ಜೀವ ವಿಕಾಸ ವಿವರಿಸುವ ಡಾರ್ವಿನ್ ಸಿದ್ಧಾಂತ ಆಧುನಿಕ ವಿಜ್ಞಾನದ ಬುನಾದಿಗಳಲ್ಲಿ ಒಂದು. ಈ ಭೂಮಂಡಲದ ನೈಸರ್ಗಿಕ ಸ್ಥಿತಿ ವಿವರಿಸುವ ಸಾಪೇಕ್ಷ ಸಿದ್ಧಾಂತ, ಕ್ವಾಂಟಮ್ ಮೆಕಾನಿಕ್ಸ್ ಸಿದ್ಧಾಂತಗಳಂತೆ ಇದು ನಾವು ಈ ಜಗತ್ತನ್ನು ನೋಡುವ ದೃಷ್ಟಿಗೆ ಹೊಸ ವೈಜ್ಞಾನಿಕ ಆಯಾಮ ನೀಡಿತು.

ಕೋಪರ್ನಿಕಸ್ ತನ್ನ ಸಿದ್ಧಾಂತದ ಮೂಲಕ  – ಈ ಲೋಕದ ಕೇಂದ್ರ ಬಿಂದು ಸೂರ್ಯ, ಭೂಮಿ ಅಲ್ಲ ಎಂದು ಪ್ರತಿಪಾದನೆ ಮಾಡಿದ ಹಾಗೆ, ಡಾರ್ವಿನ್ – ಮಾನವ ಈ ಜೀವ ಜಗತ್ತಿನ ಕೇಂದ್ರ ಬಿಂದು ಅಲ್ಲ ! ಎಂದು ಪ್ರತಿಪಾದಿಸಿದ. ದೈವ ನಮ್ಮನ್ನು ಸೃಷ್ಟಿಸಿತು ಎಂದು ಎಲ್ಲ ಧರ್ಮವೂ ಹೇಳಬೇಕಾದರೆ, ಮಾನವ ಕೇವಲ ಜೀವ ವಿಕಾಸದ ಒಂದು ಭಾಗ ಅಷ್ಟೆ ಎಂದು ಡಾರ್ವಿನ್ ಪ್ರತಿಪಾದಿಸಿದ.

ಪ್ರಕೃತಿ ಆಯ್ಕೆ (Natural Selection) ಎಂಬ ಪರಿಸರ ಕ್ರಿಯೆ ಮಾನವನನ್ನು ಒಳಗೊಂಡಂತೆ ಎಲ್ಲಾ ಜೀವಿಗಳ ಮೇಲೂ ಪ್ರಭಾವ ಬೀರುತ್ತದೆ. ಜೀವಿವಿಕಾಸಕ್ಕೆ ರಹದಾರಿ ಪ್ರಕೃತಿ ಆಯ್ಕೆ ಎಂಬ ಡಾರ್ವಿನ್ ಸಿದ್ಧಾಂತಕ್ಕೆ ಈಗ್ಗೆ ೧೫೦ ವರ್ಷಗಳಾಗಿವೆ !

ಡಾರ್ವಿನ್ ಕಾಲಾನಂತರ ಜೀವ ವಿಜ್ಞಾನದಲ್ಲಿ ಜರುಗಿದ ಸಂಶೋಧನೆ ಅವರ. ಕೋಶ ಜೀವವಿಜ್ಞಾನ, ಅಣುಜೀವ ವಿಜ್ಞಾನ, ಜೈವಿಕ ತಂತ್ರಜ್ಞಾನ, ಜೈವಿಕ ಮಾಹಿತಿ ತಂತ್ರಜ್ಞಾನ, ಜಿನೋಮಿಕ್ಸ್, ಪ್ರೋಟಿಯೋಮಿಕ್ಸ್ ಮುಂತಾದ ಜ್ಞಾನಶಾಖೆಗಳು ಪುಟಿದೆದ್ದಿವೆ. ಇಂದು ಜೀವಿಗಳಲ್ಲಿ ಕಂಡುಬರುವ ಸಾಮ್ಯತೆ – ವೈವಿಧ್ಯತೆಯನ್ನು ಅರ್ಥ ಮಾಡಿಕೊಳ್ಳಲು ಜೈವಿಕ ಮಾಹಿತಿ ತಂತ್ರಜ್ಞಾನದಲ್ಲಿ ನೂರಾರು ಬಗೆಯ ತಂತ್ರಾಂಶಗಳು (Software) ಅಭಿವೃದ್ಧಿ ಗೊಂಡಿವೆ! ಜೀನುಗಳನ್ನು, ಪ್ರೋಟೀನ್‌ಗಳನ್ನು ಅರ್ಥೈಸಿ ಕೊಳ್ಳಲು ನೂರಾರು ಬಗೆಯ ಅಲ್ಗಾರಿದಮ್ (Algorithm)ಗಳನ್ನು ಕಂಪ್ಯೂಟರ್‌ಗಳನ್ನು ಬಳಸಲಾಗುತ್ತಿದೆ. ಹೀಗೆ ಜೀವವಿಜ್ಞಾನದ ಬಗ್ಗೆ ತಿಳುವಳಿಕೆ ಅತ್ಯಂತ ಸೂಕ್ಷ್ಮಾತಿಸೂಕ್ಷ್ಮವೂ, ಸಂಕೀರ್ಣವೂ ಆಗುತ್ತಿದೆ. ಆದರೆ Thesodivls Dobzhonsky – “No research in Biology is meaningful withour a reference to Evolution !” ಹಾಗಾಗಿ ಜೀವಿವಿಕಾಸ ವಾದದ ಪಿತಾಮಹ ಚಾರ್ಲ್ಸ್ ಡಾರ್ವಿನ್ ೧೫೦ ವರ್ಷಗಳ ಹಿಂದೆ ಪ್ರತಿಪಾದಿಸಿದ್ದ ಸಿದ್ಧಾಂತಕ್ಕೂ, ಈಗ ಜರುಗುತ್ತಿರುವ ಸಂಶೋಧನೆಗಳಿಗೂ ಯಾವ ಸಂಬಂಧದ ಎಳೆ ಇದೆ ಎಂದು ತಿಳಿಯಲು ಈ ಲೇಖನ.

೧೯ನೇ ಶತಮಾನದ ಪ್ರಮುಖ ಜೀವವಿಜ್ಞಾನಿ ಎಂದು ಗುರುತಿಸಲ್ಪಡುವ ಚಾರ್ಲ್ಸ್‌ರಾಬರ್ಟ್‌ಡಾರ್ವಿನ್, ಫೆಬ್ರವರಿ ೧೨, ೧೮೦೯ರಲ್ಲಿ ಇಂಗ್ಲೆಂಡ್‌ನಲ್ಲಿ ಜನಿಸಿದ. ಜೀವ ವಿಜ್ಞಾನ, ಭೂಗರ್ಭ ವಿಜ್ಞಾನ ಹಾಗೂ ಸಮಾಜವಿಜ್ಞಾನಗಳಲ್ಲಿ ಆಸಕ್ತಿ ಇದ್ದ ಡಾರ್ವಿನ್, HMS ಬೀಗಲ್ ಎಂಬ ನೌಕೆಯಲ್ಲಿ ೫ ವರ್ಷಗಳ ಕಾಲ ಸಂಶೋಧನಾ ಪ್ರವಾಸ ಕೈಗೊಂಡಿದ್ದ. ಅಂದಿನ ಇಂಗ್ಲೆಂಡ್‌ರಾಣಿಯ ಆಶಯದಂತೆ HMS ಬೀಗಲ್ ನೌಕಾಯಾನ ಸಂಶೋಧನೆಗೆಂದೇ ಮೀಸಲಾಗಿತ್ತು. ತನ್ನ ಸಂಶೋಧನಾ ಪ್ರವಾಸದಲ್ಲಿ ಡಾರ್ವಿನ್ ಅನೇಕ ಸಸ್ಯಗಳನ್ನೂ, ಪ್ರಾಣಿಗಳನ್ನೂ ಪಳೆಯುಳಿಕೆಗಳನ್ನು ಸಂಗ್ರಹಿಸಿ ಅಧ್ಯಯನ ಮಾಡಿದ. ಗಾಲಪೋಗಾಸ್ ದ್ವೀಪದಲ್ಲಿ ಕಂಡ ದೈತ್ಯ ಆಮೆ, ವೈವಿಧ್ಯಮಯ ಗುಬ್ಬಿಜಾತಿಯ ಪಕ್ಷಿಗಳು (Finches) ಡಾರ್ವಿನ್ ಪ್ರತಿಪಾದಿಸಲು ಅನುವಾಗಿದ್ದ ಸಿದ್ಧಾಂತಕ್ಕೆ ಸಾಕ್ಷಿಸ್ವರೂಪದಂತಿದ್ದವು. ಜೀವವೈವಿಧ್ಯತೆ, ವಿಕಾಸಕ್ಕೆ ಬೇಕಾದ ಅಡಿಪಾಯ ಹಾಕುತ್ತದೆ ಎಂದು ತರ್ಕಿಸಿದ. ಅದೇ ಸಮಯದಲ್ಲಿ ಪ್ರಕಟಗೊಂಡ ಸಮಾಜಶಾಸ್ತ್ರಜ್ಞ ಮಾಲ್ಥಸ್ ಸಿದ್ಧಾಂತವೂ ಡಾರ್ವಿನ್ ಚಿಂತನೆಗೆ ಇಂಬುಕೊಟ್ಟಿತು. ‘ಉಳಿವಿಗಾಗಿ ಹೋರಾಟ’ (Struggle fro Existence) ಜನಸಾಮಾನ್ಯರಲ್ಲಿ ಮಾತ್ರ ಇಲ್ಲ, ಎಲ್ಲಾ ಜೀವಜಗತ್ತಿನಲ್ಲೂ ಇದೆ ಎಂದು ತರ್ಕಿಸಿದ. ಇದೇ ಬಗೆಯ ಚಿಂತನೆಯಲ್ಲಿದ್ದ ಸಮಯದಲ್ಲಿಯೇ ವಾಲೇಸ್ ಎಂಬ ಯುವಿಜ್ಞಾನಿ ತನ್ನ ಸಂಶೋಧನಾ ವಿವರಗಳನ್ನೊಳಗೊಂಡ ಹಸ್ತಪ್ರತಿಯನ್ನು ಡಾರ್ವಿನ್‌ಗೆ ಕಳುಹಿಸಿ ಅಭಿಪ್ರಾಯ ತಿಳಿಸಲು ವಿನಂತಿಸಿಕೊಂಡ ! ಇಬ್ಬರ ಚಿಂತನೆಯಲ್ಲಿ ಶೇ. ೧೦೦ ರಷ್ಟು ಸಾಮ್ಯತೆ ಇತ್ತು ! ಈ ಇಬ್ಬರೂ ಮಹನೀಯರು ಸೇರಿ – ೧೮೫೮ ರಲ್ಲಿ ‘ಪ್ರಕೃತಿ ಆಯ್ಕೆಯಿಂದಾಗಿ ಹೊಸ ಪ್ರಭೇದಗಳ ಉಗಮ’ “Origin of Species by Natural Selection” ಎಂಬ ಸಂಶೋಧನಾ ಲೇಖನವನ್ನು ಪ್ರಕಟಿಸಿದರು. ಸಾಮಾನ್ಯರಿಗೆ ಅರ್ಥವಾಗುವ ರೀತಿ “ಜೀವಪ್ರಭೇದಗಳ ಉಗಮ” “Origin of species” ಎಂಬ ಕಿರುಪುಸ್ತಕವನ್ನು ಡಾರ್ವಿನ್ ೧೮೫೯ ರಲ್ಲಿ ಪ್ರಕಟಿಸಿದ. ಒಂದೇ ದಿನದಲ್ಲಿ ೧,೨೫೦ ಪ್ರತಿಗಳು ಮಾರಾಟವಾದವು !

ಡಾರ್ವಿನ್ ಸಿದ್ಧಾಂತವನ್ನು ಸರಳೀಕರಿಸಿ ಚಿತ್ರ-೧ ರಲ್ಲಿ ಕಾಣಿಸಿರುವಂತೆ ವಿವರಿಸಬಹುದು : 

 ಡಾರ್ವಿನ್ ಕಾಲಾನಂತರ ಡಿ.ಎನ್.ಎ., ಆರ್.ಎನ್.ಎ.ಗಳ ಸಂಶೋಧನೆ, ಕ್ರೋಮೋಸೋಮುಗಳ ವಿವರಣೆ, ಜೀನ್‌ಗಳ ರಚನೆ, ಮಾನವ ಜಿನೋಮ್ ವಿಶ್ಲೇಷಣೆ, ಸಂಖ್ಯಾ ವಿಜ್ಞಾನದಲ್ಲಿ ಕಂಪ್ಯೂಟರ್ ಅಳವಡಿಕೆ ನಡೆದು ಅಪಾರ ಜ್ಞಾನಸಂಪತ್ತು ಒದಗಿ ಬಂದಿದ್ದರೂ, ಮೂಲತಃ ಡಾರ್ವಿನ್ ವಿವರಿಸಿದ ಜೀವವಿಕಾಸ ಸಿದ್ಧಾಂತ ಸ್ಥಿರವಾಗಿ ಉಳಿದಿರುವುದಕ್ಕೆ ಆ ವಿವರಣೆಯಲ್ಲಿರುವ ಗಟ್ಟಿತನವೇ ಕಾರಣ!

ನವಡಾರ್ವಿನ್ ಸಿದ್ಧಾಂತವನ್ನು ಚಿತ್ರ-೨ ರಲ್ಲಿ ತೋರಿಸಿರುವಂತೆ ವಿವರಿಸಬಹುದು :

 ಚಿತ್ರ ೨ರಲ್ಲಿ ತೋರಿಸಿರುವಂತೆ – ಅನುವಂಶೀಯ ಬದಲಾವಣೆಗಳು ಹೇಗೆ ಆಗುತ್ತವೆ ಎಂದು 3a, 3b, 3c, 3d ನಲ್ಲಿ ವಿವರಿಸಿದೆ. ಪ್ರಕೃತಿ ಆಯ್ಕೆ ಎಂದರೆ ನವಸಿದ್ಧಾಂತದ ಪ್ರಕಾರ ಹೆಚ್ಚು ಸದೃಢ ಸಂತತಿಗಳನ್ನು ಉತ್ಪತ್ತಿ ಮಾಡುವ ಗುಣ. ಹಾಗೂ ಹೊಸ ಪ್ರಭೇದದ ಉಗಮಕ್ಕೆ ಮುಖ್ಯ ಅಂಶ-ಆ ಜೀವಿಗಳು ತಮ್ಮ ಪೂರ್ವಜರಿಂದ ದೈಹಿಕವಾಗಿ ಹಾಗೂ ಲೈಂಗಿಕವಾಗಿ ಪ್ರತ್ಯೇಕ ಗೊಂಡರು. ಹಾಗಾಗಿ ಆದಿಮಾನವನಿಂದ ಹುಟ್ಟಿದ ಮಾನವ ಸಂತತಿಗಳು ಸ್ಥಿರವಾದವು.

ಹೀಗೆ ಡಾರ್ವಿನ್‌ನ ಮೂಲಸಿದ್ಧಾಂತದ ಚಿಮ್ಮುಹಲಗೆಯ ಮೇಲೆ ಹೊಸ ಸಂಶೋಧನೆಗಳ ಲೇಪನದೊಂದಿಗೆ ಜೀವವಿಕಾಸ ಸಿದ್ಧಾಂತ ಪುಟಿದೆದ್ದಿದೆ.

ಹೀಗಿದ್ದರೂ ಈ ಲೇಖನ ಓದುತ್ತಿರುವ ನಿಮಗೆ, ಈ ಕೆಳಕಂಡ ಪ್ರಶ್ನೆಗಳು ಕಾಡುತ್ತಿರಬಹುದು. (೧) ಜೀವವಿಕಾಸ ನಡೆಯುತ್ತಿರುವುದು ನಮಗೆ ಕಾಣುತ್ತಿಲ್ಲವಲ್ಲಾ? (೨) ಮಾನವ ಮಂಗನಿಂದ ವಿಕಾಸಗೊಂಡ ಎಂದಾದರೆ ಮುಂದೆ ಈತ ಯಾವ ಪ್ರಾಣಿ ಆಗಿ ವಿಕಾಸ ಆಗುತ್ತಾನೆ ? ಇತ್ಯಾದಿ.

ಇವೆಲ್ಲಕ್ಕೂ ಉತ್ತರಗಳುಂಟು…

ಜೀವವಿಕಾಸ ಸಾವಿರಾರು ವರ್ಷಗಳಲ್ಲಿ ನಡೆಯುವ ಕ್ರಿಯೆ. ಆದ್ದರಿಂದ ಜೀವವಿಕಾಸವನ್ನು ದೊಡ್ಡಪ್ರಾಣಿಗಳಲ್ಲಿ ಅಥವಾ ಸಸ್ಯಗಳಲ್ಲಿ ಕಾಣುವುದು ಕಷ್ಟ. ಏಕೆಂದರೆ ಪ್ರತಿ ಜೀವಿಯ ಆಯಸ್ಸು – ೫ ರಿಂದ ೧೦೦ ವರ್ಷಕ್ಕೂ ಹೆಚ್ಚು ಇರುತ್ತದೆ! ಅವುಗಳಲ್ಲಾಗುವ ಆನುವಂಶೀಯ ಬದಲಾವಣೆ, ಪ್ರಕೃತಿ ಆಯ್ಕೆ ಗಮನಿಸುವುದು ಕಷ್ಟ ಸಾಧ್ಯ.

ಆದರೆ ಕೆಲವೇ ನಿಮಿಷಗಳಲ್ಲಿ ನೂರಾರು ಪಟ್ಟು ಸಂತತಿಗಳ ವೃದ್ಧಿ ಆಗುವ ವೈರಾಣುಗಳಲ್ಲಿ, ಬ್ಯಾಕ್ಟೀರಿಯಾಗಳಲ್ಲಿ ವಿಕಾಸ ಕಾಣಬಹುದು. ಇತ್ತೀಚೆಗೆ ಕಂಡು ಬಂದಿರುವ ಹಂದಿಜ್ವರ ವೈರಾಣು H1N1 ಒಳ್ಳೆಯ ಉದಾಹರಣೆ. ಕೋಳಿ, ಹಂದಿ ಮುಂತಾದ ಪ್ರಾಣಿಗಳಲ್ಲಿದ್ದ ಕೆಲವು ಇನ್‌ಪ್ಲೂಯೆನ್‌ಜ ವೈರಾಣುಗಳು ರೂಪಾಂತರ ಹೊಂದಿದವು. ಅವುಗಳ ಜೀನುಗಳಲ್ಲಿ ಉಂಟಾದ ಅನುವಂಶೀಯ ಬದಲಾವಣೆಯಿಂದ, ಅವು ಹಂದಿ ದೇಹ ಬಿಟ್ಟು, ಮಾನವ ದೇಹದೊಳಗೆ ಬದುಕಲು ಪ್ರಕೃತಿ ಆಯ್ಕೆಯಿಂದಾಗಿ ಕಲಿತಿವೆ! ಇದೇ ರೀತಿ ಇತರೆ ಪ್ರಾಣಿಗಳಾದ ಮಂಗ, ಚಿಂಪಾಜಿಗಳಿಂದ ಮಾನವ ದೇಹಕ್ಕೆ ಬಂದ ವೈರಾಣುಗಳನ್ನು ಉದಾಹರಣೆಯಾಗಿ ಕೊಡಬಹುದು.

ಇನ್ನು ಎರಡನೇ ಪ್ರಶ್ನೆಗೆ ಉತ್ತರ ಹೀಗಿದೆ : ಬೇರೆ ಪ್ರಾಣಿಗಳಿಗೆ ಹೋಲಿಸಿದರೆ ಮಾನವ ತನ್ನ ಆಲೋಚನೆ ಶಕ್ತಿ, ವಿಜ್ಞಾನ ತಂತ್ರಜ್ಞಾನದ ಬಲದಿಂದ ತನಗೆ ಅಗತ್ಯ ಆಗುವ ರೀತಿ ಪರಿಸರ ಬದಲಾಯಿಸಬಲ್ಲ. ಉದಾಹರಣೆಗೆ – ಮರುಭೂಮಿ, ಹಿಮ ಆವೃತ ಪ್ರದೇಶಗಳಿಗೆ ಮಾನವ ದೇಹ ಹೊಂದಿಕೊಳ್ಳುವುದಿಲ್ಲ. ಆದರೆ ತಾನು ಸಂಶೋಧನೆ ಮಾಡಿರುವ ಯಂತ್ರಗಳ ಸಹಾಯದಿಂದ ಇಲ್ಲೂ ಬದುಕಬಲ್ಲ, ಆಂತರಿಕ್ಷದಲ್ಲೂ ಓಡಾಡಬಲ್ಲ ! ಈ ಕಾರಣ ಮಾನವ ವಿಕಾಸ ಇದೇ ದಿಕ್ಕಿನಲ್ಲಿ ಸಾಗುತ್ತಿದೆ ಎಂದು ಹೇಳುವುದು ಕಷ್ಟ.

ಇದೇ ರೀತಿ ವೈದ್ಯಕೀಯ ತಂತ್ರಜ್ಞಾನದ ಬಲದಿಂದ ಮಾನವ ಜನಾಂಗದಲ್ಲಿ ಆನುವಂಶೀಯ ರೋಗ ತರುವ ಜೀನ್‌ಗಳಿದ್ದರೂ ಬದುಕುಳಿಯುವುದು ಸಾಧ್ಯವಾಗುತ್ತಿದೆ. ಮುಂದೆ ಒಂದು ದಿನ – ವಿಜ್ಞಾನ ಹಾಗೂ ತಂತ್ರಜ್ಞಾನದ ಅತಿಯಾದ ಅವಲಂಬನೆಯಿಂದ ಮಾನವ ಸಂತತಿ ನಶಿಸಿಹೋದರೂ ಆಶ್ಚರ್ಯವಿಲ್ಲ!

ಹಾಗಾಗಿ ಡಾರ್ವಿನ್ ಮತ್ತು ನವ ಡಾರ್ವಿನ್ ಸಿದ್ಧಾಂತದ ಪ್ರಕಾರ ಪರಿಸರ ಬದಲಾಗುತ್ತಿರುತ್ತದೆ. ಬದಲಾಗುವ ಪರಿಸರಕ್ಕೆ ಹೊಂದಾಣಿಕೆ ಮಾಡಿಕೊಳ್ಳುವ ಜೀವಿ ಬದುಕುಳಿಯುವುದು – ಹೊಂದಾಣಿಕೆ ಸಾಧ್ಯ ವಿಲ್ಲದ್ದು ನಶಿಸಿ ಹೋಗುತ್ತದೆ. ಬುದ್ಧದೇವ ಕೂಡ ಒಂದರ್ಥದಲ್ಲಿ ಇದೇ ಅನುಭವದ ಮಾತು ಹಳಿದ್ದ – ‘ಯಾವುದೂ ನಿಶ್ಚಿತವಾದುದ್ದಲ್ಲ. ಎಲ್ಲವೂ ಬದಲಾವಣೆಗೆ ಒಡ್ಡಿಕೊಂಡಿರುತ್ತವೆ’ ಎಂದು.

* * *