ನಮ್ಮ ಮನೆಯ ಮುಂದೊಂದು ಹೊಂಗೆ ಮರವಿದೆ. ನಾನು ಮೊದಲು ಅದನ್ನು ಗಮನಿಸಿದ್ದು ಮೂರು ವರ್ಷಗಳ ಹಿಂದೆ. ಆಗ ಇಡೀ ಮರದ ಮೇಲೆ, ಒಂದಂಗುಲ ತೊಗಟೆಯೂ ಕಾಣದಂತೆ ಮರತಿಗಣೆಗಳು ಕೂಡಿದ್ದುವು.  ವಿಷದ ಎಣ್ಣೆಯನ್ನು ತಯಾರಿಸುವ ಹೊಂಗೆಗೂ ಶತ್ರುವೇ? ಅಚ್ಚರಿಯೆನಿಸಿತ್ತು. ಹೊಂಗೆಯ ಕಥೆ ಮುಗಿಯಿತು ಎಂದೇ ಭಾವಿಸಿದ್ದೆ. ಮೂರು ವರ್ಷಗಳು ಕಳೆದಿವೆ. ಹೊಂಗೆ ಮರ ಹಸಿರಿನಿಂದ ನಳ, ನಳಿಸುತ್ತಿದೆ. ಮರತಿಗಣೆಗಳು ಅಷ್ಟಿಷ್ಟು ಇವೆಯಾದರೂ, ಮೊದಲಿನಂತೆ ಮರದ ತುಂಬಾ ಇಲ್ಲ. ವಿಷದ ಹೊಂಗೆ, ಅದರ ರಸವನ್ನು ಹೀರುವ ಮರತಿಗಣೆ ಎರಡೂ ಒಂದಕ್ಕೊಂದು ಹೊಂದಿಕೊಂಡು ಬಾಳುವಂತಿದೆ. ಈ ಜೀವಿಗಳ ಹೊಂದಾಣಿಕೆಯ ಸಾಮಥ್ರ್ಯದ ಬಗ್ಗೆ ಅಚ್ಚರಿಯಾಗುತ್ತದೆ. ವಿಷಧಾರಿ ಹೊಂಗೆ ಮರತಿಗಣೆಯ ಕಾಟಕ್ಕೆ ಹೊಂದಿಕೊಂಡಿತೋ, ಮರತಿಗಣೆ ಹೊಂಗೆಯ ವಿಷಕ್ಕೆ ಹೊಂದಿಕೊಂಡಿತೋ ಯಾರು ಬಲ್ಲರು. ಆದರೆ ಒಂದಂತೂ ಸತ್ಯ. ಈ ಹೊಂದಾಣಿಕೆಯಿಂದಲೇ ಎರಡೂ ಜೀವಿಗಳೂ ಭೂಮಿಯ ಮೇಲೆ ಬದುಕಿ ಉಳಿದಿವೆ. ಒಂದರ ಕೈಮೇಲಾಗಿದ್ದರೂ ಮತ್ತೊಂದು ಅಳಿಯಬೇಕಿತ್ತು. ಭೂಮಿಯ ಮೇಲಿರುವ ಜೀವಿಗಳ ವೈವಿಧ್ಯಕ್ಕೆ ಇಂತಹ ಹೊಂದಾಣಿಕೆಯೇ ಕಾರಣವಿರಬಹುದು ಎಂದು ಮೊತ್ತಮೊದಲಿಗೆ ಊಹಿಸಿ, ನಿರೂಪಿಸಿದ ಜೀವಿವಿಜ್ಞಾನಿ ಪ್ರಖ್ಯಾತ ಚಾಲ್ರ್ಸ್ ಡಾರ್ವಿನ್ ಹುಟ್ಟಿ ನಾಳೆಗೆ ಸರಿಯಾಗಿ ಎರಡು ಶತಮಾನಗಳು ಕಳೆಯುತ್ತವೆ (ಜನ್ಮದಿನ: 12.2.1800).

ಜೀವಿವಿಕಾಸವಾದದ ಕರ್ತೃ ಎಂದೇ ಚಾಲ್ರ್ಸ್ ಡಾರ್ವಿನ್ ಪ್ರಖ್ಯಾತ. ಈ ಭೂಮಿಯ ಮೇಲಿರುವ ಜೀವಿಗಳೆಲ್ಲವೂ ಆ ಹಿಂದೆ ಬದುಕಿದ್ದ ಜೀವಿಗಳೇ ಪರಿವರ್ತನೆಯಾಗಿ ರೂಪುಗೊಂಡವು ಎನ್ನುತ್ತದೆ ವಿಕಾಸವಾದ. ವಾಸ್ತವವಾಗಿ ವಿಕಾಸವಾದದ ಕರ್ತೃ ಡಾರ್ವಿನ್ ಒಬ್ಬನೇ ಅಲ್ಲ. ಡಾರ್ವಿನ್ ಹುಟ್ಟುವುದಕ್ಕೂ ಮೊದಲೇ ಹಲವು ಚಿಂತಕರಿಗೆ ಈ ಆಲೋಚನೆ ಬಂದಿತ್ತು. ಆದರೆ ಇದು ಹೇಗಾಗುತ್ತದೆನ್ನುವ ಬಗ್ಗೆ ಸ್ಪಷ್ಟ ಅರಿವಿರಲಿಲ್ಲ. ಹೀಗಾಗಿ ಧರ್ಮಗ್ರಂಥಗಳಲ್ಲಿ, ಅದರಲ್ಲೂ ಬೈಬಲ್ನಲ್ಲಿ ಹೇಳಿದ್ದ ಕಥೆಗಳನ್ನೇ ನಿಜವೆಂದು ಜನ ನಂಬಿದ್ದರು. ಅಂದಿನ ಯುರೋಪಿನಲ್ಲಿದ್ದ ಎಲ್ಲ ರಾಷ್ಟ್ರಗಳ ರಾಜ್ಯಾಡಳಿತದಲ್ಲಿಯೂ ಚರ್ಚ್ ಪ್ರಭಾವ ಬೀರುತ್ತಿತ್ತಾದ್ದರಿಂದ, ಧರ್ಮಭೀರುಗಳ ನಂಬಿಕೆಯೇ ವಾಸ್ತವವೆನ್ನುವಂತಾಗಿತ್ತು. ಮಾನವನೊಬ್ಬ ವಿಶಿಷ್ಟ ಸೃಷ್ಟಿ. ಆತ ಪ್ರಾಣಿಗಿಂತಲೂ ಭಿನ್ನ. ಹೀಗಾಗಿ ನಿಸರ್ಗದಲ್ಲಿರುವ ಇತರೇ ಜೀವಿಗಳು ಆತನ ಒಳಿತಿಗಾಗಿಯೇ ಇವೆ ಎನ್ನುವ ನಂಬಿಕೆಯೂ ಇತ್ತು. ಈ ನಂಬಿಕೆಯನ್ನು ಬುಡಮೇಲು ಮಾಡಿದವ ಡಾರ್ವಿನ್.  ಒಂದು ಜೀವಿ ಬಗೆಯಿಂದ ಹಲವು ಜೀವಿಬಗೆಗಳು ವಿಕಾಸವಾಗಿವೆ ಎನ್ನುವುದಕ್ಕೆ ಪುರಾವೆಯನ್ನು ಡಾರ್ವಿನ್ ಒದಗಿಸಿದ. ಹಾಗೆಯೇ ಈ ವಿಕಾಸದ ಪ್ರಕ್ರಿಯೆ ಹೇಗಿರಬಹುದು ಎನ್ನುವುದಕ್ಕೆ ತರ್ಕಬದ್ಧ ಉತ್ತರವನ್ನೂ ನೀಡಿದ. ಮಂಗನಂತಹ ಜೀವಿಯಿಂದ ಮಾನವನ ವಿಕಾಸವಾಗಿದೆ ಎಂದು ನಿರೂಪಿಸಿ, ತಾನೊಂದು ವಿಶಿಷ್ಟ ಸೃಷ್ಟಿ ಎಂದುಕೊಂಡಿದ್ದ ಮಾನವನ ಅಹಂನ್ನು ನುಚ್ಚುನೂರಾಗಿಸಿದ. ಒಟ್ಟಾರೆ ಜೀವವಿಜ್ಞಾನ ಅದುವರೆವಿಗೂ ನಡೆದು ಬಂದಿದ್ದ ಹಾದಿಯನ್ನು ಬಿಟ್ಟು ಹೊರಳಲು ನೆರವಾದ. 150 ವರ್ಷಗಳ ಹಿಂದೆ ಆತ ಪ್ರಕಟಿಸಿದ ಜೀವಿಪ್ರಬೇಧಗಳ ಉಗಮದ ಕುರಿತಾದ ಹೊತ್ತಿಗೆ ಪ್ರಪಂಚದಲ್ಲಿಯೇ ಅತ್ಯಂತ ಮರುಮುದ್ರಣ ಕಂಡ ಹೊತ್ತಿಗೆ ಎಂದು ಖ್ಯಾತಿ ಪಡೆದಿದೆ.

ಡಾರ್ವಿನ್ನ ಈ ಸಾಧನೆಗೆ ನಿಸರ್ಗದ ಬಗ್ಗೆ ಅವನಿಗಿದ್ದ ಅಪಾರ ಕುತೂಹಲವೇ ಪ್ರೇರಣೆ ಎನ್ನಬಹುದು. ಚಾಲ್ರ್ಸ್ ಡಾರ್ವಿನ್ನ ಬಾಲ್ಯವೂ ವಿದ್ವಾಂಸರ ನೆರಳಲ್ಲೇ ಆಗಿದ್ದರಿಂದ ಈ ಸಾಧನೆಗೆ ಸಾಕಷ್ಟು ನೆರವು ದೊರೆತಿದೆ ಎನ್ನುತ್ತದೆ ಚರಿತ್ರೆ. ಚಾಲ್ರ್ಸ್ ಡಾರ್ವಿನ್ನ ತಾತ ಎರಾಸ್ಮಸ್ ಡಾರ್ವಿನ್ ಇಂಗ್ಲೆಂಡಿನ ಸುಪ್ರಸಿದ್ಧ ತತ್ವಶಾಸ್ತ್ರಜ್ಞ. ಅಷ್ಟೇ ಅಲ್ಲ. ವಿಕಾಸವಾದದ ಬಗ್ಗೆ ಆತ ಸಾಕಷ್ಟು ಚಿಂತನೆಯನ್ನೂ ನಡೆಸಿದ್ದ. ಚಾಲ್ರ್ಸ್ನ ತಂದೆ ಖ್ಯಾತ ವೈದ್ಯ. ಆತನಿಗೆ ತನ್ನ ಮಗನೂ ತನ್ನಂತೆಯೇ ವೈದ್ಯವೃತ್ತಿಯಲ್ಲಿ ಬೆಳಗಬೇಕೆಂಬ ಮನಸ್ಸಿತ್ತು. ಆದರೆ ಚಿಕ್ಕಂದಿನಲ್ಲಿಯೇ ತಾಯಿಯನ್ನು ಕಳೆದುಕೊಂಡ ಚಾಲ್ರ್ಸ್ ತನ್ನದು ಉಢಾಳ ಪ್ರವೃತ್ತಿಯಾಗಿತ್ತು ಎಂದು ತನ್ನ ಆತ್ಮಕಥೆಯಲ್ಲಿ ಹೇಳಿಕೊಂಡಿದ್ದಾನೆ. ಕೀಟಗಳು ಅದರಲ್ಲೂ ದುಂಬಿಗಳ ಸಂಗ್ರಹ ಅವನ ಪ್ರಿಯ ಹವ್ಯಾಸವಾಗಿತ್ತು. ವಿವಿಧ ಬಗೆಯ ಕಲ್ಲು ಮತ್ತು ಹರಳುಗಳನ್ನೂ ಆತ ಸಂಗ್ರಹಿಸಿದ್ದ. ಚಾರಣ ಹಾಗೂ ಪಕ್ಷಿವೀಕ್ಷಣೆಯಲ್ಲಿಯೂ ಅವನಿಗೆ ಅಪಾರ ಆಸಕ್ತಿಯಿತ್ತು. ಶಾಲೆಯಲ್ಲಿ ಅತ್ಯಂತ ಸಾಧಾರಣವೆನ್ನಿಸುವಂತೆ ಅವನ ಪಾಠಗಳಿದ್ದುವು. ಆದರೆ ತನ್ನ ಹವ್ಯಾಸಗಳಿಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಹೆಚ್ಚೆಚ್ಚು ತಿಳಿದುಕೊಳ್ಳುವ ಪ್ರಯತ್ನ ಮಾಡುತ್ತಿದ್ದ. ಹಲವು ಸ್ನೇಹಿತರು ಹಾಗೂ ವಿಜ್ಞಾನಿಗಳ ಸಂಪರ್ಕವನ್ನೂ ಸಾಧಿಸಿದ. ತನಗೆ ವೈದ್ಯವಿದ್ಯೆ ಕೈಗೂಡುವುದಿಲ್ಲ ಎನ್ನುವುದು ತಿಳಿದಾಗ ಚಾಲ್ರ್ಸ್ ತಾನೇಕೆ ಪಾದ್ರಿಯಾಗಬಾರದು ಎಂದೂ ಆಲೋಚಿಸಿದ್ದನಂತೆ. ಅಂದಿನ ಕಾಲದಲ್ಲಿ ಪಾದ್ರಿಗಳಿಗೆ ವಿಶೇಷ ಗೌರವವಿತ್ತು. ಆದರೆ ಓದಿದ್ದೆಲ್ಲವೂ ಶೀ್ರವೇ ಮರೆತು ಹೋಗುತ್ತಿದ್ದುದರಿಂದ ಅದನ್ನು ಕೈ ಬಿಟ್ಟೆ ಎಂದು ಆತ ಬರೆದುಕೊಂಡಿದ್ದಾನೆ.

ಇಂತಹ ವ್ಯಕ್ತಿ ಹೊಸದೊಂದು ವಿಜ್ಞಾನ ಶಾಖೆಗೆ ನಾಂದಿ ಹಾಡಿದನೆಂದರೆ ಅಚ್ಚರಿಯಾಗುತ್ತದೆ. ನಿಸರ್ಗಾಧ್ಯಯನದಲ್ಲಿ ಅವನಿಗಿದ್ದ ಆಸಕ್ತಿಯನ್ನು ಕಂಡ ಚಾಲ್ರ್ಸ್ ಡಾರ್ವಿನ್ನ ಮಾವನ ಗೆಳೆಯ ಚಾಲ್ರ್ಸ್ನನ್ನು ಇಂಗ್ಲೆಂಡಿನಿಂದ ಶೋಧಪರ್ಯಟನಕ್ಕೆ ಹೊರಟ ಎಚ್ಎಂಎಸ್ ಬೀಗಲ್ ಎನ್ನುವ ನೌಕೆಯಲ್ಲಿ ಪ್ರಯಾಣಕ್ಕೆ ಕಳಿಸಿದ. ಹೊಸ, ಹೊಸ ಭೂಖಂಡಗಳನ್ನು ಅನ್ವೇಷಿಸಿ ಅಲ್ಲಿನ ನಿಸರ್ಗ ಸಂಪತ್ತನ್ನು, ಪ್ರಮುಖವಾಗಿ ಖನಿಜ ಸಂಪತ್ತನ್ನು, ದಾಖಲಿಸಲು ಯುರೋಪಿನ ಹಲವು ರಾಷ್ಟ್ರಗಳು ಪೈಪೋಟಿಯ ಮೇರೆಗೆ ಯಾನಗಳನ್ನು ಕೈಗೊಳ್ಳುತ್ತಿದ್ದುವು. ಬೀಗಲ್ ಕೂಡ ಇಂತಹ ಅನ್ವೇಷಣೆಗೆ ಹೊರಟಿತ್ತು. ಆಫ್ರಿಕಾದ ದಕ್ಷಿಣ ತುದಿಯಲ್ಲಿರುವ ಮಡಗಾಸ್ಕರ್  ಬಳಿ ಇರುವ ಗೆಲಾಪಗೋಸ್ ದ್ವೀಪಗಳನ್ನು ತಲುಪಿದಾಗ ಡಾರ್ವಿನ್ಗೆ ಅಚ್ಚರಿ ಮೂಡಿಸುವ ಸಂಗತಿಗಳು ಕಂಡವು. ಗೆಲಾಪಗೋಸ್ ಹಲವು ನೂರು ದ್ವೀಪಗಳ ಸಮೂಹ. ಕೆಲವೇ ಕಿಲೋಮೀಟರುಗಳ ಅಂತರವಿದ್ದರೂ, ಅಲ್ಲಿನ ದ್ವೀಪಗಳಲ್ಲಿ ಕಂಡು ಬಂದ ಫಿಂಚ್ ಜಾತಿಯ ಹಕ್ಕಿಗಳು ವೈವಿಧ್ಯಮಯವಾಗಿದ್ದುವು. ಒಂದೇ ಪ್ರಬೇಧಕ್ಕೆ ಸೇರಿದ್ದರೂ ಅವುಗಳಲ್ಲಿ ಸಾಕಷ್ಟು ವೈವಿಧ್ಯವಿತ್ತು. ಇದನ್ನು ಕಂಡ ಡಾರ್ವಿನ್ ಈ ಎಲ್ಲ ಬಗೆಯ ಹಕ್ಕಿಗಳ ಪೂರ್ವಜರೂ ಒಂದೇ ಆಗಿದ್ದಿರಬಹುದು. ಆದರೆ ಬೇರೆ, ಬೇರೆ ದ್ವೀಪಗಳನ್ನು ಸೇರಿದ ಅವು, ಅಲ್ಲಿನ ಪರಿಸರಕ್ಕೆ ತಕ್ಕಂತೆ ಹೊಂದಿಕೊಂಡು ವಿಕಾಸವಾಗಿದ್ದರಿಂದ ಭಿನ್ನವಾಗಿ ತೋರುತ್ತಿವೆ ಎಂದು ಊಹಿಸಿದ. ನಿಸರ್ಗವೇ ಅವನ್ನು ಆ ರೀತಿ ವಿಕಾಸವಾಗುವಂತೆ ಆಯ್ದುಕೊಂಡಿದೆ.  ಜೀವಿಗಳಲ್ಲಿ ಕಾಣುವ ಸಹಜ ವೈವಿಧ್ಯ, ನಿಸರ್ಗ ಹಾಗೂ ಪರಿಸರದೊಂದಿಗಿನ ಅವುಗಳ ಹೊಂದಾಣಿಕೆಗಳು ಜೀವವಿಕಾಸಕ್ಕೆ ಮೂಲ ಎಂದು ತರ್ಕಿಸಿದ.  ಕವೈವಿಧ್ಯಮಯವಾದ ಜೀವಿಗಳ ನಡುವೆ ಸತತ ಸಂರ್ಷ ನಡೆಯುತ್ತಿರುತ್ತದೆ. ಪರಿಸರದೊಂದಿಗೆ ಹೊಂದಿಕೊಳ್ಳುವ ರಚನೆಯುಳ್ಳ ಜೀವಿಗಳಷ್ಟೆ ಬದುಕುಳಿಯುತ್ತವೆಕಿ ಎಂದು ಹೇಳಿದ. ಇದೇ ಮಾತೇ ಬಲವುಳ್ಳವ ಬದುಕುಳಿಯುತ್ತಾನೆ ಎಂದು ಪ್ರಸಿದ್ಧಿಯಾಯಿತು.

ಡಾರ್ವಿನ್ನ ತರ್ಕಗಳು ಎಲ್ಲವೂ ಸರಿಯಿತ್ತು ಎನ್ನಲಾಗದು. ಅದರಲ್ಲೂ ಹಲವು ದೋಷಗಳಿದ್ದುವು. ಆದರೆ ಸಾಮಾನ್ಯರಿಗೂ ಅರ್ಥವಾಗುವ ಹಾಗೆ ಆತ ತಾನು ಒಟ್ಟು ಮಾಡಿದ ಮಾಹಿತಿಯನ್ನು ವಿಶ್ಲೇಷಿಸಿದ್ದ. ಆತನ ಮೇರುಕೃತಿ ಕಆನ್ ದಿ ಆರಿಜಿನ್ ಆಫ್ ಸ್ಪೀಶೀಸ್ಕಿ ಕೇವಲ ವೈಜ್ಞಾನಿಕ ವಿಶ್ಲೇಷಣೆಗಷ್ಟೆ ಅಲ್ಲ, ಭಾಷೆಯ ಸೊಗಸಿಗಾಗಿಯೂ ಪ್ರಸಿದ್ಧಿ ಪಡೆದಿದೆ. ಡಾರ್ವಿನ್ನ ಸಮಕಾಲೀನನಾದ ಆಲ್ಫ್ರೆಡ್ ರಸೆಲ್ ವಾಲೇಸ್ ಎನ್ನುವ ಮತ್ತೊಬ್ಬ ಪ್ರಕೃತಿ ವಿಜ್ಞಾನಿಯೂ ಡಾರ್ವಿನ್ನಂತೆಯೇ ತೀರ್ಮಾನಕ್ಕೆ ಬಂದಿದ್ದನೆಂಬುದನ್ನು ತಿಳಿದ ಡಾರ್ವಿನ್ ತನ್ನ ಪುಸ್ತಕದ ಪ್ರಕಟಣೆಯನ್ನು ಕ್ಷಿಪ್ರಗೊಳಿಸಿದನಂತೆ! ಬೀಗಲ್ ಯಾನದ ಇಪ್ಪತ್ತು ವರ್ಷ ಕಳೆದು ಆ ಪುಸ್ತಕ ಪ್ರಕಟವಾಯಿತು. ತನ್ನ ತರ್ಕಗಳು ಧರ್ಮವಿರೋಧಿಯೆನಿಸಬಹುದು ಎನ್ನುವ ಭಯ ಡಾರ್ವಿನ್ಗೆ ಇದ್ದಿರಬಹುದು.

ಅದೇನೇ ಇರಲಿ. ಬಲವಿದ್ದವನಿಗಷ್ಟೆ ಬಾಳುವೆ, ಜೀವನವೊಂದು ನಿತ್ಯ ಸಂರ್ಷ, ವೈವಿಧ್ಯತೆಯೇ ಜೀವಾಳ ಎನ್ನುವ ಉಪಮೆಗಳು ಜೀವವಿಜ್ಞಾನದಲ್ಲಿ ಮಾತ್ರವಲ್ಲ ಎಲ್ಲ ಕ್ಷೇತ್ರಗಳಲ್ಲಿಯೂ ಕಾಣಬರುತ್ತವೆ. ಮಾನವ ಚಿಂತನೆಗಳ ಮೇಲೆ ಡಾರ್ವಿನ್ನ ಚಿಂತನೆಗಳ ಪ್ರಭಾವ ಎಷ್ಟು ಗಾಢವಾಗಿದೆ ಎನ್ನುವುದಕ್ಕೆ ಇವು ಉದಾಹರಣೆ. ಯಾವುದೇ ಸಾಧನಗಳ ನೆರವಿಲ್ಲದೆ, ಕೇವಲ ಕುತೂಹಲ ಹಾಗೂ ಗಾಢ ಅಧ್ಯಯನವನ್ನೇ ಬಂಡವಾಳವನ್ನಾಗಿಟ್ಟು ಡಾರ್ವಿನ್ ಸಾಧನೆ ನಡೆಸಿದ. ನಾಳೆ ಈ ಪ್ರಕೃತಿ ಪ್ರೇಮಿಯ 200ನೇ ಹುಟ್ಟು ಹಬ್ಬ.  ಆ ಒಂದು ದಿನವಾದರೂ ನಮ್ಮ ಸುತ್ತಲಿನ ಪ್ರಕೃತಿ ಹೇಗಿದೆ ಎನ್ನುವುದನ್ನು ನೋಡಲು ಪ್ರಯತ್ನಿಸೋಣ.