ಯಾವುದೇ ಒಂದು ವಸ್ತುವಿಗೆ ನಾಮಕರಣ ಮಾಡುವುದು ಒಂದು ಸಂಪ್ರದಾಯ ಹಾಗೂ ಕರೆ ದೇವರು ಹೆಚ್ಚು ಬಳಕೆಯಲ್ಲಿರುವ ಒಂದು. ವಸ್ತು, ಒಂದು ನದಿ ಮುಂತಾದ ಒಂದು ಅರ್ಥವನ್ನು ಕೊಡುವ ಹಾಗೂ ಕಿವಿಗೆ ಇಂಪಾದ ಹೆಸರನ್ನು ಕೊಡುವುದು ವಿಶ್ವವ್ಯಾಪಿ ಸಂಪ್ರದಾಯ. ಒಂದು ವಸ್ತುವಿಗೆ ಒಂದೇ ಹೆಸರಿಡುವುದು ಸರ್ವೇಸಾಮಾನ್ಯವಾದರೂ ಕೆಲವು ವೇಳೆ ಒಂದಕ್ಕಿಂತಲೂ ಹೆಚ್ಚು ಹೆಸರಿಡಲು ಸಾಧ್ಯ. ಅದರಲ್ಲೂ ಒಂದು ವಸ್ತುವು ಹೆಚ್ಚು ಜನಪ್ರಿಯವೆನಿಸಿದಾಗ ಅದಕ್ಕೆ ಒಂದಕ್ಕಿಂತಲೂ ಹೆಚ್ಚು ಹೆಸರಿಡುವುದನ್ನು ಅಲ್ಲಲ್ಲಿ ಕಾಣಬಹುದು. ಇದಕ್ಕೆ ಒಂದು ಸರಿಯಾದ ಉದಾಹರಣೆ ಎಂದರೆ ಪ್ರಪಂಚದ ಅನೇಕ ದೇಶ ಮತ್ತು ರಾಜ್ಯಗಳಿಗೆ ಚಿರಪರಿಚಿತವಾದ ಒಂದು ಬತ್ತದ ತಳಿ!

ಹಲವು ಹೆಸರು:

“ಮಷೂರಿ” ಎಂದರೆ ಮಲೇಷಿಯಾದಲ್ಲಿ ಕೃಷಿ ತಜ್ಞರಿಂದ ಸೃಷ್ಟಿಸಲ್ಪಟ್ಟ ಒಂದು ಹೆಸರಾಂತ ಬತ್ತದ ತಳಿ. ಇದರ ಕೆಲವು ಉತ್ತಮ ಗುಣಗಳಿಂದ ಇದು ಪ್ರಪಂಚದ ಅನೇಕ ದೇಶಗಳಲ್ಲಿ ವ್ಯಾಪಿತವಾಗಿದೆ. ಆಯಾ ದೇಶದ ಸಂಶೋಧನಾ ಕೇಂದ್ರಗಳಲ್ಲಿ ಪರೀಕ್ಷಣ ಮಟ್ಟದಲ್ಲಿರುವಾಗಲೇ ಈ ಬತ್ತದ ತಳಿಯು ಅನೇಕ ರೈತರನ್ನು ಆಕರ್ಷಿಸಿತು. ಆದ್ದರಿಂದ ಆಯಾ ದೇಶದ ಅಥವಾ ರಾಜ್ಯದ ಕೃಷಿ ಇಲಾಖೆ ಮತ್ತು ಕೃಷಿ ವಿಶ್ವವಿದ್ಯಾಲಯಗಳಿಂದ ಶಿಫಾರಸ್ಸಿಗೆ ಬರುವ ಮೊದಲೇ ಈ ತಳಿಯು ರೈತರಿಂದ ರೈತರಿಗೆ ಹರಡಿರುವುದರಿಂದ ಈ ಬತ್ತದ ಸರಿಯಾದ ಹೆಸರು ರೈತರಿಗೆ ತಿಳಿಯಲಾಗಲಿಲ್ಲ. ಆದ್ದರಿಂದಲೇ ರೈತರು ತಮಗೆ ಇಷ್ಟವಾದ ಹೆಸರನ್ನು ಕೊಟ್ಟು ಪ್ರಚಾರಕ್ಕೆ ತರಬೇಕಾಯಿತು. ಹೀಗೆ ಬಾಂಗ್ಲಾ ದೇಶದ “ಪಾಜಮ” ಎಂದು ಕರೆಯಲ್ಪಟ್ಟರೆ, (ಪಾ-ಪಾಕಿಸ್ತಾನ, ಜ-ಜಪಾನ್, ಮ- ಮಲೇಶಿಯಾ) ಭಾರತದಲ್ಲಿ ನಾನಾ ಹೆಸರುಗಳಿಂದ ಕರೆಯಲ್ಪಡುತ್ತಿದೆ.

ಆಂಧ್ರದಲ್ಲಿ ಮಷೂರಿ ಎಂದೂ, ತಮಿಳುನಾಡಿನಲ್ಲಿ ಪೊನ್ನಿ ಎಂದೂ, ಕರ್ನಾಟಕದಲ್ಲಿ ಗೌರಿ ಎಂದೂ ಮತ್ತು ಮೇಲ್ಕಂಡ ರಾಜ್ಯಗಳಲ್ಲಿ ಅಲ್ಲಲ್ಲಿ ಮತ್ತು ಭಾರತದ ಇತರ ಕೆಲವು ಭಾಗಗಳಲ್ಲಿ ಸಿಂಗಪೂರ್ ರಾಣಿ ಎಂದೂ ಕರೆಯಲ್ಪಡುತ್ತಿದೆ. ಆದರೆ ಈ ಎಲ್ಲಾ ರಾಜ್ಯಗಳಲ್ಲಿಯೂ ಸಂಶೋಧನಾ ಕೇಂದ್ರಗಳಲ್ಲಿ ಮಷೂರಿ ಎಂಬ ಹೆಸರಿನಿಂದ ಪರೀಕ್ಷಿಸಲ್ಪಟ್ಟಿದೆ. ಮಷೂರಿ ಎಂಬುದು ಮಹ್‌ಷೂರಿ ಎಂಬ ಹುಟ್ಟಿದ ಊರಿನಲ್ಲಿ (ಮಲೇಶಿಯಾದಲ್ಲಿ) ಇಡಲಾದ ಹೆಸರಿನ ಆಧಾರ. ಪೊನ್ನಿ ಎಂಬುದು ತಮಿಳುನಾಡು ರಾಜ್ಯ ತಳಿ ಮೌಲ್ಯಮಾಪನ ಸಮಿತಿಯಿಂದ ನೀಡಲ್ಪಟ್ಟ ಹೆಸರು. ಗೌರಿ ಎಂಬುದು ಕರ್ನಾಟಕದ ರೈತರು ಇಟ್ಟ ಹೆಸರು. ಈ ಹೆಸರನ್ನು (ಗೌರಿ) ಶಿವಮೊಗ್ಗ ಜಿಲ್ಲೆಯ ರೈತರು ಮೊಟ್ಟಮೊದಲು ಕೊಟ್ಟು, ಪ್ರಚಾರಕ್ಕೆ ತಂದಿರುವುದಾಗಿ ತಿಳಿದುಬಂದಿದೆ. ಸಿಂಗಪೂರ್ ರಾಣಿ ಎಂಬ ಹೆಸರು ಹೇಗೆ ಬಂದಿತು ಎಂಬುದನ್ನು ತಿಳಿಯಲಾಗಿಲ್ಲ. ಈ ಸಂದರ್ಭದಲ್ಲಿ ಈ ತಳಿಯ ಪರಿಚಯ ಸೂಕ್ತ.

ತಳಿಯ ಸೃಷ್ಟಿ:

ಪ್ರಪಂಚದಲ್ಲೇ ಅತಿ ಮುಖ್ಯವಾದ ಆಹಾರ ಧಾನ್ಯದ ಬೆಳೆಯಾದ ಬತ್ತದ ಮೇಲಿನ ಸಂಶೋಧನೆಯು ಪ್ರಪಂಚದ ಅನೇಕ ದೇಶಗಳಲ್ಲಿ ನಡೆಯುತ್ತಿದೆ. ಅನೇಕ ದೇಶ ಮತ್ತು ಭಾರತದ ಅನೇಕ ರಾಜ್ಯಗಳಲ್ಲಿ ಕಳೆದ ಎರಡು ದಶಕಗಳಲ್ಲಿ ಇಂಡೋ ಜಪಾನಿಕಾ ತಳಿ ಅಭಿವೃದ್ಧಿ ಯೋಜನೆ ರೂಪಿತವಾಗಿ ಸಂಶೋಧನೆ ನಡೆಯಿತು. ಜಪಾನ್ ಬತ್ತದಲ್ಲಿರುವ ಗಿಡ್ಡ ಸಸ್ಯರೂಪ, ಹೆಚ್ಚು ರಸಗೊಬ್ಬರಕ್ಕೆ ಕ್ರಮವಾಗಿ ಪ್ರತಿಕ್ರಿಯೆ ತೋರುವ ಗುಣ (Fertilizer Responsive) ಮತ್ತು ಬೇಸಿಗೆ, ಮಳೆಗಾಲದಲ್ಲಿ ಒಂದೇ ಅವಧಿಯಲ್ಲಿ ಹೂಬಿಟ್ಟು ಫಸಲಾಗುವ ಗುಣ (Photeo Insensitivity)ಗಳನ್ನೂ, ಇಂಡಿಕಾ ಬತ್ತಗಳಲ್ಲಿರುವ ಉತ್ತಮ ಕಾಳಿನ ಗುಣ ಮತ್ತು ಕೆಲವು ಅಹಿತ ವಾತಾವರಣಕ್ಕೆ ಹೊಂದಿಕೊಳ್ಳುವ ಗುಣಗಳನ್ನೂ ಒಂದೇ ತಳಿಯಲ್ಲಿ ಸಂಕರಣದ ಮೂಲಕ ಕ್ರೋಡಿಕರಿಸುವುದೇ ಈ ಯೋಜನೆಯ ಮುಖ್ಯ ಗುರಿಯಾಗಿತ್ತು. ಇಂತಹ ಮಹತ್ ಯೋಜನೆಯಿಂದ ಕೇವಲ ಮೂರು ತಳಿಗಳು ಮಾತ್ರ ಹೊರಬಿದ್ದವು. ಅವು ಭಾರತದಲ್ಲಿ ಎಡಿಬಿ ೨೭ ಮಲೇಷಿಯಾದಲ್ಲಿ ಮಷೂರಿ ಮತ್ತು ಕೋರಿಯಾದಲ್ಲಿ ಟೊಂಗಿಲ್, (Tongil) ಕರ್ನಾಟಕದಲ್ಲಿ ನಾಗೇನಹಳ್ಳಿಯ ಕ್ಷೇತ್ರದಲ್ಲಿ ಇಂತಹುದೇ ಯೋಜನೆಯಿಂದ ಹೊರಬಿದ್ದ ಎಸ್-೨೨೨೨ (ಇಂಡೋ-ಜಪಾನಿಕಾ) ಎಂಬ ಬತ್ತವು ಹೆಚ್ಚು ಪ್ರಚಾರಕ್ಕೆ ಬರಲಿಲ್ಲ. ಆದರೂ ಮೈಸೂರು ಜಿಲ್ಲೆಯ ಅಲ್ಲಲ್ಲಿ ಈ ಬತ್ತದ ಸಾಗುವಳಿಯನ್ನೂ ಇಂದಿಗೂ ಕಾಣಬಹುದು. ಉತ್ತಮ ಕಾಳಿನ ಗುಣದಿಂದ ಇನ್ನೂ ಉಳಿದಿದೆಯಾದರೂ ಬೆಂಕಿರೋಗಕ್ಕೆ ತುತ್ತಾಗುವುದರಿಂದ ಇದು ಹೆಚ್ಚು ಜನಪ್ರಿಯವಾಗಲಿಲ್ಲ. ಐಡಿಟಿ ೨೭ ತಳಿಯೂ ಸುಮಾರು ಒಂದು ದಶಕ ಕಾಲ ದಕ್ಷಿಣ ಭಾರತದಲ್ಲಿ ಚಳಿ ನಿರೊಧಕ, ಸಣ್ಣ ಕಾಳಿನ, ಅಲ್ಪಾವಧಿಯ ಬೇಸಿಗೆ ಹಾಗೂ ಮಳೆಗಾಲದ ತಳಿಯಾಗಿ ಬಳಕೆಯಲ್ಲಿತ್ತು. ಕಾಳು ಉದುರುವ ಮತ್ತು ಬೆಂಕಿರೋಗಕ್ಕೆ ಹೆಚ್ಚು ತುತ್ತಾಗುವುದರಿಂದ ಈ ತಳಿಯು ಕಣ್ಮರೆಯಾಗುತ್ತಿದೆ. ಟೊಂಗಿಲ್ (Tongil) ತಳಿಯು ಇದೀಗ ಪ್ರಚಾರವಾಗುತ್ತಿದೆ. ಮಷೂರಿ ತಳಿಯು ಬತ್ತ ಬೆಳೆಯುವ ಎಲ್ಲಾ ದೇಶಗಳಿಗೂ ಚಿರಪರಿಚಿತ. ಇದನ್ನು ಮಲೇಷಿಯಾ ಬತ್ತದ ಸಂಶೋಧಕರು ಮ್ಯಾಂಗೆಬ್ರಾಸ್ = ಟಿ೬೫ ಸಂಕರಣದಿಂದ ಆಯ್ಕೆ ಮಾಡಿದರು.

ವಿಶೇಷ ಗುಣಗಳು:

ಈ ತಳಿ (ಮಷೂರಿ, ಗೌರಿ, ಪೊನ್ನಿ) ಯನ್ನು ಬೇಸಿಗೆ ಮತ್ತು ಮಳೆಗಾಲದಲ್ಲಿ ಬೆಳೆಯಬಹುದು. ಇದರ ಅವಧಿ ೧೫೦-೧೬೦ ದಿವಸಗಳಾದುದರಿಂದ ಇದು ಮಳೆಗಾಲಕ್ಕೆ ಹೆಚ್ಚು ಹೊಂದುತ್ತದೆ. ಹೆಚ್ಚು ಬೆಂಕಿರೋಗ ಬರುವಲ್ಲಿ ಇದನ್ನು ಬೆಳೆಯಬಾರದು. ಏಕೆಂದರೆ ಇದಕ್ಕೆ ಬೆಂಕಿರೋಗ ತಡೆಯುವ ಶಕ್ತಿಯಿಲ್ಲ. ಆದ್ದರಿಂದಲೇ ಇದು ಹೆಚ್ಚು ಬೆಂಕಿರೋಗ ಬಾರದ ಬಳ್ಳಾರಿ, ರಾಯಚೂರು ಮತ್ತು ಚಿತ್ರದುರ್ಗ ಜಿಲ್ಲೆಗಳಲ್ಲಿ ಮತ್ತು ತಮಿಳುನಾಡಿನಲ್ಲಿ ಹೆಚ್ಚು ಬೆಳೆಯಲ್ಪಡುತ್ತದೆ. ಚಿಕ್ಕಮಗಳೂರು, ಹಾಸನ, ಕೊಡಗು ಜಿಲ್ಲೆಗಳಿಗೆ ಇದು ಸೂಕ್ತವಲ್ಲ. ಗೊಬ್ಬರ ಕಡಿಮೆಯಾದರೂ ಇದು ತೃಪ್ತಿಕರವಾದ ಇಳುವರಿ ನೀಡುತ್ತದೆ. ಇದರ ಕಾಳು ಉದುರುವುದರಿಂದ ಸಕಾಲಕ್ಕೆ ಅಥವಾ ಸ್ವಲ್ಪ ಮುಂಚಿತವಾಗಿ ಇದನ್ನು ಕೊಯ್ಲು ಮಾಡಬೇಕು.