ಜಯ ಬತ್ತದ ತಳಿಯ ಇಳುವರಿಯ ಜೊತೆಗೆ ಸಣ್ಣ ಕಾಳಿನ ಗುಣವುಳ್ಳ ಬತ್ತದ ತಳಿಗಳ ಸಂಶೋಧನೆ ಕೃಷಿ ವಿಶ್ವವಿದ್ಯಾಲಯದ ಪ್ರಾದೇಶಿಕ ಸಂಶೋಧನಾ ಕೇಂದ್ರ, ಮಂಡ್ಯ ಕ್ಷೇತ್ರದಲ್ಲಿ ೧೯೭೨ ರಿಂದ ನಡೆಯುತ್ತಿದ್ದು, ಇತ್ತೀಚೆಗೆ ಐಇಟಿ ೨೨೫೪ ಎಂಬ ಹೊಸ ತಳಿಯನ್ನು ಕಂಡು ಹಿಡಿಯಲಾಗಿದೆ. ಈ ತಳಿಯು ಈಗಾಗಲೇ ರೈತರ ತಾಕುಗಳಲ್ಲಿ ಬೆಳೆಯಲ್ಪಡುತ್ತಿದ್ದು, ಅಪಾರ ಮೆಚ್ಚುಗೆಗೆ ಪಾತ್ರವಾಗಿದೆ. ರಾಜ್ಯದ ತಳಿ ಶಿಫಾರಸ್ಸಿನ ಸಮಿತಿಯು, ಈ ತಳಿಯನ್ನು ರಾಜ್ಯದ ನೀರಾವರಿ ಪ್ರದೇಶದಲ್ಲಿನ ಮುಂಗಾರು ಹಾಗೂ ಬೇಸಿಗೆ ಬೆಳೆಗೆ ಯೋಗ್ಯವೆಂದು ಬಿಡುಗಡೆ ಮಾಡಿದೆ.

ಈ ತಳಿಯ ಕೆಲವು ಮುಖ್ಯ ಗುಣಗಳನ್ನು ಹಾಗೂ ಬೇಸಾಯ ಕ್ರಮಗಳನ್ನು ಈ ಕೆಳಗೆ ವಿವರಿಸಲಾಗಿದೆ.

ಗುಣಗಳು: ಈ ತಳಿಯನ್ನು ಟಿ ೯೦ ಮತ್ತು ಐಆರ್ ೮ ತಳಿಗಳ ಸಂಕರಣದಿಂದ ಪಡೆಯಲಾಗಿದೆ. ಈ ಹೊಸ ತಳಿಯು ಜಯ ತಳಿಗೆ ಸರಿಸಮಾನವಾದ ಇಳುವರಿ ಕೊಡುವ ಶಕ್ತಿಯನ್ನು ಹೊಂದಿದೆ. ಈ ತಳಿಯ ಅಕ್ಕಿಯ ಕಾಳು, ಗಾತ್ರ ಮತ್ತು ಇತರ ಗುಣಗಳಲ್ಲಿ ಸೋನಾ ತಳಿಯ ಅಕ್ಕಿಯನ್ನು ಹೋಲುವುದು, ಅಲ್ಲದೆ ಒಕ್ಕಣೆಯಲ್ಲಿ ತೆನೆಯಿಂದ ಕಾಳನ್ನು ಬೇರ್ಪಡಿಸುವಾಗ ಸೋನಾ ತಳಿಯಲ್ಲಿ ಉಂಟಾಗುವ ತೊಂದರೆ ಈ ತಳಿಯಲ್ಲಿ ಇರುವುದಿಲ್ಲ.

ಪ್ರಕಾಶ್ ತಳಿಯು ಸಸ್ಯ ರೂಪದಲ್ಲಿ ಸೋನಾ ತಳಿಯನ್ನು ಮತ್ತು ರೋಗ ಮತ್ತು ಕ್ರಿಮಿಕೀಟಗಳ ಬಾಧೆಯನ್ನು ತಡೆದುಕೊಳ್ಳುವ ಶಕ್ತಿಯಲ್ಲಿ ಐಆರ್೨೦ ತಳಿಯನ್ನು ಹೋಲುತ್ತದೆ. ಈ ತಳಿಯು ಬೆಂಕಿ ರೋಗಕ್ಕೆ ಮಧ್ಯಮ ನಿರೋಧಕ ಶಕ್ತಿಯನ್ನು ಹಾಗೂ ಕಂದು ಚುಕ್ಕೆ ರೋಗಕ್ಕೆ ಉತ್ತಮವಾದ ನಿರೋಧಕ ಶಕ್ತಿಯನ್ನು ಪಡೆದಿದೆ.

ಮುಂಗಾರಿನಲ್ಲಿ ೧೪೫ ದಿನಗಳಲ್ಲಿ ಕೊಯಿಲಿಗೆ ಬರುವ ಈ ತಳಿಯು ಸೋನಾ ತಳಿಗಿಂತ ಒಂದು ವಾರ ಮುಂಚಿತವಾಗಿ ಕಟಾವಿಗೆ ಬರುತ್ತದೆ. ಸೂರ್ಯನ ಬೆಳಕಿಗೆ ಸ್ವಲ್ಪ ಮಟ್ಟಿನ ಪ್ರತಿಕ್ರಿಯೆ ತೋರುವ ಪ್ರವೃತ್ತಿ ಈ ತಳಿಗೆ ಇರುವುದರಿಂದ ಬೇಸಿಗೆಯಲ್ಲಿ ಮುಂಗಾರಿನಲ್ಲಿರುವ ಅವಧಿಗಿಂತ ೮-೧೦ ದಿವಸ ತಡವಾಗಿ ಕಟಾವಿಗೆ ಬರುತ್ತದೆ.

ಬೇಸಾಯ ಕ್ರಮ:

ಒಂದು ಎಕರೆ ನಾಟಿಗೆ ೨೫ ಕೆಜಿ ಬಿತ್ತನೆ ಬೀಜ ಬೇಕಾಗುವುದು. ಒಣಗಿದ ಒಟ್ಟು (ಅಗೆ) ಅಥವಾ ಕೆಸರು ಅಗೆ ಪಾತಿಯನ್ನಾಗಲೀ ಮಾಡಿ ಸಸಿ ತಯಾರಿಸಿಕೊಳ್ಳಬೇಕು. ಸುಮಾರು ೨೦ ರಿಂದ ೨೫ ದಿನಗಳು ಸಸಿಗಳು ನಾಟಿಗೆ ಯೋಗ್ಯ, ಎಳೆ ಸಸಿಗಳನ್ನು ನಾಟಿ ಮಾಡುವುದರಿಂದ ಅವು ಬೇಗನೆ ಬೇರು ಬಿಟ್ಟು ಪೋಷಕಾಂಶಗಳನ್ನು ಹೀರಿ ಹೆಚ್ಚು ತೆಂಡೆಗಳನ್ನು ನೀಡುತ್ತದೆ. ಸಸಿಗಳನ್ನು ಸಾಲಿನಿಂದ ಸಾಲಿಗೆ ೮ ಅಂಗುಲ, ಸಸಿಯಿಂದ ಸಸಿಗೆ ೪ ಅಂಗುಲ ಅಂತರದಲ್ಲಿ ಪ್ರತಿ ಗುಳಿಗೂ ೨-೩ ಸಸಿಗಳಂತೆ ನಾಟಿ ಮಾಡಬೇಕು. ಸಸಿಗಳನ್ನು ೧-೫ ಅಂಗುಲಕ್ಕಿಂತ ಹೆಚ್ಚು ಆಳದಲ್ಲಿ ನೆಡಬಾರದು. ಈ ತಳಿಯನ್ನೂ ಮುಂಗಾರಿನಲ್ಲಿ ಆಗಸ್ಟ್ ೧೫ರ ಒಳಗೂ ಮತ್ತು ಬೇಸಿಗೆಯಲ್ಲಿ ಫೆಬ್ರವರಿ ತಿಂಗಳೊಳಗಾಗಿಯೂ ನಾಟಿ ಮಾಡಬೇಕು. ಸೋನಾ ತಳಿಗಳಿಗೆ ನಿಗದಿ ಮಾಡಿರುವ ಗೊಬ್ಬರದ ಪ್ರಮಾಣ ಈ ತಳಿಗೆ ಅನ್ವಯಿಸುತ್ತದೆ. (ಎಕರೆಗೆ ೪೦ ಕೆಜಿ ಸಾರಜನಕ, ೨೦ ಕೆಜಿ ರಂಜಕ ಮತ್ತು ೨೦ ಕೆಜಿ ಪೊಟ್ಯಾಶ್) ರಂಜಕ ಮತ್ತು ಪೊಟ್ಯಾಶ್ ಗೊಬ್ಬರಗಳನ್ನು ಸಂಪೂರ್ಣವಾಗಿಯೂ ಮತ್ತು ಅರ್ಧಭಾಗ ಸಾರಜನಕವನ್ನು ನಾಟಿ ಮಾಡುವಾಗ ಕೊಡಬೇಕು. ಎರಡನೆ ಹಂತವಾಗಿ ಕಾಲು ಭಾಗ ಸಾರಜನಕವನ್ನು ನಾಟಿಯಾದ ೩-೪ನೇ ವಾರದಲ್ಲಿ ಮೇಲು ಗೊಬ್ಬರವಾಗಿ ಕೊಡುವುದರಿಂದ ಹೆಚ್ಚಿನ ಮಟ್ಟದ ಪರಿಣಾಮ ಇಳುವರಿಯಲ್ಲಿ ಕಂಡು ಬರುತ್ತದೆ. ಉಳಿದ ಕಾಲುಭಾಗ ಸಾರಜನಕವನ್ನು ಮೊಗ್ಗು ಕಟ್ಟುವಾಗ (ನಾಟಿಯಾದ ೬ ಅಥವಾ ೭ನೇ ವಾರಗಳಲ್ಲಿ) ಕೊಡಬೇಕು. ಮಣ್ಣು ಫಲವತ್ತಾಗಿದ್ದರೆ ಪ್ರಾರಂಭದಲ್ಲಿ ಸಾರಜನಕವನ್ನು ಕೊಡುವುದಕ್ಕಿಂತ ಮೇಲುಗೊಬ್ಬರವಾಗಿ ಕೊಡುವುದು ಪರಿಣಾಮಕಾರಿ.

ನಾಟಿ ಮಾಡಿದ ಮೊದಲು ೧೦ ದಿವಸಗಳವರೆಗೆ ನೀರಿನ ಮಟ್ಟವನ್ನು ಒಂದು ಅಂಗುಲಕ್ಕೆ ಮಿತಿಗೊಳಿಸಬೇಕು. ನಂತರ ೨ ಅಂಗುಲಕ್ಕೆ ನೀರಿನ ಮಟ್ಟ ನಿಲ್ಲಿಸಬೇಕು. ಕೊಯಿಲಿಗೆ ೧೦ ದಿನ ಮುಂಚೆ ಗದ್ದೆಯಿಂದ ನೀರನ್ನು ತೆಗೆಯಬೇಕು. ಕಳೆ ತೆಗೆಯುವ ರೋಟರಿ ಯಂತ್ರವನ್ನು ನಾಟಿಯಾದ ೨, ೭ ಮತ್ತು ೯ನೇ ವಾರಗಳಲ್ಲಿ ಸಾಲಿನ ಮಧ್ಯದಲ್ಲಿ ಉಪಯೋಗಿಸಬೇಕು. ಅವಶ್ಯವಿದ್ದಲ್ಲಿ ಹರಳಿನ ರೂಪದ ಕಳೆನಾಶಕವನ್ನು ಉಪಯೋಗಿಸಬಹುದು. ನಾಟಿ ಮಾಡಿದ ೫-೭ ದಿನಗಳಲ್ಲಿ ನೀರು ಒಂದು ಅಂಗುಲದಿಂದ ಎರಡು ಅಂಗುಲ ನಿಲ್ಲಿಸಿ, ಎಕರೆಗೆ ೮ ಕೆಜಿ ೨-೩ ಡಿ ಈಥೈಲ್ ಈಸ್ಟರ್ ಅಥವಾ ೧೨ ಕೆಜಿ ಬುಟಾಕ್ಲೋರ್ ಹರಳುಗಳನ್ನು ಸಮನಾಗಿ ಹರಡಿ ಪಾತಿಗಳಿಂದ ೨೪ ಗಂಟೆಗಳಾದರೂ ನೀರು ಮತ್ತೊಂದು ಪಾತಿಗೆ ಹೋಗದಂತಿರ ಎಚ್ಚರ ವಹಿಸಬೇಕು.

ಈ ಮೇಲೆ ತಿಳಿಸಿದ ಬೇಸಾಯ ಕ್ರಮ ಅನುಸರಿಸುವುದರಿಂದ ಎಕರೆಗೆ ೩೦ ಕ್ವಿಂಟಾಲುಗಳವರೆವಿಗೂ ಇಳುವರಿ ಪಡೆಯಬಹುದೆಂದು ಹಲವಾರು ಸಂಶೋಧನಾ ಪ್ರಯೋಗಗಳಿಂದ ತಿಳಿದುಬಂದಿದೆ.

ಸಣ್ಣ ಅಕ್ಕಿ ಅಪೇಕ್ಷಿಸುವವರು ಜಯ ತಳಿಗೆ ಬದಲಾಗಿ ಈ ಹೊಸ ತಳಿಯನ್ನು ಬೆಳೆಯಬಹುದು. ಈ ಹೊಸ ತಳಿ ಬೇಗ ಕೊಯಿಲಿಗೆ ಬರುವುದರಿಂದ ಹಾಗೂ ಒಕ್ಕಣೆಯಲ್ಲಿ ಸುಲಭವಾಗಿ ಕಾಳು ತೆನೆಯಿಂದ ಬೇರ್ಪಡುವುದರಿಂದ ಸೋನಾ ತಳಿಗೆ ಬದಲಾಗಿ ಐಇಟಿ ೨೨೫೪ (ಪ್ರಕಾಶ್) ತಳಿಯನ್ನು ಬೆಳೆಯುವುದು ಸರ್ವ ವಿಧದಲ್ಲಿಯೂ ಲಾಭದಾಯಕ.