ಇಪ್ಪತೆಂಟು ಲಕ್ಷ ಎಕರೆಗಳಲ್ಲಿ ಬತ್ತ ಬೆಳೆಯುವ ನಮ್ಮ ರಾಜ್ಯಕ್ಕೆ ಯೋಗ್ಯ ಹಾಗೂ ಅಧಿಕ ಇಳುವರಿ ನೀಡಿ, ಜನಪ್ರಿಯವೆನಿಸಿರುವ ಗುಣಗಳುಳ್ಳ ಬತ್ತದ ತಳಿ – ಐ.ಆರ್. ೨೦

ಭಾರತದಲ್ಲಿ ಹೆಚ್ಚು ಬತ್ತ ಬೆಳೆಯುವ ರಾಜ್ಯಗಳಲ್ಲಿ ಮೈಸೂರು ಒಂದಾಗಿದೆ. ರಾಜ್ಯದ ಬತ್ತದ ಬೆಳೆಯ ಒಟ್ಟು ವಿಸ್ತೀರ್ಣ ೨೮.೫ ಲಕ್ಷ ಎಕರೆಗಳಾಗಿದ್ದು, ಒಟ್ಟು ಉತ್ಪಾದನೆ ೨೧.೩ ಲಕ್ಷ ಟನ್ ಆಗಿದೆ. ಹಸಿರು ಕ್ರಾಂತಿಗೆ ಬಹಳ ಮಟ್ಟಿಗೆ ನೆರವಾದ ಅಧಿಕ ಇಳುವರಿ ತಳಿಗಳು ಬತ್ತದಲ್ಲೂ ಸಾಕಷ್ಟು ಪಾಲ್ಗೊಂಡಿದೆ. ೧೯೬೫ರಲ್ಲಿ ತಾಯ್‌ಚುಂಗ್ (ನೇಟೀವ್) ೧ ಮತ್ತು ಐ.ಆರ್. ೮ ಹೆಚ್ಚು ಇಳುವರಿ ತಳಿಗಳು ಕೃಷಿ ವಿಶ್ವವಿದ್ಯಾಲಯ ಮತ್ತು ವ್ಯವಸಾಯದ ಇಲಾಖೆ ಮೂಲಕ ರಾಜ್ಯದಲ್ಲಿ ಪ್ರಚಾರಕ್ಕೆ ಬಂದವು. ಅಂದಿನಿಂದ ಈವರೆಗೆ ಭಾರತೀಯ ಕೃಷಿ ಅನುಸಂಧಾನ ಪರಿಷತ್ತಿನ ಆಶ್ರಯದಲ್ಲಿ ನಡೆಯಲ್ಪಡುತ್ತಿರುವ ಅಖಿಲ ಭಾರತ ಬತ್ತದ ಸಂಶೋಧನಾ ಯೋಜನೆ, ವಿವಿಧ ರಾಜ್ಯಗಳ ಕೃಷಿ ವಿಶ್ವವಿದ್ಯಾಲಯ ಮತ್ತು ವ್ಯವಸಾಯ ಇಲಾಖೆಗಳ ಸತತ ಸಂಶೋಧನೆಯ ಫಲವಾಗಿ ಸುಮಾರು ಮೂವತ್ತಕ್ಕೂ ಹೆಚ್ಚು ಅಧಿಕ ಇಳುವರಿ ತಳಿಗಳು ಬಿಡುಗಡೆಯಾಗಿವೆ. ಬಿಡುಗಡೆಯಾಗಿರುವ ಎಲ್ಲಾ ತಳಿಗಳೂ ಎಲ್ಲಾ ಹವಾಗುಣದಲ್ಲಿಯೂ ಅಂದರೆ ಹವಾಗುಣಗಳ ವೈಪರಿತ್ಯಕ್ಕೆ ಉತ್ಕೃಷ್ಟವಾಗಿ ಬೆಳೆಯುವುದಿಲ್ಲ ಎಂಬುದು ಬತ್ತದ ಹೆಚ್ಚು ಉತ್ಪಾದನೆಗಾಗಿ ಶ್ರಮಿಸುತ್ತಿರುವ ಮತ್ತು ಬತ್ತದ ಬೆಳೆಯಲ್ಲಿ ನಿರತರಾಗಿರುವವರೆಲ್ಲಾ ಗಮನಿಸಬೇಕಾದ ಒಂದು ಮುಖ್ಯ ಅಂಶ.

ನಾನಾ ಕೊರತೆಗಳು

ಬ್ಲೈಟ್ ಮತ್ತು ಬೆಂಕಿ ರೋಗದ ಹಾವಳಿ ಹೆಚ್ಚಾದುದರರಿಂದ ತಾಯ್‌ಚುಂಗ್ (ನೇಟೀವ-೧) ಹೆಚ್ಚು ಹರಡಲು ಅವಕಾಶವಾಗಲಿಲ್ಲ. ನಂತರ ಪ್ರಚಾರಕ್ಕೆ ಬಂದ ಸಮೃದ್ಧಿ ಬತ್ತವೆನಿಸಿ ಮತ್ತು ಇಂದಿಗೂ ಹೆಚ್ಚು ಬೆಳೆಯಲ್ಪಡುತ್ತಿರುವ ತಳಿ ಎಂದರೆ “ಐ.ಆರ್. ೮” ಇದಕ್ಕಿಂತಲೂ ಸ್ವಲ್ಪಮಟ್ಟಿಗೆ ಬೇಗ ಕೊಯ್ಲಿಗೆ ಬರುವುದು ಮತ್ತು ಹೆಚ್ಚು ಇಳುವರಿ ಕೊಡುವುದೆಂದು ಕಂಡು ಬಂದ “ಜಯ” ಬತ್ತ ಮೈಸೂರು ರಾಜ್ಯದ ಎಲ್ಲಾ ಕಡೆಗಳಲ್ಲೂ ಬೇಗನೆ ಹರಡುತ್ತಿದೆ. ನಾಡು ತಳಿಗಳಿಗಿಂತ ಎರಡರಷ್ಟು ಹೆಚ್ಚು ಇಳುವರಿ ಕೊಡುತ್ತಿದ್ದ್ರೂ ಸಹ ಮೈಸೂರು ರಾಜ್ಯದಲ್ಲಿ ಈ ಅಧಿಕ ತಳಿಗಳು ಕೇವಲ ಶೇ. ೧೩.೫ ರಷ್ಟು ಪ್ರದೇಶದಲ್ಲಿ ಮಾತ್ರ ಬೆಳೆಯಲ್ಪಡುತ್ತಿವೆ. ಇದಕ್ಕೆ ಕಾರಣಗಳು ಅನೇಕವಿದ್ದರೂ ಮುಖ್ಯವಾದುದೆಂದರೆ ೧. ಕಾಳು ದಪ್ಪವಾಗಿದ್ದು, ಅನ್ನ ಚೆನ್ನಾಗಿ ಆಗದೇ ಇರುವುದು ೨. ಕಡಿಮೆ ಉಷ್ಣಾಂಶವಿರುವ ಪ್ರದೇಶದಲ್ಲಿ (ಮೈಸೂರು, ಹಾಸನ, ಮಂಡ್ಯ, ಬೆಂಗಳೂರು, ಕೋಲಾರ, ತುಮಕೂರು ಮತ್ತು ಮಲೆನಾಡು) ಜುಲೈ ೧೫ಕ್ಕಿಂತ ನಿಧಾನವಾಗಿ ಇಳುವರಿ ಬರದೆ, ಹೆಚ್ಚು ಕಾಳುಗಳು ಜಳ್ಳಾಗಿ ಕಾಳಿನ ಬಣ್ಣ ಕೆಡುವುದು ಮತ್ತು ೩. ಅವಶ್ಯ ಅಂದರೆ ಸೂಚಿಸಿದಷ್ಟು ಗೊಬ್ಬರವನ್ನು ಉಪಯೋಗಿಸಿದಾಗ ಹೆಚ್ಚು ರೋಗಗಳು ಬೀಳುವುದು.

ಫಿಲಿಫೈನ್ಸ್‌ನಲ್ಲಿ ಅಂತರ ರಾಷ್ಟ್ರೀಯ ಬತ್ತದ ಸಂಶೋಧನ ಕೇಂದ್ರದಲ್ಲಿ “ಪೀಟಾ” ತಾಯ್‌ಚುಂಗ್ (ನೇಟೀವ್ ೧) ಮತ್ತು “ಟಿ.ಕೆ.ಎಂ ೬” ಬತ್ತಗಳ ಸಂಕರಣದಿಂದ ಕಂಡು ಹಿಡಿಯಲ್ಪಟ್ಟು, ಐ.ಆರ್. ೫೩೨-ಇ-೫೭೬ ಎಂಬ ತಳಿಯು ೧೯೬೯ ರಿಂದಲೂ ಭಾರತದ ಬೆಳೆಗೆ ಮುಖ್ಯವೆನಿಸಿದ ರಾಜ್ಯಗಳಲ್ಲೆಲ್ಲಾ ಪರೀಕ್ಷಿಸಲ್ಪಟ್ಟು ೧೯೭೦ನೇ ಸಾಲಿನಲ್ಲಿ ಇದು ದೇಶದ ಅನೇಕ ರಾಜ್ಯಗಳಲ್ಲಿ ಬೆಳೆಯಲು ಯೋಗ್ಯವಾದ ತಳಿ ಎಂದು ಕೇಂದ್ರ ತಳಿಗಳ ಬಿಡುಗಡೆ ಸಮಿತಿಯಿಂದ ಅನುಮತಿ ಪಡೆಯಿತು. ಈಗ ಇದು ಐ.ಆರ್. ೨೦ ಎಂದು ಹೆಸರಿನಿಂದ ಕರೆಯಲ್ಪಡುತ್ತಿದೆ. ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಬತ್ತದ ತಜ್ಞರಿಂದ ರಾಜ್ಯದ ಎಲ್ಲಾ ಕಡೆಯಲ್ಲೂ ಪರೀಕ್ಷಿಸಲ್ಪಟ್ಟು ವಿಶ್ವವಿದ್ಯಾಲಯದ ವಿಸ್ತರಣಾ ವಿಭಾಗ ಮತ್ತು ಪ್ಲಾಂಟ್ ಸೈಂಟಿಸ್ಟ್ ಇವರುಗಳಿಂದ ಅನೇಕ ಕಡೆ ರಾಷ್ಟ್ರೀಯ ಪ್ರದರ್ಶನಾ ತಾಕುಗಳು ಅನುಭವದಿಂದ ಐ.ಆರ್. ೨೦ ರಾಜ್ಯಕ್ಕೆ ಯೋಗ್ಯವಾದ ಅಧಿಕ ಇಳುವರಿ ತಳಿ ಎಂದು ಕಂಡು ಬಂದಿತು.

ಗುಣ ವಿಶೇಷಗಳು

ಮೇಲೆ ತಿಳಿಸಿದಂತೆ ಅಧಿಕ ಇಳುವರಿ ತಳಿಗಳು ಹೊಂದಿದ್ದ ಕೆಲವು ನ್ಯೂನತೆಗಳೇ ಹೆಚ್ಚು ಹರಡಲು ಅಡ್ಡಿಯಾಗಿದ್ದುದು ಈ ತಳಿಯಿಂದ ಬಹುಮಟ್ಟಿಗೆ ನಿವಾರಿಸಲ್ಪಟ್ಟಿದೆ. ಅವಧಿ ೧೩೦ ರಿಂದ ೧೪೦ ದಿವಸಗಳಷ್ಟಿದ್ದು ಕಾಳು ಕೊಯಮತ್ತೂರು ಸಣ್ಣ ಬತ್ತವನ್ನು ಹೋಲುತ್ತದೆ. ಅನ್ನವು ಬಿಡಿಯಾಗಿ ಚೆನ್ನಾಗಿ ಆಗುವುದರಿಂದಲೂ, ರೈಸ್ ಟುಂಗ್ರೂ ವೈರಸ್ (ಆರ್.ಟಿ.ವಿ) ಲೀಫ್ ಹಾಪರ್ ಕಾಂಡ ಕೊರೆಯುವ ಹುಳು ಇವುಗಳಿಗೆ ಹೆಚ್ಚು ತುತ್ತಾಗದೆ ಮತ್ತು ಬೆಂಕಿ ರೋಗ ಇತ್ಯಾದಿ ರೋಗ ರುಜಿನಗಳಿಗೆ ಸಾಕಷ್ಟು ಮಟ್ಟಿಗೆ ಪ್ರತಿರೋಧ ಶಕ್ತಿಯಿರುವುದರಿಂದ ಇದು ಹೆಚ್ಚು ಜನಪ್ರಿಯವಾಗುತ್ತಿದೆ. ರೈತರಿಗೆ ಅನುಕೂಲವಾಗುವ ಇತರ ವಿಶೇಷ ಗುಣಗಳೆಂದರೆ ೧. ಜಯಾ ಮತ್ತು ಐ.ಆರ್. ೮ ತಳಿಗಳಿಗಿಂತಲೂ ೧೫ ದಿವಸಗಳು ನಿಧಾನವಾಗಿ ನಾಟಿ ಮಾಡಬಹುದು. ೨. ಆರ್.ಟಿ.ವಿ. ಮತ್ತು ಲೀಫ್ ಹಾಪರ್ (ಎಲೆಯ ಜಿಗಿ ಹುಳು) ರೋಗ ಇರುವ ಕಡೆ ಕಷ್ಟವಿಲ್ಲದೆ ಫಸಲು ತೆಗೆಯಬಹುದು. (ಆರ್.ಟಿ.ವಿ. ಸದ್ಯಕ್ಕೆ ದಕ್ಷಿಣ ಭಾರತದಲ್ಲಿ ಹೆಚ್ಚು ಪ್ರಮಾಣದಲ್ಲಿ ಕಂಡು ಬಂದಿಲ್ಲ) ೩. ಜಯ ಮತ್ತು ಐ.ಆರ್. ೮ ತಳಿಗಿಂತಲೂ ಎತ್ತರವಾಗಿ ಬೆಳೆದು ಹೆಚ್ಚು ಹುಲ್ಲು ದೊರೆಯುತ್ತದೆ. ೪. ಮಾರುಕಟ್ಟೆಯಲ್ಲಿ ಮತ್ತು ಅಕ್ಕಿ ಗಿರಣಿಗಳಲ್ಲಿ ಕ್ಲಿಂಟಾಲಿಗೆ ೧೦ ರಿಂದ ೨೦ ರೂಪಾಯಿಗಳನ್ನು ಜಯಾ ಮತ್ತು ಐ.ಆರ್. ೮ ಬತ್ತಕ್ಕಿಂತ ಹೆಚ್ಚು ಬೆಲೆ ಸಿಕ್ಕುತ್ತದೆ.

ಅಧಿಕ ಇಳುವರಿಯಲ್ಲಿ ವಿಕ್ರಮ ಸಾಧಿಸಿದ ಜಯಾ ತಳಿಯ ಸರಾಸರಿ ಶೇ. ೮೬ ರಷ್ಟು ಇಳುವರಿ ಕೊಡುವ ಈ ತಳಿಯು ಒಟ್ಟಿನಲ್ಲಿ ಹೆಚ್ಚು ಲಾಭದಾಯಕವೆಂದು ಸಂಶೋಧನೆಯಿಂದ ತಿಳಿದು ಬಂದಿದೆ. ರಾಜ್ಯದ ಸುಮಾರು ೧೬ ಸಂಶೋಧನಾ ಕೇಂದ್ರಗಳ ಸರಾಸರಿ ಇಳುವರಿ ಎಕರೆಗೆ ೩೦ ಕ್ವಿಂಟಾಲ್ ಇದ್ದು, ರಾಷ್ಟ್ರೀಯ ಪ್ರದರ್ಶನ ತಾಕುಗಳ (ನ್ಯಾಷನಲ್ ಡೆಮಾಸ್ಟ್ರೇಶನ್) ಇಳುವರಿ ಎಕರೆಗೆ ೨೫ ರಿಂದ ೩೦ ಕ್ವಿಂಟಾಲ್‌ಗಳು ಎಂದು ಕಂಡು ಬಂದಿದೆ.

ಕೆಲವು ಎಚ್ಚರಿಕೆಗಳು

ಈ ತಳಿಯ ಬಗ್ಗೆ ತಿಳಿದುಕೊಂಡಿರಬೇಕಾದ ಕೆಲವು ಮುಖ್ಯ ಅಂಶಗಳೆಂದರೆ ೧. ಜುಲೈ ತಿಂಗಳ ನಂತರ ನಾಟಿ ಮಾಡಿದರೆ ಇಳುವರಿ ಬಹಳ ಮಟ್ಟಿಗೆ ಕುಗ್ಗುತ್ತದೆ. ೨. ಕೊಯ್ಲು ನಂತರ ಸುಮಾರು ೬ ವಾರಗಳು ತುಂಬುವ ಮುನ್ನ ಬೀಜದ ಮೊಳಕೆ ಬರುವುದಿಲ್ಲ. ಅಂದರೆ ಬೇಸಿಗೆ ಬೆಳೆಯ ಬೀಜವನ್ನು ಮಳೆಗಾಲಕ್ಕೂ ಮಳೆಗಾಲದ ಬೀಜವನ್ನು ಬೇಸಿಗೆ ಕಾಲಕ್ಕೂ ಉಪಯೋಗಿಸಲು ಬರುವುದಿಲ್ಲ. ೩. ಬತ್ತದಲ್ಲಿ ಅಕ್ಕಿಯ ಪ್ರಮಾಣ ನಾಡು ತಳಿಗಿಂತಲೂ ಶೇ. ೪ ರಿಂದ ೬ ರಷ್ಟು ಹೆಚ್ಚಾಗಿದೆ. ೪. ಪ್ರೋಟೀನ್ ಅಂಶವು ೮ ರಿಂದ ೮.೫ ರಷ್ಟು ಇದೆ. ೫. ಇದು ಚೌಳು ಭೂಮಿಯಲ್ಲಿ ಬರುವುದಿಲ್ಲ.

ಈ ಸಂದರ್ಭದಲ್ಲಿ ಸಂಕ್ಷಿಪ್ತವಾಗಿ ಬೇಸಾಯ ಕ್ರಮ ತಿಳಿಸುವುದು ಸೂಕ್ತ. ಎಕರೆಗೆ ೨೦-೨೫ ಕೆ.ಜಿ. ಬೀಜ ಬೇಕು. ೨೦ ರಿಂದ ೨೨ನೇ ದಿನಗಳ ಪೈರುಗಳನ್ನು ೮ ಅಂಗುಲ ಅಂತರದ ಸಾಲುಗಳಲ್ಲಿ ೮ ಅಂಗುಲ ಅಂತರದ ನಾಟಿ ಇಡಬೇಕು. ನಾಟಿ ಮಾಡುವಾಗ ಒಂದು ಗುಣಿಗೆ ೨ ಅಥವಾ ೩ ಪೈರುಗಳನ್ನು ತೇಲಿಸಿ ನಾಟಿ ಮಾಡಬೇಕು. ಇದಕ್ಕೆ ಒಟ್ಟು ಬೇಕಾಗುವ ರಾಸಾಯಿನಿಕ ಗೊಬ್ಬರ ಎಕರೆಗೆ ೫೦:೨೫:೨೫ ಕೆ.ಜಿ. ಸಾರಜನಕ: ರಂಜಕ: ರಂಜಕ ಮತ್ತು ಪೊಟ್ಯಾಷಿಯಂ. ರಂಜಕ ಮತ್ತು ಪೊಟ್ಯಾಷಿಯಂಗಳನ್ನು ಸಂಪೂರ್ಣವಾಗಿಯೂ ಮತ್ತು ಸಾರಜನಕದ ಶೇ. ೫೦ ರಷ್ಟನ್ನು ನಾಟಿ ಮಾಡುವಾಗ ಹಾಕಬೇಕು. ಉಳಿದ ೫೦ರಷ್ಟು ಸಾರಜನಕವನ್ನು ಎರಡು ಸಮಭಾಗವಾಗಿ ತೆಂಡೆ ಹೊಡೆಯುವಾಗ (ಟೆಲ್ಲರಿಂಗ್) ಮತ್ತು ಮೊಗ್ಗು ಕಚ್ಚುವಾಗ ಮೇಲ್ಗೊಬ್ಬರವಾಗಿ ಕೊಡಬೇಕು. ಹೆಚ್ಚು ಮರಳು ಮಿಶ್ರಿತ ಭೂಮಿಯಲ್ಲಿ ಸಾರಜನಕವನ್ನು ೩ ಸಾರಿ ಕೊಡುವ ಬದಲು ನಾಲ್ಕು ಸಮಭಾಗವಾಗಿ ಹೂ ಬಿಡುವ ಮುನ್ನ ಕೊಡುವುದು ಒಳ್ಳೆಯದು.