ಮೈಸೂರಿನ ಕುಕ್ಕರಹಳ್ಳಿ ಕೆರೆಯಲ್ಲೋ ಅಥವಾ ಬೆಂಗಳೂರಿನ ಹಲಸೂರು ಸರೋವರದಲ್ಲೋ ನಾಲ್ಕು ಕಡಲೆಕಾಯಿಗಳನ್ನು ಎಸೆದು ಆಚೆ ದಡದಲ್ಲಿ ನಿಂತವರಿಗೆ ‘ಅವು ಎಲ್ಲಿವೆ ಹೇಳಿ?’ ಎಂದು ಕೇಳಿದರೆ ಎಷ್ಟು ಗೊಂದಲವಾಗುತ್ತದೋ ಹಾಗೆಯೇ ಗಲಾಪಗಸ್ ದ್ವೀಪಸ್ತೋಮದ ಕಥೆ. ಭೂಗೋಳದಲ್ಲಿ ಪೆಸಿಫಿಕ್ ಸಾಗರದಷ್ಟು ವಿಶಾಲವಾದ ಸಾಗರ ಮತ್ತೊಂದಿಲ್ಲ. ೧೮೦ ದಶಲಕ್ಷ ಚದರ ಕಿಲೋಮೀಟರ್ ವಿಸ್ತರಿಸಿದ ಮಹಾಜಲರಾಶಿ ಅದು. ಗಲಾಪಗಸ್ ದ್ವೀಪಸ್ತೋಮದ ಎಲ್ಲ ಚಿಕ್ಕಪುಟ್ಟ ದ್ವೀಪಗಳನ್ನೂ ಒಂದೆಡೆ ತುರುಕಿದರೂ ಅದು ನಮ್ಮ ಅಂಡಮಾನ್ ನಿಕೋಬರ್ ದ್ವೀಪಗಳಿಗಿಂತ ಚಿಕ್ಕದಾಗುತ್ತದೆ; ೭,೮೮೦ ಚ.ಕಿ.ಮೀ ಈ ಪುಟ್ಟ ನೆಲದ ತುಂಡುಗಳು ೪೫,೦೦೦ ಚ.ಕಿಮೀ ಸಾಗರದ ನೀರಿನಲ್ಲಿ ಹಂಚಿಹೋಗಿಬಿಟ್ಟಿವೆ. ಒಂದೊಂದೂ ಇನ್ನೊಂದರೊಡನೆ ಮುನಿಸಿಕೊಂಡಂತೆ ಸಹಸ್ರ ಸಹಸ್ರ ವರ್ಷಗಳಿಂದ ಮೌನವೇ ಹೆಪ್ಪುಗಟ್ಟಿ ತೇಲಿದಂತೆ. ಆದರೆ ಇಲ್ಲೂ ಮಾನವ ಕಾಲೂರಿಬಿಟ್ಟಿದ್ದಾನೆ, ನೋಡನೋಡುತ್ತಲೇ ಅಲ್ಲಿನ ಸ್ಪ್ಯಾನಿಷರ ಸಂಖ್ಯೆ ೪೦,೦೦೦ ಮುಟ್ಟಿದೆ. ನಿಸರ್ಗದ ಅನುಪಮ ತಾಣದಲ್ಲಿ ತಾವೂ ದ್ವೀಪವಾಸಿಗಳಾಗಿ ಬಿಟ್ಟಿದ್ದಾರೆ. ಎಲ್ಲಿದೆ ಗಲಾಪಗಸ್ ದ್ವೀಪ? ಏಕೆ ಅದಕ್ಕೆ ಇಷ್ಟೊಂದು ಮಹತ್ವ? ಇದು ಈಕ್ವೆಟರ್ ಅಂದರೆ ಸಮಭಾಜಕ ವೃತ್ತಕ್ಕೆ ಅಂಟಿಕೊಂಡಿರುವ ಈಕ್ವೆಡಾರ್ ಎಂಬ ದಕ್ಷಿಣ ಅಮೆರಿಕದ ಪುಟ್ಟ ದೇಶಕ್ಕೆ ಸೇರಿದ ದ್ವೀಪಸ್ತೋಮ ತೀರ ಹತ್ತಿರವೆಂದರೆ ದಕ್ಷಿಣ ಅಮೆರಿಕಾದ ಪಶ್ಚಿಮ ತೀರದಿಂದ ಇದಿರುವ ದೂರ ೭೨೦ ಕಿ.ಮೀ. ಸಮಭಾಜಕ ವೃತ್ತ ಇದರ ಹೊಟ್ಟೆಯ ಮೇಲೆ ಹಾಯುತ್ತದೆ; ಕಣ್ಣಿಗೆ ಕಾಣುವುದಿಲ್ಲ. ಅದು ಅಮೂರ್ತರೇಖೆ ತಾನೆ?

ಗಲಾಪಗಸ್ ದ್ವೀಪಸ್ತೋಮ

ನಿಮ್ಮ ಕೈಯಲ್ಲಿ ಭೂಗೋಳವಿದ್ದರೂ ಅಷ್ಟೇ, ಭೂಪಟವಿದ್ದರೂ ಅಷ್ಟೇ, ಭೂತಕನ್ನಡಿ ಹಿಡಿದು ನೋಡಿದರೆ, ಹರಿದ ಪೇಪರ್ ಚೂರುಗಳಂತೆ ಕಾಣುವ ಸಣ್ಣ ಸಣ್ಣ ತೇಪೆಗಳು ಪೆಸಿಫಿಕ್ ಸಾಗರದಲ್ಲಿ ಚುಕ್ಕೆಗಳು ಕಣ್ಣಿಗೆ ಬೀಳುತ್ತವೆ. ವಾಸ್ತವವಾಗಿ ಈ ದ್ವೀಪಸ್ತೋಮವನ್ನು ನೀವು ಗುರುತಿಸಿದರೆ ಕೊಲಂಬಸ್ ಅಮೆರಿಕ ಪತ್ತೆ ಹಚ್ಚಿದಾಗ ಪಟ್ಟಷ್ಟೇ ಸಂತೋಷವನ್ನು ನೀವೂ ಪಡಬಹುದು. ಪೆಸಿಫಿಕ್ ಸಾಗರದಲ್ಲಿ ಒಟ್ಟಾರೆ ಸಣ್ಣ ಪುಟ್ಟ ೩೦,೦೦೦ ದ್ವೀಪಗಳಿವೆಎಂದು ಅಂದಾಜು. ಅಟ್ಲಾಂಟಿಕ್ ಸಾಗರದಲ್ಲಿ ಇನ್ನೂ ಹೆಚ್ಚು; ಅವು ೪೫೦೦೦ ದಾಟಿವೆ.ಇವುಗಳಲ್ಲಿ ಎಷ್ಟೋ ದ್ವೀಪಗಳು ಗಲಾಪಗಸ್‌ಗಿಂತ ನೂರಾರು ಪಟ್ಟು ಚಿಕ್ಕ ದ್ವೀಪಗಳೂ ಉಂಟು. ಹಾಗೆ ನೋಡಿದರೆ ಅತಿ ಸಣ್ಣ ದ್ವೀಪಗಳನ್ನು ಎಣಿಸುವುದು ಸಾಗರ ಸರ್ವೇ ಮಾಡುವ ಮಂದಿಗೂ ತಲೆನೋವೇ. ಎಷ್ಟೊಂದುಪಟ್ಟಿ ಮಾಡುವುದು? ಆಕಾರಾದಿಯಾಗಿ ವಿಭಜಿಸಿದ್ದಾರೆ; ಭೌಗೋಳಿಕವಾಗಿ ಅವುಗಳ ಹಂಚಿಕೆಯನ್ನು ವಿವರಿಸಲು ತಿಣುಕಿದ್ದಾರೆ. ನಮ್ಮ ಪಶ್ಚಿಮ ಕಡಲಲ್ಲೇ ಇಲ್ಲವೇ ಲಕ್ಷ ದ್ವೀಪಗಳು? ಎಣಿಸಿದರೆ ಗಮನಕ್ಕೆ ಬರುವಂಥ ಹದಿಮೂರು ದ್ವೀಪಗಳಿವೆ. ಜನಸಂದಣಿ ಇರುವುದು ಎಂಟೇ ದ್ವೀಪಗಳಲ್ಲಿ! ಉಳಿದವು ನಿಸರ್ಗದ ತೆಕ್ಕೆಗೆ. ಅವುಗಳನ್ನು ಅವೇ ಆಳಿಕೊಳ್ಳಬೇಕು, ಅಳಿಯದ ಹಾಗೆ. ಈ ಎಲ್ಲವನ್ನೂ ಕಟ್ಟಿ ಬೆಳೆಸಿದ್ದು ಹವಳಗೇಳ. ಅವೇ ನಿಜವಾದ ಯಜಮಾನರು. ಗೆದ್ದಲು ಕಟ್ಟಿದ ಹುತ್ತಕ್ಕೆ ಹಾವು ಸೇರಿಕೊಂಡಂತೆ ಈ ಮನುಕುಲ ದ್ವೀಪಗಳನ್ನೆಲ್ಲ ಹೆಚ್ಚು ಕಡಿಮೆ ಆವರಿಸಿದೆ. ನೆಲದಲ್ಲಿ ಇರಬೇಕಾದವರೂ ದ್ವೀಪಗಳನ್ನು ಆಶ್ರಯಿಸುವ ಸ್ಥಿತಿ. ಲಕ್ಷದ್ವೀಪಗಳ ಎಲ್ಲವನ್ನೂ ಬಳಿದು ಒಂದು ಕಡೆ ಹಾಕಿದೆವು ಎನ್ನೋಣ, ಅವಕ್ಕೆ ೩೨ ಚ.ಕಿ.ಮೀ ಜಾಗ ಸಾಕು ಅಷ್ಟೇ. ಲಕ್ಷದ್ವೀಪ ಎನ್ನುವುದು ಉತ್ಪ್ರೇಕ್ಷೆಯ ಮಾತು; ಜನಮಾನಸ ಬಯಸಿದ ಹಾಗೆ.

ಗಲಾಪಗಸ್ ದ್ವೀಪ ಏಕೆ ಈಗ ಸುದ್ದಿಯಲ್ಲಿದೆ. ಕಾರಣ ಹಲವಿದೆ. ಇದು ಹೊರನೋಟಕ್ಕೆ ಸುಲಭವಾಗಿ ಗೋಚರಿಸದು. ಏಕೆಂದರೆ ಈ ದ್ವೀಪಗಳಡಿ ಸಾಗರ ತಳ ಸೀಳಿಕೊಂಡು ಬಿಟ್ಟಿದೆ. ವೈಜ್ಞಾನಿಕ ಪರಿಭಾಷೆಯಲ್ಲಿ ಈ ದ್ವೀಪಗಳು ಬೇರೆ ಬೇರೆ ಶಿಲಾಫಲಕಗಳು ಒಂದುಗೂಡಿರುವ ಸಾಗರ ತಳದ ಮೇಲೆ ನಿಂತಿವೆ. ಅವು ಮೆಲ್ಲಮೆಲ್ಲನೆ ಸರಿದು ಇನ್ನಷ್ಟು ದೂರದೂರ ಯಾವಾಗ ಪಯಣಿಸುತ್ತವೋ ತಿಳಿಯದು. ಬಹುಶಃ ಆ ಕಾಲ ಬಂದಾಗ ಮನುಕುಲದ ಸ್ಥಿತಿ ಹೇಗಿರುತ್ತದೋ ಅದು ಹೇಳಲಾಗದು. ಭೂಮಿಯ ಇಂಥ ಬಾಹ್ಯ ಆಂತರಿಕ ಬದಲಾವಣೆಗೆ ಕೋಟಿಕೋಟಿ ವರ್ಷಗಳು ಬೇಕು. ಗಲಾಪಗಸ್ ದ್ವೀಪ ಟ್ರಿಪಲ್ ಜಂಕ್ಷನ್ ಮೇಲಿದೆ ಎನ್ನುವುದು ಈ ಕಾರಣದಿಂದಾಗಿಯೇ. ಅದರಡಿಯ ಶಿಲಾಫಲಕಗಳು ಪ್ರಳಯವನ್ನೇ ಕಣ್ಣೆದುರಿಗೆ ನಿಲ್‌ಇಸುತ್ತವೆ. ಈಗಲೂ ಆಳ ಬಿರುಕುಗಳಿಂದ, ಸಂದುಗೊಂದುಗಳಿಂದ ಲಾವಾರಸ ಹೊರಸೂಸುತ್ತಲೇ ಇದೆ. ಗಲಾಪಗಸ್ ದ್ವೀಪ ಹುಟ್ಟಿದ್ದೇ ಜ್ವಾಲಾಮುಖಿಗಳು ಶಿಲಾರಸವನ್ನು ಎತ್ತಿಹಾಕಿದ್ದರಿಂದ, ಮೊದಲು ನಿರಂತರವಾಗಿ ಕಕ್ಕುತ್ತಿದ್ದ ಅವು ಈಗ ಬಿಟ್ಟು ಬಿಟ್ಟು ಕಕ್ಕುತ್ತಿವೆ. ಇದರಲ್ಲಿ ಇಸಬೆಲಾ ಎಂಬ ದೊಡ್ಡ ದ್ವೀಪವಿದೆ. ಗಲಾಪಗಸ್‌ನಲ್ಲಿ ಇದರದ್ದೇ ಅರ್ಧಪಾಲು. ಇಡೀ ದ್ವೀಪವೇ ಜ್ವಾಲಾಮುಖಿಯ ಬಾಯಿಯಾಗಿದೆ. ಕಳೆದ ವರ್ಷದ ಮೇ ತಿಂಗಳಲ್ಲಿ ಮತ್ತೆ ಜ್ವಾಲಾಮುಖಿ ಕೆರಳಿತ್ತು. ಇಲ್ಲಿನ ಯಾವ ದ್ವೀಪ ನೋಡಿದರೂ ಅವುಗಳ ಬುಡವೇ ಭದ್ರವಿಲ್ಲ. ಭೂವಿಜ್ಞಾನಿಗಳು ಇವುಗಳ ವಯಸ್ಸನ್ನು ಹೇಳುವಾಗ ನಮ್ಮ ಊಹೆಗೂ ನಿಲುಕದ ಕಾಲಮಾನದಲ್ಲಿ ಹೇಳುತ್ತಾರೆ. ಅವರು ಉದ್ಗರಿಸುತ್ತಾರೆ: “ಓಹ್ ಈ ದ್ವೀಪಸ್ತೋಮಗಳೇ? ಮೊನ್ನೆ ಮೊನ್ನೆ ಹುಟ್ಟಿದವು. ಐದರಿಂದ ಹತ್ತು ದಶಲಕ್ಷ ವರ್ಷಗಳ ಹಿಂದೆ”. ಭೂವಿಜ್ಞಾನಿಗಳಿಗೆ ಲಕ್ಷವೆಂದರೆ ಅಲಕ್ಷ್ಯ. ಅವರದ್ದೇನಿದ್ದರೂ ಕೋಟಿ ಕೋಟಿ ವರ್ಷಗಳ ಬಗೆಗಿನ ಮಾತು. ಭೂ ಇತಿಹಾಸವೆಂದರೆ ಅದನ್ನಳೆಯುವ ಮಾನದಂಡವೇ ಬೇರೆ. ಗಲಾಪಗಸ್ ದ್ವೀಪಸ್ತೋಮದ ಉಗಮ ಅಂಥ ದೊಡ್ಡ ಭೂವೈಜ್ಞಾನಿಕ ಘಟನೆಯೇ ಅಲ್ಲ ಎನ್ನುತ್ತಾರೆ. ಕೇವಲ ಜ್ವಾಲಾಮುಖಿಗಳಿರುವ ಮಾತ್ರಕ್ಕೆ ಗಲಾಪಗಸ್ ದ್ವೀಪಕ್ಕೆ ಎಲ್ಲಿಲ್ಲದ ಮಹತ್ವ ಬರುವುದುಂಟೆ? ನಮ್ಮ ಅಂಡಮಾನ್ ನಿಕೋಬರ್ ದ್ವೀಪಗಳು ಕೂಡ ಜ್ವಾಲಾಮುಖಿಗಳಿಂದ ಹುಟ್ಟಿಲ್ಲವೆ? ಈಗಲೂ ಇಲ್ಲಿನ ಸಾಗರ ತಳ ನಡುಗುತ್ತದಲ್ಲವೆ? ಅಲ್ಲಿನ ಬ್ಯಾರನ್ ಐಲೆಂಡ್ ಎಂಬ ಜ್ವಾಲಾಮುಖಿ ಮೊನ್ನೆ ಮೊನ್ನೆ ಕೆರಳಿತ್ತಲ್ಲ?  ವಾಸ್ತವವಾಗಿ ಜ್ವಾಲಾಮುಖಿಯೊಂದೇ ಗಲಾಪಗಸ್ ದ್ವೀಪಕ್ಕೆ ವೈಶಿಷ್ಟ್ಯ ತಂದುಕೊಟ್ಟಿಲ್ಲ. ಹೆಚ್.ಎಂ.ಎಸ್.ಬೀಗಲ್ ಎಂಬ ನೌಕೆಯಲ್ಲಿ ಚಾರ್ಲ್ಸ್ ಡಾರ್ವಿನ್ ಯಾತ್ರೆ ಹೊರಟಾಗ ಮಾರ್ಗ ಮಧ್ಯದಲ್ಲಿ ತನ್ನ ಸಹೋದರಿ ಕ್ಯಾಥರಿನ್‌ಗೆ “ಗಲಾಪಗಸ್ ದ್ವೀಪಗಳನ್ನು ನೋಡಲು ನಾನು ಬಹು ಕಾತರನಾಗಿದ್ದೇನೆ. ಅಲ್ಲಿನ ಭೂವಿಜ್ಞಾನ, ಜೀವಿಸಂಪನ್ಮೂಲ ಎರಡೂ ನನ್ನನ್ನು ನಿರಾಶೆಗೊಳಿಸಲಾರವೆಂದು ನಂಬಿದ್ದೇನೆ.” ಎಂದು ೧೮೩೫ರ ಆಗಸ್ಟ್‌ನಲ್ಲಿ ಪತ್ರ ಬರೆದ.

“ನೀನು ದೀರ್ಘಕಾಲ ಹೀಗೆಯೇ ಅನಾರೋಗ್ಯದಿಂದ ನರಳುತ್ತಿದ್ದರೆ ಇಲ್ಲಿ ನಮಗೆ ದಿಕ್ಕು ತೋಚದಂತಾಗುತ್ತದೆ. ಒಡನೆಯೇ ನಿನ್ನ ಬೀಗಲ್ ಯಾತ್ರೆಯನ್ನು ಕೈಬಿಟ್ಟು ಇಂಗ್ಲೆಂಡಿಗೆ ಮರಳು” ಎಂದು ಉತ್ತರ ನೀಡಿದ್ದಳು ಕ್ಯಾಥರಿನ್. ಡಾರ್ವಿನ್ ಏನಾದರೂ ಇಂಗ್ಲೆಂಡಿಗೆ ಹಿಂತಿರುಗಿದ್ದರೆ ಜೀವಿವಿಕಾಸದ ವ್ಯಾಖ್ಯೆ ಯಾವ ಜಾಡು ಹಿಡಿಯುತ್ತಿತ್ತೋ; ಅವನಂತೂ ಪ್ರಸಿದ್ಧಿಗೆ ಬರುತ್ತಿರಲಿಲ್ಲ. ಗಲಾಪಗಸ್‌ದ್ವೀಪಕ್ಕೆ ಹೊರಟದ್ದು ಪೆರುವಿನ ಲಿಮಾ ಎಂಬ ಭಾಗದಿಂದ. ಅಲ್ಲೋ ಜನರ ದಾರಿದ್ರರ್ಯ, ಶಿಥಿಲ ಮನೆಗಳು, ಒಂದಿಷ್ಟೂ ನೈರ್ಮಲ್ಯ ಕಾಣದ ಊರು ಇವನ್ನೆಲ್ಲ ನೋಡಿ ಡಾರ್ವಿನ್ ಬೆಚ್ಚಿಬಿದ್ದಿದ್ದ. ಆದರೆ ಅಲ್ಲಿನ ಗುಡ್ಡಗಳಲ್ಲಿ ಸಾಗರದ ಚಿಪ್ಪುಗಳು ಸಿಕ್ಕಿ ಅವನ ಆಸಕ್ತಿಯನ್ನು ಪೋಷಿಸಿದ್ದವು. ಬೀಗಲ್ ನೌಕೆಯ ಕ್ಯಾಪ್ಟನ್ ಫಿಟ್ಸ್‌ರಾಯ್ ದೀರ್ಘಯಾನದಲ್ಲಿ ಗಲಾಪಗಸ್ ದ್ವೀಪಗಳು ಎಂದಿಗೆ ಕಣ್ಣಿಗೆ ಕಾಣುತ್ತವೋ ಎಂದು ಕಾತರಿಸುತ್ತಿದ್ದ. ಚತಾಮ್ ದ್ವೀಪ ಎನ್ನುವುದು ಅದರಲ್ಲೊಂದು ಪುಟ್ಟ ದ್ವೀಪ. ಅದರ ಬಳಿ ಸಾಗಿದಾಗ ಕ್ಯಾಪ್ಟನ್‌ಗೆ ಪುಲಕ. ಆದರೆ ಡಾರ್ವಿನ್ನನ ಪರವಶತೆಯೇ ಬೇರೆ. ಅವನು ದಿನಚರಿಯಲ್ಲಿ ಬರೆದ ಮಾತುಗಳಿವು :

“ಗಲಾಪಗಸ್ ದ್ವೀಪಗಳೆನ್ನುವುದು ಬೇರೆಯದೇ ಆದ ಪ್ರಪಂಚ. ದಕ್ಷಿಣ ಅಮೆರಿಕಾಕ್ಕೆ ಅಂಟಿಕೊಂಡಿರುವ ಉಪಗ್ರಹ ಎನ್ನುವುದೇ ಸರಿಯಾದ ಮಾತು. ಸುತ್ತೆಲ್ಲ ಬರೀ ಜ್ವಾಲಾಮುಖಿಗಳೇ. ಇಲ್ಲಿ ಅದೇನು ಜೀವಿವೈವಿಧ್ಯ ? ಇತ್ತೀಚೆಗಷ್ಟೇ ಹುಟ್ಟಿರುವ ಜ್ವಾಲಾಮುಖಿಗಳಿಗೆ ಇಲ್ಲಿ ಸಾಕ್ಷಿಯಿದೆ. ದೇಶ ಮತ್ತು ಕಾಲ ಎರಡರ ಅಳತೆಯಲ್ಲೂ ಸತ್ಯವೊಂದು ಧುತ್ತೆಂದು ನಮ್ಮ ಕಣ್ಣೆದುರಿಗೆ ತೆರೆದುಕೊಳ್ಳುತ್ತದೆ. ಇದು ವಿಸ್ಮಯಗಳ ವಿಸ್ಮಯ. ಭೂಮಂಡಲದಲ್ಲೇ ಹೊಸ ಜೀವಿ ಪ್ರಭೇದವನ್ನು ಕಾಣುವ ಭಾಗ್ಯ ಇಲ್ಲಿ.”

ಬೀಗಲ್ ಯಾನದುದ್ದಕ್ಕೂ ಬೈಬಲ್ಲಿನ ಕಥೆಗಳನ್ನು ಸಮರ್ಥನೆ ಮಾಡಿಕೊಳ್ಳುತ್ತ ಸಹಯಾನಿಗಳ ಗೇಲಿಗೆ ಗುರಿಯಾಗಿದ್ದ ಡಾರ್ವಿನ್‌ಗೆ ಗಲಾಪಗಸ್ ದ್ವೀಪ ಹೊಚ್ಚ ಹೊಸ ದೃಷ್ಟಿ ನೀಡಿತು. ಬುದ್ಧನಿಗೆ ಬೋಧಿವೃಕ್ಷದ ಕೆಳಗೆ ಜ್ಞಾನೋದಯವಾದಂತೆ. ಜೀವಿವೈವಿಧ್ಯ ಕಂಡು ಚಿಂತನ ಮಂಥನ ನಡೆಸಿ, ಕೊನೆಗೆ ಅವನೇ ಪ್ರಶ್ನಿಸಿಕೊಂಡಿದ್ದು : “ಇದರಲ್ಲಿ ದೈವದ ಕೈವಾಡವೇನಿದೆ ?” ಇನ್ನೊಂದೆಡೆ ಅವನಿಗೆ ಅಳುಕು “ಧರ್ಮದ ವಿರೋಧ ನಿಲ್ಲಬೇಕೆ ?” ಅವನ ತರ್ಕದ ಲೋಲಕ ಕೊನೆಗೂ ವಾಲಿದ್ದು ಜೀವಿವಿಕಾಸ ಎಂಬ ಪರಿಕಲ್ಪನೆಯತ್ತ. ಡಾರ್ವಿನ್ನನ ಹೆಸರನ್ನು ಅಮರಗೊಳಿಸಿರುವುದು ಈ ಚಿಂತನೆಯೇ. ಡಾರ್ವಿನ್ ಪ್ರಕೃತಿ ವಿಜ್ಞಾನಿಯಷ್ಟೇ ಅಲ್ಲ, ಸಾಹಿತ್ಯದ ಆಳ ಬೇರುಗಳನ್ನು ಕಂಡವನು. ಬೀಗಲ್ ಯಾತ್ರೆಯುದ್ದಕ್ಕೂ ಅವನ ಕೈಲಿದ್ದದ್ದು ಜಾನ್ ಮಿಲ್ಟನ್ ಕವಿಯ ‘ಪ್ಯಾರೆಡೈಸ್ ಲಾಸ್ಟ್’ ಕೃತಿ. ವಾಸ್ತವವಾಗಿ ಡಾರ್ವಿನ್ ಮಟ್ಟಿಗೆ ಗಲಾಪಗಸ್ ದ್ವೀಪವೇ ಒಂದು ಪ್ಯಾರೆಡೈಸ್. ಅದನ್ನು ಎಂದೂ ಅವನು ಕಳೆದುಕೊಳ್ಳಲಿಲ್ಲ ಎನ್ನುವುದೇ ಮನುಕುಲಕ್ಕೆ ಸಂತಸ ತರುವ ಸಂಗತಿ.

ಆರು ಜ್ವಾಲಾಮುಖಿಗಳು ಸೇರಿ ಕುದುರೆಮುಖದಂತೆ ಮೈದಳೆದು ಆದ ದ್ವೀಪ ಇಸಬೆಲಾ. ಇದೇ ಗಲಾಪಗಸ್‌ನ ಅತಿ ದೊಡ್ಡ ದ್ವೀಪ. ಹೆಚ್ಚು ಕಡಿಮೆ ನಮ್ಮ ಕೊಡಗು ಜಿಲ್ಲೆಯಷ್ಟು ಎನ್ನಿ. ಚಾರ್ಲ್ಸ್ ಡಾರ್ವಿನ್ ಇದೂ ಸೇರಿದಂತೆ ಅನೇಕ ದ್ವೀಪಗಳನ್ನು ತನ್ನ ಯಾತ್ರೆಯಲ್ಲಿ ಕೇವಲ ನೋಡಿದಷ್ಟೇ ಅಲ್ಲ, ನೆಲಸಿದ್ದೂ ಉಂಟು. ಮತ್ತೆ ಮತ್ತೆ ‘ಇದೆಂಥ ವಿಚಿತ್ರ ಈ ಭೂಮಿಯ ಮೇಲೆ’ ಎಂದು ಗುನುಗುತ್ತಿದ್ದನಂತೆ. ಗಲಾಪಗಸ್ ದ್ವೀಪಸ್ತೋಮದಲ್ಲಿ ಚಾರ್ಲ್ಸ್ ದ್ವೀಪ ಎನ್ನುವುದೂ ಒಂದು. ಈಗ ಅದನ್ನು ‘ಸಂತ ಮೇರಿಯ’ ದ್ವೀಪ ಎನ್ನುತ್ತಾರೆ. ಬೀಗಲ್ ನೌಕೆಗೆ ತೀರದಲ್ಲೇ ಲಂಗರು ಹಾಕಿ ಡಾರ್ವಿನ್ ಮತ್ತು ಸಂಗಡಿಗರು ನಾಡದೋಣಿಗಳಲ್ಲಿ ಇಲ್ಲಿಗೆ ಬಂದರು. ಅಲ್ಲಿಗೆ ಹೋದಾಗ ೨೫೦ ಮಂದಿ ಆಗಲೇ ಅಲ್ಲಿ ವಾಸವಾಗಿದ್ದರು. ಅವರ ಮೇಲೆ ಕಣ್ಗಾವಲಿಡಲು ಇಂಗ್ಲಿಷ್‌ನ ನಿಕೋಲಾಸ್ ಲಾವಸ್ ಎಂಬ ಅಧಿಕಾರಿ ಇದ್ದ. ಈ ೨೫೦ ಮಂದಿ ಈಕ್ವೆಡಾರ್ ಗಣರಾಜ್ಯದ ರಾಜಕೀಯ ಅಪರಾಧಿಗಳು. ಇಲ್ಲೂ ವೈವಿಧ್ಯ, ಕರಿಯರು,  ಬಿಳಿಯರು, ಕಂದುಬಣ್ಣದವರು, ಹಳದಿ ಚರ್ಮದವರು ಎಲ್ಲರೂ ಇದ್ದರು. ಅಪರಾಧಕ್ಕೂ ಬಣ್ಣಕ್ಕೂ ಯಾವ ಸಂಬಂಧ ? ಡಾರ್ವಿನ್ ತನ್ನ ನೆರವಿಗಾಗಿ ಕರೆದುಕೊಂಡು ಬಂದಿದ್ದ ಕೋಲಿಂಗ್ಟನ್ ಎಂಬವನೊಡನೆ ೧೮೦೦ ಅಡಿ ಎತ್ತರದ ಜ್ವಾಲಾಮುಖಿ ಬೆಟ್ಟವನ್ನು ಏರಿದ್ದ. ಹೊಸತು ಎಂದು ಕಂಡು ಬಂದ ಎಲ್ಲ ಸಸ್ಯ, ಪ್ರಾಣಿ, ಪಕ್ಷಿಗಳ ಮಾದರಿಗಳನ್ನು ಜಾಗರೂಕತೆಯಿಂದ ಸಂಗ್ರಹಿಸುತ್ತಿದ್ದ.

ಗಲಾಪಗಸ್ ದ್ವೀಪಸ್ತೋಮದಲ್ಲಿ ಹಿಮಾಚ್ಛಾದಿತ ಗಿರಿಶಿಖರಗಳಿಲ್ಲ, ಅಮೆಜಾನ್ ನಲ್ಲಿರುವಂತೆ ಗಗನಚುಂಬಿ ಮಳೆಕಾಡುಗಳಿಲ್ಲ, ಝುಳುಝುಳು ಹರಿಯುವ ನದಿಗಳಿಲ್ಲ, ನಾಲ್ಕೇ ಮಾತಿನಲ್ಲಿ ಹೇಳಬೇಕೆಂದರೆ ಭೌಗೋಳಿಕವಾಗಿ ಅಲ್ಲಿರುವುದು ಶುಷ್ಕ ತೀರಗಳು, ಕುರುಚಲು ಪೊದೆಗಳು, ಪಾಪಾಸುಕಳ್ಳಿಯ ಪ್ರಪಂಚ. ಜ್ವಾಲಾಮುಖಿಗಳು ಕೆರಳಿ ಕಕ್ಕಿರುವ ಲಾವಾರಸದ ಬೋಳು ಬೋಳು ನಲ. ಆಗತಾನೇ ಕಮ್ಮಾರ ಕಬ್ಬಿಣವನ್ನು ಎರಕಹೊಯ್ದು ಕಿಟ್ಟವನ್ನೆಲ್ಲ ರಾಶಿ ಮಾಡಿದಂಥ ಸನ್ನಿವೇಶ. ಮರ್ಚೆನಾ ದ್ವೀಪವಂತೂ ಬೆಂಗಾಡು. ಸಾಂತಾ ಕ್ರೂಸ್ ದ್ವೀಪ ಎತ್ತರಿಸಿದ ನೆಲ, ಜೆನೋಪಸ್ ದ್ವೀಪವೋ ಬಟಾಬಯಲು. ಇಸಬೆಲಾ ದ್ವೀಪದ ತುಂಬ ಜ್ವಾಲಾಮುಖಿಗಳದ್ದೇ ಮೇಲುಗೈ. ಹಳೆಯ ಚಹರೆಯನ್ನು ಈ ದ್ವೀಪ ಈಗಲೂ ಉಳಿಸಿಕೊಂಡಿದೆ. ಯಾರ ಮೇಲಿನ ಕೋಪವೋ ಎಂಬಂತೆ ಭೂಗರ್ಭದಿಂದ ಲಾವಾರಸವನ್ನು ಆಗಾಗ ಎತ್ತಿಹಾಕುತ್ತ, ತನಗೆ ತಾನೇ ಸಾಂತ್ವನ ಹೇಳಿಕೊಳ್ಳುತ್ತ ಮುಂದೆ ಇನ್ನೊಮ್ಮೆ ಕಕ್ಕಲು ಸಿದ್ಧಮಾಡಿಕೊಳ್ಳುತ್ತಿರುವಂತೆ ಕಾಣುತ್ತದೆ. ಹೀಗಿದ್ದೂ ಇದು ವಿಶ್ವ ಪರಂಪರಾ ತಾಣಕ್ಕೆ ಸೇರಿದ ಗುಟ್ಟೇನು ? ಪೆಸಿಫಿಕ್ ಸಾಗರದ ಸಿಂಗರಿಸಿದ ಒಡವೆ ಎಂಬ ಹೊಗಳಿಕೆಗೆ ಪಾತ್ರವಾದದ್ದಾದರೂ ಹೇಗೆ ? ಸೌಂದರ್ಯ ಎಂಬ ಪದಕ್ಕೆ ಮರುವ್ಯಾಖ್ಯೆಯನ್ನೇ ಏಕೆ ಮಾಡಬೇಕಾಯಿತು ? ಜೀವಿವೈವಿಧ್ಯವೇ ಇಲ್ಲಿನ ಜೀವನಾಡಿ. ಅಂಥ ವೈವಿಧ್ಯವನ್ನು ನೋಡಿ ಬೆಕ್ಕಸಬೆರಗಾಗಿ ವೈಜ್ಞಾನಿಕ ನಿಕಷಕ್ಕೆ ಒಡ್ಡಿ ‘ಇಲ್ಲಿಗೆ ಜೀವಿವಿಕಾಸದ ಗುಟ್ಟು’ ಎಂದು ಹೇಳಲು ಸಾಧ್ಯವಾದದ್ದು ಇಲ್ಲಿ. ಗಲಾಪಗಸ್ ದ್ವೀಪವೆಂದರೆ ಭೂಗ್ರಹಕ್ಕೆ ಪ್ರಕೃತಿ ದಯಪಾಲಿಸಿದ ಜೀವಿವೈವಿಧ್ಯದ ಅನುಪಮ ತಾಣ. ಇದಕ್ಕಿಂತ ಅನ್ಯಜಗತ್ತಿಲ್ಲ ಎಂದು ಡಾರ್ವಿನ್ ಹೇಳಿದ್ದರಲ್ಲಿ ಉತ್ಪ್ರೇಕ್ಷೆ ಕಾಣದು. ಗಲಾಪಗಾಸ್ ಎಂದೊಡನೆ ಥಟ್ಟನೆ ನಮ್ಮ ಕಣ್ಣೆದುರಿಗೆ ನಿಲ್ಲುವುದು ಹೆಬ್ಬಂಡೆ ಚಲಿಸಿದಂತೆ ಕಾಣುವ ದೈತ್ಯ ಆಮೆಗಳು, ಕಲ್ಲಿಗಿಂತಲೂ ಕಪ್ಪಾದ ಇಗುವಾನ ಎಂದೇ ಕರೆಯುವ ದೈತ್ಯ ಹಲ್ಲಿಗಳು. ‘ಡಾರ್ವಿನ್ ಫಿಂಚ್’ ಎಂದೇ ಹೆಸರಾದ ಹಾಡುವ ಕಾಡುಹಕ್ಕಿಗಳ ಒಂದು ಬಗೆ. ಇದರ ಜೊತೆಗೆ ಈಗ ಇಲ್ಲಿನ ಜೀವಿವೈವಿಧ್ಯವನ್ನೇ ಅಳಿಸಿ ಹಾಕಲು ಹೊರಟ ಮಾನವಪ್ರಾಣಿ. ಮುಳುಗುತ್ತಿರುವವನಿಗೆ ಆಸರೆ ದೊರೆತಂತೆ ಕಾಣುತ್ತಿರುವ ಚಾರ್ಲ್ಸ್ ಡಾರ್ವಿನ್ ಸಂಶೋಧನಾ ಕೇಂದ್ರ. ಇಲ್ಲೂ ಸ್ಪರ್ಧೆ ಇದೆ ಉಳಿವಿಗಾಗಿ, ಈಗಲೂ ಈ ಕ್ಷಣದಲ್ಲೂ. ಆದರೆ ಸಂದರ್ಭ ಮಾತ್ರ ಬೇರೆ.

ಹಾಗೆ ನೋಡಿದರೆ ‘ಈ ಪುಟ್ಟ ದ್ವೀಪದ ಎಲ್ಲ ಸಸ್ಯ, ಪಕ್ಷಿ, ಪ್ರಾಣಿಗಳ ಪ್ರಭೇದಗಳು ನಮ್ಮ ಅರಿವಿಗೆ ಬಂದಿಲ್ಲ. ನಮ್ಮೊಂದಿಗೆ ಕೈಜೋಡಿಸಿ ನಿಮ್ಮ ಜ್ಞಾನವನ್ನು ಹಂಚಿಕೊಳ್ಳಿ’ ಎಂದು ಡಾರ್ವಿನ್ ಫೌಂಡೇಶನ್ ಈಗ ಜಗತ್ತನ್ನೇ ಕೇಳಿಕೊಳ್ಳುತ್ತಿದೆ. ‘ನೀವೇನಾದರೂ ಈ ಜೀವಿ ಸಂಕುಲಗಳ  ಪಟ್ಟಿ ಮಾಡಿದ್ದರೆ ಅದನ್ನು ಕೊಡಿ. ನಾವು ಹಾಲಿ ಪಟ್ಟಿಯನ್ನು ಪರಿಷ್ಕರಿಸುತ್ತೇವೆ’ ಎಂದು ವಿನಂತಿಸಿದೆ. ಅತ್ತ ವಿಶ್ವ ಪರಂಪರಾ ತಾಣದ ಆಡಳಿತ ಕೇಂದ್ರ ಗಲಾಪಗಸ್ ಅಪಾಯದಲ್ಲಿರುವ ವಿಶ್ವ ಪರಂಪರಾ ತಾಣವೆಂದು ಘೋಷಿಸಿಬಿಟ್ಟಿದೆ. ಡಾರ್ವಿನ್ ಇಲ್ಲಿ ಕಲೆ ಹಾಕಿದ ವೈಜ್ಞಾನಿಕ ಮಾಹಿತಿಗಳು, ಮಾದರಿಗಳಿಂದಾಗಿಯೇ ಜೀವಿವಿಕಾಸ ಸಿದ್ಧಾಂತಕ್ಕೆ ನೆಲೆದೊರೆತದ್ದು. ನೈಸರ್ಗಿಕ ಆಯ್ಕೆ ಎಂಬ ಪದಪುಂಜಕ್ಕೆ ಬೆಲೆ ಬಂದುದೇ ಈ ಬಯಲು ನೈಸರ್ಗಿಕ ಪ್ರಯೋಗಾಲಯದಿಂದ ಎಂದು ಮತ್ತೆ ಮತ್ತೆ ಬೊಟ್ಟು ಮಾಡಿ ತೋರಿಸುತ್ತಿದೆ. ಗಲಾಪಗಸ್ ಎಂಬ ಹೆಸರು ಆ ದ್ವೀಪಗಳಿಗೆ ಬಂದದ್ದೇ ದೈತ್ಯ ಆಮೆಗಳಿಂದ. ಡಾರ್ವಿನ್ ದೃಷ್ಟಿಯಲ್ಲಿ ಇಲ್ಲಿರುವ ಆಮೆಗಳೆಲ್ಲವೂ ಒಂದೇ ಮೂಲದ, ಯುಗಯುಗಾಂತರಗಳ ಹಿಂದೆ ಇಲ್ಲಿಗೆ ಬಂದ ಆಮೆಯಿಂದ ಕವಲೊಡೆದ ಉಪಪ್ರಭೇದಗಳು.

ಶುಷ್ಕ ದ್ವೀಪಗಳಲ್ಲಿ ತಮ್ಮ ಬದುಕು ಆರಂಭಿಸಿದ ಆಮೆಗಳು ಕಳ್ಳಿಯ ರಸಹೀರಿಯೋ, ಸಸ್ಯಗಳ ಎಲೆ ತಿಂದೋ ಬದುಕಬೇಕಾಯಿತು. ಹೌದು. ಹಾಗೆ ಅವು ಮಾಡದೇ ಹೋಗಿದ್ದರೆ ಅವಕ್ಕೆ ಉಳಿಗಾಲವಿರಲಿಲ್ಲ ಎಂದೇ ಅವುಗಳ ಕತ್ತು ಉದ್ದವಾಗಿರಬೇಕಾಯಿತು; ಚಿಪ್ಪು ಉಚ್ಚಶೃಂಗವಾಗಿ ಮೈದಳೆಯಬೇಕಾಯಿತು, ಇದಲ್ಲವೆ ಹೊಂದಾಣಿಕೆ ಎಂದರೆ, ದ್ವೀಪದಲ್ಲಿ ನೀರಿನ ಆಸರೆ ಪಡೆದು ಧಾರಾಳವಾಗಿ ಮೇವು ಸಿಕ್ಕಿ ಬದುಕನ್ನು ನೂಕಲು ಅಷ್ಟೇನೂ ಶ್ರಮಪಡಬೇಕಾದ ಆಮೆಗಳಿಗೆ ತಮ್ಮ ಕತ್ತನ್ನು ಉದ್ದುದ್ದವಾಗಿ ಚಾಚಬೇಕಾಗಲಿಲ್ಲ. ಗೋಪುರ ರೂಪದಲ್ಲಿ ಚಿಪ್ಪು ಬೆಳೆಯಿತು. ಈ ಸರಳ ಆದರೆ ಸೂಕ್ಷ್ಮ ವಿಚಾರವನ್ನು ಗ್ರಹಿಸಿದವನು ಡಾರ್ವಿನ್. ತಪಸ್ಸೆಂದರೆ ಮೈಮರೆತು ಮೂಗು ಹಿಡಿದು ಜಗತ್ತನ್ನೇ ಕಡೆಗಣಿಸಿ ಕೂರುವುದಲ್ಲ. ಪ್ರಕೃತಿ ತನ್ನ ಮುಂದೆ ಧಾರಾಳವಾಗಿ ತೆರೆದಿಟ್ಟಿರುವ ಜೀವಿವೈಭವದ ಒಂದು ಎಳೆ ಹಿಡಿದು ಹೊರಟರೂ ಸಾಕು ಬೆಚ್ಚಿ ಬೀಳಿಸುವ, ಮೈನವಿರೇಳಿಸುವ ಅದ್ಭುತಗಳು ತಮಗೆ ತಾವೇ ಬಿಚ್ಚಿಕೊಳ್ಳುತ್ತ ಹೋಗುತ್ತವೆ. ಸೂಜಿಯ ಮೊನೆಯ ಮೇಲೆ ಲಕ್ಷ ಲಕ್ಷ ಬ್ಯಾಕ್ಟೀರಿಯ ಕೂರಬಲ್ಲವಾದರೆ, ಪಾರುಪತ್ಯ ಮಾಡಬಲ್ಲವಾದರೆ ಅದಲ್ಲವೇ ಅದ್ಭುತ ಎನ್ನುವುದು. ನಾವು ಈ ವಿಚಿತ್ರಕ್ಕೆ ನಮಿಸಲೇಬೇಕು. ಪ್ರಕೃತಿಯ ಈ ವೈವಿಧ್ಯಕ್ಕೆ ಡಾರ್ವಿನ್ ದೈವದ ಕೈವಾಡ ಕಾಣಲಿಲ್ಲ. ಆತ ಸರಳವಾಗಿ ಮನಮುಟ್ಟುವಂತೆ ಹೇಳಿದ್ದಿಷ್ಟು :

 “ಗಾಳಿ ಬೀಸುವ ಕ್ರಮದಲ್ಲಿ ಯಾವುದೇ ಉದ್ದೇಶವನ್ನೂ ಕಾಣಬಯಸುವುದು ಎಷ್ಟು ವ್ಯರ್ಥವೋ, ಜೀವಿಗಳು ಹೊಂದುವ ಬದಲಾವಣೆಯಲ್ಲಾಗಲಿ, ನೈಸರ್ಗಿಕ ಆಯ್ಕೆಯಲ್ಲಾಗಲಿ ಉದ್ದೇಶವಿದೆ ಎಂದು ವಾದಿಸುವುದು ಬರಿ ವ್ಯರ್ಥ, ಅದು ಕಾಲಹರಣವಾಗುತ್ತದೆ ಅಷ್ಟೇ” ಎಂದ. ತನ್ನ ಧಾರ್ಮಿಕ ನಂಬುಗೆಗಳೇನು ಎಂಬುದನ್ನು ಆತ ತನ್ನ ಆತ್ಮಕಥೆಯಲ್ಲಿ ಬಿಚ್ಚು ಮನಸ್ಸಿನಿಂದ ಎಲ್ಲವನ್ನೂ ತೆರೆದಿಟ್ಟಿದ್ದಾನೆ.

ಡಾರ್ವಿನ್ ಗಲಾಪಗಸ್‌ನ ಎಲ್ಲ ದ್ವೀಪಗಳಲ್ಲೂ ಇನ್ನೊಂದು ಬಗೆಯ ವಿಚಿತ್ರ ಜೀವಿಗಳನ್ನು ಕಂಡ. ಅವು ಭಾರಿ ಗಾತ್ರದ ಹಲ್ಲಿಗಳು. ಈಗ ಇಗುವಾನ ಎಂದೇ ಅವನ್ನು ಗುರುತಿಸಲಾಗಿದೆ.

“ಸದಾ ಬಚ್ಚಿಟ್ಟುಕೊಳ್ಳುವ ಸ್ವಭಾವ, ತೀರ ವಾಕರಿಕೆ ಬರುವಷ್ಟು ಕಪ್ಪು ಬಣ್ಣ. ಎಷ್ಟೋ ಸಲ ಕರಿಕಲ್ಲಿಗೂ ಅದಕ್ಕೂ ವ್ಯತ್ಯಾಸವಿಲ್ಲವೆಂದು ನನಗನ್ನಿಸಿದೆ. ಇವೂ ಅಷ್ಟೇ ದಡ್ಡಶಿಖಾ ಮಣಿಗಳು. ನಡೆಯೋ ಬಲು ನಿಧಾನ, ಧಾವಂತವೆಂಬುದು ಇಲ್ಲವೇ ಇಲ್ಲ. ದಕ್ಷಿಣ ಅಮೆರಿಕ ಖಂಡದಲ್ಲಿ ಈ ಬಗೆಯ ಜೀವಿಗಳು ಇವೆ. ಆದರೆ ಇವೇ ಬೇರೆ ಬಗೆಯವು ಎನ್ನುತ್ತಾನೆ ನನ್ನ ಜೊತೆ ಇರುವ ಪ್ರಾಣಿ ಪರಿಣತ ಮಿ. ಬೆಲ್. ಇವಕ್ಕೆ ಪುಟ್ಟ ಆದರೆ ಅಗಲವಾದ ತಲೆ ಇದೆ. ಪಂಜರವು ಅಗಲವಾಗಿದೆ. ಆದರೆ ಉದ್ದ ಮಾತ್ರ ಒಂದೇ ಪ್ರಮಾಣ. ವಿಚಿತ್ರವಾಗಿ ಕಾಣುತ್ತವೆ. ಒಂದು ಗಜ ಉದ್ದದವರೆಗೂ ಇವು ಬೆಳೆಯುತ್ತವಂತೆ. ಇದಕ್ಕಿಂತಲೂ ಉದ್ದವಾದ ಇಗುವಾನವು ಆಲ್ಬ್ ದ್ವೀಪದಲ್ಲಿದೆ. ಬೇರೆಯಲ್ಲೂ ಇಷ್ಟು ದೊಡ್ಡ ಇಗುವಾನವನ್ನು ನಾವು ಕಂಡುದಿಲ್ಲ. ಬಾಲ ಪಕ್ಕಗಳಲ್ಲಿ ಚಪ್ಪಟೆಯಾಗಿದೆ. ಆದರೆ ಧಾರಳವಾಗಿ ಈಸುತ್ತವೆ, ಈಸುವಾಗ ಹಾವಿನಂತೆ ಬಳುಕುತ್ತವೆ. ನನ್ನ ಜೊತೆಗಿರುವ ಕ್ಯಾಪ್ಟನ್ ಕಾಲ್‌ನೆಟ್ ಹೇಳುವ ಮಾತಿದು :

 “ಈ ದೈತ್ಯ ಹಲ್ಲಿಗಳು ಗುಂಪುಗುಂಪಲ್ಲಿ ಸಮುದ್ರತೀರಕ್ಕೆ ಮೀನಿಗಾಗಿ ಹೋಗುತ್ತವೆ. ಬಹುಶಃ ಮೊಸಳೆಯ ಪುಟ್ಟ ರೂಪವೇನೋ ಅನ್ನಿಸುತ್ತದೆ. ಬಿಸಿಲಲ್ಲಿ ಹಾಯಾಗಿ ಮೈಚೆಲ್ಲಿ ಮಲಗಿರುತ್ತವೆ.”

ಡಾರ್ವಿನ್‌ಗೆ ಕುತೂಹಲ ಹುಟ್ಟಿ ಒಂದರ ಹೊಟ್ಟೆ ಬಗೆದು ನೋಡಿದ. ಮೀನು ಕಾಣಿಸಲಿಲ್ಲ. ಬದಲು ಅದರ ಹೊಟ್ಟೆಯಲ್ಲಿದ್ದದ್ದು ಸಮುದ್ರಕಳೆ. ಇವುಗಳ ಜಾಲಪಾದವು ನೀರಿನಲ್ಲಿ ಈಜಲು ಅನುಕೂಲಕರವಾಗಿದೆ. ಬಹುಬೇಗ ಗಾಬರಿಯಾಗುತ್ತವೆ. ಗಾಬರಿಯಾದಾಗ ನೀರಿಗೆ ಹೋಗುವ ಬದಲು ಹಿಂದಕ್ಕೆ ಬರುತ್ತವೆ. ಅವುಗಳ ಈ ಮೂರ್ಖತನವೇ ಅವುಗಳಿಗೆ ಮುಳುವಾಗಿವೆ. ಹೊಂಚಿ ಹಾಕಿ ಹಿಡಿಯುವುದು ಬಲು ಸುಲಭ. ಡಾರ್ವಿನ್ ಹೇಳುತ್ತಾನೆ :

“ನಾನು ಎಷ್ಟೋ ಸಲ ಇಂಥ ಒಂದು ಇಗುವಾನವನ್ನು ಅಲೆಗಳು ಬರುವತ್ತ ಎಸೆಯುತ್ತಿದ್ದೆ. ಆದರೆ ಈ ಮೊದ್ದು ಜೀವಿ ಮತ್ತೆ ನನ್ನೆಡೆಗೇ ಬರುತ್ತಿತ್ತು. ಬಹುಶಃ ಈ ರಕ್ಷಣೋಪಾಯ ಅವುಗಳಿಗೆ ಜನ್ಮಗತವಾಗಿ ಬಂದ ಸ್ವಭಾವ ಎನ್ನಿಸುತ್ತಿದೆ. ಜಗತ್ತಿನ ಯಾವ ಭಾಗದಲ್ಲೂ ಇಂಥ ಹಲ್ಲಿಗಳು ನೀರಿನ ಆಶ್ರಯ ಪಡೆದು ಬದುಕಿರುವುದು ವರದಿಯಾಗಿಲ್ಲ. ಗಲಾಪಗಸ್ ಈ ದೃಷ್ಟಿಯಿಂದಲೂ ಅನನ್ಯ ನೆಲೆ. ವಿಚಿತ್ರವೆಂದರೆ ಇದರ ಜೊತೆಗೆ ನೆಲವಾಸಿ ಇಗುವಾನಗಳೂ ಉಂಟು. ಅವುಗಳ ಬಾಲ ದುಂಡು, ಜಾಲಪಾದವಿಲ್ಲ. ಏಕೆಂದರೆ ನೀರಿನಲ್ಲಿ ಈಜುವ ಅವಶ್ಯಕತೆ ಅವಕ್ಕಿಲ್ಲ. ಇವು ಬಹುತೇಕ ಈ ದ್ವೀಪಸ್ತೋಮದ ಕೇಂದ್ರ ಭಾಗಕ್ಕೆ ಸೀಮಿತವಾಗಿದೆ. ಇವನ್ನು ಮೊದಲೇ ಸೃಷ್ಟಿಸಿ ಈ ಕೇಂದ್ರದಲ್ಲಿ ಬಿಟ್ಟಿದೆಯೋ ಎಂದು ಗುಮಾನಿ ಬರುವಷ್ಟು ಅವುಗಳ ಹಂಚಿಕೆ ಮಿತಗೊಂಡಿದೆ.

ಡಾರ್ವಿನ್ ಆಮೆಯ ಗಾತ್ರವನ್ನೋ, ಇಗುವಾನದ ಸೋಂಬೇರಿ ನಡೆಯನ್ನೋ ವಿವರಿಸುವುದರಲ್ಲೇ ತೃಪ್ತನಾಗಲಿಲ್ಲ. ಮೀನಿನ ಹೊಸ ಪ್ರಭೇದಗಳನ್ನು ಸಂಗ್ರಹಿಸಿದ. ಕೀಟಗಳ ಸಂಖ್ಯೆ ಇಲ್ಲಿ ಅತ್ಯಂತ ಕಡಿಮೆ ಪ್ರಮಾಣದಲ್ಲಿವೆಯಲ್ಲ ಎಂದು ಸೋಜಿಗಪಟ್ಟ. ಹೂಬಿಡುವ ಸಸ್ಯಗಳ ನೂರು ಹೊಸ ಪ್ರಭೇದಗಳನ್ನು ತಂದ. ಒಂದೊಂದನ್ನೂ ನಿರಂತರವಾಗಿ ವಿವರವಾಗಿ ಅಧ್ಯಯನ ಮಾಡಿದ. ಅವನು ನೀಡಿದ ವರದಿಗಳೇ ‘ಸಂಶೋಧನಾ ವರದಿ’ ಎಂಬ ಹೆಸರಲ್ಲಿ ಪ್ರಕಟವಾದವು. ಬೀಗಲ್ ಯಾತ್ರೆಯಲ್ಲಿ ಕ್ಯಾಪ್ಟನ್ ಫ್ರಿಜ್ಟ್‌ರಾಯ್ ನಾಲ್ಕು ಸಂಶೋಧನಾ ಸಂಪುಟಗಳನ್ನು ಹೊರತಂದ. ಅದರಲ್ಲಿ ಮೂರನೆಯದು ಡಾರ್ವಿನ್ನನ ಸಂಶೋಧನಾ ವರದಿ. ಮುಂದೆ ಅದು ಕೃತಿಯಾಗಿ ಪ್ರಸಿದ್ಧಿ ಪಡೆದು ಜರ್ಮನಿ, ಫ್ರೆಂಚ್ ಮತ್ತು ಇತರ ಐರೋಪ್ಯ ಭಾಷೆಗಳಿಗೆ ಅನುವಾದವಾಗಿ ಡಾರ್ವಿನ್ನ ಜನಪ್ರಿಯತೆಯನ್ನು ಲೋಕಕ್ಕೇ ಸಾರಿತು. ಇಂಗ್ಲೆಂಡಿನಲ್ಲೇ ಇದರ ಎರಡನೇ ಮುದ್ರಣದ ೧೦,೦೦೦ ಪ್ರತಿಗಳು ಮಾರಾಟವಾದವು.

ಗಲಿಬಿಲಿಗೊಂಡ ಜೀವವೈವಿಧ್ಯ

ಡಾರ್ವಿನ ಗಲಾಪಗಸ್‌ನ ಜೀವಿವೈವಿಧ್ಯದ ವೈಭವವನ್ನು ಜಗತ್ತಿಗೆ ಸಾರಿ ಒಂದೂ ಮುಕ್ಕಾಲು ಶತಮಾನ ಸಂದಿದೆ. ಎಲ್ಲೆಲ್ಲೂ ಬದಲಾವಣೆಯ ಬಿರುಗಾಳಿ ಬೀಸುತ್ತಿರುವಾಗ ಜಗತ್ತೇ ಪುಟ್ಟ ಗ್ರಾಮ ಎಂದು ಮತ್ತೆ ಮತ್ತೆ ನೆನಪಿಸುತ್ತ ಆ ನುಡಿಯೇ ಕ್ಲೀಷೆಯಾಗಿರುವಾಗ ಗಲಾಪಗಸ್ ದ್ವಪ ಸ್ಪಂದಿಸದಿರಲು ಸಾಧ್ಯವೆ ? ಅಲ್ಲಿನ ವಾಸಿಗಳು ಸುಮಾರು ೪೦,೦೦೦ ಮಂದಿ ಎಂದು ಈಕ್ವೆಡಾರ್ ನಮ್ಮ ಮುಂದೆ ಅಂಕೆ ಅಂಶಗಳನ್ನು ಒದಗಿಸುತ್ತದೆ. ಅದೇ ಪುಟ್ಟ ದೇಶ ಇನ್ನೂ ಒಂದು ಮಾತು ಸೇರಿಸುತ್ತದೆ. ಅಲ್ಲಿನ ಜನಸಂಖ್ಯೆಯ ಮೂರುಪಟ್ಟು ಜನ ವರ್ಷ ವರ್ಷವೂ ಈ ದ್ವೀಪಕ್ಕೆ ಬರುತ್ತಾರೆ, ಗಲಾಪಗಸ್ ಡಾರ್ವಿನ್ ಮುಟ್ಟಿದ ನೆಲ, ಡಾರ್ವಿನ್‌ಮೆಟ್ಟಿದ ನೆಲ, ಜೀವಿವೈವಿಧ್ಯದ ಸ್ವರ್ಗ ಎಂಬ ವಿಶೇಷಣೆಗಳೇ ಸಾಕು, ಎಲ್ಲೋ ಅಡಗಿ ಕುಳಿತ ಈ ದ್ವೀಪಕ್ಕೆ ಪ್ರವಾಸಿಗರು ನುಗ್ಗಲು, ಈ ದ್ವೀಪಕ್ಕೆ ಈಗ ಕೀರ್ತಿಶನಿಯ ಕಾಟ !

೧೮ನೇ ಶತಮಾನದ ಕೊನೆಯ ವೇಳೆಗೆ ಜೇಮ್ಸ್ ಕಾರ್ನೆಟ್ ಎಂಬ ಇಂಗ್ಲಿಷ್ ಸೋಧಕ ಇಲ್ಲಿಗೆ ಬಂದು ಇಲ್ಲಿನ ಜೀವಿಗಳ ಬಗ್ಗೆ ತಪಶೀಲು ಸರ್ವೇ ಮಾಡಿ ಆತ ಬರೆದ ; “ಪೆಸಿಫಿಕ್ ಸಾಗರದಲ್ಲಿ ತಿಮಿಂಗಿಲ ಬೇಟೆಯಾಡಲು ಗಲಾಪಗಸ್ ದ್ವೀಪ ಅತ್ಯುತ್ತಮ ಕೇಂದ್ರವಾಗಿ ಬೆಳೆಯಬಲ್ಲದು. ಬಳಸಿಕೊಳ್ಳಿ” ಎಂದು ಸಲಹೆ ಬೇರೆ. ಜಲಮಾರ್ಗಕ್ಕೆ ಬೇಕಾದ ನಿಖರ ನಕ್ಷೆಯನ್ನು ತಯಾರಿಸಿಕೊಟ್ಟ. ಇದರೊಂದಿಗೆ ಪ್ರಾರಂಭವಾಯಿತು ಇಲ್ಲಿನ ತಿಮಿಂಗಿಲಗಳಿಗೆ ಪ್ರಾಣ ಸಂಕಟ. ತಮ್ಮ ಒಡಲಿನ ಕೊಬ್ಬಿನಿಂದಾಗಿ ಸಹಸ್ರಾರು ಕೂರ್ಮಗಳು ಇವರ ಬಲೆಗೆ ಬಿದ್ದವು, ಅವುಗಳ ಕೊಬ್ಬೇ ಅವುಗಳಿಗೆ ಶತ್ರುವಾಗಬಹುದೆಂದು ಎಣಿಸಲೆಂತು ? ನೀರು, ಆಹಾರ ದೀರ್ಘಕಾಲ ಇಲ್ಲದಿದ್ದರೂ ಬದುಕುವ ಈ ಜೀವಿಗಳಿಗೆ ಅವುಗಳ ಈ ಅರ್ಜಿತ ಗುಣಗಳೇ ಕೇಡುತಂದವು. ನೌಕಾ ಸಿಬ್ಬಂದಿಯ ಪಾಕಶಾಲೆಗೆ ಇವುಗಳ ಪ್ರವೇಶವಾಯಿತು. ಈ ದ್ವೀಪದಲ್ಲಿ ಫರ್‌ಸೀಲ್‌ಗಳಿವೆ ಎಂದು ಕಂಡುಕೊಂಡ ಮೇಲೆ ಅವುಗಳ ಸಂತತಿಗೂ ಬಂತು ಕುತ್ತು.

ಎರಡನೇ ಮಹಾಯುದ್ಧದ ಸಮಯದಲ್ಲಿ ಈ ದ್ವೀಪಗಳ್ಲಿ ಅಮೆರಿಕ ಮಿಲಿಟರಿ ನೆಲೆಯನ್ನು ಸ್ಥಾಪಿಸಲು ಈಕ್ವೆಡಾರ್ ಅವಕಾಶ ಕಲ್ಪಿಸಿತು. ಶತ್ರುಗಳ ಜಲಾಂತರ್ಗಾಮಿ ನೌಕೆಗಳನ್ನು ಮುಳುಗಿಸುವುದು, ಪನಾಮಾ ಕಾಲುವೆಯ ಮೇಲೆ ಕಣ್ಗಾವಲಿಡುವುದು ಮುಂದುವರಿಯಿತು. ಈ ಚಟುವಟಿಕೆಗಳ ಹಿನ್ನೆಲೆಯಲ್ಲಿ ಅಲ್ಲಿನ ಜೀವಿ ಸಂಕುಲ ಸದ್ದಿಲ್ಲದೆ ನರಳತೊಡಗಿತು, ರಾಜಕೀಯ ಬೆಳವಣಿಗೆ ಎಂದಾದರೂ ಜೀವಿಗಳ ಅಭಿವೃದ್ಧಿಗೆ ತಳಕುಹಾಕಿಕೊಂಡಿರುವುದುಂಟೆ ? ಅದೂ ನೆಲ, ಜಲದ ಲಾಲಸೆ ತಾಂಡವವಾಡುತ್ತಿರುವಾಗ ? ಈಗ ಈಕ್ವೆಡಾರ್ ಇಡೀ ದ್ವೀಪಸ್ತೋಮವನ್ನು ಮೂರು ಪ್ರಾಂತ್ಯಗಳಾಗಿ ವಿಭಜಿಸಿದೆ. ಸ್ಯಾನ್ ಕ್ರಿಸ್ಟೋಬೆಲ್, ಸಾಂತಾ ಕ್ರೂಸ್, ಇಸಬೆಲಾ ದ್ವೀಪ. ಪೋರ್ಟ್ ಮೆರಿನೋ ದ್ವೀಪ ಈ ದ್ವೀಪಸ್ತೋಮದ ರಾಜಧಾನಿ. ೧೯೬೦ರಿಂದಲೂ ಪ್ರವಾಸಿಗಳಿಗೆ ಡಾರ್ವಿನ ಮುಟ್ಟಿದ ಈ ನೆಲವನ್ನು ಅವರೂ ಮೆಟ್ಟಲೂ ಅವಕಾಶ ನೀಡಿದೆ. ಇಲ್ಲಿಂದಲೇ ಪ್ರಾರಂಭದ ಜೀವಿವೈವಿಧ್ಯದ ಸಂಕಟದ ಮತ್ತೊಂದು ಮಜಲು. ನೋಡನೋಡುತ್ತಲೇ ಜೀವಿವೈವಿಧ್ಯ ಕರಗಲು ಪ್ರಾರಂಭಿಸಿತು. ೧೯೩೬ ರಲ್ಲಿ ಶಾಸನ ಹೊರಡಿಸಿ ಜೀವಿ ಸಂರಕ್ಷಣೆಗೆ ಸರ್ಕಾರ ಮುಂದಾಯಿತು.

೧೯೫೫ ರಲ್ಲಿ ನಿಸರ್ಗ ಸಂರಕ್ಷಣೆಯ ಅಂತಾರಾಷ್ಟ್ರೀಯ ಒಕ್ಕೂಟ ಲಗುಬಗೆಯಿಂದ ಅಧ್ಯಯನ ತಂಡವೊಂದನ್ನು ಕಳುಹಿಸಿ ಅಲ್ಲಿ ಏನಾಗಿದೆ ಎಂದು ವರದಿ ತರಿಸಿತು. ಇದರ ಹಿಂದೆಯೇ ಯುನೆಸ್ಕೋ ಇನ್ನೊಂದು ಸಂಶೋಧನಾ ತಂಡ ಕಳುಹಿಸಿ ಅಲ್ಲಿನ ವಾಸ್ತವಾಂಶವನ್ನು ಅರಿತು ಸಂರಕ್ಷಣೆಗೆ ಮುಂದಾಯಿತು. ೧೯೫೯ ನ್ನು ಜಗತ್ತಿನಾದ್ಯಂತ ‘ಜೀವಿ ಪ್ರಭೇದಗಳ ಉಗಮ ಕೃತಿ ರಚನೆಯಾದ ನೂರನೇ ವರ್ಷ’ ಎಂದು ಆಚರಿಸಲಾಯಿತು. ಇದರ ಅಂಗವಾಗಿ ಈಕ್ವೆಡಾರ್ ಆ ದ್ವೀಪಸ್ತೋಮದ ಶೇ. ೯೭ ಭಾಗವನ್ನು ‘ರಾಷ್ಟ್ರೀಯ ಉದ್ಯಾನವನ’ ವೆಂದು ಸಾರಿತು. ಅದೇ ವರ್ಷ ಚಾರ್ಲ್ಸ್ ಡಾರ್ವಿನ್ ಫೌಂಡೇಶನ್ ಸ್ಥಾಪನೆಯಾಗಿ ಆ ದ್ವೀಪಸ್ತೋಮದ ಜೀವಿವೈವಿಧ್ಯದ ಉಳಿವಿಗಾಗಿ ಹೊಸ ಭರವಸೆ ಮೂಡಿಸಿತು. ಅಷ್ಟೇ ಅಲ್ಲ, ಈಗ ಅದರ ಅಡಿಯಲ್ಲೇ ಸಾಂತಾ ಕ್ರೂಸ್ ದ್ವೀಪದಲ್ಲಿ ‘ಚಾರ್ಲ್ಸ್ ಡಾರ್ವಿನ್ ಸಂಶೋಧನಾ ಕೇಂದ್ರ’ವಿದೆ. ಅಂತಾರಾಷ್ಟ್ರೀಯ ಖ್ಯಾತನಾಮ ವಿಜ್ಞಾನಿಗಳು ಸ್ವಪ್ರೇರಿತರಾಗಿ ಇಲ್ಲಿ ಬಂದು ಸಂಶೋಧನೆ ಮಾಡುತ್ತಿದ್ದಾರೆ. ಇಲ್ಲಿನ ಜೀವಿ ವೈವಿಧ್ಯವನ್ನು ಉಳಿಸಿಯೇ ತೀರುತ್ತೇವೆಂದು ದೀಕ್ಷೆ ತಳೆದಿದ್ದಾರೆ. ನೆಮ್ಮದಿಯ ಸಂಗತಿ ಎಂದರೆ ೧೯೮೬ ರಲ್ಲಿ ಗಲಾಪಗಸ್ ಸುತ್ತಣ ೭೦,೦೦೦ ಚ.ಕಿ.ಮೀ. ಜಾಗವನ್ನು ಸಾಗರ ಸೂಕ್ಷ್ಮ ಪ್ರದೇಶವೆಂದು ಈಕ್ವೆಡಾರ್ ಸಾರಿದೆ. ಗಲಾಪಗಸ್ ಜೀವಿವೈವಿಧ್ಯದ ತೆರೆದ ಮ್ಯೂಸಿಯಂ ಎಂಬ ಕಾರಣಕ್ಕಾಗಿ ೧೯೭೮ರಲ್ಲೇ ಯುನೆಸ್ಕೋ ‘ವಿಶ್ವ ಪರಂಪರಾ ತಾಣ’ವಾಗಿ ಅದನ್ನು ಘೋಷಿಸಿತು. ಇದು ತಿಳಿಯಬೇಕಾದ್ದು ಅಲ್ಲಿನ ಜೀವಿಗಳಿಲ್ಲ, ಜೀವಿಗಳನ್ನು ಉಳಿಸಬೇಕಾದ ಜನರಿಗೆ.

ಭೀತಿಯ ಅಲೆಗಳು

ಒಮ್ಮೆ ಮನುಷ್ಯನ ಪ್ರವೇಶವಾಯಿತೆಂದರೆ ಸಾಕು, ಅವನ ಹಿಂದೆಯೇ ಬರುತ್ತವೆ ಬೆಕ್ಕು, ನಾಯಿ, ಕತ್ತೆ, ಕುದುರೆ ಏನೆಲ್ಲಾ. ಗಲಾಪಗಸ್ ಸ್ಥಿತಿಯೂ ಇದಕ್ಕೆ ಹೊರತಲ್ಲ. ಈ ದ್ವೀಪಗಳಲ್ಲಿ ಕೆಲಸ ಮಾಡಲು ಬಯಸುವ ಜನರಿಂದ ದುಡ್ಡು ತಿಂದು ನಕಲಿ ಪ್ರಮಾಣಪತ್ರವನ್ನು ಪಡೆದು ದಂಡಿ ದಂಡಿಯಾಗಿ ಅನಪೇಕ್ಷಿತ ಜನರನ್ನು ಈಕ್ವೆಡಾರ್ ಕಳಿಸಿತು. ಗಲಾಪಗಸ್ ದ್ವೀಪದ ಆಡಳಿತಗಾರರಿಗೆ ಶುರುವಾಯಿತು ತಲೆನೋವು. ‘ನಮ್ಮಲ್ಲಿ ನೈರ್ಮಲ್ಯ ಕಾಪಾಡಲು ಅನುಕೂಲತೆಗಳಿಲ್ಲ, ಇನ್ನು ಜನರನ್ನು ನಿಲ್ಲಿಸಿ’ ಎಂದು ಬೊಬ್ಬೆ ಹೊಡೆದರೂ ಮಾನವ ದಂಡು ಈಗಲೂ ಸತತ ನುಗ್ಗುತ್ತಲೇ ಇದೆ. ಇದರೊಂದಿಗೆ ಈ ದ್ವೀಪಕ್ಕೆ ಅಪರಿಚಿತವಾದ ಗಿಡಗೆಂಟೆಗಳು ಬಂದವು, ಕುರಿಮೇಕೆಗಳ ಹಿಂಡು ಬಂತು. ಕಿತ್ತಲೆ, ದ್ರಾಕ್ಷಿ, ನಿಂಬೆ ಗಿಡಗಳು ಬೇರೂರಿ ನಿಂತವು. ಇಲ್ಲಿನ ಮೂಲವಾಸಿ ಜೀವಿಗಳಿಗೆ ಈ ಒಂದೊಂದೂ ಕಂಗೆಡಿಸುತ್ತಲೇ ಹೋದವು. ಇತ್ತೀಚಿನ ಸರ್ವೇ ಪ್ರಕಾರ ಅಲ್ಲಿನ ಸ್ಥಳೀಯ ಸಸ್ಯಗಳು ೫೦೦ ಎಂದು ವರದಿ. ಆದರೆ ಹೊರಗಡೆಯಿಂದ ಬಂದು ಇಲ್ಲಿ ಬೇರೂರಿರುವ ಸ್ಥಳಗಳು ೭೦೦. ಇವುಗಳಲ್ಲಿ ಹಲವನ್ನು ಇಲ್ಲಿಗೆ ತಂದವರು ಕದೀಮರೇ. ಬ್ರಿಟನ್ನಿನಿಂದ ಬಂದವರು ತಮ್ಮೊಡನೆ ಮೇಕೆಗಳನ್ನು ತಂದರು. ಪೆರುವಿನ ಜನೆರಲ್‌ಗೆ ರೇಗಿಹೋಯಿತು. ನಾಯಿಗಳ ದಂಡನ್ನು ಹಡಗಿನಲ್ಲಿ ಸಾಗಿಸಿ, ಮೇಕೆಗಳ ಹಿಂಡಿನ ಮೇಲೆ ಆಕ್ರಮಣ ಮೂಡಿಸಿದ. ಆದದ್ದೇನು ? ಮೇಕೆಗಳ ಸಂಖ್ಯೆ ಇಳಿಯಿತು, ಆದರೆ ನಾಯಿಗಳು ನೆಲೆಗೊಂಡವು.

ಫ್ಲೋರೆನಾ ಎಂಬ ದ್ವೀಪದಲ್ಲಿ ಜನವಸತಿ ಕಲ್ಪಿಸಲು ವಿಫಲವಾದಾಗ ಅದೇ ಗವರ್ನರ್ ಮಹಾಶಯ ಅಲ್ಲಿದ್ದ ಎಲ್ಲ ಸಾಕುಪ್ರಾಣಿಗಳನ್ನೂ ಬೇರೆ ಬೇರೆ ದ್ವೀಪಗಳಿಗೆ ಹಂಚಿಬಿಟ್ಟ. ಅವು ಬದುಕಬೇಕಲ್ಲ ? ಬದುಕಲು ಹೋರಾಡಬೇಕಲ್ಲ. ನಾಯಿ, ಬೆಕ್ಕುಗಳು ಪರಸ್ಪರ ವೈರಿಯಾದರೂ ಅವು ಆಹಾರಕ್ಕಾಗಿ ಅಂಡಲೆದದ್ದು ಬಹು ಸುಲಭವಾಗಿ ಕೈಸೆರೆಯಾಗುವ ಹಕ್ಕಿಗಳಿಗಾಗಿ, ಅವುಗಳ ಮೊಟ್ಟೆಗಳಿಗಾಗಿ. ಮೆಲ್ಲಗೆ ತೆವಳುವ ದೈತ್ಯ ಆಮೆಗಳ ಕತ್ತಿಗೆ ಬಾಯಿ ಹಾಕುತ್ತ ಬಂದವು. ಇಗುವಾನಗಳು ಇನ್ನೂ ಸುಲಭವಾಗಿ ತುತ್ತಾದವು. ಹಂದಿಗಳ ಕಾಟ ಹೆಚ್ಚಾಯಿತು, ಆಮೆಗಳು ಮೊಟ್ಟೆ ಇಡುವ ಜಾಗದಲ್ಲಿ ಇವುಗಳ ಬೇಟೆ ಈ ವರಾಹಾವತಾರವು ಗಲಾಪಗಸ್ ದ್ವೀಪದ ಮಟ್ಟಿಗೆ ಆಪತ್ತು ತಂದಿತು. ೧೯೫೯ ರಲ್ಲಿ ಮೀನುಗಾರರು ಪೆಂಟಾ ಎಂಬ ದ್ವೀಪದಲ್ಲಿ ಒಂದು ಜೋಡಿ ಹೆಣ್ಣು-ಗಂಡು ಮೇಕೆಗಳನ್ನು ಬಿಟ್ಟರು. ೧೯೭೩ ರಲ್ಲಿ ನ್ಯಾಷನಲ್ ಪಾರ್ಕ್ ಸರ್ವೀಸ್ ಸಂಶೋಧಕರು ಮೇಕೆ ಗಣನೆ ಮಾಡಿದಾಗ ತಬ್ಬಿಬ್ಬಾದರು. ೧೪ ವರ್ಷಗಳ ದ್ವೀಪವಾಸದಲ್ಲಿ ಮೇಕೆಗಳ ಸಂಖ್ಯೆ ೩೦,೦೦೦ ಮುಟ್ಟಿತ್ತು. ‘ಆಡುಮುಟ್ಟದ ಸೊಪ್ಪು ಇಲ್ಲ’ ಎಂಬ ನುಡಿಯೇ ಉಂಟಲ್ಲ. ದ್ವೀಪವಾಸಿ ಸಸ್ಯಹಾರಿಗಳಿಗೆ ಆಡುಗಳೇ ಶತ್ರುವಾದವು. ಈಗ ಇಸಬೆಲಾ ದ್ವೀಪದಿಂದ ಮೇಕೆ ಹೊರಗಟ್ಟುವ ಕಾರ್ಯಕ್ರಮ ಪೂರ್ಣ ಯಶಸ್ಸು ಕಂಡಿದೆ.

ಇಲ್ಲಿಗೆ ಬಂದ ಜನ ಕೋಳಿಗಳನ್ನು ತಂದರು. ಕುಕ್ಕುಟ ಕೇಂದ್ರಗಳು ತಲೆಯೆತ್ತಿದವು. ಸಂರಕ್ಷಣಾ ಯೋಜಕರಿಗೆ ದಿಗಿಲಾಯಿತು. ಎಲ್ಲೆಲ್ಲೂ ಹಕ್ಕಿಜ್ವರ ಕಾಣಿಸಿಕೊಂಡಿರುವಾಗ ಆ ಮಾರಿ ಅಲ್ಲಿಗೆ ಅಪ್ಪಳಿಸಿದರೆ ? ಮೀನುಗಾರರಿಗೂ ಸಂಕರಕ್ಷಣಾಕಾರರಿಗೂ ಸಂಘರ್ಷ ನಡೆಯುತ್ತಲೇ ಇದೆ. ಮೀನುಗಾರರಿಂದ ಇಗುವಾಸ, ಆಮೆಗಳ ಸಂತಾನಕ್ಕೆ ಕೊಡಲಿಪೆಟ್ಟು ಎಂದು ಸಂರಕ್ಷಕರ ಅಸಮಾಧಾನ. ಇನ್ನು ಮೀನುಗಾರರೋ, ‘ಈ ಸಂರಕ್ಷಕರೇ ಈ ದ್ವೀಪ ಹುಟ್ಟಿಸಿದವರಂತೆ ಬೀಗುತ್ತಾರಲ್ಲ’ ಎಂಬ ನಿಂದನೆ. ಡಾರ್ವಿನ್ ಮಾತನ್ನೇ ತಿರುಚಿ ಹೇಳುವುದಾದರೆ ‘ಸಮರ್ಥರಷ್ಟೇ ಗೆಲ್ಲುತ್ತಾರೆ’. ಇಲ್ಲವೇ ಸದ್ಯದ ಪರಿಸ್ಥಿತಿಯಲ್ಲಿ ವಂಚಿಸಿ ಗೆಲ್ಲುತ್ತಾರೆ. ‘ನ್ಯೂ ಸೆವೆನ್ ವಂಡರ್ರ‍್ಸ್‍ಆಫ್ ದಿ ವರ್ಲ್ಡ್’ ಪಟ್ಟಿಯಲ್ಲಿ ಗಲಾಪಗಸ್ ದ್ವೀಪವೂ ಇರಬೇಕೆಂದು ಜನ ಮತ ಕೊಟ್ಟರು. ಈಗ ಇಡೀ ಗಲಾಪಗಸ್ ದ್ವೀಪವೇ ಬದುಕುಳಿಯಲು ಹೋರಾಡುತ್ತಿದೆ. ಎಂಥ ವೈರುಧ್ಯ ? ಅದೂ ಡಾರ್ವಿನ್ ಮೆಟ್ಟಿದ ನೆಲದಲ್ಲಿ.

* * *