ಪರಿಚಯ: ಬತ್ತ ಕರ್ನಾಟಕ ರಾಜ್ಯದ ಹಾಗೂ ರಾಷ್ಟ್ರದ ಮುಖ್ಯ ಆಹಾರ ಬೆಳೆ. ಪ್ರಪಂಚದ ಒಟ್ಟು ಬೆಳೆಯ ವಿಸ್ತೀರ್ಣ ೧೨೦ ದಶಲಕ್ಷ ಹೆಕ್ಟೇರುಗಳಾಗಿದ್ದು, ಅದರಲ್ಲಿ ಭಾರತ ಮತ್ತು ಚೀನಾದಲ್ಲಿ ತಲಾ ೧/೩ ಭಾಗದಷ್ಟೂ ಮತ್ತು ಇನ್ನುಳಿದ ೧/೩ ಭಾಗ ಇತರ ದೇಶಗಳಲ್ಲಿಯೂ ವ್ಯಾಪಿಸಿದೆ. ಉಷ್ಣ ಮತ್ತು ಸಮಶೀತೋಷ್ಣ ವಲಯಗಳಲ್ಲಿ ದೇಶಗಳಲ್ಲಿ ಬತ್ತವನ್ನು ಹೇರಳವಾಗಿ ಬೆಳೆಯಲಾಗುತ್ತಿದ್ದು, ಬತ್ತದ ಬೇಸಾಯಕ್ಕೆ ಬೇಕಾದ ಹೆಚ್ಚಿನ ಜನ ಶಕ್ತಿಗನುಗುಣವಾಗಿ ಈ ದೇಶಗಳಲ್ಲಿ ಜನಸಂಖ್ಯೆಯೂ ಅತಿ ಹೆಚ್ಚಾಗುವುದು ಗಮನಾರ್ಹ.

ಭಾರತದಲ್ಲಿ ಈಶಾನ್ಯ ಮತ್ತು ದಕ್ಷಿಣ ಭಾಗಗಳ ಸಮತೀತೋಷ್ಣ ಹಾಗೂ ತೇವಾಂಶ ಹವಾಗುಣ ಪ್ರದೇಶಗಳಲ್ಲಿ ವ್ಯಾಪಿತವಾಗಿರುವ ಬತ್ತದ ಬೇಸಾಯ, ಒಟ್ಟು ವ್ಯವಸಾಯ ವಿಸ್ತೀರ್ಣದ ಶೇ. ೨೭ರಷ್ಟು ಭಾಗವಾಗಿದ್ದು, ಭಾರತದ ಒಟ್ಟು ಆಹಾರ ಧಾನ್ಯೋತ್ಪಾದನೆಯ ಶೇ. ೪೦ರಷ್ಟು ಭಾಗವನ್ನು ಉತ್ಪಾದಿಸುತ್ತಿರುವುದಲ್ಲದೆ, ಸುಮಾರು ೨೫ ದಶಲಕ್ಷ ಜನರನ್ನು ಉದ್ಯಮದಲ್ಲಿ ತೊಡಗಿಸಿದೆ. ೧೯೬೪ರವರೆಗೂ, ಎತ್ತರವಾಗಿ ಬೆಳೆಯುವ ನಾಡ ತಳಿಗಳನ್ನೇ ಮಾತ್ರ ಬೆಳೆಯುತ್ತಿದ್ದ ಭಾರತದಲ್ಲಿ, ೧೯೬೫ರಲ್ಲಿ ಗಿಡ್ಡ ತಳಿಗಳ ಆಗಮನದಿಂದ ಬತ್ತದ ಬೇಸಾಯದಲ್ಲಿ ಹೊಸದೊಂದು ಅಧ್ಯಾಯ ಪ್ರಾರಂಭವಾಯಿತು. ಆದಿಯಲ್ಲಿ, ಬತ್ತದ ತಳಿ ಸುಧಾರಣೆ, ಸಂಕರಣಾ ಕ್ರಮಕ್ಕಿಂತ ಆಯ್ಕೆ ಮೂಲಕವೇ ಹೆಚ್ಚಾಗಿತ್ತು. ಆದರೆ ಈಗ ಸಂಕರಣ ಮತ್ತು ಆಯ್ಕೆ ಎರಡೂ ಕ್ರಮಗಳಿಂದ ಹೆಚ್ಚು ಹೆಚ್ಚು ತಳಿಗಳನ್ನು ಪಡೆಯಲಾಗುತ್ತಿದೆ. ಅಲ್ಲದೆ, ಹೊರ ದೇಶಗಳಿಂದ ನಮ್ಮ ರಾಜ್ಯಕ್ಕೆ ಹೆಚ್ಚು ಇಳುವರಿ ಕೊಡುವ ಹಲವು ಹೊಸ ತಳಿಗಳನ್ನು ತರಿಸಿ, ಹಳೆಯ ತಳಿಗಳನ್ನು ಬದಲಾಯಿಸಲಾಗಿದ್ದು, ಈ ದಿಸೆಯಲ್ಲೂ ಸಹ ಹೆಚ್ಚಿನ ಪ್ರಗತಿಯಾಗಿದೆ.

ನಮ್ಮ ರಾಜ್ಯದಲ್ಲಿ ನೇರವಾಗಿ ಬೀಜ ಬಿತ್ತುವ ಜಿಲ್ಲೆಗಳಾದ ಬೆಳಗಾಂ, ಧಾರವಾಡ, ಉತ್ತರ ಕನ್ನಡ ಮತ್ತು ಶಿವಮೊಗ್ಗ ಜಿಲ್ಲೆಗಳ ಮೈದಾನ ಪ್ರದೇಶಗಳಲ್ಲಿ ಹೆಚ್ಚು ಇಳುವರಿ ಕೊಡುವ ಜಯ ಮತ್ತು ವಾಣಿ ತಳಿಗಳು, ಇತರೇ ತಳಿಗಳಿಗಿಂತ ಉತ್ತಮ ಫಲಿತಾಂಶ ನೀಡಿವೆ. ಆದರೆ ಈ ಪ್ರದೇಶದ ಮಕ್ಕೇ ಅಥವಾ ರಂಗೀ ಪ್ರದೇಶಗಳಲ್ಲಿ “ಅಂತರ್ ಸಾಲ್” ಮತ್ತು “ವಾನರ್” ಎಂಬ ನಾಡತಳಿಗಳು ಹೆಚ್ಚು ಇಳುವರಿ ತಳಿಗಳಿಗಿಂತ ಉತ್ತಮವೆಂದು ಕಂಡು ಬಂದಿವೆ. ಈ ತಳಿಗಳನ್ನು ಸುಧಾರಿತ ತಳಿಗಳಿಂದ ಬದಲಾಯಿಸಲು ಸಂಶೋಧನೆ ಮಾಡಲಾಗುತ್ತಿದೆ. ತಗ್ಗು ಪ್ರದೇಶಕ್ಕೆ ವೈ೪, ಟಿ೧೪೧, ಮತ್ತಲಗ ಮತ್ತು ಹೊನ್ನಲಗ ತಳಿಗಳು ಉತ್ತಮವೆಂದು ಕಂಡು ಬಂದಿದೆ. ಉತ್ತರ ಕನ್ನಡ ಜಿಲ್ಲೆಯ ಅಂಕೋಲ, ಕುಮಟಾ ಮುಂತಾದ ಚೌಳು ಮಣ್ಣಿನ ಪ್ರದೇಶಗಳಿಗೆ ಆರ್ಯ, ಕರಿಕಗ್ಗ, ಬಿಳಿಕಗ್ಗ ತಳಿಗಳಿಗಿಂತ ಉತ್ತಮ ತಳಿಗಳು ಇನ್ನೂ ಕಂಡು ಬಂದಿಲ್ಲ. ಕರಿಕಗ್ಗ ಮತ್ತು ಐ.ಆರ್. ೪ ತಳಿಗಳ ಸಂಕರಣದಿಂದ ಇಳುವರಿ ತಳಿಗಳನ್ನು ಪಡೆಯಲು ಸಂಶೋಧನೆ ನಡೆಯುತ್ತಿದ್ದು, ಈಗಾಗಲೇ ಸಾಕಷ್ಟು ಪ್ರಗತಿ ಸಾಧಿಸಲಾಗಿದೆ.

ಸಮಸ್ಯೆಗಳು: ನಮ್ಮ ರಾಜ್ಯದ ಮಲೆನಾಡು, ಕರಾವಳಿ ಮತ್ತು ನೇರ ಬಿತ್ತನೆ ಪ್ರದೇಶಗಳಲ್ಲಿ ತಲಾ ಸುಮಾರು ೧,೫೫,೫೨೫, ೨೪೧೦೬೧ ಮತ್ತು ೩೧೧೫೭೪೭ ಹೆಕ್ಟೇರುಗಳಲ್ಲಿ ಬತ್ತವನ್ನು ಬೇಸಾಯ ಮಾಡಲಾಗುತ್ತಿದೆ. ಬೆಂಕಿರೋಗ, ಕಂದು ಚುಕ್ಕೆ ರೋಗ, ಕಣಿ ಹುಳುವಿನ ಬಾಧೆ, ಕಬ್ಬಿಣಾಂಶ ಉಂಟಾಗುವ ನಂಜು, ಸೋಡಿಯಂ ಲವಣದಿಂದ ಉಂಟಾಗುವ ಕ್ಷಾರ ಮತ್ತು ಹುಳಿ ಮಣ್ಣು ಈ ಪ್ರದೇಶಗಳಲ್ಲಿನ ಬತ್ತದ ಬೇಸಾಯಕ್ಕಿಂತ ಮುಖ್ಯ ಸಮಸ್ಯೆಗಳು.

ಸೂಕ್ತ ತಳಿಗಳ ಸಲಹೆಗಳು: ಆಯಾ ಪ್ರದೇಶಗಳಲ್ಲಿ ಕೈಗೊಂಡಿರುವ ಪ್ರಯೋಗಗಳ ಆಧಾರದಿಂದ ತಳಿಗೆ ಸಂಬಂಧಿಸಿದಂತೆ ಸೂಕ್ತ ಸಲಹೆಗಳು ಮತ್ತು ಅವುಗಳ ಮುಖ್ಯ ಗುಣಗಳನ್ನು ಈ ಕೆಳಗೆ ವಿವರಿಸಲಾಗಿದೆ.

. ಮಲೆನಾಡು ಪ್ರದೇಶ: ಕೊಡಗು, ಚಿಕ್ಕಮಗಳೂರು, ಶಿವಮೊಗ್ಗ ಮತ್ತು ಹಾಸನ ಜಿಲ್ಲೆಗಳ ಕೆಲವು ಭಾಗಗಳು.

. ಬೇಸಿಗೆ ಬೆಳೆ: ಮಂಗಳ, ಎಂ.ಆರ್. ೨೭೨. ಇದು ಜಯ ಮತ್ತು ಹಾಲುಬ್ಬಲು ತಳಿಗಳ ಸಂಕರಣದಿಂದ ಹೊಸದಾಗಿ ಬಂದಿದೆ. ಈಗಿರುವ ಎಲ್ಲಾ ತಳಿಗಳಿಗಿಂತಲೂ ಎಲ್ಲಾ ಕಾಲಾವಧಿಯ ಅರೆಗಿಡ್ಡ ಸಸ್ಯ ಸ್ವರೂಪದ ತಳಿ. ಬೆಳವಣಿಗೆ ಕಾಲದಲ್ಲಿ ಕಡಿಮೆ ಉಷ್ಣಾಂಶವನ್ನು ತಡೆದುಕೊಳ್ಳುವ ಶಕ್ತಿಯಿಂದ. ಡಿಸೆಂಬರ್, ಜನವರಿ ತಿಂಗಳಲ್ಲಿಯೂ ನೈಜವಾಗಿ ಮೊಳಕೆ ಹೊಡೆಯುತ್ತದೆ. ಬಹು ಬೆಳೆ ಯೋಜನೆ ಮತ್ತು ತಡವಾಗಿ ಬಿತ್ತುವ ಸಂದರ್ಭಗಳಿಗೆ ಬಹು ಸೂಕ್ತ.

. ಮುಂಗಾರು ಬೆಳೆ: ಇಂಟಾನ್ – ಇಂಡೋನೇಷ್ಯಾದಿಂದ ಬಂದ ಈ ತಳಿಯ ಕಾಲಾವಧಿ ದೀರ್ಘಾವಾಗಿದ್ದರೂ ಅರೆಗಿಡ್ಡ ಸಸ್ಯ ಸ್ವರೂಪ ಸಣ್ಣ ಕಾಳು ಮತ್ತು ಬೆಂಕಿರೋಗ ನಿರೋಧಕ ಶಕ್ತಿಯನ್ನು ಪಡೆದಿದೆ. ಜೂನ್, ಜುಲೈ ತಿಂಗಳಲ್ಲಿ ಮಾತ್ರ ನಾಟಿ ಮಾಡಬೇಕು. ಬೇಸಿಗೆ ಬೆಳೆಗೆ ಸೂಕ್ತವಲ್ಲ.

. ಕರಾವಳಿ ಪ್ರದೇಶ: ದಕ್ಷಿಣ ಮತ್ತು ಉತ್ತರ ಕನ್ನಡ ಜಿಲ್ಲೆ.

ಮೊದಲನೇ ಬೆಳೆಗೆ –

. ದಿಣ್ಣೆ ಪ್ರದೇಶ: ಕಾಕತೀಯ: ಸದ್ಯದಲ್ಲೇ ಬಿಡುಗಡೆಯಾಗಲಿರುವ ಈ ತಳಿಯನ್ನು ಐ.ಆರ್. ೮ ಮತ್ತು ಡಬ್ಲ್ಯೂ ೧೨೬೩ ತಳಿಗಳ ಸಂಕರಣದಿಂದ ಪಡೆಯಲಾಗಿದೆ. ಅಲ್ಪ ಕಾಲಾವಧಿಯ ಗಿಡ್ಡ ತಳಿಯಾಗಿದ್ದು, ಕಣಿರೋಗ ನಿರೋಧಕ ಶಕ್ತಿ ಪಡೆದಿದೆ.

. ಬಯಲು ಪ್ರದೇಶ: ವಿಕ್ರಮ್ – ಶಕ್ತಿ ಮತ್ತು ಐಇಟಿ ೨೮೮೬ – ಈ ತಳಿಗಳು ಈಗಾಗಲೇ ಬಳಕೆಯಲ್ಲಿದ್ದು (ಮಧ್ಯಮ ಕಾಲಾವಧಿ) ಕಣಿ ರೋಗ ನಿರೋಧಕ ಶಕ್ತಿಯನ್ನು ಪಡೆದಿದೆ.

. ಮಜಲು ಪ್ರದೇಶ: ಫಲ್ಗುಣ ಐಇಟಿ ೨೯೧೧

ಪ್ರವಾಹ ತಡೆದುಕೊಳ್ಳುವ ಮತ್ತು ಕಣಿ ನಿರೋಧಕ ಶಕ್ತಯಿಂದ ಈ ದಿರ್ಘ ಕಾಲಾವಧಿ ತಳಿ. ಪಾಟ್ಲಾ ಬೇಸಾಯಕ್ಕೆ ಸೂಕ್ತವಾಗಿದ್ದು, ಈಗ ಮಿನಿಕಿಟ್ ಪ್ರಯೋಗದಲ್ಲಿದೆ. ಇದು ಬಯಲು ಪ್ರದೇಶಕ್ಕೂ ಸೂಕ್ತವೆಂದು ಕಂಡು ಬಂದಿದೆ.

03_262_ML-KUH

ಎರಡನೇ ಬೆಳೆಗೆ –

ವಾಣಿ ತಳಿಯನ್ನು ಐ.ಆರ್. ೮ ಮತ್ತು ಸಿ.ಆರ್. ೧೦೧೪ ತಳಿಗಳ ಸಂಕರಣದಿಂದ ಪಡೆಯಲಾಗಿದ್ದು, ಮಧ್ಯಮ ಕಾಲಾವಧಿ ಮತ್ತು ಸ್ವಲ್ಪ ಮಟ್ಟಿಗೆ ಬೆಂಕಿ ರೋಗವನ್ನು ತಡೆಗಟ್ಟಿಕೊಳ್ಳುವ ಶಕ್ತಿಯನ್ನು ಪಡೆದಿದೆ. ಕರಾವಳಿ ಪ್ರದೇಶದ ಎರಡನೇ ಬೆಳೆಗೆ ಸೂಕ್ತವಷ್ಟೇ ಅಲ್ಲದೆ, ಕಣಿ ರೋಗದ ಹಾವಳಿ ಇಲ್ಲದಿರುವ ಪ್ರದೇಶಗಳಲ್ಲಿ ಮೊದಲನೇ ಬೆಳಗೂ ಸೂಕ್ತ.

ಗಜನೀ ಬೇಸಾಯಕ್ಕೆ ಸದ್ಯದಲ್ಲೇ ಬಿಡುಗಡೆಯಾಗಲಿರುವ ಸುಧಾರಿತ “ಕರಿಕಗ್ಗ” ತಳಿಯನ್ನು ಶಿಫಾರಸ್ಸು ಮಾಡಬಹುದಾಗಿದೆ. ಕೆಂಪು ಕಾಳನ್ನು ಇಚ್ಚಿಸುವವರು “ಅನ್ನ ಪೂರ್ಣ” ತಳಿಯನ್ನು ಬೆಳೆಯಬಹುದು. ಇದು ಕಣಿ ನಿರೋಧಕ ಶಕ್ತಿ ಹೊಂದಿಲ್ಲವಾದ್ದರಿಂದ ಸೂಕ್ತ ನಿಯಂತ್ರಣಾ ಕ್ರಮ ಕೈಗೊಳ್ಳುವುದು ಗಮನಿಸಬೇಕಾದ ವಿಷಯ.

. ನೇರ ಬಿತ್ತನೆ ಪ್ರದೇಶ: ಬೆಳಗಾಂ ಧಾರವಾಡ, ಉತ್ತರ ಕನ್ನಡ, ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಯ ಕೆಲವು ಭಾಗಗಳು.

. ದಿಣ್ಣೆ ಪ್ರದೇಶ: ಐಇಟಿ ೧೪೪೪, ಟಿ.ಎಸ್. ೧ ಮತ್ತು ಇಓ ೨೯ ತಳಿಗಳ ಸಂಕರಣದಿಂದ ಪಡೆಯಲಾದ ಈ ಗಿಡ್ಡ ತಳಿ ಎಲ್ಲಾ ಕಾಲಾವಧಿಯಾಗಿದ್ದು, ಈಗ ಮಿನಿಕಿಟ್ ಪ್ರಯೋಗದಲ್ಲಿದೆ. ದಿಣ್ಣೆ ಪ್ರದೇಶದ ನೇರ ಬಿತ್ತನೆ ಬೆಳೆಗೆ ಬಹಳ ಸೂಕ್ತವಾಗಬಹುದು ಎಂದು ಈವರೆಗಿನ ಅನುಭವದಿಂದ ತಿಳಿದು ಬಂದಿದೆ.

. ಬಯಲು ಪ್ರದೇಶ: ಈಗಾಗಲೇ ಬಳಕೆಯಲ್ಲಿರುವ ಜಯ ಮತ್ತು ಐಆರ್೫ ತಳಿಗಳನ್ನೇ ಉಪಯೋಗಿಸಬಹುದು.

. ತಗ್ಗು ಪ್ರದೇಶ: – ಪಂಕಜ್ ಮತ್ತಿ ಇಂಟಾನ್ – ದೀರ್ಘ ಕಾಲಾವಧಿಯ ಆ ಅರೆಗಿಡ್ಡ ತಳಿಗಳು ಈಗ ತಗ್ಗು ಪ್ರದೇಶಗಳಲ್ಲಿ ಮಿನಿಕಿಟ್ ಪ್ರಯೋಗದಲ್ಲಿದೆ ಸದ್ಯಕ್ಕೆ ಬೆಳೆಯಲ್ಪಡುತ್ತಿರುವ ಟಿ೧೪೧ ಮತ್ತು ಎಲ್ಲಿ ಕೆರಿ ಸಾಲ್ ೪ (ವೈ೪) ಬತ್ತಗಳಿಗಿಂತ ಇವೆರಡೂ ಉತ್ತಮ ಎನಿಸಿದೆ. ಈ ಪ್ರದೇಶಗಳಲ್ಲಿ ಸಮಸ್ಯೆಯಾಗಿರುವ ಬೆಂಕಿ ರೋಗಕ್ಕೆ ಅಗತ್ಯವಾದ ನಿರೋಧಕ ಶಕ್ತಿ ಇಂಟಾನ್ ತಳಿಯಲ್ಲಿ ಇರುವುದರಿಂದ ಈ ತಳಿ ಹೊಂದಿಕೊಳ್ಳದೆ ಇರುವ ಸಾಧ್ಯತೆ ಇದೆ.