೨೪. ಪುಸ್ತಕದ ಅತ್ಯುತ್ತಮ ಉಪಯೋಗ ಮಾಡುವುದು ಹೇಗೆ?

ಓದುಬರಹ ಬಲ್ಲ ಯಾರೇ ಅಗಲಿ ಈ ಪುಸ್ತಕವನ್ನು ತಮ್ಮಷ್ಟಕ್ಕೆ ಓದಿ ತಿಳಿದುಕೊಳ್ಳಬಹುದು.  ಓದು ಬಾರದವರೂ ಕೂಡಾ ಚಿತ್ರಗಳನ್ನು ನೋಡಿ ಸಾಕಷ್ಟು ಅರ್ಥ ಮಾಡಿಕೊಳ್ಳಬಹುದು.  ಆದರೆ ಇಡೀ ಪುಸ್ತಕದ ಪೂರ್ತಿ ವಿಷಯ ತಿಳಿಯಬೇಕೆಂದರೆ ಯಾರಾದರೂ ಇದನ್ನು ಉಪಯೋಗಿಸುವ ರೀತಿಯನ್ನು ತಿಳಿಸಿಕೊಡಬೇಕು. ಅದಕ್ಕೆ ಅನೇಕ ವಿಧಗಳಿವೆ.

ಈ ಪುಸ್ತಕವನ್ನು ಆರೋಗ್ಯ ಕಾರ್ಯಕರ್ತರು ಯಾರಿಗೇ ಆಗಲಿ ಕೊಡುವ ಮೊದಲು, ಅವರಿಗೆ ಪರಿವಿಡಿ, ಹಸಿರುಪುಟ, ಇಂಡೆಕ್ಗಳನ್ನು ಓದಲು ತಿಳಿಸಿಕೊಡಬೇಕು.  ಯಾವುದೇ ವಿಚಾರದ ಬಗ್ಗೆ ಮಾಹಿತಿಯನ್ನು ಹುಡುಕುವುದು ಹೇಗೆಂದು ಹೇಳಿಕೊಡಿ. ಪ್ರತಿಯೊಬ್ಬರಿಗೂ ಒಮ್ಮೆ ಇಡೀ ಪುಸ್ತಕದ ಪ್ರತಿ ವಿಭಾಗವನ್ನೂ ಗಮನವಿಟ್ಟು ನೋಡಿ, ಏನು ಮಾಡುವುದು ಉಪಯುಕ್ತ, ಏನು ಮಾಡುವುದರಿಂದ ಹಾನಿ ಇದೆ, ಯಾವ ಸಂಧರ್ಭದಲ್ಲಿ ಡಾಕ್ಟರರಿಗೆ ಹೇಳಿಕಳಿಸಬೇಕು ಎಂಬುದನ್ನೆಲ್ಲ ಸರಿಯಾಗಿ ತಿಳಿದುಕೊಂಡಿರಲು ಹೇಳಿ.  (೧, ೨, ೬,  ಮತ್ತು  ೯ ನೇ ಅಧ್ಯಾಯಗಳು ಮತ್ತು ೬೬ ನೇ ಪುಟದಲ್ಲಿಯ ಅಪಾಯಕಾರಿ ರೋಗಗಳ ಮುನ್ಸೂಚನೆಯನ್ನು ನೋಡಿಕೊಂಡಿರುವುದು ಅತಿ ಮುಖ್ಯ.) ರೋಗ ಶುರುವಾಗುವ ಮೊದಲೇ ಅದನ್ನು ತಡೆಯುವುದು ಎಷ್ಟು ಮುಖ್ಯವೆಂಬುದನ್ನು ಅವರಿಗೆ ತಿಳಿಸಿಕೊಡಿ.  ಸರಿಯಾಗಿ ತಿನ್ನುವುದು ಮತ್ತು ಸ್ವಚ್ಛತೆಯ ಬಗ್ಗೆ ಹೇಳುವ ೧೧ ಮತ್ತು ೧೨ ನೇ ಅಧ್ಯಾಯಗಳನ್ನು ವಿಶೇಷ ಗಮನವಿಟ್ಟು ಓದಲು ಹೇಳಿ.

ಇವೆಲ್ಲವುಗಳನ್ನೂ ಸ್ವಲ್ಪದರಲ್ಲಿಯೇ ವಿವರಿಸಬಹುದು.  ಆದರೆ ನೀವು ಇಷ್ಟನ್ನೇ ಹೆಚ್ಚು ಹೊತ್ತು ಚರ್ಚಿಸಿದಂತೆ ಅಥವಾ ಅವರ ಜೊತೆಗೇ ಕುಳಿತು ಓದಿಯೋ, ಪುಸ್ತಕ ಉಪಯೋಗಿಸಿಯೋ ಮಾಡುತ್ತಿದ್ದಂತೆ ಅವರು ಇದರ ಪ್ರಯೋಜನವನ್ನು ಹೆಚ್ಚು ಪಡೆಯುತ್ತಾರೆ.

ಒಮ್ಮೆ ನಾಲ್ಕಾರು ಮಂದಿಯನ್ನು ಸೇರಿಸಿ ಒಂದು ಅಧ್ಯಾಯ ಓದಿ ಚರ್ಚೆಗೆ ಕೂಡ್ರಬಹುದು.  ತಮ್ಮ ಪ್ರದೇಶದಲ್ಲಿ ಅತಿದೊಡ್ಡ ಸಮಸ್ಯೆ ಯಾವುದೆಂದು ಗುರುತಿಸಿ ಆ ಸಮಸ್ಯೆಯ ವಿಚಾರದಿಂದ ಚರ್ಚೆ ಆರಂಭಿಸಿ. ಆ ಸಮಸ್ಯೆಗೆ ಪರಿಹಾರವೇನು, ಮುಂದೆ ಆಗದಂತೆ ತಡೆಯುವುದು ಹೇಗೆ ಎಂಬುದನ್ನೆಲ್ಲ ಓದಿ ಚರ್ಚಿಸಿ.

ಕೆಲವು ಆಸಕ್ತ ಜನರು ಮುಂದೆ ಬಂದು ಇದೇ ಪುಸ್ತಕದ ಕ್ಲಾಸುಗಳನ್ನು ನಡೆಸಬಹುದು. ಕ್ಲಾಸಿನಲ್ಲಿ ಕುಳಿತವರೆಲ್ಲ ಬೇರೆ ಬೇರೆ ರೋಗವನ್ನು ಗುರುತಿಸುವುದು, ಚಿಕಿತ್ಸೆ ಮತ್ತು ರೋಗ ತಡೆಯನ್ನು ಚರ್ಚಿಸುವುದು.  ಒಮ್ಮೊಮ್ಮೆ ಒಬ್ಬೊಬ್ಬರು ಕ್ಲಾಸ್ ಮಾಡಬಹುದು.

ಇನ್ನು ಕೆಲವು ಬಾರಿ ಕ್ಲಾಸಿನಲ್ಲಿ ಕೆಲವು ಜನರು ಎದ್ದು ಪುಸ್ತಕದ ಕೆಲವು ಭಾಗಗಳನ್ನು ಆಡಿ ತೋರಿಸಬಹುದು.  ಒಬ್ಬ ರೋಗಿಯಾಗಿ, ಇನ್ನೊಬ್ಬ ಆರೋಗ್ಯ ಸಹಾಯಕನಾಗಿ ಪ್ರಶ್ನೆಗಳನ್ನು ಕೇಳಿ ರೋಗದ ಪರಿಚಯವನ್ನು ಮಾಡಿಕೊಳ್ಳಬಹುದು.  ರೋಗಿಯ ಪಾತ್ರ ವಹಿಸಿದವನು ತನಗೇನಾಗಿದೆ ಎಂದು ತಿಳಿಯಲು ಅನುಕೂಲವಾಗುವಂತೆ ಅವನನ್ನೂ ಚರ್ಚೆಯಲ್ಲಿ ಸೇರಿಸಿಕೊಳ್ಳಬಹುದು. ಕೊನೆಯಲ್ಲಿ ಅವನಿಗೆ ರೋಗ ತಡೆಯ ವಿಧಾನವನ್ನು ಹೇಳಿಕೊಡುವುದರೊಂದಿಗೆ ನಾಟಕ ಮುಗಿಸಬಹುದು.

ನಿಮ್ಮ ಬಳಿ ರೋಗಿಗಳು ಚಿಕಿತ್ಸೆಗಾಗಿ ಬಂದಾಗ ಈ ಪುಸ್ತಕದಲ್ಲಿ ಆ ರೋಗದ ಬಗ್ಗೆ ಏನು ಹೇಳಿದೆಯೆಂದು ಅವರೇ ತೆಗೆದು ನೋಡಲು ಹೇಳಿ.  ಚಿಕಿತ್ಸೆಯನ್ನೂ ಅವರೇ ನೋಡಿ ಹೇಳಲಿ. ಇದಕ್ಕೆ ಹೆಚ್ಚು ಸಮಯ ತಗುಲಲೂಬಹುದು. ಆದರೂ ಜನರಿಗೆ ಕಲಿಸಲು ಇದು ಸುಲಭ ಉಪಾಯ.  ಅವರಿಂದ ಯಾವುದೇ ತಪ್ಪಾದರೆ, ಅಥವಾ ಹುಡುಕಲು ತಿಳಿಯದಿದ್ದರೆ ಮಾತ್ರ  ಸರಿಯಾಗಿ ನೋಡಲು ನೀವು ಹೇಳಿಕೊಡಿ. ಹೀಗೆ ಮಾಡುವುದರಿಂದ ರೋಗಿಗಳೂ ಕಲಿಯಲು ಅವಕಾಶ ಮಾಡಿಕೊಟ್ಟಂತಾಗುತ್ತದೆ.

ಪ್ರೀತಿಯ ಹಳ್ಳಿಯ ಆರೋಗ್ಯ ಕಾರ್ಯಕರ್ತರೇ, ನೀವು ಯಾರೇ ಆಗಿರಬಹುದು, ಎಲ್ಲೇ ಇರಬಹುದು, ನಿಮಗೊಂದು ಕಚೇರಿಯ ಹೆಸರಿರಬಹುದು, ಅಥವಾ ನೀವು ನನ್ನಂಥ ಅಸಕ್ತ ನಾಗರಿಕನಿರಬಹುದು. ಬೇರೆಯವರ ಆರೋಗ್ಯದಲ್ಲಿ ಆಸಕ್ತಿ ಇರುವ ನೀವು ಈ ಪುಸ್ತಕವನ್ನು ಸರಿಯಾಗಿ ಉಪಯೋಗಿಸಿ.  ಈ ಪುಸ್ತಕ ನಿಮಗಾಗಿ, ಎಲ್ಲರಿಗಾಗಿ.

ಆದರೆ ನೆನಪಿರಲಿ, ಆರೋಗ್ಯೋಪಚಾರದ ಅತಿ ಮುಖ್ಯ ವಿಚಾರವೊಂದು ಇಲ್ಲಾಗಲೀ ಅಥವಾ ಇನ್ನಾವುದೇ ಪುಸ್ತಕದಲ್ಲಾಗಲೀ ನಿಮಗೆ ಸಿಗಲಾರದು.  ಯಾಕೆಂದರೆ ಒಳ್ಳೆಯ ಆರೋಗ್ಯದ ಬೀಗದ ಕೈ ನಿಮ್ಮ ಮತ್ತು ಜನರ ಮಧ್ಯೆ ಇದೆ.  ನಿಮ್ಮ ಉಪಚಾರದಲ್ಲಿ, ನಿಮ್ಮ ಪ್ರೀತಿಯಲ್ಲಿ, ನೀವು ಪರಸ್ಪರರಿಗೆ ತೋರಿಸುವ ವಿಶ್ವಾಸದಲ್ಲಿ ಇದೆ. ನಿಮ್ಮ ಜನರು ಆರೋಗ್ಯವಾಗಿರಬೇಕೆಂದು ನೀವು ಬಯಸುವುದಾದರೆ ಮೊದಲು ಪ್ರೀತಿ, ವಿಶ್ವಾಸಗಳನ್ನು ಬೆಳೆಸಿಕೊಳ್ಳಿ.

ಆರೈಕೆ ಮತ್ತು ಪರಸ್ಪರ ಹಂಚಿಕೆ ಇವೇ ಆರೋಗ್ಯದ ಬೀಗದ ಕೈಗಳು.

– ಡೇವಿಡ್ ವರ್ನರ್