೧೯೬೪ನೇ ಸಾಲಿನಲ್ಲಿ ಕರ್ನಾಟಕ ರಾಜ್ಯದ ಬತ್ತದ ಒಟ್ಟು ಉತ್ಪಾದನೆ ಸುಮಾರು ೧೫ ಲಕ್ಷ ಟನ್ ಗಳಾಗಿದ್ದು, ೧೯೭೪ನೇ ಸಾಲಿನಲ್ಲಿ ೨೦ ಲಕ್ಷ ಟನ್್ಗಳಿಗೆ ಬತ್ತದ ಉತ್ಪಾದನೆ ಏರಿದೆ. ಅಂದರೆ ಶೇ. ೩೩ ರಷ್ಟು ಉತ್ಪಾದನೆ ಒಂದು ದಶಕದ ಅವಧಿಯಲ್ಲಿ ಹೆಚ್ಚಿದೆ. ೧೯೬೪ನೇ ಸಾಲಿನ ಬತ್ತ ಬೆಳೆಯಲ್ಪಡುತ್ತಿದ್ದ ವಿಸ್ತೀರ್ಣ ೨೭ ಲಕ್ಷ ಎಕರೆಗಳಾಗಿದ್ದು, ೧೯೭೪ನೇ ಸಾಲಿನಲ್ಲಿ ೨೮.೫ ಲಕ್ಷ ಎಕರೆಗಳಲ್ಲಿ ಬತ್ತ ಬೆಳೆಯಲ್ಪಡುತ್ತಿದ್ದು, ೧೦ ವರ್ಷದ ಅವಧಿಯಲ್ಲಿ ವಿಸ್ತೀರ್ಣ ಕೇವಲ ಶೇ.೬ ರಷ್ಟು ಮಾತ್ರ ಹೆಚ್ಚಿದೆ. ಶೇ. ೩೩ ರಷ್ಟು ಹೆಚ್ಚುವರಿ ಉತ್ಪಾದನೆಯಲ್ಲಿ ಆರರಷ್ಟು ವಿಸ್ತೀರ್ಣ ಬಡಾವಣೆಯಿಂದ ಸಾಧ್ಯವಾಯಿತೆನ್ನಬಹುದು. ಉಳಿದ ಶೇ.೨೭ ರಷ್ಟು ಹೆಚ್ಚುವರಿ ಉತ್ಪಾದನೆ ಸಂಭವಿಸಿದ ಬಗೆ ಹೇಗೆ ಎಂಬುದು ವಿಶ್ಲೇಷಣಾರ್ಹ ಹಾಗೂ ಉಪಯುಕ್ತ.

೧೯೬೪ನೇ ಸಾಲಿನಿಂದ ೧೯೭೪ನೇ ಸಾಲಿನವರಿಗೆ ಹೆಚ್ಚಿರುವ ಉತ್ಪಾದನೆ ಶೇ.೨೭ರಷ್ಟು ಎಂದು ಮೇಲೆ ಪ್ರಸ್ಥಾಪಿಸಲಾಗಿದೆ. ಅಂದರೆ ವರ್ಷಕ್ಕೆ ಶೇ. ೨.೭ ರಷ್ಟು ಹೆಚ್ಚಿರುವುದಕ್ಕೆ ಅರಿತುಕೊಳ್ಳಬಹುದಾದ ಆಧಾರವಿದೆ. ಕಳೆದ ಒಂದು ದಶಕದಲ್ಲಿ ಬತ್ತದ ಬೇಸಾಯದಲ್ಲಿ ಆಧುನಿಕ ಕೃಷಿ ಪದ್ಧತಿ ಅನುಕರಣೆ ಹೆಚ್ಚುವರಿ ಉತ್ಪಾದನೆಗೆ ಬಹಳ ಮಟ್ಟಿಗೆ ನೆರವಾಗಿದೆ ಎಂದು ಹೇಳಬಹುದು. ಬತ್ತದಲ್ಲಿ ಸಂಶೋಧನೆ ಸುಮಾರು ಕಳೆದ ನಾಲ್ಕು ದಶಕಗಳಿಂದಲೂ ನಡೆದಿದೆಯಾದರೂ ಮಹತ್ವವಾದ ಕೊಡುಗೆ ಕಳೆದ ಒಂದು ದಶಕದ್ದು ಮಾತ್ರ ಎಂದು ಹೇಳಬಹುದು. ನೂತನ ಗಿಡ್ಡ ಮತ್ತು ಅರೆಗಿಡ್ಡ (Dwarf and semidwarf) ಬತ್ತದ ತಳಿಗಳಿಗೆ ಸೂಕ್ತ ಆಧುನಿಕ ಬೇಸಾಯ ಪದ್ಧತಿ ಮತ್ತು ರಸಗೊಬ್ಬರಗಳ ಉಚಿತ ಬಳಕೆಗೆ ಬಂದದ್ದು, ಇದೇ ದಶಕದಲ್ಲಿ. ಸಸ್ಯ ಸಂರಕ್ಷಣೆ ಕಡೆಗೆ ಹೆಚ್ಚು ಗಮನ ವಹಿಸಿದ್ದೂ ಕೆಲವೇ ವರ್ಷಗಳಿಂದ. ಈ ಎಲ್ಲಾ ಪದ್ಧತಿಗಳ ಸಮಗ್ರ ರೀತಿಯ ಅನುಕರಣೆಯ ಪ್ರತಿ ಫಲವೇ ಶೇ. ೨.೭ರಷ್ಟು ಪ್ರಮಾಣದಲ್ಲಿ ಕಂಡು ಬಂದ ವಾರ್ಷಿಕ ಹೆಚ್ಚು ಉತ್ಪಾದನೆ. ಸಂಶೋಧನಾ ಪ್ರಯೋಗಗಳ ಫಲಿತಾಂಶ ಹಾಗೂ ಸಂಗ್ರಹಿತ ಅಂಕಿ ಅಂಶಗಳು ಈ ಕಾರಣ ಸರಿಯಾದುದೆಂದು ಪುಷ್ಟೀಕರಿಸುತ್ತವೆ.

೧೯೬೪ ಮತ್ತು ೬೫ನೇ ಸಾಲಿನಲ್ಲಿ ತಾಯ್‌ಚುಂಗ್ ೬೫, ತಾಯ್ನಾನ್ ೩ ಮತ್ತು ತಾಯ್‌ಚುಂಗ್ ನೇಟೀವ್ ೧ ಎಂಬ ತಳಿಗಳು ಸ್ವಲ್ಪ ಮಟ್ಟಿಗೆ ಬೆಳೆಯಲ್ಪಟ್ಟವು. ವಿವಿಧ ಹವಾಗುಣ ಮತ್ತು ಕಾಲಗಳಿಗೆ ಇವುಗಳಿಗೆ ಇವುಗಳ ಪ್ರತಿಕ್ರಿಯೆ ಬಗ್ಗೆ ಹೆಚ್ಚು ಮಾಹಿತಿ ಇರಲಿಲ್ಲ. ಆದ್ದರಿಂದ ಇವುಗಳಿಂದ ಕೆಲವು ಕಡೆ ಇಳುವರಿ ನಿರಾಶದಾಯಕ ಎನಿಸಿದರೂ ಮತ್ತೆ ಕೆಲವು ಕಡೆ ಅಚ್ಚರಿಗೊಳಿಸುವಷ್ಟು ಅಂದರೆ ಎಕರೆಗೆ ೩೫ ರಿಂದ ೪೦ ಕ್ವಿಂಟಾಲ್ ಇಳುವರಿಯೂ ಫಲಿಸಿತು. ನಾಡ ತಳಿಗಳ ಇಳುವರಿ ಎಂದಿಗೂ ಎಕರೆಗೆ ೨೦ ಕ್ವಿಂಟಾಲ್ ಮೀರಿಲ್ಲವೆಂದೂ ಇಲ್ಲಿ ಸ್ಮರಿಸಬಹುದಾಗಿದೆ. ಹೊಸ ತಳಿಗಳಿಗೆ ಯೋಗ್ಯ ಬಿತ್ತನೆ ಮತ್ತು ನಾಟಿಯ ಕಾಲ ಆಧುನಿಕ ಬೇಸಾಯ ಪದ್ಧತಿ, ಸಾವಯವ ಗೊಬ್ಬರ ರಾಸಾಯನಿಕ ಗೊಬ್ಬರಗಳ ನಿರ್ವಹಣೆ ಮುಂತಾದವು ಎಕರೆವಾರು ಇಳುವರಿಯನ್ನು ಮತ್ತಷ್ಟು ಏರಿಸಲು ನೆರವಾಗಿದೆ. ರೋಗ ಮತ್ತು ಕೀಟಗಳ ನಿಯಂತ್ರಣದ ಬಗ್ಗೆ ಮಾಹಿತಿ ಹೆಚ್ಚಿದಂತೆಲ್ಲಾ ಅಧಿಕ ಇಳುವರಿ ನೀಡುವ ಗಿಡ್ಡ ತಳಿಗಳ ಬಳಕೆ ಹೆಚ್ಚುತ್ತಾ ಬಂತು. ಆದಿಯಲ್ಲಿ ಕಾಳಿನ ಗುಣ ದೋಷಗಳಿಂದ ಅಂದರೆ ದಪ್ಪ ಕಾಳು ಮತ್ತು ಗಂಜಿ ಕಟ್ಟುವ ಅನ್ನ ಇವುಗಳಿಂದ ಗಿಡ್ಡ ತಳಿಗಳು ಅಹಿತವೆನಿಸಿದ್ದವು. ಆದರೆ ೧೯೬೯ನೇ ಸಾಲಿನಿಂದ ಈಚೆಗೆ ಬಿಡುಗಡೆಯಾದ ಕುಸುಮ, ರತ್ನ ಐ.ಆರ್. ೨೦ ಮಧು, ಸೋನಾ, ವಾಣಿ, ಎಂ.ಆರ್. ೩೦೧ ಮುಂತಾದ ಉತ್ತಮ ಕಾಳಿನ ಗಿಡ್ಡ ತಳಿಗಳು ರೈತರಿಗೆಲ್ಲಾ ಜನಪ್ರಿಯವಾಗಿ ಅಧಿಕ ಇಳುವರಿ ತಳಿಗಳ ಬಳಕೆ ಪ್ರತಿ ವರ್ಷವೂ ಹೆಚ್ಚುತ್ತಾ ಬಂತು. ೧೯೬೮-೭೯ನೇ ಸಾಲಿನಲ್ಲಿ ಕೇವಲ ಶೇ. ೬.೮ರಷ್ಟು ಪ್ರದೇಶದಲ್ಲಿ ಮಾತ್ರ ಗಿಡ್ಡ ತಳಿಗಳು ಬೆಳೆಯಲ್ಪಟ್ಟವು. ೧೯೭೪ನೇ ಸಾಲಿನಲ್ಲಿ ಶೇ. ೨೭.೫ ರಷ್ಟು ಪ್ರದೇಶದಲ್ಲಿ ಗಿಡ್ಡ ತಳಿಗಳು ಶೋಭಿಸಿದ್ದವು. ೧೯೭೫ರಲ್ಲಿ ಶೇ. ೩೦ರಷ್ಟು ಪ್ರದೇಶದಲ್ಲಿ ಅಧಿಕ ಇಳುವರಿ ತಳಿಗಳು ಬೆಳೆಯಲ್ಪಟ್ಟವು.

ಗಿಡ್ಡ ತಳಿಗಳ ಸಸ್ಯ ಸ್ವರೂಪದ ಅಥವಾ ಕೆಲವು ಮುಖ್ಯ ಗುಣಗಳ ಪರಿಚಯ ಇಲ್ಲಿ ಸೂಕ್ತವೆನಿಸುತ್ತದೆ. ಗಿಡ್ಡ ತಳಿಗಳು ಸುಮಾರು ೧೦೦ ಸೆ.ಮೀ. ಕಡಿಮೆ ಎತ್ತರವಾಗಿದ್ದು, ದಪ್ಪ ಹಾಗೂ ಗಟ್ಟಿಯಾದ ಕಾಂಡವನ್ನು ಹೊಂದಿರುತ್ತದೆ. ಆದ್ದರಿಂದ ಇವು ಹೆಚ್ಚಾಗಿ ಬೆಳೆದರೂ ಬೀಳುವುದಿಲ್ಲ.  (non lodging) ಅಲ್ಲದೆ ಹೆಚ್ಚು ತೆಂಡೆ ಹೊಡೆಯುವ ಶಕ್ತಿ ಹೊಂದಿದ್ದು, ಹೆಚ್ಚು ತೆನೆಗಳನ್ನು ನೀಡಿ ಇಳುವರಿ ಹೆಚ್ಚಿಸಲು ನೆರವಾಗುತ್ತದೆ. ಎಲೆಗಳು ಅಗಲವಾಗಿ ದಪ್ಪವಾಗಿ ಹೆಚ್ಚು ಹಸಿರು ಬಣ್ಣದಿಂದ ಕೂಡಿದ್ದು, ನೆಟ್ಟಗೆ ನಿಂತು ಸೂರ್ಯ ರಶ್ಮಿಯನ್ನು ಚೆನ್ನಾಗಿ ಉಪಯೋಗಿಸಿಕೊಂಡು ಕಾಳು ಚೆನ್ನಾಗಿ ತುಂಬಿ ಹೆಚ್ಚು ಕಾಳು ಉತ್ಪಾದನೆಯಾಗಿ ಇಳುವರಿಯು ಹೆಚ್ಚಲು ಆಧಾರವಾಗುತ್ತದೆ.

ಹಗಲು ರಾತ್ರಿ ಇವುಗಳ ಅವಧಿಯ ಏರುಪೇರಿಗೆ ಪ್ರತಿಕ್ರಿಯೆ ತೋರದೆ ಮಳೆಗಾಲ ಮತ್ತು ಬೇಸಿಗೆ ಕಾಲಗಳಲ್ಲೂ ಒಂದೇ ಸಮನಾಗಿ ಹೂ ಬಿಟ್ಟು ಬೆಳೆಯಲು ಅನುಕೂಲವೆನಿಸಲ್ಪಟ್ಟಿವೆ. (Photoinsensitive) ಜಗನ್ನಾಥ ಎಂಬ ತಳಿ ಮಾತ್ರ ಇದಕ್ಕೆ ಹೊರತಾಗಿದೆ. ಇದನ್ನು ಬೇಸಿಗೆಯಲ್ಲಿ ಬೆಳೆಯಲಾಗುವುದಿಲ್ಲ. ರಸಗೊಬ್ಬರದ ಪ್ರಮಾಣ ಅಥವಾ ಬೇಸಾಯ ಕ್ರಮವರಿತು ಹೆಚ್ಚಿದಂತೆಲ್ಲಾ ಇಳುವರಿಯು ಹೆಚ್ಚುತ್ತದೆ.

(Management and Fertilizer Responsive) ಇದೀಗ ವಿವಿಧ ಹವಮಾನ ಮತ್ತು ಕಾಲಕ್ಕೆ ಹೊಂದಿಕೊಳ್ಳುವ ಹಾಗೂ ವಂಶವಾಹಿಗಳ ಪ್ರಭಾವದಿಂದ ರೋಗ, ಕೀಟ, ಚಳಿ, ಚೌಳು ಮಣ್ಣು ಇಂತಹ ಸಮಸ್ಯೆಗಳನ್ನು ಎದುರಿಸಿ ತೃಪ್ತಿಕರವಾದ ಇಳುವರಿ ನೀಡಬಲ್ಲ ಆಧುನಿಕ ಬತ್ತದ ತಳಿಗಳು (Resistant Verieties) ಬಿಡುಗಡೆಯ ಹಂತದಲ್ಲಿವೆ.

ಅಲ್ಲದೆ ಈಗಾಗಲೇ ಬೆಳೆಯಲ್ಪಡುತ್ತಿರುವ ಹಾಗೂ ಬಿಡುಗಡೆಯ ಹಂತದಲ್ಲಿರುವ ಆಧುನಿಕ ಗಿಡ್ಡ ಮತ್ತು ಅರೆಗಿಡ್ಡ ತಳಿಗಳು ಭೂಮಿಯ ಮೇಲೆ ನಿಂತ ಪ್ರತಿ ಒಂದು ದಿನಕ್ಕೆ ಒಂದು ಎಕರೆಗೆ ೨೦ ಕೆ.ಜಿ ಅಥವಾ ಒಂದು ಹೆಕ್ಟೇರಿಗೆ ೫೦ ಕೆಜಿ ಬತ್ತದ ಕಾಳನ್ನು ಕೊಡುವ ಶಕ್ತಿ ಹೊಂದಿದೆ. ನಾಡ ತಳಿಗಳು ಎಕರೆಗೆ ೧೦-೧೨ ಕೆಜಿ ದಿನದ ಇಳುವರಿ ಮಾತ್ರ ಕೊಡಬಲ್ಲವು ಎಂಬುದನ್ನು ಇಲ್ಲಿ ನಮೂದಿಸಬಹುದಾಗಿದೆ. ಆದ್ದರಿಂದ ಗಿಡ್ಡ ತಳಿಗಳು ಉತ್ಪಾದನೆಯನ್ನು ಹೆಚ್ಚಿಸುವುದರಲ್ಲಿ ಬಹಳ ಮಟ್ಟಿಗೆ ನೆರವಾಗುತ್ತದೆಂಬುದನ್ನು ಬತ್ತ ಬೆಳೆಯುವ ರೈತರೆಲ್ಲಾ ನೆನಪಿನಲ್ಲಿಟ್ಟುಕೊಂಡು ಕಾಲ ಮತ್ತು ಹವಾಗುಣಕ್ಕೆ ತಕ್ಕಂತೆ ಗಿಡ್ಡ ಅಥವಾ ಅರೆಗಿಡ್ಡ ತಳಿಗಳನ್ನೇ ಬೆಳೆಯುವುದ ಫಲಪ್ರದದ ಆಧುನಿಕ ಬತ್ತದ ತಳಿಗಳು ಹೆಚ್ಚು ಉತ್ಪಾದನೆ ನೀಡಿ, ರೈತನ ಮತ್ತು ರಾಷ್ಟ್ರದ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಲು ಮಹತ್ವದ ಪಾತ್ರ ವಹಿಸುತ್ತದೆ ಎನ್ನಬಹುದು.