ತಿಳಿದುಕೊಳ್ಳಬೇಕು.  ತಮ್ಮಲ್ಲಿರುವ ಹೊಸ ವಿಚಾರಗಳನ್ನು ಹಂಚಿಕೊಳ್ಳಬೇಕು.

ಶ್ರಮದಾನಶ್ರಮಾನಂದ; ಊರನ್ನು ಸ್ವಚ್ಛ ಮಾಡುವ, ನೀರಿನ ಕಾಲುವೆ ತೋಡುವ ಕೆಲಸಗಳನ್ನು ಆಟದಂತೆ ಮಾಡಲು ರೂಪಿಸಿದರೆ ಜೊತೆಗೆ ಆಟ, ಹಾಡು, ಬಹುಮಾನ, ತಿಂಡಿ ಇಂಥವುಗಳು ಸೇರಿದ್ದರೆ ಕೆಲಸವೊಂದು ಮೋಜಾಗುತ್ತದೆ. ನಿಮ್ಮ ಕಲ್ಪನೆಗಳನ್ನೂ ಉಪಯೋಗಿಸಿ, ಜನರ ಕಲ್ಪನೆಗಳಿಗೂ ಪ್ರೋತ್ಸಾಹ ಕೊಡಿ.

ಸಹಕಾರ ಸಂಘಗಳು; ನಾಲ್ಕಾರು ಮಂದಿ ಸೇರಿ ಸಹಕಾರ ಸಂಘಗಳನ್ನು ಮಾಡಿಕೊಂಡು ಧಾನ್ಯ ಮತ್ತಿತರ ಅವಶ್ಯಕ ವಸ್ತುಗಳ ಮಾರಾಟ ಆರಂಭಿಸಿದರೆ ಬೆಲೆಗಳನ್ನು ಹಿಡಿತದಲ್ಲಿರಿಸಬಹುದು.

ಶಾಲೆಗೆ ಭೇಟಿ; ಹಳ್ಳಿಯ ಶಾಲಾ ಶಿಕ್ಷಕರೊಂದಿಗೆ ಶಾಲೆಯಲ್ಲಿ ಆರೋಗ್ಯಕ್ಕೆ ಸಂಬಂಧಿಸಿದ ಚಟುವಟಿಕೆಗಳನ್ನು ಮಾಡಲು ಪ್ರಯತ್ನಿಸಿ.  ವಸ್ತು ಪ್ರದರ್ಶನ, ಮಕ್ಕಳ ನಾಟಕಗಳನ್ನು ಮಾಡಿಸಬಹುದು.  ಮಕ್ಕಳಿಗೆ ಆರೋಗ್ಯ ಕೇಂದ್ರಕ್ಕೆ ಬರಲು ಹೇಳಿ.  ಎಲ್ಲಾ ಕೆಲಸಕ್ಕೂ ಅತಿ ಉತ್ಸಾಹ ತೋರಿಸುವ ಮಕ್ಕಳಿಗೆ ಸರಿಯಾದ ಮಾರ್ಗದರ್ಶನ ಸಿಕ್ಕರೆ ಉತ್ತಮ ಪರಿಣಾಮಗಳು ಹೊರಬರುತ್ತವೆ.

ತಾಯಿ ಮತ್ತು ಮಗುವಿನ ಆರೋಗ್ಯದ ಸಭೆಗಳು;  ಗರ್ಭಿಣಿಯರು ಮತ್ತು ತಾಯಂದಿರಿಗೆ ಐದು ವರ್ಷದೊಳಗಿನ ಮಕ್ಕಳ   ಅವರ ಆರೋಗ್ಯದ ಬಗ್ಗೆ ತಿಳಿಸಿಕೊಡುವುದು ಅತ್ಯವಶ್ಯ.  ಆರೋಗ್ಯ ಕೇಂದ್ರಕ್ಕೆ ಆಗಾಗ್ಗೆ ಭೇಟಿ ಕೊಡುವುದು ಆರೋಗ್ಯ ಪರೀಕ್ಷೆಯ ಜೊತೆ ಕಲಿಯುವುದಕ್ಕೂ ಉತ್ತಮ ಅವಕಾಶ ಸಿಕ್ಕಂತಾಗುತ್ತದೆ.  ಪ್ರತಿಯೊಬ್ಬ ತಾಯಿಯ ಕೈಯಲ್ಲಿಯೂ ತನ್ನ ಮಗುವಿನ ಆರೋಗ್ಯ ಕಾರ್ಡು ಇದ್ದು ಅದರಲ್ಲಿ ಪ್ರತಿ ತಿಂಗಳೂ ಮಗುವಿನ ತೂಕವನ್ನು ಬರೆದು ಹಚ್ಚಿಕೊಳ್ಳಬೇಕು. (೩೫೬ ನೇ ಪುಟದಲ್ಲಿ ಆರೊಗ್ಯಕ್ಕೆ ದಾರಿ ಪಟ ಕೊಟ್ಟಿದೆ.) ಪಟದಲ್ಲಿರುವುದನ್ನು ಅರ್ಥಮಾಡಿಕೊಂಡರೆ ಆ ತಾಯಂದಿರು ಅದನ್ನು ಎಲ್ಲರಿಗೂ ಹೆಮ್ಮೆಯಿಂದ ತೋರಿಸುತ್ತಾರೆ.  ಅವರಿಗೆ ಓದಲು ಬರದಿದ್ಡರೂ ಕೂಡ ಇದನ್ನು ಅರ್ಥಮಾಡಿಕೊಳ್ಳಲು ಕಲಿಸಬಹುದು.  ಆಸಕ್ತಿ ಇರುವ ಹೆಂಗಸರಿಗೆ ಈ ವಿಷಯದಲ್ಲಿ ತರಬೇತಿ ಕೊಟ್ಟು ಹೆಚ್ಚು ಜನ ಕಲಿಯುವಂತೆಯೂ ಮಾಡಬಹುದು.

ಮನೆಗೆ ಭೇಟಿ; ಆಗಾಗ್ಗೆ ಮನೆಗಳಿಗೆ ಭೇಟಿ ಕೊಡುತ್ತಿರಿ. ಕಾಯಿಲೆಯವರಿರುವ ಮನೆಗೆ, ಏನಾದರೂ ತೊಂದರೆ ಇರುವವರ ಮನೆಗೆ ಆರೋಗ್ಯ ಕೇಂದ್ರ ಅಥವಾ ಸಮಿತಿಯ ಸಭೆಗಳಿಗೆ ಬರದವರ ಮನೆಗೆ ಭೇಟಿ ಕೊಡುತ್ತಿರಿ.  ಆದರೆ ಅದು ಅತಿಯಾಗದಿರಲಿ.  ಹೋಗಿದ್ದಾಗಲೆಲ್ಲಾ ಅಸಮಾಧಾನದ ಹೊಗೆ ಏಳುತ್ತಿದ್ದರೆ ಹೋಗುವುದನ್ನು ಕಡಿಮೆ ಮಾಡಿ.  ಆದರೆ ಎಂಥವರೇ ಇರಲಿ, ಅವರ ಮನೆಯ ಮಕ್ಕಳಿಗೆ ಕಾಯಿಲೆಯಾಗಿರುವಾಗ ಅಥವಾ ಮನೆಯವರು ಅಪಾಯದಲ್ಲಿರುವಾಗ ಅಲ್ಲಿಗೆ ಹೋಗಲು ಹಿಂಜರಿಯಬೇಡಿ.

೨೩. ಗುಂಪಿನಲ್ಲಿ ವಿಚಾರಗಳನ್ನು ಹಂಚಿಕೊಳ್ಳುವ ಬಗೆ;

ಆರೋಗ್ಯ ಕಾರ್ಯಕರ್ತರಾದ ನಿಮ್ಮ ಕೆಲಸದ ಯಶಸ್ಸು ನೀವು ಎಷ್ಟು ಉತ್ತಮ ಶಿಕ್ಷಕರು ಎಂಬುದರ ಮೇಲೆ ಅವಲಂಬಿಸಿದೆಯೇ ಹೊರತು ನಿಮ್ಮ ಆರೋಗ್ಯದ ಜ್ಞಾನ ಎಷ್ಟು ಆಳವಾಗಿದೆ ಎಂಬುದರ ಮೇಲಲ್ಲ. ಏಕೆಂದರೆ ಹಳ್ಳಿಯ ದೊಡ್ಡ ಸಮಸ್ಯೆಗಳ ಪರಿಹಾರಕ್ಕೆ ಇಡೀ ಸಮುದಾಯವೇ ತೊಡಗದ ಹೊರತು ಸಾಧ್ಯವಿಲ್ಲ.  ಜನರಿಗೆ ಹೇಳಿ ಕಲಿಸುವುದು ಆಗದ ಮಾತು.  ತಾವು ನೋಡಿ, ವಿಚಾರ ಮಾಡಿ, ಚರ್ಚಿಸಿ, ಒಟ್ಟಾಗಿ ಕೆಲಸ ಮಾಡಿದಾಗಲೇ ಅವರು ಕಲಿಯುವುದು ಹೆಚ್ಚು.

ನಿಜವಾದ ಶಿಕ್ಷಕನು ಕುರ್ಚಿಯಲ್ಲಿ ಮೇಜಿನ ಮುಂದೆ ಕುಳಿತು ಉಪದೇಶ ಮಾಡುವುದಿಲ್ಲ. ಜನರ ಜೊತೆ ಕುಳಿತು ಜನರೊಂದಿಗೆ ಮಾತಾಡಿ, ಜನರೊಂದಿಗೆ ಕೆಲಸ ಮಾಡಿ ಕಲಿಸುತ್ತಾನೆ.  ಜನರೇ ಸ್ವತಃ ಯೋಚನೆ ಮಾಡಿ ತಮ್ಮ ಅವಶ್ಯಕತೆಗಳ ಬಗ್ಗೆ ಚರ್ಚಿಸಿ ನಿರ್ಧಾರಕ್ಕೆ ಬರುವಂತೆ ಮಾಡುತ್ತಾನೆ. ತನ್ನ ವಿಚಾರಗಳನ್ನು ಹಂಚಿಕೊಳ್ಳುವ ಅವಕಾಶಗಳನ್ನು ಹುಡುಕುತ್ತಿರುತ್ತಾನೆ.

ಆರೋಗ್ಯ ಕಾರ್ಯಕರ್ತರಾಗಿ ನೀವು  ಜನರಿಗೆ ಇರುವ ಅವಕಾಶಗಳನ್ನು ತೋರಿಸಿ.  ತಾವೇ ಕೆಲಸ ಮಾಡಲು ವಿಶ್ವಾಸ ತುಂಬಬೇಕು.  ತಮ್ಮಿಂದೇನಾಗುತ್ತದೆ, ತಾವೇನು ಮಾಡಲು ಸಾಧ್ಯ? ಎಂದೇ ಜನರು ಯೋಚಿಸುತ್ತಿರುತ್ತಾರೆ.  ಆದರೆ ಅವರಿಗೆ ಓದು ಬರಹ ಗೊತ್ತಿಲ್ಲದಿದ್ದರೂ ಸಹ ಅವರಲ್ಲಿ ಅನೇಕ ಕೌಶಲ್ಯಗಳು ಹುದುಗಿರುತ್ತವೆ.  ತಮ್ಮ ಬಳಿಯಿರುವ ಕೆಲವೇ ಸಾಧನಗಳಿಂದ ತಾವು ಕಟ್ಟುವ ಮನೆಗಳಲ್ಲಿ, ತಮ್ಮ ಹೊಲಗಳಲ್ಲಿ, ತಮ್ಮ ಸುತ್ತಲೂ ಬದಲಾವಣೆಗಳನ್ನು ಮಾಡುತ್ತಲೇ ಇರುತ್ತಾರೆ.  ಉತ್ತಮ ಸಾಧನಗಳಿದ್ದೂ ಒಳ್ಳೆಯ ಶಿಕ್ಷಣ ಇರುವವರಿಗೆ ಸಹ ಅಷ್ಟು ಮಾಡುವುದು ಕಷ್ಟವಾಗಬಹುದು.

ಅವರ ಸಾಧನೆಗಳನ್ನೇ ಅವರಿಗೆ ನೀವು ತೋರಿಸಿಕೊಟ್ಟಾಗ ಜನಕ್ಕೆ ತಾವು ಇನ್ನೂ ಕಲಿತು ಇನ್ನೂ ಹೆಚ್ಚಿನ ಕೆಲಸ ಮಾಡಬಹುದೆಂಬ ಅರಿವು ಬರುತ್ತದೆ.  ಜೊತೆಗೂಡಿ ಕೆಲಸ ಮಾಡಿದಾಗ ಹಳ್ಳಿಯಲ್ಲಿ ಇನ್ನೂ ದೊಡ್ಡ ದೊಡ್ಡ ಬದಲಾವಣೆಗಳು ಬರಲು ಸಾಧ್ಯ.

ಇದನ್ನೆಲ್ಲ ಜನರಿಗೆ ಹೇಳುತ್ತ ಹೋಗುವುದು ಕಷ್ಟಹಾಗಾದರೆ ಹೇಳುವುದು ಹೇಗೆ?

ಜನರು ಒಟ್ಟಿಗೆ ಕುಳಿತು ಚರ್ಚಿಸಬೇಕು.  ನೀವು ಸ್ವಲ್ಪ ಹೇಳಿ. ಪ್ರಶ್ನೆಗಳನ್ನು ಕೇಳಿ ಜನರಿಂದ ಉತ್ತರ ಹೊರಡಿಸಿ.  ತಮ್ಮ ಸಾಧನೆಗಳ ಅರಿವಾಗುವಂಥ ರೀತಿಯಲ್ಲಿ ಚರ್ಚೆ ಮುಂದುವರೆಯುವಂತೆ ಮಾಡಿ.  ಮುಂದಿನ ಪುಟಗಳಲ್ಲಿ ಆಂಧ್ರ ಪ್ರದೇಶದ ಒಂದು ರೈತ ಕುಟುಂಬವೇ ಬಿಡಿಸಿದ ಚಿತ್ರವಿದೆ. ಇಂಥವೇ ಚಿತ್ರಗಳನ್ನು ನಿಮ್ಮ ಹಳ್ಳಿಯ ಕಲಾವಿದರಿಂದ ಬಿಡಿಸಿಸಿ.  ಅಂಥವನ್ನು ಚರ್ಚಾಕೂಟದಲ್ಲಿ ಉಪಯೋಗಿಸಿ.

ಗುಂಪು ಚರ್ಚೆಗಳಿಗೆ ಈ ಚಿತ್ರಗಳನ್ನು ಉಪಯೋಗಿಸಿ.

ಇಂಥ ಒಂದು ಚಿತ್ರವನ್ನು ಮುಂದಿಟ್ಟು ಜನರಿಗೆ ಏನೇನು ಕಾಣಿಸುತ್ತಿವೆ ಎಂದು ಪ್ರಶ್ನೆಗಳನ್ನು ಕೇಳಿ. ಚಿತ್ರದಲ್ಲಿರುವ ವಿಷಯಗಳ ಬಗೆಗೆ ಚರ್ಚೆ ಶುರುವಾಗುವ ರೀತಿಯಲ್ಲಿ ಪ್ರಶ್ನೆ ಕೇಳುತ್ತ ಹೋಗಿ.  ಕೆಳಗೆ ಕೆಲವು ಪ್ರಶ್ನೆಗಳ ಉದಾಹರಣೆಗಳನ್ನು ಕೊಟ್ಟಿದೆ.

 • ಈ ಚಿತ್ರದಲ್ಲಿರುವ ಜನರು ಯಾರು?  ಅವರು ಹೇಗೆ ಬದುಕುತ್ತಾರೆ?
 • ಈ ಜನರು ಬರುವ ಮೊದಲು ಈ ಜಮೀನು ಹೇಗಿತ್ತು?
 • ಜನರು  ಏನೇನು ಬದಲಾವಣೆಗಳನ್ನು ಮಾಡಿದರು?
 • ಈ ಬದಲಾವಣೆಗಳಿಂದ ಅವರ ಆರೋಗ್ಯದ ಮೇಲೆ ಏನಾದರೂ ಪರಿಣಾಮ ಆಗಿದೆಯೇ?
 • ಇನ್ನೂ ಏನು ಬದಲಾವಣೆಗಳನ್ನು ಮಾಡಬಹುದು?  ಇನ್ನೇನು ಮಾಡಲು ಅವರು ಕಲಿಯಬಹುದು? ಏನಾದರೂ  ತೊಂದರೆ ಇದೆಯೇ? ಹೆಚ್ಚು ಕಲಿಯಲು ಯಾವ ದಾರಿ ಇದೆ?
 • ಹೊಲ ಮಾಡಲು ಹೇಗೆ ಕಲಿತರು? ಯಾರು ಕಲಿಸಿದರು?
 • ಒಬ್ಬ ಡಾಕ್ಟರ್ರೋ, ವಕೀಲರೋ ಇದೇ ಜಮೀನಿಗೇ ಇನ್ನೂ ವಿಶೇಷ ಸಾಧನಗಳೇನೂ ಇಲ್ಲದೇ ಬಂದರೆಂದುಕೊಳ್ಳಿ, ಅವರಿಗೆ ಇಷ್ಟೆಲ್ಲ ಸಾಧಿಸಲು ಸಾಧ್ಯವಿದೆಯೇ? ಹೌದೆಂದರೆ ಏಕೆ? ಇಲ್ಲವೆಂದರೆ ಏಕೆ ಇಲ್ಲ?
 • ಈ ಜನರು ನಮ್ಮನ್ನು ಹೋಲುತ್ತಾರೆಯೇ ಹೇಗೆ?

ಈ ರೀತಿಯ ಗುಂಪು ಚರ್ಚೆಯು ಜನರ ಆತ್ಮ ವಿಶ್ವಾಸವನ್ನು ಹೆಚ್ಚಿಸುವುದಲ್ಲದೆ ಇನ್ನೂ ಹೆಚ್ಚಿನ ಕೆಲಸ ಮಾಡುವ ಉತ್ಸಾಹ ಹೆಚ್ಚಿಸುವುದು.  ತಮ್ಮ ಹಳ್ಳಿ ಬೆಳೆಸುವಲ್ಲಿ ತಮ್ಮೆಲ್ಲರ ಪಾತ್ರ ಎಷ್ಟು ಮುಖ್ಯ ಎಂದು ಅನಿಸುವಂತೆ ಮಾಡುವುದು.

ಆರಂಭದಲ್ಲಿ ಜನರು ಬಾಯಿ ಬಿಡುವುದು ಕಷ್ಟ.  ತಮ್ಮ ವಿಚಾರಗಳನ್ನು ಹೇಳುವುದೇ ಇಲ್ಲ ಎಂದು ನಿಮಗನ್ನಿಸಬಹುದು.  ಅದರೆ ಕ್ರಮೇಣ ಹವ್ಯಾಸ ಬೆಳೆದಂತೆ ಅವರು ಸ್ವತಂತ್ರವಾಗಿ ಮುಖ್ಯ ಮುಖ್ಯ ಪ್ರಶ್ನೆಗಳನ್ನೇ ಕೇಳತೊಡಗುತ್ತಾರೆ.  ತಮಗನ್ನಿಸಿದ್ದನ್ನು ಹೇಳಲು ಪ್ರತಿಯೊಬ್ಬರಿಗೂ  ಪ್ರೋತ್ಸಾಹಿಸಿ, ಬಹಳ ಮಾತಾಡುವವರನ್ನು ಬೇರೆಯವರಿಗೂ ಮಾತಾಡಲು ಅವಕಾಶ ಕೊಡಲು ಕೇಳಿಕೊಳ್ಳಿ.

ಜನರ ಸಮಸ್ಯೆಗಳ ಮೂಲವನ್ನು,  ಸಾಧ್ಯವಿರುವ ಪರಿಹಾರಗಳನ್ನು ಜನರಿಗೆ ಎತ್ತಿ ತೋರಿಸಲು, ಚರ್ಚೆಗಳನ್ನು ಶುರು ಮಾಡಲು,   ಇನ್ನೂ ಬೇರೆ ಬೇರೆ ರೀತಿಯ ಚಿತ್ರಗಳನ್ನು ಉಪಯೋಗಿಸಬಹುದು.

ಈ ಕೆಳಗಿನ ಚಿತ್ರ ನೋಡಿ. ಮಗುವಿನ ಭೇದಿಗೆ ಕಾರಣವಾಗಬಲ್ಲ   ವಿಷಯಗಳನ್ನು ಜನರೇ ಯೋಚಿಸುವಂತೆ ನೀವು ಏನೇನು ಪ್ರಶ್ನೆಗಳನ್ನು ಕೇಳುತ್ತೀರಿ?

ಒಂದು ಪ್ರಶ್ನೆಯಿಂದ ಇನ್ನೊಂದು ಪ್ರಶ್ನೆ ಏಳಬೇಕು. ಜನರೇ ಒಬ್ಬರಿಗೊಬ್ಬರು ಕೇಳುತ್ತ ಉತ್ತರ ಹೇಳುತ್ತ ಹೋಗುವಂಥ ಪ್ರಶ್ನೆಗಳನ್ನೇ ಕೇಳಿ. ಭೇದಿಯಿಂದ ಆಗುವ ಸಾವಿಗೆ ಎಷ್ಟು ಕಾರಣಗಳನ್ನು ಈ ಚಿತ್ರ ನೋಡಿದ ಜನರು ಹೇಳಬಹುದು?