೧೮೬೦ನೇ ಇಸವಿ. ಇಂಗ್ಲೆಂಡಿನ ರಾಜಧಾನಿ ಲಂಡನ್ನಿನಲ್ಲಿ ಒಂದು ವಿಶೇಷ ಸಭೆ. ಮುಕ್ತ ಸಂವಾದಕ್ಕಾಗಿ ಪರ-ವಿರೋಧ ಅಭಿಪ್ರಾಯ ಮಂಡಿಸುವವರನ್ನು ಆಹ್ವಾನಿಸಲಾಗಿತ್ತು. ವಿಷಯ ವಿನೂತನವಾದುದು. ಕ್ರಾಂತಿಕಾರಕವಾದುದು. ಸಾವಿರಾರು ವರ್ಷಗಳ ನಂಬಿಕೆಯನ್ನೇ ಬುಡಮಟ್ಟ ಕಿತ್ತು ಹಾಕಿದ ವಿಷಯ. ಸಮಾಜದ ನಂಬಿಕೆ, ವಿಶ್ವಾಸಗಳನ್ನೇ ಅಲ್ಲಾಡಿಸಿದ ವಿಷಯ. ಪ್ರಪಂಚದಲ್ಲಿರುವ ವಿವಿಧ ರೀತಿಯ ಜೀವಿಗಳು ದೈವಕೃಪೆಯಿಂದ ಸೃಷ್ಟಿಯಾದವೋ ಅಥವಾ ಅವೇ ನಿಧಾನವಾಗಿ, ನಿರಂತರವಾಗಿ ಬದಲಾವಣೆಗೆ ಒಳಗಾಗಿ ವಿಕಾಸವಾದವೋ? ಎಂಬ ಪ್ರಶ್ನೆಯೇ-ಆ ವಿಷಯ. ದಪ್ಪ ಮೂಗಿನ, ಒರಟು ಮುಖದ ಹಾಗೂ ದೃಢಕಾಯದ ಐವತ್ತು ವರ್ಷಗಳ ಒಬ್ಬ ವಿಜ್ಞಾನಿ ಈ ಜಗತ್ತಿನ ಜೀವಿಗಳೆಲ್ಲವೂ, ಮಾನವನನ್ನೂ ಸೇರಿಸಿ, ನಿಧಾನವಾಗಿ ಬದಲಾವಣೆಗೆ ಒಳಗಾಗಿವೆ ಎಂದು ತಿಳಿಸಿದ್ದ. ಆ ವಿಷಯ ಶ್ರೀ ಸಾಮಾನ್ಯರಿಗೂ ಅರ್ಥವಾಗುವಂತೆ ಒಂದು ಪುಸ್ತಕವನ್ನೂ ಬರೆದಿದ್ದ. ‘ಪ್ರಭೇದಗಳ ಉಗಮ’ (Origin of Species) ಎಂಬುದು ಆ ಪುಸ್ತಕದ ಹೆಸರು. ಇದು ಜನರ, ಸಮಾಜದ ನಂಬಿಕೆಯನ್ನೇ ಬುಡಮೇಲು ಮಾಡಿತ್ತು.

ಕ್ರೈಸ್ತ ಧರ್ಮೀಯರಿಗೆ ಬೈಬಲ್ ಧರ್ಮಗ್ರಂಥ. ಅದರ ಪ್ರತಿ ಪದವೂ ಪೂಜ್ಯ. ಅದರಲ್ಲಿನ ಹೇಳಿಕೆ, ದೃಷ್ಠಾಂತಗಳು ಸತ್ಯತ್ಯ ಸತ್ಯ. ಎಲ್ಲರ ಮನೆಯಲ್ಲಿಯೂ ಬೈಬಲ್ ಗ್ರಂಥವಿರುತ್ತದೆ. ಅದರ ಪಠನ ಮನೆಮನೆಯಲ್ಲಿಯೂ ನಡೆಯುತ್ತದೆ. ಪ್ರತಿ ಭಾನುವಾರ ಚರ್ಚ್‌‌ನಲ್ಲಿಯೂ ನಡೆಯುತ್ತದೆ. ಪಾದ್ರಿಗಳು ಬೈಬಲ್‌ನ ಹೇಳಿಕೆಯ ಬಗ್ಗೆ ಮತ್ತಷ್ಟು ವಿವರವಾಗಿ ಅರ್ಥವಾಗುವಂತೆ ಪ್ರವಚನ ನೀಡುತ್ತಾರೆ. ಬೈಬಲ್ ಗ್ರಂಥದ ಪ್ರಕಾರ ಪ್ರಕೃತಿಯಲ್ಲಿನ ಸಕಲ ಚರಾಚರ ವಸ್ತುಗಳನ್ನು ದೇವರು ಸೃಷ್ಟಿ ಮಾಡಿದ. ಭೂಮಿ, ಆಕಾಶ, ಸೂರ್ಯ, ಚಂದ್ರ, ಸಸ್ಯಗಳು, ಪ್ರಾಣಿಗಳು ಮತ್ತು ಮೊದಲ ಮಾನವನೆಂದು ಭಾವಿಸುವ ‘ಆಡಂ’ನನ್ನು ಆರು ದಿನಗಳಲ್ಲಿ ಸೃಷ್ಟಿಸಿದ ಎಂದು ಹೇಳಲಾಗುತ್ತದೆ.

ಹಾಗಾಗಿ ಬೈಬಲ್ ಧರ್ಮಗ್ರಂಥದಲ್ಲಿರುವುದೇ ಪರಮ ಸತ್ಯ ಎಂದು ಜನ ಅನೂಚಾನವಾಗಿ ನಂಬಿದ್ದರು. ಮಾನವ ದೇವರ ಪ್ರತಿಬಿಂಬ. ಅವನ ಸೇವೆಗಾಗಿ ಬೇರೆಲ್ಲವೂ ಇವೆ. ದೇವರು ಸೃಷ್ಟಿಸಿದ ನಂತರ ಅವು ಯಾವ ಬದಲಾವಣೆಗೂ ಒಳಗಾಗಿಲ್ಲ. ಒಳಗಾಗುವುದೂ ಇಲ್ಲ ಎಂದು ದೃಢ ನಂಬಿಕೆ ಹೊಂದಿದ್ದರು. ಅಲ್ಲದೆ ಕ್ರೈಸ್ತ ಧರ್ಮ ಪ್ರಚಾರದ ಪಾದ್ರಿಗಳು, ಬಿಷಪ್‌ಗಳೂ, ಪೋಪ್‌ಗಳು ಹೇಳುವುದೊಂದೇ ಪರಮಸತ್ಯವೆಂದು ಭಾವಿಸಲಾಗುತ್ತಿತ್ತು. ಅವರ ಬಗ್ಗೆ ಪೂಜ್ಯ ಭಾವನೆ, ಭಕ್ತಿ, ಭಯ ಇರುತ್ತಿತ್ತು. ಬಿಷಪ್‌ರಂತವರು ರಾಜ್ಯದ ಆಡಳಿತದ ಮೇಲೂ ಪ್ರಭಾವ ಬೀರುತ್ತಿದ್ದರು. ಆದರೆ ಇಲ್ಲೊಬ್ಬ ವಿಜ್ಞಾನಿ ಬರೆದಿದ್ದ ಪುಸ್ತಕವು ಬೈಬಲ್ಲಿನ ಅಭಿಪ್ರಾಯಗಳಿಗೆ ವಿರೊಧ ತಂದಿತ್ತು. ಆದ್ದರಿಂದ ಈ ವಾದ-ಪ್ರತಿವಾದಗಳನ್ನು ಮುಕ್ತವಾಗಿ ಆಲಿಸಲು ‘ವಿಜ್ಞಾನ ಪ್ರಗತಿಗಾಗಿ ಬ್ರಿಟಿಷ್ ಸಂಘ’ವು ಒಂದು ಸಭೆ ಏರ್ಪಡಿಸಿತ್ತು. ಪ್ರೊಫೆಸರ್ ಹೆನ್ಯ್ಲೂ ಎಂಬುವರು ಅಧ್ಯಕ್ಷತೆ ವಹಿಸಿದ್ದರು. ಧರ್ಮಗುರು ಬಿಷಪ್‌ರವರಾದ ವಿಲ್ಬರ್ ಫೋರ್ಸ್‌ರವರು ಬೈಬಲ್ ಪರ ವಾದಿಸಲು ಬಂದಿದ್ದರು. ವಿಕಾಸವಾದದ ಪರ ವಾದ ಮಂಡಿಸಲು ಥಾಮಸ್ ಹೆನ್ರಿ ಹಕ್ಸ್‌ಲಿ ಎಂಬುವರು ಹಾಜರಿದ್ದರು. ‘ಪ್ರಭೇದಗಳ ಉಗಮ’ ಎಂಬ ಪುಸ್ತಕದ ಮೂಲಕ ಕ್ರಾಂತಿಯನ್ನೇ ಉಂಟು ಮಾಡಿದ್ದ ವಿಜ್ಞಾನಿ ಚಾರ್ಲ್ಸ್ ಡಾರ್ವಿನ್ ಕೂಡ ಆ ಸಭೆಯಲ್ಲಿ ಹಾಜರಿದ್ದ. ಆತ ಸ್ವಲ್ಪ ಅಂಜಿಕೆಯ ಸ್ವಭಾವದವನು, ಮಿತಭಾಷಿ. ಹಾಗಾಗಿ ತಾನು ಮಾತನಾಡುವುದಿಲ್ಲ. ಆದರೆ ವಿಕಾಸ ವಾದದ ಪರವಾಗಿ ಹಕ್ಸ್‌ಲಿ ಮಾತನಾಡಲು ಸೂಕ್ತ ವ್ಯಕ್ತಿ ಎಂದು ಸೂಚಿಸಿದ್ದನು.

ಸಭೆ ಆರಂಭವಾಯಿತು. ಸಭಿಕರೆಲ್ಲರು ವಾದ-ಪ್ರತಿವಾದಗಳನ್ನು ಆಲಿಸಲು ಮೈಯನ್ನೆಲ್ಲ ಕಿವಿಯಾಗಿಸಿಕೊಂಡರು. ಮೊದಲಿಗೆ ಬಿಷಪ್ ಬಿಲ್ಬರ್ ಫೋರ್ಸ್‌ರವರಿಗೆ ಅವಕಾಶ ನೀಡಲಾಯಿತು. ಪ್ರಖ್ಯಾತ ವಾಗ್ಮಿ ಹಾಗೂ ಜನಪ್ರಿಯ ಭಾಷಣಕಾರರಾದ ಬಿಷಪ್‌ರವರು ವಿಜ್ಞಾನಿ ಡಾರ್ವಿನ್ ಪ್ರತಿಪಾದಿಸಿದ್ದ ವಿಕಾಸ ವಾದವನ್ನು ಪೂರ್ಣವಾಗಿ ಅಲ್ಲಗಳೆದರು. ಬೈಬಲ್‌ನಲ್ಲಿರುವಂತೆ ಜೀವಿಗಳ ಹಾಗೂ ಮಾನವನ ಸೃಷ್ಟಿಯಾಗಿದೆ. ಮಾನವ ದೇವರ ಪ್ರತಿಬಿಂಬವಾಗಿರುವ ಕಾರಣ ಆತ ಅತಿ ಬುದ್ಧಿವಂತ. ಇತರೆ ಪ್ರಾಣಿಗಳಿಗಿಂತ ಭಿನ್ನ ಹಾಗೂ ಅವುಗಳನ್ನು ಅವನು ತನಗೆ ಬೇಕಾದಂತೆ ದುಡಿಸಿಕೊಳ್ಳುತ್ತಾನೆ ಎಂದು ಪ್ರತಿಪಾದಿಸಿದರು. ಮಾನವ ಎಲ್ಲಾದರೂ ಹಂದಿಯಿಂದ, ಮಂಗನಿಂದ ವಿಕಾಸವಾಗಲು ಸಾಧ್ಯವೇ? ಇದೆಂಥ ವಿಚಿತ್ರ ಕಲ್ಪನೆ ಎಂದು ಹೀಯಾಳಿಸಿದರು. ವಿಜ್ಞಾನಿ ಹಕ್ಸ್‌ಲಿಯ ಕಡೆ ನೋಟ ಬೀರಿ ‘ಮಂಗನಿಂದ ಮಾನವ ಬಂದದ್ದು ಸರಿಯೇ ಆದರೆ, ಅದು ನಿನ್ನ ತಾತನ ಕಡೆಯಿಂದಲೊ ಅಥವಾ ಅಜ್ಜಿಯ ಕಡೆಯಿಂದಲೋ?’ ಎಂದು ಮಾರ್ಮಿಕವಾಗಿ ಬಿಷಪ್‌ನಕ್ಕರು. ಸಭೆಯಲ್ಲಿದ್ದ ಬಿಷಪ್‌ನ ಭಕ್ತರು ಭರ್ಜರಿಯಾಗಿ ಚಪ್ಪಾಳೆ ತಟ್ಟಿ ಸಂತೋಷ ವ್ಯಕ್ತಪಡಿಸಿದರು. ಹೌದು, ಹೌದು ಧರ್ಮಗ್ರಂಥದಲ್ಲಿರುವದೇ ಸತ್ಯ ಎಂದು ಅನೇಕರು ಮಾತಾಡಿಕೊಂಡರು.

ವಿಜ್ಞಾನಿ ಹಕ್ಸ್‌ಲಿಯವರ ಸರದಿ ಬಂತು. ಹಕ್ಸ್‌ಲಿಯವರು ಉತ್ತಮ ವಾಗ್ಮಿಯೂ ಅಲ್ಲ; ಭಾಷಣಕಾರರೂ ಅಲ್ಲ. ಆದರೆ ಪ್ರಕೃತಿಯ ಸತ್ಯವನ್ನು ತೆರೆದಿಡುವುದಕ್ಕೆ ವಿದ್ವತ್ ಭಾಷೆಯ ಅಗತ್ಯವೇನೂ ಬೇಕಿಲ್ಲ. ಶಾಂತಚಿತ್ತದಿಂದ ಮಾತನ್ನು ಆರಮಭಿಸಿದರು. ಹಕ್ಸ್‌ಲಿ ವಿಕಾಸ ವಾದದ ತಿರುಳನ್ನು ಸರಳಭಾಷೆಯಲ್ಲಿ ವಿವರಿಸಿದರು. ಅರ್ಥವಾಗುವಂತೆ ಉದಾಹರಣೆಗಳನ್ನು ನೀಡಿದರು. ಯಾವುದೇ ಜೀವಿಯಾಗಲೀ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಮರಿ ಹಾಕುತ್ತವೆ ಅಥವಾ ಮೊಟ್ಟೆ ಇಡುತ್ತವೆ. ಸಾಲ್ಮನ್ ಮೀನು ಒಂದು ವರ್ಷಕ್ಕೆ ೨೫೦ಲಕ್ಷ ಮೊಟ್ಟೆಗಳನ್ನಿಡುತ್ತದೆ. ಆ ಮೊಟ್ಟೆಗಳೆಲ್ಲವೂ ಮರಿಗಳಾಗಿ, ದೊಡ್ಡ ಮೀನುಗಳಾಗಿ, ಅವೂ ಸಂತಾನ ಮುಂದುವರೆಸಿದರೆ, ಕೆಲವೇ ವರ್ಷಗಳಲ್ಲಿ ವಿಶ್ವದ ಎಲ್ಲ ನದಿಗಳಲ್ಲಿ ಬರೀ ಸಾಲ್ಮನ್ ಮೀನುಗಳೇ ಇರುತ್ತವೆ. ಅನಂತರ ನದಿಗಳೂ ಸಾಲುವುದಿಲ್ಲ ಎಂದು ಹೇಳಿದರು. ಸಮುದ್ರದಲ್ಲಿ ಜೀವಿಸುವ ಒಂದು ಚಿಪ್ಪು ಜೀವಿ ಒಂದು ವರ್ಷಕ್ಕೆ ೫೦೦ ಲಕ್ಷ ಮೊಟ್ಟೆಗಳನ್ನು ಇಡುತ್ತವೆ. ಅವು ದೊಡ್ಡವಾಗಿ, ಅವುಗಳ ಸಂತಾನ ಮುಂದುವರೆದರೆ, ಹಲವು ವರ್ಷಗಳಲ್ಲಿ ವಿಶ್ವದ ಸಪ್ತಸಾಗರಗಳು ಚಿಪ್ಪು ಜೀವಿಗಳಿಂದ ತುಂಬಿ ತುಳುಕಾಡುತ್ತವೆ. ಅಷ್ಟೇಕೆ ವಿಶ್ವದಲ್ಲಿ ತುಂಬಾ ನಿಧಾನವಾಗಿ ಮರಿ ಹಾಕುವ ಪ್ರಾಣಿ ಎಂದರೆ ಆನೆ. ಒಂದು ಜೊತೆ ಆನೆಗಳಿದ್ದರೆ, ಅವುಗಳ ಜೀವ ಮಾನದಲ್ಲಿ ಕೇವಲ ಆರು ಮರಿಗಳನ್ನು ಹಾಕಬಲ್ಲವು. ಒಂದು ಹೆಣ್ಣಾನೆ ಮರಿ ಹಾಕಲು ಪ್ರಾರಂಭಿಸುವುದು ಸುಮಾರು ೩೦ ವರ್ಷಗಳ ನಂತರ ಸುಮಾರು ೨೦ ತಿಂಗಳು ಗರ್ಭಧಾರಣೆ ಇರುತ್ತದೆ. ಪ್ರಸವವಾದ ಮೇಲೆ ಎರಡು ವರ್ಷ ಮರಿ ಆನೆಗೆ ಹಾಲುಣಿಸುತ್ತದೆ. ಆ ಸಮಯದಲ್ಲಿ ಹೆಣ್ಣಾನೆ ಗರ್ಭ ಧರಿಸುವುದಿಲ್ಲ. ಅನಂತರ ಗರ್ಭಾಂಕುರವಾದರೆ ಮತ್ತೆ ಮರಿಹಾಕುವುದಕ್ಕೆ ೨೦ ತಿಂಗಳು ಬೇಕು. ಇಷ್ಟು ನಿಧಾನವಾಗಿ ಸಂತಾನ ಉಂಟಾದರೂ ಒಂದು ಜೊತೆ ಆನೆಗಳಿಂದ ೭೫೦ ವರ್ಷಗಳಲ್ಲಿ ೧೯೦ ಲಕ್ಷ ಆನೆಗಳುಂಟಾಗುತ್ತವೆ! ಇದು ಜೀವಿಗಳ ಅತಿಸಂತಾನಕ್ಕೆ ಉತ್ತಮ ಉದಾಹರಣ.

ನಿಸರ್ಗದ ಮತ್ತೊಂದು ಕುತೂಹಲಕಾರಿ ಅಂಶವೆಂದರೆ ಯಾವುದೇ ಎರಡು ಜೀವಿಗಳು ಒಂದೇ ರೀತಿಯಲ್ಲಿರುವುದಿಲ್ಲ. ಅವುಗಳಲ್ಲಿ ವ್ಯತ್ಯಾಸಗಳಿರುತ್ತವೆ. ಉದಾಹರಣೆಗೆ ಒಂದೇ ತಂದೆ ತಾಯಿಯರ ಮಕ್ಕಳಲ್ಲಿ ವ್ಯತ್ಯಾಸಗಳಿರುತ್ತವೆ. ಒಬ್ಬ ಎತ್ತರವಿರಬಹುದು. ದಪ್ಪವಿರಬಹುದು. ಮತ್ತೊಬ್ಬ ಕುಳ್ಳನಿರಬಹುದು. ಇಂತಹ ವ್ಯತ್ಯಾಸಗಳಲ್ಲಿ ಕೆಲವು ಉಪಯೋಗಕ್ಕೆ ಬರಹುದು, ಕೆಲವು ತೊಂದರೆ ಉಂಟು ಮಾಡಬಹುದಲ್ಲವೇ ಎಂದು ಪ್ರಶ್ನಿಸಿದರು. ಸಭಿಕರು ಹೌದು ಹೌದು ಎಂದು ಉತ್ತರಿಸಿದರು.

ಜೀವಿಗಳ ಸಂತಾನಶಕ್ತಿ ಎಷ್ಟೇ ಹೆಚ್ಚಿರಲಿ, ಎಷ್ಟೇ ಮರಿ ಹಾಕಲಿ ಈ ಭೂಮಿಯಲ್ಲಿನ ವಾಸಿಸುವ ಸ್ಥಳ ಹೆಚ್ಚುವುದಿಲ್ಲ. ಆಹಾರ ಉತ್ಪಾದನೆಯೂ ಅಧಿಕವಾಗುವುದಿಲ್ಲ. ಹಾಗಾಗಿ ಜೀವಿಗಳಲ್ಲಿ ಬದುಕುವುದಕ್ಕೆ ಸ್ಥಳಕ್ಕಾಗಿ, ಆಹಾರಕ್ಕಾಗಿ ಹೋರಾಟ ನಡೆಯುವುದು. ಈ ಹೋರಾಟದಲ್ಲಿ ಬದುಕುವುದಕ್ಕೆ ಉಪಯುಕ್ತವಾದ ವ್ಯತ್ಯಾಸವಿರುವ ಜೀವಿಗಳು ಬದುಕುಳಿಯುತ್ತವೆ. ಅನುಪಯುಕ್ತ ವ್ಯತ್ಯಾಸಗಳಿರುವ ಜೀವಿಗಳು ಮರಣ ಹೊಂದುತ್ತವೆ. ಇದು ನಿಸರ್ಗದಲ್ಲಿ ನಿರಂತರವಾಗಿ ನಡೆಯುವ ಕ್ರಿಯೆ. ಇದನ್ನು ನೈಸರ್ಗಿಕ ಆಯ್ಕೆ ಎನ್ನಬಹುದು ಅಲ್ಲವೆ? ಎಂದು ಹಕ್ಸ್‌ಲಿ ಕೇಳಿದರು. ಸಭಿಕರು ಹೌದು ಎಂದು ತಲೆದೂಗಿದರು. ಹೀಗೆ ಪ್ರಕೃತಿಯು ಹೊಸ ಗುಣಲಕ್ಷಣಗಳಿರುವ ಹಾಗೂ ಉಪಯುಕ್ತವಾದುದನ್ನು ಆಯ್ಕೆ ಮಾಡುತ್ತಾ ಹೋಗುವುದರಿಂದ ಸಹಸ್ರಾರು ವರ್ಷಗಳಲ್ಲಿ ಒಂದು ಹೊಸ ಪ್ರಭೇದ ಉಂಟಾಗುವುದು ಎಂದು ವಿವರಿಸಿದರು. ಮನುಷ್ಯ ಕೆಲವೇ ನೂರು ವರ್ಷಗಳಲ್ಲಿ ಹಲವು ವಿಧದ ನಾಯಿಯ ತಳಿಗಳನ್ನುಅಭಿವೃದ್ಧಿಪಡಿಸಿದ್ದಾನೆ. ಹೆಚ್ಚು ಇಳುವರಿ ನೀಡುವ ಧಾನ್ಯದ ತಳಿಗಳನ್ನು ಬೆಳೆಸಿದ್ದಾನೆ. ಪ್ರಕೃತಿಯು ಕೋಟ್ಯಾನುಕೋಟಿ ವರ್ಷಗಳಲ್ಲಿ ಸಹಸ್ರಾರು ಪ್ರಭೇದಗಳನ್ನು ಹುಟ್ಟು ಹಾಕಿರುವುದರಲ್ಲಿ ಆಶ್ಚರ್ಯವೇನು? ಎಂದು ಪ್ರಶ್ನಿಸಿದರು.

ಒಂದು ರೀತಿಯ ಜೀವಿಯಿಂದ ಮತ್ತೊಂದು ರೀತಿಯ ಜೀವಿ ಬಂದಿದೆ ಎಂಬುದು ಕಟ್ಟು ಕಥೆಯಲ್ಲ. ಅದಕ್ಕೆ ಹಲವಾರು ನಿದರ್ಶನಗಳಿವೆ. ಸಾಕ್ಷ್ಯಾಧಾರಗಳಿವೆ. ಇಲ್ಲಿ ನೋಡಿ, ಕಪ್ಪೆ, ಕುದುರೆ, ಹಂದಿ, ಹಲ್ಲಿ, ಮಾನವನ ಮುಂಗಾಲಿನ ಮೂಳೆಗಳು. ಅವುಗಳ ಜೋಡಣೆ, ವಿನ್ಯಾಸ ಒಂದೇ ರೀತಿ ಇದೆ. ಹೃದಯದ ರಚನೆ ಇಲಿ, ಹಂದಿ, ಕುದುರೆ, ಮಾನವ ಮುಂತಾದ ಎಲ್ಲ ಸಸ್ತನಿಗಳಲ್ಲಿ ಒಂದೇ ರೀತಿಯಿದೆ. ಎಲ್ಲ ಸಸ್ತನಿಗಳ ಭ್ರೂಣದ ರಚನೆ, ಬೆಳವಣಿಗೆ ಒಂದೇ ರೀತಿ ಇದೆ. ಇದೋ ನೋಡಿ ಇಲ್ಲಿವೆ ಕೆಲವು ಭ್ರೂಣಗಳು. ಇದರಲ್ಲಿ ಮನುಷ್ಯನದು ಯಾವುದು? ಹಂದಿಯದು ಯಾವುದು? ಎಂದು ಸವಾಲು ಎಸೆದರು. ಭ್ರೂಣಗಳೆಡೆ ಸಾಗಿದ ಜನ ಹಂದಿಯ ಭ್ರೂಣ ವನ್ನು ಮೀನು ಎಂದರು. ಮೀನಿನ ಭ್ರೂಣವನ್ನು ಕಪ್ಪೆ ಇರಬಹುದು ಎಂದರು. ಮನುಷ್ಯನ ಭ್ರೂಣವನ್ನು ಮೀನು ಅಥವಾ ಮಂಗನಿರಬೇಕೆಂದು ವಾದಿಸಿದರು. ಆಗ ಹಕ್ಸ್‌ಲಿಯವರು ಭ್ರೂಣಗಳಲ್ಲಿರುವ ಸಮಾನ ಲಕ್ಷಣಗಳನ್ನು ವಿವರಿಸಿದರು.

ಈಗ ಹೇಳಿ ಭ್ರೂಣಗಳಲ್ಲಿ ಹಾಗೂ ದೇಹ ರಚನೆಯಲ್ಲಿ ಸಮಾನ ಲಕ್ಷಣಗಳಿರಬೇಕಾದರೆ, ಆ ಜೀವಿಗಳೆಲ್ಲ ಸಂಬಂಧಿಗಳು ತಾನೇ ಎಂದರು. ಜನರು ಹೌದು ಹೌದು ಎಂದರು. ಈ ಜೀವಿಗಳಲ್ಲಿ ಕೆಳ ಹಂತದ ಜೀವಿಯೊಂದು ಮತ್ತೊಂದಕ್ಕೆ ಕಾರಣವಾಗಿರಬಹುದಲ್ಲವೇ ಎಂದಾಗ ಹೌದು ಎಂದು ಜನ ಧ್ವನಿಗೂಡಿಸಿದರು.

ವಿಜ್ಞಾನವನ್ನು ತಿಳಿದುಕೊಂಡ ನೀವು ಈಗ ವಿಕಾಸ ವಾದವನ್ನು ಒಪ್ಪುತ್ತಿದ್ದೀರ. ಆದರೆ ಸನ್ಮಾನ್ಯ ಬಿಷಪ್‌ರವರಿಗೆ ವಿಜ್ಞಾನದ ಬಗ್ಗೆ ಹೆಚ್ಚು ತಿಳುವಳಿಕೆ ಇದ್ದಂತಿಲ್ಲ ಎಂದು ಲೇವಡಿ ಮಾಡಿದರು. ಅಂತಿಮವಾಗಿ ಹಕ್ಸ್‌ಲಿ ಹೀಗೆ ಹೇಳಿದರು;

“ಒಂದು ವೇಳೆ ನನ್ನ ಬಗ್ಗೆ ಬಿಷಪ್‌ರವರ ಹೇಳಿಕೆ ಸತ್ಯವೆಂದು ಕೊಳ್ಳೋಣ. ನಾನು ಮಂಗನಿಂದಲೇ ಬಂದಿರಬಹುದು ಅಥವಾ ಕಪಿಯಿಂದಲೇ ಬಂದಿರಬಹುದು. ಅದು ದೊಡ್ಡ ವಿಷಯವಲ್ಲ. ಆದರೆ ಸತ್ಯವನ್ನು ಮರೆ ಮಾಚಲು ಮಾತಿನ ಮೋಡಿ ಹಾಕುವ ವ್ಯಕ್ತಿಯಿಂದ ಬಂದಿಲ್ಲವೆಂಬುದು ಮುಖ್ಯ.” ಎಂದು ಹೇಳಿ ಬಿಷಪ್‌ರವರ ಮುಖ ನೋಡಿ ಕುಳಿತರು. ಹಕ್ಸ್‌ಲಿಯವರ ಭಾಷಣದ ಪ್ರಭಾವದಿಂದ ಸಭೆಯಲ್ಲಿದ್ದ ವಿಜ್ಞಾನದ ವಿದ್ಯಾರ್ಥಿಗಳು ಹರ್ಷದಿಂದ ಕುಣಿದಾಡಿದರು. ಚಪ್ಪಾಳೆಗಳ ಸುರಿಮಳೆಯೇ ಉಂಟಾಯಿತು. ಬಿಷಪ್‌ರವರಿಗಾದ ಅವಮಾನವನ್ನು ಸಹಿಸದ ಪಾದ್ರಿಗಳು ಬೈಬಲ್ ಗ್ರಂಥವನ್ನು ಕೈನಿಂದ ಮೇಲಕ್ಕೆ ಎತ್ತುತ್ತ, “ಇದರಲ್ಲಿರುವುದೇ ಸತ್ಯ, ಮಿಕ್ಕದ್ದೆಲ್ಲ ಮಿಥ್ಯ” ಎಂದು ಘೋಷಣೆ ಹಾಕಿದರು. ಗೊಂದಲ, ಗಲಾಟೆ ಹೆಚ್ಚಾಯಿತು. ಬಿಷಪ್‌ರವರಿಗಾದ ಅವಮಾನವನ್ನು ತಾಳಲಾರದ ಒಬ್ಬಾಕೆ ಮೂರ್ಛೆ ಹೋದಳು! ಹೀಗಿತ್ತು ಪ್ರಭಾವ.

ಆಶ್ಚರ್ಯದ ಸಂಗತಿ ಎಂದರೆ ಚಾರ್ಲ್ಸ್ ಡಾರ್ವಿನ್ ಬರೆದು ೧೯೫೯ರಲ್ಲಿ ಪ್ರಕಟಿಸಿದ ‘ಪ್ರಭೇದಗಳ ಉಗಮ’ ಎಂಬ ಪುಸ್ತಕ ವಿಜ್ಞಾನ ಕ್ಷೇತ್ರದಲ್ಲಿ ಅತಿ ಹೆಚ್ಚು ಓದುಗರನ್ನು ಹೊಂದಿರುವ ಪುಸ್ತಕವಾಗಿದೆ. ಸಾಮಾನ್ಯವಾಗಿ ವಿಜ್ಞಾನಿ ಐಸಾಕ್ ನ್ಯೂಟನ್‌ರ ಪುಸ್ತಕ ‘ಪ್ರಿನ್ಸಿಪಿಯ’ದ ಹೆಸರು ಅನೇಕರಿಗೆ ತಿಳಿದಿದೆ. ಅದೇ ರೀತಿ ವಿಶ್ವವಿಖ್ಯಾತ ವಿಜ್ಞಾನಿ ಆಲ್ಬರ್ಟ್ ಐನ್‌ಸ್ಟೈನ್‌ರ ‘ಸಾಕ್ಷೇಪ ಸಿದ್ಧಾಂತ’ ಪುಸ್ತಕವು ಗಣಿತದ ವಿದ್ಯಾರ್ಥಿಗಳಿಗೆ ಅಚ್ಚುಮೆಚ್ಚು ಆದರೆ ಈ ಎರಡೂ ಪುಸ್ತಕಗಳು ಶ್ರೀ ಸಾಮಾನ್ಯನ ದೃಷ್ಟಿಯಲ್ಲಿ ಕಬ್ಬಿಣದ ಕಡಲೆಗಳೇ ಹೌದು. ಚಾರ್ಲ್ಸ್ ಡಾರ್ವಿನ್‌ನ ಪುಸ್ತಕ ‘ಪ್ರಭೇದಗಳ ಉಗಮ’ ೧೮೫೯ರಿಂದಲೂ ಜನಪ್ರಿಯ ಪುಸ್ತಕ. ಇಂದಿಗೂ ಬೇಡಿಕೆಯಿರುವ ಪುಸ್ತಕ. ಇಂದಿಗೂ ಬೇಡಿಕೆಯಿರುವ ಪುಸ್ತಕ. ಮರುಮುದ್ರಣ ಹೊಂದುತ್ತಲೇ ಇದೆ. ಪಂಡಿತನಾಗಲೀ ಪಾಮರನಾಗಲೀ ಈ ಪುಸ್ತಕವನ್ನು ಓದಲು ಆರಂಭಿಸಿದರೆ ಮಧ್ಯದಲ್ಲಿ ಓದನ್ನು ನಿಲ್ಲಿಸಲಾರ. ಹಾಗೆ ನಿರಂತರವಾಗಿ ಓದಿಸಿಕೊಳ್ಳುವ ಮಾಂತ್ರಿಕ ಶಕ್ತಿ ಈ ಪುಸ್ತಕಕ್ಕೆ ಇದೆ. ಡಾರ್ವಿನ್ ಬದುಕಿದ್ದಾಗಲೇ ಈ ಪುಸ್ತಕ ೬ ಪರಿಷ್ಕೃತ ಆವೃತ್ತಿ ಹಾಗೂ ೩೫ ಬಾರಿ ಮರುಮುದ್ರಣ ಹೊಂದಿತ್ತು. ಅಲ್ಲದೆ ೧೧ ಭಾಷೆಗಳಿಗೆ ಅನುವಾದವಾಗಿತ್ತು. ಈಗಲೂ ಈ ಪುಸ್ತಕ ಮರುಮುದ್ರಣಗೊಳ್ಳುತ್ತದೆ. ೪೦೦ ಬಾರಿಗೂ ಹೆಚ್ಚು ಮರುಮುದ್ರಣ ಹೊಂದಿದೆ. ಕನಿಷ್ಠ ೨೯ ಭಾಷೆಗಳಿಗೆ ಅನುವಾದಗೊಂಡಿದೆ. ಕನ್ನಡದಲ್ಲಿಯೂ ಈ ಪುಸ್ತಕ ಲಭ್ಯವಿದೆ.

 ಡಾರ್ವಿನ್‌ನ ಈ ಪುಸ್ತಕವು ಸಮಾಜದ ಚಿಂತನಾ ಮಾರ್ಗವನ್ನೇ ಬದಲಿಸಿರುವ ಕ್ರಾಂತಿಕಾರಕ ಪುಸ್ತಕ. ಈ ಪುಸ್ತಕ ಪ್ರಕಟಣೆಯಾಗಿ ೧೫೦ ವರ್ಷಗಳು ಸಂದಿವೆ. ಅಲ್ಲದೆ ಈ ಪುಸ್ತಕದ ಕರ್ತೃ, ಚಾರ್ಲ್ಸ್ ಡಾರ್ವಿನ್ ೨೦೦ನೇ ಜನ್ಮ ದಿನಾಚರಣೆ ಹಾಗೂ ‘ಪ್ರಭೇದಗಳ ಉಗಮ’ ಪುಸ್ತಕದ ೧೫೦ ನೇ ವರ್ಷಾಚರಣೆ ಆಚರಿಸಲಾಗುತ್ತಿದೆ. ವಿಶ್ವದಾದ್ಯಂತ ವಿಕಾಸ ವಾದದ ಬಗ್ಗೆ ಮರುವಿಮರ್ಶೆ ನಡೆಯುತ್ತಿದೆ. ಇಂದು ‘ವಿಕಾಸವಾದ’ ಸಿದ್ಧಾಂತವನ್ನು ಎಲ್ಲ ಪ್ರೌಢಶಾಲಾ ವಿದ್ಯಾರ್ಥಿಗಳು ಜೀವಶಾಸ್ತ್ರ ಪಠ್ಯದಲ್ಲಿ ಅಧ್ಯಯನ ಮಾಡುತ್ತಾರೆ. ವಿಕಾಸವಾದ ಬೃಹತ್ ವಿಜ್ಞಾನ ಶಾಖೆಯಾಗಿ ಬೆಳೆದಿದೆ. ಸಹಸ್ರಾರು ವಿಜ್ಞಾನಿಗಳು ಸಂಶೋಧನೆ ಮಾಡುತ್ತಿದ್ದಾರೆ. ಡಾರ್ವಿನ್ ಮಂಡಿಸಿದ ವಿಕಾಸ ವಾದ ಸಾಕಷ್ಟು ಬದಲಾವಣೆಗೆ ಒಳಗಾಗಿದೆ. ಡಾರ್ವಿನ್ ಬದುಕಿದ್ದ ಸಮಯದಲ್ಲಿ ಅನುವಂಶೀಯ ವಸ್ತು ಯಾವುದು ಎಂಬುದೇ ತಿಳಿದಿರಲಿಲ್ಲ. ಅನುವಂಶೀಯ ಘಟಕವಾದ ಜೀನ್ ಬಗ್ಗೆ ಮಾಹಿತಿ ಇರಲಿಲ್ಲ. ಡಿ.ಎನ್.ಎ. ಎಂಬ ವಸ್ತು ಇದೆ ಎಂಬುದೇ ಗೊತ್ತಿರಲಿಲ್ಲ. ಅಂತಹ ಸಮಯದಲ್ಲಿ ತನ್ನ ಅನುಭವ, ಸೂಕ್ಷ್ಮ ಅವಲೋಕನ, ವಿಶ್ಲೇಷಣೆಯಿಂದಲೇ ಡಾರ್ವಿನ್ ವಿಕಾಸ ವಾದವನ್ನು ಮಂಡಿಸಿದ್ದು ಒಂದು ರೋಚಕ ಕಥಾನಕ. ೨೧ನೇ ಶತಮಾನದಲ್ಲಿಯೂ ಮಾನವ ಇನ್ನೂ ದೈವಸೃಷ್ಟಿಯಲ್ಲಿ ಅಂಧವಿಶ್ವಾಸ ಹೊಂದಿರುವುದು, ಜನಾಂಗಗಳ ಶ್ರೇಷ್ಠತೆಗೆ ಹೊಡೆದಾಡುವುದು, ಜಾತಿ-ಮತಗಳಿಗಾಗಿ ಬಡಿದಾಡಲು ಸಿದ್ಧವಾಗಿರುವುದು ಒಂದು ವಿಪರ್ಯಾಸ. ಡಾರ್ವಿನ್‌ನ ಚಿಂತನೆಯನ್ನು ವಿಜ್ಞಾನದ ಮೂಸೆಯಲ್ಲಿ ಪರೀಕ್ಷಿಸಿ, ಮಾರ್ಪಾಡುಗಳನ್ನು ಮಾಡಿ ಪ್ರಗತಿಯ ಹಾದಿಯಲ್ಲಿ ಸಾಗಿ ಮಾನವನ ಅನುವಂಶೀಯ ನಕ್ಷೆಯನ್ನು ತಯಾರಿಸಿ ವಿಶ್ವಮಾನವತೆಗೆ ಸಾಕ್ಷಾಧಾರ ನೀಡಿರುವ ವಿಜ್ಞಾನಿಗಳಿಂದ ನಾವು ಯಾವಾಗ ಪಾಠ ಕಲಿಯುತ್ತೇವೆ?

****