೧೯೩೧ರ ಡಿಸೆಂಬರ್ ೨೭ರ ಬೆಳಿಗ್ಗೆ ಎಚ್.ಎಂ.ಎಸ್. ಬೀಗಲ್ ಎಂಬ ಹೆಸರಿನ ನೌಕೆ ಚಾರಿತ್ರಿಕ ಯಾನ ಆರಂಭಿಸಿತು. ಇದು ಮಾನವನ ಚಿಂತನೆಯನ್ನು ಹಾಗೂ ವಿಜ್ಞಾನದ ದಿಕ್ಕನ್ನು ಬದಲಿಸಬಹುದೆಂದು ಯಾರೂ ನಿರೀಕ್ಷಿಸಿರಲಿಲ್ಲ. ಇಂದಿನ ನೌಕೆಗಳಿಗೆ ಅವುಗಳ ಗಾತ್ರಕ್ಕೆ ಬಳಸುವ ತಂತ್ರಜ್ಞಾನಕ್ಕೆ ಹೋಲಿಸಿದರೆ ಬೀಗಲ್ ಒಂದು ತೀರ ಸಾಮಾನ್ಯ ನೌಕೆ, ಅದು ಕೇವಲ ೯೦ ಅಡಿ ಉದ್ದ ಮತ್ತು ೨೪ ಅಡಿ ಅಗಲವಿತ್ತು. ಅದರೊಳಗೆ ೭೪ ಜನ ಪ್ರಯಾಣಿಸಬಹುದಿತ್ತು. ಅದಕ್ಕಾಗಲೇ ಹನ್ನೊಂದು ವರ್ಷಗಳಾಗಿದ್ದವು. ಅದರಲ್ಲಿದ್ದುದು ಎರಡು ಕೋಣೆಗಳು. ಒಂದು ನೌಕೆಯ ಕ್ಯಾಪ್ಟನ್‌ಗೆ ಮೀಸಲು. ಮತ್ತೊಂದು ಕೋಣೆ ೧೦ ಅಡಿ ಅಗಲ ಮತ್ತು ೧೧ ಅಡಿ ಉದ್ದ. ಇದರಲ್ಲಿ ೩ ಜನ ವಾಸಿಸಬೇಕಿತ್ತು. ಈ ಪುಟ್ಟ ಕೋಣೆಯಲ್ಲಿದ್ದು ವಿಶ್ವ ಪರ್ಯಟನೆಯನ್ನು ಐದು ವರ್ಷಗಳ ಸಮಯದಲ್ಲಿ ಪೂರೈಸಿ ವಿಶ್ವ ವಿಖ್ಯಾತ ವಿಕಾಸ ವಾದವನ್ನು ಮಂಡಿಸಿದ ಯುವ ಸಾಹಸಿಯೇ ಚಾರ್ಲ್ಸ್ ಡಾರ್ವಿನ್.

ಚಾರ್ಲ್ಸ್ ಡಾರ್ವಿನ್ ಆಗ ೨೩ ವಸಂತಗಳನ್ನು ಪೂರೈಸಿದ್ದ ಯುವಕ. ಕೇಂಬ್ರಿಡ್ಜ್ ವಿಶ್ವವಿದ್ಯಾಲಯದ ಪದವೀಧರ. ಬಾಲ್ಯದಿಂದಲೂ ನಿಸರ್ಗದ ಕುತೂಹಲಗಳನ್ನು ತಿಳಿಯುವು, ಪ್ರಕೃತಿಯ ಸೌಂದರ್ಯವನ್ನು ಅನುವಿಸುವ ಹಾಗೂ ವಿವಿಧ ಜೀವಿಗಳ ವಿಸ್ಮಯ ಜೀವನವನ್ನು ಅರಿಯುವ ಹುಚ್ಚು ಬೆಳೆಸಿಕೊಂಡಿದ್ದ ಡಾರ್ವಿನ್. ಈತನಿಗೆ ನೌಕೆಯ ಕ್ಯಾಪ್ಟನ್ ಆಗಿದ್ದ ಪಿಜ್‌ರಾಯ್‌ನ ಜೊತೆಗಾರರನಾಗಿ ಮತ್ತು ಪ್ರಕೃತಿ ತಜ್ಞನಾಗಿ ಕಾರ್ಯ ನಿರ್ವಹಿಸುವ ಜವಾಬ್ದಾರಿಯಿತ್ತು. ಸಂಬಳವಿಲ್ಲದ ಈ ಹುದ್ದೆಗೆ ಬಂದು ಸೇರಿದ್ದೇ ಒಂದು ರೋಚಕ ಸಂಗತಿ.

ವೇತನವಿಲ್ಲದ ಹುದ್ದೆಗೂ ಪ್ರಭಾವ ಬೇಕು!

ಬೀಗಲ್ ನೌಕೆಯು ದಕ್ಷಿಣ ಅಮೆರಿಕಾದ ಕ್ಷೇತ್ರ ಸರ್ವೆ ಮಾಡಬೇಕಿತ್ತು ಮತ್ತು ಭೂಮಿಯನ್ನು ಒಂದು ಸುತ್ತ ಹಾಕಿ ಹಿಂತಿರುಗಬೇಕಿತ್ತು. ನೌಕೆ ಭೇಟಿ ನೀಡುವ ದ್ವೀಪ, ಕಡಲದಂಡೆ, ಬಂದರು, ಪಟ್ಟಣ, ಒಳನಾಡುಗಳಲ್ಲಿನ ಖನಿಜ, ಸಸ್ಯ ಮತ್ತು ಪ್ರಾಣಿ ಸಂಪತ್ತುಗಳನ್ನು ದಾಖಲಿಸಿ ಹಾಗೂ ಕೆಲವು ಮಾದರಿಗಳನ್ನು ಸಂಗ್ರಹಿಸಲು ಒಬ್ಬ ಪ್ರಕೃತಿ ತಜ್ಞನ ಅಗತ್ಯವಿತ್ತು. ಈ ವಿವರಗಳನ್ನು ತನ್ನ ಗುರುಗಳ ಮೂಲಕ ತಿಳಿದುಕೊಂಡ ಡಾರ್ವಿನ್ ಉತ್ಸಾಹದಿಂದ ಹೊರಡಲು ಸಿದ್ಧನಾದ. ತಂದೆಯ ಅನುಮತಿ ಬೇಡಿದ. ಯಶಸ್ವಿ ವೈದ್ಯರಾಗಿದ್ದ ತಂದೆ ರಾಬರ್ಟ್ ಡಾರ್ವಿನ್  ಈ ಪ್ರಸ್ತಾವನೆಯನ್ನು ಕೆಳಕಂಡ ಕಾರಣಗಳಿಗಾಗಿ ತಿರಸ್ಕರಿಸಿದರು.

(೧) ಮುಂದೆ ಪಾದ್ರಿಯಾಗಬೇಕಿರುವವನಿಗೆ ಈ ಹುದ್ದೆ ಗೌರವ ತರುವುದಿಲ್ಲ. (೨) ಕಾಡು-ಮೇಡು, ದೇಶ-ದ್ವೀಪ ಅಲೆಯುವ ಈ ಯೋಜನೆಗೆ ಸ್ಪಷ್ಟ ಗುರಿಯಿಲ್ಲ. () ವೇತನವಿಲ್ಲದ ಈ ಹುದ್ದೆಯನ್ನು ಇತರರು ತಿರಸ್ಕರಿಸಿರುವುದರಿಂದ ನಿನಗೆ ಆಹ್ವಾನ ನೀಡಿರಬಹುದು. (೪) ನೌಕೆಯಲ್ಲಿ ವಸತಿ ಸೌಕರ್ಯ ಸಾಲದು. (೫) ತಾತ್ಕಾಲಿಕ ಹುದ್ದೆ ಸೇರುವುದರಿಂದ ಭವಿಷ್ಯ ಉತ್ತಮವಾಗುವುದಿಲ್ಲ. ಇತ್ಯಾದಿ, ಇತ್ಯಾದಿ.

೨೭ನೇ ವಯಸ್ಸಿನ ಚಾರ್ಲ್ಸ್ ಡಾರ್ವಿನ್

ಆದರೆ ಯುವಕ ಚಾರ್ಲ್ಸ್ ಡಾರ್ವಿನ್‌ಗೆ ಇದೊಂದು ಅಪೂರ್ವ ಅವಕಾಶವಾಗಿ ತೋರಿತು. ತಂದೆಯ ಮುಂದೆ ಗೋಗರೆದ. ಪ್ರಯೋಜನವಾಗಲಿಲ್ಲ. ಕೊನೆಗೆ ತಂದೆ ಒಂದು ಮಾತು ಹೇಳಿದರು. “ಸಮಾಜದಲ್ಲಿ ಗಣ್ಯವ್ಯಕ್ತಿ ಎನಿಸಿಕೊಂಡಿರುವವರು ಯಾರಾದರೂ ಇಂತಹ ಯೋಜನೆ ಒಳ್ಳೆಯದೆಂದು ಹೇಳಿದರೆ, ನಾನು ನಿನ್ನನ್ನು ಕಳುಹಿಸುತ್ತೇನೆ” ಎಂದರು. ಯುವಕನಿಗೆ ಏನೂ ತೋಚದಂತಾಯಿತು. ಬೇಸರದಿಂದ ಬೆಂದು ಹೋದ. ಅಲ್ಲಿ ತನ್ನ ದುಃಖ ತೋಡಿಕೊಂಡ ಅಪೂರ್ವ ಅವಕಾಶ ತಪ್ಪಿ ಹೋಗುವ ಬಗ್ಗೆ ವಿವರವಾಗಿ ತಿಳಿಸಿದ, ಡಾರ್ವಿನ್ ಮನದಾಳದ ಬಯಕೆ ಅರಿತ ವೆಜ್‌ವುಡ್ ಪತ್ರ ಬರೆದು ರಾಬರ್ಟ್‌ರಿಗೆ ಕಳುಹಿಸಿದರು. ಯಾನಕ್ಕೆ ಹೋಗಲು ಡಾರ್ವಿನ್‌ಗೆ ಅನುಮತಿ ನೀಡಲು ಮನವಿ ಮಾಡಿದರು. ಬಂಧುವಿನ ತಿರಸ್ಕರಿಸಿದರೆ ಆತನನ್ನು ಗಣ್ಯವ್ಯಕ್ತಿಯಲ್ಲವೆಂದು ಹೇಳಿದಂತಾಗುತ್ತದೆಂದು ತಂದೆ ಅನುಮತಿ ನೀಡಿದರು. ಯುವಕ ಗೆದ್ದ. ಎಲ್ಲರ ಜೀವನದಲ್ಲೂ ಅವಕಾಶಗಳು ಬರುತ್ತವೆ. ಅವನ್ನು ಸಕಾಲದಲ್ಲಿ ಸದುಪಯೋಗಪಡಿಸಿಕೊಳ್ಳುವ ವ್ಯಕ್ತಿ ಮಾತ್ರ ಯಶಸ್ಸು ಪಡೆಯುತ್ತಾನೆ.

ಬೀಗಲ್ ನೌಕೆಯಲ್ಲಿ ಸೀಟು ಕಾಯ್ದಿರಿಸಲು ೫೦೦ ಪೌಂಡುಗಳನ್ನು ನೀಡಿದ. ಅಲ್ಲದೆ ಕೆಲವು ಪುಸ್ತಕಗಳನ್ನು, ಐದು ಪೌಂಡಿಗೆ ದೂರದರ್ಶಕವನ್ನು ಮತ್ತು ೫೦ ಪೌಂಡುಗಳಿಗೆ ಒಂದು ಬಂದೂಕನ್ನು ಖರೀದಿಸಿದ. ಈ ಪೂರ್ವ ಸಿದ್ಧತೆಗಳಿಂದಾಗಿ ಡಾರ್ವಿನ್ ಯಾನದಲ್ಲಿ ಯಶಸ್ಸು ಕಾಣಲು ಸಾಧ್ಯವಾಯಿತು.

ಅಟ್ಲಾಂಟಿಕ್ ಮಹಾಸಾಗ, ಎಲ್ಲ ಕಡೆಯೂ ನೀರೇ ನೀರು. ನೀರಿನ ಮೇಲೆ ಬಿಳುಪಿನ ಸೆರಗುಗಳಂತೆ ಕಾಣುವ ಅಲೆಗಳು. ಅಲೆಗಳ ಹೊಡೆತಕ್ಕೆ ತೊನೆಯುತ್ತಾ ಸಾಗುವ ನೌಕೆ. ಮನದಲ್ಲೂ ಆತಂಕ, ಭಯ, ಸಾಹಸ ಪ್ರವೃತ್ತಿಗಳ ತಾಕಲಾಟ. ಪಯಣ ಆರಂಭಿಸಿದ ಕೆಲವೇ ಗಂಟೆಗಳಲ್ಲಿ ವಾಕರಿಕೆ, ಹೊಟ್ಟೆ ತೊಳೆಸುವ ರೋಗ-ಕಡಲ ಬೇನೆ ಆರಂಭವಾಯಿತು. ಇದು ಬಹುತೇಕ ಮೊದಲ ಕಡಲ ಯಾನಿಗಳ ಅನುಭವ.

ಹೆಚ್.ಎಂ.ಎಸ್. ಬೀಗಲ್ ನೌಕೆ

ಬೀಗಲ್ ನೌಕೆಯು ಸಾಗಿದ ಹಾದಿಯನ್ನು ತಂಗಿದ ಸ್ಥಳಗಳನ್ನು ಮುಂದಿನ ನಕ್ಷಾ ಚಿತ್ರದಲ್ಲಿ ಗುರುತಿಸಿದೆ. ನೌಕೆಯ ಕ್ಯಾಪ್ಟನ್ ಒಬ್ಬ ಯುವಕ. ಆತನ ಹೆಸರು ಫಿಜ್‌ರಾಯ್. ಆತ ಮುಂಗೋಪಿ. ಸಾಹಸಿ. ನೌಕೆಯಲ್ಲಿ ೩೧ ಜನರಿದ್ದರು. ಭೂ ಮಧ್ಯರೇಖೆಯ ಸ್ಥಳ ಹಾದುಹೋಗುವಾಗ ಪರಸ್ಪರ ನೀರೆರಚಿ ಸಂಭ್ರಮಿಸಿದರು. ೧೯೩೨ರ ಫೆಬ್ರವರಿ ೨೮ರಂದು ದಕ್ಷಿಣ ಅಮೆರಿಕಾದ ಪೂರ್ವ ಕರಾವಳಿಯ ಆಲ್ ಸೆಂಟ್ ಕೊಲ್ಲಿಯಲ್ಲಿ ನೌಕೆ ಲಂಗರು ಹಾಕಿತು.

ದಕ್ಷಿಣ ಅಮೆರಿಕಾದ ದಟ್ಟ ಕಾಡು, ತಂಪುಗಾಳಿ, ಮೈಮನಗಳಿಗೆ ಮುದ ನೀಡಿತು. ವಿವಿಧ ರೀತಿಯ ಸಸ್ಯ, ಪ್ರಾಣಿ ಪಕ್ಷಿಗಳನ್ನು ಕಂಡು ಬೆರಗಾದ ಯುವಕ ಡಾರ್ವಿನ್. ವಿಜ್ಞಾನಿಯ ಮನಸ್ಸು ಚುರುಕಾಯಿತು. ಎಲ್ಲ ರೀತಿಯ ಖನಿಜ, ಸಸ್ಯ, ಪ್ರಾಣಿಗಳ ಸಂಗ್ರಹಕ್ಕೆ ಮುಂದಾದ. ಪ್ರತಿಯೊಂದು ರೀತಿಯ ಜೀವಿಯ ಆಕಾರ, ಗಾತ್ರ, ಜೀವನ ಶೈಲಿ ಮುಂತಾದ ವಿವರಗಳನ್ನು ಗಮನಿಸಿ ಟಿಪ್ಪಣಿ ಮಾಡತೊಡಗಿದ. ಇವೆಲ್ಲವುಗಳನ್ನು ದಾಖಲಿಸಲು ಒಬ್ಬ ಮನುಷ್ಯನ ಜೀವಿತಾವಧಿಯಷ್ಟು ಸಮಯ ಸಾಲದೇನೋ ಎನಿಸಿತು. ಕ್ಯಾಪ್ಟನ್ ಫಿಜ್‌ರಾಯ ಕೇವಲ ಮೂರು ವಾರಗಳ ಸಮಯ ನೌಕೆ ಇಲ್ಲಿರುವುದೆಂದು ತಿಳಿಸಿದ. ಅಷ್ಟರೊಳಗೆ ಎಷ್ಟು ಸಾಧ್ಯವೋ ಅಷ್ಟು ವಿವರಗಳನ್ನು ದಾಖಲಿಸಿದ. ಸರ್ವೆ ಕಾರ್ಯ ಮಾಡಿ ನಕ್ಷೆ ತಯಾರಿಸುವುದರಲ್ಲಿ ಡಾರ್ವಿನ್ ಸ್ವಲ್ಪ ಹಿಂದೆ. ಹಾಗಾಗಿ ವೀಕ್ಷಣೆಯ ಎಲ್ಲ ವಿವರಗಳನ್ನು ಬರೆದಿಡುವ ಹವ್ಯಾಸವನ್ನು ಡಾರ್ವಿನ್ ರೂಢಿಸಿಕೊಂಡನು.

ಉಷ್ಣವಲಯದ ಹವಾಮಾನದ ಮೊದಲ ಅನುಭವ. ವಿಪುಲವಾದ ಜೀವಿಗಳ ಶ್ರೀಮಂತಿಕೆ ಸಂತಸವನ್ನು ತಂದಿತು. ಈ ಪ್ರದೇಶದಲ್ಲಿ ಆಫ್ರಿಕಾದ ನೀಗ್ರೋ ಜನರನ್ನು ಯುರೋಪಿನ ಜನರು ಜೀತದಾಳುಗಳನ್ನಾಗಿ ಬಳಸುತ್ತಿದ್ದರು. ದಾಸ್ಯ ಪದ್ಧತಿಯಲ್ಲಿ ನೀಗ್ರೋಗಳಿಗೆ ಹಿಂಸೆ ಕೊಡುತ್ತಿದದರು. ವಸ್ತುಗಳಂತೆ ಮಾರಾಟ ಮಾಡುತ್ತಿದ್ದರು. ಈ ಅಮಾನವೀಯ ಪದ್ಧತಿಯನ್ನು ನೋಡಿ ಡಾರ್ವಿನ್ ತುಂಬ ಬೇಸರಗೊಂಡ. ಮನುಷ್ಯ ಎಂದು ನಿಜವಾದ ಮಾನವೀಯತೆ ಬೆಳೆಸಿಕೊಳ್ಳುತ್ತಾನೆ ಎಂದು ಚಿಂತಿಸಿದ.

ರಮಣೀಯ ಅರಣ್ಯಶ್ರೀಮಂತ ವೈವಿಧ್ಯ

ಬೀಗಲ್ ನೌಕೆಯ ಪಯಣ ಮುಂದೆ ಸಾಗಿತು. ಬ್ರೆಜಿಲ್‌ನ ರಾಜಧಾನಿ ರಿಯೋ ನಗರದಲ್ಲಿ ಹಾಗೂ ಒಳನಾಡಿನಲ್ಲಿ ಅಧ್ಯಯನ ಮಾಡಲು ಎರಡು ತಿಂಗಳ ಸಮಯ ದೊರಕಿತು. ಬ್ರೆಜಿಲ್‌ನ ದಟ್ಟ ಅರಣ್ಯದಲ್ಲಿ ಪ್ರಕೃತಿ ಪ್ರಿಯ ಡಾರ್ವಿನ್ ವಿಹರಿಸಿದ. ವಿವಿಧ ರೀತಿಯ ಕೀಟಗಳು, ಮಿಂಚುಹುಳುಗಳ ಮಹಾಪೂರ, ಬಣ್ಣಬಣ್ಣದ ಚಿಟ್ಟೆ, ಪತಂಗ, ಜೀರುಂಡೆಗಳು, ಮರದ ಮೇಲೆ ಜೀವಿಸುವ ಕಪ್ಪೆಗಳು ಮುಂತಾದ ಜೀವಿಗಳು ಡಾರ್ವಿನ್‌ನಲ್ಲಿ ಅಚ್ಚರಿ ಮೂಡಿಸಿದವು. ಮುಗಿಲೆತ್ತರದ ಮರಗಳು, ತಬ್ಬಿ ಬೆಳೆದ ಬಳ್ಳಿಗಳು, ಬಣ್ಣ ಬಣ್ಣದ ಹೂಗಳು-ಇಲ್ಲಿ ವೈವಿಧ್ಯತೆಗೆ ಪೈಪೋಟಿ ನಡೆಸಿದ್ದವು. ಒಂದೇ ದಿನದಲ್ಲಿ ಆದಷ್ಟು ಶೀಘ್ರವಾಗಿ ಅವಲೋಕಿಸಿದ, ಮಾದರಿಗಳನ್ನು ಸಂಗ್ರಹಿಸಿದ. ಒಂದೇ ದಿನದಲ್ಲಿ ೬೮ ಪ್ರಭೇದಗಳ ಜೀರುಂಡೆಗಳನ್ನು ಸಂಗ್ರಹಿಸಿದ. ಬೆಳಗಿನ ವಿಹಾರಕ್ಕೆ ಹೋದವರು ೮೦ ಪ್ರಭೇದಗಳ ಪಕ್ಷಿಗಳನ್ನು ಬೇಟೆಯಾಡಿ ಕಲೆ ಹಾಕಿದ. ಈತನ ನಿರಂತರ ಕುತೂಹಲ, ಪರಿಶ್ರಮ, ಶ್ರದ್ಧೆಯಿಂದ ಕೂಡಿದ ಅಧ್ಯಯನ, ಅವಲೋಕನ, ದಾಖಲಾತಿ ಮಾಡುವ ಸಾಮರ್ಥ್ಯ ಎಲ್ಲರ ಮೆಚ್ಚುಗೆ ಪಡೆದವು. ಬೀಗಲ್ ನೌಕೆಯ ಸಹಪಯಣಿಗರು ಡಾರ್ವಿನ್‌ಗೆ ಗೌರವ ನೀಡಲಾರಂಭಿಸಿದರು. ಕ್ಯಾಪ್ಟನ್ ಫಿಜ್‌ರಾಯ್ ಈತನನ್ನು ಪ್ರೀತಿಯಿಂದ ‘ನೌಕೆಯ ತತ್ವಜ್ಞಾನಿ’ಎಂದು ಸಂಭೋದಿಸತೊಡಗಿದ. ಇಲ್ಲಿಯೂ ದಾಸ್ಯ ಪದ್ಧತಿ ರೂಢಿಯಲ್ಲಿತ್ತು. ತೋಟಗಳಲ್ಲಿ ನೀಗ್ರೊಗಳನ್ನು ಹಿಂಸಿಸುತ್ತಿದ್ದುದನ್ನು ಕಂಡು ಡಾರ್ವಿನ್ ಮರುಗಿದ. “ದಾಸ್ಯ ಪದ್ಧತಿಯು ಸಹಿಸಬಹುದಾದ ದುರಭ್ಯಾಸ ಎಂಬುದು ಎಷ್ಟು ಸುಳ್ಳು”ಎಂದು ತನ್ನ ದಿನಚರಿಯಲ್ಲಿ ದಾಖಲಿಸಿದ. “ಇಂಗ್ಲಿಷ್‌ರಾದ ನಾವು ಮತ್ತು ಅಮೆರಿಕಾದಲ್ಲಿನ ನಮ್ಮ ಬಂಧುಗಳು ಸ್ವಾತಂತ್ಯ್ರದ ಘೋಷಣೆಯನ್ನು ಮಾಡುತ್ತಲೇ ದಾಸ್ಯ ಅನುಸರಿಸುತ್ತಿರುವುದನ್ನು ನೋಡಿದರೆ ಯಾರ ಹೃದಯವಾದರೂ ಕಂಪಿಸುತ್ತದೆ, ರಕ್ತ ಕುದಿಯುತ್ತದೆ ಎಂದು ಡಾರ್ವಿನ್ ತನ್ನ ‘ಬೀಗಲ್ ಪಯಣ’ ಪುಸ್ತಕದಲ್ಲಿ ಬರೆದಿದ್ದಾನೆ. ಡಾರ್ವಿನ್ ವಿಜ್ಞಾನಿಯಾಗಿದ್ದನೇ ಹೊರತು ಸಮಾಜ ಸುಧಾರಕನಾಗಿರಲಿಲ್ಲ. ಆದರೂ ತನ್ನ ಅನಿಸಿಕೆಯನ್ನು ವ್ಯಕ್ತಪಡಿಸಿದ್ದಾನೆ. ಜನರ ಭಾವನೆಯನ್ನು ಬದಲಿಸುವ ಮಾರ್ಗ ಶೋಧಿಸುವುದು ಅವನ ವಯಸ್ಸಿಗೆ ಮೀರಿದ ವಿಷಯವಾಗಿತ್ತು.

ಮುಂದೆ ಸಾಗಿತು ಪಯಣ. ಮಾಂಟೆ ವಿಡಿಯೊ ಮುಂದಿನ ತಾಣ. ಸಾಗರದ ಮೇಲೆ ಸಾಗುತ್ತಿದ್ದಾಗ ರಾತ್ರಿ ಭಯಾನಕ ಗುಡುಗು, ಸಿಡಿಲು, ಮಿಂಚುಗಳು ಉಂಟಾದವು. ಉಷ್ಣತೆ ೫೦ ಫ್ಯಾ.ಗಿಂತ ಕಡಿಮೆಯಾಯಿತು. “ಪ್ರಕೃತಿಯ ಕತ್ತಲೆ ಬೆಳಕಿನಾಟ ನೋಡುವ ಅಪೂರ್ವ ಅವಕಾಶ ನಮಗೆ ದೊರಕಿತು. ಕಾರ್ಗತ್ತಿಲಿನಲ್ಲಿ ಏಕಾಏಕಿ ದಿಗ್ಗನೆಯ ಬೆಳಕು ಎಲ್ಲ ಕಡೆ ಹೊಳೆಯಲಾರಂಭಿಸಿತು. ಪೆಂಗ್ವಿನ್ ಪಕ್ಷಿಗಳು ಸಾಲು ಸಾಲಾಗಿ ಸಾಗುತ್ತಿರುವುದು ಸ್ಪಷ್ಟವಾಗಿ ಗೋಚರಿಸಿತು. ಆಕಾಶವೆಲ್ಲ ಬೆಳ್ಳಂಬೆಳಕಾಯಿತು” ಎಂದು ಡಾರ್ವಿನ್ ದಿನಚರಿಯಲ್ಲಿ ಬರೆದಿದ್ದಾನೆ. ಮಾಂಟೆ ವಿಡಿಯೊ, ಬ್ಯೂನಸ್ ಐರಿಸ್, ಬಹಿಯಾ ಬ್ಲಾಂಕ್‌ಗಳಲ್ಲಿ ಪ್ರಕೃತಿಯ ಸಂಪನ್ಮೂಲಗಳ ಸಮೀಕ್ಷೆ, ಸಂಗ್ರಹ, ಅಧ್ಯಯನ ಮುಂದುವರೆಯಿತು. ಡಾರ್ವಿನ್ ಕೊಠಡಿಯ ತುಂಬೆಲ್ಲ ಪ್ರಾಣಿಗಳ ಸಂಗ್ರಹ ತುಂಬಿ ತುಳಕಿದವು. ಕೆಲವು ಸಂಗ್ರಹಗಳನ್ನು ತಾಯ್ನಾಡಿಗೆ ಕಳುಹಿಸಿದ. ತನ್ನಗುರು ಹೆನ್‌ಸ್ಲೋರವರಿಗೆ ವಿವರವಾದ ಪತ್ರಗಳನ್ನು, ಅಧ್ಯಯನದ ಲೇಖನಗಳನ್ನು ಕಳುಹಿಸಿದ. ದಕ್ಷಿಣ ಅಮೆರಿಕಾ ವಿಶಿಷ್ಟ ಪ್ರಾಣಿಗಳಾದ ಆಸ್ಟ್ರಿಚ್, ಆರ್ಮಡಿಲ್ಲೊ ಹಾಗೂ ಅಗೌಟಿಗಳನ್ನು ಬೇಟೆಯಾಡಿದ. ಕೆಲವು ಅಮೂಲ್ಯವಾದ ಪಳೆಯುಳಿಕೆಗಳು ದೊರಕಿದವು. ಮೂಳೆಗಳ ರೂಪದಲ್ಲಿ ದೊರೆತ ಈ ಪಳೆಯುಳಿಕೆಗಳು ಹಸುವಿನ ಗಾತ್ರ ಹೊಂದಿದ್ದವು. ಈಗ ಬದುಕಿಲ್ಲದ ಪ್ರಾಣಿಯ ಅವಶೇಷವಾದ ಪಳೆಯುಳಿಕೆ ಡಾರ್ವಿನ್‌ನನ್ನು ಚಿಂತೆಗೆ ಹಚ್ಚಿತು. ಒಂದು ವೇಳೆ ಲಕ್ಷಾಂತರ ವರ್ಷಗಳ ಹಿಂದೆ ಈ ಪ್ರಾಣಿಗಳು ಬದುಕಿದ್ದರೆ, ಅವು ಕಾಲಕ್ರಮೇಣ ಬದಲಾವಣೆಗೆ ಒಳಗಾಗಿರಬಹುದೇ ಎಂದು ಆಲೋಚಿಸುವಂತೆ ಪ್ರೇರಣ ದೊರಕಿತು. ಬಹುಶಃ ವಿಕಾಸ ವಾದದ ಬೀಜ ಡಾರ್ವಿನ್ ಮನಸ್ಸಿನಲ್ಲಿ ಮೊಳಕೆಯೊಡೆಯಲು ಪಳೆಯುಳಿಕೆಗಳೇ ಕಾರಣವಿರಬಹುದು.

 ೧೮೩೩ರ ಕ್ರಿಸ್‌ಮಸ್ ಹಾಗೂ ಹೊಸ ವರ್ಷ ಆಚರಣೆಯನ್ನು ಸಂತಸದಿಂದ ಆಚರಿಸಿದ. ಜನವರಿಯ ಕೊನೆಯ ವಾರದಲ್ಲಿ ಬೀಗಲ್ ನೌಕೆಯು ವೂಲ್ಸ್‌ಕೌವ್‌ನಲ್ಲಿ ಲಂಗರು ಹಾಕಿತು. ಕ್ಯಾಪ್ಟನ್ ಫಿಜ್‌ರಾಯ್ ಇಲ್ಲಿ ಒಂದು ವಿನೂತನ ಪ್ರಯೋಗ ಕೈಗೊಂಡ. ಆತ ಹಿಂದಿನ ಯಾನದಲ್ಲಿ ಮೂರು ಪೂಜಿಯನ್ ಬುಡಕಟ್ಟು ಜನರನ್ನು ಹಿಡಿದು ತಂದಿದ್ದ. ಅವರಿಗೆ ಬ್ರಿಟನ್ನಿನ ಸಂಸ್ಕೃತಿ, ನಾಗರೀಕತೆ ಹಾಗೂ ಇಂಗ್ಲಿಷ್ ಭಾಷೆ ಕಲಿಸಿದ್ದ. ಈಗ ಅವರನ್ನು ಒಬ್ಬ ಪಾದ್ರಿಯ ಜೊತೆ ಇಲ್ಲಿ ಬಿಟ್ಟು ಇಲ್ಲಿಯ ಜನರನ್ನು ನಾಗರಿಕರನ್ನಾಗಿ ಹಾಗೂ ಕ್ರೈಸ್ತ ಧರ್ಮಿಯರನ್ನಾಗಿ ಮಾಡಬೇಕೆಂಬುದು ಫಿಜ್‌ರಾಯನ ಆಸೆಯಾಗಿತ್ತು. ಹಾಗಾಗಿ ಈ ಮೂವರು ‘ನಾಗರಿಕ’ರನ್ನು ಮತ್ತು ಪಾದ್ರಿಯನ್ನು ಬಿಟ್ಟು ಬೀಗಲ್ ಪಯಣ ಮುಂದುವರೆಯಿತು.

ಎಲ್ಲಿಯವು ಪಳೆಯುಳಿಕೆಗಳು?

ಫಾಕ್‌ಲ್ಯಾಂಡ್ ದ್ವೀಪಗಳ ಸಮೀಕ್ಷೆ ಕಾರ್ಯ ನಡೆಯಿತು. ಅವಲೋಕನ, ಸಂಗ್ರಹ, ದಾಖಲಾತಿ, ನಿರಂತರವಾಗಿ ಮುಂದುವರೆ ಯಿತು. ಕ್ಯಾಪ್ಟನ್ ಹಲವು ವೇಳೆ ಯಾನದ ಮಾರ್ಗವನ್ನೇ ಬದಲಿಸುತ್ತಿದ್ದ. ಅಲ್ಲದೆ ಭಾರಿ ಮುಂಗೋಪಿ, ಆದರೂ ಡಾರ್ವಿನ್ ಮನೆಗೆ ಹಿಂತಿರುಗುವ ಬಗ್ಗೆ ಚಿಂತಿಸಲಿಲ್ಲ. ಏನೇ ಆಗಲಿ ವೈಜ್ಞಾನಿಕ ಪರಿಶೋಧನೆಯೇ ಆತನ ಪರಮ ಗುರಿಯಾಗಿತ್ತು. ೧೮೩೩ರ ಏಪ್ರಿಲ್ ಮೊದಲ ವಾರದಲ್ಲಿ ಫಾಕ್‌ಲ್ಯಾಂಡ್‌ನ್ನು ತೊರೆದು ಪ್ರಯಾಣ ಮುಂದುವರೆಯಿತು. ಮಾಲ್ಡನಡೊ ಮುಂದಿನ ಸ್ಥಳ. ಇಲ್ಲಿ ಯುವಕ ಡಾರ್ವಿನ್ ತನ್ನ ಸೇವಕರೊಡಗೂಡಿ, ಮಾರ್ಗದರ್ಶಕನ ಸಹಾಯದಿಂದ ಒಳನಾಡಿಗೆ ಪ್ರವೇಶ ಮಾಡಿದ. ಅಲೆಮಾರಿಗಳಂತೆ ಸಂಜೆಯ ವೇಳೆ ಬಿಡಾರ ಹೂಡುತ್ತಿದ್ದ. ಹಗಲಿನ ವೇಳೆ ಸಂಗ್ರಹ, ಮತ್ತು ಅವಲೋಕನ ಮುಂದುವರೆಸಿದ. ಅವರೆಲ್ಲ ವಿವಿಧ ರೀತಿಯ ಪ್ರಾಣಿಗಳನ್ನು ಹಿಡಿದರು, ಕೆಲವನ್ನು ಸ್ಥಳೀಯರಿಂದ ಖರೀದಿಸಿದರು. ಸಂಗ್ರಹದ ಪ್ರಮಾಣ ದಿನೇದಿನೇ ಹೆಚ್ಚಿತು. ಪಟ್ಟಣಗಳಲ್ಲಿ ಬಾಡಿಗೆ ಮನೆ ಹಿಡಿದರು. ಸಂಗ್ರಹಿಸಿದ ಪ್ರಾಣಿಗಳನ್ನು ಡಾರ್ವಿನ್ ವಿಚ್ಛೇದಿಸಿದ. ಅವುಗಳ ಹೊಟ್ಟೆಯಲ್ಲಿ ಎಂತಹ ಆಹಾರವಿದೆ? ಮೂಳೆಗಳ ರಚನೆ, ತೂಕ ಮುಂತಾದವುಗಳ ಬಗ್ಗೆ ವಿವರವಾದ ಟಿಪ್ಪಣಿಗಳನ್ನು ತಯಾರಿಸಿದ. ಅಲ್ಲಿನ ಮೀನು, ಪಕ್ಷಿ ಮತ್ತು ಸಸ್ತನಿಗಳ ವರ್ತನೆ, ಜೀವನಶೈಲಿ ಮತ್ತು ಅಂಗ ರಚನೆಯ ಬಗ್ಗೆ ಅಧ್ಯಯನ ಮಾಡಿ ಟಿಪ್ಪಣಿ ಮಾಡಿಕೊಂಡನು ಜುಲೈನಲ್ಲಿ ರಿಯೊ ನೀಗ್ರೊ ಪ್ರದೇಶದಲ್ಲಿ ಮೇಲ್ನಾಡಿನ ಅಧ್ಯಯನ ಕೈಗೊಂಡ. ಆ ಪ್ರದೇಶದಲ್ಲಿ ಬುಡಕಟ್ಟು ಜನರು ದಂಗೆಎದ್ದಿದ್ದರು. ಅಪಾಯ ಯಾವ ಸಮಯದಲ್ಲಾದರೂ ಉಂಟಾಗುವ ಸಾಧ್ಯತೆ ಇತ್ತು. ಆದರೂ ಹೆದರದೆ ಡಾರ್ವಿನ್ ಸಮೀಕ್ಷೆ ಕಾರ್ಯ ಮುಂದುವರೆಸಿದ. ಅಲ್ಲಿನ ವಿಶಾಲ ಹುಲ್ಲುಗಾವಲಾದ ಪಂಪಾಸ್‌ನಲ್ಲಿ ಎರಡು ವಾರ ಅಲೆದಾಡಿದ. ಪುಂಟ ಆಲ್ಟದಲ್ಲಿ ಕುದುರೆ ಗಾತ್ರದ ಪಳೆಯುಳಿಕೆ ದೊರಕಿತು. ಅದರ ಮೂಳೆಗಳನ್ನು ಚೊಕ್ಕಗೊಳಿಸಿ, ಅವುಗಳ ಅನುಕ್ರಮವನ್ನು ಗುರುತು ಮಾಡಿ ಪೊಟ್ಟಣ ಮಾಡಿ ಬ್ರಿಟನ್ನಿಗೆ ಕಳುಹಿಸಲು ಸಿದ್ಧಗೊಳಿಸಿದ.

ನೌಕಾಯಾನ ಮುಂದುವರೆಯಿತು. ಬೂನೋಸ್ ಏರ್ಸ್‌‌ಗೆ ಹೋಗೆ ಬಂದರು. ೧೮೩೪ರ ಫೆಬ್ರವರಿಗೆ ವೂಲ್ಸ್‌ಕೋವ್ ತಲುಪಿದರು. ಒಂದು ವರ್ಷದ ಹಿಂದೆ ಈ ಸ್ಥಳದಲ್ಲಿ ೩ ಜನ ‘ನಾಗರಿಕ’ ತರಬೇತಿ ಪಡೆದ ಪೂಜಿಯನ್ನರನ್ನು ಬಿಡಲಾಗಿತ್ತು. ಅವರು ಹೇಗೆ ಜೀವನ ನಡೆಸುತ್ತಿದ್ದಾರೆ ಎಂದು ತಿಳಿಯುವ ಕುತೂಹಲ ಎಲ್ಲರಿಗಿತ್ತು. ಆಶ್ಚರ್ಯವೆಂದರೆ ‘ನಾಗರಿಕ’ರಾಗಿದ್ದ ಇವರು ಮತ್ತೆ ಹಳೆಯ ಬುಡಕಟ್ಟು ಜೀವನ ಶೈಲಿಗೆ ಮರಳಿದ್ದರು! ಕಲಿತ ಭಾಷೆಯನ್ನು ಮರೆತಿದ್ದರು. ಸಹಸ್ರಾರು ವರ್ಷಗಳಿಂದ ರೂಢಿಗೆ ಬಂದ ಜೀವನ ಶೈಲಿಯನ್ನು ಒಂದೆರಡು ವರ್ಷಗಳ ತರಬೇತಿಯಿಂದ ತೆಗೆದು ಹಾಕಲು ಸಾಧ್ಯವಿಲ್ಲವೆಂಬುದು ಡಾರ್ವಿನ್‌ಗೆ ಅರಿವಾಯಿತು. ಇವರು “ಈಗ ಸಂತೋಷವಾಗಿರಬಹುದು. ಒಂದು ವೇಳೆ ಇವರು ನಾಗರಿಕ ತರಬೇತಿ ಪಡೆಯದಿದ್ದರೆ ಇನ್ನೂ ಹೆಚ್ಚು ಸಂತೋಷದಿಂದ ಇರುತ್ತಿದ್ದರು.” ಎಂದು ಡಾರ್ವಿನ್ ದಿನಚರಿಯಲ್ಲಿ ದಾಖಲಿಸಿದ್ದಾನೆ.

ಅನಂತರ ಭೂಶಿರ ಬಳಸಿಕೊಂಡು, ದಕ್ಷಿಣದ ಕಡೆ ಸಾಗಿತು ಪಯಣ. ಆಂಡಿಸ್ ಪರ್ವತಗಳ ತಪ್ಪಲಿನಲ್ಲಿದ್ದ ಚಿನ್ನದ ಗಣಿಯಲ್ಲಿ ಸಂಶೋಧನೆ ಮಾಡುತ್ತಿದ್ದ ಡಾರ್ವಿನ್ ವಿಚಿತ್ರ ರೋಗದಿಂದ ಬಳಲಿದೆ. ಒಂದು ತಿಂಗಳ ಕಾಲ ಈ ವಿಚಿತ್ರ ರೋಗ ಕಾಡಿತು. ಜ್ವರ ಆಯಾಸದ ಲಕ್ಷಣಗಳಿದ್ದ ಈ ರೋಗ ಯಾವುದೆಂಬುದು ಸ್ಪಷ್ಟವಾಗಲಿಲ್ಲ. ಬಹುಶಃ ಈ ರೋಗವೇ ಅವನ ಜೀವನ ಪರ್ಯಂತ ಕಾಡಿತು.

೧೯೩೫ರ ಫೆಬ್ರವರಿ ವಾಲ್ಡಿವಿಯ ಪ್ರದೇಶದಲ್ಲಿ ಸಮೀಕ್ಷೆ ಮಾಡುತ್ತಿದ್ದಾಗ ಭಾರಿ ಪ್ರಮಾಣದ ಭೂಕಂಪ ಉಂಟಾಯಿತು. ಪ್ರಕೃತಿಯ ರುದ್ರಾವತಾರ ಕಂಡು ಡಾರ್ವಿನ್ ಬೆರಗಾದ. ಸಹಸ್ರಾರು ಜೀವಿಗಳು ಒಮ್ಮೆಗೆ ವಿನಾಶವಾಗುವುದು, ವಾತಾವರಣ ಬದಲಾಗುವುದು ನಿಸರ್ಗದ ನಿರಂತರ ಸತ್ಯವೆಂಬುದು ಡಾರ್ವಿನ್‌ಗೆ ಅರಿವಾಯಿತು. ಪ್ರಕೃತಿಯ ಪಾಠಗಳನ್ನು ಗಮನಿಸಿದ. ದಾಖಲಿಸಿದ. ಬಹುಶಃ ವಿಕಾಸವಾದ ಮನೋಭೂಮಿಕೆಯಲ್ಲಿ ಹುಟ್ಟಲು ಇವೆಲ್ಲವೂ ಕಾರಣವಾಗಿರಬಹುದು. ಮತ್ತೆ ವಾಲ್ ಪರಾಸಿಯೊ ಕಡೆ ಪಯಣ ಮುಂದುವರೆಯಿತು. ಈ ಬಾರಿ ಆಂಡಿಸ್ ಪರ್ವತಗಳನ್ನು ದಾಟುವ ಡಾರ್ವಿನ್ ಕನಸು ನನಸಾಯಿತು. ಉಸ್ಪಲ್ಲಟ ಕಣಿವೆ ಮೂಲಕ ಹಾದು ಹೋಗುವಾಗ ಹಿಮ ತುಂಬಿದ ವಿಶಾಲ ಪ್ರದೇಶವಿತ್ತು. ಅಲ್ಲಿ ಹಿಮ ಆವರಿಸಿದ ಶಿಲಾರೂಪ ತಳೆದ ಪಳೆಯುಳಿಕೆ ಮರಗಳಿದ್ದವು. ನಿಸರ್ಗ ತರುವ ಬದಲಾವಣೆಗಳ ದರ್ಶನ ಇಲ್ಲಿ ದೊರಕಿತು. ಅನಂತರ ನೌಕಾಯಾನದ ತಂಡ ಸೇರಿ ಮುಂದಿನ ಪಯಣಕ್ಕೆ ಸಿದ್ಧನಾದ.

ಜ್ಞಾನೋದಯ ಉಂಟು ಮಾಡಿದ ಫಿಂಚ್ಗಳು

ನೌಕಾಯಾನ ಗ್ಯಾಲಪೋಗಾಸ್ ದ್ವೀಪಗಳ ಕಡೆ ಹೊರಟಿತು. ಸೆಪ್ಟೆಂಬರ್ ೧೫ರಂದು ಚಾಟಮ್ ದ್ವೀಪವನ್ನು ತಲುಪಿದರು. ದಕ್ಷಿಣ ಅಮೆರಿಕಾದಿಂದ ಸುಮಾರು ೮೦೦ ಕಿಲೋಮೀಟರು ದೂರದಲ್ಲಿ ಕಂಡು ಬರುವ ಗ್ಯಾಲಪೋಗಾಸ್ ದ್ವೀಪಗಳ ಸಮೂಹ ಡಾರ್ವಿನ್‌ನ ಭೇಟಿಯಿಂದಲೇ ಜಗತ್ಪ್ರಸಿದ್ಧವಾದವು. ಅದೇ ರೀತಿ ಡಾರ್ವಿನ್ ಈ ದ್ವೀಪಗಳಿಗೆ ಭೇಟಿ ನೀಡಿದ್ದರಿಂದಲೇ ಬಹುಶಃ ವಿಕಾಸ ಸಿದ್ಧಾಂತದ ಬಗ್ಗೆ ಸ್ಪಷ್ಟ ಪರಿಲ್ಪನೆಯನ್ನು ರೂಪಿಸಿಕೊಳ್ಳಲು ಸಾಧ್ಯವಾಯಿತು. ಈ ದ್ವೀಪಗಳ ಸಮೀಕ್ಷೆಗಾಗಿ ಬೀಗಲ್ ತಂಡವು ಒಂದು ತಿಂಗಳ ಕಾಲ ಮೊಕ್ಕಂ ಮಾಡಿತು. ಕಪ್ಪು ಶಿಲೆಗಳು, ಕಳ್ಳಿಗಿಡಗಳು ಮತ್ತು ಮುಳ್ಳು ಪೊದೆಗಳಿಂದ ಕೂಡಿದ ಈ ದ್ವೀಪಗಳು ಮೊದಲ ನೋಟಕ್ಕೆ ಆಕರ್ಷಕವಾಗಿರಲಿಲ್ಲ. ಇವು ಅಸಹ್ಯ ಹಾಗೂ ವಾಸಯೋಗ್ಯವಲ್ಲದ ಸ್ಥಳಗಳೆಂದು ಡಾರ್ವಿನ್ ಭಾವಿಸಿದ. ಆದರೆ ಇವು ಪ್ರಕೃತಿ ತಜ್ಞ ಹಾಗೂ ಭೂವಿಜ್ಞಾನಿಗಳಿಗೆ ಚಿನ್ನದ ಗಣಿಗಳಾಗಿದ್ದವು. ಇಲ್ಲಿನ ಹವಾಗುಣ ಎಲ್ಲ ರೀತಿಯ ಸರೀಸೃಪಗಳಿಗೆ ಸ್ವರ್ಗ ಸಮಾನವಾಗಿತ್ತು. ಹಲವು ರೀತಿಯ ಹಲ್ಲಿ ಮತ್ತು ಆಮೆಗಳಿಗೆ ಈ ದ್ವೀಪಗಳು ಜನ್ಮಸ್ಥಳಗಳಾಗಿದ್ದವು. ಇಲ್ಲಿನ ಜ್ವಾಲಾಮುಖಿಗಳಿಂದ ಈ ಪ್ರದೇಶವು ಈ ಪ್ರದೇಶವು ಕೈಗಾರಿಕಾ ಕಸದ ರಾಶಿಯಂತೆ ಕಾಣುತ್ತಿತ್ತು. ಇಲ್ಲಿನ ದೈತ್ಯ ಆಮೆಗಳು ಚಲಿಸುವ ದೊಡ್ಡ ಗುಂಡಾದ ಕಲ್ಲುಗಳಂತೆ ಇದ್ದವು. ಕಡಲಯಾನಕ್ಕೆ ಬರುವ ಜನ ಈ ದ್ವೀಪಗಳಿಗೆ ಭೇಟಿ ನೀಡಿದಾಗ ದೈತ್ಯ ಆಮೆಗಳನ್ನು ಮಾಂಸಕ್ಕಾಗಿ ತೆಗೆದುಕೊಂಡು ಹೋಗುತ್ತಿದ್ದರು. ಜೀವಂತ ಆಮೆಗಳನ್ನು ಹಡಗಿನಲ್ಲಿ ಸುಲಭವಾಗಿ ಸಾಗಿಸಬಹುದು ಮತ್ತು ಬೇಕೆಂದಾಗ ಅಡುಗೆಗೆ ಬಳಸಬಹುದು.

 ಇಲ್ಲಿ ಜೀವಿಸುವ ದೈತ್ಯ ಹಲ್ಲಿಗಳನ್ನು ಇಂಗ್ವಾನ ಎನ್ನುವರು. ಇವು ಸಮುದ್ರದಲ್ಲಿ ಬೆಳೆಯುವ ಕಳೆಗಿಡಗಳನ್ನು ತಿನ್ನುತ್ತವೆ ಮತ್ತು ಕಡಲ ತೀರದ ಬಂಡೆಗಳ ಮೇಲೆ ವಿಶ್ರಾಂತಿ ಪಡೆಯುತ್ತವೆ. ಇವು ಈಜುತ್ತಾ, ಮುಳುಗುತ್ತಾ ಜಲ ಸಸ್ಯಗಳನ್ನು ತಿನ್ನುವ ಪರಿಯನ್ನು ವೀಕ್ಷಿಸುವುದೇ ಒಂದು ವಿಶಿಷ್ಟ ಅನುಭವ. ಕುತೂಹಲಕ್ಕೆಂದು ಡಾರ್ವಿನ್ ಬಂಡೆಯ ಮೇಲಿದ್ದ ಒಂದೆರಡುಹಲ್ಲಿಗಳನ್ನು ನೀರಿಗೆ ಎಸೆದ. ಅವು ಮತ್ತೆ ಬಂಡೆಯ ಮೇಲೆ ಬಂದು ಕುಳಿತವು. ಸದಾ ನೀರಿನಲ್ಲಿ ಇರಲು ಏಕೆ ಇಷ್ಟಪಡುವುದಿಲ್ಲವೆ? ಬಹುಶಃ ಸಮುದ್ರದ ಶಾರ್ಕ್‌ಗಳಿಗೆ ಹೆದರಿ, ಬಂಸೆಯ ಮೇಲೆ ವಿಶ್ರಾಂತಿ ಪಡೆಯುತ್ತಿವೆಯೇ? ಈ ರಕ್ಷಣಾ ಸ್ವಭಾವ ಅನುವಂಶೀಯವಾಗಿ ಬಂದಿರಬಹುದೇ ಎಂದು ಡಾರ್ವಿನ್ ತರ್ಕಿಸಿದ.

ಇಲ್ಲಿಯ ಪಕ್ಷಿಲೋಕವೂ ಅದ್ಭುತ ಸೃಷ್ಟಿಯಾಗಿತ್ತು. ಡಾರ್ವಿನ್‌ಗೆ ವಿಕಾಸದ ವಿಶ್ವರೂಪದರ್ಶನ ಮಾಡಿಸಿದ ಕೀರ್ತಿ ಇಲ್ಲಿಯ ಫಿಂಚ್ ಎಂಬ ಪಕ್ಷಿಗಳಿಗೆ ಸಲ್ಲುತ್ತದೆ. ಈ ಪಕ್ಷಿಗಳು ದಕ್ಷಿಣ ಅಮೆರಿಕಾದಲ್ಲಿರುವ ಪಕ್ಷಿಗಳನ್ನು ಹೋಲುತ್ತವೆ. ಕಪ್ಪು ಬಣ್ಣದ ಶಿಲೆಗಳಿಂದ ಕೂಡಿದ ಈ ದ್ವೀಪಗಳಲ್ಲಿ ಫಿಂಚ್ ಪಕ್ಷಿಗಳ ಬಣ್ಣವೂ ಕಪ್ಪು, ಗಾತ್ರ ಮತ್ತು ಆಕಾರದಲ್ಲಿ ಇವು ಒಂದೇ ತೆರನಾಗಿದ್ದರೂ ಕೊಕ್ಕುಗಳ ಆಕಾರದಲ್ಲಿ ವ್ಯತ್ಯಾಸಗಳಿದ್ದವು. ಫಿಂಚ್‌ನ ಒಂದು ಪ್ರಭೇದದ ಕೊಕ್ಕು ತೆಳುವಾಗಿ ಉದ್ದವಾಗಿದ್ದು ಹುಳ ಹುಪ್ಪಟೆಗಳನ್ನು ಹಿಡಿಯಲು ಸೂಕ್ತವಾಗಿತ್ತು. ಮತ್ತೊಂದು ಪ್ರಭೇದದ ಕೊಕ್ಕು ದಪ್ಪ ಮತ್ತು ಹುಪ್ಪಟೆಗಳನ್ನು ಹಿಡಿಯಲು ಸೂಕ್ತವಾಗಿತ್ತು. ಮತ್ತೊಂದುಪ್ರಭೇದದ ಕೊಕ್ಕು ದಪ್ಪ ಮತ್ತುಪುಟ್ಟದಾಗಿತ್ತು. ಇಂತಹ ಕೊಕ್ಕು ಹಣ್ಣು ಮತ್ತು ಬೀಜಗಳನ್ನು ತಿನ್ನಲು ಉಪಯೋಗಕ್ಕೆ ಬರುತ್ತಿತ್ತು. ಮತ್ತೆ ಕೆಲವು ಪ್ರಭೇದಗಳ ಕೊಕ್ಕು ಇವೆರಡರ ನಡುವಿನ ಆಕಾರದಂತೆ ಇತ್ತು. ಇಲ್ಲಿ ೧೨ ದ್ವೀಪಗಳಿದ್ದವು. ಆದರೆ ಫಿಂಚ್‌ನ ೧೩ ಪ್ರಭೇದಗಳಿದ್ದವು. ಒಂದೇ ರೀತಿಯ ಹವಾಗುಣವಿರುವ ಈ ದ್ವೀಪಗಳ ಪಕ್ಷಿಗಳಲ್ಲಿ ಇಷ್ಟು ಪ್ರಭೇದಗಳೇಕೆ? ಅವುಗಳ ಉದ್ಭವಕ್ಕೆ ಕಾರಣಗಳೇನು? ಇವು ಡಾರ್ವಿನ್‌ಗೆ ಯಕ್ಷ ಪ್ರಶ್ನೆಗಳಾದವು.

ಗ್ಯಾಲಪೋಗಾಸ್ ದ್ವೀಪಗಳ ರಚನೆಯೂ ಕುತೂಹಲಕಾರಿ ವಿಷಯ. ಇವು ಸಾಗರಗಳ ಗರ್ಭದಿಂದ ಉದಯಿಸಿದ ಜ್ವಾಲಾಮುಖಿಗಳ ಪರಿಣಾಮವಾಗಿ ಜನಿಸಿದ ದ್ವೀಪಗಳಾಗಿದ್ದವು. ಇಂತಹ ದ್ವೀಪಗಳನ್ನು ಕಡಲ ದ್ವೀಪಗಳು ಅಥವಾ ಜ್ವಾಲಾಮುಖಿಯ ದ್ವೀಪಗಳೆನ್ನುವರು. ಜ್ವಾಲಾಮುಖಿಗಳಿಂದ ಹೊರಬರುವ ಲಾವಾರಸವು ಶಿಲಾ ರೂಪ ಪಡೆಯುವುದರಿಂದ ದ್ವೀಪಗಳ ರಚನೆಯಾಗಿತ್ತು. ಈ ದ್ವೀಪಗಳು ಸೃಷ್ಟಿಯಾದಾಗ ಯಾವುದೇ ಜೀವಿಗಳಿರುವುದಿಲ್ಲ. ಇಲ್ಲಿಗೆ ಜೀವಿಗಳು ಇತರೆ ಭೂಪ್ರದೇಶಗಳಿಂದ ಬರಬೇಕು. ಮಾನವ ಅಥವಾ ಚಂಡಮಾರುತಗಳು ಜೀವಿಗಳನ್ನು ಇಲ್ಲಿಗೆ ತಂದಿರಬಹುದು. ಆದರೆ ಗ್ಯಾಲಪೋಗಾಸ್ ದ್ವೀಪಗಳಲ್ಲಿ ಮತ್ತಾವ ಭೂ ಪ್ರದೇಶಗಳಲ್ಲಿಯೂ ಇರದ ಜೀವಿಗಳಿವೆ. ಅವು ಹೇಗೆ ಸೃಷ್ಟಿಯಾದವು? ದೂರದ ದಕ್ಷಿಣ ಅಮೆರಿಕಾದಿಂದ ಬಂದ ಜೀವಿಗಳು ಇಲ್ಲಿ ನಿಧಾನವಾಗಿ ನಿರಂತರವಾಗಿ ಬದಲಾವಣೆಗೆ ಒಳಗಾಗಿ ಹೊಸ ಪ್ರಭೇದಗಳು ಸೃಷ್ಟಿಯಾದವೇ? ಅಥವಾ ಈ ದ್ವೀಪಗಳಿಗಾಗಿಯೇ ದೇವರು ಮತ್ತೊಮ್ಮೆ ಜೀವಿಗಳನ್ನು ಸೃಷ್ಟಿ ಮಾಡಿದನೆ? ತರುಣ ಡಾರ್ವಿನ್ ಗೊಂದಲಕ್ಕೊಳಗಾದ. ಬಹುಶಃ ಮೊದಲ ಆಲೋಚನೆಯೇ ಸರಿಯೆನಿಸಿತು.

ಆವಲೋಕನ ಆಲೋಚನೆಗೆ, ಆಲೋಚನೆ ಊಹೆಗೆ, ಊಹೆಯು ಆಧಾರ ಕಲ್ಪನೆಗೆ ಎಡೆ ಮಾಡುತ್ತಿತ್ತು. ಗ್ಯಾಲಪೋಗಾಸ್‌ನಲ್ಲಿ ಐದುವಾರ ಸಮೀಕ್ಷೆ ಮುಗಿಸಿ ಬೀಗಲ್ ಪಯಣ ಮುಂದುವರೆಯಿತು. ಪಶ್ಚಿಮದ ಕಡೆ ಪಯಣ. ೩೦೦೦ ಮೈಲಿಗಳಷ್ಟು ದೀರ್ಘ ಪಯಣದ ನಂತರ ತಯಟಿ ದ್ವೀಪಗಳಲ್ಲಿ ತಂಗಿತು. ಡಾರ್ವಿನ್ ತನ್ನ ಕಾಯಕ ಆರಂಭಿಸಿದ. ಇಲ್ಲಿಯು ಸ್ಥಳೀಯ ಜನರು ನೀಡಿದ ಸ್ವಾಗತ ಮತ್ತು ಸದ್ವರ್ತನೆಗಳು ಖುಷಿ ನೀಡಿದವು. ಅನಂತರ ನೌಕಾಯಾನ ನ್ಯೂಜಿಲ್ಯಾಂಡ್‌ಕಡೆ ಹೊರಟಿತು. ಮೂರು ವಾರಗಳ ಯಾನ. ಕಡಲ ಏಕತಾನತೆಯಿಂದ ಮನೆಯ ನೆನಪು ಕಾಡಲಾರಂಭಿಸಿತು. ಇತ್ತೀಚಿನ ಪಯಣ ಹಾಗೂ ಸಮೀಕ್ಷೆಯ ಅನುಭವಗಳನ್ನು ಬರೆಯುತ್ತಾ ಸಮಯವನ್ನು ಸದ್ಬಳಕೆ ಮಾಡಿಕೊಂಡನು.

ನ್ಯೂಜಿಲ್ಯಾಂಡ್‌ನಲ್ಲಿ ಯುರೋಪಿಯನ್ನರ ದಬ್ಬಾಳಿಕೆ ನಡೆದಿತ್ತು. ಸ್ಥಳೀಯ ಜನಾಂಗವಾದ ಮಾವೊರಿಸ್‌ರವರನ್ನು ಸಂಪೂರ್ಣವಾಗಿ ಹತ್ಯೆ ಮಾಡಲಾಗಿತ್ತು. ಬದುಕುಳಿದ ಕೆಲವರು ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡು ಜೀವ ಉಳಿಸಿಕೊಂಡಿದ್ದರು. ಈ ಪ್ರದೇಶದ ಸಮೀಕ್ಷೆಗೆ ಹೆಚ್ಚು ಸಮಯ ಸಿಗಲಿಲ್ಲ. ಆದರೂ ಜೀವಿಗಳನ್ನು ಅಧ್ಯಯನ ಮಾಡಿದ. ಅಲ್ಲಿನ ಶ್ರೀಮಂತರ ಅನಗತ್ಯ ವೈಭೋಗ ಜೀವನ ಕಂಡು ಬಲ್ಲಿದರ ನಡುವಿನ ಕಂದರ ಹಾಗೂ ಶ್ರೀಮಂತರ ಅನಗತ್ಯ ವೈಭೋಗ ಜೀವನ ಕಂಡು ಬೇಸರಗೊಂಡ. ೧೮೩೫ರ ಡಿಸೆಂಬರ್ ೩೦ರಂದು ಬೀಗಲ್ ನೌಕೆಯು ಆಸ್ಟ್ರೇಲಿಯ ಕಡೆ ಸಾಗಿತು ಹಾಗೂ ಸಿಡ್ನಿ ನಗರವನ್ನು ತಲುಪಿತು. ಸಿಡ್ನಿ ಸುಂದರ ನಗರ, ವೇಗವಾಗಿ ಅಭಿವೃದ್ಧಿ ಯಾಗುತ್ತಿತ್ತು. ನ್ಯೂಜಿಲ್ಯಾಂಡ್‌ನಂತೆಯೇ ಇಲ್ಲಿಯ ಸ್ಥಳೀಯರನ್ನು ಯುರೋಪಿಯನ್ನರು ದಮನ ಮಾಡಿದ್ದರು ಅಥವಾ ಗುಲಾಮ ರನ್ನಾಗಿಸಿಕೊಂಡಿದ್ದರು. ಡಾರ್ವಿನ್‌ಗೆ ಈ ಸ್ಥಳ ಪ್ರಿಯವಾಗಲಿಲ್ಲ. ಒಂದೇ ರೀತಿಯ ಭೂ ರಚನೆಯಿಂದ ಆಕರ್ಷಣೆಯ ಕೊರತೆಯಿತ್ತು. ಅನಂತರ ನೌಕೆಯು ದಕ್ಷಿಣಕ್ಕಿರುವ ತಾಸ್ಮೇನಿಯ ದ್ವೀಪದಲ್ಲಿ ಸ್ವಲ್ಪ ಸಮಯ ಕಳೆಯಿತು. ೧೯೩೬ರ ಮಾರ್ಚ್‌ನಲ್ಲಿ ಆಸ್ಟ್ರೇಲಿಯ ಯಾತ್ರೆ ಮುಗಿಸಿ ಮರುಪ್ರಯಾಣಕ್ಕೆ ಬೀಗಲ್ ಸಿದ್ಧವಾಯಿತು. ಬ್ರಿಟನ್ನಿಗೆ ಬರಲು ಮತ್ತೆ ಆರು ತಿಂಗಳಾದವು. ಹಿಂದೂ ಮಹಾಸಾಗರವನ್ನು ವೇಗವಾಗಿ ದಾಟಿದರು. ಕೀಲಿಂಗ್ ಮತ್ತು ಕೋಕಸ್ ದ್ವೀಪಗಳ ಸಮೀಪವಿರುವ ಹವಳ ಜೀವಿಗಳ ನೋಟ ಡಾರ್ವಿನ್‌ನಲ್ಲಿ ಸಂತಸ ಉಂಟು ಮಾಡಿತು. ವಿಶ್ವದಲ್ಲಿಯೇ ಹವಳಗಳು ಸುಂದರ ಜೀವಿಗಳೆಂದು ಡಾರ್ವಿನ್ ತೀರ್ಮಾನಿಸಿದ.

ಮರಳಿ ಮನೆಗೆ ಪಯಾಣ

ಮುಂದೆ ಬೀಗಲ್ ನೌಕೆಯು ಮಾರಿಷಿಯಸ್ ತಲುಪಿತು. ಅಲ್ಲಿಂದ ಆಫ್ರಿಕಾದ ಪೂರ್ವ ಕರಾವಳಿಯ ಮಾರ್ಗದಲ್ಲಿ ಪಯಣ ಮುಮದುವರೆಯಿತು. ಕೇಪ್‌ಟೌನ್‌ನಲ್ಲಿ ಸ್ವಲ್ಪ ಸಮಯ ತಂಗಿ ದೀರ್ಘ ಪಯಣದ ಆಯಾಸ ಮರೆಯಲು ಪ್ರಯತ್ನಿಸಿದರು. ಇಲ್ಲಿಂದ ನೇರವಾಗಿ ಇಂಗ್ಲೆಂಡಿಗೆ ಹೋಗಬೇಕಿತ್ತು. ಆದರೆ ಹುಚ್ಚು ದೊರೆ ಫಿಜ್‌ರಾಯ್‌ನ ಯೋಚನೆಯೇ ಬೇರೆ ಇತ್ತು. ಬ್ರೆಜಿಲ್‌ನ ಬಾಹಿಯಾ ಕಡೆ ಪಯಣಿಸಲು ಆಜ್ಞೆ ಮಾಡಿದ. ನಾಲ್ಕು ವರ್ಷಗಳ ಹಿಂದೆ ಅಲ್ಲಿ  ಸರ್ವೆ ಕಾರ್ಯ ಕೈಗೊಂಡಿದ್ದು ಸರಿಯಾಗಿದೆಯೋ ಅಥವಾ ಇಲ್ಲವೋ ಎಂಬುದನ್ನು ಆತ ಪರೀಕ್ಷಿಸಬೇಕೆಂದ. ಡಾರ್ವಿನ್‌ಗೆ ಎಲ್ಲಿಲ್ಲದ ಬೇಸರ. ಮನೆಗೆ ಮರಳುವ ಆಸೆ ಹೆಚ್ಚಿತ್ತು. “ಅತ್ತಿತ್ತ ಅಲೆದಾಡುವ ಈ ಪಯಣ ತುಂಬ ನೋವಿನದು. ಇದು ನನ್ನ ಭಾವನೆಗಳನ್ನು ಸಾಯಿಸಿದೆ. ನಾನು ಕಡಲನ್ನು ದ್ವೇಷಿಸುತ್ತೇನೆ” ಎಂದು ಡಾರ್ವಿನ್ ತನ್ನ ದಿನಚರಿಯಲ್ಲಿ ಬರೆದಿದ್ದಾನೆ. ತನ್ನಪರೀಕ್ಷಾ ಕಾರ್ಯ ಮುಗಿಸಿದ ಫಿಜ್‌ರಾಯ್ ೧೯೩೬ರ ಆಗಸ್ಟ್‌೬ರಂದು ಬೀಗಲ್ ಇಂಗ್ಲೆಂಡಿನತ್ತ ಹೊರಡಲು ಆದೇಶಿಸಿದ. ಡಾರ್ವಿನ್ ನಿಟ್ಟುಸಿರು ಬಿಟ್ಟ. ಆದರೆ ವಿಘ್ನಗಳು ಮುಮದುವರೆದವು. ಚಂಡಮಾರುತಗಳು ನಿರಂತರವಾಗಿ ಬಂದವು. ೧೭ರವರೆಗೆ ಪಯಣವನ್ನು ಮುಂದೂಡಬೇಕಾಯಿತು. ತಾನು ತಂದಿದ್ದ ಸಂಗ್ರಹಗಳನ್ನು ಅಧ್ಯಯನ ಮಾಡುವುದರಲ್ಲಿ ಹಾಗೂ ದಿನಚರಿ ಬರೆಯುವುದರಲ್ಲಿ ಡಾರ್ವಿನ್ ಮಗ್ನನಾದ. ಆಗಸ್ಟ್ ೨೨ರಂದು ಭೂ ಮಧ್ಯರೇಖೆಯನ್ನು ಮತ್ತು ಸೆಪ್ಟೆಂಬರ್ ೯ರಂದುಕರ್ಕ ರೇಖೆಯ ಸ್ಥಳವನ್ನು ದಾಟಿದರು.

ಬೀಗಲ್ ಮಹಾಯಾತ್ರೆಯ ಕೊನೆಯ ಹಂತ. ೧೯೩೬ರ ಅಕ್ಟೋಬರ್ ಎರಡರ ರಾತ್ರಿ ಬೀಗಲ್ ನೌಕೆಯು ಬ್ರಿಟನ್ನಿನ ಪಾಲ್ ಮೌತ್‌ನ ಬಂದರನ್ನು ತಲುಪಿತು. ತಡೆಹಿಡಿಯಲಾರದಷ್ಟು ಸಂತಸದಿಂದ ಡಾರ್ವಿನ್‌ಬೀಗಿದ. ಈ ಮಹಾಯಾನ ೪ ವರ್ಷ ಮತ್ತು ೯ತಿಂಗಳು ಸಮಯ ತೆಗೆದುಕೊಂಡಿತ್ತು. ಆದರೆ ಅದಕ್ಕಿಂತ ಹೆಚ್ಚಿನ ಅನುಭವ ಡಾರ್ವಿನ್‌ಗೆ ದೊರಕಿತ್ತು. ಯಾನಕ್ಕೆ ಹೊರಟು ನಿಂತಾಗ ಡಾರ್ವಿನ್ ಆಗ ತಾನೆ ವಿಶ್ವವಿದ್ಯಾಲಯದಿಂದ ಹೊರಬಂದ ಯುವಕನಾಗಿದ್ದ. ಆತ ಉತ್ತಮ ಕುಟುಂಬ ಹಿನ್ನೆಲೆಯ, ಅದಮ್ಯ ಉತ್ಸಾಹ ತುಂಬಿದ ಮತ್ತು ಪ್ರಕೃತಿ ಹಾಗೂ ಭೂವಿಜ್ಞಾನದ ಹವ್ಯಾಸಿಯಾಗಿದ್ದ. ಈಗ ಡಾರ್ವಿನ್ ಭೂಮಿಯನ್ನು ಒಂದು ಸುತ್ತು ಹಾಕಿದ ಅನುಭವಿಯಾಗಿ ಪರಿವರ್ತಿತನಾಗಿದ್ದ. ಭೂವಿಜ್ಞಾನಕ್ಕೆ ಸಂಬಂಧಿಸಿದ ೧,೩೮೩ಪುಟಗಳ ಟಿಪ್ಪಣಿಗಳು, ಪ್ರಾಣಿ ಶಾಸ್ತ್ರಕ್ಕೆ ಸಂಬಂಧಿಸಿದ ೩೬೮ ಪುಟಗಳ ಟಿಪ್ಪಣಿಗಳು, ೧,೫೨೯ ಪ್ರಭೇದಗಳ ಪಟ್ಟಿ ಮತ್ತು ೩,೯೦೭ ಪ್ರಭೇದಗಳ ಚರ್ಮ, ಮೂಳೆಗಳ ಸಂಗ್ರಹ ಹಾಗೂ ಮತ್ತಿತರೆ ಪ್ರಭೇದಗಳನ್ನು ತಂದ ಸಾಹಸಿ ವಿಜ್ಞಾನಿಯಾಗಿದ್ದ. ಅಲ್ಲದೆ ಗ್ಯಾಲಪೊಗಸ್ ದ್ವೀಪಗಳಿಂದ ಒಂದು ಪುಟ್ಟ ಆಮೆಯನ್ನು ತಂದಿದ್ದ. ಆತನ ದಿನಚರಿ ೭೭೦ ಪುಟಗಳಷ್ಟಾಗಿತ್ತು. ಕೆಲವು ಪ್ರಬಂಧಗಳನ್ನು ಮುಂಚಿತವಾಗಿಯೇ ಬ್ರಿಟನ್ನಿಗೆ ಕಳುಹಿಸಿದ್ದ. ಈ ಪ್ರಬಂಧಗಳನ್ನು ಅನೇಕ ವಿಜ್ಞಾನಿಗಳು ಓದಿದ್ದರು ಮತ್ತು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಈಗ ಡಾರ್ವಿನ್ ಹೆಚ್ಚು ಬುದ್ಧಿವಂತನಾಗಿ, ಪ್ರೌಢನಾಗಿ ಹಿಂತಿರುಗಿ ಬಂದಿದ್ದ. ಆತನ ಪರಿಶೋಧನೆಗಳು ಆಗಲೇ ವಿಜ್ಞಾನಿಗಳ ಸಮುದಾಯದಲ್ಲಿ ಸಾಕಷ್ಟು ಚರ್ಚೆಗೆ ಒಳಗಾಗಿದ್ದವು. ಸಮ ವಯಸ್ಕರು, ಹಿರಿಯರು ಡಾರ್ವಿನ್‌ನನ್ನು ಗೌರವದಿಂದ ಕಾಣುತ್ತಿದ್ದರು. ಆ ರಾತ್ರಿ ತಾಯ್ನಾಡಿಗೆ ಮರಳಿದಾಗ ಡಾರ್ವಿನ್ನ್‌ಗೆ ಈ ಬದಲಾವಣೆಯ ಬಗ್ಗೆ ತಿಳಿದಿರಲಿಲ್ಲ. ಆದರೆ ಅವನ ನಿಜವಾದ ಕೊಡುಗೆ ಕೊನರುವ ಕಾಲ ಸಮೀಪಿಸುತ್ತಿತ್ತು.

* * *