ಅವರು ಧಾರ್ಮಿಕ ವಿಷಯಗಳ ಬಗ್ಗೆ ಮಾತನಾಡಲಿಲ್ಲ. ಬಹಳ ಬರೆಯಲಿಲ್ಲ ಆದರೂ ಧಾರ್ಮಿಕ ನಂಬಿಕೆಗಳನ್ನು ಅಲ್ಲಾಡಿಸಿದರು, ಚಿಂತನೆಯ ದಾರಿ ಬದಲಾವಣೆಗೆ ಪ್ರೇರಣೆ ಯಾದರು. ಧಾರ್ಮಿಕ ಸಂಪ್ರದಾಯಸ್ಥರ, ಆಸ್ತಿಕರ ವಿರೋಧಕ್ಕೆ, ಕೆಂಗಣ್ಣಿಗೆ, ಅವಹೇಳನಕ್ಕೆ ಗುರಿಯಾದರು.

ಹಾಗಂತ ಇವರು ದೇವರ ಇರುವನ್ನು ಸ್ಪಷ್ಟವಾಗಿ ಅಲ್ಲಗೆಳೆಯಲಿಲ್ಲ, ಧಾರ್ಮಿಕತೆಯನ್ನು ಕಟುಮಾತುಗಳಿಂದ ಕುಟುಕಲಿಲ್ಲ. ಹಾಗಾಗಿ ನಾಸ್ತಿಕರಿಗೆ, ನಿರೀಶ್ವರವಾದಿಗಳಿಗೆ ಇಷ್ಟದ ವ್ಯಕ್ತಿಯೂ ಆಗಲಿಲ್ಲ.

ಹೀಗೆ, ಅತ್ತ ಆಸ್ತಿಕರೂ ಒಪ್ಪದ, ಇತ್ತ ನಾಸ್ತಿಕರೂ ಅಪ್ಪದ ಆದರೆ ಆಧುನಿಕ ವೈಜ್ಞಾನಿಕ – ವೈಚಾರಿಕ ಚಿಂತನೆಯ ಮೇಲೆ ಅಗಾಧ ಪ್ರಭಾವ ಬೀರಿರುವ ‘ವಿಚಿತ್ರ’ ವಿಜ್ಞಾನಿ, ವ್ಯಕ್ತಿ ಡಾರ್ವಿನ್. ಆ ಕಾರಣಕ್ಕಾಗಿಯೇ ಅವರ ಧಾರ್ಮಿಕ ಒಲವು. ನಿಲುವುಗಳ ಕುರಿತಾಗಿ ನಡೆದಿರುವ ಚರ್ಚೆಗಳ ದಾಖಲಿತ ಸಂಗತಿಗಳ ಪುನರಾವಲೋಕನ ಕುತೂಹಲಕಾರಿ.

ಕ್ರೈಸ್ತ ಪಾದ್ರಿಯಾಗಲು ಹೊರಟು ಕೊನೆಗೆ ಮಾದರಿ ವಿಜ್ಞಾನಿಯಾದ ಡಾರ್ವಿನ್ ಧಾಮಿಕ ನಂಬಿಕೆಗಳ ವಿಷಯದಲ್ಲಿ ಅನುಸರಿಸಿದ್ದು ಬಹಳ ಎಚ್ಚರಿಕೆಯ ಮಧ್ಯಮ ದಾರಿಯನ್ನು ಹಾಗೇನೆ, ಈ ಕುರಿತು ಆಗಾಗ ಅವರು ನೀಡಿರುವ ಅಭಿಪ್ರಾಯಗಳು ಗೊಂದಲ ಹುಟ್ಟಿಸುವಂತಿದೆ. “ನಾನೆಂದು ದೇವರ ಅಸ್ತಿತ್ವವನ್ನು ನಿರಾಕರಿಸುವ, ಸಂದೇಹಿಸುವ ನಾಸ್ತಿಕನಾಗುವ ಹಂತವನ್ನು ನನ್ನ ಜೀವನದಲ್ಲಿ ಎಂದಿಗೂ ತಲುಪಿರಲಿಲ್ಲ” ಎಂದು ೧೮೭೯ ರಲ್ಲಿ (ಸಾಯುವ ಮೂರು ವರ್ಷ ಮೊದಲು) ಹೇಳಿರುವ ಅವರು “ವಿಜ್ಞಾನಕ್ಕೂ ಕ್ರಿಸ್ತನಿಗೂ ಯಾವುದೇ ಸಂಬಂಧವಿಲ್ಲ, ವಿಜ್ಞಾನ ಮತ್ತು ಧರ್ಮ ಬೇರೆ-ಬೇರೆಯಾಗಿ ಸಾಗಬೇಕು. ಇವೆರಡರ ಆಸಕ್ತರು ಪರಸ್ಪರರ ಮೇಲೆ ಅಸಹನೆಯಿಂದ ಹರಿಹಾಯುವುದು ಅನಗತ್ಯ. ಧಾರ್ಮಿಕ ನಂಬಿಕೆ ಆಚಾರಗಳು ತೀರಾ ವೈಯಕ್ತಿಕವಾಗಿರಬೇಕು” ಎನ್ನುವ ನಿಲುವಿನವರು ಇದೇ ಡಾರ್ವಿನ್ ಇನ್ನೊಂದು ಕಡೆ “ಒಂದು ಪವಿತ್ರ ಸಂದೇಶ ಎಂದು ನನಗೆ ಬೈಬಲ್‌ನ ಬಗ್ಗೆ ಯಾವುದೇ ನಂಬಿಕೆ ಇಲ್ಲ. ಹಾಗಾಗಿ ದೇವಸುತನೆಂಬ ಏಸುವನ್ನು ನಂಬುವುದಿಲ್ಲ” ಎನ್ನುತ್ತಾರೆ.

ಡಾರ್ವಿನ್ ಅಂತಿಮವಾಗಿ ತನ್ನನ್ನು ಕರೆದುಕೊಂಡದ್ದು “ತಾನೋರ್ವ Agnostic” ಎಂಬುದಾಗಿ. ದೇವರ ಅಸ್ತಿತ್ವವನ್ನು ಖಡಾಖಂಡಿತವಾಗಿ ಅಲ್ಲಗೆಳೆಯದ, ಆದರೆ ಧಾರ್ಮಿಕ ಅಂಧ ಶ್ರದ್ಧೆಯಿಲ್ಲದೆ ಕೇವಲ ಇಂದ್ರಿಯ ಗೋಚರ ಪ್ರಪಂಚದಲ್ಲಿ ಮಾತ್ರ ನಂಬುವವರಿಗೆ ಹೀಗೆನ್ನುತ್ತಾರೆ.

  • ಡಾರ್ವಿನ್‌ರ ಆರಂಭಿಕ ಶಿಕ್ಷಣ ಧಾರ್ಮಿಕ ತಳಹದಿಯದ್ದಾಗಿತ್ತು. ಹಾಗಾಗಿ ಆಪ್ರಭಾವದಿಂದ ಸಂಪೂರ್ಣ ಹೊರಬರುವುದು ಸುಲಭ ಸಾಧ್ಯವಾಗಿರಲಿಲ್ಲ.
  • ಆ ಕಲದ ಸಮಾಜದ ಮೇಲೆ ‘ಧರ್ಮ’ ಹೊಂದಿದ್ದ ಭದ್ರ ಹಿಡಿತದ, ಪ್ರಭಾದ ಅರಿವಿದ್ದ ಡಾರ್ವಿನ್‌ಗೆ ಯಾವುದೇ ಧರ್ಮವಿರೋಧಿ ನಿಲುವನ್ನು ಗಟ್ಟಿಯಾಗಿ ವ್ಯಕ್ತಪಡಿಸಿ ಧಾರ್ಮಿಕ ಸಮಾಜವನ್ನು ರೊಚ್ಚಿಗೆಬ್ಬಿಸಿ, ಎದುರು ಹಾಕಿಕೊಳ್ಳುವ ಇಚ್ಚೆ ಇರಲಿಲ್ಲ, ಧೈರ್ಯವೂ ಇರಲಿಲ್ಲ. ಹಾಗೆ ಮಾಡುವುದರಿಂದ ತನ್ನ ವಿವಾದಾತ್ಮಕ ವಿಕಾಸವಾದವನ್ನು ಸಮಾಜ ಸ್ವೀಕರಿಸುವುದಕ್ಕೆ ಮತ್ತಷ್ಟು ತೊಡಕುಗಳು ಹುಟ್ಟಿಕೊಳ್ಳುತ್ತವೆ ಎಂದು ಅವರಿಗೆ ಅನಿಸಿರಬಹುದು.
  • ಡಾರ್ವಿನ್ ಪತ್ನಿ ‘ಎಮ್ಮಾ’ ಸಂಪ್ರದಾಯಬದ್ಧ ಮನೋಭಾವದವರಾಗಿದ್ದರು. ಪ್ರೀತಿಯ ಪತ್ನಿಯ ಮನ ನೋಯಿಸುವುದು ಡಾರ್ವಿನ್‌ಗೆ ಇಷ್ಟವಿರಲಿಲ್ಲ.

ಇವೆಲ್ಲಕ್ಕಿಂತ ಮುಖ್ಯವಾದ ಕಾರಣವೆಂದರೆ ಡಾರ್ವಿನ್ ಓರ್ವ ನಿತ್ಯ ನಿರಂತರ ಅನ್ವೇಷಕ ಮನೋಭಾವದ ವಿಜ್ಞಾನಿ ಮತ್ತು ‘ಕೇವಲ ವಿಜ್ಞಾನಿ’ ಮಾತ್ರ ಆಗಿದ್ದರು. ತತ್ವಜ್ಞಾನಿಯಾಗಲಿ, ಧರ್ಮ ಪಂಡಿತನಾಗಲಿ ಅಲ್ಲ. ಅವರಿಗಿದ್ದದ್ದು ನೈಸರ್ಗಿಕ ಜಗತ್ತನ್ನು ಇನ್ನೊಂದಷ್ಟು ಚೆನ್ನಾಗಿ ಅರಿತುಕೊಳ್ಳುವ, ವಿವರಿಸುವ ಅಪರಿಮಿತ ತುಡಿತವೇ ಹೊರತು ಸಮಾಜದ ಧಾರ್ಮಿಕ ನಂಬಿಕೆ, ಆಚಾರ ವಿಚಾರಗಳನ್ನು ಪ್ರಚೋದಿಸುವ, ಬದಲಾಯಿಸುವ ಇರಾದೆಯಲ್ಲ. ಅವರ ವಿಕಾಸವಾದದ ಮೂಲ ಪ್ರೇರಣೆ, ಸ್ಫೂರ್ತಿ ನಿಸರ್ಗ ವಿಜ್ಞಾನದ ಮೇಲಿನ ಪ್ರೀತಿಯೇ ಹೊರತು ಧರ್ಮದ ಬಗೆಗಿನ ದ್ವೇಷವಲ್ಲ. “ನಾನು ‘ಓರಿಜಿನ್ ಆಫ್ ಸ್ಫೀಶಿಸ್’ ಕೃತಿಯನ್ನು ಧರ್ಮಶಾಸ್ತ್ರಕ್ಕೆ ಸಂಬಂಧಿಸಿದಂತೆ ಬರೆದಿದ್ದೇನೆಂದು ಬಹಳಷ್ಟು ಜನ ತಪ್ಪಾಗಿ ತಿಳಿದಿದ್ದಾರೆ” ಎಂದು ಯಾವುದೋ ಸಂದರ್ಭದಲ್ಲಿ ನಿಕೋಲಾಸ್ಸ್ ರಿಡ್ಲಿ ಎಂಬ ಸಸ್ಯವಿಜ್ಞಾನಿಯ ಹತ್ತಿರ ಡಾರ್ವಿನ್ ಸ್ವತಃ ಹೇಳಿಕೊಂಡಿರುವುದು ಇದಕ್ಕೊಂದು ಸ್ಪಷ್ಟ ಪುರಾವೆ.

ಮುಕ್ತ ಚಿಂತನೆಗೆ ಅವಕಾಶವಿದ್ದ, ಒಂದಷ್ಟು ಉದಾರವಾದಿ- ವಿಚಾರವಾದಿ ಕುಟುಂಬದ ಕೂಸಾಗಿದ್ದರೂ, ಡಾರ್ವಿನ್ ಬಾಲ್ಯ ಪಕ್ಕಾ ಧಾರ್ಮಿಕ ಸಂಪ್ರದಾಯಸ್ಥ ರೀತಿಯಲ್ಲಿಯೇ ಕಳೆದಿತ್ತು. ೧೬ನೇ ವರ್ಷದತನಕ ಆಗಿನ ಸಂಪ್ರದಾಯದಂತೆ ಪಾದ್ರಿಗಳ ಮೇಲ್ವಚಾರಣೆಯ ಶಾಲೆಗಳಲ್ಲಿ ಧಾರ್ಮಿಕ ಒತ್ತಿನ ಶಿಕ್ಷಣ, ಅನಂತರ ಕೌಟುಂಬಿಕ ವ್ಯಕ್ತಿಯಾಗಿದ್ದ ವೈದ್ಯಶಾಸ್ತ್ರವನ್ನು ಕಲಿಯಲು ಸೋದರ ಎರಾಸ್ಮಸ್ ಜೊತೆಗೆ ಎಡಿನ್‌ಬರೋ ವಿವಿಗೆ ಪಯಣ.

ಆದರೆ ಇಬ್ಬರೂ ವೈದ್ಯರಾಗಲಿಲ್ಲ ! ಅರಿವಳಿಕೆ ಇಲ್ಲದೆ ಶಸ್ತ್ರಚಿಕಿತ್ಸೆ ನಡೆಸುವುದನ್ನು ಕಲ್ಪಿಸಿಕೊಂಡೇ ಡಾರ್ವಿನ್ ಹಿಂಜರಿದದ್ದು ಒಂದು ಕಾರಣವಾದರೆ, ಆಗಲೇ ಪ್ರಬಲವಾಗಿದ್ದ ನಿಸರ್ಗದ ಕಡೆಗಿನ ಸೆಳೆತವೇ ಪ್ರಮುಖವಾದದ್ದು.

“ವೈದ್ಯನಾಗಲು ಅಸಾಧ್ಯವಾದರೆ ಪಾದ್ರಿಯಾಗು” ತಂದೆಯ ಒತ್ತಾಶಯ. ಪಾದ್ರಿದೀಕ್ಷೆಗೆ ಅಗತ್ಯವಾಗಿದ್ದ ಪದವಿ ಪಡೆಯಲು ಮುಂದೆ ಡಾರ್ವಿನ್ ಬಂದದ್ದು ಕೇಂಬ್ರಿಜ್‌ಗೆ. ಇದಕ್ಕೆ ಪೂರ್ವಭಾವಿ ತಯಾರಿಯಾಗಿ ಕೆಲವರು ಧರ್ಮಗ್ರಂಥಗಳ ಓದು. ಅದರಿಂದಾಗಿ ಧರ್ಮನಿಷ್ಠೆ ಹುಟ್ಟಿತೇ? ಗೊತ್ತಿಲ್ಲ.

ಕೇಂಬ್ರಿಜ್‌ನಲ್ಲಿರುವಾಗ ಡಾರ್ವಿನ್‌ಆ ಕಾಲದ ಪ್ರಭಾವಿ ಧರ್ಮಶಾಸತ್ರಜ್ಞ, ಚಿಂತಕ ‘ವಿಲಿಯಂ ಪಾಲಿ’ಯ ಪ್ರಭಾವಲಯಕ್ಕೆ ಬಂದರು. ಪಾಲಿಯ “Evidences of Christianity” ಮತ್ತು “Principles of Moral and Political Philosophy” ಕಡ್ಡಾಯ ಪಠ್ಯಗಳಾಗಿದ್ದರೆ, “Natural Theology” ಐಚ್ಛಿಕ ಪಠ್ಯವಾಗಿತ್ತು. ಡಾರ್ವಿನ್‌ರನ್ನು ಬಹಳವಾಗಿ ತಟ್ಟಿದ್ದು, ಮುಟ್ಟಿದ್ದು; ಮುಂದಿನ ಅವರ ಚಿಂತನೆಗಳಿಗೆ ಬೀಜವಾದದ್ದು ಇದೇ ಕೃತಿ. ದೇವರ ಇರುವಿಕೆಗೆ ಭೌತಿಕ ಪುರಾವೆಗಳ ಬದಲಾಗಿ ನೈಸರ್ಗಿಕ ಜಗತ್ತಿನಲ್ಲಿ, ಜೈವಿಕ ವಿನ್ಯಾಸಗಳಲ್ಲಿ ಪುರಾವೆಗಳನ್ನು ನೋಡುವುದು ಈ ಕೃತಿಯ ವಿಶೇಷತೆ.

“ನಿಸರ್ಗ ಹತ್ತು ಹಲವು ವಿನ್ಯಾಸಗಳ ಅಭಿವ್ಯಕ್ತಿ. ಈ ಎಲ್ಲಾ ವಿನ್ಯಾಸಗಳ ಹಿಂದೆ ಓರ್ವ ವಿನ್ಯಾಸಗಾರನಿರಲೇಬೇಕು. ಆ ವಿನ್ಯಾಸಗಾರನೇ ದೇವರು”. ಇದು ಪಾಲಿಯ ವಾದ. ಮೊದಲೇ ನಿಸರ್ಗ ಪ್ರೇಮಿಯಾದ ಡಾರ್ವಿನ್‌ಗೆ ಈ ವಾದ ಬಹಳ ಇಷ್ಟವೆನಿಸಿತು. ಅದು ಅವರ ವೈಯಕ್ತಿಕ ‘ಧಾರ್ಮಿಕ ನಂಬಿಕೆ’ಯ ಬುನಾದಿಯಾಯಿತು.

ಆದರೆ ಕೇಂಬ್ರಿಜ್‌ನಲ್ಲಿ ಧರ್ಮಶಾಸ್ತ್ರಗಳ ಅಧ್ಯಯನ ನಡೆಸುತ್ತಿದ್ದಾಗಲೂ ಡಾರ್ವಿನ್‌ರಿಗೆ ಸಾಂಪ್ರದಾಯಿಕ ಧಾರ್ಮಿಕವಾದದ ಬಗ್ಗೆ ಇದ್ದ ನಂಬಿಕೆಗಳು ಎಷ್ಟು ಗಟ್ಟಿ ಮತ್ತು ಆಳವಾಗಿದ್ದವು ಎನ್ನುವುದರ ಬಗ್ಗೆ ಸಂದೇಹಗಳಿವೆ. ಜೆ.ಎಮ್. ಹರ್ಬರ್ಟ್ ಎನ್ನುವ ಕೇಂಬ್ರಿಜ್ ಸಹಪಾಠಿ ಮತ್ತು ಡಾರ್ವಿನ್ ನಡುವಿನ ಸಂಭಾಷಣೆಯ ದಾಖಲಿತ ತುಣುಕು ಇದಕ್ಕೆ ಸಾಕ್ಷಿ. ಪಾದ್ರಿಯಾಗಿ ಅಂತಿಮ ದೀಕ್ಷೆ ಪಡೆಯುವಾಗ “ನೀನು ದಿವ್ಯಾತ್ಮದಿಂದ ಪ್ರೇರಿತನಾದವನೆಂದು ದೃಡವಾಗಿ ನಂಬಿದ್ದೀಯಾ?” ಎಂದು ದೀಕ್ಷಾರ್ಥಿಗಳಿಗೆ ಬಿಷಪ್ ಕೇಳುವುದು ವಾಡಿಕೆ.

“ಈ ಪ್ರಶ್ನೆಗೆ ಖಡಾಖಂಡಿತವಾಗಿ ಹೌದೆಂದು ಉತ್ತರಿಸಲು ನಿನ್ನಿಂದ ಸಾಧ್ಯವೇ?” ಹರ್ಬಟ್‌ಗೆ ಡಾರ್ವಿನ್ ಪ್ರಶ್ನೆ. “ಬಹುಶಃ ಸಾಧ್ಯವಿಲ್ಲ” ಇದು ಹರ್ಬಟ್ ಉತ್ತರ. “ನಿನ್ನ ಹಾಗೆ, ನನಗೂ ಕೂಡಾ ಸಾಧ್ಯವಿಲ್ಲ. ಹಾಗಾಗಿ ನಾನು ದೀಕ್ಷೆ ಪಡೆಯುವುದು ಸಮಂಜಸವಲ್ಲ” ಎಂಬುದಾಗಿ ಮರುನುಡಿಯುತ್ತಾರೆ ಡಾರ್ವಿನ್.

ತನ್ನ ಧಾರ್ಮಿಕ ನಂಬಿಕೆಗಳು, ಧರ್ಮನಿಷ್ಠೆಯ ಬಗೆಗಿನ ಈ ರೀತಿಯ ಸಂದೇಹ, ಗೊಂದಲಗಳಿದ್ದ ಕಾರಣವೋ ಏನೋ… ೧೮೩೧ರಲ್ಲಿ ‘ಬೀಗಲ್’ ಹಡಗಿನಲ್ಲಿ ಯಾನ ಮಾಡುವ ಅವಕಾಶ ಸಿಕ್ಕಾಗ ಡಾರ್ವಿನ್ ಅದನ್ನೇರಿ ಹೊರಟರು !

ಬೀಗಲ್ ಯಾನದ ಆರಂಭದ ದಿನಗಳಲ್ಲಿ ಡಾರ್ವಿನ್ ಧಾರ್ಮಿಕವಾಗಿ ಸಂಪ್ರದಾಯ ಬದ್ಧನಾಗಿ ವರ್ತಿಸುತ್ತಿದ್ದ ಬಗ್ಗೆ ದಾಖಲೆಗಳಿವೆ. ಹಡಗಿನಲ್ಲಿ ದುರ್ವರ್ತನೆ ತೋರುತ್ತಿದ್ದ ನಾವಿಕರನ್ನು ತಿದ್ದುವ ಸಂದರ್ಭದಲ್ಲಿ ಬೈಬಲ್ ಸೂಕ್ತಿಗಳನ್ನು, ನಿದರ್ಶನಗಳನ್ನು ಅವರು ಉಲ್ಲೇಖಿಸುತ್ತಿದ್ದರಂತೆ. ಆದರೆ ಯಾನ ಮುಂದುವರಿದಂತೆ ಅವರ ಪಾಲಿಗೆ ತೆರೆದುಕೊಂಡ ನಿಸರ್ಗ ವೈವಿಧ್ಯದ ‘ವಿಶ್ವದರ್ಶನ ಬಹುಶಃ ಅವರ ಧಾರ್ಮಿಕ ನಂಬಿಕೆಯ (ಅಲ್ಪ ?) ಬುಡವನ್ನು ಅಲ್ಲಾಡಿಸಿರಬೇಕು ಅವರು ಆಯಾರ ಸಂದರ್ಭಗಳಲ್ಲಿ ಮಾಡಿರುವ ಟಿಪ್ಪಣಿಗಳು ಮತ್ತು ಅವರ ಪ್ರಕಟಿತ ಕೃತಿ “Voyage of Beagle” ನ ಪುಟಗಳು ಇದನ್ನು ಪುಷ್ಟೀಕರಿಸುವಂತಿವೆ.

ದಕ್ಷಿಣ ಅಮೇರಿಕಾದ ಪಶ್ಚಿಮ ಕರಾವಳಿಯಲ್ಲಿದ್ದಾಗ ಸಂಭವಿಸಿದ ಭೂಕಂಪ ಮತ್ತು ಜ್ವಾಲಾಮುಖಿಗಳ ಭೀಕರತೆ ಕಂಡು ಡಾರ್ವಿನ್ ದಂಗಾಗಿದ್ದರಂತೆ. “ಒಂದು ಕೆಟ್ಟ ಭೂಕಂಪ ಅತ್ಯಂತ ಹಳೆಯ ಅನುಭವಗಳನ್ನು, ಅನುಬಂಧಗಳನ್ನು ಒಂದೇ ಕ್ಷಣದಲ್ಲಿ ನುಚ್ಚುನೂರಾಗಿಸುತ್ತದೆ. ಗಟ್ಟಿಯಾಗಿದೆ ಎಂದು ನಂಬಿದ್ದ ಭೂಮಿ ನಮ್ಮ ಕಾಲಡಿಯಲ್ಲಿಯೇ ಕುಸಿದು ಹೋಯಿತು. ಆ ಕ್ಷಣದಲ್ಲಿ ಅಭದ್ರತೆಯ ವಿಚಿತ್ರ ಯೋಚನೆಯೊಂದು ಮೂಡಿತು.” ಇದು ಆ ಸಂದರ್ಭದಲ್ಲಿ ಡಾರ್ವಿನ್ ಬರೆದಿರುವ ಟಿಪ್ಪಣಿ.

ಧರ್ಮಗ್ರಂಥಗಳ ಪ್ರಕಾರ ಈ ಭೂಮಿ ಮಾನವನ ರಕ್ಷಣೆಗೆ ದೇವರು ಮಾಡಿರುವ ಸೃಷ್ಟಿ. ಆದರೆ ಅಲ್ಲಿ ಭೂಕಂಪ, ಜ್ವಾಲಾಮುಖಿಗಳಂತಹ ಜೀವಘಾತುಕ ಘಟನೆಗಳು ನಡೆಯುತ್ತವೆ ಎಂದಾದರೆ ? ಡಾರ್ವಿನ್‌ರ ನಂಬಿಕೆಗಳು ಭೂಕಂಪದ ಜೊತೆಗೆ ಕಂಪಿಸಿರಬಹುದೇ ?

ಅದೇ ರೀತಿ, ಕೆಲವು ದ್ವೀಪಗಳಲ್ಲಿ ಅತ್ಯಂತ ಕ್ರೂರ, ಮೃಗೀಯ ಮಾನವರನ್ನು ಕಂಡ ನಂತರ : ಮನುಷ್ಯರು ಮತ್ತು ಮೃಗಗಳ ನಡುವಿನ ಅಂತರದ ಗೆರೆ ತೀರಾ ತೆಳುವಾಗಿರುವುದು ಅವರಿಗೆ ದೃಡವಾಯಿತು. ಹಾಗಿದ್ದಲ್ಲಿ, ಪ್ರಾಣಿಗಳನ್ನು ಮತ್ತು ಮನುಷ್ಯರನ್ನು ಬೇರೆ ಬೇರೆಯಾಗಿ ಸೃಷ್ಟಿಸಲಾಯಿತೆನ್ನುವ ‘ವಿಶೇಷ ಸೃಷ್ಟಿ’ಯ ಬಗ್ಗೆ ಡಾರ್ವಿನ್‌ರಿಗೆ ಅನುಮಾನ ಉಂಟಾಗಿರುವ ಸಾಧ್ಯತೆ ಸಹಜವಲ್ಲವೇ? ಜೊತೆಗೆ, ಆಗಿನ್ನೂ ಜೀವಂತವಾಗಿದ್ದ ಗುಲಾಮಗಿರಿಯ ಕ್ರೌರ್ಯವನ್ನು ಕಣ್ಣಾರೆ ಕಂಡಾಗ “ದೇವರ ಸೃಷ್ಠಿಯಲ್ಲಿ ಇಂತಹ ಕ್ರೌರ್ಯ ಸಾಧ್ಯವೆ” ಎಂಬ ಪ್ರಶ್ನೆ ಮೂಡಿತಂತೆ.

ಇವೆಲ್ಲವುಗಳಿಗಿಂತ ಮಿಗಿಲಾಗಿ, ಗಲಾಪಾಗೋ ದ್ವೀಪವೂ ಸೇರಿದಂತೆ ಹಲವಾರು ಕಡೆ ಕಂಡ ಜೀವಜಾತಿಗಳ ಅಗಾಧ ವೈವಿಧ್ಯ ಡಾರ್ವಿನ್‌ರನ್ನು ಅಚ್ಚರಿಯಲ್ಲಿ ಕೆಡವಿತು. ಧಾರ್ಮಿಕ ನಂಬಿಕೆ ಹೇಳುವಂತೆ ದೇವರು ಎಲ್ಲಾ ಬಗೆಯ ಜೀವಿಗಳನ್ನು ಪ್ರತ್ಯೇಕವಾಗಿಯೇ ಸೃಷ್ಟಿಸಿದ್ದರೆ, ಇಷ್ಟೊಂದು ವೈವಿಧ್ಯ ಭಿನ್ನತೆಗಳು ಸಾಧ್ಯವೇ ಎಂಬ ಸಂದೇಹ ಅವರನ್ನು ಕಾಡತೊಡಗಿತು!

 ಮುಂದೆ ಡಾರ್ವಿನ್ ಮಾಡಿದ್ದು ಇಂತಹ ಪ್ರಶ್ನೆಗಳಿಗೆ ಉತ್ತರ ಹುಡುಕುವ ಪ್ರಯತ್ನ. ದೊರಕಿದ ಉತ್ತರವನ್ನು ಪುರಾವೆಗಳ ಮೂಲಕ ರುಜುವಾತು ಮಾಡುವ ಪ್ರಯತ್ನ, ಅದರ ಫಲಿತಾಂಶ ಪರಿಣಾಮವೀಗ ಇತಿಹಾಸ.

ಈ ಬಗೆಯ ಗೊಂದಲ, ಪ್ರಶ್ನೆಗಳೇ ತುಂಬಿರುವ ಮನೋಸ್ಥಿತಿಯಲ್ಲಿ ತನ್ನ ಕೊನೆಯ ಟಿಪ್ಪಣಿ ಪುಸ್ತಕವನ್ನು ಮುಗಿಸಿ, ಮುಚ್ಚಿಟ್ಟ ಡಾರ್ವಿನ್ ೧೯೩೯ ರ ಜನವರಿಯಲ್ಲಿ ಸೋದರ ಸಂಬಂಧಿ ‘ಎಮ್ಮಾ’ರನ್ನು ವಿವಾಹವಾಗುತ್ತಾರೆ. ಮುಂದಿನ ಹಲವು ವರ್ಷಗಳ ಕಾಲ ಅವರು ತೋರಿಕೆಗೆ ಆಸ್ತಿಕರಾಗಿಯೇ ಉಳಿದರೂ, ಆ ನಂಬಿಕೆಗಳ ಬಗ್ಗೆ ಅವರಲ್ಲಿ ಸ್ಪಷ್ಟತೆ ಮತ್ತು ಬದ್ಧತೆ ಇದ್ದ ಲಕ್ಷಣಗಳು ಅಷ್ಟಾಗಿ ಕಾಣಿಸುವುದಿಲ್ಲ. ೧೮೪೨ ರಲ್ಲಿ ಮತ್ತು ೧೮೪೪ ರಲ್ಲಿ ಜೀವಿಗಳ ವಿಕಾಸದ ಕುರಿತಾದ ತಮ್ಮ ಸಿದ್ಧಾಂತದ ಬಗ್ಗೆ ಎರಡು ಕರಡು ಪ್ರತಿಗಳನ್ನು ಸಿದ್ಧಪಡಿಸಿದರೂ, ಅವನ್ನು ಪ್ರಕಟಿಸುವ, ಬಹಿರಂಗಗೊಳಿಸುವ ಧೈರ್ಯ ತೋರುವುದಿಲ್ಲ. ಮುಂದಿನ ಹತ್ತು ವರ್ಷಗಳ ಕಾಲ ಮತ್ತೆ ಜೀವಪ್ರಭೇದಗಳ ಅಧ್ಯಯನದಲ್ಲಿ ತೊಡಗಿಸಿಕೊಳ್ಳುತ್ತಾರೆ.

ಡಾರ್ವಿನ್ ತನ್ನ ಸಿದ್ಧಾಂತವನ್ನು ಪ್ರಕಟಿಸಲು ತೆಗೆದುಕೊಂಡ ಸುದೀರ್ಘ ಅವಧಿಯ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದಿದೆ. “ಮಾನವರೂ ಸೇರಿದಂತೆ ಸಕಲ ಜೀವಜಾತಿಗಳೂ ನೈಸರ್ಗಿಕ ವಿಕಾಸ ಪ್ರಕ್ರಿಯೆಯ ಪರಿಣಾಮಗಳು” ಎಂದು ತನ್ನ ವಾದವನ್ನು ಬಹಿರಂಗ ಗೊಳಿಸಿದರೆ “ಅವೆಲ್ಲವೂ ದೇವರ ಸೃಷ್ಟಿ” ಎಂದೇ ನಂಬಿಕೊಂಡು ಬಂದಿರುವ ಧಾರ್ಮಿಕ ವಲಯದಿಂದ ಎದುರಾಗಬಹುದಾದ ಪ್ರತಿರೋಧದ ಭಯದಿಂದ ಡಾರ್ವಿನ್ ತಡಮಾಡಿರಬೇಕು ಎನ್ನುವುದು ಹಲವರ ಅನಿಸಿಕೆ.

ಈ ವಿಳಂಬ ಉದ್ದೇಶಪೂರ್ವಕವಲ್ಲ. ಬದಲಾಗಿ ಡಾರ್ವಿನ್‌ಗೆ ತನ್ನ ಸಿದ್ಧಾಂತದ ಗಟ್ಟಿತನದ ಬಗ್ಗೆ ಸ್ವತಃ ನಂಬಿಕೆ ಬಂದಿರಲಿಲ್ಲ. ಈ ಅವಧಿಯುದ್ದಕ್ಕೂ ಡಾರ್ವಿನ್ ತನ್ನ ಬೀಗಲ್‌ಯಾನದ ಅನುಭವಗಳನ್ನು, ಸಂಗ್ರಹಿಸಿದ್ದ ಮಾಹಿತಿ, ಮಾದರಿಗಳನ್ನು ಪರಿಶೀಲಿಸಿ, ವಿಶ್ಲೇಷಿಸುವುದರಲ್ಲಿ ಮಗ್ನರಾಗಿದ್ದರು. ಜೊತೆಗೆ ಇನ್ನಷ್ಟು ಸಂಶೋಧನೆಗಳ ಮೂಲಕ ಪುರಾವೆಗಳನ್ನು ಕಲೆ ಹಾಕುತ್ತಿದ್ದರು. ಇವೆಲ್ಲವುಗಳ ಆಧಾರದಲ್ಲಿ ತನ್ನ ಸಿದ್ಧಾಂತವನ್ನು ಮತ್ತೆ ಮತ್ತೆ ಪರೀಕ್ಷಿಸುವುದರಲ್ಲಿ ಮತ್ತು ಪರಿಷ್ಕರಿಸುವುದರಲ್ಲಿ ಅವರು ನಿರತರಾಗಿದ್ದರು” ಎನ್ನುವುದ ಇನ್ನೂ ಕೆಲವರ ವಾದ. ಇಂತಹವರ ಪ್ರಕಾರ ತನ್ನ ಸಿದ್ಧಾಂತ ಸೃಷ್ಟಿಸಬಹುದಾದ ಧಾರ್ಮಿಕ ಮತ್ತು ವೈಚಾರಿಕ ಅಲ್ಲೋಲ ಕಲ್ಲೋಲಗಳನ್ನು ಡಾರ್ವಿನ್ ಮುಂದಾಗಿಯೇ ಅರಿತಿದ್ದರು. ಅವೆಲ್ಲವನ್ನು ಮೀರಿ ಅದು ನಿಲ್ಲಬೇಕಾದರೆ, ಜನರಿಗೆ ಒಪ್ಪಿತವಾಗಬೇಕಾದರೆ ಅದಕ್ಕೆ ಬೆಟ್ಟದಷ್ಟು ಗಟ್ಟಿ ಪುರಾವೆಗಳ ಬೆಂಬಲ ಬೇಕು ಎಂದವರಿಗೆ ಸ್ಪಷ್ಟವಾಗಿ ಗೊತ್ತಿತ್ತು. ಈ ಅವಧಿಯಲ್ಲಿ ಡಾರ್ವಿನ್ ನಡೆಸಿರುವ ವ್ಯಾಪಕವಾದ ಸಂಶೋಧನೆಗಳು, ಕಲೆಹಾಕಿರುವ ಮಾಹಿತಿಗಳು ಮತ್ತು ಬೇರೆ ಬೇರೆ ಕಾಲಘಟ್ಟದಲ್ಲಿನ ಜೀವವಿಕಾಸದ ಬಗೆಗಿನ ಅವರ ಹಸ್ತಪ್ರತಿಗಳ ನಡುವೆ ಕಂಡುಬಂದಿರುವ ತುಲನಾತ್ಮಕ ನಿರಂತರತೆ ಈ ವಾದವನ್ನು ಪುಷ್ಟೀಕರಿಸುತ್ತದೆ.

ಈ ಅವಧಿಯಲ್ಲಿ ಡಾರ್ವಿನ್‌ರ ಆರೋಗ್ಯ ಕೂಡಾ ತೀರಾ ಹದಗೆಟ್ಟಿತ್ತು. ಅದು ಕೂಡ ವಿಳಂಬಕ್ಕೆ ಒಂದಷ್ಟು ಕೊಡುಗೆ ನೀಡಿರಬಹುದು.

ಇವೆಲ್ಲದರ ನಡುವೆ, ಡಾರ್ವಿನ್‌ರ ಪ್ರೀತಿಪಾತ್ರ ಪುತ್ರಿ ‘ಆನಿ’ ೧೮೫೧ರಲ್ಲಿ ತನ್ನ ಹತ್ತನೆಯ ವಯಸ್ಸಿನಲ್ಲಿ ಅನಾರೋಗ್ಯದಿಂದ ಮರಣ ಹೊಂದುತ್ತಾಳೆ. ಆನಿ- ಅನ್ನು ಡಾರ್ವಿನ್ ಬಹಳ ಹಚ್ಚಿಕೊಂಡಿದ್ದರು. ಅನಾರೋಗ್ಯದಿಂದ ಅವಳು ಪಡುತ್ತಿದ್ದ ಕಷ್ಟವನ್ನು, ಸಾವಿನ ದಿನಗಳ ಅವಳ ವೇದನೆಯನ್ನು ಆಗ ಮಗಳ ಜೊತೆಗಿದ್ದ ಡಾರ್ವಿನ್ ಕಂಡಿದ್ದರು. ಈ ಸಂಕಟ ಡಾರ್ವಿನ್‌ರನ್ನು ಇನ್ನಷ್ಟು ಕಾಡಿತು. ಆಗಲೇ ಶಿಥಲವಾಗಿದ್ದ ಡಾರ್ವಿನ್‌ರ ಧಾರ್ಮಿಕ ನಂಬಿಕೆಗೆ ಬಿದ್ದ ಕೊನೆ ಪೆಟ್ಟು ಇದಾಗಿರಬೇಕು. ೧೯೪೯ ರಿಂದಲೇ ಭಾನುವಾರದ ಪ್ರಾರ್ಥನೆ ತಪ್ಪಿಸಿಕೊಳ್ಳತೊಡಗಿದ್ದ ಅವರು ಆನಿ-ಯ ಮರಣದ ನಂತರ ಎಂದೂ ಇಗರ್ಜಿಗೆ ತೆರಳಲಿಲ್ಲ ಎನ್ನುತ್ತವೆ ಅವರ ಜೀವನದ ಕುರಿತಾದ ಕೃತಿಗಳು.

ಡಾರ್ವಿನ್ ಧಾರ್ಮಿಕ ನಂಬಿಕೆಗಳಿಗೆ ಪ್ರತಿವಾದಿಯಾದ ವಿಕಾಸ ಸಿದ್ಧಾಂತವನ್ನು ಪ್ರತಿಪಾದಿಸಿದರೂ, ಆಂತರಿಕವಾಗಿ ನಾಸ್ತಿಕತೆಯನ್ನು ಪ್ರತಿನಿಧಿಸಿದರೂ, ಬಹಿರಂಗವಾಗಿ ದೇವರ ಅಸ್ತಿತ್ವವನ್ನು ಖಡಾಖಂಡಿತವಾಗಿ ಅಲ್ಲಗಳೆಯುವ ನಾಸ್ತಿಕನಾಗಿ ಕಾಣಿಸಿಕೊಂಡದ್ದು ಕಡಿಮೆ. ದೇವರನ್ನು ಪ್ರಶ್ನಿಸಬಾರದ ನಂಬಿಕೆಯಾಗಿ ನಂಬದ ಅವರು “ಈ ವಿಶ್ವದ ಉಗಮದ ಹಿಂದೆ ಒಂದು ಆದಿ ಕಾರಣ ಇದ್ದಿರಬೇಕು, ಆ ಆದಿಕಾರಣ ದೇವರಿಬ್ಬರೂ ಇರಬಹುದು” ಎಂಬ “ಆದಿಕಾರಣ ದೇವರ”ಲ್ಲಿ (First cause God) ನಂಬಿದವರು. ಆ ಕಾರಣಕ್ಕಾಗಿಯೇ ಅವರು ತನ್ನನ್ನು “Agnostic” ಎಂದು ಕರೆದುಕೊಂಡರು. “ಈ ವಿಶ್ವವನ್ನು ನೋಡಿದರೆ ಅದರ ಹಿಂದೆ ಯಾವುದೇ ವಿನ್ಯಾಸ ಇದ್ದಿರಲಿಕ್ಕಿಲ್ಲ ಎಂದು ನಂಬಲು ನನ್ನ ಮನಸ್ಸು ನಿರಾಕರಿಸುತ್ತದೆ. ಆದರೆ ಇಲ್ಲಿ ಜೀವಿಗಳ ಉಗಮ, ಅದರಲ್ಲೂ ಗ್ರಹಿಕೆ ಮತ್ತು ಭಾವನೆಗಳಿರುವ ಸಂಕೀರ್ಣ ಜೀವಿಗಳ ವಿಕಾಸದಂತಹ ವಿಚಾರಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿದರೆ ಅಲ್ಲಿ ಯಾವುದೇ ಪೂರ್ವ ವಿನ್ಯಾಸದ ಕುರುಹುಗಳು ನನಗೆ ಕಾಣಿಸುವುದಿಲ್ಲ” ಎಂದವರು ೧೮೬೧ ರಲ್ಲಿ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ಇದೇ ಡಾರ್ವಿನ್ “ನನ್ನ ಧಾರ್ಮಿಕ ನಂಬಿಕೆಗಳು ನಿಧಾನವಾಗಿಯಾದರೂ ಕೊನೆಗೆ ಸಂಪೂರ್ಣವಾಗಿ ಪತನಗೊಂಡವು. ನನ್ನ ನಿರ್ಧಾರಗಳು ಸರಿಯಲ್ಲ ಎಂದು ನಾನು ಒಂದು ಕ್ಷಣವೂ ಚಿಂತಿಸಿಲ್ಲ” ಎಂದು ತಮ್ಮ ಜೀವನ ಚರಿತ್ರೆಯ ಒಂದು ಕಡೆ ಬರೆದಿದ್ದಾರೆ.

ಧರ್ಮದ ಕುರಿತಾದ ಡಾರ್ವಿನ್‌ರ ಹೇಳಿಕೆಗಳು, ಅನಿಸಿಕೆಗಳು ಮತ್ತು ಅವರ ಬದುಕು-ಸಿದ್ಧಾಂತವನ್ನು ತುಲನೆ ಮಾಡಿದಾಗ ಅದು ಹಲವಾರು ಕಡೆ ಒಂದಕ್ಕೊಂದು ಹೊಂದಿಕೊಳ್ಳದೆ ಗೊಂದಲ ಹುಟ್ಟಿಸುವುದು ಸತ್ಯ ಇದು ಡಾರ್ವಿನ್‌ರ ಅರಿವಿಗೂ ಬಂದಿರಬೇಕು. ಯಾಕೆಂದರೆ ಅವರೇ ಒಂದು ಕಡೆ ಹೇಳಿದ್ದಾರೆ “ನನ್ನ ಧರ್ಮವಿಚಾರ ಒಂದು ಗೊಂದಲದ ಗೂಡು” ಎಂದು.

ತಮ್ಮ ಜೀವನದ ಅಂತಿಮ ದಿನಗಳಲ್ಲಿ ತನ್ನ ಧರ್ಮವಿರೋಧಿ ಸಿದ್ಧಾಂತಕ್ಕಾಗಿ, ಅಸಾಂಪ್ರದಾಯಕ ನಿಲುವು – ಬದುಕಿಗಾಗಿ ಡಾರ್ವಿನ್ ಪಶ್ಚಾತ್ತಾಪ ಪಟ್ಟಿದ್ದರು ಮತ್ತು ಅದಕ್ಕೆ ಪ್ರಾಯಶ್ಚಿತ್ತವಾಗಿ ಅವರು ಕೊನೆಯ ದಿನಗಳನ್ನು ಬೈಬಲ್ ಪಠಣದಲ್ಲಿ ಕಳೆದಿದ್ದರು ಎಂಬೊಂದು ವಿಚಾರ ಕೆಲವು ಕಡೆ ವ್ಯಕ್ತಗೊಂಡಿದೆ. “ಇದು ಸಂಪೂರ್ನ ಕಟ್ಟುಕಥೆ, ಅಪ್ಪಟ ಸುಳ್ಳು” ಎಂದು ಡಾರ್ವಿನ್‌ರ ಮಕ್ಕಳು ಮತ್ತು ಆಪ್ತರು ಅಲ್ಲಗಳೆದಿದ್ದಾರೆ.

ಚರಿತ್ರೆಕಾರ ಜಾನ್ ಹೆಡ್ಲೆ ಬ್ರೂಕ್ ಹೇಳುವಂತೆ “ತನ್ನ ಜೀವನ ಕಾಲದಲ್ಲಿ ಎಂದಿಗೂ ಪಾರಿವಾಳಗಳನ್ನು ಬಂಧಿಸಿಡಲು ಬಯಸದ ಓರ್ವ ಮುಕ್ತ ಚಿಂತಕನನ್ನು ಆಸ್ತಿಕ-ನಾಸ್ತಿಕನೆಂಬ ಗೂಡುಗಳಲ್ಲಿ ಬಂಧಿಸಿಡಬಯಸುವುದು, ಅದಕ್ಕಾಗಿ ಪ್ರಯತ್ನಿಸುವುದು ಸಾಧ್ಯವೂ ಇಲ್ಲ, ಸಾಧುವೂ ಅಲ್ಲ.”

(Nick Spencer ಅವರ “Darwin’s Religious Beliefs” ನ ಭಾವಾನುವಾದ)

* * *