ಕರ್ನಾಟಕ ರಾಜ್ಯದಲ್ಲಿ ಸುಮಾರು ೧೨ ಲಕ್ಷ ಹೆಕ್ಟೇರುಗಳಲ್ಲಿ ಬತ್ತ ಬೆಳೆಯಲ್ಪಡುತ್ತಿದೆ. ಕಳೆದ ಸಾಲಿನಲ್ಲಿ ಸುಮಾರು ೨೩ ಲಕ್ಷ ಟನ್ ಬತ್ತ ಉತ್ಪಾದನೆಗೆ ಕಾರಣವಾದ ಕರ್ನಾಟಕ ರಾಜ್ಯದ ಎಕರೆವಾರು ಇಳುವರಿಯು ೮ ಕ್ವಿಂಟಾಲನ್ನು ಮೀರಿ, ಭಾರತದಲ್ಲೇ ಮೂರನೇ ಸ್ಥಾನ ಗಳಿಸಿರುವುದು ಸಂತೋಷದ ವಿಷಯ. ೧೯೬೫ನೇ ಇಸವಿಯಿಂದಲೂ ಆಗಾಗ್ಗೆ ಬಿಡುಗಡೆಯಾಗಿ ಶಿಫಾರಸ್ಸಿಗೆ ಬಂದಿರುವ ಸುಮಾರು ೧೫ ನೂತನ ಅಧಿಕ ಇಳುವರಿ ಬತ್ತದ ತಳಿಗಳು ರಾಜ್ಯದ ಶೇ. ೫೦ ರಷ್ಟು ಬತ್ತ ಬೆಳೆಯುವ ಪ್ರದೇಶವನ್ನು ಆಕ್ರಮಿಸಿಕೊಂಡಿದೆಯೆಂದು ಕಳೆದ ಸಾಲಿನ ಅಂಕಿ ಅಂಶದಿಂದ ತಿಳಿದು ಬಂದಿದೆ. ಕಳೆದ ಒಂದೂವರೆ ದಶಕದಲ್ಲಿ ರಾಜ್ಯದ ಬತ್ತದ ಉತ್ಪಾದನೆ ಇಮ್ಮಡಿಯಾಗಿರುವುದು ನಿಜವಾಗಿದ್ದರೂ, ಇನ್ನು ಮುಂದು ಕೇವಲ ಒಂದೇ ದಶಕದಲ್ಲಿ ಉತ್ಪಾದನೆ ಇಮ್ಮಡಿಯಾದರೆ ಮಾತ್ರ ಆ ದಿನಗಳಲ್ಲಿ ಬರುವ ಬೇಡಿಕೆಯನ್ನು ಪೂರೈಸಲು ಸಾಧ್ಯ. ಇಂತಹ ಒಂದು ಉತ್ಪಾದನಾ ಘಟ್ಟವನ್ನು ಮುಟ್ಟುವುದರಲ್ಲಿ ಕೃಷಿ ತಜ್ಞರ ವಿಸ್ತರಣಾಧಿಕಾರಿಗಳ ಮತ್ತು ರೈತರ ಪಾತ್ರ ಮಹತ್ವದ್ದಾಗಿದೆ. ಕೃಷಿ ಸಂಶೋಧಕರ ಅಭಿಪ್ರಾಯದಂತೆ ಈವರೆವಿಗೂ ಆಧುನಿಕ ತಳಿಗಳು ಮತ್ತು ಆಧುನಿಕ ಬೇಸಾಯ ಕ್ರಮಗಳಿಗೆ ಒಳಪಟ್ಟಿಲ್ಲದೆ ಬತ್ತದ ಗದ್ದೆಗಳಲ್ಲಿ ಆಧುನಿಕತೆಯನ್ನು ಅಳವಡಿಸಲು ಹಿಂದಿನ ವರ್ಷಗಳಿಗಿಂತಲೂ ಇನ್ನು ಮುಂದೆ ಹೆಚ್ಚಿನ ಶ್ರಮವಹಿಸಬೇಕಾಗಿದೆ. ಮಿತಿ ಇಲ್ಲದೆ ಏರುತ್ತಿರುವ ಕೃಷಿ ಸಾಮಾಗ್ರಿಗಳ ಬೆಲೆ ಹಾಗೂ ಕೃಷಿ ಕಾರ್ಮಿಕರ ವೇತನ ರೈತನನ್ನು ದಿಗಿಲುಪಡಿಸಿವೆ. ಈ ಸಂದರ್ಭವನ್ನು ಅನುಸರಿಸಿ ಕಡಿಮೆ ಖರ್ಚಿನಲ್ಲಿ ಹೆಚ್ಚು ಉತ್ಪಾದನೆಯನ್ನು ಪಡೆಯಲು ಸಾಧ್ಯವಾಗುವ ತಳಿ ಮತ್ತು ಬೇಸಾಯ ಕ್ರಮಗಳನ್ನು ಒಟ್ಟಿಗೆ ಕಂಡು ಹಿಡಿಯುವುದು ಕೃಷಿ ಸಂಶೋಧಕರ ಮುಖ್ಯ ಧ್ಯೇಯ ಎಂಬುದು ಮನದಟ್ಟಾಗಿದೆ.

ಅರೆಗಿಡ್ಡ ಸಸ್ಯ ಸ್ವರೂಪ:

ಹೊಸ ತಳಿಗಳನ್ನು ಸೃಷ್ಟೀಕರಿಸುವುದರಲ್ಲಿ ಗಿಡ್ಡ ಸಸ್ಯ ಸ್ವರೂಪ ೧೯೬೪ ರಿಂದ ಈವರೆವಿಗೂ ಮೂಲ ಧ್ಯೇಯವಾಗಿತ್ತು. ಇನ್ನು ಮುಂದೆ ಹೆಚ್ಚು ಹುಲ್ಲನ್ನು ಬಯಸುವ ರೈತನ ತೃಪ್ತಿಗಾಗಿ ವಿವಿಧ ಮಾದರಿ ಅಹಿತವಾದ (Problematic) ಮಣ್ಣುಗಳ ಹಾಗೂ ಹವಾಗುಣಗಳಿಗೆ (ಪೋಷಕಾಂಶಗಳ ಕೊರತೆ ಮತ್ತು ತೀಕ್ಷ್ಣತೆ, ಚಳಿ ಹಾಗೂ ಅತಿ ಉಷ್ಣ) ಹೊಂದಿಕೊಳ್ಳುವ ತಳಿಗಳನ್ನು ಸೃಷ್ಟಿಸುವ ಸಲುವಾಗಿ ಮತ್ತು ಬಹಳ ಮುಖ್ಯವಾಗಿ ಕಡಿಮೆ ಖರ್ಚಿನಲ್ಲಿ ಹಾಗೂ ನಿವ್ವಳ ಲಾಭ ನೀಡುವಂತಹ ಫಸಲನ್ನು ತೆಗೆಯಲು ಗಿಡ್ಡ ಸಸ್ಯ ಸ್ವರೂಪ ಹೊಂದಿರುವ ತಳಿಗಳ ಬದಲು ಮಧ್ಯಮ ಎತ್ತರದ ಅರೆಗಿಡ್ಡ ಸಸ್ಯ ಸ್ವರೂಪ ಹೊಂದಿರುವ ತಳಿಗಳ ಸೃಷ್ಟಿ ಅನಿವಾರ್ಯವಾಗಿದೆ. ಇಂತಹ ಸಸ್ಯ ಸ್ವರೂಪವನ್ನು ಹೊಂದಿರುವ ಶಿಫಾರಸ್ಸಿನಲ್ಲಿರುವ ಇಂಟಾನ್ ತಳಿ ಮತ್ತು ಶಿಫಾರಸ್ಸಿನಲ್ಲಿಲ್ಲದಿದ್ದರೂ ಜನಪ್ರಿಯವಾಗಿರುವ ಗೌರಿ (ಮಷೂರಿ) ತಳಿಯೂ ಅರೆಗಿಡ್ಡ ಸಸ್ಯ ಸ್ವರೂಪದ ಮಹತ್ವವನ್ನು ಎತ್ತಿ ತೋರಿಸಿದೆ. ಈ ಮೇಲ್ಕಂಡ ಹೆಚ್ಚು ಗುಣಗಳನ್ನು ಹೊಂದಿರುವ ಇಂಟಾನ್ ತಳಿಯು ಕರ್ನಾಟಕ ರಾಜ್ಯದಲ್ಲಿ ಇಂದು ಅತ್ಯಂತ ಜನಪ್ರಿಯವಾದ ಬತ್ತವಾಗಿದೆ. ರಾಜ್ಯದಲ್ಲಿ ೭೦-೭೮ನೇ ಸಾಲಿನಲ್ಲಿ ಹೆಚ್ಚು ಪ್ರದೇಶದಲ್ಲಿ ಬೆಳೆಯಲ್ಪಡುತ್ತಿದ್ದ ತಳಿ ಎಂದರೆ ಜಯ. ಆದರೆ ೧೯೮೦ನೇ ಸಾಲಿನಿಂದಿಚೆಗೆ ಪ್ರಥಮ ಸ್ಥಾನ ಇಂಟಾನ್ ತಳಿಗೆ ಸೇರಿದ್ದಾಗಿದೆ. ಕರ್ನಾಟಕದಲ್ಲಿ ೧೯೮೦ನೇ ಸಾಲಿನ ಕೇವಲ ಮಳೆಗಾಲದ ಬೆಳೆಯಾಗಿ ೧.೧೩.೭೬೬ ಹೆಕ್ಟೇರುಗಳಲ್ಲಿ ಬೆಳೆದು ಶೋಭಿಸಿ, ಮಲೆನಾಡು ಪ್ರದೇಶದಲ್ಲಿ ಹೆಚ್ಚಿನ ಮಟ್ಟದ ಎಕರೆವಾರು ಇಳುವರಿಗೆ ಕಾರಣವಾದ ಇಂಟಾನ್ ತಳಿ ಇಂದು ಮಲೆನಾಡಿನಲ್ಲಿ ಮಾತ್ರವಲ್ಲದೆ, ಇತರ ಪ್ರದೇಶಗಳಲ್ಲೂ ತಾವಾಗಿಯೇ ಅಂದರೆ ಶಿಫಾರಸ್ಸು ಮಾಡಿಲ್ಲದಿದ್ದರೂ ಹರಡಿಕೊಂಡು ಜನಪ್ರಿಯವಾಗಿರುವುದರ ಕಾರಣ ವಿಶ್ಲೇಷಣಾರ್ಹ.

ಹೆಚ್ಚು ಹುಲ್ಲು:

ಹೈನುಗಾರಿಕೆಯನ್ನು ಹೆಚ್ಚು ಅವಲಂಭಿಸಿರುವ ನಮ್ಮ ರೈತರಿಗೆ ಅಧಿಕ ಹುಲ್ಲನ್ನು ನೀಡುವ ಗುರಿ ಇಂಟಾನ್ ಬತ್ತದಲ್ಲಿದೆ. ಅಲ್ಲದೆ ಗುಡಿಸಲುಗಳಿಗೆ ಮನೆಯನ್ನು ತಂಪಾಗಿ ಮಾಡಲು ಹೊದಿಸಲು ಹಾಗೂ ಹಗ್ಗವನ್ನು ಹೆಣೆಯಲು ಬೇಕಾಗುವ ಸಾಕಷ್ಟು ಉದ್ದದ ಹುಲ್ಲನ್ನು ಹೊಂದಿರುವ ಗುಣ ಇಂಟಾನ್ ಬತ್ತದ ವೈಶಿಷ್ಟ್ಯ. ತುಂಡಾಗಿ ಬೆಳೆಯುವ ಜಯ, ವಾಣಿ, ಸೋನ ಮತ್ತು ಮಧು ಗಿಡ್ಡ ತಳಿಗಳನ್ನು ನಿರಾಕರಿಸಿದ ರೈತರು ಮಧ್ಯಮ ಎತ್ತರದ ಇಂಟಾನ್ ಬತ್ತವನ್ನು ಸ್ವೀಕರಿಸಿ ಹೆಚ್ಚಿನ ಪ್ರಮಾಣದಲ್ಲಿ ಬೆಳೆಯುತ್ತಿದ್ದಾರೆ.

ಕಾಳಿನ ವಿಶೇಷ ಗುಣಗಳು:

ಹೆಚ್ಚು ಪ್ರಮಾಣದಲ್ಲಿ ಕುಸಬಲು ಅಕ್ಕಿಯನ್ನು ಉಪಯೋಗಿಸುವ ಮಲೆನಾಡು ಜಿಲ್ಲೆಗಳು – ಕರಾವಳಿ ಮತ್ತು ಕೇರಳ ರಾಜ್ಯದ ಜನಗಳಿಗೆ ಇಂಟಾನ್ ಬತ್ತದ ಕಾಳು ಬಹುಯೋಗ್ಯ ಎನಿಸಿದೆ. ಅಲ್ಲದೆ ಪುರಿ (ಮಂಡಕ್ಕಿ) ಮಾಡಲು ಸಹ ಈ ಬತ್ತದ ಕಾಳು ಅತ್ಯುತ್ತಮ ಎನಿಸಿದೆ. ಇದರ ಕಾಳು ಹೆಚ್ಚು ತೂಕವಿದ್ದು, ಹೊಟ್ಟನ್ನು ತೆಗೆದಾಗ ಹೆಚ್ಚು ಪ್ರಮಾಣದಲ್ಲಿ ಅಕ್ಕಿ ನೀಡುವುದು ಇದರ ಮತ್ತೊಂದು ವಿಶೇಷ ಗುಣ. ಈ ಕಾರಣಗಳಿಂದಾಗಿ ಇಂಟಾನ್ ಬತ್ತಕ್ಕೆ ಮಾರುಕಟ್ಟೆಯಲ್ಲಿ ಹೆಚ್ಚು ಬೆಲೆ ಸಿಗುತ್ತಿದೆ ಎನ್ನಬಹುದು.

ಕಡಿಮೆ ಖರ್ಚಿನ ಬೇಸಾಯ:

ಮಧ್ಯಮ ಎತ್ತರದ ಅರೆಗಿಡ್ಡ ಸಸ್ಯಸ್ವರೂಪ ಹೊಂದಿರುವ ಇಂಟಾನ್ ಬತ್ತವು ಕಡಿಮೆ ಗೊಬ್ಬರ ಮತ್ತು ಸುಧಾರಣ ಖರ್ಚಿನಲ್ಲಿ ಹೆಚ್ಚು ಇಳುವರಿ ಕೊಡಬಲ್ಲದು ನೆಟ್ಟಗಿರುವ, ಹಚ್ಚ ಹಸಿರಾಗಿರುವ ಎಲೆಗಳು ಹಾಗೂ ಹೆಚ್ಚು ತೆಂಡೆ ಹೊರಡಿಸುವ ಶಕ್ತಿ ಮತ್ತು ಹೆಚ್ಚು ಕಾಲ ಭೂಮಿಯಲ್ಲಿ ನಿಂತು ಅಧಿಕ ಪ್ರಮಾಣದಲ್ಲಿ ಉಚಿತವಾಗಿ ದೊರೆಯುವ ಬಿಸಿಲು ಹಾಗೂ ಮಣ್ಣಿನಲ್ಲಿ ದೊರೆಯುವ ಆಹಾರ ಅಂಶಗಳನ್ನು ದೀರ್ಘಕಾಲಾವಧಿಯಲ್ಲಿ ಉಪಯೋಗಿಸಿಕೊಂಡು ತೃಪ್ತಿಕರವಾದ ಇಳುವರಿಯನ್ನು ನೀಡಬಲ್ಲದು. ಬೆಳವಣಿಗೆಯ ಆದಿಯಲ್ಲಿ ಕಾಣಿಸಿಕೊಂಡ ಕೆಲವು ಆಹಾರದ ಅಂಶಗಳ ಕೊರತೆಯ ಲಕ್ಷಣಗಳು ಮತ್ತು ಇತರ ಗಾಯಗಳಿಂದ ಕ್ರಮೇಣ ಚೇತರಿಸಿಕೊಂಡು ಎಂತಹ ವಿಷಮ ಸನ್ನಿವೇಶಗಳಲ್ಲಿಯೂ ಸಾಮಾನ್ಯವಾದ ಇಳುವರಿಯನ್ನಾದರೂ ಪಡೆಯಬಹುದು ಎಂಬ ನಂಬಿಕೆ ರೈತನಿಗೆ ಈ ತಳಿಯಲ್ಲಿದೆ. ಹೆಚ್ಚು ಗೊಬ್ಬರವನ್ನು ಕೊಳ್ಳಲು ಹಾಗೂ ಕೃಷಿ ಕಾರ್ಮಿಕರನ್ನು ಉಪಯೋಗಿಸಲು ಹಣದ ಚೈತನ್ಯವನ್ನು ಹೊಂದಿಲ್ಲದ ಬಡ ರೈತರಿಗೆ ಇಂಟಾನ್ ಬತ್ತ “ಓರ್ವ ಬಂಧುವೇ” ಆಗಿದೆ.

ರೋಗ ನಿರೋಧಕ ಗುಣ:

ನೆರೆ ರಾಜ್ಯಗಳಲ್ಲಿ ಎಲ್ಲೂ ಇಲ್ಲದ, ಆದರೆ ಕರ್ನಾಟಕದಲ್ಲಿ ಹೆಚ್ಚು ನಷ್ಟಕ್ಕೆ ಕಾರಣವಾಗುತ್ತಿರುವ ಒಂದು ಭೂಷ್ಟ ರೋಗ ಎಂದರೆ ಬತ್ತಕ್ಕೆ ತಗಲುವ ಬೆಂಕಿ ರೋಗ. ಅದರಲ್ಲೂ ಮಲೆನಾಡು ಪ್ರದೇಶದಲ್ಲಿ ಒಮ್ಮೊಮ್ಮೆ ಈ ರೋಗವು ಬೆಳೆಯನ್ನು ಸಂಪೂರ್ಣವಾಗಿ ನಾಶಗೊಳಿಸುವುದು ಉಂಟು. ಮೊದಮೊದಲು ಬಿಡುಗಡೆಯಾದ ತಾಯ್‌ಚುಂಗ್, ಜಯ, ರತ್ನ ಮತ್ತು ಇತರ ತಳಿಗಳನ್ನು ತಿಳಿಯದೆ ಬೆಳೆದು ಬೆಂಕಿ ರೋಗದಿಂದ ಇಡೀ ಬೆಳೆಯು ಸಂಪೂರ್ಣವಾಗಿ ನಾಶವಾದ ಅನೇಕ ಅನುಭವಗಳಿವೆ. ಇದಕ್ಕೆ ಪರಿಹಾರ ಮಾರ್ಗವಾಗಿ ರಾಜ್ಯದ ಕೃಷಿ ವಿಶ್ವವಿದ್ಯಾಲಯವು ಮಡಿಕೇರಿ, ಪೊನ್ನಂಪೇಟೆ, ಮಂಡ್ಯ, ಹೆಬ್ಬಾಳ ಮತ್ತು ಮುಡಿಗೆರೆ ಪ್ಲಾಂಟರುಗಳ (ಶ್ರೀಯುತರು ತೇಜಸ್ವಿ, ದತ್ತೇಗೌಡರು, ಗೋಪಾಲಗೌಡರು, ಸುಂದರೇಶಂ ಮುಂತಾದವರು) ತಾಕುಗಳಲ್ಲಿ ಪರೀಕ್ಷಿಸಿ ಇಂಟಾನ್ ತಳಿಗೆ ಬೆಂಕಿ ನಿರೋಧಕ ಶಕ್ತಿ ಇದೆಯೆಂದು ೧೯೭೦ ರಿಂದ ೧೯೭೪ ರವರೆಗೆ ನಡೆಸಿದ ಸಂಶೋಧನೆಯಲ್ಲಿ ಖಚಿತವಾಯಿತು. ೧೯೭೫ರಲ್ಲಿ ರಾಜ್ಯದ ತಳಿ ಮೌಲ್ಯಮಾಪನ ಸಮಿತಿಯು ಇಂಟಾನ್ ತಳಿಯನ್ನು ಮಲೆನಾಡಿನ ಮಳೆಗಾಲದ ಬೆಳೆಗೆ ಸೂಕ್ತ ಬೆಂಕಿ ನಿರೋಧಕ ತಳಿ ಎಂದು ರೈತರಿಗೆ ಶಿಫಾರಸ್ಸು ಮಾಡಿತು. ಇಂದಿಗೂ ಇದರಲ್ಲಿ ನಿರೋಧಕ ಶಕ್ತಿ ಚೆನ್ನಾಗಿ ಉಳಿದಿದೆ. ಅಲ್ಲಲ್ಲಿ ಕೆಲವು ಬೆಂಕಿ ರೋಗದ ಚಿಹ್ನೆಗಳು (ಚುಕ್ಕೆ) ಕಾಣಿಸಿಕೊಂಡರೂ ಸಹ ಇದರಿಂದ ಕುಗ್ಗುತ್ತಿಲ್ಲ ಎಂಬುದು ತಿಳಿದಿರಬೇಕಾದ ವಿಷಯ.

ಇತರ ಗುಣಗಳು:

ಇಂಟಾನ್ ಬತ್ತ ಸಸ್ಯದ ಕಾಂಡ, ಗರಿ ಮತ್ತು ಕಾಳಿನ ತುರಿಗಳಲ್ಲಿ ನೇರಳೆ ಬಣ್ಣ ಇರುವುದು ತಳಿಯ ಬೀಜದ ಪರಿಶುದ್ಧತೆಯನ್ನು ಕಾಪಾಡಲು ಬಹಳ ಉಪಯುಕ್ತ ಗುಣ. ಸಸ್ಯದಲ್ಲಿ ಕಾಣಿಸಿಕೊಳ್ಳುವ ಈ ಬಣ್ಣವು ಉಷ್ಣಾಂಶ ಹೆಚ್ಚಾದರೆ ಬಣ್ಣ ಕಡಿಮೆಯಾಗುತ್ತದೆ. ಉಷ್ಣಾಂಶ ಕಡಿಮೆಯಾದರೆ ನೇರಳೆ ಬಣ್ಣ ಹೆಚ್ಚಾಗುತ್ತದೆ. ಇದು ಉಷ್ಣಾಂಶವು ಹದಕೆ ಬಂದ ತಕ್ಷಣ ಸಾಧಾರಣ ಮಟ್ಟಕ್ಕೆ ಬಂದು ನಿಲ್ಲುತ್ತದೆ. ಮಣ್ಣಿನಲ್ಲಿರಬಹುದಾದ ಸ್ವಲ್ಪ ಮಟ್ಟದ ಕಬ್ಬಿಣದ ಖಾರಕ್ಕೆ ಈ ತಳಿಯು ನಿರೋಧಕ ಶಕ್ತಿ ಹೊಂದಿದೆಯಾದರೂ ಖಾರ ಪ್ರಮಾಣವೂ ಮತ್ತಷ್ಟು ಏರಿದಾಗ ಈ ತಳಿಯು ಇತರ ತಳಿಗಿಂತಲೂ ಹೆಚ್ಚು ಪ್ರತಿಕ್ರಿಯೆ ತೋರಿಸಿ ನೇರಳೆ ಬಣ್ಣ ಹೆಚ್ಚಾಗಿ ಬೆಳೆಯು ಕುಂಠಿತಗೊಳ್ಳುತ್ತದೆಂಬುದು ತಿಳಿದಿರಬೇಕಾದ ವಿಷಯ.

ಬೇಸಾಯ ಕ್ರಮ:

ಇಂಟಾನ್ ಬತ್ತವನ್ನು ಮಳೆಗಾಲದಲ್ಲಿ ಮಧ್ಯಮ ಮತ್ತು ತಗ್ಗು ಭೂಮಿಯಲ್ಲಿ ಬಿತ್ತನೆ ಅಥವಾ ನಾಟಿ ಬೆಳೆಯಾಗಿ ಬೆಳೆಯಬಹುದು. ಒಂದು ಎಕರೆಗೆ ಬಿತ್ತನೆಗಾಗಿ ೨೫ ಕೆಜಿ ನಾಟಿಗೆ, ೩೫ ಕೆಜಿ ಬೀಜವನ್ನು ಬಳಿಸಿ, ೨೦ ರಿಂದ ೩೫ ದಿವಸ ವಯಸ್ಸಿನ ಪೈರನ್ನು ಜುಲೈ ೧೫ ರೊಳಗಾಗಿ ನಾಟಿ ಮಾಡಬೇಕು. ಒಂದು ಚದುರ ಮೀಟರಿನಲ್ಲಿ ೫೦ ಗುಣಿ ಬರುವಂತೆ ಮತ್ತು ಒಂದು ಗುಣಿಯಲ್ಲಿ ೩ ಪೈರುಗಳು ಇರುವಂತೆ ನಾಟಿ ಮಾಡುವುದು ಗಮನಿಸಬೇಕಾದ ಅಂಶ. ಒಂದು ಎಕರೆಗೆ ೪೦ ಕೆಜಿ ಸಾರಜನಕ, ೩೦ ಕೆಜಿ ರಂಜಕ ಮತ್ತು ೩೫ ಕೆಜಿ ಪೊಟ್ಯಾಷ್ ಗೊಬ್ಬರಗಳನನ್ನು ಸಲಹೆ ಮೇರೆಗೆ ಒಂದು ಅಥವಾ ಹೆಚ್ಚು ಹಂತಗಳಲ್ಲಿ ಕೊಡಬೇಕು. ಕೀಟ ನಿಯಂತ್ರಣ ಕ್ರಮಗಳನ್ನು ಅವಶ್ಯವಿದ್ದಲ್ಲಿ ಕೈಗೊಳ್ಳಬೇಕು. ಇಂಟಾನ್ ತಳಿಯು ಸುಮಾರು ೧೭೫ ದಿನಗಳಲ್ಲಿ ಫಸಲು ಕೊಯ್ಲಿಗೆ ಬರುತ್ತದೆ.

ಸುಧಾರಿತ ಇಂಟಾನ್ ತಳಿಗಳು:

ಕಡಿಮೆ ಖರ್ಚಿನಲ್ಲಿಯೂ ಉತ್ತಮ ಇಳುವರಿ ನೀಡಬಲ್ಲ ಇಂಟಾನ್ ತಳಿಯಲ್ಲಿ ದೀರ್ಘಾವಧಿಯು ಕೆಲವು ಸನ್ನಿವೇಶಗಳಲ್ಲಿ ಇದನ್ನು ಬೆಳೆಯಲು ತೊಡಕಾಗಿದೆ. ಆದ್ದರಿಂದ ಈ ತಳಿಯನ್ನು ಮುಟೇಷನ್ ತಂತ್ರಕ್ಕೆ ಒಳಪಡಿಸಿ, ಇದೀಗ ಕೃಷಿ ವಿಶ್ವವಿದ್ಯಾನಿಲಯದಲ್ಲಿ ಸುಧಾರಿಸಲಾಗಿದೆ. ಸುಧಾರಿತ ೩ ಇಂಟಾನ್ ತಳಿಗಳು ೧೨೦, ೧೩೫ ಮತ್ತು ೧೫೦ ದಿವಸಗಳಲ್ಲಿ ಯಾವ ಅವಧಿಯಲ್ಲಿ ಬೇಕಾದರೂ ಕೊಯ್ಲಿಗೆ ಬರುವಂತಹವು. ಅವಧಿಯೊಂದನ್ನು ಬಿಟ್ಟರೆ ಉಳಿದ ಯಾವ ಗುಣಗಳಲ್ಲಿಯೂ ಬದಲಾವಣೆ ಇಲ್ಲ. ಅಲ್ಲದೆ ಬೇಸಿಗೆಯಲ್ಲಿಯೂ ಸಹ ಸುಧಾರಿತ ಇಂಟಾನ್ ತಳಿಯನ್ನು ಬೆಳೆಯಬಹುದು. ಇದಲ್ಲದೆ ಮತ್ತೊಂದು ಸುಧಾರಣೆಯಲ್ಲಿ ಇಂಟಾನ್ ತಳಿಯನ್ನು ಜಯ, ಮಧು, ವಿಕ್ರಮ್, ಪ್ರಕಾಶಂ ಮುಂತಾದ ತಳಿಗಳಂತೆ ಗಿಡ್ಡ ಸ್ವರೂಪಕ್ಕೆ ಬದಲಾಯಿಸಲಾಗಿದೆ. ಬೇರೆ ಯಾವ ಗುಣಗಳಲ್ಲಿಯೂ ಬದಲಾವಣೆಯಿಲ್ಲ. ಇಂಟಾನ್ ತಳಿ ಹಾಗೂ ಇದರ ಸುಧಾರಿತ ಎಲ್ಲಾ ತಳಿಗಳೂ ಸೇರಿಕೊಂಡು ರದ್ಧಾದ ಯಾವುದೇ ಭಾಗದಲ್ಲಿ ಬೇಕಾದರೂ ಯಾವುದೇ ಋತುಮಾನದಲ್ಲಿ ಬೇಕಾದರೂ ಈ ತಳಿಯನ್ನು ಬೆಳೆಯಬಹುದು ಎಂಬ ಚಿಹ್ನೆಗಳು ಕಂಡುಬರುತ್ತಿದೆ. ಇದೀಗ ಯೋಜನೆಯಲ್ಲಿ ಒಳಗೊಂಡಿರುವ ಶಕ್ತಿಮಾನ್ ತಳಿಗಳ ಅನ್ವೇಷಣೆಯಲ್ಲಿ ಇಂಟಾನ್ ತಳಿ ಮಹತ್ವದ ಪಾತ್ರ ವಹಿಸಬಲ್ಲದೆಂದು ಕುರುಹುಗಳಿವೆ.