ಕರ್ನಾಟಕದ ಮುಖ್ಯ ಬೆಳೆಗಳಲ್ಲಿ ಬತ್ತವೂ ಒಂದು. ರಾಜ್ಯದಲ್ಲಿ ಸುಮಾರು ೨೮.೫ ಲಕ್ಷ ಎಕರೆ ಪ್ರದೇಶದಲ್ಲಿ ಪ್ರತಿ ವರ್ಷ ೨೧.೩ ಲಕ್ಷ ಟನ್ ಬತ್ತ ಬೆಳೆಯುವರು. ಕರ್ನಾಟಕ ಬತ್ತದ ಬೆಳೆಯಲ್ಲಿ ಸದ್ಯಕ್ಕೆ ಸ್ಥಾನ ಪಡೆದಿದ್ದರೂ ಒಂದೆರಡು ವರ್ಷಗಳಲ್ಲಿ ಮೊದಲನೆ ಸ್ಥಾನ ಪಡೆಯುವ ನಿರೀಕ್ಷೆಯಿದೆ.

ಬತ್ತದ ಉತ್ಪಾದನೆ ಪ್ರತಿ ವರ್ಷ ಹೆಚ್ಚುತ್ತಿದೆ. ಇದಕ್ಕೆ ಮುಖ್ಯ ಕಾರಣ ಅಧಿಕ ಇಳುವರಿ ತಳಿಗಳ ಬಳಕೆ ಮತ್ತು ಆಧುನಿಕ ಬೇಸಾಯ ಪದ್ಧತಿಯ ಅನುಕರಣೆ.

೧೯೬೫ ರಿಂದ ಬೆಳೆಯುತ್ತಿರುವ ಅಧಿಕ ಇಳುವರಿ ತಳಿಗಳನ್ನು ಕಳೆದ ವರ್ಷದವರೆಗೆ ಬತ್ತ ಬೆಳೆಯುವ ಒಟ್ಟು ವಿಸ್ತೀರ್ಣದ, ಕೇವಲ ಶೇ. ೧೨ರಷ್ಟು ಪ್ರದೇಶದಲ್ಲಿ ಮಾತ್ರ ಬೆಳೆಯುತ್ತಿದ್ದರು. ಕೇರಳ, ತಮಿಳುನಾಡು ಮತ್ತು ಇತರ ಕೆಲವು ರಾಜ್ಯಗಳಲ್ಲಿ ನಮ್ಮ ರಾಜ್ಯಕ್ಕಿಂತ ಹೆಚ್ಚು ಪ್ರಮಾಣದಲ್ಲಿ ಅಧಿಕ ಇಳುವರಿ ತಳಿಗಳನ್ನು ಬೆಳೆಯುವರು. ನಮ್ಮ ರಾಜ್ಯದಲ್ಲಿ ಈ ಪ್ರಮಾಣ ಕಡಿಮೆಯಿರಲೂ ಕಾರಣಗಳಿವೆ. ನಮ್ಮ ಜನರಲ್ಲಿ ಬತ್ತದ ಕಾಳಿನ ಗುಣಗಳ ಬೇಡಿಕೆ ಇತರ ರಾಜ್ಯಗಳಿಗಿಂತ ಸ್ವಲ್ಪ ಮಟ್ಟಿಗೆ ಬೇರೆ ಇರುವುದು, ನೀರು ಸರಬರಾಜು ಮತ್ತು ಹವಾಗುಣದ ವೈಪರೀತ್ಯ. ನಮ್ಮ ಜನರಿಗೆ (ಕರಾವಳಿ ಪ್ರದೇಶದಲ್ಲಿ ಕೆಲವರನ್ನು ಬಿಟ್ಟು) ಬೇಕಾಗಿರುವುದು ಸಣ್ಣ ಕಾಳನ್ನು ಹೊಂದಿರುವ ಮತ್ತು ಅನ್ನ ಚೆನ್ನಾಗಿ ಆಗುವ ತಳಿ. ಕೆಲವು ಕಡೆ ನೀರಿನ ಅಭಾವವಿದ್ದು, ಮೂರೂವರೆ ನಾಲ್ಕು ತಿಂಗಳೂ ಮಾತ್ರ ನೀರು ಕಟ್ಟಲು ಸಾಧ್ಯ. ಬೇಸಿಗೆಯಲ್ಲಿ ಈ ಪರಿಸ್ಥಿತಿಯೇ ಹೆಚ್ಚು. ಕೆರೆಯ ನೀರಿನ ನೆರವಿನಿಂದ ಬತ್ತ ಬೆಳೆಯುವವರೂ ಬಾವಿ ನೀರಿನಿಂದ ಬೆಳೆಯುವವರೂ ಮತ್ತು ತುಂಗಭದ್ರಾ ಅಣೆಕಟ್ಟಿನಿಂದ ನೀರು ಬಳಸಿ ಬೆಳೆಯುವವರೂ (ಮೇ ೧ನೇ ತಾರೀಖಿಗೆ ಕಾಲುವೆಯಲ್ಲಿ ನೀರು ನಿಲ್ಲಿಸುವುದರಿಂದ) ಈ ಪರಿಸ್ಥಿತಿಯಲ್ಲಿ ಪ್ರತಿವರ್ಷ ಎದುರಿಸಬೇಕಾಗಿದೆ. ಅಲ್ಲದೆ ಮಳೆಗಾಲದಲ್ಲೂ ಸಹ ಸಕಾಲಕ್ಕೆ (ಜೂನ್, ಜುಲೈ ತಿಂಗಳಲ್ಲಿ) ಕೆರೆ ಕಟ್ಟೆಗಳು ತುಂಬದೆ ಬತ್ತದ ನಾಟಿಯನ್ನು ಹಿಂಗಾಲದಲ್ಲಿ (ಆಗಸ್ಟ್ ಮತ್ತು ಸೆಪ್ಟೆಂಬರ್) ಮಾಡುವುದು ಅನಿವಾರ್ಯವಾಗಿದೆ.

ಹೊಸ ತಳಿಗೆ ಬೇಡಿಕೆ:

ಇಂಥ ಸಂದರ್ಭದಲ್ಲಿ ಈವರೆಗೆ ಜಯ ಐ.ಆರ್. ೮ ಮತ್ತು ಐ.ಆರ್. ೨೦ ಬತ್ತದ ತಳಿಗಳನ್ನು ಬೆಳೆದರೆ ಬೇಸಿಗೆಯಲ್ಲಿ ನೀರಿನ ಅಭಾವದಿಂದಲೇ ಅಥವಾ ಮಳೆಗಾಲದಲ್ಲಿ ಹಿಂಭಾಗದ ನಾಟಿಯ ಪ್ರಯುಕ್ತ ಚಳಿಗೆ ತುತ್ತಾಗಿಯಾಗಲೀ, ಕಾಳಿನ ಹೆಚ್ಚು ಭಾಗ ಜೊಳ್ಳಾಗಿ ರೈತರಿಗೆ ನಷ್ಟ ಉಂಟಾಗುತ್ತದೆ. ಜಯ ಮತ್ತು ಐ.ಆರ್. ೮ ತಳಿಗಳ ಕಾಳು ಬಹಳ ದಪ್ಪವಾಗಿದ್ದು, ಅನ್ನ ಅಷ್ಟು ಚೆನ್ನಾಗುವುದಿಲ್ಲವಾದ ಕಾರಣ ಮಾರುಕಟ್ಟೆಯಲ್ಲಿ ಕ್ವಿಂಟಾಲಿಗೆ ಸಣ್ಣ ಬತ್ತಕ್ಕಿಂತ ೧೫ ರಿಂದ ೨೦ ರೂ ಕಡಿಮೆ ಬೆಲೆ ಸಿಕ್ಕುತ್ತದೆ. ಸಂಕ್ಷಿಪ್ತವಾಗಿ ಹೇಳುವುದಾದರೆ ಅಲ್ಪಾವಧಿಯ ಹಿಂಗಾಲದ ನಾಟಿಗೂ ಸರಿ ಹೋಗುವ ಮತ್ತು ಸಣ್ಣ ಕಾಳನ್ನು ಹೊಂದಿರುವ ಹೆಚ್ಚು ಇಳುವರಿ ಕೊಡುವಂತಹ ಹೊಸ ಬತ್ತದ ತಳಿಗೆ ಹೆಚ್ಚು ಬೇಡಿಕೆ ಇದೆ ಎನ್ನಬಹುದು. ಈ ಬೇಡಿಕೆಗಳ ಪೂರೈಕೆಗೆಂದೇ ಕೃಷಿ ವಿಶ್ವವಿದ್ಯಾನಿಲಯದ ಅಂಗವಾದ ಮಂಡ್ಯದ ಪ್ರಾದೇಶಿಕ ಸಂಶೋಧನಾ ಕೇಂದ್ರದಲ್ಲಿ ೧೯೬೯ ರಲ್ಲಿ ಹಾಕಿದ ಒಂದು ಯೋಜನೆಯ ಫಲಿತಾಂಶವಾಗಿ “ಮಧು” ಅಥವಾ ಎಂ.ಆರ್. ೧೩೬ ಎಂಬ ಹೊಸ ಬತ್ತದ ತಳಿ ಸೃಷ್ಟಿಯಾಯಿತು. ಕೃಷಿ ಅನುಸಂಧಾನ ಪರಿಷತ್ತಿನ ಡೈರೆಕ್ಟರ್ ಜನರಲ್ ಆದ ಡಾ. ಎಂ.ಎಸ್. ಸ್ವಾಮಿನಾಥನ ಈ ಹೊಸ ಬತ್ತದ ತಳಿಯನ್ನು ನವೆಂಬರ್ ೧೧ ರಂದು ಬಿಡುಗಡೆ ಮಾಡಿದರು.

ಹೆಚ್ಚು ಇಳುವರಿಗೆ ಹೆಸರಾದ ಟಿ.ಎನ್. ೧ ತಳಿಯನ್ನು ಮತ್ತು ಕಾಳಿನ ಗುಣಕ್ಕೆ ಪ್ರಸಿದ್ದಿಯಾದ ಟಿ.ಕೆ.ಎಂ. ೬ ತಳಿಯೊಡನೆ ಸಂಕರಣ ಮಾಡಿ, ಬರುವ ಐದನೆ ಸಂತತಿ (ಎಫ್ ೫) ಯಿಂದ ಆರಿಸಲ್ಪಟ್ಟ ಈ “ಮಧು” ತಳಿ ಕಡಿಮೆ ಅವಧಿಯಲ್ಲಿ (ಅಂದರೆ ೧೧೫-೧೨೫ ದಿವಸಗಳಲ್ಲಿ) ಕೊಯ್ಲಿಗೆ ಬರುತ್ತದೆ. ಈ ತಳಿಯ ಪೈರುಗಳು ಇತರ ತಳಿಯ ಪೈರುಗಳಿಗಿಂತ ಬೇಗ ಸೊಂಪಾಗಿ ಬೆಳೆಯುತ್ತದೆ. ಸೂಚಿಸಿದ ರೀತಿ ಬೇಸಾಯ ಕ್ರಮವನ್ನು ಅನುಸರಿಸಿದಾಗ ಇದು ಪದ್ಮ, ಜಯ ಬತ್ತಗಳಿಗಿಂತ ಎತ್ತರವಾಗಿಯೂ ಮತ್ತು ನಾಡು ತಳಿಗಿಂತ ಕುಳ್ಳಾಗಿಯೂ ಬೆಳೆದು ದಪ್ಪನಾದ ಕಾಂಡ ಹೊಂದಿದ್ದು, ಕೊಯ್ಲಿನವರೆಗೂ ಬೀಳದೆ ನಿಂತಿರುತ್ತದೆ. ಸರಾಸರಿ ೧೫ ತೆಂಡೆ ಹೊಡೆಯುವ ಶಕ್ತಿ ಹೊಂದಿರುವ ಇದರ ತೆನೆ ೨೦ – ೨೨ ಸೆ.ಮೀ. ಉದ್ದವಿದ್ದು, ಮತ್ತು ಒಂದು ತೆನೆಯಲ್ಲಿ ಸುಮಾರು ೧೧೫ ಕಾಳುಗಳಿರುವುವು. ಕಾಳು ಸಣ್ಣಗಿರುವುದರಿಂದ ಮಾರುಕಟ್ಟೆಯಲ್ಲಿ ಕೊಯಮತ್ತೂರು (ಎಸ್. ೭೦೧) ಸಣ್ಣ ಬತ್ತದ ಬೆಲೆಗೆ ಮಾರಬಹುದು. ಅನ್ನ ಮುದ್ದೆಯಾಗದೆ ಉದುರಾಗಿ ರುಚಿಯಾಗಿರುತ್ತದೆ. ಬತ್ತದ ಪ್ರಮಾಣದಲ್ಲಿ ಶೇ. ೭೮ ರಷ್ಟು ಪಾಲಿಷ್ ಮಾಡದ (ಬ್ರೌನ್ ರೈಸ್) ಅಕ್ಕಿ ಪಡೆಯಬಹುದು. ಇದರಲ್ಲಿ ಪ್ರೋಟೀನ್ ಅಂಶ ಶೇ. ೮.೮ ರಷ್ಟಿದೆ.

ಪ್ರಯೋಗ – ಫಲ

ಮಧು ತಳಿಯನ್ನು ಮಂಡ್ಯ, ನಾಗೇನಹಳ್ಳಿ, ಪೊನ್ನಂಪೇಟೆ, ಮಡಿಕೇರಿ, ಮಂಗಳೂರು, ಸಿರಸಿ, ಕುಮಟಾ, ಅಂಕೋಲಾ, ಮುಗದ, ಗಂಗಾವತಿ, ಸಿರಗುಪ, ಹಿರಿಯೂರು ಮತ್ತು ಹೆಬ್ಬಾಳ ಸಂಶೊಧನಾ ಕೇಂದ್ರಗಳಲ್ಲಿ ೧೯೬೯ ರಿಂದ ಈವರೆಗೆ ಮುಂಗಾರು ಹಿಂಗಾರು ಮತ್ತು ಬೇಸಿಗೆ ಬೆಳೆಗಳಲ್ಲೆಲ್ಲಾ ೨೫ ಇತರ ತಳಗಳೊಂದಿಗೆ ಬೆಳೆದು ಪರೀಕ್ಷಿಸಲಾಗಿದೆ. ಸುಮ, ರತ್ನಕುಂಚಿ, ಕಾವೇರಿ ಹಾಲುಬ್ಬಲು, ಹೆಚ್.ಆರ್. ೧೬ ಬಮಗಾರಕಡ್ಡಿ, ಚೈನಾಬತ್ತ. ಐ.ಆರ್. ೨೦ ಸಬರಮತಿ ಮತ್ತು ಇತರ ನಾಡ ತಳಿಗಳೊಡನೆ ಹೋಲಿಸಿ ನೋಡಿದಾಗ ಈ ತಳಿಯು ಇತರ ತಳಿಗಳಿಗಿಂತ ೧೫ ರಿಂದ ೨೦ ದಿನದ ಮುಂಚೆ ಕೊಯ್ಲಿಗೆ ಬರುವುದೆಂದು ಕಾಳಿನ ಗುಣದಲ್ಲಿ ಇನ್ನು ಉತ್ತಮವೆಂದೂ ಮತ್ತು ಶೇ. ೧೮ ರಿಂದ ೩೫ ರಷ್ಟು ಹೆಚ್ಚು ಇಳುವರಿ ಕೊಡುವುದಾಗಿಯೂ ಕಂಡು ಬಂದಿದೆ. ಅಲ್ಲದೆ ೧೯೭೧ ರಲ್ಲಿ ಬೇಸಿಗೆ, ಮಳೆಗಾಲದ ಬೆಳೆ ಹಾಗೂ ೧೯೭೨ ರಲ್ಲಿ ಬೇಸಿಗೆ ಮತ್ತು ಮಳೆಗಾಲದ ಬೆಳೆಗಳಲ್ಲಿ ಮೈಸೂರು, ಮಂಡ್ಯ, ಹಾಸನ, ಮಂಗಳೂರು, ಕೋಲಾರ, ಚಿತ್ರದುರ್ಗ, ಶಿವಮೊಗ್ಗ, ತುಮಕೂರು, ರಾಯಚೂರು ಮತ್ತು ಬಳ್ಳಾರಿ ಜಿಲ್ಲೆಗಳಲ್ಲೂ ರೈತರ ಗದ್ದೆಗಳಲ್ಲಿ ಕೃಷಿ ವಿಶ್ವವಿದ್ಯಾಲಯದ ವಿಸ್ತರಣಾ ವಿಭಾಗ ಹಾಗೂ ವ್ಯವಸಾಯ ಇಲಾಖೆಯ ಜಿಲ್ಲಾಧಿಕಾರಿಗಳ ಸಹಾಯದಿಂದ ಸುಮಾರು ೨೦೦ಕ್ಕೂ ಪ್ರಯೋಗಗಳನ್ನು ನಡೆಸಲು ಸಾಧ್ಯವಾಯಿತು. ಈ ಬತ್ತ ಎಕರೆಗೆ ಗರಿಷ್ಠ ೩೮ ಕನಿಷ್ಠ ೧೬ ಮತ್ತು ಸರಾಸರಿ ೨೬ ಕ್ವಿಂಟಾಲ್ ಇಳುವರಿಯನ್ನು ಕೊಟ್ಟಿತ್ತಲ್ಲದೆ, ಸಂಶೋಧನಾ ಕೇಂದ್ರಗಳಲ್ಲಿ ಕಂಡು ಬಂದಂತೆ ಹೆಚ್ಚಿನ ರೋಗರುಜಿನಗಳು ಮತ್ತು ಕ್ರಿಮಿಕೀಟಗಳಿಗೆ ತುತ್ತಾಗದು ಎಂಬುದೂ ಮನದಟ್ಟಾಯಿತು. ಈ ವಿಶೇಷ ಗುಣಗಳಿಂದಾಗಿ ಈ ತಳಿಯನ್ನು ಈಗಾಗಲೇ ಸಾವಿರಾರು ಎಕರೆಗಳಲ್ಲಿ ರೈತರು ಬೆಳೆಯುತ್ತಿದ್ದಾರೆ. ಒಂದೇ ಸಂಕರಣದಿಂದ ತೆಗೆದ ಎಂ.ಆರ್. ೧೩ ಕ್ಕೂ ಮತ್ತು ಎಂ.ಆರ್. ೧೩೪ ಕ್ಕೂ ಹೆಚ್ಚು ವ್ಯತ್ಯಾಸವಿಲ್ಲಬೆಂದು ತಿಳಿಯುವುದು ಅಗತ್ಯ.

ಬಿತ್ತನೆ

ಈ ತಳಿಯ ಬಗ್ಗೆ ತಿಳಿದುಕೊಂಡಿರಬೇಕಾದ ಮತ್ತೊಂದು ವಿಷಯವೇನೆಂದರೆ ಬೀಜದ ಉಪಯೋಗ. ಒಕ್ಕಣೆ ಮಾಡಿದ ಕೂಡಲೇ ಚೆನ್ನಾಗಿ ಒಣಗಿಸಿದರೆ ೪ನೇ ದಿವಸದಲ್ಲಿ ಬಿತ್ತನೆ ಮಾಡಿದರೂ ಮೊಳಕೆ ಚೆನ್ನಾಗಿ ಬರುತ್ತದೆಯಾದ್ದರಿಂದ ಈ ಬೆಳೆಯ ಬೀಜವನ್ನು ಮುಂದಿನ ಬಿತ್ತನೆಗೆ ಉಪಯೋಗಿಸಬಹುದು. ಈ ಅನುಕೂಲ ಐ.ಆರ್. ೨೦ ಮತ್ತು ಇತರ ತಳಿಗಳಲ್ಲಿ ಇಲ್ಲವೆಂಬುದು ಗಮನಿಸಬೇಕಾದ ಅಂಶ. ಇದು ನಾಲ್ಕು ತಿಂಗಳ ಬತ್ತ. ಆದ್ದರಿಂದ ಇದರ ಇಳುವರಿಯನ್ನು ಐದು ತಿಂಗಳ ಬತ್ತಗಳಾದ ಜಯ, ಐ.ಅರ್. ೮, ಐ.ಇ.ಟಿ. ೧೯೯೧ ಮತ್ತು ನಾಲ್ಕೂವರೆ ತಿಂಗಳ ಬತ್ತವಾದ ಐ.ಆರ್. ೨೦ ತಳಿಗಳಿಗೆ ಹೋಲಿಸಬಾರದು. ಈ ತಳಿಯು ಕರ್ನಾಟಕದಲ್ಲಲ್ಲದೆ ಭಾರತದ ಇತರ ರಾಜ್ಯಗಳಲ್ಲಿಯೂ ಕೂಡ ಐ.ಇ.ಟಿ. ೨೬೬೫ ಎಂಬ ಹೆಸರಿನಲ್ಲಿ ಹೆಚ್ಚು ಪ್ರಿಯವಾಗುವ ಸಾಧ್ಯತೆಯಿದೆ.

ಈ ತಳಿಯಿಂದ ಹೆಚ್ಚು ಉತ್ಪತ್ತಿ ಪಡೆಯಲು ಅವಶ್ಯಕವಾದ ಬೇಸಾಯ ಕ್ರಮವಿದು.

* ಈ ಬತ್ತವನ್ನು ಸೆಪ್ಟೆಂಬರ್ ಮತ್ತು ಅಕ್ಟೋಬರ್ ತಿಂಗಳು ಬಿಟ್ಟ ವರ್ಷದ ಎಲ್ಲಾ ತಿಂಗಳಲ್ಲಿಯೂ ನಾಟಿ ಮಾಡಬಹುದು.

* ಮಳೆಗಾಲಕ್ಕಿಂತ ಚಳಿಗಾಲ ಮತ್ತು ಬೇಸಿಗೆಯಲ್ಲಿ ೧೦ ದಿವಸಗಳಿಗೆ ಮುಂಚೆಯೇ ಕೊಯ್ಲಿಗೆ ಬರುತ್ತದೆ.

* ಎಕರೆಗೆ ೨೫ ಕೆ.ಜಿ. ಬೀಜ ಬೇಕು

* ೨೦ ದಿನಗಳ ಪೈರನ್ನು ೬ ಅಂಗುಲ ಅಂತರದ ಸಾಲುಗಳಲ್ಲಿ ೪ ಅಂಗುಲ ಅಂತರದಲ್ಲಿ ನಾಟಿ ಮಾಡಬೇಕು.

* ನಾಟಿ ಮಾಡುವಾಗ ಒಂದು ಗುಣಿಗೆ ೨ ಅಥವಾ ೩ ಪೈರುಗಳನ್ನು ತೇಲಿಸಿ ನೆಡಬೇಕು.

ಇದಕ್ಕೆ ಒಟ್ಟು ಬೇಕಾಗುವ ರಸಾಯನಿಕ ಗೊಬ್ಬರ ಎಕರೆಗೆ ೪೦:೨೫:೨೫ ಕೆ.ಜಿ., ಸಾರಜನಕ, ರಂಜಕ, ಪೊಟ್ಯಾಷಿಯಂ, ರಂಜಕ ಮತ್ತು ಗೊಬ್ಬರಗಳನ್ನು ಸಂಪೂರ್ಣವಾಗಿಯೂ ಮತ್ತು ಮೂರನೆ ಒಂದು ಭಾಗದಷ್ಟು ಸಾರಜನಕವನ್ನು ನಾಟಿ ಮಾಡುವಾಗ ಹಾಕಬೇಕು. ಉಳಿದ ಸಾರಜನಕವನ್ನು ಸಮಭಾಗವಾಗಿ ತಂಡೆ ಹೊಡೆಯುವಾಗ ಮತ್ತು ಮೊಗ್ಗು ಕಟ್ಟುವಾಗ ಮೇಲ್ಗೊಬ್ಬರವಾಗಿ ಹಾಕಬೇಕು. ಈ ಸಲಹೆಯನ್ನು ಮಣ್ಣಿನ ಪರೀಕ್ಷೆಯ ಆಧಾರದ ಮೇಲೆ ಅಳವಡಿಸಿಕೊಳ್ಳುವುದು ಉತ್ತಮ.