ವಸುಂಧರೆ, ಇಳೆ, ಪೃಥ್ವಿ, ಧರಣಿ… ಭೂಮಿಗೆ ಅಷ್ಟೊಂದು ಹೆಸರುಗಳು! ನಮ್ಮ ಭೂಮಿ ಬ್ರಹ್ಮಾಂಡದಲ್ಲಿ ತೇಲಾಡುತ್ತಿರುವ ಒಂದು ಅಪೂರ್ವ ಗ್ರಹ. ತನ್ನ ಅಕ್ಷದ ಮೇಲೆ ತಿರುಗುತ್ತಾ ಹಗಲು-ರಾತ್ರಿಗಳನ್ನು, ಸೂರ್ಯನ ಸುತ್ತ ತನ್ನ ಕಕ್ಷೆಯಲ್ಲಿ ಪರಿಭ್ರಮಿಸುತ್ತಾ ಋತುಮಾನ, ವರ್ಷ ಯುಗ, ಕಲ್ಪ-ಹೀಗೆ ಕಾಲಾಂತರಗಳನ್ನು ಸೃಷ್ಟಿಸುತ್ತಾ, ಪ್ರತಿಕ್ಷಣವೂ ಅನಂತ ಸಾಧ್ಯತೆಗಳನ್ನು, ವೈವಿಧ್ಯವನ್ನು ಮೆರೆಯುತ್ತಾ ಬಂದಿದೆ.

ಭೂಮಿ ಸೌರವ್ಯೂಹದ ಒಂದು ಭಾಗ. ಸೂರ್ಯನ ಪರಿವಾರದ ಎಂಟು ಗ್ರಹಗಳಲ್ಲಿ ಒಂದು. ಸೌರವ್ಯೂಹದ ಸದಸ್ಯರ ಗಾತ್ರದಲ್ಲಿ ಭೂಮಿಗೆ ಐದನೇ ಸ್ಥಾನ. ಬರಿಗಣ್ಣಿಗೆ ದಿಗಂತಕ್ಕೆ ಒತ್ತಿಕೊಂಡಂತೆ ಕಾಣುವ ಇದು ಸೂರ್ಯನಿಗಿಂತ ಸಹಸ್ರಾರು ಪಾಲು ಚಿಕ್ಕದು. ತುದಿ, ಮೊದಲು ಮತ್ತು ಆದಿ, ಅಂತ್ಯವಿಲ್ಲದ ಅನಂತ ಬ್ರಹ್ಮಾಂಡದಲ್ಲಿ ಸೂರ್ಯನಿಗಿಂತಲೂ ಲಕ್ಷಪಾಲು ದೊಡ್ಡದಾದ ಆಕಾಶಕಾಯಗಳಿವೆ. ಕೆಲವಂತೂ ಊಹೆಗೆ ನಿಲುಕದಷ್ಟು ದೂರದಲ್ಲಿ ಚುಕ್ಕೆಯಾಗಿ ಹೊಳೆಯುತ್ತಿವೆ. ಇನ್ನು ಕೆಲವು ಅತ್ಯಂತ ಪ್ರಬಲ ದೂರದರ್ಶಕಕ್ಕೂ ಗೋಚರಿಸವು. ಭೂಮಿ ಮತ್ತು ಸೂರ್ಯನ ದೂರ ೧೪೯.೮ಮಿಲಿಯನ್ ಕಿ.ಮೀಗಳು. ಸೂರ್ಯನಿಂದ ಹೊರಟ ಬೆಳಕು ಭೂಮಿಯನ್ನು ತಲುಪಲು ಎಂಟು ನಿಮಿಷ ಸಾಕು. ಆದರೆ ಕೆಲವು ನಕ್ಷತ್ರಗಳಿಂದ ಹೊರಟ ಬೆಳಕು ಭೂಮಿಯನ್ನು ತಲುಪಲು ೧೪೦೦ ಜ್ಯೋತಿರ್ವರ್ಷಗಳು ಬೇಕು. ಒಂದು ಜ್ಯೋತಿರ್ವರ್ಷ ದೂರ ಎಂದರೆ ಸೆಕೆಂಡಿಗೆ ಮೂರು ಲಕ್ಷ ಕಿ.ಮೀ. ವೇಗದಲ್ಲಿ ಸಾಗುವ ಕಿರಣ ಒಂದು ವರ್ಷದಲ್ಲಿ ಕ್ರಮಿಸುವ ದೂರ. ಸೂರ್ಯನಿಗೆ ಹತ್ತಿರವಿರುವ ಆಲ್ಫಾ ಸೆಂಟಾರಿ ನಕ್ಷತ್ರ ಮತ್ತು ಭೂಮಿಯ ನಡುವಿನ ಅಂತರ ೪.೩ ಜ್ಯೋತಿರ್ವರ್ಷ. ಅಂದರೆ ಆಲ್ಫಾ ಸೆಂಟಾರಿಯಿಂದ ಇಂದು ಹೊರಟ ಕಿರಣ ಭೂಮಿಯನ್ನು ತಲುಪಲು ೪.೩ ವರ್ಷ ತೆಗೆದುಕೊಳ್ಳುತ್ತದೆ. ಕೆಲವು ನಕ್ಷತ್ರಗಳಿಂದ ಬೆಳಕು ಇಂದು ಹೊರಟರೆ ಭೂಮಿಯನ್ನು ೪೧ ಶತಕೋಟಿ ವರ್ಷಗಳ ನಂತರ ತಲುಪುತ್ತದೆ. ಈ ಹಿನ್ನೆಲೆಯಲ್ಲಿ ಅವಲೋಕಿಸಿದರೆ ಭೂಮಿ ಎಷ್ಟು ಸಣ್ಣದು ಹಾಗೂ ಬ್ರಹ್ಮಾಂಡ ಎಷ್ಟು ವೈವಿಧ್ಯಮಯವಾದುದು ಎನ್ನುವುದು ತಿಳಿಯುತ್ತದೆ.

ಆದರೂ ಈ ಭೂಮಿ ಈ ಬ್ರಹ್ಮಾಂಡದ ಅಪೂರ್ವ ಸೃಷ್ಟಿ ಏಕೆಂದರೆ ನಮಗೆ ಗೊತ್ತಿರುವಂತೆ ಭೂಮಿಯಲ್ಲಿ ಮಾತ್ರ ಜೀವಿಗಳಿವೆ. ವಿಜ್ಞಾನಿಗಳ ಪ್ರಕಾರ ಭೂಮಿ ಸೌರವ್ಯೂಹದಲ್ಲಿ ಉಗಮಗೊಂಡು ಐದು ನೂರು ಕೋಟಿ ವರ್ಷಗಳಾಗಿವೆ. ಭೂಮಿಯಲ್ಲಿ ಸುಮಾರು ನಾಲ್ಕುನೂರು ಕೋಟಿ ವರ್ಷಗಳ ಹಿಂದೆ ಜೀವ ಉಗಮಗೊಂಡಿತೆಂದು ನಂಬಲಾಗಿದೆ. ಮಾನವ ಉಗಮಗೊಂಡಿದ್ದು ಮಾತ್ರ ಇತ್ತೀಚೆಗೆ-ಸುಮಾರು ಇಪ್ಪತ್ತೈದು ಲಕ್ಷ ವರ್ಷಗಳ ಹಿಂದೆ.

ಭೂಮಿಯಲ್ಲೇ ಜೀವ ಸೃಷ್ಟಿಯಾಗಲು ಕಾರಣವಾದ ಅಂಶ ಯಾವುದು? ಇದಕ್ಕೆ ಮೂಲ ಕಾರಣ ಸೂರ್ಯನಿಂದ ಭೂಮಿ  ಇರುವ ಅಂತರ; ಭೂಮಿಯ ಮೇಲ್ಮೈಯನ್ನು ಸುತ್ತುವರೆದಿರುವ ವಾಯುಮಂಡಲದ ತೆಳುಪದರ. ಭೂಮಿಯಲ್ಲಿ ಜೀವ ಉಗಮವಾಗಲು ಭೂಮಿ ಮತ್ತು ಸೂರ್ಯನ ನಡುವೆ ಇರುವ ಅಂತರವೇ ಪ್ರಮುಖ ಕಾರಣವೆಂದು ವಿಜ್ಞಾನಿಗಳ ಹೇಳಿಕೆ. ಭೂಮಿಯು ಸೂರ್ಯನಿಗೆ ಶನಿ, ಗುರು ಗ್ರಹಗಳಂತೆ ದೂರವಿದ್ದರೆ ಶೀತವಲಯಗಳು ಸೃಷ್ಟಿಯಾಗಿರುತ್ತಿದ್ದವು. ಬುಧ, ಶುಕ್ರ, ಅಂಗಾರಕ ಗ್ರಹಗಳಂತೆ ಸಮೀಪವಿದ್ದರೆ ಅದು ಕೆಂಡದುಂಡೆಯಾಗಿ ಉರಿಯುತ್ತಿತ್ತು. ಇಂಥ ಎರಡು ವೈಪರೀತ್ಯ ಸನ್ನಿವೇಶಗಳಲ್ಲಿ ಜೀವ ಸೃಷ್ಟಿಯಾಗುತ್ತಿರಲಿಲ್ಲ. ಜೀವವನ್ನು ಪೋಷಿಸುವಷ್ಟು ಶಾಖವನ್ನು ಮತ್ತು ಶಕ್ತಿಯನ್ನು ಪಡೆಯುವ ಅಂತರದಲ್ಲಿ ಭೂಮಿಯಿದೆ. ಸೂರ್ಯ ನಿರಂತರವಾಗಿ ಶಕ್ತಿಯನ್ನು ದಯಪಾಲಿಸುತ್ತಾನೆ. ಭೂಮಿಯನ್ನು ಅಪ್ಪಿಹಿಡಿದಿರುವ ವಾತಾವರಣದ ತೆಳುಪದರದಲ್ಲಿ ಆಮ್ಲಜನಕ, ಸಾರಜನಕ, ನೀರಾವಿ ಮತ್ತು ಇಂಗಾಲದ ಡೈಆಕ್ಸೈಡ್‌ಗಳ ಮಿಶ್ರಣವಿದೆ. ಇದರ ಜೊತೆಗೆ ಭೂಮಿಯ ಮೇಲೆ ನೀರು ಮತ್ತು ಮಣ್ಣಿನಲ್ಲಿ ಖನಿಜಾಂಶಗಳಿವೆ. ವಾಯುಮಂಡಲ, ಸೌರಶಕ್ತಿ, ನೀರು ಮತ್ತು ಭೂಪದರ ಜೀವ ಪೋಷಾಕಾಂಶ ದ್ರವ್ಯಗಳಾಗಿ ಜೀವಸೃಷ್ಟಿಗೆ ನಾಂದಿ ಹಾಡಿವೆ. ಈ ಜೀವ ಸೃಷ್ಟಿಯೇ ಭೂಮಿಯನ್ನು ಬ್ರಹ್ಮಾಂಡದ ಅಪೂರ್ವ ಗ್ರಹವನ್ನಾಗಿ ರೂಪಿಸಿದೆ.

ಭೂಮಿಯನ್ನು ಅಪ್ಪಿ ಹಿಡಿದಿರುವ ವಾಯುಮಂಡಲದಿಂದ ಹಿಡಿದು ಭೂಮಿಯ ಮೇಲ್ಮೈ, ಭೂಪದರ ಎಲ್ಲವೂ ಅಪೂರ್ವವೇ! ಭೂಮಿಯ ಮೇಲೆ ಮೇರೆಯರಿಯದಂತಿರುವ ಮಹಾಸಾಗರಗಳಿವೆ. ಮರುಭೂಮಿಗಳಿವೆ. ಮನವನ ಸಾಹಸಕ್ಕೆ ಸವಾಲೆಸೆಯುವಂಥ ಉನ್ನತ ಶೃಂಗಗಳಿವೆ. ಭೀಕರವಾದ ಕಂದಕಗಳಿವೆ. ರಕ್ತವನ್ನೇ ಹೆಪ್ಪುಗಟ್ಟಿಸುವಂಥ ಶೀತಲವಲಯಗಳಿವೆ. ಚರ್ಮ ಸುಟ್ಟು ಹೋಗುವಂಥ ಉಷ್ಣಪ್ರದೇಶಗಳಿವೆ. ದಿನದಲ್ಲಿ ಕ್ಷಣವೂ ಬಿಡುವಿಲ್ಲದಂತೆ ಮಳೆಯ ಅರ್ಭಟವನ್ನು ಕಾಣುವ ವಲಯಗಳು ಒಂದೆಡೆಯಿದ್ದರೆ, ಒಂದು ಮಳೆ ಹನಿಯ ಸ್ಪರ್ಶವನ್ನೂ ಕಾಣದ ಒಣಪ್ರದೇಶಗಳಿವೆ. ಆದರೆ ಈ ಎಲ್ಲಾ ವೈಪರೀತ್ಯ ಸನ್ನಿವೇಶಗಳಲ್ಲಿ ಒಂದಲ್ಲ ಒಂದು ಬಗೆಯ ಜೀವಿಗಳು ಬದುಕಿ ಸಂತಾಭಿವೃದ್ಧಿ ಮಾಡುತ್ತವೆ. ಇದೇ ಭೂಮಿಯ ವಿಶಿಷ್ಟ ಲಕ್ಷಣ.

ಭೂಮಿಯನ್ನು ಜೈವಿಕ ಜಗತ್ತು ಎಂದು ಆಸ್ಟ್ರಿಯಾದ ಭೂವಿಜ್ಞಾನಿ ಎಡ್ಯುರ್ಡ್ ಸ್ಯೂಯೆಸ್ ಸುಮಾರು ಒಂದು ನೂರು ವರ್ಷಗಳ ಹಿಂದೆ ಕರೆದ. ಆಗ ಅದೊಂದು ಅಷ್ಟೇನು ಗಂಭೀರವಲ್ಲದ ಪರಿಲ್ಪನೆ. ಆದರೆ ಇಂದು ಜೀವಜಗತ್ತು ಮನುಕುಲದ ಅತ್ಯಂತ ಕಾಳಜಿಯ ಕ್ಷೇತ್ರ.

ಇತರ ಗ್ರಹ ಅಥವಾ ಇನ್ನಾವುದೇ ಆಕಾಶಕಾಯಗಳಿಗಿಂತ ಭೂಮಿ ಭಿನ್ನವಾಗಿರುವುದು. ಒಂದೇ ವಿಚಾರದಲ್ಲಿ-ಭೂಮಿ ಜೀವವನ್ನು ಪೋಷಿಸುತ್ತದೆ. ಇಡೀ ಭೂ ವಿದ್ಯಮಾನ ಜೈವಿಕ ವಿದ್ಯಮಾನವೇ ಆಗಿದೆ. ಈ ಭೂಮಿಯ ಮೇಲೆ ಶೈವಲ, ಶಿಲೀಂಧ್ರದಿಂದ ಹಿಡಿದು ಬೃಹತ್ ಮರಗಳನ್ನೊಳಗೊಂಡಂತೆ ೩೫೦ ಸಹಸ್ರ ಸಸ್ಯ ಸಂಕುಲಗಳಿವೆ. ಏಕ ಕಣ ಜೀವಿಗಳಾದ ಫ್ರೋಟೋಜೋವಾದಿಂದ ಹಿಡಿದು ಮನುಷ್ಯನವರೆಗೆ ವ್ಯಾಪಿಸಿರುವ ಹನ್ನೊಂದು ಮಿಲಿಯನ್ ಪ್ರಾಣಿಸಂಕುಲಗಳನ್ನು ಈ ಭೂಮಿ ಪೋಷಿಸುತ್ತಿದೆ. ಈ ಎಲ್ಲ ಸಂಕುಲಗಳ ಬದುಕಿಗೆ ಅಗತ್ಯವಾದ ಪೋಷಕ ದ್ರವ್ಯಗಳಾದ ಬೆಳಕು, ಶಾಖ, ನೀರು, ಆಹಾರ ಮತ್ತು ನೆಲೆಯನ್ನು ಭೂಮಿ ಒದಗಿಸುತ್ತದೆ.

ಜೀವಮಂಡಲವನ್ನು ಪರ್ಯಾವರಣ ವ್ಯವಸ್ಥೆ ಅಥವಾ ಇಕೋಸಿಸ್ಟಂ ಎಂದೂ ಕರೆಯುತ್ತೇವೆ. ಇದೊಂದು ನಿರಂತರವಾಗಿ ವಿಕಾಸವಾಗುತ್ತಿರುವ ವ್ಯವಸ್ಥೆ. ಭೂಮಿ ಉಗಮವಾದಂದಿನಿಂದ ಕಾರ್ಯಾಚರಣೆಯಲ್ಲಿರುವ ವಿವಿಧ ಭೌತಿಕ ಮತ್ತು ಜೈವಿಕ ಅಂಶಗಳ ನಡುವಿನ ಸಮತೋಲನವನ್ನು ಕಾಯ್ದಿಟ್ಟುಕೊಂಡು ಬಂದಿರುವುದೇ ಇಕೋಸಿಸ್ಟಂ. ಈ ವ್ಯವಸ್ಥೆಯಲ್ಲಿ ಸ್ಪಷ್ಟವಾಗಿ ಗೋಚರಿಸುವ ಒಂದಂಶವೆಂದರೆ ಜೈವಿಕ ನಿರಂತತೆ. ಅಂದರೆ ಜೀವಿಗಳ ಹುಟ್ಟು, ಬೆಳವಣಿಗೆ, ಸಾವು ಮತ್ತೆ ಹುಟ್ಟು-ಹೀಗೆ ಜೀವನ ವರ್ತುಲ ಸದಾ ಉಳಿದು ಬಂದಿರುವುದು ಈ ವ್ಯವಸ್ಥೆಯ ಪ್ರಮುಖ ಲಕ್ಷ್ಣ. ಈ ನಿರಂತತೆ ಜೀವಿಗಳ ಅನೇಕ ಪರಸ್ಪರ ಅವಲಂಬನೆ ಸಂಕೀರ್ಣ ಸಂಬಂಧಗಳ ವ್ಯವಸ್ಥಿತ ಜಾಲವೊಂದನ್ನು ಆಧರಿಸಿ ಪರಸ್ಪರ ಅವಲಂಬನೆಯ ಸಂಕೀರ್ಣ ಸಂಬಂಧಗಳ ವ್ಯವಸ್ಥಿತ ಜಾಲವೊಂದನ್ನು ಆಧರಿಸಿ ನಿಂತಿದೆ. ಸೂಕ್ಷ್ಮಜೀವಿಗಳು, ಸಸ್ಯಗಳು, ಪ್ರಾಣಿಗಳು, ಮನುಷ್ಯ, ಗಾಳಿ, ನೀರು, ಬೆಳಕು, ಮಣ್ಣು ಹೀಗೆ ಎಲ್ಲಾ ಸಾವಯವ (Organic) ಮತ್ತು ನಿರವಯವ (Inorganic) ಅಂಶಗಳು ಜೀವ ಪೋಷಕವಾದ ವ್ಯವಸ್ಥೆಯೊಂದರಲ್ಲಿ ಅಗೋಚರವಾದ ಅಂತರ್ ಸಂಬಂಧಗಳಿಂದ ಬಂಧಿಯಾಗಿವೆ. ಇಂಥ ಜೀವಪೋಷಕ ವ್ಯವಸ್ಥೆಯನ್ನೇ ನಾವು ಇಕೋಸಿಸ್ಟಂ ಎಂದು ಕರೆಯುತ್ತೇವೆ.

ಈ ಇಕೋಸಿಸ್ಟಂ ಅಥವಾ ಜೀವ ವ್ಯವಸ್ಥೆಗೆ ತನ್ನದೇ ಆದ ಒಂದು ಲಯ ಅಥವಾ ಚಲನೆಯಿದೆ. ಈ ಲಯ ಅಥವಾ ಚಲನೆ ಅತ್ಯಂತ ಸೂಕ್ಷ್ಮವಾಗಿ ಸಮತೋಲನ ಕಾಯ್ದುಕೊಂಡು ಬಂದಿರುವ ಜೀವ ವರ್ತುಲಗಳ ಮೇಲೆ ನಿಂತಿದೆ. ಸೂಕ್ಷ್ಮ ಜೀವಿಗಳಿಂದ ಹಿಡಿದು ಮಾನವನವರೆಗೆ ಸಮಸ್ತ ಜೀವ ಸಂಕುಲಗಳು ಪರಿಸರಕ್ಕೆ ಹೊಂದಿಕೊಂಡು ಅದರ ಲಯಕ್ಕೆ ತಕ್ಕ ಹಾಗೆ ಬದುಕನ್ನು ರೂಪಿಸಿಕೊಂಡು ಬದುಕಿ ಉಳಿದು ಬಂದಿವೆ. ಆದುದರಿಂದ ಈ ಜೀವ ವರ್ತುಲಗಳಿಗೆ ಎಲ್ಲೂ ಘಾಸಿಯಾಗದಂತೆ ನೋಡಿಕೊಳ್ಳಬೇಕಾದ ಅಗತ್ಯವಿದೆ.

 ಸರಳವಾಗಿ ಹೇಳುವುದಾದರೆ ಬದುಕು ಸೌರಶಕ್ತಿಯಿಂದ ನಿರ್ವಹಣೆಯಾಗುತ್ತದೆ. ಸೂರ್ಯನ ಶಕ್ತಿಯನ್ನು ಸಸ್ಯಗಳು ಹಿಡಿದು ಭೂಮಿಯಿಂದ ನೀರು, ಜೀವದ್ರವ್ಯಗಳನ್ನು ಹೀರುತ್ತವೆ. ಸಸ್ಯ ಸಂಪತ್ತನ್ನು ರೂಪಿಸುತ್ತವೆ. ಇದೇ ಸಸ್ಯಗಳು ಅರಣ್ಯಗಳನ್ನು, ಹುಲ್ಲುಗಾವಲುಗಳನ್ನು ನಿರ್ಮಿಸುತ್ತವೆ. ಸಾಗರದ ಬದುಕಿಗೆ ಇಂಧನ ಒದಗಿಸುತ್ತವೆ. ಸಸ್ಯವನ್ನು ಪ್ರಾಣಿಗಳು ಕಬಳಿಸುತ್ತವೆ. ಮಾಂಸಹಾರಿಗಳಿಗೆ ಹಲವು ಪ್ರಾಣಿಗಳು ಬಲಿಯಾಗುತ್ತವೆ. ಸತ್ಯ ನಂತರ ಭೂಮಿಯನ್ನು ಸೇರಿ ಜೀವಪೋಷಕ ದ್ರವ್ಯಗಳಾಗಿ ಮತ್ತೆ ಸಸ್ಯಗಳ ಬದುಕಿಗೆ ಒದಗಿ ಬರುತ್ತವೆ. ಇದೊಂದು ಸರಳವಾದ ಜೀವವರ್ತುಲ.

ಜಗತ್ತಿನ ಎಲ್ಲಾ ಪ್ರದೇಶಗಳಲ್ಲೂ ಒಂದಲ್ಲ ಒಂದು ಬಗೆಯ ಜೀವ ವ್ಯವಸ್ಥೆಯಿದೆ. ಈ ಜೀವ ವ್ಯವಸ್ಥೆ ಬೆರಗು ಮೂಡಿಸುವ ವ್ಯವಸ್ಥೆ. ಒಂದು ಅರಣ್ಯವನ್ನೇ ನೋಡಿ. ದೂರಕ್ಕೆ ಕ್ರಮಬದ್ಧವಾಗಿ ಬೆಳೆದ ಸಸ್ಯ ಸಂಪತ್ತು ಅಲ್ಲಿ ಗೋಚರಿಸುತ್ತವೆ. ಮರಗಳ ಮೇಲ್ಛಾವಣಿ ಕೆಳಗೆ ನಳನಳಿಸುವ ಪೊದೆಗಳಿವೆ. ಚಳಿಗಾಲಕ್ಕೆ ಮುನ್ನ ಮರಗಳು ಬೋಳಾಗುತ್ತವೆ. ವಸಂತಕಾಲದಲ್ಲಿ ಹೂಗಳು ಅರಳುತ್ತವೆ. ಹುಲ್ಲು, ಕೆಳರೆಂಬೆಗಳನ್ನೂ ಮೇಯುವ ಸಸ್ಯಹಾರಿ ಪ್ರಾಣಿಗಳು; ಹೂವಿನಲ್ಲಿರುವ ಪರಾಗ ವಿತರಿಸಲು ಬರುವ ಬಗೆಬಗೆಯ ಪ್ರಾಣಿಸಮೂಹ; ಸಸ್ಯಹಾರಿ ಪ್ರಾಣಿಗಳನ್ನು ಬಲಿ ಹಾಕುವ ಬೇಟೆಗಾರರು; ಭೂಮಿಯ ಒಳಭಾಗದಲ್ಲಿ ನಿರಂತರವಾಗಿ ಕ್ರಿಯಾಶೀಲವಾಗಿರುವ ಜಂತುಗಳು; ಸತ್ತ ಸಸ್ಯ-ಪ್ರಾಣಿಗಳನ್ನು ವಿಘಟಿಸಿ ಜೀವಪೋಷಕ ದ್ರವ್ಯಗಳನ್ನು ಭೂಮಿಗೆ ಸೇರಿಸುವ ಕೀಟಗಳು ಮತ್ತು ಸೂಕ್ಷ್ಮ ಜೀವಿಗಳು-ಹೀಗೆ ಜೀವವ್ಯವಸ್ಥೆ ಹುಲ್ಲುಗಾವಲಿನಲ್ಲಿ, ಜೌಗುಪ್ರದೇಶದಲ್ಲಿ ಸರೋವರಗಳಲ್ಲಿ, ಹವಳ ದ್ವೀಪಗಳಲ್ಲಿ, ಹೆಪ್ಪುಗಟ್ಟಿದ ಅಂಟಾರ್ಟಿಕದಲ್ಲೂ ಇದೆ. ಮಾನವ ನಿರ್ಮಿಸಿದ ತೋಟಗಳಲ್ಲಿ, ಸಸ್ಯಗಾರಗಳಲ್ಲೂ ಇದೇ ವ್ಯವಸ್ಥೆ ಕಾರ್ಯನಿರತವಾಗಿದೆ.

ಈ ವ್ಯವಸ್ಥೆಗಳು ಹೇಗೆ ಉಂಟಾಗುತ್ತವೆ ಎಂಬ ಬಗ್ಗೆ ಅನ್ವೇಷಿಸಿದಂತೆಲ್ಲ ಪ್ರಾಕೃತಿಕ ವ್ಯವಸ್ಥೆಯ ಹಲವು ವೈಚಿತ್ಯ್ರಗಳು ಗೋಚರಿಸುತ್ತವೆ.

ಪ್ರಾಕೃತಿಕ ವ್ಯವಸ್ಥೆಯಲ್ಲಿ ಜೀವವೈವಿಧ್ಯದಷ್ಟು ವೈಚಿತ್ಯ್ರ ಮತ್ತೊಂದಿಲ್ಲ. ಒಂದು ಹುಲ್ಲುಗಾವಲನ್ನೇ ನೋಡಿ. ಅಲ್ಲಿ ಹುಲ್ಲು ಜಾತಿಗೆ ಸೇರಿದ ಅನೇಕ ಬಗೆಯ ಸಂಕುಲಗಳು, ಕುರುಚಲು ಮರಗಳು, ವಿವಿಧ ಪ್ರಾಣಿಗಳು (ಕೀಟ, ಪಕ್ಷಿ, ಸರೀಸೃಪ ಇತ್ಯಾದಿ) ಗೋಚರಿಸುತ್ತವೆ. ಅವೆಲ್ಲವೂ ಒಂದು ಬಗೆಯ ಕ್ರಮಬದ್ಧ ಮಿಶ್ರಣದಲ್ಲಿ ಬದುಕುತ್ತಿವೆ.

ಮನೆಯ ಅಂಗಳದಲ್ಲಿ ಬೆಳೆಸುವ ಹುಲ್ಲಿನ ‘ಲಾನ್’ನಲ್ಲೂ ಈ ವೈವಿಧ್ಯ ಕಾಣಬಹುದು. ಒಂದು ಹುಲ್ಲುಗಾವಲು ಅಥವಾ ಲಾನ್‌ನಲ್ಲಿ ಅಷ್ಟೊಂದು ಬಗೆಯ ಜೀವ ಸಂಕುಲಗಳೇಕಿರಬೇಕು? ಒಂದೇ ಬಗೆಯ ಲಕ್ಷಣವಿರುವ ಪ್ರದೇಶದಲ್ಲಿ ಒಂದೇ ಬಗೆಯ ಜೀವಿಗಳೇಕಿರ ಬಾರದು?

ಹುಲ್ಲುಗಾವಲಿನಲ್ಲಿ ಕೀಟಗಳೂ ಇವೆ. ಈ ಕೀಟಗಳನ್ನು ನೋಡುತ್ತಾ ಹೋದರೆ ಅವು ಸಸ್ಯಗಳಿಗಿಂತಲೂ ಹೆಚ್ಚಿನ ವೈವಿಧ್ಯ ತೋರುತ್ತವೆ. ಅಲ್ಲಿ ಭೂಮಿಯಲ್ಲಿ ಗೂಡುಕಟ್ಟುವ  ಗೆದ್ದಲುಗಳಿವೆ, ಚಿಟ್ಟೆಗಳಿವೆ, ಕಣಜಗಳಿವೆ. ಎಲೆಯನ್ನು ಮೇಯುವ ಕೀಟಗಳಿವೆ. ಸಸ್ಯದ ರಸವನ್ನು ಹೀರುವ ಸಸ್ಯ ಹೇನುಗಳಿವೆ. ಒಂದೊಂದು ಜಾತಿಯಲ್ಲೆ ಹಲವು ಬಗೆ. ಇಷ್ಟೆಲ್ಲ ವೈವಿಧ್ಯವೇಕೆ? ಒಂದು ಹುಲ್ಲುಗಾವಲಿನಲ್ಲಿ ಹುಲ್ಲನ್ನೇ ತಿಂದು ಬದುಕುವ ಒಂದೇ ಬಗೆಯ ಕೀಟ ಸಮೂಹವೇಕಿಲ್ಲ?

ಇದೇ ಬಗೆಯ ಜೀವವೈವಿಧ್ಯ ಸಮೃದ್ಧಿ ಎಲ್ಲಾ ಬಗೆಯ ಜೀವ ಪ್ರದೇಶಗಳಲ್ಲಿ ಕಾಣಿಸಿಕೊಳ್ಳುತ್ತದೆ. ಮೂರೂವರೆ ಲಕ್ಷ ಬಗೆಯ ಸಸ್ಯಗಳು, ಕೋಟ್ಯಾಂತರ ಬಗೆಯ ಕೀಟಗಳು, ಪ್ರಾಣಿಗಳು, ಎಂಟುಸಾವಿರ ಪಕ್ಷಿ ಪ್ರಭೇದಗಳು, ಇಡೀ ಜಗತ್ತನ್ನೇ ವ್ಯಾಪಿಸಿಕೊಂಡಿವೆ. ಮನುಷ್ಯನಿಗೆ ಅಪರಿಚಿತವಾದ ಅದರ ಹತ್ತರಷ್ಟು ಜೀವಿಗಳೂಒಂದಲ್ಲ ಒಂದು ಬಗೆಯ ಪ್ರದೇಶದಲ್ಲಿ ಬದುಕುತ್ತಿವೆ. ಇಷ್ಟೊಂದು ಬಗೆಯ ಪ್ರಾಣಿ ಪಕ್ಷಿಗಳೇಕೆ ಬೇಕು?

ಪರಿಚಿತವಾದ ಪ್ರದೇಶದಲ್ಲಿ ನಮಗೆ ಪರಿಚಿತವಾದ ಪ್ರಾಣಿ-ಸಸ್ಯಗಳೇ ಪ್ರತಿ ವರ್ಷವೂ ಗೋಚರಿಸುತ್ತವೆ. ಕೆಲವು ಬಾರಿ ಅಪರೂಪದ ಸಂಕುಲಗಳು ಒಮ್ಮೊಮ್ಮೆ ಪರಿಚಿತ ನಾಡಿಗೆ ಬರಬಹುದು. ಕೆಲವೊಮ್ಮೆ ರೋಗಗಳು ದಾಳಿಯಿಡಬಹುದು. ಜೀವ ವ್ಯವಸ್ಥೆ ಕ್ರಿಯಾಶೀಲವಾಗಿ ಉಳಿಯಬೇಕಾದರೆ ಈ ಅಪರಿಚಿತರ ಆಗಮನವಾಗಬೇಕೆ?

ಮತ್ತೊಂದು ವಿಚಿತ್ರವೆಂದರೆ ಜೀವ ಪ್ರಭೇದಗಳ ಸಂಖ್ಯೆ. ಈ ಸಂಖ್ಯೆ ಹೆಚ್ಚು ಕಡಿಮೆ ಸ್ಥಿರವಾಗಿರುತ್ತದೆ. ಜಗತ್ತಿನ ಪ್ರತಿಯೊಂದು ಜೀವವ್ಯವಸ್ಥೆಯಲ್ಲೂ ಸಸ್ಯ ಮತ್ತು ಪ್ರಾಣಿಗಳು ಅಗಾಧ ಪ್ರಮಾಣದಲ್ಲಿ ವಂಶಾಭಿವೃದ್ಧಿ ಮಾಡುತ್ತವೆ. ಆದರೆ ಅಂತಿಮವಾಗಿ ಪ್ರತಿವರ್ಷವೂ ಅವುಗಳ ಸಂಖ್ಯೆ ಏರುಪೇರಾಗದೆ ಸ್ಥಿರವಾಗಿರುತ್ತದೆ. ಈ ಸಂಖ್ಯಾ ಸ್ಥಿರತೆ ಹೇಗೆ ಸಾಧಿತವಾಗುತ್ತದೆ?

ಜಗತ್ತಿನ ಅಗೋಚರ ಅದ್ಭುತ ಶಕ್ತಿಯಲ್ಲೋ, ದೈವಲೀಲೆಯಲ್ಲೋ ನಂಬಿಕೆಯಿಲ್ಲದಿದ್ದರೆ, ಜೀವಿಗಳು ತಮ್ಮ ಪರಿಸರದಲ್ಲಿ ಉಳಿಯಲು ನಡೆಸುವ ಜೀವ ವಿಧಾನಗಳ ಮೂಲಕ ಮೇಲಿನ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಬಹುದು.

ಜೀವಿಗಳು ಮಿಲಿಯಾಂತರ ವರ್ಷಗಳಲ್ಲಿ, ನಿರವಯವ ಶಕ್ತಿಗಳನ್ನು ಬಳಸಿಕೊಂಡು, ಅವುಗಳ ಜೊತೆಯಲ್ಲೇ ಹೋರಾಡುತ್ತಾ, ಪರಸ್ಪರ ಭಿನ್ನವಾಗುತ್ತಾ, ನಿಧಾನವಾಗಿ ಮಾರ್ಪಾಡಾಗುತ್ತಾ, ಪ್ರತಿಕೂಲ ಪರಿಸ್ಥಿತಿಯಲ್ಲೂ ಹೋರಾಟ ನಡೆಸಿ ಬದುಕುವ ಅರ್ಹತೆಯನ್ನು ಗಳಿಸಿಕೊಂಡು, ಶಾಖೋಪಶಾಖೆಗಳಾಗಿ ಒಡೆದು ವಿಕಾಸಗೊಂಡು ಹಲವು ಬಗೆಯ ಸಂಕುಲಗಳಾಗಿ ಉಗಮಗೊಂಡಿವೆ ಎಂಬುದನ್ನು ಈಗ ಎಲ್ಲರೂ ಒಪ್ಪುತ್ತಾರೆ.

ಈ ಜೀವಿಗಳು ಆಹಾರವನ್ನು ಹುಡುಕಲು, ಸಂಕಷ್ಟಗಳನ್ನು ಎದುರಿಸಲು, ಸ್ಥಳೀಯ ಪರಿಸ್ಥಿತಿಯಲ್ಲೇ ವಂಶಾಭಿವೃದ್ಧಿ ಮಾಡಲು ವಿಕಾಸಗೊಂಡಿವೆ. ಅಂದರೆ, ಜೀವ ವ್ಯವಸ್ಥೆಯ ಎಲ್ಲಾ ವಿಧಾನಗಳು-ಹುಟ್ಟು, ಹೋರಾಟ, ವಂಶಾಭಿವೃದ್ಧಿ ಇತ್ಯಾದಿ-ಪ್ರಾಕೃತಿಕ ಆಯ್ಕೆ ಪ್ರಕ್ರಿಯೆಯ ಒಟ್ಟು ಮೊತ್ತವೆನಿಇದೆ. ಕೊಟ್ಯಾಂತರ ವರ್ಷಗಳಿಂದ ಸಂಕುಲಗಳು ನಿರಂತರವಾಗಿ ಆದರೆ ಮನುಷ್ಯನಿಗೆ ಅಗ್ರಾಹ್ಯವೆನಿಸುವಷ್ಟು ನಿಧಾನವಾಗಿ ಬದಲಾಗುತ್ತಲೇ ಬಂದಿವೆ. ಇದರ ಬಗ್ಗೆ ಸಂದೇಹ ಪಡುವ ಅಗತ್ಯ ಈಗ ಇಲ್ಲ. ಈ ಜೀವ ವೈವಿಧ್ಯಗಳೆಲ್ಲ ನಿರ್ಲಿಪ್ತ, ನಿರ್ಭಾವುಕ ಶಕ್ತಿಯೆನಿಸಿದ ಪ್ರಾಕೃತಿಕ ಆಯ್ಕೆಯ ಫಲ. ಬದುಕಲು ಅನರ್ಹವೆನಿಸಿದ ದುರ್ಬಲ ಜೀವಿಗಳನ್ನು ನಿರ್ಮೂಲನೆ ಮಾಡಿ, ಬದುಕಲು ಅರ್ಹವೆನಿಸಿದ ಜೀವಿಗಳನ್ನು ಪೋಷಿಸುವ ಈ ಪ್ರಾಕೃತಿಕ ಆಯ್ಕೆ ಒಂದು ಪ್ರದೇಶದಲ್ಲಿ ಒಂದೇ ಬಗೆಯ ಜೀವಿಗಳನ್ನು ಇರಗೊಡುವುದಿಲ್ಲ. ಒಂದು ಸಂಕುಲವನ್ನು ಶಾಖೋಪಶಾಖೆಗಳಾಗಿ, ಸಹಸ್ರಾರು ಸಂಕುಲಗಳನ್ನಾಗಿ ಅದು ರೂಪಿಸುತ್ತದೆ. ಜೀವಿಗಳು ಅಗಾಧವಾಗಿ ವಂಶಾಭಿವೃದ್ಧಿ ಮಾಡಿದರೂ ಸಂಖ್ಯಾಸ್ಥಿರತೆಯನ್ನು ಉಳಿಸುತ್ತದೆ.

ಅಂದರೆ ಪ್ರಾಕೃತಿಕ ಆಯ್ಕೆ ಕ್ರಿಯೆಯೇ ಸಂಕುಲಗಳನ್ನು, ಜೀವ ವೈವಿಧ್ಯವನ್ನು ತನಗಿಷ್ಟ ಬಂದ ರೀತಿಯಲ್ಲಿ ವಿನ್ಯಾಸವನ್ನು ರೂಪಿಸಿಲ್ಲ. ಪ್ರಕೃತಿಯಲ್ಲಿ ದೊರೆಯುವ ಭಿನ್ನತೆಗಳ ಆಧಾರದ ಮೇಲೆ ಆಯ್ಕೆ ಪ್ರಕ್ರಿಯೆ ನಡೆಯುತ್ತದೆ. ಅಂದರೆ ಜೀವಿಗಳು ಸೂಸುವ ಭಿನ್ನತೆಗೆ ಜೈವಿಕ ಅಂಶಗಳು ಕಾರಣವಾಗುವಷ್ಟೇ ನಿರವಯವ ಶಕ್ತಿಗಳ ಪ್ರಭಾವವೂ ಇರುತ್ತದೆ. ಜೀವಿಗಳ ನಡುವಿನ ಸ್ಪರ್ಧೆ, ಶತ್ರುಗಳ ಕಾಟ, ಆಹಾರದ ಸಮೃದ್ಧಿ ಅಥವಾ ಅಭಾವ, ಕ್ಷಾಮ-ಹೀಗೆ ಜೈವಿಕ, ಅಜೈವಿಕ ಶಕ್ತಿಯ ಪಾರಸ್ಪಾರಿಕ ಸಂಘರ್ಷ, ಸಂಬಂಧಗಳಿಂದ ಜೀವಿಗಳಲ್ಲಿ ಭಿನ್ನತೆಗಳು ಮೂಡಿ ನೈಸರ್ಗಿಕ ಆಯ್ಕೆಗೊಳಪಡುತ್ತವೆ. ಇದೇ ಜೀವಿ ವೈವಿಧ್ಯಕ್ಕೆ ಕಾರಣ.

ಈ ಜೀವ ವೈವಿಧ್ಯವನ್ನು ಬಗೆಯುತ್ತಾ ಹೋದಂತೆ, ಪ್ರಾಕೃತಿಕ ಆಯ್ಕೆಯ ಕ್ರಿಯೆ ತೆರೆದುಕೊಳ್ಳುತ್ತದೆ. ಪ್ರಾಕೃತಿಕ ಆಯ್ಕೆಗೆ ಒಳಪಟ್ಟು ಜೀವ ವೈವಿಧ್ಯ ವೃದ್ಧಿಸಲು ಹಾಗೂ ಜೈವಿಕ ನಿರಂತತೆಯನ್ನು ಸಂರಕ್ಷಿಸಲು ಜೀವಿಗಳು ಹಲವಾರು ಪ್ರಯೋಗಗಳಲ್ಲಿ ಸಾಗಿ ಯಶಸ್ವಿಯಾಗುತ್ತಾ ಬದುಕಿನ ವಿಧಾನಗಳನ್ನು ರೂಪಿಸಿಕೊಂಡಿವೆ. ಈ ಬದುಕಿನ ವಿಧಾನಗಳ ಕ್ರಿಯೆ ಹಲವಾರು ರೋಚಕ ಮಾಹಿತಿಗಳನ್ನು ಒದಗಿಸುತ್ತದೆ.

ಡಾರ್ವಿನ್ ವಿಕಾಸವಾದ ಸಿದ್ಧಾಂತದ ಹಿನ್ನೆಲೆಯಲ್ಲಿ ರಚಿತವಾದ ಲೇಖನ

* * *