ಕೃಷಿ ಸಂಶೋಧನೆಯಲ್ಲಿ ತಳಿ ಶಾಸ್ತ್ರವು (Plant Breeding) ಜಿನಿಟಿಕ್ಸ್ ಶಾಸ್ತ್ರದ ಸಂಶೋಧನೆಯ ನೆರವಿನಿಂದ ಕಳೆದ ಆರೇಳು ದಶಕಗಳಲ್ಲಿ ಹಿಂದೆ ಯಾವಾಗಲೂ ಸಾಧ್ಯವಾದಷ್ಟು ಉನ್ನತ ಮಟ್ಟದ ಪ್ರಗತಿ ಸಾಧಿಸಿದೆ. ಖ್ಯಾತ ವಿಜ್ಞಾನಿ ಕೋಯಲ್ ರೀಟರ್ (೧೯೬೩) ಅವರಿಂದ ಆರಂಭವಾದ ತಳಿ ಸಂಕರಣ ವಿಧಾನ ಇಂದು ಪ್ರಪಂಚದ ಎಲ್ಲಾ ಸಸ್ಯ ಸಂಶೋಧನಾ ಕೇಂದ್ರಗಳಲ್ಲಿಯೂ ಎಣಿಸಲು ಸಾಧ್ಯವಾದ ಸಂಖ್ಯೆಯಲ್ಲಿ ಮತ್ತು ನಾನಾ ಉದ್ದೇಶಗಳಿಂದ ಪ್ರಯೋಗಿಸಲ್ಪಡುತ್ತಿದೆ. ತಳಿಗಳ ಉತ್ಪಾದನೆ ಮತ್ತು ಸುಧಾರಣೆಯಲ್ಲಿ ಇದರ ಮಹತ್ವ ಅದ್ವಿತೀಯವೆನಿಸಿದೆ.

ತಳಿಗಳ ಅಭಿವೃದ್ಧಿ: ಎರಡು ತಳಿಗಳಲ್ಲಿರುವ ಬೇರೆ ಬೇರೆ ಒಳ್ಳೆಯ ಗುಣಗಳನ್ನು ಒಂದೇ ತಳಿಯಲ್ಲಿ ಕ್ರೋಡಿಕರಿಸುವುದಕ್ಕಾಗಿ ಮೊದಲು ಎರಡೂ ತಳಿಗಳ ಸಂಕರಣ ಮತ್ತು ಅನಂತರ ಅದರಿಂದ ಹೊರಬರುವ ಪೀಳಿಗೆಗಳಲ್ಲಿ ಸೂಕ್ತ ಆಯ್ಕೆ ಮಾಡುವ ಉಪಾಯವನ್ನು ತಳಿಶಾಸ್ತ್ರಜ್ಞರು ಉಪಯೋಗಿಸುತ್ತಿದ್ದಾರೆ. ಅಲ್ಲದೆ ಪ್ರತಿಯೊಂದು ಗುಣದ ಅನುವಂಶಿಕತೆಯ ನಿಯಮಗಳನ್ನು (Geneaction) ಅರ್ಥ ಮಾಡಿಕೊಂಡು, ಅದರಿಂದ ತೀವ್ರಗತಿಯಲ್ಲಿ ಎರಡು ಅಥವಾ ಹೆಚ್ಚು ಗುಣಗಳನ್ನು ಒಂದೇ ತಳಿಯಲ್ಲಿ ಶೇಖರಿಸಲು ಸಾಧ್ಯವಾಗಿದೆ. ಅವುಗಳಲ್ಲಿ ಅತಿ ಮುಖ್ಯವಾದುದೆಂದರೆ ಹೈಬ್ರಿಡ್ ಅಥವಾ ಮಿಶ್ರ ಅಥವಾ ಶಕ್ತಿಮಾನ್ ತಳಿಗಳು.

ಶಕ್ತಿಮಾನ್ ತಳಿಗಳು: ಸಾಮಾನ್ಯವಾಗಿ ಮಿಶ್ರ ತಳಿಗಳು ಇತರ ತಳಿಗಳಿಗಿಂತ ಹೆಚ್ಚು ದೃಢಕಾಯವಾಗಿರುತ್ತದೆ. ಅಲ್ಲದೆ ಅಧಿಕ ಪ್ರಮಾಣದಲ್ಲಿ ಬಿಸಿಲು, ನೀರು, ಆಹಾರ ಮತ್ತು ಇತರ ಪೋಷಕಾಂಶಗಳನ್ನು ಉಪಯೋಗಿಸಿಕೊಂಡು ತತ್ಸಮವಾಗಿ ಅಧಿಕ ಇಳುವರಿ ಕೊಡಬಲ್ಲವು. ಉತ್ಪಾದನೆಯನ್ನು ಒಮ್ಮೆಲೆ ಇಮ್ಮಡಿ ಮಾಡಲು ಅಥವಾ ಮೂರು ಪಟ್ಟು ಹೆಚ್ಚಿಸಲು ಸಾಧ್ಯವಾಗಿರುವುದು ಕೇವಲ ಶಕ್ತಿಮಾನ್ ತಳಿಗಳಿಂದ ಮಾತ್ರ. ಇದರಿಂದ ಹೈಬ್ರಿಡ್ ತಳಿಗಳನ್ನು ಬೆಳೆದ ರೈತರಿಗೆ ತೃಪ್ತಿಕರವಾದ ನಿವ್ವಳ ಆದಾಯ ದೊರೆಯುತ್ತಿರುವುದು ಸಂತೋಷದ ಸಂಗತಿಯಾಗಿದೆ. ಆದ್ದರಿಂದ ಶಕ್ತಿಮಾನ್ ತಳಿಗಳು ಇಂದು ರೈತ ಸಮಾಜದಲ್ಲಿ ಅನೇಕರಿಗೆ ಚಿರಪರಿಚಿತವೆಂದು ಹೇಳಬಹುದು.

ಬತ್ತದಲ್ಲಿ: ಈ ರೀತಿ ಶಕ್ತಿಮಾನ್ ತಳಿಗಳ ಉತ್ಪಾದನೆ ಪ್ರತಿಯೊಂದು ಬೆಳೆಯಲ್ಲಿಯೂ ಸ್ವಾಗತಾರ್ಹ. ಆದರೆ ಮೊದಮೊದಲು ಇವು ಕೇವಲ ಪರಕೀಯ ಪರಾಗಸ್ಪರ್ಶವ್ನನು ಹೊಂದಿರುವ (Cross Pollinated) ಹಾಗೂ ಹೆಣ್ಣು ಮತ್ತು ಗಂಡು ಹೂಗಳು ಬೇರೆ ಬೇರೆ ಇರುವ (Unisexual|) ಬೆಳೆಗಳಲ್ಲಿ ಅಂದರೆ ಮುಸುಕಿನ ಜೋಳದಂತಹ ಬೆಳೆಗಳಲ್ಲಿ ಮಾತ್ರ ಸಾಧ್ಯವಾಯಿತು. ತತ್ಸಬಂಧವಾಗಿ ನಡೆಸಿದ ಸಂಶೋಧನೆಯಿಂದ ಶಕ್ತಿಮಾನ್ ತಳಿಗಳ ಉತ್ಪಾದನೆ ಇತರ ಬೆಳೆಗಳಲ್ಲಿಯೂ ಸಾಧ್ಯವಾಯಿತು. ಅಂದರೆ ಸಾಕಷ್ಟು ಮಟ್ಟಿಗೆ ಪರಕೀಯ ಪರಾಗಸ್ಪರ್ಶ ಪದ್ಧತಿಯನ್ನು ಅನುಸರಿಸುವ (Often cross pollinated) ಜೋಳದಲ್ಲಿ ಮತ್ತು ಒಂದೇ ಪುಪ್ಪದಲ್ಲಿ ಹೆಣ್ಣು ಮತ್ತು ಗಂಡು ಭಾಗಗಳಿರುವ ಮತ್ತು ಹೆಚ್ಚು ಪರಕೀಯ ಪರಾಗ ಸ್ಪರ್ಶ ನಿಯಮಕ್ಕೆ ಒಳಪಟ್ಟ (Bisexual and highly cross pollinated) ಸಜ್ಜೆಯಂತಹ ಬೇಳೆಗಳನ್ನೂ ಸಾಧ್ಯವಾಯಿತು. ಇದಕ್ಕೆ ನೆರವಾದ ಮುಖ್ಯ ಸಂಶೋಧನೆ ಎಂದರೆ ನಪುಂಸಕತ್ವವಿರುವ (male sterlity) ಅಥವಾ ಬರೇ ಹೆಣ್ಣು ಭಾಗ ಮಾತ್ರ ಕ್ರಿಯೆಯಲ್ಲಿರುವ ತಳಿಗಳ ಆವಿಷ್ಕಾರ. ಇದೀಗ ಅಂದರೆ ೧೯೭೧ರಲ್ಲಿ ಕರ್ನಾಟಕ ರಾಜ್ಯದ ಕೃಷಿ ವಿಶ್ವವಿದ್ಯಾಲಯದ ತಜ್ಞರಿಂದ ಕಂಡು ಹಿಡಿಯಲ್ಪಟ್ಟ ನಪುಂಸಕ ಬತ್ತ ಹೈಬ್ರಿಡ್ ತಳಿಗಳ ಉತ್ಪಾದನೆಯಲ್ಲಿ ಬಹಳ ಪ್ರಯೋಜನಕಾರಿಯಾಗಬಲ್ಲುದೆಂದು ಹೇಳಬಹುದು. ಹೈಬ್ರಿಡ್ ತಳಿಗಳನ್ನು ಸಂಕರಣ ಮಾಡಿದಾಗ ಹೊರಬರುವ ಶಕ್ತಿಮಾನ್ ತಳಿಯಲ್ಲಿ –

೧. ಹೆಚ್ಚು ಇಳುವರಿ ನೀಡಬಲ್ಲ ಶಕ್ತಿ (Hybrid vigar) ಇರಬೇಕು.

೨. ಹೈಬ್ರಿಡ್ ತಳಿಗಳನ್ನು ಸಾಮಾನ್ಯವಾಗಿ ಕಂಡು ಬರುವ ಹೆಚ್ಚು ಜೊಳ್ಳಾಗುವ ಗುಣ (sterility) ದಿಂದ ಹೊರತಾಗಿರಬೇಕು.

೩. ಹೈಬ್ರಿಡ್ ಬೀಜೋತ್ಪಾದನೆ ಸುಲಭ ಸಾಧ್ಯವಾಗಿರಬೇಕು.

೪. ನಾಡ ತಳಿಗಳಲ್ಲಿರುವ ಅಥವಾ ಸಂಕರಿಸಿದ ತಳಿಗಳಲ್ಲಿರುವ ಹುಲ್ಲು ಮತ್ತು ಕಾಳಿನ ಒಳ್ಳೆಯ ಗುಣಗಳು ಹೈಬ್ರಿಡ್ ಸಂತತಿಯಿಂದ ಪಡೆಯುವ ಹುಲ್ಲು ಮತ್ತು ಕಾಳುಗಳಲ್ಲಿಯೂ ಲಭ್ಯವಾಗಿರುಬೇಕು.

ಮೊದಲನೆಯ ಅಂಶದ ಬಗ್ಗೆ ೧೯೬೯ ರಲ್ಲಿ ಧಾರವಾಡ ಕೃಷಿ ಕಾಲೇಜಿನಲ್ಲಿ ನಡೆಸಿದ ಕೃಷಿ ಸಂಶೋಧನೆಯಿಂದ ಬತ್ತದ ಬೆಳೆಯಲ್ಲಿಯೂ ಸಹ ಇತರ ಬೆಳೆಗಳಂತೆ ಶಕ್ತಿಮಾನ್ ಗುಣಿವಿದೆ ಎಂದು ಖಚಿತವಾಗಿದೆ. ಪ್ರತಿಯೊಂದು ತಳಿಯಲ್ಲಿಯೂ ಈ ಶಕ್ತಿ ಇರುವುದೆಂದಲ್ಲ. ಆದರೆ ಈ ಶಕ್ತಿಯಿರುವ ತಳಿಗಳು ಬತ್ತದಲ್ಲಿ ಇದೆಯೆಂದು ವೇದ್ಯವಾಗಿದೆ. ಅಂದರೆ ಸತತ ಸಂಶೋಧನೆಯಿಂದ ಬತ್ತದಲ್ಲಿ ಶಕ್ತಿಮಾನ್ ತಳಿಗಳನ್ನು ನೀಡಬಲ್ಲ ಮೂಲ ತಳಿಗಳನ್ನು ಹುಡುಕಿ ತೆಗೆಯಲು ಸಾಧ್ಯ ಎಂದಾಯಿತು.

ಕಳೆದ ೪-೫ ವರ್ಷಗಳಲ್ಲಿ ಮಂಡ್ಯದ ಕೃಷಿ ಸಂಶೋಧನಾ ಕ್ಷೇತ್ರದ ಸಂಶೋಧನೆಯ ಫಲಿತಾಂಶದಿಂದ ಎರಡನೆ ಅಂಶದಂತೆ, ಜೊಳ್ಳುರಹಿತ ಹೈಬ್ರಿಡ್ ತಳಿಗಳನ್ನು ಪಡೆಯಲು ಸಾಧ್ಯವೆಂದು ತಿಳಿದುಬಂದಿದೆ. ಮೂರನೆಯ ಅಂಶವಾದ ಹೈಬ್ರಿಡ್ ಬೀಜೋತ್ಪಾದನೆಗೆ ಈಗ ಲಭಿಸಿರುವ ನಪುಂಸಕ ಬತ್ತ ನೆರವಾಗಬಲ್ಲದು. ಈಗಾಗಲೇ ನಡೆಸಿರುವ ಪ್ರಯೋಗದಿಂದ ಶೇ. ೪ ರಿಂದ ೨೧ ರಷ್ಟು ಕಾಳು ಪರಕೀಯ ಪರಾಗ ಸ್ಪರ್ಶದಿಂದ ಕಟ್ಟುವಂತೆ ಮಾಡಬಹುದೆಂದು ಖಚಿತವಾಗಿದೆ.

ನಾಲ್ಕನೆ ಅಂಶದಲ್ಲಿ ಸೂಚಿಸಿರುವಂತೆ ಹೈಬ್ರಿಡ್ ತಳಿಗಳಿಂದ ದೊರಕುವ ಹುಲ್ಲು ಮತ್ತು ಕಾಳು ಇತರ ಜನಪ್ರಿಯ ತಳಿಗಳಂತೆ ಉತ್ತಮ ಮಟ್ಟದ್ದಾಗಿರಬಲ್ಲವು ಎಂದು ಖಚಿತವಾಗಿದೆ.

ಮುಂದಿನ ಸಂಶೋಧನೆ: – ಶಕ್ತಿಮಾನ್ ತಳಿಗಳು ಬಳಕೆಗೆ ಬರಬೇಕಾದರೆ ಇನ್ನೂ ಹೆಚ್ಚಿನ ಮಟ್ಟದ ಸಂಶೋಧನೆ ನಡೆಸಬೇಕಾಗಿದೆ. ಹೀಗೆ ಸಂಶೋಧನೆಗೆ ಸೂಚಿಸಬಹುದಾದ ಕೆಲವು ಸದ್ಯಕ್ಕೆ ಸಮಸ್ಯೆ ಎನಿಸಿರುವ ಅಂಶಗಳು ಹೀಗಿವೆ:-

೧. ಈಗ ದೊರೆತಿರುವ ನಪುಂಸಕ ಬತ್ತಕ್ಕೆ ಹೆಚ್ಚು ಜನಪ್ರಿಯ ತಳಿಗಳನ್ನು ಸಂಕರಣ ಮಾಡಿ, ಸಂಕರಣವಾದ ಬಳಿಕ ನಪುಂಸಕತ್ವವನ್ನು ಉಳಿಸಬಲ್ಲ ತಳಿಯನ್ನು (sterility maintainer) ಹುಡುಕಿ ತೆಗೆಯುವುದು. ಅದು ಇತರ ಗುಣಗಳಿಗೆ ಏಕರೂಪತೆಯನ್ನು ಹೊಂದಿರಬೇಕೆಂಬುದನ್ನು (Homozygous) ಗಮನದಲ್ಲಿಡಬೇಕು.

೨. ಹೀಗೆ ಲಭಿಸಿದ ತಳಿಯೊಡನೆ ಸಂಕರಣ ಮಾಡಿದಾಗ ಶಕ್ತಿಮಾನ್ ಗುಣವನ್ನು ಒಳಗೊಂಡು ಮಿಶ್ರ ತಳಿ ನೀಡಬಲ್ಲ ಮತ್ತೊಂದು ತಳಿಯನ್ನು ಹುಡುಕಿ ತೆಗೆಯಬೇಕು.

೩. ಅಧಿಕ ಪ್ರಮಾಣದಲ್ಲಿ ಬೀಜೋತ್ಪಾದನೆ ಮಾಡಲು ಈಗ ದೊರೆತಿರುವ (ಬತ್ತದಲ್ಲಿ ನಪುಂಸಕತ್ವ) ಮೂಲಭೂತ ಸ್ವರೂಪದ್ದಾಗಿರುವಾಗ ತಾಂತ್ರಿಕ ಉಪಾಯವನ್ನು ಅಳವಡಿಸುವುದು.

೪. ಹೀಗೆ ಕಂಡು ಹಿಡಿಯಲಾದ ಶಕ್ತಿಮಾನ್ ತಳಿಗಳಿಗೆ ಸೂಕ್ತ ಬೇಸಾಯ ಕ್ರಮಗಳನ್ನು ಒದಗಿಸಬೇಕು.

ಮೇಲ್ಕಂಡ ನಾಲ್ಕು ಅಂಶಗಳ ಮೇಲೆ ಸಂಶೋಧನೆ ಕೈಗೊಂಡು ಕೆಲಸಕ್ಕೆ ತುಂಬಾ ವೇಗ ಲಭ್ಯವಾಗುವುದೆಂದು ನಿರೀಕ್ಷಿಸಲಾಗಿದೆ. ಇನ್ನೊಂದು ದಶಕದಲ್ಲಿ ಇಂತಹ ಒಂದು ಶಕ್ತಿಮಾನ್ ಬತ್ತ ತಳಿ ರೈತರ ಮನೆ ಮಾತಾಗಬಾರದೇಕೆ ಎಂದು ತಜ್ಞರ ಅಭಿಪ್ರಾಯ.