ಯಾವುದೇ ತಳಿಯಿಂದ ಅತ್ಯಧಿಕ ಇಳುವರಿ ಪಡೆಯಲು ಅದಕ್ಕೆ ಸಹಕಾರಿಯಾದ ಎಲ್ಲಾ ಸನ್ನಿವೇಶಗಳೂ ದೊರಕಬೇಕು. ಅಂತೆಯೇ, ಬತ್ತದಲ್ಲಿ ಅಧಿಕ ಇಳುವರಿಯನ್ನು ಪಡೆಯಲು ಮಣ್ಣು, ನೀರು, ತಳಿ ಮತ್ತು ಕೃಷಿ ಪದ್ಧತಿಗಳಷ್ಟೇ ಬಿತ್ತನೆ ಅಥವಾ ನಾಟಿ ಮಾಡುವ ಕಾಲವು ಮುಖ್ಯ. ಬೆಳೆಯ ಬೆಳವಣಿಗೆ ಮತ್ತು ಇಳುವರಿಯ ಮೇಲೆ ಪರಿಣಾಮವನ್ನು ಬೀರುವ ಹಲವಾರು ಅನಿಯಂತ್ರಕ ಸನ್ನಿವೇಶಗಳಲ್ಲಿ ಹವಾಗುಣವೂ ಒಂದು. ಇದು ಸಾಮಾನ್ಯವಾಗಿ ಬೆಳೆಯನ್ನು ನಾಟಿ ಮಾಡುವ ಕಾಲವನ್ನು ಅವಲಂಭಿಸಿರುತ್ತದೆ.

ಕರ್ನಾಟಕದಲ್ಲಿ ದಕ್ಷಿಣ ಜಿಲ್ಲೆಗಳಲ್ಲಿ ಬತ್ತವನ್ನು ಬೆಳೆಯಲು ಪ್ರಧಾನವಾಗಿ ಕೆರೆಗಳೇ ನೀರಾವರಿಯ ಮೂಲ. ಸಾಮಾನ್ಯವಾಗಿ ಈ ಕೆರೆಗಳು ಮಳೆಗಾಲದಲ್ಲಿ ತಡವಾಗಿ ತುಂಬುವುದರಿಂದ ಕೆಲವೊಂದು ಸಂದರ್ಭಗಳಲ್ಲಿ ರೈತರಿಗೆ ಬತ್ತವನ್ನು ನಾಟಿ ಮಾಡಲು ಸಾಧ್ಯವಾಗುವುದಿಲ್ಲ. ಇನ್ನು ಸಣ್ಣ ಕೆರೆಗಳಲ್ಲಿ ನೀರು ಮಾರ್ಚ ಮತ್ತು ಏಪ್ರಿಲ್ ತಿಂಗಳ ಹೊತ್ತಿಗೆ ಮುಗಿದು ಹೋಗುವುದರಿಂದ ಬೇಸಿಗೆಯಲ್ಲೂ ಬತ್ತದ ಬೆಳೆಯನ್ನು ತೆಗೆದುಕೊಳ್ಳಲಾಗುವ ಪರಿಸ್ಥಿತಿ ಉಂಟಾಗುತ್ತದೆ. ಇಂತಹ ಸನ್ನಿವೇಶಗಳಲ್ಲಿ ರೈತರು ವರ್ಷದಲ್ಲಿ ಒಂದು ಬೆಳೆಯನ್ನಾದರೂ ತೆಗೆದುಕೊಳ್ಳಬೇಕೆನ್ನುವ ಅಪೇಕ್ಷೆಯಿಂದ ಹಿಂಗಾರಿನಲ್ಲಿ ಮಾಡಿರುವ ಸಮಯಕ್ಕಿಂತ ಒಂದೆರಡು ತಿಂಗಳೂ ಮೊದಲೇ ನಾಟಿ ಮಾಡಿದಲ್ಲಿ ಬೆಳೆಯು ಅಷ್ಟೇ ಬೇಗ ಕಟಾವಿಗೆ ಬರುತ್ತದೆಂಬುದು ಅವರ ಭಾವನೆ. ಅವರ ಈ ಭಾವನೆಗೆ ಏನಾದರೂ ಶಾಸ್ತ್ರೀಯ ಆಧಾರವಿದೆಯೇ? ಇದ್ದರೆ ಅದು ಎಷ್ಟರಮಟ್ಟಿಗೆ ಸತ್ಯ ಎಂಬುದನ್ನು ವೈಜ್ಞಾನಿಕವಾಗಿ ನಿರೂಪಿಸಬೇಕಾದ ಅಗತ್ಯ ಕಂಡು ಬಂದಿತು.

ಅಂತೆಯೇ ಬತ್ತದಲ್ಲಿ ಗರಿಷ್ಠ ಇಳುವರಿಯನ್ನು ಪಡೆಯಲು ನಾಟಿ ಮಾಡಬೇಕಾದ ಯೋಗ್ಯ ಕಾಲವನ್ನು ನಿರ್ಧರಿಸುವ ಸಲುವಾಗಿ ಹೆಬ್ಬಾಳದ ಪ್ರಧಾನ ಸಂಶೋಧನಾ ಕೇಂದ್ರದಲ್ಲಿ ೧೯೭೪-೭೫ರಲ್ಲಿ ಸಂಶೋಧನೆಯನ್ನು ನಡೆಸಲಾಯಿತು. ಸಾಗುವಳಿ ಬಿಡುಗಡೆಯಾಗಿರುವ ಅಧಿಕ ಇಳುವರಿಯ ೬ ತಳಿ (ಸೋನ, ವಾಣಿ, ಐ.ಇ.ಟಿ. ೨೨೯೫), ಇಂಟಾನ್ ಎಂ.ಆರ್. ೩೦೧, ಮಧು ಮತ್ತು ಎಂ.ಆರ್. ೨೭೨)ಗಳು ಹಾಗೂ ಬಿಡುಗಡೆಯ ಹಂತದಲ್ಲಿರುವ ೨ ತಳಿ (ಐಇಟಿ ೨೨೫೪ ಮತ್ತು ಎಂ.ಆರ್. ೮೧) ಗಳು ಒಟ್ಟು ೮ ತಳಿಗಳನ್ನು ಪ್ರಯೋಗಕ್ಕಾಗಿ ಆಯ್ಕೆ ಮಾಡಿಕೊಳ್ಳಲಾಯಿತು. ೨೫ ದಿವಸಗಳ ವಯಸ್ಸಿನ ಸಸಿಗಳನ್ನು ಪ್ರತಿ ತಿಂಗಳ ೨೬ನೇ ತಾರೀಖು ೨೦ ಮತ್ತು ೧೦ ಮೀಟರ್ ಅಂತರದಲ್ಲಿ ನಾಟಿ ಮಾಡಲಾಯಿತು. ಬೆಳಗ್ಗೆ ಒದಗಿಸಿದ ಒಟ್ಟು ರಸಗೊಬ್ಬರದ ಪ್ರಮಾಣ ೧೦೦:೫೦:೫೦ ಎನ್: ಪಿ.ಕೆ ಕೆಜಿ/ಹೆ ಬೆಳೆಯನ್ನು ಕೀಟ ರೋಗಗಳ ಬಾಧೆಯಿಂದ ರಕ್ಷಿಸುವ ಸಲುವಾಗಿ ಸೂಕ್ತ ಸಸ್ಯ ಸಂರಕ್ಷಣಾ ರಾಸಾಯನಿಕಗಳನ್ನು ಸಿಂಪರಿಸಲಾಯಿತು. ೧೯೭೪ರ ಸೆಪ್ಟೆಂಬರ್‌ನಲ್ಲಿ ಪ್ರಾರಂಭವಾದ ಈ ಪ್ರಯೋಗವು ೧೯೭೫ರ ಆಗಸ್ಟ್ ತಿಂಗಳ ನಾಟಿಯೊಂದಿಗೆ ಮುಗಿಯುತ್ತ ಈ ತಳಿಗಳು ಕಟಾವಿಗೆ ಬರಲು ಕನಿಷ್ಠ ೧೨೨ ಮತ್ತು ಗರಿಷ್ಠ ೨೨೬ ದಿವಸಗಳನ್ನು ತೆಗೆದುಕೊಂಡವು. ಪ್ರತಿಯೊಂದು ತಳಿಗಳಿರುವ ಹೋಲಿಕೆ ವ್ಯತ್ಯಾಸಗಳನ್ನು ಎಚ್ಚರಿಕೆಯಿಂದ ಗಮನಿಸಲಾಯಿತು ಮತ್ತು ಅವಲೋಕನಗಳನ್ನು ದಾಖಲು ಮಾಡಿಕೊಳ್ಳಲಾಯಿತು.

ಪ್ರಯೋಗದ ಫಲಿತಾಂಶದ ಪ್ರಕಾರ ಸೆಪ್ಟೆಂಬರ್ ಮತ್ತು ಅಕ್ಟೋಬರ್ ತಿಂಗಳಲ್ಲಿ ನಾಟಿ ಮಾಡಿದ ಬೆಳೆಯು ಪೂರ್ತಿ ಜೊಳ್ಳಾದ ಕಾರಣ ಯಾವೊಂದು ತಳಿಯೂ ಇಳುವರಿಯನ್ನು ಕೊಡಲಿಲ್ಲ. ಹೂ ಬಿಡುವ ಸಮಯದಲ್ಲಿ ಉಷ್ಣಾಂಶವು ಸಾಕಷ್ಟು ೧೮ ಡಿಗ್ರಿ ಸೆ. ಕಡಿಮಾಗಿದ್ದುದೇ ಇದಕ್ಕೆ ಕಾರಣ. ಈ ಅಂಶವು ಪ್ರಸ್ತುತ ಸಾಗುವಳಿಯಲ್ಲಿರುವ ಅಧಿಕ ಇಳುವರಿಯ ತಳಿಗಳು ಸೆಪ್ಟೆಂಬರ್ ಮತ್ತು ಅಕ್ಟೋಬರ್ ತಿಂಗಳುಗಳಲ್ಲಿ ನಾಟಿ ಮಾಡಲು ಯೋಗ್ಯವಲ್ಲವೆಂಬುದನ್ನು ಸ್ಪಷ್ಟಪಡಿಸುತ್ತದೆ. ಅಲ್ಲದೆ ಚಳಿ ನಿರೋಧಕ ತಳಿಗಳನ್ನು ಅಭಿವೃದ್ಧಿ ಪಡಿಸುವಲ್ಲಿ ಇನ್ನೂ ಸಾಕಷ್ಟು ಪ್ರಯತ್ನಗಳು ನಡೆಯಬೇಕಾಗಿದೆ ಎಂಬುದನ್ನು ಸೂಚಿಸುತ್ತದೆ.

ನವೆಂಬರ್ ತಿಂಗಳಲ್ಲಿ ನಾಟಿ ಮಾಡಿದಾಗ ಸಾಮಾನ್ಯ ಇಳುವರಿ ಬಂದರೂ ಕೂಡ ವಿವಿಧ ತಳಿಗಳು ಮಾಗಲೂ ತೆಗೆದುಕೊಂಡ ಅವಧಿಯು ಫೆಬ್ರವರಿ ತಿಂಗಳಿನ ನಾಟಿಗೆ ಹೋಲಿಸಿದಲ್ಲಿ ೩೯ ರಿಂದ ೬೨ ದಿವಸಗಳಷ್ಟು ಹೆಚ್ಚಾಗಿದ್ದುದು ಕಂಡು ಬಂದಿತು. ಇದರಿಂದ ಬೆಳೆಯ ಉತ್ಪಾದನಾ ವೆಚ್ಚವು ವಿರುವುದಲ್ಲದೆ ಕಾಳಿನ ದಿನವಹಿ ಉತ್ಪಾದನೆಯು ಗಣನೀಯವಾಗಿ ಕಡಿಮೆಯಾಗುತ್ತದೆ. ಬೆಳೆಯ ಅವಧಿಯು ಹೆಚ್ಚುವುದರಿಂದ ಅಮೂಲ್ಯವಾದ ನೀರು ವ್ಯರ್ಥವಾಗುವುದಲ್ಲದೆ ಬೆಳೆಯ ಜೊತೆಗೆ ಕಳೆ ಗಿಡಗಳೂ ಸಾಕಷ್ಟು ಆಹಾರಾಂಶಗಳನ್ನು ಹೀರಿಕೊಳ್ಳಲು ಅವಕಾಶವುಂಟಾಗಿ ಭೂಮಿಯ ಫಲವತ್ತತೆಯು ಕಡಿಮೆಯಾಗುತ್ತದೆ. ಆದ್ದರಿಂದ ನವೆಂಬರ್ ತಿಂಗಳಲ್ಲಿ ಬತ್ತವನ್ನು ನಾಟಿ ಮಾಡುವುದು ಅಷ್ಟೇನೂ ಒಳ್ಳೆಯದಲ್ಲ.

ಹಿಂಗಾರಿನಲ್ಲಿ ಬತ್ತವನ್ನು ನಾಟಿ ಮಾಡಲೇ ಬೇಕಾದಂತಹ ಸಂದರ್ಭದಲ್ಲಿ ನವೆಂಬರ್ ಗಿಂತಲೂ ಡಿಸೆಂಬರ್ ತಿಂಗಳಲ್ಲಿ ನಾಟಿ ಮಾಡುವುದು ಉತ್ತಮ. ಎಂ.ಆರ್. ೨೭೨, ವಾಣಿ ಮತ್ತು ಐಇಟಿ ೨೨೫೪ ಈ ತಿಂಗಳಿನಲ್ಲಿ ನಾಟಿ ಮಾಡುವುದು ಸೂಕ್ತವಾದ ತಳಿಗಳೆಂದು ಸ್ಪಷ್ಟಪಟ್ಟಿತು. ಈ ಮೂರು ತಳಿಗಳ ದಿನವಹಿ ಕಾಳಿನ ಉತ್ಪಾದನೆಯು ಹೆಕ್ಟೇರಿಗೆ ಸುಮಾರು ೪೧ ಕೆ.ಜಿ.ಗಳಾಗಿದ್ದುದು ಕಂಡು ಬಂತು. ಡಿಸೆಂಬರ್‌ನಲ್ಲಿ ಬೀಜವನ್ನು ಒಟ್ಟು ಪಾತಿಯಲ್ಲಿ ಬಿತ್ತಿದಾಗ ಬೀಜದಿಂದ ಮೊಳಕೆಯೊಡುವುದು ನಿಧಾನವಾಗುವುದರ ಜೊತೆಗೆ ಮೊಳಕೆಯ ಪ್ರಮಾಣವೂ ಕೂಡಾ ಕಡಿಮೆಯಾಗುತ್ತದೆ. ಇದರಿಂದಾಗಿ ಹೆಕ್ಟೇರೊಂದಕ್ಕೆ ಹೆಚ್ಚು ಬಿತ್ತನೆ ಬೀಜ ಬೇಕಾಗುವುದರ ಜೊತೆಗೆ ವಯಸ್ಸಾದ (೩೦-೩೫ ದಿವಸಗಳು) ಸಸಿಗಳನ್ನು ನಾಟಿ ಮಾಡಬೇಕಾಗುತ್ತದೆ. ಆದಾಗ್ಯೂ, ಡಿಸೆಂಬರ್ ತಿಂಗಳಿನಲ್ಲಿ ನಾಟಿ ಮಾಡಲು ಚಳಿ ನಿರೋಧಕ ಶಕ್ತಿಯ ಜೊತೆಗೆ ಶೀಘ್ರವಾಗಿ ಮಾಗುವ ಗುಣವುಳ್ಳ ಎಂ.ಆರ್. ೨೭೨ ತಳಿಯು ಬೇರೆಲ್ಲಾ ತಳಿಗಳಿಗಿಂತ ಉತ್ತಮ.

ಬೇಸಿಗೆ ಕಾಲದಲ್ಲಿ ಅಧಿಕ ಇಳುವರಿ ಪಡೆಯಲು ಜನವರಿ ಅಥವಾ ಮಾರ್ಚ ತಿಂಗಳಿಗಿಂತ ಫೆಬ್ರವರಿಯಲ್ಲಿ ನಾಟಿ ಮಾಡುವುದು ಯೋಗ್ಯವೆಂದು ವ್ಯಕ್ತವಾಯಿತು. ಫೆಬ್ರವರಿ ತಿಂಗಳಲ್ಲಿ ನಾಟಿ ಮಾಡಿದಾಗ ತಳಿಗಳು ಮಾಗಲು ತೆಗೆದುಕೊಂಡ ಅವಧಿಯು ಸಾಮಾನ್ಯವಾಗಿದ್ದಿತ್ತಲ್ಲದೆ ಗರಿಷ್ಠ ಪ್ರಮಾಣದ ಇಳುವರಿಯನ್ನು ಕೊಟ್ಟಿದ್ದುದು ಕಂಡು ಬಂತು. ಬೇಸಿಗೆ ಕಾಲದಲ್ಲಿ ನಾಟಿ ಮಾಡಲು ಇಂಟಾನ ಹೊರತು ಉಳಿದ ಎಲ್ಲಾ ತಳಿಗಳೂ ಯೋಗ್ಯವೆಂದು ಈ ಪ್ರಯೋಗದಿಂದ ಸ್ಪಷ್ಟಪಟ್ಟಿತು. ಆದಾಗ್ಯೂ, ಲಭ್ಯವಿರುವ ನೀರು, ಕಾಳಿನ ಗುಣ, ಮುಂಗಾರು ಬಿತ್ತನೆ ಅಥವಾ ನಾಟಿಗೆ ಜಮೀನು ಬಿಡುಗಡೆಯಾಗಬೇಕಾದ ಸಮಯ ಈ ಅಂಶಗಳನ್ನು ಗಣನೆಗೆ ತೆಗೆದುಕೊಂಡು ಬೇಸಿಗೆಯಲ್ಲಿ ನಾಟಿ ಮಾಡಲು ಬೇಕಾದ ತಳಿಗಳನ್ನು ಆಯ್ಕೆ ಮಾಡಿಕೊಳ್ಳುವುದು ಸೂಕ್ತ. ಬಹುಮಟ್ಟಿಗೆ ಕೆರೆ ನೀರಾವರಿಯ ಆಸರೆಯಲ್ಲಿ ಬತ್ತ ಬೆಳೆಯುವುದರಿಂದ ಹೆಚ್ಚಿನ ಪ್ರದೇಶಕ್ಕೆ ಐ.ಆರ್. ೨೦, ಎಂ.ಆರ್. ೩೦೧, ಎಂ.ಆರ್. ೨೭೨ ಮತ್ತು ಮಧುಗಳಂತಹ ಮಧ್ಯಮ ಮತ್ತು ಅಲ್ಪಾವಧಿಯ ತಳಿಗಳನ್ನು ಉಪಯೋಗಿಸುವುದು ಉತ್ತಮ. ಮಾರ್ಚ ತಿಂಗಳ ಅಂತ್ಯ, ಏಪ್ರಿಲ್ ಮತ್ತು ಮೇ ತಿಂಗಳ ಆದಿ ಭಾಗದಲ್ಲಿ ನಾಟಿ ಮಾಡಲು ಎಂ.ಆರ್. ೨೭೨ ಉತ್ತಮವಾದ ತಳಿ.

ಮುಂಗಾರಿನಲ್ಲಿ ನಾಟಿ ಮಾಡಲು ಜೂನ್ ಮತ್ತು ಜುಲೈ ತಿಂಗಳುಗಳು ಸರಿಯಾದ ಕಾಲ. ಈ ತಿಂಗಳುಗಳಲ್ಲಿ ಎಲ್ಲಾ ತಳಿಗಳನ್ನೂ ನಾಟಿ ಮಾಡಬಹುದು. ಆದರೆ ಈ ಕಾಲದಲ್ಲಿ ಅಲ್ಪಾವಧಿ ತಳಿಗಳಿಗಿಂತ ದೀರ್ಘಾವದಿ ತಳಿಗಳು ಹೆಚ್ಚಿನ ಇಳುವರಿ ಕೊಡುತ್ತವೆಂಬುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಆದಾಗ್ಯೂ ವಾಣಿ ಐಇಟಿ ೨೨೫೪ ಮತ್ತು ಎಮ.ಆರ್. ೮೧ ಗಳಂತಹ ದೀರ್ಘಾವಧಿ ತಳಿಗಳ ಉಪಯೋಗವು ಲಭ್ಯವಿರುವ ನೀರಿನ ಪ್ರಮಾಣವನ್ನು ಅವಲಂಭಿಸಿರುತ್ತದೆ. ನೀರು ಕಡಿಮೆಯಿದ್ದಲ್ಲಿ ಮಧು ಮತ್ತು ಎಂ.ಆರ್. ೨೭೨ ತಳಿಗಳನ್ನು ಆಯ್ಕೆ ಮಾಡಿಕೊಳ್ಳುವುದು ಒಳ್ಳೆಯದು. ಆದರೆ ಆಗಸ್ಟ್ ತಿಂಗಳಿನಲ್ಲಿ ಮಧು ಮತ್ತು ಎಂ.ಆರ್. ೧೨೭೨ ತಳಿಗಳ ಹೊರತು ಉಳಿದೆಲ್ಲಾ ತಳಿಗಳ ಇಳುವರಿಯು ಗಣನೀಯವಾಗಿ ಕಡಿಮೆಯಾಗಿದ್ದುದು ಕಂಡು ಬಂದಿತು. ಅಲ್ಲದೆ ಆಗಸ್ಟ್ ತಿಂಗಳ ಪೂವಾರ್ಧ ಮತ್ತು ಉತ್ತಾರಾರ್ಧದಲ್ಲಿ ನಾಟಿ ಮಾಡಲು ಕ್ರಮವಾಗಿ ಮಧು ಮತ್ತು ಎಂ.ಆರ್. ೨೭೨ ತಳಿಗಳು ಯೋಗ್ಯವಾದವುಗಳೆಂದು ಸ್ಪಷ್ಟ ಪಟ್ಟಿತು.

ಒಟ್ಟಿನಲ್ಲಿ ಈ ಪ್ರಯೋಗದಿಂದ ತಿಳಿದು ಬರುವ ಮುಖ್ಯ ಅಂಶಗಳೆಂದರೆ:

೧. ಸೆಪ್ಟೆಂಬರ್ ಮತ್ತು ಅಕ್ಟೋಬರ್ ತಿಂಗಳಿನಲ್ಲಿ ನಾಟಿ ಮಾಡಲು ಯಾವ ಅಧಿಕ ಇಳುವರಿ ಬತ್ತದ ತಳಿಯು ಸೂಕ್ತವಲ್ಲ.

೨. ನವೆಂಬರ್ ತಿಂಗಳಿನಲ್ಲಿ ನಾಟಿ ಮಾಡಿ ಎಲ್ಲಾ ತಳಿಗಳ ಮಾಗುವಿಕೆಯ ಗಣನೀಯವಾಗಿ ಹೆಚ್ಚುತ್ತದೆ.

೩. ಹಿಂಗಾರಿನಲ್ಲಿ ಬತ್ತವನ್ನು ನಾಟಿ ಮಾಡಲೇಬೇಕಾದ ಪ್ರಸಂಗದಲ್ಲಿ ಡಿಸೆಂಬರ್ ತಿಂಗಳಿನಲ್ಲಿ ನಾಟಿ ಮಾಡುವುದು ಉತ್ತಮ. ಈ ತಿಂಗಳಿನಲ್ಲಿ ನಾಟಿ ಮಾಡಲು ವಾಣಿ ಐಇಟಿ ೨೨೫೪ ಮತ್ತು ಎಂ.ಆರ್. ೨೭೨ ಯೋಗ್ಯವಾದ ತಳಿಗಳು. ಕಡಿಮೆ ನೀರು ದೊರೆಯುವ ಪ್ರದೇಶಕ್ಕೆ ಎಂ.ಆರ್. ೨೭೨ ಸೂಕ್ತ ತಳಿ.

೪. ಬೇಸಿಗೆಯಲ್ಲಿ ನಾಟಿ ಮಾಡಲು ಫೆಬ್ರವರಿ ತಿಂಗಳು ಅತ್ಯುತ್ತಮ ಕಾಲ. ಈ ತಿಂಗಳಿನಲ್ಲಿ ಸೋನ, ವಾಣಿ, ಐಇಟಿ ೨೨೫೪, ಎಂ.ಆರ್. ೮೧, ಎಂ.ಆರ್. ೩೦೧, ಮಧು ಮತ್ತು ಎಂ.ಆರ್. ೨೭೨ ತಳಿಗಳನ್ನು ಲಾಭದಾಯಕವಾಗಿ ಬೆಳೆಯಬಹುದು.

೫. ಮುಂಗಾರಿನಲ್ಲಿ ಅಧಿಕ ಇಳುವರಿ ಪಡೆಯಲು ಜೂನ್ ತಿಂಗಳಿನಲ್ಲಿ ನಾಟಿ ಮಾಡುವುದು ಒಳ್ಳೆಯದು. ಈ ತಿಂಗಳಿನಲ್ಲಿ ನಾಟಿ ಮಾಡಲು ಸೋನ, ವಾಣಿ ಮತ್ತು ಐಇಟಿ ೨೨೫೪ ಸೂಕ್ತವಾದ ತಳಿಗಳು.

೬. ಜೂನ್ ನಂತರ ನಾಟಿ ಮಾಡಿದಾಗ ಎಲ್ಲಾ ತಳಿಗಳ ಇಳುವರಿಯೂ ಕಡಿಮೆಯಾಗುತ್ತದೆ. ಆಗಸ್ಟ್ ತಿಂಗಳಿನಲ್ಲಿ ನಾಟಿ ಮಾಡಲು ಮತ್ತು ಎಂ.ಆರ್. ೨೭೨ ತಳಿಗಳು ಯೋಗ್ಯವಾದವುಗಳು.