ಜೀವ ವಿಜ್ಞಾನಿ ಮತ್ತು ವಿಕಾಸ ತಜ್ಞ ಚಾರ್ಲ್ಸ್ ರಾಬರ್ಟ್ ಡಾರ್ವಿನ್ ಹುಟ್ಟಿ ಇನ್ನೂರು ವರ್ಷಗಳು ಪೂರ್ಣವಾಗಿವೆ. ಆತನ ಜನ್ಮ ದ್ವಿ ಶತಮಾನೋತ್ಸವವನ್ನು ಫೆಬ್ರವರಿ ೧೯, ೨೦೦೯ ರಂದು ಪ್ರಪಂಚದ ಬಹುತೇಕ ಭಾಗದಲ್ಲಿ ಆಚರಿಸಲಾಯಿತು. ತನ್ನ ಅಪಾರ ಪರಿಶ್ರಮ ಮತ್ತು ಅಪರೂಪದ ಒಳನೋಟಗಳಿರುವ ವಿಕಾಸ ಸಿದ್ಧಾಂತವನ್ನು ಪ್ರಸ್ತುತ ಪಡಿಸಿ ಮನುಕುಲದ ಚಿಂತನಾ ದಿಕ್ಕನ್ನು ಬದಲಿಸಿದ ಮಹಾನ್ ಚಿಂತಕ-ವಿಜ್ಞಾನಿಗೆ ಜಗತ್ತು ಮತ್ತೊಮ್ಮೆ ನಮಿಸಿತು. ಇದೇ ಸಂದರ್ಭದಲ್ಲಿ ಸಹಸ್ರಮಾನದ ಘಟನೆಯೆಂದು ಬಣ್ಣನೆಗೊಂಡ ಯುಗ ಕೃತಿ ‘ಜೀವಿಸಂಕುಲಗಳ ಉಗಮ’ (The Origin of species) ದ ಪ್ರಕಟಣೆಯ ನೂರೈವತ್ತನೇ ವರ್ಷದ ಆಚರಣೆಯೂ ನಡೆಯಲಿದೆ.

ಡಾರ್ವಿನ್ ಅವರು ಜಗತ್ತು ಕಂಡ ಅಪ್ರತಿಮ ಚಿಂತಕ ಮತ್ತು ವಿಜ್ಞಾನಿ ಎಂಬುದರಲ್ಲಿ ಎರಡು ಮಾತಿಲ್ಲ. ಹತ್ತೊಂಬತ್ತನೆಯ ಶತಮಾನದಲ್ಲಿ ಬದುಕಿದ್ದ ಡಾರ್ವಿನ್‌ರವರ ಬದುಕು, ಸ್ಪರ್ಧೆಯ ವ್ಯಸನದಲ್ಲೇ ಮುಳುಗಿರುವ ಈ ಶತಮಾನದ ಯುವಜನತೆಗೆ ಅನೇಕ ಆದರ್ಶಗಳ ಪಾಠಗಳ ಸರಣಿಯನ್ನೇ ಪ್ರಸ್ತುಪಡಿಸುತ್ತದೆ. ವಿದ್ಯೆ, ಪಾಂಡಿತ್ಯ ಮತ್ತು ಉದ್ಯಮಶೀಲತೆಯಿಂದ ಇಂಗ್ಲೆಂಡ್‌ನ ಅರಸೊತ್ತಿಗೆಯ ಪರಿಚಯವಿದ್ದ ಶ್ರೀಮಂತ ಕುಟುಂಬದಲ್ಲಿ ಜನಿಸಿದ ಡಾರ್ವಿನ್ ಎಲ್ಲರಿಂದ ದಡ್ಡನೆಂದು ಕರೆಸಿಕೊಳ್ಳುತ್ತಿದ್ದರು. ಮನೆಯ ಜನ, ಸ್ನೇಹಿತರು, ಸಹಪಾಠಿಗಳು, ಶಿಕ್ಷಕರು ಅವನು ಉದ್ಧಾರವಾಗುವ ಬಗ್ಗೆ ಅನುಮಾನ ವ್ಯಕ್ತಪಡಿಸುತ್ತಿದ್ದರು. ತರಗತಿಯಲ್ಲಿ ಕುಳಿತು ಕಲಿಯುವುದರಲ್ಲಿ ಆತನಿಗೆ ನಿರಾಸಕ್ತಿ. ಬಯಲೇ ಅವನಿಗೆ ಪಾಠಶಾಲೆ. ಡಾರ್ವಿನ್ ಕಾಡು ಮೇಡು ಅಲೆದರು. ಮನೆಯ ಸುತ್ತ ಇದ್ದ ವಿಸ್ತಾರವಾದ ಕುರುಚಲು ಕಾಡಿನಲ್ಲಿ ಇರುವೆಗಳ ಗೂಡನ್ನು ಹುಡುಕಿದರು. ಕೀಟಗಳನ್ನು ಸಂಗ್ರಹಿಸಿದರು. ನದಿ ಸಾಲಿನ ಸಸ್ಯ ವೈವಿಧ್ಯವನ್ನು ಅವಲೋಕಿಸಿದರು. ಎರೆಹುಳುಗಳ ಬದುಕನ್ನು ಅಭ್ಯಾಸ ಮಾಡಿದರು. ಬಗೆ ಬಗೆಯ ಕಲ್ಲುಗಳನ್ನು ಹೆಕ್ಕಿ ತಂದು ಕೊಠಡಿಯನ್ನು ತುಂಬಿಸಿದರು. ತಂದೆಯ ಆಕಾಂಕ್ಷೆಯಂತೆ ವೈದ್ಯ ವೃತ್ತಿ ಕಲಿಯಲು ಹೋಗಿ ಅರ್ಧಕ್ಕೆ ಬಿಟ್ಟು ಬಂದರು. ಪಾದ್ರಿಯಾಗಲು ಧಾರ್ಮಿಕ ಶಿಕ್ಷಣ ಪಡೆದರೂ ಜಗತ್ತನ್ನು ಅರಿಯುವ, ಜೀವ ಸೃಷ್ಟಿಯ ಮೂಲವನ್ನು ಹುಡುಕುವ ಉತ್ಸಾಹವನ್ನು ಉಳಿಸಿಕೊಂಡರು. ಪಾದ್ರಿಯಾಗಲು ಒಲ್ಲದೆ ಎಚ್.ಎಂ.ಎಸ್. ಬೀಗಲ್ ಹಡಗಿನಲ್ಲಿ ಕುಳಿತು ಐದು ವರ್ಷಗಳ ಕಾಲ ಪ್ರಪಂಚ ಪರ್ಯಟನೆ ಮಾಡಿದ (೧೮೩೧-೧೮೩೬) ಈ ಅವಧಿಯಲ್ಲಿ ಜಗತ್ತಿನ ಜೀವ ವೈವಿಧ್ಯ ಮಾದರಿಗಳ ರಾಶಿಯನ್ನೇ ಸಂಗ್ರಹಿಸಿದರು. ಬಳಿಕ ಇಪ್ಪತ್ತು ವರ್ಷಗಳ ಕಾಲ ಆ ಮಾದರಿಗಳನ್ನೇ ಕುತೂಹಲದಿಂದ ಅಭ್ಯಾಸ ಮಾಡಿದರು. ಸಂದೇಹ ನಿವಾರಣೆಗಾಗಿ ಜಗತ್ತಿನಾದ್ಯಂತ ಇದ್ದ ತಜ್ಞರೊಡನೆ ಪತ್ರ ವ್ಯವಹಾರ ನಡೆಸಿದರು. ಸ್ನೇಹಿತರ ಒತ್ತಾಯದ ಮೇರೆಗೆ ೧೮೫೯ ರಲ್ಲಿ ಕೊನೆಗೂ ‘ಜೀವ ಸಂಕುಲಗಳ ಉಗಮ’ ಎಂಬ ಕೃತಿಯ ವಿಕಾಸ ಸಿದ್ಧಾಂತವನ್ನು ಪ್ರಸ್ತುತ ಪಡಿಸಿದರು.

ಚಾರ್ಲ್ಸ್ ಡಾರ್ವಿನ್ ರಚಿಸಿದ ‘ದಿ ಅರಿಜಿನ್ ಆಫ್ ಸ್ಪೀಷೀಸ್’ ಕೃತಿಯು ನವೆಂಬರ್ ೨೪, ೧೮೫೯ ರಂದು ಪ್ರಕಟವಾದ ದಿನವೇ ಮೊದಲ ಮುದ್ರಣದ ಎಲ್ಲ ೧೨೫೦ ಪ್ರತಿಗಳು ಮಾರಾಟವಾಗಿ ದಾಖಲೆಯಾಯಿತು. ಈ ಕೃತಿಯನ್ನು ಓದಿದ ಜಗತ್ತು ಬೆಚ್ಚಿ ಎದ್ದು ಕೂತಿತು. ಧರ್ಮೋಪದೇಶ ಮಾಡಲು ಶಿಕ್ಷಣ ಕಲಿತ ಡಾರ್ವಿನ್ ತಮ್ಮ ಕೃತಿಯ ಮೂಲಕ ಜೀವ ಸೃಷ್ಟಿಯ ಬಗ್ಗೆ ಅದುವರೆವಿಗೂ ಗಾಢವಾಗಿದ್ದ ನಂಬಿಕೆಗಳನ್ನು ಬುಡಮೇಲು ಮಾಡಿದ್ದರು. ಆ ಮೂಲಕ ಜಗತ್ತಿನ ಚಿಂತನಾಕ್ರಮ ಹೊರಳು ದಾರಿ ಹಿಡಿಯಿತು. ಡಾರ್ವಿನ್ ಸಿದ್ಧಾಂತದ ಪರ-ವಿರೋಧಿ ದನಿಗಳು ಸಾಕಷ್ಟು ವಿವಾದ ಎಬ್ಬಿಸಿದವು. ಆದರೆ ಇದಾವುದಕ್ಕೂ ತಲೆಕೆಡಿಸಿಕೊಳ್ಳದ ಡಾರ್ವಿನ್ ತಮ್ಮ ಸಂಶೋಧನೆಯಲ್ಲಿ ೧೮೮೨ ರಲ್ಲಿ ನಿಧನವಾಗುವವರೆಗೂ ಸಂತನ ಕಡುವ್ಯಾಮೋಹದಿಂದ ತೊಡಗಿಸಿ ಕೊಂಡಿದ್ದರು.

ಡಾರ್ವಿನ್ ಪ್ರಮುಖವಾಗಿ ಮೂರು ಕಾರಣಗಳಿಗಾಗಿ ಮುಖ್ಯ ಎನಿಸುತ್ತಾರೆ. ಅವರು ತಮ್ಮ ಸಂಶೋಧನೆಗೆಪೂರ್ಣದೃಷ್ಟಿ ಅಥವಾಸಮಗ್ರನೋಟ ವಿಧಾನವನ್ನು ಅಳವಡಿಸಿಕೊಂಡಿದ್ದು, ಮೊದಲನೆಯದು. ಇತ್ತೀಚಿನ ದಶಕಗಳಲ್ಲಿ ಜನಪ್ರಿಯವಾಗುತ್ತಿರುವ ಅಂತರಶಿಸ್ತು ಅಧ್ಯಯನಕ್ಕೆ ನೂರೈವತ್ತು ವರ್ಷಗಳ ಹಿಂದೆ ಡಾರ್ವಿನ್ ಬುನಾದಿ ಹಾಕಿದ್ದರು. ತಮ್ಮ ಸಿದ್ಧಾಂತ ಮಂಡನೆಗೆ ಅವರು ಜೀವ ವಿಜ್ಞಾನದ ವಿಚಾರಗಳ ಜೊತೆಗೆ ಭೂ ವಿಜ್ಞಾನ, ಭ್ರೂಣ ವಿಜ್ಞಾನ, ಹವಾಮಾನ ವಿಜ್ಞಾನ, ಪಳೆಯುಳಿಕೆ ವಿಜ್ಞಾನ, ಜೀವ ವರ್ಗೀಕರಣ, ಜೀವಿ ಭೌಗೋಳಿಕ ಹಂಚಿಕೆ ಮುಂತಾದ ಹಲವಾರು ಶಿಸ್ತುಗಳನ್ನು ಸಂಯೋಜಿಸಿ ಜೀವಿಗಳು ವಿಕಾಸವಾಗುವ ಬಗೆಯನ್ನು ಮಂಡಿಸಿದರು.

ಜೀವಿಗಳ ಉಗಮ ಮತ್ತು ಅವು ವಿಕಾಸವಾಗುವ ಕ್ರಿಯೆಯನ್ನು ಅಂಗೀಕರಿಸಲು ಅರ್ಹವೆನಿಸುವ ರೀತಿಯಲ್ಲಿ ಮಂಡಿಸಿದ್ದು, ಡಾರ್ವಿನ್ ಅವರ ಮತ್ತೊಂದು ಹೆಗ್ಗಳಿಕೆ. ವಿಷಯ ಮಂಡನೆಯಲ್ಲಿ ಅವರು ತೋರಿಸುವ ಸಂಯಮ, ನಿರ್ಲಿಪ್ತಭಾವ, ಸಮನ್ವಯತೆ, ವಸ್ತು ನಿಷ್ಠತೆ ಮತ್ತು ನಿಖರತೆ ಜೀವ ವಿಜ್ಞಾನ ಸಂಶೋಧನೆಗೆ ಮಾನದಂಡಗಳೆನಿಸಿದವು.

ಜೀವವಿಕಾಸ ಸಿದ್ಧಾಂತ ಮಾದರಿಯು ಕೇವಲ ಜೀವಿಗಳ ಉಗಮವನ್ನಷ್ಟೆ ಅರಿಯಲು ಬಳಸುವ ಸಾಧನವಾಗದೇ ಮುಂದೆ ಸಂಸ್ಕೃತಿಯ ವಿಕಾಸ ಚರಿತ್ರೆ, ಸಮಾಜ ವಿಕಾಸ ಚರಿತ್ರೆಗಳ ಅಧ್ಯಯನಕ್ಕೂ ಒಂದು ಮಾದರಿಯೆನಿಸಿದ್ದು, ಡಾರ್ವಿನ್ರವರ ಅಮೋಘ ಪ್ರತಿಭೆಗೆ ಸಾಕ್ಷಿ. ಡಾರ್ವಿನ್ ಸಮಕಾಲೀನರಾದ ಮಾರ್ಕ್ಸ್ ಮತ್ತು ಏಂಗೆಲ್ಸ್ ತಮ್ಮ ಕಮ್ಯುನಿಸ್ಟ್ ಸಮಾಜವಾದಿ ಸಿದ್ಧಾಂತ ಸಮರ್ಥನೆಗೆ ತಾವು ಡಾರ್ವಿನ್‌ರವರ ಸಿದ್ಧಾಂತಕ್ಕೆ ಉಪಕೃತರಾಗಿರುವುದಾಗಿ ಹೇಳಿದ್ದಾರೆ. ಮುಂದೆ ತತ್ವಜ್ಞಾನಿ ಸ್ಪೆನ್ಸರ್, ಸ್ವಿನೋಜಾ ಮೊದಲಾದವರು ತಮ್ಮ ತಾತ್ವಿಕ ಚಿಂತನೆಗಳ ಮಂಡನೆಗೆ ಡಾರ್ವಿನ್ ಪ್ರಣೀತ ವಿಕಾಸ ಸಿದ್ಧಾಂತವನ್ನೇ ಅವಲಂಬಿಸಿದರು.

೧೮೮೨ ರಲ್ಲಿ ಡಾರ್ವಿನ್ ನಿಧನರಾದರು. ಧಾರ್ಮಿಕ ಶಿಕ್ಷಣ ಪಡೆದು ಕ್ರೈಸ್ತ ಧರ್ಮೋಪದೇಶಿಯಾಗಬೇಕಿದ್ದ ಡಾರ್ವಿನ್ ನಿರಂತರ ಅಧ್ಯಯನ ಮತ್ತು ಸಂಶೋಧನೆಯ ಮೂಲಕ ಕಟ್ಟಾ ನಿರೀಶ್ವರವಾದಿಯಾದರು. ಆದರೆ ಅವರೆಂದೂ ಅದನ್ನು ಬಹಿರಂಗವಾಗಿ ಹೇಳಿಕೊಳ್ಳಲಿಲ್ಲ. ಆದರೆ ತಮ್ಮ ವಿಚಾರಧಾರೆಯೆಲ್ಲವೂ ಕ್ರೈಸ್ತ ಧರ್ಮದ ಮೂಲತತ್ವಗಳಿಗೆ ವಿರುದ್ಧವಾಗಿರುವುದನ್ನು ಗಮನಿಸಿದ ಅವರು ಅವುಗಳನ್ನು ಬಹಿರಂಗಪಡಿಸಲು ಹಿಂಜರಿದರು. ವಿಜ್ಞಾನದ ಚಿಂತನೆ ಮತ್ತು ಕ್ರೈಸ್ತ ಧರ್ಮದ ಆರಾಧಕರ ನಡುವೆ ಇತಿಹಾಸದುದ್ದಕ್ಕೂ ಸಂಘರ್ಷಗಳೇ ನಡೆದಿವೆ. ಸೂರ್ಯಕೇಂದ್ರಿತ ಬ್ರಹ್ಮಾಂಡದ ಸಿದ್ಧಾಂತ ಪರವಾದ ನಿಲುವು ತಾಳಿ ಸತ್ಯ ಹೇಳಿದ ಕಾರಣಕ್ಕಾಗಿ ಇಟಲಿಯ ತತ್ವಜ್ಞಾನಿ ಫಿಲಿಪಿನೊ ಬ್ರೂನೋನನ್ನು ಜೀವಂತ ದಹಿಸಿದರು. ಗೆಲಿಲಿಯೊ ತಾನು ಪ್ರಚುರಪಡಿಸಿದ ಸತ್ಯವೆಲ್ಲವೂ ಸುಳ್ಳು ಎಂದು ಹೇಳಿ ತಪ್ಪೊಪ್ಪಿಕೊಂಡು ಪ್ರಾಣವುಳಿಸಿಕೊಳ್ಳಬೇಕಾಯಿತು. ಇಂಗ್ಲೆಂಡ್‌ನಲ್ಲಿನ ಚರ್ಚ್‌ಗಳ ಪ್ರಾಬಲ್ಯವನ್ನು ಅರಿತಿದ್ದ ಡಾರ್ವಿನ್, ಪ್ರಭಾವಿ ಕುಟುಂಬದ ಹಿನ್ನೆಲೆಯಿಂದ ಬಂದರೂ ಸತ್ಯ ಪ್ರತಿಪಾದಿಸಲು ಹಿಂಜರಿಯಬೇಕಾಯಿತು. ಆದರೂ ಡಾರ್ವಿನ್ ಒಂದು ಚಾರಿತ್ರಿಕ ಒತ್ತಡದ ಸನ್ನಿವೇಶದಲ್ಲಿ ‘ಆರಿಜಿನ್‌ಆಫ್ ಸ್ಪೀಷೀಸ್’ ಪ್ರಕಟಿಸಬೇಕಾಯಿತು.

ಜೀವ ವಿಕಾಸದ ಬಗ್ಗೆ ಮಲಯ ದ್ವೀಪಸ್ತೋಮದಲ್ಲಿ ಚಿಟ್ಟೆಗಳು, ಕೀಟಗಳನ್ನು ಕುರಿತು ಅಧ್ಯಯನ ಮಾಡುತ್ತಿದ್ದ ಮತ್ತೋರ್ವ ಬ್ರಿಟನ್‌ನ ಜೀವವಿಜ್ಞಾನಿ ಆಳ್‌ಫ್ರೆಡ್ ರಸೆಲ್ ವ್ಯಾಲೇಸ್ ಅವರು ಡಾರ್ವಿನ್‌ನ ಸಮಕಾಲೀನರು. ತಾವು ನಡೆಸಿದ ಸಂಶೋಧನಾ ಫಲಿತಗಳನ್ನು ಪ್ರಬಂಧರೂಪದಲ್ಲಿ ಬರೆದು ಅದನ್ನು ಪರಿಶೀಲಿಸಿ ಸಾಧ್ಯವಾದರೆ ಲಂಡನ್‌ನ ಪ್ರತಿಷ್ಠಿತ ಸಂಶೋಧನಾ ನಿಯತಕಾಲಿಕೆಯಲ್ಲಿ ಪ್ರಕಟಿಸಲು ಸಹಾಯ ಕೋರಿ ಡಾರ್ವಿನ್‌ಗೆ ಪತ್ರ ಬರೆದಿದ್ದರು. ಪ್ರಬಂಧದ ಸಾರಾಂಶ ತಾವು ಇಪ್ಪತ್ತು ವರ್ಷಗಳ  ಕಾಲ ಅಧ್ಯಯನ ನಡೆಸಿ ಸಾರರೂಪಕ್ಕಿಳಿಸುತ್ತಿದ್ದ ಗ್ರಂಥದ ತಿರುಳನ್ನೇ ಹೋಲುವುದನ್ನು ಕಂಡು ಡಾರ್ವಿನ್ ಚಕಿತಗೊಂಡರು. ಹಾಗಾಗಿ ಕೃತಿಚೌರ್ಯದ ಆಪಾದನೆಗೆ ಹೆದರಿ ಗ್ರಂಥ ಪ್ರಕಟಿಸುವುದನ್ನು ಕೈಬಿಡಲು ನಿರ್ಧರಿಸಿದರು. ಆದರೆ ಡಾರ್ವಿನ್‌ರವರ ಅಸಾಧಾರಣ ಶ್ರಮ ಮತ್ತು ವಿಶ್ಲೇಷಣೆಗಳನ್ನು ಗಮನಿಸಿದ್ದ ವಿಜ್ಞಾನಿಗಳಾದ ಜೋಸೆಫ್ ಹುಕರ್ ಮೊದಲಾದವರು. ವ್ಯಾಲೇಸ್‌ಗೆ ವಿಷಯ ತಿಳಿಸಿ ಡಾರ್ವಿನ್ ಮತ್ತು ವ್ಯಾಲೇಸ್ ಇಬ್ಬರೂ ತಮ್ಮ ಪ್ರಬಂಧಗಳನ್ನು ಜಂಟಿಯಾಗಿ ಲಂಡನ್‌ನ ರಾಯಲ್ ಸೊಸೈಟಿಯಲ್ಲಿ ಮಂಡಿಸಲು ವ್ಯವಸ್ಥೆಗೊಳಿಸಿದರು. ಆ ಸಂದರ್ಭದಲ್ಲಿ ಡಾರ್ವಿನ್‌ಮತ್ತು ವ್ಯಾಲೇಸ್ ಪರಸ್ಪರ ತೋರಿದ ಸಂಯಮ ಮತ್ತು ವರ್ತನೆ ಅನುಕರಣೀಯ. ಡಾರ್ವಿನ್‌ನ ಸಂಶೋಧನೆಯ ಆಳವನ್ನು ಅರಿತಿದ್ದ ವ್ಯಾಲೇಸ್ ವಿಕಾಸವಾದದ ಎಲ್ಲ ಗೌರವಗಳನ್ನು ಡಾರ್ವಿನ್‌ಗೆ ಬಿಟ್ಟುಕೊಟ್ಟರು. ತಾವ ಬರೆಯಬೇಕೆಂದಿದ್ದ ದೊಡ್ಡ ಗ್ರಂಥವನ್ನು ಕೈಬಿಟ್ಟ ಡಾರ್ವಿನ್ ತಮ್ಮ ವಿಚಾರಧಾರೆಗಳನ್ನು ಸಂಕ್ಷಿಪ್ತಗೊಳಿಸಿ ‘ದಿ ಒರಿಜನ್ ಆಫ್ ಸ್ಪೀಷೀಸ್’ ಪ್ರಕಟಿಸಿದರು.

ವಿಕಾಸವಾದ ಕುರಿತ ತಮ್ಮ ಪುಸ್ತಕವನ್ನು ಪ್ರಕಟಿಸಲು ಹಿಂಜರಿಯುತ್ತಿದ್ದ ಡಾರ್ವಿನ್ ಬಹು ದೀರ್ಘಕಾಲ ದೈಹಿಕ ಅಸ್ವಸ್ಥತೆಯಿಂದ ನರಳಿದ್ದರು. ಒಮ್ಮೆ ಪುಸ್ತಕ ಪ್ರಕಟವಾದ ನಂತರ ಅವರು ನಿರ‍್ಮೂಳರಾದರು. ಆರೋಗ್ಯ ಮತ್ತೆ ಕುದುರಿತು. ಡೌನಿಂಗ್‌ನ ತನ್ನ ಮನೆಯನ್ನು ಸೇರಿದ ಡಾರ್ವಿನ್ ಮತ್ತೆ ಅಧ್ಯಯನವನ್ನು ಮುಂದುವರಿಸಿದರು. ವಿಕಾಸವಾದದ ವಿರುದ್ಧ ನಿರೀಕ್ಷಿಸಿದಂತೆಯೇ ಚರ್ಚ್ ಬೊಬ್ಬಿಟ್ಟಿತು. ಅದೃಷ್ಟವಶಾತ್ ಡಾರ್ವಿನ್ ಪರ ವಾದಿಸುವ ಜೋಸೆಫ್ ಹುಕರ್, ಥಾಮಸ್ ಗ್ರೇ, ಚಾರ್ಲ್ಸ್ ಲೈಲ್, ಥಾಮಸ್ ಹಕ್ಸ್‌ಲೀಯಂಥ ವಿಜ್ಞಾನಿಗಳ ತಂಡ ಆಗ ಹುಟ್ಟಿಕೊಂಡಿತ್ತು. ಚರ್ಚ್‌ಪರ ಅನೇಕ ವಿಜ್ಞಾನಿಗಳು ನಿಂತು ಡಾರ್ವಿನ್ ವಾದವನ್ನು ಖಂಡಿಸಿದರೂ ವೈಜ್ಞಾನಿಕ ಲೋಕ ಅದೊಂದು ಅನನ್ಯ ಗ್ರಂಥವೆಂದು ಪರಿಗಣಿಸಿತು. ಜೊತೆಗೆ ಡಾರ್ವಿನ್‌ರವರ ಪ್ರಭಾವಿ ಕುಟುಂಬದ ಹಿನ್ನೆಲೆಯಿಂದಾಗಿ ಚರ್ಚ್‌ನ ದಾಳಿ ಅಷ್ಟೊಂದು ತೀಕ್ಷಣೆಗೆ ಕಾಣದೆ ಬಿದ್ದು ಹೋಯಿತು. (ಆದರೂ ಈಗಲೂ ಮುಂದುವರೆದ ಹಾಗೂ ಪ್ರಜಾಪ್ರಭುತ್ವ ದೇಶವೆನಿಸಿದ ಅಮೆರಿಕಾದ ಎರಡು ಸಂಸ್ಥಾನಗಳಲ್ಲಿ ಧರ್ಮ ವಿರೋಧಿ ಎಂಬ ಕಾರಣಕ್ಕೆ ಡಾರ್ವಿನ್ ವಿಕಾಸವಾದದ ಬೋಧನೆ ನಿಷಿದ್ಧ)

ಈಗ ಡಾರ್ವಿನ್‌ನ ವಿಕಾಸವಾದದ ತಿಂಗಳು ಅಂಗೀಕೃತವಾಗಿದೆ. ಆದರೆ ವಾನರ ಮೂಲದಿಂದ ಮಾನವ ವಿಕಾಸಗೊಂಡಿರಬೇಕೆಂಬ ಅವರ ವಾದದ ಬಗ್ಗೆ ಇದುವರೆವಿಗೂ ಅನೇಕ ವಿಜ್ಞಾನಿಗಳು ಸಂದೇಹ ವ್ಯಕ್ತಪಡಿಸುತ್ತಿದ್ದಾರೆ. ಹಾಗೆಯೇ ಪ್ರಾಕೃತಿಕ ಆಯ್ಕೆಯೇ ಜೀವ ವಿಕಾಸಕ್ಕೆ ಮೂಲಾಧಾರ ಎಂಬ ತತ್ವದ ಬಗ್ಗೆ ಭಿನ್ನಾಭಿಪ್ರಾಯಗಳು ಉಳಿದು ಬಂದಿವೆ. ಕೆಲವು ವಿಜ್ಞಾನಿಗಳು ಜೀವವಿಕಾಸವು ಆಂತರಿಕ ಶಕ್ತಿಯಿಂದ ಪ್ರೇರಣೆಗೊಳ್ಳುತ್ತದೆಂಬ ವಾದವನ್ನು ಮುಂದಿಟ್ಟರೆ, ಮತ್ತೆ ಹಲವರು ಜೀವಿಯೊಂದು ವಯಸ್ಕ ಹಂತದಲ್ಲಿ ಗಳಿಸಿಕೊಳ್ಳುವ ಗುಣಲಕ್ಷಣಗಳ ಅನುವಂಶೀಯತೆಯಿಂದ ವಿಕಾಸ ಮುಂದುವರೆಯುತ್ತದೆಂದು ಸಮರ್ಥಿಸಿಕೊಳ್ಳುತ್ತಾರೆ.

ಅದೇನೇ ಇರಲಿ, ಜೀವವಿಜ್ಞಾನದ ಪ್ರಖರ ಸಂಶೋಧನೆಗಳ ಹಿನ್ನೆಲೆಯಲ್ಲಿ ಡಾರ್ವಿನ್‌ರವರು ಜೀವವಿಕಾಸಕ್ಕೆ ಸಂಬಂಧಿಸಿದಂತೆ ಪ್ರತಿಪಾದಿಸಿದ ಅನೇಕ ತತ್ವಗಳು ಇಂದು ಬಿದ್ದು ಹೋಗಿವೆ. ಆದರೆ ಅವರ ವಿಕಾಸವಾದದ ಪ್ರಧಾನ ಧಾರೆಯ ಚಿಂತನೆಗಳು ಹಾಗೆಯೇ ಉಳಿದು ಬಂದಿವೆ. ಆ ಇತಿಹಾಸದತ್ತ ಒಂದು ನೋಟ ಹೊರಳಿಸುವುದು ಅಗತ್ಯ.

ಡಾರ್ವಿನ್ ಬದುಕಿದ್ದ ಕಾಲದಲ್ಲಿಯೇ ಗ್ರೆಗರ್ ಮೆಂಡೆಲ್ ಎಂಬ ಆಸ್ಟ್ರಿಯಾದ ಪಾದ್ರಿಯೊಬ್ಬ ತನ್ನ ಚರ್ಚ್‌‌ನ ಆವರಣದಲ್ಲಿ ಬಟಾಣಿಗಿಡಗಳ ಮೇಲೆ ನಡೆಸಿದ ಸಂಶೋಧನೆಯಿಂದ ತಳಿ ವಿಜ್ಞಾನ ಜನ್ಮ ತಾಳಿತು. ಬಟಾಣಿ ಗಿಡದ ಲಕ್ಷಣಗಳು ಜನ್ಮದಾತ ಸಂತತಿಯಿಂದ ಮುಂದಿನ ಸಂತತಿಗೆ ಕೆಲವು ‘ಅನುವಂಶೀಯ ಘಟಕಗಳ’ ಮೂಲಕ ಹರಿಯುತ್ತದೆಂದು ಆತ ಪ್ರತಿಪಾದಿಸಿದ. ಈ ಅನುವಂಶೀಯತೆ ಸಂತತಿಯಿಂದ ಸಂತತಿಗೆ ನಿರಂತರವಾಗಿ ಹರಿಯುತ್ತಾ ಅವುಗಳ ಸ್ವರೂಪ (ಪ್ರಬಲ ಅಥವಾ ದುರ್ಬಲ)ಕ್ಕೆ ಅನುಗುಣವಾಗಿ ಸಂತತಿಯಲ್ಲಿ ಅಭಿವ್ಯಕ್ತಿ ಪಡೆಯುತ್ತವೆ ಎಂದು ಹೇಳಿದ. ಆದರೆ ಡಾರ್ವಿನ್ ವಿಕಾಸವಾದದ ಬಿಸಿ ಚರ್ಚೆಯಲ್ಲಿ ಮುಳುಗಿದ್ದ ವಿಜ್ಞಾನದ ಜಗತ್ತು ಮೆಂಡಲ್‌ನ ನವ ಸಂಶೋಧನೆಯತ್ತ ಗಮನ ಹರಿಸಲಿಲ್ಲ. ಮೆಂಡಲ್ ಹೇಳಿದ ‘ಅನುವಂಶೀಯ ಘಟಕಗಳೇ’ ಮುಂದೆ ‘ಜೀನ್ಸ್’ ಎಂಬ ನಾಮಕರಣದಿಂದ ಪ್ರಸಿದ್ಧಿಯಾದವು.

ಆಗಸ್ಟ್ ವೇಯ್ಸ್‌ಮನ್ ಎಂಬ ಮತ್ತೊಬ್ಬ ಜೀವವಿಜ್ಞಾನಿಯು ೧೮೯೨ ರಲ್ಲಿ ಜೀವ ಕಣದ, ನ್ಯೂಕ್ಲಿಯಸ್‌ನಲ್ಲಿರುವ ವರ್ಣ ತಂತುಗಳ ವಸ್ತುವೇ ಅನುವಂಶೀಯತೆಗೆ ಕಾರಣವೆಂದು ಪ್ರಸ್ತುತ ಪಡಿಸಿದ.

ಹಣ್ಣಿನ ನೊಣಗಳ ಅನೇಕ ಸಂತತಿಗಳನ್ನು ಐದು ವರ್ಷ ಕಾಲ ಅಧ್ಯಯನ ಮಾಡಿದ ಟಿ.ಎಸ್. ಮಾರ್ಗನ್ ಎಂಬ ಜೀವ ವಿಜ್ಞಾನಿ ಮತ್ತು ಅವನ ತಂಡದ ವಿಜ್ಞಾನಿಗಳು ಜೀನ್‌ಗಳ ಅಸ್ತಿತ್ವವನ್ನು ಸಂದೇಹಕ್ಕೆಡೆಯಿಲ್ಲದಂತೆ ನಿರೂಪಿಸಿದರು.

ಹೀಗಾಗಿ ಜಗತ್ತಿನ ಮೂರು ವಿಭಿನ್ನ ಕಡೆಗಳಲ್ಲಿ ಮೆಂಡೆಲ್‌ನ ತಳಿ ವಿಜ್ಞಾನದ ಮೂಲಭೂತ ಅಂಶಗಳು ಮರು ಅನ್ವೇಷಣೆಯಾದವು. ಡಾರ್ವಿನ್‌ನ ವಿಕಾಸವಾದದ ತತ್ವಗಳು ಮತ್ತು ಮೆಂಡೆಲ್‌ನ ತಳಿ ವಿಜ್ಞಾನದ ಅಂಶಗಳನ್ನು ಮಿಲನಗೊಳಿಸಿ ಜೀವವಿಕಾಸದ ಬಗ್ಗೆ ಅಧ್ಯಯನ ನಡೆಸಿದ ವಿಜ್ಞಾನಿಗಳು ಮುಂದೆ ನವ ಡಾರ್ವಿನ್ ವಾದವನ್ನು ಪ್ರಸ್ತುತಪಡಿಸಿದರು. ಜೀವ ವಿಕಾಸವು ಸಾಮಾನ್ಯವಾಗಿ ಪ್ರಾಕೃತಿಕ ಆಯ್ಕೆ ತತ್ವದ ಹಾಗೂ ಇತರೆ ಯಾಂತ್ರಿಕ ಕಾರಣಗಳ ಆಧಾರದಲ್ಲಿ ಸಂಭವಿಸುತ್ತಾ ಹೊಸ ಜೀವ ಪ್ರಭೇದಕ್ಕೆ ಕಾರಣವಾಗುತ್ತದೆಂದು ಈ ನವ ಡಾರ್ವಿನ್ ವಾದಕರು ಅಭಿಪ್ರಾಯಪಟ್ಟರು.

೧೯೫೩ರಲ್ಲಿ ಫ್ರಾನ್ಸಿಸ್ ಕ್ರಿಕ್ ಮತ್ತು ಜೇಮ್ಸ್ ವ್ಯಾಟ್ಸನ್‌ರವರು ವರ್ಣತಂತುಗಳಲ್ಲಿರುವ ಡಿ.ಎನ್.ಎ. ವಸ್ತುವಿನ ರಚನೆಯನ್ನು ಸಂಶೋಧಿಸಿ ಜೀವಿಯ ಗುಣಲಕ್ಷಣಗಳು ಮುಂದಿನ ಸಂತತಿಗೆ ಹರಿಯುವ ಕ್ರಾಂತಿಕಾರಿ ಸಂಶೋಧನೆಯನ್ನು ಮಾಡಿದರು. ಇದರಿಂದ ಡಾರ್ವಿನ್ ವಾದಕ್ಕೆ ಮತ್ತಷ್ಟು ಪುಷ್ಠಿ ದೊರೆಯಿತು.

೧೯೬೦-೭೦ರ ದಶಕದಲ್ಲಿ ಆಫ್ರಿಕಾದಲ್ಲಿ ಆದಿ ಮಾನವರ ಅಸ್ತಿತ್ವದ ಬಗ್ಗೆ ಸಂಶೋಧನೆಗಳು ನಡೆದವು. ಲೀಕಿ ದಂಪತಿಗಳು, ಡೊನಾಲ್ಡ್ ಜಾನ್ಸನ್‌ಮತ್ತಿತರರು ಅನೇಕ ಪಳೆಯುಳಿಕೆಗಳನ್ನು ಉತ್ಖನನ ಮಾಡಿ ಮಾನವ ವಿಕಾಸದ ಸಂಭಾವ್ಯತೆಯನ್ನು ನಿರೂಪಿಸಿದರು.

ಆದರೆ ಸ್ಟೀಫನ್ ಜೇ ಗೌಲ್ಡ್‌ನಂಥ ಪಳೆಯುಳಿಕೆ ವಿಜ್ಞಾನಿಗಳು ಜೀವ ವಿಕಾಸವು ನಿಧಾನವಾಗಿ ಮತ್ತು ಕ್ರಮಬದ್ಧವಾಗಿ ಜರಗುತ್ತದೆಂಬ ಸಿದ್ಧಾಂತವನ್ನೇ ಅಲ್ಲಗಳೆದರು. ಜೀವ ಪ್ರಭೇದಗಳು ಬಹು ದೀರ್ಘಕಾಲ ಮಾರ್ಪಾಡುಗೊಳ್ಳದೇ ಸ್ಥಿರವಾಗಿರುತ್ತವೆ; ಆದರೆ ಪ್ರತ್ಯೇಕವಾಗಿ ಬೆಳೆದು ಬಂದ ಪ್ರಭೇದದ ಹತ್ತಿರದ ಸಂಬಂಧಿ ಪ್ರಭೇದಗಳು ದಿಢೀರನೆ ಮೂಲ ಪ್ರಭೇದವನ್ನು ಮೆಟ್ಟಿ ನಿಲ್ಲಬಹುದೆಂಬ ತತ್ವವನ್ನು ಅವರು ಮುಂದಿಟ್ಟರು. ಹಾಗೆಯೇ ‘ಸೆಲ್ಪಿಷ್ ಜೀನ್’ ಬರೆದ ರಿಚರ್ಡ್ ಡಾಕಿನ್ಸ್ ಮತ್ತು ‘ಸೋಷಿಯೋ ಬಯಲಾಜಿ’ ಬರೆದ ಇ.ಓ. ವಿಲ್ಸನ್ ಜೀವ ವಿಕಾಸ ಯಾಂತ್ರಿಕ ಕ್ರಿಯೆ ಎಂದು ಪ್ರತಿಪಾದಿಸಿದ ಗೌಲ್ಡ್ ಮತ್ತಿತರರ ಬಗ್ಗೆ ಹರಿಹಾಯ್ದು ಡಾರ್ವಿನ್ ಚಿಂತನೆಯ ಪರ ನಿಂತರು.

ಗ್ಯಾಲಪಾಗೋಸ್ ದ್ವೀಪದಲ್ಲಿ ೧೯೭೦ರ ದಶಕದಲ್ಲಿ ಫಿಂಚ್ ಹಕ್ಕಿಗಳ ಬಗ್ಗೆ ಅಧ್ಯಯನ ನಡೆಸಿದ ಪೀಟರ್‌ಮತ್ತು ರೋಸ್‌ಮೇರಿ ಗ್ರಾಂಟ್ ಅವರು ಪ್ರಾಕೃತಿಕ ಆಯ್ಕೆಯ ತತ್ವವು ಜೀವವಿಕಾಸವನ್ನುಂಟು ಮಾಡುತ್ತದೆ ಎಂದು ಡಾರ್ವಿನ್‌ನ ಹೇಳಿಕೆಯನ್ನು ದೃಢಪಡಿಸಿದರೂ, ಅದು ಡಾರ್ವಿನ್ ನಂಬಿಂತೆ ಬಹು ದೀರ್ಘಕಾಲದ ಪ್ರಕ್ರಿಯೆಯಲ್ಲ; ಎಂದೋ ಒಂದು ಅವಧಿಯಲ್ಲಿ ದಿಢೀರನೆ ಸಂಭವಿಸುವ ವಿದ್ಯಮಾನ ಎಂದು ಕರೆದರು. ಅನಂತರ ಆ ನಿಟ್ಟಿನಲ್ಲಿ ಇತರೆ ಜೀವಿಗಳ ಮೇಲೆ ನಡೆಸಲಾದ ಅಧ್ಯಯನಗಳೂ ಗ್ರಾಂಟ್‌ರವರ ಅಭಿಪ್ರಾಯಗಳಿಗೆ ಮನ್ನಣೆ ಹಾಕಿವೆ.

ತನ್ನ ವಿಕಾಸವಾದ ಪ್ರತಿಪಾದನೆಗೆ ಡಾರ್ವಿನ್ ಭ್ರೂಣ ವಿಜ್ಞಾನವನ್ನು ಬಹುವಾಗಿ ನೆಚ್ಚಿಕೊಂಡಿದ್ದರು. ಬೇರೆ ಬೇರೆ ಜಾತಿಗಳಿಗೆ ಸೇರಿದ ಪ್ರಾತಿನಿಧಿಕ ಸಂಕುಲಗಳ ಸಂತಾನೋತ್ಪತ್ತಿ, ಭ್ರೂಣಾವಸ್ಥೆಯಲ್ಲಿ ಏಕರೂಪದ್ದಾಗಿರುವುದನ್ನು ವಿವರಿಸುತ್ತಾ, ಕಾಲಾ ನಂತರದಲ್ಲಿ ಅವು ವಿಕಾಸಗೊಂಡ ಬಗೆಯನ್ನು ಡಾರ್ವಿನ್ ಪ್ರತಿಪಾದಿಸಿದ್ದರು. ಆಧುನಿಕ ಕಾಲದ ವಿಜ್ಞಾನಿಗಳು ಡಾರ್ವಿನ್ ಪ್ರತಿಪಾದಿಸಿದ ಈ ಆರಂಭದ ಒಳನೋಟಗಳನ್ನೇ ಆಧರಿಸಿ ತಮ್ಮ ಸಂಶೋಧನೆಯನ್ನು ಮುಂದುವರೆಸಿದ್ದಾರೆ. ತಮ್ಮ ಸಂಶೋಧನೆಗೆ ಅಗತ್ಯವಾದ ಪರಿಕರಗಳನ್ನು ಹೊಸ ತಳಿ ವಿಜ್ಞಾನ, ಪಳೆಯುಳಿಕೆ ಮತ್ತು ಭ್ರೂಣ ವಿಜ್ಞಾನ ಕ್ಷೇತ್ರಗಳಿಂದ ಎರವಲು ಪಡೆಯುತ್ತಿದ್ದಾರೆ.

ಜೀವ ವಿಕಾಸದ ಪರ ಅಥವಾ ವಿರೋಧಿಗಳು ಯಾರೇ ಇರಲಿ ಅವರಿಗೆ ಡಾರ್ವಿನ್ ಇಂದಿಗೂ ಒಂದು ರೆಫರೆನ್ಸ್ ಪಾಯಿಂಟ್. ಅವರನ್ನು ಬಿಟ್ಟು ಜೀವ ವಿಕಾಸದ ಅಧ್ಯಯನ ಸಾಧ್ಯವೇ ಇಲ್ಲ ಎಂಬ ಪರಿಸ್ಥಿತಿ ನಿರ್ಮಾಣವಾಗಿರುವುದು ಡಾರ್ವಿನ್ ಎಲ್ಲ ಕಾಲಕ್ಕೂ ಸಲ್ಲುವ ವಿಜ್ಞಾನಿಯಾಗಿರುವುದರಿಂದ ಮಾತ್ರ.

ಕಳೆದ ನೂರೈವತ್ತು ವರ್ಷಗಳ ಅವಧಿಯಲ್ಲಿ ಜೀವ ವಿಜ್ಞಾನ ಕ್ಷೇತ್ರ ಅನೇಕ ಹೊಸತುಗಳನ್ನು ಕಂಡರೆ ಹೊಸ ಚಿಂತನೆ ಸೇರ್ಪಡೆಯಾದಂತೆಲ್ಲ ಡಾರ್ವಿನ್ ಪ್ರಣೀತ ವಿಕಾಸ ಸಿದ್ಧಾಂತದ ದುರ್ಬಲ ಕೊಂಡಿಗಳು ಕಳಚಿ ಹೋಗಿವೆ. ಆದರೆ ಅವರು ಮಂಡಿಸಿದ ಜೀವ ಸಂಗ್ರಾಮದಲ್ಲಿ ಉಳಿಯಲು ಪೂರಕ ಗುಣಲಕ್ಷಗಳನ್ನು ಕ್ರೋಢೀಕರಿಸಿ ಹೊಸ ಪ್ರಭೇದಕ್ಕೆ ನಾಂದಿ ಹಾಡುವ ಅವರ ‘ಪ್ರಾಕೃತಿಕ ಆಯ್ಕೆ’ ಹೊಸ ಸಂಶೋಧನೆಗಳ ಹಿನ್ನೆಲೆಯಲ್ಲಿ ಮತ್ತಷ್ಟು ಪ್ರಖರವಾಗಿ ಗೋಚರಿಸುತ್ತಿವೆ. ಇದು ಡಾರ್ವಿನ್‌ರವರ ಮತ್ತೊಂದು ಸಾಧನೆ.

ಡಾರ್ವಿನ್‌ರವರ ಚಿಂತನೆಗಳು ಕಳೆದ ನೂರೈವತ್ತು ವರ್ಷಗಳಲ್ಲಿ ಜೀವವಿಜ್ಞಾನಕ್ಕೆ ಹೊಸ ಒಳನೋಟಗಳನ್ನು ನೀಡಿವೆ. ಜಗತ್ತಿನ ಚಿಂತನಾ ಕ್ರಮವನ್ನೇ ಬದಲಿಸಿದೆ. ವಿಜ್ಞಾನವನ್ನೂ ದಾಟಿ ಮಾನವಿಕಗಳನ್ನು ಮತ್ತು ಕಲಾ ಕ್ಷೇತ್ರಗಳನ್ನು ಪ್ರಭಾವಿಸಿವೆ. ಹಾಗಾಗಿ ಡಾರ್ವಿನ್‌ನನ್ನು ಸಹಸ್ರಮಾನದ ಚಿಂತಕ (Thinker of the Millenium) ಎಂದು ಕರೆದದ್ದು ಔಚಿತ್ಯಪೂರ್ಣವಾಗಿದೆ.ಬ

 * * *