ಅನ್ವೇಷಣೆ, ಆಕ್ರಮಣ, ರಾಜ್ಯ ವಿಸ್ತಾರ-ಮನುಷ್ಯನ ಈ ಮೂರು ಪ್ರಧಾನ ಚಟುವಟಿಕೆಗಳಿಂದ ಪ್ರಾಚೀನ ಕಾಲದಿಂದಲೂ ಜೀವ ಪ್ರಸಾರ ಕಾರ್ಯ ಅಬಾಧಿತವಾಗಿ ನಡೆದು ಬಂದಿದೆ. ಇದು ಜೀವ ಸಂಕುಲಗಳ ‘ಮಹಾವಿನಿಮಯ’ ಕಾರ್ಯಕ್ಕೆ ಕಾರಣವಾಗಿದೆ.

ನಿಸರ್ಗ ತನ್ನ ಜೀವಿಗಳ ಪ್ರಸರಣಕ್ಕೆ ತನ್ನದೇ ಆದ ವಿವಿಧ ಏಜೆಂಟ್‌ಗಳನ್ನು ನೇಮಿಸಿಕೊಂಡಿದೆ. ಗಾಳಿ, ನೀರು, ಪ್ರಾಣಿ ಮುಂತಾದವು ಜೀವ ಪ್ರಸಾರಕ್ಕೆ ನೆರವಾಗುವ ಮಾಧ್ಯಮಗಳು. ಆದರೆ ಮನುಷ್ಯ ಪ್ರಜ್ಞಾಪೂರ್ವಕವಾಗಿ ಕೈಗೊಂಡಿರುವ ಪ್ರಸಾರವೇ ಅತ್ಯಂತ ಸಬಲವಾದದ್ದು. ಇದರಿಂದ ಆತ ಹೊಸ ನಾಗರಿಕತೆಗೆ ನಾಂದಿ ಹಾಡಿದ್ದಾನೆ. ಅನೇಕ ಪ್ರಾಚೀನ ನಾಗರಿಕತೆಗಳ ಪತನಕ್ಕೆ ಶೋಕಗೀತೆ ರಚಿಸಿದ್ದಾನೆ.

ನಿಸರ್ಗದ ಪ್ರಸಾರ ಒಮ್ಮುಖವಾದದ್ದು. ಅದು ನಿರ್ದಿಷ್ಟ ನೆಲೆಯಲ್ಲಿ ಜರುಗುವಂಥದ್ದು. ಅನೇಕ ಮಿಲಿಯಾಂತರ ವರ್ಷಗಳಲ್ಲಿ ಜೀವಿಗಳು ತಮ್ಮ ಪ್ರಸರಣಾ ವಿಧಾನವನ್ನು ವಿಕಾಸದ ಕುಲುಮೆಯಲ್ಲಿ ರೂಪಿಸಿಕೊಂಡಿರುತ್ತವೆ.

ಮನುಷ್ಯನ ಪ್ರಸಾರ ಬಹುಮುಖವಾದದ್ದು. ಅದಕ್ಕೆ ನಿಶ್ಚಿತ ಗುರಿಯಿರುವುದಿಲ್ಲ. ಪ್ರಧಾನವಾಗಿ ಅವನ ಲಾಭದ ಗುರಿ ಆ ಪ್ರಸಾರ ವಿಧಾನದಲ್ಲಿ ಅಡಗಿರುತ್ತದೆ. ಈ ಪ್ರಸಾರ ವಿಧಾನಕ್ಕೆ ಒಂದು ವೈಜ್ಞಾನಿಕ ಆಧಾರವಾಗಲೀ ನಿರ್ದಿಷ್ಟ ರೂಪವಾಗಲೀ ಇರುವುದಿಲ್ಲ. ವೈಯಕ್ತಿಕ ಮರ್ಜಿ ಇಲ್ಲಿ ಹೆಚ್ಚು ಪಾತ್ರ ವಹಿಸುತ್ತದೆ.

ತನ್ನ ದಣಿವರಿಯದ ಕುತೂಹಲವನ್ನು ತಣಿಸಲು ಮನುಷ್ಯ ಹೊಸ ಹೊಸ ನಾಡನ್ನು ಅನ್ವೇಷಿಸಿದ್ದಾನೆ. ಪರಿಚಿತ ನಾಡಿಗೆ ಪ್ರವಾಸಿಗನಾಗಿ ಹೋಗಿ ಬಂದಿದ್ದಾನೆ. ಇಲ್ಲವೇ ರಾಜ್ಯ ವಿಸ್ತರಣೆಗೆ ಆಕ್ರಮಣ ನಡೆಸಿದ್ದಾನೆ. ಈ ಕಾರ್ಯಗಳ ಜೊತೆಯಲ್ಲೇ ಆತ ತನ್ನ ಮೂಲ ನೆಲೆ ಹಾಗೂ ಸಂಪರ್ಕ ಪಡೆದ ಹೊಸ ಪ್ರದೇಶ-ಎರಡರಲ್ಲೂ-ಜೈವಿಕ ಬದಲಾವಣೆ ತಂದಿದ್ದಾನೆ. ಕೆಲವು ಬಾರಿ ತನಗರಿವಿಲ್ಲದಂತೆ ಅನೇಕ ಬದಲಾವಣೆ ತಂದಿದ್ದರೆ, ಹಲವೊಮ್ಮೆ ತನ್ನಿಷ್ಟದಂತೆ ಜೈವಿಕ ಸ್ವರೂಪವನ್ನು ಬದಲಿಸಿದ್ದಾನೆ.

ಆದರೆ ಒಂದು ಮಾತ್ರ ಸ್ಪಷ್ಟ. ಮಾನವ ಎಲ್ಲಿಯೇ ಹೋಗಲಿ ಆತ ತನ್ನ ದೃಷ್ಟಿಯಲ್ಲಿ ಲಾಭದಾಯಕ ಹಾಗೂ ಉಪಯುಕ್ತ ಎನಿಸುವಂಥ ಜೀವ ಸಂಕುಲಗಳನ್ನು ಪೋಷಿಸಲು ಮಾತ್ರ ಪ್ರಯತ್ನಿಸಿದ್ದಾನೆ. ವಾಣಿಜ್ಯ ಲಾಭಕ್ಕೆ ಆತನ ಪ್ರಥಮ ಆದ್ಯತೆ. ಹಾಗಾಗಿ ತಾನು ಹೊಸದಾಗಿ ತನ್ನ ತವರಿನಲ್ಲಿ ನೆಲೆಗೊಳಿಸಿದ್ದಾನೆ. ಹಾಗೆಯೇ ತನ್ನ ತವರಿನ ಲಾಭದಾಯಕ ತಳಿಗಳನ್ನು ಹೊಸ ನೆಲೆಯಲ್ಲಿ ಪಳಗಿಸಿನೊಡಿದ್ದಾನೆ. (ವಂಶನಾಶದ ಅಧ್ಯಾಯಗಳಲ್ಲಿ ಹೇರಳವಾಗಿ ಇದಕ್ಕೆ ಉದಾಹರಣೆ ದೊರೆಯುತ್ತವೆ.)

ಈ ಜೈವಿಕ ವಿನಿಮಯ ಮೂಡಿಸಿರುವ ಫಲಿತಾಂಶಗಳು ಮಾತ್ರ ಅದ್ಭುತ. ಇದರಿಂದ ಮನುಕುಲದ ದಿಕ್ಕೆ ಬದಲಿಸಿದೆ. ಅನೇಕ ಸಂಸ್ಕೃತಿಕಗಳನ್ನೊಳಗೊಂಡ ಇಡೀ ವಿಶ್ವವನ್ನೇ ಬೆಸೆಯುವ ಕಾರ್ಯ ಈ ಜೈವಿಕ ವಿನಿಯಮದಿಂದ ಸಾಧ್ಯವಾಗಿದೆ.

ಭಾರತದ ವಿಷಯದಲ್ಲಿ ಹೇಳುವುದಾದರೆ, ಇಲ್ಲಿನ ಮೂಲ ಸಸ್ಯ ಮತ್ತು ಪ್ರಾಣಿಗಳು ನಮ್ಮ ‘ಆಹಾರ-ಆಚಾರ’ಗಳಲ್ಲಿ ಬೆರೆತಿರುವುದು ತೀರಾ ಅತ್ಯಲ್ಪ. ಪ್ರಾಚೀನ ಕಾಲದಿಂದಲೂ ಭಾರತವು ಅನ್ವೇಷಕರಿಗೆ, ಪ್ರವಾಸಿಗರಿಗೆ ಹಾಗೂ ಆಕ್ರಮಣಕಾರರಿಗೆ ತೆರೆದ ಹೆಬ್ಬಾಗಿಲು. ಭಾರತಕ್ಕೆ ಸರ್ವದಿಕ್ಕಿನಿಂದಲೂ ಜನರು ಪ್ರವೇಶಿಸಿದ್ದಾರೆ. ಅಲ್ಲದೆ ಪ್ರಾಚೀನ ಕಾಲದಿಂದಲೂ ಭಾರತದ ಜೊತೆ ಅನ್ಯ ದೇಶಗಳು ವಾಣಿಜ್ಯ ಸಂಪರ್ಕವನ್ನಿಟ್ಟುಕೊಂಡಿದ್ದವು. ಹಾಗಾಗಿ ಇಲ್ಲಿನ ಮೂಲ ಜೀವಿಗಳು ಅನೇಕ ಖಂಡಗಳನ್ನು ತಲುಪಿವೆ. ಅನೇಕ ಪ್ರದೇಶಗಳಿಂದ ಹಲವಾರು ಜೀವಿಗಳು ಇಲ್ಲಿಗೆ ಬಂದು ನೆಲೆಯೂರಿವೆ.

ಭಾರತ-ಮಲೇಶಿಯಾ ದೇಶದ ನಡುವಿನ ಸಂಬಂಧ ತುಂಬಾ ಪುರಾತನವಾದುದು. ಪಾಲಿನೀಸಿಯಾ ದ್ವೀಪಗಳಿಂದ ಬಂದು ಮಲೇಷಿಯಾದಲ್ಲಿ ನೆಲೆಯಾಗಿದ್ದ ಕೆಸವೇ ಗೆಡ್ಡೆ, ಸುವರ್ಣ ಗೆಡ್ಡೆ, ಸೋರೆ, ಅಮಟೆ ಮುಂತಾದವು ಭಾರತಕ್ಕೆ ಈ ಸಂಬಂಧದಿಂದಲೇ ಪರಿಚಯವಾದವು.

ಹತ್ತನೇ ಶತಮಾನದ ಅಂತ್ಯದಿಂದ ವಾಯುವ್ಯದ ಮೂಲಕ ಪರದೇಶದವರ ದಂಡು ಭಾರತಕ್ಕೆ ಅವ್ಯಾಹತವಾಗಿ ಸಾಗಿ ಬಂತು. ಘಸ್ನಿ, ಗುಲಾಮ ಮನೆತನದವರು, ಖಿಲ್ಜಿಗಳು, ತುಘಲಕರು ನಂತರ ಮೊಘಲರು-ಮುಂತಾದವರು ಭಾರತಕ್ಕೆ ದಂಡೆತ್ತಿ ಬಂದರು. ಅವರಲ್ಲಿ ಮೊಘಲರು ಪರ್ಸಿಯಾ, ತುರ್ಕಿ ಮೊದಲಾದ ದೇಶಗಳಿಂದ ಅನೇಕ ಗಿಡ, ಮರ, ಬಳ್ಳಿಗಳನ್ನು ತಂದರು. ವಿಧ ವಿಧವಾದ ಅಡುಗೆಯ ಜೊತೆಗೆ ಮೊಘಲರು ತೋಟಗಾರಿಕೆಯನ್ನೂ ಉದ್ಯಾನವನಗಳನ್ನು ಪರಿಚಯಿಸಿದರು. ಹಾಗಾಗಿ ಅನೇಕ ಬಗೆಯ ಗುಲಾಬಿಗಳೂ, ಶುಷ್ಕ ವಾತಾವರಣದಲ್ಲಿ ಬೆಳೆವ ಹಣ್ಣಿನ ಮರಗಳು ಇಲ್ಲಿಗೆ ಬಂದವು. ಮೊಘಲರ ನಂತರ ಬಂದ ಪೋರ್ಚುಗೀಸರು ಭಾರತದ ಜೈವಿಕ ಸ್ವರೂಪವನ್ನೇ ಬದಲಿಸಿದರು. ಅವರು ತೋಟಗಾರಿಕೆಗೆ ಕಸಿ ವಿಧಾನವನ್ನು ಅಳವಡಿಸಿದರು. ಅನಾನಸ್, ತಂಬಾಕು, ಟೊಮೆಟೋ ಮುಂತಾದವನ್ನು ಪರಿಚಯಿಸಿದರು.

ಬೌದ್ಧ ಬಿಕ್ಷುಗಳಿಂದ ಆರಂಭವಾದ ಜೈವಿಕ ವಿನಿಮಯ ಕಾರ್ಯ ಭಾರತದಲ್ಲಿ ವಸಾಹತುಶಾಹಿ ದೇಶಗಳ ಆಕ್ರಮಣದಿಂದ ಹೊಸ ಸ್ವರೂಪವನ್ನೇ ಪಡೆಯಿತು. ಸಾಗುವಳಿ ಪೈರಿನ ಜೊತೆಗೆ ಕಳೆಗಿಡಗಳೂ ಇಲ್ಲಿಗೆ ದಾಳಿಯಿಟ್ಟವು. ಅಲ್ಲದೆ ಸ್ಥಳೀಯ ತಳಿಗಳ ಅಭಿವೃದ್ಧಿ ಕಾರ್ಯವೂ ನಡೆಯಲಾರಂಭಿಸಿತು. ಯುರೋಪ್ ವಸಾಹತುಗಳ ಜೊತೆಗೆ ಕ್ರೈಸ್ತ ಧರ್ಮಪ್ರಚಾರ ಮಾಡಲು ಬಂದ ಧರ್ಮಗುರುಗಳೂ ತಮ್ಮ ಜೊತೆಯಲ್ಲಿ ಜೈವಿಕ ಸಂಪತ್ತನ್ನೂ ತಂದು ಇಲ್ಲಿ ಪರಿಚಯಿಸಿದರು.

ಈ ನಿರಂತರ ಪ್ರಸಾರದಿಂದ ಇಂದು ನಮ್ಮ ‘ಆಚಾರ-ಆಹಾರ’ಗಳಲ್ಲಿ ಸ್ಥಳಜನ್ಯವೆನ್ನುವುದು ಹೆಚ್ಚು ಕಡಿಮೆ ಇಲ್ಲವೇ ಇಲ್ಲ ಎನ್ನುವಷ್ಟರ ಮಟ್ಟಿಗೆ ಕುಸಿಯಿತು. ಚೀನಾದಿಂದ ಬಂದ ರೇಷ್ಮೆ ಉದ್ದಿಮೆಯಾಗಿ ಬೆಳೆಯಿತು. ಮೆಕ್ಸಿಕೋದ ಹತ್ತಿ ಜನಪ್ರಿಯವಾಯಿತು. ಅರೇಬಿಯಾದ ಕಾಫಿ ದೊಡ್ಡ ತೋಟಗಳಲ್ಲಿ ತೊನೆದಾಡಿತು. ಅಮೆರಿಕಾ ಖಂಡದ ಮೆಣಸಿನಕಾಯಿ, ಟೊಮೆಟೋ, ಇಂಗು, ಆಲೂಗಡ್ಡೆ, ಕೋಸು, ಬಟಾಣಿ, ಈರುಳ್ಳಿ, ಬೀನ್ಸ್ ಮುಂತಾದವು ಭಾರತೀಯ ಅಡುಗೆ ಮನೆ ಸೇರಿದವು. ತೆಂಗು ಅಡುಗೆಮನೆಯಿಂದ ಹೊರಬಂದು ಎಲೆ ಅಡಿಕೆಯ ಜೊತೆ ಸಂಸ್ಕೃತಿಯಲ್ಲೂ ಸೇರಿ ಹೋಯಿತು. ಹುರುಳಿ, ಕಡಲೆಗಳು ನವಧಾನ್ಯದ ಪಟ್ಟಿಗೆ ಪ್ರವೇಶ ಪಡೆದವು. ನೆಲಗಡಲೆ ಮತ್ತು ಸೂರ್ಯಕಾಂತಿ ನಮ್ಮ ಹೊಲಗಳಲ್ಲಿ ಬೆಳೆದು ರೈತರಿಗೆ ಆರ್ಥಿಕ ಅನುಕೂಲ ಒದಗಿಸಿದವು. ಗೋಧಿ ಉತ್ತರದ ಗಂಗಾ ಬಯಲಿನಲ್ಲಿ ವಿರಾಜಮಾನವಾಗಿದೆ. ಸೇಬು, ದ್ರಾಕ್ಷಿ, ಚಕ್ಕೋತ, ಅಂಜೂರ, ಕಲ್ಲಂಗಡಿ, ಖರ್ಜೂರ, ನೆಲ್ಲಿ, ದಾಳಿಂಬೆ ಮುಂತಾದ ಹಣ್ಣುಗಳು, ಸುಗಂಧರಾಜ, ಸಂಜೆ ಮಲ್ಲಿಗೆ, ದವನ, ಚೆಂಡುಮಲ್ಲಿಗೆ, ಗೋರಂಟಿ, ಗುಲಾಬಿ ಮುಂತಾದ ಹೂಗಳು ಕೇಸರಿ, ಮೆಂತ್ಯ, ಲವಂಗ, ಓಮ, ಜೀರಿಗೆ ಮುಂತಾದ ಸಾಂಬಾರ ಗಿಡಗಳು, ಕಡಲೆ, ತೊಗರಿಯಂಥ ದ್ವಿದಳ ಧಾನ್ಯಗಳು ನಮ್ಮ ದೇಶದಲ್ಲಿ ಸಮೃದ್ಧಿಯಾಗಿ ಬೆಳೆಯುತ್ತಿವೆ. ಇವೆಲ್ಲ ಸಾವಿರಾರು ವರ್ಷಗಳ ಹಿಂದಿನಿಂದಲೂ ನಿಧಾನವಾಗಿ ಬಂದು ಇಲ್ಲಿನ ವಾತಾವರಣಕ್ಕೆ ಹೊಂದಿಕೊಂಡು ನೆಲೆಯೂರಿದಂಥ ಬೆಳೆಗಳು. ಇವುಗಳ ಜೊತೆಗೆ ಅನೇಕ ಕಳೆಗಳೂ ಬಂದಿವೆ. ಅರಣ್ಯವನ್ನೆಲ್ಲಾ ವ್ಯಾಪಿಸುತ್ತಿರುವ ಲಂಟಾನ, ಕೆರೆಗಳನ್ನು ನುಂಗುತ್ತಿರುವ ಐಕಾರ್ನಿಯಾ, ಆರೋಗ್ಯವನ್ನು ಕೆಡಿಸುತ್ತಿರುವ ಪಾರ್ಥೇನಿಯಂ, ಕತ್ತಾಳೆ, ಪಾಪಾಸುಕಳ್ಳಿ ಮುಂತಾದವೂ ಈ ಪ್ರಸರಣ ಕ್ರಿಯೆಯಲ್ಲಿ ಬಂದು ನೆಲೆಯೂರಿರುವ ಸಸ್ಯ ಸಂಕುಲಗಳು. ಇವೆಲ್ಲಾ ಈಗ ನಮ್ಮ ದೇಶದ ಸಸ್ಯಗಳೇ ಎನ್ನುವಂತೆ ಹೊಂದಿಕೊಂಡು ಬಿಟ್ಟಿವೆ!

ಆದರೆ ನಿಜವಾದ ಮಹಾವಿನಿಮಯ ಅಂದರೆ ಜಗತ್ತನ್ನು ಬೆಸೆಯುವಂಥ ಜೈವಿಕ ವಿನಿಯಮ ಕಾರ್ಯ ದೊಡ್ಡ ಮಟ್ಟದಲ್ಲಿ ಆರಂಭವಾದದ್ದು ಹದಿನೈದನೇ ಶತಮಾನದ ಅಂತ್ಯದಲ್ಲಿ.

ಹದಿನೈದನೇ ಶತಮಾನದ ಅಂತ್ಯದವರೆಗೆ ಇಂದಿನಂತೆ ಇಡೀ ಜಗತ್ತು ಎಲ್ಲರಿಗೂ ಪರಿಚಿತವಾದ ಭೌಗೋಳಿಕ ವಲಯವಾಗಿರಲಿಲ್ಲ. ಕ್ರಿ.ಶ.೧೪೯೨ರಲ್ಲಿ ಕೊಲಂಬಸ್ ನೇತೃತ್ವದಲ್ಲಿ ಸ್ಪೇನ್‌ನಿಂದ ಹೊರಟ ಹಡಗುಗಳು ಅಮೆರಿಕಾ ಖಂಡದ ಬಹಮಾ ದ್ವೀಪಗಳ ವಾಟ್‌ಲಿಂಗ್ ಎಂಬ ಸಣ್ಣ ದ್ವೀಪವನ್ನು ತಲಲುಪಿದ ನಂತರ ವಿಶ್ವ ನಕಾಶೆಯೇ ಬದಲಾಯಿತು. ಹಳೆಯ ಜಗತ್ತಿಗೆ ‘ಹೊಸ ಜಗತ್ತು’ ಪರಿಚಿತವಾಯಿತು. ಎರಡು ‘ವಿಶ್ವ’ಗಳ ನಡುವೆ ಹೊಸ ಸಂಬಂಧ ಉದಯವಾಯಿತು. ಅದರ ಜೊತೆಗೆ ಜೈವಿಕ ‘ವಿನಿಮಯ’ದ ಪ್ರಕ್ರಿಯೆ ಹಿಂದೆಂದೂ ಕಾಣದ ಪ್ರಮಾಣದಲ್ಲಿ ಜರುಗಿತು. ಇದರಿಂದ ಜಗತ್ತಿನ ಎರಡು ಭಿನ್ನ ಭಾಗಗಳ ಜೈವಿಕ ಸ್ವರೂಪದಲ್ಲಿ ಅಮೋಘವಾದ ಮಾರ್ಪಾಡು ಅಥವಾ ಪುನರ್‌ಸೃಷ್ಟಿ ಆರಂಭವಾಯಿತು.

ಈ ಜೈವಿಕ ಸ್ವರೂಪದ ಪುನರ್‌ಸೃಷ್ಟಿ ವಾಸ್ತವವಾಗಿ ಆರಂಭವಾದದ್ದು. ಕೊಲಂಬಸ್ ಸ್ಪೇನ್‌ನಿಂದ ಎರಡನೇ ಬಾರಿಗೆ ಅಮೆರಿಕಾ ಖಂಡ ತಲುಪಿದಾಗ ಕ್ರಿ.ಶ.೧೪೯೩ರಲ್ಲಿ ಕೊಲಂಬಸ್ ನೇತೃತ್ವದಲ್ಲಿ ಹದಿನೇಳು ಹಡಗುಗಳು ಸ್ಪೇನ್‌ನಿಂದ ಎರಡನೇ ಬಾರಿಗೆ ಅಮೆರಿಕಾ ಖಂಡ ತಲುಪಿದಾಗ ಕ್ರಿ.ಶ. ೧೪೯೩ರಲ್ಲಿ ಕೊಲಂಬಸ್ ನೇತೃತ್ವದಲ್ಲಿ ಹದಿನೇಳು ಹಡಗುಗಳ ಸ್ಪೇನ್‌ನಿಂದ ಹೊರಟು ಅಮೆರಿಕಾ ಖಂಡದ ತೀರ ತಲುಪಿದವು. ಈ ಹಡಗುಗಳಿಂದ ಕುದುರೆ, ಹಂದಿ, ಇಲಿ, ಹಣ್ಣಿನ ಬೀಜ, ಸಸಿಗಳು, ಕಳೆಗಳು ಹೊಸನೆಲಕ್ಕೆ ಇಳಿದವು. ಜೊತೆಯಲ್ಲಿ ಸಾವಿರಕ್ಕೂ ಹೆಚ್ಚು ಜನ ಹೊಸನಾಡಿಗೆ ಬಂದರು. ಅವರೆಲ್ಲ “ಕತ್ತಲ ಖಂಡದಲ್ಲಿರುವ ಹೊಸ ಜಗತ್ತಿನ ಜನರಿಗೆ ಜ್ಞಾನದ ಬೆಳಕನ್ನು ನೀಡುವ ಜೊತೆಗೆ ಸಂಪತ್ತು ಸೂರೆ ಮಾಡುವ” ಉದ್ದೇಶದಿಂದ ಬಂದವರು. ಅವರ ಜೊತೆಯಲ್ಲೇ ಅನೇಕ ಬಗೆಯ ರೋಗಾಣುಗಳು ಹೊಸ ಜಗತ್ತಿಗೆ ಪ್ರವೇಶ ಪಡೆದವು.

ಯೂರೋಪಿಯನ್ ಜನರನ್ನು ನೋಡುವುದಿರಲಿ, ಯುರೋಪ್ ಖಂಡ ಇರುವ ಬಗ್ಗೆಯೇ ಅಲ್ಲಿನ ಮೂಲನಿವಾಸಿ ರೆಡ್ ಇಂಡಿಯನ್ ಅಥವಾ ಇಂಡಿಯನ್ನರಿಗೆ ತಿಳಿದಿರಲಿಲ್ಲ. ಅಲ್ಲಿಯವರೆಗೂ ನೆಮ್ಮದಿಯಿಂದಿದ್ದ ಅವರ ಬದುಕೂ ಪಲ್ಲಟಗೊಂಡಿತು. ಸ್ಪೇಯ್ನಿಗರು ಹೊತ್ತು ತಂದ ರೋಗಾಣುಗಳು ಉಂಟು ಮಾಡಿದ ಸಾಂಕ್ರಮಿಕ ರೋಗದ ದಾಳಿಯನ್ನು ಸ್ಥಳೀಯರು ಎದುರಿಸಲಾರದೆ ಬಲಿಯಾದರು. ಅಲ್ಲಿ ಅರಳಿದ ಇಂಕಾ, ಮಾಯಾ, ಅಜೆಟೆಕ್ ಟಾಲ್‌ಟಿಕ್ಸ್ ಮುಂತಾದ ಮೂಲ ಸಂಸ್ಕೃತಿಗಳನ್ನು ಹೊಸಬರು ಹತ್ತಿಕ್ಕಿದರು. ಇಂಥ ದುರಂತದ ಹಿನ್ನೆಲೆಯಲ್ಲಿಯೇ ‘ಮಹಾವಿನಿಮಯ’ದ ಪ್ರಕ್ರಿಯೆ ಆರಂಭವಾಯಿತು. ಎರಡೂ ಜಗತ್ತಿನ ಭೌಗೋಳಿಕ ದೃಶ್ಯ ಬದಲಾಯಿತು.

ಮಧ್ಯ ಅಮೆರಿಕಾ ಅಥವಾ ಮೆಕ್ಸಿಕೋ ಪ್ರದೇಶದಲ್ಲಿ ವಾಸವಾಗಿದ್ದ ಇಂಡಿಯನ್ನರು ಸುಮಾರು ಏಳು ಸಾವಿರ ವರ್ಷಗಳಿಂದಲೇ ಮೆಕ್ಸಿಕನ್ ಜೋಳ ಅಥವಾ ಮೆಕ್ಕೆ ಜೋಳ ಕೃಷಿಯಲ್ಲಿ ಪರಿಣತಿ ಸಾಧಿಸಿದ್ದರು. ಸುಧಾರಿತ ತಳಿಯನ್ನು ಬೆಳೆಸುವ ತಂತ್ರ ಸಹ ಅವರಿಗೆ ತಿಳಿದಿತ್ತು. ಒಂದು ಕಾಳಿನಿಂದ ಸುಮಾರು  ಇನ್ನೂರೈವತ್ತು ಕಾಳುಗಳನ್ನು ನೀಡುವ ಮೆಕ್ಕೆ ಜೋಳ ಯೂರೋಪಿಯನ್ನರ ಪಾಲಿಗೆ ಚಿನ್ನದ ನಾಣ್ಯಕ್ಕಿಂತಲೂ ಅಮೂಲ್ಯವಾಯಿತು. ಯೂರೋಪಿನಲ್ಲಿ ಮನುಷ್ಯರು ಮತ್ತು ಜಾನುವಾರುಗಳಿಗೆ ಅದು ತುಂಬಾ ಜನಪ್ರಿಯ ಆಹಾರವೆನಿಸಿತು. ಸರಿಸುಮಾರು ಎಲ್ಲ ಸಾಕು ಪ್ರಾಣಿಗಳು ಅದನ್ನು ತಿನ್ನುತ್ತಿದ್ದರಿಂದ ಧಾನ್ಯ, ಮಾಂಸ ಮತ್ತು ಹಾಲು ಉತ್ಪಾದನೆಯಲ್ಲಿ ಯೂರೋಪ್‌ಅಭಿವೃದ್ಧಿ ಸಾಧಿಸಿತು.

ಈ ಜೋಳದ ಜೊತೆಗೆ ಯೂರೋಪಿಯನ್ನರ ಹಸಿವು ನೀಗಿಸಿದ ಮತ್ತೊಂದು ಸಸ್ಯವೆಂದರೆ ಆಲೂಗಡ್ಡೆ. ಅಮೆರಿಕಾ ಖಂಡದ ಇಂಕಾ ನಾಗರಿಕರು ಆಲೂಗಡ್ಡೆಯ ಮೂರು ಸಾವಿರ ತಳಿಗಳನ್ನು ಕೊಲಂಬಸ್ ತಲುಪುವ ವೇಳೆಗೆ ರೂಪಿಸಿದ್ದರು. ಆರಂಭದಲ್ಲಿ ಅದರ ವಾಸನೆಯನ್ನು ಕಂಡರಾಗದ ಯೂರೋಪಿಯನ್ನರು ಹೇಸಿಗೆ ಪಟ್ಟುಕೊಳ್ಳುತ್ತಿದ್ದರು. ಆದರೆ ಭೂಮಿಯಲ್ಲಿ ಆಹಾರದ ಕಣಜವನ್ನೆ ಸೃಷ್ಟಿಸುವ ಈ ಗಿಡವನ್ನು ಬೆಳೆಯುವಂತೆ ಅಲ್ಲಿನ ಆಳರಸರು ರೈತರನ್ನು ಒತ್ತಾಯಿಸಿ ಆಲೂಗಡ್ಡೆ ಕೃಷಿಯನ್ನು ರೂಢಿಸಿದರು. ಕ್ರಮೇಣ ಯೂರೋಪಿಯನ್ನರ ಆಹಾರ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದ ಆಲೂಗಡ್ಡೆ ಆ ಖಂಡದಲ್ಲಿ ಆಗಾಗ್ಗೆ ಮರುಕಳಿಸುತ್ತಿದ್ದ ಕ್ಷಾಮವನ್ನು ಪಡೆಯುವಲ್ಲಿ ಯಶಸ್ವಿಯಾಯಿತು. ಚೀನಿಯರ ಮೇಲಿನ ಅವಲಂಬನೆಯನ್ನು ಆಲೂ ತಪ್ಪಿಸಿತು. ಭಾರತದಂತಹ ರಾಷ್ಟ್ರಗಳಲ್ಲಿ ಅದು ತರಕಾರಿಯಾಗಿ ಜನಪ್ರಿಯವಾಯಿತು.

ಅಮೆರಿಕಾ ಖಂಡದ ಸಾಂಬಾರ ಪದಾರ್ಥಗಳು, ತರಕಾರಿಗಳು ಇಡೀ ಜಗತ್ತಿನ ಅಡುಗೆ ಮನೆಯನ್ನು ಸೇರಿದವು. ಟೊಮೆಟೋ, ಬೀನ್ಸ್, ಮೆಣಸಿನಕಾಯಿ, ಇಲ್ಲದ ಜಾಗತಿಕ ಅಡುಗೆಯನ್ನು ಊಹಿಸಿಕೊಳ್ಳುವುದು ಕಷ್ಟ. ಅಲ್ಲಿ ಬೆಳೆಯುತ್ತಿದ್ದ ಹೊಗೆಸೊಪ್ಪು ಇಡೀ ವಿಶ್ವಕ್ಕೆ ಅಮಲೇರಿಸಿದೆ. ಈಗ ಅದು ಬೆಳೆಯದ ದೇಶವೇ ಇಲ್ಲವೆನ್ನುವಂತಾಗಿದೆ. ಹಾಗೆಯೇ ಅಮೆರಿಕಾದ ಬೃಹತ್ ಬಯಲಿನಲ್ಲಿ ಇಂಡಿಯನ್ನರು ಬೆಳೆಯುತ್ತಿದ್ದ ನೆಲಗಡಲೆ ಹಾಗೂ ಸೂರ್ಯಕಾಂತಿ ಇಂದು ಪ್ರಮುಖ ಎಣ್ಣೆಕಾಳುಗಳಾಗಿವೆ. ಎಣ್ಣೆ ನೀಡುವ ಆಲಿವ್ ಗಿಡದ ಬೆಳವಣಿಗೆಗೆ ರಷ್ಯಾ ಹವಾಮಾನ ಪ್ರತಿಕೂಲವಾಗಿ ಮಾರ್ಪಾಟ್ಟಿದ್ದರಿಂದ, ಈಗ ಸೂರ್ಯಕಾಂತಿ ಅವರಿಗೆ ವರವಾಗಿದೆ. ಅಲ್ಲಿಂದ ಭಾರತಕ್ಕೂ ತನ್ನ ಚೆಲುವನ್ನು ಹೊತ್ತು ತಂದಿದೆ.

ನಯವಾದ, ದೀರ್ಘವಾದ ಎಳೆ ನೀಡುವ ಮೆಸೋ ಅಮೆರಿಕನ್ ಹತ್ತಿ, ಅನಾನಸ್, ಅನೇಕ ಬಗೆಯ ಔಷಧ ಸಸ್ಯಗಳು, ಟರ್ಕಿ ಕೋಳಿಗಳು ಯೂರೋಪಿಗೆ ಚೈತ್ರಯಾತ್ರೆ ಕೈಗೊಂಡು ಜನಪ್ರಿಯವಾದವು.

ಇದೇ ರೀತಿ ಹಳೆಯ ಜಗತ್ತಿನಿಂದ ಹೊಸ ಜಗತ್ತಿಗೆ ಹರಿದು ಬಂದ ಜೈವಿಕ  ಸಂಪತ್ತೂ ಅಪಾರ. ಧಾನ್ಯಗಳು, ಜಾನುವಾರು, ತರಕಾರಿ, ತಂತ್ರಜ್ಞಾನ-ಇವು ಹೊಸ ಜಗತ್ತಿಗೆ ಯೂರೋಪಿಯನ್ನರು ನೀಡಿದ ಕಾಣಿಕೆಗಳು. ಹೊಸ ಜಗತ್ತಿನ ಜೈವಿಕ ನಕಾಶೆಯನ್ನು ಬದಲಾಯಿಸುವಲ್ಲಿ ಅವು ಪ್ರಮುಖ ಪಾತ್ರ ವಹಿಸಿವೆ. ಉಷ್ಣ ಪ್ರದೇಶದಲ್ಲಿ ಸರಿಯಾಗಿ ಬೆಳೆಯಲಾರದ ಗೋಧಿ, ಓಕ್, ಬಾರ್ಲಿ, ರೈ ಮುಂತಾದ ಧಾನ್ಯಗಳು ಅಮೆರಿಕ ಖಂಡದಲ್ಲಿ ಸಮೃದ್ಧಿಯಾಗಿ ಬೆಳೆಯಲಾರಂಭಿಸಿದವು. ಸಮೃದ್ಧವಾಗಿದ್ದ ವಿಶಾಲ ಹುಲ್ಲುಗಾವಲುಗಳು ಗೋಧಿಯ ಹೊಲಗಳಾಗಿ ಪರಿವರ್ತನೆಗೊಂಡವು. ಮಧ್ಯಪ್ರಾಚ್ಯ ತವರಿನ ಗೋಧಿ ಅಮೆರಿಕಾ ಖಂಡದ ಬಯಲಿನಲ್ಲಿ ಬೆಳೆದು ತೂಗಾಡಿತು. ಅಮೆರಿಕಾದ ಬಯಲು ಪ್ರದೇಶ ಈಗ ಜಗತ್ತಿನ ‘ಬ್ರೆಡ್ ಬ್ಯಾಸ್ಕೆಟ್’ ಎಂದೇ ಪ್ರಖ್ಯಾತಿ ಗಳಿಸಿದೆ.

ಅಟ್ಲಾಂಟಿಕ್ ಸಾಗರವನ್ನು ದಾಟಿ ಬಂದ ಕುದುರೆಗಳು ಹೊಸ ಜಗತ್ತಿನ ಸಂಚಾರ ಮತ್ತು ಸಾರಿಗೆ ವ್ಯವಸ್ಥೆಯಲ್ಲಿ ಮಹತ್ವದ ಪಾತ್ರ ವಹಿಸಿದವು. ಬಯಲಿನಲ್ಲಿ ಜಾನುವಾರುಗಳನ್ನು ಮೇಯಿಸುವ ಕೌಬಾಯ್‌ಗಳ ಕಾರ್ಯನಿರ್ವಹಣೆಗೆ ಕುದುರೆಗಳು ಬೆಂಬಲವಾಗಿ ಬಂದು ನಿಂತವು. ಕ್ರಿ.ಶ. ೧೪೯೩ರಲ್ಲೇ ಅಮೆರಿಕಾ ಖಂಡಕ್ಕೆ ಕಾಲಿಟ್ಟ ಹಂದಿಗಳು ಹೇರಳವಾಗಿ ವಂಶಾಭಿವೃದ್ಧಿ ಮಾಡಿ ಅವರ ಆಹಾರ ಪಟ್ಟಿಯಲ್ಲಿ ಅಗ್ರಸ್ಥಾನ ಗಳಿಸಿದವು. ಕ್ರಿ.ಶ. ೧೫೨೦ರ ವೇಳೆಗೆ ಅಮೆರಿಕಾಗೆ ಯೂರೋಪ್‌ನಿಂದ ಬಂದ ಕುರಿಗಳು ಮಂದೆ ಮಂದೆಯಾಗಿ ಬೆಳೆದವು. ಹದಿನಾರನೇ ಶತಮಾನದ ಅಂತ್ಯದ ವೇಳೆಗೆ ಪೆರು ದೇಶದಲ್ಲಿ ಎಪ್ಪತ್ತು ಉಣ್ಣೆ ಮಿಲ್‌ಗಳು ಆರಂಭವಾಗಿದ್ದವು. ಸ್ಪೇನ್‌ನ ಕೋಳಿತಳಿಗಳನ್ನು ಇಂಡಿಯನ್ನರು ಬಹುಬೇಗ ಅಂಗೀಕರಿಸಿ ಹೊಸ ತಳಿಗಳನ್ನು ಅಭಿವೃದ್ಧಿಪಡಿಸಿದರು.

ಕ್ರಿ.ಶ. ೧೪೯೩ರಲ್ಲಿ ಕೊಲಂಬಸ್ ಕೆನರಿ ದ್ವೀಪದಿಂದ ತಂದ ಕಬ್ಬು ಅಮೆರಿಕಾದಲ್ಲಿ ಮುಂದೆ ಹೇರಳವಾಗಿ ಬೆಳೆಯಿತೇನೋ ನಿಜ! ಆದರೆ ಅದರ ಕೃಷಿಗೆ ಆಫ್ರಿಕಾದ ಲಕ್ಷಾಂತರ ಗುಲಾಮರು ಬೆವರು ಸುರಿಸಬೇಕಾಯಿತು.

ಈ ಮಹಾವಿನಿಮಯ ಎರಡೂ ಕಡೆಯೂ ಅನೇಕ ರೋಗಗಳನ್ನು ಹರಡುವಲ್ಲಿ ಯಶಸ್ವಿಯಾಯಿತು. ಯೂರೋಪ್‌ನಲ್ಲಿ ಮೊದಲು ಲೈಂಗಿಕ ರೋಗ ‘ಸಿಫಿಲಿಸ್’ ಇರಲಿಲ್ಲ. ಹೊಸ ಜಗತ್ತಿನ ಯಾತ್ರೆಯಿಂದ ಕೊಲಂಬಸ್ ಹಿಂತಿರುಗಿದ ನಂತರ ಯೂರೋಪ್‌ನಲ್ಲಿ ಆ ರೋಗ ವ್ಯಾಪಕವಾಗಿ ಕಾಣಿಸಿಕೊಂಡಿತು. ಆದರೆ ಇದು ಯುರೋಪ್‌ಗೆ ಬಂದ ವಿಧಾನದ ಬಗ್ಗೆ ವೈದ್ಯ ವಿಜ್ಞಾನ ಇತಿಹಾಸಕಾರರಲ್ಲಿ ಇನ್ನೂ ಒಮ್ಮತ ಮೂಡಿಲ್ಲ. ಬ್ರಿಟಿಷರ ಆಗಮನದ ನಂತರವೇ ಭಾರತದಲ್ಲಿ ‘ಪರಂಗಿರೋಗ’ ಕಾಣಿಸಿಕೊಂಡಿತು. ಇದು ಭಾರತಕ್ಕೆ ಬ್ರಿಟಿಷರು ನೀಡಿದ ಕೊಡುಗೆ ಎಂಬುದು ಹಲವರ ವ್ಯಾಖ್ಯಾನ.

ಮನುಷ್ಯನ ಮೂಲಕ ಜೀವ ಸಂಕುಲಗಳ ಪ್ರಸಾರ ಪ್ರಾಚೀನಕಾಲದಿಂದಲೂ ರೂಢಿಯಲ್ಲಿದೆ. ಈಗ ಹೊಸ ತಳಿಗಳ ಲಾಭ ಪಡೆಯಲು ಜೈವಿಕ ವಿನಿಮಯ ಜಗತ್ತಿನಾದ್ಯಂತ ಕ್ರಮಬದ್ಧವಾಗಿ, ವೈಜ್ಞಾನಿಕವಾಗಿ ಜರುಗುತ್ತಿದೆ. ಅರವತ್ತರ ದಶಕದ ಅಂತ್ಯದಲ್ಲಿ ಭಾರತಕ್ಕೆ ತರಿಸಿದ ಮೆಕ್ಸಿಕನ್ ಗಿಡ್ಡ ಗೋಧಿ ತಳಿಗಳು ಭಾರತದಲ್ಲಿ ಹಸಿರು ಕ್ರಾಂತಿಗೆ ಕಾರಣವಾದವು. ಹಾಗೆಯೇ ಡೆನ್ಮಾರ್ಕ್ ದೇಶದ ಜಾನುವಾರು ತಳಿಗಳ ಆಮದಿನಿಂದ ಹೆಚ್ಚು ಕಾಲ ಹಾಲು ನೀಡುವ ಪಶುಗಳ ಸೃಷ್ಟಿ ಫಲ ನೀಡಿದೆ. ಕೃಷಿ, ತೋಟಗಾರಿಕೆ, ಮೀನುಗಾರಿಕೆ, ಪಶು ಸಂಗೋಪನೆ ಮುಂತಾದ ಅನ್ವಯಿಕ ಕ್ಷೇತ್ರಗಳಲ್ಲಿ ಜೈವಿಕ ವಿನಿಮಯದ ಜೊತೆಗೆ ತಂತ್ರಜ್ಞಾನ ಪರಿಚಯವೂ ಜೊತೆಯಲ್ಲೇ ಸಾಗಿದೆ. ಇವೆಲ್ಲವೂ ಮಾನವ ಸಮಾಜದ ಉಪಯುಕ್ತತೆ ಮತ್ತು ಅಭಿವೃದ್ಧಿಗಾಗಿ ನಡೆದ ವಿನಿಮಯಗಳು.

ಈಗಾಗಲೇ ಹೇಳಿದಂತೆ ಮನುಷ್ಯ ಪ್ರವಾಸಿಯಾಗಿ, ಅನ್ವೇಷಿಯಾಗಿ, ಆಕ್ರಮಣಕಾರನಾಗಿ ವಿವಿಧ ಪ್ರದೇಶಗಳಲ್ಲಿ ಬೆಳೆವ ಸಸ್ಯ, ಪ್ರಾಣಿಗಳನ್ನು ತನ್ನ ತವರಿಗೆ ಇಲ್ಲವೇ ತನ್ನ ತವರಿನಿಂದ ಬೇರೆ ಬೇರೆ ಪ್ರದೇಶಗಳಿಗೆ ಪ್ರಸಾರ ಮಾಡಿದ್ದಾನೆ. ಈ ಕ್ರಿಯೆಗಳು ನಿಧಾನವಾಗಿ ಒಂದು ಪ್ರದೇಶದ ಜೈವಿಕ ಸ್ವರೂಪದ ಜೊತೆಗೆ ಸಂಸ್ಕೃತಿಯನ್ನೇ ಬದಲಾಯಿಸುವಷ್ಟು ಪ್ರಬಲವಾಗಿರುವುದನ್ನು ಇತಿಹಾಸದುದ್ದಕ್ಕೂ ಕಾಣಬಹುದು.

ಹೊಸ ನೆಲೆಗೆ ಬಂದ ಸಂಕುಲಗಳು ಸಾಮಾನ್ಯವಾಗಿ ಭಿನ್ನ ವಾತಾವರಣದಲ್ಲಿ ಬೆಳೆದು ಅಭಿವೃದ್ಧಿಯಾಗಬೇಕಾಗುತ್ತದೆ. ಅಂಥ ಸಂದರ್ಭದಲ್ಲಿ ಹೊಸ ಪರಿಸರಕ್ಕೆ ಅವು ಹೊಂದಿಕೊಳ್ಳಲು ಅಸಮರ್ಥವಾಗುತ್ತವೆ. ಇಲ್ಲವೇ ತಮ್ಮ ತವರಿನ ಪರಿಸರಕ್ಕಿಂತಲೂ ಉತ್ತಮವಾಗಿ ಅಭಿವೃದ್ಧಿಯಾಗುತ್ತವೆ. ಇದಕ್ಕೆ ಈಗಾಗಲೇ ಅನೇಕ ಉದಾಹರಣೆಗಳನ್ನು ನೀಡಿದ್ದೇವೆ.

ಹೊಸ ಪ್ರದೇಶವೊಂದರಲ್ಲಿ ಪರಕೀಯ ಸಂಕುಲ ಅಭಿವೃದ್ಧಿಯಾದರೆ, ಸ್ಥಳೀಯ ಪರಿಸರದ ಮೇಲೆ ಅದು ವಿಪರೀತ ಪರಿಣಾಮ ಉಂಟು ಮಾಡುತ್ತದೆ. ಪರಕೀಯ ಸಂಕುಲಗಳು ಸ್ಥಳ ಜನ್ಯ ಸಸ್ಯ ಸಂಕುಲಗಳನ್ನು ಹಿಮ್ಮೆಟ್ಟಿಸಿ ತಾವೇ ವಿಜೃಂಭಿಸಬಹುದು. ಇದರಿಂದ ಮಿಲಿಯಾಂತರ ವರ್ಷಗಳಿಂದ ವಿಕಾಸಗೊಂಡು ಅರಳಿದ ಜೈವಿಕ ವೈವಿಧ್ಯ ನಾಶವಾಗಬಹುದು. ನ್ಯೂಜಿಲ್ಯಾಂಡ್ ದ್ವೀಪಕ್ಕೆ ಯೂರೋಪಿಯನ್ನರು ಸಾಗಿಸಿದ ಹಂದಿ, ಕತ್ತೆ, ಕೋಳಿಗಳ ಹಾವಳಿಯಿಂದ ಅಲ್ಲಿನ ಸ್ಥಳ ಜನ್ಯ ಪ್ರಾಣಿಗಳು ಸಂಪೂರ್ಣ ನಾಶವಾಗಿದೆ. ಹಾಗೆಯೇ ಡಚ್ಚರು ಮಾರಿಷಸ್ ದ್ವೀಪಕ್ಕೆ ಪರಿಚಯಿಸಿದ ಮಂಗ, ಹಂದಿಗಳು ಡೋ ಡೋ, ಸಾಲಿಟೇರ್‌ನಂಥ ಹಕ್ಕಿಗಳನ್ನು ನಿರ್ಮೂಲನ ಮಾಡಿವೆ. ಹೀಗೆ ಮೂಲ ಪರಿಸರ ಪರಕೀಯ ಸಂಕುಲಗಳ ದಾಳಿಯಿಂದ ತತ್ತರಿಸುವ ಅಪಾಯವಿದೆ.

ಈಗ ಮಾನವ ಸಾಕಷ್ಟು ಬುದ್ಧಿ ಕಲಿತಿದ್ದಾನೆ. ಪರದೇಶದ ಜೈವಿಕ ವಸ್ತುಗಳ ಆಮದಿನ ಮೇಲೆ ನಿಗಾ ವಹಿಸಿದ್ದಾನೆ.

ಆದರೆ ಒಂದಂತೂ ನಿಜ. ಈ ಜೈವಿಕ ವಿನಿಮಯವು ಪರಿಸರಕ್ಕೆ ಅದೆಷ್ಟೇ ಹಾನಿಯುಂಟು ಮಾಡಿದರೂ ಜಗತ್ತನ್ನು ಬೆಸೆಯುವಲ್ಲಿ ನಾಗರಿಕತೆ, ಸಂಸ್ಕೃತಿ ಅರಳುವಲ್ಲಿ ಹಾಗೂ ಅವುಗಳ ವಿನಾಶದಲ್ಲಿ ಪ್ರಧಾನವಾದ ಪಾತ್ರ ವಹಿಸಿರುವುದನ್ನು ಮರೆಯುವಂತಿಲ್ಲ.

ಡಾರ್ವಿನ್ ವಿಕಾಸವಾದ ಸಿದ್ಧಾಂತದ ಹಿನ್ನೆಲೆಯಲ್ಲಿ ರಚಿತವಾದ ಲೇಖನ

* * *