ಪ್ರಪಂಚದ ಎಲ್ಲೆಡೆಯೂ ದಿನೇ ದಿನೇ ಏರುತ್ತಿರುವ ಜನಸಂಖ್ಯೆಯ ಆಹಾರ ಪೂರೈಕೆಗಾಗಿ ಸಾವಿರಾರು ಕೃಷಿ ಸಂಶೋಧಕರು ಅನೇಕ ದೇಶಗಳಲ್ಲಿ ಹಲವಾರು ಯೋಜನೆಗಳನ್ನು ರೂಪಿಸಿ ಶ್ರಮಿಸುತ್ತಿದ್ದಾರೆ. ಇಂತಹ ಯಾವುದೇ ಯೋಜನೆಯಲ್ಲಿ ನೈಸರ್ಗಿಕ ಸಸ್ಯ ಸಂಪತ್ತಿನ ಪಾತ್ರ ಬಹಳ ಮಹತ್ವದ್ದು.

ವಿಶ್ವದ ಸಸ್ಯ ವರ್ಗದಲ್ಲಿ ಒಟ್ಟು ೩೫೦.೦೦೦ ಪ್ರಭೇಧಗಳಿವೆ ಎಂದು ಸಸ್ಯ ಶಾಸ್ತ್ರಜ್ಞರು ಗಣಿಸಿದ್ದಾರೆ. ಇವುಗಳ ಪೈಕಿ ಸುಮಾರು ೩೦೦೦ ಸಸ್ಯ ಜಾತಿಗಳು ಒಂದಲ್ಲ ಒಂದು ರೀತಿಯಲ್ಲಿ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಮಾನವ ಕೋಟಿಗೆ ಉಪಯುಕ್ತವೆನಿಸಿದೆ. ಇವುಗಳಲ್ಲಿ ಅನೇಕ ಸಸ್ಯಗಳು ಮಾನವನ ಅಭಿರುಚಿಗೆ ಅನುಗುಣವಾಗಿ ಕಳೆದ ಹತ್ತು ಸಾವಿರ ವರ್ಷಗಳಿಂದ ವಿವಿಧ ರೀತಿಗಳಲ್ಲಿ ಸುಧಾರಣೆಗೆ ಒಳಗಾಗಿವೆ. ಆದರೆ ಸಸ್ಯ ಸುಧಾರಣೆ ಕ್ರಮಬದ್ದ ರೀತಿಯಲ್ಲಿ ಆರಂಭವಾದದ್ದು ೨೦ನೇ ಶತಮಾನದಲ್ಲೇ.

ಈವರೆಗೆ ಕೃಷಿಗೆ ಅಳವಡಿಸಿರುವ ಹೆಚ್ಚು ಜಾತಿಯ ಸಸ್ಯಗಳಿರುವುದು ಉಷ್ಣ ಮತ್ತು ಸಮಶೀತೋಷ್ಣ ವಲಯಗಳಲ್ಲೇ ಎಂಬುದು ವಿವಾದಾತೀತ. ಆದರೂ ಈವರೆಗೆ ಅವುಗಳ ಸುಧಾರಣೆ ಹೆಚ್ಚಿನ ಮಟ್ಟದಲ್ಲಿ ನಡೆದಿರುವುದು ಶೀತವಲಯದಲ್ಲಿ. ಅಂದರೆ ಉಷ್ಣ ಮತ್ತು ಸಮಶೀತೋಷ್ಣ ವಲಯಗಳಲ್ಲಿ ಜನಿಸಿದ ಸಸ್ಯಗಳ ಸುಧಾರಣೆಗೆ ಆಯಾ ಪ್ರದೇಶಗಳಲ್ಲೇ ಇನ್ನೂ ಹೆಚ್ಚು ಸಂಶೋಧನೆಗೆ ಅವಕಾಶವಿದೆ ಎಂದಾಯಿತು. ವಲಯಗಳಿಗೆ ಅಳವಡಿಸಲ್ಪಟ್ಟಿರುವ ಆಯಾ ಸಸ್ಯಗಳ ಸುಧಾರಣೆ ಅಲ್ಲೇ ನಡೆದಾಗ ಸುಲಭವಾಗಿ ಮತ್ತು ಕಡಿಮೆ ಅವಧಿಯಲ್ಲಿ ಗುರಿಯನ್ನು ಮುಟ್ಟಬಹುದು.

ಸ್ಥಾಪನೆ

ಈ ದೃಷ್ಟಿಯಿಂದಲೇ ೧೯೭೦ರಲ್ಲಿ ವಿಶ್ವಬ್ರಾಂಕು, ವಿಶ್ವಕೃಷಿ ಮತ್ತು ಆಹಾರ ಸಂಸ್ಥೆ (FAQ) ಮತ್ತು ಸಂಯುಕ್ತ ರಾಷ್ಟ್ರಗಳ ಅಭಿವೃದ್ಧಿ ಯೋಜನೆ (UNDP) ಇವುಗಳ ಸಂಯುಕ್ತ ಆಶ್ರಯದಲ್ಲಿ ಅಂತರರಾಷ್ಟ್ರೀಯ ಕೃಷಿ ಸಂಶೋಧನಾ ಸಲಹಾ ಸಮಿತಿ (Consultative Group on International Agricultural Research CGIAR) ಅಸ್ತಿತ್ವಕ್ಕೆ ಬಂದಿತು. ಉಚ್ಚ ಮಟ್ಟದ ಸಂಶೋಧನೆ ಹಾಗೂ ಕೃಷಿ ತಜ್ಞರ ತರಬೇತಿಗೆ ಸೂಕ್ತ ಮಾರ್ಗದರ್ಶನ ನೀಡುವುದೇ ಈ ಸಮಿತಿಯ ಪ್ರಮುಖ ಗುರಿ. ಈ ಸಮಿತಿಯ ವ್ಯಾಪ್ತಿಯಲ್ಲಿ ವಿಶ್ವದ ಪ್ರಮುಖ ಸಸ್ಯ ಮತ್ತು ಜಾನುವಾರುಗಳ ಮೇಲೆ ಪ್ರಪಂಚದ ಹನ್ನೊಂದು ಕೇಂದ್ರಗಳಲ್ಲಿ ಸುಮಾರು ೪೦೦೦ ತಜ್ಞರಿಂದ ಸುಮಾರು ೬ ಕೋಟಿ ೪೦ ಲಕ್ಷ ಡಾಲರ್ ವಾರ್ಷಿಕ ವೆಚ್ಚದಲ್ಲಿ ಉನ್ನತ ಮಟ್ಟದ ಸಂಶೋಧನೆ ನಡೆಯುತ್ತಿದೆ. ಇವುಗಳಲ್ಲಿ ಮೊಟ್ಟಮೊದಲು ಸ್ಥಾಪಿತವಾದದ್ದೇ ಅಂತರರಾಷ್ಟ್ರೀಯ ಬತ್ತ ಸಂಶೋಧನಾ ಕೇಂದ್ರ (International Rice Research Institute IRRI) ಇದು ಫಿಲಿಫೀನ್ಸ್ ದೇಶದಲ್ಲಿ ಮನಿಲಾದಿಂದ ಸುಮಾರು ೬೦ ಕಿ. ಮೀ. ದೂರದಲ್ಲಿ ಸ್ಥಾಪಿಸಲ್ಪಟ್ಟಿದೆ.

ಪ್ರಪಂಚದ ಶೇ. ೫೦ಕ್ಕೂ ಹೆಚ್ಚಾಗಿ ಜನಸಂಖ್ಯೆಯನ್ನು ಒಳಗೊಂಡ ಏಷ್ಯಾ ಖಂಡದ ಮುಖ್ಯ ಬೆಳೆ ಬತ್ತ. ಬತ್ತವೇ ಇಲ್ಲಿನ ಜನರ ಜೀವನಾಡಿ. ಬತ್ತದ ಸರ್ವತೋಮುಖ ಸುಧಾರಣೆಗೆಂದು ೧೯೬೦ನೇ ಇಸವಿಯಲ್ಲಿ ಲ್ಯಾಗುನಾ ಪ್ರಾಂತದ ಲಾನ್ ಬ್ಯಾನ್ಯೋಸ್ ಪಟ್ಟಣದ ಸಮೀಪದಲ್ಲಿ ಫಿಲಿಫೀನ್ಸ್ ವಿಶ್ವವಿದ್ಯಾಲಯದ ನೆಲೆಯಲ್ಲಿ ಈ ಕೇಂದ್ರ ಸ್ಥಾಪಿತವಾಯಿತು. ಅಂದಿನಿಂದ ಈ ಕೇಂದ್ರದ ವಿವಿಧ ಇಲಾಖೆಗಳ ಸಾಮೂಹಿಕ ಸಂಶೋಧನೆಗಳ ಫಲವಾಗಿ ಅನೇಕ ದೇಶಗಳಲ್ಲಿ ಬತ್ತದ ಇಳುವರಿಯು ಇಮ್ಮಡಿಯಾಗಿದೆ. ೧೯೬೨ನೇ ಇಸವಿಯಲ್ಲಿ ಏಷ್ಯಾದ ಸರಾಸರಿ ಹೆಕ್ಟೇರು ಇಳುವರಿ ೧.೯ ಇದ್ದು, ೧೯೭೭-೭೮ ರಲ್ಲಿ ೨.೫ ಟನ್‌ಗೆ ಏರಿರುವುದು ಗಮನಾರ್ಹ. (ಶೇ ೩೧.೫ ರಷ್ಟು ಹೆಚ್ಚಳ) ವಿಶ್ವದ ಬತ್ತ ಉತ್ಪಾದನೆಯು ೧೯೫೦ರಲ್ಲಿ ೨೪೨ ಮಿ. ಟನ್ ನಷ್ಟಿದ್ದು, ೧೯೭೭ ರಲ್ಲಿ ೩೪೯ ಮಿ. ಟನ್ನುಗಳಾಗಿವೆ. (ಶೇ. ೪೪ ರಷ್ಟು ಹೆಚ್ಚಳ). ಈ ಕೇಂದ್ರದಲ್ಲಿ ನಡೆಸಿದ ಮೂಲ ಸಂಶೋಧನೆಯ (ಬೇಸಿಕ್ ರಿಸರ್ಚ) ಬೆಳಕಿನಲ್ಲಿ ಬತ್ತದ ಸುಧಾರಣೆಗೆ ಅನೇಕ ದೇಶಗಳು ಹೊಸ ಹೊಸ ಯೋಜನೆಗಳನ್ನು ರೂಪಿಸಿ ಕಾರ್ಯಾಚರಣೆಗೆ ತಂದಿವೆ.

ತಳಿ ಸಂಪತ್ತು

ಪ್ರಪಂಚದ ಬತ್ತ ಬೆಳೆಯುವ ದೇಶಗಳಲ್ಲಿ ಒಟ್ಟು ಎಷ್ಟು ತಳಿ ಅಥವಾ ಬತ್ತದ ಪ್ರಭೇಧಗಳಿವೆ ಎಂಬುದು ಸುಲಭವಾದ ಎಣಿಕೆಗೆ ಸಿಕ್ಕುವಂತಿಲ್ಲ. ಈವರೆಗೆ ವಿವಿಧ ದೇಶಗಳಿಂದ ೪೩.೦೦೦ಕ್ಕೂ ಹೆಚ್ಚು ಜಾತಿಯ ತಳಿಗಳನ್ನು ಈ ಕೇಂದ್ರದಲ್ಲಿ ಸಂಗ್ರಹಿಸಿ ಪಟ್ಟಿ ಮಾಡಲಾಗಿದೆ. ಅಲ್ಲದೆ ಪ್ರತಿ ತಳಿಯ ವಿಶೇಷ ಗುಣಗಳನ್ನು ಗುರುತಿಸಿ ಆಧುನಿಕ ಗಣಕ ಯಂತ್ರಗಳ (ಕಂಪ್ಯೂಟರ್) ಸಹಾಯದಿಂದ ಟಿಪ್ಪಣಿ ಮಾಡಲಾಗಿದೆ. ವಿಶ್ವದ ಯಾವುದೇ ಬತ್ತದ ಸಂಶೋಧಕರು ಅಪೇಕ್ಷಿಸಬಹುದಾದ ಗುಣಗಳುಳ್ಳ ತಳಿಯನ್ನು ಕಂಪ್ಯೂಟರ್ ಸಹಾಯದಿಂದ ಕೆಲವು ನಿಮಿಷಗಳಲ್ಲಿ ಗುರುತಿಸಿ ತೆಗೆಯಬಹುದು. ಇಂತಹ ಅಮೂಲ್ಯವಾದ ತಳಿ ಸಂಪತ್ತನ್ನು ಯಾವ ವಿಪತ್ತಿಗೂ ಸಿಲುಕದಂತೆ ಮತ್ತು ಭೂಕಂಪದಿಂದಲೂ ನಾಶವಾಗದಂತೆ, ಲಕ್ಷಾಂತರ ಡಾಲರ್ ವೆಚ್ಚದಲ್ಲಿ ನಿರ್ಮಿಸಲಾದ ವಿಶೇಷ ಶೀತಾಗಾರಗಳಲ್ಲಿ ನಿರೀಕ್ಷಿಸಿದ ಅವಧಿಗೆ ಅನುಗುಣವಾಗಿ ಅಂದರೆ ಅಲ್ಪಾವಧಿ, ಮಧ್ಯಮಾವಧಿ ಮತ್ತು ದೀರ್ಘಾವಧಿ ಉಗ್ರಾಣಗಳಲ್ಲಿ ಸುರಕ್ಷಿತವಾಗಿ ಇರಿಸಲಾಗಿದೆ.

ಈ ಕೇಂದ್ರದಲ್ಲಿ ಕಂಡುಹಿಡಿಯಲ್ಪಟ್ಟ ಸುಮಾರು ೫೦ಕ್ಕಿಂತ ಹೆಚ್ಚು ತಳಿಗಳು ಬೇರೆ ದೇಶಗಳಲ್ಲಿ ವಿಶೇಷವಾಗಿ ಏಷ್ಯಾ, ಆಫ್ರಿಕಾ ಮತ್ತು ಲ್ಯಾಟಿನ್ ಅಮೆರಿಕಾದಲ್ಲಿ ಬಿಡುಗಡೆಯಾಗಿ ರೈತರಲ್ಲಿ ಜನಪ್ರಿಯವೆನಿಸಿವೆ. ಅಲ್ಲದೆ ಈ ಕೇಂದ್ರದಲ್ಲೇ ನೇರವಾಗಿ ಬಿಡುಗಡೆಯಾದ ೧೫ ತಳಿಗಳು (ಐಆರ್ ತಳಿಗಳು) ಅನೇಕ ದೇಶಗಳಲ್ಲಿ ಹೆಚ್ಚು ಪ್ರದೇಶಗಳಲ್ಲಿ ಈಗ ಬೆಳೆಯಲ್ಪಡುತ್ತಿವೆ. ಈ ಪೈಕಿ ಕರ್ನಾಟಕದ ರೈತರಿಗೆ ಐಆರ್ ೫, ಐಆರ್ ೮, ಐಆರ್ ೨೦ ಮತ್ತು ಐಆರ್ ೩೬ ತಳಿಗಳು ಪರಿಚಿತ.

ಹೀಗೆ ವಿಕಸಿತವಾದ ತಳಿಗಳ ನೀಡಿಕೆಯಲ್ಲದೆ ಪ್ರತಿ ವರ್ಷವೂ ಸುಮಾರು ೫೦೦೦ ರಷ್ಟು ಸಂಕರಣ ಮಾಡಿದ ಬೀಜವನ್ನು ಅಥವಾ ಸಂಕರಣಾ ನಂತರದ ವಿವಿಧ ಪೀಳಿಗೆಗಳಿಂದ ಇತರೇ ರಾಷ್ಟ್ರಗಳು ಇಚ್ಚಿಸಿದಂತೆ ಬೀಜವನ್ನು ಆರಿಸಿ ಹಂಚಲಾಗುತ್ತಿದೆ.

ವಿವಿಧ ಹವಾಗುಣಗಳಿಗೆ ಚೆನ್ನಾಗಿ ಒಗ್ಗಿದ ತಳಿಗಳನ್ನು ಆಯಾ ದೇಶದವರೇ ಬಿಡುಗಡೆ ಮಾಡಿಕೊಳ್ಳುವುದು ಅಪೇಕ್ಷಣೀಯವೆಂಬ ದೃಷ್ಟಿಯಿಂದ ಮೇಲೆ ಹೊಸ ವಿಕಸಿತ ಸಾಲುಗಳನ್ನು (Elite breeding lines) ಹಂಚಿ ಪರೀಕ್ಷೆಯ ನಂತರ ಆಯಾದೇಶಗಳಲ್ಲಿರುವ ತಳಿ ನಿರ್ಣಯ ಸಮಿತಿಗಳೇ ಬಿಡುಗಡೆ ಮಾಡಲು ಅವಕಾಶ ನೀಡಬೇಕೆಂದು ತೀರ್ಮಾನಿಸಲಾಗಿದೆ.

ತಳಿ ಸುಧಾರಣೆ ಧ್ಯೇಯಗಳು

ಮೊದಲು ಹೆಚ್ಚು ಇಳುವರಿ ನೀಡಬಲ್ಲ ತಳಿಗಳ ಸೃಷ್ಟಿಯೇ ಮೂಲಧ್ಯೇಯವಾಗಿತ್ತು. ಈ ದಿಶೆಯಲ್ಲಿ ಗಿಡ್ಡ ತಳಿಗಳ ಕೊಡುಗೆ ಪ್ರಶಂಸನೀಯ. ಆದರೆ ತಳಿಗಳು ಗಿಡ್ಡ ಅಥವಾ ಅತಿ ಗಿಡ್ಡ ಸಸ್ಯ ಸ್ವರೂಪ ಹೊಂದಿದ್ದ ಮಾತ್ರಕ್ಕೆ ಎಲ್ಲಾ ಹವಾಮಾನಗಳಲ್ಲಿಯೂ ಅಧಿಕ ಇಳುವರಿ ನೀಡಬಲ್ಲವು ಎನ್ನಲಾಗುವುದಿಲ್ಲ. ಇತ್ತೀಚಿನ ತಳಿ ಅಭಿವೃದ್ಧಿ ಯೋಜನೆಗಳು ಪ್ರಸ್ತುತ ಧ್ಯೇಯಗಳು ಇವು :

೧. ಕೀಟನಿರೋಧಕ ಶಕ್ತಿ.

೨. ರೋಗ ನಿರೋಧಕ ಶಕ್ತಿ.

೩. ಬರ ಅಥವಾ ನೀರಿನ ಕೊರತೆ ತಡೆಯುವ ಶಕ್ತಿ.

೪. ದೋಷಭರಿತ ಮಣ್ಣಿಗೆ ಹೊಂದಿಕೊಳ್ಳುವ ಶಕ್ತಿ.

೫. ಪ್ರವಾಹ ಮತ್ತು ಮುಳುಗು ನೀರಿನಲ್ಲಿ ಬೆಳೆಯುವ ಶಕ್ತಿ.

೬. ಚಳಿ ಮತ್ತು ಉಷ್ಣಾಂಶಗಳ ಅತಿರೇಕವನ್ನು ತಡೆಯುವ ಶಕ್ತಿ.

೭. ಉತ್ತಮ ಕಾಳಿನ ಗುಣಗಳನ್ನು ಹೊಂದಿರುವುದು.

೮. ಹವಾಗುಣದ ಏರಿಳಿತಕ್ಕೆ ಹೊಂದಿಕೊಳ್ಳುವ ಶಕ್ತಿ.

ಇತ್ತೀಚೆಗೆ ಬಿಡುಗಡೆಯಾದ ಐಆರ್ ೩೪, ೪೦ ಮತ್ತು ೪೨ ತಳಿಗಳಲ್ಲಿ ಹಾಗೂ ಬಿಡುಗಡೆಯ ಹಾದಿಯಲ್ಲಿರುವ ಅನೇಕ ಸಾಲುಗಳು ಒಂದಕ್ಕಿಂತಲೂ ಹೆಚ್ಚು ಮೇಲ್ಕಂಡ ಗುಣಗಳನ್ನು ಪಡೆದಿರುವುದನ್ನು ನಾವು ಕಾಣಬಹುದು ಅಧಿಕ ಇಳುವರಿ, ಉತ್ತಮವಾದ ಕಾಳು – ಪ್ರತಿ ಯೋಜನೆಯಲ್ಲಿಯೂ ಗಮನ ನೀಡಲಾಗುತ್ತಿರುವ ಅಂಶಗಳು ಇವು.

ಬೇಸಾಯ ಪದ್ಧತಿ

ಬತ್ತ ಸಂಶೋಧನಾ ಕೇಂದ್ರದಲ್ಲಿ ಹೊಸ ತಳಿಗಳ ಬೇಸಾಯ ಕ್ರಮದ ಸುಧಾರಣೆ, ವಿಸ್ತರಣಾಧಿಕಾರಿಗಳು ಮತ್ತು ತಜ್ಞರ ತಳಿಗಳ ಪ್ರದರ್ಶನಗಳ ಮೂಲಕ ಮಾಹಿತಿ ವಿನಿಮಯ ಮುಂತಾದ ವಿಶೇಷ ಯೋಜನೆಗಳಿವೆ. ಈವರೆಗೆ ಸುಮಾರು ೫೦ ದೇಶಗಳಿಂದ ೧೬೦೦ ಮಂದಿ ಬತ್ತದ ತಜ್ಞರಿಗೆ ನೂತನ ಬೇಸಾಯ ಕ್ರಮದಲ್ಲಿ ತರಬೇತಿ ನೀಡಲಾಗಿದೆ. ತಳಿಗಳ ಆಯ್ಕೆ, ಮೊಳಕೆ ಬರಿಸುವ ವಿಧಾನ, ಸಸಿ ಮಾಡಿ ವಿಶಿಷ್ಟ ಪದ್ಧತಿಗಳು, ನಾಟಿಯ ಕ್ರಮ, ರಸಗೊಬ್ಬರಗಳ ಸಾರ್ಥಕ ಉಪಯೋಗ, ಸಸ್ಯ ಸಂರಕ್ಷಣೆ ಪೋಷಕಾಂಶಗಳ ಕೊರತೆಗಳ ಚಿಹ್ನೆಗಳು ಮತ್ತು ಅವುಗಳ ನಿಯಂತ್ರಣ, ಕಳೆಗಳ ನಿಯಂತ್ರಣ ಹೆಚ್ಚು ಇಳುವರಿಗೆ ನೆರವಾಗುವ ಸಸ್ಯದ ಇತರ ಗುಣಗಳ ವಿಶ್ಲೇಷಣೆ, ಕೊಯ್ಲು ಮತ್ತು ಕೊಯ್ಲಿನ ನಂತರದ ರಕ್ಷಣೋಪಾಯಗಳು, ನೀರಿನ ಬಳಕೆ, ಆಧುನಿಕ ಕೃಷಿ ಯಂತ್ರಗಳ ಬಳಕೆ ಮುಂತಾದ ವಿಷಯಗಳಲ್ಲಿ ತರಬೇತಿಗೆ ಅನುಕೂಲವಿದೆ. ಕಡಿಮೆ ಖರ್ಚಿನಲ್ಲಿ ಬೇಸಾಯ ಕ್ರಮಗಳು ಮತ್ತು ಕಡಿಮೆ ಪ್ರಮಾಣದ ರಸಗೊಬ್ಬರಗಳ ಬಳಕೆಯಲ್ಲಿ ಹೆಚ್ಚು ಇಳುವರಿ ಪಡೆಯುವ ವಿಧಾನಗಳಿಗೆ ಪ್ರಾಶಸ್ತ್ಯ ನೀಡಲಾಗುತ್ತಿದೆ.

ಬತ್ತವನ್ನೇ ಮುಖ್ಯ ಬೆಳೆಯಾಗಿ ಅವಲಂಭಿಸಿರುವ ರೈತರ ಆರ್ಥಿಕ ಸ್ಥಿತಿಯನ್ನು ಸುಧಾರಿಸುವ ಹಾಗೂ ಅವರ ದೈನಿಕ ಆದಾಯವನ್ನು ಸಮತೋಲನಗೊಳಿಸುವ ದೃಷ್ಟಿಯಿಂದ ಬತ್ತದ ಗದ್ದೆಗಳಲ್ಲಿ ಬೆಳೆಯಬಹುದಾದ ಇತರೇ ಬೆಳೆಗಳ ಬಗ್ಗೆ ಸಂಶೋಧನೆ ನಡೆಯುತ್ತಿದೆ. ಮಣ್ಣು ಮತ್ತು ಹವಾಗುಣಗಳಿಗೆ ಅನುಗುಣವಾಗಿ ಮೆಕ್ಕೆಜೋಳ, ಹೆಸರು, ಉದ್ದು, ಸೋಯಾ, ಹುರುಳಿ, ಆಲೂಗೆಡ್ಡೆ, ಕಸಾವ, ಜೋಳ ಮುಂತಾದ ಬೆಳೆಗಳನ್ನು ಬೆಳೆಯಲು ಬೇಕಾಗುವ ಮಾಹಿತಿ ಸಂಗ್ರಹಿಸಲಾಗಿದೆ.

ನವೀನ ಸಾಧನಗಳು

ಸುಮಾರು ೨೫೦ ಹೆಕ್ಟೇರು ಪರೀಕ್ಷಾ ತಾಕುಗಳನ್ನು ಹೊಂದಿರುವ ಈ ಕೇಂದ್ರದಲ್ಲಿ ಬತ್ತದ ಸಂಶೋಧನೆಗೆ ಬೇಕಾಗುವ ಯಾವುದೇ ರೀತಿಯ ಆಧುನಿಕ ಉಪಕರಣಗಳಿಗೂ ಕೊರತೆಯಿಲ್ಲ. ಯಾವುದೇ ಒಂದು ಉಚ್ಛಮಟ್ಟದ ಸಂಶೋಧನಾ ಕೇಂದ್ರದಲ್ಲಿ ಇರಬೇಕಾದ ಸಕಲ ಆಧುನಿಕ ಉಪಕರಣಗಳೂ ಇರುವುದಲ್ಲದೆ. ೧.೫ ದಶಲಕ್ಷ ಡಾಲರ್ ವೆಚ್ಚದಲ್ಲಿ ನಿರ್ಮಿಸಲಾಗಿರುವ ಫೈಟೋಟ್ರಾನ್ (Phytotron) ಇಲ್ಲಿನ ಸಂಶೋಧಕರಿಗೆ ಒಂದು ವರದಾನವಾಗಿದೆ. ಈ ಪ್ರಯೋಗಾಲಯದ ವೈಶಿಷ್ಯವೆಂದರೆ ಪ್ರಪಂಚದ ಯಾವುದೇ ಒಂದು ಪ್ರದೇಶದಲ್ಲಿ ಮತ್ತು ಯಾವುದೇ ಕಾಲದಲ್ಲಿ ಇರಬಹುದಾದ ಹವಾಗುಣವನ್ನು ಕಾಲದಲ್ಲಿ ಇರಬಹುದಾದ ಹವಾಗುಣವನ್ನು ಇಲ್ಲಿ ಕೃತಕವಾಗಿ ಸೃಷ್ಟಿಸಬಹುದು. ಚಳಿಗಾಲದಲ್ಲಿ ಬೇಸಿಗೆಯನ್ನೂ, ಬೇಸಿಗೆಯಲ್ಲಿ ಮಳೆಗಾಲವನ್ನು ಉಂಟು ಮಾಡುವ ಶಕ್ತಿ ಈ ಪ್ರಯೋಗಾಲಯಕ್ಕೆ ಇರುವುದು ಇಲ್ಲಿನ ಸಂಶೋಧಕರ ಸಮಯ ಮತ್ತು ಖರ್ಚಿನಲ್ಲಿ ಮಿತವ್ಯಯಕ್ಕೆ ಬಹಳ ಅನುಕೂಲವಾಗಿದೆ.

ಈವರೆಗಿನ ಸಂಶೋಧನೆಯಿಂದ ೧೭೦ ದಿವಸಗಳಲ್ಲಿ ಕೊಯ್ಲು ಮಾಡಬೇಕಿದ್ದ ಬೆಳೆಯನ್ನು ೭೦ ದಿವಸಗಳಲ್ಲಿಯೇ ಕೊಯ್ಲು ಮಾಡಲು ೧೫ ಕ್ವಿಂಟಾಲ್ ಹೆಕ್ಟೇರು ಇಳುವರಿಯನ್ನು ೨೫ ಕ್ವಿಂಟಾಲ್ ಏರಿಸಲು, ಐದೂವರೆ ಅಡಿ ಬೆಳೆದು ಮಲಗಿ ಬಿಡುತ್ತಿದ್ದ ಬೆಳೆಯನ್ನು ಕೇವಲ ಮೂರುವರೆ ಅಡಿ ಮಾತ್ರ ಬೆಳೆದು ಎಷ್ಟೇ ಗಾಳಿ ಮಳೆ ಇದ್ದರೂ ಬೀಳದೆ ನೆಟ್ಟಗೆ ನಿಂತಿರುವಂತೆಯೂ, ಎಷ್ಟೋ ರೋಗ ಕೀಟಗಳನ್ನು ಔಷಧಿ ಇಲ್ಲದೆ ತಡೆಗಟ್ಟಲೂ ಸಾಧ್ಯವಾಗಿದೆ. ಅನೇಕ ಕೃಷಿ ಉಪಕರಣಗಳ ಸುಧಾರಣೆ ಮತ್ತು ಅವುಗಳ ಪ್ರಚಾರದಿಂದ ನಾಟಿ, ಕಳೆ ಕೀಳುವುದು, ಕೊಯ್ಲು ಸಮಯದಲ್ಲಿ ಅಡಚಣೆಯಾಗುತ್ತಿದ್ದ ಕೃಷಿ ಕಾರ್ಮಿಕರ ಮೇಲಿನ ಅವಲಂಬನೆ ಕಡಿಮೆಯಾಗಿ ಫಸಲಿಗೆ ತಗಲುವ ಖರ್ಚು ಕಡಿಮೆಯಾಗುವಂತೆ ಮಾಡಲಾಗಿದೆ. ಮೂರು ಜನ ಕೆಲಸ ಮಾಡುವ ಒಂದು ಕುಟುಂಬವು ವಾರದಲ್ಲಿ ೬ ದಿವಸಗಳಂತೆ ಮತ್ತು ದಿವಸಕ್ಕೆ ೪ ಗಂಟೆಯಂತೆ ಕೆಲಸ ಮಾಡಿದಲ್ಲಿ, ಒಂದು ಹೆಕ್ಟೇರು ಗದ್ದೆಯಲ್ಲಿ ಒಂದು ವರ್ಷಕ್ಕೆ ನಾಲ್ಕು ಬೆಳೆಗಳನ್ನು ತೆಗೆಯಬಹುದೆಂದು ಅಭಿಪ್ರಾಯ ಪಡಲಾಗಿದೆ.

ಇಷ್ಟೆಲ್ಲಾ ಇದ್ದರೂ ಈವರೆಗಿನ ಸಂಶೋಧನೆಯ ಫಲ. ಕೇವಲ ಶೇ. ೨೫ರಷ್ಟು ಬತ್ತ ಬೆಳೆಯುವ ರೈತರಿಗೆ ಮಾತ್ರ ದೊರೆತಿವೆ ಎಂದರೆ ಅಚ್ಚರಿ ಎನಿಸಿತು. ಅಂದರೆ ಹೆಚ್ಚು ಸಂಖ್ಯೆಯಲ್ಲಿ ಬತ್ತದ ಬೇಸಾಯಗಾರರಾದ ಸಣ್ಣ ಹಿಡುವಳಿದಾರರಿಗೂ ಇದುವರೆಗಿನ ಸಂಶೋಧನೆ ಸಹಕಾರಿಯಾಗಿಲ್ಲ ಎಂದಾಯಿತು. ಅಲ್ಲದೆ ಪ್ರತಿ ದಶಕದಲ್ಲಿಯೂ ಬತ್ತದ ಬೇಡಿಕೆ ಶೇ.೩೦ರಷ್ಟು ಜಾಸ್ತಿಯಾಗುತ್ತಿದೆ. ಆದ್ದರಿಂದ ಇನ್ನು ಮೇಲೆ ಆಗಬೇಕಾಗಿರುವ ಸಂಶೋಧನೆಯು ಈವರೆಗಿನದಕ್ಕಿಂತಲೂ ಹೆಚ್ಚು ಫಲ ಕೊಡುವಂತಾಗಿದ್ದಾಗಿರಬೇಕು. ಮಣ್ಣಿನಲ್ಲಿರುವ ಕೊರತೆಗಳು ಮಳೆ ನೆರೆ ಅನಿರೀಕ್ಷಿತ ಬರಗಾಲ ಅನಾವೃಷ್ಟಿ ರಸಗೊಬ್ಬರಗಳ ಏರುಬೆಲೆ ಈ ಸಮಸ್ಯೆ ಎದುರಿನಲ್ಲಿಯೂ ಬತ್ತದ ಬೆಳೆಯಿಂದ ರೈತರು ಜೀವನ ಸಾಗಿಸುವಷ್ಟು ಉತ್ತಮವಾದ ಫಸಲಾಗುವಂತೆ ಮಾಡಲು ಸಂಶೋಧನೆ ನಡೆಯಬೇಕಾಗಿದೆ. ಬತ್ತದ ಬೆಳೆಯುವ ಹೆಚ್ಚು ರಾಷ್ಟ್ರಗಳಲ್ಲಿ ಸೂರ್ಯಪ್ರಕಾಶ ಹೇರಳವಾಗಿದೆ. ಹೊಸದಾಗಿ ಹೈಬ್ರಿಡ್ ಅಥವಾ ಶಕ್ತಿಮಾನ್ ತಳಿಗಳ ಬಳಕೆಯು ಬತ್ತದಲ್ಲಿಯೂ ಸಾಧ್ಯವೆಂದು ಸ್ಥಿರಪಡಿಸಲಾಗಿದೆ. ಈ ಸಮಸ್ಯೆಗಳ ಅರಿವಿನಲ್ಲಿ ಬತ್ತದ ಉತ್ಪಾದನೆಯಲ್ಲಿ ಸಮೃದ್ಧಿಯನ್ನು ನೋಡುವ ಶುಭದಿನಕ್ಕಾಗಿ ಅಂತರ ರಾಷ್ಟ್ರೀಯ ಬತ್ತ ಸಂಶೋಧನಾ ಕೇಂದ್ರದ ಸಂಶೋಧಕರು ಶ್ರಮಿಸುತ್ತಿದ್ದಾರೆ. ಬತ್ತದ ಹಾಗೆ ಇತರೇ ಬೆಳೆಗಳ ಅಭಿವೃದ್ಧಿಗಾಗಿ ಅಲ್ಲಲ್ಲಿ ಸ್ಥಾಪಿಸಲ್ಪಟ್ಟಿರುವ ಅಥವಾ ಸ್ಥಾಪಿತವಾಗಲಿರುವ ಕೇಂದ್ರಗಳಿಗೆ ಈ ಸಂಶೋಧನಾ ಕೇಂದ್ರವು ಒಂದು ಮಾದರಿಯಾಗಿದೆ.