ನೀರಾವರಿ ಪ್ರದೇಶಗಳಲ್ಲಿ ಬಸಿಗಾಲುವೆಗಳು ಸರಿಯಾಗಿಲ್ಲದಿದ್ದಲ್ಲಿ ಸತತ ನೀರಾವರಿ ಮತ್ತು ರಸಗೊಬ್ಬರಗಳನ್ನು ಉಪಯೋಗಿಸುವ ಕಾರಣದಿಂದಾಗಿ ಲವಣಗಳ ಪ್ರಮಾಣ ಹೆಚ್ಚಾಗಿ ಮಣ್ಣು, ಉಪ್ಪು ಮತ್ತು ಕ್ಷಾರದ ಬಾಧೆಗೊಳಗಾಗುತ್ತದೆ. ಇಂತಹ ಮಣ್ಣಿಗೆ ಜಯ, ಐ.ಆರ್. ೨೦, ಮಧು, ಪುಷ್ಪ, ವಿಕ್ರಮ್, ಶಕ್ತಿ ಬತ್ತಗಳು ಹೊಂದುವುದಿಲ್ಲ. ಉಪ್ಪು ಮತ್ತು ಕ್ಷಾ ಬಾಧಿತ ಗದ್ದೆಗಳು ವರ್ಷೇ ಹೆಚ್ಚುತ್ತಿರುವುದರಿಂದ ಈ ಬಾಧೆಗಳನ್ನು ಸಹಿಸಿಕೊಂಡು ಬರುವಂತಹ ಪ್ರಗತಿ ಎಂಬ ಹೊಸ ಬತ್ತದ ತಳಿಯು ೧೯೭೯ ರಲ್ಲಿ ರಾಜ್ಯದ ಕೃಷಿ ವಿಶ್ವವಿದ್ಯಾಲಯವು ನೀಡಿದ ಕೊಡುಗೆಯಾಗಿದೆ. ಈ ತಳಿಯ ವಿಶೇಷ ಗುಣಗಳು ಈ ಕೆಳಕಂಡಂತಿವೆ.

*ಬೆಳೆ ಅರೆಗಿಡ್ಡು ಮತ್ತು ಕೆಳಗೆ ಬೀಳುವುದಿಲ್ಲ.

*ಬೆಳೆ ನೆಟ್ಟಗೆ ಬೆಳೆಯುವುದರಿಂದ ನಿರ್ದಿಷ್ಟ ಪ್ರದೇಶದಲ್ಲಿ ಹೆಚ್ಚು ಗುಣಿ ನಾಟಿ ಮಾಡಬಹುದು.

*ಮುಂಗಾರು ಹಾಗೂ ಬೇಸಿಗೆಯಲ್ಲಿ ಬೆಳೆಯಬಹುದು.

* ಉಪ್ಪು ಮತ್ತು ಕ್ಷಾರ ಮಣ್ಣಿಗೆ ಹೊಂದಿಕೊಳ್ಳಬಲ್ಲದು.

* ಎಲೆ ಮೊನೆ ನೆಟ್ಟಗೆ ಚೂಪಾಗಿ ನೆಟ್ಟಗಿರುವುದರಿಂದ ಹಕ್ಕಿಗಳ ಹಾವಳಿ ಕಡಿಮೆ.

* ಸ್ವಲ್ಪ ಮಟ್ಟಿಗೆ ಸತುವಿನ ಕೊರತೆ ಮತ್ತು ಚಳಿಯನ್ನೂ ಸಹಿಸಿಕೊಳ್ಳಬಲ್ಲದು.

ಅದು ಮಳೆಗಾಲದಲ್ಲಿ ಸುಮಾರು ೧೩೦ ದಿವಸಗಳಲ್ಲಿ ಬೇಸಿಗೆಯಲ್ಲಿ ೧೩೫ ದಿವಸಗಳಲ್ಲಿ ಕೊಯ್ಲಿಗೆ ಬರುತ್ತದೆ. ಇದರ ಅವಧಿಯು ಕರಾವಳಿ ಪ್ರದೇಶದಲ್ಲಿ ಕಡಿಮೆಯಾಗುತ್ತದೆ. ಆದರೆ ಬೆಟ್ಟ ಪ್ರದೇಶಗಳಲ್ಲಿ ಹೆಚ್ಚಾಗುತ್ತದೆ. ಈ ತಳಿಯನ್ನು ಹಾಲುಬ್ಬಲು (ಎ.ಸಂ. ೩೧೭) ಮತ್ತು ಜಯ ತಳಿಯನ್ನು ಸಂಕಲನ ಮಾಡಿ ವಿ.ಸಿ. ಫಾರಂನ ಪ್ರಾದೇಶಿಕ ಸಂಶೋಧನಾ ಕೇಂದ್ರದಲ್ಲಿ ಕಂಡುಹಿಡಿಯಲಾಗಿದೆ. ಹೆಚ್ಚು ಬೆಂಕಿರೋಗ ಬರುವ ಪ್ರದೇಶಕ್ಕೆ ಈ ತಳಿಯು ಹೊಂದುವುದಿಲ್ಲವೆಂಬುದನ್ನು ಗಮನಿಸಬೇಕು.

ಬೇಸಾಯ ಕ್ರಮ

ಬಿತ್ತನೆ:ಎಕರೆಗೆ ೨೫ ಕೆಜಿ ಉತ್ತಮವಾದ ಗಟ್ಟಿಕಾಳುಗಳನ್ನು ಉಪಯೋಗಿಸಿ ಸಸಿಗಳನ್ನು ಚೆನ್ನಾಗಿ ಬೆಳೆಸಿ, ೨೫ ರಿಂದ ೩೫ ದಿವಸ ವಯಸ್ಸಿನ ಪೈರುಗಳನ್ನು ಬೇಸಿಗೆಯಲ್ಲಿ ಫೆಬ್ರವರಿ ೨೦ರ ಒಳಗಾಗಿ ಮತ್ತು ಮುಂಗಾರಿನಲ್ಲಿ ಆಗಸ್ಟ್ ೧೫ರ ಒಳಗೆ ನಾಟಿ ಮಾಡಬೇಕು.

ಉತ್ತಮ ಪೈರು ಬೆಳೆಸಿ

ಒಣ ಎತ್ತರಿಸಿದ ಮಡಿ ಸಸಿಮಡಿ ಪ್ರದೇಶವನ್ನು ಏರು ತಗ್ಗುಗಳು ಇಲ್ಲದಂತೆ ಸಮಮಾಡಿ ೪ ಅಡಿ ಅಗಲ, ೨೫ ಅಡಿ ಉದ್ದ ಮತ್ತು ೪ ಅಂಗುಲ ಎತ್ತರಿಸಿದ ೩೫ ಮಡಿಗಳನ್ನು ಸಿದ್ದಪಡಿಸಿ, ಪ್ರತಿಮಡಿಗೂ ೨೫ ಕೆಜಿ ಕೊಟ್ಟಿಗೆ ಗೊಬ್ಬರ, ೪೫೦ ಗ್ರಾಂ ಅಮೋನಿಯಂ ಸಲ್ಪೇಟ್ ೨೮೦ ಗ್ರಾಂ ಸೂಪರ್ ಫಾಸ್ಪೇಟ್ ಮತ್ತು ೭೫ ಗ್ರಾಂ ಮ್ಯೂರಿಯೇಟ್ ಆಫ್ ಪೊಟ್ಯಾಷ್ ಮಣ್ಣಿನಲ್ಲಿ ಬೆರೆಸಿ, ಎಕರೆಗೆ ಬೀಜೋಪಚಾರ ಮಾಡಿದ ೩೦ ಕೆಜಿ ಬಿತ್ತನೆ ಬೀಜವನ್ನು ಸಸಿ ಮಡಿಗಳಲ್ಲಿ ಸಮನಾಗಿ ಬಿತ್ತಿ ನಂತರ ಬೀಜಗಳು ಕಾಣಿಸದಂತೆ ಹುಡಿಯಾದ ಮಣ್ಣಿನಿಂದ ತೆಳುವಾಗಿ ಮುಚ್ಚಿ, ಮಡಿಗಳ ತುಂಬ ನೀರು ತುಂಬಿಸಿ ಸಾಕಷ್ಟು ತೇವವಿರುವಂತೆ ಅವಕಾಶ ಮಾಡಿ ಬಿತ್ತನೆ ಮಾಡುವ ೨೦ ದಿವಸಗಳ ನಂತರ ಪ್ರತಿ ಮಡಿಗೂ ೬೦ ಗ್ರಾಂ ಯೂರಿಯಾವನ್ನು ಮೇಲು ಗೊಬ್ಬರವಾಗಿ ಕೊಡಿ.

ಕೆಸರು ಮಡಿ: ಸಸಿ ಮಡಿ ಪ್ರದೇಶವನ್ನು ಚೆನ್ನಾಗಿ ಕೆಸರು ಮಾಡಿ ಸಮಮಾಡಿ. ರಂಜಕದ ರಸಗೊಬ್ಬರವನ್ನು ಎತ್ತರಿಸಿದ ಮಡಿಗಿಂತ ೩ ರಷ್ಟು ಹೆಚ್ಚು ಕೊಡಿ. ಮೊಳಕೆ ಕಟ್ಟಿದ ಬೀಜವನ್ನು ಚೆಲ್ಲಿ. ನೀರನ್ನು ತೆಳುವಾಗಿ ನಿಲ್ಲಿಸಿ, ಸಸಿ ಬೆಳೆದಂತೆ ಹೆಚ್ಚಿಸಿ, ಹೆಚ್ಚಾಗಿ ನೀರನ್ನು ನಿಲ್ಲಿಸಬೇಡಿ ಉಳಿದ ಕ್ರಮಗಳನ್ನು ಎತ್ತರಿಸಿದ ಮಡಿಯಲ್ಲಿ ತಿಳಿಸಿರುವಂತೆ ಅನುಸರಿಸಿ.

ನಾಟಿ ಮಾಡುವಿಕೆ: ಗದ್ದೆಯನ್ನು ೩-೪ ಬಾರಿ ಉಳುಮೆ ಮಾಡಿ ಎಕರೆಗೆ ೪ ಟನ್ ಕಾಂಪೋಸ್ಟ್ ಅಥವಾ ೨.೫ ಟನ್ ಹಸಿರೆಲೆ ಗೊಬ್ಬರವನ್ನು ನಾಟಿಗೆ ಮೂರು ವಾರಗಳ ಮುಂಚೆ ಸೇರಿಸಿ, ನಾಟಿಗೆ ಮುಂಚೆ ಭೂಮಿಯನ್ನು ಚೆನ್ನಾಗಿ ಕೆಸರು ಮಾಡಿ ಮಟ್ಟ ಮಾಡುವ ಮಣಿಯನ್ನು ಉಪಯೋಗಿಸಿ, ನೀರಿನ ನಿರ್ವಹಣೆಗೆ ಅನುಕೂಲವಾಗುವಂತೆ ಗದ್ದೆಯನ್ನು ಮಟ್ಟಮಾಡಿ, ಎಕರೆಗೆ ೨೦ ಕೆಜಿ ಸಾರಜನಕ, ೨೦ ಕೆಜಿ ರಂಜಕ ಮತ್ತು ೨೦ ಕೆಜಿ ಪೊಟ್ಯಾಷ್ ಒದಗಿಸುವ ರಸಗೊಬ್ಬರಗಳನ್ನು ನಾಟಿಗೆ ಮುಂಚೆ ಹಾಕಿ (೪೫ ಕೆಜಿ ಯೂರಿಯಾ, ೧೨೫ ಕೆಜಿ ಸೂಪರ್ ಫಾಸ್ಪೇಟ್ ಮತ್ತು ೩೫ ಕೆಜಿ ಮ್ಯೂರಿಯೇಟ್ ಆಫ್ ಪೊಟ್ಯಾಷ್).

೨೫-೩೫ ದಿವಸಗಳ ಸಸಿಯನ್ನು ನಾಟಿಗೆ ಉಪಯೋಗಿಸಿ ನಾಟಿ ಮಾಡುವ ಮೊದಲು ಸಸಿಗಳ ಬೇರುಗಳನ್ನು ಶೇ. ೧ ಸತುವಿನ ಸಲ್ಪೇಟ್ ದ್ರಾವಣದಲ್ಲಿ ಒಂದು ನಿಮಿಷ ಕಾಲ ಅದ್ದಿ. ನಂತರ ಸಾಲಿನಿಂದ ೬ ಅಂಗುಲ ಮತ್ತು ಸಸಿಯಿಂದ ಸಸಿಗೆ ೪ ಅಂಗುಲ ಅಂತರದಲ್ಲಿ ಪ್ರತಿ ಗುಣಿಗೆ ೪ ರಿಂದ ೫ ಸಸಿಗಳಂತೆ ನಾಟಿ ಮಾಡಿ. ಎರಡು ಅಂಗುಲಕ್ಕಿಂತ ಹೆಚ್ಚು ಆಳವಾಗಿ ನಾಟಿ ಮಾಡಬೇಡಿ. ಹಾಗೆ ನಾಟಿ ಮಾಡಿದಲ್ಲಿ ತೆಂಟೆ ಬರುವುದು ಕಡಿಮೆಯಾಗುತ್ತದೆ.

ಮೇಲು ಗೊಬ್ಬರ: ನಾಟಿಯಾದ ೨೦ ರಿಂದ ೨೫ ದಿವಸಗಳಲ್ಲಿ (ತೆಂಡೆ ಬರುವ ಸಮಯ ೪೦ ರಿಂದ ೫೦ ದಿನಗಳಲ್ಲಿ (ಬೆಳವಣಿಗೆ ಸಮಯ) ಮತ್ತು ೬೫-೭೫ ದಿನಗಳಲ್ಲಿ (ತೆನೆ ಮೂಡುವ ಕಾಲ) ಪ್ರತಿಸಾರಿ ೬.೫ ಕೆಜಿ ಸಾರಜನಕವನ್ನು (೧೫ ಕೆಜಿ ಯೂರಿಯಾ) ಮೇಲುಗೊಬ್ಬರವಾಗಿ ಕೊಡಿ. ಅವಶ್ಯವಿರುವ ಕಡೆ (ತೆಂಡೆ ಹೊದೆಯುವ ಶಕ್ತಿ ಕಡಿಮೆ ಇರುವ ಮಣ್ಣುಗಳಲ್ಲಿ) ನಾಟಿ ಮಾಡುವಾಗಲೇ ಸಾರಜನಕದ ಪ್ರಮಾಣವನ್ನು ಹೆಚ್ಚಿಸಬೇಕು.

ಕಳೆನಾಶಕಗಳ ಬಳಕೆ: ನಾಟಿ ಮಾಡಿದ ಒಂದು ವಾರದಲ್ಲಿ ಎಕರೆಗೆ ೬ ರಿಂದ ೮ ಕೆಜಿ ೨-೪ ಈಥೈಲ್ ಎಸ್ಟರ್ ಹರಳು ಅಥವಾ ೮ ಕೆಜಿ ಬೂಟಾಕ್ಲೋರ್ ಕರಳನ್ನು ಉದುರಿಸಿ, ಈ ಸಮಯದಲ್ಲಿ ಒಂದು ಅಂಗುಲಕ್ಕಿಂತ ಹೆಚ್ಚು ನೀರು ನಿಲ್ಲದಂತೆ ಎಚ್ಚರವಹಿಸಿ ಉಳಿದ ಕಳೆಗಳನ್ನು ಕೈಯಿಂದ ತೆಗೆದು, ಪೈರಿನ ಬುಡದ ಮಣ್ಣನ್ನು ಕೈಯಿಂದ ಕೆದರಿ. ಈ ರೀತಿ ಮಣ್ಣನ್ನು ಕೆದರುವುದರಿಂದ ಹೊಸ ಬೇರುಗಳು ಉತ್ಪತ್ತಿಯಾಗಲು ಅನುಕೂಲವಾಗುತ್ತದೆ. ಸಾಲು ನಾಟಿ ಕ್ರಮ ಅನುಸರಿಸಿದ ಕಡೆ ಕಳೆ ಯಂತ್ರವನ್ನು ಉಪಯೋಗಿಸಿ ಕಳೆಗಳನ್ನು ನಿಯಂತ್ರಿಸಬೇಕು.

ಬೆಳೆಗೆ ಸಾಕಷ್ಟು ನೀರು ಒದಗಿಸಿ: ಸಸ್ಯಗಳ ಅವಶ್ಯಕತೆ ಮತ್ತು ಮಣ್ಣಿನ ಮಾದರಿಯನ್ನು ಅನುಸರಿಸಿ ನೀರಿನ ಪೂರೈಕೆ ಮಾಡಿ, ಪೈರುಗಳು ಉದ್ದವಾಗಿ ಬೆಳೆಯುವವರೆಗೆ ನೀರನ್ನು ೨ ಅಂಗುಲಕ್ಕಿಂತ ಹೆಚ್ಚಿಗೆ ನಿಲ್ಲಿಸಬೇಡಿ. ಇದರಿಂದ ಪೈರು ಕೊಳೆಯುವುದು ತಪ್ಪುವುದಲ್ಲದೆ ಹೆಚ್ಚು ತೆಂಡೆ ಹೊಡೆಯಲು ಅನನುಕೂಲವಾಗುತ್ತದೆ. ಕೊಯ್ಲು ಮಾಡುವ ಸುಮಾರು ೧೨ ದಿವಸಗಳ ಮುಂಚೆ ನೀರನ್ನು ಬಸಿಯಿರಿ.

ಸಸ್ಯ ಸಂರಕ್ಷಣೆ: ಸಸ್ಯ ಸಂರಕ್ಷಣಾ ಕ್ರಮಗಳೂ ಇತರ ತಳಿಗಳಂತೆ ಇರಬೇಕು. ಅವಶ್ಯವಿದ್ದಲ್ಲಿ ಮಾತ್ರ ಸಿಂಪರಣೆ ಮಾಡಬೇಕು. ಬೆಂಕಿ ರೋಗವಿಲ್ಲದ ಪ್ರದೇಶಗಳಲ್ಲಿ ಇದನ್ನು ಬೆಳೆದಾಗ ರೋಗಗಳಿಗೆ ಯಾವ ವಿಧವಾದ ಸಿಂಪರಣೆಯ ಅವಶ್ಯಕತೆಯಿಲ್ಲ. ಆದರೆ ಆಯಾಯ ಪ್ರದೇಶಗಳಲ್ಲಿ ಕಂಡು ಬರುವ ಕೀಟಗಳ ವಿರುದ್ಧ ಸಸ್ಯ ಸಂರಕ್ಷಣಾ ಕ್ರಮಗಳನ್ನು ಕೈಗೊಳ್ಳಬೇಕಾಗಬಹುದು.

ಉತ್ತಮ ಫಸಲಿನಿಂದ ಸುಮಾರು ಎಕರೆಗೆ ೨೨೫ ಕ್ವಿಂಟಾಲ್ ಇಳುವರಿ ಪಡೆಯಬಹುದು. ಇದರ ಸಸ್ಯ ಅತಿ ಗಿಡ್ಡ ಅಲ್ಲವಾದುದರಿಂದ ಇತರ ಗಿಡಗಳಿಗಿಂತ ಹೆಚ್ಚು ಹುಲ್ಲು ಬರುತ್ತದೆ. ಇದರ ಕಾಳು ಅತಿ ಸಣ್ಣ ಇಲ್ಲದಿದ್ದರೂ ಸಣ್ಣ ಕಾಳಿನ ಗುಂಪಿಗೆ ಸೇರುತ್ತವೆ. ಸಸ್ಯದ ಎಲೆ ಅಗಲವಾಗಿ, ಚೂಪಾಗಿ, ಉದ್ದವಾಗಿ ಇರುವುದು, ಕಾಳಿನ ಮಧ್ಯೆ ಬಿಳುಪು ಇರುವುದು, ಈ ಗುಣಗಳನ್ನು ಗಮನಿಸಿದಲ್ಲಿ ಈ ತಳಿಯ ಪರಿಶುದ್ಧತೆಯನ್ನು ಕಾಪಾಡಿಕೊಂಡು ಹೋಗಲು ಸುಲಭವಾಗುತ್ತದೆ.

ಈವರೆಗೆ ಉಪ್ಪು ಮತ್ತು ಕ್ಷಾರ ಮಣ್ಣುಗಳಲ್ಲಿ ಬೆಳೆಯಲ್ಪಡುತ್ತಿದ್ದ ಯಾವುದೇ ನಾಡ ತಳಿಗಳಿಗಿಂತ ಶೇ. ೫೦ರಷ್ಟು ಹೆಚ್ಚು ಇಳುವರಿಯನ್ನು ನೀಡಬಲ್ಲ. ಈ ತಳಿಯು ಬಳ್ಳಾರಿ, ರಾಯಚೂರು, ಚಿತ್ರದುರ್ಗ ಮತ್ತು ಇತರ ಕಪ್ಪು ಮಣ್ಣು ಪ್ರದೇಶಗಳಲ್ಲಿ ಜನಪ್ರಿಯವಾಗುತ್ತಿದೆ.