ಜಗತ್ತಿನಾದ್ಯಂತ ಶ್ರೇಷ್ಠ ವಿಜ್ಞಾನಿ ಮತ್ತು ವಿಕಾಸ ವಾದದ ತಜ್ಞ ಚಾರ್ಲ್ಸ್ ಡಾರ್ವಿನ್‌ನ ದ್ವಿ ಶತಮಾನೋತ್ಸವವನ್ನು ೨೦೦೯ರಲ್ಲಿ ಆಚರಿಸುತ್ತಿರುವ ಈ ಸಂದರ್ಭದಲ್ಲಿ ಡಾರ್ವಿನ್‌ನ ವಿಚಾರವಾಗಿ ವಿಜ್ಞಾನ ಲೇಖಕರುಗಳು ಬರೆದು ಈಗಾಗಲೇ ಪ್ರಕಟವಾಗಿರುವ ಲೇಖನಗಳನ್ನು ಆಯ್ದು ಪುಸ್ತಕ ರೂಪದಲ್ಲಿ ಹೊರತರುತ್ತಿರುವ ಪ್ರಯತ್ನವಾಗಿದೆ. ಡಾರ್ವಿನ್‌ನ ಕೃತಿ “ದಿ ಓರಿಜಿನ್ ಆಫ್ ಸ್ಟೀಶಿಸ್” ಪ್ರಕಟವಾಗಿ ೧೫೦ ವರ್ಷಗಳಾಗಿದ್ದರೂ ಅದರ ಪರವಾದ ವಿವಾದಗಳು ನಡೆಯುತ್ತಿದ್ದು, ವಿಕಾಸವಾದಕ್ಕೆ ಗಟ್ಟಿತನದ ಮೆರುಗನ್ನು ಆಧುನಿಕ ಜೀವರಾಸಾಯನಿಕ ವಿಜ್ಞಾನದಲ್ಲಿ ಕಾಣಲಾಗುತ್ತಿದೆ. ಡಾರ್ವಿನ್‌ನ ಅನೇಕ ಸಂಶೋಧನೆಗಳು, ವಿಜ್ಞಾನದ ಬೆಳೆವಣಿಗೆಯಲ್ಲಿ ಅವಿಸ್ಮರಣೀಯವಾದವುಗಳು. ಡಾರ್ವಿನ, ಜಗತ್ತು ಕಂಡ ಒಬ್ಬ ಅಪ್ರತಿಮ ಚಿಂತಕ ಮತ್ತು ಶ್ರೇಷ್ಠ ವಿಜ್ಞಾನಿ ಎಂಬುದರ ಬಗ್ಗೆ ಸಂಶಯವಿಲ್ಲ. ಈ ಮಹಾನ್ ವಿಜ್ಞಾನಿಯ ಬದುಕು, ಈ ಸ್ಪರ್ಧಾ ಶತಮಾನದ ಯುವಜನತೆಗೆ ಅನೇಕ ಆದರ್ಶಗಳ ಪಾಠಗಳಾಗುವುದರಲ್ಲಿ ಸಂದೇಹವಿಲ್ಲ. ಆದ್ದರಿಂದ ಈ ಪುಸ್ತಕವು ವಿಜ್ಞಾನಾಸಕ್ತ ಯುವ ಜನರು ಮತ್ತು ವಿದ್ಯಾರ್ಥಿಗಳಿಗೆ ಪ್ರೇರಕ ಶಕ್ತಿ ನೀಡುವುದೆಂದು ಆಶಯ ಹೊಂದಲಾಗಿದೆ.

ಈ ಪುಸ್ತಕದಲ್ಲಿರುವ ಹಲವು ಲೇಖನಗಳನ್ನು ನಮ್ಮ “ಧರಣಿಮಂಡಲ” ದ್ವೈಮಾಸಿಕದಿಂದ, ನವಕರ್ನಾಟಕ ಪ್ರಕಾಶನದ “ಹೊಸತು” ಮಾಸಪತ್ರಿಕೆಯಿಂದ, ಹಸಿರು ಪ್ರಕಾಶನದ “ಜೀವಜಾಲ” ಪುಸ್ತಕದಿಂದ ಹಾಗೂ ತರಂಗ ವಾರಪತ್ರಿಕೆಯಲ್ಲಿ ಪ್ರಕಟವಾದ ಜನಪ್ರಿಯ ವಿಜ್ಞಾನ ಲೇಖಕರಾದ ಟಿ.ಆರ್. ಅನಂತರಾಮುರವರ ಲೇಖನಗಳನ್ನು ಆಯ್ದುಕೊಳ್ಳಲಾಗಿದೆ. ಈ ಲೇಖನಗಳನ್ನು ಬಳಸಿಕೊಳ್ಳಲು ಅನುಮತಿ ನೀಡಿದ ಉದಾರ ಮನಸ್ಸಿನ ಲೇಖಕರು ಮತ್ತು ಪ್ರಕಾಶಕರಿಗೆ ನಾನು ಅಭಾರಿ.

ಈ ಪುಸ್ತಕದ ಮುದ್ರಣದ ಜವಾಬ್ದಾರಿವನ್ನು ಹೊತ್ತಿರುವ ಕ.ರಾ.ವಿ.ಪ.ಕ್ಕೆ ಅನಂತ ಅಭಿನಂದನೆಗಳು. ಲೇಖನಗಳನ್ನು ಡಿ.ಟಿ.ಪಿ. ಮಾಡಿಕೊಟ್ಟ ಶ್ರೀ ಟಿ.ಜಿ. ಶಿವಕುಮಾರ್‌ರವರಿಗೂ, ಕರಡು ಪ್ರತಿಯಲ್ಲಿನ ತಪ್ಪು ಒಪ್ಪುಗಳನ್ನು ಸರಿಪಡಿಸಿಕೊಟ್ಟ ಸ್ನೇಹಿತ ಶ್ರೀ ಸಿ.ವಿಶ್ವನಾಥ್‌ರವರಿಗೂ ಮತ್ತು ಅಂದವಾಗಿ ಮುದ್ರಿಸಿಕೊಟ್ಟ ಮುದ್ರಣಾಲಯದವರಿಗೂ ನನ್ನ ಅನಂತ ಧನ್ಯವಾದಗಳು.

ಸಿ.ಯತಿರಾಜು
೨೮-೧೧-೨೦೦೯