ಸುಮಾರು ೨.೯ ದಶಲಕ್ಷ ಎಕರೆಗಳಲ್ಲಿ ಬೆಳೆಯಲ್ಪಡುತ್ತಿರುವ ಬತ್ತವು ಕರ್ನಾಟಕ ರಾಜ್ಯದ ಒಂದು ಮುಖ್ಯ ಬೆಳೆ. ಈ ಬೆಳೆಯಿಂದ ಬರುತ್ತಿರುವ ವಾರ್ಷಿಕ ಉತ್ಪತ್ತಿ ಸುಮಾರು ೨.೦ ದಶಲಕ್ಷ ಟನ್ನುಗಳು. ಅಂದರೆ ಎಕರೆಗೆ ಸರಾಸರಿ ೬.೮ ಕ್ವಿಂಟಾಲ್ ಬತ್ತದ ಉತ್ಪಾದನೆಯಾದಂತಾಯಿತು. ಈ ಇಳುವರಿ ನಮ್ಮ ದೇಶದ ಸರಾಸರಿಗಿಂತ ಹೆಚ್ಚೆನಿಸಿದರೂ, ಅಭಿವೃದ್ಧಿ ಹೊಂದಿದ ದೇಶಗಳಿಗೆ ಹೋಲಿಸಿದರೆ ತುಂಬಾ ಕಡಿಮೆ. ಈ ಕಡಿಮೆ ಇಳುವರಿಗೆ ಅನೇಕ ಕಾರಣಗಳಿದ್ದರೂ ಪ್ರಮುಖ ಕಾರಣಗಳಲ್ಲಿ ಒಂದು. ಇನ್ನೂ ಹೆಚ್ಚು ಪ್ರಮಾಣದಲ್ಲಿರುವ ನಾಡ ತಳಿಗಳ ಬಳಕೆ ಎನ್ನಬಹುದು. ಈ ದೃಷ್ಟಿಯಿಂದ ಪರಿಶೀಲಿಸಿದರೆ, ಈಗಾಗಲೇ ಬಿಡುಗಡೆಯಾಗಿರುವ ಈ ಕೆಳಕಂಡ ಅನೇಕ ಹೆಚ್ಚು ಇಳುವರಿ ಕೊಡುವ ತಳಿಗಳನ್ನು ಆಯಾ ತಳಿಗಳಿಗೆ ಅನುಗುಣವಾಗಿ ಹಾಗೂ ಕ್ರಮಬದ್ಧವಾಗಿ ವ್ಯವಸಾಯ ಮಾಡಿದರೆ ಈಗಿನ ಸರಾಸರಿ ಇಳುವರಿಯನ್ನು ದ್ವಿಗುಣ ಮಾಡಲು ಸುಲಭ ಸಾಧ್ಯ.

ಜಯ: ೧೯೬೮ ರಲ್ಲಿ ಬಿಡುಗಡೆಯಾಗಿ ರಾಜ್ಯದ ಅನೇಕ ಭಾಗಗಳಿಗೆ ಉತ್ತಮ ತಳಿ ಎನಿಸಿಕೊಂಡಿದೆ. ಈ ತಳಿಯನ್ನು ತೀರ ಪ್ರದೇಶ, ಮಲೆನಾಡಿನ ಪ್ರದೇಶ ಮತ್ತು ಚೌಳು ಭೂಮಿಯನ್ನು ಬಿಟ್ಟು ಮಿಕ್ಕೆಡೆಗಳಲ್ಲಿ ಲಾಭದಾಯಕವಾಗಿ ಬೆಳೆಯಬಹುದು. ಈ ತಳಿಯನ್ನು ಮಳೆಗಾಲದಲ್ಲಿ ಜುಲೈ ೧೫ರ ನಂತರ ನಾಟಿ ಮಾಡಕೂಡದು. ಹಾಗೆ ಮಾಡಿದ್ದೇ ಆದರೆ ಹೂವು ಬರುವ ಕಾಲಕ್ಕೆ ಚಳಿಗೆ ಸಿಕ್ಕಿ ಕಾಳು ಜಳ್ಳಾಗುವ ಸಂಭವ ಹೆಚ್ಚು. ಚಳಿಗಾಲದ ಬೆಳೆಯನ್ನು ನವೆಂಬರ್ ಮೊದಲನೆಯ ವಾರದಲ್ಲಿಯೂ (ಕರಾವಳಿಯಲ್ಲಿ ಮಾತ್ರ) ಬೇಸಿಗೆ ಬೆಳೆಯನ್ನು ಫೆಬ್ರವರಿ ಆದಿಯಲ್ಲಿ ನಾಟಿ ಮಾಡಿದರೆ ಉತ್ತಮ ಫಲಿತಾಂಶ ದೊರೆಯುತ್ತದೆ. ತಾಯ್‌ಚುಂಗ್ ನೇಟೀನ್ – ೧ ಮತ್ತು ಟಿ. ೧೪೧ ತಳಿಗಳಿಂದ ರೂಪಿತವಾದ ಈ ತಳಿ ಮಳೆಗಾಲದಲ್ಲಿ ೧೪೦-೧೪೫ ದಿವಸಗಳಲ್ಲಿ, ಚಳಿಗಾಲದಲ್ಲಿ ಮತ್ತು ಬೇಸಿಗೆಯಲ್ಲಿ ೧೫೦-೧೬೧ ದಿವಸಗಳಲ್ಲಿ ಕೊಯ್ಲಿಗೆ ಬರುತ್ತದೆ. ಅಷ್ಟೇನು ಉತ್ತಮ ಕಾಳನ್ನು ಹೊಂದಿಲ್ಲದೆ ಈ ತಳಿಯು ಬೇಸಿಗೆ ಮತ್ತು ಚಳಿಗಾಲದಲ್ಲಿ ಎಕರೆಗೆ ಸುಮಾರು ೩೦.೩೫ ಕ್ವಿಂಟಾಲನ್ನು ಮತ್ತು ಮಳೆಗಾಲದಲ್ಲಿ ೨೫.೩೦ ಕ್ವಿಂಟಾಲ್ ಇಳುವರಿಯನ್ನು ಕೊಡುತ್ತದೆ.

ವಾಣಿ (ಐ.ಇ.ಟಿ. ೨೨೯೬): ಈ ತಳಿಯನ್ನು ಈ ವರ್ಷವೇ ರೈತರಿಗೆ ಬಿಡುಗಡೆ ಮಾಡಿದೆ. ಸಣ್ಣ ಕಾಳಿನ ಬೇಡಿಕೆ ಇರುವ ಪ್ರದೇಶದ ರೈತರು ಈಗಾಗಲೇ ಜಯ ತಳಿಗೆ ಬದಲಾಗಿ ಸೋನಾ ತಳಿಯನ್ನು ಬೆಳೆಯುತ್ತಿದ್ದಾರೆ. ಸೋನಾ ತಳಿಯಲ್ಲಿನ ಕಾಳು ಒಕ್ಕಣೆಯಲ್ಲಿ ಸುಲಭವಾಗಿ ಬಿಡದೆ ಇರುವ ದೋಷವನ್ನು ಐ.ಆರ್. ೮ ಮತ್ತು ಸಿ.ಆರ್. ೧೦೧೪ ತಳಿಗಳ ಸಂಕರಣದಿಂದ ಹೋಗಲಾಡಿಸಿ, ಈ ತಳಿಯನ್ನು ರೂಪಿಸಲಾಗಿದೆ. ಈ ತಳಿಯನ್ನು ಜಯ ತಳಿಯನ್ನು ಬೆಳೆಯಲು ಅನುಗುಣವಾದ ಎಲ್ಲಾ ಕಾಲ, ಹವಾಮಾನ ಮತ್ತು ಭೂಗುಣಗಳಲ್ಲಿ ಬೆಳೆಯಬಹುದು. ಈ ತಳಿಯು ಜಯ ತಳಿಗಿಂತ ಹೆಚ್ಚಿನ ಬೆಂಕಿ ರೋಗ ನಿರೋಧಕ ಶಕ್ತಿಯನ್ನು ಹೊಂದಿರುವುದು ಗಮನಾರ್ಹ. ಇಳುವರಿಯಲ್ಲಿ ಜಯ ತಳಿಯನ್ನು ಹೋಲುವ ಈ ತಳಿ ಜಯ ತಳಿಗಿಂತ ಒಂದು ವಾರ ಮುಂಚಿತವಾಗಿ ಕಟಾವಿಗೆ ಬರುತ್ತದೆ.

.ಆರ್. ೨೦: ಮಳೆಗಾಲದಲ್ಲಿ ಮೇಲೆ ನಮೂದಿಸಿದ ಎರಡು ತಳಿಗಳನ್ನು ಜುಲೈ ೧೫ರ ಒಳಗೆ ನಾಟಿ ಮಾಡಲು ಸಾಧ್ಯವಾಗದಿದ್ದಲ್ಲಿ, ಈ ತಳಿಯನ್ನು ಜುಲೈ ಕೊನೆಯವರೆವಿಗೂ ನಾಟಿ ಮಾಡಿ, ಉತ್ತಮ ಇಳುವರಿಯನ್ನು ಪಡೆಯಬಹುದು. ಈ ತಳಿಯ ವಿಶೇಷ ಗುಣವೆಂದರೆ ಅವಧಿ ೧೩೦ ರಿಂದ ೧೪೦ ದಿವಸಗಳಷ್ಟಿದ್ದು, ಕಾಳು ಕೊಯಮತ್ತೂರು ಸಣ್ಣ ಬತ್ತವನ್ನು ಹೋಲುತ್ತದೆ. ಅನ್ನವು ಬಿಡಿಯಾಗಿ ಚೆನ್ನಾಗಿ ಆಗುವುದರಿಂದಲೂ ರೈಸ್ ಟುಂಗ್ರೋ ವೈರಸ್, ಲೀಪ್ ಹಾಪರ್, ಕಾಂಡ ಕೊರೆಯುವ ಹುಳು ಇವುಗಳಿಗೆ ಹೆಚ್ಚು ತುತ್ತಾಗದೆ ಮತ್ತು ಬೆಂಕಿ ರೋಗವನ್ನು ತಕ್ಕ ಮಟ್ಟಿಗೆ ತಡೆದು ಕೊಳ್ಳುವುದು. ಈ ತಳಿಯನ್ನು ೧೯೭೪ರಲ್ಲಿ ಬಿಡುಗಡೆ ಮಾಡಲಾಯಿತು. ಈ ತಳಿಯನ್ನು ಮಲೆನಾಡಿನಲ್ಲಿ ಮಳೆಯ ಬೆಳೆಯಾಗಿ ಬೆಳೆದಾಗ ಅತಿ ಗಿಡ್ಡ ಸ್ವರೂಪವಾಗಿದ್ದು, ಸಾಧಾರಣ ಮಟ್ಟದಲ್ಲಿ ಸಾರಜನಕವನ್ನು ಹಾಕಿದರೆ ಬೀಳುವುದಿಲ್ಲ. ಸುಮಾರು ೧೬೦-೧೭೦ ದಿವಸಗಳಲ್ಲಿ ಕೊಯ್ಲಿಗೆ ಬಂದು ೨೦-೨೫ ಕ್ವಿಂಟಾಲ್ ಇಳುವರಿ ಎಕರೆಗೆ ಕೊಡುತ್ತದೆ. ಈ ತಳಿಯನ್ನು ಮಲೆನಾಡಿನ ಎಂ.ಬಿ., ಕೆ.ಬಿ., ಬಿ.ಕೆ.ಬಿ., ಬಂಗಾರ ಕೋವಿ, ರತ್ನ ಚೋಡಿ, ಹನಗಾಲ ಬತ್ತದ ಬದಲು ಬೆಳೆಯಬಹುದು. ಈಗ ಬಿಡುಗಡೆಯಾಗಿರುವ ತಳಿಗಳನ್ನೆಲ್ಲಾ ಅತಿ ಹೆಚ್ಚಿನ ಬೆಂಕಿ ರೋಗನಿರೋಧಕ ಶಕ್ತಿಯನ್ನು ಹೊಂದಿರುವ ಈ ತಳಿ ಮಲೆನಾಡಿನ ಮಳೆ ಬೆಳೆಗೆ ಕೃಷಿ ವಿಶ್ವವಿದ್ಯಾಲಯದ ನವ ಕೊಡುಗೆ.

ಮೇಲಿನ ತಳಿಗಳ ಬಗ್ಗೆ ವಿವರಿಸಿದ ವಿವರಗಳನ್ನು ಜ್ಞಾಪಕದಲ್ಲಿಟ್ಟುಕೊಂಡು ಆಯಾ ಪ್ರದೇಶ, ಕಾಲ, ಹವಾಮಾನ, ಭೂಗುಣಕ್ಕೆ ಹೊಂದುವ ಸೂಕ್ತ ತಳಿಯನ್ನು ಆರಿಸಿಕೊಂಡು ಉತ್ತಮ ಬೇಸಾಯ ಕ್ರಮಗಳನ್ನು ಅನುಸರಿಸಿದ್ದೇ ಆದರೆ ಬತ್ತವೂ ಕೂಡ ಇತರ ವಾಣಿಜ್ಯ ಬೆಳೆಯಷ್ಟೇ ಲಾಭದಾಯಕ ಬೆಳೆಯಾಗುವುದರಲ್ಲಿ ಯಾವ ಸಂಶಯವಿಲ್ಲ.