ದಿನೇ ದಿನೇ ಮಿತಿಯಿಲ್ಲದೆ ಬೆಳೆಯುತ್ತಿರುವ ವಿಶ್ವದ ಜನಸಂಖ್ಯೆಯ ಆಹಾರದ ಬೇಡಿಕೆಯನ್ನು ಪೂರೈಸಲು ಕೆಲವೇ ದಶಕಗಳಲ್ಲಿ ಆಹಾರ ಧಾನ್ಯಗಳ ಉತ್ಪಾದನೆಯು ಇಮ್ಮಡಿಯಾಗಲೇ ಬೇಕಾಗಿದೆ. ಪ್ರಪಂಚದ ಆಹಾರ ಧಾನ್ಯಗಳಲ್ಲಿ ಅದರಲ್ಲೂ ಏಷ್ಯಾ ಖಂಡದಲ್ಲಿ ಅತ್ಯಂತ ಪ್ರಮುಖವಾದುದೆಂದರೆ ಬತ್ತ. ವಿಶ್ವದಲ್ಲಿ ಬತ್ತ ಬೆಳೆಯಲ್ಪಡುತ್ತಿರುವ ಒಟ್ಟು ವಿಸ್ತೀರ್ಣದ ಸುಮಾರು ೧/೩ ಭಾಗ ಭಾರತದಲ್ಲೇ ಇರುವುದು ಗಮನಾರ್ಹ. ಆದ್ದರಿಂದ ಬತ್ತದ ಉತ್ಪಾದನೆಯಲ್ಲಿ ಭಾರತದ ಪಾತ್ರ ಮಹತ್ವದ್ದಾಗಿದೆ. ಕಳೆದ ಒಂದೆರಡು ದಶಕಗಳಲ್ಲಿ ಭಾರತವು ಬತ್ತದ ಉತ್ಪಾದನೆಯಲ್ಲಿ ಸಾಧಿಸಿರುವ ಪ್ರಗತಿ ಪ್ರಶಂಸನೀಯ. ೧೯೫೭ನೇ ಸಾಲಿಗೆ ಹೋಲಿಸಿದರೆ ಈಗಾಗಲೇ ಬತ್ತದ ಉತ್ಪಾದನೆಯು ಶೇ. ೮೬ರಷ್ಟು ಏರಿರುವುದು ಸತ್ಯ ಸಂಗತಿ. ಸದ್ಯದ ವರ್ಷಗಳಲ್ಲಿಯೂ ಉತ್ಪಾದನೆ ಏರುತ್ತಿದೆ. ಇದು ಸ್ವಾಗತಾರ್ಹ. ಆದರೆ ಶೀಘ್ರದಲ್ಲೇ ಉತ್ಪಾದನೆಯು ಇನ್ನು ಸ್ವಲ್ಪ ಏರಿದ ನಂತರ, ಉತ್ಪಾದನಾ ಮಟ್ಟವು ಸ್ಥಗಿತಗೊಳ್ಳಬಹುದೆಂಬ ಶಂಕೆ ಅನೇಕರಲ್ಲಿ ಉದ್ಭವಿಸಿದೆ. ಹೊಸ ಹೊಸ ಮಾರ್ಗಗಳನ್ನು ಹುಡುಕಿ ಉತ್ಪಾದನೆಯನ್ನು ಹೆಚ್ಚುತ್ತಲೇ ಇರುವಂತೆ ಹೊಸ ಯೋಜನೆಗಳನ್ನು ಆಗಾಗ್ಗೆ ರೂಪಿಸದಿದ್ದಲ್ಲಿ ಇದು ಅಸಂಭವೇನೆಲ್ಲ. ಉತ್ಪಾದನೆಗೆ ನೆರವಾಗುವ ಅಂತಹ ಹೊಸ ಯೋಜನೆಗಳು ಯಾವುವು? ಎಂಬುದರ ಬಗ್ಗೆ ಈ ಲೇಖನದಲ್ಲಿ ಉಲ್ಲೇಖವಿದೆ. ತಳಿ ಅನುಸಂಧಾನದ ಬಗ್ಗೆ ಹೆಚ್ಚು ವಿವರ ನೀಡಲಾಗಿದೆ.

ಈವರೆಗೆ ಉತ್ಪಾದನೆಯನ್ನು ಹೆಚ್ಚು ಮಾಡುವುದರಲ್ಲಿ ಅನೇಕ ಯೋಜನೆಗಳು ಅಧಿಕ ಇಳುವರಿ ತಳಿಗಳ ಬಳಕೆ, ಸುಧಾರಿತ ಬೇಸಾಯ ಕ್ರಮದ ಅನುಕರಣೆ, ಸಕಾಲ ಸಸ್ಯ ಸಂರಕ್ಷಣಾ ಕ್ರಮ ಮುಂತಾದವು ಮಹತ್ವದ ಪಾತ್ರವನ್ನು ವಹಿಸಿವೆ ಮತ್ತು ಇನ್ನು ಮುಂದೆಯೂ ವಹಿಸುತ್ತದೆ. ಈ ವಿಷಯಗಳು ಅನೇಕ ಕಡೆ ಚರ್ಚಿಸಲ್ಪಟ್ಟಿವೆ ಮತ್ತು ಅವುಗಳ ಬಗ್ಗೆ ಅನೇಕ ಕಡೆ ಮಾಹಿತಿ ದೊರೆಯುತ್ತದೆ. ಆದ್ದರಿಂದ ಈ ಲೇಖನದಲ್ಲಿ ಉದ್ದೇಶ ಪೂರ್ವಕವಾಗಿಯೇ ಈ ವಿಷಯಗಳ ಬಗ್ಗೆ ಪ್ರಸ್ತಾಪಿಸುತ್ತಿಲ್ಲ. ಬದಲಾಗಿ ಹೊಸ ಯೋಜನೆಗಳು ಅಥವಾ ಜಾರಿಯಲ್ಲಿರುವ ಯೋಜನೆಗಳನ್ನು ಮಾರ್ಪಡಿಸಬೇಕಾದ ಸೂಕ್ತ ಸಲಹೆಗಳನ್ನು ನೀಡುವ ಪ್ರಯತ್ನ ಮಾಡಲಾಗಿದೆ.

ಕ್ಷೇತ್ರ ವಿಸ್ತರಣೆ:

ಕಳೆದ ದಶಕಗಳಲ್ಲಿ ಬತ್ತದ ಉತ್ಪಾದನೆಯನ್ನು ಹೆಚ್ಚಿಸುವುದರಲ್ಲಿ ಕ್ಷೇತ್ರ ವಿಸ್ತರಣೆಯೂ ಒಂದು ಮುಖ್ಯವಾದ ಅಂಶವಾಗಿತ್ತು. ಈ ಕೆಳಗೆ ಪಟ್ಟಿ ೧ ರಲ್ಲಿ ತೋರಿಸಿರುವಂತೆ ಬತ್ತ ಬೆಳೆಯುವ ಕ್ಷೇತ್ರವು ೨೦ ವರ್ಷಗಳಲ್ಲಿ ಶೇ. ೨೫ರಷ್ಟು ಏರಿತ್ತು. ಹೀಗೆ ಕ್ಷೇತ್ರವನ್ನು ವಿಸ್ತರಿಸಲು ಫಲವತ್ತಾದ ಆದರೆ ಬಂಜರು ಬಿದ್ದಿದ್ದ ಭೂಮಿಯನ್ನೆಲ್ಲಾ ಈಗಾಗಲೇ ಸಾಗುವಳಿಗೆ ತರಲಾಗಿದೆ. ಅಲ್ಲದೆ ಈಗಾಗಲೇ ಮಿತಿಮೀರಿ ಅರಣ್ಯ ಪ್ರದೇಶವನ್ನು ಕಡಿದು ಕೃಷಿ ಮಾಡಲಾಗುತ್ತಿದೆ. ಆದ್ದರಿಂದ ಕ್ಷೇತ್ರ ವಿಸ್ತರಣೆಯು ಇನ್ನು ಮುಂದೆ ಸುಲಭವಲ್ಲ. ಬದಲಾಗಿ ಈವರೆಗೆ ಬತ್ತ ಬೆಳೆಯಲ್ಪಡುತ್ತಿರುವ ಕೆಲವು ಖುಷ್ಕಿ ಜಮೀನುಗಳಲ್ಲಿ (Uplands) ಈಗೀಗ ಸಿ-೪ ಬೆಳೆಗಳೆನಿಸಿದ ಮುಸುಕಿನ ಜೋಳ, ರಾಗಿ, ಶಕ್ತಿಮಾನ್ ಮುಂತಾದ ಬೆಳೆಗಳು ರೈತನಿಗೆ ಬತ್ತಕ್ಕಿಂತಲೂ ಹೆಚ್ಚು ಲಾಭದಾಯಕವೆನಿಸಿದೆ. ಆದ್ದರಿಂದ ಅಲ್ಲಲ್ಲಿ ಬತ್ತದ ಕ್ಷೇತ್ರವು ಕಡಿಮೆಯಾಗುವ ಸಾಧ್ಯತೆಯೂ ಇದೆ. ಆದರೆ ಅಲ್ಲಲ್ಲಿ ಹೊಸದಾಗಿ ನೀರಾವರಿ ಸೌಲಭ್ಯ ಹೆಚ್ಚುತ್ತಿರುವುದರಿಂದ ಕೆಲವು ಕಡೆ ಬತ್ತದ ವಿಸ್ತೀರ್ಣವು ಹೆಚ್ಚುತ್ತಿರುತ್ತದೆ. ಆದ್ದರಿಂದ ಬೆಳೆಯುವ ಒಟ್ಟು ಕ್ಷೇತ್ರವು ಒಂದೇ ಆದ್ದರಿಂದ ಬತ್ತ ಬೆಳೆಯುವ ಒಟ್ಟು ಕ್ಷೇತ್ರವು ಒಂದೇ ಮಟ್ಟದಲ್ಲಿರುವ ಸಾಧ್ಯತೆಯೂ ಇದೆ.

ಇಷ್ಟರಲ್ಲೇ ನಡೆಸಿರುವ ಮಣ್ಣಿನ ಮಾದರಿಯ ಸರ್ವೆ ಮತ್ತು ಮಣ್ಣನ್ನು ಸುಧಾರಿಸುವ (reclamation) ಹಾಗೂ ವಿವಿಧ ಮಣ್ಣುಗಳಿಗೆ ತಳಿಗಳನ್ನು ಅಳವಡಿಸುವ (breeding tolerant varieties) ಸಂಶೋಧನೆಯಿಂದ ಏಷ್ಯಾ ಖಂಡದಲ್ಲೇ ೧೦೦ ಮಿಲಿಯನ್ ಹೆಕ್ಟೇರಿಗೂ ಮೀರಿದಷ್ಟು ಬಂಜರು ಪ್ರದೇಶವು ಬೇರೆ ಎಲ್ಲಾ ರೀತಿಯಲ್ಲಿಯೂ ಬತ್ತದ ಬೆಳೆಗೆ ಸೂಕ್ತವೆನಿಸಿದೆ ಎಂದೂ, ಕೇವಲ ದೋಷಗಳಿಂದಾಗಿ (ಅತಿ ಹುಳಿ, ಅತಿ ಲವಣ, ಪೋಷಕಾಂಶಗಳ ಕೊರತೆ ಅಥವಾ ಖಾರ) ಬಂಜರಾಗಿಯೇ ಉಳಿದಿದೆ ಎಂದೂ ತಿಳಿದುಬಂದಿದೆ. ಇದರಲ್ಲಿ ಬಹಳ ಪಾಲು ಭಾರತದಲ್ಲಿರುವುದೆಂದೂ ಗೊತ್ತಾಗಿದೆ. ಈಗಾಗಲೇ ತಿಳಿದು ಬಂದಿರುವ ಆಧುನಿಕ ಮಣ್ಣು ಸುಧಾರಣಾ ಕ್ರಮಗಳಿಂದಲೂ ಮತ್ತು ಇದೀಗ ಸಂಶೋಧನೆಯ ಕೊನೆಯ ಹಂತದಲ್ಲಿರುವ ಮಣ್ಣಿನ ನ್ಯೂನತೆಗಳಿಗೂ ಹೊಂದಿಕೊಳ್ಳುವಂತಹ ತಳಿಗಳನ್ನು ಬಳಕೆಗೆ ತರುವುದರಿಂದಲೂ ಲಕ್ಷಾಂತರ ಹೆಕ್ಟೇರುಗಳನ್ನು ಬತ್ತದ ಸಾಗುವಳಿಗೆ ಅಳವಡಿಸಬಹುದೆಂದು ತಿಳಿದುಬಂದಿದೆ. ಬೇರೆ ಯಾವ ಬೆಳೆಯೂ ಬೆಳೆಯಲಾರದಂತಹ ಕೆಲವು (ಅತಿ ಹುಳಿ, ಉಪ್ಪನ್ನು ಹೊಂದಿರುವ ಮಣ್ಣುಗಳು, ಜೌಗು ನೆರೆ) ಸಂದರ್ಭಗಳಲ್ಲಿ ಬತ್ತವು ಬೆಳೆಯಬಲ್ಲುದು ಎಂಬುದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು. ಅಂತರ ರಾಷ್ಟ್ರೀಯ ಮತ್ತು ರಾಷ್ಟ್ರೀಯ ಸಂಶೋಧನಾ ಕೇಂದ್ರಗಳಲ್ಲಿ ಈ ಬಗ್ಗೆ ಹೆಚ್ಚು ಸಂಶೋಧನೆ ಕೈಗೊಳ್ಳಬೇಕಾಗಿದೆ.

ಪಟ್ಟಿ: ೧ ಕಳೆದ ೨೦ ವರ್ಷಗಳಲ್ಲಿ ಬತ್ತದ ವಿಸ್ತೀರ್ಣ, ಉತ್ಪಾದನೆ ಮತ್ತು ಇಳುವರಿ

ವರ್ಷ ವಿಸ್ತೀರ್ಣ
೧೦೦ ಹೆಕ್ಟೇರು
ಉತ್ಪಾದನೆ ೧೦೦ ಮೆ. ಟನ್ಗಳು ಇಳುವರಿ ಹೆಕ್ಟೇರಿಗೆ ಕ್ವಿಂಟಾಲ್
೧೯೭೫ ೩೨೨೯೮ ೩೯೯೨೩ ೧೨.೩೬
೧೯೭೫ ೩೯೬೮೮ ೭೪೨೬೦ ೧೮.೭೧
೧೯೭೬ ೨೮೬೦೬ ೬೪೨೪೫ ೧೬.೬೪
೧೯೭೭ ೨೯೮೦೦ ೭೪೩೨೪ ೧೮.೬೭

ಕೂಳೆ ಬೆಳೆ:

ಸುಮಾರು ೧೪ನೇ ಶತಮಾನದಿಂದಲೂ ಬತ್ತದ ರೈತರಿಗೆ ಪರಿಚಯವಿರುವ ಕೂಳೆ ಬೆಳೆಯು ಅಮೇರಿಕಾದಲ್ಲಿರುವ ಚಿಕ್ಸಾನ್ ರಾಜ್ಯವೊಂದನ್ನು ಬಿಟ್ಟರೆ ಬೇರೆಲ್ಲಿಯೂ ಜನಪ್ರಿಯವಾಗಿಲ್ಲ. ಕಳೆದ ೬೦ ವರ್ಷಗಳಿಂದಲೂ ಬಿಡಿ ಬಿಡಿಯಾಗಿ ಅಲ್ಲಲ್ಲಿ ನಡೆಸಿದ ಸಂಶೋಧನೆ ಮತ್ತು ರೈತರ ಅನುಭವ ಹಾಗೂ ಇದೀಗ ರಾಜ್ಯದ ಕೃಷಿ ವಿಶ್ವವಿದ್ಯಾನಿಲಯದಲ್ಲಿ ನಡೆಸಿದ ಸಂಶೋಧನೆಯಿಂದ ಕೆಲವು ಪ್ರದೇಶಗಳಲ್ಲಿ ಕೂಳೆ ಬೆಳೆಯು ಬಹಳ ಕಡಿಮೆ ಖರ್ಚು ಮತ್ತು ಅವಧಿಯಲ್ಲಿ ಪ್ರಥಮ ಬೆಳೆಯಷ್ಟೇ ಅಥವಾ ಕೆಲವು ಸಂದರ್ಭಗಳಲ್ಲಿ ಅದಕ್ಕಿಂತಲೂ ಲಾಭದಾಯಕವಾದ ಇಳುವರಿ ನೀಡಬಲ್ಲುದೆಂದು ತಿಳಿದುಬಂದಿದೆ. ಈವರೆಗೆ ನಡೆಸಿರುವ ಕೆಲವು ಪರಿಶೀಲನೆಯಿಂದ ಪ್ರತಿ ಒಂದು ಕ್ವಿಂಟಾಲ್ ಬತ್ತವನ್ನು ಉತ್ಪಾದಿಸಲು ಪ್ರಥಮ ಬೆಳೆಗಿಂತ ಕೂಳೆ ಬೆಳೆಯಲ್ಲಿ ಒಟ್ಟು ಕಡಿಮೆ ಖರ್ಚು ತಗುಲಿತ್ತು ಎಂಬುದನ್ನು ಇಲ್ಲಿ ಒತ್ತಿ ಹೇಳಬಹುದು. ಹೆಚ್ಚು ಕ್ರಯದಲ್ಲಿ ಸಾಮಾಗ್ರಿಗಳನ್ನು (inputs) ಕೊಂಡು ಬತ್ತವನ್ನು ಬೆಳೆದ ರೈತನಿಗೆ ಮಾರುಕಟ್ಟೆಯಲ್ಲಿ ಸರಿಯಾದ ಬೆಲೆಗೆ ಬತ್ತವನ್ನು ಮಾರಲಾಗದ ಈ ದಿನಗಳಲ್ಲಿ ಖರ್ಚಿನಲ್ಲಿ ಬತ್ತ ಬೆಳೆಯಲು ಅನುವಾಗುವ ಕೂಳೆ ಬೆಳೆಯು ಜನಪ್ರಿಯವಾಗುವ ಸಾಧ್ಯತೆ ಇದೆ. ಆದರೆ ಎಲ್ಲಾ ಸನ್ನಿವೇಶಗಳಲ್ಲೂ ಕೂಳೆ ಬೆಳೆ ಆಗುವುದಿಲ್ಲ. ಮಳೆ ಆಶ್ರಯದಲ್ಲಿ ಬತ್ತ ಬೆಳೆಯಲ್ಪಡುವ ಪ್ರದೇಶಗಳಲ್ಲಿ ಅದರಲ್ಲೂ ವರ್ಷಕ್ಕೆ ಒಂದೇ ಬೆಳೆ ತೆಗೆಯಲ್ಪಡುತ್ತಿರುವ ಕಣಿವೆ ಮತ್ತು ಇತರ ತಗ್ಗು ಪ್ರದೇಶಗಳಲ್ಲಿ ನೀರಿನ ಆಸರೆಯಿದ್ದಲ್ಲಿ ಕೂಳೆ ಬೆಳೆಯು ರೈತನಿಗೆ ಲಾಭದಾಯಕವಾಗಿ ಬತ್ತ ಉತ್ಪಾದನೆಯಲ್ಲಿ ಮಹತ್ವದ ಪಾತ್ರ ವಹಿಸಬಲ್ಲದೆಂಬುದಕ್ಕೆ ಕೆಲವು ರೈತರು ಕೂಳೆ ಬೆಳೆ ತೆಗೆಯುವುದರಲ್ಲಿ ಸಫಲರಾಗಿದ್ದಾರೆ. ಈ ಪದ್ಧತಿಯು ಜನಪ್ರಿಯವಾಗಲು ಉತ್ತಮ ತಳಿಗಳನ್ನು ಕಂಡು ಹಿಡಿದು ಸೂಕ್ತ ಕ್ರಮದ ಬಗ್ಗೆ ಹೆಚ್ಚು ಸಂಶೋಧನೆ ನಡೆಯಬೇಕು.

ಹೊಸ ತಳಿಗಳು:

ಈವರೆಗೆ ಕಂಡು ಹಿಡಿದಿರುವ ಅಧಿಕ ಇಳುವರಿ ತಳಿಗಳೆಲ್ಲಾ ಫಲವತ್ತಾದ ಮಣ್ಣಿನಲ್ಲಿ ಮತ್ತು ಹಿತವಾದ ಹವಾಗುಣದಲ್ಲಿ ಮಾತ್ರ ಬೆಳೆಯಬಲ್ಲುವಷ್ಟೆ. ಆದ್ದರಿಂದಲೇ ಕೆಲವು ಪ್ರದೇಶಗಳಲ್ಲಿ ಮಾತ್ರ ಅಧಿಕ ಇಳುವರಿ ತಳಿಗಳು ಹೆಚ್ಚು ಬಳಕೆಗೆ ಬಂದಿವೆ. ೧೯೭೫-೭೬ನೇ ಸಾಲಿನಲ್ಲಿ ಭಾರತದಲ್ಲಿ ಕೇವಲ ಶೇ. ೩೨.೯ರಷ್ಟು ಪ್ರದೇಶದಲ್ಲಿ ಮಾತ್ರ ಅಧಿಕ ಇಳುವರಿ ತಳಿಗಳನ್ನು ಬೆಳೆಯಲಾಗಿತ್ತು. ಈ ಪ್ರಮಾಣ ಸದ್ಯದಲ್ಲಿ ಇನ್ನೂ ಹೆಚ್ಚಾಗಿರಬಹುದು. ಆದರೆ ಹೊಸ ತಳಿಗಳು ಬಾರದಿದ್ದಲ್ಲಿ ಮತ್ತೆ ಹೆಚ್ಚಲಾರದು. ಬದಲಾಗಿ ಕಡಿಮೆಯಾಗಬಹುದು. ಏಕೆಂದರೆ ಅಧಿಕ ಇಳುವರಿ ತಳಿಗಳ ಸತತ ಸಾಂದ್ರ ಬೇಸಾಯದಿಂದ ಮಣ್ಣಿನಲ್ಲಿರುವ ಕೆಲವು ಪೋಷಕಾಂಶಗಳು ಮುಗಿದು ಸಸ್ಯದಲ್ಲಿ ಕೊರತೆಯ ಲಕ್ಷಣಗಳು ಕಾಣುತ್ತಿವೆ. ಅಲ್ಲದೆ ಅತಿಕೊರೆ, ನೆರೆ ಇರುವ ಜಾಗಕ್ಕೆ ಇನ್ನೂ ತಳಿಗಳೇ ಇಲ್ಲ. ಅವುಗಳಲ್ಲಿ ಮುಖ್ಯವಾದುದನ್ನು ಕೆಳಗೆ ಕಾಣಬಹುದು.

ಮಣ್ಣಿನ ನ್ಯೂನತೆಗಳು:

ಇವುಗಳಲ್ಲಿ ಪೋಷಕಾಂಶಗಳ ಅಥವಾ ಲವಣಗಳ ಕೊರತೆ ಮತ್ತು ಅತಿರೇಕ (ಖಾರ) ಎಂದು ಎರಡು ಭಾಗಗಳಾಗಿ ವಿಂಗಡಿಸಬಹುದು. ಕೊರತೆಗೆ ರಂಜಕ, ಸತು, ಕಬ್ಬಿಣ ಮತ್ತು ಗಂಧಕಗಳನ್ನೂ, ಖಾರಕ್ಕೆ ಲವಣಗಳು, ಕಬ್ಬಿಣ ಮತ್ತು ಬೋರಾನ್‌ಗಳನ್ನೂ ಉದಹರಿಸಬಹುದು. ಅಲ್ಯೂಮಿನಿಯಂ ಅತಿರೇಕದ ವರದಿಯು ಇದೆ. ಚೌಳು, ಕರಲು ಮುಂತಾದವು ಖಾರದ ಗುಂಪಿನಲ್ಲಿ ಬರುತ್ತವೆ. ದೋಷವು ಸಾಧಾರಣ (mild) ಮಟ್ಟದ್ದಾಗಿದ್ದರೆ, ನೇರವಾಗಿ ನಿರೋಧಕ ತಳಿಗಳಿಂದಲೇ ಉತ್ತಮ ಇಳುವರಿ ಪಡೆಯಬಹುದು. ದೋಷವು ಅತಿಯಾಗಿದ್ದಲ್ಲಿ ಮೊದಲು ಮಣ್ಣನ್ನು ಸುಧಾರಿಸಿ ನಂತರ ನಿರೋಧಕ ಶಕ್ತಿ ಹೊಂದಿರುವ ತಳಿಗಳನ್ನು ಬೆಳೆಯ ಬೇಕಾಗುತ್ತದೆ. ಅಂತರ ರಾಷ್ಟ್ರೀಯ ಬತ್ತ ಸಂಶೋಧನಾ ಕೇಂದ್ರದಲ್ಲಿ ಈವರೆಗೆ ನಡೆದಿರುವ ಸಂಶೋಧನೆಯ ಪ್ರಕಾರ ಐ.ಆರ್. ೩೪ ರಂಜಕ ಮತ್ತು ಸತುವಿನ ಕೊರತೆಯೂ ಐ.ಆರ್. ೮೨ ಮತ್ತು ಮಷೂರಿ (ಗೌರಿ) ಕಬ್ಬಿಣದ ಅತಿರೇಕಕ್ಕೂ, ಕರ್ನಾಟಕದಲ್ಲಿ ಬಳಕೆಯಲ್ಲಿರುವ ಪ್ರಗತಿ, ಮಂಗಳ, ಎಂ.ಆರ್. ೩೭೯, ತಳಿಗಳು ಸಾಧಾರಣ ಲವಣ ಪೀಡಿತ ಮಣ್ಣುಗಳಿಗೂ ಹೊಂದಿಕೊಂಡಿವೆ ಎಂಬುದು ತಿಳಿದು ಬಂದಿದೆ.

ಬೆಟ್ಟ ಮತ್ತು ತಗ್ಗು ಪ್ರದೇಶಗಳು:

ಕಾಶ್ಮೀರ, ಹಿಮಾಚಲ ಪ್ರದೇಶ, ಕರ್ನಾಟಕ ಇನ್ನೂ ಮುಂತಾದ ರಾಜ್ಯಗಳಲ್ಲಿ ಬತ್ತವು ಸಮುದ್ರ ಮಟ್ಟಕ್ಕಿಂತಲೂ ೩೦೦೦ ಅಡಿಗೂ ಎತ್ತರದಲ್ಲಿರುವ ಗದ್ದೆಗಳಲ್ಲಿ ಬೆಳೆಯಲ್ಪಡುತ್ತಿದೆ. ಬತ್ತವೂ ಹೂ ಬಿಡುವಾಗ ಅಥವಾ ಇನ್ನೂ ಮುಂಚೆ ಯಾವ ಹಂತದಲ್ಲಿ ಬೇಕಾದರೂ ಕೊರತೆಯು ಫಸಲಿಗೆ ಹಾನಿಯುಂಟು ಮಾಡಬಹುದು. ಈಗ ಪ್ರಚಾರದಲ್ಲಿರುವ ಅನೇಕ ತಳಿಗಳು ಈ ಸಂದರ್ಭಗಳಿಗೆ ಹೊಂದಿಕೊಳ್ಳಲಾರವು. ಕೊರತೆಗೆ ನಿರೋಧಕ ಶಕ್ತಿ ಹೊಂದಿರುವ ತಳಿಗಳು ಈಗೀಗ ಅಲ್ಲಲ್ಲಿ (ಕರ್ನಾಟಕದಲ್ಲಿ ಮಂಗಳ, ಕಾಶ್ಮೀರಲದಲ್ಲಿ ಕೆ.ಟಿ.) ಪ್ರಚಾರಕ್ಕೆ ಬರುತ್ತಿವೆ. ಇನ್ನೂ ಹೆಚ್ಚು ಸನ್ನಿವೇಶಗಳಿಗೆ ಹೊಂದಿಕೊಳ್ಳುವ ಕೊರತೆ ನಿರೋಧಕ ತಳಿಗಳನ್ನು ಕಂಡು ಹಿಡಿಯಬೇಕಾಗಿದೆ. ಹಾಗೆಯೇ ಪ್ರವಾಹದಲ್ಲಿಯೂ ಅಥವಾ ಸದಾ ಹರಿಯುವ ಅಥವಾ ಹೆಚ್ಚು ಆಳದಲ್ಲಿ ನಿಂತ ನೀರಿನಲ್ಲಿ ಬೆಳೆಯಬಲ್ಲ ತಳಿಗಳನ್ನು ಸುಧಾರಿಸಿ ಬಿಡುಗಡೆ ಮಾಡಬೇಕಾಗಿದೆ. ಪೂರ್ವ ಭಾರತದ ಕೆಲವು ರಾಜ್ಯಗಳಿಗೆ ಇವು ಬಹಳ ಸಹಾಯಕಾರಿಯಾಗಬಲ್ಲವು.

ಹದವಾದ ಒಕ್ಕಣೆ:

ಇಲ್ಲಿಯವರೆಗೆ ಬಿಡುಗಡೆಯಾಗಿರುವ ಕೆಲವು ತಳಿಗಳಲ್ಲಿ ಕೊಯ್ಲಿಗೆ ಮುನ್ನ ಮಾಗುತ್ತಿರುವಾಗಲೇ ಕಾಳು ಸಸ್ಯದಿಂದ ಉದುರಿ ನಷ್ಟವಾಗುತ್ತಿದೆ. ಇನ್ನು ಕೆಲವು ತಳಿಗಳಲ್ಲಿ ಕಾಳು ತೆನೆಗೆ ಗಟ್ಟಿಯಾಗಿ ಅಂಟಿಕೊಂಡು ಒಕ್ಕಣೆಯಲ್ಲಿ ಸರಿಯಾಗಿ ಬಿಡದೆ ಹುಲ್ಲಿನ ಜೊತೆ ಸೇರಿ ನಷ್ಟವಾಗುವುದುಂಟು. ಸಂಕರಣಾ ನಂತರ ತಳಿಗಳ ಆಯ್ಕೆ ಮಾಡುವಾಗ ಇದನ್ನು ಗಮನದಲ್ಲಿಟ್ಟುಕೊಂಡು ಹದವಾದ ಒಕ್ಕಣೆಯ ಗುಣಗಳುಳ್ಳ ತಳಿಗಳನ್ನು ಆಯ್ದುಕೊಳ್ಳುವುದರಿಂದ ಸ್ವಲ್ಪಮಟ್ಟಿಗೆ ನಷ್ಟವನ್ನು ತಪ್ಪಿಸಿ ಉತ್ಪಾದನೆ ಹೆಚ್ಚಿಸಲು ನೆರವಾಗಬಹುದು.

ಹೆಚ್ಚು ಅಕ್ಕಿ ಇಳುವರಿ:

ಇದೀಗ ರಾಜ್ಯದ ಕೃಷಿ ವಿಶ್ವವಿದ್ಯಾಲಯ ಮತ್ತು ಕೇಂದ್ರ ಆಹಾರ ಸಂಶೋಧನಾಲಯದ ಸಂಶೋಧನೆಯಿಂದ ಒಂದು ಕುತೂಹಲಕಾರಿ ಅಂಶ ಬೆಳಕಿಗೆ ಬಂದಿದೆ. ಬತ್ತದ ಕಾಳಿನಲ್ಲಿ ಅಕ್ಕಿಯು (brown rice) ಶೇ. ೭೦ ರಿಂದ ೮೬ರಷ್ಟು ಇರುತ್ತದೆ. ತಳಿಯಿಂದ ತಳಿಗೆ ಇಷ್ಟೊಂದು ವ್ಯತ್ಯಾಸವಿರುವುದರಿಂದ ಸೂಕ್ತ ಸುಧಾರಣೆಯ ಮೂಲಕ ಅಕ್ಕಿ ಇಳುವರಿಯು ಸದಾ ಶೇ. ೮೦ಕ್ಕೂ ಮೀರಿ ಇರುವಂತೆ ಮಾಡಲು ಸಾಧ್ಯ. ಆದ್ದರಿಂದ ಇನ್ನು ಮೇಲೆ ಕಂಡು ಹಿಡಿಯ ತಕ್ಕ ತಳಿಗಳಲ್ಲಿ ಖಡ್ಡಾಯವಾಗಿ ಶೇ. ೮೦ಕ್ಕೂ ಮೀರಿ ಇರುವಂತೆ ಮಾಡಲು, ಜಾರಿಯಲ್ಲಿರುವ ತಳೀಕರಣ ಯೋಜನೆಗಳನ್ನು ಮಾರ್ಪಡಿಸುವುದು ಸಾರ್ಥಕವಾದೀತು. ಸಂಕರಣ ಯೋಜನೆಗಳಲ್ಲಿ ಹೆಚ್ಚು ಅಕ್ಕಿ ಇಳುವರಿ ಕೊಡಬಲ್ಲ “ಸುಕಮಂಡಿ ಮತ್ತು ಬೀಕ್ ಗಂಗಾಸ್” (ಅಕ್ಕಿ ಇಳುವರಿ – ೮೪%) ತಳಿಗಳನ್ನು ಸೇರಿಸಿಕೊಳ್ಳಲಾಗಿದೆ.

ಅಕ್ಕಿ ನುಚ್ಚಾಗದ ಬತ್ತ:

ಬತ್ತವನ್ನು ಕೊಯ್ಲು ಮಾಡುವಾಗ ಮತ್ತು ಒಣಗಿಸುವಾಗ ಬಿಸಿಲಿನಿಂದ ಕಾಳಿನ ಒಳಗೆ ಬಿರುಕು ಉಂಟಾಗುತ್ತದೆ. ಬತ್ತವನ್ನು ಗಿರಣಿಗೆ ಕೊಟ್ಟಾಗ ಹೆಚ್ಚು ಪ್ರಮಾಣದಲ್ಲಿ ನುಚ್ಚಾಗಲು ಇಂತಹ ಬಿರುಕಗಳೇ ಹೆಚ್ಚು ಕಾರಣ. ಕೃಷಿ ವಿಶ್ವವಿದ್ಯಾಲಯ ಮತ್ತು ಕೇಂದ್ರ ಆಹಾರ ಸಂಶೋಧನಾಲಯದ ಸಂಶೋಧನೆಯಿಂದ, ಬಿಸಿಲಿನ ಬೇಗೆಯಲ್ಲೂ ಬಿರುಕು ಬಿಡದೆ ಗಟ್ಟಿಯಾಗಿರುವ ಅಂದರೆ ಬತ್ತವನ್ನು ಹೊಟ್ಟು ಬಿಡಿಸಲು ಮತ್ತು ಪಾಲಿಷ್ ಮಾಡಲು ಗಿರಣಿಗೆ ಕೊಟ್ಟಾಗ ಹೆಚ್ಚು ನುಚ್ಚಾಗದಂತಹ ತಳಿಗಳ ಸೃಷ್ಟಿ ಸಾಧ್ಯ ಎಂದು ಕಂಡು ಬಂದಿದೆ. ಅಕ್ಕಿ ಇಳುವರಿ ಹೆಚ್ಚಿಸುವ ಮತ್ತು ಅಕ್ಕಿ ನುಚ್ಚಾಗದಂತಹ ತಳಿಗಳನ್ನು ಕಂಡು ಹಿಡಿಯುವ ಯೋಜನೆಯಿಂದ ಕನಿಷ್ಟ ಶೇ. ೧೦ರಷ್ಟು ಉತ್ಪಾದನೆಯನ್ನು (ಅಕ್ಕಿ ರೂಪದಲ್ಲಿ) ಹೆಚ್ಚಿಸಲು ಸಾಧ್ಯ ಎಂದು ಅಂದಾಜು ಮಾಡಲಾಗಿದೆ. ಇದಕ್ಕೆ ಪ್ರತ್ಯೇಕ ಯೋಜನೆಗಳನ್ನು ಹಾಕಿಕೊಳ್ಳುವುದು ಸೂಕ್ತವೆಂದು ಹೇಳಬಹುದು.

ಕೀಟ, ಬೂಷ್ಟ್ ಮತ್ತು ನಂಜು ರೋಗಗಳಿಗೆ ನಿರೋಧಕ ಶಕ್ತಿ ಹೊಂದಿರುವ ತಳಿಗಳನ್ನು ಕಂಡು ಹಿಡಿಯಲು ಆಗಲೇ ಅನೇಕ ಯೋಜನೆಗಳಿವೆ.

ಶಕ್ತಿಮಾನ್ ತಳಿಗಳು:

ಶಕ್ತಿಮಾನ್ ಅಥವಾ ಮಿಶ್ರತಳಿ (ಹೈಬ್ರಿಡ್)ಗಳು ಇದುವರೆಗೆ ಜೋಳ, ಸಜ್ಜೆ ಮತ್ತು ಮುಸುಕಿನ ಜೋಳ, ಈ ಕೆಲವು ಅಂದರೆ ಅತ್ತಿ, ಬತ್ತ, ರಾಗಿ ಮುಂತಾದವುಗಳಲ್ಲಿ ಶಕ್ತಿಮಾನ್ ತಳಿಗಳು ಪ್ರಚಾರಕ್ಕೆ ಬರಲು ಸಾಧ್ಯವೇ ಇಲ್ಲ ಎಂದು ನಂಬಲಾಗಿತ್ತು. ಆದರೆ ಕಳೆದ ದಶಕದಲ್ಲಿಯೇ ಹತ್ತಿ ಬೆಳೆಯಲ್ಲೂ (ವರಲಕ್ಷ್ಮಿ ಹೆಚ್ ೪) ಶಕ್ತಿಮಾನ್ ತಳಿಗಳು ಪ್ರಚಾರಕ್ಕೆ ಬಂದವು. ಇದೀಗ ಚೈನಾದಲ್ಲಿ ಸಾವಿರಾರು ಎಕರೆಗಳಲ್ಲಿ ಬತ್ತದಲ್ಲಿಯೂ ಶಕ್ತಿಮಾನ್ ತಳಿಗಳನ್ನು ಬೆಳೆಯಲಾಗುತ್ತಿರುವುದು ವರದಿಯಾಗಿದೆ. ಬತ್ತದಲ್ಲಿ ಶಕ್ತಿಮಾನ್ ತಳಿಗಳು ಪ್ರಚಾರಕ್ಕೆ ಬರುವ ಸಾಧ್ಯತೆಯನ್ನು ರಾಜ್ಯದ ಕೃಷಿ ತಜ್ಞರೂ ಸಹ ಸೂಚಿಸಿದ್ದರು. ರಾಜ್ಯದ ಕೃಷಿ ವಿಶ್ವವಿದ್ಯಾಲಯದ ತಜ್ಞರು ೧೯೭೨ರಲ್ಲಿ ಸೃಷ್ಟಿಸಿದ ನಪುಂಸಕ ಬತ್ತದ ಹಾಗೆ ಇದೀಗ ಅಂತರ ರಾಷ್ಟ್ರೀಯ ಬತ್ತ ಸಂಶೋಧನಾ ಕೇಂದ್ರದಲ್ಲಿ ನಪುಂಸಕ ಬತ್ತವನ್ನು ಕಂಡು ಹಿಡಿಯಲಾಗಿದೆ. ಆದರೆ ಬತ್ತವು ಸ್ವಕೀಯ ಗರ್ಭಾಂಕುರ ಕ್ರಿಯೆಗೆ ಒಳಪಟ್ಟು ಬೆಳೆಯಾದುದರಿಂದ ಪರಕೀಯ ಗರ್ಭಾಂಕುರ ಬೆಳೆಗಳಷ್ಟು ಹೆಚ್ಚು ಶಕ್ತಿಯುಳ್ಳ ಮಿಶ್ರತಳಿಗಳನ್ನು ಕಂಡು ಹಿಡಿಯುವುದು ಸಾಧ್ಯವಿಲ್ಲವೆಂದೂ, ಆದರೆ ಶೇ. ೩೦-೪೦ರಷ್ಟು ಹೆಚ್ಚು ಇಳುವರಿ ನೀಡುವ ಶಕ್ತಿಮಾನ್ ತಳಿಗಳನ್ನು ಕಂಡು ಹಿಡಿಯಬಹುದೆಂದೂ ಈವರೆಗೆ ನಡೆಸಿರುವ ಸಂಶೋಧನೆಯಿಂದ ತಿಳಿದು ಬಂದಿದೆ.

ಉತ್ತಮ ಬೀಜದ ಸರಬರಾಜು:

೧೯೬೫ಕ್ಕೂ ಮುಂಚೆ ನೂರಾರು ಉದ್ದವಾಗಿ ಬೆಳೆಯುವ ಸುಧಾರಿಸಿದ ತಳಿಗಳೂ ಅನಂತರ ಈವರೆಗೆ ನೂರಾರು ಗಿಡ್ಡ ಮತ್ತು ಅರೆಗಿಡ್ಡ ಸಸ್ಯ ಸ್ವರೂಪದ ಸುಧಾರಿಸಿದ ತಳಿಗಳೂ ಭಾರತದ ವಿವಿಧ ರಾಜ್ಯಗಳಲ್ಲಿ ರೈತರ ಬಳಕೆಗೆಂದು ಬಿಡುಗಡೆಯಾಗಿ ಜನಪ್ರಿಯವಾಗಿದೆ. ಆದರೆ ಅಲ್ಲಲ್ಲಿ ಆಗಾಗ್ಗೆ ನಡೆಸಿದ ಸರ್ವೆಯ ಪ್ರಕಾರ ಹಾಗೂ ತಜ್ಞರು ರೈತರು ತಾಕುಗಳಿಗೆ ಭೇಟಿ ಕೊಟ್ಟಾಗ ನಡೆಸಿದ ಪರಿಶೀಲನೆಗೆ ಆಧಾರದ ಮೇಲೆ ರೈತರಿಗೆ ಉತ್ತಮ ಗುಣದ ಬೀಜವು ದೊರಕುತ್ತಿಲ್ಲ ಎಂಬುದು ಸಂಶಯಾತೀತ. ಹಿಂದೆ ಅನೇಕ ಯೋಜನೆಗಳ ಮೂಲಕ ಉತ್ತಮ ಬೀಜದ ಸರಬರಾಜಿಗೆ ಬಹಳಷ್ಟು ಪ್ರಯತ್ನಗಳು ನಡೆದಾಗ್ಯೂ ಈವರೆಗು ಸ್ಥಿತಿ ಉತ್ತಮಗೊಂಡಿಲ್ಲ. ತೃಪ್ತಿಕರವಾದ ಬೀಜದ ಸರಬರಾಜಿಗೆ ಸೂಕ್ತ ಮಾರ್ಗಗಳನ್ನು ಹುಡುಕಿ ಶೀಘ್ರದಲ್ಲೇ ಜಾರಿಗೆ ತರುವುದು ಅತ್ಯವಶ್ಯಕ.

ವಿಸ್ತರಣಾ ಕಾರ್ಯಕ್ರಮ:

೧೯೭೫-೭೬ನೇ ಸಾಲಿನಲ್ಲಿ ಬತ್ತದ ಉತ್ಪಾದನೆಯು ೧೯೫೭ಕ್ಕೆ ಹೋಲಿಸಿದರೆ ಶೇ. ೮೬ ಹೆಚ್ಚಿರುವುದು ನಿಜ. ಆದರೆ ಅಷ್ಟರಲ್ಲಿ ಕ್ಷೇತ್ರವು ಕೂಡ ಶೇ. ೨೩ರಷ್ಟು ವಿಸ್ತರಣೆಯಾಗಿತ್ತು. ಆದ್ದರಿಂದ ಹೆಕ್ಟೇರುವಾರು (ಪಟ್ಟಿ ೧) ಇಳುವರಿಯನ್ನು ಪರಿಶೀಲಿಸಿದಾಗ ಕೇವಲ ಶೇ. ೫೧ರಷ್ಟು ಮಾತ್ರ ಇಳುವರಿ ಹೆಚ್ಚಿದೆ ಎಂದು ತಿಳಿದು ಬಂದಿತು. ಡಾ. ಎಂ.ಎಸ್. ಸ್ವಾಮಿನಾಥನ್ ಅವರು ೧೯೭೭ರಲ್ಲಿ ಹೈದರಾಬಾದಿನಲ್ಲಿ ಬತ್ತದ ಸಂಶೋಧಕರನ್ನು ಉದ್ದೇಶಿಸಿ ಮಾತನಾಡುವಾಗ ಭಾರತದ ವಿವಿಧ ರಾಜ್ಯಗಳಲ್ಲಿ ವರದಿಯಾಗುವ ಸರಾಸರಿ ಇಳುವರಿಯನ್ನು ರಾಷ್ಟ್ರೀಯ ಪ್ರಾತ್ಯಕ್ಷಿಕೆಗಳ ಇಳುವರಿಗೆ ಹೋಲಿಸಿ ಚರ್ಚಿಸಿದರು.

ರಾಷ್ಟ್ರೀಯ ಪ್ರಾತ್ಯಕ್ಷಿಕೆ ತಾಕುಗಳ ಇಳುವರಿಯು ಎಲ್ಲಾ ರಾಜ್ಯಗಳಲ್ಲಿಯೂ ಆಶಾದಾಯಕವಾಗಿದೆ. ಕನಿಷ್ಟ ಇಳುವರಿ ಹೆಕ್ಟೇರಿಗೆ ೩.೮ ಟನ್ ಗರಿಷ್ಟ ಇಳುವರಿ ೭.೯ ಟನ್ (ಹರಿಯಾಣ) ಆದರೆ ಹೆಚ್ಚು ರಾಜ್ಯಗಳಲ್ಲಿ ನಿಜವಾಗಿಯೂ ಬೆಳೆಯಲ್ಪಡುತ್ತಿರುವ ಸರಾಸರಿ ಇಳುವರಿಯೂ ಪ್ರಾತ್ಯಕ್ಷಿಕೆ ತಾಕುಗಳ ಅರ್ಧಭಾಗವೂ ಇಲ್ಲ ಎಂಬುದು ಶೋಚನೀಯ, ಪಟ್ಟಿಯಲ್ಲಿರುವ ೧೮ ರಾಜ್ಯಗಳ ಪೈಕಿ ೭ ರಾಜ್ಯಗಳಲ್ಲಿ ೨ ಟನ್‌ಗೂ ಕಡಿಮೆ ೮ ರಾಜ್ಯಗಳಲ್ಲಿ ೨ ಟನ್ ಮೀರಿದ್ದರೂ ೩ ಟನ್ ಗಿಂತ ಕಡಿಮೆ ೩ ರಾಜ್ಯಗಳಲ್ಲಿ (ತಮಿಳುನಾಡು, ಪಂಜಾಬ್, ಹರಿಯಾಣ) ಮಾತ್ರ ೩ ಟನ್ ಮೀರಿದೆ. ಅಂದರೆ ಈಗಾಗಲೇ ತಿಳಿದು ಬಂದಿರುವ ತಾಂತ್ರಿಕ ಜ್ಞಾನವನ್ನು ಎಲ್ಲಾ ಪ್ರದೇಶಗಳಲ್ಲಿಯೂ ಚೆನ್ನಾಗಿ ಉಪಯೋಗಿಸಿಕೊಳ್ಳುವುದರಿಂದ ಇನ್ನೂ ಹೆಚ್ಚಿನ ಉತ್ಪಾದನೆ ಸಾಧಿಸಬಹುದೆಂದಾಯ್ತು. ಆದ್ದರಿಂದ ಸದ್ಯದಲ್ಲಿರುವ ಅಡಚಣೆಗಳನ್ನು ಹುಡುಕಿ ಅವುಗಳ ಪರಿಹಾರಕ್ಕೆ ಸೂಕ್ತ ವಿಸ್ತರಣಾ ಕ್ರಮಕೈಗೊಳ್ಳುವುದು ಫಲಕಾರಿಯಾದೀತು.

ಭಾರತದ ಬತ್ತ ಸಂಶೋಧನೆಯಲ್ಲಿ ಕರ್ನಾಟಕದ ಪಾತ್ರ

ಬತ್ತ ಬೆಳೆಯುವ ಹವಾಮಾನಗಳ ಆಧಾರದ ಮೇಲೆ ಕರ್ನಾಟಕವನ್ನು ಒಂದು ಪುಟ್ಟ ಭಾರತವೆಂದೇ ಹೇಳಬಹುದು. ಅಂದರೆ ಭಾರತದಲ್ಲಿರುವ ಬತ್ತ ಬೆಳೆಯುವ ಎಲ್ಲಾ ತರಹದ ಮಣ್ಣು, ಭೂಮಿಯ ಎಗ್ಗು ತಗ್ಗುಗಳು, ಎತ್ತರ, ಉಷ್ಣಾಂಶ, ತೇವಾಂಶ ಮತ್ತು ಬೇಸಾಯದ ಮಾದರಿಗಳನ್ನು ಹಾಗೂ ತತ್ಸಮವಾದ ಸಮಸ್ಯೆಗಳನ್ನು ಇಲ್ಲಿ ಕಾಣಬಹುದು ಎಂದರ್ಥ. ಪ್ರಪಂಚದಲ್ಲಿರುವ ಬತ್ತ ಬೆಳೆಯುವ ಎಲ್ಲಾ ಹವಾಮಾನಗಳೂ ಭಾರತದಲ್ಲಿರುವುದೂ ಮತ್ತು ಭಾರತದಲ್ಲಿರುವ ಸುಮಾರು ಎಲ್ಲಾ ಹವಾಮಾನಗಳೂ ಕರ್ನಾಟಕದಲ್ಲಿರುವುದೂ (ಬತ್ತಕ್ಕೆ ಸಂಬಂಧಿಸಿದಂತೆ ಸಮಸ್ತಾಭರಿತ ಹಾಗೂ ಸಮಸ್ಯಾರಹಿತ ಹವಾಮಾನದ ಪರಮಾವಧಿಗಳನ್ನು ಒಳಗೊಂಡ) ಕರ್ನಾಟಕವನ್ನು ಬತ್ತದ ಒಂದು ವಿಶೇಷ ಪ್ರಯೋಗ ಶಾಲೆ ಎನ್ನಲು ಸಾಕಷ್ಟು ಕುರುಹಾಯಿತು. ಅಲ್ಲದೆ ರಾಜ್ಯದ ಕೃಷಿ ವಿಶ್ವವಿದ್ಯಾಲಯದಲ್ಲಿ ೨ ಸಾವಿರಕ್ಕೂ ಮೀರಿದಷ್ಟು ತಳಿ ಬ್ಯಾಂಕ್ ಇದೆ ಮತ್ತು ಎಲ್ಲಾ ಸಮಸ್ಯೆಗಳನ್ನು ಮುಟ್ಟುವಂತೆ ಬತ್ತದ ಅನುಸಂಧಾನದಲ್ಲಿ ತೊಡಗಿರುವ ಸಂಶೋಧನಾ ಕೇಂದ್ರಗಳಲ್ಲಿ ಇರುವ ಅನುಕೂಲಗಳೂ ಇದನ್ನು ಪುಷ್ಟೀಕರಿಸುತ್ತವೆ. ಈ ಅನುಕೂಲಗಳನ್ನು ಉಪಯೋಗಿಸಿಕೊಂಡು, ಉಷ್ಣವಲಯದ ಬತ್ತದ ಸಮಸ್ಯೆಗಳಿಗೆ ಪರಿಹಾರ ಕಂಡು ಹಿಡಿಯಲು ಮತ್ತು ಬತ್ತ ಬೆಳೆಯುವ ಇತರ ಪ್ರಮುಖ ರಾಷ್ಟ್ರಗಳಿಗೆ ಸೂಕ್ತ ಯೋಜನೆ ರೂಪಿಸಲು ಹೆಚ್ಚು ನೆರವಾಗಿ, ವಿಶ್ವದ ಬತ್ತ ಉತ್ಪಾದನೆಯಲ್ಲಿ ಕರ್ನಾಟಕವು ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಮಹತ್ವದ ಪಾತ್ರ ವಹಿಸಬಲ್ಲದು ಎಂದು ನಿರ್ವಿವಾದವಾಗಿ ಹೇಳಬಹುದು.