ರಾಷ್ಟ್ರದ ಅತಿ ಮುಖ್ಯವಾದ ಬೆಳೆ ಎಂದರೆ ಬತ್ತ. ಗೋಧಿಗಿಂತಳೂ ಸಂಖ್ಯೆಯಲ್ಲಿ ಹೆಚ್ಚು. ಹೊಸ ಬತ್ತದ ತಳಿಗಳು ರಾಷ್ಟ್ರ ಮಟ್ಟದಲ್ಲಿ (೧೪) ಮತ್ತು ರಾಜ್ಯಮಟ್ಟದಲ್ಲಿ (೨೦) ಬಿಡುಗಡೆಯಾಗಿದ್ದರೂ, ಗೋಧಿಯ ಉತ್ಪಾದನೆಯಲ್ಲಾದಷ್ಟು ಗಮನಾರ್ಹವಾದ ಕ್ರಾಂತಿ ಬತ್ತದಲ್ಲಿ ಆಗಿಲ್ಲವೆಂದು ಹೇಳಬಹುದು. ಅಂದರೆ ಇದಕ್ಕೆ ಸಂಶೋಧನೆ ಸಾಕಷ್ಟು ಪ್ರಗತಿ ಹೊಂದಿಲ್ಲ ಎಂಬುದೆ ಅಲ್ಲದೆ ಇನ್ನೂ ಕೆಲವು ಕಾರಣಗಳು ಇವೆ. ಇಂತಹ ಕಾರಣಗಳೂ ರಾಜ್ಯದಿಂದ ರಾಜ್ಯಕ್ಕೆ ಬೇರೆ ಬೇರೆ. ಆದ್ದರಿಂದಲೇ ಎಲ್ಲಾ ರಾಜ್ಯಗಳಲ್ಲಿಯೂ ಒಂದೇ ಪ್ರಮಾಣದಲ್ಲಿ ಹೆಚ್ಚು ಇಳುವರಿ ತಳಿಗಳು ಬಳಕೆಗೆ ಬಂದಿಲ್ಲ. ದಕ್ಷಿಣ ಭಾರತದಲ್ಲೇ ಹೋಲಿಸಿ ನೋಡಿದರೆ ಆಂಧ್ರ ಮತ್ತು ಮೈಸೂರು ರಾಜ್ಯಗಳಲ್ಲಿ ಶೇ. ೧೭ ರಿಂದ ೨೦ರಷ್ಟು ಪ್ರದೇಶದಲ್ಲಿ ಮಾತ್ರ ಅಧಿಕ ಇಳುವರಿ ತಳಿಗಳು ಬೆಳೆಯಲ್ಪಡುತ್ತಿದೆ. ಕೇರಳ ರಾಜ್ಯದಲ್ಲಿ ಶೇ. ೨೬-೩೦ ರಷ್ಟು ಮತ್ತು ತಮಿಳುನಾಡಿನಲ್ಲಿ ೩೫ ರಷ್ಟು ಬತ್ತದ ವಿಸ್ತೀರ್ಣವನ್ನು ಅಧಿಕ ಇಳುವರಿ ತಳಿಗಳು ಆಕ್ರಮಿಸಿಕೊಂಡಿವೆ. ಈ ತರಹ ರಾಜ್ಯದಿಂದ ರಾಜ್ಯಕ್ಕೆ ಹೆಚ್ಚು ಕಡಿಮೆ ಇರುವುದರ ಜೊತೆಗೆ ರಾಷ್ಟ್ರಮಟ್ಟದ ಹೋಲಿಕೆಯಲ್ಲಿ ಗೋಧಿಗಿಂತ ಬತ್ತದ ಉತ್ಪಾದನೆಯ ಪ್ರಗತಿ ಹಿಂದಿರಲು ಸಾಮಾನ್ಯವಾಗಿ ನಾನಾ ಕಾರಣಗಳಿವೆ.

(1) ಗೋಧಿಗಿಂತಲೂ ಹೆಚ್ಚು ಹವಾಗುಣದ ವೈಪರೀತ್ಯದಲ್ಲಿ ಬೆಳೆಯಲ್ಪಡುತ್ತಿದ್ದು, ಹೆಚ್ಚು ಸಂಖ್ಯೆಯಲ್ಲಿ ವಿವಿಧ ಹವಾಗುಣಕ್ಕೆ ಹೊಂದಿಕೊಳ್ಳುವ ಅಧಿಕ ಇಳುವರಿ ತಳಿಗಳ ಬೇಡಿಕೆ. ಅತ್ಯಧಿಕ ಸಂಖ್ಯೆಯಲ್ಲಿ ಬಿಡುಗಡೆಯಾಗುತ್ತಿರುವ ತಳಿಗಳ ಬಗ್ಗೆ ಸಾಕಷ್ಟು ಮಾಹಿತಿ ಸರಿಯಾದ ರೀತಿಯಲ್ಲಿ ವಿಸ್ತರಣಾಧಿಕಾರಿಗಳಾಗಲೀ ಅಥವಾ ಪ್ರಗತಿಶೀಲ ರೈತರಿಗಾಗಲೀ ದೊರಕದಿರುವುದು. ಇಂತಹ ಒಂದು ಪರಿಸ್ಥಿತಿಯ ಸುಧಾರಣೆಗೆಂದು ರಾಷ್ಟ್ರದ ಬತ್ತದ ಅಭಿವೃದ್ಧಿ ಮಂಡಳಿಯವರು ಕೇಂದ್ರ ಸರ್ಕಾರದ ಅನುಮತಿಯಿಂದ ಕೈಗೊಂಡ ಒಂದು ಯೋಜನೆ (ಸೆಂಟ್ರಲ್ ಸೆಕ್ಟರ್ ಸ್ಕೀಂ) ೧೯೭೧ ನೇ ಇಸವಿಯಿಂದ ಜಾರಿಗೆ ಬಂದಿದೆ.

“ಮಿನಿಕಿಟ್ ಪ್ರಯೋಗ”

ಈ ಯೋಜನೆ ಮಿನಿಕಿಟ್ ಎಂದು ಹೆಸರಿಡಲಾಯಿತು. ಇದರ ಮೂಲ ಉದ್ದೇಶ ಈಗಾಗಲೇ ಬಿಡುಗಡೆಯಾಗಿರುವ ಮತ್ತು ಸದ್ಯದಲ್ಲೆ ಬಿಡುಗಡೆಯಾಗಲಿರುವ ಪ್ರತಿಯೊಂದು ಅಧಿಕ ಇಳುವರಿ ಬತ್ತದ ತಳಿಯ ಪ್ರಮಾಣದಲ್ಲಿ ರಾಜ್ಯದ ಬತ್ತದ ತಜ್ಞರಿಂದ ಸೂಚಿಸಲ್ಪಟ್ಟಂತೆ ಆಯಾ ಹವಾಗುಣಕ್ಕೆ ಹೊಂದಿಕೊಳ್ಳುವ ತಳಿಗಳನ್ನು ಹಂಚಲಾಗುವುದು. ಈ ಬೀಜವನ್ನು ಹಣವಿಲ್ಲದೆ ಹಂಚಲಾಗುವುದಲ್ಲದೆ ಸೂಕ್ತ ಬೇಸಾಯದ ಕ್ರಮವನ್ನೂ ಸಂಬಂಧಪಟ್ಟ ರಾಜ್ಯ ಬತ್ತ ತಜ್ಞರು ಸಲಹೆಯಂತೆ ಒದಗಿಸಲಾಗುವುದು. ಈ ರೀತಿ ತಳಿಗಳನ್ನು ಕೊಡುವಾಗ ಒಂದೇ ತಳಿಯನ್ನು ಕೊಡುವ ಬದಲು ಎರಡು ಅಥವಾ ಮೂರನ್ನು ಕೊಡುವುದು. ಒಂದೆರಡು ರೈತರಿಗೆ ಕೊಡುವ ಬದಲು ಹೆಚ್ಚು ರೈತರಿಗೆ ಕೊಟ್ಟು ತಾತ್ಕಾಲಿಕವಾಗಿ ಬೆಳೆಯುತ್ತಿರುವ ತಳಿಗಳೊಡನೆ ಒಂದೇ ರೀತಿಯ ಬೇಸಾಯ ಕ್ರಮದಲ್ಲಿ ಬೆಳೆದು ಹೋಲಿಸುವುದು.

ಉಪಯೋಗ

ಇದರಿಂದ ಮುಖ್ಯವಾದ ಮೂರು ಸಮಸ್ಯೆಗಳಿಗೆ ಪರಿಹಾರ ದೊರಕುತ್ತದೆ. ಮೊದಲನೆಯದು ಅನಾವಶ್ಯಕವಾಗಿ ಒಂದೇ ತರಹದ ಎರಡು ಮೂರು ತಳಿಗಳು ಬಿಡುಗಡೆ ಮಾಡಿ, ರೈತರನ್ನೇ ಆಗಲಿ ಅಥವಾ ವಿಸ್ತರಣಾಧಿಕಾರಿಗಳನ್ನೇ ಗೊಂದಲಕ್ಕೆ ಸಿಕ್ಕಿಸುವ ಬದಲು, ಅದೇ ಮೂರು ತಳಿಗಳ ಪೈಕಿ ಮೇಲ್ಕಂಡ ಪ್ರಯೋಗದ ಆಧಾರದ ಮೇಲೆ ಒಂದನ್ನು ಆರಿಸಿ, ಸೂಕ್ತ ಬೇಸಾಯ ಕ್ರಮದೊಡನೆ ಬಿಡುಗಡೆ ಮಾಡಲು ಸಾಧ್ಯ. ಎರಡನೆಯದಾಗಿ ಹೊಸದಾಗಿ ಬಂದ ತಳಿಗಳು ಕೆಲವು ರೈತರಿಗೆ ಮಾತ್ರ. ಮೊಟ್ಟಮೊದಲು ಪ್ರಯೋಗಕ್ಕೆ ದೊರಕ್ಕಿದ್ದ ಕಾರಣ ಅದರ ಬೀಜವನ್ನು ಮಿತಿ ಮೀರಿದ ಬೆಲೆಯಲ್ಲಿ ಮಾರಲು ಇಚ್ಚಿಸಿದಾಗ ಯೋಗ್ಯ ತಳಿಯಾದರು ಅದರ ಪ್ರಚಾರಕ್ಕೆ ಅಪಾಯ ಬಂದಂತಾಗುತ್ತದೆ. “ಮಿನಿಕಿಟ್” ಪ್ರಯೋಗದ ಯೋಜನೆಯಲ್ಲಿ ಬಹಳಷ್ಟು ರೈತರಿಗೆ ವ್ಯವಸಾಯ ಇಲಾಖೆ ಮತ್ತು ವಿಶ್ವವಿದ್ಯಾನಿಲಯಗಳ ಮೂಲಕ ಹರಡುವುದರಿಂದ ಹೆಚ್ಚು ಜನರಲ್ಲಿ ಬೀಜ ದೊರಕುವಂತಾಗಿ ಲಾಭ ಬಡುಕತನಕ್ಕೆ ಅವಕಾಶವಾಗುವುದಿಲ್ಲ. ಮೂರನೆಯದಾಗಿ ಈ ಪ್ರಯೋಗಗಳಲ್ಲಿ ಭಾಗವಹಿಸಲ್ಪಡುವವರಾಗಿದ್ದು, ಪ್ರಯೋಗವನ್ನು ಕೈಗೊಂಡ ರೈತರು, ನೆರೆಯ ರೈತರು ಸಂಬಂಧಪಟ್ಟ ವಿಸ್ತೀರ್ಣಾಧಿಕಾರಿಗಳು ಮತ್ತು ವ್ಯವಸಾಯ ಇಲಾಖೆಯ ವಿಶ್ವವಿದ್ಯಾನಿಲಯಗಳ ಅಧಿಕಾರಿ ಮತ್ತು ತಜ್ಞರುಗಳಿಗೆ ತಳಿಗಳಲ್ಲಿರುವ ದೋಷ, ಮಹತ್ವ ಮತ್ತು ಉಚಿತ ಬೇಸಾಯ ಕ್ರಮದ ಮಾಹಿತಿ ಚೆನ್ನಾಗಿ ಸಿಕ್ಕುವುದರ ಪರಿಣಾಮವಾಗಿ ಮುಂದೆ ಹಾಕುವ ಯೋಜನೆಗೆ ಹೆಚ್ಚಿನ ಧೈರ್ಯದಿಂದ ನೆರವಾಗುತ್ತದೆ.

ಈ ಮೂರು ಅಂಶಗಳಿಂದ ಅಧಿಕ ಇಳುವರಿ ತಳಿಗಳು ಹೆಚ್ಚು ಬಳಕೆಗೆ ಬರಲು ಎಷ್ಟರ ಮಟ್ಟಿಗೆ ನೆರವಾಗಬಹುದೆಂಬುದನ್ನು ಓದುಗರೇ ಊಹಿಸಿಕೊಳ್ಳಬಹುದು. ಮೊಟ್ಟ ಮೊದಲು ರಾಷ್ಟ್ರದ ೧೩ ರಾಜ್ಯಗಳಲ್ಲಿ (ಮೈಸೂರು, ಆಂಧ್ರ, ಅಸ್ಸಾಂ, ಬಿಹಾರ್, ಗುಜರಾತ್, ಹರಿಯಾಣ, ಮಧ್ಯಪ್ರದೇಶ, ಮಹಾರಾಷ್ಟ್ರ, ಒರಿಸ್ಸಾ, ಪಂಜಾಬ್, ತಮಿಳುನಾಡು, ಉತ್ತರ ಪ್ರದೇಶ ಮತ್ತು ಪಶ್ಚಿಮ ಬಂಗಾಳ) ಈ ಯೋಜನೆಗೆ ೧೯೭೧ನೇ ಬೇಸಿಗೆ ಬೆಳೆಯಲ್ಲಿ ಆರಂಭವಾಯಿತು. ಅಲ್ಲದೆ ಈ ಯೋಜನೆ ಎಷ್ಟು ಪ್ರಯೋಜನಕಾರಿಯೆಂಬುದನ್ನು ಅರಿತುಕೊಂಡು ರಾಜಸ್ಥಾನ, ಕೇರಳ, ಜಮ್ಮು ಮತ್ತು ಕಾಶ್ಮೀರ, ಗೋವ, ತ್ರಿಪುರ, ಪಾಂಡಿಚೇರಿ ಮತ್ತು ಮಣಿಪುರ ಪ್ರದೇಶಗಳಿಂದಲೂ ಸ್ವಯಂ ಪ್ರೇರಿತ ಆಸಕ್ತಿಯಿಂದ ೧೯೭೨ನೇ ಮಳೆಗಾಲದಿಂದಲೂ ಈ ಯೋಜನೆಯ ನೆರವನ್ನು ಕೋರಿದಾಗ ಆ ಪ್ರದೇಶಗಳಲ್ಲಿಯೂ ಜಾರಿಗೆ ತರಲಾಯಿತು.

ಮೈಸೂರಿನಲ್ಲಿ

ಮೈಸೂರು ರಾಜ್ಯದಲ್ಲಿ ಸಣ್ಣ ಕಾಳಿನ ಬೇಡಿಕೆ ಇರುವ ಮೈದಾನ ಪ್ರದೇಶಗಳಲ್ಲಿ ಐ.ಇ.ಟಿ. ೧೯೯೧ ಮತ್ತು ಐ.ಇ.ಟಿ. ೧೦೩೯ ತಳಿಗಳನ್ನೂ ಕಣಿ ಹುಳುವಿನ ಬಾಧೆಯಿಂದ ಹೆಚ್ಚು ನಷ್ಟವಾಗುತ್ತಿರುವ ಕರಾವಳಿ ಪ್ರದೇಶಗಳಲ್ಲಿ ಜಿ.ಎಂ.ಆರ್. ೭,೧೨,೨೨ ತಳಿಗಳನ್ನು ಮತ್ತು ಅಲ್ಪಾವಧಿಯದ್ದು, ಸಣ್ಣಕಾಳಿನ ಬೇಡಿಕೆ ಇರುವ ರಾಜ್ಯಾದ್ಯಂತ ಎಂ.ಆರ್. ೧೩೬ (ಈಗ ಮಧು ಎಂದು ಹೆಸರಿಡಲಾಗಿದೆ) ತಳಿಗಳು ಈ ಯೋಜನೆಯ ರಿತ್ಯಾ ಪ್ರಯೋಗಕ್ಕೆ ೧೯೭೨ನೇ ಬೇಸಿಗೆ ಮತ್ತು ಮಳೆಗಾಲದ ಬೆಳೆಗಳಲ್ಲಿ ಒಳಪಟ್ಟಿದ್ದವು. ಈ ರಾಜ್ಯದ ಯೋಜನೆಗೆ ವ್ಯವಸಾಯದ ಇಲಾಖೆ, ಕೃಷಿ ವಿಶ್ವವಿದ್ಯಾಲಯ ಮತ್ತು ರಾಷ್ಟ್ರದ ಬತ್ತದ ಅಭಿವೃದ್ಧಿ ಮಂಡಳಿ ಇವು ಸಾಕಷ್ಟು ಪಾಲ್ಗೊಂಡು ಯೋಜನೆಯ ಯಶಸ್ಸಿಗೆ ಕಾರಣವಾದವು. ಸಂಕ್ಷಿಪ್ತವಾಗಿ ೧೯೭೨ನೇ ಇಸವಿಯ ಬೇಸಿಗೆ ಮತ್ತು ಮಳೆಗಾಲದ ಮಿನಿಕಿಟ್ ಪ್ರಯೋಗದ ಫಲಿತಾಂಶವನ್ನು ಪ್ರಸ್ತುತ ರೀತಿಯಲ್ಲಿ ಹೇಳಬಹುದು. ಕೃಷಿ ವಿಶ್ವವಿದ್ಯಾಲಯದ ಅಂಗವಾಗಿದ್ದ ಮಂಡ್ಯದ ಪ್ರಾದೇಶಿಕ ಸಂಶೋಧನಾ ಕೇಂದ್ರದಲ್ಲಿ ತಳೀಕರಿಸಲ್ಪಟ್ಟ (ಎಮ.ಆರ್. ೧೩೬) ನವೆಂಬರ್ ೧೯೭೨ ರಲ್ಲಿ ಮಧು ಎಂಬ ಹೆಸರಿನಲ್ಲಿ ರಾಜ್ಯಕ್ಕೆ ಯೋಗ್ಯವಾದ ತಳಿಯೆಂದು ರಾಜ್ಯದ ತಳಿಗಳ ಬಿಡುಗಡೆಯ ಮಂಡಳಿಯಿಂದ ಸ್ವೀಕೃತವಾಗಿ ಅನಂತರ ಬಿಡುಗಡೆ ಮಾಡಲಾಯಿತು.

ಇದು ಸಣ್ಣ ಕಾಳನ್ನು ಹೊಂದಿದ್ದು, ನಾಲ್ಕು ತಿಂಗಳಿನಲ್ಲಿ ಕೊಯ್ಲಿಗೆ ಬರುತ್ತದೆ. ಸಣ್ಣ ಕಾಳುಳ್ಳ ಮಧ್ಯಮ ಅವಧಿಯ ತಳಿಗಳ ಪೈಕಿ ಐ.ಇ.ಟಿ. ೧೯೯೧ ಎಂಬುದು ಐ.ಇ.ಟಿ. ೧೦೩೯ ಕ್ಕಿಂತ ಎಲ್ಲಾ ವಿಷಯದಲ್ಲೂ ಉತ್ತಮವೆಂದು ತಿಳಿದುಬಂದಿದೆ. ಮೈಸೂರು ರಾಜ್ಯದಲ್ಲಿ ಸುಮಾರು ೧೪೦ ರಿಂದ ೨೫೦ ದಿವಸ ಅವಧಿಯು ಸರಿಯಿದ್ದು, ಜುಲೈ ೧೫ ಕ್ಕಿಂತ ಮುಂಚೆ ನಾಟಿ ಮಾಡಲು ಸಾಧ್ಯವಾದ ಪಕ್ಷದಲ್ಲಿ ಬೆಟ್ಟ, ಕರಾವಳಿ ಮತ್ತು ನೆರೆ ಬಿತ್ತನೆ ಪ್ರದೇಶಗಳನ್ನು ಬಿಟ್ಟು ಉಳಿದ ಬಯಲು ಪ್ರದೇಶಕ್ಕೆ ಇದು ಅತ್ಯತ್ತಮವಾದ ತಳಿ ಎನಿಸಿದೆ.

ಹೀಗೆ ನೆರವಾಗಿರುವ ಮಿನಿಕಿಟ್ ಪ್ರಯೋಗ ನಾಲ್ಕನೆ ಪಂಚವಾರ್ಷಿಕ ಯೋಜನೆಯ ಅಂತ್ಯದವರೆಗೆ ಕೆಲಸ ಮಾಡುವುದಲ್ಲದೆ ೫ನೆಯ ಪಂಚವಾರ್ಷಿಕ ಯೋಜನೆಯಲ್ಲಿಯೂ ಮುಂದುವರಿಯುವ ಸಾಧ್ಯತೆ ಇದೆ. ಇಲ್ಲಿ ನಮೂದಿಸಬೇಕಾದ ಮತ್ತೊಂದು ಮಹತ್ವವೇನೆಂದರೆ ಮಿನಿಕಿಟ್ ಪ್ರಯೋಗದಲ್ಲಿ ಕೇವಲ ಎರಡೇ ಕಿ.ಗ್ರಾಂ. ಬೀಜವಷ್ಟು ಮಾತ್ರ ಹಾಕುವುದರಿಂದ ಬೆಳೆಯು ಅನಿರೀಕ್ಷಿತ ಕಾರಣಗಳಿಂದ ತೊಂದರೆಗೊಳಗಾದರೂ ಬೆಳೆದ ರೈತನಿಗೆ ನಷ್ಟವಾಗುವ ಸಂಭವವಿಲ್ಲ. ಚೆನ್ನಾಗಿ ಬೆಳೆ ಬಂದರೆ ೨ ಕೆ.ಜಿ. ಬೀಜದಿಂದ ೩ ರಿಂದ ೪ ಕ್ವಿಂಟಾಲ್ ಬೀಜ ಉತ್ಪಾದನೆಯಾಗುವುದರಿಂದ ಸಾಕಷ್ಟು ಜನರಿಗೆ ಹೆಚ್ಚು ಅಭಾವವಿಲ್ಲದಂತೆ ಬೀಜವನ್ನು ತತ್ಸಂಬಧವಾದ ಪ್ರದರ್ಶನ ತಾಕುಗಳಿಗೆ ಆಗಲಿ ಅಥವಾ ತಾವಾಗಿಯೇ ಬೆಳೆಯುವ ರೈತರಿಗೆ ಆಗಲಿ ಒದಗಿಸಬಹುದು.