(ಕ್ರಿ. ಶ. ೧೮೦೯-೧೮೮೨) (ವಿಕಾಸವಾದದ ಸಿದ್ಧಾಂತ)

ಪ್ರತಿಯೊಂದು ಜೀವಿಯೂ ದೇವರ ಪ್ರತ್ಯೇಕ ಸೃಷ್ಟಿಯಾಗಿದೆ. ಆದರ ಸ್ವರೂಪಗಳು ಬದಲಾಗುವುದಿಲ್ಲ ಅಥವಾ ಬದಲಿಸಲು ಸಾಧ್ಯವಿಲ್ಲ ಎಂಬ ನಂಬಿಕೆ ದೃಢವಾಗಿ ಬೇರೂರಿಕೊಂಡಿದ್ದ ಕಾಲವೊಂದಿತ್ತು. ಪರಿಶ್ರಮ ಪೂರ್ವಕವಾದ ಸಂಶೋಧನೆಗಳನ್ನು ಮಾಡಿದ ಡಾರ್ವಿನ್, ಆಲ್ಫೆರಡ್ ರಸಲ್ ವ್ಯಾಲೇಸ್ ಮೊದಲಾದ ವಿಜ್ಞಾನಿಗಳು ಜೀವಿಗಳ ಬೆಳವಣಿಗೆ ಕುರಿತಾದ ಸಿದ್ಧಾಂತಗಳನ್ನು ರಚಿಸಿದಾಗ ಅಂಥ ನಂಬಿಕೆಗಳಿಗೆ ಬಲವಾದ ಪೆಟ್ಟು ಬಿದ್ದಿತು. ಡಾರ್ವಿನ್ನರ ವಿಕಾಸವಾದ ಸಿದ್ಧಾಂತವಂತೂ ದೊಡ್ಡ ಕೋಲಾಹಲವನ್ನೇ ಉಂಟುಮಾಡಿತು.

ಚಾರ್ಲಸ್ ಡಾರ್ವಿನ್ ಫೆಬ್ರುವರಿ ೧೨, ೧೮೦೯ರಂದು ಶ್ರೂಷ್ ಬರ್ಗ್ ನಲ್ಲಿ ರಾಬರ್ಟ್ ಡಾರ್ವಿನ್ನರ ಐದನೆಯ ಪುತ್ರನಾಗಿ ಜನಿಸಿದರು. ಇವರ ತಂದೆ ವೈದ್ಯ. ತನ್ನ ಮಗನೂ ವೈದ್ಯನಾಗಬೇಕೆಂಬ ಅಪೇಕ್ಷೆ ಅವರಿಗೆ. ಅಂತಲೇ ಡಾರ್ವಿನ್ ಎಡಿನ್ ಬರೋ ವಿಶ್ವವಿದ್ಯಾಲಯದಲ್ಲಿ ಸ್ವಲ್ಪ ಕಾಲ ವೈದ್ಯಶಾಸ್ತ್ರದ ಅಧ್ಯಯನವನ್ನೂ ಮಾಡಿದರು. ಆದರೆ ಸಸ್ಯಶಾಸ್ತ್ರ ಮತ್ತು ಪ್ರಾಣಿಶಾಸ್ತ್ರ ಚಿಕ್ಕಂದಿನಿಂದಲೂ ಈತನ ನೆಚ್ಚಿನ ವಿಷಯಗಳಾಗಿದ್ದವು. ೧೮೨೮ರಲ್ಲಿ ಇವರು ಎಡಿನ್ ಬರೋ ವಿಶ್ವವಿದ್ಯಾಲಯಕ್ಕೆ ಶರಣು ಹೊಡೆದು ಮತಧರ್ಮ ಶಾಸ್ತ್ರದ ವ್ಯಾಸಂಗಕ್ಕಾಗಿ ಕೇಂಬ್ರಿಜ್ಜಿಗೆ ಹೋದರು. ಹೇಗೋ ಮಾಡಿ ಪದವಿ ಪಡೆಯುವಲ್ಲಿ ಸಫಲರಾದರು.

೧೮೩೧ರಲ್ಲಿ ಇವರಿಗೆ “ಬೀಗಲ್” ಎಂಬ ಹಡಗಿನಲ್ಲಿ ಐದು ವರ್ಷಗಳ ಕಾಲ ಜಗತ್ತಿನ ಬೇರೆ ಬೇರೆ ಪ್ರದೇಶಗಳ ಸಂಚಾರ ಮಾಡುವ ಅವಕಾಶ ದೊರಕಿತು. ಈ ಅವಕಾಶ ಅವರ ಜೀವನದಲ್ಲಿ ಭಾರೀ ಬದಲಾವಣೆಯನ್ನು ತಂದಿತು. ಹೋದೆಡೆಗಳಲ್ಲೆಲ್ಲ ಬೇರೆ ಬೇರೆ ಜೀವಿಗಳ ಅದರಲ್ಲೂ ವಿಶೇಷವಾಗಿ ಜಲಚರ ಜೀವಿಗಳ ಗುಣ, ವೈಶಿಷ್ಟ್ಯಗಳನ್ನು ಕುರಿತು ಅಧ್ಯಯನ ಮಾಡಲು ಡಾರ್ವಿನ್ ಅದರ ಪ್ರಯೋಜನ ಪಡೆದರು. ಸಂಚಾರ ಮುಗಿಸಿಕೊಂಡು ಬಂದ ನಂತರ ಅವರು ಅನೇಕ ಪ್ರಾಣಿಗಳನ್ನು ಕೊಂಡು ಅವುಗಳ ಬಗ್ಗೆ ಸಂಶೋಧನಾ ಕಾರ್ಯವನ್ನು ಮುಂದುವರಿಸಿದರು.

“ಮಂಗನಿಂದ ಮನುಷ್ಯ ವಿಕಾಸ ಹೊಂದಿದ” ಎಂಬ ವೈಜ್ಞಾನಿಕ ಸತ್ಯವನ್ನು ಡಾರ್ವಿನ್ ಹೊರಗೆಡವಿದಾಗ ಕಂದಾಚಾರಿಗಳು, ಧಾರ್ಮಿಕವಾದಿಗಳು ಅದನ್ನು ಉಗ್ರವಾಗಿ ತಿರಸ್ಕರಿಸಿದರು. ಆದರೆ ವಿಜ್ಞಾನಿಗಳು ಸ್ವಾಗತಿಸಿದರು. ಅಸ್ತಿತ್ವದ ಹೋರಾಟದಲ್ಲಿ ಬಲಿಷ್ಠನಾದವನು ಬದುಕಿ ಉಳಿಯುತ್ತಾನೆ ಎಂಬ ಹರ್ಬರ್ಟ್ ಸ್ಪೆನ್ಸರ್ ನ “ಸ್ವಾಭಾವಿಕ ಆಯ್ಕೆ” ಸಿದ್ಧಾಂತವನ್ನು ಡಾರ್ವಿನ್ ಮತ್ತಷ್ಟು ವಿಶದವಾಗಿ ವಿಶ್ಲೇಷಿಸಿದರು. ಅನುವಂಶಿಕತೆ, ಅಸ್ತಿತ್ವಕ್ಕಾಗಿ ಹೋರಾಟ ಮತ್ತು ಪರಿವರ್ತನೆಗಳ ಪರಿಣಾಮವಾಗಿ “ಸ್ವಾಭಾವಿಕ ಆಯ್ಕೆ” ಆಗುತ್ತದೆ. ಜೀವಿಗಳು ಉಪಯೋಗಿಸದೆ ಬಿಡುವ ಅಂಗಗಳು ಕ್ರಮೇಣ ನಶಿಸಿ ಹೋಗುತ್ತವೆ. ಯಾವಾಗಲೂ ಉಪಯೋಗಿಸುವ ಅಂಗಗಳು ಉಳಿಯುತ್ತವೆ ಮತ್ತು ಉಪಯೋಗಕ್ಕೆ ತಕ್ಕಂತೆ ಬದಲಾಗುತ್ತ ಹೋಗುತ್ತವೆ. ಉಪಯುಕ್ತ ಪರಿವರ್ತನೆಯನ್ನು ಕಾಪಾಡಿಕೊಂಡು ಅನುಪಯುಕ್ತವಾದದ್ದನ್ನು ತಿರಸ್ಕರಿಸುವುದು ಸಾಮಾನ್ಯ ಸ್ವಭಾವ ಎಂಬ ಸಿದ್ಧಾಂತವನ್ನು ಡಾರ್ವಿನ್ ಮುಂದಿಟ್ಟರು. ಈ ಅಂಶಗಳನ್ನು ಡಾರ್ವಿನ್ ತನ್ನ “ಒರಿಜಿನ್ ಆಫ್ ಸ್ಟೀಷಿಸ್” ಎಂಬ ಗ್ರಂಥದಲ್ಲಿ ವಿವರಿಸಿದ್ದಾರೆ.

ಕಾಕತಾಳೀಯವೆಂಬಂತೆ ಇನ್ನೊಬ್ಬ ಬ್ರಿಟಿಷ್ ವಿಜ್ಞಾನಿ ಆಲ್ಫ್ರೆಡ್ ರಸೆಲ್ ವ್ಯಾಲೇಸ್ ಕೂಡ ಡಾರ್ವಿನ್ ಮಾಡಿದಂಥ ಸಂಶೋಧನೆಗಳನ್ನೇ ಮಾಡಿದ್ದರು. ಆದರೆ ಡಾರ್ವಿನ್‌ರ ಸಂಶೋಧನೆಗಳು ಅತ್ಯಂತ ಕೂಲಂಕುಷವಾಗಿದ್ದವು. ಚಾರ್ಲಸ್ ಡಾರ್ವಿನ್ ಏಪ್ರಿಲ್ ೧೯, ೧೮೮೨ರಂದು ನಿಧನ ಹೊಂದಿದರು. ಅವರ ಪಾರ್ಥಿವ ಶರೀರವನ್ನು ವೆಸ್ಟ್ ಮಿನಿಸ್ಟರ್ ಅಬ್ಬೆಯಲ್ಲಿ ಸರ‍್ ಐಸಾಕ್ ನ್ಯೂಟನ್ ನ ಸಮಾಧಿಯ ಪಕ್ಕದಲ್ಲೇ ಹೂಳಲಾಯಿತು.