ಕರ್ನಾಟಕ ರಾಜ್ಯದ ಜನರಲ್ಲಿ ವಿಜ್ಞಾನವನ್ನು ಪ್ರಚಾರ ಮಾಡಿ ವೈಜ್ಞಾನಿಕ ಮನೋಭಾವದ ಬೆಳವಣಿಗೆಗೆ ಉತ್ತೇಜನ ನೀಡುವುದು ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಮುಖ್ಯ ಧ್ಯೇಯ. ರಾಜ್ಯದ ವಿವಿಧ ಸ್ಥಳಗಳಲ್ಲಿ ಸ್ವಯಂಪ್ರೇರಣೆಯಿಂದ ರೂಪುಗೊಂಡಿರುವ ಮುನ್ನೂರಕ್ಕೂ ಹೆಚ್ಚಿನ ಸಂಖ್ಯೆಯ ಪರಿಷತ್ತಿನ ಘಟಕಗಳು ಸ್ಥಳೀಯವಾಗಿ ಈ ಕೆಲಸದಲ್ಲಿ ನಿರತವಾಗಿವೆ. ಉಪನ್ಯಾಸಗಳು, ವಿಚಾರ ಸಂಕಿರಣಗಳು, ವೈಜ್ಞಾನಿಕ ಪ್ರದರ್ಶನಗಳು ಮುಂತಾದುವನ್ನು ಏರ್ಪಡಿಸುವ ಮೂಲಕವೂ ದಿನನಿತ್ಯದ ಸಮಸ್ಯೆಗಳಿಗೆ ವೈಜ್ಞಾನಿಕ ಪರಿಹಾರಗಳನ್ನು ಕಂಡುಕೊಳ್ಳುವಲ್ಲಿ ಜನತೆಗೆ ನೆರವು ನೀಡುವ ಮೂಲಕವೂ ಪರಿಷತ್ತಿನ ಧ್ಯೇಯವನ್ನು ಸಫಲಗೊಳಿಸುವ ಪ್ರಯತ್ನ ನಡೆದಿದೆ. ಪರಿಷತ್ತು ಪ್ರಕಟಿಸಿರುವ ನಿಯತಕಾಲಿಕಗಳೂ, ಕಿರುಹೊತ್ತಿಗೆಗಳೂ, ವೈಜ್ಞಾನಿಕ ಚಲನಚಿತ್ರಗಳೂ, ಅಲ್ಲಲ್ಲಿ ಸ್ಥಾಪಿಸಲಾಗಿರುವ ವಿಜ್ಞಾನ ಕೇಂದ್ರಗಳೂ ಆಗಾಗ ನಡೆಸುವ ಕನ್ನಡ ವಿಜ್ಞಾನ ಲೇಖಕರ ಹಾಗೂ ವೈಜ್ಞಾನಿಕ ಕಾರ್ಯಕರ್ತರ ಕಾರ್ಯಶಿಬಿರಗಳೂ ಆ ಪ್ರಯತ್ನಗಳಿಗೆ ಬೆಂಬಲ ನೀಡುತ್ತಲಿವೆ. ವಿಜ್ಞಾನ ವಿಷಯಗಳನ್ನು ಕುರಿತ ಅಗ್ಗಬೆಲೆಯ ಕಿರುಹೊತ್ತಿಗೆಗಳನ್ನು ಪ್ರಕಟಿಸುವ ಕಾರ್ಯವನ್ನು ಪರಿಷತ್ತು ಆರಂಭಿಸಿದೆ. ಪ್ರಕಟಣೆಗಳ ಸಂಖ್ಯೆ ಈಗಾಗಲೇ ಒಂದು ನೂರ ಮೂವತ್ತು ದಾಟಿದೆ.

ವಿಶ್ವವಿಖ್ಯಾತ ವಿಜ್ಞಾನ ಚಾರ್ಲ್ಸ್ ಡಾರ್ವಿನ್‌ನ ದ್ವಿಶತಮಾನೋತ್ಸವ ಹಾಗೂ ಆತನ ಪ್ರಸಿದ್ಧ ಪುಸ್ತಕ ‘ದಿ ಒರಿಜನ್ ಆಫ್ ಸ್ಪೀಶೀಸ್’ ಪ್ರಕಟಣೆಯ ೧೫೦ ವರ್ಷಾಚರಣೆಯ ಅಂಗವಾಗಿ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ರಾಜ್ಯಾದ್ಯಂತ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.

ಈ ದೃಷ್ಟಿಯಿಂದ ವಿದ್ಯಾರ್ಥಿಗಳಲ್ಲಿ ಜೀವ ವಿಜ್ಞಾನದ ಬಗ್ಗೆ ಆಸಕ್ತಿ ಬೆಳೆಸಲು ಹಾಗೂ ವಿಜ್ಞಾನಿಗಳ ಜೀವನ-ಸಾಧನೆಗಳನ್ನು ಪರಿಚಯಿಸಲು ಉಪನ್ಯಾಸ, ಪ್ರಬಂಧ ಸ್ಪರ್ಧೆ, ಸಂವಾದ ಮುಂತಾದವನ್ನು ಏರ್ಪಡಿಸಲು ಕ.ರಾ.ವಿ.ಪ ಮುಂದಾಗಿದೆ. ಈ ಚಟುವಟಿಕೆಗಳಿಗೆ ಪೂರಕವಾದ ಸಾಮಗ್ರಿ ಒದಗಿಸಲು ಈ ಕಿರುಪುಸ್ತಕವನ್ನು ಸಿದ್ಧಪಡಿಸಲಾಗಿದೆ. ಕನ್ನಡ ನಾಡಿನ ವಿವಿಧ ಲೇಖಕರ ಲೇಖನಗಳು ಇಲ್ಲವೆ. ಗೆಳೆಯ ಶ್ರೀ ಸಿ.ಯತಿರಾಜು ಇವೆಲ್ಲವನ್ನು ಸಂಪಾದಿಸಿ ನೀಡಿದ್ದಾರೆ. ಈ ಲೇಖನಗಳನ್ನು ಪ್ರಕಟಿಸಲು ಅನುಮತಿ ನೀಡಿದ ಆಯಾ ಲೇಖಕರಿಗೆ, ಪ್ರಕಾಶಕರಿಗೆ ಹಾಗೂ ಶ್ರೀ.ಸಿ.ಯತಿರಾಜುರವರಿಗೆ ಕರಾವಿಪ ಆಭಾರಿಯಾಗಿದೆ.

ಡಾ|| ಎಚ್.ಎಸ್.ನಿರಂಜನ ಆರಾಧ್ಯ
ಅಧ್ಯಕ್ಷರು, ಕ.ರಾ.ವಿ.ಪ.
೩೦-೧೧-೨೦೦೯