೧೧. ಅವಶ್ಯಕತೆಗಳನ್ನು ಗುರುತಿಸುವುದು.

ಆರೋಗ್ಯ ಕಾರ್ಯಕರ್ತರಾಗಿ ನಿಮ್ಮ ಮುಖ್ಯ ಉದ್ದೇಶ, ಜನರ ಅತಿ ಮುಖ್ಯ ಆರೋಗ್ಯ ಸಮಸ್ಯೆಗಳು ಮತ್ತು ಜನರ ಮುಖ್ಯ ಸಮಸ್ಯೆಗಳ ಕುರಿತು ಯೋಚಿಸುವುದಾಗುತ್ತದೆ. ಇದನ್ನೆಲ್ಲ ಕಂಡುಹಿಡಿಯಲು ಮೊದಲು ನೀವು ಒಂದು ಪ್ರಶ್ನೆಗಳ ಪಟ್ಟಿಯನ್ನು ತಯಾರುಮಾಡಬೇಕಾಗುತ್ತದೆ.

ಮುಂದಿನ ಎರಡು ಪುಟಗಳಲ್ಲಿ ಏನೇನು ಕೇಳಬಹುದೆಂದು ಕೊಟ್ಟಿದೆ.  ಆದರೆ ನಿಮ್ಮ ಭಾಗದಲ್ಲಿ ಯಾವ ರೀತಿಯ ಪ್ರಶ್ನೆಗಳು ಮುಖ್ಯ ಎಂದು ನೀವೇ ನಿರ್ಧರಿಸಿ.  ನಿಮಗೆ ಮಾಹಿತಿ ಸಿಗುವುದರ ಜೊತೆಗೆ ಜನರು ತಮ್ಮನ್ನು ತಾವೇ ಕೇಳಿಕೊಳ್ಳಲು ನೆರವಾಗುವಂಥ ಪ್ರಶ್ನೆಗಳನ್ನು ಕೇಳಿ.

ಮನೆಯಿಂದ ಮನೆಗೆ ಹೋಗಿ ಕೇಳುವ ಪ್ರಶ್ನೆಗಳ ಪಟ್ಟಿಯು ಬಹಳ ಉದ್ದ ಅಥವಾ ಕ್ಲಿಷ್ಟವಾಗಿರಕೂಡದು.   ಯಾರಿಗೂ ತಮ್ಮನ್ನು  ಎಣಿಸುವುದು ಇಷ್ಟವಾಗುವುದಿಲ್ಲ.  ನಿಮ್ಮ ಮಾಹಿತಿ ಸಂಗ್ರಹಣೆಯಲ್ಲಿ ಒಂದೊಂದು ವ್ಯಕ್ತಿಯೂ ಏನನ್ನುತ್ತಾನೋ ಎಂಬುದು ಬಹಳ  ಮುಖ್ಯ.  ಕೈಯಲ್ಲಿ ಪ್ರಶ್ನೆಗಳ ಪಟ್ಟಿಯನ್ನು ಹಿಡಿದು ಹೋಗುವುದೂ ಸರಿಯಾಗಲಿಕ್ಕಿಲ್ಲ.  ಮನಸ್ಸಿನಲ್ಲಿ ಗುರುತು ಹಾಕಿಕೊಂಡ  ಪ್ರಶ್ನೆಗಳಿರಲಿ.

ಪ್ರಶ್ನೆಗಳು

ಸಮುದಾಯ ಆರೋಗ್ಯದ ಅವಕತೆಗಳನ್ನು ಗುರುತಿಸುವ ಜೊತೆಗೆ ಜನರನ್ನ ಆಲೋಚಿಸುವಂತೆ ಮಾಡುವುದಕ್ಕಾಗಿ,

ಜನರಿಗನಿಸಿದ ಅವಶ್ಯಕತೆ:

ದಿನ ನಿತ್ಯದ ಜೀವನದಲ್ಲಿ ಯಾವವು ಅವರಿಗೆ ಆರೋಗ್ಯವಾಗಿರಲು ಸಹಾಯ ಮಾಡುತ್ತವೆ?

ಆರೋಗ್ಯದ ಜೊತೆಗೆ ಜೀವನದ ಬೇರೆ ವಿಷಯಗಳಲ್ಲೂ ಜನರ ಮುಖ್ಯ ಸಮಸ್ಯೆ, ಚಿಂತೆ, ಅವಶ್ಯಕತೆಗಳೇನು?

ಮನೆ ಮತ್ತು ಪಾಯಖಾನೆಗಳು

ಬೇರೆ ಬೇರೆ ಮನೆಗಳು ಹೇಗಿವೆ?  ಗೋಡೆ,  ನೆಲಗಳು ಹೇಗಿವೆ?  ಮನೆಯನ್ನು ಸ್ವಚ್ಛವಾಗಿಡಲಾಗಿದೆಯೇ? ಅಡಿಗೆಯನ್ನು ಎಲ್ಲಿ ಮಾಡುತ್ತಾರೆ?  ಹೊಗೆ ಹೊರ ಹೋಗುತ್ತದೆಯೇ?  ಜನರು ಎಲ್ಲಿ ಮಲಗುತ್ತಾರೆ?

ನೊಣ, ತಗಣಿ, ಚಿಕ್ಕಾಡು, ಇಲಿ, ಹೆಗ್ಗಣಗಳ ಕಾಟವಿದೆಯೇ? ಎಷ್ಟಿದೆ? ನಿಯಂತ್ರಣಕ್ಕಾಗಿ ಜನರು ಏನು ಮಾಡುತ್ತಿದ್ದಾರೆ? ಬೇರೆ ಏನಾದರೂ ಮಾಡಬಹುದೇ?

ಆಹಾರ ರಕ್ಷಣೆ ಹೇಗಿದೆ?  ಇನ್ನೂ ಒಳ್ಳೆಯ ರೀತಿಯಲ್ಲಿ ಮಾಡಬಹುದೆ?    ಯಾವುದೇ ಪ್ರಾಣಿಗಳು-ನಾಯಿ ಬೆಕ್ಕು, ಹಂದಿ,ಕೋಳಿ- ಮನೆಯೊಳಗೆ ಬರುತ್ತವೆಯೇ?  ಅವುಗಳಿಂದ ಏನು ಸಮಸ್ಯೆಗಳಿವೆ?

ಪ್ರಾಣಿಗಳ ಮುಖ್ಯ ರೋಗಗಳಾವವು?  ಆ ರೋಗಗಳಿಂದ ಜನರಿಗೆ ತೊಂದರೆ ಇದೆಯೇ? ಪ್ರಾಣಿಗಳ ರೋಗ ತಡೆಗೆ ಜನರು ಏನೇನು ಮಾಡುತ್ತಿದ್ದಾರೆ?

ಜನರಿಗೆ ಎಲ್ಲಿಂದ ನೀರು ಸಿಗುತ್ತದೆ? ಅದು ಕುಡಿಯಲು ಯೋಗ್ಯವಿದೆಯೇ? ಯಾವುದೇ ಮುನ್ನೆಚ್ಚರಿಕೆ ಕ್ರಮವನ್ನು ತೆಗೆದುಕೊಳ್ಳಲಾಗಿದೆಯೇ?

ಎಷ್ಟು ಮನೆಗಳಲ್ಲಿ ಸಂಡಾಸುಗಳಿವೆ?  ಜನರು ಸಂಡಾಸುಗಳನ್ನು ಸರಿಯಾಗಿ ಉಪಯೋಗಿಸುತ್ತಾರೆಯೇ?

ಹಳ್ಳಿ ಸ್ವಚ್ಛವಾಗಿದೆಯೇ?  ಜನರು ಗೊಬ್ಬರವನ್ನು ಎಲ್ಲಿ ಒಗೆಯುತ್ತಾರೆ?  ಯಾಕೆ?

ಜನಸಂಖ್ಯೆ

ಸಮಾಜದಲ್ಲಿ ಎಷ್ಟು ಜನರಿದ್ದಾರೆ?  ಅದರಲ್ಲಿ ೧೫ ವರ್ಷದೊಳಗಿನವರು ಎಷ್ಟು?

ಎಷ್ಟು ಜನಕ್ಕೆ ಓದಿ ಬರೆಯಲಿಕ್ಕೆ ಬರುತ್ತದೆ?  ಶಾಲೆ ಹೇಗಿದೆ?  ಮಕ್ಕಳಿಗೆ ಒಳೆಯ ಶಿಕ್ಷಣ ಸಿಗುತ್ತಿದೆಯೇ?  ಸಾವನ್ನು ತಡೆಯಬಹುದಿತ್ತೆ?

ಕಳೆದ ವರ್ಷ ಎಷ್ಟು ಜನರು ರೋಗಕ್ಕೀಡಾಗಿದ್ದರು?  ಎಷ್ಟು ದಿನದವರೆಗೆ?  ಒಬ್ಬೊಬ್ಬರಿಗೂ ಆಗಿದ್ದ ತೊಂದರೆಗಳೇನು? ಹೇಗೆ?

ಎಷ್ಟು ಜನಕ್ಕೆ ಸದಾ ಇರುವ ಕಾಯಿಲೆ ಇದೆ? ಯಾವ ಕಾಯಿಲೆಗಳು? ಹೆಚ್ಚಿನ ಜನರಿಗಿರುವ ಮಕ್ಕಳ ಸಂಖ್ಯೆ ಎಷ್ಟು? ಎಷ್ಟು ಮಕ್ಕಳನ್ನವರು ಕಳೆದುಕೊಂಡಿದ್ದಾರೆ? ಯಾವ ವಯಸ್ಸಿನಲ್ಲಿ? ಯಾವ ಕಾರಣದಿಂದ? ಮೂಲ ಕಾರಣಗಳೇನು?

ಎಷ್ಟು ಜನರು ಮತ್ತೆ ಮಕ್ಕಳು ಬೇಡ ಎಂದು ತೀರ್ಮಾನಿಸಿದ್ದಾರೆ? ಪದೇ ಪದೇ ಆಗದಂತೆ ಎಷ್ಟು ಜನ ನೋಡಿಕೊಳ್ಳುತ್ತಿದ್ದಾರೆ?  ಯಾವ ಕಾರಣಕ್ಕೆ? (೨೦ ನೇ ಅಧ್ಯಾಯ)

ಆಹಾರ

ಎಷ್ಟು ತಾಯಂದಿರು ಶಿಶುಗಳಿಗೆ ಹಾಲೂಡುತ್ತಾರೆ? ಎಷ್ಟು ಕಾಲ? ಈ ಮಕ್ಕಳು ತಾಯಿ ಹಾಲುಣ್ಣದ ಮಕ್ಕಳಿಗಿಂತ ಆರೋಗ್ಯವಾಗಿರುವರೇ? ಏಕೆ? ಜನರ ಮುಖ್ಯ ಆಹಾರವೇನು? ಅವು ಎಲ್ಲಿಂದ ಬರುತ್ತವೆ? ಸಿಗುವ ಆಹಾರದ ಸರಿಯಾದ ಉಪಯೋಗವಾಗುತ್ತಿದೆಯೇ? ಎಷ್ಟು ಮಕ್ಕಳು ಕಡಿಮೆ ತೂಕದವರು? (೧೩೨ ನೇ ಪುಟ ನೋಡಿ.) ತಾಯಿ ತಂದೆಯರಿಗೆ ಅಥವಾ ಮಕ್ಕಳಿಗೆ ಆಹಾರದ ಬಗ್ಗೆ ಏನೇನು ಗೊತ್ತು?

ಬೀಡಿ  ಸಿಗರೇಟಿನ ಚಟ ಇರುವವರು ಎಷ್ಟು ಜನ? ತಂಪು ಪಾನೀಯ ಅಥವಾ ಶೆರೆ ಕುಡಿಯುವವರು ಬಹಳ ಇದ್ದಾರೆಯೇ? ಪದೇ ಪದೇ   ಕುಡಿಯುತ್ತಾರೆಯೇ? ಜನರ ನಿತ್ಯ ಜೀವನದಲ್ಲಿ ಅದು ಯಾವ ರೀತಿಯ ಪ್ರಭಾವ ಬೀರುತ್ತಿದೆ? (೧೭೬ ರಿಂದ ೧೭೯ ನೇ ಪುಟ ನೋಡಿ.)

ಭೂಮಿ ಮತ್ತು ಆಹಾರ

ಜನರಿಗೆ ಸಾಕಾಗುವಷ್ಟು ಆಹಾರ ಅವರ ಭೂಮಿಯಲ್ಲಿ ಸಿಗುತ್ತದೆಯೇ? ಇದೇ ರೀತಿಯಲ್ಲಿ ಬೆಳೆ ತೆಗೆಯತ್ತಿದ್ದರೆ ಇನ್ನೂ ಎಷ್ಟು ಕಾಲ ಅವರಿಗೆ ಅಲ್ಲಿಂದ ಆಹಾರ ಸಿಗುತ್ತದೆ?

ಭೂಮಿಯ ಹಂಚಿಕೆ ಹೇಗಿದೆ?  ಎಷ್ಟು ಜನರ ಕೈಯಲ್ಲಿ ಭೂಮಿ ಇದೆ?  ಉತ್ಪಾದನೆ ಜಾಸ್ತಿ ಮಾಡಲು ಯಾವುದೇ ಪ್ರಯತ್ನ ನಡೆದಿದೆಯೇ?

ಬೆಳೆ ಮತ್ತು ಆಹಾರ ಸಂಗ್ರಹಣೆಯ ವಿಧಾನವೇನು?  ಆ ವಿಧಾನದಿಂದ ಹಾನಿ ಆಗುತ್ತಿದೆಯೇ? ಏಕೆ? ಹೇಗೆ?

ಆರೋಗ್ಯ ಆರೈಕೆ

ಜನರ ಆರೋಗ್ಯ ರಕ್ಷಣೆಯಲ್ಲಿ ಸ್ಥಳೀಯ ನಾಟೀವೈದ್ಯರ, ಸೂಲಗಿತ್ತಿಯರ ಪಾತ್ರ ಎಷ್ಟಿದೆ?

ಯಾವ ಪದ್ದತಿಗಳು, ಯಾವ ಔಷಧಗಳು ಹೆಚ್ಚು ಉಪಯೋಗದಲ್ಲಿವೆ?  ಅವುಗಳಲ್ಲಿ ಉತ್ತಮವಾದವುಗಳು ಯಾವವು? ಅತಿ ಅಪಾಯಕಾರಿ ಆದವುಗಳು ಯಾವವು?

ಹತ್ತಿರದಲ್ಲಿ ಆರೋಗ್ಯ ಕೇಂದ್ರ ಇದೆಯೇ? ಹೇಗಿದೆ?  ಖರ್ಚೆಷ್ಟಾಗಬಹುದು?  ಜನರು ಅದನ್ನು ಎಷ್ಟು ಉಪಯೋಗಿಸುತ್ತಿದ್ದಾರೆ?  ಎಷ್ಟು ಮಕ್ಕಳಿಗೆ ರೋಗ ಪ್ರತಿಬಂಧಕ ಲಸಿಕೆಗಳಾಗಿವೆ?  ಯಾವ ಯಾವ ರೋಗಗಳ ವಿರುದ್ದ?  ಇನ್ನಾವ ಪ್ರತಿಬಂಧಕ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ? ಇನ್ನಾವ ಕ್ರಮಗಳನ್ನು ಕೈಗೊಳ್ಳಬಹುದು?

ಸ್ವಸಹಾಯ

ನಿಮ್ಮ ಜನರ ಇಂದಿನ ಮತ್ತು ನಾಳಿನ ಆರೋಗ್ಯಕ್ಕೆ ಸಂಬಧಿಸಿದ ಅತಿ ಮುಖ್ಯ ವಿಷಯಗಳೇನು? ಜನರ ಆರೋಗ್ಯ ಸಮಸ್ಯೆಗಳಲ್ಲಿ ಎಷ್ಟನ್ನು ಅವರು ತಮಗೆ ತಾವೇ ಪರಿಹರಿಸಿಕೊಳ್ಳಲು ಸಾಧ್ಯವಿದೆ?

ಎಷ್ಟು  ಸಮಸ್ಯೆಗಳಿಗೆ  ಅವರು  ಹೊರಗಿನ  ವ್ಯವಸ್ಥೆಯನ್ನು  ಮತ್ತು ಹೊರಗಿನ   ಔಷಧಗಳನ್ನು ಅವಲಂಬಿಸಿದ್ದಾರೆ?

ಜನರಿಗೆ ಸ್ವಸಹಾಯ, ಸ್ವಯಂ ವೈದ್ಯ ಮಾಡಿಕೊಳ್ಳುವುದರಲ್ಲಿ ಎಷ್ಟು ಆಸಕ್ತಿ ಇದೆ?  ಇನ್ನೂ ಹೆಚ್ಚು ಕಲಿಯುವ ದಾರಿ ಯಾವುದು? ಕಲಿಯಲು ಏನಾದರೂ ಅಡ್ಡಿ ಇದೆಯೇ?

ಶ್ರೀಮಂತರ ಹಕ್ಕುಗಳೇನು? ಬಡಜನರ ಹಕ್ಕುಗಳೇನು?  ಗಂಡಸರ ಹಕ್ಕುಗಳೇನು? ಹೆಂಗಸರ ಹಕ್ಕುಗಳೇನು?  ಮಕ್ಕಳ ಹಕ್ಕುಗಳೇನು? ಸಮಾಜದಲ್ಲಿ ಈ ಎಲ್ಲರನ್ನೂ ಉಳಿದವರು ಹೇಗೆ ನಡೆಸಿಕೊಳ್ಳುತ್ತಾರೆ? ಅದು ಸರಿಯೇ? ಎಕೆ? ಬದಲಾವಣೆ ಎಲ್ಲಿ ಆಗಬೇಕು?  ಯಾರಿಂದ ಆಗಬೇಕು? ಹೇಗೆ ಆಗಬೇಕು?

ಜನರು ದಿನನಿತ್ಯದ ಕೆಲಸಗಳನ್ನು ಒಟ್ಟಾಗಿ ಮಾಡುತ್ತಾರೆಯೇ? ಅವಶ್ಯಬಿದ್ದಾಗ ಒಬ್ಬರಿಗೊಬ್ಬರು ಸಹಾಯ ಮಾಡುತ್ತಾರೆಯೇ?

ಹಳ್ಳಿಯನ್ನು ಇನ್ನೂ ಚೆನ್ನಾಗಿ ಆರೋಗ್ಯಮಯವಾಗಿ ಮಾಡಲು ಏನು ಮಾಡಬಹುದು? ನೀವು ಮತ್ತು ನಿಮ್ಮ ಜನರು ಹೇಗೆ ಮತ್ತು ಎಲ್ಲಿಂದ ಶುರುಮಾಡಬಹುದು?

೧೨ಅವಶ್ಯಕತೆಗಾಗಿ ಹಳ್ಳಿಯ ಸಂಪನೂಲಗಳನ್ನೇ ಬಳಸುವುದು

ಯಾವುದೇ ಕಾರ್ಯಕ್ರಮವನ್ನು ರೂಪಿಸುವುದು ಹೇಗೆ ಎಂಬುದು ಸ್ಥಳೀಯ ಸಂಪನ್ಮೂಲಗಳು ಏನೇನು ಸಿಗುತ್ತವೆ ಎನ್ನುವುದನ್ನು ಅವಲಂಬಿಸಿದೆ.

ಕೆಲವು ಕಾರ್ಯಕ್ರಮಗಳಿಗೆ ಹೊರಗಿನ ಸಂಪನ್ಮೂಲಗಳು (ಸಾಮಾನು, ಹಣ ಅಥವಾ ಬೇರೆ ಕಡೆಯ ಕೂಲಿಗಳು) ಬೇಕು. ಉದಾಹರಣೆಗೆ ರೋಗ ಪ್ರತಿಬಂಧಕ ಚುಚ್ಚುಮದ್ದುಗಳನ್ನು ಹಾಕಬೇಕೆಂದರೆ ಹೊರಗಡೆಯಿಂದ -ಕೆಲವೊಮ್ಮೆ ಹೊರ ದೇಶದಿಂದ ಲಸಿಕೆಗಳನ್ನು ತರಿಸಬೇಕು.

ಇನ್ನು ಕೆಲವು ಕಾರ್ಯಕ್ರಮಗಳಿಗೆ ಹೊರಗಿನಿಂದ ಯಾವುದೇ ಸಹಾಯ ಬೇಕಿಲ್ಲ. ಉದಾಹರಣೆಗೆ ಊರೊಳಗೆ ಒಂದು ಕಾಂಪೋಸ್ಟ್ ಗುಂಡಿ ತೋಡಬೇಕು ಅಥವಾ ಸಂಡಾಸು ಕಟ್ಟಬೇಕೆಂದರೆ ಒಂದು ಕುಟುಂಬದವರು ಅಥವಾ ಅಕ್ಕಪಕ್ಕದ ನಾಲ್ಕಾರು ಜನ ಸೇರಿ ಊರೊಳಗಿನ ಸಾಮಾನು ಉಪಯೋಗಿಸಿ  ಕೆಲಸವನ್ನು ಪೂರ್ತಿ ಮಾಡಬಹುದು.

ಜನರ ಒಳ್ಳೆಯ ಆರೋಗ್ಯಕ್ಕಾಗಿ ಲಸಿಕೆಗಳು ಮತ್ತು ಕೆಲವು ಮುಖ್ಯ ಔಷಧಗಳನ್ನು ಹೊರಗಿನಿಂದ ತರುವುದು ಸೂಕ್ತ. ಅವನ್ನು ತರಿಸಲು ನೀವು ಹೆಚ್ಚಿನ ಪ್ರಯತ್ನ ಮಾಡಬೇಕು.  ಆದರೂ ಆದಷ್ಟೂ ಸ್ಥಳೀಯ ಸಂಪನ್ಮೂಲಗಳನ್ನೇ ಉಪಯೋಗಿಸುವುದು ಹೆಚ್ಚು ಉಪಯುಕ್ತ.

ನೀವು ಮತ್ತು ನಿಮ್ಮ ಸಮುದಾಯ ನಿಮ್ಮ ಅವಶ್ಯಕತೆಗಳಿಗಾಗಿ  ಹೊರಗಿನ ಸಂಪನ್ಮೂಲಗಳ ಮೇಲೆ ಅವಲಂಬನೆ ಕಡಿಮೆ ಮಾಡಿದಷ್ಟೂ ನಿಮ್ಮ ಆರೋಗ್ಯ ಹೆಚ್ಚು ಉತ್ತಮವಾಗಿರುತ್ತದೆ.

ಸ್ಥಳೀಯ ಸಂಪನ್ಮೂಲಗಳನ್ನು ಹೆಚ್ಚು ಹೆಚ್ಚು ಬಳಸಲು ಜನರಿಗೆ ಪ್ರೋತ್ಸಾಹಿಸಿ. ಸ್ಥಳೀಯ ಸಂಪನ್ಮೂಲಗಳು ಅವಶ್ಯಬಿದ್ದಾಗ ಕೈಗೆ ಸಿಗತ್ತವಷ್ಟೇ ಅಲ್ಲ, ಅವು ಅತಿ ಕಡಿಮೆ ಬೆಲೆಯಲ್ಲಿ ಸಿಕ್ಕು ಅತ್ಯುತ್ತಮ ಕೆಲಸಮಾಡಬಹುದು.  ಉದಾಹರಣೆಗೆ ತಾಯಿಹಾಲು ಹಣವಿಲ್ಲದೇ ಸಿಗುವುದಷ್ಟೇ ಅಲ್ಲ, ಅತ್ಯುತ್ಕೃಷ್ಟ ಕೂಡಾ.   ಮಕ್ಕಳಿಗೆ ಬಾಟ್ಲಿ ಹಾಲು ಕೊಡುವ ಬದಲು ಮೊಲೆಹಾಲು ಕೊಡಲು ತಾಯಂದಿರಿಗೆ ಪ್ರೋತ್ಸಾಹಿಸಿದರೆ ಶಿಶುಗಳ ಅತಿ ಹೆಚ್ಚು ರೋಗಗಳನ್ನು ತಾಯಿ ಹಾಲಿನಿಂದಲೇ ತಡೆಯಬಹುದು.

ನಿಮ್ಮ ಆರೋಗ್ಯ ಕಾರ್ಯಕ್ರಮದಲ್ಲಿ ಒಂದು ಮಾತು ನೆನಪಿಡಿ.

ಜನರ ಉತ್ತಮ ಆರೋಗ್ಯಕ್ಕೆ ಸಿಗಬಹುದಾದ ಅತಿ ಬೆಲೆಬಾಳುವ ಸಂಪನ್ಮೂಲಗಳೆಂದರೆ ಜನರೇ.

೧೩. ಏನು ಮಾಡಬೇಕು, ಎಲ್ಲಿಂದ ಆರಂಭಿಸಬೇಕು?

ಒಮ್ಮೆ ಸಮುದಾಯದತ್ತ,  ಅದರ ಅವಶ್ಯಕತೆ, ಮತ್ತು ಸಂಪನ್ಮೂಲಗಳತ್ತ ಅವಲೋಕಿಸಿದ ನಂತರ ಜನರೊಟ್ಟಿಗೆ ಕುಳಿತು ಮೊದಲು ಎನು ಮಾಡಬೇಕು, ಎಲ್ಲಿಂದ ಆರಂಭಿಸಬೇಕು ಎನ್ನುವುದನ್ನು ನಿರ್ಧರಿಸಿ.  ಜನರ ಆರೋಗ್ಯಕ್ಕಾಗಿ ಎಷ್ಟೊಂದು ಬೇರೆ ಬೇರೆ ಕೆಲಸಗಳನ್ನು ಮಾಡಬಹುದು. ಕೆಲವೊಂದನ್ನು ತಕ್ಷಣ ಮಾಡಬೇಕು.  ಇನ್ನು ಕೆಲವು ಪ್ರತಿಯೊಬ್ಬರ ಮತ್ತು ಇಡೀ ಸಮಾಜದ ಭವಿಷ್ಯದ ಬಗ್ಗೆ ನಿರ್ಧರಿಸುವಂಥಹುದು.

ಹೆಚ್ಚಿನ ಹಳ್ಳಿಗಳಲ್ಲಿ ಆಹಾರದ ಕೊರತೆಯೇ ಅನಾರೋಗ್ಯದ ಮೂಲ ಕಾರಣವಾಗಿದೆ.  ಜನರಿಗೆ ಸರಿಯಾಗಿ ತಿನ್ನಲು ಸಿಗುವ ತನಕ ಅವರು ಆರೋಗ್ಯವಂತರಾಗಲು ಸಾಧ್ಯವಿಲ್ಲ.  ನಿಮ್ಮ ಯೋಜನೆಗಳು ಏನೇ ಇರಲಿ, ಜನರಿಗೆ ತಿನ್ನಲು  ಸರಿಯಾಗಿ ಸಿಗದಿರುವಲ್ಲಿ ನಿಮ್ಮ ಮೊದಲ ಕಾರ್ಯಕ್ರಮ ಆ ಕುರಿತದ್ದೇ ಆಗಬೇಕು.

ಆಹಾರದ ಕೊರತೆಗೆ ಕಾರಣಗಳು ಹಲವಾರಿರುವುದರಿಂದ ಅದನ್ನು ಬಗೆಹರಿಸಲಿಕ್ಕೂ ಅನೇಕ ದಾರಿಗಳಿವೆ.  ಈ ವಿಚಾರಗಳನ್ನು ಚರ್ಚಿಸಿ ನೀವು ಮತ್ತು ನಿಮ್ಮ ಸಮುದಾಯದವರು ಸೇರಿ ಸಮಸ್ಯೆ ಪರಿಹಾರಕ್ಕೆ ಯಾವ ದಾರಿ ಆರಿಸಬೇಕು ಮತ್ತು ಹೇಗೆ ಮಾಡಿದರೆ ಉತ್ತಮ ಎಂಬುದನ್ನು ನಿರ್ಧರಿಸಬೇಕು.

ಜನರ ಆಹಾರದ ಕೊರತೆ ನೀಗಿಸಲು ಆರಿಸಿದ ಅನೇಕ ದಾರಿಗಳ ಕುರಿತು ಈ ಕೆಳಗೆ ಕೊಟ್ಟಿದೆ.  ಇವುಗಳಲ್ಲಿ ಕೆಲವುಗಳಿಂದ ತಕ್ಷಣದ ಪರಿಹಾರ ಸಿಕ್ಕಿದೆ.   ಕೆಲವು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ.  ನೀವು ಮತ್ತು ನಿಮ್ಮ ಮಿತ್ರರು ಸೇರಿ  ಈ ದಾರಿಗಳಲ್ಲಿ ಯಾವುದು ನಿಮ್ಮ ಹಳ್ಳಿಗೆ ತಕ್ಕುದೆಂಬುದನ್ನು ಕಂಡುಕೊಂಡು ಆರಿಸಿಕೊಳ್ಳಿ.

ಉತ್ತಮ ಆಹಾರ ಪಡೆಯಲು ಕೆಲವು  ದಾರಿಗಳು

ಉತ್ತಮ ಆಹಾರ ಪಡೆಯಲು ಇನ್ನಷ್ಟು ದಾರಿಗಳು

೧೪ಹೊಸತನ್ನು ಪ್ರಯತ್ನಿಸುವುದು

ಹಿಂದಿನ ಪುಟದಲ್ಲಿ ಹೇಳಿದ ಎಲ್ಲಾ ಸಲಹೆಗಳನ್ನೂ ಒಂದೇ ಪ್ರದೇಶದಲ್ಲಿ ಜಾರಿಗೊಳಿಸಲಿಕ್ಕಾಗುವುದಿಲ್ಲ.  ಕೆಲವನ್ನು ನಿಮ್ಮಲ್ಲಿ ಬೇಕಾದಂಥ ಬದಲಾವಣೆಗಳೊಂದಿಗೆ ಪ್ರಯತ್ನಿಸಿದರೆ ಮಾಡಲಿಕ್ಕಾಗಬಹುದು.  ಇಂಥ ಕೆಲವನ್ನು ಮಾಡಿ ನೋಡಿದ ಮೇಲೆಯೇ ನಿಮ್ಮಲ್ಲಿಗೆ ಅದು ಅನ್ವಯಿಸುತ್ತದೋ ಇಲ್ಲವೋ ತಿಳಿಯುತ್ತದೆ.  ಅದೇ ಪ್ರಯೋಗ.

ಯಾವುದೇ ಪ್ರಯೋಗ ಮಾಡುವಾಗ ಸಣ್ಣ ಪ್ರಮಾಣದಲ್ಲಿ ಆರಂಭಿಸಿ.  ಅಕಸ್ಮಾತ್ ಅದು ಹುಸಿಯಾಯಿತೆಂದರೆ ಅಥವಾ ಅದರಲ್ಲಿ ಬದಲಾವಣೆ ಆಗಬೇಕೆಂದರೆ ನಿಮಗೆ ದೊಡ್ಡ ನಷ್ಟವೇನೂ ಆಗುವುದಿಲ್ಲ.  ಯಶಸ್ವಿಯಾಯಿತೆಂದರೆ   ನೋಡಿದ  ಜನರೂ ಹೆಚ್ಚಿನ ಪ್ರಮಾಣದಲ್ಲಿಅದನ್ನು ಶುರು ಮಾಡುತ್ತಾರೆ.

ಪ್ರಯೋಗ ಹುಸಿ ಹೋಯಿತೆಂದರೆ ನಿರಾಶರಾಗಬೇಡಿರಿ. ಸ್ವಲ್ಪ ಬದಲಾವಣೆ ಮಾಡಿದರೆ ಸರಿಯಾಗಬಹುದು. ಅಪಯಶಸ್ಸಿನಿಂದಲೂ ಕೂಡ ಯಶಸ್ಸಿನಿಂದ ಕಲಿತಷ್ಟೇ ಕಲಿಯಲು ಸಾಧ್ಯವಿದೆ.  ಆದರೆ ಪ್ರಯೋಗ ಚಿಕ್ಕದಿರಲಿ.

ಹೊಸ ಪ್ರಯೋಗದ ಒಂದು ಉದಾಹರಣೆ ಇಲ್ಲಿದೆ;

ಸೋಯಾ ಬೀನ್ ಎನ್ನುವುದು ಒಂದು ಅತಿ ಪೌಷ್ಟಿಕವಾದ ಅವರೆ. ಆದರೆ ಅದನ್ನು ನಿಮ್ಮಲ್ಲಿ ಬೆಳೆಯಲು ಸಾಧ್ಯವೇ? ಬೆಳೆದರೆ ಜನರು ಅದನ್ನು ತಿನ್ನುವರೇ?

ಮೊದಲನೆಯದಾಗಿ ಬೇರೆ ಬೇರೆ ಮಣ್ಣಿನಲ್ಲಿ ಒಂದೆರಡೇ ಸಾಲುಗಳಿಂದ ಆರಂಭಿಸಿ. ಬೆಳೆ ಬೇರೆ ಬೇರೆ ಜಾಗಗಳಲ್ಲಿ, ನೀರು ಇರುವಲ್ಲಿ, ಕಡಿಮೆ ನೀರಿರುವಲ್ಲಿ ಬೆಳೆದು ನೋಡಿ.  ಜನರು ತಿನ್ನುವರೋ ಎಂಬುದನ್ನೂ ನೋಡಿ.  ಹೌದಾದರೆ ಚೆನ್ನಾಗಿ ಬೆಳೆಯುವ ಜಾಗದಲ್ಲಿ ಹೆಚ್ಚು  ಬೆಳೆಯನ್ನು ಮುಂದುವರೆಸಿ.  ಅದೇ ವೇಳೆಗೆ ಇನ್ನೂ ಕೆಲವು ಕಡೆ ಒಂದೆರಡು ಸಾಲು ಬೆಳೆಸುತ್ತ ಪ್ರಯೋಗ ಮುಂದುವರೆಸಿ.

ಪ್ರತಿಯೊಂದು  ಪ್ರಯೋಗದಲ್ಲೂ ಹೊಸ ಬದಲಾವಣೆಗಳನ್ನು-ಮಣ್ಣು, ನೀರಿನ ಪ್ರಮಾಣ, ಗೊಬ್ಬರ, ಬೇರೆ ಜಾತಿಯ ಬೀಜ-ಮಾಡುತ್ತ ಹೋಗಿ.  ಒಮ್ಮೆಗೆ ಒಂದೇ ಬದಲಾವಣೆ ಮಾಡಿ ನೋಡಿದಿರೆಂದರೆ ಆ ಬದಲಾವಣೆಯ ಪರಿಣಾಮ ಎದ್ದು ಕಾಣುತ್ತದೆ.

ಉದಾಹರಣೆಗೆ ಪ್ರಾಣಿಗಳ ಗೊಬ್ಬರದ ಪ್ರಭಾವ ನೋಡಬೇಕೆಂದರೆ ಮೊದಲು ನೀವು ಒಂದೇ ಜಾತಿಯ ಬೀಜಗಳನ್ನು ಬೇರೆ ಬೇರೆ ಸಾಲುಗಳಲ್ಲಿ ಅಷ್ಟೇ ನೀರು, ಅಷ್ಟೇ ಬೆಳಕು ಸಿಗುವಂತೆ ಬೆಳೆಸಿ.  ಆದರೆ ಪ್ರತಿ ಸಾಲಿಗೂ ಬೇರೆ ಬೇರೆ ಪ್ರಮಾಣದಲ್ಲಿ ಗೊಬ್ಬರ ಹಾಕುತ್ತ ಹೋಗಿ.

ಒಂದು  ಪ್ರಮಾಣದ ಗೊಬ್ಬರದಿಂದ ಗಿಡಗಳಿಗೆ ಪ್ರಯೋಜನವಿದೆ, ಆದರೆ ಹೆಚ್ಚು ಗೊಬ್ಬರ ಹಾಕಿದರೆ ಕೆಡಕು ಎಂಬುದೂ ಇದರಿಂದ ತಿಳಿಯುತ್ತದೆ.  ಇದು ಒಂದು ಉದಾಹರಣೆಯಷ್ಟೇ.  ನಿಮ್ಮ ಪ್ರಯೋಗ ಬೇರೆಯ ಫಲಿತಾಂಶವನ್ನೇ ತೋರಿಸಬಹುದು.

೧೫. ಭೂಮಿ ಮತ್ತು ಜನಸಂಖ್ಯೆಗಳ ಮಧ್ಯೆ ಸಮತೋಲನ ಸ್ಥಾಪಿಸುವುದು

ಜನರ ಆರೋಗ್ಯವು ಹತ್ತು ಹಲವಾರು ವಿಷಯಗಳನ್ನು ಅವಲಂಬಿಸಿದೆ.  ಆದರೆ ಎಲ್ಲಕ್ಕಿಂತ ಮುಖ್ಯವಾದುದು ಆಹಾರ. ಜನರಿಗೆ ಉಣ್ಣಲು ಸಾಕಷ್ಟಿದೆ ಎಂದರೆ ಜನರು ಆರೋಗ್ಯವಾಗಿದ್ದಾರೆ ಎಂದೆನ್ನಬಹುದು.

ಆಹಾರದ ಮೂಲ ಭೂಮಿ.  ಭೂವಿಯನ್ನು ಸರಿಯಾಗಿ ಉಪಯೋಗಿಸುತ್ತಿದ್ದರೆ ಅತಿ ಹೆಚ್ಚಿನ ಬೆಳೆಯನ್ನು ಪಡೆಯಲು ಸಾಧ್ಯ.   ಜನರಿಗೆ ಇಂದೂ ಮತ್ತು ಭವಿಷ್ಯದಲ್ಲೂ ಸಾಕಷ್ಟು ಆಹಾರ ಕೊಡುವ ರೀತಿಯಲ್ಲಿ ಹೆಚ್ಚೆಚ್ಚು ಉತ್ತಮವಾಗಿ ಭೂಮಿಯನ್ನು ಬಳಸುವುದನ್ನು ಆರೋಗ್ಯ ಕಾರ್ಯಕರ್ತರು ತಿಳಿದುಕೊಂಡಿರಬೇಕು.  ಅದೆಷ್ಟೇ ಉತ್ತಮವಾಗಿ ಬಳಸುತ್ತಿದ್ದರೂ ಒಂದು ಭೂಭಾಗ ಒಂದು ನಿರ್ದಿಷ್ಟ ಸಂಖ್ಯೆಯ ಜನರಿಗೆ ಮಾತ್ರ ಹೊಟ್ಟೆ ತುಂಬಬಹುದು.  ಆದರಿಂದು ಎಷ್ಟೋ ಜನ ರೈತರ ಕೈಯಲ್ಲಿ ತಮ್ಮ ಹೊಟ್ಟೆ ತುಂಬಿಸಿಕೊಳ್ಳಲಿಕ್ಕೆ ಸಾಕಾಗುವಷ್ಟೂ ಭೂಮಿ ಇಲ್ಲ. ಆದ್ದರಿಂದ ಅವರು ಸ್ವತಃ ಆರೋಗ್ಯವಾಗಿ ಇಲ್ಲ.

ಜಗತ್ತಿನ ಎಷ್ಟೋ ದೇಶಗಳಲ್ಲಿ ಪರಿಸ್ಥಿತಿಯು ದಿನದಿನಕ್ಕೆ ಸುಧಾರಿಸುವುದರ ಬದಲು ಇನ್ನೂ ಹಾಳಾಗುತ್ತಿದೆ.   ವರ್ಷದಿಂದ ವರ್ಷಕ್ಕೆ ಭೂಮಿಯ ಮೇಲೆ ಜನರ ಸಂಖ್ಯೆ ಹೆಚ್ಚುತ್ತ ಹೋಗುತ್ತಿದೆ. ಪರಿಣಾಮವಾಗಿ ತಿನ್ನುವ ಬಾಯಿಗಳು ಹೆಚ್ಚುತ್ತಿವೆ.  ಆದರೆ ಉಣಿಸುವ ಭೂಮಿ ಮಾತ್ರ ಗಾತ್ರದಲ್ಲಿ ಬೆಳೆಯುವುದಿಲ್ಲ.

ಕುಟುಂಬ ಯೋಜನೆಯನ್ನು ಪರಿಚಯಿಸುವ ಮೂಲಕವಾಗಿ ಅನೇಕ ಆರೋಗ್ಯ ಕಾರ್ಯಕ್ರಮಗಳು ಭೂಮಿ ಮತ್ತು ಜನಸಂಖೆಯ ಮಧ್ಯೆ ಸಮತೋಲನ ಮಾಡಲು ಪ್ರಯತ್ನಿಸುತ್ತವೆ. ಕುಟುಂಬಗಳು ಚಿಕ್ಕದಾಗಿದ್ದರೆ ಆ ತುಂಡು ಭೂಮಿಯ ಮೇಲೆ ಒತ್ತಡ ಬಹಳವಿರುವುದಿಲ್ಲ. ಮನೆಮಂದಿಯೆಲ್ಲಾ ಹೊಟ್ಟೆ ತುಂಬ ಉಣ್ಣಬಹುದು.  ಆದರೆ ಕುಟುಂಬ ಯೋಜನೆಯನ್ನು ಬಹಳಷ್ಟು ಬಡಕುಟುಂಬಗಳು ಒಪ್ಪುವುದಿಲ್ಲ.

ಬಡ ಜನರಿಗೆ ಮಕ್ಕಳು ಹೆಚ್ಚಿದ್ದಷ್ಟೂ ಲಾಭದಾಯಕ. ಚಿಕ್ಕ ವಯಸ್ಸಿನಲ್ಲಿ ಅವು ಸತ್ತು ಹೋಗುವ ಭಯ ಬೇರೆ ಇರುವುದರಿಂದ ಅವರು ಹೆಚ್ಚು ಮಕ್ಕಳನ್ನು ಆಶಿಸುವುದು ಸಹಜವೇ.  ಹೆಚ್ಚಿನ ಜನರಿಗೆ ಹೆಚ್ಚು ಮಕ್ಕಳೆಂದರೆ ಜೀವ ವಿಮೆಯ ಭರವಸೆ ಇದ್ದಂತೆಅದೊಂದು ರೀತಿಯ ಸಾಮಾಜಿಕ ಸಂರಕ್ಷಣಾ ವಿಧಾನ.  ಹೆಚ್ಚೆಚ್ಚು ಬಡಜನರು ಹೆಚ್ಚು ಮಕ್ಕಳನ್ನು ಹಡೆಯಲು ಬಯಸುತ್ತಾರೆ.  ಅವರಿಗೆ ಮಕ್ಕಳು ಮನೆಗೆ ಆದಾಯ.  ಅವು ಹೊಲದಲ್ಲಿ ಪುಕ್ಕಟೆ ಕೆಲಸ ಮಾಡುವ ಕೂಲಿಗಳು. ದೊಡ್ಡವಾದಂತೆ ಹೊರಗೂ ಕೂಲಿ ಮಾಡಿ ಹಣ ಗಳಿಸಿ ತರುತ್ತವೆ. ತಾಯ್ತಂದೆಗಳು ಮುದುಕರಾದ ಮೇಲೆ ಇಷ್ಟು ಮಕ್ಕಳಲ್ಲಿ ಯಾರಾದರೊಬ್ಬರು, ಇಲ್ಲವೇ ಮೊಮ್ಮಕ್ಕಳು ತಮ್ಮನ್ನು ಸಲಹಬಹುದೆಂಬ ಕನಸು ಕೂಡ ಇರುತ್ತದೆ.

ಆದರೆ ದೇಶದ ಬಗ್ಗೆ ವಿಚಾರ ಮಾಡಿದಾಗ, ಒಂದು ಬಡ ದೇಶದಲ್ಲಿ ಜನಸಂಖ್ಯೆ ಬಹಳವಾಯಿತೆಂದರೆ ಅದು ದೇಶದ ಆರ್ಥಿಕತೆಗೆ ದೊಡ್ಡ ಅಘಾತವೇ ಸರಿ.  ಜನರೊಂದಿಗೆ ಕೆಲಸ ಮಾಡುವ ಬೇರೆ ಬೇರೆ ಗುಂಪುಗಳು ಬೇರೆ ಬೇರೆ ವಾದವನ್ನು ಬೆಂಬಲಿಸುತ್ತಾರೆ.  ಭೂಮಿ ಕಡಿಮೆ ಇದ್ದು ಜನಸಂಖ್ಯೆ ಜಾಸ್ತಿ ಇರುವುದು ಹಸಿವೆಗೆ ಕಾರಣವಲ್ಲ. ಬದಲಿಗೆ ಕೆಲವೇ ಸ್ವಾರ್ಥಿ ಜನರ ಕೈಯಲ್ಲಿ ಹೆಚ್ಚು ಭೂಮಿ ಇರುವುದೇ ಹಸಿವೆಗೆ ಕಾರಣವೆನ್ನುತ್ತಾರೆ ಅವರು.  ಭೂಮಿ ಮತ್ತು ಸಂಪತ್ತಿನ ಸಮಾನ ಹಂಚಿಕೆ ಆಗಬೇಕೆನ್ನುತ್ತಾರೆ ಅವರು.  ಜನರು ತಮ್ಮ ಆರೋಗ್ಯ, ಭೂಮಿ, ಮತ್ತು ಜೀವನದ ಮೇಲೆ ಹೆಚ್ಚೆಚ್ಚು ನಿಯಂತ್ರಣ ಪಡೆಯುವ ದಿಶೆಯಲ್ಲಿ ಅವರು ಕೆಲಸ ಮಾಡುತ್ತಾರೆ.

ಎಲ್ಲಿ ಭೂಮಿ ಮತ್ತು ಸಂಪತ್ತು ಸಮಾನವಾಗಿ ಹಂಚಿಕೆಯಾಗಿದೆಯೋ, ಎಲ್ಲಿ ಜನರ ಆರ್ಥಿಕ ಪರಿಸ್ಥಿತಿಯು ಸಾಕಷ್ಟು ಅವರ ಕೈ ಹಿಡಿತದಲ್ಲಿ ಇದೆಯೋ ಅಲ್ಲೆಲ್ಲ ಜನರು ಚಿಕ್ಕ ಕುಟುಂಬವನ್ನೇ ಆಯ್ಕೆ ಮಾಡುತ್ತಾರೆ.  ಜನರ ಆಯ್ಕೆಯೇ ಅದಾದಾಗ ಅಲ್ಲಿ ಕುಟುಂಬ ಯೋಜನೆ ಖಂಡಿತವಾಗಿಯೂ ಬಲು ಚೆನ್ನಾಗಿ ಕೆಲಸ ಮಾಡುತ್ತದೆ. ಭೂಮಿ ಮತ್ತು ಜನಸಂಖ್ಯೆಯ ನಡುವೆ ಸಮನ್ವಯ ಸಾಧಿಸಬೇಕೆಂದರೆ  ನ್ಯಾಯಯುತ ಹಂಚಿಕೆ ಮತ್ತು ಸಾಮಾಜಿಕ ನ್ಯಾಯ ಆಗುವಂತೆ ಮಾಡುವುದೇ ಹೆಚ್ಚು ಸರಿಯಾದ ದಾರಿಯೇ ಹೊರತು ಕುಟುಂಬ ಯೋಜನೆಗೆ ಜನರನ್ನು ಬಲವಂತ ಪಡಿಸುವುದಲ್ಲ ಎನ್ನುವುದು ಬಹು ಗುಂಪುಗಳ ಅಭಿಪ್ರಾಯ.

ಪ್ರೀತಿ ಎನ್ನುವ ಶಬ್ದಕ್ಕೆ ಸಾಮಾಜಿಕವಾಗಿ ನ್ಯಾಯ ಎಂದರ್ಥ. ಆರೋಗ್ಯ ಕಾರ್ಯಕರ್ತೆಯು ತನ್ನ ಜನರನ್ನು ಪ್ರೀತಿಸುತ್ತಿದ್ದಾಳೆಂದರೆ ಅವಳು ಸಮಾಜದಲ್ಲಿ ಭೂಮಿ ಮತ್ತು ಸಂಪತ್ತಿನ ಹೆಚ್ಚು ನ್ಯಾಯಯುತ ಹಂಚಿಕೆಯತ್ತ ಕೆಲಸ ಮಾಡಬೇಕು.

೧೬. ರೋಗತಡೆ ಮತ್ತು ಚಿಕಿತ್ಸೆಗಳ ಮಧ್ಯೆ ಸಮನ್ವಯ ಸಾಧಿಸುವುದು

ರೋಗತಡೆ ಮತ್ತು ಚಿಕಿತ್ಸೆಗಳ ಮಧ್ಯೆ ಸಮನ್ವಯ ಸಾಧಿಸುವುದೆಂದರೆ, ಜನರಿಗನಿಸಿದ ಅವಶ್ಯಕತೆ ಮತ್ತು ನಿಜವಾದ ಅವಶ್ಯಕತೆಗಳ ಮಧ್ಯೆ ಸಮನ್ವಯ ಸಾಧಿಸಿದಂತೆಯೇ.

ಆರೋಗ್ಯ ಕಾರ್ಯಕರ್ತರಾದ ನೀವು ಜನರ ಬಳಿಗೆ ಹೋಗಿ ಅವರ ಜೊತೆಗೇ ಕೆಲಸ ಮಾಡಿ, ಅವರಿಗನಿಸಿದ ಅವಶ್ಯಕತೆಗಳ ಪೂರೈಕೆಗಾಗಿ ಶ್ರಮಿಸಬೇಕು.  ಕಾಯಿಲೆ ಬಿದ್ದ ರೋಗಿಯ ತಕ್ಷಣದ ಉಪಚಾರ ಜನರಿಗೆ ಮುಖ್ಯವೆನಿಸುತ್ತದೆ.  ಕಾರಣ, ಕಾಯಿಲೆ ಬಿದ್ದವರಿಗೆ  ಗುಣಮಾಡಿಸುವುದು ನಿಮ್ಮ ಮೊದಲ ಗುರಿಯಾಗಲಿ.

ಆದರೆ ಅದೇ ಸಮಯದಲ್ಲಿ ದೂರದೃಷ್ಟಿ ನಿಮ್ಮದಾಗಿರಲಿ.  ಕಾಯಿಲೆ ಬಿದ್ದವರ ಚಿಕಿತ್ಸೆ ಮಾಡಿಸುತ್ತಲೇ ಅವರಿಗೆ ಭವಿಷ್ಯದ ಯೋಚನೆ ಮಾಡುವುದನ್ನೂ ಕಲಿಸಿ.  ಇಂದಿನ ಹೆಚ್ಚಿನ ರೋಗಗಳನ್ನು ತಡೆಯುವುದು ಸಾಧ್ಯವಿದೆ.  ಆದರೆ ಆ ಕೆಲಸ  ಅವರು ಮಾಡಬಲ್ಲರು ಎಂಬುದನ್ನು ಅವರಿಗೆ ತಿಳಿಸಿಕೊಡಬೇಕಷ್ಟೇ.

ಅತಿ ಉತ್ಸಾಹ ಬೇಡ.  ಎಷ್ಟೋ ಆರೋಗ್ಯ ಕಾರ್ಯಕರ್ತರು ರೋಗತಡೆಯ ಉತ್ಸಾಹದ ಭರದಲ್ಲಿ ಇಂದು ಜನರು ಅನುಭವಿಸುತ್ತಿರುವ ಕಾಯಿಲೆ ಮತ್ತು ಅದರ ಚಿಕಿತ್ಸೆಯನ್ನು ಕಡೆಗಣಿಸಿಬಿಡುತ್ತಾರೆ.  ಜನರಿಗೆ ಅತಿ ಮುಖ್ಯವಾದ ಇಂದಿನ ಅವಶ್ಯಕತೆಗಳನ್ನು ಕಡೆಗಣಿಸಿದಾಗ ಸಹಜವಾಗಿಯೇ ಅವರು ಜನರ ವಿಶ್ವಾಸ ಮತ್ತು ಬೆಂಬಲವನ್ನು ಕಳೆದುಕೊಳ್ಳುತ್ತಾರೆ.  ಆಗ ರೋಗ ತಡೆಯ ಕೆಲಸವೂ ಸರಿಯಾಗಿ ಸಾಗುವುದಿಲ್ಲ.

ರೋಗತಡೆ ಮತ್ತು ಚಿಕಿತ್ಸೆಗಳು ಒಟ್ಟಾಗಿಯೇ ಸಾಗಬೇಕು.  ಕಾಯಿಲೆ ಶುರುವಾದ ಕೂಡಲೇ ಚಿಕಿತ್ಸೆ  ಆರಂಭಿಸಿದರೆ ರೋಗವು ಉಲ್ಬಣಿಸುವುದನ್ನು ತಡೆಯಲು ಸಾಧ್ಯ.   ಆರೋಗ್ಯ ಸಮಸ್ಯೆಗಳನ್ನು  ಜನರಿಗೆ ತಿಳಿಹೇಳಿ ರೋಗಗಳನ್ನು ಆರಂಭದಿಂದಲೇ ಗುರುತಿಸಿ ಮನೆಯಲ್ಲೇ ಚಿಕಿತ್ಸೆ ಮಾಡುವ ಬಗೆಯನ್ನು ಜನರಿಗೆ ಹೇಳಿಕೊಟ್ಟಿರೆಂದರೆ ಅದೆಷ್ಟೋ ಅನವಶ್ಯಕ ನರಳುವಿಕೆಯನ್ನು ತಪ್ಪಿಸುವುದು ಸಾಧ್ಯವಿದೆ.

ರೋಗದ  ಆರಂಭಿಕ ಚಿಕಿತ್ಸೆಯೂ ರೋಗತಡೆಯ ಒಂದು ಅಂಗ.

ಜನರ ಸಹಕಾರ ಬೇಕೆಂದರೆ ಜನರ ಮಟ್ಟದಲ್ಲಿಯೇ ಪ್ರಯತ್ನಿಸಿ.  ಅವರಿಗೆ ಒಪ್ಪುವ ರೀತಿಯಲ್ಲೇ ರೋಗತಡೆ ಮತ್ತು ಚಿಕಿತ್ಸೆಗಳ ಸಮನ್ವಯದತ್ತ ಪ್ರಯತ್ನಿಸಿ.  ರೋಗ, ಚಿಕಿತ್ಸೆ ಮತ್ತು ಆರೋಗ್ಯಗಳ ಬಗ್ಗೆ ಜನರ ಭಾವನೆ ಹೇಗಿದೆ ಎಂಬುದರ ಮೇಲೆ ಈ ಒಂದು ಸಮನ್ವಯ ಸಾಧಿಸಲು ಸಾಧ್ಯ. ಭವಿಷ್ಯದತ್ತ ನೋಡಲು ಕಲಿತಂತೆ, ಅವರ ಭಾವನೆಯಲ್ಲಿ ಬದಲಾವಣೆ ಕಂಡಂತೆ,   ರೋಗಗಳ ನಿಯಂತ್ರಣ ಹೆಚ್ಚೆಚ್ಚು ಸಾಧ್ಯವಾದಂತೆ ಸಮನ್ವಯದತ್ತ ಜನರ ಒಲವು ಹೆಚ್ಚುತ್ತದೆ.

ರೋಗತಡೆಯ ಉಪಾಯಗಳನ್ನು ಹೇಳಿಕೊಡಿ. ಆದರೆ ಬಲವಂತದಿಂದಲ್ಲ.

ರೋಗತಡೆಯ ಮಾರ್ಗವು ಚಿಕಿತ್ಸಾ ವಿಧಾನದಿಂದ ಆರಂಭವಾಗಿರಬೇಕು.  ಜನರು ಚಿಕಿತ್ಸೆಗೆ ಬಂದಾಗ ರೋಗತಡೆಯ ಕುರಿತು ಮಾತಾಡಲು ಉತ್ತಮ ಅವಕಾಶವಿರುತ್ತದೆ.  ಉದಾಹರಣೆಗೆ ನಿಮ್ಮಲ್ಲಿಗೆ ತಾಯಿಯೊಬ್ಬಳು ಜಂತುಹುಳದ ಔಷಧಕ್ಕಾಗಿ ಮಗುವಿನೊಂದಿಗೆ ಬರುತ್ತಾಳೆ.  ಜಂತು ಹುಳದ ಔಷಧ ಕೊಟ್ಟು ಅದನ್ನು ಉಪಯೋಗಿಸುವ ರೀತಿಯನ್ನು ಹೇಳಿ ಜೊತೆಗೇ ಇಬ್ಬರಿಗೂ ಜಂತು ಹುಳ ಹೇಗೆ ಹರಡುತ್ತದೆ, ಅದರ ತಡೆ ಹೇಗೆ ಸಾಧ್ಯ ಎಂಬುದನ್ನೆಲ್ಲಾ ವಿವರಿಸಬಹುದು.  (೧೩ ನೇ ಅಧ್ಯಾಯ)  ಅವರ ಮನೆಗೆ ಆಗಾಗ್ಗೆ ಹೋಗಿ.  ಆದರೆ ತಪ್ಪು ಕಂಡುಹಿಡಿಯುವುದಕ್ಕಲ್ಲ, ಸ್ವ-ವೈದ್ಯವನ್ನು ಉತ್ತಮವಾಗಿ ಮಾಡುವುದನ್ನು ಕಲಿಸುವುದಕ್ಕಾಗಿ.

ರೋಗತಡೆಯ ಕ್ರಮ ಹೇಳಿಕೊಡಲು ಚಿಕಿತ್ಸಾ ಪದ್ದತಿಯನ್ನು ಬಳಸಿ.

೧೭. ಔಷಧಗಳ ಸರಿಯಾದ ಮತ್ತು ಮಿತವಾದ ಉಪಯೋಗ

ರೋಗತಡೆಯ ಕ್ರಮಗಳಲ್ಲಿ ಅತಿ ಮುಖ್ಯವಾದ ಆದರೆ ಅತಿ ಕಷ್ಟವಾದ ವಿಧಾನಗಳಲ್ಲೊಂದೆಂದರೆ ಜನರಿಗೆ ಔಷಧಗಳ ಸರಿಯಾದ ಮಿತಬಳಕೆಯನ್ನು ಕಲಿಸುವುದು.  ಕೆಲವೇ ಔಷಧಗಳು ಜೀವ ಉಳಿಸುವ ಮಟ್ಟದಲ್ಲಿ ಅತಿಮುಖ್ಯ. ಆದರೆ ಹೆಚ್ಚಿನ ರೋಗಗಳಿಗೆ ಔಷಧಗಳು ಬೇಡವೇ ಬೇಡ ಎನ್ನುವುದೂ ಅಷ್ಟೇ ಮುಖ್ಯವಾದ ವಿಷಯ. ಒಳ್ಳೆಯ ಆಹಾರ, ವಿಶ್ರಾಂತಿ, ಮತ್ತು ಕೆಲವು ಸಾಮಾನ್ಯ ಮನೆಮದ್ದುಗಳ ಉಪಯೋಗದಿಂದ ನಮ್ಮ ದೇಹವೇ ಹೆಚ್ಚಿನ ರೋಗಗಳನ್ನು ಹೊಡೆದು ಓಡಿಸಬಲ್ಲದು.

ಔಷಧದ ಅವಶ್ಯಕತೆ ಇಲ್ಲದಾಗಲೂ ಕೆಲವೊಮ್ಮೆ ರೋಗಿಗಳು ನಿಮ್ಮ ಬಳಿ ಬರಬಹುದು.  ಸುಮ್ಮನೆ ಅವರ ಸಮಾಧಾನಕ್ಕಾಗಿ ನೀವು ಏನನ್ನಾದರೂ ಕೊಟ್ಟು ಕಳಿಸಬಹುದು.  ಹಾಗೆ ಮಾಡಿದಿರೆಂದರೆ ಗುಣವಾದ ನಂತರ ನಿಮ್ಮ ಔಷಧವೇ ತಮಗೆ ಗುಣಮಾಡಿದ್ದೆಂದು ಹೇಳುತ್ತಿರುತ್ತಾರೆ.   ಆದರದು ಸತ್ಯವಲ್ಲವೇ ಅಲ್ಲ.

ಈ ಔಷಧಗಳ ಅವಲಂಬನೆಯನ್ನು ಕಲಿಸುವ ಬದಲು ನೀವು ಅವರಿಗೆ ಈ ರೋಗಕ್ಕೆ ಔಷಧ ಏಕೆ ಬೇಡ ಎಂದು ವಿವರಿಸಿ.   ರೋಗಮುಕ್ತರಾಗಲು ಔಷಧದ ಬದಲಿಗೆ  ಅವರೇ ಏನು ಮಾಡಬಹುದೆಂದು ಹೇಳಿಕೊಡಿ.

ಹೀಗೆ ಮಾಡುವುದರಿಂದ ನೀವು ಜನರಿಗೆ ಹೊರಗಿನ ಸಂಪನ್ಮೂಲದ ಬದಲಿಗೆ ಸ್ಥಳೀಯ ಸಂಪನ್ಮೂಲವನ್ನು ಉಪಯೋಗಿಸುವುದನ್ನು ಹೇಳಿಕೊಟ್ಟಂತಾಯಿತು. ಅಷ್ಟೇ ಅಲ್ಲ, ಔಷಧಗಳ ದುಷ್ಪರಿಣಾಮದಿಂದ ಅವರನ್ನು ರಕ್ಷಿಸಿದಂತೆಯೂ ಆಯಿತು.  ಏಕೆಂದರೆ ಅಡ್ಡಪರಿಣಾಮವಿಲ್ಲದ ಯಾವ ಔಷಧವೂ ಇಲ್ಲ.

ನೆನಪಿಡಿ; ಔಷಧಗಳು ಕೊಲ್ಲಬಹುದು.

ಅವಶ್ಯವಿಲ್ಲದಿದ್ದರೂ ಜನರು ಔಷಧ ಕೇಳುವ ಮೂರು ಮುಖ್ಯ ರೋಗಗಳೆಂದರೆ . ನೆಗಡಿ, . ಸಾಮಾನ್ಯ ಕೆಮು ಮತು . ಬೇಧಿ.

ನೆಗಡಿಗೆ ಔಷಧಗಳೆಂದರೆ ವಿಶ್ರಾಂತಿ, ಜಾಸ್ತಿ ದ್ರವಾಹಾರ, ಹೆಚ್ಚೆಂದರೆ ಒಂದು ಪ್ಯಾರಾಸಿಟಮಾಲ್ ಸಾಕು. ಪೆನಿಸಿಲಿನ್, ಟೆಟ್ರಾಸೈಕ್ಲಿನ್ ಮುಂತಾದ ಜೀವಿರೋಧಕಗಳಿಂದ ಪ್ರಯೋಜನವಿಲ್ಲ. (೨೭೧ ನೇ ಪುಟ ನೋಡಿ).

ಸಾಮಾನ್ಯ ಕೆಮ್ಮು ಅಥವಾ ಬಹಳಷ್ಟು ಕಫ ಇರುವ ತೀವ್ರ ಕೆಮ್ಮಿಗೂ ಕೂಡ ಜಾಸ್ತಿ ನೀರು ಕುಡಿಯುತ್ತಿದ್ದರೆ ಕಫ ಸಡಿಲವಾಗುತ್ತದೆ.  ಹಬೆಯ ಸೇವನೆ ಮಾಡಿದರೆ ಇನ್ನೂ ಉತ್ತಮ. ಇವು ಯಾವುದೇ ಕೆಮ್ಮಿನ ಔಷಧಕ್ಕಿಂತ ಶೀಘ್ರ ಗುಣಕಾರಿ. ಅನವಶ್ಯಕ ಔಷಧಗಳಿಗೆ ಜನರನ್ನು ದಾಸರನ್ನಾಗಿ ಮಾಡಬೇಡಿ.

ಮಕ್ಕಳಿಗಾಗುವ ಅತಿ ಹೆಚ್ಚು ಭೇದಿಗಳಿಗೆ ಔಷಧಗಳಿಂದ ಪ್ರಯೋಜನವಿಲ್ಲ. ನಿಯೋಮೈಸಿನ್, ಸ್ಟ್ರೆಪ್ಟೋಮೈಸಿನ್, ಕೋಲಿ-ಪೆಕ್ವಿನ್, ಲೋಮೋಟೋಲ್, ಎಂಟೆರೋವಿಯೋಫಾರ್ಮ್, ಕ್ಲೋರೆಂಫೆನಿಕಾಲ್, ಇವುಗಳಂತೂ ಅಪಾಯಕಾರಿ ಕೂಡ.  ಭೇದಿ ಆಗಿರುವ ಮಗುವಿಗೆ ಒಳ್ಳೆಯ ಊಟ, ಮತ್ತು ಹೆಚ್ಚಿನ ದ್ರವಾಹಾರ ಕೊಡುವುದು ಅತಿ ಮುಖ್ಯ.  (೧೯೫ ನೇ ಪುಟ ನೋಡಿ) ಮಗುವಿನ ರೋಗದ ಗುಣ ಔಷಧದಲ್ಲಿಲ್ಲ.  ತಾಯಿಯ ಕೈಲಿದೆ.  ತಾಯಂದಿರಿಗೆ ಇದನ್ನು ತಿಳಿಸಿ. ಏನು ಮಾಡಬೇಕೆಂದು ಹೇಳಿಕೊಟ್ಟರೆ ಅದೆಷ್ಟೋ ಮಕ್ಕಳ ಜೀವವನ್ನು ಉಳಿಸಬಹುದು.

ಹೆಚ್ಚಿನ ಬಾರಿ ಜನಸಾಮಾನ್ಯರೂ ಹಾಗೂ ಡಾಕ್ಟರುಗಳೂ ಔಷಧಗಳ ಅತಿಬಳಕೆಗೆ ಕಾರಣರಾಗುತ್ತಾರೆ.

  • ಅದು ವ್ಯರ್ಥ.
  • ಅದು ಜನರಿಗೆ ಅನವಶ್ಯಕ ವಸ್ತುಗಳ ಮೇಲೆ ಪರಾವಲಂಬನೆಯನ್ನು ಹೆಚ್ಚಿಸುತ್ತದೆ.  ಎಷ್ಟೋ ಬಾರಿ ಕೊಳ್ಳಲಿಕ್ಕೆ ಜನರ ಬಳಿ ಹಣವೂ ಇಲ್ಲದಿರಬಹುದು.
  • ಪ್ರತಿಯೊಂದು ಔಷಧವೂ ಎರಡು ಅಲಗಿನ ಕತ್ತಿಯಂತೆ.  ಅನವಶ್ಯಕವಾಗಿ ಸೇವಿಸಿದ ಔಷಧದಿಂದ ಅಪಾಯ ಆಗುವ ಸಾಧ್ಯತೆಯನ್ನು ಅಲ್ಲಗಳೆಯಲಾಗದು.
  • ಕೆಲವು ಔಷಧಗಳನ್ನು (ಜೀವಿರೋಧಕಗಳನ್ನು) ಪದೇ ಪದೇ ಬಳಸುವುದರಿಂದ ಅಥವಾ ಪೂರ್ಣಾವಧಿ ಬಳಸದಿರುವುದರಿಂದ ಆ  ರೋಗಾಣುಗಳ ಮೇಲೆ ಪ್ರಭಾವ ಬೀರದಂತಾಗುತ್ತದೆ. ಮುಂದೆ ಯಾವಾಗಲಾದರೂ ಪ್ರಾಣಾಂತಿಕ ರೋಗ ಬಂದಾಗ ಬಳಸಿದರೂ ಪ್ರಯೋಜನವಾಗದೇ ಹೋಗಬಹುದು.

ತನ್ನ ಶಕ್ತಿ ಕಳೆದುಕೊಳ್ಳುವ ಇಂಥ ಔಷಧಗಳಲ್ಲಿ ಕ್ಲೋರಂಫೆನಿಕಾಲ್ ಒಂದು.  ಇದೊಂದು  ಅಪಾಯಕಾರಿ, ಆದರೆ ಜೀವ ಉಳಿಸಬಲ್ಲ ಔಷಧ. ಇದರ ಅತಿ ಬಳಕೆಯಿಂದಾಗಿ ಜಗತ್ತಿನ ಅನೇಕ ಕಡೆ ಟೈಫಾಯಿಡ್ ಜ್ವರಕ್ಕೆ  ರಾಮಬಾಣವಾಗಬೇಕಿದ್ದ ಇದು ಇಂದು ನಿಷ್ಪ್ರಯೋಜಕವಾಗಿ ಬಿಟ್ಟಿದೆ.  ಕ್ಲೋರೋಂಫೆನಿಕಾಲಿನ ದುರ್ಬಳಕೆಯಿಂದಾಗಿ ಟೈಫಾಯಿಡ್ ರೋಗಾಣುಗಳು ಅದಕ್ಕೆ ಪ್ರತಿರೋಧ ಬೆಳೆಸಿಕೊಂಡುಬಿಟ್ಟಿವೆ.

ಈ ಎಲ್ಲ ಕಾರಣಗಳಿಗಾಗಿ ಔಷಧಗಳ ಅತಿಬಳಕೆ ಸಲ್ಲದು.

ಆದರೆ ಹೇಗೆ?  ಬಿಗಿಯಾದ ಕಾನೂನುಗಳಾಗಲೀ ಅಥವಾ ಒಳ್ಳೆಯ ತರಬೇತಿ ಪಡೆದವರಿಗೆ ಮಾತ್ರ ಔಷಧಗಳ ಬಳಕೆಗೆ ಪರವಾನಿಗಿ ಕೊಡುವುದಾಗಲೀ ಔಷಧಗಳ ದುರ್ಬಳಕೆಯನ್ನು ತಡೆದಿಲ್ಲ.  ಔಷಧಗಳ ಬಳಕೆಯ ಬಗೆಗೆ ಜನರ ತಿಳುವಳಿಕೆ ಹೆಚ್ಚಿ ಔಷಧಗಳ ಸರಿಯಾದ ಉಪಯೋಗ ಆಗಬೇಕೆಂದು ಅವರು ಅರಿತುಕೊಂಡಾಗಲೇ  ಅದು ಸಾಧ್ಯ.

ಔಷಧ ಬೇಡವೆಂದರೆ ಅವರಿಗೆ ತಿಳಿಯುವಂತೆ ಸರಿಯಾಗಿ ಏಕೆಂದು ವಿವರಿಸಿ ಹೇಳಿ.  ೬ ನೇ ಅಧ್ಯಾಯದಲ್ಲಿ ಔಷಧಗಳ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ಕೊಟ್ಟಿದೆ.  ಇಂಜೆಕ್ಷನ್ನಿನ ಅತಿಬಳಕೆಯ ಬಗ್ಗೆ ೯ ನೇ ಅಧ್ಯಾಯದ ೯೩ ನೇ ಪುಟದಲ್ಲಿ ಕೊಟ್ಟಿದೆ.  ಮೊದಲನೇ ಅಧ್ಯಾಯದಲ್ಲಿ ಔಷಧಗಳ ಸರಿಯಾದ ಉಪಯೋಗದ ಕುರಿತು ಹೇಳಿದೆ.