ವಿಕಾಸ ವಾದದ ಚಿಂತನೆಯ ಆರಂಭ, ಬೆಳವಣಿಗೆ ಮತ್ತು ನಿರ್ದಿಷ್ಟ ಪರಿಕಲ್ಪನೆ ಪಕ್ವವಾದ ರೀತಿಯೇ ಒಂದು ರೋಚಕ ಕಥಾನಕ. ವಿಜ್ಞಾನದಲ್ಲಿ ಯಾವುದೇ ನಿಯಮ, ಸಿದ್ಧಾಂತ ಧುತ್ತನೇ ಸೃಷ್ಟಿಯಾಗುವುದಿಲ್ಲ. ಕೇವಲ ಒಬ್ಬರ ಚಿಂತನೆ, ಪ್ರಯೋಗದಿಂದಲೂ ರಚನೆಯಾಗುವುದಿಲ್ಲ. ಹಲವು ವರ್ಷ, ಶತಮಾನಗಳಲ್ಲಿ ವಿವಿಧ ವಿಜ್ಞಾನಿಗಳು ನೀಡಿದ ಕೊಡುಗೆಗಳ ಕ್ರೋಢೀಕರಣ ದಿಂದಾಗಿ ಸಿದ್ಧಾಂತಗಳು ರೂಪುಗೊಳ್ಳುತ್ತವೆ. ಸತ್ಯ ಶೋಧನೆಯ ಈ ಮಾರ್ಗದಲ್ಲಿ ಹಲವು ಸೋಲು, ಗೆಲುವು, ವೈರುಧ್ಯ, ವಾಗ್ವಾದ, ಮನ್ನಣೆ, ತಿರಸ್ಕೃತಗಳು ನಡೆದಿರುತ್ತವೆ. ವಿಕಾಸವಾದದ ಮಾರ್ಗವೂ ಇದಕ್ಕೆ ಅಪವಾದವಲ್ಲ.

ಕ್ರೈಸ್ತ ಧರ್ಮವು ಬೈಬಲ್ ಗ್ರಂಥದಲ್ಲಿ ಜೀವಿಗಳ ಉದ್ಭವ ಮತ್ತು ವಿಕಾಸವನ್ನು ತನ್ನದೇ ಆದ ರೀತಿಯಲ್ಲಿ ವಿವರಿಸಿತ್ತು. ದೇವರು ವಿಶ್ವವನ್ನು ಏಳು ದಿನಗಳಲ್ಲಿ ಸೃಷ್ಟಿಸಿದನು. ಆತನ ಪ್ರತಿರೂಪವಾದ ಆಡಮ್ ಮೊದಲ ಮಾನವ ಎಂದು ಬೈಬಲ್ಲಿನಲ್ಲಿ ತಿಳಿಸಲಾಗಿದೆ. ಆದರೆ ಆಡಮ್ ಯಾವ ವರ್ಷದಲ್ಲಿ ಸೃಷ್ಟಿಯಾದ ಎಂಬ ಬಗ್ಗೆ ವಿವರವಿಲ್ಲ. ೧೬೨೦ರಲ್ಲಿ ಆರ್ಚ್ ಬಿಷಪ್ ಜೇಮ್ಸ್ ಉಷರ್ ಎಂಬುವ ‘ಪವಿತ್ರ ಕಾಲಜ್ಞಾನ’ ಎಂಬ ಪುಸ್ತಕ ಬರೆದ. ಅದರಲ್ಲಿ ಆಡಮ್‌ನ ಸೃಷ್ಟಿಯು ಕ್ರಿಸ್ತಪೂರ್ವ ೪೦೦೪ ರಲ್ಲಾಗಿದೆ ಎಂದು ಪ್ರಸ್ತಾಪಿಸಿದ್ದಾನೆ. ಕೇಂಬ್ರಿಡ್ಜ್ ವಿಶ್ವವಿದ್ಯಾಲಯದ ಕುಲಪತಿಯಾಗಿ ಜಾನ್ ಲೈಟ್‌ಫುಟ್‌ಎಂಬುವ ಮತ್ತು ನಿಖರವಾದ ಸಮಯ ಸೂಚಿಸಿದ. ಆಡಮ್ ಸೃಷ್ಟಿಯು ಕ್ರಿಸ್ತಪೂರ್ವ ೪೦೦೪ರ ಅಕ್ಟೋಬರ್ ೨೩ರ ಭಾನುವಾರ ಬೆಳಗ್ಗೆ ೯ ಕ್ಕೆ ಸಂಭವಿಸಿತೆಂದು ಆತ ಘೋಷಿಸಿದ !

ಗೆಲಿಲಿಯೊ ಬದುಕಿದ್ದ ಕಾಲದಲ್ಲಿ (೧೫೬೪-೧೬೪೨) ಸೃಷ್ಟಿಯ ಸಮಯವನ್ನು ವಿವರಿಸಲು ವಿವಿಧ ಪ್ರಯತ್ನಗಳು ಸಾಗಿದವು. ನೈಸರ್ಗಿಕ ಕ್ರಿಯೆಗಳಿಂದ ಆದರೆ ದೇವರ ಸೂಚನೆಯಂತೆ ಭೂಮಿ ಸೃಷ್ಟಿಯಾಯಿತೆಂದು ಡೆಕಾರ್ಟಿಸ್ ವಿವರಿಸಿದ. ಭೂಮಿಯು ಧೂಮಕೇತುವಿನಿಂತ ಸೃಷ್ಟಿಯಾಗಿರಬಹುದೆಂದು ವಿಲಿಯಮ್ ವಾಟ್ಸನ್ ೧೬೯೬ ರಲ್ಲಿ ತಿಳಿಸಿದ. ಆದರೆ ಬೈಬಲ್‌ನ್ಲಿರುವ ಸೃಷ್ಟಿಯ ವಿವರಣೆಯನ್ನು ಮೀರಿ ಆಲೋಚಿಸುವಲ್ಲಿ ಆತ ವಿಫಲನಾದ.

ಹದಿನೇಳನೇ ಶತಮಾನದಲ್ಲಿ ಮಾನವ ಮತ್ತಷ್ಟು ಜ್ಞಾನ ಪಡೆಯುವಲ್ಲಿ ಯಶಸ್ವಿಯಾದ. ಪ್ರಕೃತಿಯ ಅವಲೋಕನ, ಅಂಕಿ ಅಂಶಗಳ ಸಂಗ್ರಹ ಹಾಗೂ ವಿಶ್ಲೇಷಣೆಯಿಂದ ಸಾಕಷ್ಟು ವ್ಯವಸ್ಥಿತ ಜ್ಞಾನ ಪಡೆಯುವಂತಾದ. ಕೆಲವು ಪ್ರಕೃತಿ ತಜ್ಞರು ಶಿಲೆಗಳನ್ನು ಸೂಕ್ಷ್ಮವಾಗಿ ಅವಲೋಕಿಸಿ, ಅವುಗಳ ರಚನೆಯನ್ನು ವಿವರಿಸುವಲ್ಲಿ ಯಶಸ್ವಿಯಾದರು. ಸರೋವರ ಅಥವಾ ಸಮುದ್ರಗಳ ತಳದಲ್ಲಿ ಮರಳಿನ ಕಣಗಳು ನಿರಂತರವಾಗಿ ಶೇಖರಣೆಯಾಗುತ್ತವೆ. ಒಂದು ಪದರದ ಮೇಲೆ ಮತ್ತೊಂದು ಪದರ, ಮಗದೊಂದು ಪದರ ಉಂಟಾಗಿ ಕೊನೆಗೆ ಆ ಪದರಗಳೇ ಮರಳುಶಿಲೆಗಳಾಗಿ ಪರಿವರ್ತನೆಯಾಗುತ್ತವೆ. ಇವನ್ನು ಸೆಡಿಮೆಂಟರಿ ಶಿಲೆ (Sedementary Rocks) ಗಳೆನ್ನುವರು. ಈ ಮರಳು ಶಿಲೆಗಳ ಪದರಗಳ ನಡುವೆ ಕೆಲವು ಜೀವಿಗಳ ಅವಶೇಷಗಳನ್ನು ವಿಜ್ಞಾನಿಗಳು ಗುರುತಿಸಿದರು. ಶಿಲೆಗಳು ರಚನೆಯಾಗುವ ಕಾಲಕ್ಕೆ ಸತ್ತು ತಳ ಸೇರಿದ ಜೀವಿಗಳೇ ಈ ರೂಪ ಪಡೆದಿವೆ. ಅವನ್ನು ಪಳೆಯುಳಿಕೆಗಳೆಂದು ಕರೆದರು. ಪಳೆಯುಳಿಕೆಗಳು ಹಿಂದೆ ಬದುಕಿದ್ದ ಜೀವಿಗಳ ಅವಶೇಷಗಳೆಂದು ಎಲ್ಲರೂ ಒಪ್ಪಿದರು.

ಸೂಕ್ಷ್ಮ ದರ್ಶಕದ ಅನ್ವೇಷಣೆಯಾಗುವವರೆಗೆ ಪಳೆಯುಳಿಕೆಗಳು ಹಿಂದೆ ಬದುಕಿದ್ದ ಜೀವಿಗಳ ಅವಶೇಷ ಎಂಬುದು ಪೂರ್ಣವಾಗಿ ಖಾತ್ರಿಯಾಗಿರಲಿಲ್ಲ. ರಾಬರ್ಟ್ ಹುಕ್ (Robert Hooke, 1635-1703) ಸೂಕ್ಷ್ಮದರ್ಶಕದ ಮೂಲಕ ಅನೇಕ ಸೂಕ್ಷ್ಮಜೀವಿಗಳನ್ನು ವೀಕ್ಷಿಸಿದ. ಅವುಗಳ ದೇಹ ರಚನೆ, ಅಂಗಗಳ ವಿನ್ಯಾಸವನ್ನು ಚಿತ್ರಗಳೊಂದಿಗೆ ‘ಮೈಕ್ರೊಫಾಗಿಯ’ ಎಂಬ ಪುಸ್ತಕದಲ್ಲಿ ವಿವರಿಸಿದ. ಜೀವಿಗಳ ದೇಹ ರಚನೆಗೂ ಮತ್ತು ಅವುಗಳ ಜೀವನ ವಿಧಾನಕ್ಕೂ ನೇರ ಸಂಬಂಧವಿದೆ ಎಂಬುದನ್ನು ರಾಬರ್ಟ್ ಹುಕ್ ಗಮನಿಸಿದ. ಆದರೆ ಈ ವಿದ್ಯಮಾನವನ್ನು ಹೊಂದಾಣಿಕೆ ಎಂದು ವಿವರಿಸುವ ಬದಲಿಗೆ ದೇವರ ಲೀಲೆ ಎಂದು ಭಾವಿಸಿದ ! ಆತ ಪಳೆಯುಳಿಕೆಯಾದ ಮರದ ತುಂಡನ್ನು ಸೂಕ್ಷ್ಮದರ್ಶಕದಲ್ಲಿ ವೀಕ್ಷಿಸಿದ. ಅದು ಜೀವಂತ ಮರದ ರಚನೆಗೂ ಮತ್ತು ಕಲ್ಲಿದ್ದಲ ಸೂಕ್ಷ್ಮರಚನೆಗೂ ಹೋಲಿಕೆಯಾಗುವುದನ್ನು ಗಮನಿಸಿದ. ಹಾಗಾಗಿ ಒಂದು ಕಾಲಕ್ಕೆ ಜೀವಂತವಾಗಿದ್ದುದು ಪಳೆಯುಳಿಕೆಯಾಗಿ ಪರಿವರ್ತನೆ ಹೊಂದಿದೆ ಎಂದು ಹುಕ್ ವಿವರಿಸಿದ. ಈತನ ವಿವರಣೆ ಪಳೆಯುಳಿಕೆಗಳು ಉಂಟಾಗುವ ಕ್ರಿಯೆಗೆ ತುಂಬ ಸಮೀಪವಿದೆ.

ಅಮೊನೈಟಿಸ್ ಎಂಬ ಕಡಲಜೀವಿಗಳ ಪಳೆಯುಳಿಕೆಗಳನ್ನು ವಿವರಿಸಿರುವ ರಾಬರ್ಟ್ ಹುಕ್ ಭೂಪದರಗಳಲ್ಲಿ ಉಂಟಾಗುವ ಕೆಲವು ಬದಲಾವಣೆಗಳನ್ನೂ ವಿವರಿಸಿದ್ದಾನೆ. ‘ಮಹಾಸಾಗರಗಳ ತಳದ ಕೆಲವು ಭಾಗಗಳ ಲಕ್ಷಾಂತರ ವರ್ಷಗಳಲ್ಲಿ ಭೂಚಲನೆಯ ಕ್ರಿಯೆಗೆ ಒಳಗಾಗಿ ನೆಲದ ಮೇಲಿನ ಪರ್ವತಗಳಾಗಿವೆ. ಕೆಲವು ಪರ್ವತಗಳು ಸಮತಟ್ಟು ಪ್ರದೇಶಗಳಾಗಿವೆ, ಹಲವು ಸಮತಟ್ಟು ಪ್ರದೇಶಗಳು ಬೆಟ್ಟಗುಡಗಳಾಗಿವೆ’ ಎಂದು ರಾಬರ್ಟ್ ಹುಕ್ ವಿವರಿಸಿದ್ದಾನೆ.

ಆದರೆ ಇಂತಹ ಅಗಾಧ ಪ್ರಮಾಣದ ಭೂಬದಲಾವಣೆಗಳು ಹೇಗಾದವು ? ಈ ಪ್ರಶ್ನೆ ಹದಿನೆಂಟನೇ ಶತಮಾನದ ವಿಜ್ಞಾನಿಗಳಿಗೆ ಯಕ್ಷ ಪ್ರಶ್ನೆಯಾಗಿತ್ತು. ಕೆಲವರು ಹಳೆಯ ಕಥೆಗಳಿಗೆ ಜೋತುಬಿದ್ದರು. ಬೈಬಲ್ಲಿನ ಪ್ರವಾಹದ ಕಥೆಗೆ ಹೊಂದಿಕೆಯಾಗುವಂತಹ ಪುರಾವೆಗಳನ್ನು ಹೆಕ್ಕಿ ತೆಗೆಯಲು ಪ್ರಯತ್ನಿಸಿದರು. ಮತ್ತೆ ಕೆಲವರು ವಿಜ್ಞಾನದ ವಿಧಾನದ ಹಾದಿಯಲ್ಲಿ ಕ್ರಮಿಸಿದರು. ತಾವು ಕಂಡಿದ್ದನ್ನು ಸಾಕ್ಷ್ಯಾಧಾರಗಳು ನೀಡುವ ಸುಳಿವಿನ ಮೇಲೆ ತಮ್ಮ ಅಭಿಪ್ರಾಯಗಳನ್ನು ಮಂಡಿಸಿದರು. ಹುಕ್‌ನ ಸಮಕಾಲೀನನಾಗಿದ್ದ ನೀಲ್ಸ್‌ಸ್ಟೆನ್‌ಸನ್ ಎಂಬುವ ಪಳೆಯುಳಿಕೆಗಳು ಉಂಟಾಗುವ ಕ್ರಮವನ್ನು ವಿವರಿಸಿದ. ಸಾಗರಗಳಲ್ಲಿ ಬದುಕುತ್ತಿದ್ದ ಅಮೊನೈಟಿಸ್‌ನಂತಹ ಜೀವಿಗಳು ಸಾವನ್ನಪ್ಪಿದಾಗ ಸಹಜವಾಗಿ ಸಾಗರಗಳ ತಳ ಸೇರಿದವು. ಅಲ್ಲಿ ಕಲ್ಲು ಬಂಡೆಗಳಿರಲಿಲ್ಲ. ಕೇವಲ ಕೆಸರು ಆವರಿಸಿತ್ತು. ಸತ್ತ ಶರೀರದ ಮೇಲೆ ಸಾಗರದ ಮೇಲಿಂದ ಮರಳು, ಮಣ್ಣು ಬೀಳತೊಡಗಿತು. ಈ ಕ್ರಿಯೆ ನಿರಂತರವಾಗಿ ನಡೆಯಿತು. ಮರಳು, ಕೆಸರಿನಲ್ಲಿ ಸತ್ತ ಶರೀರಗಳು ಮುಚ್ಚಿ ಹೋದವು. ಮರಳು, ಕೆಸರು ಮೇಲಿಂದ ಮೇಲೆ ಬೀಳುತ್ತಾ ಹಲವು ಪದರಗಳು ಉಂಟಾದವು. ಅವುಗಳ ಗಾತ್ರ, ಪ್ರಮಾಣ ಹೆಚ್ಚಾದಂತೆ ಒತ್ತಡ ಹಾಗೂ ಶಾಖ ಹೆಚ್ಚಾಯಿತು. ಅದರಿಂದ ಕಾಲ ಸರಿದಂತೆ ಕೆಸರು-ಮರಳು ಶಿಲೆಯ ರೂಪ ತಳೆದವು. ಇವನ್ನು ಮರಳು ಶಿಲೆಗಳೆನ್ನಬಹುದು. ಮರಳು ಶಿಲೆಗಳ ಕೆಳಭಾಗದಲ್ಲಿ ಕಂಡುಬರುವ ಸತ್ತ ಜೀವಿಗಳ ಅವಶೇಷಗಳು ಅಂದರೆ ಪಳೆಯುಳಿಕೆಗಳು ಹೆಚ್ಚು ಹಿಂದಿನವು. ಮರಳುಶಿಲೆಗಳ ಮೇಲ್ಭಾಗದ ಪದರಗಳಲ್ಲಿ ಕಂಡುಬರುವ ಪಳೆಯುಳಿಕೆಗಳು ಇತ್ತೀಚಿನವು. ಮರಳು ಶಿಲೆಗಳ ವಿವಿಧ ಪದರಗಳಲ್ಲಿನ ಪಳೆಯುಳಿಕೆಗಳನ್ನು ಅಧ್ಯಯನ ಮಾಡಿದರೆ ಹೇಗೆ ಭೂಮಿಯಲ್ಲಿ ಜೀವಿಗಳು ವಿಕಾಸಗೊಂಡವು ಎಂಬುದು ಸ್ಪಷ್ಟವಾಗಿ ಗೋಚರಿಸುತ್ತದೆ. ಇವು ವಿಕಾಸವಾದಕ್ಕೆ ಪ್ರತ್ಯಕ್ಷ ಪುರಾವೆಗಳು. ಸ್ಟೆನ್‌ಸನ್ ಪಳೆಯುಳಿಕೆಗಳ ಅಧ್ಯಯನ ಮಾಡಿದರೆ ಹೇಗೆ ಭೂಮಿಯಲ್ಲಿ ಜೀವಿಗಳು ವಿಕಾಸಗೊಂಡವು ಎಂಬುದು ಸ್ಪಷ್ಟವಾಗಿ ಗೋಚರಿಸುತ್ತದೆ. ಇವು ವಿಕಾಸವಾದಕ್ಕೆ ಪ್ರತ್ಯಕ್ಷ ಪುರಾವೆಗಳು. ಸ್ಟೆನ್‌ಸನ್ ಪಳೆಯುಳಿಕೆಗಳ ಅಧ್ಯಯನ ಕೈಗೊಂಡರೂ, ಅವು ಸೂಚಿಸುವ ವಿಷಯ ಕ್ರೈಸ್ತ ಧರ್ಮದ ನಂಬಿಕೆಗಳಿಗೆ ವಿರೋಧವಿದೆ ಎಂದು ಭಾವಿಸಿರಲಿಲ್ಲ. ಆತ ೧೬೭೫ರಲ್ಲಿ ಪಾದ್ರಿಯಾದ, ೧೬೭೭ ರಲ್ಲಿ ಬಿಷಪ್ ಆದ ಎಂಬುದು ಐತಿಹಾಸಿಕ ಕುತೂಹಲದ ವಿಷಯ !

ಥಾಮಸ್ ಬರ್ನಟ್ (Thomas Burnett 1635-1715) ಭೂಮಿಯ ಹುಟ್ಟಿನ ಬಗ್ಗೆ ಬೈಬಲ್ ಹಾಗೂ ವೈಜ್ಞಾನಿಕ ದೃಷ್ಟಿಕೋನಗಳನ್ನು ಒಗ್ಗೂಡಿಸಲು ಪ್ರಯತ್ನಿಸಿದ. ‘ಭೂಮಿಯ ಪವಿತ್ರ ಸಿದ್ಧಾಂತ’ ಎಂಬ ಶೀಷಿಕೆಯ ೭ ಸಂಪುಟಗಳ ಪುಸ್ತಕವನ್ನು ೧೬೮೦ ರಲ್ಲಿ ಪ್ರಕಟಿಸಿದ. ನಕ್ಷತ್ರದಂತಹ ವಸ್ತುವಿನಿಂದ ಭೂಮಿ ಸೃಷ್ಟಿಯಾಯಿತು. ಅದು ಮೊದಲಿಗೆ ಹೆಚ್ಚಿನ ಶಾಖದಿಂದ ಕೂಡಿತ್ತು. ನಿಧಾನವಾಗಿ ಭೂಮಿ ತಂಪಾಯಿತು. ಭೂಮಿಯ ಹೊರಮೈ ನಿಧಾನವಾಗಿ ಈಡನ್ ಉದ್ಯಾನವಾಗಿ ರೂಪುಗೊಂಡಿತು. ಪ್ರವಾಹ ಉಂಟಾದಾಗ ಭೂಮಿ ಮತ್ತಷ್ಟು ತಣ್ಣಗಾಯಿತು. ಭೂಮಿಯ ಹೊರಪದರದಲ್ಲಿ ಬಿರುಕು ಉಂಟಾಗಿ ನೀರು ಹಿಂಗಲ್ಪಟ್ಟಿತ್ತು. ಹೊರಪದರ ಬಿಡಿ ಭಾಗಗಳು ಭೂ ಖಂಡಗಳಾಗಿ ಹಾಗೂ ಪರ್ವತ ಶ್ರೇಣಿಗಳಾಗಿ ಮಾರ್ಪಾಡಾದವು. ಹೀಗೆ ಬರ್ನಟ್‌ನ ವಿವರಣೆ. ಬೈಬಲ್‌ನ ನಂಬಿಕೆ ಉಳಿಸಿಕೊಳ್ಳಲು ಬರ್ನಟ್ ಒಂದು ವಿಚಿತ್ರ ವಾದವನ್ನು ಮಂಡಿಸಿದ್ದಾನೆ. ಆತನ ಪ್ರಕಾರ ಮಾನವ ಭವಿಷ್ಯದಲ್ಲಿ ಮಾಡಬಹುದಾದ ತಪ್ಪುಗಳನ್ನು ಮನಗಂಡ ದೇವರು ಪ್ರವಾಹವನ್ನುಂಟು ಮಾಡಿದ !

ಬರ್ನಟ್ ನಂತರ ಬಂದ ವಿಜ್ಞಾನಿಗಳು ತಮ್ಮ ಅನ್ವೇಷಣೆಗಳಿಗೆ ಬೈಬಲ್‌ನ ಕಥೆಯನ್ನು ತಳುಕು ಹಾಕುವುದನ್ನು ನಿಲ್ಲಿಸಿದರು. ಲಿನೆಯಸ್ ಮತ್ತಿತರರು ಜೀವಿಗಳು ಒಂದು ಕೇಂದ್ರ ಬಿಂದುವಿನಿಂದ (ನೋವಾಸ್ ಆರ್ಕ್ ಅಥವಾ ಪರ್ವತಗಳಿರುವ ದ್ವೀಪ) ಪ್ರಸರಣಗೊಳ್ಳಲು ಅಸಾಧ್ಯವೆಂದು ತೋರಿಸಿದರು. ೧೭೭೮ ರಲ್ಲಿ ಜಾರ್ಜ್ ಬುಫನ್ (Georges Buffon) ಎಂಬುವ ‘ಪ್ರಕೃತಿಯ ಪರ್ವಗಳು’ ಎಂಬ ಪುಸ್ತಕ ಬರೆದನು. ಆತ ಭೂ ಇತಿಹಾಸವನ್ನು ೭ ಹಂತಗಳನ್ನಾಗಿ ವಿಂಗಡಿಸಿದ. ಇವು ಬೈಬಲ್ಲಿನ ಏಳು ದಿನಗಳಿಗೆ ಹೋಲುವಂತೆ ಮಾಡಿದ. ಆದರೆ ಭೂ ಇತಿಹಾಸವನ್ನು ನೈಸರ್ಗಿಕ ಚಟುವಟಿಕೆಗಳಿಂದಲೇ ವಿವರಿಸಲು ಪ್ರಯತ್ನಿಸಿದ. ಒಂದು ಧೂಮಕೇತು ಸೂರ್ಯನಿಗೆ ಢಿಕ್ಕಿ ಹೊಡೆದ ಪರಿಣಾಮವಾಗಿ ಸೂರ್ಯನ ಒಂದು ಭಾಗ ಹೊರಕ್ಕೆ ಸಿಡಿಯಿತು. ಅದೇ ಕಾಲಾಂತರದಲ್ಲಿ ಭೂಮಿಯಾಯಿತು. (ಇದು ವೈಜ್ಞಾನಿಕ ಸತ್ಯವಲ್ಲವೆಂಬುದು ಇಂದು ಎಲ್ಲರಿಗೂ ತಿಳಿದಿದೆ.) ಬುಫನ್‌ನ ಪ್ರಕಾರ ಭೂಮಿ ಮೊದಲಿಗೆ ಬೆಂಕಿಯ ಚೆಂಡಾಗಿತ್ತು. ಅದು ತಂಪಾದಂತೆ ಗಟ್ಟಿಯ ಶಿಲಾಪದರ ಹೊರಭಾಗದಲ್ಲಿ ಉಂಟಾಯಿತು. ಅನಂತರ ನೀರಾವಿ ಘನೀಕೃತವಾಯಿತು. ಭೂಮಿಯ ಸುತ್ತ ಕಡಲು ಆವೃತವಾಯಿತು. ಸಾಗರಗಳಲ್ಲಿ ಜೀವಿಗಳು ಉಗಮವಾದವು. ಸತ್ತ ಜೀವಿಗಳು ಸಾಗರಗಳ ತಳ ಸೇರಿ ಪಳೆಯುಳಿಕೆಗಳು ರಚನೆಯಾದವು. ಅನಂತರ ಸಾಗರಗಳ ಮಟ್ಟ ತೀವ್ರವಾಗಿ ಕುಸಿದ ಪ್ರಯುಕ್ತ ನೆಲದಿಂದ ಕೂಡಿದ ಭೂಪ್ರದೇಶ ತಲೆದೋರಿತು. ಜೀವಿಗಳು ಸಾಗರಗಳಿಂದ ನೆಲದ ಮೇಲೂ ಬಂದು ಜೀವಿಸತೊಡಗಿದವು. ಭೂ ಪ್ರದೇಶ ಮೊದಲಿಗೆ ಬಿಸಿಯಾಗಿದ್ದರ ಪ್ರಯುಕ್ತ ‘ಉಷ್ಣವಲಯ’ದ ಸಸ್ಯಗಳು ಜನ್ಮ ತಾಳಿದವು. ಆದರೆ ಪ್ರಾಣಿಗಳು ಎಲ್ಲ ಸ್ಥಳಗಳಲ್ಲಿಯೂ ಜೀವಿಸಲು ಸಾಧ್ಯವಾಯಿತು. ಭೂಪ್ರದೇಶ ತಂಪಾಗುತ್ತಾ ಹೋದಂತೆ ಅಂತಿಮವಾಗಿ ಧ್ರುವ ಪ್ರದೇಶಗಳು ಹಿಮದಿಂದ ಆವರಿಸಲ್ಪಟ್ಟವು. ಸಮಶೀತೋಷ್ಣ ವಲಯದ ಕೆಲವು ಪ್ರದೇಶಗಳು ಸಾಕಷ್ಟು ಬದಲಾವಣೆಗೆ ಒಳಗಾದವು. ಭೂ ಮೇಲ್ಮೈಯ ಮೂಲ ಪ್ರಾಣಿಗಳು ಜೀವಿಸಲು ಸಾಧ್ಯವಿಲ್ಲದ ಸ್ಥಳಗಳಲ್ಲಿ ಸೂಕ್ತ ರೀತಿಯಲ್ಲಿ ಪರಿವರ್ತನೆಯಾದವು.

ಸುಮಾರು ಎರಡು ಶತಮಾನಗಳ ಹಿಂದೆ ಜೀವಿಗಳ ವಿಕಾಸದ ಬಗ್ಗೆ ಇಂತಹ ವಿವರಣೆ ನೀಡಿರುವುದು ನಿಜವಾಗಿ ಆಶ್ಚರ್ಯಕರ ವಿಷಯ. ಅದಕ್ಕಿಂತ ಮುಖ್ಯವಾದ ವಿಷಯ ಇನ್ನೊಂದಿದೆ. ಬೈಬಲ್ಲಿನಲ್ಲಿರುವ ಕಾಲಾವಧಿಯನ್ನು ತಿರಸ್ಕರಿಸಿ, ಭೂರಚನೆಯ ಎಲ್ಲ ಕ್ರಿಯೆಗಳಿಗೆ ಅಗಾಧವಾದ ಕಾಲಾವಧಿ ಬೇಕೆಂದು ತೀರ್ಮಾನಿಸಿರುವುದು ಪರಮಾಶ್ಚರ್ಯದ ವಿಷಯ. ಕಾದ ಕಬ್ಬಿಣದ ಚೆಂಡುಗಳು ತಣ್ಣಗಾಗಲು ಎಷ್ಟು ಸಮಯ ತೆಗೆದುಕೊಳ್ಳುತ್ತವೆಂದು ತಿಳಿಯಲು ಆತ ಹಲವು ಪ್ರಯೋಗಗಳನ್ನು ಕೈಗೊಂಡನು. ಚೆಂಡಿನ ಗಾತ್ರ ಹೆಚ್ಚಾದಂತೆ ತಣ್ಣಗಾಗುವುದಕ್ಕೆ ಹೆಚ್ಚು ಸಮಯ ತೆಗೆದುಕೊಳ್ಳುವುದೆಂದು ಪ್ರಯೋಗಗಳಿಂದ ತಿಳಿದುಕೊಂಡನು. ಈ ಪ್ರಯೋಗಗಳ ಆಧಾರದಿಂದ ಭೂಮಿಯ ಲಾವಾರಸದ ಸ್ಥಿತಿಯಿಂದ ಈಗಿರುವ ತಾಪದ ಸ್ಥಿತಿಗೆ ತಣ್ಣಗಾಗಲು ಸುಮಾರು ೭೫,೦೦೦ ವರ್ಷಗಳು ಬೇಕಾಗುತ್ತವೆಂದು ಲೆಕ್ಕ ಹಾಕಿದ. ಬಹುಶಃ ಭೂಮಿಗೆ ಇನ್ನೂ ಹೆಚ್ಚಿನ ಸಮಯ ತೆಗೆದುಕೊಂಡಿರಬೇಕೆಂದು ತನ್ನ ಗೆಳೆಯರಿಗೆ ಪತ್ರ ಬರೆದು ತಿಳಿಸಿದ.

ಮಾನವನ ಜ್ಞಾನ ಬೆಳೆದಂತೆ, ಅವಲೋಕನ, ವಿಶ್ಲೇಷಣೆ, ತುಲನೆ, ಊಹಾಶಕ್ತಿ ಬೆಳೆದಂತೆ ಮತ್ತಷ್ಟು ವಿಷಯಗಳು ಬೆಳಕಿಗೆ ಬಂದವು. ಸಾಗರಗಳ ಮಟ್ಟ ಇಳಿಯುವ ಬಗ್ಗೆ ಹಾಗೂ ಭೂಶಿಲೆಯ ವಿವಿಧ ಪದರಗಳು ಹೊರಕ್ಕೆ ಕಾಣುವಂತಾಗುತ್ತದೆ ಎಂಬ ಬಗ್ಗೆ ಕೆಲವು ವಿಜ್ಞಾನಿಗಳು ಪ್ರಸ್ತಾಪಿಸಿದರು. ಇಂತಹ ಚಿಂತನೆಯನ್ನು ‘ನೆಪ್ಚೂನಿಸಮ್’ ಎಂದು ಹೆಸರಿಸಿದರು. ಸಾಗರಗಳ ಅಗಾಧ ಪ್ರಮಾಣದ ನೀರು ಎಲ್ಲಿಗೆ ಹೋಗುತ್ತದೆ ಎಂಬ ಪ್ರಶ್ನೆಗೆ ಈ ವಿಜ್ಞಾನಿಗಳು ಉತ್ತರಿಸಲಾಗಲಿಲ್ಲ. ಆದರೆ ಸಾಗರಗಳ ಮಟ್ಟ ಇಳಿಯುತ್ತದೆ ಎಂಬ ಅಭಿಪ್ರಾಯದಿಂದ ಭೂವಿಜ್ಞಾನ ಶಾಖೆ ಹೆಚ್ಚು ಬೆಳೆಯಲು ಸಹಾಯವಾಯಿತು. ಅಬ್ರಹಾಮ್ ವರ‍್ನರ್‌(೧೭೪೯-೧೮೧೭) ಎಂಬ ವಿಜ್ಞಾನಿ ಭೂಮಿಯ ಶಿಲೆಗಳನ್ನು ಪ್ರಥಮ ಬಾರಿಗೆ ‘ಪ್ರಾಥಮಿಕ’, ‘ದ್ವಿತೀಯ’ ಹಾಗೂ ‘ತೃತೀಯ’ ಶಿಲೆಗಳೆಂದು ವರ್ಗೀಕರಿಸಿದ. ಅವು ರಚನೆಯಾಗುವ ಕ್ರಿಯೆಯನ್ನೂ ವಿವರಿಸಿದ. ಇಂದಿಗೂ ಈ ವಿಧಾನವನ್ನೇ ನಾವು ಅನುಸರಿಸುತ್ತೇವೆ. ಭೂ ಮೇಲ್ಮೈಯು ಅಪಾರ ಸಂಖ್ಯೆಯ ಅಗ್ನಿಪರ್ವತ ಹಾಗೂ ಭೂಕಂಪನಗಳ ಕ್ರಿಯೆಗೆ ಒಳಗಾಗಿದೆ ಎಂದು ಈ ವಿಧಾನ ವಿವರಿಸುತ್ತದೆ. ಇದನ್ನು ‘ವಲ್ಕನಿಸಮ್’ ಎನ್ನುವರು.

೧೭೫೦ ರಲ್ಲಿ ಜೆನ್ ಗುಟಾರ್ಡ್ ಫ್ರಾನ್ಸಿನ ಕೆಲವು ಪರ್ವತಗಳು ಅಗ್ನಿಪರ್ವತಗಳಿಂದ ಉಂಟಾಗಿವೆ ಎಂದು ತಿಳಿಸಿದ. ಫ್ರಾನ್ಸ್‌ನಲ್ಲಿರುವ ಬಸಾಲ್ಟ್ ಶಿಲೆಗಳ ವಿತರಣೆಯನ್ನು ಪ್ರಕೃತಿ ತಜ್ಞ ನಿಕೋಲಸ್ ಡೆಸ್ಮರೆಸ್ಟ್ (೧೭೧೫-೧೮೧೫) ವಿವರಿಸಿದ್ದಾನೆ. ಈ ಶಿಲೆಗಳು ಲವಾ ಹರಿಯುವಿಕೆಗೆ ಹೋಲುವುದನ್ನು ತಿಳಿಸಿದ್ದಾನೆ. ಅಲ್ಲದೆ ಐರ‍್ಲೆಂಡಿನ ಕಾಸನಿ ಪರ್ವತವು ಅಗ್ನಿಪರ್ವತಗಳಿಂದ ಉದಯಿಸಿರಬಹುದಂದು ತರ್ಕಿಸಿದ. ಅಗ್ನಿಪರ್ವತಗಳೇ ಭೂಖಂಡಗಳ ರಚನೆಗೆ ಪ್ರಮುಖ ಕಾರಣವೆಂದು ಸ್ಕಾಟ್ ಜೇಮ್ಸ್ ಹಟನ್ ೧೭೮೫ರಲ್ಲಿ ಪ್ರತಿಪಾದಿಸಿದ.

ಭೂ ಮೇಲ್ಮೆಯಲ್ಲಿರುವ ವಿನ್ಯಾಸಗಳ ರಚನೆಗೆ ಬೈಬಲ್ಲಿನಲ್ಲಿ ಸೂಚಿಸಿರುವಂತಹ ಪ್ರವಾಹಗಳ ಅಗತ್ಯವಿಲ್ಲ. ನಮ್ಮ ಕಣ್ಣೆದುರಿಗೆ ನಡೆಯುವ ನೈಸರ್ಗಿಕ ಕ್ರಿಯೆಗಳೇ ದೀರ್ಘಕಾಲದಲ್ಲಿ ಪರ್ವತ, ಮೈದಾನಗಳ ರಚನೆಗೆ ಕಾರಣವಾಗುತ್ತವೆ ಎಂದು ಹಟನ್ ತಿಳಿಸಿದ. ಈ ರೀತಿಯ ಭೂರಚನೆಗೆ ಕಾರಣವಾಗುತ್ತವೆ ಎಂದು ಹಟನ್ ತಿಳಿಸಿದ. ಈ ರೀತಿಯ ಭೂರಚನೆ ಚಿಂತನೆಯನ್ನು ‘ಏಕ ಸಮರೂಪತೆ’ (Uniformatariansim) ಎನ್ನುವರು. ಆಗಾಗ್ಗೆ ಉಂಟಾಗುವ ಬೃಹತ್ ಅವಘಡಗಳಿಂದ ಭೂರಚನೆ ಉಂಟಾಗಿದೆ ಎನ್ನುವ ಚಿಂತನೆಯನ್ನು ‘ಅವಘಡವಾದ’ (Catastrophism) ಎನ್ನುವರು.

ಪ್ರಕೃತಿಯ ಎಲ್ಲ ಕ್ರಿಯೆಗಳಿಗೂ ಏಕಸಮರೂಪತೆ ಕಾರಣವೆಂದು ಹಟನ್ ತರ್ಕಿಸಿದ. ಇಂದು ಭೂಮಿಯ ‘ಸ್ಥಿಮಿತ ಸ್ಥಿತಿ’ಯಲ್ಲಿನ ನೈಸರ್ಗಿಕ ಕ್ರಿಯೆಗಳಿಂದಲೇ ಕಡಲ ದಂಡೆಗಳು ಕೊರೆತಕ್ಕೆ ಒಳಗಾಗಿವೆ. ಕಡಲಾಳದಲ್ಲಿ ಮಣ್ಣು, ಮರಳು ಶೇಖರಗೊಂಡಿವೆ. ಸತ್ತ ಜೀವಿಗಳ ಶರೀರ ಮರಳಲ್ಲಿ ಹೂತು ಹೋಗಿ ಪಳೆಯುಳಿಕೆಗಳಾಗಿವೆ. ಅಗ್ನಿಪರ್ವತಗಳ ಚಟುವಟಿಕೆಯಿಂದ ಪರ್ವತಗಳು, ಮೈದಾನಗಳು ಉಂಟಾಗಿವೆ, ಎಂದು ತಿಳಿಸಿದ. ಒಂದು ಕಾಲಕ್ಕೆ ಸಮತಟ್ಟಾಗಿದ್ದ ಪ್ರದೇಶ ಭೂಕಂಪನಗಳಿಂದ ಎತ್ತರದ ಪ್ರದೇಶವಾಗಿ ಬೆಟ್ಟಗುಡಗಳಾಗಿವೆ. ಇವು ನಿರಂತರವಾಗಿ ಎತ್ತರವಾಗುತ್ತಾ ಹಿಮಾಲಯದಷ್ಟು ಎತ್ತರದ ಪರ್ವತಗಳೂ ರಚನೆಯಾಗಬಹುದು. ಇಂಥಹ ನೈಸರ್ಗಿಕ ಕ್ರಿಯೆಗಳು ನಡೆಯುತ್ತಲೇ ಇರುವುದರಿಂದ ನಮಗೆ ಆರಂಭದ ಯಾವ ಘಟನೆಯೂ ದೊರಕುವುದಿಲ್ಲ. ಅದೇ ರೀತಿ ಅಂತಿಮವಾದ ರೂಪವನ್ನು ಕಾಣಲಾಗದು” ಎಂದು ಹಟನ್ ತಿಳಿಸಿದ್ದಾನೆ.

ಭೂಮಿಯ ಹಾಗೂ ಜೀವಿಗಳ ಹುಟ್ಟಿನಲ್ಲಿ ಉಂಟಾಗಿರುವ ಅನೇಕಾನೇಕ ಬದಲಾವಣೆಗಳಿಗೆ ಬಹಳಷ್ಟು ಸಮಯ ಬೇಕು. ಆಧುನಿಕ ವಿಜ್ಞಾನದಿಂದ ನಮಗಿಂದು ತಿಳಿದಿರುವಂತೆ ಭೂಮಿಯು ಸುಮಾರು ೪.೫ ಬಿಲಿಯನ್ ವರ್ಷಗಳ ಹಿಂದೆ ಉಗಮವಾಯಿತು. ಸುಮಾರು ಒಂದು ಬಿಲಿಯನ್ ವರ್ಷ ವಯಸ್ಸಾಗಿರುವ ಶಿಲೆಗಳಿರುವುದರಿಂದ, ಅದಕ್ಕಿಂತ ಪೂರ್ವದಲ್ಲಿ ಏನೇನು ಬದಲಾವಣೆಗಳಾಗಿರಬಹುದೆಂದು ಊಹಿಸಬಹುದು. ಕೆಲವೊಮ್ಮೆ ಬೃಹತ್ ಪ್ರಮಾಣದ ನೈಸರ್ಗಿಕ ಅವಘಡಗಳಾಗಿ ಭೂಮಿಯ ರಚನೆಯಾಗಿದ್ದರೂ ನಿರಂತರವಾಗಿ ಉಂಟಾಗುತ್ತಿರುವ ಅಲ್ಪ ಪ್ರಮಾಣದ ನೈಸರ್ಗಿಕ ಕ್ರಿಯೆಗಳ ಒಟ್ಟು ಪರಿಣಾಮದಿಂದಾಗಿಯೇ ಭೂ  ಮೇಲ್ಮೈ ರಚನೆ, ಭೂ ಖಂಡಗಳ ರಚನೆ ಉಂಟಾಗಿದೆ. ಬದಲಾಗಿದೆ ಅಥವಾ ನಾಶವಾಗಿದೆ. ಈ ಎಲ್ಲ ಕ್ರಿಯೆಗಳು ಹಟನ್ ಊಹೆಯಂತೆ ಉಂಟಾಗಿದ್ದರೂ, ಆತನ ಜೀವಿತಕಾಲದಲ್ಲಿ ವಿಜ್ಞಾನಿಗಳು ಆತನ ಅಭಿಪ್ರಾಯಕ್ಕೆ ಹೆಚ್ಚು ಮನ್ನಣೆ ನೀಡಲಿಲ್ಲ. ಹಟನ್ ೧೭೯೫ ರಲ್ಲಿ ‘ಭೂಮಿಯ ಸಿದ್ಧಾಂತ’ ಎಂಬ ಶೀರ್ಷಿಕೆಯ ಎರಡು ಸಂಪುಟಗಳ ಪುಸ್ತಕ ಪ್ರಕಟಿಸಿದ. ಮೂರನೆಯ ಸಂಪುಟಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿರುವಾಗಲೇ ೧೭೯೭ರಲ್ಲಿ ಮರಣ ಹೊಂದಿದ. ಹಟನ್‌ನ ಗೆಳೆಯ ವಿಜ್ಞಾನಿ ಜಾನ್ ಪ್ಲೆಫೇರ್ ಎಂಬುವ ೧೮೦೨ ರಲ್ಲಿ ಮೂರನೇ ಸಂಪುಟವನ್ನು ಪ್ರಕಟಿಸಿದ. ವಿಜ್ಞಾನವೇ ಹಾಗೆ. ಒಬ್ಬರು ಮಾಡಿದ ಪ್ರಯತ್ನವನ್ನು ಮತ್ತೊಬ್ಬರು ಅಷ್ಟೇ ಪ್ರಮಾಣಿಕತೆಯಿಂದ, ವಿಜ್ಞಾನ ನಿಷ್ಠೆಯಿಂದ ನಿಸರ್ಗದ ನಿಗೂಢವನ್ನು ಅರಿಯಲು ಪ್ರಯತ್ನಿಸುತ್ತಾರೆ. ಅದರಿಂದಾಗಿಯೇ ಇಂದು ನಾವು ಬೃಹತ್ ಪ್ರಮಾಣದ ಜ್ಞಾನ ಕ್ರೋಢೀಕರಿಸಲು ಸಾಧ್ಯವಾಗಿದೆ.

ಜಾರ್ಜ್ ಕುವಿಯರ್ ಎಂಬುವ ಮತ್ತೊಬ್ಬ ಪ್ರತಿದ್ಧ ಭೂಶಾಸ್ತ್ರಜ್ಞ, ಫ್ರಾನ್ಸ್ ದೇಶದ ಈತ ೧೭೬೯ರಲ್ಲಿ ಜನಿಸಿದ. ಬಾಲಕನಾಗಿದ್ದಾಗಲೇ ಈತ ಬುಷನ್‌ನ ಪುಸ್ತಕವನ್ನು ಓದಿದ್ದ. ೧೭೯೫ ರಲ್ಲಿ ಪ್ಯಾರಿಸ್‌ನಗರದಲ್ಲಿರುವ ನೈಸರ್ಗಿಕ ಇತಿಹಾಸದ ಮ್ಯೂಸಿಯಮ್‌ನ ಸಹಾಯಕನಾಗಿ ಕೆಲಸಕ್ಕೆ ಸೇರಿದ. ೧೭೯೯ ರಲ್ಲಿ ಫ್ರಾನ್ಸಿನ ಕಾಲೇಜಿನಲ್ಲಿ ನೈಸರ್ಗಿಕ ಇತಿಹಾಸ ವಿಭಾಗದ ಪ್ರಾಧ್ಯಾಪಕನಾಗಿ ನೇಮಕಗೊಂಡನು. ೧೮೦೨ ರಲ್ಲಿ ನೈಸರ್ಗಿಕ ಇತಿಹಾಸದ ಮ್ಯೂಸಿಯಮ್‌ನ ಪ್ರಾಧ್ಯಾಪಕನಾದ. ಒಬ್ಬ ದಕ್ಷ ಆಡಳಿತಾಧಿಕಾರಿಯಾಗಿ ಮ್ಯೂಸಿಯಮ್ ಅನ್ನು ಪ್ರಸಿದ್ಧಿಯಾಗುವಂತೆ ಮಾಡಿದ. ಈತ ವಿಶ್ವದಲ್ಲಿಯೇ ಅತ್ಯಂತ ಪ್ರಭಾವಶಾಲೀ ಜೀವಶಾಸ್ತ್ರಜ್ಞನಾಗಿದ್ದ. ೧೮೩೨ ರಲ್ಲಿ ಕುವಿಯರ್ ವಿಧಿವಶನಾದ.

ಪ್ರಾಣಿಗಳ ವರ್ಗೀಕರಣವನ್ನು ಲಿನೆಯಸ್‌ಗಿಂತ ಕುವಿಯರ್ ಹೆಚ್ಚು ವ್ಯವಸ್ಥೆಗೊಳಿಸಿದ. ತುಲನಾತ್ಮಕ ಅಂಗರಚನಾ ಶಾಸ್ತ್ರವನ್ನು ಆಧರಿಸಿ ಕುವಿಯರ್ ಪ್ರಾಣಿಗಳನ್ನು ವರ್ಗೀಕರಿಸಿದ. ಈ ವಿಧಾನಕ್ಕೆ ಹೆಚ್ಚಿನ ಮಾನ್ಯತೆ ದೊರಕಿತು. ಶರೀರದ ವಿವಿಧ ಭಾಗಗಳು ಹೇಗೆ ಕಾರ್ಯ ನಿರ್ವಹಿಸುತ್ತವೆ ಎಂಬ ಬಗ್ಗೆ ಕುವಿಯರ್‌ಗಿದ್ದ ಜ್ಞಾನವು ಪಳೆಯುಳಿಕೆಗಳ ವರ್ಗೀಕರಣಕ್ಕೆ ಹೊಸ ಆಯಾಮವನ್ನು ನೀಡಿತು. ಮಾಂಸಾಹಾರಿ ಹಾಗೂ ಸಸ್ಯಾಹಾರಿಗಳಿಗೂ ಅಂಗರಚನೆಯಲ್ಲಿರುವ ವ್ಯತ್ಯಾಸಗಳನ್ನು ಮತ್ತು ಅವು ಜೀವನ ಸಾಗಿಸುವುದಕ್ಕೆ ಹೇಗೆ ಸಹಾಯಕವಾಗಿವೆ ಎಂಬುದನ್ನು ಕುವಿಯರ್ ವಿವರಿಸಿದ. ಮಾಂಸಾಹಾರಿಗಳಿಗೆ ವೇಗವಾಗಿ ಓಡಲು ಸಪೂರ ಹಾಗೂ ಬಲಯುತವಾದ ಕಾಲುಗಳು, ಪಂಜಗಳು ಮತ್ತು ಹಸಿ ಮಾಂಸವನ್ನು ಹರಿಯಲು ಚೂಪಾದ ಉದ್ದನೆಯ ಕೋರೆಹಲ್ಲುಗಳು ಇರಬೇಕೆಂದು ವಿವರಿಸಿದ. ಅದೇ ರೀತಿ ಸಸ್ಯಾಹಾರಿಗಳಿಗೆ ಅಗಲವಾದ ಬಾಚಿ ಹಲ್ಲುಗಳು, ಹುಲ್ಲನ್ನು ಅಗಿಯಲು ಚಪ್ಪಟೆಯಾದ ದವಡೆ ಹಲ್ಲುಗಳು ಮತ್ತು ಓಡಲು ಗೊರಸುಗಳು ಸಹಾಯಕವಾಗಿವೆ ಎಂದು ಪ್ರತಿಪಾದಿಸಿದ. ಹಾಗಾಗಿ ಯಾವುದಾದರೂ ಪುರಾತನ ಪ್ರಾಣಿಯ ಅವಶೇಷಗಳು ದೊರೆಕಿದರೆ, ಅವುಗಳ ದಂತ, ಗೊರಸು, ಕಾಲು ಮೂಳೆಗಳನ್ನು ಗಮನಿಸಿ. ಆ ಪ್ರಾಣಿಯ ಆಹಾರ ಕ್ರಮವನ್ನು ತಿಳಿಯಬಹುದೆಂದು ವಾದಿಸಿದ. ಆತನ ವಾದವನ್ನು ಪರೀಕ್ಷಿಸಲು ಯಾರೋ ಒಬ್ಬರು ಪರಗ್ವೆಯಿಂದ ತಂದಿದ್ದ ಪಳೆಯುಳಿಕೆಯ ಕೆಲವು ಮೂಳೆಗಳನ್ನು ಕಳುಹಿಸಿದರು. ಆತ ವಿವರವಾದ ಅಧ್ಯಯನ ಮಾಡಿ, ಆ ಮೂಳೆಗಳು ಇಂದು ಬದುಕಿಲ್ಲದ ಮತ್ತು ನಮಗೆ ತಿಳಿದಿರದ ಬೃಹತ್ ಸ್ಲಾತ್ ಎಂಬ ಪ್ರಾಣಿ ಪ್ರಭೇದಕ್ಕೆ ಸಂಬಂಧಿಸಿವೆ ಎಂದು ತಿಳಿಸಿದ ಮತ್ತು ಆ ಪ್ರಭೇದವನ್ನು ‘ಮೆಗಥೀರಿಯಮ್’ ಎಂದು ಹೆಸರಿಸಿದ.

ಅಂಗರಚನಾ ನಿಯಮಗಳನ್ನು ಅನುಸರಿಸಿ ಪ್ರಭೇದಗಳನ್ನು ಗುರುತಿಸುವ ಹೊಸ ವಿಧಾನವನ್ನು ಕುವಿಯರ್ ಆವಿಷ್ಕರಿಸಿದ. ಅನೇಕ ಪಳೆಯುಳಿಕೆಗಳಿಗೆ ಹಾಲಿ ಬದುಕಿರುವ ಸಂಬಂಧಿ ಪ್ರಭೇದಗಳಿರಲಿಲ್ಲ. ಅಲ್ಲದೆ ಅವು ರಚನೆಯಲ್ಲಿ ಭಿನ್ನವಾಗಿದ್ದವು. ನಿರಂತರ ಅಧ್ಯಯನದಿಂದ ಕುವಿಯರ್ ಪಳೆಯುಳಿಕೆಶಾಸ್ತ್ರ ಎಂಬ ವಿಜ್ಞಾನ ಶಾಖೆಗೆ ಒಬ್ಬನೇ ಅಸ್ತಿಭಾರ ಹಾಕಿದ್ದು ಅಪರೂಪದ ವಿಷಯ.

ಕುವಿಯರ್ ತನ್ನ ಸಂಶೋಧನೆಗಳನ್ನು ಜೀವಿಗಳ ವಿಕಾಸಕ್ಕೆ ಸಾಕ್ಷ್ಯಧಾರಗಳೆಂದು ಯೋಚಿಸಿರಲಿಲ್ಲ. ಪ್ರಕೃತಿಯಲ್ಲಿ ಆಗಾಗ್ಗೆ ಉಂಟಾಗುವ ಬೃಹತ್ ಅವಘಡಗಳಿಂದಾಗಿ ಪ್ರಾಣಿ ಸಂಕುಲ ನಾಶವಾಗಿರಬಹುದೆಂದು ಆಲೊಚಿಸಿದ. ಪ್ರತಿ ಅವಘಡದ ನಂತರ ಪುನಃ ಹೊಸ ಪ್ರಭೇದಗಳ ಸೃಷ್ಠಿಯಾಗಿದೆ ಎಂದು ಪ್ರತಿಪಾದಿಸಿದ. ಮೊದಲಿಗೆ ಇಂತಹ ವಿಧಾನಗಳು ದೈವ ನಿಯಮಗಳೆಂದು ಭಾವಿಸಿದ. ಅನಂತರ ತನ್ನ ಅಭಿಪ್ರಾಯಗಳನ್ನು ಬದಲಸಿಕೊಂಡ. ಆತನ ಪ್ರಕಾರ ದೇವರು ಮೊದಲಿಗೆ ಜೀವಿಗಳನ್ನು ಸೃಷ್ಟಿಸಿ, ಅನಂತರ ಕೆಲವು ನಿಯಮಗಳನ್ನು ನಿರ್ದೇಶಿಸಿದ. ಅದರಂತೆ ಹೊಸ ಅವಘಡಗಳು ಮತ್ತು ಹೊಸ ಪ್ರಭೇದಗಳ ಸೃಷ್ಠಿ ನಿರಂತರವಾಗಿ ನಡೆಯುತ್ತಿವೆ ಎಂದು ಭಾವಿಸಿದ. ಅಲ್ಲದೆ ಬೈಬಲ್‌ನಲ್ಲಿ ಸೂಚಿಸಿರುವ ಪ್ರವಾಹವು ಅಂತಹ ಅವಘಡಗಳ ಸರಣಿಯಲ್ಲಿ ಅಂತಿಮವಾಗಿ ಬಂದ ಅವಘಡವೆಂದು ಕುವಿಯರ್ ಪ್ರತಿಪಾದಿಸಿದ.

ಕುವಿಯರ್‌ನ ಪ್ರಕಾರ ಭೂ ಇತಿಹಾಸದಲ್ಲಿ ಗಮನಾರ್ಹ ಬದಲಾವಣೆಯಿಲ್ಲದ ಶಾಂತಿಯುತ ಕಾಲಘಟ್ಟ ದೀರ್ಘ ಸಮಯದವರೆಗೆ ಇದ್ದು, ಆಗಾಗ್ಗೆ ಬೃಹತ ಅವಘಡಗಳ ಕಾಲ ಉಂಟಾಗಿದೆ. ಆಲ್ಸ್ ಪರ್ವತಗಳ ಶ್ರೇಣಿ ನಿಧಾನವಾಗಿ ಭೂಭಾಗ ಮೇಲಕ್ಕೆದ್ದು ಉಂಟಾಗಿದೆ ಎಂದು ತಿಳಿಯುವ ಬದಲು, ಇಡೀ ಪರ್ವತಗಳು ಒಂದೇ ಬೃಹತ್ ಅವಘಡದಿಂದ ಉಂಟಾಗಿದೆ. ಅದರ ಪರಿಣಾಮವಾಗಿ ಸಾಗರದ ಮಟ್ಟದಲ್ಲಿ ಬದಲಾವಣೆ ಉಂಟಾಗಿದೆ. ಅಲ್ಲದೆ ಅನೇಕ ಸಸ್ಯ ಮತ್ತು ಪ್ರಾಣಿ ಪ್ರಭೇದಗಳು ನಶಿಸಿಹೋಗಿವೆ ಎಂದು ವಿವರಿಸಿದನು.

ಲಮಾರ್ಕ್‌ನ ಅಭಿಪ್ರಾಯ ಮತ್ತೊಂದು ರೀತಿಯಲ್ಲಿತ್ತು. ಆತನ ಪ್ರಕಾರ ಯಾವುದೇ ಪ್ರಭೇದ ವಿನಾಶ ಹೊಂದಿಲ್ಲ. ಬದಲಿಗೆ ಮತ್ತೊಂದು ಪ್ರಭೇದವಾಗಿ ವಿಕಾಸ ಹೊಂದಿದೆ. ಲಮಾರ್ಕನ ಪ್ರಕಾರ ಜೀವಿಗಳಲ್ಲ ಸಂತತಿಯಿಂದ ಸಂತತಿಗೆ ಸಣ್ಣಪುಟ್ಟ ವ್ಯತ್ಯಾಸಗಳುಂಟಾಗುತ್ತವೆ. ಆ ರೀತಿಯ ವ್ಯತ್ಯಾಸಗಳು ನಿಧಾನವಾಗಿ ಕ್ರೋಢೀಕರಣಗೊಂಡು ಹೊಸ ಪ್ರಭೇದ ಸೃಷ್ಟಿಯಾಗುತ್ತದೆ. ಲಮಾರ್ಕ್ ಮತ್ತು ಕುವಿಯರ್‌ರವರ ಭಿನ್ನ ದೃಷ್ಟಿಕೋನಗಳು ವಾಗ್ವಾದಕ್ಕೆ ಕಾರಣವಾದವು ಕುವಿಯರ್ ಅನೇಕ ವರ್ಷಗಳ ಕಾಲ ಲಮಾರ್ಕ್‌ನ ಸಿದ್ಧಾಂತವನ್ನು ವಿರೋದಿಸಿದ.

ಆ ಸಮಯದಲ್ಲಿ ಕುವಿಯರ್‌ನ ಅಭಿಪ್ರಾಯಕ್ಕೆ ಪೂರ್ಣ ಮನ್ನಣೆ ದೊರಕಿತ್ತು. ಭೂ ವಿಜ್ಞಾನವು ಬೈಬಲ್ಲಿನಲ್ಲಿ ತಿಳಿಸಿರುವ ದೈವಸೃಷ್ಠಿಯನ್ನು ಪುಷ್ಟೀಕರಿಸುವುದೇ ಹೊರತು ಭಿನ್ನ ಮಾರ್ಗವನ್ನು ಸೂಚಿಸುವುದಿಲ್ಲವೆಂದು ವಿಲಿಯಮ್ ಬಕ್‌ಲ್ಯಾಂಡ್ ಎಂಬ ಬ್ರಿಟಿಷ್ ವಿಜ್ಞಾನಿ (೧೭೮೪-೧೮೫೬) ತಿಳಿಸಿದ. ಆದರೆ ಪ್ರಾಚೀನ ಶಿಲೆಗಳಲ್ಲಿ ಕಂಡು ಬರುವ ಪ್ರಾಣಿ ಪಳೆಯುಳಿಕೆಗಳಿಗೆ ಹೋಲಿಸಿದರೆ ಇತ್ತೀಚಿನ ಶಿಲಾ ಪದರಗಳಲ್ಲಿನ ಪಳೆಯುಳಿಕೆಗಳಲ್ಲಿ ಪ್ರಗತಿಯು ಸ್ಪಷ್ಟವಾಗಿರುವುದನ್ನು ವಿವಿಧ ಭೂವಿಜ್ಞಾನಿಗಳು ಮತ್ತು ಪಳೆಯುಳಿಕೆ ಶೋಧಕರು ಕಂಡು ಹಿಡಿದರು. ಬಕ್‌ಲ್ಯಾಂಡ್ ೧೮೨೪ರಲ್ಲಿ ಪ್ರಥಮ ಬಾರಿಗೆ ನಾವಿಂದು ಕರೆಯುವ ಡೈನೋಸಾರಿನ ಪ್ರಭೇದವೊಂದನ್ನು ಗುರುತಿಸಿ ‘ಮೆಗಲೊಸಾರಸ್’ ಎಂಬ ಹೆಸರಿಟ್ಟಿನು ಡೈನೊಸಾರ್ ಎಂಬ ಪದವನ್ನು ೧೮೪೧ರಲ್ಲಿ ರಿಚರ್ಡ್ ಒವೆನ್ ಬಳಸಿದನು. ಕಾಲುವೆಗಳನ್ನು ನಿರ್ಮಿಸುವ ಕಂಟ್ರಾಕ್ಟರ್ ಆಗಿದ್ದ ವಿಲಿಯಮ್ ಸ್ಮಿತ್ ಪಳೆಯುಳಿಕೆಗಳಲ್ಲಿ ವಿಶೇಷ ಆಸಕ್ತಿ ಬೆಳೆಸಿಕೊಂಡ. ಆತ ಕೈಗೊಂಡ ಅಧ್ಯಯನದಿಂದ ತಿಳಿದು ಬಂದ ಅಂಶವೆಂದರೆ ಪ್ರತಿ ಶಿಲಾಪದರದಲ್ಲಿಯೂ ವಿಶಿಷ್ಟ ರೀತಿಯ ಪಳೆಯುಳಿಕೆಗಳಿರುತ್ತವೆ. ವಿವಿಧ ಶಿಲಾಪದರಗಳಲ್ಲಿರುವ ಪಳೆಯುಳಿಕೆಗಳನ್ನು ಅನುಕ್ರಮವಾಗಿ ಜೋಡಿಸಿದರೆ ಕಾಲ ಪರ್ಯಂತವಾಗಿ ಜೀವಿಗಳಲ್ಲಿ ಉಂಟಾದ ಬದಲಾವಣೆಗಳನ್ನು ಗುರುತಿಸಬಹುದು. ಅತ್ಯಂತ ಪ್ರಾಚೀನ ಶಿಲಾಪದರಗಳಲ್ಲಿ ಕೇವಲ ಟ್ರೆಲೊ ಬೈಟುಗಳಂತಹ ಅಕಶೇರುಕಗಳು ಕಂಡು ಬರುತ್ತವೆ. ಅನಂತರದ ಶಿಲಾ ಪದರಗಳಲ್ಲಿ ಕ್ರಮವಾಗಿ ಮೀನುಗಳು, ಸರೀಸೃಪಗಳು ಹಾಗೂ ಸಸ್ತನಿಗಳ ಪಳೆಯುಳಿಕೆಗಳು ದೊರಕುತ್ತವೆ. ಈ ಅಂಶವನ್ನು ಆಧರಿಸಿ ಚಾರ್ಲ್ಸ್ ಲೈಯಲ್ ಬರೆದ ಪುಸ್ತಕ ಡಾರ್ವಿನ್ ಮೇಲೆ ಪ್ರಮುಖ ಪ್ರಭಾವ ಬೀರಿತು.

ಹಟನ್ ೧೭೯೭ ರಲ್ಲಿ ಸಾವನ್ನಪ್ಪಿದ. ಅದೇ ವರ್ಷ ಲೈಯಲ್ ಜನಿಸಿದ. ಆತನ ತಂದೆ ಸಸ್ಯಶಾಸ್ತ್ರಜ್ಞ, ಶ್ರೀಮಂತ ಮನೆತನ. ಆತ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದಲ್ಲಿ ಪದವಿ ಅಧ್ಯಯನ ಮಾಡುತ್ತಿದ್ದಾಗ ವಿಜ್ಞಾನಿ ಬಕ್‌ಲ್ಯಾಂಡ್‌ನ ಉಪನ್ಯಾಸ ಕೇಳಿ ಪ್ರಭಾವಿತನಾದ. ಭೂ ವಿಜ್ಞಾನದ ಬಗ್ಗೆ ಆಸಕ್ತಿ ಮೂಡಿತು. ಭೂ ಸಮೀಕ್ಷೆ ಕಾರ್ಯಗಳಲ್ಲಿ ಭಾಗವಹಿಸಲು ಆರಂಭಿಸಿದ. ೧೮೨೩ ರಲ್ಲಿ ಭೂ ಸಮೀಕ್ಷೆ ಮಾಡುತ್ತಿದ್ದಾಗ ಭೂ ವಿಜ್ಞಾನಿ ಕುವಿಯರ್‌ನನ್ನು ಭೇಟಿಯಾದ. ಲೈಯಲ್ ೧೮೨೫ ರಲ್ಲಿ ವಕೀಲನಾಗಬಹುದಿತ್ತು. ಆದರೆ ಆತ್ಮವಿಮರ್ಶೆ ಮಾಡಿಕೊಂಡ. ತನ್ನಲ್ಲಿ ಭೂ ಸಮೀಕ್ಷೆ, ಸಂಶೋಧನೆಯ ಬಗ್ಗೆ ಅದಮ್ಯ ಆಸೆಯಿದೆ ಎಂಬುದನ್ನು ಅರಿತುಕೊಂಡನು. ಭೂ ಸಮೀಕ್ಷೆ ಕಾರ್ಯಕ್ಕೆ ಆದ್ಯತೆ ನೀಡಿದ. ಪೂರ್ಣಾವಧಿ ಭೂ ವಿಜ್ಞಾನಿಯಾದ. ಜೀವನದಲ್ಲಿ ಯಶಸ್ಸು ಪಡೆದ.

ಲೈಯಲ್ ಯುರೋಪಿನ ಅಗ್ನಿಪರ್ವತ, ಪಳೆಯುಳಿಕೆಗಳ ಅಧ್ಯಯನ ಕೈಗೊಂಡ. ಅವುಗಳ ರಚನೆ, ಬದಲಾವಣೆಗಳ ಬಗ್ಗೆ ಚಿಂತಿಸಿದ. ಸಹಸ್ರಾರು ವರ್ಷಗಳ ನೈಸರ್ಗಿಕ ಚಟುವಟಿಕೆಗಳಿಂದ ಇಂದಿನ ಭೂರಚನೆಯನ್ನು ವಿವರಿಸಬಹುದು ಎಂದು ಆಲೋಚಿಸಿದ. ತನ್ನ ಆಲೋಚನೆಗಳನ್ನು ಪುಸ್ತಕರೂಪಕ್ಕೆ ಇಳಿಸಿದ.

ಲೈಯಲ್ ಬರೆದ ಪ್ರಸಿದ್ಧ ಪುಸ್ತಕದ ಹೆಸರು – ‘ಭೂ ವಿಜ್ಞಾನದ ತತ್ವಗಳು’ (Principles of Geology) – “ಪ್ರಸ್ತುತ ಕಂಡುಬರುವ ನೈಸರ್ಗಿಕ ಕ್ರಿಯೆಗಳ ಮೂಲಕ ಭೂ ಮೇಲ್ಮೈಯ ಹಿಂದಿನ ಬದಲಾವಣೆಗಳನ್ನು ವಿವರಿಸುವ ಒಂದು ಪ್ರಯತ್ನ” ಎಂಬುದು ಈ ಪುಸ್ತಕದ ಉಪಶೀರ್ಷಿಕೆ. ೧೮೩೦ ರಲ್ಲಿ ಈ ಪುಸ್ತಕದ ಮೊದಲ ಸಂಪುಟ ಪ್ರಕಟವಾಯಿತು. ಲೈಯಲ್ ೧೮೩೧ ರಲ್ಲಿ ಲಂಡನ್ನಿನ ಕಿಂಗ್ಸ್ ಕಾಲೇಜಿನ ಭೂ ವಿಜ್ಞಾನ ಪ್ರಾಧ್ಯಾಪಕನಾದ. ಅದೇ ವರ್ಷದಲ್ಲಿ ಎರಡನೇ ಸಂಪುಟ ಪ್ರಕಟವಾಯಿತು. ಡಾರ್ವಿನ್ ಇದೇ ವರ್ಷ ಬೀಗಲ್ ಯಾನದಲ್ಲಿ ಮಗ್ನನಾಗಿದ್ದ. ೧೮೩೩ ರಲ್ಲಿ ಮೂರನೇ ಸಂಪುಟ ಪ್ರಕಟವಾಯಿತು. ಅಧ್ಯಯನ, ಕ್ಷೇತ್ರ ಕಾರ್ಯ, ಸಂಶೋಧನೆಯಲ್ಲಿ ಮುಳುಗಿ ಹೋಗಿದ್ದ ಲೈಯಲ್ ಭೂ ಸಮೀಕ್ಷಾ ಕಾರ್ಯ ಮುಂದುರೆಸಲು ಪ್ರಾಧ್ಯಾಪಕ ಹುದ್ದೆಗೂ ರಾಜೀನಾಮೆ ನೀಡಿದ !

ಲೈಯಲ್ ಯುರೋಪಿನಾದ್ಯಂತ ಪ್ರವಾಸ ಮಾಡಿದ. ಅಲ್ಲಿಯ ಭೂರಚನೆ ಅಗ್ನಿಪರ್ವತಗಳ ಅಧ್ಯಯನ ಮಾಡಿದನು. ೧೮೪೧ ಮತ್ತು ೧೮೪೫ ರಲ್ಲಿ ಅಮೆರಿಕಾಕ್ಕೆ ಭೇಟಿ ನೀಡಿದನು. ಈತ ‘ಏಕ ಸಮರೂಪತೆ’ ಸಿದ್ಧಾಂತವನ್ನು ಯಶಸ್ವಿಯಾಗಿ ಸ್ಥಾಪಿಸಿದನು. ೧೮೪೮ ರಲ್ಲಿ ಲೈಯಲ್ ಬ್ರಿಟಿಷ್ ಸರ್ಕಾರದಿಂದ ನೈಟ್ ಪ್ರಶಸ್ತಿ ಪಡೆದ. ೧೮೬೪ ರಲ್ಲಿ ಬ್ಯಾರನ್ ಪುರಸ್ಕಾರ ಪಡೆದ. ಡಾರ್ವಿನ್‌ನ ಪ್ರಭೇದಗಳ ಉಗಮ ಪ್ರಕಟವಾಗಿ, ಅದು ವಾದ ವಿವಾದಕ್ಕೆ ಒಳಗಾಗಿದ್ದ ಸಮಯದಲ್ಲಿ ಲೈಯಲ್ ಬದುಕಿದ್ದ. ಯಾವುದೇ ಗುಂಪಿನೊಡನೆ ಆತ ಸೇರುವ ಬದಲು ಶಾಂತವಾಗಿ ಎಲ್ಲವನ್ನು ಗಮನಿಸುತ್ತಿದ್ದನು. ಡಾರ್ವಿನ್ ವಾದವನ್ನು ಲೈಯಲ್ ಪೂರ್ಣವಾಗಿ ಸಮ್ಮತಿಸಿರಲಿಲ್ಲ. ವಿಶೇಷವಾಗಿ ಡಾರ್ವಿನ್ ವಾದ ಮಾನವನಿಗೆ ಅನ್ವಯವಾಗುವುದಿಲ್ಲವೆಂದು ನಂಬಿದ್ದ. ಲೈಯಲ್ ೧೮೭೫ ರಲ್ಲಿ ಮರಣ ಹೊಂದಿದ.

ಲೈಯಲ್ ತನ್ನ ಪುಸ್ತಕದಲ್ಲಿ ಪ್ರಭೇದಗಳು ವಿಶಿಷ್ಟ ಹಾಗೂ ಬದಲಾಗದ ಘಟಕಗಳೆಂದು ವಾದಿಸಿದ್ದಾನೆ. ಜೀವಿಗಳು ತಾವು ವಾಸಿಸುವ ಪರಿಸರಕ್ಕೆ ಸೂಕ್ತವಾದ ಹೊಂದಾಣಿಕೆಗಳನ್ನು ಪಡೆದಿರುತ್ತವೆ. ಪರಿಸರದಲ್ಲಿ ಬದಲಾವಣೆಗಳು ಉಂಟಾದರೆ ಅದಕ್ಕೆ ಹೊಂದಿಕೊಳ್ಳಲಾಗದ ಜೀವಿಗಳು ನಶಿಸುತ್ತವೆ. ಆ ಪರಿಸರಕ್ಕೆ ಸೂಕ್ತವಾದ ಹೊಂದಾಣಿಕೆ ಮಾಡಿಕೊಳ್ಳುವ ಜೀವಿಗಳು ಬದುಕಿ ಉಳಿಯುತ್ತವೆ. ಆದರೆ ಹೊಂದಾಣಿಕೆ ಪಡೆದ ಹೊಸ ಪ್ರಭೇದಗಳು ಎಲ್ಲಿಂದ ಬರುತ್ತವೆ ಎಂಬ ಬಗ್ಗೆ ಲೈಯಲ್ ವಿವರಿಸಿದ್ದಾನೆ. ಈ ತಪ್ಪು ವಿವರಣೆಯನ್ನು ಡಾರ್ವಿನ್ ತನ್ನ ಸಿದ್ಧಾಂತ ವಿವರಿಸುವಾಗ ಪ್ರಸ್ತಾಪಿಸಿದ್ದಾನೆ.

ಡಾರ್ವಿನ್ ಬೀಗಲ್ ನೌಕಾಯಾನ ಮಾಡುವಾಗ ಲೈಯಲ್‌ನ ಪುಸ್ತಕದ ಮೊದಲ ಸಂಪುಟವನ್ನು ತೆಗೆದುಕೊಂಡು ಹೋಗಿದ್ದ. ಎರಡನೇ ಸಂಪುಟವನ್ನು ಯಾನದಲ್ಲಿರುವಾಗಲೇ ತರಿಸಿಕೊಂಡಿದ್ದ. ಬೀಗಲ್ ಪಯಣ ಮುಗಿಸಿದ ನಂತರ ಮೂರನೇ ಸಂಪುಟವನ್ನು ಪಡೆದು ಓದಿದ. ಲೈಯಲ್‌ನ ಪುಸ್ತಕಗಳ ಓದಿನಿಂದ ಡಾರ್ವಿನ್‌ಗೆ ಎರಡು ವಷಿಯಗಳು ಸ್ಪಷ್ಟವಾದವು. ಮೊದಲನೆಯದಾಗಿ ಪ್ರಸ್ತುತ ಕಾಣುವ ನೈಸರ್ಗಿಕ ಕ್ರಿಯೆಗಳು ಬಹಳ ಹಿಂದಿನಿಂದಲೂ ನಡೆಯುತ್ತ ಬಂದಿರುವುದರಿಂದ ಭೂ ಇತಿಹಾಸದಲ್ಲಾಗಿರುವ ಭೂ ಮೇಲ್ಮೈಯ ಬದಲಾವಣೆಗಳನ್ನು ವಿವರಿಸಲು ಸಾಧ್ಯ. ಎರಡನೆಯದಾಗಿ ಪುಟ್ಟ ಪುಟ್ಟ ಬದಲಾವಣೆಗಳು ಸೇರಿ ಬೃಹತ್ ಬದಲಾವಣೆಯಾಗಿ ಕಾಣಲು ಅತಿಹೆಚ್ಚಿನ ಸಮಯವನ್ನು ತೆಗೆದುಕೊಳ್ಳುತ್ತವೆ. ಲೈಯಲ್ ಅಪರೋಕ್ಷವಾಗಿ ಲಮಾರ್ಕನ ವಾದವನ್ನು ಬೆಂಬಲಿಸಿದ್ದ. ಡಾರ್ವಿನ್ ತನ್ನ ವಾದವನ್ನು ಪ್ರತಿಪಾದಿಸುವುದಕ್ಕೂ ಲೈಯಲ್‌ನ ಚಿಂತನೆಯನ್ನು ಬಳಸಿಕೊಂಡನು. ಡಾರ್ವಿನನ ತಾತ ಎರಾಸ್ಮಸ್ ಬರೆದ ‘ಜೂನೋಮಿಯ’ ಪುಸ್ತಕವನ್ನು ಓದಿದ್ದರೂ ಸಹ, ತಾತ ವಿಕಾಸಕ್ಕೆ ನೀಡಿದ್ದ ವಿವರಣೆಯನ್ನು ಗ್ರಹಿಸುವಲ್ಲಿ ಡಾರ್ವಿನ್ ವಿಫಲನಾದ. ಆದ್ದರಿಂದ ಡಾರ್ವಿನ್‌ನು ವಿಕಾಸಕ್ಕೆ ನೀಡಿದ್ದ ವಿವರಣೆಯನ್ನು ಗ್ರಹಿಸುವಲ್ಲಿ ಡಾರ್ವಿನ ವಿಫಲನಾದ. ಆದ್ದರಿಂದ ಡಾರ್ವಿನ್‌ನು ವಿಕಾಸಕ್ಕೆ ಅಗತ್ಯವಾದ ಜೀವಿಗಳಲ್ಲಿನ ಪುಟ್ಟ ಪುಟ್ಟ ಬದಲಾವಣೆಗಳು ಕ್ರೋಢೀಕರಣಗೊಳ್ಳುವ ಅಭಿಪ್ರಾಯವನ್ನು ಮತ್ತು ಗಳಿಸಿಕೊಂಡ ಗುಣಲಕ್ಷಣಗಳು ಕಾಲಾಂತರದಲ್ಲಿ ಅನುವಂಶೀಯ ಗುಣಗಳಾಗುವುದನ್ನು (ವಾಸ್ತವವಾಗಿ ಇದು ತಪ್ಪು) ಲೈಯಲ್‌ನ ಪುಸ್ತಕದಿಂದ ಗ್ರಹಿಸಿದ.

ಡಾರ್ವಿನ್ ಬೀಗಲ್ ಯಾನ ಆರಂಭಿಸಿದಾಗ ಕ್ರೈಸ್ತ ಧರ್ಮ ಮತ್ತು ದೈವ ಸೃಷ್ಟಿವಾದದಲ್ಲಿ ಬಲವಾದ ನಂಬಿಕೆ ಹೊಂದಿದ್ದನ್ನು. ಲೈಯಲ್‌ನ ಪುಸ್ತಕದ ಮುಖಾಂತರ ಲಮಾರ್ಕನ ಸಿದ್ಧಾಂತವನ್ನು ಡಾರ್ವಿನ್ ಅರ್ಥ ಮಾಡಿಕೊಂಡ ನಂತರ ಆತ ತನ್ನದೇ ಆದ ಸಿದ್ಧಾಂತವನ್ನು ರೂಪಿಸುವುದಕ್ಕೆ ಬುನಾದಿ ಸಿಕ್ಕಂತಾಯಿತು. ಭೂ ಇತಿಹಾಸಕ್ಕೆ ಅತ್ಯಂತ ದೀರ್ಘಕಾಲ ಬೇಕೆಂಬ ವಿಷಯವು ಡಾರ್ವಿನ್ ವಿಕಾಸವಾದದ ಅಭಿವೃದ್ಧಿಗೆ ಪೂರಕವಾಯಿತು.

ಲೈಯಲ್‌ನ ಪುಸ್ತಕವು ಡಾರ್ವಿನ್ ವಿಕಾಸವಾದಕ್ಕೆ ಎಷ್ಟು ಪ್ರಭಾವ ಬೀರಿತ್ತೆಂಬುದನ್ನು ಡಾರ್ವಿನ್ ಹೀಗೆ ದಾಖಲಿಸಿದ್ದಾನೆ.

“ನನ್ನ ಪುಸ್ತಕಗಳು ಲೈಯಲ್‌ನ ಮೆದುಳಿನಿಂದ ಅರ್ಧದಷ್ಟು ಬಂದಿವೆ ಎಂದು ನನಗೆ ಸದಾ ಅನಿಸುತ್ತದೆ. ಅದಕ್ಕಾಗಿ ನಾನು ನೀಡಬೇಕಾದಷ್ಟು ಕೃತಜ್ಞತೆ ತೋರಿಸಿಲ್ಲ… ಲೈಯಲ್‌ನ ಪುಸ್ತಕದ ಮಹತ್ವವೆಂದರೆ ಅದು ಓದುಗನ ಚಿಂತನೆಯನ್ನೇ ಪೂರ್ಣವಾಗಿ ಬದಲಿಸುತ್ತದೆ ಎಂದು ನಾನು ಯಾವಾಗಲೂ ಆಲೋಚಿಸಿದ್ದೇನೆ.”

ಪುಸ್ತಕಗಳ ಓದು ಚಿಂತನೆಯನ್ನು ಮತ್ತು ವ್ಯಕ್ತಿಯ ಜೀವನವನ್ನೇ ಬದಲಿಸಬಹುದು ಎಂಬುದಕ್ಕೆ ಇದಕ್ಕಿಂತ ಉತ್ತಮ ಸಾಕ್ಷಿ ಬೇಕೇ?

ಡಾರ್ವಿನ್ ಬೀಗಲ್ ಮಹಾಯಾನ ಪೂರೈಸಿದಾಗ ಲೈಯಲ್‌ನ ಪುಸ್ತಕಗಳು ಇನ್ನೂ ಡಾರ್ವಿನ್‌ನ ಮನಸ್ಸನ್ನು ಪೂರ್ಣವಾಗಿ ಆವರಿಸಿರಲಿಲ್ಲ.

ಡಾರ್ವಿನ್ ವಿಕಾಸವಾದವನ್ನು ಮಂಡಿಸಿದ ನಂತರವೂ ವಾದ, ವಿವಾದ ಮುಂದುವರೆದವು. ಡಾರ್ವಿನ್‌ವಾದ ಪುನಾರಚನೆಯಾಯಿತು. ಸಾಕಷ್ಟು ಮಾರ್ಪಾಡುಗಳಾದವು. ನವಡಾರ್ವಿನ್‌ವಾದ ರೂಪುಗೊಂಡಿತು. ಸಾಕ್ಷ್ಯಾಧಾರಗಳು ಹೇರಳವಾಗಿ ಇಂದು ದೊರಕಿವೆ. ಡಾರ್ವಿನ್ ಊಹಿಸಲೂ ಸಾಧ್ಯವಿಲ್ಲದ ನೂತನ ಜೀವವಿಜ್ಞಾನ ಶಾಖೆಗಳು ಉದ್ಭವವಾಗಿವೆ.

ವಿಜ್ಞಾನ ಸಾಗುವ ಪಯಣವೇ ಹಾಗೆ. ಸಿದ್ಧಾಂತಗಳು ಮಂಡನೆಯಾಗುತ್ತವೆ. ಸಾಕ್ಷ್ಯಾಧಾರಗಳನ್ನು ಹುಡುಕಲಾಗುತ್ತವೆ. ಪ್ರಯೋಗ, ವೀಕ್ಷಣೆ, ಮರುಚಿಂತನೆ ಮುಂದುವರೆಯುತ್ತದೆ. ಅಗತ್ಯವೆನಿಸಿದರೆ ಸಿದ್ಧಾಂತ ಮಾರ್ಪಾಡು ಹೊಂದುತ್ತವೆ. ಇಲ್ಲವೆ ತಿರಸ್ಕೃತವಾಗುತ್ತದೆ. ಒಂದು ನೂರ ಐವತ್ತು ವರ್ಷಗಳ ವಿಜ್ಞಾನದ ಹಾದಿಯಲ್ಲಿ ವಿಕಾಸವಾದ ಬೆಳೆದಿದೆ. ಬದಲಾವಣೆ ಹೊಂದಿದೆ. ಮತ್ತಷ್ಟು ಪುರಾವೆಗಳನ್ನು ಪಡೆದಿದೆ ಎಂಬುದೇ ಒಂದು ಅದ್ಭುತ.

* * *