ವಿಕಾಸವಾದ ಒಂದು ಕಟುವಾಸ್ತವ. ಸಾಕ್ಷ್ಯಾಧಾರಗಳನ್ನು ನಿರಾಕರಿಸುವವರು, ತಮ್ಮ ಸಾಮಾನ್ಯ ವಿವೇಕಕ್ಕೆ ರಜೆ ಹೇಳಿರುವವರು ಮತ್ತು ಎಂದೂ ಬದಲಾಗದ ಜ್ಞಾನ ಮತ್ತು ವಿವೇಕವನ್ನು ದೈವ ಸಾಕ್ಷಾತ್ಕಾರದಿಂದ ಮಾತ್ರ ಪಡೆಯಲು ಸಾಧ್ಯ ಎಂದು ನಂಬಿರುವವರು ಮಾತ್ರ ವಿಕಾಸ ಸತ್ಯವನ್ನು ವಿವಾದವಾಗಿಸುತ್ತಾರೆ.” ಡಾ. ವ್ಯಾಟಸನ್

ಸುಮಾರು ೪.೬ ಬಿಲಿಯನ್ ವರ್ಷಗಳ ಹಿಂದೆ ಸೌರಮಂಡಲ ಹುಟ್ಟಿದಾಗ ನಮ್ಮ ಭೂಗ್ರಹ ಕೇವಲ ಒಂದು ನಿರ್ಜೀವ ಗೋಳ ಮಾತ್ರವಾಗಿತ್ತು. ಇಂದು ಅದೇ ಭೂಮಿ ಮರಗಿಡಗಳಿಂದ, ಹುಳಹುಲ್ಲುಗಳಿಂದ, ಉರಗ ಪಕ್ಷಿಗಳಿಂದ, ಜಲಚರಗಳಿಂದ ಸಸ್ತನಿಗಳಿಂದ ತುಂಬಿ ತುಳುಕಾಡುತ್ತಿದೆ. ಇಂದು ಅಗಣಿತ ಪ್ರಮಾಣದಲ್ಲಿರುವ ಪ್ರಾಣೀ ಮತ್ತು ಸಸ್ಯ ಪ್ರಭೇದಗಳಿಗೆ ಶಿಖರಪ್ರಾಯವಾಗಿ ಚಿಂತನಾ ಸಾಮರ್ಥ್ಯವುಳ್ಳ ಅತಿವಿಶಿಷ್ಟ ಮನುಷ್ಯ ಜೀವಿಗಳು ಈ ಜಗತ್ತನ್ನಾಳುತ್ತಿವೆ. ‘ಇಂತಹ ಒಂದು ರೂಪಾಂತರ ಮತ್ತು ಕ್ರಾಂತಿಕಾರಕ ಬದಲಾವಣೆ ಬಂದದ್ದಾದರೂ ಹೇಗೆ?’ ಎಂಬ ಪ್ರಶ್ನೆಗೆ ಮನುಷ್ಯ ಉತ್ತರ ಹುಡುಕಲು ಹೆಣಗಾಡುತ್ತಿದ್ದ. ಅನೇಕ ದಾರ್ಶನಿಕರು, ತತ್ವಜ್ಞಾನಿಗಳು, ಧರ್ಮಗುರುಗಳು, ವೇದಾಂತಿಗಳು ತಮ್ಮ ಬುದ್ಧಿಗೆ, ಗ್ರಹಿಕೆಗೆ ನಿಲುಕಿದ ಸಿದ್ಧಾಂತಗಳನ್ನು ಆಗಾಗ್ಗೆ ಪ್ರತಿಪಾದಿಸುತ್ತಾ ಬಂದಿದ್ದರೂ ಅವರೆಲ್ಲರ ಸೃಷ್ಠಿ ಸಿದ್ಧಾಂತಗಳು ಕಾಲ್ಪನಿಕ ಕಟ್ಟುಕತೆಗಳಾಗಿದ್ದವು. ಪುರಾಣಾವತಾರಗಳ ಹರಿಕತೆಗಳಾಗಿದ್ದವು ಇಲ್ಲವೆ ಕಲ್ಪನಾ ವಿಲಾಸದ ಅದ್ಭುತ ಸೃಷ್ಠಿಗಳಾಗಿದ್ದವು. ಕೈಗಾರಿಕಾ ಕ್ರಾಂತಿಗೆ ನಾಂದಿ ಹಾಡಿದ ವಿಜ್ಞಾನ ತಂತ್ರಜ್ಞಾನ ಅಗಾಧವಾಗಿ ಬೆಳೆದು ಸಾಮಾಜಿಕ ಸಂರಚನೆಯಲ್ಲಿ ಬದಲಾವಣೆಗಳುಂಟಾದರೂ ಜೀವಿಗಳು ಸೃಷ್ಠಿ ಮತ್ತು ವೈವಿಧ್ಯತೆಯ ಬಗ್ಗೆ ಆದಿಮಾನವನ ಮುಗ್ಧ ಕಲ್ಪನೆಗಳೇ ಮನುಷ್ಯ ಕುಲವನ್ನಾಳುತ್ತಿದ್ದವು. ಜೀವಿಗಳ ಸೃಷ್ಠಿ ಬ್ರಹ್ಮಸ್ವರೂಪನಾದ ದೇವನಾಟ. ಈ ಜಗತ್ತು ಮತ್ತು ಅದರ ಮೇಲಿರುವ ಸಮಸ್ತ ಜೀವ ಜಂತುಗಳು ಸರ್ವಶಕ್ತನಾದ ಆ ಪರಮಾತ್ಮನ ಸೃಷ್ಠಿಗಳೆಂದು ನಂಬಿಸಲಾಗಿತ್ತು. ವಿವರಗಳಲ್ಲಿ ವಿಭಿನ್ನತೆಗಳಿದ್ದರೂ ಬಹುಪಾಲು ಧರ್ಮಗಳು ಮತ್ತು ಪವಿತ್ರ ಗ್ರಂಥಗಳು, ಸರಿ ಸುಮಾರಾಗಿ ಇದೇ ‘ಸೃಷ್ಟಿಕರ್ತಾರ’ನ ಸಿದ್ಧಾಂತವನ್ನೇ ಪ್ರತಿಪಾದಿಸಿವೆ. ಈ ಸಿದ್ಧಾಂತ ಅಂದಿನ ಸಮಾಜಗಳ ಆಳುವ ವರ್ಗಗಳ ಹಿತಾಸಕ್ತಿಗಳನ್ನು ಕಾಪಾಡಲು ಸಹಕಾರಿಯಾದದ್ದರಿಂದ ಈ ನಂಬಿಕೆ ಜಗತ್ತನ್ನು ಹದಿನೆಂಟನೆ ಶತಮಾನದ ಅರ್ಧಭಾಗದವರೆಗೂ ಆಳಿದವು.

ಈ ದೈವ ಸೃಷ್ಠಿ ಸಿದ್ಧಾಂತಕ್ಕೆ ಮೊಟ್ಟ ಮೊದಲು ಬಲವಾದ ಕೊಡಲಿ ಪೆಟ್ಟನ್ನು ಕೊಟ್ಟವನು ಇಂಗ್ಲೆಂಡಿನ ಚಾರ್ಲ್ಸ್ ಡಾರ್ವಿನ್.  ಈ ಮೊದಲು ದೈವಸೃಷ್ಠಿ ಸಿದ್ಧಾಂತಕ್ಕೆ ವಿರೋಧವಿರಲಿಲ್ಲ ವೆಂದಲ್ಲ. ಇದಕ್ಕೆ ವಿಭಿನ್ನವಾದ ಸೃಷ್ಠಿ ಸಿದ್ಧಾಂತಗಳು ಚಾಲನೆಯಲ್ಲಿದ್ದರೂ ಅವುಗಳ ಪ್ರತಿಪಾದನೆಗೆ ಅತ್ಯಗತ್ಯವಾದ ವೈಜ್ಞಾನಿಕ ಪುರಾವೆಗಳಿರಲಿಲ್ಲ. ಹಾಗಾಗಿ ದೈವಸೃಷ್ಠಿ ಸಿದ್ಧಾಂತಕ್ಕೆ ಈ ಪರ್ಯಾಯ ಪ್ರತಿಪಾದನೆಗಳು ಒಂದು ಪ್ರಬಲ ಸವಾಲನ್ನೆಸೆಯಲಾಗಲಿಲ್ಲ. ಅಂತಹ ಸಂದರ್ಭದಲ್ಲಿ ಚಾರ್ಲ್ಸ್ ಡಾರ್ವಿನ್ ೧೮೫೯ರ ನವೆಂಬರ್ ೨೪ರಂದು “ನೈಸರ್ಗಿಕ ಆಯ್ಕೆಯ ಮೂಲಕ ಪ್ರಭೇದಗಳ ಉಗಮ” ಎಂಬ ಚರಿತ್ರಾರ್ಹ ಕೃತಿಯನ್ನು ಪ್ರಕಟಿಸಿ ದೈವಸೃಷ್ಠಿ ಸಿದ್ಧಾಂತದ ಕಾಲ್ಪನಿಕ ಮಹಾಸೌಧದ ಅಡಿಪಾಯವನ್ನೇ ಅಲುಗಾಡಿಸಿದ.

ಧಾರ್ಮಿಕ ಶಾಲೆಯಲ್ಲಿ ಕಲಿತು, ಅಗಾಧವಾದ ಧಾರ್ಮಿಕ ಶ್ರದ್ಧೆಯುಳ್ಳ ಡಾರ್ವಿನ್ ಇಂತಹ ಯುಗಪ್ರವರ್ತಕ ವಿಕಾಸ ವಾದವನ್ನು ತನ್ನ ಸ್ವಭಾವಜನ್ಯ ಸಂಕೋಚ ಹಿಂಜರಿಕೆಗಳಿಂದಾಗಿ ತುಂಬಾ ತಡವಾಗಿಯೇ ಪ್ರಕಟಿಸಿದ. ಧಾರ್ಮಿಕ ಶಾಲೆಗೆ ಸೇರಿಸಲ್ಪಟ್ಟಿದ್ದ ಡಾರ್ವಿನ್‌ಗೆ ಬಾಲ್ಯದಿಂದಲೂ ಹುಳಹುಪ್ಪಟೆಗಳ ಬಗ್ಗೆ, ಕೀಟ, ಸಸ್ಯಗಳ ಬಗ್ಗೆ, ಪ್ರಾಣಿ ಪಕ್ಷಿಗಳ ಬಗ್ಗೆ, ಮಣ್ಣುಕಲ್ಲುಗಳ ಬಗ್ಗೆ, ಬೆಟ್ಟಗುಡ್ಡಗಳ ಬಗ್ಗೆ ಅಪಾರ ಕುತೂಹಲ ಮತ್ತು ಆಸಕ್ತಿ. ಅಪ್ಪನಿಗೆ ತನ್ನ ಮಗ ತನ್ನಂತೆ ವೈದ್ಯನಾಗಬೇಕೆಂಬ ಆಸೆಯಿದ್ದರೆ ಮಗನಿಗೆ ಕಾಡುಮೇಡುಗಳಲ್ಲಿ ಅಲೆಯುತ್ತಾ ನಿಸರ್ಗದ ಮಾಯಾಜಾಲದ ಒಗಟನ್ನು ಬಿಡಿಸಬೇಕೆಂಬ ಮಹದಾಸೆ ಜೀವಜಾಲದ ಎಳೆಎಳೆಗಳನ್ನು ಮುಗ್ಧ ವಿದ್ಯಾರ್ಥಿಯಾಗಿ ಕುತೂಹಲಭರಿತ ಕಣ್ಣುಗಳಿಂದ ಸೂಕ್ಷ್ಮವಾಗಿ ಅವಲೋಕಿಸಿ, ಸಂಗ್ರಹಿಸಿ, ದಾಖಲಿಸಿ ಅವುಗಳ ಬಗ್ಗೆ ಸತತವಾಗಿ ಧ್ಯಾನಿಸತೊಡಗಿದ. ಈ ಹವ್ಯಾಸವನ್ನೇ ಜೀವನಕ್ರಮವನ್ನಾಗಿಸಿಕೊಂಡ ಡಾರ್ವಿನ್ ಕೋಶ ಓದಿಕೊಂಡು ದೇಶ ಸುತ್ತಲಾರಂಭಿಸಿದ. ೧೮೩೧ರಲ್ಲಿ ಬ್ರಿಟಿಷ್ ಸರ್ಕಾರದ ‘ಬೀಗಲ್’ ಮಹಾಯಾತ್ರೆಯ ನಿಸರ್ಗ ಯಾತ್ರಿಕನಾಗಿ ಸುಮಾರು ಐದು ವರ್ಷಗಳ ಕಾಲ ನಿರಂತರವಾದ ಅಲೆದಾಟ, ಹುಡುಕಾಟ ಮಾಡುತ್ತಾ ದಕ್ಷಿಣ ಗೋಲಾರ್ಧದ ಅಟ್ಲಾಂಟಿಕ್, ಪೆಸಿಫಿಕ್, ಹಿಂದೂ ಮಹಾಸಾಗರಗಳು, ದಕ್ಷಿಣ ಅಮೆರಿಕಾದ ತೀರ ಪ್ರದೇಶಗಳು, ಆಸ್ಟ್ರೇಲಿಯಾದ ಉತ್ತರ ಭಾಗಗಳು, ಏಷ್ಯಾದ ದಕ್ಷಿಣಭಾಗಗಳು, ಆಫ್ರಿಕಾದ ತೀರಪ್ರದೇಶಗಳಲ್ಲಿ ಸುತ್ತಾಡಿಕೊಂಡು ಅಲ್ಲಿನ ಹವಾಮಾನ, ಪ್ರಾಕೃತಿಕ ವಿನ್ಯಾಸ, ಸಸ್ಯ, ಪ್ರಾಣಿ ಹಾಗೂ ಇತರೆ ಜೀವಿಗಳ ರಚನೆ, ಹವ್ಯಾಸ ಮುಂತಾದವುಗಳ ಬಗ್ಗೆ ಸೂಕ್ಷ್ಮ ಅಧ್ಯಯನ ದಾಖಲೆಗಳನ್ನು ಮಾಡಿಕೊಂಡ. ರಾಶಿರಾಶಿ ಜೀವಿಗಳ ಅವಶೇಷಗಳ ಪಳೆಯುಳಿಕೆಗಳನ್ನು ಯಾತ್ರೆಯುದ್ದಕ್ಕೂ ಸಂಗ್ರಹಿಸಿ ತುಂಬಿಟ್ಟುಕೊಂಡ. ತಾನು ಸಂಗ್ರಹಿಸಿದ ವಸ್ತುಗಳನ್ನು, ಮಾಡಿಕೊಂಡ ಟಿಪ್ಪಣಿಗಳನ್ನು ೨೦ ವರ್ಷಕ್ಕೂ ಅಧಿಕವಾಗಿ ಸತತವಾಗಿ ಧ್ಯಾನಿಸಿದ.

ತನ್ನ ಅನಿಸಿಕೆಗಳನ್ನು ಜದ್ವಿಖ್ಯಾತ ವಿಜ್ಞಾನಿಗಳು ಮತ್ತು ದಾರ್ಶನಿಕರೊಂದಿಗೆ ಅತ್ಯಂತ ವಿನೀತನಾಗಿ ಹಂಚಿಕೊಂಡ. ಅವರೊಂದಿಗೆ ಪತ್ರ ವ್ಯವಹಾರ ಮಾಡಿ ತಾನು ಕಂಡುಕೊಂಡ ವಿಚಾರಗಳನ್ನು ತೀಕ್ಷ್ಣವಾದ ವಿಮರ್ಶೆ ಮರುವಿಮರ್ಶೆಗೆ ಒಡ್ಡುತ್ತಾ ಸಾಗಿದ. ಬರಿ ವಿದ್ವಾಂಸರೇ ಅಲ್ಲದೆ ಅತ್ಯಂತ ಸಾಮಾನ್ಯರಿಂದಲೂ ಮಾಹಿತಿಗಳನ್ನು ಸಂಗ್ರಹಿಸುತ್ತಾ ಸಾಗಿದ. ರೈತರು, ಪಾರಿವಾಳ ಸಾಕಾಣಿಕೆದಾರರೊಂದಿಗೆ ಸಮಾಲೋಚನೆ ನಡೆಸಿದ. ಪುನರಾವರ್ತಿತ ವೀಕ್ಷಣೆ, ಪ್ರಯೋಗಗಳು, ಪ್ರಶ್ನೆಗಳ ಮೂಲಕ ತನ್ನ ಪರಿಕಲ್ಪನೆಗಳನ್ನು ಪದೇ ಪದೇ ಪರಾಮರ್ಶೆಗೆ ಒಳಪಡಿಸಿ ತನ್ನ ಸಿದ್ಧಾಂತವನ್ನು ಖಚಿತಪಡಿಸಿಕೊಂಡ ನಂತರವೇ ಅದನ್ನು ಪ್ರಕಟಿಸುವ ಸಾಹಸಕ್ಕೆ ಕೈಹಾಕಿದ. ಆಗ್ನೇಯ ಏಷ್ಯಾದ ದ್ವೀಪಗಳಲ್ಲಿ ಅಧ್ಯಯನ ಮಾಡಿ ಸರಿ ಸುಮಾರಾಗಿ ಡಾರ್ವಿನ್‌ಗೆ ಸರಿಸಮಾನವಾದ ಸಿದ್ಧಾಂತವನ್ನು ಆಲ್‌ಫ್ರೆಡ್ ರಸೆಲ್ ವ್ಯಾಲೇಸ್ ಕೂಡ ಕಂಡುಕೊಂಡಿದ್ದ. ಅದರಿಂದಲೂ ಉತ್ತೇಜಿತನಾಗಿ ತನ್ನ ಸಿದ್ಧಾಂತವನ್ನು ಪ್ರಕಟಿಸುವ ಸಾಹಸಮಾಡಿದ. ಧಾರ್ಮಿಕ ಸ್ವಭಾವದ ಡಾರ್ವಿನ್ ವಿಜ್ಞಾನದ ಕಟು ಸತ್ಯಗಳ ದಾರಿಯಲ್ಲಿ ಸಾಗಿ ವೈಜ್ಞಾನಿಕ ಸತ್ಯಕ್ಕೆ ನಿಷ್ಠನಾಗಿ ವಿಕಾಸವಾದವನ್ನು ಪ್ರಕಟಿಸಿದ.

ಡಾರ್ವಿನ್ನನ ಈ ವಿಕಾಸವಾದ ಸಿದ್ಧಾಂತ ಜಗತ್ತಿನಲ್ಲಿ ಅತ್ಯಂತ ವಿವಾದಗ್ರಸ್ತ ಸಿದ್ಧಾಂತವಾಯಿತು. ಕೋಪರ್‌ನಿಕಾಸ್‌ನ ಸಿದ್ಧಾಂತ ಭೂಮಿಯನ್ನು ವಿಶ್ವಕೇಂದ್ರದ ಸಿಂಹಾಸನದಿಂದ ಕೆಳಗೆ ತಳ್ಳಿ ಅತ್ಯುನ್ನತ ಪೀಠದಲ್ಲಿದ್ದ ಮನುಷ್ಯನನ್ನು ಕೆಳಗಿಳಿಸಿತು. ಡಾರ್ವಿನ್‌ನ ಈ ವಿಕಾಸವಾದ ಸಿದ್ಧಾಂತ ತೀಕ್ಷ್ಣವಾದ ಪ್ರತಿರೋಧಕ್ಕೆ ಗುರಿಯಾಯಿತು. ಚರ್ಚ್‌‌ನ ಧಾರ್ಮಿಕ ಗುರುಗಳು ಮತ್ತು ಆಸ್ತಿಕ ಮಹನೀಯರು ಈ ಸಿದ್ಧಾಂತವನ್ನು ಅತ್ಯಂತ ಕಟುವಾಗಿ ಟೀಕಿಸಿದರು. ಈ ಸಿದ್ಧಾಂತ ದೈವಸೃಷ್ಠಿ ಸಿದ್ಧಾಂತಕ್ಕೆ ನೀಡಿದ ಅಘಾತಕ್ಕೆ ಪ್ರತಿಯಾಗಿ ಧಾರ್ಮಿಕ ಗುರುಗಳು ಈ ವೈಜ್ಞಾನಿಕ ಸಿದ್ಧಾಂತವನ್ನು ಅತ್ಯಂತ ತೀವ್ರವಾಗಿ ತರಾಟೆಗೆ ತೆಗೆದುಕೊಂಡರು. ಅಂದು ಆರಂಭಗೊಂಡ ಈ ವಿವಾದ ಇಂದಿಗೂ ತಣ್ಣಗಾಗಿಲ್ಲ. ಡಾರ್ವಿನ್ ವಿಕಾಸವಾದದ ಮಹಾಜೀವ ವೃಕ್ಷದ ರೆಂಬೆಕೊಂಬೆಗಳನ್ನು ಕತ್ತರಿಸುವ ಪ್ರಯತ್ನಗಳು ಇಂದಿಗೂ ನಿರಂತರವಾಗಿ ನಡೆಯುತ್ತಿವೆ. ತೀರಾ ಇತ್ತೀಚಿನ ವೈಜ್ಞಾನಿಕ ಸಂಶೋಧನಾ ಪುರಾವೆಗಳು ವಿಕಾಸವಾದವನ್ನು ಮತ್ತಷ್ಟು ಬಲವಾಗಿ ಬೆಂಬಲಿಸಿದರೂ ಅದಕ್ಕಿರುವ ವಿರೋಧ ದುರ್ಬಲವಾಗಿಲ್ಲ. ಕಳೆದ ನೂರೈವತ್ತು ವರ್ಷಗಳಿಂದಲೂ ಡಾರ್ವಿನ್ ಪ್ರತಿಪಾದಿತ ವಿಕಾಸವಾದವನ್ನು ಒಂದು ವರ್ಗ ಅಷ್ಟೇ ತೀಕ್ಷ್ಣವಾಗಿ ವಿರೊಧಿಸುತ್ತಿದೆ. ಡಾರ್ವಿನ್‌ನ  ವಿಕಾಸವಾದಿ ಸಿದ್ಧಾಂತಕ್ಕೆ ಅತ್ಯಂತ ಪ್ರಬಲ ವೈಜ್ಞಾನಿಕ ಪುರಾವೆಗಳ ಸರಮಾಲೆಯೇ ಇದ್ದರೂ ಅದನ್ನು ಇಂದಿಗೂ ನಿರಾಕರಿಸಿ ಕುಹಕ, ವ್ಯಂಗ್ಯ, ಅವಹೇಳನಕಾರಿ ವ್ಯಾಖ್ಯಾನಗಳಿಗೆ ಗುರಿಪಡಿಸಲಾಗುತ್ತಿದೆ. ಜಗತ್ತಿನಲ್ಲೇ ಅತ್ಯಂತ ತೀವ್ರವಾದ ದೀರ್ಘಾವಧಿಯ ವಿವಾದವನ್ನು ಹುಟ್ಟು ಹಾಕಿದ ಸಿದ್ಧಾಂತವೆಂದರೆ ಅದು ಡಾರ್ವಿನ್‌ನ ವಿಕಾಸವಾದ. ಆಧುನಿಕ ವಿಜ್ಞಾನ ಮತ್ತು ತಂತ್ರಜ್ಞಾನಗಳ ಶಕ್ತಿಗೃಹವೆಂದೇ ಪರಿಗಣಿತವಾಗಿರುವ ಅಮೆರಿಕಾದಲ್ಲೇ ಶೇ.೪೦ ರಷ್ಟು ಜನ ಮಾತ್ರ ವಿಕಾಸ ವಾದ ಸರಿಯೆಂದುಒಪ್ಪಿದ್ದಾರೆ. ಉಳಿದ ಶೇ. ೬೦ರಷ್ಟು ಅಮೆರಿಕನ್ನರು ಇಂದಿಗೂ ವಿಕಾಸವಾದವನ್ನು ಆನ್ಯ ಮಾಡಲು ತಯಾರಿಲ್ಲವೆಂದರೆ ಆಧುನಿಕ ಜಗತ್ತಿನಲ್ಲಿಯೂ ಮನುಷ್ಯರ ಮೇಲೆ ಧಾರ್ಮಿಕ ನಂಬಿಕೆಗಳಿಗಿರುವ ಬಲವಾದ ಹಿಡಿತವನ್ನು ಊಹಿಸಿಕೊಳ್ಳಬಹುದಾಗಿದೆ. ವಿಕಾಸ ವಿಜ್ಞಾನಕ್ಕೆ ಸಂಬಂಧಿಸಿದಂತೆ ಅಪಾರ ವೈಜ್ಞಾನಿಕ ಪುರಾವೆಗಳ ಮಹಾರಾಶಿಯೇ ಇದೆ. ಈ ಕ್ಷೇತ್ರದಲ್ಲಿ ಡಾರ್ವಿನ್ ಕಾಲಾನಂತರದ ಅನೇಕ ಮಹತ್ವದ ವೈಜ್ಞಾನಿಕ ಸಂಶೋಧನೆಗಳು ವಿಕಾಸವಾದವನ್ನೇ ಸಮರ್ಥಿಸಿವೆ. ಆದರೂ ಹೆಚ್ಚಿನ ಜನ ಇಂದಿಗೂ ಯಾಕೆ ದೈವಸೃಷ್ಠಿ ಸಿದ್ಧಾಂತವನ್ನು ನಂಬುತ್ತಿದ್ದಾರೆಂಬುದು ಒಂದು ಯಕ್ಷಪ್ರಶ್ನೆಯಾಗಿದೆ. ಇಂತಹ ಧಾರ್ಮಿಕ ಕಂದಾಚಾರಗಳ ಹಿಡಿತದಿಂದ  ಜನರನ್ನು ಬಿಡಿಸುವ ಕೆಲಸ ಇಂದಿಗೂ ಅಪೂರ್ಣವಾಗಿದೆ ಎಂಬುದರ ಸೂಚಿ ಇದಾಗಿದೆ. ಡಾರ್ವಿನ್‌ನ ದ್ವಿಶತಮಾನೋತ್ಸವವನ್ನು ಆಚರಿಸುವುದೆಂದರೆ ಕೇವಲ ಅವನ ಜೀವನ ಚರಿತ್ರೆಯನ್ನ ಅವನ ಯಾತ್ರೆಗಳನ್ನ, ಅವನ ಪುಸ್ತಕ ಪ್ರಬಂಧಗಳನ್ನ ಹಾಡಿ ಹೊಗಳಿ ಪುನರುಚ್ಚರಿಸುವ ಕ್ರಿಯೆಯಲ್ಲ. ಅವನು ಪ್ರತಿಪಾದಿಸಿದ ಸಿದ್ಧಾಂತದ ಮೂಲಭೂತ ಆಶಯಗಳನ್ನು ಪ್ರಕ್ರಿಯೆಗಳನ್ನು ವಿವರಿಸುವುದು ಮಾತ್ರವಲ್ಲ. ಪ್ರಬಲ ವೈಜ್ಞಾನಿಕ ಪುರಾವೆಗಳಿಂದ ಸಾಬೀತಾದ ಸತ್ಯಗಳನ್ನು ತೆರೆದ ಮನಸ್ಸಿನಿಂದ ಸ್ವೀಕರಿಸಬಲ್ಲ ಉದಾರ ಮನೋಭಾವವನ್ನು ವಿಶಾಲ ಜನಸಮೂಹಗಳಲ್ಲಿ ಬೆಳೆಸುವ ಪ್ರಯತ್ನಗಳನ್ನು ಮತ್ತಷ್ಟು ತೀವ್ರಗೊಳಿಸುವ ವ್ಯಾಪಕಗೊಳಿಸುವ ಪ್ರಕ್ರಿಯೆಯಾಗಬೇಕು. ಕುರುಡಾಗಿ ಧಾರ್ಮಿಕ ಸಿದ್ಧಾಂತಗಳನ್ನು ಆಲಂಗಿಸಿಕೊಂಡಿರುವವರನ್ನು ಅವುಗಳ ಬಿಗಿ ಹಿಡಿತದಿಂದ ಬಿಡಿಸುವ ಪ್ರಯತ್ನಗಳಾಗಬೇಕು. ಪ್ರತಿಯೊಂದನ್ನು ಪದೇ ಪದೇ ಪ್ರಶ್ನಿಸುವ, ವೈಜ್ಞಾನಿಕ ಪುರಾವೆಗಳ ಬೆಳಕಿನಲ್ಲಿ ನಿರಂತರವಾಗಿ ರೂಪಾಂತರಿಸುವ ಮನೋಭಾವವನ್ನು ರೂಢಿಸುವ ಕೆಲಸವನ್ನಾಗಿಸಬೇಕು. ಯಾವುದು ವೈಜ್ಞಾನಿ ಪರಿಶೀಲನೆಯ ಅಗ್ನಿಪರೀಕ್ಷೆಯಲ್ಲಿ ಸಾಭೀತಾಗುವುದಿಲ್ಲವೋ ಅವುಗಳನ್ನು ಅತ್ಯಂತ ನಿರ್ದಾಕ್ಷಿಣ್ಯವಾಗಿ ನಿರಾಕರಿಸುವ, ತಿರಸ್ಕರಿಸುವ ಮನೋಭಾವವನ್ನು ಬೆಳೆಸಲು ಪ್ರಯತ್ನಿಸುವುದೇ ಡಾರ್ವಿನ್ ದ್ವಿಶತಮಾನೋತ್ಸವದ ಪ್ರಬಲ ಸಂದೇಶವಾಗಿದೆ. ಧರ್ಮಗುರುಗಳ ಅಂಧಾನುಯಾಯಿಗಳಾಗಿ ಅವರ ಬೋಧನೆಗಳನ್ನೇ ಪರಮ ಪವಿತ್ರವೆಂದು ಭಾವಿಸಿ, ಅವುಗಳನ್ನು ಪ್ರಶ್ನಿಸದೆ ಪರಮಸತ್ಯವೆಂದು ಭಾವಿಸುವ ಪರಂಪರೆಗೆ ಅಂತ್ಯ ಹಾಡಬೇಕಾಗಿದೆ.

* * *