ಹಳ್ಳಿಯ ಆರೋಗ್ಯ ಕಾರ್ಯಕರ್ತರೆಂದರೆ ಯಾರು?

ತನ್ನ ಕುಟುಂಬದವರೂ ನೆರೆಹೊರೆಯವರೂ ಉತ್ತಮ ಆರೋಗ್ಯದಿಂದಿರಲು ಸಹಾಯ ಮಾಡುವವರೇ ಆರೋಗ್ಯ ಕಾರ್ಯಕರ್ತರು. ಎಲ್ಲರೊಂದಿಗೆ ಪ್ರೀತಿ ವಿಶ್ವಾಸದಿಂದ ನಡೆದುಕೊಳ್ಳುವವನನ್ನು ಸುತ್ತಲಿನ ಜನರು ಆರೋಗ್ಯಕಾರ್ಯಕರ್ತನೆಂದು ತಾವೇ ಒಪ್ಪಿಕೊಡಿರುತ್ತಾರೆ.

ಸರಕಾರದ ಆರೋಗ್ಯ ಕಾರ್ಯಕ್ರಮದಲ್ಲಿ ಹಳ್ಳಿಯ ಆರೋಗ್ಯ ಕಾರ್ಯಕರ್ತರನ್ನು ತರಬೇತಿ ಕೊಟ್ಟು ತಯಾರು ಮಾಡುವ ವ್ಯವಸ್ಥೆ ಇರುತ್ತದೆ.  ಇನ್ನು ಕೆಲವರು ಅವರಿಗೆ ತರಬೇತಿ ಸಿಕ್ಕಿರದಿದ್ದರೂ ಸಹ ಅವರ ಗುಣ, ದಯಾಪರತೆಗಳನ್ನು ನೋಡಿ ಹಳ್ಳಿಯ ಜನರೇ ಅವರಿಗೆ ಆ ಸ್ಥಾನವನ್ನು ಕೊಟ್ಟಿರುತ್ತಾರೆ. ಇಂಥವರಿಗೆ ಯಾರೂ ಹೇಳಿಕೊಡದಿದ್ದರೂ ಪರಿಸ್ಥಿತಿಗಳನ್ನು ನೋಡಿ, ಸಹಾಯ ಮಾಡಿ ಅವರು ತಮ್ಮಷ್ಟಕ್ಕೆ ತಾವೇ ಕಲಿತಿರುತ್ತಾರೆ.

ಅಂದರೆ ಹಳ್ಳಿಯಲ್ಲಿ ತಮ್ಮ ಸಮಾಜದ ಆರೋಗ್ಯದ ಬಗ್ಗೆ ಯಾರಿಗೆ ಕಾಳಜಿ ಇದೆಯೋ ಅವರಿಗೆ ತರಬೇತಿ ಇರಲಿ, ಬಿಡಲಿ ಅವರು ಆರೋಗ್ಯ ಕಾರ್ಯಕರ್ತರೆನಿಸುತ್ತಾರೆ.

ಇದರರ್ಥ ಯಾರು ಬೇಕಾದರೂ ಹಳ್ಳಿಯ ಆರೋಗ್ಯ ಕಾರ್ಯಕರ್ತರಾಗಬಹುದು.

  • ತಾಯಿತಂದೆಯರು ತಮ್ಮ ಮಕ್ಕಳಿಗೆ ಸ್ವಚ್ಛತೆಯನ್ನು ಹೇಳಿಕೊಡಬಹುದು.
  • ರೈತರು ಒಟ್ಟಾಗಿ ಕೆಲಸ ಮಾಡಿ ಇನ್ನೂ ಹೆಚ್ಚು ಉತ್ಪಾದನೆಯತ್ತ ಹೋಗಬಹುದು.
  • ಶಾಲಾ ಶಿಕ್ಷಕರು ವಿದ್ಯಾರ್ಥಿಗಳಿಗೆ ಅನೇಕ ರೋಗಗಳನ್ನು ತಡೆಯುವ ಮತ್ತು ಚಿಕಿತ್ಸೆ ಮಾಡುವ ವಿಧಾನಗಳನ್ನು ಹೇಳಿಕೊಡಬಹುದು.
  • ತಾವು ಕಲಿತಿದ್ದನ್ನು ಮಕ್ಕಳು ತಮ್ಮ ತಾಯ್ತಂದೆಯರ ಜೊತೆ ಹಂಚಿಕೊಳ್ಳಬಹುದು.
  • ಔಷಧ ಮಾರುವ ಅಂಗಡಿಯವರು ತಮ್ಮಲ್ಲಿರುವ ಔಷಧಗಳ ಬಗ್ಗೆ ಸರಿಯಾದ ಮಾಹಿತಿ ಪಡೆದಿದ್ದು ತಮ್ಮ ಗ್ರಾಹಕರಿಗೂ ಹೇಳಿಕೊಡಬಹುದು.
  • ದಾಯಿಯರು ತಾಯ್ತಂದೆಯರನ್ನು ಕೂಡಿಸಿ ಮಹಿಳೆ ಗರ್ಭಿಣಿಯಾದಾಗ ಚೆನ್ನಾಗಿ ತಿನ್ನುವುದರ ಮಹತ್ವ ಎಷ್ಟೆಂಬುದನ್ನು ವಿವರಿಸಬಹುದು.  ಕುಟುಂಬ ಯೋಜನೆಯ ಅವಶ್ಯಕತೆಯ ಬಗ್ಗೆ ಹೇಳಬಹದು.

ಈ ಪುಸ್ತಕದಲ್ಲಿ ಹೇಳುವ ಆರೋಗ್ಯ ಕಾರ್ಯಕರ್ತ ಕೇವಲ ಔಷಧ, ರೋಗಗಳ ಬಗ್ಗೆ ತಿಳಿದುಕೊಂಡವರಷ್ಟೇ ಅಲ್ಲ, ತನ್ನ ಕುಟುಂಬದ   ಜನರ ಮತ್ತು ತನ್ನ ಹಳ್ಳಿಯ ಜನರ ಒಟ್ಟಾರೆ ಜೀವನ ಮಟ್ಟವನ್ನು ಹೆಚ್ಚಿಸಬೇಕೆಂದಿರುವ ಯಾರೇ ಆದರೂ ಅವರು ಆರೋಗ್ಯ ಕಾರ್ಯಕರ್ತರೇ.

 

ನೀವು ಸಮುದಾಯ ಆರೋಗ್ಯ ಕಾರ್ಯಕರ್ತರಿರಬಹುದು, ದಾಯಿ ಇರಬಹುದು,  ವೈದ್ಯ ಇರಬಹುದು, ಯಾರೇ ಆಗಲಿ ಈ ಪುಸ್ತಕವನ್ನು ಉಪಯೋಗಿಸುತ್ತಿದ್ದರೆ ಇದು ಕೇವಲ ನಿಮ್ಮ ಪುಸ್ತಕ ಅಲ್ಲ ಎಂಬುದನ್ನು ತಿಳಿಯಬೇಕು. ಎಲ್ಲರೂ ವಿಚಾರ ಹಂಚಿಕೊಳ್ಳಬೇಕಾದ, ಎಲ್ಲರ ಪುಸ್ತಕವಿದು.

ನಿಮಗೆ ತಿಳಿದುದನ್ನು ಹಂಚಿಕೊಳ್ಳಲು ಈ ಪುಸ್ತಕ ಉಪಯೋಗಿಸಿ. ನಾಲ್ಕಾರು ಜನರನ್ನು ಒಂದೆಡೆ ಸೇರಿಸಿ ಒಮ್ಮೊಮ್ಮೆ ಒಂದೊಂದು ಅಧ್ಯಾಯವನ್ನು ಓದಿ ಚರ್ಚೆ ಮಾಡಬಹುದು.

ಪ್ರೀತಿಯ ಹಳ್ಳಿಯ ಆರೋಗ್ಯ ಕಾರ್ಯಕರ್ತರೇ,

ಜನರ ಆರೋಗ್ಯವೇ ಈ ಪುಸ್ತಕದ ಉದ್ದೇಶ.  ಆದರೆ ನಿಮ್ಮ ಹಳ್ಳಿಯು ಒಂದು ಒಳ್ಳೆಯ ಆರೋಗ್ಯಧಾಮವಾಗಬೇಕೆಂದರೆ ನೀವು ಮೊದಲು ಜನರ ಆರೋಗ್ಯದ ಅವಶ್ಯಕತೆಗಳನ್ನು ಅರಿತಿರಬೇಕು. ಜನರ ಅವಶ್ಯಕತೆಗಳ ಬಗ್ಗೆ ನಿಮ್ಮ ಅರಿವು ಮತ್ತು ಕಳಕಳಿಯು ನಿಮ್ಮ ಔಷಧಗಳ  ಜ್ಞಾನದಷ್ಟೇ ಮಹತ್ವವಾದುದು.

ಜನರ ಆರೋಗ್ಯದ ಜೊತೆ ಅವರ ಅವಶ್ಯಕತೆಗಳ ಕಡೆ ಗಮನ ಕೊಡುವ ಕುರಿತು ಇಲ್ಲಿ ಕೆಲವು ಸಲಹೆಗಳಿವೆ.

. ದಯಾಳುವಾಗಿರಿ.

ವಿಶ್ವಾಸದ ಒಂದು ಮಾತು, ಒಂದು ಮುಗುಳ್ನಗೆ, ಭುಜದ ಮೇಲೆ ಇರಿಸಿದ ಒಂದು ಕೈ, ಇವೇ ಮುಂತಾದ ಕೆಲವು ಕೃತ್ಯಗಳು ಔಷಧಕ್ಕಿಂತಲೂ ಹೆಚ್ಚಿನ ಕೆಲಸ ಮಾಡುತ್ತವೆ. ಯಾವಾಗಲೂ ಬೇರೆಯವರನ್ನು ನಿಮ್ಮ ಸಮಾನರಾಗಿ ಕಾಣಿರಿ. ಬೇರೆಯವರು ನಿಮ್ಮ ಬಳಿ ಸಾಂತ್ವನಕ್ಕಾಗಿ ಬಂದಾಗ ನಿಮ್ಮವೇ ಚಿಂತೆ ಬೇಕಾದಷ್ಟಿದ್ದರೂ ತೋರಿಸಿಕೊಳ್ಳದೆ ಅವರ ಕಷ್ಟವನ್ನು ಅರಿಯಲು ಪ್ರಯತ್ನಿಸಿ.  ಬಂದವರು ನಿಮ್ಮ ಮನೆಯವರೇ ಆಗಿದ್ದರೆ ಏನು ಮಾಡುತ್ತಿದ್ದಿರಿ?  ಎಂಬ ಪ್ರಶ್ನೆಯನ್ನು ನಿಮ್ಮನ್ನೇ ನೀವು ಕೇಳಿಕೊಳ್ಳುತ್ತಿರಿ.

ರೋಗಿಯನ್ನು ಸಾಮಾನ್ಯ ಜನರಂತೆಯೇ ನೋಡಿ. ಬಹಳ ಕಾಯಿಲೆ ಬಿದ್ದವರತ್ತ ವಿಶೇಷ ಒಲವು ತೋರಿಸಿ. ಅವರ ಕುಟುಂದವರಿಗೂ ನಿಮ್ಮ ಕಾಳಜಿಯನ್ನು ತೋರಿಸಿ.  ರೋಗಿ ಬೇಗ ಗುಣಮುಖವಾಗುವುದರಲ್ಲಿ ನಿಮಗೂ ಆಸಕ್ತಿ ಇದೆ ಎಂದು ತೋರಿಸುತ್ತ ಬನ್ನಿ.

. ನಿಮ್ಮ ತಿಳುವಳಿಕೆಯನ್ನು ಹಂಚಿಕೊಳ್ಳಿ.

ಆರೋಗ್ಯ ಕಾರ್ಯಕರ್ತರ ಮೊದಲ ಕಾರ್ಯಕ್ರಮ ಕಲಿಸುವುದು.  ರೋಗದಿಂದ ದೂರ ಇರಲು ಜನರಿಗೆ ಸಹಾಯ ಮಾಡುವುದು ನಿಮ್ಮ ಕೆಲಸ.   ತಮಗೆ ಯಾವ ರೋಗ ಬಂದಿದೆ, ಅದಕ್ಕೆ ಏನು ಉಪಚಾರ ಮಾಡಬೇಕು ಯಾವ ಮನೆಮದ್ದು ಉಪಯುಕ್ತ, ಎಲ್ಲಿ ಹೊಸ ಔಷಧಗಳನ್ನು ಉಪಯೋಗಿಸಬೇಕು ಎಂಬುದನ್ನು ಕಲಿಸುವದೂ ಅತಿ ಮುಖ್ಯ.

ಜನರಿಗೆ ಸ್ವಂತ ವೈದ್ಯವಿದ್ಯೆ ಕಲಿಸುವುದು ಅಪಾಯಕಾರಿ ಎಂದು ಡಾಕ್ಟರುಗಳು ಹೇಳುತ್ತಾರೆ.  ಕಾಯಿಲೆ ಬಿದ್ದಾಗೆಲ್ಲ ಜನ ತಮ್ಮ ಬಳಿಗೇ ಬರಲಿ ಎಂಬುದೇ ಈ ಹೇಳಿಕೆಯ ಹಿಂದಿನ ಉದ್ದೇಶ. ಆದರೆ  ಯಾವುದೇ ವಿಚಾರವನ್ನು ಸರಿಯಾದ ರೀತಿಯಲ್ಲಿ ವಿವರಿಸಿ ಹೇಳಿದರೆ ವಿಚಾರದ ದುರುಪಯೋಗ ಆಗಲಾರದು.  ಇಂದು ಅತಿ ಸಾಮಾನ್ಯವಾದ ರೋಗಗಳಿಗೆ ಜನರು ತಮ್ಮ ಮನೆಯಲ್ಲಿಯೇ ಚಿಕಿತ್ಸೆ ಮಾಡಿಕೊಳ್ಳಲು ಸಾಧ್ಯವಿದೆ.

. ಜನರ ಆಚಾರ ವಿಚಾರಗಳಿಗೆ ಗೌರವ ಕೊಡಿ.

ನಿಮಗೆ ಹೊಸ ಔಷಧಗಳ ಬಗ್ಗೆ ಸ್ವಲ್ಪ ಗೊತ್ತಿದ್ದಾಕ್ಷಣ ಮನೆ-ಮದ್ದು, ನಾಟಿ ಔಷಧಗಳ ಬಗ್ಗೆ ನೀವು ಅನಾದರ ತೋರಿಸುವುದು ತಪ್ಪಾಗುತ್ತದೆ.  ಎಷ್ಟೋ ಬಾರಿ ಹೊಸ ಔಷಧ ಪದ್ದತಿಯಲ್ಲಿ ಮಾನವೀಯತೆಯ ಅಂಶ ಕಾಣುವುದೇ ಇಲ್ಲ.  ಆದರೆ ಮನೆ ಔಷಧಗಳಲ್ಲಿ ಪ್ರೀತಿ, ವಿಶ್ವಾಸಗಳು ಬಲು ಮುಖ್ಯ ಪಾತ್ರ ವಹಿಸುತ್ತವೆ.

ಹೊಸ ಔಷಧ ಪದ್ದತಿಯಲ್ಲಿ ಅತ್ಯುತ್ತಮವಾದವುಗಳ ಜೊತೆ ಸಾಂಪ್ರದಾಯಿಕ ಚಿಕಿತ್ಸೆಯಲ್ಲಿನ ಉತ್ತಮ ಅಂಶಗಳನ್ನು ಬೆರೆಸಿ  ಜನರ ರೋಗಕ್ಕೆ ಉಪಚಾರ ಮಾಡುವುದು ಯಾವುದೇ ಒಂದು ಪದ್ದತಿಗಿಂತ ಅದು ಉತ್ತಮ.

ಹೀಗೆ ಮಾಡಿದಾಗ ಆ ಜನರ ಸಂಸ್ಕೃತಿಗೆ ನಿಮ್ಮದೊಂದು ಕೊಡುಗೆ ನೀಡಿದಂತಾಗುತ್ತದೆ.

ಆದರೆ ಮನೆ ಔಷಧ ಪದ್ದತಿಯಲ್ಲೂ ಕೆಲವು ಅಪಾಯಕಾರಿಯಾದ ಪದ್ದತಿಗಳಿವೆ.  ಅಂಥವನ್ನು ಬದಲಾಯಿಸಬೇಕೆಂದು ನಿಮಗನಿಸಿದರೂ ಬಲು ಎಚ್ಚರಿಕೆಯಿಂದ ಅವನ್ನು ನಂಬಿದವರಿಗೆ ನೋವಾಗದಂತೆ, ಅವರ ಮೇಲಿನ ನಿಮ್ಮ ಗೌರವ ಕಡಿಮೆ ಮಾಡದೆಯೇ  ಪ್ರಯತ್ನಿಸಿ.  ಇದು ತಪ್ಪು ಎಂದು ಅವರಿಗೆ ಹೇಳುವ ಬದಲು ಇದರ ಬದಲು ಇನ್ನೊಂದು ರೀತಿಯಲ್ಲಿ ಮಾಡಿದರೆ ಹೇಗೆ ಎಂದು ಹೇಳಿಕೊಡಿ.

ಹೊಸ ಔಷಧ ಪದ್ದತಿಯಲ್ಲಾದರೂ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಎಲ್ಲಿದೆ? ಕೆಲವು ರೋಗಗಳನ್ನು ಹೊಡೆದೋಡಿಸಲು ಅವು ಸಹಾಯಕವಾಗಿರಬಹುದು.  ಆದರೇ ಈ ಹೊಸ ಔಷಧಗಳಿಂದಲೇ ಅದೆಷ್ಟು ಹೊಸ ಸಮಸ್ಯೆಗಳು ಉದ್ಭವಿಸಿಲ್ಲ?  ಜನರು ಒಮ್ಮೆ ಇದರ ಲಾಭಗಳನ್ನು ನೋಡುತ್ತಲೇ ಇದಕ್ಕೆ ಪೂರ್ತಿಯಾಗಿ ಅಂಟಿಕೊಂಡು ತಾವು ಉಳಿಸಿ ಬೆಳೆಸಿಕೊಂಡು ಬಂದ ಮನೆ ಪದ್ದತಿಗಳನ್ನು ಬದಿಗಿರಿಸಿ ಕೇವಲ ಹೊಸ ಪದ್ದತಿಗಳನ್ನು ವಿಪರಿತ ಬಳಸತೊಡಗುವುದೂ ಹೌದು.

ಕಾರಣ ಒಮ್ಮೆಗೇ ನಿರ್ಧಾರ ಮಾಡಬೇಡಿ.  ಜನರ ಸಾಂಪ್ರದಾಯಿಕ ಪದ್ದತಿಗಳನ್ನು ಗೌರವಿಸುತ್ತ ನಿಧಾನವಾಗಿ ಕೆಲಸ ಮಾಡಿ.  ಜನರ ಆತ್ಮಾಭಿಮಾನ, ಕಲೆ ಮತ್ತು ಜ್ಞಾನವನ್ನು ಬೆಳೆಸುವತ್ತ ನಿಮ್ಮ ಲಕ್ಷ್ಯವಿರಲಿ.

ನಾಟಿ ಔಷಧ ಕೊಡುವವರ ಜೊತೆ ಕೆಲಸ ಮಾಡಿ. ಅವರ ವಿರುದ್ಧವಲ್ಲ. ಅವರಿಂದ ಕಲಿಯಿರಿ. ನಿಮ್ಮಿಂದ ಅವರೂ ಕಲಿಯಲಿ.

೪. ನಿಮ್ಮ ಮಿತಿಯ ಅರಿವು ನಿಮಗೆ ಇರಲಿ.

ನಿಮ್ಮ ಜ್ಞಾನ ಎಷ್ಟೇ ಇರಲಿ, ನೀವು ನಿಮ್ಮ ಇತಿಮಿತಿಯನ್ನು

ಅರಿತು ಕೆಲಸ ಮಾಡುತ್ತಿದ್ದಷ್ಟು ಕಾಲ ಯಶಸ್ಸು ನಿಮ್ಮದು.  ನಿಮಗೆ ಹೇಗೆ ಮಾಡಬೇಕೆಂದು ಗೊತ್ತಿದ್ದಷ್ಟನ್ನೇ ಮಾಡಿರಿ. ನಿಮಗೆ ಸರಿಯಾಗಿ ಗೊತ್ತಿಲ್ಲದ, ಅನುಭವ ಇಲ್ಲದ ವಿಚಾರಗಳಲ್ಲಿ ಆ ನಿಮ್ಮ ಪ್ರಯೋಗದಿಂದ ಬೇರೆಯವರಿಗೆ ಹಾನಿ ಆಗತ್ತಿದ್ದರಂತೂ ಅದನ್ನು ಮಾಡಲಿಕ್ಕೆ ಹೋಗಬೇಡಿ.

ನಿರ್ಧಾರ ಮಾತ್ರ ನಿಮ್ಮದೇ ಆಗಿರಲಿ.

ಚಿಕಿತ್ಸೆ ಮಾಡುವಾಗ ಆಸ್ಪತ್ರೆಯಿಂದ ನೀವು ಎಷ್ಟು ದೂರ ಇದ್ದೀರಿ, ಎಂಬುದರ ಮೇಲೆ ನೀವು ಏನು ಮಾಡುತ್ತೀರಿ, ಮಾಡುವುದಿಲ್ಲ ಎಂಬುದು ಅವಲಂಬಿಸಿದೆ.

ಉದಾಹರಣೆಗೆ ಅದೇ ಹಡೆದ ಬಾಣಂತಿಗೆ ವಿಪರೀತ ರಕ್ತಸ್ರಾವ ಆಗುತ್ತಿರುವಾಗ ಕೇವಲ ಅರ್ಧಗಂಟೆಯಲ್ಲಿ ಆರೋಗ್ಯ ಕೇಂದ್ರವನ್ನು ತಲುಪಬಹುದೆನಿಸಿದರೆ ಕೂಡಲೇ ಆಕೆಯನ್ನು ಆರೋಗ್ಯ ಕೇಂದ್ರಕ್ಕೆ ಹೊರಡಿಸಿ.  ಆದರೆ ಆರೋಗ್ಯ ಕೇಂದ್ರ ಬಹಳ ದೂರವಿದೆ ಎಂದರೆ ಬಾಣಂತಿಯ ಗರ್ಭಕೋಶವನ್ನು ತಿಕ್ಕಿ (೩೨೩ ನೇ ಪುಟ) ಅಥವಾ ಆಕ್ಸಿಟೋಸಿನ್ ಇಂಜೆಕ್ಷನ್ ಕೊಟ್ಟು (೩೨೪ ನೇ ಪುಟ) ಉಪಚಾರ ಮಾಡುವುದೇ ಉತ್ತಮವಾಗಬಹುದು.

ಅನವಶ್ಯಕವಾಗಿ ದುಡುಕಬೇಡಿ. ಆದರೆ ಅಪಾಯ ತೀರಾ ಹತ್ತಿರದಲ್ಲಿದ್ದರೆ, ನಿಮಗೆ ಗೊತ್ತಿದ್ದಷ್ಟನ್ನು ಮಾಡಿದರೆ ಸಹಾಯ ಆಗಬಹುದು ಎಂದು ಖಚಿತವಾದಾಗ ಹಿಂಜರಿಯಬೇಡಿ.

ಇತಿಮಿತಿಯ ಅರಿವಿನ ಜೊತೆಗೆಸಂದರ್ಭ ಬಂದಾಗ ಬುದ್ದಿ ಉಪಯೋಗಿಸುವ ಜಾಣ್ಮೆಯೂ ನಿಮ್ಮಲ್ಲಿರಲಿ.

. ಸದಾ ಕಲಿಯುತ್ತಿರಿ.  

ಹೆಚ್ಚಿನದನ್ನು ಕಲಿಯುವ ಅವಕಾಶವನ್ನೆಂದೂ ಬಿಡಬೇಡಿ. ನಿಮ್ಮ   ಕೆಲಸವನ್ನು ಇನ್ನೂ ಉತ್ತಮಗೊಳಿಸುವ ಯಾವುದೇ ಮಾಹಿತಿ ಸಿಕ್ಕರೂ ಕುಳಿತು ಅಭ್ಯಾಸ ಮಾಡಿ. ವೈದ್ಯರು, ಆರೋಗ್ಯಾಧಿಕಾರಿಗಳು, ಕೃಷಿ ಅಧಿಕಾರಿಗಳು, ಯಾರು ಸಿಕ್ಕರೂ  ಸತತ ಪ್ರಶ್ನೆಗಳನ್ನು ಕೇಳುತ್ತಿದ್ದು ಹೊಸದನ್ನು ತಿಳಿದುಕೊಳ್ಳುತ್ತಿರಿ.

ಹೆಚ್ಚಿನ ತರಬೇತಿ, ವಿದ್ಯಾಭ್ಯಾಸಕ್ಕಾಗಿ ಸಿಗುವ ಯಾವುದೇ ಅವಕಾಶವನ್ನು ಬದಿಗೊತ್ತಬೇಡಿ.

ನಿಮ್ಮ ಮೊದಲ ಕೆಲಸ ಕಲಿಸುವುದು. ಆದರೆ ನೀವು ಸತತವಾಗಿ   ಕಲಿಯುತ್ತಿಲ್ಲದಿದ್ದಲ್ಲಿ, ಜನರಿಗೆ ಹೇಳಲು ನಿಮ್ಮಲ್ಲಿ ಹೊಸ ವಿಚಾರಗಳು ಉಳಿಯುವುದೇ ಇಲ್ಲ.

. ಉಪದೇಶಿಸುವುದನ್ನು ನೀವೂ ಆಚರಿಸಿ.

ನೀವು ಏನು ಹೇಳುತ್ತಿದ್ದಿರಿ ಎನ್ನುವುದಕ್ಕಿಂತ ನೀವು ಏನು ಮಾಡುತ್ತಿದ್ದೀರಿ ಎನ್ನುವುದರ ಕಡೆಗೆ ಜನರಿಗೆ ಹೆಚ್ಚು ಲಕ್ಷ್ಯವಿರುತ್ತದೆ. ಆರೋಗ್ಯ ಕಾರ್ಯಕರ್ತರಾಗಿರುವ ನೀವು ಮೊದಲು ನಿಮ್ಮ ಆರೋಗ್ಯದ ಕಡೆಗೆ  ಗಮನ ಕೊಟ್ಟಿರಬೇಕಾಗುತ್ತದೆ. ಅನಾರೋಗ್ಯ ಉಂಟುಮಾಡುವ ಚಟಗಳಿಂದ ದೂರವಿದ್ದು ಸ್ವತಃ ಜನರಿಗೊಂದು ಉದಾಹರಣೆಯಾಗಿರಬೇಕು.

ಸಂಡಾಸು ಕಟ್ಟಿಕೊಳ್ಳಿ ಎಂದು ಜನರಿಗೆ ಉಪದೇಶಿಸುವ ಮೊದಲು ನಿಮ್ಮ ಮನೆಯಲ್ಲಿ ಸಂಡಾಸು ಉಪಯೋಗಿಸುತ್ತಿದ್ದೀರಾ ಎನ್ನುವುದನ್ನು ಖಚಿತ ಮಾಡಿಕೊಳ್ಳಿ.

ಶ್ರಮದಾನ ಮಾಡಲು ಜನರನ್ನು ಒಟ್ಟು ಸೇರಿಸಿದಾಗ ಅವರೊಂದಿಗೆ ನೀವೂ ದುಡಿಯಿರಿ.

ನಿಜವಾದ ಮುಂದಾಳು ಜನರಿಗೆ ಏನು ಮಾಡಬೇಕೆಂದು ಹೇಳುವ ಬದಲು ಮಾಡಿ ತೋರಿಸುತ್ತಾನೆ.

. ಕೆಲಸದಲ್ಲಿ ಖುಷಿ ಅನುಭವಿಸಿ.

ಊರನ್ನು ಆರೋಗ್ಯಮಯವನ್ನಾಗಿ ಮಾಡಲು ಜನರು ದುಡಿಯಬೇಕೆಂದು ಹೇಳುವ ನೀವು ಸ್ವತಃ ಅಂಥ ಕೆಲಸದಲ್ಲಿ ಆನಂದ ಪಡೆಯಬೇಕು.  ನಿಮಗೆ ಆ ಕೆಲಸದಲ್ಲಿ ಆಸಕ್ತಿ ಇಲ್ಲವೆಂದರೆ ನೀವು ಕರೆದಾಗ ಯಾರು ಬರುತ್ತಾರೆ?

ಶ್ರಮದಾನದ ಕೆಲಸ, ಹಳ್ಳಿಯ ಯಾವುದೇ ಕೆಲಸ ಒಂದು ಆಟದಂತಿರಲಿ.  ಉದಾಹರಣೆಗೆ ಹಳ್ಳಿಯಲ್ಲಿ ಜನರು ಕುಡಿಯುವ ನೀರು ಉಪಯೋಗಿಸುವ ಕಡೆ ಪ್ರಾಣಿಗಳು ಬರದಂತೆ ಬೇಲಿ ಹಾಕುವುದು ಕಷ್ಟದ ಕೆಲಸ. ಆದರೆ ಇದನ್ನೇ ಜನರೆಲ್ಲ ಕೂಡಿ ಮಾಡಿದಾಗ ಸ್ವಲ್ಪ ಹಾಡು, ಚಹಾ ತಿಂಡಿಗಳಿದ್ದುವೆಂದರೆ ಜನರಿಂದ ಕೆಲಸ ಬಲುಬೇಗ ಆಗಿಬಿಡುತ್ತದೆ.  ಅದರಲ್ಲಿನ ಮೋಜು ಉತ್ಸಾಹವನ್ನು ಹೆಚ್ಚಿಸುತ್ತದೆ.

ಮಕ್ಕಳಿಂದ ಕೆಲಸ ತೆಗೆಯಬೇಕೆಂದರೆ ಆ ಕೆಲಸವನ್ನು ಒಂದು ಆಟವನ್ನಾಗಿ ಮಾಡಬೇಕು.  ಅಂದರೆ ಅದೆಷ್ಟು ಕಷ್ಟದ ಕೆಲಸ ಇದ್ದರೂ ಭರಭರನೆ ಆಗಿಬಿಡುತ್ತದೆ.

ನಿಮ್ಮ ಕೆಲಸಕ್ಕೆ ಹಣ ಸಿಗಬಹುದು ಅಥವಾ ಸಿಗದಿರಬಹುದು. ಆದರೆ  ನೀವೆಂದೂ ಕಡಿಮೆ ಹಣ ಕೊಡುವ ಬಡವರಿಗೆ ನಿಮ್ಮ ಸೇವೆಯನ್ನು ಕಡಿಮೆ ಮಾಡಬೇಡಿರಿ.

ಅಂದರೆ ಜನರ ಪ್ರೀತಿ ಸಹಕಾರ ನಿಮಗೆ ಬೇಗ ಸಿಗುತ್ತದೆ.  ಅವರ ಪ್ರೀತಿ ವಿಶ್ವಾಸ ಹಣಕ್ಕಿಂತ ಹೆಚ್ಚು ಮುಖ್ಯ.

ಮೊದಲು ಜನರಿಗಾಗಿ ದುಡಿಯಿರಿ ಹಣಕ್ಕಾಗಿ ಅಲ್ಲ. ಹಣಕ್ಕಿಂತ ಜನ ಮುಖ್ಯ.

. ಮುಂದಾಲೋಚನೆ ಇರಲಿಜನರಿಗೂ ಮುಂದಾಲೋಚನೆ ಮಾಡುವುದನ್ನು ರೂಢಿಮಾಡಿಸಿ.

ಜವಾಬ್ದಾರಿಯುತ ಆರೋಗ್ಯ ಕಾರ್ಯಕರ್ತರು ಜನರು ಕಾಯಿಲೆ ಬೀಳುವವರೆಗೆ ಕಾಯುವುದಿಲ್ಲ.  ರೋಗ ಬರದಂತೆ ನೋಡಿಕೊಳ್ಳುತ್ತಾರೆ. ಮುಂದೆ ಆರೋಗ್ಯವಾಗಿರಲು ಈಗಿನಿಂದಲೇ ತಯಾರಿ ಮಾಡುವುದನ್ನು ಅವರು ಜನರಿಗೆ ಕಲಿಸುತ್ತಾರೆ.

ಅತಿ ಸ್ವಲ್ಪ ಮುನ್ನೆಚ್ಚರಿಕೆಯಿಂದ ಅನೇಕ ರೋಗಗಳನ್ನು ತಡೆಯಬಹುದು. ಕಾರಣ ನಿಮ್ಮ ಮುಖ್ಯ ಕೆಲಸವೆಂದರೆ ಜನರಿಗೆ ಕಾಯಿಲೆಗಳ ಮೂಲ ಎಲ್ಲಿದೆ ತಿಳಿಸುವದಲ್ಲದೇ ಅವನ್ನು ತಡೆಯುವ ರೀತಿಗಳನ್ನು ಹೇಳಿಕೊಡುವುದು.

ರೋಗಗಳಿಗೆ ಕಾರಣಗಳು ಹಲವಾರು.  ಅವು ಒಂದಕ್ಕೊಂದು ಜೋಡಿಯಾಗಿರುತ್ತವೆ. ಸಮಸ್ಯೆಯ ಮೂಲಕ್ಕೆ ಕೈ ಹಚ್ಚಿ ಅದನ್ನು ಕಿತ್ತುಹಾಕಲಿಕ್ಕೆ ಪ್ರಯತ್ನಿಸಬೇಕೇ ಹೊರತು, ಹೊರನೋಟಕ್ಕೆ ಕಾಣುವ ಸಮಸ್ಯೆಯನ್ನಲ್ಲ.

ಉದಾಹರಣೆಗೆ ಹಳ್ಳಿಗಳಲ್ಲಿ ಮಕ್ಕಳ ಸಾವಿಗೆ ಕಾರಣ, ಬೇಧಿ ಮತ್ತು ಅತಿಸಾರ.  ಜನರಿಗೆ ಸಂಡಾಸ ಕಟ್ಟುವುದು ಮತ್ತು ವೈಯುಕ್ತಿಕ ಸ್ವಚ್ಛತೆಯ ಬಗ್ಗೆ ಹೇಳಿಕೊಡುವುದರಿಂದ ಬೇಧಿಯನ್ನು ತಡೆಯಬಹುದು.

ಬೇಧಿಯಿಂದ ಸಾಯುವ ಅತಿ ಹೆಚ್ಚು ಮಕ್ಕಳಲ್ಲಿ ಆಹಾರದ ಕೊರತೆ ಮೊದಲೇ ಆಗಿರುತ್ತದೆ. ಅಂಥ ಮಕ್ಕಳಲ್ಲಿ ಸೋಂಕನ್ನು ಹೊಡೆದೋಡಿಸುವ ಶಕ್ತಿ ಇರುವುದಿಲ್ಲ.  ಕಾರಣ ಬೇಧಿಯ ಸಾವನ್ನು ತಡೆಯಲು ಮೊದಲು ಮಕ್ಕಳಿಗೆ ಪೌಷ್ಟಿಕ ಆಹಾರ ಸಿಗುವಂತೆ ಮಾಡಬೇಕು.

ಮಕ್ಕಳಲ್ಲಿ ಆಹಾರದ ಕೊರತೆಯಾಗಲು ಕಾರಣವೇನು?

ತಮ್ಮ ಮಕ್ಕಳಿಗೆ (ತಾಯಿಹಾಲಿನಂಥ) ಪೌಷ್ಟಿಕ ಆಹಾರ ಕೊಡಬೇಕೆಂದು ತಾಯಂದಿರಿಗೆ ತಿಳಿದಿಲ್ಲವೆಂದೆ?

ಕುಟುಂಬದಲ್ಲಿ ಎಲ್ಲರಿಗೂ ಸಾಕಷ್ಟು ಆಹಾರ ಸಿಗುವಷ್ಟು ಹಣ ಅಥವಾ ಭೂಮಿ ಇಲ್ಲವೆಂದೆ?

ಬಡಜನರು ತಮ್ಮಲ್ಲಿರುವ ಭೂಮಿ ಅಥವಾ ಹಣವನ್ನು ಸರಿಯಾಗಿ ಉಪಯೋಗಿಸಿಕೊಳ್ಳುವುದಿಲ್ಲವೆಂದೇ?

ಜನರಿಗೆ ಹೊಟ್ಟೆ ಹೊರೆಯಲು ಸಾಧ್ಯವಾಗುವುದಕ್ಕಿಂತ ಜಾಸ್ತಿ ಮಕ್ಕಳಿರುವರೆಂದೆ?

ಭವಿಷ್ಯದ ವಿಚಾರವಿಲ್ಲದೆ ತಂದೆಯು ತನ್ನಲ್ಲಿರುವ ಸ್ವಲ್ಪ ಹಣವನ್ನೂ ಕ್ಷಣಿಕ ಸುಖ ನೀಡುವ ಕುಡಿತಕ್ಕಾಗಿ ಹಾಕುತ್ತಿರುವನೆಂದೆ?

ಜನರು ಭವಿಷ್ಯದತ್ತ ಮುಂದಾಲೋಚನೆ ಮಾಡುವುದಿಲ್ಲವೆಂದೇ? ತಾವೆಲ್ಲರೂ ಕೂಡಿ ದುಡಿದರೆ ತಮ್ಮ ಭವಿಷ್ಯವನ್ನು ಉತ್ತಮ             ಪಡಿಸಿಕೊಳ್ಳಬಹುದೆಂಬುದನ್ನು ತಿಳಿದುಕೊಳ್ಳುವುದಿಲ್ಲವೆಂದೇ?

ನಿಮ್ಮ ಭಾಗದಲ್ಲಿನ ಒಂದೊಂದು ಮಗುವಿನ ಸಾವಿಗೂ ಈ ಕಾರಣಗಳಲ್ಲಿ ಯಾವುದೇ ಒಂದು ಇರಬಹುದು.  ಬೇರೆ ಕಾರಣಗಳೂ ಇರಬಹುದು.  ಆರೋಗ್ಯ ಕಾರ್ಯಕರ್ತರಾಗಿ ನಿಮ್ಮ ಮೊದಲ ಕೆಲಸವೇನೆಂದರೆ  ಈ ಕಾರಣಗಳನ್ನು ತಿಳಿದುಕೊಳ್ಳಲಿಕ್ಕೆ ಜನರಿಗೆ  ಸಹಾಯ ಮಾಡುವುದು.

ಭೇದಿಯಿಂದ ಮಕ್ಕಳ ಸಾವನ್ನು ತಡೆಯಲು ಕೇವಲ ಸಂಡಾಸುಗಳ, ಶುದ್ದ ನೀರಿನ, ಒಳ್ಳೆಯ ಆಹಾರದ ಉಪಯೋಗವಷ್ಟೇ ಸಾಲದು.  ಕುಟುಂಬ ಯೋಜನೆ, ಭೂಮಿಯ ಸರಿಯಾದ ಉಪಯೋಗ, ಸಂಪತ್ತಿನ ಸಮಾನ ಹಂಚಿಕೆ ಇವೆಲ್ಲವುಗಳೂ ಅಷ್ಟೇ ಮುಖ್ಯ.

ಇಂದು ಅತಿ ಹೆಚ್ಚಿನ ಕಾಯಿಲೆಗಳ ಮೂಲಕಾರಣ ಮುಂದಾಲೋಚನೆ ಇಲ್ಲದಿರುವುದು ಮತ್ತು ಕೆಲವು ಜನರ ಅತಿ ಆಶೆಗಳೇ ಆಗಿವೆ. ನಿಮ್ಮ ಜನರು ಚೆನ್ನಾಗಿ ಇರಬೇಕೆಂದು ನೀವು ಬಯಸುವುದಾದರೆ ಅವರಿಗೆ ಒಟ್ಟಾಗಿ ದುಡಿಯಲು, ಪರಸ್ಪರ ಹಂಚಿಕೊಳ್ಳಲು ಮುಂದಾಲೋಚನೆ ಮಾಡಲು ಕಲಿಸಿ.

ಕೆಲವರ ಅತಿ ಆಶೆ, ಮುಂದಾಲೋಚನೆಯಿಲ್ಲ

. ಆರೋಗ್ಯೋಪಚಾರದ ರೀತಿಗಳು

ಬೇಧಿ ಮತ್ತು ಆಹಾರದ ಕೊರತೆಗಳಿಗೆ ಅನೇಕ ಕಾರಣಗಳ ಬಗ್ಗೆ ತಿಳಿದುಕೊಂಡೆವು.  ಇದೇ ರೀತಿ ಆಹಾರ ಉತ್ಪಾದನೆ, ಭೂಮಿಯ ಹಂಚಿಕೆ, ಶಿಕ್ಷಣ, ಜನರ ಪರಸ್ಪರ ಸಂಬಂಧಗಳು ಕೂಡ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತವೆ.

ಜನರ ಒಳಿತಿನಲ್ಲಿ ಆಸಕ್ತಿ ಇರುವ ನೀವು ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಲು ಜನರಿಗೆ ಸಹಾಯ ಮಾಡಬೇಕು.

ಆರೋಗ್ಯವೆಂದರೆ ಕಾಯಿಲೆ ಬೀಳದಿರುವುದಷ್ಟೇ ಅಲ್ಲ,  ದೇಹ ಮನಸ್ಸು ಮತ್ತು ಸಮಾಜ ಎಲ್ಲವೂ ಚೆನ್ನಾಗಿರುವುದಾಗಿದೆ.  ಆರೋಗ್ಯಕರ ಪರಿಸರದಲ್ಲಿ ಪರಸ್ಪರ ವಿಶ್ವಾಸ ಬೆಳೆದಿರುವಲ್ಲಿ ಜೊತೆಯಾಗಿ ಕೆಲಸ ಮಾಡುತ್ತ ಇರುವಲ್ಲಿ ಸುಖದುಃಖವನ್ನು ಪರಸ್ಪ್ರರ ಹಂಚಿಕೊಳ್ಳುವಲ್ಲಿ, ಪರಸ್ಪರರಿಗೆ ಬೆಳೆಯಲು, ಬದುಕಲು ಸಹಾಯ ಮಾಡುವಲ್ಲಿ ಜನರು ಅತಿ ಉತ್ತಮವಾಗಿ ಇರಬಲ್ಲರು.

ದಿನನಿತ್ಯದ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಸಹಾಯ ಮಾಡಿ.  ಆದರೆ ಅದೇ ವೇಳೆಗೆ ನಿಮ್ಮ ನಿಜವಾದ ಕೆಲಸ ಸಮುದಾಯವನ್ನು ಎಲ್ಲ ರೀತಿಯಿಂದಲೂ ಮುಂದೆ ತರುವ ದೊಡ್ಡ ಕೆಲಸ ಎಂಬುದನ್ನೂ ನೆನಪಿಡಿ.

ಆರೋಗ್ಯ ಕಾರ್ಯಕರ್ತರಾಗಿ ನಿಮ್ಮ ಜವಾಬ್ದಾರಿ ದೊಡ್ಡದು.

ಎಲ್ಲಿಂದ ಶುರು ಮಾಡುತ್ತೀರಿ?

೧೦. ನಿಮ್ಮ ಸಮುದಾಯವನ್ನೊಮ್ಮೆ ಅವಲೋಕಿಸಿ.

ಅಲ್ಲಿಯೇ ಹುಟ್ಟಿ ಬೆಳೆದಿರುವ ನಿಮಗೆ ನಿಮ್ಮ ಸಮಾಜದಲ್ಲಿನ ಆರೋಗ್ಯ ಸಮಸ್ಯೆಗಳ ಬಗ್ಗೆ ಗೊತ್ತಿದ್ದೇ ಇರುತ್ತದೆ.  ಆದರೂ ಸತ್ಯವಾದ ಪೂರ್ಣ ಚಿತ್ರ ಸಿಗಬೇಕೆಂದರೆ ಬೇರೆ ಬೇರೆ ದೃಷ್ಟಿಕೋನಗಳಲ್ಲಿ ನಿಮ್ಮ ಸಮಾಜದತ್ತ  ಕಾಳಜಿ ವಹಿಸಿ ನೋಡಿ.

ಹಳ್ಳಿಯ ಆರೋಗ್ಯ ಕಾರ್ಯಕರ್ತರಾಗಿರುವ ನಿಮ್ಮ ಚಿಂತನೆ ಕೇವಲ ನಿಮಗೆ ಗೊತ್ತಿರುವ ನಿಮ್ಮ ಬಳಿಗೆ ಬರುವ ಜನರ ಕುರಿತು ಆಗಿರಬಾರದು.  ಹಳ್ಳಿಯ ಎಲ್ಲರ ಜೀವನಮಟ್ಟ ಸುಧಾರಣೆ ನಿಮ್ಮ ಗುರಿಯಾಗಿರಬೇಕು.  ಎಲ್ಲರ ಮನೆ, ಹೊಲ, ಶಾಲೆ, ಜನರು ಸೇರುವ ಸ್ಥಳಗಳಿಗೆ ಆಗಾಗ್ಗೆ ಬೆಟ್ಟಿ ಕೊಡುತ್ತಿರಿ.  ಅವರ ಚಿಂತೆ, ಖುಷಿಗಳಲ್ಲಿ ಪಾಲುಗೊಳ್ಳಿ.  ಅವರ ಚಟಗಳ ಬಗ್ಗೆ, ನಿತ್ಯ ಜೀವನದಲ್ಲಿ ಒಳೆಯ ಆರೋಗ್ಯ ತರುವ ಒಳ್ಳೆ ವಿಷಯಗಳ ಬಗ್ಗೆ ಮತ್ತು ಅನಾರೋಗ್ಯ ಉಂಟಮಾಡುವ ವಿಷಯಗಳ ಬಗ್ಗೆ ಅವಲೋಕಿಸುತ್ತ ಇರಿ.

ನಿಮ್ಮ ಸಮದಾಯ ಮತ್ತು ನೀವು ಹೊಸದೊಂದು ಯೋಜನೆಯನ್ನು ಕಾರ್ಯಗತ ಮಾಡುವ ಮೊದಲು ಆ ಯೋಜನೆಗೆ ಏನೇನು ಬೇಕು, ಮತ್ತು ಅದರಿಂದ ಪ್ರಯೋಜನಗಳೇನು ಎಂಬ ಬಗ್ಗೆ ಯೋಚಿಸಿ.  ಅದಕ್ಕಾಗಿ ಮೊದಲು ಈ ಕೆಳಗಿನವುಗಳ ಕಡೆ ಗಮನ ಕೊಡಿ.

. ಜನರಿಗನಿಸಿದ ಅವಶ್ಯಕತೆ;  ತಮ್ಮ ಅತಿದೊಡ್ಡ ಸಮಸ್ಯೆ ಎಂದು ಜನರಿಗನಿಸಿದ್ದು.

. ಜನರ ನಿಜ ಅವಶ್ಯಕತೆ; ಈ ಸಮಸ್ಯೆ ಪರಿಹಾರಕ್ಕಾಗಿ ಜನರು ಸತತ ಮಾಡುತ್ತಿರಬೇಕಾದ್ದು.

. ಜನರ ಆಸಕ್ತಿ;  ಅವಶ್ಯಕ ಕೆಲಸಕ್ಕಾಗಿ ಜನರು ಮಾಡಬಹುದಾದ ಯೋಜನೆ ಮತ್ತು ಕೆಲಸಗಳು.

. ಸಂಪನ್ಮೂಲಗಳು; ಈ ಕೆಲಸಕ್ಕಾಗಿ ಸಿಗಬಹುದಾದ ಜನಸಂಪತ್ತು,  ಸಾಮಾನು, ಹಣ ಮುಂತಾದವು.

ಇದನ್ನೆಲ್ಲ ಒಂದು ಉದಾಹರಣೆಯೊಂದಿಗೆ ವಿವರಿಸೋಣ.  ಸಿಗರೇಟು ಚಟ ಇರುವ ಒಬ್ಬಾತ ಇತ್ತೀಚೆಗೆ ಕೆಮ್ಮು ಹೆಚ್ಚಿದೆಯೆನ್ನುತ್ತಿದ್ದಾನೆ.