ಸ್ವಯಂ ಸ್ಪೂರ್ತಿಯಿಂದ ಸಾಮಾಜಿಕ ಸೇವೆಗಳಲ್ಲಿ ತೊಡಗಿಕೊಂಡ ಹಿರಿಯ ಸಮಾಜ ಸೇವಾಕರ್ತ ಡಾ. ಎಂ.ಎಂ. ಭಟ್ (ಮರಕಿಣಿ).
೧೯೩೧ರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಆಡ್ಯನಡ್ಕದಲ್ಲಿ ಜನಿಸಿದ ಶ್ರೀಯುತರು ಆಯುರ್ವೇದ ವೈದ್ಯ ಪದವಿ ಪಡೆದು ಲಂಡನ್ ಮತ್ತು ಹ್ಯಾಂಬರ್ಗ್ ವಿವಿಗಳಲ್ಲಿ ಸ್ನಾತಕೋತ್ತರ ಪದವಿ ಪಡೆದು ತಮ್ಮ ವೈದ್ಯಕೀಯ ಸೇವೆಗೆ ಆರಿಸಿಕೊಂಡದ್ದು ತಮ್ಮ ಹಳ್ಳಿಯನ್ನೇ. ಮುಂದೆ ತಮ್ಮ ವೈದ್ಯಸೇವೆಯನ್ನು ಸಮಾಜಸೇವೆಯಾಗಿ ಪರಿವರ್ತಿಸಿಕೊಂಡು ಚಿತ್ತಾಪುರದಲ್ಲಿ ಚಿಕಿತ್ಸಾಲಯ ಸ್ಥಾಪಿಸಿ ‘ಬಡವರ ಮನೆ ಬಾಗಿಲಿಗೆ ಧನ್ವಂತರಿ’ ಎಂಬ ಸಂಚಾರಿ ವೈದ್ಯ ಘಟಕ ಸ್ಥಾಪಿಸಿ ಬಡಜನರ ಸೇವೆಗೆ ನಿಂತವರು. ೧೯೭೨ರ ಬರಗಾಲದಲ್ಲಿ ೨೫ ಹಳ್ಳಿಗಳಲ್ಲಿ ಗಂಜಿ ಕೇಂದ್ರ ತೆರೆದು ವೃದ್ಧರು ಮತ್ತು ಮಕ್ಕಳನ್ನು ಕಾಪಾಡಿದ್ದು, ೧೯೭೭ರಲ್ಲಿ ಚಂಡಮಾರುತಕ್ಕೆ ಸಿಲುಕಿದ ಆಂಧ್ರಪ್ರದೇಶದ ಕೋನ ಸೀಮೆಯ ಮೀನುಗಾರರ ೧೩ ಹಳ್ಳಿಗಳಿಗೆ ಪುನರ್ವಸತಿ ಕಲ್ಪಿಸಲು ದುಡಿದದ್ದು, ಕಲಬುರ್ಗಿ ಜಿಲ್ಲೆಯ ಕಮಲಾಪುರ ಜಲಾನಯನ ಪ್ರದೇಶಾಭಿವೃದ್ಧಿಗೆ ದುಡಿದದ್ದು, ಹೆಗ್ಗಡದೇವನ ಕೋಟೆಯ ಗಿರಿಜನರ ಸಮಗ್ರ ವಿಕಾಸ ಹಾಗೂ ಆರೋಗ್ಯ ರಕ್ಷಣೆಗೆ ದುಡಿದದ್ದು, ಕಪ್ಪು ಹಲಗೆ ಯೋಜನೆಯಲ್ಲಿ ಕಲಬುರ್ಗಿ, ರಾಯಚೂರು, ಬೀದರ್ ಜಿಲ್ಲೆಯಲ್ಲಿ 2012 ರ ದುಡಿದದ್ದು, ಬಿಹಾರ ರಾಜ್ಯದ ಸಿವಾನ್ನಲ್ಲಿ ಕುಷ್ಠರೋಗ ನಿಯಂತ್ರಣ ಕಾರ್ಯಕ್ರಮದಲ್ಲಿ ಪಾಲ್ಗೊಂಡದ್ದು, ಮುಂತಾದುವು ಇವರ ಸಮಾಜ ಸೇವೆಯ ಬಹುಮುಖ್ಯ ಘಟ್ಟಗಳು.
೩೦ವರ್ಷಕ್ಕೂ ಹೆಚ್ಚು ಕಾಲದಿಂದ ಸಮಾಜ ಸೇವೆಯಲ್ಲಿ ತೊಡಗಿರುವ, ಸಾಮಾಜಿಕ ವಿಕಾಸಕ್ಕೆ ಸಂಬಂಧಿಸಿದಂತೆ ಅನೇಕ ಲೇಖನಗಳನ್ನು ಬರೆದಿರುವ ಅನುಭವಿ, ವೈದ್ಯ, ಸಮಾಜ ಸೇವಾಕರ್ತ ಡಾ. ಎಂ.ಎಂ. ಭಟ್ ಮರಕಿಣಿ ಅವರು.
Categories