ಡಾ.ಅನುಪಮಾ ನಿರಂಜನ ಅವರು ಕನ್ನಡ ಸಾಹಿತ್ಯದ ಪ್ರಮುಖ ಲೇಖಕಿ. ಬಹುಮುಖ ಪ್ರತಿಭೆಯ ಸಾಹಿತಿ. ಈಕೆ ವೈದ್ಯಕೀಯ ವೃತ್ತಿ ಕೈಗೊಂಡಿದ್ದು ಲೇಖಕಿಯಾಗಿಯೂ ಸಹ ಹೆಸರು ಮಾಡಿದ್ದಾರೆ. ಬುದ್ದಿಯ ವಿಕಾಸಕ್ಕೆ ಪ್ರೇರಕವಾಗಬಲ್ಲ ವಿಚಾರ ಸಾಹಿತ್ಯದ ಜೊತೆಗೆ ವೈದ್ಯಕೀಯ ಗ್ರಂಥಗಳನ್ನು ಸಹ ರಚಿಸಿದ್ದಾರೆ. ವೈಚಾರಿಕ ಲೇಖಕ ಲೇಖಕಿಯರ ಸಾಲಿನಲ್ಲಿ ಅನುಪಮಾ ಅವರದು ದೊಡ್ಡಹೆಸರು. ಇವರು ೧೯೩೪ ರಲ್ಲಿ ತೀರ್ಥ ಹಳ್ಳಿಯಲ್ಲಿ ಜನಿಸಿದರು. ಇವರು ಎಂ.ಬಿ.ಬಿ.ಎಸ್. ವೈದ್ಯಕೀಯ ಪದವಿಯನ್ನು ಪಡೆದರು. ಇವರು ವೈದ್ಯಕೀಯ ಕ್ಷೇತ್ರದಲ್ಲಿಯೂ ಸಹ ಹೆಸರುಗಳಿಸಿದ್ದಾರೆ.

ಕನ್ನಡ ಕಾದಂಬರಿ ಕ್ಷೇತ್ರ ತನ್ನ ಆಳ ಅಗಲಗಳನ್ನು ವಿಸ್ತರಿಸಿಕೊಂಡು ಮುನ್ನಡೆಯುತ್ತಿರುವ ಸಂಧರ್ಭದಲ್ಲಿ ಈ ಲೇಖಕಿ ಕಾದಂಬರಿ ಕ್ಷೇತ್ರಕ್ಕೆ ಕಾಲಿಟ್ಟರು. ಒಬ್ಬ ಒಳ್ಳೆಯ ವೈದ್ಯರಾಗುವುದರ ಜೊತೆಗೆ ಗಟ್ಟಿ ಸಾಹಿತಿಯಾಗಿ ಬೆಳೆದುನಿಂತರು. ಕುಳಕುಂದ ಶಿವರಾಯರೆಂದೇ ಚಿರಪರಿಚಿತರಾಗಿದ್ದ ನಿರಂಜನ ಅವರೊಂದಿಗೆ ನಡೆದ ವಿವಾಹ ಲೇಖಕಿಯ ಗುರಿಯನ್ನು ಸಾದಿಸುವಲ್ಲಿ ಯಶಸ್ವಿಯಾಯಿತು.

ಡಾ.ಅನುಪಮಾರವರು ಇದುವರೆಗೆ ಇಪ್ಪತ್ತೆರಡು ಕಾದಂಬರಿಗಳನ್ನು ರಚಿಸಿದ್ದಾರೆ. ಇಪ್ಪತ್ತೆರಡು ಕಾದಂಬರಿಗಳಲ್ಲಿ ‘ಮಾಧವಿ, ಯಂತಹ ಪೌರಾಣಿಕ ಕಾದಂಬರಿಯನ್ನು ಹೊರತುಪಡಿಸಿದರೆ ಉಳಿದ ಇಪ್ಪತ್ತೊಂದು ಕಾದಂಬರಿಗಳಲ್ಲಿ ಸಾಮಾಜಿಕ ವಸ್ತುವೇ ಪ್ರಧಾನವಾಗಿದೆ. ‘ಅನಂತಗೀತ, ಶ್ವೇತಾಂಬರಿ, ‘ಹಿಮದಹೂ, ‘ಸ್ನೇಹ ಪಲ್ಲವಿ, ಮುಂತಾದ ಕಾದಂಬರಿಗಳು ಸಾಮಾಜಿಕ ಹರವನ್ನು ಅಬಿವ್ಯಕ್ತಿಸುವ ಕಾದಂಬರಿಗಳೂ ವಸ್ತು-ಪಾತ್ರ-ನಿರೂಪಣೆಯ ದೃಷ್ಟಿಯಿಂದ ತುಂಬಾ ವೈವಿಧ್ಯಮಯವಾಗಿದೆ. ‘ಕಲ್ಲೋಲ, ಇವರ ನಾಟಕ, ಕಣ್ಮಣಿ, ‘ರೂವಾರಿಯ ಲಕ್ಷ್ಮಿ, ‘ಪುಷ್ಪಕ, ಇವು ಇವರ ಕಥಾಸಂಕಲನಗಳು, ‘ಸ್ನೇಹಯಾತ್ರೆ, ‘ಅಂಗೈಯಲ್ಲಿ ಯೂರೋ ಅಮೆರಿಕ, ಇವರ ಪ್ರವಾಸ ಕಥನಗಳಾಗಿವೆ. ‘ದಿನಕ್ಕೊಂದು ಕಥೆ. ಇವರ ಪ್ರಮುಖ ಶಿಶುಸಾಹಿತ್ಯ, ಕೃತಿಯಾಗಿದೆ. ‘ಕೇಳು ಕಿಶೋರಿ, ‘ತಾಯಿಮಗು, ‘ಆರೋಗ್ಯದರ್ಶನ, ‘ಶಿಶುವೈದ್ಯ ದೀಪಿಕೆ, ಆರೋಗ್ಯಭಾಗ್ಯಕ್ಕೆ ವ್ಯಾಯಾಮ, ಇವು ಇವರ ಪ್ರಮುಖ ವೈದ್ಯಕೀಯ ಸಾಹಿತ್ಯ ಕೃತಿಗಳಾಗಿವೆ. ಇವರ ಹಲವಾರು ಕಥೆ ಹಾಗೂ ಕಾದಂಬರಿಗಳು ಭಾರತೀಯ ಇತರ ಭಾಷೆಗಳಿಗೆ ಅನುವಾದವಾಗಿದೆ. ಇವರಿಗೆ ಸಾಹಿತ್ಯ ಅಕಾಡೆಮಿ ಪುರಸ್ಕಾರ ಹಾಗೂ ಸೋವಿಯತ್ ಲ್ಯಾಂಡ್ ನೆಹರು ಪ್ರಶಸ್ತಿ ಲಬಿಸಿದೆ. ಕಾಸರಗೋಡು ಮಹಿಳಾ ಸಮ್ಮೇಳನದ ಅಧ್ಯಕ್ಷತೆ, ಮುಂಬಯಿ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯನ್ನು ವಹಿಸಿದ್ದರು.

ಪ್ರಗತಿಶೀಲರ ಪ್ರಗತಿಪರ ಧೋರಣೆ ಮತ್ತು ಬಂಡಾಯ ಮನೋಭಾವ ಹಾಗೂ ನವ್ಯರ ಆತ್ಮಶೋಧನೆ ಮತ್ತು ಕಲಾತ್ಮಕತೆ, ಈ ಎರಡೂ ಗುಣಗಳು ಡಾ.ಅನುಪಮಾರವರ ಕಾದಂಬರಿಗಳಲ್ಲಿ ಮೇಳೈಸಿವೆ. ಪ್ರಗತಿಶೀಲ-ನವ್ಯ-ನವ್ಯೋತ್ತರಕ್ಕೆ ಪರಿಚಯವಿಲ್ಲದ ವೈದ್ಯಕೀಯ ಕ್ಷೇತ್ಯದ ಅನುಭವಗಳು, ಮನೋವೈಜ್ಞಾನಿಕ ವಿಶ್ಲೇಷಣೆಗಳು ಈ ಲೇಖಕಿಯ ಕೃತಿಯಲ್ಲಿ ವಿಜೃಂಬಿಸುವುದರಿಂದ ಡಾ.ಅನುಪಮಾರವರು ಇಂದಿನ ಲೇಖಕಿಯರಲ್ಲೂ ಪ್ರಮುಖರಾಗಿ ಗಮನ ಸೆಳೆಯುತ್ತಾರೆ. ಇವರ ಕಾದಂಬರಿಗಳಲ್ಲಿ ಕಾಣುವ ವಸ್ತುನಿಷ್ಟತೆ, ಮನೋವೈಜ್ಞಾನಿಕ ವಿಶ್ಲೇಷಣೆ, ವೈಚಾರಿಕತೆ, ಬಂಡಾಯ ಪ್ರವೃತ್ತಿ, ಮಾನವೀಯ ಸಂಭಂಧಗಳ ನಿರೂಪಣೆ-ಇವೆಲ್ಲಾ ಕಾದಂಬರಿ ಕ್ಷೇತ್ರಕ್ಕೆ ಹೊಸ ಮಜಲುಗಳನ್ನು ಜೋಡಿಸಿ ಕೊಟ್ಟಿದೆ. ಆದ್ದರಿಂದ ಡಾ.ಅನುಪಮಾ ಅವರು ಕನ್ನಡದಲ್ಲಿ ವಿಶಿಷ್ಟ ಲೇಖಕಿಯಾಗಿ ನಿಲ್ಲುತ್ತಾರೆ.