(ಕ್ರಿ. ಶ. ೧೭೮೭-೧೮೫೧) (ಛಾಯಾ ಚಿತ್ರಗ್ರಹಣ)

ಫ್ರೆಂಚ್ ವಿಜ್ಞಾನಿ ಜಾಕಸ್ ಡಾಗೆರ್ (Jacques Daguerre) ೧೭೮೭ರಲ್ಲಿ ಜನಿಸಿದರು. ಬಣ್ಣದ ದೃಶ್ಯಗಳನ್ನು ಬರೆಯುವುದು ಈತನ ವೃತ್ತಿಯಾಗಿತ್ತು. ತನ್ನ ವೃತ್ತಿಯಲ್ಲಿ ತುಂಬ ಆಸಕ್ತಿ ಹೊಂದಿದ್ದ ಆತ ಬಣ್ಣಗಳನ್ನು ಬಳಸುವುದರಲ್ಲಿ ಪಳಗಿದ್ದರು. ಬಣ್ಣಗಳ ಮೇಲೆ ಬೆಳಕಿನಿಂದಾಗುವ ಪರಿಣಾಮಗಳ ಬಗ್ಗೆ ಪ್ರಯೋಗ ಮಾಡುತ್ತಿದ್ದರು. ಅದಕ್ಕಾಗಿ ಒಂದು ವಿಶೇಷ “ಡಾರ್ಕ್ ರೂಮ್” ಅನ್ನು ಕೂಡ ಮಾಡಿಕೊಂಡಿದ್ದರು.

೧೮೨೯ರಲ್ಲಿ ಡಾಗೆರ್ ಇನ್ನೊಬ್ಬ ಫ್ರೆಂಚ್ ಪ್ರಜೆ ನೀಪ್ಸ್ (ಡಾಗೆರ್ ಮಾಡಿದ ಸಾಧನೆಗಳಿಗೆ ಈತನೇ ನಿಜವಾದ ಕಾರಣೀಭೂತನೆಂದೂ ಹೇಳಲಾಗುತ್ತದೆ) ಎಂಬುವನ ಜತೆ ಒಂದು ಬಗೆಯ ಲವಣವನ್ನು ತೆಗೆದುಕೊಂಡು ಪ್ರಯೋಗ ಮಾಡುತ್ತಿದ್ದಾಗ, ಬೆಳಕಿನ ಕಿರಣ ಬೀಳುತ್ತಲೆ ಆ ಲವಣ ಕಪ್ಪಗಾದದ್ದನ್ನು ಗಮನಿಸಿದರು. ಬೆಳಕು ಪ್ರಖರವಾದಷ್ಟೂ ಲವಣ ಹೆಚ್ಚು ಕಪ್ಪಗಾಗತೊಡಗಿತು. ಈ ಆಕಸ್ಮಿಕ ಸಂಭವವು ಡಾಗೆರ್ ನನ್ನು ಆಲೋಚನೆಯಲ್ಲಿ ತೊಡಗಿಸಿತು. “ಬೆಳಕಿನ ಅಲೆಗಳಿಗೂ ಈ ಲವಣಕ್ಕೂ ಸಂಬಂಧ ಇರಬೇಕು. ಯಾವುದಾದರೊಂದು ರೀತಿಯಲ್ಲಿ ಅವು ಲವಣದ ಮೇಲೆ ಪರಿಣಾಮ ಉಂಟು ಮಾಡುತ್ತವೆ” ಎಂದು ಡಾಗೆರ್ ಅಭಿಪ್ರಾಯ ಪಟ್ಟರು. ಆತ ಮರದ ಪೆಟ್ಟಿಗೆ ಮಾಡಿದರು. ಅದರ ಒಳಗಡೆ ಕಪ್ಪು ಬಣ್ಣ ಬಳೆದರು. ಅದರ ಒಂದು ತುದಿಯಲ್ಲಿ ಲೆನ್ಸ್ ಜೋಡಿಸಿದರು. ಇನ್ನೊಂದು ತುದಿಯಲ್ಲಿ ಜೆಲಟಿನ್ ಹಾಳೆಯನ್ನಿಟ್ಟು ಅದರ ಮೇಲೆ ಲವಣ ಸವರಿದರು. ಆಮೇಲೆ ಲೆನ್ಸ್ ಮುಂದುಗಡೆ ವಸ್ತುವೊಂದನ್ನಿಟ್ಟು ಒಂದು ಸೆಕೆಂಡು ಲೆನ್ಸ್ ಅನ್ನು ತೆರೆದರು. ಪುನಃ ಲೆನ್ಸ್ ಅನ್ನು ಮುಚ್ಚಿದರು. ಬೆಳಕಿನ ಅಲೆಗಳು ಜೆಲಟಿನ್ ಮೇಲೆ ಖಾಯಂ ಚಿತ್ರ (ಇಮೇಜ್) ಮೂಡಿಸಿದ್ದನ್ನು ಗಮನಿಸಿದರು.

ಹೀಗೆ ಛಾಯಾ ಚಿತ್ರಗ್ರಹಣ (ಫೋಟೋಗ್ರಫಿ) ತಂತ್ರಜ್ಞಾನ ಆರಂಭವಾಯಿತು. ಈ ಸಂಶೋಧನೆ ಮುಂದೆ ಚಲನಚಿತ್ರಗಳು ಮತ್ತು ದೂರದರ್ಶನ ವ್ಯವಸ್ಥೆಗಳ ಬೆಳವಣಿಗೆಗೆ ನಾಂದಿಯಾಯಿತು. ಆತ ಕಂಡು ಹಿಡಿದ ಛಾಯಾ ಚಿತ್ರಗ್ರಾಹಕ ವಸ್ತುವನ್ನು “ಡಾಗೆರಿಯೋಟೈಪ್” ಎಂದು ಕರೆಯಲಾಯಿತು.

ಜಾಕಸ್ ಡಾಗೆರ್ ೧೮೫೧ರಲ್ಲಿ ನಿಧನ ಹೊಂದಿದರು.