ಬಹಳ ವರ್ಷಗಳ ಹಿಂದೆ, ಬೆನಾರಸಿನಲ್ಲಿ ಸಂಗೀತದ ಗೋಷ್ಠಿ. ಅನೇಕ ಹಿಂದುಸ್ತಾನಿ ಸಂಗೀತಗಾರರು ಉಪಸ್ಥಿತರಿದ್ದರು. ಅಂದಿನ ಗಾಯಕರು ಒಂದು ಅಪರೂಪದ ಠುಮರಿಯನ್ನ ಹಾಡಿದ್ದರು. ಅಲ್ಲೇ ಇದ್ದ ಪ್ರಸಿದ್ಧ ಠುಮರಿ ಗಾಯಕಿ ಸಿದ್ಧೇಶ್ವರಿದೇವಿ, ಹಾಡಿದ ವ್ಯಕ್ತಿ ಎಂ.ಆರ್. ಗೌತಮ್‌, ಎಂದು ತಿಳಿದ ಮೇಲೆ, ಆ ಠುಮರಿಯನ್ನ ಯಾರಿಂದ ಕಲಿತರೆಂದು ಕೇಳಿದರು. ಠಾಕುರ್ ಬಲದೇವ್‌ ಸಿಂಗ್‌ರವರಿಂದ ಕಲಿತದ್ದೆಂದು ಗೌತಮ್‌ ಹೇಳಿದ ಮರುದಿನವೇ ಸಿದ್ಧೇಶ್ವರಿದೇವಿ ಠಾಕುರರನ್ನು ಭೇಟಿ ಮಾಡಿದರು. ಅಷ್ಟು ಅಪರೂಪದ ರಚನೆಗಳನ್ನು ಹೀಗೆ ಚಿಕ್ಕಪುಟ್ಟ ಹುಡುಗರಿಗೆ ಹೇಳಿಕೊಡಬಾರದಿತ್ತೆಂದು ದೂರಿದರು. ಹುಡುಗನ ಸಂಗೀತದ ಸೂಕ್ಷ್ಮ ಗಮಕಗಳನ್ನು ಗ್ರಹಿಸಿ, ಶ್ರದ್ಧೆಯಿಮದ ಹಾಡುವುದರಿಂದ ಹೇಳಿಕೊಟ್ಟೆನೆಂದರು ಬಲದೇವ್‌ಸಿಂಗ್‌. ಮುಂದೆ ಅದೇ ಠುಮರಿಯನ್ನು ಗೌತಮ್‌ ಇನ್ನೊಂದು ಕಚೇರಿಯಲ್ಲಿ ಹಾಡಿದ್ದರು. ಆಗ ಸಭೆಯಲ್ಲಿದ್ದ ಅದೇ ಸಿದ್ಧೇಶ್ವರಿ ದೇವಿ, ಇವರ ಹಾಡುವಿಕೆಯನ್ನು ಕೇಳಿ, “ಠಾಕುರ್ ಸಾಹೇಬರು ಈ ಠುಮರಿಯನ್ನು ತಮಗೆ ಹೇಳಿಕೊಟ್ಟು ಬಹಳ ಒಳ್ಳೆಯದನ್ನೇ ಮಾಡಿದ್ದಾರೆ” ಎಂದು ಪ್ರಶಂಸಿಸಿದರು.

ಮಧುರೈ ರಾಮಸ್ವಾಮಿ ಗೌತಮ್‌, ೧೯.೩.೧೯೨೪ರಂದು ತಿರುಚನಾಪಳ್ಳಿಯಲ್ಲಿ ಜನಿಸಿದರು. ಇವರ ತಂದೆ ರಾಮಸ್ವಾಮಿ ಐಯ್ಯರ್ ರವರು ಭಾರತ ಸರ್ಕಾರದ ಸೇವೆಯಲ್ಲಿದ್ದರು. ಐಯ್ಯರ್ ಪಂಗಡದವರಲ್ಲಿ ಸಾಧಾರಣವಾಗಿ ಪ್ರತಿಯೊಬ್ಬರೂ ಕರ್ನಾಟಕ ಶಾಸ್ತ್ರೀಯ ಸಂಗೀತವನ್ನು ಕಲಿತಿರುತ್ತಿದ್ದರು. ಗೌತಮ್‌ ವಂಶದವರು ಇದಕ್ಕೆ ಹೊರತಾಗಿರಲಿಲ್ಲ. ಇವರು ಕೂಡ ಕರ್ನಾಟಕ ಸಂಗೀತವನ್ನು ಸಂಗೀತ ಭೂಷಣಂ ಸುಬ್ರಹ್ಮಣ್ಯಂ ಮತ್ತು ಕೃಷ್ಣ ಭಾಗವತರಲ್ಲಿ ಕಲಿತಿದ್ದರು. ನಿವೃತ್ತಿಯಾದ ಮೇಲೆ ರಾಮಸ್ವಾಮಿ ಐಯ್ಯರ್ ಬೆಂಗಳೂರಿಗೆ ಬಂದು ನೆಲೆಸಿದರು. ಇವರಿಗೆ ಬಹಳಷ್ಟು ಮಂದಿ ಹಿರಿಯ ಸಂಗೀತ ವಿದ್ವಾಂಸರ ಪರಿಚಯವಿತ್ತು. ಅವರೆಲ್ಲ ಬೆಂಗಳೂರಿಗೆ ಬಂದಾಗ ಇವರ ಮನೆಯಲ್ಲಿಯೆ ತಂಗುತ್ತಿದ್ದರು. ಹೀಗಾಗಿ ಗೌತಮ್‌ ಮತ್ತು ಇತರ ಮಕ್ಕಳಿಗೆ, ಸದಾ ಕಾಲವೂ ಒಳ್ಳೆಯ ಕರ್ನಾಟಕ ಸಂಗೀತವನ್ನ ಕೇಳುವ ಅವಕಾಶವಿತ್ತು. ಈ ಅವಕಾಶದಿಂದಾಗಿ ತಮ್ಮ ಸಂಗೀತವನ್ನು ಬಹಳಷ್ಟು ಪರಿಷ್ಕರಿಸಿಕೊಂಡರು ಗೌತಮ್‌.

ಇಂಥಾ ಒಂದು ಕರ್ನಾಟಕ ಸಂಗೀತ ಪ್ರೇಮಿಗಳ ಮನೆತನದಲ್ಲಿ ಗೌತಮ್‌ ಹುಟ್ಟಿ, ಬೆಳೆದು, ಆ ಸಂಗೀತವನ್ನು ಸಾಕಷ್ಟು ಕಲಿತು, ಹಿಂದುಸ್ತಾನಿ ಸಂಗೀತ ಪ್ರಪಂಚಕ್ಕೆ ಧುಮುಕಿದ್ದು ನಿಜವಾಗಲೂ ಅಚ್ಚರಿ ತರುವಂಥದ್ದು. ಇದರ ಹಿಂದೆ ನಡೆದಿರುವ ಪ್ರಸಂಗ ಬಹಳ ಕುತೂಹಲಕಾರಿಯಾಗಿದೆ. ಗೌತಮ್‌ ಹುಡುಗನಾಗಿದ್ದಾಗ, ಮನೆಗೆ ಒಂದು ರೇಡಿಯೋ ತಂದರಂತೆ. ಆ ಪೆಟ್ಟಿಗೆಯಿಂದ ಸಂಗೀತ ಮತ್ತು ಇತರ ಮಾತುಗಳು ಹೊಮ್ಮುವುದರ ಬಗ್ಗೆ ಹುಡುಗರೆಲ್ಲ ಕುತೂಹಲದಿಂದ ಅದರ ಗುಂಡಿಯನ್ನು ಸದಾಕಾಲ ತಿರುಗಿಸುತ್ತಿದ್ದರು. ಹಾಗೊಮ್ಮೆ ಮನೆಯಲ್ಲಿ ಹಿರಿಯರಿಲ್ಲದ ಹೊತ್ತಿನಲ್ಲಿ ಸೋದರಿಯೊಂದಿಗೆ ಗುಂಡಿಯನ್ನು ತಿರುಗಿಸುತ್ತಿದ್ದಾಗ ಮೋಡಿ ಮಾಡುವಂತಹ ಒಂದು ಸಂಗೀತವನ್ನು ಕೇಳಿದರಂತೆ. ಗಾಯಕರು ಯಾರೆಂದು ತಿಳಿಯಲು ಸಾಧ್ಯವಾಗಲಿಲ್ಲ. ಇದರಿಂದ ನಿರಾಶೆಗೊಂಡರೂ, ಆ ಹಾಡುವಿಕೆಯನ್ನು ಮರೆಯಲಾಗದೆ, ಗೌತಮ್‌ ಪ್ರತಿದಿನ ರೇಡಿಯೋದ ಗುಂಡಿಯನ್ನು ತಿರುಗಿಸುತ್ತಿದ್ದರು. ಒಂದು ದಿನ ಮತ್ತೆ ಆ ಧ್ವನಿ ರೇಡಿಯೋದಲ್ಲಿ ಕೇಳಿಸಿತು. ಸಂಗೀತ ಮುಗಿದ ಮೇಲೆ ತಿಳಿದು ಬಂದದ್ದು- ಆ ಧ್ವನಿ ಹಿಂದುಸ್ತಾನಿ ಸಂಗೀತದ ಪ್ರಸಿದ್ಧ ಗಾಯಕಿ ರೋಷನಾರ ಬೇಗಮರದ್ದೆಂದು. ಆ ಸಂಗೀತದಿಂದ ಪ್ರಭಾವಿತರಾಗಿ ಹಿಂದುಸ್ತಾನಿ ಸಂಗೀತವನ್ನು ಕಲಿಯಲೇಬೇಕೆಂದು ಪಣತೊಟ್ಟರು. ಆಗ ಬೆಂಗಳೂರಿನಲ್ಲಿ ಪ್ರಖ್ಯಾತರಾಗಿದ್ದ ಹಿಂದುಸ್ತಾನಿ ಸಂಗೀತ ವಿದ್ವಾಂಸರೆಂದರೆ ಪಂಡಿತ ಗೋವಿಂದ ವಿಠಲ ಭಾವೆಯವರು. ಅವರಲ್ಲಿ ಸಂಗೀತ ಕಲಿಯಲು ಸೇರಿದರು. ಸ್ವಲ್ಪ ಕಾಲದ ನಂತರ ಗೌತಮ್‌, ಭಾವೆಯವರ ಶಿಷ್ಯರಾಗಿದ್ದ ರಾಮರಾವ್ ನಾಯಕ್‌ರವರಲ್ಲಿ ಕಲಿಕೆ ಮುಂದುವರೆಸಿದರು. ಸುಮರು ಹನ್ನೆರಡು ವರ್ಷಗಳ ಸತತ ಅಭ್ಯಾಸದಿಂದ, ಒಬ್ಬ ಒಳ್ಳೆಯ ಗಾಯಕರಾದರು. ಅವರಿಗೆ ವಿವಿಧ ರಚನೆಗಳನ್ನು, ಇತರ ಘರಾನಾಗಳ ಶೈಲಲಿಯನ್ನು ತಿಳಿದುಕೊಳ್ಳಲು ಬಹಳ ಆಸೆಯಿತ್ತು. ಈ ಅಪೇಕ್ಷೆ ಇವರನ್ನ ಹಲವಾರು ವಿದ್ವಾಂಸರಲ್ಲಿ ಸಂಗೀತವನ್ನು ಕಲಿಯಲು ಅಪರೂಪ ರಚನೆಗಳನ್ನು ಸಂಗ್ರಹಿಸಲು ಅವಕಾಶಮಾಡಿಕೊಟ್ಟಿತು.

ರಾಮರಾವ್‌ ನಾಯಕ್‌ ಆಗ್ರಾ ಘರಾನಾದಲ್ಲಿ ಪರಿಣತರಿದ್ದರೂ ಬೇರೆ ಘರಾನಾ ಶೈಲಿಗಳನ್ನ ಅರಿತಿದ್ದರು ಹಾಗೂ ಶಿಷ್ಯನಿಗೂ ಅದರ ಅರಿವು ಮಾಡಿಕೊಟ್ಟಿದ್ದರು. ಗೌತಮ್‌ ಆಕಾಶವಾಣಿಯಲ್ಲಿ ಕೆಲಸ ಮಾಡುತ್ತಿದ್ದುದರಿಂದ ಬಹಳಷ್ಟು ಹಿರಿಯ ಕಲಾವಿದರ ಪರಿಚಯವಾಗಿತ್ತು. ಇದೆಲ್ಲ ಇವರ ಜ್ಞಾನಾರ್ಜನೆಗೆ ದಾರಿ ಮಾಡಿಕೊಟ್ಟಿತ್ತು. ಖ್ಯಾಲ್‌ ಹಾಡುಗಾರಿಕೆಯಲ್ಲಿ ಪ್ರಖ್ಯಾತರೆನಿಸಿದ್ದ ದಿಲೀಪ್‌ ಚಂದ್ರವೇದಿ, ಆಲಾಪ್‌ನಲ್ಲಿ ಅಗ್ರಗಣ್ಯರೆನಿಸಿದ್ದ ಡಾಗರ್ ಸಹೋದರರು, ಮುಂತಾದವರಿಂದ ತರಬೇತಿ ಪಡೆದರು. ಠಾಕುರ್‌ ಬಲದೇವಸಿಂಗ್‌ರಿಂದ ಅಪರೂಪ ಠುಮರಿ ಮತ್ತು ದಾದ್ರಾಗಳನ್ನೂ ಕಲಿತರು. ಠಪ್ಪಾ ರಚನೆಗಳನ್ನು ಸರಿಯಾದ ರೀತಿಯಲ್ಲಿ ಹಾಡುವುದನ್ನ ರಾಮೂಜಿ ಮಿಶ್ರಾರವರಿಂದ ಮಾರ್ಗದರ್ಶನ ಪಡೆದರು. ಗೌತಮ್‌ರವರ ಮೇಲೆ ಹೆಚ್ಚು ಪ್ರಭಾವ ಬೀರಿದವರೆಂದರೆ ಉಸ್ತಾದ್‌ ವಿಲಾಯತ್‌ ಹುಸೇನ್‌ ಖಾನ್‌ರವರ ಸೋದರ ಸಂಬಂಧಿ (nephew) ಉಸ್ತಾದ್‌ ಅನ್ವರ್ ಹುಸೇನ್‌ ಖಾನ್‌. ಇವರು ಅಪರೂಪ ರಾಗಗಳನ್ನು ವಿಸ್ತರಿಸಿ ಹಾಡುವುದರಲ್ಲಿ ಅದ್ವಿತೀಯರಾಗಿದ್ದರು. ರಾಗದ ರಸಭಾವ ತೋರಿಸುವುದರಲ್ಲಿ ಪರಿಣತರು. ಇವರಿಂದ ಸಾಕಷ್ಟು ತರಬೇತಿ ಪಡೆದು ತಾಲೀಮು ಮಾಡಿದರು. ಹೀಗೆ ಗೌತಮ್‌ ಬಹಳಷ್ಟು ಜನ ವಿದ್ವಾಂಸರಿಂದ ಮಾರ್ಗದರ್ಶನ ಪಡೆದರು ಇದರೊಂದಿಗೆ ಪ್ಯಾರಿಸ್‌ನ ಡಾ. ಕ್ಲೈನ್‌ರಲ್ಲಿ ಧ್ವನಿ ಸಂಸ್ಕರಣದ (voice culture) ಬಗ್ಗೆ ಅಧ್ಯಯನ ನಡೆಸಿದರು.

ಗೌತಮ್‌ ಆಕಾಶವಾಣಿಯ ಸೇವೆಯಲ್ಲಿದ್ದಾಗ, ಧಾರವಾಡ, ಇಂಡೋರ್, ಲಖನೌ, ಮುಂತಾದ ಅನೇಕ ಊರುಗಳಲ್ಲಿದ್ದರು. ಹಿಂದುಸ್ತಾನಿ ಸಂಗೀತ ಈ ಪ್ರದೇಶಗಳಲ್ಲಿ ಶ್ರೀಮಂತವಾಗಿತ್ತು. ಇದು ಗೌತಮರಿಗೆ ಹಿಂದುಸ್ತಾನಿ ಸಂಗೀತದಲ್ಲಿ ಜ್ಞಾನವನ್ನು ವೃದ್ಧಿಸಿಕೊಳ್ಳಲು ಬಹಳ ಸಹಾಯಕವಾಗಿತ್ತು. ಹೀಗೆ ಲಕ್ಷಣ ಮತ್ತು ಲಕ್ಷ್ಯ ಭಾಗಗಳೆರಡರಲ್ಲೂ ಗೌತಮರು ಪರಿಣತರೆನಿಸಿಕೊಂಡರು.

೧೯೬೩ರಲ್ಲಿ ಆಕಾಶವಾಣಿಯಿಂದ ಹೊರ ಬಂದ ಮೇಲೆ, ಬೆನಾರಸ್‌ ಹಿಂದೂ ವಿಶ್ವವಿದ್ಯಾಲಯದಲ್ಲಿ ಸಂಗೀತ ವಿಭಾಗದ ಮುಖ್ಯಸ್ಥರಾಗಿ ಆಯ್ಕೆಯಾದರು. ಅಲ್ಲಿ ಇವರು ಬಹಳಷ್ಟು ವಿದ್ಯಾರ್ಥಿಗಳಿಗೆ ತಮ್ಮ ವಿದ್ಯೆಯನ್ನು ಧಾರೆಯೆರೆದರು. ತಮ್ಮ ಸಮಯವನ್ನು ಹೆಚ್ಚಾಗಿ ಸಂಶೋಧನೆ, ಬೋಧನೆ, ಕಚೇರಿಯಲ್ಲಿ ಕಳೆದರು. ವಿಶ್ವವಿದ್ಯಾಲಯದ ಸೇವಾ ಅವಧಿಯಲ್ಲಿ ಗೌತಮ್‌ ಎರಡು ಡಾಕ್ಟರೇಟ್‌ಗಳನ್ನು ಪಡೆದರು. ಬೇಕಾದಷ್ಟು ಸಮ್ಮೇಳನಗಳಲ್ಲಿ ಭಾಗವಹಿಸಿದರು. ದಿ ಹೆರಿಟೇಜ್‌ ಆಫ್‌ ಇಂಡಿಯನ್‌ ಮ್ಯೂಸಿಕ್‌ ಮತ್ತು ಎವಲ್ಯೂಷನ್‌ ಆಫ್‌ ರಾಗ ಅಂಡ್‌ ತಾಳ ಇವರು ರಚಿಸಿರುವ ಎರಡು ಪ್ರಮುಖ ಗ್ರಂಥಗಳು.

೧೯೭೩ರಲ್ಲಿ ಐ.ಸಿ.ಸಿ.ಆರ್. ಪರವಾಗಿ ರಷ್ಯಾ, ಪೋಲೆಂಡ್‌, ಜೆಕೋಸ್ಲೋವಾಕಿಯಾ, ಪಶ್ಚಿಮ ಜರ್ಮನಿ, ಹಾಲೆಂಡ್‌, ಇಟಲಿ ಮುಂತಾದ ಕಡೆಗಳಲ್ಲಿ ಪ್ರವಾಸ ಮಾಡಿ ಕಚೇರಿಗಳನ್ನು ಮಾಡಿದ್ದಾರೆ. ಇವರಿಗೆ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯು ಕರ್ನಾಟಕ ಕಲಾಶ್ರೀ ಪ್ರಶಸ್ತಿ ನೀಡಿ ಗೌರವಿಸಿದೆ