ರೈತ ಬಾಂಧವರಿಗೆ ನಮಸ್ಕಾರ………….

ನಮ್ಮ ಮಾತುಗಳನ್ನು ಕೇಳಲು ಕಾತರದಿಂದ ಇದ್ದೀರಿ. ನೀವೆಲ್ಲಾ, ನನ್ನ ಹೆಸರು ಐ.ಆರ್. ೮, ೧೯೬೫ರಲ್ಲಿ ಪಿಲಿಪೈನ್ಸ್‌ನಿಂದ ಭಾರತಕ್ಕೆ ಕಾಲಿಟ್ಟ ನಾನು ಸುಮಾರು ವರ್ಷ ಜನಪ್ರಿಯನಾಗಿದ್ದು, ಈಗ ಅಜ್ಜನಾಗಿದ್ದೇನೆ. ವಯಸ್ಸಾದಂತೆಲ್ಲಾ ನನ್ನ ಜನಪ್ರಿಯತೆ ಕ್ಷೀಣಿಸಿತು. ಆದ್ದರಿಂದ ನನಗೆ ಯೋಚನೆ ಇಲ್ಲ. ಏಕೆಂದರೆ ನನ್ನ ಸಹೋದರ ಸಹೋದರಿಯರು, ಮಕ್ಕಳು ಮತ್ತು ಸ್ನೇಹಿತರು ನನಗಿಂತಲೂ ಹೆಚ್ಚು ಜನಪ್ರಿಯತೆ ಗಳಿಸಿದ್ದಾರೆ.

ಭಾರತಕ್ಕೆ ಕಾಲಿಟ್ಟಾಗಲೇ ನನಗನ್ನಿಸಿತು ಇಲ್ಲಿ ಮಿತ ಸಂತಾನ ಯೋಜನೆಗಳು ಅಷ್ಟು ಬೇಗ ಯಶಸ್ವಿಯಾಗಲಾರವು. ಆದ್ದರಿಂದ ನಾವೆಲ್ಲ ಅತಿ ಸಂತಾನ ಯೋಜನೆಗಳ ಮೂಲಕ ಇಲ್ಲಿನ ಆಹಾರ ಸಮಸ್ಯೆಯನ್ನು ಪರಿಹರಿಸಬೇಕು ಎಂದು. ಆದ್ದರಿಂದ ನಾನು ಭಾರತದ ಎಲ್ಲಾ ರಾಜ್ಯಗಳಲ್ಲೂ ನೆಲೆಸಿದೆ. ಮತ್ತು ಬಹು ಪತ್ನಿತ್ವವನ್ನು ಪಾಲಿಸಿದೆ. ಹಾಗೂ ಹೆಣ್ಣು ಮಕ್ಕಳಿಗೆ ಬಹು ಪತಿತ್ವಕ್ಕೆ ಪ್ರೋತ್ಸಾಹ ಕೊಟ್ಟೆ. ಹೀಗಾಗಿ ೧೯೬೫ರಲ್ಲಿ ಕರ್ನಾಟಕದಲ್ಲಿ ಸದ್ಯದಲ್ಲೇ ಇನ್ನೂ ದೊಡ್ಡದಾಗಲಿದೆ. ನಿಮ್ಮಲ್ಲಿ ಅನೇಕರು ನನ್ನ ಸಹೋದರಿ ಸಹೋದರರ ಹಾಗೂ ಮಕ್ಕಳ ಪರಿಚಯಕ್ಕಾಗಿ ವೃತ್ತ ಪತ್ರಿಕೆಗಳಲ್ಲಿ ಟಪಾಲು ಮೂಲಕ, ಆಕಾಶವಾಣಿಯಿಂದ ಕೃಷಿ ವಿಶ್ವವಿದ್ಯಾನಿಲಯ ಮತ್ತು ಕೃಷಿ ವಿಸ್ತರಣಾ ಕಛೇರಿಗಳಿಂದ ವಿಷಯ ಸಂಗ್ರಹಿಸುತ್ತಿರುವುದಾಗಿ ತಿಳಿದು ನನಗೆ ಹೆಮ್ಮೆಯಾಯಿತು. ಅಲ್ಲದೆ ಈ ಲೇಖನ ಬರೆಯಲು ಸ್ಫೂರ್ತಿಯೂ ದೊರಕಿತು.

ಸಹೋದರ – ಸಹೋದರಿಯರು:

ಇನ್ನು ನಮ್ಮ ಪರಿಚಯ ಶುರು. ನನ್ನ ಬಗ್ಗೆ ನಿಮಗೆ ಆಗಲೇ ಸ್ವಲ್ಪ ಮಾಹಿತಿ ದೊರಕಿದೆ. ಭಾರತಕ್ಕೆ ಬರಲು ನನಗೆ ಬಹಳ ಸಂತೋಷವಾಯಿತು. ಎಷ್ಟೇ ಆದರೂ ಭಾರತ ನಮ್ಮ ಪೂರ್ವಜರ ತೌರೂರು (ಜನ್ಮಸ್ಥಳ) ಅಲ್ಲವೇ? ನಾನು ೧೯೭೦ ರವರೆಗೆ ಏಷ್ಯಾದ ಅನೇಕ ಕಡೆ ಬಹಳ ಜನಪ್ರಿಯವಾಗಿದ್ದೆ. ಕೆಲವು ಹವಾಗುಣ, ಮಣ್ಣು ನನಗೆ ಬಗ್ಗಲಿಲ್ಲ. ನನ್ನ ಕಾಳು ಬಹಳ ದಪ್ಪವೆಂದು ಕೆಲವು ನನ್ನನ್ನು ಇಷ್ಟಪಡಲಿಲ್ಲ. ಆದ್ದರಿಂದ ೧೯೬೯ರಲ್ಲಿ ಹೈದರಾಬಾದಿನಿಂದ ನನ್ನ ತಂಗಿ ಜಯಾಳನ್ನು ಮತ್ತು ೧೯೭೨ರಲ್ಲಿ ಪಿಲಿಪೈನ್ಸ್‌ನಿಂದ ನನ್ನ ತಮ್ಮ ಐ.ಆರ್. ೨೦ಯನ್ನು ಕರ್ನಾಟಕಕ್ಕೆ ಕರಿಸಿದ್ದಾಯಿತು. ನನ್ನ ತಂಗಿ ಜಯ ಎಲ್ಲಾ ಲಕ್ಷಣಗಳಲ್ಲಿಯೂ ನನ್ನನ್ನೇ ಹೋಲುತ್ತಿದ್ದು, ನನಗಿಂತಲೂ ಸ್ವಲ್ಪ ಹೆಚ್ಚು ಸಂತಾನ ಶಕ್ತಿ ಹೊಂದಿರುವುದರಿಂದ ನನ್ನ ಜಾಗವನ್ನೆಲ್ಲಾ ಇವಳೇ ಆಕ್ರಮಿಸಿಕೊಂಡು ಬಿಟ್ಟಳು. ಇಳುವರಿಯಲ್ಲಿ ಇವಳನ್ನು ಮೀರಿಸಬಲ್ಲವರಾರು ಈವರೆಗೆ ಹುಟ್ಟಿಲ್ಲ. ಇವಳು ಇಂದು ಕರ್ನಾಟಕದಲ್ಲೂ ೧,೩೬,೫೦೦ ಹೆಕ್ಟೇರು ಪ್ರದೇಶದಲ್ಲಿ ವಿಜೃಂಭಿಸುತ್ತಿದ್ದಾಳೆ.

ನನ್ನ ತಮ್ಮ ಐ.ಆರ್. ೨೦ ನನಗಿಂತಲೂ ಸಣ್ಣ ಕಾಳುಳ್ಳ ಹತ್ತು ದಿವಸ ಮುಂಚೆ ಪ್ರಾಪ್ತ ವಯಸ್ಸಿಗೆ ಬರುವ ಹಾಗೂ ವಾತಾವರಣಕ್ಕೆ ಒಗ್ಗುವ ಗುಣ ಹೊಂದಿರುವುದರಿಂದ ಈಗ ಕರ್ನಾಟಕದಲ್ಲಿ ೮೮,೨೨೦ ಹೆಕ್ಟೇರು ಪ್ರದೇಶವನ್ನು ಆಕ್ರಮಿಸಿಕೊಂಡಿದ್ದಾನೆ.

ಮಧು, ವಿ.ಸಿ. ಫಾರಂನಲ್ಲಿ ಹುಟ್ಟಿದ ನನ್ನ ಎರಡನೇ ತಂಗಿ. ೧೯೭೨ರಲ್ಲಿ ರಾಜ್ಯದ ಮನ್ನಣೆ ಪಡೆದಳು. ಇವಳು ಕೇವಲ ನಾಲ್ಕು ತಿಂಗಳಲ್ಲಿ ತುಂಬಿ ಬೆಳೆದು ಮನೆ ಸೇರುತ್ತಾಳೆ. ಅಣ್ಣ ಮಧುರ. ಆದ್ದರಿಂದ ಬೇಸಿಗೆಗೆ ಅಂದರೆ ನೀರು ಸಾಲದಿರುವಾಗ ಅಥವಾ ಹಿಂಗಾರ ತಡವಾದಾಗ ಇವಳು ನಿಮ್ಮ ಸಹಾಯಕ್ಕೆ ಬರುತ್ತಾಳೆ. ವಿಶಾಲ ಮನಸ್ಸಿನ ಇವಳು ಹೊಸಬರಿಗೆ ಅವಕಾಶ ಕೊಟ್ಟು ಹಿಂಜರಿಯುತ್ತಾಳೆ. ಇವಳು ಈಗಲೂ ಪ್ರತಿ ವರ್ಷ ೩೨,೦೦೦ ಹೆಕ್ಟೇರಿನಲ್ಲಿ ಕಾಣಿಸಿಕೊಳ್ಳುತ್ತಾಳೆ.

ರಾಸಿ ನನ್ನ ಕೊನೆಯ ತಮ್ಮ. ಇವನು ಸ್ವಲ್ಪ ಮಟ್ಟಿಗೆ ಗದ್ದೆಯಲ್ಲಿ ನೀರು ಅಥವಾ ರಂಜಕದ ಅಂಶ ಕಡಿಮೆಯಾದರೂ ಬಗ್ಗದೆ ಹುಲುಸಾಗಿ ಬೆಳೆದು, ೨೧೦ ದಿವಸಕ್ಕೆ ಮನೆ ಸೇರುತ್ತಾನೆ.

ನನ್ನ ಮಕ್ಕಳು:

೧೯೭೫ರಲ್ಲೇ ಹೈದರಾಬಾದಿನಿಂದ ಬಂದ ನನ್ನ ಮೂರನೇ ತಂಗಿ ಸೋನಾ. ಜನಪ್ರಿಯವಾಗುವಷ್ಟರಲ್ಲೇ ನನ್ನ ಮಕ್ಕಳ ಪೈಪೋಟಿ ಶುರುವಾಯಿತು. ಅಲ್ಲದೆ ಸೋನಾಳ ಕಾಳು ಭದ್ರವಾಗಿ ತೆನೆಗೆ ಕಚ್ಚಿದ್ದು ಬಿಡಿಸುವುದೇ ಕಷ್ಟವಾಗಿತ್ತು. ಇವಳು ೩-೪ ವರ್ಷಗಳ ಸೇವೆ ಸಲ್ಲಿಸಿ ಇತರರಿಗೆ ಜಾಗ ಕೊಟ್ಟಳು. ನನ್ನ ಅವಳಿ-ಜವಳಿ ಮಕ್ಕಳು ಪ್ರಕಾಶ ಮತ್ತು ವಾಣಿ ಕ್ರಮವಾಗಿ ಹೈದರಾಬಾದ್ ಮತ್ತು ಕಟಕ್‌ನಲ್ಲಿ ಹುಟ್ಟಿ ಏಕಕಾಲದಲ್ಲಿ ಕರ್ನಾಟಕಕ್ಕೆ ಕಾಲಿಟ್ಟರು. ನನ್ನ ಎಲ್ಲಾ ಗುಣಗಳ ಜೊತೆಗೆ ನನಗಿಂತಲೂ ಉತ್ತಮ ಕಾಳು ಹೊಂದಿದ್ದು, ಸ್ವಲ್ಪ ಗಟ್ಟಿಮುಟ್ಟಾಗಿರುವ ಇವರು ಈಗ ಜನಪ್ರಿಯವಾಗಿದ್ದಾರೆ. ಇವರಿಬ್ಬರೂ ಸೇರಿ ೬೯,೫೦೦ ಹೆಕ್ಟೇರು ಪ್ರದೇಶವನ್ನು ಆಕ್ರಮಿಸಿಕೊಂಡಿದ್ದಾರೆ.

ಕೆಂಪು ಅನ್ನಪೂರ್ಣ ನನ್ನ ಎರಡನೆಯ ಮಗಳು. ಕೇರಳ ರಾಜ್ಯದ ಪಟ್ಟಾಂಬಿಯಲ್ಲಿ ಹುಟ್ಟಿದಳು. ಹೆಸರಿಗೆ ತಕ್ಕಂತೆ ಕೆಂಪು ಅಕ್ಕಿ ಹೊಂದಿರುವಳು. ಬೇಗ ಮನೆಗೆ ಸೇರುವ ಇವಳು ಕರಾವಳಿ ಜನರಿಗೆ ಬಹಳ ಪ್ರಿಯ. ಆದರೆ ಕರಾವಳಿಯಲ್ಲಿ ಪ್ರಥಮ ಬೆಳೆಗೆ ಬೀಳುವ ಕಣಿ ಹುಳುವಿಗೆ ಇವಳು ಬೇಗ ಸೊರಗುತ್ತಾಳೆ. ಅಂಥ ಸಂದರ್ಭದಲ್ಲಿ (ಕರಾವಳಿ ಪ್ರಥಮ ಬೆಳೆ) ಯಶಸ್ವಿಯಾಗಿ ಎದುರಿಸಲು ಅವಳು ತನ್ನ ಅಣ್ಣಂದಿರಿಗೆ ಮೀಸಲಿಡುತ್ತಾಳೆ.

ಇನ್ನು ನನ್ನ ೪ ಗಂಡು ಮಕ್ಕಳ ಬಗ್ಗೆ ಹೇಳದಿದ್ದರೆ ಅವರಿಗೆ ಕೋಪ ಬಂದಿತು. ವಿಕ್ರಮ ನನ್ನ ಪ್ರಥಮ ಪುತ್ರ. ಜಿ.ಎಂ.ಆರ್. ಎಂಬ ಹೆಸರಿನಲ್ಲಿ ಹತ್ತು ವರ್ಷಗಳ ಹಿಂದೆ ಕರ್ನಾಟಕಕ್ಕೆ ಬಂದನು. ಪಾಲ್ಗುಣ ಮತ್ತು ಶಕ್ತಿ ನಾಲ್ಕೈದು ವರ್ಷಗಳ ನಂತರ ಬಂದು ಸೇರಿದರು. ಇವರು ಇದ್ದಲ್ಲಿಗೆ ಅಂದರೆ ಕರಾವಳಿ ಪ್ರಥಮ ಬೆಳೆಗೆ ಕಣಿ ಹುಳು ಹತ್ತಿರ ಸೇರುವುದಿಲ್ಲ. ಇವುಗಳ ಪೈಕಿ ಮೊದಲು ವಿಕ್ರಮ ಸ್ವಲ್ಪ ಹೆಚ್ಚು ಜನಪ್ರಿಯವಾಗಿದ್ದು, ಇತ್ತೀಚಿಗೆ ಆ ಅವಕಾಶವನ್ನು ಪಾಲ್ಗುಣನಿಗೆ ಬಿಟ್ಟು ಕೊಟ್ಟಿದ್ದಾನೆ. ಸ್ವಲ್ಪ ಎತ್ತರ ಬೆಳೆಯುವುದು ಹಾಗೂ ನೆರೆಯನು ಸಹಿಸಬಲ್ಲ ಗುಣಗಳು ಇವರ ಜನಪ್ರಿಯತೆಗೆ ಕಾರಣವೆನ್ನಬಹುದು. ಜಿ.ಎಂ.ಆರ್. ೧೭ ನನ್ನ ಕೊನೆಯ ಮಗ. ಸದ್ಯಕ್ಕೆ ಇವನೂ ಸಹ ಕಣಿಗೆ ಅಂಜುವುದಿಲ್ಲ ಮತ್ತು ಬೇಗ ಅಂದರೆ ಕರಾವಳಿ ಬೆಟ್ಟ ಪ್ರದೇಶದಲ್ಲಿ ಬೇಗ ಬೆಳೆದು ಬರಕೆ ಸಿಗದೆ ಸುರಕ್ಷಿತವಾಗಿ ಮನೆ ಸೇರುತ್ತಾನೆ.

ಸೊಸೆಯರ ಪರಿಚಯ:

ವಿ.ಸಿ. ಫಾರಂಗೆ ತನ್ನ ತಂಗಿ ಜಯಾಳಿಗೆ ಮೂವರು ಹೆಣ್ಣು ಮಕ್ಕಳು. ಪುಷ್ಪ, ಮಂಗಳ, ಪ್ರಗತಿ. ಪುಷ್ಪ ನಮ್ಮೆಲ್ಲರಿಗಿಂತ ತೆಳ್ಳಗೆ ಬೆಳ್ಳಗೆ ಎತ್ತರವಾಗಿದ್ದಾಳೆ. ಅನ್ನ ಮಧುರ. ೧೩೦ ದಿವಸಗಳಲ್ಲಿ ಪ್ರಾಪ್ತ ವಯಸ್ಸಿಗೆ ಬರುತ್ತಾಳೆ. ಈ ಗುಣಗಳನ್ನು ಪಡೆಯಲೆಂದೇ ನನ್ನ ತಂಗಿ ಜಯಳನ್ನು ಬೆಂಗಳೂರಿನ ಬಂಗಾರೀಗನಿಗೆ ಕೊಟ್ಟು ಹೋದವರೆಲ್ಲಾ ಇವಳನ್ನೇ ಹುಡುಕುತ್ತಾರೆ. ೧೯೭೬ರಲ್ಲಿ ರಾಜ್ಯದ ಮನ್ನಣೆ ಪಡೆದ ಇವಳು ಈಗ ೧೫೦೦೦ ಹೆಕ್ಟೇರು ಪ್ರದೇಶದಲ್ಲಿ ರಾರಾಜಿಸುತ್ತಾಳೆ.

ಮಂಗಳ ಬಹಳ ಚುರುಕು. ಬಹಳ ಬಿರುಸಿನಿಂದ ಬೆಳೆದು ಕೇವಲ ೧೧೦ ದಿನಗಳಿಗೆ ಪ್ರಾಪ್ತ ವಯಸ್ಕಳಾಗುತ್ತಾಳೆ. ಮಧುವನ್ನೂ ಸಹ ಹಿಂದೆ ಹಾಕಿ ಬೇಗ ಮನೆಗೆ ಸೇರುತ್ತಾಳೆ. ಅಲ್ಲದೆ ಚಳಿ ಮತ್ತು ಚೌಳಿಗೆ ಅಷ್ಟಾಗಿ ಅಂಜಳು. ಇವಳು ಬಹು ಬೆಳೆ ಯೋಜನೆಗೆ ಚೆನ್ನಾಗಿ ಹೊಂದಿಕೊಳ್ಳುತ್ತಾಳೆ. ಮಲೆನಾಡು, ಬೇಸಿಗೆಕಾಲ ಇವಳಿಗೆ ಬಹಳ ಹಿತ. ಈಗ ಇವಳು ೫೮೦೦೦ ಹೆಕ್ಟೇರು ಪ್ರದೇಶವನ್ನು ತನ್ನದಾಗಿಸಿಕೊಂಡಿದ್ದಾಳೆ.

ಪ್ರಗತಿ ೧೩೦ ದಿವಸಕ್ಕೆ ಪ್ರಾಪ್ತ. ವಯಸ್ಸಿಗೆ ಬರುವಳು, ನನ್ನ ತಂಗಿಯರು. ಇತರ ಮಕ್ಕಳು ಮತ್ತು ಸ್ನೇಹಿತರನ್ನು ಬಲಿ ತೆಗೆದುಕೊಳ್ಳುತ್ತಿದ್ದ ಚೌಳು ಮತ್ತು ಕ್ಷಾರ ಮಣ್ಣುಗಳಿಗೆ ಇವಳ ಮೇಲೆ ದ್ವೇಷವಿಲ್ಲ. ಇವಳು ಕಳೆದ ವರ್ಷ ೧೯೮೧ ಅಖಿಲ ಭಾರತ ದೋಷ ಮಣ್ಣುಗಳಲ್ಲಿ ನಡೆಸಿದ ಪರೀಕ್ಷೆಯಲ್ಲಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣಳಾದಳು. ಈಗೀಗ ಹೊಸ ಹೊಸ ಪ್ರದೇಶವನ್ನು ಆಕ್ರಮಿಸಿಕೊಳ್ಳಲು ಅನುವಾಗಿದ್ದಾಳೆ. ಇವಳಿಗೆ ಉಜ್ವಲ ಭವಿಷ್ಯವಿದೆ. ಇದು ನನಗೆ ಹೆಮ್ಮೆಯ ವಿಷಯ.

ಸ್ನೇಹಿತರ ಪರಿಚಯ:

ಇನ್ನು ನನ್ನ ಆಪ್ತ ಗೆಳೆಯ ಇಂಟಾನ್‌ನ ವಿಷಯ. ಇವನು ಇಂಡೋನೆಷಿಯಾದಲ್ಲಿ ಹುಟ್ಟಿ ಬೆಳೆದು ಕೊಡಗಿನ ಪೊನ್ನಂಪೇಟೆಯಲ್ಲಿ ಮರು ಸುಧಾರಣೆಗೊಂಡು ೧೯೭೫ರಲ್ಲಿ ಕರ್ನಾಟಕ ಮನ್ನಣೆ ಪಡೆದನು. ಇವನು ನನ್ನ ತಂಗಿ, ಮಕ್ಕಳು ಮತ್ತು ಸೊಸೆಯರೆಲ್ಲರಿಗಿಂತಲೂ ಎತ್ತರ. ಬೆಂಕಿರೋಗ, ಬರುವೆಡೆಗೆ ನನ್ನ ಕುಟುಂಬದವರನ್ನು ಇವನು ಹೋಗ ಗೋಡುವುದಿಲ್ಲ. ಏಕೆಂದರೆ ಅವರಾರಿಗೂ ಇವನಷ್ಟು ಬೆಂಕಿರೋಗ ತಡೆದುಕೊಳ್ಳುವ ಸಾಮರ್ಥ್ಯವಿಲ್ಲ. ಇವನ ಕಾಳು ಪುರಿ ಮಾಡಲು ಯೋಗ್ಯ. ಆದ್ದರಿಂದ ಜನಪ್ರಿಯ. ಇವನ ಮೈ ಮೇಲೆ ಮತ್ತು ಕಾಳಿನ ತುದಿಯಲ್ಲಿರುವ ನೇರಳೆ ಬಣ್ಣದಿಂದ ಇವನನ್ನು ಸುಲಭವಾಗಿ ಗುರುತಿಸಬಹುದು. ಅವನು ನಿಜವಾಗಿ ಗಟ್ಟಿಯಾಗಿದ್ದರೂ ಸಹ ಅತಿ ಸಣ್ಣ ಉಪದ್ರವಕ್ಕೂ ಸೂಕ್ಷ್ಮ ಪ್ರತಿಕ್ರಿಯೆ ಲಕ್ಷಣಗಳನ್ನು ತೋರಿಸಿ, ಜನರನ್ನು ಗಾಬರಿಗೊಳಿಸುತ್ತಾನೆ. ಯಾವುದೇ ಅಹಿತ ವಾತಾವರಣ ಒದಗಿದರೆ ತಕ್ಷಣ ನೇರಳೆ ಬಣ್ಣಕ್ಕೆ ತಿರುಗಿಬಿಡುತ್ತಾನೆ. ಇವನು ಮಲೆನಾಡಿಗೆ ಚೆನ್ನಾಗಿ ಒಗ್ಗಿಕೊಂಡಿದ್ದಾನೆ. ೧೬೫ ದಿವಸದಲ್ಲಿ ಪ್ರಾಪ್ತ ವಯಸ್ಸಿಗೆ ಬರುವ ಇವನು ಕೂಳೆ ಬೆಳೆ ಕೊಡಲು ಶಕ್ತ. ಮೊದಲನೆಯ ಬೆಳೆಯನ್ನು ಬುಡಕ್ಕೆ ಕತ್ತರಿಸಿ, ನೀರು ಮತ್ತು ಗೊಬ್ಬರ ಕೊಟ್ಟರೆ ಮತ್ತೆ ಬೇಸಿಗೆಯಲ್ಲಿ ಒಂದು ಬೆಳೆ ಕೊಡಬಲ್ಲ. ಇವನು ಹೆಚ್ಚು ಗೊಬ್ಬರ ಹಾಕುವ ಶಕ್ತಿ ಇಲ್ಲದವರಿಗೂ ಅಂದರೆ ಸಣ್ಣ ಮತ್ತು ಅತಿ ಸಣ್ಣ ರೈತರ ಬೇಸಾಯದಲ್ಲೂ ಉತ್ತಮ ಇಳುವರಿ ನೀಡಿ ತೃಪ್ತಿಪಡಿಸಬಲ್ಲ. ಇವನಿಗೆ ಬೇಸಿಗೆ ಒಗ್ಗದು. ಈ ಗುಣಗಳಿಂದ ಇವನು ಈಗ ಸುಮಾರು ೧,೦೩,೭೦೦ ಹೆಕ್ಟೇರು ಪ್ರದೇಶವನ್ನು ಆಕ್ರಮಿಸಿ ಕೊಂಡಿದ್ದಾನೆ.

ನಾಳಿನ ಪೀಳಿಗೆ:

ಇನ್ನು ನನಗೆ ಹಾಗೂ ನನ್ನ ಸ್ನೇಹಿತರಿಗೆ ಮೊಮ್ಮಕ್ಕಳು ಮರಿಮಕ್ಕಳು ಬರುವವರಿದ್ದಾರೆ. ದುಬಾರಿ ಬೆಲೆಯ ಕೃಷಿ ಸಾಮಗ್ರಿಗಳನ್ನು ಪೂರೈಸುವುದು ಕಷ್ಟವಾದ್ದರಿಂದ ಕಡಿಮೆ ಸಾಮಗ್ರಿಗಳಲ್ಲೇ ತೃಪ್ತಿಪಟ್ಟುಕೊಳ್ಳುವ ಶಕ್ತಿ ಇರುವವರು (ಇಂಟಾನ್ ಮ್ಯೂಟೆಂಟ್‌ಗಳು) ಎಷ್ಟೇ ಚಳಿ ಇದ್ದರೂ ಅಂಜದವನೊಬ್ಬನು (ಸಿ.ಟಿ. ೧೩೫೧) ಹೆಬ್ಬಾಳಿನಲ್ಲಿ ಬೆಳೆಯುತ್ತಿದ್ದಾನೆ. ನನ್ನ ಸ್ನೇಹಿತಿ ಗೌರಿಗೆ ರೋಗ ಬರುವುದೆಂದು ಅವಳಿಗೆ ಇನ್ನು ರಾಜ್ಯದ ಮನ್ನಣೆ ಸಿಕ್ಕಿಲ್ಲ. ಅದಕ್ಕೇ ಅವಳಿಗೂ ಇಂಟಾನ್‌ನಿಗೂ ಮದುವೆಯಾಯಿತು. ಗೌರಿಯ ಉತ್ತಮ ಕಾಳಿನ ಗುಣ ಹಾಗೂ ಇಂಟಾನಿನ ರೋಗ ನಿರೋಧಕ ಶಕ್ತಿ ಈ ಎರಡು ಗುಣಗಳೂ ಮಕ್ಕಳಿಗಿರುವುದು ನಿಮಗೆ ಆಶಾದಾಯಕವಾಗಿದೆ ಎಂದು ನಾನು ಅಂದುಕೊಂಡಿದ್ದೇನೆ.

ನಮ್ಮ ಪೋಷಣೆ:

ಕರ್ನಾಟಕದ ಮೂಲೆಮೂಲೆಯಲ್ಲಿಯೂ ನಾವು ಯಾರಾದರೂ ಇದ್ದೇ ಇರುತ್ತೇವೆ. ಆದರೆ ಬಹಳಷ್ಟು ಮಂದಿ ರೈತರು ನಮ್ಮನ್ನು ಸಂಪೂರ್ಣವಾಗಿ ಅರ್ಥಮಾಡಿಕೊಂಡಿಲ್ಲ. ನಮ್ಮನ್ನು ನಿರ್ಲಕ್ಷ್ಯದಿಂದ ಕಂಡು ನಷ್ಟ ಹೊಂದುತ್ತಾರೆ. ಇದಕ್ಕೆ ನಾವು ಹೊಣೆಯಲ್ಲ. ನಮ್ಮಿಂದ ಪೂರ್ತಿ ಲಾಭ ಪಡೆಯಲು ಇಷ್ಟವಿದ್ದರೆ ನಾವು ಹೇಳುವುದನ್ನು ಕೇಳಿ, ನಮ್ಮಲ್ಲಿ ೧೪೫ಕ್ಕೂ ಹೆಚ್ಚು ದಿನಗಳಲ್ಲಿ ಪ್ರಾಪ್ತ ವಯಸ್ಸಿಗೆ ಬರುವವರನ್ನು (ಪ್ರಕಾಶ, ವಾಣಿ, ಜಯ, ಐ.ಆರ್. ೨೦, ಇಂಟಾನ್) ದಕ್ಷಿಣ ಕರ್ನಾಟಕದಲ್ಲಿ ಜುಲೈ ತಿಂಗಳಲ್ಲಿ ಮಳೆಗಾಲದಲ್ಲಿ ನಾಟಿ ಮುಗಿಸಿರಬೇಕು. ಮಂಗಳಾಳನ್ನು ಮಾತ್ರ ಸೆಪ್ಟೆಂಬರ್ ಮೊದಲನೇ ವಾರದವರೆಗೂ ನೆಡಬಹುದು. ಇದನ್ನು ಮೀರಿ ನಾಟಿ ಮಾಡಿದರೆ, ಅವರು ಹೂ ಬಿಡುವಾಗ ಅತಿಯಾದ ಚಳಿಗೆ ತುತ್ತಾಗಿ ಕಂಗಾಲಾಗುತ್ತಾರೆ. ಬೇಸಿಗೆಯಲ್ಲಿ ನಾಟಿಯನ್ನು ಫೆಬ್ರವರಿ ತಿಂಗಳಲ್ಲಿ ಮುಗಿಸಿದರೆ ನಮಗೆ ಬಹಳ ಹಿತ. ನಮ್ಮನ್ನು ಬಹಳ ಆಳವಾಗಿ ನಾಟಿ ಮಾಡಬಾರದು. ತಾಕುಗಳಲ್ಲಿ ನಮ್ಮ ಸಂಖ್ಯೆ ನಿರ್ದಿಷ್ಟವಾಗಿರಬೇಕು. ಮಧು, ಮಂಗಳ, ಪುಷ್ಪ, ರಾಶಿ ಚದರ ಮೀಟರಿಗೆ ಸುಮಾರು ೬೫. ಇತರರು ಚ. ಮೀ. ೫೦. ಕೆಲವು ರೈತರು ಆಗಾರವನ್ನು ನಿಗದಿ ಮಾಡಿದ ಪ್ರಮಾಣಕ್ಕಿಂತ ಕಡಿಮೆ ಹಾಕಿ ನಮ್ಮನ್ನು ಕೊರಗಿಸುತ್ತಾರೆ. ಇನ್ನೂ ಕೆಲವರು ನಮಗೆ ಅಜೀರ್ಣ ಮಾಡಿಬಿಡುತ್ತಾರೆ. ಇವರಿಬ್ಬರಿಗೂ ನಷ್ಟ. ಆದ್ದರಿಂದ ಮಣ್ಣು ಪರೀಕ್ಷೆ ಆಧಾರದ ಮೇಲೆ ನಮಗೆ ಗೊಬ್ಬರ ಒದಗಿಸಿದರೆ ನಮಗೆ ಹಿತ, ನಿಮಗೆ ಲಾಭ.

ಕಳೆಗಳ  ಉಪದ್ರವವಂತೂ ನಮಗೆ  ತಪ್ಪಿದ್ದಲ್ಲ. ಅವು ನನಗೆ ದಾಯಾದಿಯಂತೆ. ನಮ್ಮಿಬ್ಬರ ಪೈಪೋಟಿಯಲ್ಲಿ ಸಾಮಾನ್ಯವಾಗಿ ನಾವೇಕ್ಷೀಣಿಸಿ ಹೋಗುತ್ತೇವೆ. ಆದ್ದರಿಂದ ಕಳೆಬಾರದ ಹಾಗೆ ನೋಡಿಕೊಳ್ಳುವುದು ನಿಮ್ಮ ಜವಾಬ್ದಾರಿ. ನಮ್ಮ ಪುಷ್ಕಳ ಬೆಳವಣಿಗೆಯನ್ನು ನೋಡಿ ರೋಗ ಕೀಟ ಮುಂತಾದವುಗಳನ್ನು ನಮ್ಮನ್ನು ತಿನ್ನಲು ಆಗಾಗ್ಗೆ ಧಾಳಿ ಮಾಡುತ್ತವೆ. ಆ ಧಾಳಿಯ ಕರುಹು ಸಿಕ್ಕಾಗಲೇ ಔಷಧಿ ಸಿಂಪಡಿಸಿ ನಮ್ಮನ್ನು ರಕ್ಷಿಸುವುದು ನಿಮ್ಮ  ಜವಾಬ್ದಾರಿ.

ನಮ್ಮ ಬಗ್ಗೆ ಇನ್ನೂ ಹೆಚ್ಚಿನ ವಿಷಯ ತಿಳಿಯಲು ಆಸಕ್ತಿ ಇರುವವನು ನಾವಿರುವಲ್ಲಿಗೆ ಬನ್ನಿ. ನಮ್ಮನ್ನು ಸಂದರ್ಶಿಸಬೇಕೆ? ಹಾಗಿದ್ದರೆ ನೋಡಿ, ನಮ್ಮ ಬಿಡಾರವಿರುವ ಊರುಗಳಲ್ಲಿ ನಿಮಗೆ ಯಾವುದು ಹತ್ತಿರ. ವಿ.ಸಿ. ಫಾರಂ, ಹೆಬ್ಬಾಳ, ಮಂಗಳೂರು, ಪೊನ್ನಂಪೇಟೆ, ಬ್ರಹ್ಮಾವರ, ಮಡಿಕೇರಿ, ಮೂಡಿಗೆರೆ, ಸಿರಸಿ, ಅಂಕೋಲ ಮುಗದ, ಗಂಗಾವತಿ, ಹೊನ್ನವಿಲೆ, ಸಿರಗುಪ್ಪ, ಹಿರಿಯೂರು. ನೀವು ಬಂದಿರಾದರೆ ಮಾಹಿತಿ ಸಂಗ್ರಹಿಸುವುದು ಮತ್ತು ನಮ್ಮನ್ನು ನೋಡುವುದು ಮಾತ್ರವಲ್ಲ. ಶುದ್ಧವಾದ ಬೀಜವನ್ನು ಕೊಂಡೊಯ್ಯಬಹುದು. ಅಂದರೆ ನಮ್ಮನ್ನು ನಿಮ್ಮ ಗದ್ದೆಗಳಲ್ಲೇ ಬೆಳೆದು ನೋಡಬಹುದು. ಬರಲಿರುವ ಋತುವಿನಲ್ಲಿ ನಿಮ್ಮ ಕಣ್ಣಿಗೆ ಹಬ್ಬ ಉಂಟುಮಾಡಲು ಮತ್ತು ನೀವು ಮಾಡಿದ ಖರ್ಚಿಗೆ ಹೆಚ್ಚು ಪ್ರತಿಫಲ ದೊರಕುವಂತೆ ಮಾಡಲು ನಮ್ಮ ಸಹಕಾರ ನಿಮಗೆ ಮೀಸಲು. ನಮಸ್ಕಾರಗಳು.