ಅಲೆಕ್ಸಾಂಡರ್ ಚಕ್ರವರ್ತಿಗೆ ವಿಶ್ವವನ್ನೇ ಗೆಲ್ಲಬೇಕೆಂಬ ಹಂಬಲವಿತ್ತು. ಗೆದ್ದ ನಂತರ ಏನು ಮಾಡಬೇಕೆಂಬ ಕಲ್ಪನೆಯಿತ್ತೋ ಇಲ್ಲವೋ ತಿಳಿಯದು. ಆದರೆ ಜಗತ್ತಿನ ಬಹುಪಾಲು ಸಂಪತ್ತು, ಸಮರ ಸಾಮಗ್ರಿಯಾಗಿ ಪರಿವರ್ತನೆಗೊಳ್ಳಲು ಆತ ಕಾರಣನಾದ. ಶತ್ರು ಸೈನಿಕರನ್ನು ನಾಶಪಡಿಸಿದ. ತನ್ನ ಸೇನೆಯ ಅಪಾರ ಸೈನಿಕರನ್ನು ಕಳೆದುಕೊಂಡ. ಒಬ್ಬ ಚಕ್ರವರ್ತಿ ತನ್ನ ಸಾಮ್ರಾಜ್ಯದ ಗಡಿ ವಿಸ್ತರಿಸುವ ಮತ್ತು ಸಣ್ಣರಾಜರು ತಮ್ಮ ಸಂಸ್ಥಾನವನ್ನು ಕಾಯ್ದುಕೊಳ್ಳುವ ಯುದ್ಧದಲ್ಲಿ ಉಂಟಾದದ್ದು ಅಪಾರ ಪ್ರಾಣಹಾನಿ. ಹಿಟ್ಲರ್, ಚಂಗೇಸ್‌ಖಾನ್‌ರಂತ  ಸಾಮ್ರಾಜ್ಯದಾಹಿಗಳದ್ದೂ ಇದೇ ಕತೆ. ಚರಿತ್ರೆಯನ್ನು ನಿರ್ಮಿಸಲು ಹೋದ ಅವರು ಅಂತಿಮವಾಗಿ ಆರಡಿ, ಮೂರಡಿಯ ಭೂಗರ್ಭವನ್ನು ಸೇರಿದ ವಿಷಾದ ಈ ಲೇಖನದ ವ್ಯಾಪ್ತಿಗೆ ಬಾರದು, ಇರಲಿ.

ಸಾಮ್ರಾಜ್ಯವನ್ನು ಸ್ಥಾಪಿಸುವ ಮತ್ತು ಗಡಿಯನ್ನು ರಕ್ಷಿಸುವ ಸಂಗತಿ ಪ್ರಾಣಿ-ಪ್ರಪಂಚದಲ್ಲಿ ಸಾಮಾನ್ಯ. ಆದರೆ ಇದು ಅಪರಿಮಿತ ಸಾಮ್ರಾಜ್ಯದಾಹದ ಮೂಸೆಯಿಂದ ಮೂಡಿಬಂದದ್ದಲ್ಲ. ಅದಕ್ಕಾಗಿ ಪ್ರಾಣಿಗಳು ಸೈನಿಕಪಡೆಯನ್ನು ಕಟ್ಟುವುದೂ ಇಲ್ಲ. ಅವು ಅಂಗೀಕರಿಸಿರುವ ಸಾಮ್ರಾಜ್ಯವಾದವು ತಾನೂ ಬದುಕಿ ಇತರರೂ ಬದುಕಲು ಅನುಕುಲ ಮಾಡಿಕೊಡುವ ವಿಶಾಲ ತತ್ವದಿಂದ ಅರಳಿರುವ ಪ್ರಕ್ರಿಯೆ. ಲಭ್ಯವಿರುವ ಸ್ಥಳದಲ್ಲಿ ನಿರ್ದಿಷ್ಟ ಗಡಿಗಳನ್ನು ಸ್ಥಾಪಿಸಿ ಸ್ಪರ್ಧೆಯೇ ಇಲ್ಲದೆ ಸುಖವಾಗಿ ಬಾಳುವ ವಿವೇಚನೆಯಿಂದ ಒಡಮೂಡಿರುವ ಪ್ರಾಣಿ ಪ್ರಪಂಚದ ಸಾಮ್ರಾಜ್ಯ ಸ್ಥಾಪನೆ ಜೀವಜಾಲದ ಬಹುಮುಖ್ಯ ವರ್ತನೆಗಳಲ್ಲೊಂದು.

ಒಂದೇ ಪ್ರದೇಶದಲ್ಲಿ ಒಂದೇ ಸಂಕುಲದ ಪ್ರಾಣಿಗಳು ಒಟ್ಟುಗೂಡಿದರೆ ಅಲ್ಲಿ ಆಹಾರ ಮತ್ತು ವಂಶಾಭಿವೃದ್ಧಿಗೆ ಅನಗತ್ಯ ಸ್ಪರ್ಧೆ ಏರ್ಪಡುತ್ತದೆ. ಪ್ರಾಣಿಗಳು ನಿಕಟವಾಗಿದ್ದಷ್ಟೂ ಸಾಂಕ್ರಮಿಕ ರೋಗಗಳು ಬಹುಬೇಗನೆ ಹರಡುವ ಸಾಧ್ಯತೆ ಹೆಚ್ಚು. ಪರಿಣಾಮವಾಗಿ ಒಂದು ಸಂಕುಲದ ನಿರ್ಮೂಲನೆಯಲ್ಲೇ ಅದು ಪರ್ಯಾವಸಾನವಾಗುವ ಸಂಭವ ತಲೆದೋರುತ್ತದೆ. ಆದುದರಿಂದ ಒಂದು ನಿರ್ದಿಷ್ಟ ಸಂಖ್ಯೆಯ ಪ್ರಾಣಿಗಳು ಅಲ್ಲಲ್ಲಿ ಸಾಮ್ರಾಜ್ಯವನ್ನು ಸ್ಥಾಪಿಸುವುದರಿಂದ ಈ ಸ್ಪರ್ಧೆ ಇಲ್ಲವಾಗಿ ಅವು ಹೆಚ್ಚಿನ ಪ್ರದೇಶಗಳಿಗೆ ವ್ಯಾಪಿಸಿಕೊಳ್ಳಲು ಅವಕಾಶವಾಗುತ್ತದೆ. ಪರಿಸರದಲ್ಲಿ ಸಮತೋಲನ ಕಾಯ್ದುಕೊಳ್ಳಲು ಸಾಧ್ಯವಾಗುತ್ತದೆ.

ಒಂದು ಪ್ರಾಣಿಯ ಸೀಮೆಯನ್ನು ಮೂರು ಭಾಗಗಳನ್ನಾಗಿ ವಿಂಗಡಿಸಬಹುದು. ತನ್ನ ಜೀವಿತಾವಧಿಯಲ್ಲಿ ಒಂದು ಪ್ರಾಣಿ ಸಹಚರರೊಡನೆ ಸುತ್ತಾಡುವ ನಿರ್ದಿಷ್ಟ ವಲಯವನ್ನು ಅದರ ಸಾಮ್ರಾಜ್ಯ ಅಥವಾ ಪೂರ್ಣವಲಯ (Total range) ಎಂದು ಹೇಳಬಹುದು. ಇದು ವಿಸ್ತೀರ್ಣದಲ್ಲಿ ದೊಡ್ಡದು. ಈ ವಲಯದಲ್ಲಿ ಆಹಾರ ಹುಡುಕಲು ಪ್ರತಿದಿನ ಸುತ್ತಾಡುವ ಇಲ್ಲವೇ ತನ್ನ ಮರಿಗಳನ್ನು ಕರೆದುಕೊಂಡು ತರಬೇತಿ ನೀಡುವ ಕ್ಷೇತ್ರವನ್ನು ‘ಗೃಹವಲಯ’ (Home range) ಎನ್ನುತ್ತಾರೆ. ಅದರ ವಂಶಾಭಿವೃದ್ಧಿ ಇದೇ ವಲಯದ ಸೀಮೆಯಲ್ಲಿ ಜರುಗುತ್ತದೆ. ಗೃಹವಲಯದಲ್ಲೇ ಸ್ವಲ್ಪ ಭಾಗ ಹೆಚ್ಚು ಪರಿಚಿತವಾದ ಕ್ಷೇತ್ರವಿದೆ. ಇದನ್ನು ಪ್ರಾಣಿಯ ‘ಕೇಂದ್ರ ಸ್ಥಾನ’ (Core range) ಎನ್ನುತ್ತಾರೆ. ಈ ಕೇಂದ್ರಸ್ಥಾನದೊಳಗೇ ಪ್ರಾಣಿ ದಿನದ ಬಹುವೇಳೆಯನ್ನು ಕಳೆಯುತ್ತದೆ. ವಿಶ್ರಾಂತಿ, ನಿದ್ರೆ ಎಲ್ಲವೂ ಇಲ್ಲೇ ಆಗುತ್ತದೆ. ತನ್ನ ಶತ್ರು ಎದುರಾದರೆ ಅಲ್ಲಿ ಅಡಗಿಕೊಳ್ಳಬೇಕು. ಅಥವಾ ಯಾವ ಕಡೆ ಓಡಿದರೆ ಸುರಕ್ಷಿತವಾಗಿ ತಪ್ಪಿಸಿಕೊಳ್ಳಬಹುದು ಎಂಬ ವಿವರಗಳು ಅದಕ್ಕೆ ತಿಳಿದಿರುತ್ತದೆ. ಸಾಮ್ರಾಜ್ಯ ಸ್ಥಾಪನೆಯ ಹಿನ್ನೆಲೆಯಲ್ಲಿ ಶತ್ರುವಿನಿಂದ ರಕ್ಷಣೆ ಪಡೆವ ಮಾರ್ಗೋಪಾಯವೂ ಅಡಗಿದೆ.

ಒಂದು ಪ್ರಾಣಿಸಂಕುಲ ತನ್ನ ಗಿಡಯನ್ನು ಗುರುತು ಮಾಡಲು ನಮ್ಮಂತೆ ಅನೇಕ ಬಗೆಯ ಮಾನಕ, ಸಂಕೀರ್ಣ ಕೋಷ್ಠಕಗಳನ್ನು ಅವಲಂಬಿಸುವುದಿಲ್ಲ. ಪ್ರಾಣಿ ಪ್ರಪಂಚದಲ್ಲಿ ರಿಜಿಸ್ಟ್ರಾರ್ ಆಫೀಸಾಗಲೀ, ಸರ್ವೇ ವಿಭಾಗವಾಗಲೀ ಇಲ್ಲ. ತಮ್ಮ ಗಡಿಗಳನ್ನು ಗುರುತಿಸಿಕೊಳ್ಳಲು ಪ್ರಾಣಿಗಳು ಅನೇಕ ವಿಧಾನಗಳನ್ನು ಕಂಡುಹಿಡಿದಿವೆ. ಅದಕ್ಕಾಗಿ ಅವು ಅವಲಂಬಿಸಿರುವುದು ವಾಸನೆ ಇಲ್ಲವೇ ಗಯನ.

ವಾಸನೆಯನ್ನು ಗ್ರಹಿಸುವ ಶಕ್ತಿ ಪ್ರಾಣಿಗಳಿಗೆ ಹೋಲಿಸಿದರೆ ಮನುಷ್ಯನಿಗೆ ಇಲ್ಲವೆಂದೇ ಹೇಳಬಹುದು. ಕೆಳಗಿನ ಒಂದೆರಡು ಉದಾಹರಣೆಗಳನ್ನು ನೋಡಿದರೆ ಅವುಗಳ ಅದ್ಭುತ ವಾಸನಾ ಪ್ರಪಂಚದ ಬಗ್ಗೆ ಸುಳಿವು ದೊರಕುತ್ತದೆ.

ನೀವು ಈಗಾಗಲೇ ಸಾಕ್ಷಿಯಾಗಿರಬಹುದಾದ ಘಟನೆ. ಅದನ್ನು ಕಂಡು ಅಸಹ್ಯ ಪಟ್ಟಿರಲೂ ಬಹುದು. ದೂರದಿಂದ ನಿಮ್ಮ ಮನೆಗೆ ಸೈಕಲ್ಲಿನಲ್ಲಿ ಅತಿಥಿಯೊಬ್ಬರು ಬಂದಿದ್ದಾರೆ. ನಿಮ್ಮ ಮನೆಯ ಗೋಡೆಗೆ ಸೈಕಲ್ ಒರಗಿಸಿ ಇಟ್ಟಿದ್ದಾರೆ. ಬೀದಿ ನಾಯಿಯೊಂದು (ಗಂಡು) ಬಂದು ಸೈಕಲ್ಲನ್ನು ಮುಸಿ ಅದರ ಮೇಲೆ ಮೂತ್ರ ವಿಸರ್ಜಿಸುತ್ತದೆ. ನಾಯಿಯನ್ನು ಬೈದು ಅತಿಥಿಗಳೆದರು ಮುಜುಗರಪಡುತ್ತೀರಿ. ಆದರೆ ನಾಯಿಗೆ ನಿಮ್ಮ ಗಲ್ಲಿಯೇ ಪೂರ್ಣ ಸಾಮ್ರಾಜ್ಯ. ನಿಮ್ಮ ಮನೆ (ನಾಯಿ ನಿಮ್ಮದಾದರೆ) ಅದರ ಕೇಂದ್ರ ಸ್ಥಾನ. ನಿಮ್ಮ ಮನೆಯ ಆಜು-ಬಾಜು ಅದರ ಗೃಹವಲಯ. ಈ ಗೃಹವಲಯದೊಳಗೆ ಯವುದೇ ಅಪರಿಚಿತ ವಸ್ತು ಬಂದರೂ ಅದಕ್ಕೆ ಮೂತ್ರ ವಿಸರ್ಜಿಸಿ ತನ್ನ ಗಡಿಗೆ ಸೇರಿದ್ದೆಂದು ಅದು ಖಾತ್ರಿಪಡಿಸಿಕೊಳ್ಳುತ್ತದೆ.

ಅಂದರೆ ನಾಯಿಗೆ ಅದ್ಭುತ ವಾಸನೆಯ ಅರಿವಿದೆ. ಅದು ತನ್ನ ಗಡಿಯಗಲಕ್ಕೂ ಮೂತ್ರ ವಿಸರ್ಜಿಸಿ ಗುರುತು ಹಾಕುತ್ತದೆ. ತನ್ನ ಮೂತ್ರ ನಿರ್ಮಿಸಿರುವ ವರ್ತುಲ ಅದರ ಸಾಮ್ರಾಜ್ಯ ಅದು ಆ ವಲಯದಲ್ಲಿ ಅಲ್ಲಿ ‘ಷೇರ್’. ಪ್ರತಿಯೊಬ್ಬ ಮನುಷ್ಯನ ದೇಹವೂ ತನ್ನದೇ ಆದ ಒಂದು ಬಗೆಯ ವಾಸನೆಯನ್ನು ಸ್ರವಿಸುತ್ತದೆ. ಒಮ್ಮೆ ವಾಸನೆ ಅದಕ್ಕೆ ಪರಿಚಯವಾಯಿತೆಂದರೆ ಸಾಯುವವರೆಗೂ ಅದು ಮರೆಯದು. ಹಾಗಾಗಿ ತನ್ನ ಗಲ್ಲಿಯಲ್ಲಿ ಪರಿಚಿತವಲ್ಲದ ಬೇರೆ ಮನುಷ್ಯ-ಪ್ರಾಣಿ ಪ್ರವೇಶಿಸಿದ ತಕ್ಷಣವೇ ಅದರಲ್ಲಿ ಸಾಮ್ರಾಜ್ಯ ಪ್ರಜ್ಞೆ ಜಾಗೃತವಾಗಿ ಬೊಗಳುತ್ತದೆ. ನಾಯಿ ತನ್ನ ಯಜಮಾನ ಆತನ ಕುಟುಂಬವನ್ನು ಕಂಡುಹಿಡಿಯುವುದೂ ವಾಸನೆಯಿಂದಲೇ.

ಸೀಮೆಯನ್ನು ಗುರುತಿಸುವ ವಿಧಾನ ನಾಯಿಗಳಿಗಷ್ಟೇ ಸೀಮಿತವಲ್ಲ. ಸಿಂಹದ ತಂಡದ ನಾಯಕ ಗಂಡು ಸಿಂಹ ತನ್ನ ಸಾಮ್ರಾಜ್ಯವನ್ನು ಗುರುತಿಸಲೂ ವಾಸನೆಯನ್ನೇ ಬಳಸುತ್ತದೆ. ಅದು ತನ್ನ ದೇಹ ಸ್ರವಿಸುವ ವಾಸನೆಯನ್ನು ತಾನು ಗುರುತಿಸುವ ಗಡಿಯುದ್ದಕ್ಕೂ ಇರುವ ಸಸ್ಯಗಳಿಗೆ ಮೈಯನ್ನು ಉಜ್ಜಿ ವರ್ಗಾಯಿಸುತ್ತದೆ. ಹಾದಿ ತಪ್ಪಿದ ಬೇರೊಂದು ಸಿಂಹವು ಗಡಿಗೆ ಬಂದ ತಕ್ಷಣ ಸಸ್ಯಗಳ ಮೇಲಿರುವ ವಾಸನೆ ಹಿಡಿದು, ಬೇರೊಂದರ ಸಾಮ್ರಾಜ್ಯ  ಅಗಲೇ ಸ್ಥಾಪನೆಯಾಗಿರುವುದನ್ನು ಗ್ರಹಿಸಿ ಗಡಿಯನ್ನು ಪ್ರವೇಶಿಸದೆ ಹಿಂದೆಗೆಯುತ್ತದೆ. ನಾಯಕ ಗಂಡು ಸಿಂಹ ತನ್ನ ಮೈಯನ್ನು ತನ್ನ ಗುಂಪಿನ ಹೆಣ್ಣುಗಳಿಗೆ ಮತ್ತು ಮರಿಗಳಿಗೆ ಉಜ್ಜಿ ವಾಸನೆಯನ್ನು ಪರಿಚಯಿಸುತ್ತದೆ. ಹಾಗಾಗಿ ಅವೂ ಕೂಡ ತಮ್ಮ ಗಡಿಯನ್ನು ಉಲ್ಲಂಘಿಸುವುದಿಲ್ಲ. ಇನ್ನೊಂದರ ಗಡಿಯನ್ನು ಅತಿಕ್ರಮಿಸುವುದಿಲ್ಲ.

ಹುಲಿ-ಚಿರತೆಗಳೂ ಮೂತ್ರ ವಿಸರ್ಜನೆಯಿಂದ ತಮ್ಮ ಗಡಿಯನ್ನು ಗುರುತು ಮಾಡುತ್ತವೆ.

ಬರ್ಕ ಮತ್ತು ಕೆಲವು ಜಾತಿಯ ಹುಲ್ಲೆಗಳು ತಮ್ಮ ಗಡಿಯ ರೇಖೆಯುದ್ದಕ್ಕು ಮಲ ಅಥವಾ ಮೂತ್ರ ವಿಸರ್ಜಿಸುತ್ತವೆ. ಒಂದು ಜಾಗದ ಮಲಮೂತ್ರಗಳಿಂದ ಹೊರಡುವ ವಾಸನೆ ಅದರ ಗಡಿಯನ್ನು ನಿರ್ಧರಿಸುತ್ತದೆ.

ಗಸೆಲ್ (Gazelle) ಜಿಂಕೆಗಳು ತಮ್ಮ ಸೀಮೆಯನ್ನು ಮತ್ತೊಂದು ವಿಧದಲ್ಲಿ ಗುರುತಿಸುತ್ತವೆ. ಅವುಗಳ ಕಣ್ಣಿನ ಕೆಳಗೆ ವಾಸನೆಯ ಗ್ರಂಥಿಯೊಂದಿದೆ. ಅದರಿಂದ ಸ್ರವಿಸುವ ವಸ್ತುವನ್ನು ಗಡಿ ರೇಖೆಯ ಬಳಿ ಇರುವ ಸಸ್ಯಗಳ ಕಡ್ಡಿಗೆ ದಿನವೂ ಉಜ್ಜುತ್ತವೆ. ಕೆಲವು ದಿನಗಳ ನಂತರ ಕಡ್ಡಿಯಲ್ಲಿ ದಪ್ಪವಾದ ಉಂಡೆಯೊಂದು ರೂಪುಗೊಂಡು ಅಲ್ಲಿಂದ ಘಾಟುವಾಸನೆ ಬರುತ್ತದೆ. ಈ ರೀತಿ ತನ್ನ ಗಡಿಯುದ್ದಕ್ಕೂ ಅಲ್ಲಲ್ಲಿ ಇಂಥ ಉಂಡೆಯನ್ನು ಮೆತ್ತಿ ತನ್ನ ಸೀಮೆಯನ್ನು ಸ್ಥಾಪಿಸಿರುತ್ತವೆ. ಈ ರೀತಿಯ ಉಂಡೆಗಳು ಗಡಿಯಲ್ಲಿನ ನಿಶಾನೆಯ ಹಾಗೆ. ಬೇರೊಂದು ಪ್ರದೇಶದಿಂದ ಬಂದ ಗೆಸೆಲ್‌ಗಳು ಈ ಗುರುತನ್ನು ಕಂಡ ಕೂಡಲೇ ಗಡಿಯನ್ನು ಪ್ರವೇಶಿಸದೆ ವಾಪಸ್ಸು ಹೋಗುತ್ತವೆ.

ಹಕ್ಕಿಗಳಲ್ಲಿ ಸಾಮ್ರಾಜ್ಯ ಸ್ಥಾಪನೆಯಾಗುವುದು ವಂಶಾಭಿವೃದ್ಧಿ ಕ್ರಿಯೆ ನಿರಾಂತಕವಾಗಿ ಸಾಗಲೆಂದು. ಆದುದರಿಂದ ಹಕ್ಕಿಗಳು ಸಂತಾನೋತ್ಪತ್ತಿ ಕಾಲದಲ್ಲಿ ತಮ್ಮ  ಸೀಮೆಯನ್ನು ಹಾಡುವುದರ ಮೂಲಕ ಸ್ಥಾಪಿಸುತ್ತವೆ. (ನಮ್ಮ ಗಾಯಕರು ರಸಿಕರ ಹೃದಯದಲ್ಲಿ ಸಾಮ್ರಾಜ್ಯ ಸ್ಥಾಪಿಸುತ್ತಾರೆ !)

ಮ್ಯಾಗ್‌ಪೈ ರಾಬಿನ್, ಶಾಮಾ ಮುಂತಾದ ಹಕ್ಕಿಗಳು (ಗಂಡು) ಒಂದು ಜಾಗವನ್ನು ಹಿಡಿದು ತನ್ನ ಸಾಮ್ರಾಜ್ಯವಿದೆಂದು ಗಟ್ಟಿ ದನಿಯಲ್ಲಿ ಕೂಗಿ ಹಾಡುತ್ತವೆ. ಈ ರೀತಿಯ ಹಾಡು, ಒಂದು ಕಡೆ ಇತರ ಗಂಡುಗಳು ಜಾಗ ಬಿಟ್ಟು ಹೋಗಬೇಕು ಎಂದು ಹೇಳುವ ಎಚ್ಚರಿಕೆ : ಮತ್ತೊಂದೆಡೆ ವಂಶಾಭಿವೃದ್ಧಿಗಾಗಿ ವೀರ್ಯವಂತ ಗಂಡು ತಾನಿಲ್ಲಿ ಇದ್ದೇನೆಂದು ಜಾಹೀರಾತಿನ ಮೂಲಕ ಹೆಣ್ಣು ಹಕ್ಕಿಗಳಿಗೆ ನೀಡುವ ಆಹ್ವಾನ. ಹಾಡಿನ ಏರಿಳಿತದ ಆಧಾರದ ಮೇಲೆ ಆತನನ್ನು ಅಲ್ಲಿಂದ ಓಡಿಸಲು ಯತ್ನಿಸಬೇಕೆ ಅಥವಾ ತಾನೇ ಗಡಿ ಬಿಟ್ಟು ತೊಲಗಬೇಕೆ ಎಂಬುದನ್ನು ಇತರ ಗಂಡುಗಳು ನಿರ್ಧರಿಸುತ್ತವೆ. ಆ ಧ್ವನಿಯಿಂದಲೇ ಗಂಡು ತನಗೆ ಆಹಾರ, ರಕ್ಷಣೆ ನೀಡಬಲ್ಲನೇ ಎಂಬುದನ್ನು ಹೆಣ್ಣು ವಿಶ್ಲೇಷಿಸಿ, ಕೂಡಬೇಕೇ ಬೇಡವೇ ಎಂದು ನಿರ್ಣಯಿಸುತ್ತದೆ. (ಗಂಡು ಹಕ್ಕಿಯ ಈ ಟಾಂಟಾಂನಿಂದ ಅದರ ಇರುವಿಕೆ ಶತ್ರುಗಳಿಗೆ ತಿಳಿಯುವ ಸಾಧ್ಯತೆಯೂ ಇದ್ದು ಮಧುಚಂದ್ರಕ್ಕೆ ಬದಲು ಅದೊಂದು ಉತ್ತರ ಕ್ರಿಯೆಗೆ ಆಹ್ವಾನವ ಆಗುವ ಸಂಭವವೂ ಇದೆ.)

ಗಂಡು ನವಿಲು ತನ್ನ ಸಾಮ್ರಾಜ್ಯ ಸ್ಥಾಪಿಸುವುದು ನರ್ತನದ ಮೂಲಕ. ಅದರ ಕುಣಿವ ಪರಿಯನ್ನು ಕಂಡು ಅದು ಬಲಶಾಲಿಯೇ ಅಲ್ಲವೇ ಎಂಬುದನ್ನು ಇತರ ಗಂಡು ಮತ್ತು ಹೆಣ್ಣುಗಳು ಕಂಡು ಕೊಳ್ಳುತ್ತವೆ. ಬಲಶಾಲಿ ಎಂತಾದರೆ ಇತರ ಗಂಡು ನವಿಲು ಅದರ ಗಡಿಯನ್ನು ತೊರೆಯುತ್ತದೆ ಹೆಣ್ಣು ವರಿಸುತ್ತದೆ.

ಸಾಮಾನ್ಯವಾಗಿ ಪ್ರಾಣಿಗಳು ಇತರರ ಸಾಮ್ರಾಜ್ಯವನ್ನು ಪ್ರವೇಶಿಸುವುದಿಲ್ಲ. ಪ್ರವೇಶಿಸಿದರೂ ಅದರಿಂದ ನಡೆವ ಹೋರಾಟ ಮಾರಣಾಂತಿಕ ಫಲಿತಾಂಶ ತರುವುದಿಲ್ಲ. ದೊಡ್ಡ ಪ್ರಾಣಿಗಳ ಸಮರ ಪ್ರಾಣಹಾನಿಯಲ್ಲಿ ಕೊನೆಗಾಣುವುದು ಅಪರೂಪ.

ಆದರೆ ದುಂಬಿ ಮತ್ತು ಕಣಜದಂಥ ಕೆಳದರ್ಜೆ ಜಾತಿಯ ಪ್ರಾಣಿಗಳಲ್ಲಿ ಇದು ಜೀವಹಾನಿಯಲ್ಲಿ ಮುಕ್ತಾಯವಾಗುತ್ತದೆ. ಭುಮಿಯಲ್ಲಿ ಮೊಟ್ಟೆಯಾಗಿ ಇರುವ ಈ ಜಾತಿಯ ಜೀವಿಗಳಲ್ಲಿ ಮೊದಲು ಗಂಡು ಮರಿಯಾಗಿ ಹೊರಬರುತ್ತವೆ. ಗಂಡು ಕೀಟಗಳು ಹೊರಬಂದ ಕೂಡಲೇ ಪರಸ್ಪರ ಹೋರಾಡುತ್ತವೆ. ಜಯಶಾಲಿಯಾದ ಗಂಡುಗಳು ಹೆಣ್ಣುಗಳು ಹೊರಬರುವ ರಂಧ್ರದ ಸುತ್ತ ಗುಂಯ್‌ಗುಡುತ್ತಾ ಸೀಮೆಯನ್ನು ಗುರುತಿಸಿ ಸುತ್ತುತ್ತವೆ. ಹೆಣ್ಣು ಹೊರಬಂದ ತಕ್ಷಣ ಅವು ಕೂಡುತ್ತವೆ. ನೀವು ರೇಷ್ಮೆ ಬೆಳೆಗಾರರಾಗಿದ್ದರೆ, ಗೂಡುಗಳಿಂದ ಹೊರಬರುವ ಗಂಡು ಚಿಟ್ಟೆಯನ್ನು ಗಮನಿಸಿ. ಅದು ಹೊರ ಬಂದ ಕೂಡಲೇ ವೃತ್ತಾಕಾರವಾಗಿ ತಿರುಗುತ್ತಾ ವಾಸನೆಯಿಂದ ತನ್ನ ಗಡಿಯನ್ನು ಗುರುತಿಸುತ್ತದೆ.

ಒಂದು ನಿರ್ದಿಷ್ಟ ಭೂ ಪ್ರದೇಶದಲ್ಲಿ ಅನೇಕ ಜೀವಸಂಕುಲಗಳ ಸಾಮ್ರಾಜ್ಯಗಳು ಒಂದರಲ್ಲಿ ಒಂದು ತಳಕು ಹಾಕಿಕೊಂಡಿರುತ್ತವೆ. ಒಂದು ಸಂಕುಲದ ಸಾಮ್ರಾಜ್ಯಕ್ಕೆ ನಿರ್ದಿಷ್ಟ ವಿಸ್ತೀರ್ಣವಿಲ್ಲ. ಅದು ಪ್ರದೇಶದಿಂದ ಪ್ರದೇಶಕ್ಕೆ ಬದಲಾಗಬಹುದು. ಬಹುತೇಕ ಪ್ರಾಣಿಗಳು ವಂಶಾಭಿವೃದ್ಧಿ ಕಾಲದಲ್ಲಿ ಮಾತ್ರ ತಮ್ಮ ಗೂಡನ್ನು ರಕ್ಷಿಸಿಕೊಳ್ಳಬೇಕಾದ ಸಂದರ್ಭದಲ್ಲಿ ರಕ್ಷಿತ ಪ್ರದೇಶ ಘೋಷಿಸಿಕೊಳ್ಳುತ್ತವೆ. ಉಳಿದ ಸಮಯದಲ್ಲಿ ಅವು ಒಟ್ಟಾಗಿ ಶಾಂತಿಯುತವಾಗಿ ಬದುಕುತ್ತವೆ. ಸ್ಥಳೀಯ ಪ್ರದೇಶದಲ್ಲಿ ಆಹಾರ ಹೇರಳವಾಗಿದ್ದಾಗ ಒಂದು ಸಂಕುಲದ ಪ್ರಾಣಿಗಳು ತಮ್ಮ ತಮ್ಮಲ್ಲೇ ನಿರ್ದಿಷ್ಟ ಗಡಿಯನ್ನು ಸ್ಥಾಪಿಸಿ ಆ ಪ್ರದೇಶವನ್ನು ಪೂರ್ಣ ಆಕ್ರಮಿಸಿಕೊಳ್ಳುತ್ತವೆ. ಆಹಾರ ಅಭಾವದ ಕಾಲದಲ್ಲಿ ಅವು ಒಟ್ಟಾಗಿ ಆಹಾರ ಹುಡುಕಿ ಹೊರಡುತ್ತವೆ. ಸಾಮ್ರಾಜ್ಯ ಸ್ಥಾಪನೆ ಜೀವಜಾಲದಲ್ಲಿ ಸಹಬಾಳ್ವೆಯ ಒಂದು ವಿಧಾನವೇ ಆಗಿದೆ.

ಡಾರ್ವಿನ್ ವಿಕಾಸವಾದ ಸಿದ್ಧಾಂತದ ಹಿನ್ನೆಲೆಯಲ್ಲಿ ರಚಿತವಾದ ಲೇಖನ

* * *