ಸುಧಾರಿತ ಬೇಸಾಯ ಪದ್ಧತಿ ಮತ್ತು ಅಧಿಕ ಇಳುವರಿ ತಳಿಗಳ ಬಳಕೆಯಿಂದ ಕೆಲವೇ ವರ್ಷಗಳಲ್ಲಿ ಬತ್ತದ ಉತ್ಪಾದನೆಯನ್ನು ಗಮನೀಯ ಪ್ರಮಾಣಿಕೆ ಏರಿಸಲಾಗಿದೆ. ಆದರೆ ದಿನೇ ದಿನೇ ಏರುತ್ತಿರುವ ಜನಸಂಖ್ಯೆಯ ಬೇಡಿಕೆಯನ್ನು ಪೂರೈಸಲು ಬತ್ತದ ಉತ್ಪಾದನೆಯಲ್ಲಿ ಈವರೆಗೆ ಸಾಧಿಸಿರುವುದಕ್ಕಿಂತಲೂ ಹೆಚ್ಚಿನ ಪ್ರಗತಿಯನ್ನು ಇನ್ನೆರಡು ದಶಕಗಳಲ್ಲಿ ಸಾಧಿಸಬೇಕಾದರೆ ಎನ್ನುವ ವಿಷಯ ವಿವಾದಾತೀತಿ. ಈಗಾಗಲೇ ಬೇಸಾಯಕ್ಕೆ ಯೋಗ್ಯವೆನಿಸಿದ ಎಲ್ಲಾ ಭೂಮಿಯಲ್ಲೂ ಸಾಗುವಳಿಗೆ ಒಳಪಡಿಸಿರುವುದರಿಂದ ಇನ್ನು ಮೇಲೆ ಕ್ಷೇತ್ರ ಬಡಾವಣೆಯ ಮೂಲಕ ಉತ್ಪಾದನೆ ಹೆಚ್ಚಿಸುವ ಸಾಧ್ಯತೆ ಬಹಳವಾಗಿ ಕುಗ್ಗಿದೆ. ಉತ್ಪಾದನೆಯ ಹೆಚ್ಚಳಕ್ಕೆ ಹೊಸ ಮಾರ್ಗಗಳ ಅನ್ವೇಷಣೆಯಲ್ಲಿ ಕೂಳೆ ಬೆಳೆ ಪದ್ಧತಿ ಆಶಾದಾಯಕವೆನಿಸಿದೆ.

ಹುಲ್ಲಿನ ಜಾತಿಗೆ ಸೇರಿದ ಯಾವುದೇ ಸಸ್ಯವಾಗಲೀ ಕಟಾವು ಮಾಡಿದ ನಂತರ ಭೂಮಿಯಲ್ಲೇ ಉಳಿದುಕೊಳ್ಳುವ ಕೂಳೆಗೆ ಹಿತವಾದ ವಾತಾವರಣ ದೊರೆತರೆ ಅದು ಚಿಗುರಿ ಮತ್ತೊಮ್ಮೆ ಸಸ್ಯವಾಗುವ ಶಕ್ತಿಯನ್ನು ಹೊಂದಿರುತ್ತದೆ.

(ನೇಪಿಯರ್ ಗ್ರಾಸ್) ಗಿನಿ, ಪ್ಯಾರಾ, ಕಬ್ಬು ಮುಂತಾದ ಬೆಳೆಗಳಲ್ಲಿ ರೈತರು ಕೂಳೆಬೆಳೆ (ರಟೂನ್ ಕ್ರಾಪ್) ತೆಗೆದುಕೊಳ್ಳುವುದು ಸರ್ವೇಸಾಮಾನ್ಯ ಮತ್ತು ವಿಶ್ವವ್ಯಾಪಿ ಪದ್ಧತಿ. ಇತ್ತೀಚಿನ ಕೆಲವು ಸಂಶೋಧನೆಯಿಂದ ಶಕ್ತಿಮಾನ್ ಜೋಳದಲ್ಲಿಯೂ ಸಹ ಕೂಳೆ ಬೆಳೆಯು ಲಾಭದಾಯಕವೆನಿಸಿದೆ. ಕೂಳೆ ಬೇಸಾಯ ಅನುಕರಿಣೆಯಲ್ಲಿಲ್ಲವಾದರೂ, ರಾಗಿ, ಸಜ್ಜೆ, ಗೋವಿನ ಜೋಳ, ನವಣೆ, ಸಾಮೆ ಮುಂತಾದ ಬೆಳೆಗಳನ್ನು ಕೊಯ್ಲು ಮಾಡಿದ ನಂತರ ಭೂಮಿಯಲ್ಲಿ ತೇವಾಂಶವಿದ್ದರೆ, ಕೂಳೆ ಚಿಗುರಿರುವುದನ್ನು ಅಲ್ಲಲ್ಲಿ ಕಾಣಬಹುದು. ಇಂತಹ ಕೂಳೆಬೆಳೆಯು ಬತ್ತದಲ್ಲಿ ಲಾಭದಾಯಕವೆನಿಸಿ ಬತ್ತದ ಉತ್ಪಾದನೆ ಹೆಚ್ಚಿಸಲು ನೆರವಾಗಬಲ್ಲುದೆ ಎಂಬುದೇ ಈಗ ನಮ್ಮ ಮುಂದಿರುವ ಪ್ರಶ್ನೆ.

ಬತ್ತವೂ ಸಹ ಹುಲ್ಲಿನ ಜಾತಿಗೆ ಸೇರಿದ ಒಂದು ಸಸ್ಯ. ಅಲ್ಲದೆ ಬತ್ತದ ಪೂರ್ವಜ ಎನಿಸಿದ ವರೈಜ ಪೆರಿನೆಸ್ ಸಸ್ಯದ ಕೊಳೆಯು ಮತ್ತೆ ಮತ್ತೆ ಚಿಗುರಿ ದೃಢಕಾಯವಾಗಿ ಬೆಳೆಯುವುದನ್ನು ಕರ್ನಾಟಕದ ಮಲೆನಾಡು ಪ್ರದೇಶದಲ್ಲಿ ವಿಶೇಷವಾಗಿ ಕಾಣಬಹುದು. ಬತ್ತದ ಗದ್ದೆಗಳಲ್ಲಿಯೂ ಸಹ ಅಲ್ಲಲ್ಲಿ ಕೊಳೆಯು ಚೆನ್ನಾಗಿ ಚಿಗುರಿ, ಅನೇಕ ವೇಳೆ ಅದು ಪ್ರಥಮ ಬೆಳೆಯೋ ಅಥವಾ ಕೊಳೆಯೋ ಎನ್ನುವ ಸಂದೇಹ ಬರುವುದೂ ಉಂಟು. ೧೯೪೩ನೇ ಇಸವಿಯಲ್ಲೇ ಹೊಸಕೋಟೆಯ ಹತ್ತಿರವಿರುವ ಬೆಂಡಿಗನಹಳ್ಳಿಯ ಚೆನ್ನಬೋರೇಗೌಡರು ಬತ್ತದ ಕೂಳೆ ಬೆಳೆ ಮಾಡಿ, ಒಂದು ಎಕರೆಗೆ ಸುಮಾರು ೭.೭ ಕ್ವಿಂಟಾಲ್ ಇಳುವರಿ ಪಡೆದಿರುವ ವರದಿ ಬಂದಿತ್ತು. ಅಂದರೆ ಕೂಳೆಯಿಂದ ಬೆಳೆ ತೆಗೆಯುವುದು ಆಶ್ವರ್ಯವೇನಲ್ಲ ಎಂದಾಯ್ತು. ಇನ್ನು ಮುಂದೆ ಬತ್ತದಲ್ಲಿ ಕೂಳೆ ಬೆಳೆ ಪದ್ಧತಿಯು ಅನುಷ್ಠಾನಕ್ಕೆ ಬರುವಷ್ಟು ಲಾಭದಾಯಕ ಎನಿಸಿ, ಉತ್ಪಾದನೆಯನ್ನು ಹೆಚ್ಚಿಸಲು ನೆರವಾಗಬಹುದೇ ಎಂಬುದನ್ನು ಪರಿಶೀಲಿಸುವುದು ಸೂಕ್ತ.

ಸಂಶೋಧನೆ

ಕೂಳೆ ಬೆಳೆ ಬೇಸಾಯದ ಮೇಲೆ ಸಂಶೋಧನೆಯ ಪ್ರಯತ್ನ ೧೯೪೮ರಲ್ಲಿ ಮೊದಲು ಭಾರತದಲ್ಲೇ ಆರಂಭವಾಯಿತು. ಆದರೆ ಜಪಾನ್, ಅಮೆರಿಕಾ ಮತ್ತು ಕೊಲಂಬಿಯಾದಲ್ಲಿ ಈ ಬಗ್ಗೆ ಹೆಚ್ಚು ಸಂಶೋಧನೆ ನಡೆದಿದೆ ಎಂದು ಹೇಳಬಹುದು. ಅಂತರರಾಷ್ಟ್ರೀಯ ಬತ್ತದ ಸಂಶೋಧನಾ ಕೇಂದ್ರದಲ್ಲಿ ಶ್ರೀಯುತ ಬಹಾರ್ ಮತ್ತು ದೇವದತ್ತ ಇವರು ಈ ಬಗ್ಗೆ ವಿಷಯ ಸಂಗ್ರಹಣೆ ಮತ್ತು ಕೆಲವು ಪ್ರಯೋಗಗಳನ್ನು ನಡೆಸಿರುವುದನ್ನು ಇಲ್ಲಿ ಪ್ರಸ್ತಾಪಿಸುವುದು ಸೂಕ್ತ. ಬತ್ತ ಬೆಳೆಯುವ ಏಷಿಯಾದ ಶೇ. ೧೪ರಷ್ಟು ಭೂಮಿಯಲ್ಲಿ ಮಾತ್ರ ಎರಡನೇ ಬೆಳೆಗೆ ನೀರಿನ ಸೌಲಭ್ಯವಿದೆ. ಉಳಿದೆಡೆಗಳಲ್ಲಿ ಅಲ್ಪಾವಧಿ ತಳಿಗಳನ್ನೂ ಸಹ ಬೆಳೆಯಲಾಗುವುದಿಲ್ಲ. ಅಲ್ಲದೆ ಕೆಲವು ಗದ್ದೆಗಳಲ್ಲಿ ಇತರೇ ಖುಷ್ಕಿ ಫಸಲು ಸಾಧ್ಯವಾಗುವುದಿಲ್ಲ. ಇಂತಹ ಸನ್ನಿವೇಶಗಳಲ್ಲಿ ಬತ್ತದ ಕೂಳೆಬೆಳೆ ಸಾಧ್ಯ ಎಂದು ಅಭಿಪ್ರಾಯಪಡಲಾಗಿದೆ.

ಕೂಳೆ ಫಸಲಿನಿಂದ ಬತ್ತದ ಉತ್ಪಾದನೆಯಲ್ಲಿ ಹೆಚ್ಚಿಸುವ ಪ್ರಯತ್ನ ಮೊಟ್ಟಮೊದಲು ಕಾರ್ಯರೂಪಕ್ಕೆ ಬಂದದ್ದು ೧೯೫೬ ರಲ್ಲಿ. ಟೆಕ್ಸಾಸ್ ಗಲ್ಫ್‌ನಲ್ಲಿ. ಅಲ್ಲಿ ಉಚಿತ ಸಂಶೋಧನೆಯಿಂದ ೧೯೬೫ರ ವೇಳೆಗೆ ಸುಮಾರು ೩೩ ಲಕ್ಷ ಹೆಕ್ಟೇರುಗಳ ಶೇ. ೬೪ರಷ್ಟು ಪ್ರದೇಶದಲ್ಲಿ ಕೂಳೆ ಬೆಳೆ ಪದ್ಧತಿ ಆಚರಣೆಗೆ ಬಂತು. ಅಲ್ಲಿನ ಮಳೆ ೩೫ ರಿಂದ ೫೫ ಅಂಗುಲ, ಮಣ್ಣು ಮರಳು ಮಿಶ್ರಿತ ಜೇಡಿ, ನೇರ ಬಿತ್ತನೆ ಪದ್ಧತಿ ಇವು ಮುಖ್ಯಾಂಶಗಳು. ಬೆಳೆದ ತಳಿಗಳೆಂದರೆ ಸೆಂಚುರಿ ಪಾಟ್ನಾ ೩೧, ಬ್ಲೂ ಬೊನೆಟ್ ೫೦ ಮತ್ತು ಬೆಲ್ಲೆ ಪಾಟ್ನಾ. ಈ ಸನ್ನಿವೇಶಗಳಲ್ಲಿ ನೀರು ಮತ್ತು ರಸಗೊಬ್ಬರಗಳ ಬಳಕೆಯಿಂದ ಹೆಕ್ಟೇರಿಗೆ ೨.೦-೨.೩ ಟನ್ ಇಳುವರಿಯನ್ನೂ, ನೀರು ಮತ್ತು ರಸಗೊಬ್ಬರಗಳಿಲ್ಲದೆ ಹೆಕ್ಟೇರಿಗೆ ಒಂದೇ ಟನ್ ಇಳುವರಿಯನ್ನೂ ಪಡೆಯಲಾಯಿತು.

ಕರ್ನಾಟಕ ಕೃಷಿ ವಿಶ್ವವಿದ್ಯಾಲಯದ ಅಂಗವಾದ ಮಡಿಕೇರಿ ಬತ್ತದ ಸಂಶೋಧನಾ ಕೇಂದ್ರದಲ್ಲಿ ೧೯೭೬ರಲ್ಲಿ ಕೂಳೆಬೆಳೆ ಸಾಧ್ಯತೆಯ ಬಗ್ಗೆ ಒಂದು ಪ್ರಯೋಗ ನಡೆಸಲಾಯಿತು. ಮಳೆಗಾಲದಲ್ಲಿ ಬೆಳೆದಿದ್ದ ಇಂಟಾನ್ ತಳಿಯನ್ನು ಜನವರಿ ೩೦ನೇ ತಾರೀಖು ಕಟಾವು ಮಾಡಿ, ಯಾವ ವಿಧವಾದ ಗೊಬ್ಬರವನ್ನೂ ಕೊಡದೆ, ೧೦೯ ದಿವಸಗಳಲ್ಲಿ ಒಂದು ಹೆಕ್ಟೇರಿಗೆ ೧.೭ ಟನ್ ಇಳುವರಿ ಪಡೆಯಲು ಸಾಧ್ಯವಾಯಿತು. ಇದೇ ಇಂಟಾನ್ ತಳಿಯಿಂದ ಕೊಡಗು ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ರೈತರು ಕೂಳೆಬೆಳೆ ತೆಗೆದುಕೊಂಡ ಸಂಗತಿಗಳು ವರದಿಯಾಗಿವೆ. ಈ ರೈತರು ರಸಗೊಬ್ಬರಗಳನ್ನು ಉಪಯೋಗಿಸಿ, ೨ ಟನ್‌ಗಿಂತಲೂ ಹೆಚ್ಚು ಇಳುವರಿ ಪಡೆದಿರುವುದಾಗಿ ತಿಳಿದುಬಂದಿದೆ. ಶಿವಮೊಗ್ಗ ಮತ್ತು ಕೊಡಗು ಜಿಲ್ಲೆಗಳಲ್ಲಿ ಗ್ರಾಸಿಸ್ಟಂಟ್ ಮತ್ತು ಟುಂಗ್ರೋ ನಂಜು ರೋಗಗಳು ಇಲ್ಲದಿರುವುದು ಕೂಳೆಬೆಳೆ ತೆಗೆಯಲು ನೆರವಾಗುವ ಸಂಗತಿ. ತಳಿಗಳ ಬಗ್ಗೆ ಎಲ್ಲಾ ದೇಶಗಳಲ್ಲಿಯೂ ಇನ್ನೂ ಹೆಚ್ಚಿನ ಸಂಶೋಧನೆ ನಡೆಯಬೇಕಾಗಿದೆ. ಸದ್ಯದಲ್ಲಿ ಕೂಳೆಬೆಳೆಗೆ ಉತ್ತಮ ಎನಿಸಿರುವ ತಳಿಗಳೆಂದರೆ ಆರ್. ೨೮ ಮತ್ತು ಐಆರ್ ೨೦೬೧-೬೩೨-೩-೧. ಮನಿಲಾದಲ್ಲಿ ಇವು ಕಟಾವು ಮಾಡಿದ ಸುಮಾರು ೬೫ ದಿವಸಗಳಲ್ಲಿ ಕೂಳೆಬೆಳೆ ಆಗಿ ಕೊಯ್ಲಿಗೆ ಸಿದ್ದವಾಗಿದ್ದವು. ಕರ್ನಾಟಕದಲ್ಲಿ ಇಂಟಾನ್ ಮತ್ತು ಎಸ್. ೬೮೪ ತಳಿಗಳಿಂದ ಕೂಳೆಬೆಳೆ ತೆಗೆಯಲು ಸಾಧ್ಯವಾಗಬಹುದೆಂಬ ಅನುಭವಗಳಿವೆ. ಈ ತಳಿಗಳು ಬೇಸಿಗೆಗೆ ಬರುವುದಿಲ್ಲ. ಇಂಟಾನ್ ಕೂಳೆಬೆಳೆ ಮಲೆನಾಡಿನಲ್ಲಿ ಕಟಾವು ಮಾಡಿದ ೧೦೦ ದಿನಗಳಲ್ಲಿಯೂ ಮೈದಾನ ಪ್ರದೇಶಗಳಲ್ಲಿ ಇನ್ನೂ ಮುಂಚಿತವಾಗಿಯೂ ಕೊಯ್ಲಿಗೆ ಸಿದ್ಧವಾಗುತ್ತದೆ. ಈ ಬಗ್ಗೆ ಇನ್ನೂ ಹೆಚ್ಚಿನ ಸಂಶೋಧನೆ ಅಗತ್ಯವಿದೆ. ರೋಗ ಕೀಟಗಳು ಪ್ರಥಮ ಬೆಳೆಗಿಂತಲೂ ಕೂಳೆಬೆಳೆಗೆ ಹೆಚ್ಚು ಹಾನಿ ಉಂಟು ಮಾಡುತ್ತದೆ. ಅದರಲ್ಲೂ ನಂಜುರೋಗಗಳ ಹಾವಳಿ ವಿಪರೀತ. ಕೂಳೆಬೆಳೆ ಪ್ರಚಾರಕ್ಕೆ ಬರಲು ಕೆಲವು ಪ್ರದೇಶಗಳಲ್ಲಿ ನಂಜುರೋಗವೇ ದೊಡ್ಡ ಅಡಚಣೆಯಾಗಿದೆ ಎಂದು ಹೇಳಬಹುದು. ಆದ್ದರಿಂದ ಕೂಳೆಬೆಳೆಗೆ ಯೋಗ್ಯವೆನಿಸುವ ತಳಿಗೆ ನಂಜುರೋಗ ನಿರೋಧಕ ಶಕ್ತಿ ಬಹಳ ಮಹತ್ವದ್ದು. ಪ್ರಥಮ ಬೆಳೆಯಲ್ಲಿ ಸೋಂಕಿದ್ದರೂ ಸಹ ರೋಗದ ಚಿಹ್ನೆಗಳು ವೇದ್ಯವಾಗದಿರಬಹುದು. ಆದರೆ ಕೂಳೆಬೆಳೆಯಲ್ಲಿ ರೋಗವು ಉಲ್ಬಣಿಸಿ ಹಾನಿಯುಂಟು ಮಾಡಬಲ್ಲುದು. ಬೇರೆ ರೋಗಗಳ ಬಗ್ಗೆ ಹೆಚ್ಚು ವರದಿಗಳಿಲ್ಲ. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ಸಂಗ್ರಹಿಸಬೇಕಾಗಿದೆ. ಕೀಟಗಳ ಬಗ್ಗೆಯೂ ಸಹ ಹೆಚ್ಚು ಮಾಹಿತಿ ಸಿಕ್ಕುತ್ತಿಲ್ಲ. ಕೂಳೆ ಬೆಳೆಯು ಸಾಮಾನ್ಯವಾಗಿ ಅಕಾಲದ ಬೆಳೆ ಆಗಿ ಅಥವಾ ಕೆಲವೇ ತಾಕುಗಳಲ್ಲಿ ಬೆಳೆಯಲ್ಪಡುವುದರಿಂದ ಕೀಟಗಳ ಹಾವಳಿ ಕಡಿಮೆ ಇರಬಹುದು. ಆದರೆ ಇಲಿ, ಹೆಗ್ಗಣ ಮತ್ತು ಹಕ್ಕಿಗಳ ಕಾಟ ಹೆಚ್ಚು ಕಾಣಿಸಿಕೊಳ್ಳುವ ಸಾಧ್ಯತೆ ಇದೆ.

ಕೂಳೆಬೆಳೆ ಪ್ರಯತ್ನದಲ್ಲಿ ಮೊದಲನೇ ಬೆಳೆಯನ್ನು ಕಟಾವು ಮಾಡುವಾಗ ಎಷ್ಟು ಎತ್ತರ ಕೂಳೆ ಬಿಡಬೇಕು ಎನ್ನವುದರ ಬಗ್ಗೆ ಒಂದೆರಡು ಪ್ರಯೋಗಗಳು ನಡೆದಿವೆ. ಅತಿ ಕಡಿಮೆ ಕೂಳೆ ಉಳಿಸಿದರೆ ಕೆಲವು ಗುಣಿಗಳು ಚಿಗುರದೆ ಒಣಗಿ ಹೋಗುವುದಾಗಿಯೂ ಅತಿ ಉದ್ದವಾಗಿ ಕೂಳೆ ಉಳಿಸಿದರೆ ರೋಗಗಳಿಗೆ ಹೆಚ್ಚು ಆಸ್ಪದ ಕಲ್ಪಿಸಿದಂತಾಗುವುದೆಂದೂ ಅಭಿಪ್ರಾಯ ಪಡಲಾಗಿದೆ. ಈವರೆಗಿನ ಅನುಭವದ ಪ್ರಕಾರ ೧೫ ಸೆ.ಮೀ ಕೂಳೆ ಉಳಿಸಿ ಕಟಾವು ಮಾಡುವುದು ಉತ್ತಮವೆಂದು ಗೊತ್ತಾಗಿದೆ. ಕಟಾವು ಮಾಡಿದ ೧೨ ದಿವಸಗಳ ನಂತರ ಅಥವಾ ಕೂಳೆಯು ೧೦-೧೫ ಸೆ.ಮೀ. ಎತ್ತರ ಬೆಳೆದ ಮೇಲೆ ಗದ್ದೆಗೆ ನೀರು ಕೊಡುವುದರಿಂದ ಬೆಳೆಗೆ ಅನುಕೂಲವಾಗುವುದೆಂದು ತಿಳಿದುಬಂದಿದೆ.

ಭಾರತ, ಜಪಾನ್, ಫಿಲಿಫೀನ್ಸ್ ಮತ್ತು ಅಮೆರಿಕಾ ದೇಶಗಳಲ್ಲಿ ನಡೆಸಿದ ಪ್ರಯೋಗಗಳಿಂದ ಕೂಳೆಬೆಳೆಗೆ ರಸಗೊಬ್ಬರಗಳ ಪೂರೈಕೆ ಬಗ್ಗೆ ಸ್ವಲ್ಪ ಮಾಹಿತಿ ದೊರೆತಿದೆ. ಪ್ರಥಮ ಬೆಳೆಗೆ ಸಾಕಷ್ಟು ಸಾರಜನಕ, ರಂಜಕ ಮತ್ತು ಪೊಟ್ಯಾಶ್ ಗೊಬ್ಬರಗಳನ್ನು ಉಪಯೋಗಿಸಿದ್ದಲ್ಲಿ, ಕೂಳೆ ಬೆಳೆಗೆ ರಂಜಕ ಮತ್ತು ಪೊಟ್ಯಾಶ್ ಗೊಬ್ಬರಗಳ ಅವಶ್ಯಕತೆ ಇರಲಾರದು. ಆದರೆ ಸಾರಜನಕವನ್ನು ಕೊಡುವುದರಿಂದ ಇಳುವರಿಯು ಗಣನೀಯವಾಗಿ ಹೆಚ್ಚಾಯಿತು. ಹೆಕ್ಟೇರಿಗೆ ೬೦ ಕಿ.ಗ್ರಾಂ. ಸಾರಜನಕ ಹಾಕಿ ಒಂದೊಂದು ಕಿ.ಗ್ರಾ ಸಾರಜನಕಕ್ಕೂ ೧೧೦-೧೨ ಕಿ.ಗ್ರಾಂ. ಹೆಚ್ಚು ಇಳುವರಿ ಪಡೆಯಲಾಯಿತು. ಇದು ಮೊದಲನೇ ಬೆಳೆಯಲ್ಲಿ ಸಿಕ್ಕುವಷ್ಟೇ ಪ್ರಮಾಣದ್ದಾಗಿರುವುದು ಗಮನಾರ್ಹ. ಕೂಳೆಬೆಳೆಯ ಬಗ್ಗೆ ಹೆಚ್ಚಿನ ಸಂಶೋಧನೆ ನಡೆದು ವೈಜ್ಞಾನಿಕವಾಗಿ ಬೆಳೆಯುವವರೆಗೂ ಇಳುವರಿಯನ್ನು ನಿರ್ಧರಿಸುವುದು ಕಷ್ಟ. ಎಷ್ಟರ ಮಟ್ಟಿಗೆ ಪ್ರಥಮ ಬೆಳೆಯು ರೈತನಿಗೆ ಕೈಗೂಡಿತು. ಯಾವ ತಳಿಯನ್ನು ಪ್ರಥಮ ಬೆಳೆಗೆ ಉಪಯೋಗಿಸಲಾಗಿತ್ತು. ನೀರಿನ ಸರಬರಾಜು ಮತ್ತು ಸುಧಾರಿತ ಬೇಸಾಯ ಪದ್ಧತಿ ಮುಂತಾದ ಈ ಅಂಶಗಳಿಂದ ಮಾತ್ರ ಇಳುವರಿಯನ್ನು ನಿರ್ಧರಿಸಲು ಸಾಧ್ಯವಾಗಬಹುದು. ಹೆಕ್ಟೇರಿಗೆ ೧ ರಿಂದ ೩ ಅಥವಾ ಸರಾಸರಿ ೬ ಟನ್ ಇಳುವರಿ ಪಡೆಯಲು ಸಾಧ್ಯವೆಂದು ಅಭಿಪ್ರಾಯ ಪಡೆಯಬಹುದು.

ಕೂಳೆಬೆಳೆಗೆ ತಗಲುವ ಖರ್ಚು ಬಹಳ ಕಡಿಮೆ. ಮೊದಲನೇ ಬೆಳೆಗೆ ಬೇಕಾಗುವ ಕೇವಲ ಶೇ. ೫೦ ರಷ್ಟು ಶ್ರಮ ಮತ್ತು ಶೇ. ೪೦ ರಷ್ಟು ನೀರಿನಿಂದ ಒಂದು ಕೂಳೆಬೆಳೆಯನ್ನು ತೆಗೆಯಬಹುದು. ಹೆಚ್ಚು ಖರ್ಚಿಗೆ ಕಾರಣವಾದ ಭೂಮಿ ತಯಾರಿ, ಬೀಜದ ಖರ್ಚು, ಸಸಿ ಮಡಿ ತಯಾರಿ ಮತ್ತು ಪೋಷಣೆ, ನಾಟಿ ಖರ್ಚು, ರಂಜಕ ಮತ್ತು ಪೊಟ್ಯಾಶ್ ಗೊಬ್ಬರಗಳ ಖರ್ಚು ಕೂಳೆ ಪೋಷಣೆ, ನಾಟಿ ಖರ್ಚು, ರಂಜಕ ಮತ್ತು ಪೊಟ್ಯಾಶ್ ಗೊಬ್ಬರಗಳ ಖರ್ಚು ಕೂಳೆ ಬೆಳೆಯಲ್ಲಿ ಇರುವುದಿಲ್ಲ. ನೀರಿನ ನಿಯಂತ್ರಣ, ಕಾವಲು ಮುಂತಾದವುಗಳಿಗೂ ಸಹ ಖರ್ಚು ಕಡಿಮೆಯಾಗುತ್ತದೆ. ಆದ್ದರಿಂದ ಉತ್ಪಾದನೆಗೆ ತಗಲುವ ವೆಚ್ಚ ಕಡಿಮೆಯಾಗಿರುತ್ತದೆ. ಕೂಳೆಬೆಳೆ ತೆಗೆಯುವುದರಿಂದ ಪರೋಕ್ಷವಾಗಿಯೂ ಅನೇಕ ಅನುಕೂಲಗಳಿವೆ. ಕೂಳೆಬೆಳೆಯು ರೈತರ ಬಿಡುವಿನ ಕಾಲದಲ್ಲೇ ಬರುವುದರಿಂದ ಬಿಡುವು ವೇಳೆಯನ್ನು ಉತ್ಪಾದನೆಗೆ ಉಪಯೋಗಿಸಿದಂತಾಗುತ್ತದೆ. ಕೂಳೆ ಬೆಳೆ ಯೋಜನೆ ಹಾಕಿಕೊಂಡಾಗ ಮೊದಲನೆ ಬೆಳೆಯನ್ನು ಸಕಾಲಕ್ಕೆ ಕಟಾವು ಮಾಡುವುದು ಅನಿವಾರ್ಯ. ಆದ್ದರಿಂದ ತಡವಾಗಿ ಕೊಯ್ಲು ಮಾಡಿದಾಗ ಕಾಳು ಉದುರಿ ಮತ್ತು ಕಾಳಿನ ಒಳಗೆ ಬಿರುಕು ಉಂಟಾಗಿ ಬತ್ತವನ್ನು ಗಿರಣಿಗೆ ಕೊಟ್ಟಾಗ ಅಕ್ಕಿ ನುಚ್ಚಾಗಿ ನಷ್ಟವುಂಟಾಗುತ್ತದೆ. ಕೂಳೆ ಬೆಳೆಯಿಂದ ಯಾವ ತೊಡಕೂ ಇಲ್ಲ ಎಂದಲ್ಲ. ಕೂಳೆಬೆಳೆ ತೆಗೆದುಕೊಂಡಾಗ ಬೀಳು ಉಳುಮೆ ಸಾಧ್ಯವಾಗದಿರಬಹುದು. ಅಲ್ಲದೆ ಬೆಲೆಯ ಪರಿವರ್ತನೆಗೆ ಅಡಚಣೆಯಾಗಬಹುದು. ತಾಕುಗಳು ವಿರಳವಾದುದರಿಂದ ನೀರು ಕಟ್ಟುವುದು. ಹಕ್ಕಿ ಮತ್ತು ದನಗಳನ್ನು ಕಾಯುವುದು ಕಷ್ಟವೆನಿಸಬಹುದು. ಆದಾಗ್ಯೂ ಕ್ಷೇತ್ರ ಬಡಾವಣೆ ಇಲ್ಲದೆ ಬತ್ತದ ಉತ್ಪಾದನೆ ಹೆಚ್ಚಿಸಲು ಕೂಳೆ ಬೆಳೆ ಪದ್ಧತಿಯು ಹೆಚ್ಚು ಫಲಕಾರಿಯಾಗಬಲ್ಲದು.