ಕರ್ನಾಟಕ ರಾಜ್ಯದಲ್ಲಿ ಸುಮಾರು ೧.೧೬ ಮಿಲಿಯನ್ ಹೆಕ್ಟೇರಿಗಿಂತಲೂ ಹೆಚ್ಚಾಗಿ ಬತ್ತವನ್ನು ಬೆಳೆಯುತ್ತಿದ್ದರೂ, ಇದರಲ್ಲಿ ಕೇವಲ ೦.೨೮ ಮಿಲಿಯನ್ ಹೆಕ್ಟೇರುಗಳಲ್ಲಿ ಮಾತ್ರ ಅಧಿಕ ಇಳುವರಿ ತಳಿಗಳನ್ನು ಬೆಳೆಯುತ್ತಿದ್ದು, ಉಳಿದ ೦.೮೮ ಮಿಲಿಯನ್ ಹೆಕ್ಟೇರುಗಳಲ್ಲಿ ಸ್ಥಳೀಯ ತಳಿಗಳನ್ನೇ ಬೆಳೆಯಲಾಗುತ್ತಿದೆ. ಸದ್ಯದಲ್ಲಿ ಜಯ, ಐ.ಆರ್. ೮, ಮಧು, ಐ.ಆರ್. ೨೦ ಮತ್ತು ಸೋನಾ (ಐ.ಎ.ಟಿ. ೧೯೯೧) ಎಂಬ ಐದು ಅಧಿಕ ಇಳುವರಿ ತಳಿಗಳು ಹಾಗೂ ಇಪ್ಪತ್ತನಾಲ್ಕು ವಿವಿಧ ರೀತಿಯ ಸ್ಥಳೀಯ ತಳಿಗಳು ರಾಜ್ಯದ ಎಲ್ಲಾ ಕಡೆಯಲ್ಲಿಯೂ ಬೆಳೆಯಲ್ಪಡುತ್ತಿವೆ. ಅಧಿಕ ಇಳುವರಿ ತಳಿ ಹಾಗೂ ಸ್ಥಳೀಯ ತಳಿಗಳ ಸರಾಸರಿ ಇಳುವರಿ ಒಂದು ಹೆಕ್ಟೇರಿಗೆ ಕ್ರಮವಾಗಿ ೩.೧೬ ಮತ್ತು ೧.೯೦ ಟನ್‌ಗಳೆಂದು ಅಂದಾಜು ಮಾಡಲಾಗಿದೆ. ರಾಜ್ಯದ ಸರಾಸರಿ ವಾರ್ಷಿಕ ಉತ್ಪನ್ನ ೨.೩೨ ಮಿಲಿಯನ್ ಟನ್ನಿನಷ್ಟಿದೆ.

ಅಧಿಕ ಇಳುವರಿ ತಳಿಗಳನ್ನು ಹೆಚ್ಚು ವಿಸ್ತೀರ್ಣದಲ್ಲಿ ಬೆಳೆಯಬೇಕೆಂಬ ಯೋಜನೆ, ಕಳೆದ ಹತ್ತು ವರ್ಷಗಳಿಂದ ಸತತವಾಗಿ ಶ್ರಮಿಸಿದ್ದರೂ ಸಹ, ಆಶಿಸಿದಷ್ಟು ಪ್ರಮಾಣದಲ್ಲಿ ಸಾಧ್ಯವಾಗಿಲ್ಲ. ಹೀಗೆ ಹೊಸ ತಳಿಗಳ ಕಡಿಮೆ ವಿಸ್ತೀರ್ಣ ಮತ್ತು ಎಕರೆವಾರು ಕಡಿಮೆ ಇಳುವರಿಗೆ ಹಲವಾರು ಕಾರಣಗಳಿವೆ.

ಕರ್ನಾಟಕ ರಾಜ್ಯದಲ್ಲಿ ಬತ್ತವನ್ನು ವಿವಿಧ ರೀತಿಯ ಮಣ್ಣು ಹಾಗೂ ಹವಾಮಾನುಗಳಲ್ಲಿ ಬೆಳೆಯಲಾಗುತ್ತಿದೆ. ಬತ್ತದ ಬೆಳೆಯ ಒಟ್ಟು ವಿಸ್ತೀರ್ಣದ ಕೇವಲ ಶೇ.೨೫ ರಷ್ಟು ಭಾಗ ಮಾತ್ರ ಸೂಕ್ತ ಮಣ್ಣು ಮತ್ತು ನೀರಾವರಿ ಸೌಲಭ್ಯಗಳನ್ನು ಹೊಂದಿದ್ದು, ಬಹು ಭಾಗ ಮುಂಗಾರು ಹವಾಗುಣಗಳ ವೈಪರೀತ್ಯಗಳಿಗೆ ತುತ್ತಾಗಿದೆ. ಕರಾವಳಿ ಪ್ರದೇಶಗಳಲ್ಲಿ ಹಾಗೂ ಮಯದಾನ ಪ್ರದೇಶದ ತಗ್ಗು ಭೂಮಿಗಳಲ್ಲಿ ಭೂಮಿಯಲ್ಲಿನ ರಸಸಾರಗಳ ವ್ಯತ್ಯಾಸ, (ಹುಳಿ ಮಣ್ಣು, ಚೌಳಿಮಣ್ಣು ಇತ್ಯಾದಿ) ಮತ್ತು ಸಣ್ಣ ಪ್ರಮಾಣದ ಪೋಷಕಾಂಶಗಳ ಕೊರತೆ (ಸತು, ಮ್ಯಾಗ್ನಿಷಿಯಂ) ಕುಗ್ಗಿಸುತ್ತಿದೆ. ಅಲ್ಲದೆ ಹಲವಾರು ರೋಗಗಳು ಮತ್ತು ಕೀಟಗಳು ಬೆಳೆಯನ್ನು ನಾಶಪಡಿಸುತ್ತಿದೆ. ಈಗ ಬಳಕೆಯಲ್ಲಿರುವ ಅಧಿಕ ಇಳುವರಿ ತಳಿಗಳು, ಮೇಲೆ ತಿಳಿಸಿರುವ ಹಲವು ಸನ್ನಿವೇಶಗಳಿಗೆ ಹೊಂದುವುದಿಲ್ಲ. ಅಲ್ಲದೆ ಪ್ರಥಮವಾಗಿ ಪ್ರಚಾರ ಮಾಡಲಾದ ಅಧಿಕ ಇಳುವರಿ ತಳಿಗಳಾದ ತಾಯ್‌ಚುಂಗ್ (ನೇಟೀವ್) ೧ ಮತ್ತು ಐ.ಆರ್. ೮ ತಳಿಗಳಿಗೆ ಒಳ್ಳೆಯ ಕಾಳು ಮತ್ತು ಅನ್ನವಾಗುವ ಗುಣವಿಲ್ಲದ್ದರಿಂದ ರೈತರು ಹೆಚ್ಚು ಹೆಚ್ಚಾಗಿ ಅಧಿಕ ಇಳುವರಿ ತಳಿಗಳನ್ನು ಬೆಳೆಯಬೇಕೆಂಬ ಆಸಕ್ತಿಯನ್ನು ಕಳೆದುಕೊಂಡಿರಬಹುದಾಗಿದೆ. ಹೀಗಾಗಿ ಕರ್ನಾಟಕ ರಾಜ್ಯದಲ್ಲಿ ಆಯಾ ಪ್ರದೇಶಗಳಿಗೆ ಸರಿ ಹೊಂದುವಂತಹ ಸೂಕ್ತ ಬತ್ತದ ತಳಿಗಳ ಸಂಶೋಧನೆ ಅತ್ಯಗತ್ಯವಾಗಿದ್ದು, ಸಂಶೋಧನಾರ್ಹವಾದ ಹಲವಾರು ಸಮಸ್ಯೆಗಳನ್ನು ಈ ಲೇಖನದಲ್ಲಿ ಉಲ್ಲೇಖಿಸಲಾಗಿದೆ.

ಪ್ರಾಮುಖ್ಯತೆಗಳಿಗೆ ಅನುಗುಣವಾಗಿ ಕೈಗೊಳ್ಳಬೇಕಾಗಿರುವ ತಳಿ ಅಭಿವೃದ್ಧಿ ಸಂಶೋಧನಾ ವಿಷಯಗಳನ್ನು ಈ ಕೆಳಕಂಡಂತೆ ಪಟ್ಟಿ ಮಾಡಬಹುದು.

೧. ಖುಷ್ಕಿ ಬೆಳೆ (ಮಳೆ ಆಶ್ರಯದಲ್ಲಿ)

೨. ಚಳಿ ನಿರೋಧಕ ಗುಣ

೩. ಕಡಿಮೆ ಕಾಲಾವಧಿ

೪. ಬೆಂಕಿರೋಗ ನಿರೋಧಕ ಗುಣ

೫. ಒಳ್ಳೆಯ ಕಾಳು ಮತ್ತು ಅನ್ನವಾಗುವ ಗುಣ

೬. ಕಣೆ ಹುಳು ನಿರೋಧಕ ಗುಣ

೭. ಚೌಳು ಮಣ್ಣಿನ ಸಾರವನ್ನು ತಡೆದುಕೊಳ್ಳುವ ಗುಣ.

 

. ಖುಷ್ಕಿ ಬೆಳೆಗಾಗಿ ಬತ್ತದ ತಳಿ ಅಭಿವೃದ್ಧಿ ಸಂಶೋಧನಾ ಕ್ರಮಗಳು:

ರಾಜ್ಯದ ಧಾರವಾಡ, ಬೆಳಗಾಂ, ಚಿಕ್ಕಮಗಳೂರು, ಶಿವಮೊಗ್ಗ ಮತ್ತು ಉತ್ತರ ಕನ್ನಡ ಜಿಲ್ಲೆಯ ಕೆಲವು ಭಾಗಗಳಲ್ಲಿ, ಸುಮಾರು ೦.೩ ಮಿಲಿಯನ್ ಹೆಕ್ಟೇರುಗಳಲ್ಲಿ ಬತ್ತವನ್ನು ಮಳೆ ಆಶ್ರಯದ ಭೂಮಿಗಳಲ್ಲಿ ಬಿತ್ತಿ ಬೆಳೆಯಲಾಗುತ್ತಿದೆ. ಸಾಮಾನ್ಯವಾಗಿ ಮೇ, ಜೂನ್ ತಿಂಗಳ ಮೊದಲ ಮಳೆಯಾದ ನಂತರವೇ ಬತ್ತವನ್ನು ಬಿತ್ತನೆ ಮಾಡುತ್ತಾರೆ. ಬಹಳವಾಗಿ, ದೊಡ್ಡಿಗ (ಡಿ. ೬-೨-೨), ವಾನರ ೧, ಎ-೨೦೦, ಎಂ. ೮೧, ಹೊಲಮಲ್ಡಿಗ, ಎ-೬೭ ಎ- ೯೦, ಹೊನಸು, ಕಿರ್ವಾನ, ಪುಟ್ಟ ಬತ್ತ, ಚಿಪ್ಪಿಗ ಇತ್ಯಾದಿ ಸ್ಥಳೀಯ ತಳಿಗಳನ್ನು ಬೆಳೆಯುತ್ತಿದ್ದಾರೆ. ಈ ತಳಿಗಳು ಪೋಷಣೆಗೆ ತಕ್ಕಂತೆ ಇಳುವರಿ ಕೊಡುವುದಿಲ್ಲ ಮತ್ತು ಕಾಳು ಉತ್ತಮವಲ್ಲ. ಸರಾಸರಿ ಇಳುವರಿ ಒಂದು ಹೆಕ್ಟೇರಿಗೆ ಒಂದು ಟನ್ ಗಿಂತಲೂ ಕಡಿಮೆ ಎಂದು ಹೇಳಬಹುದು. ಆದ್ದರಿಂದ ತಳಿ ಅಭಿವೃದ್ಧಿ ಮತ್ತು ಇತರ ಬೇಸಾಯ ಕ್ರಮಗಳ (ಮುಖ್ಯವಾಗಿ ಕಳೆ ನಿಯಂತ್ರಣ ಮತ್ತು ನೀರಿನ ಉಪಯೋಗ) ಸಂಶೋಧನೆಗೆ ಬಹಳ ಅವಕಾಶಗಳಿವೆ.

ಸಂಕರಣ (hybridzation) ಆಯ್ಕೆ ಮತ್ತು ಗುಣ ನಿರ್ಧಾರ ಕ್ರಮಗಳ ಮೂಲಕ ಮಳೆ ಆಶ್ರಯದ ಬಿತ್ತನೆ ಬೆಳೆಗಾಗಿ ಸೂಕ್ತ ಅಧಿಕ ಇಳುವರಿ ಬತ್ತದ ತಳಿಗಳನ್ನು ಗುರುತಿಸಲು ಸಾಧ್ಯ. ೧೯೬೮ ರಲ್ಲಿ ಪ್ರಾರಂಭಿಸಲಾದ ಈ ಯೋಜನೆಯಲ್ಲಿ ವಾನರ್ ೧, ಐ.ಆರ್. ೮ ಮತ್ತು ಎಸ್.ಆರ್. ೨೬ ಬಿ ಗಳನ್ನು ಸಂಕರಣ ಮಾಡಿ, ಎಂ.ಆರ್. ೨೬೧, ಎಂ.ಆರ್. ೨೬೨ ಮತ್ತು ಎಂ.ಆರ್. ೧೮ ಎಂಬ ತಳಿಗಳನ್ನು ಪಡೆಯಲಾಯಿತು. ಈ ದಿಸೆಯಲ್ಲಿ ಪ್ರಗತಿ ಸಾಕಷ್ಟು ಗಮನಾರ್ಹವಾಗಿಲ್ಲವಾದ್ದರಿಂದ ಇನ್ನೂ ಹೆಚ್ಚಿನ ಸಂಶೋಧನೆ ಅಗತ್ಯ.

. ಚಳಿ ತಡೆದುಕೊಳ್ಳುವ ಬತ್ತದ ತಳಿಗಾಗಿ ಸಂಕರಣಾ ಕ್ರಮಗಳು:

ಬತ್ತದ ಪೈರಿನಲ್ಲಿ ಹೂವಾಗುವಿಕೆ, ಪರಾಗದರ್ಶನ ಮತ್ತು ಪರಾಗದಾನ ಕ್ರಮಗಳು ಉಷ್ಣಾಂಶದ ಏರಿಳಿತಗಳಿಗೆ ಸೂಕ್ಷ್ಮ ಪ್ರತಿಕ್ರಿಯೆ ತೋರುತ್ತದೆ. ಉಷ್ಣಾಂಶ ೧೮ಗಿಂತ ಕಡಿಮೆ ಇದ್ದಾಗ ಹೂವಾದರೆ, ಸಸ್ಯ ಬೆಳವಣಿಗೆ, ಪುಷ್ಪಗುಚ್ಛ ಹೊರಬರುವಿಕೆ ಹಾಗೂ ಕಾಳು ಕಟ್ಟುವುದು ಮತ್ತು ಹಾಲು ತುಂಬುವಿಕೆಗೆ ಹಾನಿಯಾಗುತ್ತದೆ.

ಕೆರೆ ಆಶ್ರಯದ ಪ್ರದೇಶಗಳಲ್ಲಿ (ಬೆಂಗಳೂರು, ಕೋಲಾರ ಮತ್ತು ತುಮಕೂರು) ತಡವಾದ ಮಳೆಯಿಂದಾಗಿ ಕೆರೆಗಳಲ್ಲಿ ನೀರು ತಡವಾಗಿ ತುಂಬಿಕೊಳ್ಳುವುದರಿಂದ ಸಾಮಾನ್ಯವಾಗಿ ಮುಂಗಾರಿನ ಕೊನೆಯ ದಿನಗಳಲ್ಲಿ (ಆಗಸ್ಟ್, ಸೆಪ್ಟೆಂಬರ್) ಬತ್ತವನ್ನು ನಾಟಿ ಮಾಡುವುದು ಅನಿವಾರ್ಯವಾಗುತ್ತದೆ. ನಾಲಾ ಆಶ್ರಯದ ಭೂಮಿಗಳಲ್ಲಿಯು ಸಹ (ಮೈಸೂರು, ಮಂಡ್ಯ, ಹಾಸನ, ಶಿವಮೊಗ್ಗ) ತಡವಾದ ಮಳೆ, ನಾಲೆಯ ಕೊನೆಯ ಭಾಗದ ಅಚ್ಚುಕಟ್ಟಿನಲ್ಲಿರುವ ಜಮೀನು ಹಾಗೂ ಕಬ್ಬಿಣ ಬೆಳೆಯ ಕಟಾವಿನ ನಂತರ ಬತ್ತ ಬೆಳೆಯುವುದು ಕಾರಣಗಳಿಂದಾಗಿ, ಬತ್ತವನ್ನು ಮುಂಗಾರಿನ ಕೊನೆಯ ದಿನಗಳಲ್ಲಿ ನಾಟಿ ಮಾಡುತ್ತಿರುವುದು ಸರ್ವೇ ಸಾಮಾನ್ಯ. ಜುಲೈ ತಿಂಗಳಾದ ಮೇಲೆ ನಾಟಿ ಮಾಡಿದ ಜಯ, ಐ.ಆರ್. ೮, ಐ.ಆರ್. ೨೦ ಮತ್ತು ಸೋನಾ ತಳಿಗಳಲ್ಲಿ ಚಳಿಯಿಂದಾಗಿ ಪುಷ್ಪ ಗುಚ್ಚ ಸರಿಯಾಗಿ ಹೊರಬರದೆ, ಕಾಳುಗಳು ನಿರ್ದಿಷ್ಟ ಮಟ್ಟದಲ್ಲಿ ಕಟ್ಟುವುದಿಲ್ಲ ಅಥವಾ ತುಂಬುವುದಿಲ್ಲ. ಪರಿಣಾಮವಾಗಿ ಇಳುವರಿ ಬಹಳವಾಗಿ ಕುಗ್ಗುತ್ತದೆ.

ಸಿ.ಹೆಟ್. ೧೦೩೯, ಸಿ.ಎಚ್. ೯೮೮, ಸಿ.ಎಚ್. ೨, ಸಿ.ಎಚ್. ೪೫, ಎಸ್. ೭೦೫ ಮತ್ತು ಎಸ್. ೩೧೭ ತಳಿಗಳಿಗೆ ಸಾಕಷ್ಟು ಮಟ್ಟಿಗೆ ಚಳಿಯನ್ನು ತಡೆದುಕೊಳ್ಳುವ ಗುಣವಿದೆ. ಈ ಗುಣವನ್ನು ಅಧಿಕ ಇಳುವರಿ ತಳಿಗಳಿಗೆ ವರ್ಗಾಯಿಸಲು ೧೯೬೯ರ ವೇಳೆಗೆ ಮಧು (ಎಂ.ಆರ್. ೧೩೬) ಬತ್ತದ ತಳಿಯನ್ನು ಕಂಡು ಹಿಡಿದಾಗ, ಈ ಸಮಸ್ಯೆಗೆ ಸ್ವಲ್ಪ ಮಟ್ಟಿಗೆ ಪರಿಹಾರ ದೊರಕಿತು. ಮಧು ಅಲ್ಪ ಕಾಲಾವಧಿ ಮತ್ತು ಅಧಿಕ ಇಳುವರಿ ತಳಿ ಇದನ್ನು ಕೆರೆ ಆಶ್ರಿತ ಭೂಮಿಯಲ್ಲಿ ಆಗಸ್ಟ್ ಮಧ್ಯ ಭಾಗದವರೆಗೆ ಮತ್ತು ನಾಲಾ ಆಶ್ರಿತ ಭೂಮಿಯಲ್ಲಿ ಆಗಸ್ಟ್ ಕೊನೆಯವರೆಗೆ ನಾಟಿ ಮಾಡಬಹುದು. ಇದು ಅಲ್ಪ ಕಾಲಾವಧಿ ತಳಿಯಾದ್ದರಿಂದ ಚಳಿಗಾಲ ಪ್ರಾರಂಭವಾಗುವುದಕ್ಕೆ ಮುಂಚೆಯೇ ಹೂ ಬಿಟ್ಟು, ತೃಪ್ತಿಕರ ಇಳುವರಿ ನೀಡುತ್ತದೆ. ಇದಲ್ಲದೆ ಜಯ ತಳಿಯನ್ನು ಎಸ್. ೩೧೭ ತಳಿಯೊಂದಿಗೆ ಸಂಕರಣ ಮಾಡಿ ಪಡೆದಿರುವ ಎಂ.ಆರ್. ೨೭೨ ಮತ್ತು ಎಂ.ಆರ್. ೨೭೯ ತಳಿಗಳೂ ಸಹ ಬಹಳ ಆಶಾದಾಯಕವಾಗಿದ್ದು, ಇಳುವರಿ ಅಂದಾಜಿನ ಬಗ್ಗೆ ಅಧ್ಯಯನ ಮುನ್ನಡೆಯುತ್ತಿದೆ. ಆದರೆ ಬಹಳ ಕಡಿಮೆ (೧೫) ಉಷ್ಣಾಂಶದಂತಹ ವಿಷಮಯ ಸನ್ನಿವೇಶಗಳಲ್ಲಿ ಹೂ ಬಿಟ್ಟಾಗ (ನವೆಂಬರ್, ಡಿಸೆಂಬರ್, ಜನವರಿ) ಸಾಮಾನ್ಯವಾಗಿ ಈ ಮೇಲ್ಕಂಡ ತಳಿಗಳೂ ಕೂಡ ತೃಪ್ತಿಕರ ಇಳುವರಿಯನ್ನು ಕೊಡುವುದಿಲ್ಲ.

ಮಂಡ್ಯ ಮತ್ತು ಹೆಬ್ಬಾಳದಲ್ಲಿ ಕೈಗೊಳ್ಳಲಾದ ಸಂಶೋಧನೆಗಳ ಪ್ರಕಾರ ಅಕ್ವೋಬರ್‌ನಲ್ಲಿ ನಾಟಿ ಮಾಡಿದರೆ ಬೆಳೆ ಸಂಪೂರ್ಣ ನಾಶವಾಗುತ್ತದೆ. ನವೆಂಬರ್‌ನಲ್ಲಾದರೆ ಚಳಿಯಿಂದಾಗಿ ಸಂಕುಚಿತ ಬೆಳವಣಿಗೆಯ ಕಾರಣ, ಕಾಲಾವಧಿ ಬಹಳವಾಗಿ ಹೆಚ್ಚುತ್ತದೆ. ಅಷ್ಟೇ ಅಲ್ಲದೆ, ಸೆಪ್ಟೆಂಬರ್‌ನಿಂದ ನವೆಂಬರ್ ವರೆಗೆ ನಾಟಿ ಮಾಡಿದ ಬೆಳೆಗೆ, ರೋಗ ಮತ್ತು ಕೀಟಗಳ ಹಾವಳಿಯೂ ಹೆಚ್ಚಾಗಿರುವುದು.

. ಅಲ್ಪ ಕಾಲಾವಧಿ ತಳಿಗಾಗಿ ಸಂಕರಣಾ ಕ್ರಮಗಳು:

ಕೆರೆ ಮತ್ತು ಬಾವಿ ನೀರಿನ ಆಶ್ರಯದ, ಬೇಸಿಗೆಯಲ್ಲಿ ನೀರಿನ ಅಭಾವವಿರುವ ಮತ್ತು ಮುಂಗಾರಿನಲ್ಲಿ ಬಹಳ ತಡವಾಗಿ ನಾಟಿ ಮಾಡುವಂತಹ ಸನ್ನಿವೇಶಗಳಲ್ಲಿ ಅಲ್ಪ ಕಾಲಾವಧಿ ತಳಿಗಳ ಬೇಡಿಕೆ ಬಹಳ. ಬಹು ಬೆಳೆ ಯೋಜನೆ ಮತ್ತು ಬೇಸಿಗೆಯಲ್ಲಿ ಮಳೆಗಾಲ ಪ್ರಾರಂಭವಾಗುವ ಮೊದಲೇ ಕಟಾವು ಮಾಡಬೇಕಾಗುವ (ಮಲೆನಾಡಿನಲ್ಲಿ) ಸಂದರ್ಭಗಳಲ್ಲೂ ಕೂಡ ಅಲ್ಪ ಕಾಲಾವಧಿ ತಳಿಗಳು ಬೇಡಿಕೆಯಲ್ಲಿವೆ.

ಸುಮ, ಕುಸುಮ, ಮಧು ಮುಂತಾದ ಸಣ್ಣ ಕಾಳಿನ ಅಧಿಕ ಇಳುವರಿ ತಳಿಗಳ ಸಂಶೋಧನೆಯಿಂದಾಗಿ ರಾಜ್ಯದಲ್ಲಿ ಈಗಾಗಲೇ ಸಾಕಷ್ಟು ಪ್ರಗತಿಗೆ ದಾರಿ ಮಾಡಿದಂತಾಗಿದೆ. ಫಿಲಿಫೈನ್ಸ್ ದೇಶದ ಐ.ಆರ್. ೨೦ ಮತ್ತು ರಾಜ್ಯದ ಮಧು ತಳಿಗಳನ್ನು ಕಳೆದ ಮುಂಗಾರು ಮತ್ತು ಬೇಸಿಗೆಯಲ್ಲಿ ಸುಮಾರು ೪೫.೦೦೦ ಹೆಕ್ಟೇರುಗಳಲ್ಲಿ ಬೆಳೆಯಲಾಗಿತ್ತು. ೧೯೭೪ರ ಬೇಸಿಗೆಯಲ್ಲಿ, ಸುಮಾರು ೩೩.೦೦೦ ಹೆಕ್ಟೇರುಗಳಲ್ಲಿ ಮಧು ತಳಿಯನ್ನು ಬೆಳೆಯಲಾಗಿತ್ತು. ಎಂ.ಆರ್. ೨೭೨ ಸಹ ಇಲ್ಲಿ ನಮೂದಿಸಬಹುದಾದ ಉಪಯುಕ್ತ ಅಲ್ಪ ಕಾಲಾವಧಿ ತಳಿ.

. ಬೆಂಕಿ ನಿರೋಧಕ ಗುಣಕ್ಕಾಗಿ ಸಂಕರಣಾ ಕ್ರಮಗಳು:

ಬತ್ತವನ್ನು ಉಷ್ಣವಲಯ ಹಾಗೂ ಸಮಶೀತೋಷ್ಣ ವಲಯದ ಎಲ್ಲಾ ಭಾಗಗಳಲ್ಲಿ ವರ್ಷದ ಎಲ್ಲಾ ಕಾಳದಲ್ಲಿ ಒಂದಲ್ಲ ಒಂದು ಕಡೆ ಬೆಳೆಯುವುದರಿಂದ ಹಾಗೂ ಹಲವಾರು ಜಾತಿಯ ಹುಲ್ಲುಗಳ ಮೇಲೆ ಈ ರೋಗವನ್ನು ಉಂಟು ಮಾಡುವ ಶಿಲೀಂದ್ರದ ಜೀವಾಣುಗಳು ವಾಸ ಮಾಡಿಕೊಂಡಿರುವುದರಿಂದ ಮತ್ತು ಈ ಶಿಲೀಂದ್ರವು ಹಲವಾರು ವಿಶಿಷ್ಟ ರೀತಿಯ ಸಂತತಿಗಳನ್ನು ಹೊಂದಿದ್ದು, ಜೀವಾಣುಗಳು ಮುಖ್ಯವಾಗಿ ಗಾಳಿಯ ಮೂಲಕ ಎಲ್ಲಾ ಕಡೆಗೂ ಹರಡುವುದರಿಂದ, ರಾಸಾಯನಿಕಗಳನ್ನು ಉಪಯೋಗಿಸಿ, ಈ ರೋಗವನ್ನು ಹತೋಟಿಯಲ್ಲಿಡುವುದು ಬಹಳ ಕಷ್ಟವಾಗಿದೆ. ಆದ್ದರಿಂದ ಈ ದಿಸೆಯಲ್ಲಿ ನಿರೋಧಕ ಗುಣವುಳ್ಳ ತಳಿಗಳನ್ನು ಸಂಕರಣ ಮಾಡುವುದೇ ಬಹಳ ವಿಶ್ವಾಸಾರ್ಹವಾದ ಕಾರ್ಯವೆನಿಸಿದೆ.

ಮಲೆನಾಡು ಮತ್ತು ಕಡಿಮೆ ಉಷ್ಣಾಂಶವಿರುವ ಮೈದಾನ ಪ್ರದೇಶಗಳಲ್ಲಿ ಅದರಲ್ಲೂ ಮುಖ್ಯವಾಗಿ ಮುಂಗಾರಿನಲ್ಲಿ ಬೆಂಕಿ ರೋಗ ಬತ್ತದ ಬೆಳೆಗೆ ವಿಪರೀತ ಹಾನಿಯನ್ನು ಉಂಟುಮಾಡುತ್ತದೆ.

ಜೆನಿತ್, ಟಿಟೆನ್, ಟಡುಕಾನ್, ಎಸ್. ೬೭ ಮತ್ತು ಇಂಟಾನ್ ತಳಿಗಳು ಶಿಲೀಂದ್ರದ ಎಲ್ಲಾ ವಿಶಿಷ್ಟ ರೀತಿಯ ಸಂತತಿಗಳ ಹಾವಳಿಯನ್ನು ತಡೆದುಕೊಳ್ಳುವ ನಿರೋಧಕ ಶಕ್ತಿಯನ್ನು ಹೊಂದಿದೆ. ಇಂತಹ ತಳಿಗಳನ್ನು ಇತರ ಅಧಿಕ ಇಳುವರಿ ತಳಿಗಳೊಡನೆ ಸಂಕರಣ ಮಾಡಿ, ರೋಗ ನಿರೋಧಕ ಶಕ್ತಿಯುಳ್ಳ ಅಧಿಕ ಇಳುವರಿ ತಳಿಗಳನ್ನು ಪಡೆಯಲು ಪ್ರಯತ್ನಿಸಲಾಗಿದೆ. ಜೊತೆಗೆ, ಮೇಲ್ಕಂಡ ರೋಗ ನಿರೋಧಕ ತಳಿಗಳನ್ನೇ ಅಧಿಕ ಬೇಸಾಯಕ್ಕೆ ಬಿಡುಗಡೆ ಮಾಡುವ ಸಾಧ್ಯತೆಯನ್ನು ಪರಿಶೀಲಿಸಲಾಗಿದೆ. ಈಗಾಗಲೇ ಸುವ್ಯವಸ್ಥಿತ ಯೋಜನೆಯೊಂದು ಮಂಡ್ಯ ಮತ್ತು ಪೊನ್ನಂಪೇಟೆಯ ಸಂಶೋಧನಾ ಕೇಂದ್ರಗಳಲ್ಲಿ ಕಾರ್ಯ ಮಗ್ನವಾಗಿದೆ. ೧೯೭೦ ರಿಂದಲೂ ಅಂತರ ರಾಷ್ಟ್ರೀಯ ಬತ್ತ ಸಂಶೋಧನಾ ಕೇಂದ್ರ (IRRI) ಅಖಿಲ ಭಾರತ ಬತ್ತ ಸಂಶೋಧನಾ ಕೇಂದ್ರ (AICRIP) ಮತ್ತು ರಾಜ್ಯದ ವಿಶಿಷ್ಟ ಮೂಲ ತಳಿಗಳನ್ನು ಈ ಸಂಶೋಧನನೆಯಲ್ಲಿ ಅಳವಡಿಸಿಕೊಳ್ಳಲಾಗಿದೆ. ಆಗೆ ಪಾತಿಯಲ್ಲೇ ಏಕರೂಪ ಕ್ರಮಾನನುಸರಣೆಯ ಪ್ರಯೋಗಗಳನ್ನು ಅಳವಡಿಸಿ, ಬತ್ತದ ಪೈರಿನ ಎಲ್ಲಾ ಭಾಗಗಳೂ ಬೆಂಕಿ ರೋಗ ನಿರೋಧಕ ಶಕ್ತಿಯನ್ನು ಹೊಂದಿರುವ ತಳಿಗಳನ್ನು ಗುರುತಿಸಿ, ಅವುಗಳ ಸರಾಸರಿ ಇಳುವರಿಯನ್ನು ಅಂದಾಜು ಮಾಡಿದ ಪ್ರಕಾರ, ಎಂ.ಅರ್. ೭೦, ಎಂ.ಆರ್. ೮೧ ಮತ್ತು ಇಂಟಾನ್ ಎಂಬ ಹೊಸ ತಳಿಗಳು, ಆಶಾದಾಯಕ ಮಟ್ಟದಲ್ಲಿ ಬೆಂಕಿ ರೋಗ ನಿರೋಧಕ ಶಕ್ತಿಯನ್ನು ಹೊಂದಿರುವುದಷ್ಟೇ ಅಲ್ಲದೆ ಸೂಕ್ತ ಇಳುವರಿಯನ್ನೂ ನೀಡಬಲ್ಲವೆಂದು ವ್ಯಕ್ತವಾಗಿದೆ.

. ಕಾಳಿನ ಗುಣದ ಅಭಿವೃದ್ಧಿಗಾಗಿ ಸಂಕರಣಾ ಕ್ರಮಗಳು:

ಅಕ್ಕಿಯ ಕಾಳಿನ ಗಾತ್ರ, ಆಕಾರ ಮತ್ತು ಅನ್ನದ ಗುಣದ ಅಪೇಕ್ಷೆ ಆಯಾ ಜನರ ಅಭಿರುಚಿಗೆ ಒಳಪಟ್ಟಿದೆ. ಕರ್ನಾಟಕ ರಾಜ್ಯದ ಬಹುಪಾಲು ಜನರು, ಸಣ್ಣ ಕಾಳು ಮತ್ತು ಉದುರಾಗಿ ಅನ್ನವಾಗುವ ಗುಣವನ್ನು ಅಪೇಕ್ಷಿಸುತ್ತಾರೆ. ಆದರೆ ಕರಾವಳಿ ಪ್ರದೇಶದ ಜನರು ಕುಸುಬಲಕ್ಕಿ ಮಾಡಲು ಅನುಕೂಲವಾಗುವಂತಹ ದಪ್ಪ ಕಾಳನ್ನು ಅಪೇಕ್ಷಿಸುತ್ತಾರೆ. ಸೋನಾ, ಐ.ಆರ್. ೨೦ ಮತ್ತು ಮಧು ಎಂಬ ಸಣ್ಣ ಕಾಳಿನ ತಳಿಗಳ ಸಂಶೋಧನೆ ಮತ್ತು ಬಿಡುಗಡೆಯಿಂದಾಗಿ ಮೈದಾನ ಪ್ರದೇಶದ ರೈತರಿಗೆ ಸಣ್ಣ ಕಾಳಿನ ಅಧಿಕ ಇಳುವರಿ ಸಮಸ್ಯೆಗೆ ಸ್ವಲ್ಪ ಪರಿಹಾರ ದೊರೆತಿದೆ. ವಿಶೇಷ ಸಂದರ್ಭಗಳಲ್ಲಿ ಉಪಯೋಗಿಸುವ ಪರಿಮಳವುಳ್ಳ ಅಕ್ಕಿಯನ್ನೂ ಸಹ ಸುಧಾರಿಸಬೇಕಾಗಿದೆ. ಈ ದಿಸೆಯಲ್ಲಿ ಕೆಲವು ಪ್ರಯತ್ನಗಳು ನಡೆದು ಕುಸುಮ ಎಂಬ ತಳಿಯನ್ನು ಬಿಡುಗಡೆ ಮಾಡಿದ್ದರೂ ಸಹ, ಇದು ಬಹಳ ಕಡಿಮೆ ಇಳುವರಿ ಕೊಡುವುದರಿಂದ ಹೆಚ್ಚು ಜನಪ್ರಿಯವಾಗಲಿಲ್ಲ. ಆದ್ದರಿಂದ, ಈ ದಿಸೆಯಲ್ಲಿ ಇನ್ನೂ ಹೆಚ್ಚಿನ ಸುಧಾರಣೆಗಾಗಿ ಸಿ. ೪೩೫ ತಳಿಯೊಂದಿಗೆ ಸ್ಥಳೀಯ ತಳಿಯನ್ನು ಸಂಕರಣ ಮಾಡಲಾಗುತ್ತಿದೆ.

. ಕಣೆ ಹುಳು ನಿರೋಧಕ ಗುಣಕ್ಕಾಗಿ ಸಂಕರಣಾ ಕ್ರಮಗಳು:

ಕರಾವಳಿ ಪ್ರದೇಶಗಳಲ್ಲಿ ಮೊದಲನೆ ಬೆಳೆ ಕಣೆಹುಳುವಿನ ಹಾವಳಿಯಿಂದಾಗಿ ಬಹಳ ಹಾನಿಗೊಳಗಾಗುತ್ತಿದೆ. ಈಗ ಬಳಕೆಯಲ್ಲಿರುವ ಯಾವ ಅಧಿಕ ಇಳುವರಿ ತಳಿಗೂ ಕಣೆಹುಳುಗಳ ಹಾವಳಿಯನ್ನು ತಡೆದುಕೊಳ್ಳುವ ಶಕ್ತಿ ಇಲ್ಲ. ಮರಿಹುಳು (Larva) ಪೈರಿನ ಸುಳಿಯನ್ನೇ ತಿಂದು, ತೆಂಡೆಗಳಿಗೆ ಬದಲಾಗಿ ಕೊಳವೆಯಾಕಾರದ ಕಣೆಗಳುಂಟಾಗುತ್ತದೆ.

ಮಂಗಳೂರಿನಲ್ಲಿರುವ ಬತ್ತ ಸಂಶೋಧನಾ ಕೇಂದ್ರದಲ್ಲಿ ಈ ದಿಸೆಯಲ್ಲಿನ ಸಂಶೋಧನೆ ಮುನ್ನಡೆದಿದೆ. ಕಳೆದು ನಾಲ್ಕು ವರ್ಷಗಳ ಸತತ ಪ್ರಯತ್ನದಿಂದ ಹೈದರಾಬಾದ ಮತ್ತಿತರ ಕಡೆಯಿಂದ ತರಿಸಿ ಕೊಂಡ ತಳಿಗಳ ಪೈಕಿ ಜಿ.ಎಂ.ಆರ್. ೨ (ಮಧ್ಯಮಾವಧಿ) ಮತ್ತು ಜಿ.ಎಂ.ಆರ್. ೧೭ (ಅಲ್ಪಾವಧಿ) ತಳಿಗಳು ಕಣೆ ನಿರೋಧಕ ಶಕ್ತಿಯನ್ನು ಹೊಂದಿವೆ ಮತ್ತು ಅಧಿಕ ಇಳುವರಿ ನೀಡುತ್ತವೆಯೆಂದು ಬೆಳೆಯಲ್ಪಡುತ್ತಿವೆ.

. ಚೌಳಿಮಣ್ಣಿನ ಸಾರವನ್ನು ತಡೆದುಕೊಳ್ಳುವಂತಹ ತಳಿಗಾಗಿ ಸಂಕರಣ ಕ್ರಮಗಳು:

ಕರ್ನಾಟಕ ರಾಜ್ಯದ ಕರಾವಳಿ ಪ್ರದೇಶ, ಮೈದಾನ ಪ್ರದೇಶದ ತಗ್ಗು ಭೂಮಿಗಳು ಮತ್ತು ಕಪ್ಪು ಮಣ್ಣಿನ ಪ್ರದೇಶಗಳಲ್ಲಿ, ಚೌಳು ಮತ್ತು ಹುಳಿಮಣ್ಣಿನಲ್ಲಿ ಬೆಳೆಯಲು ಈಗ ಬಳಕೆಯಲ್ಲಿರುವ ಯಾವ ಅಧಿಕ ಇಳುವರಿ ತಳಿಯೂ ಸೂಕ್ತವಾಗಿಲ್ಲ. ಚೌಳು ಮಣ್ಣಿಗೆ ಹೊಂದುವಂತಹ ತಳಿ ಅಭಿವೃದ್ಧಿಗಾಗಿ ೧೯೭೦ ರಿಂದಲೂ ಸಂಶೋಧನೆ ನಡೆಯುತ್ತಿದೆ. ಕರಾವಳಿ ಪ್ರದೇಶದ ಚೌಳು ಮಣ್ಣಿನಲ್ಲಿ ಬೆಳೆಯಲಾಗುತ್ತಿರುವ ಕರೇಕಗ್ಗ, ಆರ್ಯ ಮತ್ತು ಬಿಳೇಕಗ್ಗ ಎಂಬ ಸ್ಥಳೀಯ ತಳಿಗಳು ಕಡಿಮೆ ಇಳುವರಿ ನೀಡಿದಾಗ್ಯೂ ಚೌಳುಮಣ್ಣಿನ ಸಾರವನ್ನು ತಡೆದುಕೊಳ್ಳುವ ಶಕ್ತಿಯನ್ನು ಹೊಂದಿದೆ. ಕರೇಕಗ್ಗ ತಳಿಯನ್ನು ಐ.ಆರ್. ೮ ತಳಿಯೊಡನೆ ಅನಪೇಕ್ಷಿತ ಗುಣಗಳನ್ನು ನಿವಾರಣೆ ಮಾಡಿಕೊಂಡು ಅವುಗಳ ಸರಾಸರಿ ಇಳುವರಿ ಮಟ್ಟವನ್ನು ಪ್ರಯೋಗಗಳ ಮೂಲಕ ಅಂದಾಜು ಮಾಡಲಾಗುತ್ತಿದೆ.

ಕಪ್ಪು ಮಣ್ಣು ಮತ್ತು ಮೈದಾನದ ತಗ್ಗು ಭೂಮಿಗಳಲ್ಲಿ ಎಸ್.ಆರ್. ೨೬ಬಿ, ಪಿ.ಆರ್. ೧ ಮತ್ತು ಸಿ.ಒ. ೨೯ ಎಂಬ ತಳಿಗಳು ಬೇಸಿಗೆ ಬೆಳೆಗೆ ಸೂಕ್ತವಲ್ಲ. ಒಳನಾಡು ಚೌಳಿಗಾಗಿ ತಳಿ ಸಂಕರಣಾ ಕಾರ್ಯವನ್ನು ಸ್ವಲ್ಪ ಮಟ್ಟಿಗೆ ನಡೆಯಲಾಗಿದೆ. ೧೯೬೭ರಲ್ಲಿ ಎಸ್.ಆರ್. ೨೬ಬಿ ತಳಿಯನ್ನು ವಾನರ್ ೧ ತಳಿಯಲ್ಲಿರುವ ಅಪೇಕ್ಷಿತ ಗುಣಗಳಾದ ಅಲ್ಪಕಾಲಾವಧಿ ಮತ್ತು ಬೇಸಿಗೆಯಲ್ಲಿ ಫಸಲಾಗುವ ಗುಣಗಳನ್ನು ಎಸ್.ಆರ್. ೨೬ಬಿ ತಳಿಗೆ ವರ್ಗಾಯಿಸಲಾಗಿದೆ. ಚೌಳು ಮಣ್ಣಿನ ರಸ ಸಾರವನ್ನು ತಡೆದುಕೊಳ್ಳುವ ಶಕ್ತಿಯಿಂದ ಗೇಟು, ದಾಸಲ್, ಪಿ.ವಿ.ಆರ್. ೧, ಎಸ್.ಆರ್. ೨೬ಬಿ ಮುಂತಾದ ಹಲವಾರು ಸ್ಥಳೀಯ ತಳಿಗಳನ್ನು ಇತರ ಅಪೇಕ್ಷಿತ ಅಧಿಕ ಇಳುವರಿ ತಳಿಗಳೊಡನೆ ಸಂಕರಣ ಮಾಡಿ ಎಲ್ಲಾ ಅಪೇಕ್ಷಿತ ಗುಣಗಳಿರುವ ಹೊಸ ತಳಿಗಳನ್ನು ಪಡೆಯುವ ದಿಸೆಯಲ್ಲಿ ಇನ್ನೂ ಹೆಚ್ಚಿನ ಸಂಶೋಧನೆಗೆ ಗಮನ ನೀಡಲಾಗುತ್ತಿದೆ.

ಈ ಮೇಲೆ ತಿಳಿಸಿರುವ ಸಂಶೊಧನಾ ಪ್ರಗತಿ ಕೆಲವು ವಿಷಯಗಳಲ್ಲಿ ಸಾಕಷ್ಟು ಗಮನಾರ್ಹವಾಗಿಲ್ಲ. ಅವುಗಳಿಗೆ ಇನ್ನು ಮುಂದೆ ಹೆಚ್ಚು ಗಮನ ನೀಡುವಂತಹ ಯೋಜನೆಗಳನ್ನು ರೂಪಿಸಿಕೊಳ್ಳಲಾಗಿದೆ.