ರಾಷ್ಟ್ರದ ಧಾನ್ಯ ಉತ್ಪಾದನೆಯಲ್ಲಿ ಗಣನೀಯ ಪ್ರಮಾಣ ಜನರ ಉಪಯೋಗಕ್ಕೆ ಸಿಕ್ಕದೆ ವಿವಿಧ ಹಂತಗಳಲ್ಲಿ ಮನುಷ್ಯನ ಕೈಯಿಂದ ಅನೇಕ ರೀತಿಯಲ್ಲಿ ಕಳಚಿ ಹೋಗುತ್ತದೆ ಎಂಬುದು ಸಾಮಾನ್ಯವಾಗಿ ಆಹಾರ ದಾಹವನ್ನು ಹೊರದೂಡಲು ತೊಡಗಿರುವವರೆಲ್ಲರಿಗೂ ತಿಳಿದಿರುವ ವಿಷಯ. ರೈತರ ದುಡಿಮೆಯ ಫಲವಾದ ಬೆಳೆಯ ಮೇಲಿನ ಕಾಳು ಮಾಗುತ್ತಿರುವಾಗಲೇ, ಆನೇ, ಹಕ್ಕಿ, ಇಲಿ, ಕ್ರಿಮಿಗಳು ಮತ್ತು ಬುಷ್ಟ ಮತ್ತಿಂತಹ ಎಲ್ಲಾ ತರಹದ ಜೀವಿಗಳೂ ತಮ್ಮ ಪಾಲನ್ನು ಹೊಂದಿಯೇ ತೀರುತ್ತದೆ. ಇದಲ್ಲದೆ ಕೊಯ್ಲಿಗೆ ಆತಂಕವಾಗಿ ಬರುವ ಮಳೆಯೂ ಒಂದು ದೊಡ್ಡ ಕಾರಣ. ಅನಿವಾರ್ಯವಾಗಿ ಕೊಯ್ಲು ನಿಧಾನವಾದಲ್ಲಿ ಇಂತಹ ನಷ್ಟ ದ್ವಿಗುಣವಾಗುತ್ತದೆ. ಹೀಗೆ ಉಂಟಾಗಬಹುದಾದ ನಷ್ಟ ಎಷ್ಟಿರಬಹುದು ಎಂದು ಯಾವ ರೀತಿಯಿಂದಲೂ ಅರಿಯಲು ಸಾಧ್ಯವಾಗಿಲ್ಲ. ತಿಳಿದು ಬಂದಿರುವ ಅಂಕಿ ಅಂಶದಿಂದ ಶೇ. ೧೦ ರಷ್ಟು ಉತ್ಪಾದನೆ ಹೇಗೆ ನಷ್ಟವಾಗುತ್ತಿದೆ. ಕೊಯ್ಲಿನ ನಂತರ ವಿವಿಧ ಹಂತಗಳಲ್ಲಿ ಆಗಬಹುದಾದ ನಷ್ಟದ ಅಂದಾಜು ಕೆಲವು ಫಸಲುಗಳಿಗೆ ದೊರೆತಿವೆ. ಬತ್ತದಲ್ಲಿ ಈ ರೀತಿಯ ನಷ್ಟ ಶೇ. ೧೭ ರಷ್ಟು ಎಂದು ಅಂದಾಜು ಮಾಡಲಾಗಿದೆ.

ಇತರ ಬೆಳೆಗಳಿಗೆ ಹೋಲಿಸಿದಾಗ ಬತ್ತದಲ್ಲಿ ಈ ತರಹದ ನಷ್ಟ ಹೆಚ್ಚು ಪ್ರಮಾಣದ್ದಾಗಿದೆ. ಅನೇಕ ಬೆಳೆಗಳಲ್ಲಿ ಒಕ್ಕಣೆಯ ನಂತರ ಧಾನ್ಯ ಉಗ್ರಾಣದಲ್ಲಿ ಶೇಖರಿಸಲ್ಪಟ್ಟು, ಅಲ್ಲಿಂದ ಅವಶ್ಯಕವಾದಾಗ ಬಳಕೆಗೆ ಹೊಯ್ಯಲ್ಪಡುತ್ತಿದೆ. ಆದರೆ ಬತ್ತದಲ್ಲಿ ಹಾಗಿಲ್ಲ. ಬತ್ತವನ್ನು ಅನೇಕ ಕಡೆ ಕುಸುಬಲು ಬತ್ತವನ್ನಾಗಿ ಪರಿವರ್ತಿಸುವುದು ಮತ್ತು ಉಪಯೋಗಕ್ಕೆ ಮುಂಚೆ ಗಿರಣಿಗೆ ಬಿಡಿಸಿ, ಪಾಲಿಷ್ ಮಾಡಿಸುವುದು ಸಂಪ್ರದಾಯ ಹಾಗೂ ಅನಿವಾರ್ಯ.

ಕೊಯ್ಲಿನಲ್ಲಿ ಉದುರಿ ಹೋಗುವುದು, ಅರಿ (Field Sheaving) ಹಾಕಿದಾಗ ಕಾಳು ಉದುರಿ ಹೋಗುವುದು, ಹುಲ್ಲನ್ನು ಬತ್ತದ ಸಮೇತ ಕಣಕ್ಕೆ ಸಾಗಿಸುವಾಗ ಕಾಳನ್ನು ಒಣಗಿಸುವಾಗ ಆಗುವ ನಷ್ಟ ಒಂದು ರೀತಿಯಾದರೆ, ಈ ರೀತಿ ವಿವಿಧ ಕ್ರಿಯೆಗಳ ನ್ಯೂನತೆಗಳಿಂದಾಗಿ ಅಂದರೆ ಗಿರಣಿ ಮಾಡುವಾಗ ಬತ್ತ ನುಚ್ಚಾಗುವುದು, ವಾಸನೆ ಕೆಡುವುದು, ಅಕ್ಕಿಯಲ್ಲಿನ ಪೌಷ್ಠಿಕಾಂಶ ಕಳೆದು ಹೋಗುವುದು ಇನ್ನೊಂದು ವಿಧಧ ನಷ್ಟ. ಕಳೆದ ಒಂದೆರಡು ದಶಕಗಳ ಅಂಕಿ ಅಂಶಗಳಿಂದ ತಿಳಿದು ಬಂದ ನಷ್ಟ ಮತ್ತು ಸಂಶೋಧನೆಯಿಂದ ಹೊರಬಿದ್ದ ಹಾಗೂ ಉಪಯುಕ್ತವೆನಿಸಿರುವ ಒಂದೆರಡು ಸಲಹೆಗಳನ್ನು ಈ ಲೇಖನದಲ್ಲಿ ಕಾಣಬಹುದು.

ಬತ್ತ ಕೊಯ್ಲಿಗೆ ಸಿದ್ಧವಿದೆಯೇ?

ಅನಾದಿ ಕಾಲದಿಂದಲೂ ಭಾರತದಲ್ಲಿ ಬತ್ತ ಕೊಯ್ಲಿಗೆ ಬಂದಿರುವುದನ್ನು ನಿರ್ಧರಿಸುವ ವಿಧಾನವೆಂದರೆ ಬತ್ತದ ಸಸಿಯು ಸಂಪೂರ್ಣವಾಗಿ ಒಣಗಿದ ಹಾಗೆ ಕಂಡಾಗ ಕಟಾವಿಗೆ ಸಿದ್ದವೆಂದು ತಿಳಿಯುವುದು. ಕೆಲವು ತಳಿಗಳಲ್ಲಿ ಇದರಿಂದ ಉದುರಿ ಹೋಗುವ ಭಾಗದ ನಷ್ಟ ಸಂಭವಿಸಿಯೇ ತೀರುತ್ತದೆ. ಮಾಗಿದ ತೆನೆಯ ಮೇಲಿನ ಕಾಳುಗಳು ಹಗಲು ಬಿಸಿಲಿಗೂ ಮತ್ತು ರಾತ್ರಿ ಸಮಯದಲ್ಲಿ ಇಬ್ಬನಿಗೂ ಕೆಲವು ದಿನಗಳವರೆಗೆ ತುತ್ತಾಗುವುದರಿಂದ ಹೊಟ್ಟಿನ ಒಳಗಿರುವ ಅಕ್ಕಿಯಲ್ಲಿ ಬಿರುಕು ಉಂಟಾಗುತ್ತದೆ. ಇಂತಹ ಬಿರುಕಿನ ಗೆರೆಗಳನ್ನು (sun, cracks, checks) ಬೆಳಕಿಗೂ ಕಣ್ಣಿಗೂ ನಡುವೆ ಅಕ್ಕಿಯನ್ನು ಈಕ್ಷಿಸುವುದರಿಂದ ಸುಲಭವಾಗಿ ನೋಡಬಹುದು. ಇಂತಹ ಕಾಳುಗಳು ಗಿರಣಿ ಮಾಡಿಸುವಾಗ ಅಥವಾ ಕುಟ್ಟುವಾಗ ನುಚ್ಚಾಗುತ್ತದೆಂದು ಖಚಿತವಾಗಿ ತಿಳಿದುಬಂದಿದೆ. ಆದ್ದರಿಂದ ಬತ್ತವನ್ನು ಸಂಪೂರ್ಣವಾಗಿ ಒಣಗುವವರೆಗೂ ಬಿಡಬಾರದು. ತೆನೆಯ ತುದಿಯಲ್ಲಿರುವ ಬತ್ತದ ಕಾಳುಗಳು ಮುಂಚೆ ಮಾಗುತ್ತವೆ. ತೆನೆಯ ಬುಡದಲ್ಲಿರುವ ಕಾಳುಗಳು ನಂತರ ಮಾಗುತ್ತವೆ. ಹೀಗೆ ತುದಿ ಮತ್ತು ಬುಡದ ಕಾಳುಗಳು ಮಾಗಲು ೫ ರಿಂದ ೧೨ ದಿವಸಗಳ ಅಂತರವಿರಬಹುದು. ಇದು ತಳಿ, ಹವಾಗುಣ ಮತ್ತು ಬೇಸಾಯ ಕ್ರಮದಿಂದ ಹೆಚ್ಚು ಕಡಿಮೆಯಾಗುವ ಸಾಧ್ಯತೆ ಇದೆ. ರಾಜ್ಯದ ಕೃಷಿ ವಿಶ್ವವಿದ್ಯಾಲಯದ ಮತ್ತು ಮೈಸೂರಿನಲ್ಲಿರುವ ಕೇಂದ್ರ ಆಹಾರ ಸಂಶೊಧನಾಲಯದ ಜಂಟಿ ಸಂಶೋಧನಾ ಪ್ರಯೋಗಗಳಿಂದ ಗೋಚರಕ್ಕೆ ಬಂದಿರುವ ಸಂಗತಿ ಎಂದರೆ, ಈಗ ಆಗುತ್ತಿರುವ ನಷ್ಟವನ್ನು ಕಡಿಮೆ ಮಾಡುವ ಸಾಧ್ಯತೆ ಇದೆ ಎಂಬುದು. ತೆನೆಯಲ್ಲಿರುವ ಕಾಳುಗಳನ್ನು ಪರೀಕ್ಷಿಸಿ, ತೀರಾ ಬುಡದಲ್ಲಿರುವ ಕಾಳುಗಳು ಸ್ವಲ್ಪ ಹಸಿರಿರುವಾಗಲೇ ಅಂದರೆ ಹಸಿರು ಕಾಳನ್ನು ಒತ್ತಿದರೆ ಹಾಲು ಬರದೆ ಹಟ್ಟಿಯಾಗಿರುವಾಗಲೇ ಕೊಯ್ಲು ಮಾಡಬೇಕು. ಸೂಕ್ಷ್ಮವಾಗಿ ಹೇಳುವುದಾದರೇ ರೈತರು ಸಾಂಪ್ರದಾಯಿಕವಾಗಿ ಕೊಯ್ಲು ಮಾಡುವುದಕ್ಕಿಂತ ಒಂದು ವಾರ ಅಥವಾ ಹತ್ತು ದಿವಸಗಳು ಮುಂಚಿತವಾಗಿಯೇ ಕೊಯ್ಲು ಮಾಡಿದರೆ ಕಾಳುಗಳು ಹದವಾಗಿ ಮಾಗಿ ಬಿರುಕು ರಹಿತವಾಗಿರುತ್ತವೆ. ತೆನೆಯ ತುದಿಯಲ್ಲಿರುವ ಒಂದೆರಡು ಕಾಳಲ್ಲಿ ಮಾತ್ರ ಬಿರುಕು ಕಾಣಿಸಬಹುದು.

ಹದವಾದ ಕಾಳಿನಲ್ಲಿ ತೇವಾಂಶ:

ಕಟಕ್‌ನಲ್ಲಿರುವ ಬತ್ತದ ಸಂಶೋಧನಾ ಕೇಂದ್ರ ಮತ್ತು ಜಪಾನ್ ದೇಶಗಳಲ್ಲಿ ನಡೆಸಿದ ಸಂಶೋಧನೆಯ ಪ್ರಕಾರ ಕಾಳಿನಲ್ಲಿ ಶೇ. ೨೦ಕ್ಕೂ ಹೆಚ್ಚಿನಷ್ಟು ತೇವಾಂಶವಿರುವಾಗ ಕೊಯ್ಲಿ ಮಾಡುವುದು ಉಚಿತವೆಂಬುದು ತಿಳಿದುಬಂದಿದೆ. ಆದರೆ ಪ್ರತಿ ರೈತನೂ ತೇವಾಂಶವನ್ನು ಕಂಡು ಹಿಡಿಯುವ ಯಂತ್ರೋಪಕರಣಗಳನ್ನು ಬಳಸುವುದಾಗಲಿ ಅಥವಾ ಕೊಯ್ಲಿಗೆ ಬೆಳೆ ಸಿದ್ದವಾಗುತ್ತಿರುವಾಗ ಪ್ರತಿದಿನ ಪರೀಕ್ಷಿಸುವುದಾಗಲಿ ಸಾಧ್ಯವಾಗುವುದಿಲ್ಲ.

ಸಾಂಪ್ರದಾಯಿಕ ಪದ್ಧತಿಯ ಪ್ರಕಾರ ಕಾಳುಗಳೆಲ್ಲವೂ ಮಾಗಿದ ನಂತರ ಕಟಾವು ಮಾಡುವಾಗ ಕಾಳಿನಲ್ಲಿ ಶೇ. ೧೬ ರಿಂದ ೧೭ ರಷ್ಟು ತೇವಾಂಶವಿರುತ್ತದೆಂದು ಪರೀಕ್ಷೆಯಿಂದ ತಿಳಿದು ಬಂದಿದೆ. ತೆನೆಯ ತುದಿಯಲ್ಲಿನ ಕಾಳುಗಳಲ್ಲಿ ಶೇ. ೧೨ ರಷ್ಟು ತೇವಾಂಶವಿದ್ದರೂ ಅಚ್ಚರಿಯೇನಲ್ಲ. ಕಾಳುಗಳ ಆ ಅವಸ್ಥೆಯಲ್ಲಿ ಬಿರುಕು ಬಂದೇ ಇರುತ್ತದೆ. ಸುಧಾರಿತ ರೀತಿ ಅಂದರೆ ೭ ರಿಂದ ೧೦ ದಿವಸ ಮುಂಚಿತವಾಗಿಯೇ (ತೆನೆಯ ಬುಡದಲ್ಲಿ ಕೆಲವು ಹಸಿರು ಕಾಳು ಇರುವಾಗಲೇ) ಕಟಾವು ಮಾಡುವುದರಿಂದ ತೇವಾಂಶವು ಶೇ.೨೦ಕ್ಕಿಂತ ಮೇಲ್ಪಟ್ಟೇ ಇರುತ್ತದೆ. ಮತ್ತು ಕಾಳಿನಲ್ಲಿ ಬಿರುಕು ಬಂದಿರುವುದಿಲ್ಲ. ಆದ್ದರಿಂದ ಸುಧಾರಿತ ಪದ್ಧತಿಯಲ್ಲಿ ಬತ್ತವನ್ನು ಕೊಯ್ಲು ಮಾಡಬೇಕು. ಈ ಪದ್ಧತಿಯನ್ನು ಸ್ವೀಕರಿಸುವವರು ಹಸಿರಾಗಿರುವ ಕಾಳಿನಿಂದಾಗಿ ಇಳುವರಿ ಕುಗುತ್ತದೆಂದು ಯೋಚಿಸಬಹುದು. ಆದರೆ ಅದು ಸತ್ಯಕ್ಕೆ ದೂರ ಹಳೆಯ ಪದ್ಧತಿಯಲ್ಲಿ ಈ ಕಾಳುಗಳು ಮಾಗಿದ್ದರೂ, ಮೊದಲೆ ಮಾಗಿದ ತುದಿಯ ಕಾಳುಗಳು ಉದುರುವುದಲ್ಲದೆ, ಮಿಲ್ ಮಾಡುವಾಗ ನುಚ್ಚಾಗಿ ಹೆಚ್ಚು ನಷ್ಟವಾಗುತ್ತದೆಂಬುದು ಪ್ರಯೋಗಗಳಿಂದ ತಿಳಿದು ಬಂದಿದೆ.

ಕೊಯ್ಲಿನ ನಂತರ ಎಚ್ಚರಿಕೆ:

ಬತ್ತದ ಕಟಾವಿನಂತಹ ಅರಿ ಬಿಡುವುದು (Field Sheaving) ಸಂಪ್ರದಾಯ. ಈ ರೀತಿ ಅರಿ ಬಿಡುವುದರಿಂದ ನಾವು ಸಕಾಲದಲ್ಲಿ ಕೊಯ್ದರೂ ಕೂಡ ಕಾಳುಗಳಲ್ಲಿ ಬಿರುಕು ಬರಲು ಆಸ್ಪದ ಕೊಟ್ಟಂತಾಗುತ್ತದೆ. ಹೆಚ್ಚು ದಿವಸಗಳು ಬಿಟ್ಟಂತೆಲ್ಲಾ ಬಿರುಕಿನ ಸಂಖ್ಯೆ ಏರುತ್ತಾ ಹೋಗುತ್ತದೆ. ಇದಕ್ಕೆ ಕಾರಣ ಕಡಿಮೆ ತೇವಾಂಶ ಏರಿಳಿತ. ಆದ್ದರಿಂದ ಕೊಯ್ಲಿ ನಂತರ ಆದಷ್ಟು ಬೇಗ ಒಕ್ಕಣೆಯಾಗಬೇಕು.

ಒಕ್ಕಣೆಯ ನಂತರ ಕಾಳನ್ನು ಒಣಗಿಸುವುದರಲ್ಲೂ ಸಾಕಷ್ಟು ನ್ಯೂನತೆಗಳು ಸಂಪ್ರದಾಯಿಕ ಪದ್ಧತಿಯಲ್ಲಿ ಅಡಕವಾಗಿದೆ. ಹೆಚ್ಚು ಬಿಸಲಿರುವಾಗ ಒಂದೇ ಸಮನೆ ಬತ್ತವನ್ನು ಒಣಗಿಸುವುದು ನುಚ್ಚಾಗಲು ಒಂದು ದೊಡ್ಡ ಕಾರಣ. ಹೀಗೆ ಒಣಗಿಸಿದಾಗ ಕಾಳಿನಲ್ಲಿ ಬಿರುಕು ಉಂಟಾಗುತ್ತದೆ.

ನೇರವಾದ ಬಿಸಿಲಿನಿಂದ ಕಡಿಮೆ ಸಮಯದಲ್ಲಿ ಹೆಚ್ಚು ತೇವಾಂಶವನ್ನು ಕಳೆದುಕೊಳ್ಳುವುದೇ ಬಿರುಕು ಉಂಟಾಗಲು ಕಾರಣ. ಆದ್ದರಿಂದ ಒಕ್ಕಣೆಯ ನಂತರ ಕಾಳನ್ನು ನೆರಳಿನಲ್ಲಿ ಒಣಗಿಸಬೇಕು. ಬಿಸಿಲಿನಲ್ಲೇ ಒಣಗಿಸಬೇಕಾದ ಪ್ರಮೇಯ ಬಂದಲ್ಲಿ ಎರಡು ಘಂಟೆಗಳ ಕಾಲ ಒಣಗಿದ ನಂತರ ಬತ್ತವನ್ನು ರಾಶಿ ಹಾಕಬೇಕು. ನಂತರ ಮತ್ತು ಹರಡಬೇಕು. ಸಾಧಾರಣವಾದ ಬಿಸಿಲಾದರೆ ೩-೪ ಗಂಟೆ ಗಳಿಗೊಮ್ಮೆ ರಾಶಿ ಹಾಕಿ ಒಂದು ಗಂಟೆಯ ನಂತರ ಮತ್ತೆ ಹರಡಬೇಕು. ಎಳೆ ಬಿಸಿಲಾದರೆ ರಾಶಿ ಹಾಕುವ ಬದಲು ಮಧ್ಯೆ ಮಧ್ಯೆ ಆದಷ್ಟು ಸಾರಿ ಬತ್ತವನ್ನು ಕೈಯಿಂದ ತಿರುವು ಮುರುವು ಮಾಡುವುದರಿಂದಲೂ ಕಾಳಿನ ಬಿರುಕನ್ನು ತಪ್ಪಿಸಿ, ನುಚ್ಚಾಗದಂತೆ ಮಾಡಬಹುದು.