ಮೂಲತಃ ಬತ್ತವು ಹೆಚ್ಚು ನೀರನ್ನು ಅಪೇಕ್ಷಿಸುವ ಬೆಳೆ. ಒಂದು ಎಕರೆ ಬತ್ತ ಬೆಳೆಯಬೇಕಾದರೆ ಸುಮಾರು ೪೮ ಎಕರೆ ಇಂಚು ನೀರು ಬೇಕಾಗುತ್ತದೆ. ಕೆಲವು ಕಡೆ ೭೫ ಎಕರೆ ಇಂಚುವರೆಗೂ ಬೇಕಾಗುತ್ತದೆಂದು ವರದಿ ಇದೆ. ನೀರಿನ ಪೂರೈಕೆ ಭೂಮಿಯ ಗುಣ, ತಳಿಯ ಅವಧಿ, ಉಷ್ಣಾಂಶ, ಪೋಷಣೆಯ ಕ್ರಮ ಮತ್ತು ಋತುವನ್ನು ಅವಲಂಭಿಸುತ್ತದೆ. ಚೆನ್ನಾಗಿ ಬಸಿಯುವ ಮಣ್ಣು, ಬೇಸಿಗೆ ಬೆಳೆ, ದೀರ್ಘಾವಧಿ ತಳಿ ಮುಂತಾದ ಸಂದರ್ಭಗಳಲ್ಲಿ ನೀರಿನ ಬೇಡಿಕೆ ಅಧಿಕವಾಗಿರುತ್ತದೆ. ನಾವು ಕೊಟ್ಟ ನೀರಿನಲ್ಲಿ ಹೆಚ್ಚು ಭಾಗವು ಅಂದರೆ ಬತ್ತವು ಉಪಯೋಗಿಸಿಕೊಳ್ಳುವುದಕ್ಕಿಂತ ಹೆಚ್ಚು ಪಾಲು ವ್ಯಯವಾಗಿಯೇ ಹೋಗುತ್ತಿದೆ ಎಂಬುದಕ್ಕೆ ಸಾಕಷ್ಟು ಆಧಾರಗಳಿವೆ. ಬೆಳೆಯ ಬೆಳವಣಿಗೆಗಾಗಿ ಉಪಯೋಗಿಸುವ ನೀರಿನಂಶದ ಜೊತೆಗೆ ಭೂಮಿಯಲ್ಲಿ ಬಸಿಯುವ ಮತ್ತು ಆವಿಯಾಗುವ ನೀರಿನ ಅಂಶವೂ ಸೇರಿಸುವುದರಿಂದ ಬೇಸಿಗೆಯಲ್ಲಿ ಮಳೆಗಾಲಕ್ಕಿಂತ ಹೆಚ್ಚಿಗೆ ನೀರು ಬೇಕಾಗುತ್ತದೆ. ಆದರೆ ನಿಜವಾದ ನೀರಿನ ಬೇಡಿಕೆ ಬಹಳ ಕಡಿಮೆ ಪ್ರಮಾಣವಾಗಿರುತ್ತದೆ. ಜಪಾನ್ ಮತ್ತು ಕೆಲವು ಇತರೇ ದೇಶಗಳಲ್ಲಿ ಕೇವಲ ೧೬ ಎಕರೆ ಇಂಚು ನೀರನ್ನು ಉಪಯೋಗಿಸಿ ಬತ್ತವನ್ನು ಬೆಳೆಯುತ್ತಾರೆ. ಗದ್ದೆಯ ಅಡಿ ಭಾಗದಲ್ಲಿ ಅವರು ಆಲ್ ಕೆರೇನ್ ಹಾಳೆಯನ್ನು ಹಾಕಿ ನೀರು ಬಸಿದು ಹೋಗದ ಹಾಗೆ ಕ್ರಮ ಕೈಗೊಳ್ಳುತ್ತಾರೆ. ಆದರೆ ಈ ಪದ್ಧತಿಯ ಅನುಕರಣೆಯನ್ನು ನಮ್ಮಲ್ಲಿ ಪ್ರಚಾರಕ್ಕೆ ತರುವುದು ಸದ್ಯಕ್ಕಿಷ್ಟು ಕರ್ನಾಟಕ ರಾಜ್ಯದಲ್ಲಿ ಬತ್ತಕ್ಕೆ ದೊರಕುತ್ತಿರುವ ನೀರಿನ ಸಾರ್ಥಕ ಉಪಯೋಗದತ್ತ ಯೋಚಿಸಿದರೆ ಕೆಳಗಿನ ಕೆಲವು ಅಂಶಗಳ ಮನವರಿಕೆ ಉಪಯುಕ್ತವೆನಿಸುತ್ತದೆ.

ರೈತರು ಸಾಮಾನ್ಯವಾಗಿ ನೀರನ್ನು ಹೆಚ್ಚಾಗಿ ನಿಲ್ಲಿಸಿ ಹಾಗೂ ಹರಿಸಿ ಬತ್ತ ಬೆಳೆಯುವುದು ವಾಡಿಕೆ. ಬತ್ತಕ್ಕೆ ಈ ರೀತಿಯ ನೀರಿನ ವ್ಯವಸ್ಥೆ ಅನಾವಶ್ಯಕ ಹಾಗೂ ಹಾನಿಕಾರಕ. ಸಾಮಾನ್ಯವಾಗಿ ರೈತರು ಇಡೀ ಗದ್ದೆಯ ಕ್ಷೇತ್ರವನ್ನೇಲ್ಲಾ ಒಂದೇ ಒಂದು ಮೇಲ್ಭಾಗದ ಕಾಲುವೆಯಿಂದ ಮಡಿಗಳ ಮೂಲಕವೇ ನೀರು ಹಾಯಿಸುವುದು ವಾಡಿಕೆ. ಈ ಪದ್ಧತಿಯಿಂದ ಗದ್ದೆಗೆ ಹಾಕಿದ ಗೊಬ್ಬರ ಮತ್ತು ಬೆಳೆಗೆ ಬೇಕಾದ ಮುಖ್ಯವಾದ ಪೋಷಕಾಂಶಗಳು (Zn… Mu… Ca… Bo… B… N) ನೀರಿನಲ್ಲಿ ಕರಗಿ, ಬಸಿದು ಪೋಲಾಗುವುದುಂಟು. ಅಲ್ಲದೆ ನೀರು ಸಹ ವ್ಯಯವಾಗುತ್ತದೆ. ಆದ್ದರಿಂದ ನೀರು ಹಾಯಿಸುವುದಕ್ಕೆ ಆಯಾ ಮಡಿಗಳಿಗೆ ಅನುಕೂಲವಾಗುವಂತೆ ಪ್ರತ್ಯೇಕವಾದ ಕಾಲುವೆಗಳ ಮೂಲಕ ಹದವಾಗಿ ನೀರು ಕಟ್ಟುವುದು ಉತ್ತಮ. ನೀರಿನ ಅಭಾವದಿಂದಾಗಿ ಅಥವಾ ಹೆಚ್ಚು ನೀರು ಇದ್ದರೂ ಅದನ್ನು ಹೆಚ್ಚು ಪ್ರದೇಶದ ಬೇಸಾಯಕ್ಕೆ ಉಪಯೋಗಿಸುವ ಕೃಷಿಯಿಂದ ಹಾಗೂ ಉತ್ಪಾದನೆಯನ್ನು ಅಧಿಕಗೊಳಿಸುವ ಸಲುವಾಗಿ ನೀರಿನ ಸದುಪಯೋಗ ಅನಿವಾರ್ಯವಾಗಿದೆ. ಪ್ರತಿಯೊಂದ ಹಂತದಲ್ಲೂ ನೀರಿನ ಹತೋಟಿ ಅಗತ್ಯ.

ಸಸಿ ಮಡಿಯಲ್ಲಿ ನೀರಿನ ಹತೋಟಿ ಬಹು ಮುಖ್ಯವಾದದ್ದು. ಹಸಿ ಮಡಿ ಅಥವಾ ಬರ ಮಡಿ ಯಾವುದೇ ಆಗಲಿ ನಿರ್ದಿಷ್ಟ ಪ್ರಮಾಣದಲ್ಲಿ ಒಂದೇ ಹದವಾದ ರೀತಿಯಲ್ಲಿ ಪ್ರತಿಯೊಂದು ಬೀಜ ಅಥವಾ ಪೈರಿಗೂ ನೀರು ದೊರಕುವಂತಾಗಿ ಪ್ರತಿಯೊಂದು ಮಾಡುವುದು ಅವಶ್ಯಕ.

ಗದ್ದೆಯ ಮಡಿಗಳಲ್ಲಿ ನೀರಿನ ಹತೋಟಿ ಮುಖ್ಯವಾದ ಅಂಶ. ಮಡಿಗಳ ತಯಾರಿ ಆರಂಭವಾದಾಗಿನಿಂದಲೂ ಗೊಬ್ಬರ ಮತ್ತು ಸೊಪ್ಪು ಕೊಳೆಯಲು ಸಾಕಷ್ಟು ಮುಂಚಿತವಾಗಿ ನೀರನ್ನು ಬಿಡಬೇಕು. ಕೆಸರು ಗದ್ದೆಯಾಗುವವರೆಗೂ ಸಾಕಷ್ಟು ನೀರನ್ನು ಒದಗಿಸುವುದರಿಂದ ಉತ್ತಮ ಮತ್ತು ಫಲವತ್ತಾದ ಮಡಿಗಳನ್ನು ತಯಾರಿಸಲು ಸಾಧ್ಯ. ಮಡಿಗಳನ್ನು ಮಟ್ಟ ಮಾಡುವುದಕ್ಕೆ ನೀರಿನ ಸಹಾಯ ಅತ್ಯಗತ್ಯ. ಇಲ್ಲದಿದ್ದರೆ ತಗ್ಗುಗಳಲ್ಲಿ ನೀರು ಹೆಚ್ಚಾಗಿ ನಿಂತು, ದಿಬ್ಬಗಳಲ್ಲಿ ನೀರಿನ ಕೊರತೆಯು ಉಂಟಾಗಿ, ಒಟ್ಟಿನಲ್ಲಿ ಹೆಚ್ಚು ನೀರನ್ನು ಹರಿಸಿದರೂ, ಎರಡೂ ಭಾಗಗಳಲ್ಲಿಯೂ ಬೆಳೆಗೆ ಹಾನಿಯುಂಟಾಗುತ್ತದೆ. ಹೆಚ್ಚಾಗಿ ನೀರು ನಿಂತ ಜಾಗಗಳಲ್ಲಿ ಕಡಿಮೆ ಎತ್ತರದ ಪೈರುಗಳು ಸುಳಿ ನೀರಿನಲ್ಲಿ ಮುಳುಗಿ ಕೊಳೆತು ಹೋಗುವುದುಂಟು. ದಿಬ್ಬಗಳಲ್ಲಿ ಪೈರು ಬೇರು ಕೊಡಲಾರದೆ ಒಣಗಿ ಹೋಗುವ ಸಂಭವ ಉಂಟು. ಆದ್ದರಿಂದ ನಾಟಿ ಮಾಡುವಾಗ ಎಲ್ಲಾ ಕಡೆಯೂ ಒಂದು ಅಂಗುಲದಷ್ಟು ನೀರು ನಿಲ್ಲುವಂತೆ ಮಾಡುವುದು ಬಹಳ ಮುಖ್ಯವಾದ ಅಂಶ. ಹೆಚ್ಚು ನೀರು ನಿಂತಲ್ಲಿ ನಾಟಿ ಮಾಡಿದ ಪೈರುಗಳು ತೇಲಿ ಅಥವಾ ಸುಳಿ ನೀರಿನಲ್ಲಿ ಮುಳುಗಿ ಕೊಳೆತು ಹೋಗುವ ಸಾಧ್ಯತೆ ಇದೆ.

ನಾಟಿ ಮಾಡಿದ ನಂತರ ಹೆಚ್ಚಾಗಿ ನೀರು ಹರಿಸದೆ ಸುಮಾರು ೧೦ ದಿವಸಗಳವರೆಗೂ ಒಂದೆ ಅಂಗುಲ ನೀರನ್ನು ಕೊಡುವುದರಿಂದ ಬಹಳ ಮಟ್ಟಿಗೆ ಕಳೆಯನ್ನು ತಡೆಗಟ್ಟಬಹುದು. ಇದರಿಂದಾಗಿ ಕಳೆ ತೆಗೆಯುವ ಖರ್ಚಿನಲ್ಲಿ ಉಳಿತಾಯಕ್ಕಿಂತಲೂ ಹೆಚ್ಚಾಗಿ, ಗದ್ದೆಯಲ್ಲಿನ ಸಾರಕ್ಕೆ ಕಳೆಗಳ ಪೈಪೋಟಿಯನ್ನು ತಪ್ಪಿಸಿದಂತಾಗುತ್ತದೆ. ಈ ರೀತಿ ಹದವಾಗಿ ಕೊಚ್ಚಿ ಹೋಗದಂತೆ ನೀರನ್ನು ಕೊಡುವುದರಿಂದ ಪೋಷಕಾಂಶಗಳನ್ನು ಕಾಪಾಡಿಕೊಂಡಂತಾಗುತ್ತದೆ. ಇತ್ತೀಚೆಗೆ ಕಳೆ ನಾಶಕಗಳ ಉಪಯೋಗ ಪ್ರಚಾರಕ್ಕೆ ಬರುತ್ತಿದೆ. ನಾಟಿಯಾದ ೫, ೬ ಅಥವಾ ೭ನೇ ದಿವಸ “೨-೪” ಡಿ ಅಥವಾ “ಮಾಚ್ಯೆದೆ” ಕಳೆ ಹರಳನ್ನು ಉಪಯೋಗಿಸಬೇಕು. ಇದನ್ನು ಸುಮಾರು ಒಂದು ಅಂಗುಲ ನೀರಿರುವಾಗಲೇ ಹಾಕಿ, ನಂತರ ನೀರನ್ನು ತಪ್ಪಿಸುವುದಲ್ಲದೆ ಒಂದು ಮಡಿಯಿಂದ ಇನ್ನೊಂದು ಮಡಿಗೆ ಹೋಗದಂತೆ ನೋಡಿಕೊಳ್ಳಬೇಕು. ಇದಾದ ನಂತರ ಒಂದರಿಂದ ಎರಡು ಅಂಗುಲ ನೀರನ್ನು ಕೊಡುತ್ತಿರಬೇಕು. ಇದಕ್ಕಿಂತ ಹೆಚ್ಚು ನೀರು ಹರಿದಲ್ಲಿ ಬತ್ತಕ್ಕೇನೂ ಅನುಕೂಲವಿಲ್ಲ. ಬದಲಾಗಿ ಪೋಷಕಾಂಶಗಳ ನಷ್ಟವೆಂದು ಹೇಳಬಹುದು.

ನೀರು ಹೇರಳವಾಗಿದ್ದಲ್ಲಿ ನಾಟಿಯಾದ ೧೦ ದಿವಸಗಳಿಂದ ಕಟಾವು ಮಾಡುವ ೧೦ ದಿವಸಗಳ ಮೊದಲಿನವರೆಗೆ ೧-೨ ಅಂಗುಲ ನೀರನ್ನು ನಿಲ್ಲಿಸುವುದು ಉತ್ಪಾದನೆಯ ದೃಷ್ಟಿಯಿಂದ ಅನುಕೂಲವೆಂದು ಸಂಶೋಧನಾ ವರದಿಗಳಿವೆ. ಇತ್ತೀಚೆಗೆ ಮೈಸೂರು ಹತ್ತಿರ ಇರುವ ನಾಗೇನಹಳ್ಳಿ ಬತ್ತದ ಸಂಶೋಧನಾ ಕೇಂದ್ರ, ಸಿರಗುಪ್ಪ ಮತ್ತು ತಮಿಳುನಾಡು ಹಾಗೂ ಆಂಧ್ರ ಪ್ರದೇಶಗಳಲ್ಲಿ ನಡೆಸಿದ ಸಂಶೋಧನೆಯಿಂದ ೩ ದಿನಗಳ ಅಂತರದಲ್ಲಿ ನೀರು ಹಾಯಿಸುತ್ತಿರುವುದರಿಂದ ಬೆಳೆ ಮತ್ತು ಉತ್ಪಾದನೆ ಕಡಿಮೆಯಾಗಲಿಲ್ಲವೆಂದು ತಿಳಿದು ಬಂದಿದೆ. ಅಲ್ಲಿನ ಮಣ್ಣು ಮತ್ತು ಕೊಡುವಾಗ ಹೆಚ್ಚು ನೀರನ್ನು ಕೊಟ್ಟದ್ದರಿಂದ ಭೂಮಿ ಒಣಗಿ ಗಟ್ಟಿಯಾಗುವ ಸಂದರ್ಭವೇ ಬರಲಿಲ್ಲವೆಂಬುದನ್ನು ಗಮನಿಸಬೇಕು. ಕಪ್ಪು ಭೂಮಿಯನ್ನು ಒಡಕು ಕಾಣಿಸುವಷ್ಟು ಒಣಗಿದಾಗ ನೀರಿನಲ್ಲಿ ಶೇ. ೨೫ ರಷ್ಟು ಉಳಿತಾಯವಾಯಿತೆಂದೂ ಅದರಿಂದ ಶೇ. ೧೦ ರಷ್ಟು ಇಳುವರಿ ಕಡಿಮೆಯಾಯಿತೆಂದು ತಿಳಿದುಬಂದಿದೆ. ಇದರಿಂದ ನಮ್ಮ ಗಮನಕ್ಕೆ ಬರುವ ಅಂಶವೆಂದರೆ, ಯಾವಾಗಲೂ ಹೆಚ್ಚಿನ ನೀರು ಬತ್ತಕ್ಕೆ ಅವಶ್ಯಕವೆಂಬ ಭಾವನೆ ತಪ್ಪು. ಆದಾಗ್ಯೂ ನಾಲ್ಕು ಹಂತಗಳಲ್ಲಿ ೧-೨ ಅಂಗುಲದಷ್ಟು, ನೀರು ನಿಂತಿರಬೇಕಾದ ಅವಶ್ಯಕತೆಯಿದೆ.

ಮೊದಲನೆಯದು ಮೇಲೆ ಹೇಳಿದಂತೆ ನಾಟಿಯಾದ ನಂತರ ಮೊದಲ ೧೦ ದಿವಸಗಳು.

ಎರಡನೆಯದು ತೆಂಡೆ ಹೊಡೆಯುವ ಸಮಯದಲ್ಲಿ ಇದು ಅಲ್ಪಾವಧಿ ತಳಿಗಳಲ್ಲಿ ನಾಟಿ ಮಾಡಿದಾಗಿನಿಂದ ೩ನೇ ಮತ್ತು ೪ನೇ ವಾರ ದೀರ್ಘಾವಧಿ ತಳಿಗಳಲ್ಲಿ ೪ನೇ ಮತ್ತು ೫ನೇ ವಾರವಾಗಿರುತ್ತದೆ. ನೀರು ಕಮ್ಮಿಯಾದರೆ ತೆಂಡೆಯೂ ಕಮ್ಮಿಯಾಗುತ್ತದೆ.

ಮೂರನೆಯದು ಮೊಗ್ಗು ಕಚ್ಚುವಾಗ ಅಥವಾ ಕೆಲವರು ಕರೆಯುವಂತೆ ಗರ್ಭಾಂತರವಾಗುವಾಗ ಇದು ತಳಿಯ ಅವಧಿಯನ್ನು ಅವಲಂಭಿಸುತ್ತದೆ. ಎಂ.ಆರ್. ೨೭೨, ೧ ಮಧು, ಎಮ.ಆರ್. ೨೦೦ ತಳಿಗಳು ನಾಟಿಯಾದ ೪೦ನೇ ದಿವಸಕ್ಕೆ ಮಂಡ್ಯ, ಮೈಸೂರು ಹವಾಗುಣದಲ್ಲಿ ಬೇಸಿಗೆ ಮತ್ತು ಮಳೆಗಾಲದ ಸಕಾಲದಲ್ಲಿ ಹಾಕದ ಬೆಳೆಯಲ್ಲಿ ಈ ಅವಸ್ಥೆಗೆ ಬರುತ್ತವೆ. ಅಂದರೆ ಮೊಗ್ಗು ಕಚ್ಚುತ್ತವೆ. ಐ.ಆರ್. ೨೦, ಜಯಾ, ಸೊನಾ, ವಾಣಿ ವಿಕ್ರಮ ತಳಿಗಳು ನಾಟಿಯಾದ ೬೦ನೇ ದಿವಸಕ್ಕೆ ಈ ಅವಸ್ಥೆಗೆ ಬರುತ್ತದೆ. ಇಂಟಾನ್ ತಳಿಯು ನಾಟಿ ನಂತರ ೮೦ ರಿಂದ ೮೫ ದಿವಸಗಳಲ್ಲಿ ಈ ಅವಸ್ಥೆಗೆ ಬರುತ್ತದೆ. ಬೇರೆ ಬೇರೆ ಹವಾಗುಣ ಮತ್ತು ಉಷ್ಣಾಂಶ ಇರುವ ಕಡೆ ಇದರಲ್ಲಿ ಹೆಚ್ಚು ಕಡಿಮೆಯಾಗುವುದುಂಟು. ಚಳಿಗಾಲದಲ್ಲಿ ಪ್ರತಿಯೊಂದು ತಳಿಗೂ ಈ ಅವಧಿ ಹೆಚ್ಚಾಗುತ್ತದೆ. ಇದನ್ನು ಸರಿಯಾಗಿ ತಿಳಿದುಕೊಂಡು ಆ ಸಂದರ್ಭದಲ್ಲಿ ಕನಿಷ್ಠ ೧೦ ದಿವಸಗಳಷ್ಟಾದರೂ ೨ ಅಂಗುಲ ನೀರು ಇರುವಂತೆ ಮಾಡುವುದು ಅತಿ ಮುಖ್ಯ. ಇಲ್ಲದಿದ್ದರೆ ಕಾಳಿನ ಸಂಖ್ಯೆ ಕಡಿಮೆಯಾಗಿ ಹಾಗೂ ಹೂ ಬಿಡುವುದು ಹಿಂದೆ ಮುಂದೆ ಆಗಿ ಇಳುವರಿ ಕುಗ್ಗುತ್ತದೆ.

ನಾಲ್ಕನೆಯದಾಗಿ ತೆನೆ ಬೆಳೆಯುವಾಗ ಇದು ಮೊಗ್ಗು ಕಚ್ಚಿದ ಮೇಲೆ ತೆನೆ ಹೊರಗೆ ಬರುವವರೆಗೂ ಇರುತ್ತದೆ. ಈ ಸಮಯದಲ್ಲಿ ನೀರಿನ ಕೊರತೆಯಾದಲ್ಲಿ ಜೊಳ್ಳು ಜಾಸ್ತಿಯಾಗುತ್ತದೆ. ಆದ್ದರಿಂದ ಎಲ್ಲಾ ಹಂತಗಳಲ್ಲಿಯೂ ನೀರಿನ ಕೊರತೆ ಬಾರದಂತೆ ನೋಡಿಕೊಳ್ಳಬೇಕು.

ಕೆಲವರು ಕೊಯ್ಲು ಮಾಡುವಾಗಲೂ ನೀರನ್ನು ಬಿಡುತ್ತಾರೆ. ಆದ್ದರಿಂದ ಅನಾನುಕೂಲವೇ ಹೊರತು ಅನುಕೂಲವಿಲ್ಲ. ಆದ್ದರಿಂದ ೧೦ ದಿವಸ ಮುಂಚೆಯೇ ನೀರನ್ನು ನಿಲ್ಲಿಸುವುದು ಸೂಕ್ತ.

ಸಾರಜನಕವನ್ನು ೨-೩ ಸಾರಿ ಮೇಲ್ ಗೊಬ್ಬರವಾಗಿ ಕೊಡುವುದು ಅವಶ್ಯಕ. ಆ ಸಂದರ್ಭದಲ್ಲಿ ಅಂದರೆ ಹೆಚ್ಚು ತೆಂಡೆ ಹೊಡೆಯುವಾಗ ಮತ್ತು ಗರ್ಭ ಕಟ್ಟುವಾಗ ನೀರನ್ನು ತಪ್ಪಿಸಿ, ಸ್ವಲ್ಪ ಮಟ್ಟಿಗೆ ಬಸಿದು ಮೇಲ್ ಗೊಬ್ಬರವನ್ನು ಕೊಟ್ಟ ನಂತರ ೨೪ ಗಂಟೆಗಳ ಮೇಲೆ ಮತ್ತೆ ನೀರನ್ನು ಕೊಡಬೇಕೆಂಬುದನ್ನು ಗಮನದಲ್ಲಿಡಬೇಕು.

ಈ ರೀತಿ ನೀರು ನಿರ್ವಹಣೆಯಿಂದ ಬತ್ತದ ಇಳುವರಿಯನ್ನು ಹೆಚ್ಚಿಸಲು ಸಾಧ್ಯ. ಇದಕ್ಕೆ ಯಾವುದಕ್ಕೂ ಹಣ ಬೇಕಿಲ್ಲ. ಬೇಕಾಗಿರುವುದು ಅರಿವು ಮತ್ತು ಅದರ ಆಚರಣೆ. ಹಣ ಖರ್ಚಿಲ್ಲದೆ ಪಡೆಯಬಹುದಾದ ಹೆಚ್ಚು ಇಳುವರಿಯನ್ನು ಬೇಡವೆನ್ನುವರಾರೂ ಇಲ್ಲ.