ಭೂಮಿಯಲ್ಲಿ ಜೀವ ಹೇಗೆ ವಿಕಾಸವಾಯಿತೆಂಬ ಜಟಿಲ ಪ್ರಶ್ನೆಗೆ ಆಧಾರ ಸಹಿತ ವಿವರಣೆ ನೀಡಿದ ಚಾರ್ಲ್ಸ್ ಡಾರ್ವಿನ್ ಜನಿಸಿ ೨೦೦ ವರ್ಷಗಳಾದವು. ಡಾರ್ವಿನ್ನರ ವಿಕಾಸವಾದವನ್ನು ಮಂಡಿಸಿದ ಪುಸ್ತಕ ‘ಜೀವಿತಳಿಗಳ ಉಗಮ’ (ಆರಿಜಿನ್ ಆಫ್ ಸ್ಪೀಶೀಸ್) ಪ್ರಕಟವಾಗಿ ೧೫೦ ವರ್ಷಗಳಾದವು. ಆದ್ದರಿಂದ ಈ ಮಹಾವಿಜ್ಞಾನಿಯ ವೈಜ್ಞಾನಿಕ ಸಾಧನೆಗಳನ್ನು ಪರಿಚಯಿಸುವ, ವಿಜ್ಞಾನ, ಸಮಾಜ, ಪರಿಸರ ಹಾಗೂ ನಮ್ಮ ಬದುಕಿಗೆ ವಿಕಾಸವಾದದ ಪ್ರಸ್ತುತತೆಯನ್ನು ತಿಳಿಸಿಕೊಡುವ ಸಮ್ಮೇಳನಗಳು ವಿಶ್ವದಾದ್ಯಂತ ನಡೆಯುತ್ತಲಿವೆ. ನಮ್ಮ ವಿದ್ಯಾರ್ಥಿಗಳಿಗೆ ಪ್ರೌಢಶಾಲೆಯಲ್ಲಿರುವಾಗಲೇ ವಿಕಾಸವಾದವನ್ನು ಬೋಧೀಸುತ್ತಾರೆ. ಆದರೆ ಈ ಬೋಧನೆಯಲ್ಲಿ ಎರಡು ಮುಖ್ಯ ದೋಷಗಳಿವೆ: (೧) ವಿಕಾಸ ವಾದಕ್ಕೆ ಡಾರ್ವಿನ್ನರ ದಶಕಗಳ ಸಂಶೋಧನೆ, ಚಿಂತನೆಗಳ ಆಧಾರವಿದೆ.ಅವರ ಭೂಗರ್ಭಶಾಸ್ತ್ರದ, ಜೀವಶಾಸ್ತ್ರದ ನಿಕಟ ಪರಿಚಯ ವಿಕಾಸವಾದವನ್ನು ಮಂಡಿಲು ಸಹಕಾರಿಯಾದವು. ತಮ್ಮ ಆಳ ಅಧ್ಯಯನದಿಂದ ಈ ಶಾಸ್ತ್ರಗಳಲ್ಲಿ ದೊರಕಿದ ಸಹಸ್ರಾರು ಪುರಾವೆಗಳನ್ನು ವಿಕಾಸವಾದ ಬೆಳೆಸುವುದಕ್ಕೆ ಡಾರ್ವಿನ್ನರು ಬಳಸಿಕೊಂಡರು. ವಿಕಾಸವಾದಕ್ಕಿರುವ ಈ ಆಧಾರಗಳಾವುದನ್ನೂ ವಿದ್ಯಾರ್ಥಿಗಳಿಗೆ ಬೋಧಿಸಲಾಗುವುದಿಲ್ಲ. ಇದೊಂದು ಕಟ್ಟುಕತೆ ಎಂಬ ಭಾವನೆ ಬರುವಂತೆ ವಿಕಾಸವಾದವನ್ನು ವಿವರಿಸುತ್ತಾರೆ. (೨) ವಿಶ್ವದಲ್ಲಿ ನಮ್ಮ ಸ್ಥಾನ ತಿಳಿದುಕೊಳ್ಳಲು ವಿಕಾಸವಾದದ ಅವಶ್ಯಕತೆಯಿದೆ. ಈ ವಿಷಯದಲ್ಲಿ ಜೀವಶಾಸ್ತ್ರ ಪರಿಣತ ಸಿಂಸನ್ನರ ಹೇಳಿಕೆ ಗಮನಾರ್ಹ. “ನಾವು ಏತಕ್ಕಾಗಿ ಹುಟ್ಟಿದ್ದೇವೆ? ನಮ್ಮ ಜೀವನದ ಉದ್ದೇಶವೇನು? ನಮಗೆ ಇಚ್ಛಾಶಕ್ತಿ ಇದೆಯೇ? ಚೇತನ ಎಂದರೇನು? ಆತ್ಮ ಎನ್ನುವುದಿದೆಯೇ? ಸಾಮಾಜಿಕ ಪದ್ಧತಿಗಳು ಏಕೆ ಬೆಳೆದು ಬಂದವು? ಇಂತಹ ಪ್ರಶ್ನೆಗಳಿಗೆ ೧೯೫೯ಕ್ಕೂ ಮೊದಲು (ಡಾರ್ವಿನ್ನರ ಪುಸ್ತಕ ಪ್ರಕಟವಾಗುವ ಮುನ್ನ) ಕೊಟ್ಟ ಉತ್ತರಗಳೆಲ್ಲಾ ನಿರರ್ಥಕ. ನಾವು ಅವುಗಳನ್ನು ಮರತರೇ ಒಳಿತು” ಈ ಹೇಳಿಕೆ ಉತ್ಪ್ರೇಕ್ಷೆಯಿರಬಹುದು. ಆದರೆ ಇದರಲ್ಲಿ ವಿಕಾಸವಾದದ ಪ್ರಾಮುಖ್ಯತೆಯನ್ನು ಎತ್ತಿ ತೋರಿಸುವ ಉದ್ದೇಶವಿದೆ. ನಮ್ಮ ಶಾಲೆಗಳಲ್ಲಿ ನಡೆಯುವ ಬೋಧನೆ ಡಾರ್ವಿನ್ನರ ವಿಕಾಸವಾದದ ಪ್ರಾಮುಖ್ಯತೆಯ ಪರಿಚಯ ಮಾಡಿಸುವುದಿಲ್ಲ. ಡಾರ್ವಿನ್ನನ ವಾದಕ್ಕೂ, ನಮ್ಮ ಪರಿಸರಕ್ಕೂ ಇರುವ ಸಂಬಂಧಗಳನ್ನು ತಿಳಿಸುವುದಿಲ್ಲ. ಆದ್ದರಿಂದ ವಿದ್ಯಾರ್ಥಿಗಳು ಪಡೆಯುವ ವಿಕಾಸವಾದದ ಪರಿಚಯ ಸ್ವಲ್ಪವೂ ಆಳವಿಲ್ಲದ್ದಾಗುತ್ತದೆ.

ವಿಕಾಸವಾದವನ್ನು ಓದಿರುವ ಮಕ್ಕಳಿಗೆ ಅದರ ಬಗ್ಗೆ ಪ್ರಶ್ನಿಸಿದರೆ ‘ಮಂಗನಿಂದ ಮಾನವ’ ಎಂಬ ಚುಟುಕಿನ ಉತ್ತರ ದೊರೆಯುತ್ತದೆ. ಮೊದಲನೆಯದಾಗಿ, ಈ ವಿವರಣೆ ಸರಿಯಲ್ಲ. ವಿಕಾಸವಾದ ಮಂಗನಿಂದ ಮಾನವ ಹುಟ್ಟಿ ಬಂದ ಎನ್ನುವುದಿಲ್ಲ. ವಿಕಾಸವಾದದ ಪ್ರಕಾರ ಇಂದಿನ ಚಿಂಪಾಂಜಿಯಂತಹ ವಾನರ ಕುಲ ಮತ್ತು ಮಾನವ ಎರಡೂ ಒಂದೇ ಪ್ರಾಣಿಕುಲದ ಶಿಶುಗಳು. ಅಂದರೆ ಮನುಷ್ಯ ಮತ್ತು ಮಂಗಗಳಲ್ಲಿ ಸೋದರ ಸಂಬಂಧವಿದೆ ಎಂದ ಹಾಗಾಯಿತು. ಹಾಗೆಯೇ ನಾಯಿಯೂ ಅಶ್ವತ್ಥ ವೃಕ್ಷವೂ ಸೋದರ ಸಂಬಂಧಿಗಳು. ಮನುಷ್ಯನಿಗೂ, ಮಂಗನಿಗೂ ಜನ್ಮವಿತ್ತ ಮೂಲಪ್ರಾಣಿ ಬಹುಶಃ ಹಲವಾರು ನೂರು ಲಕ್ಷ ವರ್ಷಗಳ ಹಿಂದೆ ವಾಸಿಸುತ್ತಿತ್ತು. ಈಗ ಈ ಪ್ರಾಣಿಕುಲ ಉಳಿದಿಲ್ಲ. ಅದರ ಸಂತತಿಗಳು ಮಾತ್ರ ಬದುಕಿವೆ. ಹಾಗೆಯೇ, ಇಂದಿನ ಪ್ರಾಣಿಗಳು ಮತ್ತು ಸಸ್ಯಗಳು ೨೦೦ಕೋಟಿ ವರ್ಷಗಳ ಹಿಂದೆ ಬದುಕಿದ್ದ ಜೀವತಳಿಯ ಪೀಳಿಗೆಗಗಳು. ನಮ್ಮ ಭೂಮಿಯಲ್ಲಿ ಬದುಕುತ್ತಿರುವ ಎಲ್ಲ ಜೀವಿಗಳೂ ಈ ಅರ್ಥದಲ್ಲಿ ಸೋದರ ಸಂಬಂಧಿಗಳೇ.

ಭೂಮಿಯಲ್ಲಿರುವ ಸಕಲಜೀವಿಗಳೂ ವಂಶವಾಹಿ ಮಾಹಿತಿಯನ್ನು ಹೊಂದಿವೆ. ಈ ಮಾಹಿತಿಯಿಂದಲೇ ಅವು ನಿರ್ದಿಷ್ಟ ಸ್ವರೂಪ, ಸ್ವಭಾವ ಪಡೆಯುತ್ತವೆ. ವಂಶವಾಹಿ ಮಾಹಿತಿ ಒಂದು ತಲೆಮಾರಿನಿಂದ ಮುಂದಿನ ತಲೆಮಾರಿಗೆ ಹೆಚ್ಚಿನ ಪ್ರಸಂಗಗಳಲ್ಲಿ ಬದಲಾಗದೇ ಹರಿದುಬರುವುದನ್ನು ನಾವು ಸತತ ಕಾಣುತ್ತೇವೆ. ಇದರಿಂದಲೇ ಒಂದು ಕುಲದಲ್ಲಿ ಅದೇ ಜಾತಿಯ ಪ್ರಾಣಿಗಳು ಜನಿಸುತ್ತವೆ. ಸಿಂಹದ ಹೊಟ್ಟೆಯಲ್ಲಿ ಸಿಂಹವೇ ಜನಿಸುತ್ತದೆ. ಪಕ್ಷಿಗಳು ಮೊಟ್ಟೆ ಹಾಕುತ್ತವೆಯೇ ಹೊರತು ಮರಿ ಹಾಕಲಾರವು. ಸ್ತನಿಗಳು ಮೊಟ್ಟೆ ಇಡಲಾರವು. ಈ ವಂಶ ಪಾರಂಪರ್ಯ ಗುಣಗಳು ಒಮ್ಮೇಲೇ ಬದಲಾಗುವುದಿಲ್ಲ. ಅವು ಬದಲಾಗಲು ಲಕ್ಷಾಂತರ ವರ್ಷಗಳೇ ಬೇಕಾಗುತ್ತವೆ. ವಿಕಾಸ ಅತಿ ಮಂದ ನಡಿಗೆ. ಎಲ್ಲ ಜೀವಿಗಳೂ ಅವುಗಳಲ್ಲಿರುವ ವಂಶವಾಹಿ ಮಾಹಿತಿಯನ್ನು, ಎರವಲು ಕೊಂಡ ಸಾಲದಂತೆ ಮುಂದಿನ ಪೀಳಿಗೆಗೆ ರವಾನಿಸುತ್ತವೆ. ಅಪರೂಪಕ್ಕೆ, ಹೊಸದಾಗಿ ಜನಿಸಿದ ಒಂದು ಪ್ರಾಣಿಯ ವಂಶವಾಹಿ ಮಾಹಿತಿಯಲ್ಲಿ ಸಣ್ಣ ಬದಲಾವಣೆ ಕಾಣಿಸಿಕೊಳ್ಳಬಹುದು. ಅಂತಹ ಬದಲಾದ ಜೀವಿ ತನ್ನ ವಂಶವಾಹಿ ಮಾಹಿತಿಯನ್ನು ಅದರ ಮುಂದಿನ ಪೀಳಿಗೆಗೆ ನಿಷ್ಠೆಯಿಂದ ರವಾನಿಸುತ್ತದೆ. ಆಕಸ್ಮಿಕವಾಗಿ ಸಂಭವಿಸಿದ ಬದಲಾವಣೆ ವಂಶವಾಹಿ ಗುಣವಾಗುತ್ತದೆ. ಅನಿರೀಕ್ಷಿತವಾಗಿ ಆಗುವ ಇಂತಹ ಬದಲಾವಣೆಗಳೇ ಜೀವವಿಕಾಸಕ್ಕೆ ಕಾರಣವಾಗುತ್ತವೆ. ವಂಶವಾಹಿ ಮಾಹಿತಿಯಲ್ಲಿ ಆಕಸ್ಮಿಕವಾಗಿ ಉಂಟಾಗುವ ಬದಲಾವಣೆಯಿಂದ ಪ್ರಾಣಿಗೆ ಆಹಾರ ದೊರಕಿಸಿಕೊಳ್ಳುವ ಇಲ್ಲವೆ ಸಂತತಿ ಪಡೆಯುವ ಶಕ್ತಿ ಕ್ಷೀಣಿಸಿದರೆ, ಅದರ ಸಂತತಿ ಅಳಿದು, ವಂಶವಾಹಿ ಮಾಹಿತಿ ಮುಂದಿನ ಪೀಳಿಗೆಗಳಿಗೆ ವರ್ಗಾವಣೆಯಾಗದೇ ಕೊನೆಗೊಳ್ಳುತ್ತದೆ. ಬದಲಾವಣೆಯಿಂದ ಪ್ರಾಣಿಯ ಬದುಕುಳಿಯುವ, ಸಂತಾನ ಪಡೆಯುವ ಸಾಮರ್ಥ್ಯ ಹಚ್ಚಿದರೆ, ಅದರ ಪೀಳಿಗೆಯ ಸಂಖ್ಯೆ ಹೆಚ್ಚಾಗಲು ಪ್ರಾರಂಭವಾಗುತ್ತದೆ. ಅದರೊಡನೆ ಸ್ಪರ್ಧಿಸುತ್ತಿರುವ ಇತರ ಪ್ರಾಣಿಗಳ ಸಂತತಿ ಕಡಿಮೆಯಾಗುತ್ತದೆ. ಪ್ರಕೃತಿ ನಡೆಸುವ ಇಂತಹ ಪ್ರಾಣಿಗಳ ಆಯ್ಕೆ ಪ್ರತಿ ತಲೆಮಾರಿನಲ್ಲೂ ಸತತ ನಡೆಯುವುದರಿಂದ, ಕಾಲ ಸರಿದಂತೆ ಪ್ರಾಣಿಗಳ ಅನುವಂಶಿಕ ಗುಣಗಳು ನಿಧಾನವಾಗಿ ಬದಲಾಗುತ್ತವೆ. ಇಂತಹ ಬದಲಾವಣೆಗಳಿಂದಲೇ ಹೊಸ ತಳಿಗಳು ವಿಕಾಸ ಹೊಂದುತ್ತವೆ. ಇದೇ ವಿಕಾಸವಾದದ ತಿರುಳು. ಇದರಲ್ಲಿ ಗಮನಿಸಬೇಕಾದ ಅಂಶ, ಬದಲಾವಣೆಗಳಾಗುವುದು ಅನಿರೀಕ್ಷಿತ, ಆಕಸ್ಮಿಕ. ವಿಕಾಸದ ಹಾದಿಯಲ್ಲಿ ಅದೊಂದು ಅತಿ ಪುಟ್ಟ ಹೆಜ್ಜೆ. ಬದಲಾವಣೆಗೆ ಯಾವುದೇ ಉದ್ದೇಶವಿಲ್ಲ. ಪೂರ್ಣ ಕತ್ತಲಲ್ಲಿ ಒಂದು ಕುರುಡು ಹೆಜ್ಜೆಯಿಟ್ಟಂತೆ. ಇಟ್ಟ ಹೆಜ್ಜೆ ಪ್ರಪಾತದಲ್ಲಿ ಬೀಳಿಸಬಹುದು, ಇಲ್ಲವೇ ಇನ್ನೂ ಸ್ವಲ್ಪ ಗಟ್ಟಿ ನೆಲಕ್ಕೆ ಕೊಂಡೊಯ್ಯಬಹುದು. ಅದರಂತೆ ಬದಲಾದ ಪ್ರಾಣಿಯ ಸಂತತಿ ನಶಿಸಿಹೋಗಬಹುದು ಇಲ್ಲವೇ ವೃದ್ಧಿಯಾಗತೊಡಗಬಹುದು. ಜೀವವಿಕಾಸ ಗೊತ್ತು ಗುರಿಯಿಲ್ಲದ ನಡೆದಾಟ. ಆದರೂ ಈ ಕುರುಡು ನಡಿಗೆಯೇ ಲಕ್ಷಾಂತರ ವರ್ಷಗಳಲ್ಲಿ ಹೊಸ ಸಾಧ್ಯತೆಗಳಿಗೆ, ಹೊಸ ಜೀವಿಗಳಿಗೆ ದಾರಿ ಮಾಡಿಕೊಡುತ್ತದೆ.

ಪ್ರಾಣಿಗಳ ರಚನೆ ಮತ್ತು ಸ್ವಭಾವಗಳಲ್ಲಿ ಸಹಜವಾಗಿರುವ ಅನೇಕ ಸಣ್ಣ ಸಣ್ಣ ವ್ಯತ್ಯಾಸಗಳನ್ನು ಡಾರ್ವಿನ್ ತಮ್ಮ ವಿಶ್ವ ಪರ್ಯಟನೆಯಲ್ಲಿ ಪದೇ ಪದೇ ವೀಕ್ಷಿಸಿದರು. ಇಂತಹ ವ್ಯತ್ಯಾಸಗಳು ಆಕಸ್ಮಿಕವಾಗಿ ಕಾಣಿಸಿಕೊಂಡಾಗ ಪರಿಸರಕ್ಕೆ ಹೊಂದದಿದ್ದರೆ ಬದಲಾದ ಪ್ರಾಣಿಯ ವ್ಯತ್ಯಾಸಗಳು ಆಕಸ್ಮಿಕವಾಗಿ ಕಾಣಿಸಿಕೊಂಡಾಗ ಪರಿಸರಕ್ಕೆ ಹೊಂದದಿದ್ದರೆ ಬದಲಾದ ಪ್ರಾಣಿಯ ಸಂತತಿ ಕೊನೆಗೊಳ್ಳಬಹುದು ಎಂಬ ತೀರ್ಮಾನಕ್ಕೆ ಬಂದರು. ಆಕಸ್ಮಿಕವಾಗಿ ಕಾಣಿಸಿಕೊಂಡ ವ್ಯತ್ಯಾಸ ಬದುಕುಳಿಯುವ ಸಾಮರ್ಥ್ಯ ಹೆಚ್ಚಿಸಿದಾಗ ಮಾತ್ರ ಅದರ ಸಂತತಿ ಬೆಳೆಯತೊಡಗುತ್ತದೆ. ಆದ್ದರಿಂದ ಜೀವವಿಕಾಸ ಯಾವುದೇ ಪೂರ್ವಯೋಜಿತ ಉದ್ದೇಶವಿಲ್ಲದೇ ಆಕಸ್ಮಿಕ ಬದಲಾವಣೆಗಳಿಂದಾಗುವ ವ್ಯಾಪಾರ. ಜೀವವಿಕಾಸ ಪ್ರಕೃತಿಯ ಸಹಜ ನಿಯಮಗಳ ಅಡಿಯಲ್ಲೇ ನಡೆಯುತ್ತದೆ. ಇದಕ್ಕೆ ಯಾವ ಅತಿಮಾನುಷ ಶಕ್ತಿಯ ಅವಶ್ಯಕತೆಯಿಲ್ಲ ಎಂದು ಡಾರ್ವಿನ್ ಪ್ರತಿಪಾದಿಸಿದರು. ತಾವು ಕಂಡದ್ದನ್ನೆಲ್ಲಾ ತಾರ್ಕಿಕವಾಗಿ, ಅನೇಕ ಆಧಾರಗಳ ಸಮೇತ ೧೮೫೯ರಲ್ಲಿ ಪ್ರಕಟವಾದ ತಮ್ಮ ಪುಸ್ತಕದಲ್ಲಿ ಮಂಡಿಸಿದರು.

ವಿಜ್ಞಾನದ ಮುನ್ನಡೆಗೆ ಕಠಿಣ ನಿಯಮಗಳಿವೆ. ವೈಜ್ಞಾನಿಕ ಸಂಶೋಧನೆಗಳು ಪ್ರಕಟಗೊಳ್ಳುತ್ತಿದ್ದಂತೆ ಮನ್ನಣೆ ಪಡೆಯುವುದಿಲ್ಲ. ಅದರ ಸತ್ಯಾಸತ್ಯತೆಯನ್ನು ಇತರ ಸಹಸ್ರಾರು ವಿಜ್ಞಾನಿಗಳು ಒರೆಗಲ್ಲಿಗೆ ಹಚ್ಚಿ ಪರೀಕ್ಷಿಸುತ್ತಾರೆ. ಸಂಶೋಧನೆ ಸತ್ಯಯುತವೇ ಆಗಿದ್ದಲ್ಲಿ ಇಂತಹ ಪರೀಕ್ಷೆಗಳಿಂದ ಇನ್ನೂ ಗಟ್ಟಿಗೊಳ್ಳುತ್ತದೆ. ಜಳ್ಳಾಗಿದ್ದರೆ ಬಹುಬೇಗ ತನ್ನ ಪ್ರಾಮುಖ್ಯತೆಯನ್ನು ಕಳೆದುಕೊಳ್ಳುತ್ತದೆ. ಡಾರ್ವಿನ್ನರ ವಿಕಾಸವಾದ ಮತ್ತು ಅದರ ತೀರ್ಮಾನಗಳನ್ನು ಇಂತಹ ಪರೀಕ್ಷೆಗಳಿಗೆ ಸತತ ಒಳಪಡಿಸಲಾಗಿದೆ. ಈ ಪರಿಶ್ರಮಗಳಿಂದ ಡಾರ್ವಿನ್ನರ ವಿಕಾಸವಾದ ಇನ್ನೂ ಗಟ್ಟಿಯಾಗಿ ಜೀವವಿಜ್ಞಾನದ ಎಲ್ಲ ಭಾಗಗಳನ್ನು ಒಂದುಗೂಡಿಸಬಲ್ಲದು ಎಂಬ ಹೆಗ್ಗಳಿಕೆ ಪಡೆದಿದೆ.

ಡಾರ್ವಿನ್ ವಿಕಾಸವಾದವನ್ನು ಮಂಡಿಸಿದಾಗ ಅನುವಂಶಿಕ ಗುಣಗಳು ಏಕೆ ಮತ್ತು ಹೇಗೆ ಆಕಸ್ಮಿಕವಾಗಿ ಬದಲಾಗುತ್ತವೆಂದು ತಿಳಿದಿರಲಿಲ್ಲ. ನಂತರದ ಸಂಶೋಧನೆಗಳಿಂದ ಇದು ಸ್ಪಷ್ಟವಾಗಿದೆ. ಭೂಮಿಯ ಮೇಲೆ ಬದುಕಿರುವ ಎಲ್ಲ ಜೀವಿಗಳೂ ಜೀವಕೋಶಗಳನ್ನು ಹೊಂದಿವೆ. ಬ್ಯಾಕ್ಟೀರಿಯಾಗಳಲ್ಲಿ ಸಾಧಾರಣವಾಗಿ ಒಂದೇ ಜೀವಕೋಶವಿದ್ದರೆ, ನಮ್ಮ ದೇಹದಲ್ಲಿ ಸಹಸ್ರ ಕೋಟಿ ಜೀವಕೋಶಗಳಿವೆ. ಆದರೂ ಎಲ್ಲ ಜೀವಿಗಳೂ ಪ್ರಾರಂಭವಾಗುವುದು ಏಕಕೋಶದಿಂದ ಮಾತ್ರ. ಈ ಮೂಲ ಏಕಕೋಶವೇ ಕೋಟ್ಯಂತರ ಕೋಶಗಳಾಗಿ ವಿಭಜನೆ ಹೊಂದುತ್ತದೆ. ಎಲ್ಲ ಜೀವಕೋಶಗಳ ವಂಶವಾಹಿ ಮಾಹಿತಿ ಅಡಗಿರುವುದು ಡಿ.ಎನ್.ಎ. ಎನ್ನುವ ದೈತ್ಯ ಅಣುಗಳಲ್ಲಿ. ನಮ್ಮ ಭಾಷೆಗೆ ೫೨ ಅಕ್ಷರಗಳು ಇದ್ದ ಹಾಗೆ ಬ್ಯಾಕ್ಟೀರಿಯಾಗಳಿಂದ ಪ್ರಾರಂಭಿಸಿ ಸ್ತನಿಗಳವರೆಗೆ ಎಲ್ಲ ಜೀವಕೋಶಗಳ ವಂಶವಾಹಿ ಮಾಹಿತಿಯ ಭಾಷೆಯಲ್ಲಿ ನಾಲ್ಕು ಅಕ್ಷರಗಳಿವೆ. ಈ ನಾಲ್ಕು ಅಕ್ಷರಗಳೇ ಡಿ.ಎನ್.ಎ. ಅಣುಗಳಲ್ಲಿ ಕಂಡುಬರುವ ನ್ಯೂಕ್ಲಿಯೋಟೈಡುಗಳು. ಈ ನ್ಯೂಕ್ಲಿಯೋಟೈಡುಗಳ ಮಾಲೆಗಳಲ್ಲೇ ಎಲ್ಲ ಜೀವಕೋಶಗಳ ವಂಶವಾಹಿ ಮಾಹಿತಿಯಿದೆ. ಅದೇ ನಾಲ್ಕು ಅಕ್ಷರಗಳನ್ನೇ (ನ್ಯೂಕ್ಲಿಯೋಟೈಡುಗಳನ್ನೇ) ಎಲ್ಲ ಜೀವಕೋಶಗಳೂ ಬಳಸುತ್ತವೆ. ಈ ಸರ್ವ ಜೀವಕೋಶಗಳ ಏಕಲಿಪಿ ಅವುಗಳ ಏಕ ಮೂಲ ಉಗಮಕ್ಕೆ ಸಾಕ್ಷಿಯಾಗಿ, ಡಾರ್ವಿನ್ನರ ವಿಕಾಸವಾದಕ್ಕೆ ಬಲವಾದ ಪುರವಾವೆಯಾಗಿದೆ. ಆದ್ದರಿಂದಲೇ ನ್ಮಮ ಡಿ.ಎನ್.ಎ. ಅಣುಗಳಲ್ಲಿರುವ ಸಂದೇಶವನ್ನು ಬ್ಯಾಕ್ಟೀರಿಯಾಗಳು ಬಳಸಿಕೊಳ್ಳಬಲ್ಲವು. ಬ್ಯಾಕ್ಟೀರಿಯಾ ಕೋಶಗಳಲ್ಲಿರುವ ಸಂದೇಶವನ್ನು ಸಸ್ಯಗಳು ಬಳಸಬಲ್ಲವು. ಜೀವಕೋಶ ವಿಭಜನೆಯಾದಾಗ ಅದರಲ್ಲಿರುವ ವಂಶವಾಹಿ ಮಾಹಿತಿಯು (ಡಿ.ಎನ್.ಎ. ದೈತ್ಯಾಣು) ಎರಡೂ ಹೊಸ ಮರಿಕೋಶಗಳಿಗೆ ಬದಲಾಗದೇ ಇಳಿದು ಬರುತ್ತದೆ. ಆದರೆ ಒಮ್ಮೊಮ್ಮೆ ಆಕಸ್ಮಿಕವಾಗಿ ಜೀವಕೋಶಗಳಲ್ಲಿರುವ ನಾಲ್ಕು ಬಗೆಯ ಅಕ್ಷರಗಳಲ್ಲಿ ಸಣ್ಣ ಬದಲಾವಣೆಗಳು ಕಾಣಿಸಿಕೊಳ್ಳುತ್ತವೆ. ಇಂತಹ ಬದಲಾವಣೆಗಳು ಕೆಲ ರಾಸಾಯನಿಕ ಧಾತುಗಳ ಸಂಪರ್ಕದಿಂದ, ಇಲ್ಲವೇ ವಾತಾವರಣದ ವಿಕಿರಣದಿಂದ ಕಾಣಿಸಿಕೊಳ್ಳಬಹುದು. ಹಸ್ತಪ್ರತಿ ಮಾಡಿಕೊಳ್ಳುವಾಗ ನಾವು ಮಾಡುವ ಸಹಜ ತಪ್ಪುಗಳಂತೆ, ಇಂತಹ ಬದಲಾವಣೆಗಳು ಯಾವ ಕಾರಣ ಇಲ್ಲದಿದ್ದರೂ ಆಕಸ್ಮಿಕವಾಗಿ ಕಾಣಿಸಿಕೊಳ್ಳಬಹುದು. ಇವುಗಳಿಂದ ಡಿ.ಎನ್.ಎ. ಅಣುಗಳ ಜೀವವಾಹಿ ಸಂದೇಶದಲ್ಲಿ ಸಣ್ಣ ಬದಲಾವಣೆ ಉಂಟಾಗುತ್ತದೆ. ಈ ಬದಲಾವಣೆಗಳೇ ಜೀವವಿಕಾಸಕ್ಕೆ ಎಡೆಮಾಡಿಕೊಡುತ್ತದೆ.

ಎಲ್ಲ ಜೀವಕೋಶಗಳ ರಾಸಾಯನಿಕ ಕ್ರಿಯೆಗಳಲ್ಲಿಯೂ ಅನೇಕ ಸಾಮ್ಯತೆಗಳಿವೆ. ಜೀವಕೋಶಗಳು ತಮಗೆ ಬೇಕಾಗುವ ಸಹಸ್ರಾರು ಅಣುಗಳನ್ನು ೨೦ ಅಮೈನೋ ಆಮ್ಲಗಳು, ಹಲವಾರು ನ್ಯೂಕ್ಲಿಯೋಟೈಡುಗಳು ಹಾಗೂ ಇನ್ನೂ ಕೆಲ ಸಣ್ಣ ಅಣುಗಳನ್ನು ಬಳಸಿಕೊಂಡು ಸಂಶ್ಲೇಷಿಸಿಕೊಳ್ಳುತ್ತವೆ. ಈ ಅಣುಗಳನ್ನು ಬಳಸಿಕೊಳ್ಳುವ ರೀತಿಯಲ್ಲೂ ಅವುಗಳನ್ನು ಒಳಪಡಿಸುವ ರಾಸಾಯನಿಕ ಕ್ರಿಯೆಗಳಲ್ಲೂ ಎಲ್ಲ ಜೀವಕೋಶಗಳಿಗೂ ಸಾಮ್ಯತೆಗಳಿವೆ. ಈ ನೂತನ ಸಂಶೋಧನೆಗಳೆಲ್ಲಾ ಜೀವಕೋಶಗಳ ಏಕಮೂಲವನ್ನೇ ಸಮರ್ಥಿಸುತ್ತವೆ. ೨೦ನೆಯ ಶತಮಾನದಲ್ಲಿ ಜೀವಶಾಸ್ತ್ರದಲ್ಲಾದ ಅಗಾಧ ಸಂಶೋಧನೆಗಳು ಡಾರ್ವಿನ್ನರ ವಿಕಾಸವಾದಕ್ಕೆ ಭದ್ರಬುನಾದಿಯನ್ನು ಒದಗಿಸಿಕೊಟ್ಟಿವೆ.

ಜೀವಕೋಶಗಳ ವಂಶವಾಹಿ ಮಾಹಿತಿ ಬದಲಾಗುವುದು ಅವುಗಳ ನಾಲ್ಕು ಅಕ್ಷರಗಳ ಮಾಲೆಯಲ್ಲಿ ಸಣ್ಣ ಸಣ್ಣ ಬದಲಾವಣೆಗಳಾಗುವುದರಿಂದ, ಜೀವಕೋಶಗಳ ಕಾರ್ಯಕ್ಷಮತೆಯಿಂದಾಗಿ ಬದಲಾವಣೆಗಳಾಗುವುದು ಅಪರೂಪ. ಆದ್ದರಿಂದ ಜೀವವಿಕಾಸದ ನಡಿಗೆ ನಿಧಾನ. ಏಕಕೊಶ ಜೀವಿಗಳಿಂದ ಸ್ತನಿಗಳಂತಹ ಬಹುಕೋಟಿ ಜೀವಿಗಳ ವಿಕಾಸಕ್ಕೆ ೧೦೦ ಕೋಟಿ ವರ್ಷಗಳಿಗೂ ಹೆಚ್ಚು ಸಮಯ ಬೇಕಾಯಿತು. ವಂಶಪಾರಂಪರ್ಯ ಗುಣಗಳಲ್ಲಿ ಬದಲಾವಣೆಯೇ ಕಾಣಿಸಿಕೊಳ್ಳದಿದ್ದರೆ ವಿಕಾಸ ಸಾಧ್ಯವಾಗುವುದಿಲ್ಲ. ಪರಿಸರ ಬದಲಾಗದೇ ವಂಶವಾಹಿ ಮಾಹಿತಿಯಲ್ಲಿ ಬದಲಾವಣೆಗಳಾದರೆ, ಬಹುಶಃ ಅಂತಹ ಬದಲಾವಣೆಗಳಿಂದ ಜೀವಿಗೆ ಹಾನಿಯಾಗುತ್ತದೆ. ಅದರ ಸಂತತಿ ನಶಿಸುತ್ತದೆ. ಪರಿಸರ ಬದಲಾಗದೇ ವಂಶವಾಹಿ ಮಾಹಿತಿಯಲ್ಲಿ ಬದಲಾವಣೆಗಳಾದರೆ, ಬಹುಶಃ ಅಂತಹ ಬದಲಾವಣೆಗಳಿಂದ ಜೀವಿಗೆ ಹಾನಿಯಾಗುತ್ತದೆ. ಅದರ ಸಂತತಿ ನಶಿಸುತ್ತದೆ. ಪರಿಸರ ಬದಲಾದಾಗ, ಅದಕ್ಕೆ ಪೂರಕವಾಗಬಹುದಾದ ಬದಲಾವಣೆ ವಂಶವಾಹಿ ಮಾಹಿತಿಯಲ್ಲಿ ಆಕಸ್ಮಿಕವಾಗಿ ಕಾಣಿಸಿಕೊಂಡರೆ, ಅಂತಹ ಬದಲಾವಣೆ ಸ್ಥಿರಗೊಳ್ಳುತ್ತದೆ; ಬದಲಾದ ಜೀವಿಯ ವಂಶ ಬೆಳೆಯುತ್ತದೆ. ೨೦ನೆಯ ಶತಮಾನದ ಆದಿಯಲ್ಲಿ ಬ್ಯಾಕ್ಟೀರಿಯಾ ಕೋಶಗಳನ್ನು ನಾಶ  ಮಾಡುವ ಆಂಟಿಬಯಾಟಿಕ್‌ಗಳ ಬಳಕೆ ಪ್ರಾರಂಭವಾಯಿತು. ಅಲ್ಲಿಯವರೆಗೆ ಬ್ಯಾಕ್ಟೀರಿಯಾ ಕಾಯಿಲೆಯಿಂದ ಸಾಯುವುದು ಕಡಿಮೆಯಾಯಿತು. ನೂರು ವರ್ಷಗಳ ಒಳಗೇ, ಅನೇಕ ಬ್ಯಾಕ್ಟೀರಿಯಾಗಳ ವಂಶವಾಯಿ ಮಾಹಿತಿಯಲ್ಲಿ ಬದಲಾವಣೆಗಾಳಗಿವೆ. ಅಕಸ್ಮಾತ್ ಆದ ಈ ಬದಲಾವಣೆಯಿಂದ ಆಂಟಿಬಯಾಟಿಕ್‌ಗಳನ್ನು ನಿಷ್ಕ್ರಿಯಗೊಳಿಸುವ ಶಕ್ತಿಯನ್ನು ಅನೇಕ ಬ್ಯಾಕ್ಟೀರಿಯಾಗಳು ಪಡೆದುಕೊಂಡವು. ಪರಿಸರ ಬದಲಾವಣೆ ಬ್ಯಾಕ್ಟೀರಿಯಾ ಕೋಶಗಳ ವಿಕಾಸವನ್ನು ಚುರುಕುಗೊಳಿಸಿತು. ಇಂದಿನ ಅನೇಕ ಬ್ಯಾಕ್ಟೀರಿಯಾಗಳು ಆಂಟಿಬಯಾಟಿಕ್‌ಗಳಿಂದ ನಾಶವಾಗುವುದಿಲ್ಲ. ನಮಗೆ ಬರುವ ಕಾಯಿಲೆಗಳು ಆಂಟಿಬಯಾಟಿಕ್‌ಗಳಿಗೆ ಬಗ್ಗದೆ, ದೊಡ್ಡ ಸಮಸ್ಯೆ ಉಂಟಾಗಿದೆ. ಇದು ನಮ್ಮ ಜೀವಿತದಲ್ಲೇ ಆದ, ಆಗುತ್ತಿರುವ ಜೀವವಿಕಾಸ, ಪರಿಸರದ ಬದಲಾವಣೆಯ ಒತ್ತಡದಿಂದ ಚುರುಕುಗೊಂಡ ಜೀವವಿಕಾಸ.

ಮೇಧಾಶಕ್ತಿಗೆ ಮೇರು ಉದಾಹರಣೆ ಎಂದು ಎಲ್ಲೆಡೆ ಪ್ರಚಾರ ದೊರಕುವುದು ಐನ್‌ಸ್ಟೈನ್‌ರಿಗೆ. ತಲೆಗೂದಲು ಕೆದರಿರುವ ಅವರ ಮುಖ ಎಲ್ಲರಿಗೂ ಪರಿಚಿತ. ಐನ್‌ಸ್ಟೈನ್‌ರಿಗೆ ಸರಿಸಮನಾಗಿ ನಿಲ್ಲಬಲ್ಲಸ ಡಾರ್ವಿನ್ನರ ಭಾವಚಿತ್ರ ಮಾಧ್ಯಮಗಳಲ್ಲಿ ಪ್ರಕಟಗೊಳ್ಳುವುದು ಅಪರೂಪ. ಆಗೊಮ್ಮೆ ಈಗೊಮ್ಮೆ ಪ್ರಕಟಗೊಳ್ಳುವ ಚಿತ್ರಗಳಲ್ಲಿ ಮಾನವ ಮುಖ, ವಾನರ ದೇಹ ಹೊಂದಿರುವ ಡಾರ್ವಿನ್ನರ ವ್ಯಂಗ್ಯಚಿತ್ರವೇ ಹೆಚ್ಚಾಗಿರುತ್ತದೆ. ಐನ್‌ಸ್ಟೈನ್‌ರ ಸಾಪೇಕ್ಷತಾ ಸಿದ್ಧಾಂತ ಹೆಚ್ಚಿನ ಜನರಿಗೆ ತಿಳಿದಿಲ್ಲ. ಆದರೂ ಅವರು ಅತಿ ಮೇಧಾವಿ ಎಂದೇ ಎಲ್ಲರೂ ನಂಬುತ್ತಾರೆ. ಈ ತಾರತಮ್ಯ ಏಕೆ? ಇದಕ್ಕೆ ಐನ್‌ಸ್ಟೈನ್‌ರ  ಸಿದ್ಧಾಂತ ಹೆಚ್ಚು ಜನರಿಗೆ ಅರ್ಥವಾಗುವುದಿಲ್ಲ; ಅದನ್ನು ಅರ್ಥ ಮಾಡಿಕೊಳ್ಳಲು ಬಹಳ ಪರಿಶ್ರಮ ಪಡಬೇಕಾಗುತ್ತದೆ ಎನ್ನುವುದೂ ಇರಬಹುದು. ಆದರೆ ಅದೊಂದೇ ಅಲ್ಲ. ಐನ್‌ಸ್ಟೈನ್‌ರ ಸಿದ್ಧಾಂತ ಜಟಿಲವಾದರೂ, ಅದರ ಬಗ್ಗೆ ತಕರಾರಿಲ್ಲ. ಯಾರೂ ಸಾಪೇಕ್ಷತಾ ಸಿದ್ಧಾಂತದ ವಿರುದ್ಧ ಸಮರ ಸಾರುವುದಿಲ್ಲ. ಐನ್‌ಸ್ಟೈನ್‌ರನ್ನು ರಾಕ್ಷಸನೆಂದು ಚಿತ್ರಿಸುವುದಿಲ್ಲ. ಡಾರ್ವಿನ್ನರ ಪುಸ್ತಕಗಳನ್ನು ಭಾವಚಿತ್ರವನ್ನು ಸುಡುವುದುರಿಂದ ಪ್ರಾರಮಭಿಸಿ ಅವರ ಸಂಶೋಧನೆಗಳ ವಿರುದ್ಧ ಸತತ ಪ್ರತಿಭಟನೆಗಳು ೧೫೦ ವರ್ಷಗಳಿಂದಲೂ ನಡೆದುಬಂದಿವೆ. ಸಹಸ್ರಾರು ವರ್ಷಗಳಿಂದ ನೆಲೆಯೂರಿರುವ ನಂಬಿಕೆಗಳಿಗೂ ವಿಕಾಸವಾದಕ್ಕೂ ಅನೇಕ ವಿರೋಧಾಭಾಸಗಳಿರುವುದೇ ಇದಕ್ಕೆ ಕಾರಣ. ವಿಕಾಸ ವಾದಕ್ಕೂ ಕೆಲವು ಮತಸಿದ್ಧಾಂತಗಳಿಗೂ ಇರುವ ಘರ್ಷಣೆಯಿಂದ ಈ ಟೀಕೆಗಳು ಪ್ರಾರಮಭವಾದವು. ಇಂತಹ ಘರ್ಷಣೆಯಾದಾಗ ನೈತಿಕ ಧೈರ್ಯ ಇರುವವರು ಹೊಸ ಚಿಂತನೆಯಲ್ಲಿ ತೊಡಗುತ್ತಾರೆ. ವಿಕಾಸವಾದ ಸರಿ ಎನಿಸಿದರೆ ತಮ್ಮ ಸೈದ್ಧಾಂತಿಕ ನೆಲೆಯನ್ನು ಬದಲಿಸಿಕೊಳ್ಳುತ್ತಾರೆ. ವಿಕಾಸವಾದ ಸರಿಯಲ್ಲ ಎನಿಸಿದರೆ ಅದು ಯಾವ ವೈಜ್ಞಾನಿಕ ನಿಯಮಗಳನ್ನು ಉಲ್ಲಂಘಿಸುತ್ತದೆ ಎಂಬುದನ್ನು ಕಂಡುಕೊಂಡು ಎತ್ತಿ ತೋರಿಸುತ್ತಾರೆ. ಹಳೆಯ ನಂಬಿಕೆಗಳಿಗೇ ಜೋತುಬಿದ್ದು ಅದನ್ನೇ ಕುರುಡಾಗಿ ನಂಬಿಕೊಂಡಿರುವವರಿಗೆ ವಿಕಾಸವಾದ ಸಹ್ಯವಾಗುವುದಿಲ್ಲ. ಅದು ಅವರಿಗೆ ಕಳವಳ ಉಂಟು ಮಾಡುತ್ತದೆ. ಆದ್ದರಿಂದಲೇ ವಿಕಾಸವಾದವನ್ನು ಹೊಸಕಿಹಾಕಲು ಶತಪ್ರಯತ್ನ ನಡೆಸುತ್ತಾರೆ. ವಿಕಾಸವಾದದ ವಿರುದ್ಧ ಇಲ್ಲಿಯವರೆಗೆ ಸಮರ ನಡೆದಿರುವುದು ಪಾಶ್ಚಿಮಾತ್ಯ ದೇಶಗಳಲ್ಲಿ ಮಾತ್ರ. ನಮ್ಮ ದೇಶದಲ್ಲಿ ಇಂತಹ ಪ್ರಸಂಗಗಳು ನಡೆದಿಲ್ಲ. ಮೊದಲು ಅಲ್ಲಿ ನಡೆದಿರುವ ವಿರೋಧಕ್ಕೆ ಕಾರಣ ಹುಡುಕಿ ನಂತರ ಇಲ್ಲಿ ಏಕೆ ಅಂತಹ ವಾದ ವಿವಾದಗಳು ನಡೆದಿಲ್ಲ ಎನ್ನುವುದನ್ನು ಪರಿಶೀಲಿಸಬಹುದು.

ವೈಜ್ಞಾನಿಕ ಸಂಶೋಧನೆಯಿಂದ ಶೋಷಣೆಗೊಳಗಾದ ಮತ್ತೊಬ್ಬ ವಿಜ್ಞಾನಿ ಗೆಲಿಲಿಯೊ. ಗೆಲಿಲಿಯೊ ಸಂಶೋಧನೆಗಳನ್ನು ನಡೆಸುವವರೆಗೂ ಭೂಮಿಯ ಸುತ್ತ ಸೂರ್ಯ, ಗ್ರಹಗಳು, ನಕ್ಷತ್ರಗಳು ಸುತ್ತುತ್ತಿವೆ ಎಂಬ ಕಲ್ಪನೆ ಇತ್ತು. ಇದರಿಂದಾಗಿ ನಾವು ವಾಸಿಸುತ್ತಿರುವ ಭೂಮಿಯೇ ವಿಶ್ವದ ಕೇಂದ್ರವೆಂಬ ಬಲವಾದ ನಂಬಿಕೆಯಿತ್ತು. ಇದು ಸತ್ಯಕ್ಕೆ ದೂರವೆಂಬ ಸಂಗತಿ ಗೆಲಿಲಿಯೊ ನಡೆಸಿದ ಸಂಶೋಧನೆಗಳಿಂದ ತಿಳಿದುಬಂದಿತು. ಭೂಮಿ ತನ್ನ ಕೇಂದ್ರ ಸ್ಥಾನ ಕಳೆದುಕೊಂಡಿತು. ಸೂರ್ಯನ ಸುತ್ತ ಗ್ರಹಗಳು ಸುತ್ತುತ್ತವೆಂದು ಹೇಳಿದ್ದಕ್ಕಾಗಿ ಗೆಲಿಲಿಯೊ ಗೃಹಬಂಧನಕ್ಕೊಳಗಾಗಬೇಕಾಯಿತು. ಆದರೆ ಹಲವಾರು ದಶಕಗಳು ಕಳೆಯುತ್ತಿದ್ದಂತೆ ಅವರ ತೀರ್ಮಾನವನ್ನು ಸಾರ್ವತ್ರಿಕವಾಗಿ ಒಪ್ಪಕೊಳ್ಳಲಾಯಿತು. ನಾಲ್ಕು ನೂರು ವರ್ಷಗಳ ನಂತರದ ಈ ದಿನದಲ್ಲಿ ಗೆಲಿಲಿಯೋ ನಡೆಸಿದ ಸಂಶೋಧನೆಗಳಿಗೆ ಸಲ್ಲಬೇಕಾದ ಗೌರವ ಸಂದಿದೆ. ಆದರೆ ೧೫೦ ವರ್ಷಗಳ ನಂತರವೂ ಡಾರ್ವಿನ್ನರ ವಿಕಾಸವಾದವನ್ನು ವಿರೋಧಿಸುವವರು ಅನೇಕರಿದ್ದಾರೆ. ಮಡಿವಂತ ಕ್ರಿಶ್ಚಿಯನ್ನರಿಗೆ ವಿಕಾಸವಾದ ಹಿಡಿಸುವುದಿಲ್ಲ. ಬೈಬಲ್ಲಿನ ಪ್ರಕಾರ ಮಾನವ ಕುಲ ದೇವರು ಸೃಷ್ಟಿಸಿದ ಅಡಮ್, ಈವ್ ದಂಪತಿಗಳಿಂದ ಪ್ರಾರಂಭವಾಯಿತು. ಅಲ್ಲಿಂದ ಪ್ರತಿ ಸಂತತಿಯ ಜೀವಿತಾವಧಿ ಬೈಬಲ್ಲಿನ ಹಳೆ ಒಂಡಂಬಡಿಕೆಯಲ್ಲಿ ದೊರೆಯುತ್ತದೆ. ಈ ಕಾಲವನ್ನೆಲ್ಲಾ ಸೇರಿಸಿದರೆ, ಮನುಕುಲ ೧೦ ಸಾವಿರ ವರ್ಷಗಳಿಂದ ಈಚೆಗಷ್ಟೇ ಹುಟ್ಟಿಕೊಂಡಿದೆ ಎಂಬ ತೀರ್ಮಾನಕ್ಕೆ ಬರುತ್ತೇವೆ. ಭೂಮಿಯನ್ನು, ಸಕಲ ವಿಶ್ವವನ್ನು ದೇವರು ಏಳು ದಿನದಲ್ಲಿ ಸೃಷ್ಟಿಸಿದ ಎನ್ನುತ್ತದೆ ಬೈಬಲ್. ಭೂಮಿ ೫೦೦ ಕೋಟಿ ವರ್ಷಗಳಷ್ಟು ಹಳೆಯದು ಎನ್ನುತ್ತದೆ ವಿಜ್ಞಾನ. ಮನುಷ್ಯನನ್ನು ಅವನ ಇಂದಿನ ರೂಪದಲ್ಲೇ ದೇವರು ಸೃಷ್ಟಿಸಿದ ಎನ್ನುತ್ತದೆ ಬೈಬಲ್. ವಿಕಾಸವಾದದ ಪ್ರಕಾರ ಮಾನವ ಇತರ ಪ್ರಾಣಿ ಕುಲದಿಂದ ಇಳಿದುಬಂದಿದ್ದಾನೆ. ಮನುಷ್ಯನಿಗೂ, ಪ್ರಾಣಿಗಳಿಗೂ ಸೋದರ ಸಂಬಂಧವಿದೆ. ಗೆಲಿಲಿಯೋನ ಅನ್ವೇಷಣೆ, ಭೂಮಿಯನ್ನು ವಿಶ್ವದ ಕೇಂದ್ರದಿಂದ ಪಲ್ಲಟಗೊಳಿಸಿ ಅವನಿಗೆ ಪ್ರಾಣಿಕುಲದ ಒಬ್ಬ ಸದಸ್ಯನ ಸ್ಥಾನವನ್ನು ಮಾತ್ರ ಕೊಟ್ಟಿತು. ಇದೆಲ್ಲ ಕೆಲ ಮತಾಂಧರಿಗೆ ಸಹ್ಯವಾಗಲಿಲ್ಲ.

ವಿಜ್ಞಾನವನ್ನೂ, ಮತಧರ್ಮವನ್ನೂ ಹೇಗೆ ಒಂದುಗೂಡಿಸಬೇಕು? ಬೈಬಲ್ಲಿನಲ್ಲಿರುವುದನ್ನು ಅಕ್ಷರಶಃ ಸತ್ಯ ಎಂದು ಭಾವಿಸಬೇಕೆ, ಇಲ್ಲವೆ? ಒಂದು ಸಾಂಕೇತಿಕವೇ? ಅಲ್ಲಿ ಉಲ್ಲೇಖಿಸಿರುವ ದೇವರ ಒಂದು ದಿನ ನಮ್ಮ ಕೋಟಿ ವರ್ಷಗಳಾಗಬಾರದೇಕೆ? ಬ್ರಹ್ಮನ ನೂರು ವರ್ಷಗಳು ನಾಲ್ಕು ಯುಗಗಳಿಗೆ ಸಮನಾಗಿ, ಬ್ರಹ್ಮ ನೂರು ತಲುಪುತ್ತಿದ್ದಂತೆ ಪ್ರಳಯವಾಗುತ್ತದೆ ಎಂದು ಕೇಳಿದ್ದೇವಲ್ಲ. ಹಾಗೆಯೇ, ದೇವರ ಏಳು ದಿನಗಳು ಭೂಮಿಯ ವಿಕಾಸಕ್ಕೆ ವಿಜ್ಞಾನ ಕೊಡುತ್ತಿರುವ ಮಿತಿಯೇ ಇರಬಹುದಷ್ಟೆ? ಈ ರೀತಿಯ ತರ್ಕದಿಂದ ಕೆಲವರು ಸಮಾಧಾನ ಹೊಂದುತ್ತಾರೆ. ಮತ್ತೆ ಕೆಲವರಿಗೆ ಅಂತಹ ತರ್ಕ ಬೇಕಾಗಿಲ್ಲ. ಇಲ್ಲವೇ ಸಾಕಾಗುವುದಿಲ್ಲ. ಹೇಗಾದರೂ ಮಾಡಿ ವಿಕಾಸವಾದವನ್ನೇ ತಪ್ಪು ಎಂದು ತೋರಿಸಿಬಿಟ್ಟರೆ ಸಮಸ್ಯೆಯೇ ಇರುವುದಿಲ್ಲ ಎನ್ನುವುದು ಅವರ ಆಶಯ. ಆದ್ದರಿಂದಲೇ ಡಾರ್ವಿನ್ನರ ಪುಸ್ತಕ ಪ್ರಕಟವಾಗುತ್ತಿದ್ದಂತೆ ಪ್ರತಿಭಟನೆಗಳ ಸುರಿಮಳೆಯೇ ಪ್ರಾರಂಭವಾಯಿತು. ಹಾಗೆಯೇ, ವಿಕಾಶವಾದದ ವಿರುದ್ಧ ವ್ಯಕ್ತವಾದ ಪ್ರತಿಭಟನೆಯ ಪ್ರತಿಯಾಗಿ ಕೆಲವಿಜ್ಞಾನಿಗಳು ಅದರ ಬೆಂಬಲಕ್ಕೆ, ಸಮರ್ಥನೆಗೆ ನಿಂತರು. ವಿಲ್ಫೋರ್ಸ್ ಎಂಬ ಹೆಸರಿನ ಪಾದ್ರಿ ಡಾರ್ವಿನ್ನನ ವಿಕಾಸವಾದವನ್ನು ಬಹಳ ಹೀಯಾಳಿಸುತ್ತಿದ್ದರು. ಸಮರ್ಥನೆಗೆ ನಿಂತ ಹೆಸರಾಂತ ವಿಜ್ಞಾನಿ ಥಾಮಸ್ ಹಕ್ಸ್‌ಲೀ ಎಂಬುವವರು. ಒಮ್ಮೆ ಹಕ್ಸ್‌ಲೀ ಹಾಗೂ ವಿಲ್ಫೋರ್ಸ್ ನಡುವೆ ಸಾರ್ವಜನಿಕ ಚರ್ಚೆ ನಡುವೆ ವಿಲ್ಫೋರ್ಸ್ ಹಕ್ಸ್‌ಲೀಯವರನ್ನು “ನೀವು ಕೋತಿಗಳ ಜಾತಿಯಲ್ಲಿ ಹುಟ್ಟಿದ್ದು ನಿಮ್ಮ ಅಜ್ಜಿಯ ಕಡೆಯಿಂದಲೋ, ಅಜ್ಜನ ಕಡೆಯಿಂದಲೋ” ಎನ್ನುವ ಅರ್ಥ ಬರುವ ಮಾತಿನಿಂದ ಚುಚ್ಚಿದರು. ಹಕ್ಸ್‌ಲೀ ಅದಕ್ಕೆ ಮಾರ್ಮಿಕವಾಗಿ “ಇಬ್ಬರ ಕಡೆಯೂ ವಾನರ ಜಾತಿಯಾದರೂ ಚಿಂತೆಯಿಲ್ಲ. ಮನುಷ್ಯನಿಗೆ ಸಹಜವಾಗಿರುವ ಬುದ್ಧಿಮತ್ತೆಯನ್ನು ಸತ್ಯದಿಂದ ನುಣುಚಿಕೊಳ್ಳಲು ಬಳಸುವ ಅಭ್ಯಾಸವಿರುವವರ ಮನೆತನ ಆಗಿರದಿದ್ದರೆ ಸಾಕು” ಎಂದು ಮರುಚುಚ್ಚಿದರು. ನಂತರದ ದಿನಗಳಲ್ಲಿ ವಿಕಾಸವಾದವನ್ನು ತಪ್ಪೆಂದು ತೋರಿಸಲು ಹರಸಾಹಸ ನಡೆದಿದೆ. ವಿಜ್ಞಾನದಲ್ಲಿ ಸಾಧಾರಣವಾಗಿ ಯಾವುದೇ ಪ್ರಕೃತಿ ನಿಯಮಗಳ ಸತ್ಯ ಕಂಡುಕೊಳ್ಳಲು ಪ್ರಯೋಗಗಳನ್ನು ಮಾಡುತ್ತೇವೆ. ಉದಾಹರಣೆಗೆ, ಹೈಡ್ರೋಜನ್ (ಜಲಜನಕ) ಮತ್ತು ಆಕ್ಸಿಜನ್ (ಆಮ್ಲಜನಕ) ಸೇರಿ ಉರಿದಾಗ ನೀರು ದೊರೆಯುತ್ತದೆಂದು ರಸಾಯನ ವಿಜ್ಞಾನ ಹೇಳುತ್ತದೆ. ಇದರ ಸತ್ಯವನ್ನು ಯಾರು ಬೇಕಾದರೂ, ಎಲ್ಲಿ ಬೇಕಾದರೂ ಪ್ರಯೋಗ ನಡೆಸಿ ಕಂಡುಕೋಲ್ಳಬಹುದು. ಇಂತಹ ಪ್ರಯೋಗಗಳಿಂದ ವಿಕಾಸವಾದದ ಪರೀಕ್ಷೆ ನಡೆಸುವುದು ಅಸಾಧ್ಯ. ಏಕೆಂದರೆ ಜೀವವಿಕಾಸವು ೩೦೦ ಕೋಟಿ ವರ್ಷಗಳ ಪ್ರಯೋಗ ಮಾಡುವುದು ಸಾಧ್ಯವಿಲ್ಲ. ವಿಕಾಸವಾದ ಸರಿಯೋ, ತಪ್ಪೋ ಎಂಬುದನ್ನು ವೈಜ್ಞಾನಿಕ ಮಾರ್ಗದಿಂದ ಪರೀಕ್ಷೆ ಮಾಡುವುದು ಸಾಧ್ಯವಿಲ್ಲ. ಆದ್ದರಿಂದ ವಿಕಾಸವಾದ ಅವೈಜ್ಞಾನಿಕ” ಎಂದು ವಾದಿಸುವುದು ವಿಕಾಸವಾದವನ್ನು ಸುಳ್ಳಾಗಿಸುವ ಇಂತಹ ಒಂದ ಪ್ರಯತ್ನ. ಈ ಅಂಶವನ್ನೇ ಮುಖ್ಯವಾಗಿಟ್ಟುಕೊಂಡು ೧೯೨೫ರಲ್ಲಿ ಕೆಲಜನ ಜೀವವಿಕಾಸವನ್ನು ನಮ್ಮ ಮಕ್ಕಳಿಗೆ ಶಾಲೆಗಳಲ್ಲಿ ಬೋಧಿಸಬಾರದು ಎಂದು ನ್ಯಾಯಾಲಯದ ಕಟ್ಟೆ ಹತ್ತಿದರು. ನ್ಯಾಯಾಲಯದಿಂದ ನಡೆದ ವಾದ ವಿವಾದಗಳು “ಸ್ಕೋಪನ ಜಗಳ” ಎಂದು ಪ್ರಸಿದ್ಧಿಯಾಗಿವೆ. ಜೀವವಿಕಾಸ ವೈಜ್ಞಾನಿಕವಲ್ಲ, ದೈವಸೃಷ್ಟಿಯೇ ಮನುಷ್ಯನ ಅಸ್ತಿತ್ವಕ್ಕೆ ಕಾರಣ. ಜೀವವಿಕಾಸವನ್ನು ಬೋಧಿಸುವುದು ಮಕ್ಕಳ ನೈತಿಕತೆಯನ್ನು ಕೆಡಿಸುತ್ತದೆ. ಆದ್ದರಿಂದ ಜೀವವಿಕಾಸವನ್ನು ಬೋಧಿಸಬಾರದು ಎಂಬ ವಾದವನ್ನು ಮುಂದಿಟ್ಟರು. ಹಾಗೆ ಬೋಧಿಸಿದ್ದೇ ಆದರೆ, ಅದಕ್ಕೆ ಕೊಟ್ಟಷ್ಟೇ ಪ್ರಾಮುಖ್ಯತೆಯನ್ನು ಮಾನವನ ಉಗಮಕ್ಕೆ ದೈವಸೃಷ್ಟಿಯೇ ಕಾರಣ ಎಂಬ ಕಲ್ಪನೆಗೂ ಕೊಡಬೇಕು ಎಂದು ವಾದಿಸಿದರು. ವಿಜ್ಞಾನಿಗಳೂ ನ್ಯಾಯಾಲಯದಲ್ಲಿ ವಿಕಾಸವಾದವನ್ನು ಸಮರ್ಥಿಸಿಕೊಳ್ಳಬೇಕಾಯಿತು. ಜೀವವಿಕಾಸಕ್ಕಿರುವ ವೈಜ್ಞಾನಿಕ ಆಧಾರಗಳನ್ನೆಲ್ಲಾ ಪ್ರದರ್ಶಿಸಬೇಕಾಯಿತು. ಅಂತಿಮ ತೀರ್ಮಾನ ವಿಜ್ಞಾನಿಗಳ ಕಡೆಗೇ ಆಯಿತು. ನಂತರದ ದಶಕಗಳಲ್ಲಿ ಪದೇ ಪದೇ ಜೀವ ವಿಕಾಸದ ವಿರುದ್ಧೇ ನ್ಯಾಯಾಲಯಕ್ಕೆ ಇಳಿಯುವುದು, ಜೀವವಿಕಾಸದ ಬೋಧನೆಗೆ ತೊಡಕುಂಟು ಮಾಡುವುದು ಮುಂತಾದ ಚಟುವಟಿಕೆಗಳು ಅಮೆರಿಕಾದ ಹಲವಾರು ರಾಜ್ಯಗಳಲ್ಲಿ ನಡೆದೇ ಇದೆ. ೨೧ನೆಯ ಶತಮಾನದಲ್ಲೇ (೨೦೦೦-೨೦೦೯) ಐದು ಬಾರಿ ವಿಜ್ಞಾನಿಗಳು ನ್ಯಾಯಾಲಯದಲ್ಲಿ ವಾದಿಸುವುದು ಅನಿವಾರ್ಯ ಎನಿಸಿದೆ. ಕೆಲವು ರಾಜ್ಯಗಳಲ್ಲಿ ವಿಕಾಸವಾದದ ಬೋಧನೆಗೆ ತಾತ್ಕಾಲಿಕವಾಗಿ ಮಿತಿಗಳನ್ನು ಹಾಕಲಾಗಿದೆ. ಆದರೆ ವಿಜ್ಞಾನಿಗಳು ಇಂತಹ ತಡೆಗಳನ್ನು ತೆರವುಗೊಳಿಸಿದ್ದಾರೆ.

ದೈವಸೃಷ್ಟಿ ವಾದವನ್ನು ನಂಬಿದವರು ಇತ್ತೀಚೆಗೆ ಅದರ ವಿಷಯ ನೇರವಾಗಿ ಎತ್ತಿದರೆ ನ್ಯಾಯಾಲಯಗಳು ಮನ್ನಣೆ ನೀಡವು ಎಂಬುದನ್ನು ಮನಗಂಡು, ಬೇರೊಂದು ದಾರಿಯಿಂದ ವಿಕಾಸವಾದವನ್ನು ತಳ್ಳಿಹಾಕುವ ಹೊಂಚು ಹಾಕುತ್ತಿದ್ದಾರೆ. ದೈವಸೃಷ್ಟಿಯ ಹೆಸರೆತ್ತದೆ, ಅದರ ಜಾಗದಲ್ಲಿ “ಇಂಟಲಿಜೆಂಟ್ ಡಿಸೈನ್ – ಜಾಣ ರಚನೆ” ಎಂಬ ಕಲ್ಪನೆ ಭೂಮಿಯ ಮೇಲಿನ ಜೀವವ್ಯಾಪಾರವನ್ನು ಅರಿಯಲು ಡಾರ್ವಿನ್ನನ ವಿಕಾಸವಾದಕ್ಕಿಂತ ಹೆಚ್ಚು ಸೂಕ್ತ ಎಂದು ವಾದಿಸಲು ಪ್ರಾರಂಭ ಮಾಡಿದ್ದಾರೆ. ಹೊಸ ವಾದದ ತಿರುಳಿಷ್ಟು : ಸಹರಾ ಮರುಭೂಮಿಯಲ್ಲಿ ಭೋರಿಡುವ ಗಾಳಿಯಿಂದಲೇ ಗಡಿಯಾರ ಹುಟ್ಟಿ ಬಂದಿದೆಯೆಂದು ನಾವೇನೂ ನಂಬುವುದಿಲ್ಲ. ಬದಲಿಗೆ, ಅಲ್ಲಿಂದ ಹಾದುಹೋದ ಪ್ರಯಾಣಿಕ ಇನ್ನೊಬ್ಬ ಜಾಣ ಮಾಡಿದ ಗಡಿಯಾರವನ್ನು ಅಲ್ಲಿ ಬಿಟ್ಟು ಹೋಗಿರಬಹುದು ಎಂದುಕೊಳ್ಳುತ್ತೇವೆ. ಒಂದಾನೊಂದು ಕಾಲದಲ್ಲಿ ಭೂಮಿಯಲ್ಲಿ ಬರಿಯ ಭೋರಿಡುವ ಗಾಳಿಯೇ ಇದ್ದಿತು ಎಂದು ವಿಜ್ಞಾನವೇ ಹೇಳುತ್ತದೆ. ಈ “ಮರುಭೂಮಿಯ ಭೋರಿಡುವ ಗಾಳಿಯೇ” ಗಡಿಯಾರಕ್ಕಿಂತಲೂ ಲಕ್ಷಾಂತರ ಪಟ್ಟು ಸಂಕೀರ್ಣವಾದ ಮನುಷ್ಯನ ಸೃಷ್ಟಿಯನ್ನು ಹೇಗೆ ತಾನೇ ಮಾಡೀತು? ಇದು ಎಂದಿಗೂ ಸಾಧ್ಯವಿಲ್ಲ. ಮನುಷ್ಯನಂತಹ ಬುದ್ದಿಜೀವಿಯ ಉಗಮಕ್ಕೆ ಅನಂತ ಜಾಣತನವುಳ್ಳ ಬೇರೊಂದು ಶಕ್ತಿ ಬೇಕಾಗುತ್ತದೆ. ಇದನ್ನೇ “ಇಂಟೆಲಿಜೆಂಟ್ ಡಿಸೈನ್” ಎಂದು ಕರೆಯೋಣ. ಅದೇ ಜೀವವಿಕಾಸದ ಗುಟ್ಟು, ಡಾರ್ವಿನ್ನನ ವಿಕಾಸವಾದದಿಂದ ಜೀವಿಗಳ ಉಗಮವನ್ನು ವಿವರಿಸಲು ಸಾಧ್ಯವಿಲ್ಲ ಎನ್ನುವುದು ಇವರ ವಾದ. ಮೈಕೇಲ್ ಬೇಹೆ ಎಂಬ ಹೆಸರಾಂತ ಜೀವರಸಾಯನ ವಿಜ್ಞಾನಿ ವಿಕಾಸವಾದವನ್ನು ಖಂಡಿಸಿ ‘ಡಾರ್ವಿನ್ನನ ಕಪ್ಪು ಪೆಟ್ಟಿಗೆ’ (ಡಾರ್ವಿನ ಬ್ಲಾಕ್ ಬಾಕ್ಸ್) ಎಂಬ ಪುಸ್ತಕ ಬರೆದ. ಇಲ್ಲಿಯವರೆಗೆ ವಿಕಾಸವಾದದಲ್ಲಿ ಬಂದಿರುವ ಎಲ್ಲ ಅಂಶಗಳನ್ನೂ ವಿರೋಧಿಸಿ ಅವುಗಳು ವಿಶ್ವಾಸಾರ್ಹವಲ್ಲ ಎಂದು ತೋರಿಸುವುದೇ ಈ ಪುಸ್ತಕದ ಉದ್ದೇಶ. ಬಳಸುವ ವಿಧಾನಗಳೆಲ್ಲಾ ವಿಜ್ಞಾನದ ಅಂಗೀಕೃತ ಪ್ರಕ್ರಿಯೆ ಎಂಬಂತೆ ಕಾಣಬೇಕು. ತೀರ್ಮಾನ ವಿಕಾಸವಾದದ ವಿರೋಧ ಇರಬೇಕು.

ಬೇಹೆ ಅವರ ಪುಸ್ತಕದಲ್ಲಿ ವಿಕಾಸವಾದದ ವಿರುದ್ಧ ಇರುವ ಮುಖ್ಯ ಆಕ್ಷೇಪ ಜೀವಿಗಳಲ್ಲಿ ಕಂಡುಬರುವ ಅತಿ ಸಂಕೀರ್ಣ ವ್ಯವಸ್ಥೆಗಳು ಸಣ್ಣ ಸಣ್ಣ ಹೆಜ್ಜೆಗಳಲ್ಲಿ ಬದಲಾಗುವ ವಿಕಾಸದಿಂದ ಸಾಧ್ಯವಿಲ್ಲ ಎನ್ನುವುದು. ಉದಾಹರಣೆಗೆ, ನಮ್ಮ ಕಣ್ಣುಗಳನ್ನೇ ತೆಗೆದುಕೊಳ್ಳಿ. ಕಣ್ಣು ಕೆಲಸ ಮಾಡಬೇಕಾದರೆ ಪಾರದರ್ಶಕ ಕಣ್ಣುಗಡ್ಡೆಯಂತಹ ಮಸೂರವಿರಬೇಕು. ಅದರ ಹಿಂದೆ ಬೆಳಕಿಗೆ ಸ್ಪಂದಿಸುವ ರೆಟಿನ ಪೊರೆಯಿರಬೇಕು. ರೆಟಿನ ಪೊರೆಯಿಂದ ಮೆದುಳಿಗೆ ಸಂದೇಶ ಕೊಂಡೊಯ್ಯುವ ನರವ್ಯೂಹವಿರಬೇಕು. ತಲುಪಿರುವ ಸಂದೇಶವನ್ನು ಹೊರಪ್ರಪಂಚದ ಪ್ರತಿಬಿಂಬವಾಗಿ ಕಾಣುವಂತೆ ಮಾಡುವ ಜಾಣತನ ಮೆದುಳಿರಬೇಕು. ಈ ವ್ಯವಸ್ಥೆಗಳೆಲ್ಲಾ ಒಟ್ಟಾರೆ ಕೆಲಸ ಮಾಡುತ್ತಿದ್ದರೆ ಮಾತ್ರ ನಮಗೆ ‘ನೋಡಲು’ ಸಾಧ್ಯವಾಗುತ್ತದೆ. ಇಷ್ಟೆಲ್ಲ  ವ್ಯವಸ್ಥೆಗಳು ಒಮ್ಮೆಲೇ, ಒಟ್ಟಿಗೇ ವಿಕಾಸವಾಗುವ ಸಾಧ್ಯತೆ ಬಹಳ ಕಡಿಮೆ. ಒಂದಾದ ನಂತರ ಒಂದು ವ್ಯವಸ್ಥೆ ಕಾಣಿಸಿತು ಎನ್ನೋಣ. ಮೊದಲ ವ್ಯವಸ್ಥೆ ಕಾಣಿಸಿದ ಮಾತ್ರಕ್ಕೆ ಕಾರ್ಯಶಕ್ತ ಕಣ್ಣುಗಳು ಬರುವುದಿಲ್ಲ.

ಆದ್ದರಿಂದ, ಮೊದಲು ಆದ ಬದಲಾವಣೆಯಿಂದ ಉಪಯೋಗವಾಗುವುದಿಲ್ಲ. ಯಾವುದೇ ಉಪಯೋಗ ಇಲ್ಲದುದರಿಂದ ಅಂತಹ ಬದಲಾವಣೆಗಳನ್ನು ಹೊಂದಿದ ಪ್ರಾಣಿಗಳಿಗೆ ಯಾವುದೇ ಅನುಕೂಲವಾಗುವುದಿಲ್ಲ. ಪ್ರಕೃತಿ ಅದರ ಸಂತಾನವನ್ನು ವಿಶೇಷವಾಗಿ ಆಯ್ಕೆ ಮಾಡುವುದಿಲ್ಲ. ಆದ್ದರಿಂದ ಅದರ ವಂಶ ಬೆಳೆಯಲಾರದು. ಆಗ ಆಕಸ್ಮಿಕವಾಗಿ ಉಂಟಾದ ಬದಲಾವಣೆ ಮುಂದಿನ ಸಂತತಿಗಳಿಗೆ ಹರಡದಿರಬಹುದು. ಇನ್ನೂ ಆಗಬೇಕಿರುವ ಬದಲಾವಣೆಗಳು ಆಕಸ್ಮಿಕವಾಗಿ ಸಂಭವಿಸುವುದಕ್ಕಿಂತ ಮೊದಲೇ ಮೊದಲ ಬದಲಾವಣೆ ಹೊಂದಿದ ಪ್ರಾಣಿ ನಶಿಸಿರುತ್ತದೆ ಇಲ್ಲವೇ ಮೊದಲು ಉಂಟಾದ ಬದಲಾವಣೆ ಪುನಃ ಬದಲಾಗಿ ನಿರುಪಯುಕ್ತವಾಗಿರುತ್ತದೆ. ಆದ್ದರಿಂದ ಕಣ್ಣುಗಳು ‘ಜಾಣ ರಚನೆಗೆ’ ಪುರಾವೆಯೇ ಹೊರತು ಜೀವವಿಕಾಸಕ್ಕಲ್ಲ. ಕಣ್ಣುಗಳು ಒಮ್ಮೆಗೇ ಅವು ಈಗಿರುವಂತೆಯೇ ಸೃಷ್ಟಿಯಾಗಿರಬೇಕು. ಡಾರ್ವಿನ್ನರ ವಿಕಾಸವಾದ ಹೇಳುವತೆ ಸಣ್ಣ ವ್ಯತ್ಯಾಸಗಳು ಸೇರಿಕೊಳ್ಳುವುದರಿಂದ ಕಣ್ಣುಗಳು ಅವತರಿಸಲು ಸಾಧ್ಯವಿಲ್ಲ. ಇದು ಬೇಹೆಯವರ ವಾದ.

ಬೇಹೆಯವರ ವಾದಕ್ಕೆ ಪ್ರತ್ಯುತ್ತರವನ್ನು ಇತರರು ಕೊಟ್ಟಿದ್ದಾರೆ. ಅರ್ಧ ಮೂಡಿದ ಕಣ್ಣು ನಿರುಪಯುಕ್ತ ಎನ್ನುವುದು ಸ್ವತಃಸಿದ್ಧವಲ್ಲ. ಅರೆ ಕುರುಡು ಕಣ್ಣಿರುವುದೂ ಪೂರ್ಣ ಕುರುಡು ಕಣ್ಣಿಗಿಂತ ಉತ್ತಮವಲ್ಲವೇ ? ಪ್ರಕೃತಿಯಲ್ಲಿ ಅನೇಕ ಮಾದರಿಯ ಕಣ್ಣುಗಳು ಬೇರೆ ಬೇರೆ ಪ್ರಾಣಿಗಳಲ್ಲಿ ಕಂಡುಬರುತ್ತವೆ. ಕೆಲವು ಪ್ರಾಣಿಗಳಲ್ಲಿ ಕಣ್ಣುಗಳಿಲ್ಲ. ಬದಲಿಗೆ ಬೆಳಕಿಗೆ ಸ್ಪಂದಿಸುವ ಭಾಗವಿದೆ. ಈ ಭಾಗವೇ ಅವು ಬದುಕುವ ಸಾಧ್ಯತೆಯನ್ನು ಹೆಚ್ಚಿಸುತ್ತದೆ. ಮನುಷ್ಯರ ಕಣ್ಣುಗಳಿಗಿಂತ ಸೂಕ್ಷ್ಮವಾದ, ರಾತ್ರಿಯಲ್ಲೂ ಬೇಟೆಯಾಡಲು ಸಾಧ್ಯವಿರುವ ಕಣ್ಣುಗಳನ್ನು ಹೊಂದಿರುವ ಪ್ರಾಣಿಗಳಿವೆ. ಕಣ್ಣುಗಳೇ ಇಲ್ಲದ ಪ್ರಾಣಿಗಳಿಂದ ಪ್ರಾರಂಭಿಸಿ, ಅತಿಸೂಕ್ಷ್ಮ ಕಣ್ಣುಗಳವರೆಗೆ ಎಲ್ಲ ಹಂತದ ಕಣ್ಣುಗಳೂ ಪ್ರಕೃತಿಯಲ್ಲಿ ಕಂಡುಬರುತ್ತವೆ. ಆದ್ದರಿಂದ ಕಣ್ಣಿನ ವಿಕಾಸ ಜೀವವಿಕಾಸವಾದದ ನಿಯಮಗಳ ಅಡಿಯಲ್ಲೇ ನಡೆದಿದೆಯೆಂದು ತೀರ್ಮಾನಿಸಬಹುದು. ಜೊತೆಗೆ ಮನುಷ್ಯರ ಕಣ್ಣುಗಳೇನೂ ‘ಅರಿ ಚತುರ’ ರಚನೆಗಳಲ್ಲ. ಅವುಗಳಲ್ಲಿ ರಕ್ತನಾಳಗಳಿವೆ. ಇದರಿಂದ ಅನೇಕ ಬಾರಿ ರಕ್ತಸ್ರಾವವಾಗಿ ಕಣ್ಣುಗಳಿಗೆ ಹಾನಿಯಾಗುವ ಸಂಭವವಿದೆ. ‘ಚತುರ ರಚನೆ’ ಆಗಿದ್ದಲ್ಲಿ ಇಂತಹ ತೊಂದರೆಗಳು ಇಲ್ಲದ ಕಣ್ಣುಗಳಿರಬಹುದಿತ್ತು.

ಕ್ರಿಶ್ಚಿಯಾನಿಟಿಯಂತೆ ಇಸ್ಲಾಂ ಸಹ ಜೀವವಿಕಾಸದ ವಿರುದ್ಧ ಸಮರ ಸಾರಿದೆ. ಕೊರಾನ್ ಕೂಡ ದೈವಸೃಷ್ಟಿಯನ್ನು ಸಮರ್ಥಿಸುತ್ತದೆ. ಅದರಲ್ಲಿಯ ಜೀವಸೃಷ್ಟಿಯ ನಂಬಿಕೆಗಳು ಕ್ರಿಶ್ಚಿಯನ್ ಮತದವೇ ಆಗಿವೆ. ಆದರೆ ಮುಸ್ಲಿಮ್ ದೇಶಗಳಲ್ಲಿ ಜೀವವಿಕಾಸವಾದದ ಆಳ ಪರಿಚಯ ಇಲ್ಲದುದರಿಂದ ವಿರೋಧದ ಧ್ವನಿ ಕ್ಷೀಣವಾಗಿದೆ. ಇತ್ತೀಚೆಗೆ ‘ಹಾರುಣ್‌ಯಾಹ್ಯ’ ಎಂಬ ಹೆಸರಿನಲ್ಲಿ ಬರೆಯುತ್ತಿರುವ ಒಬ್ಬರು, ಡಾರ್ವಿನ್ನರ ವಿರುದ್ಧ ಕಿಡಿಕಾರಿದ್ದಾರೆ. ಡಾರ್ವಿನ್‌ವಿಕಾಸವಾದ ಅಪಾಯಕಾರಿ, ಅದರಿಂದ ಸಮಾಜದಲ್ಲಿ ನೈತಿಕತೆ ಭ್ರಷ್ಟವಾಗುತ್ತದೆ, ಇವೇ ಮುಂತಾದ ಅನೇಕ ಆರೋಪಗಳನ್ನು ಮಾಡಿದ್ದಾರೆ. ಈ ಚಿಂತನೆಗಳ ಬಗ್ಗೆ ಹಲವಾರು ಪುಸ್ತಕಗಳನ್ನು ಪ್ರಕಟಿಸಿದ್ದಾರೆ.

ವಿಕಾಸವಾದವನ್ನು ತಿರುಚಿ, ಅದಕ್ಕಿರುವ ಅರ್ಥವನ್ನು ಅದರ ಮೇಲೆ ಆರೋಪಿಸಿ, ತಮ್ಮ ಸ್ವಂತ ದುರಾಲೋಚನೆಗೆ ಅದರಿಂದ ಉತ್ತೇಜನ ಪಡೆಯುವವರಿಂದಲೂ ವಿಕಾಸವಾದಕ್ಕೆ ಅಪಖ್ಯಾತಿ ಬಂದಿದೆ. ಈ (ಕು)ತರ್ಕಗಳನ್ನು (ಯೂಜೆನಿಕ್ಸ್) ಅಥವಾ ‘ಮಾನವ ತಳಿ ಅಭಿವೃದ್ಧಿ’ ಎಂಬ ಹೆಸರಿನಲ್ಲಿ ಮುಂದಿಡಲಾಗಿದೆ. ಈ ದಾರಿಯಲ್ಲಿ ಯೋಚಿಸಿದ ಮೊದಲಿಗರಲ್ಲೊಬ್ಬ ಡಾರ್ವಿನ್ನನ ಸೋದರ ಸಂಬಂಧಿಯಾದ ಗಾಲ್ಟನ್ ಎನ್ನುವವರು. ಕೃಷಿಯಲ್ಲಿ ಹೆಚ್ಚು ಇಳುವರಿ ಕೊಡುವ ತಳಿಗಳನ್ನು ಅಭಿವೃದ್ಧಿಪಡಿಸಿರುವಂತೆ ಮಾನವ ತಳಿಯನ್ನೂ ಉತ್ತಮಗೊಳಿಸಬೇಕು ಎನ್ನುವುದು ಇವರ ಹಂಬಲ. “ಡಾರ್ವಿನ್ನನ ವಿಕಾಸವಾದ ಬಲಿಷ್ಠ ಪ್ರಾಣಿಯ ಉಳಿವು ಸಹಜ ಎನ್ನುತ್ತದೆ. ಆದ್ದರಿಂದ ಆನುವಂಶಿಕ ರೋಗಗಳು ಅಥವಾ ದಡ್ಡತನವಿರುವ ಜನರಿಗೆ ಸಂತಾನ ಪಡೆಯುವ, ತಮ್ಮ ವಂಶವಾಹಿ ಮಾಹಿತಿಯನ್ನು ಇನ್ನೊಂದು ಪೀಳಿಗೆಗೆ ವರ್ಗಾಯಿಸುವ ಹಕ್ಕನ್ನು ಕೊಡದಿರುವುದು ನ್ಯಾಯಸಮ್ಮತ” ಎನ್ನುವುದು ಇವರ ವಾದ. ಇಂತಹ ಕರ್ತವೇ ಕೆಲವು ದೇಶಗಳಲ್ಲಿ, ಅದರಲ್ಲಿ ಅಮೆರಿಕಾದ ಸಂಯುಕ್ತ ಸಂಸ್ಥಾನದಲ್ಲಿ, ಕೆಲ ಪದ್ಧತಿಗಳು ಜಾರಿಗೆ ಬರಲು ಕಾರಣವಾಯಿತು. ಇದರಿಂದಾಗಿ, ‘ಬುದ್ಧಿಮಾಂದ್ಯ’ ಎಂದು ಪರಿಗಣಿಸಿದ ಕೆಲವರನ್ನು ಬಲವಂತವಾಗಿ ಸಂತಾನಹರಣ ಚಿಕಿತ್ಸೆಗೆ ಒಳಪಡಿಸಲಾಯಿತು. ಇಂತಹ ಸಂತಾನಹರಣ ಚಿಕಿತ್ಸೆಗೆ ಒಳಗಾದ ಹೆಚ್ಚಿನವರು ಕಪ್ಪುವರ್ಣದವರಾಗಿದ್ದರು. ಈ ಯೋಚನಾ ಲಹರಿಯ ಅತಿದೊಡ್ಡ ಪ್ರಯೋಗ ಮಾಡಿದವನು ಹಿಟ್ಲರ್. ಜರ್ಮನ್ ಜನಾಂಗ ಉಳಿದ ಜನಾಂಗಗಳಿಗಿಂತ ಮೇಲು, ಇನ್ನೆಲ್ಲಾ ಜನರೂ ಜರ್ಮನ್ನರ ಅಡಿಯಲ್ಲಿ ಬದುಕಬೇಕು ಎನ್ನುವುದು ಹಿಟ್ಲರ್‌ನಿಗೆ ನ್ಯಾಯಸಮ್ಮತವಾಗಿ ಕಂಡಿತು. ಇವರೆಲ್ಲ ತಮ್ಮ ದುರಾಲೋಚನೆಗಳನ್ನು ಡಾರ್ವಿನ್ನರ ವಿಕಾಸವಾದದಿಂದ ಸಮರ್ಥಿಸಿಕೊಂಡರು. ಇತ್ತೀಚೆಗೆ, ಅಮೆರಿಕಾದಲ್ಲಿ ನೊಬೆಲ್ ಪಾರಿತೋಷಕ ಪಡೆದ ಒಬ್ಬ ವಿಜ್ಞಾನಿ, ನೊಬೆಲ್ ಪ್ರಶಸ್ತಿ ವಿಜೇತರ ವೀರ್ಯಾಣು ಬ್ಯಾಂಕ್ ಪ್ರಾರಂಭಿಸಿದರು. ಅತ್ಯಂತ ಮೇಧಾವಿ ಮತ್ತು ಸದೃಢ ದೇಹ ಹೊಂದಿದ ಸ್ತ್ರೀಯರು ಈ ವೀರ್ಯ ಪಡೆದು ಮಕ್ಕಳಿಗೆ ಜನ್ಮ ಕೊಟ್ಟರೆ, ‘ಮಾನವ ತಳಿ’ ಅಭಿವೃದ್ಧಿಯಾಗುತ್ತದೆ ಎನ್ನುವುದು ಇವರ ಅಭಿಪ್ರಾಯ. ಇಂತಹ ತರ್ಕಗಳಿಗೂ ಡಾರ್ವಿನನ ವಿಕಾಸವಾದಕ್ಕೂ ಯಾವುದೇ ಸಂಬಂಧವಿಲ್ಲ. ಎಲ್ಲ ವೈಜ್ಞಾನಿಕ ನಿಯಮಗಳಂತೆ ವಿಕಾಸವಾದವೂ ನೈತಿಕವಾಗಿ ತಟಸ್ಥ. ಅದು ಜೀವವಿಕಾಸ ನಡೆದು ಬಂದ ದಾರಿಯ ವಿವರಣೆ ಮಾತ್ರ. ಮುಂದೆ ಜೀವವಿಕಾಸ ಹೇಗಾಗಬೇಕು ಎನ್ನುವುದನ್ನು ಅದು ಹೇಳುವುದಿಲ್ಲ. ಭೂಮಿಯಲ್ಲು ಬದುಕುವ ಹಕ್ಕು ಯಾರು ಯಾರಿಗಿದೆ ಎನ್ನುವ ಪ್ರಶ್ನೆಯೂ ಜೀವವಿಕಾಸ ವಾದದ ಪರಿಧಿಯಲ್ಲಿ ಬರುವುದಿಲ್ಲ. ಅದು ನೈತಿಕ ಪ್ರಶ್ನೆಗಳಿಗೆ ಉತ್ತರ ಕೊಡಲಾರದು.

ನಮ್ಮ ದೇಶದಲ್ಲಿ ವಿಕಾಸವಾದ ಅಷ್ಟು ಟೀಕೆಗೆ ಗುರಿಯಾಗಿಲ್ಲ. ಇದಕ್ಕೆ ಹಲವಾರು ಕಾರಣಗಳನ್ನು ಸೂಚಿಸಬಹುದು : (೧) ನಮ್ಮ ಶಾಲೆಗಳಲ್ಲಿ ಓದುವವರಿಗೆ ಅದರ ಬಗ್ಗೆ ಸ್ಪಷ್ಟ ಕಲ್ಪನೆಯಿಲ್ಲ. ನಮ್ಮ ಧಾರ್ಮಿಕ ಮುಖಂಡರಲ್ಲಿ ಹೆಚ್ಚಿನವರಿಗೆ ಡಾರ್ವಿನ್ನನ ವಿಕಾಸವಾದ ತಿಳಿದಿಲ್ಲ. ಜೊತೆಗೆ, ಸಂಗೀತ ಮತ್ತು ನೃತ್ಯಗಳು ನಮ್ಮ ಸಾಮಾಜಿಕ ಜೀವನದ ಅವಿಭಾಜ್ಯ ಅಂಗಗಳಾಗಿರುವಂತೆ, ವಿಜ್ಞಾನ ಆಗಿಲ್ಲ. ವಿಜ್ಞಾನ ನಮ್ಮ ಹಿತ್ತಲ ಕೂಸಲ್ಲ. ಇನ್ನೊಬ್ಬರ ಮನೆಯ ಕೂಸಿನ ಬಗ್ಗೆ ನಾವು ತಲೆಕೆಡಿಸಿಕೊಳ್ಳುವುದಿಲ್ಲ ಎನ್ನುವ ಧೋರಣೆ ಇದೆ. ನಮ್ಮ ಬದುಕಿನ ಸೊಗಡನ್ನು ಮೈಗೂಡಿಸಿಕೊಂಡಿರುವ ದೇಶಭಾಷೆಗಳಲ್ಲಿ ವಿಜ್ಞಾನದ ಮಾಹಿತಿ ದೊರೆಯುವುದಿಲ್ಲ. ಅದೇನಿದ್ದರೂ ನಮ್ಮದಲ್ಲದ ಇಂಗ್ಲಿಷಿಗೆ ಸೇರಿದ್ದು. ಪಾಶ್ಚಿಮಾತ್ಯ ದೇಶಗಳಲ್ಲಿ ನಡೆಸಿದ ಒಂದು ಸಮೀಕ್ಷೆಯ ಪ್ರಕಾರ ಅಲ್ಲಿಯ ಶೇ.೯೯ರಷ್ಟು ವಿಜ್ಞಾನಿಗಳು ಮನುಷ್ಯನು ದೈವಸೃಷ್ಟಿಯಲ್ಲ ಎಂದು ನಂಬುತ್ತಾರೆ. ಎರಡು ವರ್ಷಗಳ ಹಿಂದೆ ಅಂತಹುದೇ ಸಮೀಕ್ಷೆಯನ್ನು ಇಂಗ್ಲೆಂಡಿನ ಟ್ರಿನಿಟಿ ಕಾಲೇಜಿನವರು ನಮ್ಮ ದೇಶದಲ್ಲಿ ನಡೆಸಿದರು. ನಮ್ಮ ದೇಶದ ಶೇ. ೨೯ ರಷ್ಟು ವಿಜ್ಞಾನಿಗಳು ತಮಗೆ ಕರ್ಮಸಿದ್ಧಾಂತದಲ್ಲಿ ನಂಬಿಕೆ ಇರುವುದನ್ನೂ, ಶೇ. ೨೪ರಷ್ಟು ವಿಜ್ಞಾನಿಗಳು ತಾವು ಪುನರ್ಜನ್ಮವಿರುವುದನ್ನು ನಂಬುತ್ತೇವೆಂದೂ ಹೇಳಿಕೊಂಡರು. ಶೇ. ೯೩ರಷ್ಟು ವಿಜ್ಞಾನಿಗಳು ಜಾತ್ಯಾತೀತತೆ ಎಂದರೆ ಎಲ್ಲ ಧರ್ಮಗಳ ಸಹಿಷ್ಣುತೆ ಎಂದು ಹೇಳಿಕೊಂಡರು. ಕೆಲವೇ ಮಂದಿ ಜಾತ್ಯಾತೀತತೆ ಎಂದರೆ ನಾಸ್ತಿಕತೆ ಎಂಬುದಾಗಿ ಅಭಿಪ್ರಾಯ ಪಟ್ಟರು. ಇಂತಹ ಸಮೀಕ್ಷೆಗಳ ಫಲಿತಾಂಶಗಳನ್ನು ಪೂರ್ಣ ನಂಬಬೇಕಾಗಿಲ್ಲ. ಸಮೀಕ್ಷೆಗಳಲ್ಲಿ ಒಂದು ಬಗೆಯ ನಂಬಿಕೆ ಇಟ್ಟುಕೊಂಡವರು ತಮ್ಮ ಅಭಿಪ್ರಾಯ ತಿಳಿಸಲು ಹಿಂಜರಿಯಬಹುದು. ಅನೇಕರು ಅಂತಹ ಸಮೀಕ್ಷೆಗೆ ಸ್ಪಂದಿಸದಿರಬಹುದು. ಇವುಗಳಿಂದ ಸಮೀಕ್ಷೆಯ ಬೆಲೆ ತಗ್ಗುತ್ತದೆ. ಆದರೂ ಸಮೀಕ್ಷೆಯ ಫಲಿತಾಂಶದಲ್ಲಿ ಬಹುದೊಡ್ಡ ವ್ಯತ್ಯಾಸ ಕಂಡುಬಂದರೆ, ಅದರ ಫಲಿತಾಂಶ ಸಮಾಜದ ನಂಬಿಕೆಗಳ ಪ್ರತಿಫಲನ ಎಂದು ನಂಬಲು ಅಡ್ಡಿಯಿಲ್ಲ. (೨) ನಮ್ಮ ದೇಶದ ಧರ್ಮಗಳಲ್ಲಿ ಒ‌ಮ್ಮತವಿಲ್ಲ. ಕಾಲಕಾಲಕ್ಕೆ ಅವು ಬಹಳಷ್ಟು ಬದಲಾಗಿವೆ. ವೇದಗಳಲ್ಲಿ ಭಕ್ತಿಪೂರಿತ ದೀನತೆ ಹೆಚ್ಚಾಗಿ ಕಂಡುಬರುವುದಿಲ್ಲ. ಇಂದಿನ ಹೆಚ್ಚಿನ ದೇವತೆಗಳು ವೇದಗಳಲ್ಲಿಲ್ಲ. ನಂತರದ ಉಪನಿಷತ್ತುಗಳು ವೇದಗಳನ್ನು ಆಧರಿಸಿದವು ಎಂದು ಹೇಳಿಕೊಂಡರೂ, ವೇದಗಳಿಗೆ, ಅಲ್ಲಿಯ ಸೂಕ್ತಿಗಳಿಗೆ ಹೆಚ್ಚಿನ ಸ್ಥಾನವನ್ನು ಕೊಡುವುದಿಲ್ಲ. ನಂತರದ ಪುರಾಣಗಳಲ್ಲಿ ಇಂದಿನ ದೇವತೆಗಳು ಕಾಣಿಸಿಕೊಳ್ಳುತ್ತಾರೆ. ದೈವಭಕ್ತಿ ಪ್ರಧಾನವಾಗುತ್ತದೆ. ಅದ್ವೈತ, ದ್ವೈತ, ವಿಶಿಷ್ಟಾದ್ವೈತಗಳಲ್ಲಿ ಒಮ್ಮತವಿಲ್ಲ. ಆದ್ದರಿಂದ ಈ ಅನೇಕ ಯೋಚನಾ ಪ್ರಭೇದಗಳಲ್ಲಿ ಯಾವುದು ವಿಜ್ಞಾನಕ್ಕೆ ವಿರೋಧ ಎನ್ನಬೇಕು? ಒಂದಕ್ಕೆ ವಿರೋಧವಾದರೆ, ಇನ್ನೊಂದಕ್ಕೆ ಹೊಂದಿಕೊಳ್ಳುತ್ತದೆ. ಈ ವಿವಿಧತೆಯೂ ನಮ್ಮಲ್ಲಿ ವಿಜ್ಞಾನದ ವಿರುದ್ಧ ಸಮರ ಸಾರುವಿಕೆಗೆ ತಡೆಯೊಡ್ಡಿದ ಎನ್ನಿಸುತ್ತದೆ. (೩) ನಮ್ಮ ಸಂಸ್ಕೃತಿಯಲ್ಲಿ ಗುರುಹಿರಿಯರ ಮಾತಿಗೆ ಅತ್ಯಂತ ಗೌರವ ಸಲ್ಲಿಸುವುದು, ಅದನ್ನು ಪ್ರಶ್ನಿಸದೆ ಪಾಲಿಸುವುದು ದೊಡ್ಡ ಗುಣ ಎನ್ನಿಸಿದೆ. ಒಬ್ಬ ವಿಜ್ಞಾನಿ ತನ್ನ ಹಿಂದಿನ ಪೀಳಿಗೆಯ ವಿಜ್ಞಾನಿಗಳ ಸಂಶೋಧನೆಗಳನ್ನು ಪ್ರಶ್ನಿಸಿ, ಕೆಣಕಿ, ಅದಕ್ಕಿಂತ ಭಿನ್ನವಾದ, ಇನ್ನೂ ಹೆಚ್ಚು ಸೂಕ್ತವಾದ ನಿಯಮಗಳನ್ನು ಸೂಚಿಸಿದಾಗ ವಿಜ್ಞಾನ ಹೊಸ ಹೆಜ್ಜೆಗಳನ್ನಿಡುತ್ತದೆ. ಆದ್ದರಿಂದ ವಿಜ್ಞಾನದ ಮುನ್ನಡೆಗೆ ಕೆಲ ಮಟ್ಟಿನ ಉದ್ಘಟತನದ, ಬೌದ್ಧಿಕ ಸ್ವಾತಂತ್ರರ್ಯದ ಅವಶ್ಯಕತೆಯಿದೆ. ಇದು ನಮ್ಮಲ್ಲಿ ವಿರಳವಾಗಿರುವ ಸ್ವಭಾವ. ಡಾರ್ವಿನ್ನನ ವಿಕಾಸವಾದವನ್ನು ಬಲವಾಗಿ ಸಮರ್ಥಿಸಿದ ಥಾಮಸ್ ಹಕ್ಸ್‌ಲಿಯವರ ಮೊಮ್ಮಗ ಆಲ್ಡಸ್ ಹಕ್ಸ್‌ಲಿ (ನೊಬೆಲ್ ಪ್ರಶಸ್ತಿ ವಿಜೇತ ಲೇಖಕರು) ಒಮ್ಮೆ ಭಾರತಕ್ಕೆ ಭೇಟಿ ನೀಡಿದ್ದರು. ಗಾಂಧೀಜಿಯವರ ಜೊತೆ ಒಂದು ಸಭೆಯಲ್ಲಿ ವೇದಿಕೆಯ ಮೇಲೆ ಉಪಸ್ಥಿತರಿದ್ದರು. ಗಾಂಧೀಜಿಯವರಲ್ಲಿ ಅತ್ಯಂತ ಅಭಿಮಾನವಿರಿಸಿ, ಅವರಿಗಾಗಿ ಪ್ರಾಣಾರ್ಪಣೆ ಮಾಡಲು ಎಲ್ಲ ಸಭಿಕರೂ ಸಿದ್ಧರಿರುವ ಅರಿವು ಹಕ್ಸ್‌ಲಿಯವರಿಗಿತ್ತು. ಆದರೂ ಗಾಂಧೀಜಿಯವರ ಭಾಷಣದ ಸಮಯದಲ್ಲಿ ಸಭಿಕರು ಮಿಕ್ಕೆಲ್ಲ ಭಾಷಣಗಳಲ್ಲಿ ನಡೆಸಿದ್ದಕ್ಕಿಂತ ಹೆಚ್ಚಿನ ಗಲಾಟೆ, ಪಿಸುಮಾತಿನಲ್ಲಿ ತೊಡಗಿದ್ದನ್ನು ಗಮನಿಸಿದರು. ಇಂತಹ ದ್ವಂದ್ವ ನಮಗೆ ಸಹಜ. ಈ ಪ್ರವೃತ್ತಿ ನಮ್ಮ ಸಮಾಜದ ಎಲ್ಲ ಸ್ತರಗಳಲ್ಲಿ ವ್ಯಾಪಿಸಿದೆ. ಹಿರಿಯರು ಹೇಳಿದ್ದು ಒಪ್ಪಿಗೆಯಾಗಲಿ, ಬಿಡಲಿ, ಅದರಂತೆ ನಡೆಯುವುದು ನಮ್ಮ ಜಾಯಮಾನ. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ನಡೆಸಿದ ಚಂದ್ರಯಾನ ವಿಜ್ಞಾನಲೋಕದಲ್ಲಿ ಭಾರತದ ಪ್ರತಿಷ್ಠೆಯನ್ನು ಹೆಚ್ಚಿಸಿದೆ. ಅಲ್ಲಿಯ ಕೆಲವು ವಿಜ್ಞಾನಿಗಳಿಗೆ ತಾವು ಕೈಗೊಳ್ಳುವ ಬಾಹ್ಯಕಾಶಯಾನ ಸುಗಮವಾಗಿ ಇರಲೆಂದು ತಿರುಪತಿ ತಿಮ್ಮಪ್ಪನಿಗೆ ಮೊರೆಹೋಗುವುದರಲ್ಲಿ ಯಾವುದೇ ಅಭಾಸ ಕಾಣುವುದಿಲ್ಲ. ಟ್ರಿನಿಟಿ ಕಾಲೇಜಿನವರ ಸಮೀಕ್ಷೆಯಲ್ಲೂ ಶೇ. ೪೧ ವಿಜ್ಞಾನಿಗಳು ಇಂತಹ ಪೂಜೆ ಸಲ್ಲಿಸುವುದರಲ್ಲಿ ಯಾವುದೇ ಅಭಾಸ ಕಾಣುವುದಿಲ್ಲ ಎಂದಿದ್ದಾರೆ. ಇಂತಹ ಹಲವು, ಹತ್ತಾರು ಕಾರಣಗಳಿಂದ ನಮ್ಮಲ್ಲಿ ವಿಜ್ಞಾನದ ವಿರುದ್ಧ ಆಂದೋಲನಗಳು ನಡೆಯಲಾರವು. ಜೊತೆಗೆ, ವಿಜ್ಞಾನದ ಅಮೃತ ಫಲವೂ ನಮಗೆ ಪೂರ್ಣ ದೊರೆಯಲಾರದು.

 * * *