ಕರ್ನಾಟಕ ರಾಜ್ಯದಲ್ಲಿ ಹವಾಗುಣದ ವೈಪರೀತ್ಯ ಇತರೇ ರಾಜ್ಯಗಳಿಗಿಂತ ಹೆಚ್ಚಿನ ಮಟ್ಟದ್ದಾಗಿದೆ. ಕರಾವಳಿ ಪ್ರದೇಶದಲ್ಲಿ (ದ.ಕನ್ನಡ ಮತ್ತು ಉ. ಕನ್ನಡ ಜಿಲ್ಲೆಗಳಲ್ಲಿ) ವರ್ಷಕ್ಕೆ ಮೂರು (ಖರೀಫ್, ರಬಿ ಮತ್ತು ಬೇಸಿಗೆ) ಬೆಳೆ ತೆಗೆದುಕೊಳ್ಳುವ ಹವಾಮಾನವಿದೆ. ಆದರೆ ಇತರೇ ಪ್ರದೇಶಗಳಲ್ಲಿ (ಮಲೆನಾಡು, ಗಡಿನಾಡು ಮತ್ತು ಬಯಲು) ಎರಡು ಬೆಳೆಗಳನ್ನು (ಮಳೆಗಾಲ ಮತ್ತು ಬೇಸಿಗೆ ಅಥವಾ ಮುಂಗಾರು ಮತ್ತು ರಬಿ) ಮಾತ್ರ ಬೆಳೆಯಲು ಸಾಧ್ಯವಾಗುತ್ತಿದೆ. ಇತ್ತೀಚಿನ ಕೃಷಿ ಸಂಶೋಧನೆಯ ಪ್ರಗತಿಯಿಂದ ಬಹು ಬೆಳೆ ಯೋಜನೆ ಆಶಾದಾಯಕವೆನಿಸಿದೆ. ಎರಡು, ಮೂರು ಮತ್ತು ಸಹ ಬೆಳೆ ಪದ್ಧತಿಯಿಂದ ನಾಲ್ಕು ಬೆಳೆಗಳನ್ನೂ ತೆಗೆಯಬಹುದೆಂಬುದು ಸ್ಫೂರ್ತಿಯುತವಾದ ಸಂಗತಿ.

ಎಲ್ಲಾ ರೀತಿಯ ಕಾಲ ಮತ್ತು ಹವಾಮಾನಕ್ಕೆ ಹೊಂದಿಕೊಳ್ಳುವಂತಹ ತಳಿಗಳ ಬಗ್ಗೆ ರಾಜ್ಯದ ಕೃಷಿ ವಿಶ್ವವಿದ್ಯಾಲಯ ಮತ್ತು ವ್ಯವಸಾಯ ಇಲಾಖೆಯ ಸಂಶೋಧನಾ ಮತ್ತು ಪ್ರಾತ್ಯಕ್ಷಿತೆಗಳ ಮೂಲಕ ಸಾಕಷ್ಟು ಮಾಹಿತಿ ಸಂಗ್ರಹಿಸಲಾಗಿದೆ. ಈ ಮಾಹಿತಿಯ ಆಧಾರದ ಮೇಲೆ ಕಾಲ, ಮಣ್ಣು ಮತ್ತು ಹವಾಮಾನಕ್ಕೆ ಯೋಗ್ಯ ತಳಿಗಳನ್ನು ನಿರ್ಧರಿಸಲಾಗಿದೆ. ಅಲ್ಲಿಂದ ಇಂತಹ ತಳಿಗಳು ರಾಜ್ಯಮಟ್ಟದ ತಳಿ ಮೌಲ್ಯ ನಿರ್ಣಯ ಸಮಿತಿ (State Variety Evaluation Committee) ಯ ಪರಿಶೀಲನೆಗೊಳಗಾಗಿ, ಸ್ವೀಕೃತ ತಳಿಗಳು ರೈತರ ಭೂಮಿಯಲ್ಲಿ ಬೆಳೆಯಲು ಯೋಗ್ಯವೆಂದು ಸೂಚಿಸಲ್ಪಟ್ಟಿದೆ. ಮೌಲ್ಯ ನಿರ್ಣಯ ಸಮಿತಿಯಿಂದ ಸ್ವೀಕೃತ ತಳಿಗಳನ್ನು ಬೆಳೆಯುವುದರಿಂದ ಅನಿರೀಕ್ಷಿತವಾಗಿ ತೋರಿ ಬರುವ ರೋಗ, ಕೀಟ ಮತ್ತು ಜೊಳ್ಳಾಗುವ ಸಮಸ್ಯೆಗಳು ಮತ್ತು ಬೆಳೆ ಸಂಪೂರ್ಣವಾಗಿ ನಾಶವಾಗುವ ಸಾಧ್ಯತೆ ಕನಿಷ್ಟ ಮಟ್ಟದಾಗಿರುತ್ತದೆ ಎನ್ನಬಹುದು.

ಶಿಫಾರಸ್ಸಿನಲ್ಲಿರುವ ಸುಧಾರಿತ ನಾಡ ತಳಿಗಳು

ಬತ್ತದಲ್ಲಿ ಸುಧಾರಿತ ನಾಡ ತಳಿಗಳೆಂದರೆ ಒಂದು ದೊಡ್ಡ ಪಟ್ಟಿ. ಅವುಗಳಲ್ಲಿ ಮುಖ್ಯವಾದವುಗಳೆಂದರೆ ಬಂಗಾಸಣ್ಣ (ಎಸ್. ೭೦೧), ಬಂಗಾರ ಕೋವಿ (ಎಸ್. ೧೦೯೨), ಹಾಲುಬ್ಬಲು (ಎಸ್. ೩೧೭), ರತ್ನಚೂಡಿ (ಎಸ್.೭೪೯) ಚೈನಾ ಬತ್ತ (ಸಿ.ಎಚ್. ೨, ಸಿ.ಎಚ್. ೪೫), ಜೇನುಗೂಡು ಇತ್ಯಾದಿ. ಮಲೆನಾಡಿನಲ್ಲೂ ಮೇಲ್ಕಂಡ ತಳಿಗಳಲ್ಲದೆ ಕಿರುಬೆಳೆದು (ಕೆ.ಬಿ. ೩೫೬), ಮುಂಬೆಳೆಯ (ಎಂ.ಬಿ. ೩೧, ಜಿ.ಕೆ.ಬಿ) ಜೀರಿಗೆ ಸಣ್ಣ, ಪುಟ್ಟ ಬತ್ತ, ಚಿಪ್ಪಿಗ ಮುಂತಾದವು ಬೆಳೆಯಲ್ಪಡುತ್ತಿವೆ. ಕರಾವಳಿಯಲ್ಲಿ, ಪಿಟಿಬಿ, ಎಂಜಿಎಲ್, ಎಂಟಿಯು, ಕರಿಕಗ್ಗ, ಬಿಳಿಕಗ್ಗ ಪ್ರಚಾರದಲ್ಲಿವೆ. ನೇರ ಬಿತ್ತನೆ ಪ್ರದೇಶದಲ್ಲಿ ದೊಡ್ಡಿಗ (ಡಿ.೬೨೨), ಅಂತರ ಸಾಲ (ಎ.೨೦೦, ಎ.೬೭) ಎಂ. ೮೧, ಎಲ್ಲಿಕೇರಿಸಾಲ (ವೈ.೪), ಟಿ. ೧೪೧ ಪ್ರಚಾರದಲ್ಲಿದೆ. ಪುಣಜಿ ಬೇಸಾಯಕ್ಕೆ ದೊಡ್ಡ ಬೈರ, ಗಿಡ್ಡ ಬೈರ, ಆಲೂರು ಸಣ್ಣ ಮತ್ತು ದಪ್ಪ ಬತ್ತ ಬೆಳೆಸಲ್ಪಡುತ್ತಿವೆ.

ಶಿಫಾರಸ್ಸಿನಲ್ಲಿರುವ ಅಧಿಕ ಇಳುವರಿ ತಳಿಗಳು

ಜಯ, ಮಧು, ಐ.ಆರ್. ೨೦ ಮತ್ತು ಸೋನಾ (ಐ.ಇ.ಟಿ. ೧೯೯೧) ಮಲೆನಾಡಿಗೂ ಮತ್ತು ಕರಾವಳಿಯ ಮೊದಲನೇ ಬೆಳೆಗೂ ಈ ತಳಿಗಳು ಹೊಂದುವುದಿಲ್ಲ.

ಹಿಂತೆಗೆದುಕೊಂಡ ತಳಿಗಳು

ಐ.ಆರ್.೮, ಬಿ (ಎನ್) ೧, ಬಿ. ೬೫, ಸುಮ ತಳಿಗಳು ಹಿಂದೆ ಶಿಫಾರಸ್ಸಿನಲ್ಲಿದ್ದು, ಉತ್ತಮ ತಳಿಗಳು ಸಲಹೆಗೆ ಬಂದಾಗಲೆಲ್ಲಾ ಇವುಗಳನ್ನು ಶಿಫಾರಸ್ಸಿನ ಪಟ್ಟಿಯಿಂದ ಹೊರ ತೆಗೆಯಲಾಗಿದೆ.

ಶಿಫಾರಸ್ಸಿನಲ್ಲಿಲ್ಲ ಆದರೂ ಜನಪ್ರಿಯ

ಶಿಫಾರಸ್ಸಿನಲ್ಲಿಲ್ಲದೆ ತಾನಾಗಿ ಹರಡಿದ ಎಲ್ಲಾ ತಳಿಗಳೂ ಬೆಳೆಯಲು ಅನರ್ಹವೆಂದರೆ ತಪ್ಪಾಗಬಹುದು. ಉದಾ:- ಕರಾವಳಿಯ ಬೆಟ್ಟ ಪ್ರದೇಶ ಮತ್ತು ೨ನೇ ಮತ್ತು ೩ನೇ ಬೆಳೆಯಲ್ಲಿ ಜನಪ್ರಿಯವಾಗುತ್ತಿರುವ ಅನ್ನಪೂರ್ಣ ಕರಾವಳಿ ರೈತರ ಅಭಿರುಚಿಗೆ ದಪ್ಪನಾದ ಕೆಂಪು ಕಾಳುಳ್ಳ ಈ ತಳಿಯು ಕುಸುಬಲು ಅಕ್ಕಿಯನ್ನಾಗಿ ಪರಿವರ್ತಿಸಿ, ಊಟ ಮಾಡಲು ಯೋಗ್ಯವೆನಿಸಿದೆ. ಕೇರಳ ರಾಜ್ಯದ ಪಟ್ಟಾಂಬಿಯಲ್ಲಿ ಕಂಡು ಹಿಡಿಯಲ್ಪಟ್ಟು ಕಲ್ಚರ್ – ೨೮ (ಸಿ.೨೮) ಎಂದು ಕಾಲಿಟ್ಟ ತಳಿಯೇ ಈಗ ಅನ್ನಪೂರ್ಣ ಎಂಬ ಹೆಸರಿನಲ್ಲಿ ತಳಿ ಎನಿಸುವಷ್ಟು ಇಳುವರಿ ನೀಡಬಲ್ಲ ಈ ತಳಿಯ ಬಗೆಗೆ ಸಾಕಷ್ಟು ಸಂಶೋಧನಾ ಮಾಹಿತಿಯು ದೊರೆತಿರುವುದರಿಂದ ಇದನ್ನು ರಾಜ್ಯದ ಶಿಫಾರಸ್ಸಿನ ತಳಿ ಪಟ್ಟಿಗೆ ಸೇರಲು ಯೋಚಿಸಲಾಗಿದೆ.

ಮಷೂರಿ ಎಂಬ ಇನ್ನೊಂದು ಮಲೇಷಿಯಾದ ತಳಿ ಕರ್ನಾಟಕದಲ್ಲಿ ಗೌರಿ ಎಂಬ ಹೆಸರಿನಲ್ಲಿಯೂ, ತಮಿಳುನಾಡಿನಲ್ಲಿ ಪೊನ್ನಿ ಎಂಬ ಹೆಸರಿನಲ್ಲಿಯೂ ಪ್ರಚಾರಕ್ಕೆ ಬಂದಿದೆ. ನಾಡ ತಳಿಗಳಿಗಿಂತ ಸ್ವಲ್ಪ ಕುಳ್ಳು, ಆದರೂ ಗಿಡ್ಡ ಜಾತಿಗೆ ಸೇರಿದ್ದಲ್ಲ. ತೆನೆಕಾಳು ತುಂಬುವಾಗ ಬೆಳೆ ಬೀಳುವ ಸಾಧ್ಯತೆ ಇದೆ. ಸಾಧಾರಣ ಬೇಸಾಯದಲ್ಲಿ ನಾಡ ತಳಿಗಿಂತಲೂ ಹೆಚ್ಚು ಇಳುವರಿ ಕೊಡುವ ಶಕ್ತಿಯನ್ನು ಹೊಂದಿದೆ. ಅವಧಿ ಐದುವರೆ ತಿಂಗಳು. ಕಾಳು ಬಹಳ ಸಣ್ಣಗಿದ್ದು, ಅನ್ನ ಉದುರಾಗಿ ಚೆನ್ನಾಗಿರುತ್ತದೆ. ಇದರ ಎರಡು ನ್ಯೂನತೆಗಳೆಂದರೆ ಬತ್ತದಿಂದ ಬರುವ ಅಕ್ಕಿ ಪ್ರಮಾಣ ಕಡಿಮೆ ಮತ್ತು ಬೆಂಕಿರೋಗಕ್ಕೆ ಹೆಚ್ಚು ತುತ್ತಾಗುತ್ತದೆ. ಈ ತಳಿಯು ಅಧಿಕ ಇಳುವರಿ ತಳಿಗಳ ಸಾಲಿಗೆ ಸೇರುವುದಿಲ್ಲ. ಶಿವಮೊಗ್ಗ ಜಿಲ್ಲೆಯಲ್ಲಿ ೧೯೭೪ನೇ ಮಳೆಗಾಲದ ಬೆಳೆಯಲ್ಲಿ ಅನೇಕ ಕಡೆ ಬೆಂಕಿರೋಗದಿಂದ ಈ ತಳಿಯು ನಷ್ಟ ಉಂಟು ಮಾಡಿತೆಂಬುದು ಇಲ್ಲಿ ತಿಳಿಸಬೇಕಾದ ಸಂಗತಿ.

ಮುಂದೆ ಶಿಫಾರಸ್ಸಿಗೆ ಬರಬಹುದಾದ ತಳಿಗಳು

ಅಲ್ಪಾವಧಿ: ಎಂ.ಆರ್. ೨೭೨ (ಜಯ ಹಾಗೂ ಹಾಲುಬ್ಬಲು) ಸಂಕರಣದಿಂದ ಅಲ್ಪಾವಧಿ ಮತ್ತು ಅತ್ಯುತ್ತಮ ಕಾಳು: ಎಂ.ಆರ್. ೩೦೧ (ಜಯ ಮತ್ತು ಬಂಗಾರತೀಗ) ಮಧ್ಯಮಾವಧಿ ಉತ್ತಮ ಕಾಳು: ಐ.ಇ.ಟಿ. ೨೨೫೪, ೨೨೯೫, ಬೆಂಕಿರೋಗ ನಿರೋಧಕ: ಇಂಟಾನ್ ಮತ್ತು ಎಂ.ಆರ್. ೮೧, ಕಣಿ ಹುಳು ನಿರೋಧಕ: ಜಿ.ಎಂ.ಆರ್. ೨ (ವಿಕ್ರಮ) ಈ ತಳಿಗಳು ಸಾಕಷ್ಟು ಪರೀಕ್ಷೆಗೊಳಗಾಗಿವೆ. ಇವುಗಳಲ್ಲಿ ರಾಜ್ಯ ತಳಿ ಪರಿಶೀಲನಾ ಸಮಿತಿಯ ಪರವಾನೆ ಪಡೆದ ತಳಿಗಳು ಮಾತ್ರ ಶಿಫಾರಸ್ಸಿಗೆ ಬರುತ್ತವೆ.

ಶಿಫಾರಸ್ಸಿಗೆ ಅನರ್ಹವೆನಿಸಿದ ತಳಿಗಳು

ರಾಜ್ಯದಲ್ಲಿ ಪರೀಕ್ಷಿಸಿ, ಸಂಶೋಧನೆಯಿಂದ ಹೊರಬಿದ್ದ ದೋಷಗಳ ಆಧಾರದ ಮೇಲೆ ಶಿಫಾರಸ್ಸಿಗೆ ಅನರ್ಹವೆನಿಸಿದ, ಆದರೆ ಬೇರೆ ಕಡೆ ಹೆಸರು ಕೇಳಿ ಬರುತ್ತಿರುವ ತಳಿಗಳಿವು. ಪದ್ಮ, ಹಂಸ, ಕನ್ನಗಿ, ತ್ರಿವೇಣಿ, ಅಶ್ವತಿ, ರೋಹಿಣಿ, ಭವಾನಿ, ಕರುಣಾ, ಪಂಕಜ, ಮನಿಲಾ, ಜಯಂತಿ, ಸತ್ಯ, ಸೂರ್ಯ, ಸುಹಾಸಿನಿ, ತೆಲ್ಲಹಂಸ, ರತ್ನ, ಐ.ಆರ್. ೨೨, ಐ.ಆರ್. ೨೪ ಮುಂತಾದವು. ಕೃಷಿ ವಿಶ್ವವಿದ್ಯಾಲಯ ಮತ್ತು ಕೃಷಿ ಇಲಾಖೆಯ ಸಂಶೋಧನಾ ಮತ್ತು ಪ್ರಾತ್ಯಕ್ಷಿಕೆಗಳ ಫಲಿತಾಂಶಗಳ ಆಧಾರದ ಮೇಲೆ ಇವು ಶಿಫಾರಸ್ಸಿಗೆ ತರಲು ಅನರ್ಹವೆನಿಸಿದೆ. ಆದ್ದರಿಂದ ಈ ತಳಿಗಳನ್ನು ಬೆಳೆಯುವುದರಿಂದ ಒಮ್ಮೊಮ್ಮೆ ಹೆಚ್ಚು ಇಳುವರಿ ದೊರೆತರೂ, ಅನೇಕ ಬೆಳೆಗಳಲ್ಲಿ ನಿರಾಶಿತರಾಗುವ ಸಂಭವವಿದೆ. ಅಲ್ಲದೆ ರೋಗ ರುಜಿನಗಳು ಹೆಚ್ಚು ಪ್ರಮಾಣದಲ್ಲಿ ಪ್ರವೇಶಿಸಿ ಉತ್ಪಾದನೆಗೆ ಬಾಧಕವಾಗುವ ಸಾಧ್ಯತೆಯೂ ಉಂಟು. ಪದ್ಮ ತಳಿಗೆ ಬಂದ ಚುಕ್ಕೆ ರೋಗವು ಗೌರಿ, ಜಯಂತಿ, ರತ್ನ, ಐ.ಆರ್. ೨೨ ಮತ್ತು ಕನ್ನಗಿ ತಳಿಗಳಿಗೆ ಎರಗಿದೆ. ಬೆಂಕಿ ರೋಗಕ್ಕೆ ಹಂಸ, ರೋಹಿಣಿ, ತೆಲ್ಲಹಂಸ, ತಳಿಗಳನ್ನು ತಿಂದ ಎಲೆ ಸುರುಳಿ ಹುಳು, ಕಾಳಿಗಿಂತ ಹೆಚ್ಚು ಜೊಳ್ಳನ್ನೇ ನೀಡಿದ ಮನಿಲಾ, ಪಂಕಜ ಇಲ್ಲಿ ನಮೂದಿಸಬಹುದಾದ ಕೆಲವು ಉಪಯುಕ್ತ ಅನುಭವಗಳು.

ಹೊಸ ಬತ್ತದ ತಳಿಗಳ ಮಾಹಿತಿ ಎಲ್ಲಿ ದೊರೆಯುತ್ತದೆ?

ರಾಜ್ಯದ ಕೃಷಿ ವಿಶ್ವವಿದ್ಯಾಲಯ ಆಶ್ರಯದಲ್ಲಿ ಮಂಡ್ಯದ ಪ್ರಾದೇಶಿಕ ಸಂಶೋಧನಾ ಕೇಂದ್ರ (Regional Research Station, Mandya) ವಿ.ಸಿ. ಫಾರಂ ಇಲ್ಲಿ ಮತ್ತು ರಾಜ್ಯಾದ್ಯಂತ ಹರಡಿರುವ ಇನ್ನೂ ೧೪ ಸಂಶೋಧನಾ ಕೇಂದ್ರಗಳಲ್ಲಿ ಸತತವಾಗಿ ಬತ್ತದ ತಳೀಕರಣ ನಡೆದಿದೆ. ಅಲ್ಲದೆ ವಿಶೇಷ ಹಾಗೂ ನೆರೆ ರಾಜ್ಯಗಳಲ್ಲಿ ಕಂಡು ಹಿಡಿದಿರುವ ತಳಿಗಳ ಹೊಂದಾಣಿಕೆ, ಗುಣ ದೋಷಗಳ ಬಗ್ಗೆ ಮಾಹಿತಿ ಸಂಗ್ರಹಿಸಲ್ಪಡುತ್ತಿದೆ. ಅಖಿಲ ಭಾರತ ಸಂಘಟಿತ ಬತ್ತದ ಸಂಶೋಧನಾ ಯೋಜನೆ ಹಾಗೂ ಅಂತರ ರಾಷ್ಟ್ರೀಯ ಸಂಘಟಿತ ಪರೀಕ್ಷಾ ಯೋಜನೆಗಳ ಮೂಲಕ ಪ್ರಪಂಚದ ಯಾವುದೇ ಭಾಗದಲ್ಲಿ ಕಂಡು ಹಿಡಿಯಲ್ಪಟ್ಟ ತಳಿಯ ಬಗ್ಗೆ ಸಾಮಾನ್ಯವಾಗಿ ಪ್ರತಿಯೊಂದು ದೇಶ ಮತ್ತು ಪ್ರತಿಯೊಂದು ರಾಜ್ಯದಲ್ಲಿ ಮಾಹಿತಿ ಸಂಗ್ರಹಿಸುವ ಒಂದು ವ್ಯವಸ್ಥೆ ಇದೆ. ಆದ್ದರಿಂದ ಆಸಕ್ತಿಯುಳ್ಳ ರೈತರು, ಕೃಷಿ ವಿಶ್ವವಿದ್ಯಾಲಯದ ವಿಸ್ತರಣಾ ವಿಭಾಗ ಅಥವಾ ಸಂಶೋಧನಾ ಕೇಂದ್ರಗಳೊಂದಿಗೆ ವ್ಯವಹರಿಸುವುದು ಉಚಿತ. ಹೊಸ ತಳಿಗಳ ಬಗ್ಗೆ ಈ ರೀತಿ ಮಾಹಿತಿ ದೊರಕಿಸಿಕೊಂಡು ನಂತರ ಆ ತಳಿಯನ್ನು ಬೆಳೆಯಬೇಕೋ ಬೇಡವೋ ಎಂಬುದನ್ನು ನಿರ್ಧರಿಸಿದಲ್ಲಿ ನಂತರ ಆ ತಳಿಯನ್ನು ಬೆಳೆಯಬೇಕೋ ಎಂಬುದನ್ನು ನಿರ್ಧರಿಸಿದಲ್ಲಿ ಬತ್ತದ ಬೇಸಾಯ ಯಾವಾಗಲೂ ಲಾಭದಾಯಕ ಎನ್ನುವಂತೆ ನಿರ್ಧಿಷ್ಟ ಪ್ರಮಾಣದ ನಿವ್ವಳ ಆದಾಯ ಸಾಧ್ಯ ಎಂಬ ಭರವಸೆ ಕೊಡಬಹುದು.